Monthly Archives: September 2012

ಬಾಲಸುಬ್ರಹ್ಮಣ್ಯಂರವರೇ, ಲಂಚ ಕೊಡುವವನದೇ ತಪ್ಪು ಯಾಕೆ?

– ರವಿ ಕೃಷ್ಣಾರೆಡ್ಡಿ

ಪ್ರಜಾವಾಣಿಯಲ್ಲಿ ಪ್ರಕಟವಾಗುವ “ಹೊಸ ಕನಸು”ವಿನ ಈ ವಾರದ ಅಂಕಣದಲ್ಲಿ ಡಾ.ಆರ್.ಬಾಲಸುಬ್ರಹ್ಮಣ್ಯಂರವರು ಒಂದು ಮಾತು ಹೇಳುತ್ತಾರೆ: “ಭ್ರಷ್ಟಾಚಾರ ಸರ್ವವ್ಯಾಪಿ ಆಗಿರುವುದರಿಂದ ನಮ್ಮ ಹೋರಾಟ ಏನಿದ್ದರೂ ಲಂಚ ಕೊಡುವವರತ್ತ ಮತ್ತು ಕೊಡುವ ಮನಸ್ಸು ಹೊಂದಿ ವ್ಯವಸ್ಥೆಯನ್ನು ಹಾಳುಗೆಡವುತ್ತಾ ಇರುವವರತ್ತ ಕೇಂದ್ರೀಕೃತವಾಗಬೇಕು. ನಾವು ಪ್ರತಿಯೊಬ್ಬರೂ ಪ್ರಾಮಾಣಿಕರಾಗಿದ್ದು ಯಾರೊಬ್ಬರಿಗೂ ಲಂಚ ಕೊಡುವುದಿಲ್ಲ ಎಂದು ಸ್ವಯಂ ಶಪಥ ಮಾಡಿಕೊಂಡರೆ ಆಗ ಸಹಜವಾಗಿಯೇ ಲಂಚ ಪಡೆಯುವವರೂ ಇರುವುದಿಲ್ಲ.” ಈ ಮಾತುಗಳನ್ನು ಅವರು ವಿದ್ಯಾವಂತರಾದ ಮತ್ತು ಬಡವರಲ್ಲದ ವರ್ಗಕ್ಕೆ ಹೇಳಿದ್ದರೆ, ಒಪ್ಪಬಹುದು. ಆದರೆ, ಇದನ್ನು ಅವರು ಹೇಳಿರುವುದು ಎಲ್ಲರನ್ನೂ ದೃಷ್ಟಿಯಲ್ಲಿಟ್ಟುಕೊಂಡು. ಆ ಹಿನ್ನೆಲೆಯಲ್ಲಿ ನೋಡಿದರೆ ಇದು ಕೇವಲ ಬಾಲಿಶ ಮತ್ತು ಅಪ್ರಬುದ್ಧ ನಿಲುವು ಮಾತ್ರವಲ್ಲ, ಭ್ರಷ್ಟರನ್ನು ರಕ್ಷಿಸುವ ಬೇಜವಾಬ್ದಾರಿ ಹೇಳಿಕೆಯೂ ಹೌದು. ಇಂದಿನ ಸಂದರ್ಭದಲ್ಲಿ ನೈತಿಕ ಮೌಲ್ಯಗಳು ನಾಶವಾಗುತ್ತಿವೆ ಮತ್ತು ಜನ ಕೆಡುತ್ತಿದ್ದಾರೆ ಎನ್ನುವುದು ವಾಸ್ತವವೆ. ಆದರೆ ಲಂಚ ಕೊಡುವವರು ಇಲ್ಲದಿದ್ದರೆ ತೆಗೆದುಕೊಳ್ಳುವವರು ಎಲ್ಲಿರುತ್ತಾರೆ ಎಂದು ಪ್ರಶ್ನೆ ಹಾಕುವ ಜನಕ್ಕೆ ನಮ್ಮ ಇಂದಿನ ಸಮಾಜದ ಸಂರಚನೆಯಾಗಲಿ ಮತ್ತು ಇಲ್ಲಿ ವ್ಯವಸ್ಥೆಯೇ ಹೇಗೆ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದೆ ಎನ್ನುವ ವಾಸ್ತವವಾಗಲಿ ಗೊತ್ತಿಲ್ಲ ಎಂದು ಹೇಳಬೇಕು. ಇಷ್ಟಕ್ಕೂ, ನ್ಯಾಯವಾಗಿ, ಕಾನೂನುಬದ್ಧವಾಗಿ ಆಗಲೇಬೇಕಾದ ಸರ್ಕಾರಿ ಕೆಲಸಕ್ಕೆ ಒಳ್ಳೆಯ ಜನ ಲಂಚ ಕೊಡುವ ಸ್ಥಿತಿಗಾದರೂ ಹೇಗೆ ಮುಟ್ಟುತ್ತಾರೆ? ಮತ್ತು ಭ್ರಷ್ಟ ಮೌಲ್ಯಗಳ ಜನ ಲಂಚ ಕೊಟ್ಟಾಕ್ಷಣ ಅವರ ಅಕ್ರಮಗಳು ಸಕ್ರಮವಾಗುತ್ತಾದರೂ ಹೇಗೆ?

ಇಂದು ಒಬ್ಬ ಮನುಷ್ಯ, ಅದರಲ್ಲೂ ಬಡವ ಮತ್ತು ಮಧ್ಯಮವರ್ಗದ ನಡುವೆ ಬರುವವನು ಒಂದು ಮೋಟಾರ್ ಸೈಕಲ್ ಓಡಿಸಲು ಸರ್ಕಾರದಿಂದ ಚಾಲನಾ ಪರವಾನಗಿ ಪತ್ರ ಬೇಕೆಂದರೆ ಕನಿಷ್ಟ  ನಾಲ್ಕೈದು ದಿನ ಕೆಲಸ ಬಿಟ್ಟು ಆರ್‍ಟಿಓ ಕಛೇರಿಗೆ ಅಲೆಯಬೇಕು. ಎಲ್‍ಎಲ್ ಮಾಡಿಸಲು, ಆದಾದ ನಂತರ ಡ್ರೈವಿಂಗ್ ಟೆಸ್ಟ್‌ಗೆ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು, ನಂತರ ಗಾಡಿ ಓಡಿಸಿ ತೋರಿಸಲು, ಇತ್ಯಾದಿ. ಡ್ರೈವಿಂಗ್ ಟೆಸ್ಟ್‌ನಲ್ಲಿ ಆತ ಅದೃಷ್ಟವಷಾತ್ ಪಾಸಾದರೆ ಸಾಕಷ್ಟು ಅಂಚೆಚೀಟಿ ಅಂಟಿಸಿರುವ ಸ್ವವಿಳಾಸದ ಅಂಚೆಪತ್ರದಲ್ಲಿ ಡಿಎಲ್ ಮನೆಗೇ ಬರುತ್ತದೆ ಎನ್ನುವ ಖಾತ್ರಿಯಿಲ್ಲ. ಹತ್ತು ದಿನದಲ್ಲಿ ಬರಬೇಕಾಗಿರುವುದು ತಿಂಗಳು ಕಳೆದರೂ ಬರದಿದ್ದಾಗ ಮತ್ತೆ ಒಂದು ದಿನ ಅದನ್ನು ತೆಗೆದುಕೊಂಡು ಬರಲು ವ್ಯಯವಾಗುತ್ತದೆ. ದಿನವೂ ದುಡಿದು ಬದುಕಬೇಕಾದ ಬಡವನಿಗೆ ಮತ್ತು ನಾನಾ ತರಲೆ ತಾಪತ್ರಯಗಳಲ್ಲಿ ಸಿಲುಕಿರುವ ಮಧ್ಯಮವರ್ಗದವನಿಗೆ ಇಷ್ಟೆಲ್ಲ ದಿನಗಳನ್ನು ಒಂದು ಚಾಲನಾ ಪತ್ರ ಪಡೆಯಲು ವ್ಯಯಿಸುವ ಸಮಯವಾದರೂ ಎಲ್ಲಿರುತ್ತದೆ? ಕಾನೂನುಬದ್ಧವಾಗಿ ನಡೆದುಕೊಳ್ಳುವುದು ಯಾಕೆ ಇಷ್ಟು ಕಠಿಣವಾಗಿವೆ?

ಕಾನೂನುಬದ್ಧವಾಗಿ ಡಿಎಲ್ ಪಡೆಯುವ ವಿಷಯ ಮೇಲೆ ಹೇಳಿದಷ್ಟು ಮಾತ್ರವೇ ಅಲ್ಲ. ನೀವು ಆರ್‌ಟಿಓ ಕಚೇರಿಗೆ ನೀವಾಗಿಯೇ ಹೋದಿರಾದರೆ ಮತ್ತು ಇತರೆ ಜನಸಾಮಾನ್ಯರಂತೆ ನೀವೂ ಸಹ ಸಾಮಾನ್ಯರಲ್ಲಿ ಸಾಮಾನ್ಯರಾದರೆ, ಮೇಲೆ ಹೇಳಿದ ಒಂದೊಂದು ದಿನದ ಕೆಲಸ ಒಂದೇ ದಿನದಲ್ಲಿ ಪೂರೈಸುವುದಿಲ್ಲ. ಕಚೇರಿಯಲ್ಲಿ ಯಾರೂ ನಿಮಗೆ ಸರಿಯಾದ ಮಾಹಿತಿ ಕೊಡುವುದಿಲ್ಲ. ನಾಲ್ಕಾರು ಕಡೆ ಹೋಗಿ ಎನ್ನುತ್ತಾರೆ. ಪ್ರತಿ ಹಂತದಲ್ಲೂ ಇನ್ನೊಂದು ದಾಖಲೆ ಅಥವ ಫಾರ್ಮ್ ಬೇಕು ಎನ್ನುತ್ತಾರೆ. ಸೌಜನ್ಯದಿಂದ ಮಾತನಾಡಿಸುವುದಂತೂ ಅಪರೂಪ. ಎಲ್ಲಾ ಇದ್ದರೂ ಏನೋ ಒಂದು ಕೊಕ್ಕೆ. ಯಾಕೆ? ಅನಧಿಕೃತ ಏಜೆಂಟರ ಮೂಲಕ ಬರದ ಯಾವೊಬ್ಬ ಸ್ವತಂತ್ರ ವ್ಯಕ್ತಿಗೂ ಅಲ್ಲಿ ಬೆಲೆ ಇರುವುದಿಲ್ಲ. ಸುಲಭವಾಗಿ ಎಲ್‌ಎಲ್ ಪಾಸಾಗುವುದಿಲ್ಲ.  ಏಜಂಟ್‌ನ ಮೂಲಕ ಹೋಗದವರಲ್ಲಿ ಅಥವ ಮೊದಲೇ ಲಂಚ ಮಾತನಾಡಿಕೊಳ್ಳದವರಲ್ಲಿ ಬಹುಶಃ ಶೇ.5 ರಷ್ಟು  ಜನವೂ ಡ್ರೈವಿಂಗ್ ಟೆಸ್ಟ್ ಪಾಸಾಗುವುದಿಲ್ಲ. ಏಜೆಂಟನಿಗೆ ಅವನ ಫೀಸ್ ಕೊಟ್ಟು ಅವನು ಅದನ್ನು ಕೊಡಬೇಕಾದವರಿಗೆ ಅವರವರ ಲಂಚದ ಪಾಲು ಕೊಟ್ಟರೆ ಎಲ್ಲವೂ ಸರಳ, ಸುಲಲಿತ. ಒಮ್ಮೊಮ್ಮೆ ನೀವು ಹೋಗುವುದೂ ಬೇಕಾಗಿಲ್ಲ. ಕೇಳಿದಷ್ಟು ಫೋಟೋ, ಒಂದೆರಡು ದಾಖಲೆ ಪತ್ರಗಳನ್ನು ಕೊಟ್ಟುಬಿಟ್ಟರೆ, ನೇರವಾಗಿ ಡಿಎಲ್‌ಗೆ ಪೋಟೋ ತೆಗೆಸಲು ಹೋದರೆ ಸಾಕು. ಮಿಕ್ಕ ಎಲ್ಲವೂ ಕಾಟಾಚಾರದ ಪರೀಕ್ಷೆಗಳು.ಈಗ ಹೇಳಿ, ಕಾನೂನು ಪಾಲಿಸುವವನಿಗೆ ಆತ ಪಟ್ಟು ಬಿಡದೆ, ಲಂಚ ಕೊಡದೆ ಕಾನೂನು ಪ್ರಕಾರ ನಡೆಯಲು ಯಾವ ಇನ್ಸೆಂಟಿವ್ ಇದೆ? ಇಲ್ಲಿ ನೀವು ಯಾರನ್ನು ಬದಲಾಯಿಸಬೇಕೆಂದು ಹೇಳುತ್ತಿದ್ದೀರಾ? ಲಕ್ಷಾಂತರ ಸಂಖ್ಯೆಯಲ್ಲಿರುವ ಜನರನ್ನೇ, ಅಥವ, ಬೆರಳೆಣಿಕೆಯಷ್ಟಿರುವ ಆರ್‍ಟಿಓ ಸಿಬ್ಬಂದಿಯನ್ನೇ? ತಮ್ಮ ಕಷ್ಟಕೋಟಲೆಗಳ ನಿವಾರಣೆಗಾಗಿ ಜನ ಲಂಚ ಕೊಡಬೇಕಾದ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆಯೇ ಹೊರತು, ಅವರು ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದ ಅಕ್ರಮಗಳನ್ನು ಎಸಗಿಲ್ಲ. ಬಡವನಿಗೆ ಅಂದಿನ ದಿನದ ದುಡಿಮೆಯ ಮತ್ತು ಸಂಸಾರ ನಿರ್ವಹಣೆಯ ಕರ್ತವ್ಯ ಇದೆ. ಆದರೆ ಲಂಚ ತೆಗೆದುಕೊಳ್ಳುವವನಿಗೆ ಅದನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಇರಬೇಕಾಗಿಲ್ಲ. ಮತ್ತು ಅದು ಅವನ ಕರ್ತವ್ಯಕ್ಕೂ ವಿರುದ್ದ. ಈ ವ್ಯವಸ್ಥೆಯನ್ನು ಸರಿಪಡಿಸುತ್ತೀರೋ ಅಥವ ಜನರ ಮನ:ಪರಿವರ್ತನೆಗಾಗಿ ಕಾಯುತ್ತೀರೋ? ಪ್ರಾಮಾಣಿಕನೊಬ್ಬ ತನ್ನ ಸಕ್ರಮ ಕೆಲಸಕ್ಕಾಗಿ ಲಂಚ ಕೊಡಲೇಬೇಕಾದಂತಹ, ಇಲ್ಲದಿದ್ದರೆ ಸಾವುನೋವುನಷ್ಟಕ್ಕೆ ಈಡಾಗಬಹುದಾದಂತಹ ವಿಷಮ ಪರಿಸ್ಥಿತಿ ಬಂದಾಗ, ನೀನು ಲಂಚ ಕೊಟ್ಟಿದ್ದು ತಪ್ಪು ಮತ್ತು ಭ್ರಷ್ಟಾಚಾರ ನಿನ್ನಿಂದಲೇ ಇರುವುದು ಎನ್ನುವುದು ಅಮಾನವೀಯ ಮಾತ್ರವಲ್ಲ, ಅದು ನಾವು ನಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿಗಳಿಂದ ನುಣುಚಿಕೊಂಡು ಬೋಧನೆಯಲ್ಲಿ ತೊಡಗಿದ್ದೇವೆ ಎನ್ನುವುದರ ಸೂಚನೆಯೂ ಹೌದು.

