Daily Archives: October 3, 2012

ಕಾವೇರಿ ಸಮಸ್ಯೆ : ಮಿಡಿಯಾ ಡಾರ್ಲಿಂಗ್ ಸುರೇಶ್ ಕುಮಾರ್ ಎಲ್ಲಿದ್ದಾರೆ?

 – ರಮೇಶ್ ಕುಣಿಗಲ್

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಾರ್ವಜನಿಕವಾಗಿ ಗೊತ್ತಿರುವ ಅಂಕಿ ಅಂಶಗಳು ಹೇಳುತ್ತವೆ. ಇಲ್ಲದಿರುವ ನೀರನ್ನು ಬಿಡುವುದು ಹೇಗೆ? ಅಥವಾ ನಮ್ಮ ಅಗತ್ಯಗಳನ್ನು ಬಲಿಕೊಟ್ಟು ನೀರು ಬಿಡುವುದು ಹೇಗೆ? ಎಂದು ಚರ್ಚೆ, ಹೋರಾಟಗಳು ನಡೆಯುತ್ತಿವೆ. ರಾಜ್ಯದ ಅಂಕಿ ಅಂಶಗಳನ್ನು ನ್ಯಾಯಾಲಯದಲ್ಲಿ ಸೂಕ್ತವಾಗಿ ಮಂಡಿಸಿ, ರಾಜ್ಯದ ಹಿತ ಕಾಪಾಡಬೇಕಾದ್ದು ರಾಜ್ಯ ಸರಕಾರದ ಕರ್ತವ್ಯ.

ಇಂತಹ ಸಂದರ್ಭಗಳಲ್ಲಿ ಈ ನೆಲದ ಕಾನೂನು ಮಂತ್ರಿಯ ಹೊಣೆ ದೊಡ್ಡದು. ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿದ್ದಾಗ ಉಂಟಾಗಿದ್ದ ಪರಿಸ್ಥಿತಿಯಲ್ಲಿ ಕಾನೂನು ಮಂತ್ರಿಯಾಗಿ ಹೈರಾಣಾದವರು ಡಿ.ಬಿ ಚಂದ್ರೇಗೌಡರು. ಅವರು ಇಂದು ಬಿಜೆಪಿಯಲ್ಲಿದ್ದಾರೆ. ಆದರೆ ಇದೇ ಬಿಜೆಪಿಯ ಸದ್ಯದ ಕಾನೂನು ಮಂತ್ರಿ ಸುರೇಶ್ ಕುಮಾರ್‌ಗೆ ಏನಾಗಿದೆ?

ಅಸ್ಸಾಂ ಯುವಕರು ಬೆಂಗಳೂರು ಬಿಟ್ಟು ರೈಲು ಹತ್ತಿ ತಾಯ್ನಾಡಿಗೆ ಹೊರಟು ನಿಂತಿದ್ದಾಗ, ರೈಲ್ವೇ ನಿಲ್ದಾಣಕ್ಕೆ ಹೋಗಿ ಆರು ಗಂಟೆಗಳ ಕಾಲ ಅವರಿಗೆ ಸಂತೈಸುವ ‘ನಾಟಕ’ ಆಡಿ ಫೇಸ್‌ಬುಕ್ ಸ್ಟೇಟಸ್ ಹಾಕಿಕೊಳ್ಳುವ ಮಂತ್ರಿಗೆ ಕಾವೇರಿ ವಿಚಾರದಲ್ಲಿ ಏಕೆ ಮೌನ? ಈ ಹಿಂದಿನ ಕಾವೇರಿ ಪ್ರಾಧಿಕಾರದ ಸಭೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದವರು ಮುಖ್ಯಮಂತ್ರಿ, ನೀರಾವರಿ ಮಂತ್ರಿ ಮತ್ತು ಕಾನೂನು ಮಂತ್ರಿ. ಆದರೆ ಮೊನ್ನೆ ನಡೆದ ಸಭೆಯಲ್ಲಿ ಸುರೇಶ್ ಕುಮಾರ್ ಹಾಜರಿರಲಿಲ್ಲ. ಅಷ್ಟೇ ಅಲ್ಲ ಮುಖ್ಯಮಂತ್ರಿಯವರು ದೆಹಲಿಯಲ್ಲಿ ನಡೆಸಿದ ಕಾನೂನು ತಜ್ಞರ ಸಭೆಗಳಲ್ಲೂ ಇವರು ಹಾಜರಾದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿಲ್ಲ. ಆದರೆ ಇವರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾದರು. ಕಾವೇರಿಗಿಂತ ಪಕ್ಷದ ಸಭೆ ಮುಖ್ಯವಾಯಿತು.

