ಮಸಾಲಾ ಸುದ್ದಿಯ ಸರಕಾಗುತ್ತಿರುವ ಯುವಕರು

– ಡಾ.ಎಸ್.ಬಿ.ಜೋಗುರ

ವಿಶ್ವದ ಬೇರೆ ಬೇರೆ ರಾಷ್ಟ್ರಗಳನ್ನು, ಅವುಗಳ ಜನಸಂಖ್ಯಾ ಸಂಯೋಜನೆಯಲ್ಲಿಯ ಯುವಕರ ಪ್ರಮಾಣವನ್ನು ಗಮನಿಸಿ ಮಾತನಾಡುವದಾದರೆ, ಭಾರತ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರುತ್ತದೆ. ಯುವಕರು ಎನ್ನುವದು ಒಂದು ನಿರ್ದಿಷ್ಟವಾದ ಮಯೋಮಾನದ ಗುಂಪಿಗೆ ಸಂಬಂಧಪಡುವ ಹಾಗೆಯೇ ಆ ವಯೋಮಾನವನ್ನು ಮೀರಿಯೂ ಹೊತ್ತಿರುವ ಯುವಮನಸಿನ ಸ್ತರಗಳಿಗೂ ಅನ್ವಯವಾಗುತ್ತದೆ. ಕೆಲಬಾರಿಯಂತೂ ಹರೆಯದ ವಯಸು ಮತ್ತು ಮುದುಕರ ಮನಸು ಮೇಳೈಸಿರುವದೂ ಇರುತ್ತದೆ. youthವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ 15-24 ರ ವಯೋಮಿತಿಯಲ್ಲಿ ಬರುವ ಜನಸಮೂಹವನ್ನು ಯುವಕರೆಂದು ಕರೆಯಲಾಗುವದು. ಈ ವಯೋಮಾನದ ಹಂಗು ಹರಿದು, ಅದರಾಚೆಗೂ ಯುವಕರ ಮನ:ಸ್ಥಿತಿಯನ್ನು ಉಳಿಸಿಕೊಂಡವರಿರಬಹುದು. ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಖುಷವಂತಸಿಂಗ್ ನಮ್ಮವರೇ ಆದ ಮಾಜಿ ಪ್ರಧಾನಿ ದೇವೇಗೌಡ, ಪಾಟೀಲ ಪುಟ್ಟಪ್ಪರಂಥವರನ್ನು ವಯಸ್ಸಾದವರೆಂದು ಸಂಬೋಧಿಸಬಹುದಾದರೂ ಈಗಲೂ ಕ್ರೀಯಾಶೀಲರಾಗಿರುವ ಅವರ ಮನಸಿಗೆ ಆ ಮುಪ್ಪು ಅನ್ವಯಿಸುವದಿಲ್ಲ. ಅವರಿಗೆ ವಯಸ್ಸಾಯಿತು ಎನ್ನುವ ಮಾತು ಅವರ ವಯೋಮಾನದ ಮಿತಿಗೆ ಸಂಬಂಧಿಸಿದ್ದೇ ಹೊರತು ಮನಸ್ಸಿಗಲ್ಲ.