ಮೇಲೆ ಹೇಳಿದ್ದು ನನ್ನದೇ ಅನುಭವದ ಉದಾಹರಣೆ.  ಈ ವರ್ಷ ಮತ್ತು ಕಳೆದ ವರ್ಷ ಲಂಚ ಕೊಡದೆ ಡಿಎಲ್‌ಗಳನ್ನು ‍ಮಾಡಿಸಲು ನಾನು ಏನೆಲ್ಲಾ ಅವತಾರವೆತ್ತಿದೆ, ಎಲ್ಲೆಲ್ಲಿ ಜಗಳವಾಡಿದೆ, ನನ್ನ ಬಾಡಿಲ್ಯಾಂಗ್ವೇಜ್ ಅನ್ನು ಯಾವ ಸಂದರ್ಭದಲ್ಲಿ ಆಕ್ರಮಣಕಾರಿಯಾಗಿ ತೋರಿಸಿದೆ ಮತ್ತು ಯಾವ ಸಂದರ್ಭದಲ್ಲಿ ಸೌಜನ್ಯದಿಂದ ನಡೆದುಕೊಂಡೆ ಎನ್ನುವ ನನ್ನ ಅನುಭದಿಂದ ಹೇಳುತ್ತಿದ್ದೇನೆ. ಪ್ರಭಾವ ಮತ್ತು ವಶೀಲಿಬಾಜಿ ಇಲ್ಲದೆ, ಅಥವ ಲಂಚ ಕೊಡದೆ ಇಲ್ಲಿ ಸರ್ಕಾರಿ ಕೆಲಸಗಳು ಅಸಾಧ್ಯ ಎಂದಾಗಿದೆ. ಲಂಚ ಕೊಡಬಾರದೆನ್ನುವ ನನ್ನ ಆದರ್ಶ ಉಳಿಸಿಕೊಳ್ಳಲು ನನ್ನ ನಾಲ್ಕೈದು ದಿನಗಳ ದುಡಿಮೆಯ ತ್ಯಾಗಕ್ಕೆ, ಒಂದಷ್ಟು ನಿರ್ಲಕ್ಷ್ಯ ಮತ್ತು ಅವಮಾನಗಳಿಗೆ, ಅಪರಿಚಿತರಿಂದಾಗಬಹುದಾದ ನಗೆಪಾಟಲಿಗೆ ನಾನು ಸಿದ್ಧನಾಗಿದ್ದೆ. ಎಷ್ಟು ಜನಕ್ಕೆ ಇದೆಲ್ಲ ಸಾಧ್ಯ? ನನ್ನ ಒಂದೆರಡು ಗಂಟೆಯ ದುಡಿಮೆಯ ಹಣವನ್ನು ಏಜಂಟನೊಬ್ಬನಿಗೆ ಕೊಟ್ಟಿದ್ದರೆ ಈ ಎಲ್ಲಾ ಕೆಟ್ಟ ಅನುಭವಗಳಿಂದ ಬಚಾವಾಗಲು ಸಾಧ್ಯವಿತ್ತು. ಯಾಕಾಗಿ ಈ ಕಷ್ಟ? ಮೌಲ್ಯಗಳನ್ನು ನಂಬಿದ್ದಕ್ಕೆ. ನನ್ನಂತಹವರಿಗೆ ಅಥವ ಡಾ. ಬಾಲಸುಬ್ರಹ್ಮಣ್ಯಂರಂತಹವರಿಗೆ ಇರುವ ನಮ್ಮ ಪ್ರಾಮಾಣಿಕತೆ  ಮತ್ತು ಆದರ್ಶಗಳನ್ನು ಕಾಪಾಡಿಕೊಳ್ಳಬಹುದಾದ ಲಕ್ಷುರಿ ಕುಟುಂಬದ ಒಪ್ಪತ್ತಿನ ಊಟದ ಜವಾಬ್ದಾರಿ ಹೊತ್ತಿರುವ ಮತ್ತು ನಾನಾ ಕೆಲಸಗಳಿಗೆ ಸರ್ಕಾರಿ ಕಛೇರಿ ಮತ್ತು ಆಸ್ಪತ್ರೆಯನ್ನು ಸುತ್ತಬೇಕಾದ ಎಷ್ಟು ಜನರಿಗೆ ಇದೆ?

ಹಾಗಾಗಿಯೇ, ಸಮಾಜದ ಪ್ರತಿಷ್ಟಿತ ಮತ್ತು ಪ್ರಾಮಾಣಿಕ ಜನ, ಜನಸಾಮಾನ್ಯರಲ್ಲಿ ಪ್ರಾಮಾಣಿಕತೆ ಉದ್ದೀಪಿಸುವುದರ ಜೊತೆಗೆ ಅಥವ ಅದಕ್ಕಿಂತ ಮೊದಲು ಅಂತಹ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ವಾತಾವರಣವನ್ನು, ವ್ಯವಸ್ಥೆಯನ್ನು ಸೃಷ್ಟಿಸಬೇಕು. ಅದು ರಕ್ತಕ್ರಾಂತಿಯಿಂದಲೇ ಆಗುವುದಕ್ಕೆ ಮೊದಲು ಎಚ್ಚತ್ತುಕೊಂಡು ಪ್ರಜಾಪ್ರಭುತ್ವವನ್ನು ಮತ್ತದರ ಅಂಗಸಂಸ್ಥೆಗಳನ್ನು ಬಲಪಡಿಸುವ ಮೂಲಕ ಮತ್ತು ಅಲ್ಲಿ ಭ್ರಷ್ಟರಿಗೆ ಆಸ್ಪದವಿಲ್ಲ ಎನ್ನುವ ರೀತಿಯಲ್ಲಿ ಕಟ್ಟಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಂಡು ಅರ್ಹರು ಆಯ್ಕೆಯಾಗುವಂತೆ ಪ್ರಯತ್ನಿಸಬೇಕು. ನಮ್ಮದೇ ಸಂದರ್ಭದಲ್ಲಿ ಹೇಳುವುದಾದರೆ, ಬಾಲಸುಬ್ರಹ್ಮಣ್ಯಂ ಮತ್ತು ಅವರಂತೆ ಯೋಚಿಸುವ ಜನ ಮೊದಲು ಲೋಕಾಯುಕ್ತ ನೇಮಕಕ್ಕೆ ಹೋರಾಡಬೇಕು;  ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಸ್ವಾಯತ್ತವಾಗುವಂತೆ, ಭ್ರಷ್ಟಾಚಾರ ಸಂಬಂಧಿ ಮೊಕದ್ದಮೆಗಳು ತ್ವರಿತ ವಿಲೇವಾರಿಯಾಗುವಂತೆ ಆಗ್ರಹಿಸಬೇಕು. ಭ್ರಷ್ಟ ರಾಜಕಾರಣಿಗಳನ್ನು, ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು, ನೇರಾನೇರ ಹೆಸರಿಸಿ ಅವರನ್ನು ಖಂಡಿಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಅವೈಚಾರಿಕ ಮತ್ತು ಅಪ್ರಬುದ್ಧ ಕಾನೂನುಗಳ ವಿರುದ್ಧ ಚರ್ಚಿಸಬೇಕು. ನಮ್ಮದೇ ಈ ಸರ್ಕಾರ ನಮ್ಮನ್ನು ಭ್ರಷ್ಟರನ್ನಾಗಿಸುವ ಎಲ್ಲಾ ಕ್ರಮಗಳನ್ನು ವಿರೋಧಿಸಬೇಕು.  ಅದು ಬಿಟ್ಟು ಜನ ಬದಲಾಗಬೇಕು, ಗಾಂಧಿ ಹೇಳಿದಂತೆ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದರೆ… ಈ ವಾದ ಇಡೀ ದೇಶದ ಜನರೆಲ್ಲ ವಿದ್ಯಾವಂತರೂ, ಮಧ್ಯಮವರ್ಗಿಗಳೂ, ಜವಾಬ್ದಾರಿಯುತ ಪ್ರಜೆಗಳೂ, ನಿಮ್ಮ ಮಾತುಗಳನ್ನು ಕೇಳಬಲ್ಲವರೂ ಆದಾಗ ಅನ್ವಯಿಸಬಹುದೇನೊ. ಆದರೆ ಗಾಂಧಿ ಗೊತ್ತಿಲ್ಲದ, ಲಂಚ ಕೊಡದಿರುವುದೂ ಒಂದು ಜೀವನಮೌಲ್ಯ ಎಂದು ಪ್ರಾಮಾಣಿಕವಾಗಿ ಗೊತ್ತಿಲ್ಲದ ಕೋಟ್ಯಾಂತರ ಬಡ ದೇಶವಾಸಿಗಳು ಈ ದೇಶದಲ್ಲಿದ್ದಾರೆ. ಅವರಿಗೆ ಉಪದೇಶ ಬೇಕಿಲ್ಲ. ಬೇಕಿರುವುದು ಊಟ, ವಸತಿ, ಕುಟುಂಬ ನಿರ್ವಹಣೆ, ಮೇಲ್ಮುಖ ಚಲನೆಯ ಜೀವನ, ಮತ್ತು ಬದುಕಿನ ಬಗ್ಗೆ ಒಂದು ಆಶಾವಾದ. ಅದನ್ನು ಸಾಧ್ಯವಾಗಿಸದ ವ್ಯವಸ್ಥೆ ಮತ್ತು ಕಾನೂನಿನ ಕೈಗೆ ಸಿಗದ ಭ್ರಷ್ಟರನ್ನಿಟ್ಟುಕೊಂಡು ಮತ್ತು ಅವರೇ ಸಮಾಜದ ಗಣ್ಯರೂ, ಜನರ ಹಣೆಬರಹ ತಿದ್ದುವವರೂ ಆಗಿರುವಾಗ, ನಾವು ಜನಸಾಮಾನ್ಯರ ಪ್ರಾಮಾಣಿಕತೆ ಬಗ್ಗೆ ಮಾತನಾಡಲು–ಅದರಲ್ಲೂ ಮೇಲುಮಧ್ಯಮವರ್ಗದ ಮತ್ತು ಶ್ರೀಮಂತ ಜನ–ಆ ನೈತಿಕ ಹಕ್ಕು ಪಡೆದಿಲ್ಲ.

ಡಾ. ಬಾಲಸುಬ್ರಹ್ಮಣ್ಯಂರವರು ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಕಳೆದ ಮೂರು ದಶಕಗಳಿಂದ ಜನಸೇವೆ ಮಾಡುತ್ತಾ ಬಂದಿದ್ದಾರೆ. ಈಗಲೂ ಆಶಾವಾದಿಯಾಗಿದ್ದಾರೆ. ಸಕ್ರಿಯರಾಗಿದ್ದಾರೆ. ಈಗಾಗಲೆ ಅವರಿಗೆ ಸಮಾಜದಲ್ಲಿ ಹೆಸರಿದೆ, ಗುರುತಿದೆ. ಆದರೆ, ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ, ಅವರಂತೆ ಕೆಲಸ ಮಾಡಲು ಜನರ ಮಧ್ಯೆ ತೊಡಗಿಕೊಳ್ಳುವ ಯುವಕರಿಗೆ ಪೂರಕವಾದಂತಹ ವಾತಾವರಣವೇ ಇಲ್ಲ. ಅವರಂತೆ ಸಮಾಜ ಸೇವೆ ಮಾಡುವುದೂ ಒಂದು ಕಾಯಿಲೆ ಎನ್ನುವ ಹಂತಕ್ಕೆ ಇಂದಿನ ಸಮಾಜ ಬಂದು ನಿಂತಿದೆ. ಇಲ್ಲಿ ಜೀವನಮೌಲ್ಯಗಳೇ ನಾಶವಾಗುತ್ತಿವೆ. ಮತ್ತೊಬ್ಬ ಗಾಂಧಿ ಹೊರಬರಲಾಗದ, ಇನ್ನೊಬ್ಬ ಅಣ್ಣಾ ಹಜಾರೆ, ಇನ್ನೊಬ್ಬ ಬಾಲಸುಬ್ರಹ್ಮಣ್ಯಂ ನಾಲ್ಕು ಜನಕ್ಕೆ ತನ್ನ ಸೇವೆ ಮತ್ತು ಆದರ್ಶಕ್ಕಾಗಿ ಪ್ರಶಂಸನೀಯನಾಗಲಾರದ ವರ್ತಮಾನ ಈ ಸಮಾಜದ್ದು. ಬದಲಾಗಬೇಕಾದದ್ದು ಅದು. ಬದಲಾಯಿಸಬೇಕು ಎಂದುಕೊಳ್ಳುವವರು ಬದಲಾಯಿಸಬೇಕಾದದ್ದು ಬೇಕಾದಷ್ಟಿದೆ ಮತ್ತು ಈಗ ಮಾಡುತ್ತಿರುವುದಕ್ಕಿಂತ ಬೇರೆಯದೇ ಕ್ರಮಗಳಲ್ಲಿ ಮಾಡಬೇಕಿದೆ. ಆದರೆ ಬಾಲಸುಬ್ರಹ್ಮಣ್ಯಂರಂತಹವರು ಈಗೀಗ ಅವಾಸ್ತವಿಕ ನೆಲೆಗಟ್ಟಿನಲ್ಲಿಯೇ ಮಾತನಾಡುತ್ತಿದ್ದಾರೆ ಅಥವ ಮುಖ್ಯವಾದದ್ದನ್ನು ಮರೆಯುತ್ತಿದ್ದಾರೆ. ಪ್ರಶ್ನೆ ಇರುವುದು ಅವರ ಕಳಕಳಿಯ ಮೇಲಲ್ಲ. ಅವರು ಇದೇ ಪರಿಹಾರ ಎಂದು ಹೇಳುತ್ತಿರುವುದರ ಮೇಲೆ.