ಮಾಧ್ಯಮದ ಹಿರಿ ತಲೆಗಳ ಪೈಕಿ ಹಲವರಿಗೆ ಸುರೇಶ್ ಕುಮಾರ್ – ಸಜ್ಜನ, ಪ್ರಾಮಾಣಿಕ, ನಿಷ್ಠ. ಹಾಗಾದರೆ ಇವರು ದಕ್ಷರಾಗುವುದು ಯಾವಾಗ? ಸಜ್ಜನಿಕೆ ಅಥವಾ ಪ್ರಾಮಾಣಿಕತೆ ಎಲ್ಲಾ ವ್ಯಕ್ತಿಗಳಲ್ಲೂ ನಿರೀಕ್ಷಿಸಬಹುದಾದ ಸಾಮಾನ್ಯ ಗುಣಗಳು. ಆದರೆ ಒಬ್ಬ ಮಂತ್ರಿ ಪ್ರಾಮಾಣಿಕನಾಗಿದ್ದರಷ್ಟೇ ಸಾಲದು. ತನ್ನ ಕರ್ತವ್ಯ ಅರಿತುಕೊಂಡು ದಕ್ಷತೆಯಿಂದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. (ಅವರು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಅನ್ನುವುದು ಈಗ ಸಂಶಯ ಬಿಡಿ. ಸುಳ್ಳು ಮಾಹಿತಿ ಕೊಟ್ಟು ಎರಡೆರಡು ನಿವೇಶನ ಪಡೆದ ಆರೋಪ ಇಲ್ಲವೆ? ಆ ಸಂದರ್ಭದಲ್ಲಂತೂ ಕೆಲ ಮಾಧ್ಯಮ ಸಂಸ್ಥೆಗಳು ‘ಅತ್ಯಂತ ಪ್ರಾಮಾಣಿಕ ವ್ಯಕ್ತಿಗೆ ಅಂಟಿದ ಕಳಂಕ’ ಎಂದೆಲ್ಲಾ ಕಣ್ಣೀರು ಹಾಕಿದರು.)

“ಕಾವೇರಿ ಸಮಸ್ಯೆ ಬಗೆಹರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ..” ಎಂಬರ್ಥದ ಸವಕಲು ಹೇಳಿಕೆಗಳನ್ನು ಹೊರತುಪಡಿಸಿದರೆ ಸುರೇಶ್ ಕುಮಾರ್ ಇದುವರೆಗೆ ಕಾವೇರಿ ವಿಚಾರದಲ್ಲಿ ಒಂದೇ ಒಂದು ಗಂಭೀರ ಹೇಳಿಕೆ ನೀಡಲಿಲ್ಲ. ವಿಚಿತ್ರವೆಂದರೆ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸುವ ವಿರೋಧ ಪಕ್ಷಗಳು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿಯನ್ನಷ್ಟೆ ಟೀಕಿಸುತ್ತವೆಯೇ ಹೊರತು, ಕಾನೂನು ಮಂತ್ರಿಯ ವೈಫಲ್ಯದ ಬಗ್ಗೆ ಮಾತನಾಡುವುದಿಲ್ಲ.

ಸುರೇಶ್ ಕುಮಾರ್ ಅವರ ನಡವಳಿಕೆಯನ್ನು ಕೆಲಕಾಲ ಗಮನಿಸಿದ ಯಾರಿಗೇ ಆದರೂ ಅರ್ಥವಾಗುವ ಸಂಗತಿ ಎಂದರೆ, ಅವರು ವಿವಾದಾತ್ಮಕ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ. ನಿಮ್ಮ ಮಂತ್ರಿಗಳು ವಿಧಾನ ಸಭೆಯಲ್ಲಿ ಬ್ಲೂ ಫಿಲಂ ನೋಡ್ತಾ ಇದ್ದರಲ್ಲ ಅಂತ ಕೇಳಿದಾಕ್ಷಣ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯನ್ನು ಈಗಷ್ಟೇ ಮುಗಿಸಿ ಬಂದವರಂತೆ ಅವರು ಗಂಭೀರವದನರಾಗಿ – ‘ಅಂತಹದೊಂದು ಪ್ರಕರಣ ನಡೆದದ್ದೇ ಆಗಿದ್ದರೆ..ಅದು ಖಂಡನೀಯ’ ಎನ್ನುತ್ತಾರೆ. ಬಿಜೆಪಿಯ ಆಂತರಿಕ ಕಲಹ ಮುಗಿಲು ಮುಟ್ಟಿದ್ದರೂ ಊಹ್ಞುಂ ಒಂದೇ ಒಂದು ಮಾತೂ ಇಲ್ಲ. ಸುಮ್ಮನೆ ಮಾತನಾಡಿ ಯಾರಾದಾದರೂ ವಿರೋಧ ಕಟ್ಟಿಕೊಳ್ಳುವುದೇಕೆ ಎನ್ನುವ ಮನೋಭಾವ.

