Daily Archives: October 15, 2012

ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ

– ಧನಂಜಯ ಕುಂಬ್ಳೆ

“ಈ ಜಗತ್ತು ಹೇಗಿದೆ ಎಂಬುದು ನೋಡುವ ಕಣ್ಣಿನಲ್ಲಿದೆ. ಪರಿಭಾವಿಸುವ ಮನಸ್ಸಿನ ಭಾವದಲ್ಲಿದೆ,” ಎಂಬ ಪ್ರಾಯ್ಡ್‌ನ ಮಾತು ಎಲ್ಲ ಕಾಲಕ್ಕೂ ಸತ್ಯ. ಧನಾತ್ಮಕ ದೃಷ್ಟಿಕೋನದವರಿಗೆ ಈ ಜಗತ್ತು ಭರವಸೆಯ ಬೆಳಕಾಗಿ, ಬದುಕಿಗೆ ಉತ್ಸಾಹ, ಚೈತನ್ಯ ತುಂಬುವ ಶಕ್ತಿಯಾಗಿ ಕಂಡರೆ, ಋಣಾತ್ಮಕ ಮನಸ್ಥಿತಿಯವರಿಗೆ ಬಿತ್ತಿದ ಬೀಜ ಚಿಗುರೊಡೆದು ಬರುವಲ್ಲೂ ಹಿಂಸೆಯೇ ಎದ್ದು ತೋರುತ್ತದೆ. ಇತ್ತೀಚೆಗೆ ನವೀನ್ ಸೂರಿಂಜೆಯವರ “ಆಳ್ವಾಸ್ ನುಡಿಸಿರಿ‌ಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಲೇಖನ ಓದಿದಾಗ ಅನ್ನಿಸಿದ್ದಿದು.

ಆಳ್ವರನ್ನು, ನುಡಿಸಿರಿಯನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಈ ಲೇಖನ ಎಷ್ಟು ಋಣಾತ್ಮಕವಾದುದು, ಪೂರ್ವಾಗ್ರಹ ಪೀಡಿತವಾದುದು ಎನ್ನುವುದು ಗೊತ್ತು. ಆದರೆ ದೂರದ ಓದುಗರು ಈ ಲೇಖನದಿಂದ ತಪ್ಪು ಅಭಿಪ್ರಾಯಕ್ಕೆ ಬರಬಾರದೆಂಬ ಕಾಳಜಿಯಿಂದ ಸತ್ಯವನ್ನು ಬಿಚ್ಚಿಡುವ ಉದ್ದೇಶದಿಂದ ಈ ಬರಹ. ಕಳೆದ ಹತ್ತು ವರ್ಷಗಳಿಂದ ಆಳ್ವರನ್ನು ನಿಕಟವಾಗಿ ಬಲ್ಲ ಓರ್ವ ಸಹೃದಯಿಯಾಗಿ ನನ್ನ ಈ ಪ್ರತಿಕ್ರಿಯೆ.

