Daily Archives: October 11, 2012

ಪ್ರಜಾ ಸಮರ-5 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲ್ ಇತಿಹಾಸವನ್ನು ನಕ್ಸಲ್‌ ಬಾರಿ ಎಂಬ ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಲಿಂಗ್ ಪ್ರಾಂತ್ಯದ ಹಳ್ಳಿಯಲ್ಲಿ 1967ರ ಮೇ ತಿಂಗಳಿನಲ್ಲಿ ನಡೆದ ಘಟನೆಯೊಂದಿಗೆ ಗುರುತಿಸುವುದು ವಾಡಿಕೆಯಾಗಿದೆ. ವಾಸ್ತವವಾಗಿ ಈ ಘಟನೆಗೂ ಮುನ್ನ ಒಂದು ದಶಕದ ಹಿಂದೆಯೇ ಆಂಧ್ರದ ಉತ್ತರ ತೆಲಂಗಾಣ ಪ್ರಾಂತ್ಯದ ಶ್ರೀಕಾಕುಳಂ ಜಿಲ್ಲೆಯಲ್ಲಿ ರೈತ ಮತ್ತು ಕೂಲಿ ಕಾರ್ಮಿಕರ ಹೋರಾಟ ಆರಂಭಗೊಂಡಿತ್ತು.

1925 ರಲ್ಲಿ ಭಾರತಕ್ಕೆ ಕಾಲಿಟ್ಟ ಎಡಪಂಥಿಯ ಚಿಂತನೆಗಳು ಆ ಕಾಲದಲ್ಲಿ ಆಂಧ್ರ ಪ್ರದೇಶದುದ್ದಕ್ಕೂ ಹರಡಿದ್ದವು. ಆಗಿನ ಆಂಧ್ರಪ್ರಭ ಎಂಬ ತೆಲುಗು ದಿನಪತ್ರಿಕೆ ಕಮ್ಯೂನಿಷ್ಟ್ ಪಕ್ಷದ ವಿಚಾರಧಾರೆಯನ್ನು ಪ್ರಕಟಿಸುವುದರಲ್ಲಿ ಮುಂಚೂಣಿಯಲ್ಲಿತ್ತು. ಅಲ್ಲಿನ ಕಮ್ಯೂನಿಷ್ಟರ ಪ್ರಭಾವ ಮತ್ತು ಸಹಕಾರದೊಂದಿಗೆ ತೆಲಂಗಾಣ ಪ್ರಾಂತ್ಯದ ಅರಣ್ಯಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳು ಮತ್ತು ರೈತ ಹಾಗೂ ಕೂಲಿ ಕಾರ್ಮಿಕರು, ಆಂಧ್ರದಲ್ಲಿ ದೊರೆಗಳು ಎಂದು ಕರೆಸಿಕೊಳ್ಳುತ್ತಿದ್ದ ಜಮೀನ್ದಾರರ ದಬ್ಬಾಳಿಕೆ ಮತ್ತು ಕ್ರೌರ್ಯದ ವಿರುದ್ಧ ತಿರುಗಿಬಿದ್ದಿದ್ದರು. ಇವರಿಗೆ 1947ಕ್ಕೆ ಮುನ್ನವೇ ಅಂದಿನ ಹೈದರಾಬಾದ್ ನಿಜಾಮನ ವಿರುದ್ಧ ತಿರುಗಿ ಬಿದ್ದಿದ್ದ ಕಮ್ಯೂನಿಷ್ಟ್ ಕಾರ್ಯಕರ್ತರ ಹೋರಾಟ ಮಾದರಿಯಾಗಿತ್ತು.