ಭಾರತದಂತಹ ಅಪಾರ ಮಾನವಸಂಪನ್ಮೂಲ ಹೊಂದಿರುವ ನೆಲದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪರಾಧಿ ಕೃತ್ಯಗಳನ್ನು, ಆ ಬಗೆಯ ಅಪವರ್ತನೆಯಲ್ಲಿ ತೊಡಗಿರುವವರ ಹಿನ್ನೆಲೆ, ಮುನ್ನೆಲೆಯನ್ನು ಗಮನಿಸಿದಾಗ ಆತಂಕ ಪಡಬಹುದಾದ ಸತ್ಯವೊಂದು ಎದುರಾಗುತ್ತದೆ. ಇವರೆಲ್ಲರೂ ಬಹುತೇಕವಾಗಿ ಯುವಕರು ಎನ್ನುವದೇ ಒಂದು ಬಹು ದೊಡ್ದ ಬಿಕ್ಕಟ್ಟಾಗಿ ನಮ್ಮನ್ನು ಕಾಡುತ್ತದೆ. ನಮ್ಮ ಯುವಕರು ಹೊರಟಿರುವ ಮಾರ್ಗ, ಇಡುತ್ತಿರುವ ಹೆಜ್ಜೆ ಎರಡೂ ಸರಿಯಾಗಿಲ್ಲ. ದೇಶ ಕಟ್ಟುವ ಕೈಂಕರ್ಯದಲ್ಲಿ ಮುಂದಡಿ ಇಡಬೇಕಾದವರು ದಿನನಿತ್ಯದ ಮಾಧ್ಯಮಗಳ ಮಸಾಲಾ ಸುದ್ಧಿಯ ಸರಕಾಗುತ್ತಿರುವದು ಒಂದು ದೊಡ್ದ ವಿಪರ್ಯಾಸ. youth_criminalsನಿರ್ಮಾಣದಲ್ಲಿ ತೊಡಗಬೇಕಾದ ಅವರ ಮೈ-ಮನ ನಿರ್ನಾಮದೆಡೆಗೆ ವಾಲುತ್ತಿರುವದನ್ನು ನೋಡಿದರೆ, ಯುವಜನಾಂಗದ ಬಗ್ಗೆ ಭರವಸೆ ಇರುವ ಯಾರಿಗಾದರೂ ಬೇಸರವಾಗುತ್ತದೆ. ತೀರಾ ಅಪಾರ ಪ್ರಮಾಣದ ಜನಸಂಖ್ಯೆ ಇರುವ ನಮ್ಮಂಥಾ ರಾಷ್ಟ್ರಗಳಲ್ಲಿ ಈ ಪ್ರಮಾಣದ ಯುವಕರ ಅಪವರ್ತನೆ ಸಾಮಾನ್ಯ ಎಂದು ಉದಾಸೀನ ಮಾಡಿಬಿಡುವಷ್ಟು ಹಗುರವಾದ ವರ್ತನೆಗಳು ಇವಲ್ಲ. ಕೊಲೆ, ದರೋಡೆ, ವಾಹನಕಳ್ಳತನ, ಸಾಮೂಹಿಕ ಅತ್ಯಾಚಾರ ಮುಂತಾದವುಗಳಲ್ಲಿ ಯುವಕರದ್ದೇ ಸಿಂಹಪಾಲು.

ಅತ್ಯಾಚಾರದ ಪ್ರಕರಣ, ಕಾರುಗಳ ಮುಂದಿನ ಎಂಬ್ಲೆಮ್ ಕೀಳುವದು, ಮಹಿಳೆಯರ ಕತ್ತಿನ ಚೈನು ಹರಿಯುವದು, ರಸ್ತೆಯ ಬದಿ ನಿಲ್ಲಿಸಿದ ಕಾರಿನ ಟೈರು ಲಪಟಾಯಿಸುವದು, ಬೈಕುಗಳಿಂದ ಪೆಟ್ರೊಲ್ ಕದಿಯುವದು, ಇಂಥಾ ಹತ್ತಾರು ಬಗೆಯ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುವ ನಮ್ಮ ಯುವಕರು ತಮ್ಮ ಭವಿಷ್ಯದ ಬಗ್ಗೆ ಒಟ್ಟಾರೆ ಯೋಚಿಸದವರು. ಜೀವನ ಮೂರು ತಾಸುಗಳಿಗೆ ಸೀಮಿತವಾಗಿರುವ ಒಂದು ಬಾಲಿವುಡ್ ಸಿನೇಮಾ ಎಂದು ತಿಳಿದ ಬುದ್ಧಿಗೇಡಿ ಯುವಕರ ಹೊಣೆಗೇಡಿತನವೂ ಈ ಬಗೆಯ ಕೃತ್ಯಗಳಿಗೆ ಕಾರಣ. ಯಾರದೋ ಬೈಕಿನ ಅರ್ಧ ಲೀಟರ್ ಪೆಟ್ರೊಲ್ ಕದ್ದು ಚಟ ಮಾಡುವ ಸಂತಾನ ಖಂಡಿತಾ ಆ ದೇಶದ ಪಾಲಿಗೆ ಸೈತಾನ ಇದ್ದಂತೆ. ಇಂಥವರ ಸಂಖ್ಯೆಯೇ ಹೆಚ್ಚಾಗುತ್ತಾ ನಡೆದರೆ ಇವರನ್ನಾಶ್ರಯಿಸಿರುವ ರಾಷ್ಟಕ್ಕೂ ಭವಿಷ್ಯವಿಲ್ಲ. ಕರ್ತೃತ್ವ ಶಕ್ತಿಯನ್ನು ಮೈಗೂಡಿಸಿಕೊಂಡು ಆತ್ಯಂತಿಕವಾದ ಚೈತನ್ಯವಿರುವ ಹಂತದಲ್ಲಿಯೇ ಪಟಿಂಗತನದ ಪರಮಾವಧಿಯ ತುತ್ತ ತುದಿ ಏರಹೊರಟರೆ ಮುಗ್ಗರಿಸಿಬೀಳುವದು ಗ್ಯಾರಂಟಿ.

