Daily Archives: October 19, 2012

ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…


-ನವೀನ್ ಸೂರಿಂಜೆ


 

ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ” ಎಂಬ ಲೇಖನಕ್ಕೆ ನನ್ನ ನೆಚ್ಚಿನ ಸಾಹಿತಿ ನಾ.ದ.ಶೆಟ್ಟಿಯವರು ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. “ನವೀನ್‌ರವರು ಬರೆದ ಒಂದೊಂದು ವಾಕ್ಯವನ್ನು ಒಬ್ಬರೇ ಕುಳಿತು ಪ್ರಾಂಜಲ ಮನಸ್ಸಿನಿಂದ ಮರು ಓದು ನಡೆಸಲಿ” ಎಂಬ ಅವರ ಮಾತಿನಂತೆ ಒಂದೊಂದು ವಾಕ್ಯವನ್ನು ಓದಿದಾಗಲೂ ಹಲವಾರು ವಿಷಯಗಳು ಸ್ಪಷ್ಟವಾಗಿ ಹೇಳಲಾಗಿಲ್ಲ ಅನ್ನಿಸಿತು. ಮೂಡಬಿದ್ರೆಯ “ಆಳ್ವಾಸ್ ಶಿಕ್ಷಣ ಸಂಸ್ಥ”ಯ ಮೋಹನ ಆಳ್ವ ಪ್ರಾಯೋಜಕತ್ವದ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ಕಾರ್ಯಕ್ರಮಗಳನ್ನು ಇನ್ನಷ್ಟು ವಿಶಾಲವಾಗಿ ಮತ್ತು ಆಳವಾಗಿ ವಿಮರ್ಶಿಸಿ ಬರವಣಿಗೆಗಿಳಿಸಬೇಕಿತ್ತು. ಅದಕ್ಕಿಂತಲೂ ಮುಖ್ಯವಾಗಿ ಲೇಖನ ಮೋಹನ ಆಳ್ವರ ಬಗೆಗೆ ಬರೆದುದೇ ಅಲ್ಲ ಎಂಬುದನ್ನು ಬಹಳಷ್ಟು ಮಂದಿ ಅರ್ಥ ಮಾಡಿಕೊಂಡಿದ್ದೇ ಇಲ್ಲ. ವಿದ್ಯಾರ್ಥಿಗಳ ಡೋನೇಷನ್ ಹಣದಲ್ಲಿ ನಡೆಸುವ, ವಿದ್ಯಾರ್ಥಿ ಚಳುವಳಿಗಳಿಗೆ ಅವಕಾಶ ಮಾಡಿಕೊಡದ, ಡೆಮಾಕ್ರಟಿಕ್ ಆಗಿ ನಡೆಯದ, ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಅರ್ಥವಾಗುವಂತೆ ಸ್ಪಷ್ಟಪಡಿಸಬೇಕಿತ್ತು.