ಸ್ವಾತಂತ್ಯಕ್ಕೆ ಪೂರ್ವದಲ್ಲಿ ತೆಲಂಗಾಣ ಪ್ರಾಂತ್ಯ ಕೂಡ ಹೈದರಾಬಾದ್ ಸಂಸ್ಥಾನವನ್ನು ಆಳುತ್ತಿದ್ದ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ತನ್ನ ರಾಜ್ಯದ ಜನರ ಹಿತಾಸಕ್ತಿಯನ್ನು ಬದಿಗೊತ್ತಿ ಸದಾ ಸುಖದ ಲೋಲುಪತೆಯಲ್ಲಿ ಮುಳುಗಿ ಅಕ್ಷರಶಃ ಸರ್ವಾಧಿಕಾರಿಯಂತೆ ಆಳಿದ ಈ ನಿಜಾಮನ ಬಗ್ಗೆ ಸಾಮಾನ್ಯ ಜನರ ಎದೆಯೊಳಗೆ ಸಹಜವಾಗಿ ಆಕ್ರೋಶ ಮಡುವುಗಟ್ಟಿತ್ತು. ಎಂಬತ್ತಾರು ಮಂದಿ ಪತ್ನಿಯರನ್ನು ಹೊಂದಿದ್ದ ಹಾಗೂ ಆ ಕಾಲದ ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬನಾಗಿದ್ದ ಇವನ ಕೈಕೆಳಗೆ ಇದ್ದ ಆಡಳಿತಗಾರರು, ಪ್ರಾಂತ್ಯಗಳ ಪಾಳೆಗಾರರು, ಜಮೀನ್ದಾರರು ಮತ್ತು ರಜಾಕಾರರು ನಿಜಾಮನಷ್ಟೇ ಕ್ರೂರಿಗಳಾಗಿದ್ದರು. ಆಳುವವರೆಲ್ಲಾ ಮುಸ್ಲಿಂರಾಗಿದ್ದುದು ಬಹು ಸಂಖ್ಯಾತರಾಗಿದ್ದ ಅಂದಿನ ಹೈದರಾಬಾದ್ ಸಂಸ್ಥಾನದ ಹಿಂದುಗಳಲ್ಲಿ ನಿಜಾಮನ ಆಡಳಿತ ಕುರಿತಂತೆ ಅಂತರಂಗದಲ್ಲಿ ಅಸಮಧಾನವಿದ್ದ ಕಾರಣಕ್ಕಾಗಿ ನಿಜಾಮನ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ ಜನಸಾಮಾನ್ಯರ ಪರ ಧ್ವನಿ ಎತ್ತಿದ ಕಮ್ಯೂನಿಷ್ಟ್ ಪಕ್ಷದ ಮೇಲೆ ಹೈದರಾಬಾದ್‌ ನಿಜಾಮ ನಿಷೇಧವನ್ನು ಹೇರಿದ್ದ.

1946ರಲ್ಲಿ ಆಂಧ್ರದ ಎಲ್ಲಾ ಕಮ್ಯೂನಿಷ್ಟ್ ನಾಯಕರು ಒಗ್ಗೂಡಿ ಆಂಧ್ರ ಮಹಾಸಭಾ ಸಂಘಟನೆಯ ಅಡಿಯಲ್ಲಿ ನಿಜಾಮನ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದರು. ಅಪಾರ ಪ್ರಮಾಣದಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಬೆಂಬಲ ಪಡೆದಿದ್ದ ಎಡಪಂಥಿಯ ಹೋರಾಟವನ್ನು ಬಗ್ಗು ಬಡಿಯುವುದು ನಿಜಾಮನಿಗೆ ಸುಲಭದ ಸಂಗತಿಯಾಗಿರಲಿಲ್ಲ. ಆಂಧ್ರದ ನೆಲದಲ್ಲಿ ಪ್ರಥಮಬಾರಿಗೆ ನಿಜಾಮನ ವಿರುದ್ಧ ಸಂಘಟಿತವಾಗಿ ಕಮ್ಯೂನಿಷ್ಟರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ನಲ್ಗೊಂಡ, ಕಮ್ಮಂ, ವಾರಂಗಲ್ ಜಿಲ್ಲೆಗಳಲ್ಲಿ ಸುಮಾರು ಐದು ಸಾವಿರ ರೈತರು ಮತ್ತು ಕೂಲಿಕಾರ್ಮಿಕರು ಸಹ ಸಂಘಟಿತರಾಗಿ ತಮ್ಮನ್ನು ಶೋಷಣೆ ಮಾಡುತ್ತಿದ್ದ ಭೂಮಾಲಿಕರ ವಿರುದ್ಧ ಸಿಡಿದೆದ್ದರು. ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದೊಂದಿಗೆ ಭೂಮಾಲಿಕರ ಜಮೀನುಗಳಿಗೆ ನುಗ್ಗಿದ ರೈತರು ಬೆಳೆದು ನಿಂತಿದ್ದ ಫಸಲನ್ನು ಕುಯ್ಲು ಮಾಡಿ ಕೊಂಡೊಯ್ದು ನಂತರ ಎಲ್ಲರೂ ಸಮನಾಗಿ ಹಂಚಿಕೊಂಡರು.