(ಚಿತ್ರಕೃಪೆ: ಪ್ರಜಾವಾಣಿ)

ವೈಚಾರಿಕ ಪೀಳಿಗೆ ರೂಪಿಸುವುದರಲ್ಲಿ ಮಹಿಳೆಯರ ಪಾತ್ರ

– ಆನಂದ ಪ್ರಸಾದ್

ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಲ್ಲಿ ನಮ್ಮ ಸಮಾಜದ ಅರ್ಧ ಭಾಗದಷ್ಟಿರುವ ಹೆಂಗಸರು ಹಿಂದಿರುವುದು ಕಂಡುಬರುತ್ತದೆ. ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ, ವಾಸ್ತು, ನಿಸರ್ಗಾತೀತ ಶಕ್ತಿಗಳ ಅತಿರಂಜಿತ ಪ್ರಚಾರಕ್ಕೆ ಹೆಂಗಸರೇ ಹೆಚ್ಚಿನ ವೀಕ್ಷಕರಾಗಿರುವುದನ್ನು ನಾವು ಗುರುತಿಸಬಹುದು. ಅದೇ ರೀತಿ ಸಮಕಾಲೀನ ಜಗತ್ತಿನ, ದೇಶದ, ರಾಜ್ಯದ ಆಗುಹೋಗುಗಳ ಬಗ್ಗೆ ಹೆಂಗಸರಲ್ಲಿ ಬಹಳ ಕಡಿಮೆ ಆಸಕ್ತಿ ಇರುವುದು ಕಂಡುಬರುತ್ತದೆ. ಟಿವಿ ವಾಹಿನಿಗಳಲ್ಲಿ ಹೆಂಗಸರು ಹೆಚ್ಚಾಗಿ ವೀಕ್ಷಿಸುವುದು ಧಾರಾವಾಹಿಗಳು ಅಥವಾ ಸಿನೆಮಾಗಳನ್ನು ಮಾತ್ರ.  ಹೀಗಾಗಿ ಹೆಂಗಸರಲ್ಲಿ ಸಮಕಾಲೀನ ದೇಶದ ರಾಜಕೀಯ ಆಗುಹೋಗುಗಳ ಬಗ್ಗೆ ತಿಳುವಳಿಕೆ ಕಡಿಮೆ. ಇಂಥ ಪ್ರವೃತ್ತಿ ಕೂಡ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಮರ್ಪಕವಾಗಿ ಬೆಳೆಯದಿರಲು ಕಾರಣವಾಗಿದೆ. ಹೆಂಗಸರು ಸಮಾರಂಭಗಳಲ್ಲೋ ಅಥವಾ ಇನ್ನೆಲ್ಲೋ ಸೇರಿದರೆ ಚರ್ಚಿಸುವುದು ಉಡುಪು, ಚಿನ್ನ, ಒಡವೆ, ಕಾರು, ಬಂಗಲೆ ಇತ್ಯಾದಿ ವಿಷಯಗಳ ಬಗ್ಗೆಯೇ ಹೊರತು ದೇಶದ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸುವುದು ಕಡಿಮೆ ಅಥವಾ ಇಲ್ಲವೆಂದರೂ ಸರಿಯೇ. ದೇವರು, ಸಂಪ್ರದಾಯ, ಕಂದಾಚಾರಗಳ ಬಗ್ಗೆಯೂ ಹೆಂಗಸರಿಗೆ ಹೆಚ್ಚಿನ ಒಲವು ಇರುವುದು ಕಂಡು ಬರುತ್ತದೆ.

ಹೆಂಗಸರು ಮುಂದಿನ ಪೀಳಿಗೆಯನ್ನು ರೂಪಿಸುವುದರಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಕಾರಣ ಹೆಂಗಸರು ವೈಚಾರಿಕವಾಗಿ ಬೆಳೆಯಬೇಕಾದ ಅಗತ್ಯ ಇದೆ. ಮಕ್ಕಳನ್ನು ಬೆಳೆಸುವುದರಲ್ಲಿ ತಾಯಿಯಾಗಿ ಹೆಂಗಸರ ಪಾತ್ರ ಹಾಗೂ ಪ್ರಭಾವ ಮಕ್ಕಳ ಮೇಲೆ ಹೆಚ್ಚಾಗಿ ಬೀಳುತ್ತದೆ. ಹೀಗಾಗಿ ತಾಯಂದಿರು ವೈಚಾರಿಕವಾಗಿ ಬೆಳೆದರೆ, ವೈಚಾರಿಕ ಮನೋಭಾವ ಹೊಂದಿದ್ದರೆ ಮಕ್ಕಳೂ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಸಂಭವ ಅಧಿಕ. ದುರದೃಷ್ಟವಶಾತ್ ನಮ್ಮ ದೇಶದ ಹೆಂಗಸರು ವೈಚಾರಿಕವಾಗಿ ಹಿಂದೆ ಇರುವ ಕಾರಣ ಗಂಡಸರು ವೈಚಾರಿಕತೆಯಲ್ಲಿ ಮುಂದೆ ಇದ್ದರೂ ತಂದೆಯಾಗಿ ಅವರು ಮಕ್ಕಳ ಮೇಲೆ ವೈಚಾರಿಕ ಪ್ರಭಾವ ಬೀರಲು ಸಾಧ್ಯವಾಗದಿರುವುದು ಕಂಡುಬರುತ್ತದೆ. ಮಕ್ಕಳ ಜೊತೆ ತಾಯಿಯ ಸಂಬಂಧ ಹೆಚ್ಚು ಗಾಢವಾಗಿರುವ ಕಾರಣ ಮಕ್ಕಳು ತಾಯಿಯ ಒಲವು ನಿಲುವುಗಳನ್ನು ದೇವರು, ಸಂಪ್ರದಾಯ, ಕಂದಾಚಾರಗಳ ವಿಚಾರದಲ್ಲಿ ಬೆಳೆಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ನಮ್ಮ ಸಮಾಜದಲ್ಲಿ ವೈಚಾರಿಕತೆ ಬಹಳ ಕೆಳಮಟ್ಟದಲ್ಲಿದೆ. ಶಾಲಾ ಶಿಕ್ಷಣದಲ್ಲೂ ವೈಚಾರಿಕತೆ ಬೆಳೆಸಿಕೊಳ್ಳಲು ನೆರವಾಗಬಲ್ಲ ಪಠೄ ಕಂಡುಬರುವುದಿಲ್ಲ.  ಜನತೆಯಲ್ಲಿ ವೈಚಾರಿಕತೆ ಬೆಳೆಯದೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಬೆಳೆಯಲಾರದು. ವೈಚಾರಿಕತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ನಡುವೆ ಸಂಬಂಧವಿದೆ. ವೈಚಾರಿಕ ಪ್ರಜ್ಞೆ ಉಳ್ಳ ಜನ ಇದ್ದರೆ ಉತ್ತಮ ರಾಜಕೀಯ ವ್ಯವಸ್ಥೆಯನ್ನು ಮತದಾನದ ಮೂಲಕವೇ ರೂಪಿಸಲು ಸಾಧ್ಯ. ವೈಚಾರಿಕ ಪ್ರಜ್ಞೆ ಇಲ್ಲದ ಕಾರಣವೇ ನಮ್ಮ ದೇಶದಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ವ್ಯವಸ್ಥೆಯಲ್ಲಿ ಮಾತ್ರ ಸುಧಾರಣೆ ಆಗುವುದಿಲ್ಲ, ಬದಲಿಗೆ ಅಧಃಪತನವೇ ಕಂಡುಬರುತ್ತಿದೆ. ವೈಚಾರಿಕತೆಯನ್ನು ದೇಶದಲ್ಲಿ ಬೆಳೆಸಲು ಹೆಚ್ಚಿನ ಗಮನ ಕೊಡದಿರುವುದರ ಕಾರಣ ನಾವು ಕಳೆದುಕೊಂಡಿರುವುದು ಪ್ರಜಾಪ್ರಭುತ್ವದ ಅಗಾಧ ಸಾಧ್ಯತೆಗಳನ್ನು. ಎಲ್ಲವನ್ನೂ ಕುರಿಗಳಂತೆ ಒಪ್ಪಿಕೊಳ್ಳುವ, ಪ್ರಶ್ನಿಸುವ ಮನೋಭಾವವಿಲ್ಲದ ಜನಸಮೂಹ ಇದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇನ್ನೂ ಶತಮಾನಗಳೇ ಉರುಳಿದರೂ ನಮ್ಮ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಾರದು.

ಹೀಗಾಗಿ ಒಂದು ಪ್ರಜ್ಞಾವಂತ ಹಾಗೂ ವೈಚಾರಿಕ ಜನಸಮುದಾಯವನ್ನು ರೂಪಿಸಬೇಕಾದರೆ ಹೆಂಗಸರ ಪಾತ್ರ ಮಹತ್ವಪೂರ್ಣವಾದುದು. ಮಹಿಳಾ ಸಂಘಟನೆಗಳು ಮಹಿಳಾ ಸಮೂಹದಲ್ಲಿ ವೈಚಾರಿಕತೆಯನ್ನು ಬೆಳೆಸಲು ಆದ್ಯ ಗಮನ ನೀಡಬೇಕಾದ ಅಗತ್ಯ ಇದೆ. ಹೆಣ್ಣೊಬ್ಬಳು ವೈಚಾರಿಕತೆಯನ್ನು ಬೆಳೆಸಿಕೊಂಡರೆ ಒಂದು ಪೀಳಿಗೆಯೂ ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಬಲ್ಲದು. ಹೆಂಗಸರು ಧಾರಾವಾಹಿಗಳು ಮತ್ತು ಸಿನೆಮಾಗಳಲ್ಲಿ ಮಾತ್ರವೇ ಕಳೆದು ಹೋಗದೆ ಸಮಕಾಲೀನ ವೈಚಾರಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಬಗ್ಗೆಯೂ ಆಸಕ್ತಿ  ಬೆಳೆಸಿಕೊಳ್ಳುತ್ತ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳವಣಿಗೆ ಹೊಂದಲು ಸಹಾಯಕ. ಮಹಿಳೆಯರು ವೈಚಾರಿಕವಾಗಿ ಮುಂದುವರಿದರೆ ನಮ್ಮ ಟಿವಿ ವಾಹಿನಿಗಳ ಕಾರ್ಯಕ್ರಮ ಪ್ರಸಾರದಲ್ಲೂ ಸುಧಾರಣೆಯನ್ನು ನಿರೀಕ್ಷಿಸಬಹುದು. ಮೌಢೄ, ಕಂದಾಚಾರ ಬಿತ್ತುವ ಕಾರ್ಯಕ್ರಮಗಳನ್ನು, ಜ್ಯೋತಿಷ್ಯ, ವಾಸ್ತು, ಪ್ರಳಯದಂಥ ಕಾರ್ಯಕ್ರಮಗಳನ್ನು ಮಹಿಳೆಯರು ವಿರೋಧಿಸಿದರೆ ಹಾಗೂ ನೋಡುವುದನ್ನು ಕಡಿಮೆ ಮಾಡಿದರೆ ಇವುಗಳ ಟಿ.ಆರ್.ಪಿ. ರೇಟಿಂಗ್ ಕುಸಿದು ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ಟಿವಿ ವಾಹಿನಿಗಳು ಕಡಿಮೆ ಮಾಡಬಹುದು. ಮಕ್ಕಳಲ್ಲಿ ವೈಚಾರಿಕತೆಯನ್ನು ಬಿತ್ತಿ ಬೆಳೆಯುವುದರಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ಸದೃಢ ಕರ್ನಾಟಕದ ನಿರ್ಮಾಣವಾಗಬೇಕಾದರೆ ಮುಂದಿನ ಪೀಳಿಗೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ರೂಪಿಸಬೇಕು. ಇದನ್ನು ಎಳೆಯ ವಯಸ್ಸಿನಿಂದಲೇ ರೂಪಿಸಿ ಬೆಳೆಸುವ ಹಾಗೂ ಮಕ್ಕಳ ಬೆಳೆವಣಿಗೆಯ ಹಂತದಲ್ಲಿ ವೈಚಾರಿಕತೆಯನ್ನು ಜಾಗೃತಗೊಳಿಸಿ ಪ್ರಶ್ನಿಸುವ ಮನೋಭಾವವನ್ನು ಪ್ರೋತ್ಸಾಹಿಸುವ ಹಾಗೂ ಪ್ರಭಾವಿಸುವ ಸಾಮರ್ಥ್ಯ ತಾಯಿಯಾಗಿ ಮಹಿಳೆಯರಲ್ಲಿ ನೈಸರ್ಗಿಕವಾಗಿ ಹೆಚ್ಚಾಗಿರುವುದರಿಂದ ವೈಚಾರಿಕ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿಯನ್ನು ಮಹಿಳೆಯರು ವಹಿಸಬೇಕಾಗಿದೆ.

imrana

ಹಂಪಿಯಲ್ಲಿ ಬಂಧಿತನಾದ “ಭಯೋತ್ಪಾದಕ” ಇಮ್ರಾನ್ ಏನಾದ?