ಕೆರೆಯ ನೀರನು ಕೆರೆಗೆ ಚೆಲ್ಲಿ:
ಡಾ. ಮಿಜಾರುಗುತ್ತು ಮೋಹನ ಆಳ್ವರು ಎಳವೆಯಿಂದಲೇ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡಾಸಕ್ತರು. ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡು ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದವರು, ಬಹುಮಾನಗಳನ್ನು ಬಾಚಿಕೊಂಡವರು. ಕಾರ್ಕಳದ ಭುವನೇಂದ್ರ ಕಾಲೇಜು ಮತ್ತು ಉಡುಪಿಯ ಎಂಜಿಎಂ ಕಾಲೇಜುಗಳ ಹಳೇ ವಾರ್ಷಿಕಾಂಕಗಳನ್ನು ಹುಡುಕಿದರೆ, ಈ ಪರಿಸರದ ಗುರುಗಳನ್ನು, ಕಲಾಸಕ್ತರನ್ನು ಮಾತನಾಡಿಸಿದರೆ ಇದಕ್ಕೆ ಬೇಕಾದಷ್ಟು ಸಾಕ್ಷ್ಯಗಳು ದೊರಕುತ್ತವೆ. ಸುಮಾರು ಮೂರು ದಶಕಗಳ ಹಿಂದೆಯೇ ಮೂಡುಬಿದಿರೆಯಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ತಾನು ವೈದ್ಯ ವೃತ್ತಿಯನ್ನು ಮಾಡುತ್ತಿರುವಾಗಲೇ ಏಕಲವ್ಯ ಕ್ರೀಡಾ ಸಂಸ್ಥೆಯನ್ನು ಆರಂಭಿಸಿದ, ವಿರಾಸತ್ ಕಾರ್ಯಕ್ರಮವನ್ನು ಸಂಘಟಿಸಿದ, ರಂಗಭೂಮಿಗೆ ಸಂಬಂಧಿಸಿದ ರಂಗಸಂಗಮ ಎಂಬ ಸಂಘಟನೆಯನ್ನು ಕಟ್ಟಿ ಬೆಳೆಸಿದವರು. ಇವರ ಸಾಂಸ್ಕೃತಿಕ ಆಸಕ್ತಿ “ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ” ಆರಂಭಿಸಿದ ಬಳಿಕ ಹುಟ್ಟಿದ್ದಲ್ಲ. ಸಂಸ್ಥೆ ಆರಂಭಗೊಂಡ ಬಳಿಕ ಅದನ್ನು ಹೆಚ್ಚು ಅಚ್ಚುಕಟ್ಟಾಗಿ, ಬೃಹತ್ ರೂಪದಲ್ಲಿ ನಡೆಸುತ್ತಿದ್ದಾರೆ ಅಷ್ಟೇ.

ವಿದ್ಯಾರ್ಥಿಗಳ ಡೊನೇಶನ್ ಹಣದಿಂದ ನುಡಿಸಿರಿ ವಿರಾಸತ್‌ನಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂಬುದು ನವೀನರ ಆರೋಪ. ಇದು ಸತ್ಯ. ’ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಧೋರಣೆ ಆಳ್ವರದ್ದು. ಆದರೆ ಅದಕ್ಕಾಗಿ ಎಂದೂ ಸುಲಿಗೆ ಮಾಡಿದವರಲ್ಲ. ಸಂಪೂರ್ಣ ಖಾಸಗಿಯಾಗಿರುವ ಸಂಸ್ಥೆಯೊಂದು ಮುನ್ನಡೆಯಬೇಕಾದರೆ ವಿದ್ಯಾರ್ಥಿಗಳಿಂದ ಸಂಗ್ರಹ ಅನಿವಾರ್ಯ. ಆದರೆ ಯಾವತ್ತೂ ದುಡ್ಡು ದೋಚಿದವರಲ್ಲ. ಸುತ್ತಮುತ್ತಲಿನ ಕಾಲೇಜುಗಳ ಫೀಸಿಗಿಂತ ಆಳ್ವಾಸ್ ದುಬಾರಿಯಲ್ಲ ಎಂಬುದು ಲೋಕಕ್ಕೇ ಗೊತ್ತಿರುವ ಸತ್ಯ. ಸಮಾಜದಿಂದ ಬಂದದ್ದನ್ನು ಸಮಾಜಕ್ಕೆ ನೀಡುವ, ಸದ್ಭಳಕೆ ಮಾಡುವ ಆಳ್ವರು ನಾಡು ನುಡಿ, ಸಂಸ್ಕೃತಿಯ ಪರಿಚಾರಿಕೆಯಲ್ಲಿ ತೊಡಗಿದ್ದಾರಲ್ಲ ಎಂದು ಸಂಭ್ರಮಿಸುವ ಬದಲು ನವೀನರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಿದ್ದಾರೆ. ಲಕ್ಷಗಟ್ಟಲೆ ಡೊನೇಶನ್ ಪಡೆದು ಅದನ್ನು ಯಾವ ಸಮಾಜಮುಖೀ ಕಾರ್ಯಕ್ಕೂ ಬಳಸದ ಹಲವು ಸಂಸ್ಥೆಗಳ ನಡುವೆ ಆಳ್ವರು ಅನನ್ಯರೂ, ಮಾದರಿಯೂ ಆಗಿದ್ದಾರೆ ಎಂದು ನವೀನರಿಗೆ ಯಾಕೆ ಅನಿಸುವುದಿಲ್ಲ?

ಕೊರಗರೊಂದಿಗೆ ಕುಣಿದ ಆಳ್ವ:
ನುಡಿಸಿರಿಗೆ ಬಂದು ಕಾರ್ಯಕ್ರಮ ನೀಡಿದ ಬಳಿಕ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದ ಭಾವಚಿತ್ರವನ್ನು ತೆಗೆದು ಕೊರಗರಿಗೆ ಅವಮಾನ ಎಂದು ಬಿಂಬಿಸುವ ಪ್ರಯತ್ನ ನವೀನರದ್ದು. ನುಡಿಸಿರಿಯ ವೇದಿಕೆಯಲ್ಲಿ ಕೊರಗರ ಡೋಲು ಕುಣಿತಕ್ಕೆ ಅವಕಾಶ ನೀಡಿದ್ದು ಮಾತ್ರವಲ್ಲ ತಾನೂ ಕೂಡ ಅವರೊಂದಿಗೆ ಡೋಲು ಬಾರಿಸಿ ಕುಣಿದವರು ಆಳ್ವರು.

ಅನಂತರ ದೀಪಾವಳಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಕೊರಗರ ಕಲಾ ತಂಡಗಳಿಗೆ ಅವಕಾಶ ನೀಡಿದ್ದಾರೆ. ಇಷ್ಟು ಮಾತ್ರವಲ್ಲ ಕೊರಗ ಜನಾಂಗದಲ್ಲಿನ ಅನಕ್ಷರತೆಯನ್ನು ಹೋಗಲಾಡಿಸುವ ಸದುದ್ದೇಶದಿಂದ ಕೊರಗ ವಿದ್ಯಾರ್ಥಿಗಳಿಗೆ ವಿಶೇಷ ದತ್ತು ಸ್ವೀಕಾರ ಯೋಜನೆಯನ್ನು ಆರಂಭಿಸಿ ಯಾವುದೇ ಶುಲ್ಕವಿಲ್ಲದೇ ಊಟ, ವಸತಿ ಸಹಿತ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ. ಪ್ರಸ್ತುತ 78 ವಿದ್ಯಾರ್ಥಿಗಳು ಈ ಉಚಿತ ಶಿಕ್ಷಣ ಯೋಜನೆಯಡಿ ಕಲಿಯುತ್ತಿದ್ದಾರೆ. ಇವಲ್ಲದೇ ದಲಿತ ಸಮುದಾಯದ ಜೇನು ಕುರುಬ, ಮಲೆ ಕುಡಿಯ, ಸಿದ್ದಿ ಜನಾಂಗದ ವಿದ್ಯಾರ್ಥಿಗಳನ್ನೂ ದತ್ತು ಸ್ವೀಕಾರ ಮಾಡಿ ಮಕ್ಕಳಂತೆ ನೋಡುತ್ತಿರುವ ಆಳ್ವರು ಕೊರಗರಿಗೆ ಅವಮಾನ ಮಾಡಿದ್ದಾರೆ ಎಂದು ದೂಷಿಸುವ ಮನಸ್ಸಾದರೂ ನವೀನರಿಗೆ ಹೇಗೆ ಬಂತು?

ಡೊನೇಶನ್ ಹಣ ಡೊನೇಶನ್ ಹಣ ಎಂದು ಮಾತು ಮಾತಿಗೆ ಹೇಳುವ ನವೀನ ಸೂರಿಂಜೆಯವರು ಶೈಕ್ಷಣಿಕ, ಕ್ರೀಡಾ, ವಿಕಲಚೇತನ, ಸಾಂಸ್ಕೃತಿಕ, ಆರ್ಥಿಕ ದುರ್ಬಲ ವರ್ಗದವರಿಗೆ ಆಳ್ವರು ಉಚಿತ ಶಿಕ್ಷಣ ನೀಡುತ್ತಿರುವುದನ್ನು ಗಮನಿಸಬೇಕು. ಪ್ರಸ್ತುತ 2000ಕ್ಕೂ ಅಧಿಕ ವಿದ್ಯಾರ್ಥಿಗಳು, ಈವರೆಗೆ 15,000 ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಫಲಾನುಭವಿಗಳಿದ್ದಾರೆ. ಮಾತ್ರವಲ್ಲ ಅವರು ಬುದ್ಧಿಮಾಂದ್ಯ ಮಕ್ಕಳಿಗಾಗಿಯೇ ಆರಂಭಿಸಿದ ವಿಶೇಷ ಶಾಲೆ, ವಾರದಲ್ಲಿ ಒಂದು ದಿನ ಎಚ್‌ಐವಿ ಪೀಡಿತರಿಗೆ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯಂತಹ ಕಾರ್ಯಕ್ರಮಗಳು, ನಿರಂತರ ನಾಡಿನ ಮೂಲೆಮೂಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ದೇಶದ ಖ್ಯಾತನಾಮರಿಂದ ತಿಂಗಳು ಗಟ್ಟಲೆ ಒದಗಿಸುವ ತರಬೇತಿ, ಸಾವಿರಾರು ಜನರಿಗೆ ಉದ್ಯೋಗ, ಇಂತಹ ಕಾರ್ಯಗಳು ನವೀನ್‍ರಿಗೆ ಕಾಣಿಸುವುದಿಲ್ಲವೇ?

ಇಫ್ತಾರ್ ಕೂಟದಲ್ಲಿ ಆಳ್ವರು:
ಸಮಾಜೋತ್ಸವದ ವೇದಿಕೆಯಲ್ಲಿ ಕಾಣಿಸಿಕೊಂಡದ್ದೇ ಅಪರಾಧ ಎಂಬಂತೆ ಬಿಂಬಿಸುವ ಪ್ರಯತ್ನ ನವೀನರದ್ದು. ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷರಾಗಿ ಅವರು ಕರಾವಳಿಯ ಶಾಂತಿ ಕೆಡಿಸುವ ಉಗ್ರ ಭಾಷಣವನ್ನು ಮಾಡಿಲ್ಲ. ಸಾಮರಸ್ಯ ನಮ್ಮ ನಾಡಿನ ಗುಣ ಎಂಬುದನ್ನು ಸಾರಿದ್ದರು. ಇದೇ ಆಳ್ವರು ಕಳೆದ ಹಲವು ವರ್ಷಗಳಿಂದ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಮುಸಲ್ಮಾನ ಬಂಧುಗಳ ಜತೆಗೆ ಪ್ರಾರ್ಥನೆ ಮಾಡಿ ಇಫ್ತಾರ್ ಕೂಟವನ್ನು ನಡೆಸುತ್ತಿದ್ದಾರೆ.

ಶಿಕ್ಷಕರ ದಿನಾಚರಣೆಯಂದು ಪ್ರತಿವರ್ಷ ಕ್ರೈಸ್ತ ಗುರುಗಳನ್ನು ಸನ್ಮಾನಿಸಿ ಗೌರವಿಸುತ್ತಾರೆ. ಜಾತಿ, ಮತ, ಧರ್ಮ ಯಾವುದೇ ಭೇದಭಾವಗಳಿಲ್ಲದೇ ನೌಕರರನ್ನು ನಿಯಮಿಸಿಕೊಳ್ಳುತ್ತಾರೆ. ಕರಾವಳಿಯ ಎಲ್ಲ ಧರ್ಮಿಯರೂ ಆಳ್ವರನ್ನು ಗೌರವದಿಂದ, ಪ್ರೀತಿಯಿಂದ ತಮ್ಮ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಇದೇ ಕಾರಣಕ್ಕೆ.

ಎಡಪದವು ಪ್ರಕರಣ ಶಿಸ್ತುಕ್ರಮದ್ದು:
ಇನ್ನು ಎಡಪದವು ಪ್ರಕರಣ. ನವೀನರು ಸುಳ್ಳನ್ನೇ ಸುದ್ದಿಯಾಗಿಸಿದ್ದಾರೆ. ಎಡಪದವು ಶಾಲೆ ಸರ್ಕಾರಿ ಶಾಲೆಯಲ್ಲ. ಅದು ಅನುದಾನಿತ ಶಾಲೆ. ಆಳ್ವರು ಅದರ ಗೌರವ ಸಲಹೆಗಾರರಲ್ಲ. ಸಂಚಾಲಕರು. ಎಡಪದವು ಶಾಲೆಯನ್ನು ಆರಂಭಿಸಿದವರೇ ಡಾ.ಮೋಹನ ಆಳ್ವರ ತಂದೆ ಆನಂದ ಆಳ್ವರು. ಕಳೆದ ಕೆಲವು ವರ್ಷಗಳಿಂದ ಮೋಹನ ಆಳ್ವರು ಈ ಶಾಲೆಯ ಸಂಚಾಲಕರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮಾತ್ರವಲ್ಲ ಆಳ್ವರ ಸಂಸ್ಥೆಯ ಮೂಲಕ ದತ್ತು ಸ್ವೀಕಾರ ಮಾಡಿದ ವಿದ್ಯಾರ್ಥಿಗಳೂ ಅಲ್ಲಿ ಕಲಿಯುತ್ತಿದ್ದರು. ಅದಕ್ಕೆಲ್ಲಾ ದಾಖಲೆಗಳಿವೆ. ಕಾಲೇಜಿನ ಅನುಮತಿಯಿಲ್ಲದೇ ಕ್ರೀಡಾಕೂಟಕ್ಕೆ ಹೋಗಿ ಅನುಚಿತ ವರ್ತನೆಗೆ ಸುದ್ದಿಯಾದ್ದಕ್ಕೆ ವಿದ್ಯಾರ್ಥಿಗಳನ್ನು ಶಾಲೆಯವರು ಪ್ರಶ್ನಿಸಿದ್ದು, ಅದಕ್ಕೆ ವಿದ್ಯಾರ್ಥಿಗಳು ತೋರಿದ ಉಢಾಫೆಗೆ ಶಿಸ್ತುಕ್ರಮವನ್ನು ಸಂಚಾಲಕರಾಗಿ ಆಳ್ವರು ನಡೆಸಿದ್ದರು. ತಾನೇ ಸಂಚಾಲಕನಾಗಿರುವ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಆಳ್ವರು ಮಾಡುತ್ತಾರೆಯೇ? ಅಷ್ಟಕ್ಕೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳ ಗೊಂಚಲನ್ನು ತನ್ನದಾಗಿಸಿಕೊಳ್ಳುವ ಆಳ್ವಾಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಕ್ರೀಡಾಕೂಟದಲ್ಲಿ ಪದಕ ಪಡೆಯಲು ಇಂತಹ ಸಣ್ಣತನಗಳ ಅಗತ್ಯವಿದೆಯೇ?

ಆಳ್ವಾಸ್ ಆವರಣದಲ್ಲಿ ದೈವದ ಪ್ರತಿಮೆ ಅನಾವರಣ:
ಇನ್ನು ದೈವಗಳನ್ನು ವೇದಿಕೆಗೆ ತಂದ ಕುರಿತು. ದೈವಗಳಲ್ಲಿ ದಲಿತರ ದೈವ, ಮೇಲ್ವರ್ಗದವರ ದೈವ ಎಂಬ ಭೇದಭಾವವಿಲ್ಲ. ದೈವಗಳಲ್ಲೂ ಸಂಕುಚಿತ ಜಾತಿ ರಾಜಕೀಯವನ್ನು ತರುವುದು ಸಲ್ಲದು.ದೈವಗಳು ಕರಾವಳಿಯ ಜನಮಾನಸದ ಗೌರವ ಭಕ್ತಿಗೆ ಪಾತ್ರವಾದವು. ಸ್ವತ: ಆಳ್ವರೂ ದೈವಾರಾಧನೆಯನ್ನು ಮಾಡುತ್ತಾ ಬಂದ ಹಿರಿಯರ ಕುಟುಂಬದಿಂದ ಬಂದವರೇ. ದೈವಾರಾಧನೆಯಲ್ಲಿರುವ ಕಲಾತ್ಮಕ ಅಂಶವನ್ನು ನಾಡಿಗೆ ಪರಿಚಯಿಸಬೇಕು ಎಂಬ ಸದುದ್ದೇಶದಿಂದ ದೈವಾರಾಧನೆಯನ್ನು ಅವರು ವೇದಿಕೆಗೆ ತಂದಿದ್ದಾರೆ. ಎಲ್ಲೂ ದೈವಗಳಿಗಾಗಲೀ, ದಲಿತರಿಗಾಗಲೀ ಅವಮಾನವಾಗುವಂತೆ ಅವರು ನಡೆದುಕೊಂಡಿಲ್ಲ. ಕರಾವಳಿಯ ಹೆಚ್ಚಿನ ದೈವಾರಾಧನೆಯಲ್ಲಿ ಬಳಸುವ ಎಲ್ಲ ಆಭರಣ ವಿಶೇಷಗಳ ಸಂಗ್ರಹ ಅವರ ಬಳಿ ಇದೆ. ತಮ್ಮ ಕಾಲೇಜಿನ ಆವರಣದಲ್ಲಿ ದೈವದ ಪ್ರತಿಮೆಯನ್ನು ನಿಲ್ಲಿಸಿ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ. ದೈವಗಳು ದಲಿತರಿಗೆ ಎಷ್ಟು ಸೇರಿದ್ದೋ, ಅಷ್ಟೇ ಉಳಿದ ಸಮಾಜದ ಸಮುದಾಯಗಳಿಗೂ ಸೇರಿದ್ದು. ದೈವಾರಾಧನೆ ಒಂದು ಸಮಾಜದ ಆಸ್ತಿ ಎಂಬುದನ್ನು ನಾವು ಮನಗಾಣಬೇಕಿದೆ. ವೇದಿಕೆಗಳಲ್ಲಿ, ಯಕ್ಷಗಾನಗಳಲ್ಲಿ ದೇವಿ, ರಾಮ, ಕೃಷ್ಣ, ಯೇಸು, ಮಹಮ್ಮದ್ ಬರಬಹುದಾದರೆ ಗೌರವಕ್ಕೆ ಧಕ್ಕೆ ಬಾರದಂತೆ ದೈವಾರಾಧನೆಯ ಕಲಾತ್ಮಕತೆಯನ್ನು ಪ್ರದರ್ಶಿಸುವುದು ತಪ್ಪಾದರೂ ಹೇಗಾಗುತ್ತೆ?