ಆಂಧ್ರದ ಕ್ರಾಂತಿಕಾರಿ ಲೇಖಕ ಮತ್ತು ಕವಿಯಾಗಿರುವ ಹಾಗೂ ನಕ್ಸಲ್ ಚಳವಳಿಯ ಬೆಂಬಲಿಗರಲ್ಲಿ ಒಬ್ಬರಾಗಿರುವ ವರವರರಾವ್ ತಮ್ಮ ’ಸೆರೆಮನೆಯ ದಿನಚರ” ಎಂಬ ಕೃತಿಯಲ್ಲಿ ಭೂಮಾಲಿಕರ ದಬ್ಬಾಳಿಕೆ ಆಂಧ್ರಪ್ರದೇಶದಲ್ಲಿ ನಕ್ಸಲ್ ಹೋರಾಟ ಹುಟ್ಟಿಕೊಳ್ಳಲು ಪರೋಕ್ಷವಾಗಿ ಕಾರಣವಾಯಿತು ಎಂದಿದ್ದಾರೆ. ಅಲ್ಲದೆ, ಆಂಧ್ರದಲ್ಲಿ ಸಂಸ್ಥಾನಗಳ ಮಾಂಡಲೀಕರಂತೆ ಬದುಕಿದ ಭೂಮಾಲಿಕರ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಆ ಕಾಲದಲ್ಲಿ ಜಮೀನುಗಳಲ್ಲಿ ದುಡಿಯುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು ತಮ್ಮ ಹಸುಗೂಸುಗಳನ್ನು ಜೊತೆಯಲ್ಲಿ ಕೊಂಡೊಯ್ದು ಹೊಲದ ಬದಿಯಲ್ಲಿ ಗಿಡಗಳ ನೆರಳಲ್ಲಿ ಮಲಗಿಸಿ ದುಡಿಯುವುದು ಸಾಮಾನ್ಯವಾಗಿತ್ತು. ತಮ್ಮ ಮಕ್ಕಳಿಗೆ ಮಣ್ಣಿನ ಕುಡಿಕೆಯೊಂದರಲ್ಲಿ ಒಂದಿಷ್ಟು ಹಾಲನ್ನು ಜೊತೆಯಲ್ಲಿ ಕೊಂಡೊಯ್ಯುತ್ತಿದ್ದರು. ಮಕ್ಕಳು ಅತ್ತಾಗ, ಅವುಗಳಿಗೆ ಹಾಲುಣಿಸಲು ಬಿಡಲಾರದಷ್ಟು ಕ್ರೂರಿಗಳಾಗಿದ್ದ ಜಮೀನ್ದಾರರು ಹಲವು ವೇಳೆ ಹಾಲಿನ ಮಡಕೆಗಳಿಗೆ ಮಣ್ಣು ತುಂಬಿ ಅವುಗಳನ್ನು ಹೊಲದಲ್ಲಿ ಹರಡುತ್ತಿದ್ದರು. ಈ ಘಟನಾವಳಿಗಳನ್ನ ವರವರರಾವ್ ಹೃದಯಂಗಮವಾಗಿ ಚಿತ್ರಿಸಿದ್ದಾರೆ.

1947ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾದರೂ ಹೈದರಾಬಾದ್ ಸಂಸ್ಥಾನಕ್ಕೆ ಮಾತ್ರ ಸ್ವಾತಂತ್ರ್ಯ ದೊರಕಿರಲಿಲ್ಲ. ಸ್ವತಂತ್ರ ಭಾರತದೊಂದಿಗೆ ಹೈದರಾಬಾದ್ ಸಂಸ್ಥಾನವನ್ನು ವಿಲೀನಗೊಳಿಸಲು ನಿರಾಕರಿಸಿದ್ದ ನಿಜಾಮ, ಹೈದರಾಬಾದ್ ಅನ್ನು ಪ್ರತ್ಯೇಕ ರಾಷ್ಟ್ರವಾಗಿಸಲು ಯತ್ನಿಸಿ ಬ್ರಿಟಿಷರ ನೆರವು ಕೋರಿದ್ದ. ಭಾರತದ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ತೊಡಗಿದ್ದ ಸ್ವತಂತ್ರ ಭಾರತದ ಗೃಹ ಮಂತ್ರಿ ಸರ್ದಾರ್ ವಲ್ಲಬಾಯ್ ಪಟೇಲ್ ನಿಜಾಮನ ವರ್ತನೆಯಿಂದ ಸಿಟ್ಟಿಗೆದ್ದು 1948ರಲ್ಲಿ ಭಾರತೀಯ ಸೇನೆಯನ್ನು ಹೈದರಾಬಾದ್ ಸಂಸ್ಥಾನದ ಮೇಲೆ ಮುತ್ತಿಗೆ ಹಾಕಲು ರವಾನಿಸಿದಾಗ, ಹೆದರಿದ ನಿಜಾಮ ಅಂತಿಮವಾಗಿ ಭಾರತ ಸರ್ಕಾರಕ್ಕೆ ಶರಣಾಗಿದ್ದನು. ಆ ವೇಳೆಗಾಗಲೇ ನಿಜಾಮನ ದುರಾಡಳಿತದಿಂದ ಬೇಸತ್ತಿದ್ದ ತೆಲಂಗಾಣ ಪ್ರಾಂತ್ಯದ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು ತಮ್ಮ ರಕ್ಷಣೆಗಾಗಿ ಬಲಿಷ್ಠ ಸಂಘಟನೆಗಳನ್ನು ಹುಟ್ಟು ಹಾಕಿಕೊಂಡಿದ್ದರು ಜೊತೆಗೆ ಇವುಗಳನ್ನು ನೆರೆಯ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಿಗೂ ವಿಸ್ತರಿಸಿದ್ದರು.