ಕನ್ನಡ ನಾಡು ನುಡಿಯ ರಕ್ಷಣೆಗಾಗಿ ಆಳ್ವಾಸ್ ನುಡಿಸಿರಿಯನ್ನು ಆಯೋಜಿಸುವುದು ಮತ್ತು ಇಲ್ಲಿ ನಡೆಯುವ ಕಾರ್ಯಕ್ರಮದ ಅಚ್ಚುಕಟ್ಟುತನ ಎಲ್ಲವೂ ಪ್ರಶಂಸನೀಯವೇ, ಮತ್ತು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಯಬೇಕಾಗಿರುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ. ನುಡಿಸಿರಿ ಮತ್ತು ವಿರಾಸತ್ ಈ ಎರಡೂ ಕಾರ್ಯಕ್ರಮಗಳು ಯಾವುದೇ ಪ್ರಜಾಪ್ರಭುತ್ವ ಮಾಧರಿಯಲ್ಲಿ ನಡೆಯದೆ ವ್ಯಕ್ತಿಯೊಬ್ಬನ ಸರ್ವಾಧಿಕಾರದಲ್ಲಿ ಸ್ವಯಂ ವೈಭವೀಕರಿಸುತ್ತಾ ನಡೆಯುವುದು ಮಾತ್ರ ಅಸಹನೀಯ. ಹೇಳಿಕೊಳ್ಳಲು ಒಂದಷ್ಟು ಜನರನ್ನು ಸೇರಿಕೊಂಡ ಸಮಿತಿ ಎಂಬುದಿದ್ದರೂ ಅದೊಂದು “ಆಳ್ವಾಸ್ ಭಜನಾ ಮಂಡಳಿ” ಯಂತೆ ಕಾರ್ಯನಿರ್ವಹಿಸುತ್ತದೆ. ಆಳ್ವಾಸ್ ನುಡಿಸಿರಿ ಎಂಬುದು ಕಾಲೇಜು ವಿದ್ಯಾರ್ಥಿಗಳದ್ದೋ ಅಥವಾ ಕಾಲೇಜಿನ ಮಾಮೂಲಿ ಕಾರ್ಯಕ್ರಮದಂತೆ ನಡೆಯುವುದಾದರೆ ಇಲ್ಲಿ ಆಳ್ವರ ಪಾರುಪತ್ಯ ಪ್ರಶ್ನಾತೀತ. ಆದರೆ ಆಳ್ವಾಸ್ ನುಡಿಸಿರಿ ಎಂಬುದು ಕನ್ನಡದ ಮನಸ್ಸುಗಳನ್ನು ಕಟ್ಟುವ ಸಮ್ಮೇಳನ ಎಂಬುದಾಗಿ ಬಿಂಬಿಸಿ ನಡೆಸುವುದರಿಂದ ಈ ಕಾರ್ಯಕ್ರಮದ ಸಂಘಟನೆ ಡೆಮಾಕ್ರಟಿಕ್ ಆಗಿರಬೇಕು. ಜೀವನದಲ್ಲಿ ಏನೋ ಸಾಧನೆ ಮಾಡಬೇಕು ಎಂದು ಕಷ್ಟಪಟ್ಟು ಹಣ ಹೊಂದಿಸಿ ಶಿಕ್ಷಣ ಸಂಸ್ಥೆಗೆ ನೀಡುವ ಡೊನೇಷನ್ ಹಣದಲ್ಲಿ ನುಡಿಸಿರಿ ನಡೆಸುವ ಅವಶ್ಯಕತೆ ಏನಿದೆ? ಮಂಗಳೂರು ಸೇರಿದಂತೆ ರಾಜ್ಯದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ಡೊನೇಷನ್ ಪಡೆದುಕೊಳ್ಳುತ್ತವೆ ಮತ್ತು ಸಮಾಜಕ್ಕೆ ಅವುಗಳು ಯಾವ ಕೊಡುಗೆ ನೀಡುತ್ತದೆ ಎಂಬುದೆಲ್ಲ ಅಪ್ರಸ್ತುತ. ಯಾಕೆಂದರೆ ಅಂತಹ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಸೇರಬೇಕಾದ ಆಳ್ವಾಸ್ ಶಿಕ್ಷಣ ಸಂಸ್ಥೆಯು ಮೂರುದಿನದ ಸಾಹಿತ್ಯ ಜಾತ್ರೆ ಮಾಡಿ ಏನೇನೂ ಸಾಧನೆ ಮಾಡದೆ “ಒಳ್ಳೆಯವನು” ಅನ್ನಿಸಿಕೊಳ್ಳುವುದು ಸರಿಯಲ್ಲ. ಅದೊಂಥರಾ “ಲಕ್ಷ ಲಕ್ಷ ವರದಕ್ಷಿಣೆ ತಗೆದುಕೊಂಡು ಊರವರಿಗೆಲ್ಲಾ ಬಾಡೂಟ ಹಾಕಿಸಿದಂತೆ”. ಮದುವೆಯ ಊಟ ಮಾಡಿದವರು “ಯಾರ ದುಡ್ಡಾದರೇನು. ಒಳ್ಳೆ ಊಟ ಹಾಕಿದ್ನಲ್ಲ. ಉಳಿದವರ ತರಹ ತಾನು ವರದಕ್ಷಿಣೆ ತಗೊಂಡು ಬ್ಯಾಂಕ್ನಲ್ಲಿ ಇಟ್ಟಿಲ್ಲವಲ್ಲ” ಎಂದು ಹೇಳುವುದಕ್ಕಿಂತ ಭಿನ್ನವಲ್ಲ. ಯಾರದ್ದೋ ಮಕ್ಕಳ ದುಡ್ಡಿನಲ್ಲಿ ಆಳ್ವರು ಯಾಕೆ ಸಾಹಿತ್ಯ ಜಾತ್ರೆ ಮಾಡಬೇಕು? ಸಮಿತಿ ಎಂಬುದನ್ನು ರಚನೆ ಮಾಡಿಕೊಂಡ ನಂತರ ಹಣಕಾಸು ಸೇರಿದಂತೆ ಕಾರ್ಯಕ್ರಮದ ಎಲ್ಲಾ ಉಸ್ತುವಾರಿಯನ್ನೂ ಸಮಿತಿ ವಹಿಸಿಕೊಳ್ಳಬೇಕು.