– ಪರಶುರಾಮ ಕಲಾಲ್


 

‘ಭಯೋತ್ಪಾದಕ’ ಅಂತಹ ಪೊಲೀಸರು ಸಂದೇಹ ಪಡುವುದಕ್ಕೆ ಅರ್ಹತೆ ಏನು ಅಂದರೆ ನೀವು ಮುಸ್ಲಿಂ ಆಗಿರಬೇಕು ಹಾಗೂ ನಮಾಜು ಮಾಡುವುದಕ್ಕೆ ಮಸೀದಿಗೆ ಹೋಗುತ್ತಿರಬೇಕು. ನಿಮ್ಮನ್ನು ಸಂದೇಹದ ಮೇಲೆ ಬಂಧಿಸಿದರೆ ಉಳಿದಿದ್ದನ್ನು ಪೊಲೀಸರು ಹಾಗೂ ಮಾಧ್ಯಮದವರು ಭಯೋತ್ಪಾದಕ ಸಂಘಟನೆಗಳನ್ನು ತಲೆಗೆ ಕಟ್ಟಿ ವದಂತಿಗಳನ್ನು ಅವರೇ ಹಬ್ಬಿಸುತ್ತಾರೆ. ಬೆಂಗಳೂರಿನ ಅಪರಾಧ ವಿಭಾಗದ ಪೊಲೀಸರ ಕಾರ್ಯಾಚರಣೆ ಹಾಗೂ ಈ ಬಗ್ಗೆ ಪತ್ರಿಕೆಗಳಲ್ಲಿ ಬರುವ ಪುಂಖಾನುಪುಂಖ ಸುದ್ದಿಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇಷ್ಟು.

ಹಾಗಾದರೆ ಈಗ ಬಂಧಿಸಿರುವವರು ಸಾಚಾನಾ, ಅವರು ಭಯೋತ್ಪಾದಕರಲ್ಲವಾ ಎಂದು ಕೇಳಿದರೆ ಅದು ಮುಗ್ಧ ಪ್ರಶ್ನೆಯಾಗುತ್ತದೆ. ತನಿಖೆ ನಡೆಸಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಪೊಲೀಸರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ಮೇಲೆ ನ್ಯಾಯಾಲಯ ಅದನ್ನು ಒಪ್ಪಿಕೊಂಡು ಶಿಕ್ಷೆ ವಿಧಿಸಿದಾಗ ಮಾತ್ರ ಗೊತ್ತಾಗುವ ಸಂಗತಿಯಾಗಿದೆ. ಇಷ್ಟು ಹೇಳುವುದಕ್ಕೆ ಕಾರಣವಿದೆ. 5 ವರ್ಷದ ಹಿಂದೆ ಹಂಪಿಯಲ್ಲಿ ಶಂಕಿತ ಉಗ್ರ ಇಮ್ರಾನ್ ಎಂಬುವವನ ಬಂಧನವನ್ನು ಇದೇ ಸಿಸಿಬಿ ಪೊಲೀಸರು ನಡೆಸಿದರು. ಆಗ ಕೂಡಾ ಮಾಧ್ಯಮಗಳಲ್ಲಿ ಶಂಕಿತ ಉಗ್ರನ ಕುರಿತು ಪುಂಖಾನುಪುಂಖ ವರದಿಗಳು ಬಂದವು.

ಅದರಲ್ಲಿ ಆತ ಲಕ್ಸರಿ ತೋಯಿಬಾ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಆಗಿದ್ದ. ಕರ್ನಾಟಕ ಸೇರಿದಂತೆ ವಿವಿಧ ಕಡೆ ಉಗ್ರರಿಗೆ ತರಬೇತಿ ನೀಡುತ್ತಿದ್ದನು. ಪೊಲೀಸರು ಆತನ ಬಳಿ ಎಕೆ47 ಹಾಗೂ ಇತರ ಮಾರಕಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದಾಗಿ ಇಷ್ಟು ವರ್ಷಗಳ ನಂತರ ಈ ಇಮ್ರಾನ್ ಏನಾದ ಆತನ ಬಗ್ಗೆ ತನಿಖೆ ಎಲ್ಲಿಗೆ ಬಂತು ಅಂತಾ ನಮ್ಮ ಮಾಧ್ಯಮಗಳು ಕೇಳಿಲ್ಲ. ಸಿಸಿಬಿ ಪೊಲೀಸರು ಈ ಬಗ್ಗೆ ಏನೂ ಹೇಳುತ್ತಿಲ್ಲ.

imranaಇಮ್ರಾನ್ ಮೂಲತಃ ಜಮ್ಮು-ಕಾಶ್ಮೀರಕ್ಕೆ ಸೇರಿದ ವ್ಯಕ್ತಿಯಾಗಿದ್ದನು. ಈತ ಹಂಪಿಗೆ ವ್ಯಾಪಾರಿಯಾಗಿ ಬಂದು ಹಂಪಿ ವಿರೂಪಾಕ್ಷ ಬಜಾರ್‌ನಲ್ಲಿ ಒಂದು ಕೊಠಡಿ ಬಾಡಿಗೆ ಹಿಡಿದು ಅಲ್ಲಿ ಮುತ್ತು ರತ್ನ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯೊಂದನ್ನು ತೆರೆದಿದ್ದನು. ಹೊಸಪೇಟೆಯ ರಾಣಿಪೇಟೆಯಲ್ಲಿ ಒಂದು ಗಲ್ಲಿಯಲ್ಲಿ ಮಹಡಿ ಮನೆಯೊಂದನ್ನು ಬಾಡಿಗೆ ಪಡೆದು ವಾಸ್ತವ್ಯದಲ್ಲಿದ್ದನು.  ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಜಮ್ಮು-ಕಾಶ್ಮೀರಕ್ಕೆ ಸೇರಿದ 40ಕ್ಕೂ ಹೆಚ್ಚು ಯುವಕರ ಅಲಂಕಾರಿಕ ವಸ್ತುಗಳು ಹಾಗೂ ಇತರೆ ಅಂಗಡಿಗಳನ್ನು ತೆರೆದಿದ್ದರು. ಇವರ ನಡುವೆ ಜಗಳ ಉದ್ಭವಿಸಿದರೆ ಇಮ್ರಾನ್ ಅದನ್ನು ಬಗೆಹರಿಸುತ್ತಾ ಅವರ ನಾಯಕನಂತಿದ್ದನು.

ಹಂಪೆಯಲ್ಲಿ ಜಮ್ಮು-ಕಾಶ್ಮೀರದ ಯುವಕರು ವಿದ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದಾರೆ ಎಂದು ಸಂಘ ಪರಿವಾರದ ಸಂಘಟನೆಗಳು ದೂರುತ್ತಲೇ ಇದ್ದವು. ಒಂದು ದಿನ ರಾತ್ರಿ 11 ಗಂಟೆಯ ಸುಮಾರಿಗೆ ಇಮ್ರಾನ್ ಬಾಡಿಗೆ ಮನೆಗೆ ಬಂದ ಸಿಸಿಬಿ ಪೊಲೀಸರು ಆತನನ್ನು ಕರೆದುಕೊಂಡು ಹೋದರು. ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡಲಿಲ್ಲ.

ಎರಡು-ಮೂರು ದಿನದ ನಂತರ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆದಲ್ಲಿ ಬಸ್‌ನಲ್ಲಿ ಹೊರಟಿದ್ದ ಇಮ್ರಾನ್‌ನನ್ನು ಬಂಧಿಸಿರುವುದಾಗಿ ಸಂಜೆಯ ವೇಳೆ ಪ್ರಕಟಿಸಿದರು.   ಈ ಸುದ್ದಿಯು ಮರುದಿನ ಪ್ರಕಟವಾಗಿ ಕಮಲಾಪುರ ಪೊಲೀಸರು ಹಂಪಿಯಲ್ಲಿರುವ ಅವನ ಅಂಗಡಿಯನ್ನು ಶೋಧನೆ ನಡೆಸಿ ಅದನ್ನು ಬೀಗ ಹಾಕಿ ಸುಪರ್ದಿಗೆ ತೆಗೆದುಕೊಂಡರು. ಅಲ್ಲಿ ಕುರಾನ್ ಬಿಟ್ಟರೆ ಮತ್ತೇನೂ ಸಿಗಲಿಲ್ಲ. ಮರುದಿನ ಸಿಸಿಬಿ ಪೊಲೀಸರು ನಸುಕಿನಲ್ಲಿಯೇ ಇಮ್ರಾನ್ ಬಾಡಿಗೆ ಮನೆಗೆ ಬಂದರು. ಇಮ್ರಾನ್ ದಿನಚರಿ ಹೇಗಿತ್ತು ಅಂದರೆ ಬೆಳಿಗ್ಗೆ ತಿಂಡಿ ತಿಂದು ತನ್ನ ಬೈಕ್ ಏರಿ ಹಂಪಿಗೆ ಹೊರಟನೆಂದರೆ ಸಂಜೆಯೇ ಮನೆಗೆ ಮರಳುವುದು. ಬೀಗವನ್ನು ಕೆಳಗಿನ ಮನೆಯ ಓನರ್‌ಗೆ ಕೊಟ್ಟು ಹೋಗುತ್ತಿದ್ದನು.  ಈತ ವಾಸಿಸುತ್ತಿದ್ದ ಮನೆ ಎಷ್ಟು ಚಿಕ್ಕದು ಎಂದರೆ ಜೋರಾಗಿ ಓಡಾಡಿದರೆ ಕೆಳಗಿನ ಮನೆಯವರು ಸ್ವಲ್ಪ ಮೆಲ್ಲಗೆ ಓಡಾಡಿ ಎಂದು ಹೇಳುವಂತೆ ಇತ್ತು. ಇತನ ಮನೆಯನ್ನು ಜಾಲಾಡಿದ ಪೊಲೀಸರಿಗೆ ಅಲ್ಲಿಯೇ ಎಕೆ-47 ಮತ್ತಿತರ ಅಯುಧಗಳು ದೊರಕಿದವು ಎಂದು ನಂತರ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ಅಲ್ಲಿ ಏನೂ ಸಿಕ್ಕಿರಲಿಲ್ಲ.

ಸಿಸಿಬಿ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ (ಇವರು ಕನ್ನಡದ ಸೂಕ್ಷ್ಮ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣರ ಮಗ) ಬೆಳಿಗ್ಗೆ ಜೀಪಿನಲ್ಲಿ ಬಂದಾಗ ಜೊತೆಯಲ್ಲಿ ಸಂಘ ಪರಿವಾರಕ್ಕೆ ಸೇರಿದ ಯುವಕನೊಬ್ಬ ಜೊತೆಯಲ್ಲಿದ್ದನು. ಇತನ ಮೇಲೆ ಆಗ ಎಷ್ಟು ಪ್ರಕರಣಗಳು ಇದ್ದವು ಎಂದರೆ ಪೊಲೀಸರು ಆತನನ್ನು ಗಡಿಪಾರು ಮಾಡಲು ಆಲೋಚಿಸಿದ್ದರು. ಫೈಲ್ ಕೂಡಾ ರೆಡಿ ಮಾಡಿದ್ದರು. ಈಗ ಆತ ಎಲ್ಲರಿಗೂ ಹಿರೋ ತರಹ ಕಾಣಿಸಿಕೊಂಡು ಬಿಟ್ಟ.

ಡಾ. ಬೆಸಗರಹಳ್ಳಿ ರಾಮಣ್ಣ ಅವರ ಬಗ್ಗೆ ಇರುವ ಪ್ರೀತಿಯಿಂದ ನಾನು ತುಂಬಾ ಇಷ್ಟ ಪಡುತ್ತಿದ್ದ ರವಿಕಾಂತೇ ಗೌಡರನ್ನು ಈ ಸ್ಥಿತಿಯಲ್ಲಿ ನೋಡಿದ ಮೇಲೆ ನನಗಿದ್ದ ಪ್ರೀತಿ ಹೊರಟು ಹೋಯಿತು.

ಬಿಜೆಪಿ ಸರ್ಕಾರ ಬಂದ ಮೇಲೆ ಅದೇ ಪೊಲೀಸ್ ಅಧಿಕಾರಿಗಳು ಸಾರ್ ಅನ್ನುತ್ತಾ ಆತನ ಮುಂದೆ ಕೈಕಟ್ಟಿಕೊಂಡು ಟ್ರಾನ್ಸ್‌ಫರ್‌ಗೆ ಕೇಳಿಕೊಳ್ಳುತ್ತಿರುವ ದಯನೀಯ ಸ್ಥಿತಿ ಬಂತು.

ಇದಾದ ಮೇಲೆ ಇಮ್ರಾನ್ ಸುದ್ದಿಯೇ ಇಲ್ಲ. ಇಮ್ರಾನ್ ಬಂಧನ ನಂತರ ಹಂಪಿಯಲ್ಲಿದ್ದ ಉಳಿದ ಜಮ್ಮು-ಕಾಶ್ಮೀರ ಯುವಕರ ಸ್ಥಿತಿ ನಾಯಿಪಾಡಾಯಿತು. ಬಾಡಿಗೆ ನೀಡಿದವರು ಅಂಗಡಿ ಖಾಲಿ ಮಾಡಲು ಒತ್ತಡ ನೀಡಲಾರಂಭಿಸಿದರು. ಪೊಲೀಸರು ಎಲ್ಲರನ್ನು ದಿನಾ ಪೊಲೀಸ್ ಠಾಣೆಗೆ ಬಂದು ಹಾಜುರಾಗಬೇಕು, ಸಹಿ ಮಾಡಿ ಹೋಗಬೇಕು, ಎಂದರು. ಹಂಪಿ ಗ್ರಾಮ ಪಂಚಾಯ್ತಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಒಂದು ಠರಾವು ಪಾಸು ಮಾಡಿತು. ಜಮ್ಮು-ಕಾಶ್ಮೀರದ ಯುವಕರಿಗೆ ಅಂಗಡಿ, ಮನೆ ಬಾಡಿಗೆ ನೀಡಿದವರು ಅವರನ್ನು ಬಿಡಿಸಬೇಕು ಅವರು ಹಂಪಿಯಲ್ಲಿ ಇರಬಾರದು ಎನ್ನುವುದೇ ಈ ತೀರ್ಮಾನ. ಅವರು ಎಲ್ಲರೂ ಹಂಪಿಯನ್ನು ತೊರೆದು ಜಮ್ಮು- ಕಾಶ್ಮೀರಕ್ಕೆ ಹೋದರು. ಹೋಗಿ ಅಲ್ಲಿ ಏನು ಮಾಡುತ್ತಾರೆ ಗೊತ್ತಿಲ್ಲ.