1948 ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದೊಂದಿಗೆ ವಿಲೀನಗೊಂಡ ನಂತರ ಸ್ವತಂತ್ರ ಭಾರತದ ನೂತನ ಸರ್ಕಾರದ ಆಳ್ವಿಕೆಯಲ್ಲಿ ಆಂಧ್ರದಲ್ಲಿ ಅಘೋಷಿತವಾಗಿ ಜಾರಿಯಲ್ಲಿದ್ದ ಊಳಿಗಮಾನ್ಯ ಪದ್ಧತಿಯ ವಿರುದ್ಧದ ಹೋರಾಟ ಮುಂದುವರಿಸಬೇಕೆ ಅಥವಾ ಬೇಡವೆ? ಎಂಬ ಚರ್ಚೆ ಮತ್ತು ಜಿಜ್ಞಾಸೆ ಕಮ್ಯೂನಿಷ್ಟ್ ಹೋರಾಟಗಾರರಲ್ಲಿ ಹುಟ್ಟಿಕೊಂಡಿತು. ಮುಂದುವರಿಸುವುದಾದರೆ, ಹೋರಾಟವನ್ನು ಯಾವ ಪಥದಲ್ಲಿ ಕೊಂಡೊಯ್ಯಬೇಕೆಂಬ ಪ್ರಶ್ನೆ ಸಹ ಎದುರಾಯಿತು. ಇಂತಹ ಗೊಂದಲ ಮತ್ತು ಜಿಜ್ಞಾಸೆಗಳು ಹಲವು ವರ್ಷಗಳ ಕಾಲ ಆಂಧ್ರದ ಎಡಪಥೀಯ ಚಿಂತಕರಲ್ಲಿ ಮುಂದುವರಿದವು. ಆದರೆ, ಕೆಲವು ನಾಯಕರಿಗೆ ಯಾವ ಕಾರಣಕ್ಕೂ ಹೋರಾಟವನ್ನು ಸ್ಥಗಿತಗೊಳಿಸುವುದು ಬೇಕಾಗಿರಲಿಲ್ಲ. ಏಕೆಂದರೆ, ತೆಲಂಗಾಣ ಪ್ರಾಂತ್ಯದದಲ್ಲಿ ಬಲಿಷ್ಟರಾಗಿದ್ದ ರೆಡ್ಡಿ ಮತ್ತು ವೆಲಮ ಜನಾಂಗದ ಜಮೀನ್ದಾರರು,  ಶ್ರೀಮಂತರು, ಹಾಗೂ ಹಣದ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಪಟ್ವಾರಿಗಳು, ದಲಿತರು ಮತ್ತು ಆದಿವಾಸಿಗಳನ್ನು ಹಲವು ವರ್ಷಗಳಿಂದ ಇನ್ನಿಲ್ಲದಂತೆ ಶೋಷಿಸಿಕೊಂಡು ಬಂದಿದ್ದರು.

ಆಂಧ್ರದಲ್ಲಿ ಅಂದಿನ ದಿನಗಳಲ್ಲಿ ಬಡವ ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ನಾವು ಪಂಚೆ ಧರಿಸುವ ಹಾಗೆ ಕಚ್ಚೆ ಉಡುವ ಪದ್ಧತಿ ಆಚರಣೆಯಲ್ಲಿತ್ತು. (ಆಂಧ್ರದ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಇದೆ.) ಆದರೆ, ಯಾವೊಬ್ಬ ದಲಿತ ಅಥವಾ ಆದಿವಾಸಿ ಯಾವ ಕಾರಣಕ್ಕೂ ತನ್ನ ಮಂಡಿಯ ಕೆಳಕ್ಕೆ ಬರುವ ಹಾಗೆ ಕಚ್ಚೆ ಉಡಬಾರದು ಎಂಬ ಅಘೋಷಿತ ಕಾನೂನು ಜಾರಿಯಲ್ಲಿತ್ತು. ಅಲ್ಲದೆ, ಹೆಗಲ ಮೇಲೆ ಯಾವುದೇ ವಸ್ತ್ರ ಹಾಕಬಾರದು ಮತ್ತು ಶ್ರೀಮಂತರೆದುರು ತಲೆಗೆ ಮುಂಡಾಸು ಸುತ್ತಬಾರದು ಎಂಬ ನಿಯಮಗಳು ಸಹ ಜಾರಿಯಲ್ಲಿದ್ದವು. ರೆಡ್ಡಿ ಜನಾಂಗದ ಜಮೀನ್ದಾರರು, ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಪಟ್ವಾರಿಗಳು ಮುಂತಾದವರು ಮಾತ್ರ ತಮ್ಮ ಮೊಣಕಾಲುಗಳು ಮುಚ್ಚಿ, ಪಾದ ಮಟ್ಟುವಂತೆ ಕಚ್ಚೆಗಳನ್ನು ಧರಿಸಿ, ಹೆಗಲ ಮೇಲೆ ಶಾಲು, ಅಥವಾ ಶಲ್ಯ ಹಾಕಬಹುದಿತ್ತು. ದಲಿತರ ಮತ್ತು ಆದಿವಾಸಿ ಕುಟುಂಬದ ಹೆಣ್ಣು ಮಕ್ಕಳು, ಅಥವಾ ಪತ್ನಿಯರು ತಮ್ಮ ಗಂಡಂದಿರ ಜೊತೆ ದೊರೆಗಳು ಎಂದು ಕರೆಸಿಕೊಳ್ಳುತ್ತಿದ್ದ ಜಮೀನ್ದಾರರ ಮನೆಗಳಲ್ಲಿ ವಾರ್ಷಿಕವಾಗಿ ನೀಡುತ್ತಿದ್ದ ಒಂದಿಷ್ಟು ಧವಸ, ಧಾನ್ಯ ಮತ್ತು ಬಟ್ಟೆಗಳಿಗಾಗಿ ಜೀತದಾಳುಗಳಾಗಿ ದುಡಿಯಬೇಕಿತ್ತು. ದೊರೆಗಳ ದೃಷ್ಟಿಯಲ್ಲಿ ದಲಿತರು ಮತ್ತು ಆದಿವಾಸಿಗಳು ಭೂಮಿಯ ಹಕ್ಕನ್ನು ಪಡೆಯುವುದು ಅಪರಾಧವಾಗಿತ್ತು. ಇಂತಹ ಹಲವಾರು ಅಮಾನುಷ ಅಲಿಖಿತ ಕಾನೂನುಗಳಿಂದ ನಲುಗಿದ್ದ ಆಂಧ್ರದ ಕೋಯಾ ಮತ್ತು ಗೊಂಡ ಬುಡಕಟ್ಟು ಜನಾಂಗ ಮತ್ತು ಕೃಷಿಕೂಲಿ ಕಾರ್ಮಿಕರಾದ ದಲಿತರು ಕಮ್ಯೂನಿಷ್ಟ್ ಕಾರ್ಯಕರ್ತರ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಇದರ ಪ್ರತಿಫಲವೆಂಬಂತೆ ಪರೋಕ್ಷವಾಗಿ ಅವರಿಗೆ ಜಮೀನ್ದಾರರ ಶೋಷಣೆಗಳು ಕಡಿಮೆಯಾಗತೊಡಗಿದವು. ಆದರೆ, ಆಂಧ್ರ ಸರ್ಕಾರ ಇವರುಗಳ ಹೋರಾಟ ಹತ್ತಿಕ್ಕಲು ಅನೈತಿಕ ಮಾರ್ಗವನ್ನು ಹಿಡಿಯತೊಡಗಿತು.

ತಮ್ಮ ಆತ್ಮ ರಕ್ಷಣೆಗಾಗಿ ಸಂಘಟಿತ ಗೊಂಡಿದ್ದ ರೈತ ಮತ್ತು ಕೂಲಿಕಾರ್ಮಿಕರು ಭೂಮಾಲಿಕರ ವಿರುದ್ಧ ತಮ್ಮ ಸಂಘರ್ಷವನ್ನು ಮುಂದುವರಿಸುವುದರ ಜೊತೆ ಜೊತೆಗೆ ಹೋರಾಟವನ್ನು ಗೋದಾವರಿ ನದಿ ತೀರದ ಎರಡು ಬದಿಯ ಜಿಲ್ಲೆಗಳಿಗೂ ವಿಸ್ತರಿಸಿದರು. ಅತಿ ಶೀಘ್ರದಲ್ಲಿ ಈ ಹೋರಾಟ ಕೃಷ್ಣಾ, ಕರೀಂನಗರ ನಲ್ಗೊಂಡ ಮತ್ತು ಅದಿಲಾಬಾದ್, ಶ್ರೀಕಾಕುಳಂ ಜಿಲ್ಲೆಗಳ ಅರಣ್ಯ ಪ್ರದೇಶಕ್ಕೆ ವಿಸ್ತರಿಸಿತು. ಇದರಿಂದ ಆತಂಕಗೊಂಡ ಸರ್ಕಾರ ಅರಣ್ಯದಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚುವುದರ ಮೂಲಕ ಅವರನ್ನು ಅರಣ್ಯದಿಂದ ಒಕ್ಕಲೆಬ್ಬಿಸಿತು. ಸರ್ಕಾರದ ಈ ಕ್ರಮದಿಂದಾಗಿ ಕೋಯಾ, ಗೊಂಡ ಮತ್ತು ಜಟಾಪು, ಮತ್ತು ಸವರ ಬುಡಕಟ್ಟು ಜನಾಂಗಗಳ ಸುಮಾರು ನಲವತ್ತು ಸಾವಿರ ಆದಿವಾಸಿಗಳು 60 ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ನೆಲೆ ಕಳೆದುಕೊಂಡು ಅತಂತ್ರರಾದರು.