ನುಡಿಸಿರಿ ಉದ್ದೇಶ ಕನ್ನಡ ನಾಡು ನುಡಿಯ ರಕ್ಷಣೆಯೇ ಆಗಿದ್ದರೆ ಪ್ರಚಾರಕ್ಕಾಗಿ ಇಷ್ಟೆಲ್ಲಾ ಚಡಪಡಿಸೋ ಅಗತ್ಯ ಇಲ್ಲ. ವಿಚಾರ ಸಂಕಿರಣಗಳು, ಗೋಷ್ಠಿಗಳು ಸೇರಿದಂತೆ ಇಡೀ ಕಾರ್ಯಕ್ರಮ ಎಷ್ಟು ಪ್ರಚಾರವಾಗುವುದು ಅವಶ್ಯಕತೆ ಇದೆಯೋ ಅಷ್ಟು ಪ್ರಚಾರವನ್ನು ಅದು ಅದರ ಮೌಲ್ಯದ ಆಧಾರದ ಮೇಲೆ ಪಡೆದುಕೊಳ್ಳುತ್ತದೆ. ಒಂದು “ಒಳ್ಳೆಯ ಕಾರ್ಯಕ್ರಮ”ದ ಪ್ರಚಾರಕ್ಕಾಗಿ ಮಾಧ್ಯಮದ ವ್ಯವಸ್ಥೆಯನ್ನು ಭ್ರಷ್ಠಗೊಳಿಸುವುದು ಎಷ್ಟು ಸರಿ? ಎರಡು ಮೂರು ವರ್ಷಗಳ ಹಿಂದೆ ನುಡಿಸಿರಿಯ ಮರುದಿನ ಮಂಗಳೂರಿನ ಮಹಾರಾಜ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಪತ್ರಕರ್ತರಿಗಾಗಿ ರಾತ್ರಿ ಭೋಜನಾ ಕೂಟ ಏರ್ಪಡಿಸುತ್ತಿದ್ದರು. ಪತ್ರಕರ್ತರಿಗೆ ಬೇಕಾದಷ್ಟು ಗುಂಡು ತುಂಡು ಸರಬರಾಜಾಗುತ್ತಿತ್ತು. ಖುದ್ದು ಆಳ್ವರೇ ಈ ಗುಂಡು ತುಂಡು ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. (ಆಳ್ವರು ಮದ್ಯ ಸೇವಿಸುತ್ತಿರಲಿಲ್ಲ.) ನುಡಿಸಿರಿಯ ಮರುದಿನ ಈ ಪಾರ್ಟಿ ನಡೆಯುತ್ತಿದ್ದರಿಂದ ಇದನ್ನು ನಾವು ಒಂದಷ್ಟು ಪತ್ರಕರ್ತರು ತಮಾಷೆಗಾಗಿ “ಆಳ್ವಾಸ್ ಕುಡಿಸಿರಿ” ಎಂದು ಕರೆಯುತ್ತಿದ್ದೆವು. ಇಂತಹ ಪಾರ್ಟಿಗಳನ್ನು ಆಯೋಜನೆ ಮಾಡಿ ತನ್ನ ಕಾರ್ಯಕ್ರಮಕ್ಕೆ ಪ್ರಚಾರ ಪಡೆದುಕೊಳ್ಳುವುದಕ್ಕೆ ಏನನ್ನಬೇಕು? ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ಸಾಹಿತ್ಯ ಜಾತ್ರೆ ನಡೆಸುವುದೇ ಅಲ್ಲದೆ ಆ ಹಣದ ಪಾಲನ್ನು ಪತ್ರಕರ್ತರಿಗೆ ಮತ್ತು ಪತ್ರಿಕೆಗಳಿಗೆ ನೀಡುವುದು ಎಷ್ಟು ಸರಿ ?