ಬೆಂಗಳೂರಿನ ನೀರು ಸರಬರಾಜು ಕೂಡಾ ಅವರದೇ ಖಾತೆ. ನಗರಕ್ಕೆ ನಾಲ್ಕನೇ ಹಂತದ ಕುಡಿವ ನೀರಿನ ಯೋಜನೆಗಾಗಿ ಜನರಿಂದ ಹಣ ಪಡೆದುಕೊಂಡು ವರ್ಷಗಳೇ ಉರುಳಿವೆ. ಅವರಿಗಿನ್ನೂ ನೀರು ಕೊಟ್ಟಿಲ್ಲ. ಬೆಂಗಳೂರಿಗೆ ನೀರು ಬೇಕಿದ್ದರೆ ಕಾವೇರಿಯಲ್ಲಿ ನೀರು ಇರಬೇಕು. ಆದರೂ ಅವರು ಕಾವೇರಿ ಬಗ್ಗೆ ಮಾತನಾಡುವುದಿಲ್ಲ.

ಹಾಗಾದರೆ ಇವರಿಗೆ ಜವಾಬ್ದಾರಿ ಇಲ್ಲವೆ ಅಥವಾ ಜವಾಬ್ದಾರಿಯನ್ನು ಕಸಿಯಲಾಗಿದೆಯೆ? ಅವರೇ ಸ್ಪಷ್ಟಪಡಿಸಬೇಕು.

ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?


-ನವೀನ್ ಸೂರಿಂಜೆ


 

ಮತ್ತೆ ಮೋಹನ ಆಳ್ವರ “ಆಳ್ವಾಸ್ ನುಡಿಸಿರಿ” ಬಂದಿದೆ. ಈ ಬಾರಿ ನುಡಿಸಿರಿಯ ಘೋಷಣೆ “ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು”. ಉದ್ಘಾಟಕರು ಕನ್ನಡದ ಪ್ರಗತಿಪರ ಮನಸ್ಸುಗಳ ನೆಚ್ಚಿನ ಮೇಷ್ಟ್ರು ಡಾ.ಯು.ಆರ್.‌ಅನಂತಮೂರ್ತಿ. ಕಳೆದ ಎಂಟು ವರ್ಷಗಳಿಂದ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಆಳ್ವಾಸ್ ನುಡಿಸಿರಿಯಲ್ಲಿ ರಾಜ್ಯದ ಹಲವಾರು ಬಂಡಾಯ ಸಾಹಿತಿಗಳು ಭಾಗವಹಿಸಿದ್ದಾರೆ. ಸಂಘಪರಿವಾರದ ವಿರಾಟ್ ಹಿಂದೂ ಸಮಾಜೋತ್ಸವಗಳ ಸಂಘಟಕನಾಗಿದ್ದ ವ್ಯಕ್ತಿಯೊಬ್ಬ ತನ್ನ ವ್ಯಾಪಾರಿ ಉದ್ದೇಶಕ್ಕೆ ತನ್ನ ಸಂಸ್ಥೆಯ ಹೆಸರನ್ನೇ ಇಟ್ಟುಕೊಂಡು ಸ್ವಯಂ ವೈಭವೀಕರಣಕ್ಕಾಗಿ ನಡೆಸುವ “ಆಳ್ವಾಸ್” ನುಡಿಸಿರಿಯಲ್ಲಿ ಬಂಡಾಯ ಸಾಹಿತ್ಯದ ರೂವಾರಿ ಬರಗೂರು ರಾಮಚಂದ್ರಪ್ಪರಿಂದ ಹಿಡಿದು ವೈದೇಹಿಯವರೆಗೆ ಖ್ಯಾತನಾಮರು “ಆಳ್ವರು ವ್ಯಕ್ತಿಯಲ್ಲ, ಕನ್ನಡ ಶಕ್ತಿ” ಎಂದು ಸುಳ್ಳು ಸುಳ್ಳೇ ಹಾಡಿ ಹೊಗಳಿದ್ದಾರೆ. ಈ ಬಾರಿ ಅನಂತಮೂರ್ತಿ ಸರದಿ.

ಆಳ್ವಾಸ್ ಪ್ಯಾಕೇಜ್

ಈ ಬಾರಿ ತನ್ನ ಘೋಷಣೆ ಮತ್ತು ಉದ್ಘಾಟಕರ ಹೆಸರಿನಿಂದಾಗಿ “ಆಳ್ವಾಸ್ ನುಡಿಸಿರಿ” ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ನಾಡಿನ ಎಲ್ಲೆಡೆ ಕನ್ನಡ ಅಭಿಮಾನಿಗಳಿಗೆ, ಕನ್ನಡ ಸಾಹಿತಿ ಬಳಗಕ್ಕೆ ಪ್ರತಿವರ್ಷ ಮೋಹನ ಆಳ್ವರ ನುಡಿಸಿರಿ ಸಾಹಿತ್ಯ ಜಾತ್ರೆ ಎಂದರೆ ಏನೋ ಆಕರ್ಷಣೆ. ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮೂಡಬಿದ್ರೆಗೆ ಧಾವಿಸಿ ಬಂದು ಕನ್ನಡ ಮನಸ್ಸುಗಳು, ಕನ್ನಡ ಸಾಹಿತ್ಯ, ಚಳವಳಿ, ನಾಡು ನುಡಿ ಎಂದು ಗಂಭೀರವಾಗಿ ಚರ್ಚಿಸುತ್ತವೆ. ಒಟ್ಟಾರೆ ಕಳೆದ ಎಂಟು ವರ್ಷಗಳ ನುಡಿಸಿರಿ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಬೆಳೆದಿದೆ. ಮತ್ತು ಇಡೀ ಜಗತ್ತಿನ ಕನ್ನಡಿಗರ ಗಮನ ಸೆಳೆದಿದೆ. ಆಳ್ವರ ಸಾಹಿತ್ಯ ಪ್ರೀತಿ, ಕನ್ನಡ ಪ್ರೇಮ, ಆತಿಥ್ಯ ಎಲ್ಲರ ಮನಸ್ಸನ್ನೂ ಸೂರೆಗೊಂಡಿದೆ. ಮೋಹನ ಆಳ್ವರು ಕನ್ನಡ ಸಾಹಿತ್ಯದ ಐಕಾನ್ ಆಗಿ ಬಿಂಬಿತವಾಗಿದ್ದಾರೆ. ಪತ್ರಿಕೆಗಳಂತೂ ಆಳ್ವಾಸ್ ನುಡಿಸಿರಿಯ ಬಗ್ಗೆ ಪುಟಗಟ್ಟಲೆ ಬರೆಯುತ್ತವೆ. ಇಲ್ಲಿಗೆ ಬರೋ ಪ್ರತೀ ಅತಿಥಿ ಸಾಹಿತಿಗಳ ಪ್ರತ್ಯೇಕ ಸಂದರ್ಶನವನ್ನು ಮಾಡುತ್ತದೆ. ಮೂರು ದಿನವೂ ಮುಖ ಪುಟದಲ್ಲಿ ಒಂದು ಸುದ್ದಿಯಾದರೂ ಆಳ್ವಾಸ್ ನುಡಿಸಿರಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಹಿನ್ನಲೆಯಲ್ಲೇ ಕೆಲವೊಂದು ಸಾಹಿತಿಗಳು ಕೂಡಾ ಇಲ್ಲಿಗೆ ಬರಲು ತುದಿಗಾಲಲ್ಲಿ ನಿಂತಿರುತ್ತಾರೆ.

ಇಷ್ಟಕ್ಕೂ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಕ್ಕಿಂತಲೂ ಆಳ್ವಾಸ್ ನುಡಿಸಿರಿಗೆ ಪತ್ರಿಕೆಗಳು ಹೆಚ್ಚಿನ ಪ್ರಾಮುಖ್ಯತೆ ನೀಡಲು ಆಳ್ವಾಸ್ ನುಡಿಸಿರಿಗಿರುವ ನಿಜವಾದ ಬದ್ಧತೆ ಕಾರಣವಲ್ಲ. ಸುದ್ದಿಗಾಗಿಯೇ ಪ್ರಮುಖ ದಿನ ಪತ್ರಿಕೆಗಳಿಗೆ ಐದರಿಂದ ಏಳು ಲಕ್ಷದವರೆಗೆ ನ್ಯೂಸ್ ಪ್ಯಾಕೇಜ್ ನೀಡಲಾಗುತ್ತದೆ. ಈ ನ್ಯೂಸ್ ಪ್ಯಾಕೇಜ್ ಅಂದರೆ ಪೇಯ್ಡ್ ನ್ಯೂಸ್ ಅಲ್ಲದೆ ಇನ್ನೇನು?