ಭಾರತದ ನೆಲದಲ್ಲಿ ಅವರಿಗೆ ಜಾಗ ಇಲ್ಲ ಎನ್ನುವುದು ಮಾತ್ರ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಇಮ್ರಾನ್ ಏನಾದ? ಆತನ ಮೇಲೆನ ಆರೋಪಗಳು ಏನಾದವು? ಸಾಕ್ಷ್ಯಾಧಾರಗಳು ಸಿಕ್ಕವೇ? ಅತನ ಮೇಲೆ ಚಾರ್ಜ್‌ಶೀಟ್ ಹಾಕಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತಾ ಅಥವಾ ತನಿಖೆ ಈಗಲೂ ಮುಂದುವರೆದಿದೆಯಾ? ಬೆಂಗಳೂರಿನ ಸಿಸಿಬಿ ಪೊಲೀಸರೇ ಹೇಳಬೇಕು.

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ.

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ

 “ಜಾತಿಯ ಗೋಡೆಯನ್ನು ಕೆಡವಿ”

‘ಜಾತಿಯ ಗೋಡೆಯನ್ನು ಕೆಡವಿ’ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ  ಹೊರಡಿಸಿರುವ ಪತ್ರ ಕಠಿಣ ಶಬ್ದಗಳಿಂದ ಕೂಡಿದ್ದು ಹಲವಾರು ದೇಶಗಳಲ್ಲಿ ಸಂಚಲನ ಮೂಡಿಸಿದೆ.  ಜಾತಿಪದ್ಧತಿಯಿಂದುಂಟಾಗುವ  ಮಾನವ ಹಕ್ಕು ಉಲ್ಲಂಘನೆಯನ್ನು  ಅವರು ಗುಲಾಮಗಿರಿ ಹಾಗೂ ಅಪಾರ್ಥೀಡ್‍ಗಳಿಗೆ ಹೋಲಿಸಿದ್ದಾರೆ. ಮಾನವ ಜನಾಂಗದ ಆ ಎರಡು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿದಂತೆಯೇ ಜಾತಿಪದ್ಧತಿಯನ್ನು ಸಹ ನಿರ್ಮೂಲನ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ.  ಅದಕ್ಕಾಗಿ ಎಲ್ಲ ದೇಶಗಳ ಸಹಕಾರವನ್ನು ಅವರು ಬಯಸುತ್ತಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 260 ಮಿಲಿಯನ್ ಜನರು ಪ್ರಪಂಚದಾದ್ಯಂತ ಜಾತಿ ಪದ್ಧತಿಯ ದೌರ್ಜನ್ಯಗಳಿಂದ ಬಳಲುತ್ತಿದ್ದಾರೆ.  ಭಾರತ ಪ್ರಮುಖವಾಗಿ ಕಾಣಿಸಿಕೊಂಡರೂ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತೀಯ ವಸಾಹತು ಸ್ಥಳಗಳಲ್ಲಿ ಜಾತಿಭೇದ ನೀತಿ ಇನ್ನೂ ಚಲಾವಣೆಯಲ್ಲಿದೆ ಎಂದು ನವಿ ಪಿಳ್ಳೆ ಬರೆಯುತ್ತಾರೆ.

ಹುಬ್ಬಳ್ಳಿಯ ಕೆಲವು ಗೆಳೆಯರು ‘ಮಾನವ ಹಕ್ಕು ಪ್ರತಿಪಾದನಾ ಸಂಸ್ಥೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಏಪ್ರಿಲ್ 2008 ರಲ್ಲಿ ನಡೆದ ಅದರ ಉದ್ಛಾಟನಾ ಸಮಾರಂಭದಲ್ಲಿ ನಾನು ಒಂದು ಮಾತು ಹೇಳಿದ್ದೆ.  ‘ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಅಪರಾಧವೆಂದು ಪರಗಣಿಸಲಾಗಿದೆ.  ಆದರೆ ವಾಸ್ತವದಲ್ಲಿ ಹಳ್ಳಿ, ಪಟ್ಟಣವೆನ್ನದೆ ಅದಿನ್ನೂ ಜೀವಂತವಾಗಿದೆ.  ಅದರ ಮಾತೃಗರ್ಭವಾದ ಜಾತಿ ಪದ್ಧತಿ ಅಳಿಯದ ಹೊರತು ಅಸ್ಪೃಶ್ಯತೆ ನಾಶವಾಗುವುದಿಲ್ಲ. ಆದ್ದರಿಂದ ಜಾತಿ ಪದ್ದತಿಯ ಆಚರಣೆಯನ್ನು ಸಂವಿಧಾನದಲ್ಲಿ ಅಪರಾಧವೆಂದು ಪರಿಗಣಿಸಿ ತಿದ್ದುಪಡಿ ತರಬೇಕು. ಆಗ ಅದರ ಪಾಪದ ಪಿಂಡವಾದ ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಬಹುದು’ ಎಂದು. ಆ ಸಂದರ್ಭದಲ್ಲಿ ಉಪಸ್ಥಿತರಾಗಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್.ನಾಯಕ್ ರವರು ಆ ಮಾತನ್ನು  ಅನುಮೋದಿಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಜಾತಿ ಪದ್ದತಿ ಆಚರಣೆಯನ್ನು ಸಂವಿಧಾನ ಮೂಲಕ ಅಳಿಸಿಹಾಕಬೇಕು ಎಂಬ ಕರೆಯನ್ನು ಸಹ ಕೊಟ್ಟಿದ್ದರು.  ಇದರ ನೆನಪು ಈ ಸಂದರ್ಭದಲ್ಲಿ ಪ್ರಸ್ತುತವೆಂದು ಉಲ್ಲೇಖಿಸುತ್ತಿದ್ದೇನೆ.

ಜಾತಿಯಾಧಾರಿತ ತಾರತಮ್ಯ – ಮಾನವ ಹಕ್ಕು ಉಲ್ಲಂಘನೆ:

ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್  ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು  ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಠರಾವು ಪಾಸುಮಾಡಿದೆ. ಅದಕ್ಕೆ ನೇಪಾಳ ಬೆಂಬಲ ನೀಡಿದೆ. ನೇಪಾಳ ದೇಶವು ನೀಡಿದ ಬೆಂಬಲವು ಮಹತ್ವದ್ದು ಎಂಬುದು ವಿಶೇಷ. ಯಾಕೆಂದರೆ ಇತ್ತೀಚಿನವರೆಗೂ ವಿಶ್ವದ ಏಕೈಕ ಹಿಂದೂ ರಾಷ್ಟ್ರ್ರವಾಗಿದ್ದ ನೇಪಾಳದಲ್ಲಿ ಭಾರತದಲ್ಲಿರುವಂತೆಯೆ ಹಿಂದೂಗಳು ಬಹುಸಂಖ್ಯಾತರು ಮತ್ತು ಅಲ್ಲಿಯೂ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳು ಬೇರು ಬಿಟ್ಟು ಸಮಾಜವನ್ನು ಕುರೂಪಗೊಳಿಸಿವೆ.  ವಿಪರ್ಯಾಸವೆಂದರೆ ಭಾರತ ಈ ಠರಾವನ್ನು ವಿರೋಧಿಸುತ್ತಿದೆ.  ಜಾತಿಪದ್ಧತಿ ಎಂಬುದು ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಾಗಿದ್ದು ಅದು ದೇಶದ ಆಂತರಿಕ ವಿಚಾರವೆಂದೂ, ಅದರ ನೇತ್ಯಾತ್ಮಕ ಅಂಶಗಳಾದ ಅಸ್ಪೃಶ್ಯತೆ, ಇತ್ಯಾದಿಯನ್ನು ಸಂವಿಧಾನದ ಮೂಲಕ ಹೋಗಲಾಡಿಸಿಕೊಂಡಿದೆಯೆಂದು ವಾದಿಸುತ್ತಾ ಬಂದಿದೆ.

ಭಾರತ ಯಾಕೆ ಈ ನೀತಿ ಅನುಸರಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಜಾತಿ ವೃತ್ತಿ ಸಂಬಂಧಿತವಲ್ಲ ಎಂಬುದು, ಆನುವಂಶಿಕವಲ್ಲ ಎಂಬುದು ಭ್ರಮಾತ್ಮಕವಾದುದು.  ಈ ನಿಲುವು ನೈತಿಕವಾದುದಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಇಂಥ ಧೋರಣೆಯಿಂದ ಭಾರತ ಸಾಧಿಸ ಬೇಕಾಗಿರುವುದಾದರೂ ಏನನ್ನು.? ದೇಶದೊಳಗಿನ ಇಂಥ ಗಂಭೀರ ಸಮಸ್ಯೆಯೊಂದರ ಬಗ್ಗೆ ತನ್ನ ಅಂತರರಾಷ್ಟ್ರೀಯ ನಿಲುವು ಸತ್ಯಕ್ಕೆ ನಿಷ್ಠವಾಗಿರಬೇಕಾದ ಅನಿವಾರ್ಯತೆಯನ್ನು ಮರೆತು ಭಾರತ ವರ್ತಿಸುತ್ತಿದೆಯೆ? ಅದರ ಪರಿಣಾಮಗಳನ್ನು ಯೋಚಿಸಿದೆಯೆ?  ವಿಶ್ವಸಂಸ್ಥೆಯು ಜನಾಂಗೀಯ ಭೇದ ವಿನಾಶ ಸಮಿತಿಯೊಂದನ್ನು (Committee on Elimination of Racial Discrimination – CERD) ರಚಿಸಿದೆ.  ಅದು ಎಲ್ಲಾ ವಿಧದ ಜನಾಂಗೀಯ ಭೇದಗಳ ವಿನಾಶದ ಕುರಿತು 1968 ರಲ್ಲಿ  ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ರಚನೆಯಾಗಿದೆ.  ಆ ಒಡಂಬಡಿಕೆಗೆ ಭಾರತವೂ ಸಹಿ ಮಾಡಿದೆ.  ಆ ಒಡಂಬಡಿಕೆಯ ಪ್ರಕಾರ  ವಿಶ್ವಸಂಸ್ಥೆಯು ಜನಾಂಗ, ವರ್ಣ, ಅನುವಂಶೀಯ ಅಥವಾ ಕುಲಸಂಬಂಧೀ ಭೇದಗಳ ವಿರುದ್ಧ ರಕ್ಷಣೆಯ ಭರವಸೆಯನ್ನು ತನ್ನ ಸದಸ್ಯ ರಾಷ್ಟ್ರೀಯ ಪ್ರಜೆಗಳಿಗೆ ನೀಡುತ್ತದೆ.  1996 ರಲ್ಲಿ  ಜನಾಂಗೀಯ ಭೇದ ವಿನಾಶ ಸಮಿತಿಯು ದಲಿತರ ವಿರುದ್ಧ ನಡೆಸಲಾಗುವ ಭೇದವನ್ನು ಸಹ ಅನುವಂಶೀಯ ಆಧಾರದ ಭೇದ ನಿಷೇಧದ ಅಡಿಯಲ್ಲಿ ಪರಿಗಣಿಸಬಹುದು ಎಂದು ತೀರ್ಮಾನಿಸಿದೆ. ಒಬ್ಬ ಸಹಿದಾರನಾಗಿ ಭಾರತ ಒಡಂಬಡಿಕೆಯಲ್ಲಿ ಭೇದ ನೀತಿಗೊಳಪಡುವವರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಕಾಲಕಾಲಕ್ಕೆ ವರದಿಗಳ ಮೂಲಕ ನೀಡಬೇಕಾಗಿರುತ್ತದೆ.  ಅದನ್ನು ಸಮಿತಿಯು ಪರಿಶೀಲನಾ ಸಭೆಗಳಲ್ಲಿ ಪರಾಂಬರಿಸಿ ರಚನಾತ್ಮಕ ವಾಗ್ವಾದಗಳನ್ನು ನಡೆಸುತ್ತದೆ ಮತ್ತು ಸುಧಾರಣಾ ಸಲಹೆಗಳನ್ನು ನೀಡುತ್ತದೆ.

ಇಂತಹ ಒಂದು ಠರಾವನ್ನು 1996 ರಿಂದಲೂ ಭಾರತ ವಿರೋಧಿಸುತ್ತಾ ಬಂದಿದೆ.  ಭಾರತವು ಹತ್ತು ವರ್ಷಗಳ ನಂತರ ಫೆಬ್ರವರಿ 2007 ರಲ್ಲಿ ಈ ಠರಾವಿಗೆ ಉತ್ತರ ನೀಡಿದೆ.  ವಿಚಿತ್ರವೆಂದರೆ, ಅದರಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಒಂದು ಚಕಾರವೂ ಇಲ್ಲ. ಪ್ರತಿ ಘಂಟೆಗೆ ಇಬ್ಬರು ದಲಿತರನ್ನು ಥಳಿಸಲಾಗುತ್ತದೆ. ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಪಡುತ್ತಾರೆ.  ಇಬ್ಬರು ದಲಿತರು ಕೊಲ್ಲಲ್ಪಡುತ್ತಾರೆ  ಎರಡು ದಲಿತರ ಮನೆಗಳನ್ನು ಸುಡಲಾಗುತ್ತದೆ, ಎಂಬ ಅಂಕಿಅಂಶಗಳು ಅಧಿಕೃತವಾಗಿ ಲಭ್ಯವಿವೆ.  ಸಫಾಯಿ ಕರ್ಮಚಾರಿ ಆಂದೋಲನವು ಮೇ 2009 ರಲ್ಲಿ ದೆಹಲಿಯೊಂದರಲ್ಲೇ 1085 ಬರಿಗೈ ಜಾಡಮಾಲಿಗಳು ಇರುವರೆಂಬ ವಸ್ತುಸ್ಥಿತಿಯನ್ನು  ಮಾಹಿತಿ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಡೆದು ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.  ಸರ್ಕಾರದ ಕಡತಗಳಲ್ಲೆ ಕಂಡು ಬರುವ ಇಂಥ ಬರ್ಬರ ಸತ್ಯಗಳನ್ನು  ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹೇಗೆ ಅಲ್ಲಗಳೆಯಲಾಗಿದೆ ಎಂಬುದು ಸೋಜಿಗವೂ, ವಿಷಾದನೀಯವೂ ಆಗಿದೆ.

ಕೇವಲ ವಿಶ್ವಸಂಸ್ಥೆಯಷ್ಟೆ ಅಲ್ಲ, ಭಾರತದ ಜಾತಿಯಾಧಾರಿತ ಭೇದವನ್ನು ಖಂಡಿಸಿ ಯೂರೋಪು ಒಕ್ಕೂಟವೂ ಠರಾವು ಪಾಸು ಮಾಡಿದೆ.  ಯೂರೋಪು ಸಂಸದೀಯ ಮಾನವ ಹಕ್ಕು 2000, 2002, 2003 ಮತ್ತು 2005ರ ವರದಿಗಳಲ್ಲಿ ಜಾತಿಭೇದದ ಕುರಿತು, ದಲಿತರ ಸ್ಥಿತಿಗತಿ ಕುರಿತು ಉಲ್ಲೇಖಗಳಿವೆ.  ಈ ವರದಿಗಳು ವ್ಯಾಪಕವಾಗಿ ವಿತರಿಸಲ್ಪಡುತ್ತವೆ.  ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಷ್ಟೆ ಅಲ್ಲದೆ ಯೂರೋಪು ಸದಸ್ಯ ರಾಷ್ಟ್ರಗಳು, ಐಎಲ್ಓ, ಯುನಿಸೆಫ್,  ಮುಂತಾದ ಸಂಸ್ಥೆಗಳನ್ನು ವರದಿ ತಲುಪುತ್ತದೆ.  ಆದರೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ದಮನವನ್ನು  ಮರೆಮಾಚಲು ಭಾರತ ಪ್ರಯತ್ನಿಸುತ್ತಲೇ ಇದೆ.

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ :

ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ಅಂತರ್ಜಾತೀಯ  ವಿವಾಹಗಳು ಇಂದಿಗೂ ಕೊಲೆಯಲ್ಲಿ ಪರ್ಯವಸಾನವಾಗುತ್ತವೆ. ಅಸಮಾನತೆಯೆ ತತ್ವವಾಗಿರುವ ಜಾತಿ ಪದ್ಧತಿ ಮತ್ತು ಸಮಾನತೆ ಹಾಗೂ ಭ್ರಾತೃತ್ವವನ್ನು ಬೋಧಿಸುವ  ಪ್ರಜಾಪ್ರಭುತ್ವ ಪರಸ್ಪರ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ ವಿರೋಧೀ ಭಾವಗಳು. ಆದ್ದರಿಂದ ಭಾರತದ ಆತ್ಮ ಅಲಿಖಿತ ಸಂವಿಧಾನವಾಗಿರುವ ಜಾತಿಪದ್ದತಿಯೆಂದರೆ ತಪ್ಪಾಗಲಾರದು. ದುರದೃಷ್ಟವಶಾತ್ ಭಾರತದ ಒಳಗಡೆ ಚರ್ಚೆಗೊಳಗಾಗುವ ವಿಷಯ ಜಾತಿಪದ್ಧತಿ ಒಡಲುಗೊಂಡಿರುವ ಅಸ್ಪೃಶ್ಯತೆಯನ್ನು ಕುರಿತು ಮಾತ್ರ. ಇದು ಮಾನವತೆಗೆ ಅಂಟಿಕೊಂಡ ದೊಡ್ಡ ಕಳಂಕ ಎಂದು ವರ್ಣಿಸಿ ಎಲ್ಲ ಜಾತಿಯವರು ಖಂಡಿಸಲು ಇಚ್ಛಿಸುತ್ತಾರೆ. ಆದರೆ ಹುಟ್ಟುತ್ತಲೇ ಮೇಲು ಕೀಳನ್ನು ನಿರ್ಧರಿಸಿ ಬಿಡುವ ಜಾತಿಯೆ ಮಾನವತೆಗೆ ದೊಡ್ಡ ಕಳಂಕ ಎಂದು ಖಂಡಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವರ್ಣಾಶ್ರಮಕ್ಕೆ ಸಿಕ್ಕ ಗಾಂಧೀಜಿಯವರ ಬೆಂಬಲ ಜಾತಿಪದ್ಧತಿಗೂ ಪರೋಕ್ಷವಾಗಿ ಸಿಕ್ಕಿತೆಂಬ ನಂಬಿಕೆ. ಜಾತಿ ಪದ್ಧತಿಯ ಎಲ್ಲಾ ಅವಘಡಗಳನ್ನು ಭಾರತ ದಿನನಿತ್ಯ ಅನುಭವಿಸುತ್ತಲೇ ಸಾಮಾಜಿಕವಾಗಿ, ರಾಜಕೀಯವಾಗಿ ಕುಬ್ಜವಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಯಾವ ಸಮಾಜವಾದಿಯೂ ಹೇಳಲಾರ. ಅಂಬೇಡ್ಕರರನ್ನು ಹೊರತುಪಡಿಸಿ ಜಾತಿ ಪದ್ಧತಿಯ ಅನಿಷ್ಟಗಳನ್ನು ತಳ ಸ್ಪರ್ಶಿಯಾಗಿ ಅಭ್ಯಸಿಸಿದವರು ರಾಮಮನೋಹರ ಲೋಹಿಯಾ. ಜಾತಿ ಪದ್ಧತಿಯಿಂದ ಆಡಳಿತ ರಂಗ ಕಲುಷಿತಗೊಳ್ಳುತ್ತಿದೆ ಎಂಬ ಒಳ ನೋಟವಿದ್ದ ಲೋಹಿಯಾ ‘ಶೂದ್ರ ದ್ವಿಜರ ನಡುವೆ ಮದುವೆಯಾಗುವುದು ಆಡಳಿತ ರಂಗ, ಸಶಸ್ತ್ರ ಪಡೆಗಳ ನೇಮಕಾತಿಗೆ ಉಳಿದವುಗಳೊಂದಿಗೆ ಒಂದು ಅರ್ಹತೆಯೆಂದೂ, ಜೊತೆಗೂಡಿ ಊಟ ಮಾಡಲು ನಿರಾಕರಿಸುವುದನ್ನು ಒಂದು ಅನರ್ಹತೆಯೆಂದೂ ಕಟ್ಟಳೆಯಾದ ದಿನವೇ ಜಾತಿ ವಿರುದ್ಧ ಪ್ರಾಮಾಣಿಕ ಹೋರಾಟ ಪ್ರಾರಂಭವಾಗುತ್ತದೆ. ಆ ದಿನ ಇನ್ನೂ ಬರಬೇಕಿದೆ’ ಎನ್ನುತ್ತಾರೆ.

ಜಾತಿ ಶ್ರಮವನ್ನು ಮಾತ್ರ ವಿಭಜಿಸುವುದಿಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ ಎಂದು ಡಾ.ಅಂಬೇಡ್ಕರ್ ಹೇಳುತ್ತಾರೆ. ಇದು ಅಕ್ಷರಷಹಃ ಸತ್ಯ. ವಿಭಜಿತ ಜಾತಿಗಳು ತಮ್ಮದೇ ಗೋಡೆಗಳನ್ನು ನಿರ್ಮಿಸಿಕೊಂಡು ಕೂಪ ಮಂಡೂಕಗಳಾಗಿವೆ. ಹಳ್ಳಿಗಳಲ್ಲಿ ಇನ್ನೂ ಒಂದು ಜಾತಿಯ ಜೀವನ ಪದ್ಧತಿ ಇನ್ನೊಂದು ಜಾತಿಗೆ ಅಪರಿಚಿತವಾಗಿದೆ. ಸಮಾಜ ನಿರ್ಮಾಣ ಸಮರೂಪವಾಗಿರಲು ಇದು ಅಡಚಣೆಯಾಗುತ್ತದೆ. ಕೊಡು ಕೊಳ್ಳುವಿಕೆ ಇಲ್ಲದೆ ಸಂಸ್ಕೃತಿ ಬೆಳೆಯಲಾರದು. ಕುರುಬ ಜಾತಿಯ ಮಿತ್ರರೊಬ್ಬರು ‘ನಾವು ಸ್ಪೃಶ್ಯ ದಲಿತರು’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಊರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊರಲು ಇವರು ಬೇಕಾಗಿದ್ದರಂತೆ. ಡೊಳ್ಳು ಬಾರಿಸಲು, ವಾದ್ಯ ಊದಲು, ಪಂಜು ಹಿಡಿಯಲು, ಹಲಗೆ ಬಡಿಯಲು ಒಂದೊಂದು ಜಾತಿಗಳಿವೆ.   ದೇಗುಲ, ಮಠ ಯಾವುದೇ ಆದರೂ ಕೈ ಸೇವೆಗಳ ಅಗತ್ಯವಿರುವುದರಿಂದ ಸ್ಪೃಶ್ಯ ಕೆಳ ಜಾತಿಗಳ ಅವಶ್ಯಕತೆಯಿದೆ. ಶೋಷಣೆಯೇ ಜಾತಿ ಪದ್ಧತಿಯ ಜೀವಾಳ. ಸಾಮಾಜಿಕ ಅಸಮಾನತೆಯಿಂದ ಅವಮಾನವನ್ನೂ ಆರ್ಥಿಕ ಅಸಮಾನತೆಯಿಂದ ಹಸಿವನ್ನೂ ಕೆಳಜಾತಿಗಳು ಅನುಭವಿಸುತ್ತಿವೆ.

ಪ್ರತಿಯೊಂದು ಜಾತಿಗೂ ಒಂದು ಅಘೋಷಿತ ಸಾರ್ವಜನಿಕ ನಡವಳಿಕೆಯಿದೆ. ಅದು ಅನೀತಿಯದಾಗಿದೆ. ಜಾತಿಯೆ ಅನೀತಿಯ ಕಟ್ಟಳೆಯಾಗಿರುವಾಗ ಅದರ ಪರಿಣಾಮಗಳು ಅನೀತಿಯುತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ರಾಷ್ಟ್ರಾಧ್ಯಕ್ಷರೊಬ್ಬರು ಕಾಶಿಯಲ್ಲಿ ಸಾರ್ವಜನಿಕವಾಗಿ 200 ಜನ ಬ್ರಾಹ್ಮಣರ ಪಾದಗಳನ್ನು ತೊಳೆದರು. ಅದನ್ನು ಲೋಹಿಯಾ ಚಿತ್ತಭ್ರಮೆ, ಅಸಭ್ಯತನ ಎಂದು ಬಹುವಾಗಿ ಖಂಡಿಸಿದರು, ಆದರೆ ನೆಹರೂ ಅದನ್ನು ಸಮರ್ಥಿಸಿಕೊಂಡರು, ಇನ್ನೊಬ್ಬ ರಾಷ್ಟ್ರಪತಿಗಳು ತಿರುಪತಿಯಲ್ಲಿ ತಲೆಬೋಳಿಸಿಕೊಂಡರು. ಈಗ ಮಂತ್ರಿಗಳು ತಮ್ಮ ಚೇಂಬರಿನೊಳಗೆ ಹೋಮ, ಹವನ ಮಾಡಿಸುತ್ತಾರೆ. ಕೆಳಜಾತಿಗಳು ಮಾರಮ್ಮನಿಗೆ ಕೊಡುವ ಕೋಣನ ಬಲಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇವೆಲ್ಲವೂ ಸಂವಿಧಾನದ ಜಾತ್ಯತೀತ ನಿಲುವಿಗೆ ಒಗ್ಗುವುದಿಲ್ಲವಾದರೂ ಧರ್ಮದ ಕವಚ ತೊಟ್ಟುಕೊಳ್ಳುವುದರಿಂದ ಅಧಿಕಾರಸ್ಥರು ಖಂಡಿಸಲಾರರು. ಇಂದಿಗೂ ಸಹ ಆಡಳಿತದ ಎಲ್ಲ ರಂಗಗಳಲ್ಲಿಯೂ ಇಂಥ ಅಪಸರಣಗಳನ್ನು (aberrations) ನೋಡಬಹುದು. ಒಂದು ಕಛೇರಿಯಲ್ಲಿ ಶುಕ್ರವಾರದ ಪೂಜೆಯನ್ನು ಮಾಡುವ  ನೌಕರ ಬ್ರಾಹ್ಮಣನೇ ಯಾಕಾಗಬೇಕು? ಇಂಥ ಅಲಿಖಿತ ಕಟ್ಟಳೆಗಳನ್ನು ವಿಸ್ತರಿಸಿಕೊಂಡು ಹೋಗಲು ಲೇಖನದ ಮಿತಿಯೊಳಗೆ ಸಾಧ್ಯವಾಗಲಾರದು. ನನ್ನ ಜಾತಿಯವರು ಹೆಚ್ಚು ಸಮಾನರು ಎಂಬುದೇ ಜಾತಿಪದ್ಧತಿಯ ಧೋರಣೆ. ಇಲ್ಲದಿದ್ದರೆ ಒಬ್ಬ ಕುಲಪತಿ ತನ್ನ ಆಧಿಕಾರಾವಧಿಯಲ್ಲಿ ತನ್ನ ಜಾತಿಯ ಸಿಬ್ಬಂದಿಯನ್ನೆ ಹೆಚ್ಚು ನೇಮಕ ಮಾಡುವುದು, ಒಬ್ಬ ಪ್ರಾಧ್ಯಾಪಕ ತನ್ನ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಒಬ್ಬ ಕಡು ಭ್ರಷ್ಟನೂ ಸಹ ಕಡತ ತನ್ನ ಜಾತಿಯವನಿಗೆ ಸಂಬಂಧಿಸಿದ್ದರೆ ಅದನ್ನು ಸ್ವಲ್ಪ ಅನುಕಂಪದಿಂದಲೇ ನೋಡುತ್ತಾನೆ. ಪಕ್ಷಪಾತ ನೀತಿಗೆ ಬಲಿಷ್ಠ, ದುರ್ಬಲ ಜಾತಿ ಎಂಬುವುದಿಲ್ಲ. ಕುರ್ಚಿ ದಕ್ಕಿದಾಗ ಬಲಿಷ್ಠ ದುರ್ಬಲನ ವಿರುದ್ಧವೂ, ದುರ್ಬಲ ಬಲಿಷ್ಠನ ವಿರದ್ಧವೂ ಸೇಡು ತೀರಿಸಿಕೊಳ್ಳುತ್ತಿರುತ್ತಾನೆ.