ಆಳ್ವರು ಕೊರಗ ಮತ್ತು ದಲಿತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂಬುದು ಅಕ್ಷರಶ ನಿಜ. ಹಾಗೆಂದು ಒಂದಿಡೀ ಸಮುದಾಯವನ್ನು ಅವಮಾನಿಸುವ ಮತ್ತು ಅನಿಷ್ಠ ಪದ್ದತಿಗಳನ್ನೇ ಸಂಸ್ಕೃತಿ ಎಂದು ತೋರಿಸುವ ಹಕ್ಕು ಆಳ್ವರಿಗೆ ಇಲ್ಲ. ವರ್ತಮಾನ.ಕಾಮ್‌ನಲ್ಲಿ ನಾನು ಬರೆದ ಲೇಖನಕ್ಕೆ ಪ್ರತಿಯಾಗಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಎಂದು ಬರೆದವರು ಆಳ್ವರು ವೇದಿಕೆಯಲ್ಲಿ ಕೊರಗರ ಡೋಲಿನೊಂದಿಗೆ ಕುಣಿಯುವ ಫೋಟೋ ಪ್ರಸ್ತಾಪಿಸಿ ನಾನು ಹೇಳಿದ್ದು ಸುಳ್ಳು ಎಂದಿದ್ದಾರೆ. ಆದರೆ ಇದು ಅಸಾಂದರ್ಭಿಕ ಪೋಟೋ ಮತ್ತು ಅವರು ಸತ್ಯವನ್ನು ಮರೆಮಾಚಿ ಯಾವುದನ್ನೋ ಎಲ್ಲಿಯೋ ಪ್ರಸ್ತಾಪಿಸಿದ್ದಾರೆ. “ಆಳ್ವಾಸ್ ನುಡಿಸಿರಿ”ಯಲ್ಲಿ ಕೊರಗರನ್ನು ಮೆರವಣಿಗೆಯಲ್ಲಿ ಡೋಲು ಬಡಿಯಲು ಬಳಸಿ ವೇದಿಕೆಗೆ ಹತ್ತಲು ಬಿಡದೆ ಹೊರಗಡೆ ಕೂರಿಸಲಾಗಿತ್ತು. ಇದೊಂದು ರೀತಿಯಲ್ಲಿ ಅಜಲು ಪದ್ದತಿಯ ಪುನರಾವರ್ತನೆಯಷ್ಟೆ. ಆದರೆ ಅದಕ್ಕೆ ಸಮರ್ಥನೆಯಾಗಿ ಬಳಕೆಯಾಗಿರುವ ಫೋಟೋ “ಆಳ್ವಾಸ್ ದೀಪಾವಳಿ” ಕಾರ್ಯಕ್ರಮದ್ದು (ಪಕ್ಕದಲ್ಲಿಯ ಚಿತ್ರವನ್ನು ಮತ್ತೊಮ್ಮೆ ಗಮನಿಸಿ). ಅದು ಆಳ್ವರು ದಲಿತ ನಿಂದನೆ ಮಾಡಿದ್ದಾರೆ ಎಂದು ದಲಿತರು ಜಿಲ್ಲಾಧಿಕಾರಿಯನ್ನು ದೂರಿಕೊಂಡ ನಂತರ ನಡೆದ ದೀಪಾವಳಿ ಉತ್ಸವದ್ದು. ಹಾಗಾಗಿ ಆಳ್ವರ ಪರ ಬರೆದ ಅಥವ ಬರೆಸಲ್ಪಟ್ಟ ಲೇಖನ ಅಸಾಂದರ್ಭಿಕ ಸುಳ್ಳುಗಳ ಕಂತೆ ಮಾತ್ರವಲ್ಲ, ವಸ್ತುನಿಷ್ಟತೆ ಮತ್ತು ವಿಮರ್ಶಾಸ್ವಾತಂತ್ರ್ಯ ಕಳೆದುಕೊಂಡು ಆಳ್ವರ ಪರ ಪಕ್ಷಪಾತದಿಂದ ಕೂಡಿದೆ.