ಇಂತಹ ವೇಳೆಯಲ್ಲಿ ಇವರ ನೆರವಿಗೆ ಬಂದವರು ಇಬ್ಬರು ಶಿಕ್ಷಕರು. ಅವರೆಂದರೆ, ವೆಂಪಟಾಪು ಸತ್ಯನಾರಾಯಣ ಮತ್ತು ಮತ್ತು ಕೈಲಾಸಂ. (ಇವರಿಬ್ಬರನ್ನು ಕುರಿತು, ಮತ್ತು ಹೋರಾಟದ ವಿವರಗಳನ್ನು ನಕ್ಸಲ್ ಕಥನದ ಮೊದಲ ಭಾಗವಾದ ಎಂದೂ ಮುಗಿಯದ ಯುದ್ದ ಸರಣಿಯ ಎಂಟು ಮತ್ತು ಒಂಬತ್ತರ ಅಧ್ಯಾಯಗಳಲ್ಲಿ ಸವಿವರವಾಗಿ ದಾಖಲಿಸಲಾಗಿದೆ. ಗಮನಿಸಿ.)

ಇತ್ತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಯಾವುದೇ ಹಣೆಪಟ್ಟಿಯಿಲ್ಲದೆ ರೈತರ ಮತ್ತು ಕೃಷಿಕೂಲಿ ಕಾರ್ಮಿಕರ ಹೋರಾಟ ಮುಂದುವರಿಯುತ್ತಿದ್ದಾಗ, ಅತ್ತ ಎಡಪಂಥೀಯ ಚಿಂತನೆಗಳ ಕೇಂದ ಬಿಂದುವಾಗಿದ್ದ ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಲಿಂಗ್ ಗುಡ್ಡಗಾಡು ಪ್ರಾಂತ್ಯದ ಚಹಾತೊಟಗಳಲ್ಲಿ ದುಡಿಯುತ್ತಿದ್ದ ಕೂಲಿಕಾರ್ಮಿಕರು ಸಹ ವೇತನ ಹೆಚ್ಚಳಕ್ಕಾಗಿ ಮತ್ತು ಶೋಷಣೆಯಿಲ್ಲದ ನೆಮ್ಮದಿಯ ಬದುಕಿಗೆ ಹೋರಾಟ ನಡೆಸಿದ್ದರು. ಅಲ್ಲಿಯೂ ಕೂಡ ಕಮ್ಯೂನಿಷ್ಟ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಚಾರು ಮುಜಂದಾರ್ ಮತ್ತು ಕನು ಸನ್ಯಾಲ್ ಹಾಗೂ ನಾಗಭೂಷಣ್ ಪಟ್ನಾಯಕ್ ಮುಂತಾದವರು ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

ಕೃಷಿಕರು ಮತ್ತು ಕಾರ್ಮಿಕರ ಅಭ್ಯುದಯವನ್ನು ಮೂಲ ಮಂತ್ರವಾಗಿರಿಸಿಕೊಂಡಿದ್ದ ಕಮ್ಯೂನಿಷ್ಟ್ ಪಕ್ಷದಲ್ಲಿ ಸರ್ಕಾರದ ವಿರುದ್ಧ ಮತ್ತು ದೀನ ದಲಿತರು ಮತ್ತು ಕಾರ್ಮಿಕರನ್ನು ಶೋಷಿಸುತ್ತಿರುವ ಶ್ರೀಮಂತ ವರ್ಗದ ವಿರುದ್ಧ ಹೋರಾಟವನ್ನು ಮುಂದುವರಿಸುವ ಬಗ್ಗೆ ಪಶ್ಚಿಮ ಬಂಗಾಳದಲ್ಲೂ ಕೂಡ ಆಂಧ್ರ ಪ್ರದೇಶದ ಕಮ್ಯೂನಿಷ್ಟ್ ನಾಯಕರಿಗೆ ಇದ್ದ ಹಾಗೆ ಗೊಂದಲಗಳಿದ್ದವು. ಅಂತಿಮವಾಗಿ ಎರಡು ರಾಜ್ಯಗಳ ನಾಯಕರ ನಡುವೆ ಸೌಮ್ಯವಾದಿಗಳು ಮತ್ತು ಉಗ್ರವಾದಿಗಳು ಎಂಬ ಬಣಗಳು ಸೃಷ್ಟಿಯಾದವು. ಇದರ ಪ್ರಯುಕ್ತವಾಗಿ 1964ರಲ್ಲಿ ಕಮ್ಯೂನಿಷ್ಟ್ ಪಕ್ಷ ಅಧಿಕೃತವಾಗಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ, ಮತ್ತು ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ (ಮಾವೋ ಮತ್ತು ಲೆನಿನ್) ಎಂಬ ಎರಡು ಪಕ್ಷಗಳಾಗಿ ವಿಭಜನೆಗೊಂಡಿತು. ಪಶ್ಚಿಮ ಬಂಗಾಳದಲ್ಲಿ ಚಾರು ಮುಜುಂದಾರ್ ಉಗ್ರವಾದಿಗಳ ಬಣದ ನೇತೃತ್ವ ವಹಿಸಿದನು. ಆಂಧ್ರದಲ್ಲಿ ವೆಂಪಟಾಪು ಸತ್ಯನಾರಾಣ ಎಂಬ ಶಿಕ್ಷಕ ಮತ್ತು ಕೈಲಾಸಂ ಇಬ್ಬರೂ ಚಾರು ಮುಜುಂದಾರ್ ನೇತೃತ್ವದ ಸಿ.ಪಿ.ಐ. (ಎಂ.ಎಲ್.) ಬಣದ ಜೊತೆ ಗುರುತಿಸಿಕೊಂಡು ಹೋರಾಟ ಮುಂದುವರಿಸಿದರು.