ರಾಜಕೀಯ ವ್ಯವಸ್ಥೆಯಲ್ಲಿ ‘ನನ್ನ ಜಾತಿಯವನು ಗೆಲ್ಲಲಿ’ ಎಂಬ ವಾಂಛೆ ಬಲಿಷ್ಠ ಜಾತಿಗಳ ಒಗ್ಗೂಡುವಿಕೆಗೆ ಕಾರಣವಾಗಿದೆ. ಅದೊಂದು ಸಾಂಕೇತಿಕ ಒಗ್ಗೂಡುವಿಕೆ ಅಷ್ಟೆ. ಆ ಕಾರಣದಿಂದಾಗಿ ಆ ಜಾತಿಯ ಎಲ್ಲರೂ ಫಲಾನುಭವಿಗಳಾಗಲು ಸಾಧ್ಯವಿಲ್ಲ ಅಥವಾ ಕನಿಷ್ಠ ಪ್ರತಿಫಲ ಪಡೆಯಲು (ರುಸುವತ್ತು ಹೊರತು) ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ ಪ್ರತಿಭೆ (ಮೆರಿಟ್) ಯನ್ನು ಮೆಟ್ಟಿ ಜಾತಿ ಸಮೂಹ  ತನ್ನ ನಾಯಕನನ್ನು ಆರಿಸುತ್ತದೆ. ಶತಮಾನಗಳಿಂದ ಅವಕಾಶ ವಂಚಿತ ಜಾತಿಗಳಿಗೆ ಕಾನೂನಿನ ಮೂಲಕ ನೀಡಿರುವ ಮೀಸಲಾತಿಯನ್ನು ಮೆರಿಟ್‍ನ ನೆಪವೊಡ್ಡುತ್ತಾ ವಿರೋಧಿಸುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪಂಡಿತರು ಜಾತಿಪದ್ಧತಿಯಿಂದ ನಿರಂತರವಾಗಿ ಹತವಾಗುತ್ತಿರುವ ಪ್ರತಿಭೆಯ ಬಗ್ಗೆ ಮಾತಾಡುವುದಿಲ್ಲ, ಜಾಣ  ಮೌನವಹಿಸುತ್ತಾರೆ.  ಪ್ರಾಯಶಃ ಇಂದು ಎಲ್ಲ ಪಕ್ಷಗಳು ವಂಶಾಡಳಿತಕ್ಕೆ ಜೋತು ಬಿದ್ದಿರುವುದು ಜಾತಿಪದ್ಧತಿಯಲ್ಲಿ ಪೂರ್ವಗ್ರಹವಿಲ್ಲದ(ದೆ) ಒಬ್ಬ ನಿಜ ನಾಯಕನನ್ನು ಆರಿಸಲು ಸಾಧ್ಯವಾಗದಿರುವ ಕಾರಣದಿಂದ ಎಂದು ಕಾಣುತ್ತದೆ.

ಇಂಥ ವ್ಯವಸ್ಥೆಯಲ್ಲಿ ಬಹು ಸಂಖ್ಯಾತರಾಗಿರುವ ಅಸಂಘಟಿತ ಸಣ್ಣ ಜಾತಿಗಳಿಗೆ ಆಗುತ್ತಿರುವ ಅನ್ಯಾಯ ಹೇಳತೀರದು. ಜಾತಿ ಲೆಕ್ಕಾಚಾರದಂತೆಯೆ ರಾಜಕೀಯ ನೇತೃತ್ವ ಪಡೆಯುತ್ತಿರುವ ಈ ದೇಶದಲ್ಲಿ ಅವರು ಹೆಚ್ಚೆಂದರೆ ಕೆಳಮಧ್ಯಮ ವರ್ಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ 62 ವರ್ಷಗಳಲ್ಲಿ ದಲಿತ, ಹಿಂದುಳಿದ ಜಾತಿಗಳು ಬಂಡವಾಳ ಶಾಹಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಜಾತಿ ಪದ್ಧತಿಯೆಂಬ  ದುರಂತ ವ್ಯವಸ್ಥೆ. ಈ ಭಸ್ಮಾಸುರ ಸ್ವರೂಪೀ ಜಾತಿಯ ಸೃಷ್ಟಿಗೆ ಕಾರಣವಾದ ‘ವೈದಿಕತೆ’ ಇಂದು ಎಷ್ಟು ಅಸಹಾಯಕವಾಗಿದೆ ಎಂದರೆ ತನ್ನನ್ನು ಓಲೈಸಿ ಬಂದ ಕಾರಣಗಳಿಗೆ ಬೇಡಿದ ವರವನ್ನು ದಯಪಾಲಿಸಿ ತಾನೇ ಪೇಚಿಗೆ ಸಿಕ್ಕಿ ಪರದಾಡುವ ಪರಶಿವನಂತಾಗಿದೆ.

ಕೇವಲ ಆಂತರಿಕ ಸಮಸ್ಯೆಗಳೆ? :

ಭಾರತ ಸರ್ಕಾರವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು  ಕೇವಲ ಆಂತರಿಕ ಸಮಸ್ಯಗಳೆಂದು ತಿಳಿದರೆ ಸಾಲದು.  ಈ ಸಮಸ್ಯೆಗಳು ಜನರ ಮನದಾಳದಲ್ಲಿ ಸ್ಥಾಪಿತವಾಗಿರುವುದು ಶತಶತಮಾನಗಳಿಂದ ಸ್ವಾರ್ಥ ಹಿತಾಸಕ್ತಿಗಳು ಭಿತ್ತಿದ ಮೌಢ್ಯದಿಂದ  ಮತ್ತು ಅದು ಗಟ್ಟಿಗೊಳ್ಳುತ್ತಿರುವುದು ಧಾರ್ಮಿಕ ಒತ್ತಾಸೆಯಿಂದ.  ಇದು ದೇಶಕ್ಕೂ ಮತ್ತು ಧರ್ಮಕ್ಕೂ ಒಂದು ಕಳಂಕವಾಗಿರುವುದು ಸತ್ಯ. ಆದ್ದರಿಂದ ಅದನ್ನು ತೊಳೆದುಕೊಳ್ಳುವುದಕ್ಕೆ ದೇಶವು ಮತ್ತು ಧರ್ಮವು ಕಟು ಬದ್ಧವಾಗಬೇಕು.  ಅದಕ್ಕಾಗಿ ವಿಶ್ವಸಂಸ್ಥೆಯಂಥ ಹೊರಗಿನ ಸ್ವಾಯತ್ತ ಸಂಸ್ಥೆಗಳ ಸಹಾಯ ಪಡೆಯುವುದಕ್ಕೆ ಹಿಂಜರಿಯಬಾರದು.  ರೋಗಿಯೊಬ್ಬನು ವೈದ್ಯನ ಮುಂದೆ ತನ್ನ ರೋಗನ್ನು ಹೇಳಿಕೊಳ್ಳಲೇಬೇಕು. ಆಗಲೇ ಚಿಕಿತ್ಸೆ ಸಾಧ್ಯ ಹಾಗೂ ಸುಲಭ.  ಸಂಕೋಚಪಟ್ಟುಕೊಂಡರೆ ರೋಗವು ಉಲ್ಬಣಿಸುತ್ತದೆ, ರೋಗಿಯನ್ನೆ ತಿನ್ನುತ್ತದೆ.  ವಿಶ್ವಸಂಸ್ಥೆ ಇರುವುದೇ ಜಾಗತಿಕ ನೆಲೆಯಲ್ಲಿ ಸಮಸ್ಯೆಗಳನ್ನು  ಎತ್ತಿಕೊಂಡು ನೊಂದ ದೇಶಗಳಿಗೆ ಸಹಾಯ ಹಸ್ತ ಚಾಚುವುದು.  ಮಾನವನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಭಾರತದಲ್ಲಾಗುತ್ತಿರುವ ಕುಲಸಂಬಂಧೀ (ethnic) ಒಳ ಹಿಂಸೆಗಳು ಅಪಾರ ಮತ್ತು ಅನನ್ಯ. ವಂಶ ಪಾರಂಪರ್ಯವಾಗಿ ಕೆಲವು ಕೆಳಜಾತಿಗಳು  ಮಾಡುತ್ತಿರುವ ಕೆಲಸಗಳು ಖಂಡನೀಯವು ಮತ್ತು ಅಮಾನವೀಯವೂ ಆಗಿವೆ.

ದೇಶದಾದ್ಯಂತ ಇಂದಿಗೂ ಬರಿಗೈಯಲ್ಲಿ ಕಕ್ಕಸು ತೊಳೆಯುವ, ತಲೆಯ ಮೇಲೆ ಮಲ ಹೊರುವವರ ಸಂಖ್ಯೆ 3.40 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ.  ದೇಶದ ರಾಜಧಾನಿಯೂ ಸೇರಿದಂತೆ ಮುಂದುವರೆದ ಅನೇಕ ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸತ್ತ ದನವನ್ನು  ಸುಲಿಯುವುದಕ್ಕೆ, ಚರ್ಮ  ಹದ ಮಾಡುವುದಕ್ಕೆ, ಚಪ್ಪಲಿ ಹೊಲಿಯುವುದಕ್ಕೆ ಒಂದೊಂದು ಜಾತಿಗಳಿರುವುದು ಅವು ಇನ್ನೂ ಅನೂಚಾನವಾಗಿ ಮುಂದುವರೆದಿರುವುದು ಗುಟ್ಟಿನ ವಿಷಯಗಳಲ್ಲ.  ಇಂಡಿಯಾದ ಸಂಸತ್ತು ಮತ್ತು ವಿಧಾನ ಸಭೆಗಳು ಕಣ್ಣುಮುಚ್ಚಿ ಬಿಡುವುದರೊಳಗೆ ಮಾನವ ಹಕ್ಕುಗಳನ್ನು ಕುರಿತ ಮಸೂದೆಗಳನ್ನು ಮಂಡಿಸಿ ಪಾಸುಮಾಡಿ ಕಾನೂನು ಹೊರಡಿಸುತ್ತವೆ.  ಆದರೆ ಅವು ಜಾರಿಯಾಗುವ ಸಾಧ್ಯತೆಗಳು ಕಡಿಮೆ.  ಮಾಹಿತಿ ತಂತ್ರಜ್ಞಾನದ ಮೂಲಕ ಅತಿ ಶೀಘ್ರವಾಗಿ ಅಂಗೈ ಪರದೆಯಲ್ಲಿ ಮೂಡುವ ಸತ್ಯ ದರ್ಶನಗಳನ್ನು ಅಲ್ಲಗಳೆಯಲು ಇನ್ನೂ ಸಾಧ್ಯವಿಲ್ಲ.  ಆದ್ದರಿಂದ ಸಂಕೋಚಗಳನ್ನು, ಮುಜುಗರಗಳನ್ನು ಬದಿಗಿಟ್ಟು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳಿಂದ ನಲುಗುತ್ತಿರುವ ಭಾರತ ಠರಾವನ್ನು ಬೆಂಲಿಸುವ ಜಾಣ್ಮೆ ತೋರಬೇಕು. ನೇಪಾಳದಂತಹ ನೆರೆರಾಜ್ಯ ಸಮಿತಿಯ ಠರಾವನ್ನು ಬೆಂಬಲಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಬೆಂಬಲ ನೀಡದಿರುವುದಕ್ಕೆ ಕಾರಣ ರಹಿತವಾಗಿರುವ ಭಾರತ ವಿಶ್ವದ ಇತರ ರಾಷ್ಟ್ರಗಳ ಎದುರು ತಲೆ ತಗ್ಗಿಸುವಂತಾಗುತ್ತದೆ.  ಆದ್ದರಿಂದ ಈಗ ಒತ್ತಡ ಹೆಚ್ಚಾಗಿದೆ.  ಜಾತಿ ಪದ್ಧದತಿಯ ಮೂಲ ಹಿಂದೂ ಧರ್ಮವೇ ಎಂಬುದು ಕಹಿಯಾದರೂ ಸತ್ಯ.  ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅಥವಾ ಕೆಳಗೆ ಇರುವುದರಿಂದ ಭೇದ ನೀತಿಯನ್ನು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ವಿಶ್ವಸಂಸ್ಥೆಯು  ಜನಾಂಗೀಯ ಭೇದ ವಿನಾಶ ಸಮಿತಿಯನ್ನು ರಚಿಸಿರುವ ಉದ್ದೇಶವೇ ತಾರತಮ್ಯ ನೀತಿಯನ್ನು ಗುರುತಿಸಿ ನಿರ್ಮೂಲನ ಮಾಡುವ  ಕಾರಣವಾಗಿರುವುದರಿಂದ ಇದನ್ನು ಕೈಬಿಡಲು ಅಥವಾ ಮರೆಮಾಚಲು ಸಹ ಸಮಿತಿಗೆ ಸಾಧ್ಯವಾಗುವುದಿಲ್ಲ.

ಸಮಾನತೆ ಇಲ್ಲದೆಡೆಯಲ್ಲಿ ಸಮಾನ ಅವಕಾಶಗಳು ಇರಲಾರವು.  ಹುಟ್ಟಿನ ಮೂಲದ ಆಧಾರದ ಮೇಲೆ ಸಮಾನ ಅವಕಾಶಗಳಿಂದ ವಂಚಿತರಾದವರು ಮಾನವ ಹಕ್ಕುಗಳ ವಂಚಿತರು ಅಷ್ಟೇ ಅಲ್ಲ, ದೌರ್ಜನ್ಯಕ್ಕೆ ಒಳಗಾದವರೂ ಆಗಿರುತ್ತಾರೆ.  ಆದ್ದರಿಂದ ವಿಶ್ವಸಂಸ್ಥೆಯ ನಿಲುವನ್ನು ಒಪ್ಪಲೇ ಬೇಕಾಗುತ್ತದೆ.  ಜಾತಿಭೇದ ನೀತಿಯನ್ನು ಖಂಡಿಸಲೇಬೇಕಾಗುತ್ತದೆ.  ಇದನ್ನು ಭಾರತ ಅರಿಯಬೇಕಾಗಿದೆ. 2001 ರಲ್ಲಿ ದರ್ಬಾನ್‍ನಲ್ಲಿ ನಡೆದ ಜನಾಂಗೀಯ ಮತ್ತು ಇತರ ಭೇದ ನೀತಿ ಕುರಿತ ವಿಶ್ವ ಸಮ್ಮೇಳನದಲ್ಲಿ  ಶ್ರುತಪಡಿಸಿದ  ಡರ್ಬಾನ್  ಪ್ರಕಟಣೆಯ ಕಾರ್ಯಸೂಚಿಯಲ್ಲಿದು ಸ್ಪಷ್ಟವಾಗಿದೆ. 2001 ರ ಡರ್ಬಾನ್  ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ಚರ್ಚೆಗೆ ತರಲು ಸಾಧ್ಯವಾಗಲಿಲ್ಲ.  ಆದರೂ ಅದು  ದಲಿತರು ನಡೆಸಿದ ಸಂಘಟಿತ ಒತ್ತಡ ತಂತ್ರದಿಂದ  ಅನುವಂಶೀಯ ವೃತ್ತಿ ತಾರತಮ್ಯ ಎಂಬ ಹೆಸರಿನಲ್ಲಿ ತುಸು ಚರ್ಚೆಗೊಳಾಯಿತು. ಈಗ ಚರ್ಚೆ ಗೆತ್ತುಕೊಂಡಿರುವುದು ಅದರ ಅನುಸರಣಾ ವರದಿ.