ಇದು ಮಾಧ್ಯಮ ಲೋಕಕ್ಕೆ ಅವಮಾನ:
ಆಳ್ವರಿಗೆ ಸಿಗುತ್ತಿರುವ ಪ್ರಚಾರ ನೋಡಿ ಸ್ವತ: ಮಾಧ್ಯಮ ಕ್ಷೇತ್ರದಲ್ಲಿರುವ ನವೀನರಿಗೆ ಸಖತ್ ಹೊಟ್ಟೆನೋವಾದಂತಿದೆ. ಒಳ್ಳೆಯ ಕೆಲಸವನ್ನು ನೋಡಿ ಬೆಂಬಲಿಸುವ ಪ್ರಾಮಾಣಿಕ ಮಾಧ್ಯಮದ ಮಂದಿ ಇನ್ನೂ ಸಾಕಷ್ಟು ಮಂದಿ ಇದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಪ್ಯಾಕೇಜ್‌ಗಳಿಗೆ ಮಾಧ್ಯಮಗಳು ತಮ್ಮನ್ನು ಮಾರಿಕೊಳ್ಳುತ್ತವೆ ಎನ್ನುವುದರ ಮೂಲಕ ನವೀನರು ಇಡೀ ಮಾಧ್ಯಮದವರನ್ನೇ ಅವಮಾನಿಸುತ್ತಿದ್ದಾರೆ. ಹೀಗೆ ಪ್ಯಾಕೇಜ್ ನೀಡಲಾಗಿದೆ ಎಂಬುದಕ್ಕೆ ಅವರಲ್ಲಿ ದಾಖಲೆಗಳೇನಾದರೂ ಇವೆಯಾ?

ಆಳ್ವರು ನಡೆಸುತ್ತಿರುವ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ, ಗುಣಮಟ್ಟದಿಂದ ಕೂಡಿವೆ, ನಾಡಿಗೆ ಮಾದರಿಯಾಗಿದೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದ ಸಾಹಿತಿಗಳು ಚಿಂತಕರು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಮಾಧ್ಯಮಗಳೂ ಅಷ್ಟೇ ಪ್ರೀತಿಯಿಂದ ಪ್ರಚಾರ ಕೊಡುತ್ತಿವೆ. ಇದರ ಪರಿಣಾಮ ಇಂತಹ ಸಾಂಸ್ಕೃತಿಕ ವಾತಾವರಣದಲ್ಲಿ ನಮ್ಮ ಮಕ್ಕಳು ಕಲಿಯಬೇಕೆಂದು ಹಂಬಲಿಸಿ ಹೆತ್ತವರು ಇಲ್ಲಿ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇಲ್ಲಿಗೆ ಬಂದ ಸಾಹಿತಿಗಳೆಲ್ಲ ಸುಳ್ಳು ಸುಳ್ಳೆ ಹೊಗಳಿದ್ದಾರೆ ಎಂಬ ನಿಮ್ಮ ಮಾತು ಈವರೆಗೆ ನುಡಿಸಿರಿಯ ವೇದಿಕೆಯಲ್ಲಿ ಮಾತನಾಡಿದ 800ಕ್ಕೂ ಅಧಿಕ ವಿಮರ್ಶಕರ, ಕವಿಗಳ, ಕಥೆಗಾರರ, ಚಿಂತಕರ, ಕನ್ನಡ ಹಿತಚಿಂತಕರ, ಸಾವಿರಾರು ಮಂದಿ ಕಲಾವಿದರ ನೈತಿಕತೆಯನ್ನೇ ಅವಮಾನಿಸಿದಂತೆ ಎಂಬ ಎಚ್ಚರ ನವೀನರಿಗಿದೆಯೇ?