1967 ರ ಮೇ ತಿಂಗಳ 23 ರಂದು ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಹಳ್ಳಿಯಲ್ಲಿ ಪ್ರಥಮ ಬಾರಿಗೆ ಪೊಲೀಸರು ಮತ್ತು ಕೃಷಿ ಕೂಲಿಕಾರ್ಮಿಕರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿಂದಂತೆ ಒಂಬತ್ತು ಆದಿವಾಸಿಗಳ (ಇವರಲ್ಲಿ ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮತ್ತು ಓರ್ವ ಆದಿವಾಸಿ ಪುರುಷ) ಸಾವಿನೊಂದಿಗೆ ಭಾರತದಲ್ಲಿ ನಕ್ಸಲ್ ಹೋರಾಟದ ರಕ್ತ ಚರಿತ್ರೆಯ ಮೊದಲ ಅಧ್ಯಾಯ ಆರಂಭಗೊಡಿತು. ಇದೇ ವರ್ಷ ಅಂದರೆ, 1967 ರ ಅಕ್ಟೋಬರ್ 31 ರಂದು ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಪಾರ್ವತಿ ಪುರಂ ತಾಲೂಕಿನ ಲೆವಿಡಿ ಎಂಬ ಗ್ರಾಮದಲ್ಲಿ ಜಮೀನ್ದಾರನೊಬ್ಬನ ಮನೆಗೆ ನುಗ್ಗಿದ ಆದಿವಾಸಿಗಳು ಮತ್ತು ಪೊಲೀಸರ ನಡುವೆ ಕಾಳಗ ನಡೆದು ಆಂಧ್ರದ ನೆಲದಲ್ಲಿ ಪ್ರಥಮ ಬಾರಿಗೆ ಇಬ್ಬರು ಆದಿವಾಸಿಗಳ ಹೆಣ ಬೀಳುವುದರೊಂದಿಗೆ ನಕ್ಸಲ್ ಯುದ್ಧದ ಎರಡನೇ ಅಧ್ಯಾಯ ಪ್ರಾರಂಭವಾಯಿತು. (ಈಘಟನೆಗಳ ಕುರಿತು ಈಗಾಗಲೇ ಎಂದೂ ಮುಗಿಯದ ಯುದ್ದ ಮೊದಲ ಭಾಗದಲ್ಲಿ ದಾಖಲಿಸಲಾಗಿದೆ. ಒಂದರಿಂದ ನಾಲ್ಕರ ವರೆಗಿನ ಅಧ್ಯಾಯಗಳನ್ನು ವರ್ತಮಾನ.ಕಾಮ್‌ನ ನಕ್ಸಲ್ ಕಥನದ ಸರಣಿ ಲೇಖನಗಳ ಮಾಲಿಕೆಯಲ್ಲಿ ಆಸಕ್ತರು ಗಮನಿಸಬಹುದು.)

ಈ ಎರಡು ರಾಜ್ಯಗಳಲ್ಲಿನ ಉಗ್ರವಾದಿ ಕಮ್ಯೂನಿಷ್ಟ್ ನಾಯಕರ ಬೆಂಬಲದ ಹೋರಾಟದ ಫಲವಾಗಿ 1970ರ ವೇಳೆಗೆ ಆಂಧ್ರದಲ್ಲಿ ಮುನ್ನೂರಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ 160 ಗುಡ್ಡಗಾಡು ಪ್ರದೇಶದ ಗ್ರಾಮಗಳ ರೈತರು ಆದಿವಾಸಿಗಳು ಮತ್ತು ಕೃಷಿಕೂಲಿ ಕಾರ್ಮಿಕರು ಭೂಮಾಲೀಕರ ಕಪಿಮುಷ್ಟಿಯಿಂದ ಬಿಡುಗಡೆಗೊಂಡಿದ್ದರು. ಇಂತಹ ಗ್ರಾಮಗಳನ್ನು ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸರ್ಕಾರಗಳು ರೆಡ್ ಏರಿಯಾ ಎಂದು ಗುರುತಿಸಿದ್ದವು.

ನಕ್ಸಲ್ ಹೋರಾಟದಿಂದ ವಿಚಲಿತಗೊಂಡ ಆಂಧ್ರ ಪೊಲೀಸರು 1969 ರ ಮೇ 27 ರಂದು ಆಂಧ್ರ ಯುವ ಕ್ರಾಂತಿಕಾರಕ ನಾಯಕರಲ್ಲಿ ಒಬ್ಬನಾಗಿದ್ದ ಪಂಚಡಿ ಕೃಷ್ಣಮೂರ್ತಿಯನ್ನು ಬಂಧಿಸಿ ಎನ್ ಕೌಂಟರ್ ಮೂಲಕ ಹತ್ಯೆಗೈದರು. ಮತ್ತೇ  ಮರುವರ್ಷ 1970ರ ಜುಲೈ 10ರಂದು ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇವರಿಬ್ಬರನ್ನು ಬಂಧಿಸಿ ಶ್ರೀಕಾಕುಳಂ ಜಿಲ್ಲೆಯ ಅರಣ್ಯ ಪ್ರದೇಶದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಗುಂಡಿಟ್ಟು ಕೊಲ್ಲುವುದರ ಮೂಲಕ ನಕ್ಸಲ್ ಚಳವಳಿಗೆ ತಾತ್ಕಾಲಿಕ ವಿರಾಮ ನೀಡಿದರು. ಅತ್ತ ಪಶ್ಚಿಮ ಬಂಗಾಳದಲ್ಲೂ ಕೂಡ ಚಾರು ಮುಜುಂದಾರನನ್ನು 1972 ರ ಜುಲೈ 16ರಂದು ಬಂದಿಸಿದ ಕೊಲ್ಕತ್ತ ನಗರದ ಪೊಲೀಸರು ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹನ್ನೆರೆಡು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಿ ಜುಲೈ 28ರಂದು ಕೊಲ್ಲುವುದರ ಮೂಲಕ ನಕ್ಸಲ್ ಹೋರಾಟಕ್ಕೆ ತೆರೆ ಎಳೆದರು.

ಕಮ್ಯೂನಿಷ್ಟ್ ನಾಯಕರ ಈ ಹತ್ಯೆಯಿಂದಾಗಿ ನಕ್ಸಲ್ ಹೋರಾಟಕ್ಕೆ ಉಂಟಾಗಿದ್ದ ಹಿನ್ನಡೆ ಕೇವಲ ತಾತ್ಕಾಲಿಕವಾಗಿತ್ತು. ಏಕೆಂದರೆ, ಅಷ್ಟರ ವೇಳೆಗಾಗಲೇ ನಕ್ಸಲ್ ಹೋರಾಟಗಾರರು ಹಚ್ಚಿದ್ದ ಕಿಚ್ಚಿನ ಜ್ವಾಲೆಯ ಪಂಜನ್ನು ಆರದಂತೆ ಕಾಪಾಡಲು ಆಂಧ್ರದ ವಾರಂಗಲ್ ಜಿಲ್ಲೆಯಲ್ಲಿ ಇಬ್ಬರು ನಾಯಕರು ಹೊರ ಹೊಮ್ಮಿದ್ದರು. ಅವರೆಂದರೆ, ಪೀಪಲ್ಸ್ ವಾರ್ ಗ್ರೂಪ್ (ಪ್ರಜಾ ಸಮರಂ) ಹೆಸರಿನಲ್ಲಿ ಸಂಘಟನೆಯನ್ನು ಹುಟ್ಟು ಹಾಕಿ ಚಾರು ಮುಜಂದಾರ್ ಹಾದಿಯಲ್ಲಿ ನಕ್ಸಲ್ ಹೋರಾಟವನ್ನು ಮುನ್ನೆಡೆಸಿದ ಕೊಂಡಪಲ್ಲಿ ಸೀತಾರಾಮಯ್ಯ ಎಂಬ ಹಿಂದಿ ಶಿಕ್ಷಕ ಮತ್ತು ಕೆ.ಜಿ.ಸತ್ಯಮೂರ್ತಿ ಎಂಬ ದಲಿತ ಕವಿ ಮತ್ತು ಇಂಗ್ಲೀಷ್ ಶಿಕ್ಷಕ. ಈ ಇಬ್ಬರ ನಾಯಕರ ಹೋರಾಟದ ಫಲವಾಗಿ ನಕ್ಸಲ್ ಸಂಘಟನೆ ಇಂದು ಹಲವು ಶಾಖೆಗಳಾಗಿ ವಿಭಜನೆಗೊಂಡು ದೇಶಾದ್ಯಂತ ನಮ್ಮನ್ನಾಳುವ ಸರ್ಕಾರಗಳಿಗೆ ಮಗ್ಗುಲ ಮುಳ್ಳಾಗಿ ಬೆಳೆದು ನಿಂತಿದೆ.

(ಮುಂದುವರಿಯುವುದು)