ಇಂದಿನ ಯುವಕರ ಮುಂದೆ ಸೂಕ್ತವಾದ ಆದರ್ಶಗಳಿಲ್ಲ, ಮಾದರಿಗಳಿಲ್ಲ. youth-arrestedಸರಿ-ತಪ್ಪುಗಳನ್ನು ನೆತ್ತಿಗೆ ಕುಕ್ಕಿ ಹೇಳಿ ಕೊಡುವವರಿಲ್ಲ. ಹೇಳಿದರೂ ಕೇಳುವ ವ್ಯವಧಾನವಿಲ್ಲ. ತಾನು ಮಾಡಿದ್ದೆಲ್ಲಾ ಸರಿ ಎನ್ನುವ ಭಂಡತನ ಇವರಲ್ಲಿ ಮೈಗೂಡಿಕೊಳ್ಳುತ್ತಿದೆ. ಹಿರಿಯರ ಬಗೆಗಿನ, ಹೆತ್ತವರ ಬಗೆಗಿನ ಗೌರವ, ನೆರೆಹೊರೆಯವರೊಂದಿಗಿನ ಪ್ರೀತಿ, ವಿನಯ ಎಲ್ಲವೂ ಮಾಯವಾಗುತ್ತಿವೆ. ಪಾಲಕರ ಮೊದ್ದುತನದಲ್ಲಿಯೇ ಇವರು ಮೊಂಡಾಗುತ್ತಿದ್ದಾರೆ. ಕಿವಿ ಹಿಂಡಿ ಹೇಳುವ ಪಾಲಕರಾಗಲೀ, ಶಿಕ್ಷಕರಾಗಲೀ, ನೆರೆಹೊರೆಯಾಗಲೀ ಈಗಿಲ್ಲ. ಎಲ್ಲರೂ ಅವರವರದೇ ಆದ ಜಗತ್ತಿನಲ್ಲಿ ಬ್ಯುಜಿ. ಯಾರಿಗೂ ಪುರಸೊತ್ತಿಲ್ಲ. ಪರಿಣಾಮ ಈ ಯುವಕರು ಆಡಿದ್ದೇ ಆಟ ನೋಡಿದ್ದೇ ನೋಟ ಎನ್ನುವಂತಾಗಿದೆ. ಯುವಶಕ್ತಿ ಒಂದು ಬಲಾಡ್ಯ ಫ಼ೋರ್ಸ್ ಇದ್ದಂತೆ. ಹೇಗೆ ಒತ್ತರಿಸಿ ಹರಿಯುವ ನೀರಿಗೆ ಆಣೆಕಟ್ಟನ್ನು ಕಟ್ಟಿ ರಚನಾತ್ಮಕವಾಗಿ ಬಳಸಿಕೊಳ್ಳಲಾಗುತ್ತದೆಯೋ, ಹಾಗೆಯೇ ಯುವಕರ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ. ಆ ಯುವಕರೇ ಹಾಗೆ, ಆ ವಯಸ್ಸೇ ಅಂಥದು ಎನ್ನುವ ಸಿನಿಕತನದ ಮಾತುಗಳ ಬದಲಾಗಿ ಅವರನ್ನು ಒಂದು ಅದಮ್ಯ ಶಕ್ತಿಯಾಗಿ, ಸಂಪನ್ಮೂಲವಾಗಿ ರೂಪಿಸುವತ್ತ ನಾವು ನೀವೆಲ್ಲಾ ಯತ್ನಿಸಬೇಕಿದೆ. ಇಲ್ಲದಿದ್ದರೆ ಒಂದು ದೊಡ್ಡ ತಲೆಮಾರು ನಿರರ್ಥಕವಾದ, ಅಪಾಯಕಾರಿಯಾದ ಮಾರ್ಗದಲ್ಲಿ ಸಾಗಬಹುದಾದ ಸೂಚನೆಗಳಿವೆ.

Leave a Reply

Your email address will not be published. Required fields are marked *