ಇನ್ನು, ಆಳ್ವರು ಮಂಗಳೂರಿನ ನೆಹರೂ ಮೈದಾನದಲ್ಲಿ ಹಿಂದೂ ಸಮಾಜೋತ್ಸವವನ್ನು ಸಂಘಟಿಸಿ “ಈ ದೇಶ ಹಿಂದೂಗಳಿಗೆ ಮಾತ್ರ ಸೇರಿದ್ದು. ಇಲ್ಲಿ ಹಿಂದೂಗಳಾಗಿ ಇರುವವರು ಅಥವಾ ಹಿಂದುತ್ವವನ್ನು ಒಪ್ಪಿಕೊಂಡವರು ಮಾತ್ರ ಬದುಕಬಹುದು” ಎಂದು ಯಾರಿಂದಲೋ ಭಾಷಣ ಮಾಡಿಸಿ ಹಿಂದೂ ಮುಸ್ಲಿಮರ ಮಧ್ಯೆ ಸೃಷ್ಟಿ ಮಾಡಿರುವ ಅಳಿಸಲಾಗದ ಕಂದಕ ತನ್ನ ಕಾಲೇಜಿನ ಆವರಣದಲ್ಲಿ ಇಫ್ತಾರ್ ಕೂಟ ಮಾಡಿದರೂ, ಮಸೀದಿ ಕಟ್ಟಿದರೂ ಸರಿ ಹೋಗುವಂತದ್ದಲ್ಲ.

ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳ ಮೇಲೆಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಸಂಚಾಲಕರಾಗಿದ್ದರು. ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು. ನಾವು ಅಂದಿನ ಕ್ರೀಡಾ ಉಪನ್ಯಾಸಕರ ಬಳಿ ಕೂಡಾ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೆವು. ವಿದ್ಯಾರ್ಥಿಗಳು ಅಲೋಶಿಯಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ರೀಡಾ ಕೂಟಕ್ಕೆ ಪ್ರಾಂಶುಪಾಲರ ಆದೇಶದಂತೆ ಹೊರಟಿದ್ದರು. ಶಿಸ್ತುಕ್ರಮ ಕೈಗೊಳ್ಳುವುದು ಪ್ರಾಂಶುಪಾಲರ ಕೆಲಸವೇ ಹೊರತು ಸಂಚಾಲಕರದ್ದಲ್ಲ.

ಡೊನೇಷನ್ ಹಣದಲ್ಲಿ ಅಥವಾ ಹಿಂದೂ ಸಮಾಜೋತ್ಸವದ ಸಂಘಟಕ ಸಾಹಿತ್ಯದ ಕಾರ್ಯಕ್ರಮ ಮಾಡೋದರಲ್ಲಿ ತಪ್ಪೇನು? ತಪ್ಪು ಏನೂ ಇಲ್ಲ. ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯಬೇಕು, ಈ ಸಮಾಜ ಜಾತ್ಯಾತೀತ ಮತ್ತು ಧರ್ಮಾತೀತವಾಗಿರಬೇಕು ಮತ್ತು ಈ ಸಮಾಜದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಮತ್ತು ಈ ನೆಲ ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಬಲವಾಗಿ ಪ್ರತಿಪಾದಿಸುವ ನನ್ನ ನೆಚ್ಚಿನ ಮೇಷ್ಟು ಅನಂತಮೂರ್ತಿಯವರು ಇಂತಹ ಕಾರ್ಯಕ್ರಮಕ್ಕೆ ಹೋಗುವುದು ಮಾತ್ರ ಆಕ್ಷೇಪಾರ್ಹ. ತೊಗಾಡಿಯಾ, ಕಾರಂತ, ಗುರೂಜಿಯಂತವರನ್ನು ಕರೆಸಿ ಭಾಷಣ ಮಾಡಿಸೋ ವ್ಯಕ್ತಿಯೇ ಅನಂತಮೂರ್ತಿ, ಬರಗೂರುರಂತವರನ್ನೂ ಕರೆಸಿ ಭಾಷಣ ಮಾಡಿಸುತ್ತಾರೆ ಎಂದರೆ ಮಾತ್ರ ನಮ್ಮ ಕನ್ನಡದ ಮನಸ್ಸಿಗೆ ನೋವಾಗುತ್ತದೆ. ಮೋಹನ ಆಳ್ವರು ಒರ್ವ ಉತ್ತಮ ಸಂಘಟಕ. ಆದರೆ ಡೆಮಾಕ್ರಟಿಕ್ ಆಗಿರುವ ಸಂಘಟಕ ಅಲ್ಲ. ಡೊನೇಷನ್ ಹಣದಲ್ಲಿ ತನಗೆ ಬೇಕಾದಂತೆ ಕಾರ್ಯಕ್ರಮ ನಡೆಸಿ ಅದನ್ನೇ ಕನ್ನಡ ಮನಸ್ಸುಗಳ ಕಾರ್ಯಕ್ರಮ ಎಂದರೆ ಒಪ್ಪಲು ಸಾಧ್ಯವಿಲ್ಲ. ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ.