ರಾಜ್ಯ ಸರ್ಕಾರಕ್ಕೆ ಮಾರ್ಕಂಡೇಯ ಖಟ್ಜು ಮಂಗಳಾರತಿ


– ಡಾ.ಎನ್.ಜಗದೀಶ್ ಕೊಪ್ಪ


 

ಸರ್ಕಾರಿ ಸವಲತ್ತುಗಳಾದ ಸಾರಿಗೆ ಭತ್ಯೆ ಮತ್ತು ಮನೆ ಭತ್ಯೆ, ಹಾಗೂ ಗೂಟದ ಕಾರಿನಲ್ಲಿ ತಿರುಗುವುದು ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಭಾವಿಸಿರುವ ರಾಜ್ಯ ಬಿ.ಜೆ.ಪಿ. ಸರ್ಕಾರದ ಜನಪ್ರತಿನಿಧಿಗಳು ಮತ್ತು ಸಚಿವರು ಎಂಬ ಆರೋಪ ಹೊತ್ತಿರುವ ಮಹನೀಯರಿಗೆ ಭಾರತೀಯ ಪತ್ರಿಕಾ ಮಂಡಲಿ ಅಧ್ಯಕ್ಷರೂ ಹಾಗೂ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ಮಾರ್ಕಂಡೇಯ ಖಟ್ಜು ಮಂಗಳೂರಿನಲ್ಲಿ ಮಂಗಳಾರತಿ ಎತ್ತುವುದರ ಮೂಲಕ ಮುಖದ ನೀರು ಇಳಿಸಿದ್ದಾರೆ.

ಪತ್ರಕರ್ತ ನವೀನ್ ಸೂರಿಂಜೆಯ ಅಕ್ರಮ ಬಂಧನ ಮತ್ತು ನ್ಯಾಯಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಕೆಂಡಾಮಂಡಲರಾಗಿರುವ ಖಟ್ಜು ಸೋಮವಾರ ಮಂಗಳೂರಿನಲ್ಲಿ ಕರ್ನಾಟಕದಲ್ಲಿ ಈ ರೀತಿ ಪತ್ರಿಕಾ ಸ್ವಾತಂತ್ರ್ಯ ಹರಣವಾದರೆ, ಸಂವಿಧಾನದ ವಿಧಿ 356ನೇ ಪ್ರಕಾರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂತಹ ಎಚ್ಚರಿಕೆಯನ್ನು ಪಡೆದ ಮೊದಲ ರಾಜ್ಯ ಎಂಬ ಕುಖ್ಯಾತಿ ಈಗ ಕರ್ನಾಟಕಕ್ಕೆ ಲಭ್ಯವಾಗಿದೆ.

ತನ್ನ ಆತ್ಮಹತ್ಯೆಯ ಹಾದಿಯಲ್ಲಿ ಬಹುತೇಕ ಗುರಿ ತಲುಪಿರುವ ಬಿ.ಜೆ.ಪಿ. ಸರ್ಕಾರಕ್ಕೆ ಇಂತಹ ರಾಷ್ಟ್ರೀಯ ಮಟ್ಟದ ಅಪಮಾನಗಳು ಮರ್ಮಕ್ಕೆ ತಾಕುವ ಸಂಭವ ತೀರಾ ಕಡಿಮೆ. ಭಂಡತನವನ್ನು ಮೈಗೂಡಿಸಿಕೊಂಡಿರುವ ಇವರು, ಆಡಳಿತ ಯಂತ್ರವನ್ನು ಖದೀಮ ಅಧಿಕಾರಿಗಳು ಮತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ಉರಿಯುವ ಮನೆಯಲ್ಲಿ ಸಿಕ್ಕಿದ್ದನ್ನು ದೋಚಿದರು ಎಂಬಂತೆ ಸರ್ಕಾರಿ ಭೂಮಿಯ ಮೇಲೆ ಕಣ್ಣು ನೆಟ್ಟು ಹಾಡು ಹಗಲೇ ಯಾವುದೇ ನಾಚಿಕೆ, ಆತ್ಮಸಾಕ್ಷಿ ಇಲ್ಲದವರಂತೆ ದೋಚುತ್ತಿರುವಾಗ ಕರ್ನಾಟಕದ ಜನತೆಯ ಸ್ಥಿತಿ ’ಹರ ಕೊಲ್ಲಲ್ ಪರ ಕಾಯ್ವನೆ?’ ಎಂಬಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಇತ್ತೀಚೆಗಿನ ವರ್ತನೆಯನ್ನು ಗಮನಿಸಿದರೆ, ಇವರು ಪೊಲೀಸರ ಕೆಲಸವಿರಲಿ, ಯಾವುದೇ ಶ್ರೀಮಂತರ ಮನೆಯ ಬಾಗಿಲು ಕಾಯುವ ಸೆಕ್ಯೂರಿಟಿ ಹುದ್ದೆಗೂ ನಾಲಾಯಕ್ ಆಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.

ವರ್ಷದ ಹಿಂದೆ ಮನೆಯಲ್ಲಿ ಚಹಾಪುಡಿ ಮತ್ತು ಭಗತ್ ಸಿಂಗನ ಸಾಹಿತ್ಯ ಸಿಕ್ಕಿತು ಎಂಬ ಕಾರಣಕ್ಕಾಗಿ ವಿಠಲ ಮಲೆಕುಡಿಯ ಎಂಬ ಪತ್ರಿಕೋದ್ಯಮದ ಹುಡುಗನನ್ನು ಬಂಧಿಸಿ, ಜೈಲಿಗೆ ತಳ್ಳಿ ಆತನ ಭವಿಷ್ಯವನ್ನು ಹಾಳುಗೆಡವಿದ ಇದೇ ಪೊಲೀಸರು ಈಗ ಯುವ ಪತ್ರಕರ್ತ ನವೀನ್ ಬದುಕಿಗೆ ಮುಳ್ಳಾಗಿದ್ದಾರೆ. ಇವರ ಕುಕೃತ್ಯದ ಬಗ್ಗೆ ಹಿಂದೂ ಪತ್ರಿಕೆಯಲ್ಲಿ ಕಳೆದ ಶನಿವಾರ ಬೆಂಗಳೂರಿನ ಸ್ಥಾನಿಕ ಸಂಪಾದಕಿ ಪಾರ್ವತಿ ಮೆನನ್ ಲೇಖನವೊಂದನ್ನು ಬರೆದರು. ಈ ಲೇಖನ ಹಿಂದೂ ಪತ್ರಿಕೆಯ ರಾಷ್ಟ್ರದ ಎಲ್ಲಾ ಅವೃತ್ತಿಗಳಲ್ಲಿ ಪ್ರಕಟವಾಗಿ ಕರ್ನಾಟಕದ ಪೊಲೀಸರ ಸಣ್ಣತನವನ್ನು ಅನಾವರಣಗೊಳಿಸಿದೆ.

ಮಂಗಳೂರಿನಲ್ಲಿ ಹೋಂಸ್ಟೇ ದಾಳಿ ನಡೆದ ನಂತರ ಮಾಧ್ಯಮಗಳಿಗೆ ದೃಶ್ಯ ಮತ್ತು ವಿವರಗಳನ್ನು ಹಂಚಿಕೊಂಡ ನವೀನ್ ಮಂಗಳೂರಿನಲ್ಲಿ ಇದ್ದರೂ ಕೂಡ ಕಾಣೆಯಾಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನಿಜಕ್ಕೂ ಮಂಗಳೂರಿನಲ್ಲಿ ನವೀನ್ ಕಾಣೆಯಾಗಿದ್ದರೆ, ಈ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಬೇಕಿದೆ:

  • ಒಂದು: ನೀವು ವಿಚಾರಣೆಗೆ ಕರೆದಾಗ ನವೀನ್ ಬಂದು ವಿವರಣೆ ಒದಗಿಸಲಿಲ್ಲವೆ?
  • ಎರಡು: ಹೋಂಸ್ಟೇ ಘಟನೆ ನಡೆದ ನಂತರ ನವೀನ್ ಸೂರಿಂಜೆ ಕೆಲಸ ಮಾಡುತ್ತಿರುವ ಕಸ್ತೂರಿ ಛಾನಲ್ ಗೆ ಸುದ್ಧಿಗಳನ್ನು ಕಳಿಸುತ್ತಾ, ಕೆಲಸ ಮಾಡಲಿಲ್ಲವೆ? ಮಾಡಿಲ್ಲವಾದರೆ, ಆತ ಈ-ಮೈಲ್ ಮೂಲಕ ವಾಹಿನಿಗೆ ಮಂಗಳೂರಿನ ಸುದ್ಧಿ ಕಳಿಸಿದ ಬಗ್ಗೆ ಮಾಹಿತಿ ನೀಡಿದರೆ, ನೀವು ನೇಣು ಹಾಕಿಕೊಳ್ಳಲು, ಇಲ್ಲವೇ ಖಾಕಿ ಬಟ್ಟೆ ಕಳಚಿಟ್ಟು ಮಂಗಳೂರಿನ ಬೀದಿಯಲ್ಲಿ ಕಸ ಗುಡಿಸಲು ಸಿದ್ದರಿದ್ದೀರಾ?
  • ಮೂರು: ಕಳೆದ ನವಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಬೇಟಿ ನೀಡಿದಾಗ ನವೀನ್ ಸೂರಿಂಜೆಗೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲು ಪಾಸ್ ನೀಡಿದವರು ಯಾರು? ಆ ಸಮಯದಲ್ಲಿ ಪೊಲೀಸರು ಏನಾದರೂ ಹೆಂಡ ಕುಡಿದು ಪಾಸ್ ವಿತರಣೆ ಮಾಡಿದ್ದಾರೆಯೆ?

ಈ ಬಗ್ಗೆ ಕರ್ನಾಟಕದ ಜನತೆಗೆ ಪೊಲೀಸರು ಮತ್ತು ಗೃಹ ಇಲಾಖೆಯ ಹೊಣೆ ಹೊತ್ತಿರುವ ಆರ್. ಅಶೋಕ್ ಕೂಡಲೇ ಉತ್ತರಿಸಬೇಕಿದೆ.

ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಪೊಲೀಸರಿಂದ ಹರಣವಾಗುತ್ತಿರುವ ಸಂದರ್ಭದಲ್ಲಿ ದ್ವನಿ ಎತ್ತಬೇಕಾದ ನಮ್ಮ ಮಾಧ್ಯಮಗಳು ಪ್ರಳಯ ಎಂಬ ಪುಕಾರಿನ ಬಗ್ಗೆ ಪುಂಗಿ ಊದುತ್ತಾ ಕುಳಿತಿವೆ. ಪತ್ರಕರ್ತರಂತೂ ತಮಗೆ ಸಂಬಂಧಿಸದ ವಿಷಯವಲ್ಲವೇನೋ ಎಂಬಂತೆ ಪ್ರತಿಯೊಬ್ಬನೂ ತನ್ನ ಕಂಫರ್ಟ್‌-ಜೋನ್ (ಸುರಕ್ಷಿತ ವಲಯ) ನಲ್ಲಿ ಆರಾಮವಾಗಿದ್ದಾನೆ. ಪ್ರಜಾವಾಣಿಯ ಮಿತ್ರ ದಿನೇಶ್ ಅಮ್ಮಿನ್ ಮಟ್ಟು ಹಾಗೂ ಒಂದಿಬ್ಬರೂ ಹೊರತು ಪಡಿಸಿದರೆ, ಉಳಿದವರು ತಮ್ಮ ಪಂಚೇಂದ್ರಿಯವನ್ನು ಕಳೆದುಕೊಂಡವರಂತೆ ವರ್ತಿಸುತಿದ್ದಾರೆ. ಇನ್ನೂ ಪತ್ರಕರ್ತರ ಸವಲತ್ತುಗಳಿಗಾಗಿ ಸಂಘಗಳು, ವೇದಿಕೆಗಳು, ಪರಿಷತ್ತುಗಳು, ಕೂಟಗಳು, ಕ್ಲಬ್‌ಗಳು ಹೀಗೆ ರಾಜ್ಯಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡು ವಿಜೃಂಭಿಸುತ್ತಿವೆ. ಪಾಪ ಇವುಗಳ ಪದಾಧಿಕಾರಿಗಳು ರಾಜಕಾರಣಿಗಳ ಕಾಲು ಒತ್ತುತ್ತಾ ಅವರ ಪಾದದಡಿ ವಿಶ್ರಮಿಸಿರಬೇಕು.

ಕಳೆದ ವಾರ ಈ ಕುರಿತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೆಳೆಯರಾದ ಗಂಗಾಧರ್ ಮೊದಲಿಯಾರ್ ಜೊತೆ ದೂರವಾಣಿಯಲ್ಲಿ ಚರ್ಚಿಸಿದೆ. ಪಾಪ ಅವರೂ ಮರೆತಿರಬೇಕು. ಈ ಕಾರಣಕ್ಕಾಗಿಯೇ, ಪತ್ರಕರ್ತರ ಸಂಘವನ್ನು “ಕಾರ್ಯ ಮರೆತ ಪತ್ರಕರ್ತರ ಸಂಘ”ವೆಂದು ಲೇವಡಿ ಮಾಡಲಾಗುತ್ತಿದೆ. ಇಲ್ಲಿ ಕಾರ್ಯ ಮರೆತರೆ ಅಂತಹ ದೊಡ್ಡ ಅನಾಹುತವಿಲ್ಲ, ಪತ್ರಕರ್ತರ ಹಕ್ಕನ್ನೇ ಮರೆತರೆ ಹೇಗೆ? ಇದು ಪ್ರತಿಯೊಬ್ಬ ಪತ್ರಕರ್ತ ತನ್ನ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. (ಯಾವುದೇ ಪತ್ರಕರ್ತ ತನ್ನ ಸುದ್ದಿಯ ಮೂಲವನ್ನು ಪೊಲೀಸರಿಗೆ ಅಥವಾ ಸರ್ಕಾರಕ್ಕೆ ನೀಡಲೇಬೇಕೆಂಬ ನಿರ್ಬಂಧ ಇಲ್ಲ.)

ಮಿತ್ರರೇ, ಪೊಲೀಸರ ಈ ವಂಚನೆ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ದೊಡ್ಡದೊಂದು ಆಂದೋಲನ ತುರ್ತಾಗಿ ಕರ್ನಾಟಕದಲ್ಲಿ ನಡೆಯಬೇಕಿದೆ. ಇದಕ್ಕೆ ಮುಂದೆ ಬರುವ ಮಹನೀಯರ ಜೊತೆ ನಾನೂ ಸಹ ಕೈ ಜೋಡಿಸಲು ಸಿದ್ದನಿದ್ದೇನೆ. ಬೆಳಗಾವಿಯ ವಿಶೇಷ ಅಧಿವೇಶನ ಮುಗಿದ ಕೂಡಲೇ ಒಂದು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಿ ನಮ್ಮ ತಾತ್ವಿಕ ಸಿಟ್ಟನ್ನು ಸರ್ಕಾರಕ್ಕೆ ಮುಟ್ಟಿಸಬೇಕಿದೆ. ಆವಾಗ ಮಾತ್ರ ನವೀನ್ ಸೂರಿಂಜೆಯಂತಹವರಿಗೆ ನ್ಯಾಯ ಸಿಗಲು ಸಾಧ್ಯ.

7 thoughts on “ರಾಜ್ಯ ಸರ್ಕಾರಕ್ಕೆ ಮಾರ್ಕಂಡೇಯ ಖಟ್ಜು ಮಂಗಳಾರತಿ

  1. charles bricklayer

    ಈ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಹಾಗು ಶುಭ ಹಾರೈಕೆಗಳು

    Reply
  2. tejashwini

    ಈ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಹಾಗು ಶುಭ ಹಾರೈಕೆಗ
    ಳು

    Reply
  3. anand prasad

    ನವೀನರ ಕಾನೂನುಬಾಹಿರ ಹಾಗೂ ಸಂವಿಧಾನಬಾಹಿರ ಬಂಧನವನ್ನು ವಿರೋಧಿಸದೆ ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ತೆಪ್ಪಗೆ ಇರುವುದು ಏನನ್ನು ಸೂಚಿಸುತ್ತದೆ? ಸಿದ್ಧರಾಮಯ್ಯನವರಾದರೂ ಇಂಥ ಬಂಧನವನ್ನು ವಿರೋಧಿಸಿ ಕೇಂದ್ರ ಸರ್ಕಾರದ ಗಮನಕ್ಕೆ ಇದನ್ನು ತಂದು ಕೇಂದ್ರ ಗೃಹ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಎಚ್ಚರಿಕೆ ನೀಡುವಂತೆ ಮಾಡಲು ಸಾಧ್ಯವಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ರಾಜ್ಯ ಸರ್ಕಾರದ ಘೋರ ಹಲ್ಲೆ ನಡೆಸುತ್ತಿರುವಾಗಲೂ ರಾಜ್ಯ ಕಾಂಗ್ರೆಸ್ ಮೌನವಾಗಿ ಕುಳಿತಿದೆ ಎಂದರೆ ಅದು ಹೇಗೆ ಬರುವ ಚುನಾವಣೆಗಳಲ್ಲಿ ಜನರ ಮುಂದೆ ಹೋಗುತ್ತದೆ? ರಾಜಕೀಯವಾಗಿ ಸಿದ್ಧರಾಮಯ್ಯನವರು ತಮ್ಮ ಪ್ರತಿಭಟನೆಯ ಧ್ವನಿಯನ್ನು ಕಳೆದುಕೊಂಡಿರುವುದು ಒಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದ ರಾಜಕಾರಣಿಗೆ ಶೋಭೆ ತರುವಂಥದ್ದಲ್ಲ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷದ ನಡವಳಿಕೆ ಹೀಗಾದರೆ ಜನ ಈ ಪಕ್ಷವನ್ನು ಯಾಕಾಗಿ ಬೆಂಬಲಿಸಬೇಕು? ಇಂಥ ಮೂಲಭೂತ ಚಿಂತನೆಯೂ ಇಲ್ಲದ ರಾಜ್ಯ ಕಾಂಗ್ರೆಸ್ಸಿನ ದಿವಾಳಿತನ ಶೋಚನೀಯ.

    Reply

Leave a Reply

Your email address will not be published. Required fields are marked *