ಇನ್ನು ನುಡಿಸಿರಿಗೆ ಅನಂತಮೂರ್ತಿಯವರು ಬರಬೇಕೇ ಎಂಬ ಕುರಿತು. ಇಂದು ನುಡಿಸಿರಿ ನಾಡಿನ ಮಹತ್ವದ ಸಮ್ಮೇಳನವಾಗಿದೆ. ಕನ್ನಡ ನಾಡು ನುಡಿಯ ಅಸ್ಮಿತೆಯ ಪ್ರತೀಕ. ಇಲ್ಲಿನ ಮಾತಿಗೆ ಇಡೀ ಕರ್ನಾಟಕ ಕಿವಿಗೊಡುತ್ತದೆ. ನಾಡು ಗಮನಿಸುವಾಗ ನಾವು ಕೊಡುವುದೂ ಅಷ್ಟೇ ಗುಣಮಟ್ಟದ್ದಿರಬೇಕು. ಒಳ್ಳೆಯ ವಿಚಾರಗಳು ಎಲ್ಲ ಕಡೆಯಿಂದ ಹರಿದು ಬರಲಿ ಎಂಬ ಆಶಯವನ್ನಿಟ್ಟುಕೊಂಡು ಪ್ರಜಾಪ್ರಭುತ್ವ ಮಾದರಿಯಲ್ಲಿ ನುಡಿಸಿರಿಯ ಎಲ್ಲ ಆಯ್ಕೆಗಳು ನಡೆದಿವೆ. ನಡೆಯುತ್ತಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಎಲ್ಲ ಸೂಚನೆಗಳೂ, ಆಯ್ಕೆಗಳೂ ನಡೆಯುತ್ತವೆ. ಬರುವ ಸಾಹಿತಿಗಳಿಗೆ ನುಡಿಸಿರಿ ವೇದಿಕೆ. ವಿಚಾರಗಳೂ ಅವರವರದೇ. ಎಲ್ಲ ವಿಚಾರಧಾರೆಗಳಿಗೂ ಸಮಾನ ಗೌರವ. ಈ ಹಿಂದಿನ ಸಮ್ಮೇಳನದ ಅಧ್ಯಕ್ಷರು, ಉದ್ಘಾಟಕರು, ಸನ್ಮಾನಿತರು, ಭಾಗವಹಿಸಿದ ಸಾಹಿತಿಗಳ ವಿವರಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಅಲ್ಲಿ ಎಡ, ಬಲ, ಜಾತಿ, ಮತ, ಪ್ರದೇಶ ಈ ಯಾವ ಪರ ಒಲವೂ ಇಲ್ಲ. ಗುಣಮಟ್ಟ, ಜನಮಾನ್ಯತೆ ಒಂದೇ ಮಾನದಂಡ. ಅನಂತಮೂರ್ತಿಯವರು ದೇಶ ಕಂಡಿರುವ ಅದ್ಭುತ ಚಿಂತಕ. ವಾಗ್ಮಿ. ಅವರ ಚಿಂತನೆಗಳಿಗೆ ನುಡಿಸಿರಿಯ ಅಪಾರ ಸಹೃದಯಿ ಬಳಗ ಕಾದಿದೆ. ಅವರು ಬಂದೇ ಬರುತ್ತಾರೆ ಎಂಬ ವಿಶ್ವಾಸ ಸಾಹಿತ್ಯಾಸಕ್ತರದ್ದು.