ಮೋಹನ ಆಳ್ವರು ತನ್ನ ಸ್ವಂತ ಖರ್ಚಿನಲ್ಲಿ ತನ್ನದೇ ಆಳ್ವಾಸ್ ಕ್ಯಾಂಪಸ್ಸಿನಲ್ಲಿ ಇಷ್ಟೊಂದು ಅಕ್ಕರೆಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಉದ್ದೇಶ ಏನು ಮತ್ತು ಮೋಹನ ಆಳ್ವರ ನಿಜ ವ್ಯಕ್ತಿತ್ವ ಎಂತಹದ್ದು ಎಂದು ಸ್ವಲ್ಪ ವಿಮರ್ಶೆಗೆ ಒಳಪಡಿಸಿದರೆ ಹೊರಬರುವ ಸಂಗತಿಗಳೇ ಬೇರೆ. ತನ್ನ ಶಿಕ್ಷಣ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಿಸಲು ಅವರು ಈ ರೀತಿಯ ಸಮ್ಮೇಳನಗಳನ್ನು ವ್ಯವಸ್ಥಿತವಾಗಿ ಬಳಸುತ್ತಿದ್ದಾರೆ. ಒಬ್ಬ ಸಾಮಾನ್ಯ ಭೂಮಾಲೀಕನ ಮಗನಾಗಿ, ಒಬ್ಬ ಸಾಮಾನ್ಯ ವೈದ್ಯನಾಗಿ, ಒಂದಿಷ್ಟು ಕಲೆಯ ಬಗ್ಗೆ ಅಭಿರುಚಿ ಹೊಂದಿದ್ದ ವ್ಯಕ್ತಿಯಾಗಿದ್ದ ಮೋಹನ ಆಳ್ವರು ಈಗ ಶಿಕ್ಷಣ ತಜ್ಞರಾಗಿ, ಸಾಹಿತ್ಯದ ರಾಯಭಾರಿಯಾಗಿ, ಬಹಳ ದೊಡ್ಡ ವ್ಯಕ್ತಿತ್ವವಾಗಿ, ಬೆಳೆದಿದ್ದಾರೆ. ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ನಾಡಿನ ಎಲ್ಲೆಡೆಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಲು ಸಾಲುಗಟ್ಟಿ ನಿಲ್ಲುತ್ತಾರೆ. ಈ ಮಟ್ಟಿಗೆ ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಪ್ರಖ್ಯಾತಿಯನ್ನು ಗಳಿಸಿದೆ. ಈ ರೀತಿಯ ಪ್ರಖ್ಯಾತಿಗೆ, ಇಲ್ಲಿ ಸೀಟು ಗಿಟ್ಟಿಸಲು ನಡೆಯುವ ನೂಕುನುಗ್ಗಲಿಗೆ ಆಳ್ವಾಸ್ ನುಡಿಸಿರಿ ಸಾಹಿತ್ಯ ಜಾತ್ರೆಯೇ ಕಾರಣ. ಕಾಲೇಜಿನ ಬಗ್ಗೆ ಯಾವುದೇ ಜಾಹೀರಾತಿಲ್ಲದೆ ಈ ಮಟ್ಟಿಗೆ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಮತ್ತು ತನ್ನ ಕಾಲೇಜಿನ ಸೀಟುಗಳನ್ನು ಮಾರಾಟ ಮಾಡಲು ಆಳ್ವರು ನುಡಿಸಿರಿಯನ್ನು ಬಹಳ ವ್ಯವಸ್ಥಿತವಾಗಿ ಬಳಕೆ ಮಾಡಿದ್ದಾರೆ. ಆಳ್ವರದೇನೂ  ಬೀದಿಯಲ್ಲಿ ಕಿತ್ತಳೆ ವ್ಯಾಪಾರ ಮಾಡಿ ಸರ್ಕಾರಿ ಶಾಲೆಯೊಂದನ್ನು ಕಟ್ಟಿದ ಮಂಗಳೂರಿನ ಹರೆಕಳ ಹಾಜಬ್ಬನ ರೀತಿಯ ನಿಸ್ವಾರ್ಥ ಸೇವೆಯಲ್ಲ.

ಮೂಲತಹ ಫ್ಯೂಡಲ್ ಭೂ ಮಾಲೀಕ  ವರ್ಗದಿಂದ ಬಂದಿರುವ ಮೋಹನ ಆಳ್ವರು ಆಳದಲ್ಲಿ ಫ್ಯೂಡಲ್ ಮನೋಭಾವವನ್ನೇ ಹಾಸು ಹೊದ್ದು ಬೆಳೆದವರು. ಮೂಡಬಿದ್ರೆ ಪ್ರಾಂತ್ಯದ ಬಹುದೊಡ್ಡ ಭೂ ಮಾಲೀಕ ಕುಟುಂಬ ಮೋಹನ ಆಳ್ವರದ್ದು. ತನ್ನ ವರ್ಗ ಗುಣಕ್ಕೆ ಸಹಜವಾದಂತೆ ವರ್ತಿಸುವ ಆಳ್ವರು ಕಳೆದ ಎರಡು ವರ್ಷಗಳ ಹಿಂದೆ ನುಡಿಸಿರಿ ಕಾರ್ಯಕ್ರಮದಲ್ಲಿ ದಲಿತ ನಿಂದನೆಯನ್ನು ಮಾಡಿದ್ದರು. ಕರಾವಳಿಯ ಅತೀ ಶೋಷಿತ ಜನಾಂಗವಾಗಿರುವ ಕೊರಗರನ್ನು ತನ್ನ ನುಡಿಸಿರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಸಿ ವೇದಿಕೆ ಹತ್ತಲು ಬಿಡದೆ ಪೆಂಡಾಲ್‌ನ ಹೊರಗಡೆ ನಿಲ್ಲಿಸಿ ಡೋಲು ಬಾರಿಸಿದ್ದರು. ಇದಂತೂ ನಿಷೇದಿತ ಅಜಲು ಪದ್ದತಿಯ ಪ್ರತಿರೂಪದಂತಿತ್ತು. ಇದರ ಬಗ್ಗೆ ಮಾಧ್ಯಮಗಳು, ದಲಿತ ಸಂಘಟನೆಗಳು ಧ್ವನಿ ಎತ್ತಿದ್ದರೂ ಯಾವುದೇ ಮುಲಾಜಿಲ್ಲದೆ ತನ್ನ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೂಡಬಿದ್ರೆ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು.

ಇದಾದ ನಂತರ ಇನ್ನೊಂದು ಬಾರಿಯೂ ಮೋಹನ ಆಳ್ವರೂ ಇದೇ ರೀತಿ ದಲಿತ ನಿಂದನೆ ಮಾಡಿದ್ದರು. ದಲಿತರ ಆರಾಧ್ಯ ದೈವಗಳನ್ನು ಮೆರವಣಿಗೆಯಲ್ಲಿ ಮತ್ತು ಮನರಂಜನಾ ವೇದಿಕೆಯಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ ನುಡಿಸಿರಿಯ ಮನರಂಜನಾ ವೇದಿಕೆಯಲ್ಲಿ ದೈವದ ಪಾತ್ರಗಳನ್ನು ಪ್ರದರ್ಶಿಸಿ ಬಹಿರಂಗವಾಗಿ ದಲಿತರನ್ನು ಅವಮಾನಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೋಹನ ಆಳ್ವ ಮತ್ತು ಜಿಲ್ಲಾಡಳಿತದ ಗಮನ ಸೆಳೆದರೂ ಮೋಹನ ಆಳ್ವರು ಕ್ಯಾರೇ ಅನ್ನಲಿಲ್ಲ.

ಕನ್ನಡ ಮನಸ್ಸು ಮತ್ತು ಜನಪರ ಚಳವಳಿ

ನವೆಂಬರ್ 16 ರಿಂದ 18 ರವರೆಗೆ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು ಎಂಬ ಪರಿಕಲ್ಪನೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಒಂಬತ್ತನೇ ವರ್ಷ ನಡೆಸುತ್ತಿದೆ. ಮೋಹನ ಆಳ್ವರು ಮತ್ತು ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೂ ಜನಪರ ಚಳವಳಿಗಳಿಗೂ ಇರುವ ಸಂಬಂಧವಾದರೂ ಏನು? ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರ್‌.ಎಸ್.ಎಸ್ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಇದೇ ಮೋಹನ ಆಳ್ವರು ಗೌರವಧ್ಯಕ್ಷರಾಗಿದ್ದರು. ಕರಾವಳಿ ಜಿಲ್ಲೆಗಳ ಜನಪರ ಚಳವಳಿಗಳನ್ನು ಸಂಪೂರ್ಣವಾಗಿ ನಾಶಪಡಿಸಿದ, ನಿರ್ವೀರ್‍ಯಗೊಳಿಸಿದ ಪ್ರತಿಗಾಮಿ ಹಿಂದುತ್ವದ ಚಳವಳಿಯ ಶಕ್ತಿ ಪ್ರದರ್ಶನದ ಸಮಾಜೋತ್ಸವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಐದು ವರ್ಷಗಳ ಹಿಂದಿನ ಹಿಂದುತ್ವದ ಯಶಸ್ವಿ ಸಮಾವೇಶದ ಫಲವೇ ಇಂದಿನ ಬಿಜೆಪಿ ಸರ್ಕಾರ ಮತ್ತು ಕೋಮುವಾದಿ ಮನಸ್ಸುಗಳು. ಈ ಹಿಂದೂ ಸಮಾಜೋತ್ಸವದ ಯಶಸ್ಸಿನ ನಂತರ ಮಂಗಳೂರಿನ ಬೀದಿಗಳಲ್ಲಿ ಹಿಂದುತ್ವದ ನೈತಿಕ ಪೊಲೀಸರದ್ದೇ ಕಾರುಬಾರು.

ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಗೌರವ ಸಲಹೆಗಾರರಾಗಿದ್ದರು. ಮೊದಲೇ ತನ್ನ ಕಾಲೇಜಿನ ವಿದ್ಯಾರ್ಥಿಗಳನ್ನು ಕ್ರೀಡಾಕೂಟದಲ್ಲಿ ಹಿಂದಿಕ್ಕಿ ಪ್ರಶಸ್ತಿ ಪಡೆಯುತ್ತಿದ್ದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಅಸಹನೆ ಹೊಂದಿದ್ದ ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು.

ಈಗಲಾದರೂ ಮೋಹನ ಆಳ್ವ ಮನಷ್ಯ ಪರ ನಿಲುವುಗಳನ್ನು ಹೊಂದಿದ್ದಾರೆಯೇ ಎಂದರೆ ಅದೂ ಇಲ್ಲ. ಮೊನ್ನೆ ಮೊನ್ನೆ ನಡೆದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆ ದಾಳಿಯ ಪ್ರಕರಣದಲ್ಲೂ ಹುಡುಗಿಯರ ಮೇಲೆ ಹಲ್ಲೆ ನಡೆಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನೇ ಸಮರ್ಥಿಸಿಕೊಂಡಿದ್ದರು. “ಹುಡುಗಿಯರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಆದರೆ ಹುಡುಗಿಯರು ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಅಶ್ಲೀಲ ಬಟ್ಟೆ ತೊಟ್ಟುಕೊಂಡು ಹೋಂ ಸ್ಟೆಗಳಲ್ಲಿ ಹುಟ್ಟು ಹಬ್ಬ ಆಚರಿಸಿದ್ದೂ ತಪ್ಪು” ಎಂದಿದ್ದರು. ಇದು ಮೋಹನ ಆಳ್ವರ ದೊಡ್ಡ, ವಿಶಾಲಹೃದಯದ  ಮನಸ್ಸು.

ಆಳ್ವರ ಜನಪರ ಚಳವಳಿ ಮನಸ್ಸು

ವಿದ್ಯಾರ್ಥಿಗಳು ತಮ್ಮ ಇಷ್ಟ ಬಂದ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬೇಡಿಕೆಗಳ ಪೂರೈಕೆಗಾಗಿ ಹೋರಾಟ, ಪ್ರತಿಭಟನೆಗಳನ್ನು ನಡೆಸಬಹುದು ಮತ್ತು ತಮ್ಮ ಸುತ್ತಮುತ್ತ ನಡೆಯುವ ಬೆಳವಣಿಗೆಗಳಿಗೆ ಸ್ಪಂದಿಸಿ ಚಳವಳಿಗಳನ್ನು ಸಂಘಟಿಸಬಹುದು ಎಂದು ಸಂವಿಧಾನ ವಿದ್ಯಾರ್ಥಿಗಳಿಗೆ ಹಕ್ಕು ನೀಡಿದೆ. ಕಾಲೇಜು ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ಸಂಘಗಳನ್ನು ರಚಿಸುವುದು ಮತ್ತು ವಿದ್ಯಾರ್ಥಿ ಸಂಘಕ್ಕೆ ಮುಕ್ತ ಚುನಾವಣೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೆಳೆಸಬೇಕು ಎಂಬ ನಿಯಮವೇ ಇದೆ. ಆದರೆ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣೆ ಬಿಡಿ, ವಿದ್ಯಾರ್ಥಿ ಸಂಘಗಳಿಗೇ ಅವಕಾಶವಿಲ್ಲ. ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ಸಂಘಟನೆಗಳ ಸದಸ್ಯರಾಗುವಂತಿಲ್ಲ. ವಿದ್ಯಾರ್ಥಿ ಸಂಘಟನೆಗಳಿಗಂತೂ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣ ನಿಷೇದ. ಇನ್ನು ಹೋರಾಟಗಳಂತೂ ಆಳ್ವರ ವಿದ್ಯಾರ್ಥಿಗಳಿಗೆ ಕನಸ್ಸಿನ ಮಾತು. ವಿದ್ಯಾರ್ಥಿಗಳು, ಯುವ ಜನಾಂಗ ಇಲ್ಲದ ಯಾವ ಜನಪರ ಚಳವಳಿಯ ಬಗ್ಗೆ ಮೋಹನ ಆಳ್ವ ಮಾತನಾಡುತ್ತಿದ್ದಾರೆ? ಈ ದೇಶದ ಸ್ವಾತಂತ್ರ್ಯ ಚಳವಳಿ, ಜೇಪಿ ಆಂದೋಲನ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ, ನಾಡು ನುಡಿಗಾಗಿ ನಡೆದ ಎಲ್ಲಾ ಹೋರಾಟಗಳಿಂದ ಹಿಡಿದು ಮೊನ್ನೆ ಮೊನ್ನೆ ದಕ್ಷಿಣ ಕನ್ನಡದಲ್ಲಿ ನಡೆದ ನೈತಿಕ ಪೊಲೀಸರ ವಿರುದ್ಧ ಹೋರಾಟದವರೆಗೆ ನಡೆದ ಜನಪರ ಚಳವಳಿಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳನ್ನು ಹೊರಗಿಟ್ಟು ಯಾವುದೇ ಚಳವಳಿಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಮೋಹನ ಆಳ್ವರ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಯ ಪರಿಕಲ್ಪನೆ.

ಮೋಹನ ಆಳ್ವರಂತಹ ಒಬ್ಬ ಯಶಸ್ವಿ ಶಿಕ್ಷಣದ ವ್ಯಾಪಾರಿ ತನ್ನ ವ್ಯಾಪಾರಿ ಉದ್ದೇಶಕ್ಕಾಗಿ “ಆಳ್ವಾಸ್ ನುಡಿಸಿರಿ”ಯನ್ನು ಬಳಸಿಕೊಳ್ಳುವುದು ಸಹಜ. ಆದರೆ ಇಲ್ಲಿನ ಶೋಷಿತ ವರ್ಗಗಳಿಗಾಗಿ ಬಂಡಾಯ ಸಾಹಿತ್ಯವನ್ನೇ ಸೃಷ್ಠಿ ಮಾಡಿದ, ಕೋಮುವಾದದ ವಿರುದ್ಧ ಸಾಹಿತ್ಯದ ಮೂಲಕ ಮಾತ್ರವಲ್ಲದೆ ಬೀದಿಗಿಳಿದು ಹೋರಾಟಕ್ಕಿಳಿದ ನಾಡಿನ ಖ್ಯಾತ ಸಾಹಿತಿಗಳು ಹಿಂದೂ ಸಮಾಜೋತ್ಸವದ ಸಂಘಟಕ ನಡೆಸುವ ಸಾಹಿತ್ಯ ಜಾತ್ರೆಗೆ ಧಾವಿಸಿ ಬರುವುದು ಅರ್ಥವಾಗದ ವಿಚಾರ. ಮಂಗಳೂರನ್ನು ಕೋಮುವಾದದ ಅಗ್ನಿಕುಂಡವನ್ನಾಗಿಸಿ, ಶಿಕ್ಷಣವನ್ನು ಶ್ರೀಮಂತರ ಮಕ್ಕಳಿಗೆ ಮಾರಾಟಕ್ಕಿಟ್ಟ ವ್ಯಕ್ತಿಯ ಬಗ್ಗೆ ಕೋಮುವಾದವನ್ನು ವಿರೋಧಿಸುವ, ಉಚಿತ ಮತ್ತು ಸಮಾನ ಶಿಕ್ಷಣದ ಅನುಷ್ಠಾನಕ್ಕಾಗಿ ಆಗ್ರಹಿಸುವ, ಜನಪರ ಚಳವಳಿಗಳನ್ನು ಕಟ್ಟುವ ಸಾಹಿತ್ಯದ ಮನಸ್ಸುಗಳಿಗೆ ಅರ್ಥವಾಗದಿರುವುದು ವರ್ತಮಾನದ ದುರಂತ. ಈ ಬಾರಿ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟಿಸಲು ಬರುವ ಮುನ್ನ ಕನ್ನಡ ಮನಸ್ಸುಗಳ ಪ್ರೀತಿಯ ಮೇಷ್ಟ್ರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಮೇಷ್ಟ್ರು ಆಳ್ವರ ಬಗ್ಗೆ, ಅವರ ನುಡಿಸಿರಿಯ ನೈಜ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಿ. ಇಲ್ಲದಿದ್ದಲ್ಲಿ ಆಳ್ವರ ನುಡಿಸಿರಿಯ ವೇದಿಕೆಯಲ್ಲಿ ಆಳ್ವರೇ ನಾಚಿಕೊಳ್ಳುವಂತೆ ಕನ್ನಡದ ಜನಪರ ಸಾಹಿತಿಗಳು ಹೊಗಳುವುದನ್ನು ಕಂಡು ಜಿಲ್ಲೆಯ ವಿಚಾರವಾದಿಯೊಬ್ಬರು ಹೇಳಿದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ” ಎಂಬ ಮಾತು ಅನಂತಮೂರ್ತಿಯವರಿಗೂ ಅನ್ವಯಿಸುತ್ತದೆ.