ಶೌಚಾಲಯದ ಮುರುಕು ಗೋಡೆಯ ಇಟ್ಟಿಗೆಯ ಚೂರು:

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವಿ ಪಿಳ್ಳೆ, ತಮಿಳು ಮೂಲದ ದಕ್ಷಿಣ ಆಫ್ರಿಕಾದವರು. ಅವರಿಗೆ ಜಾತಿಪದ್ಧತಿಯ ಉಪದ್ರವಗಳು ಮತ್ತು ದಕ್ಷಿಣ ಏಷಿಯಾ ದೇಶಗಳ ಸಾಮಾಜಿಕ ನೀತಿ ಚೆನ್ನಾಗಿ ತಿಳಿದಿದೆ. ಅವರು ಠರಾವಿಗೆ ಬೆಂಬಲ ನೀಡಿದ  ನೇಪಾಳದ ವಿದೇಶಾಂಗ ಸಚಿವರನ್ನು ಅಭಿನಂದಿಸಿ ಇದು ಜಾತಿಪದ್ಧತಿಯ ಸಮಸ್ಯೆಗಳನ್ನು ಸ್ವತಃ  ಹೊತ್ತಿರುವ ದೇಶ ಇಟ್ಟ ಮಹತ್ವದ ಹೆಜ್ಜೆ, ಇದನ್ನು ಇತರರು ಪಾಲಿಸಬೇಕು ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಅಂತಃ ಸತ್ವವೆಂದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆ ಮತ್ತು  ಸಮಾನ ಅವಕಾಶಗಳು ಇರುವಂತೆ ನೋಡಿಕೊಳ್ಳುವುದು. ಜಾತಿಪದ್ಧತಿ ಈ ಮೂಲ ಹಕ್ಕುಗಳನ್ನೆ ನಿರಾಕರಿಸುತ್ತದೆ. ಆದ್ದರಿಂದ ಅದು ಮಾನವ ಹಕ್ಕಿನ ಉಲ್ಲಂಘನೆಯ ಪರಿಧಿಯೊಳಗೆ ಬರುತ್ತದೆ. ವಿಶ್ವಸಂಸ್ಥೆಯ ಜನಾಂಗೀಯ ಭೇದ ವಿನಾಶ ಸಮಿತಿ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ನವಿ ಪಿಳ್ಳೆ ‘ಜಾತಿ ಎಂಬ ನಾಚಿಕೆಗೇಡು ಪರಿಕಲ್ಪನೆಯನ್ನು ನಾಶ ಮಾಡುವ ಕಾಲ ಕೂಡಿಬಂದಿದೆ’ ಎಂದು ಆವೇಶ ಭರಿತರಾಗಿ ಹೇಳುತ್ತಾರೆ. ಇದಕ್ಕೆ ಕಾರಣ ಜಾತಿಯಿಂದ ನೊಂದ ಕೆಲವು ಜನರು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮುರಿದು ಬಿದ್ದ ಶೌಚಾಲಯದ ಗೋಡೆಯ ಇಟ್ಟಿಗೆಯ ಚೂರೊಂದನ್ನು ಕೊಟ್ಟರಂತೆ.  ಆ ಇಟ್ಟಿಗೆ ಚೂರು ಬರಿಗೈಯಲ್ಲಿ ಕಕ್ಕಸು ತೊಳೆಯುವ ಕೆಳಜಾತಿ ಜನರ ಜಾಗತಿಕ ಹೋರಾಟದ ಸಂಕೇತವಾಗಿ ಅವರಿಗೆ ಕಂಡಿತಂತೆ.  ಇದು ಆ ಜನ ತಾವು ಬಯಸಿ ಮಾಡುತ್ತಿರುವುದಲ್ಲ.  ಕೆಳಜಾತಿಯ ಹುಟ್ಟಿನ ಕಾರಣದಿಂದ ಮಾಡುತ್ತಿರುವುದು. ಅದನ್ನು ತಮ್ಮ  ಪೂರ್ವಜರಿಂದ ಬಳುವಳಿಯಾಗಿ  ಪಡೆದದ್ದು, ಈ ಕಾರಣಕ್ಕಾಗಿಯೆ ಜೀವನ ಪರ್ಯಂತ ‘ಮೈಲಿಗೆ’ ಅನುಭವಿಸುತ್ತಿರುವುದು ಮತ್ತು ಹೊರಗೆ ಹಾಕಲ್ಪಟ್ಟು  ಮುಟ್ಟಿಸಿಕೊಳ್ಳಬಾರದವರಾಗಿರುವುದು.

ಕಾಂಗ್ರೆಸ್‍ನ ಯುವ ನೇತಾರ ಚುನಾವಣೆಗಳ ಗೆಲುವಿನ ಶಿಲ್ಪಿ ಎಂದೇ ಖ್ಯಾತರಾಗಿರುವ  ರಾಹುಲ್ ಗಾಂಧಿ ಇತ್ತೀಚೆಗೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.  ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಇಡೀ ಪಕ್ಷದ ಜನ ಪ್ರತಿನಿಧಿಗಳಿಗೆ ರಾಜ್ಯಾದಾದ್ಯಂತ ಹಳ್ಳಿಗಳ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು  ಕರೆ ನೀಡಿದ್ದರು. ಅದು ವಿಫಲವಾಯಿತೆಂಬುದು ಬೇರೆ ಮಾತು.  ಆದರೆ ಅವರ ಉದ್ದೇಶ ಮತ್ತು ದಲಿತರ ಬಗೆಗೆ ತೋರುತ್ತಿರುವ ಕಳಕಳಿ ಅವರ ವೈರಿಗಳ ಪ್ರಶಂಸೆಯನ್ನು ಗಳಿಸುತ್ತಿದೆ. ಅವರೊಮ್ಮೆ ಭಾರತಕ್ಕೆ ಹಲವು ಸಲ ಭೇಡಿ ನೀಡಿದ್ದ ಇಂಗ್ಲೆಂಡಿನ ಪತ್ರಕರ್ತ ಮಿತ್ರರೊಬ್ಬರನ್ನು ಉತ್ತರ ಪ್ರದೇಶದ ಹಳ್ಳಿಯೊಂದಕ್ಕೆ ಕರೆದೊಯ್ದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಆ ಮಿತ್ರರು ಈ ಭಾರತದ ಪರಿಚಯವೇ ನನಗಿರಲಿಲ್ಲ ಎಂದು ಉದ್ಗರಿಸಿದ್ದರು! ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರಿಗೆ ದಲಿತೋದ್ಧಾರದ ನೈಜ ಕಳಕಳಿ ಇದ್ದಲ್ಲಿ ವಿಶ್ವಸಂಸ್ಥೆಯ ಠರಾವನ್ನು ಬೆಂಬಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಸಂಸ್ಕೃತಿಯ ಕುರೂಪತೆಯನ್ನು ತೊಡೆದು ಹಾಕಲು ರಾಜಕೀಯ ಬೆರೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಾಗಿ ಉಳಿದರೆ ಜಾತಿ ನಾಶವಾಗಲಾರದು. 1936 ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‌‌‌‌‌‌ರವರು ಲಾಹೋರ್‌‌‌‌‌‌‌ನಲ್ಲಿ  ‘ಜಾತ್ ಪಾತ್ ತೋಡಕ್ ಸಮಿತಿ’ ಏರ್ಪಡಿಸಿದ್ದ ಸಭೆಗಾಗಿ ಸಿದ್ಧಪಡಿಸಿದ  ಜಾತಿ ವಿನಾಶ ಕುರಿತ ಐತಿಹಾಸಿಕ ಭಾಷಣ ಹಿಂದೂ ಮುಖಂಡರುಗಳನ್ನು ತಲ್ಲಣಗೊಳಿಸಿತು. ಅದು ದಲಿತೇತರ ಹಿಂದುಗಳನ್ನು  ಕುರಿತು ಬರೆದ ಭಾಷಣ.  ಗಾಂಧೀಜಿಯವರು ಸಹ ಜಾತಿ ಭೇದವನ್ನು ಅಳಿಸಲು ಮೇಲುಜಾತಿಯ ಮನಸ್ಸುಗಳ ಬದಲಾವಣೆಯನ್ನು ಬಯಸಿದ್ದರು.  ಆದ್ದರಿಂದ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿ ಜನರವರೆಗೆ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆಯ ನಾಶ ಸಾಧ್ಯವಾಗಬಹುದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

ಕರಾವಳಿಯಲ್ಲಿ ಗೋಸಂರಕ್ಷಣೆ ಮತ್ತು ದೇಶಸೇವೆ

 -ಪ್ರಸಾದ್ ರಕ್ಷಿದಿ

*ಒಂದು*

ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡಿನ ಒಂದು ಹಳ್ಳಿ. ಮುಖ್ಯರಸ್ತೆಯ ಬದಿಯಲ್ಲಿ ಒಂದು ಬಸ್ ಸ್ಟಾಪ್. ಕತ್ತಲಾವರಿಸುವ ಹೊತ್ತು. ತಾಲೂಕು ಕೇಂದ್ರದಿಂದ ಆ ಮಾರ್ಗವಾಗಿ ಸಾಗುವ ಆ ದಿನದ ಕೊನೆಯ ಬಸ್ ಬಂದು ನಿಲ್ಲುತ್ತದೆ. ಸುಮಾರು ಇಪ್ಪತ್ತು ವಯಸ್ಸಿನ ಕುರುಚಲು ಗಡ್ಡದ ತರುಣನೊಬ್ಬ ಕಪ್ಪು ಬಣ್ಣದ ಬ್ಯಾಗೊಂದನ್ನು ಹೆಗಲಿಗೆ ನೇತುಹಾಕಿಕೊಂಡು ಬಸ್ಸಿನಿಂದ ಇಳಿಯತ್ತಾನೆ. ಆ ಊರಿಗೆ ಅಪರಿಚಿತನಂತೆ ಕಾಣುವ ಆತ ಯಾರನ್ನೋ ಹುಡುಕುವವನಂತೆ ಅತ್ತಿತ್ತ ನೋಡುತ್ತ ಬಸ್ಸ್‌ಸ್ಟಾಪ್‌ನಲ್ಲಿ ನಿಲ್ಲುತ್ತಾನೆ. ಒಂದೆರಡು ಕ್ಷಣಗಳಲ್ಲಿ ನಾಲ್ಕಾರು ಜನರ ಗುಂಪೊಂದು ಅವನತ್ತ ಬರುತ್ತದೆ. ಅವರಲ್ಲೊಬ್ಬ ದಾಂಡಿಗನಿದ್ದಾನೆ. ಎಲ್ಲರೂ ಆಗಂತುಕ ತರುಣನನ್ನು ಸುತ್ತುವರಿದು ನಿಲ್ಲುತ್ತಾರೆ.

ದಾಂಡಿಗ: ಏಯ್ ..ಯಾರು ನೀನು..?

ತರುಣ: ನಾನು… ಇಲ್ಲಿ ..ಫ್ರೆಂಡ್ ಮನೆಗೆ ಬಂದಿದ್ದೇನೆ.

ದಾಂಡಿಗ: ಯಾರವನು ನಿನ್ನ ಗೆಳೆಯ..

ತರುಣ: ಅದು.. ಅವರು ನನ್ನ ಫ್ರೆಂಡಿನ ಫ್ರೆಂಡು. ನನ್ನನ್ನು ಕರೆದೊಯ್ಯಲು ಇಲ್ಲಿಗೆ ಈಗ ಬರ್ಬೇಕಿತ್ತು, ನಾನು ಕಾಯ್ತಿದ್ದೇನೆ.

ದಾಂಡಿಗ: ಇಲ್ಲಿ ಎಲ್ಲರೂ ಹಾಗೇ ಬರುವುದು, ನಿನ್ನ ಹೆಸರೇನು? ಯಾರವನು ನಿನ್ನ ಫ್ರೆಂಡು ಅವ್ನ ಹೆಸರೇನು?

ತರುಣ: (ಗಾಬರಿಯಾಗಿದ್ದಾನೆ) ಅವ್ನ ಹೆಸರು ಕೃಷ್ಣ ಅಲ್ಲ ಹಾಗೇನೋ ಹೆಸರು..ಸರೀ ಗೊತ್ತಿಲ್ಲ,,

ಇನ್ನೊಬ್ಬ: (ದಾಂಡಿಗನನ್ನುದ್ದೇಶಿಸಿ) ಅಣ್ಣ ..ಪಾಪ ಇವನಿಗೆ ಫ್ರೆಂಡಿನ ಹೆಸರೂ ಗೊತ್ತಿಲ್ಲ… ಪಾಪ ತೊಟ್ಟಿಲ ಮಗು…!

ತರುಣ: ಸ್ವಲ್ಪ ನಿಲ್ಲಿ ಅವರೇ ಬರಬಹುದು ಈಗ, ನಾನು ರೀಸರ್ಚ್ ಸ್ಟೂಡೆಂಟು..

ದಾಂಡಿಗ: ಅವರು ಅಂದ್ರೆ ಯಾರೂ .. ನಿನ್ನ ತಂಡದವರೋ.. ಎಲ್ಲ ಕಳ್ಳರು, ದೇಶದ್ರೋಹಿಗಳು. ಎಲ್ಲಿ ನಿನ್ನ ಚೀಲ ತೆಗಿ.. ಯಾರವ ನಿನ್ನ ಫ್ರೆಂಡು ಬೇಗ ಬೊಗಳು..

ತರುಣ: (ಇನ್ನೂ ಗಾಬರಿಯಿಂದ) ನಿಲ್ಲಿ ಫೋನ್ ಮಾಡ್ತೇನೆ.. ಅಯ್ಯೊ ಇಲ್ಲಿ ರೇಂಜಿಲ್ಲ… (ಅಷ್ಟರಲ್ಲಿ ಒಬ್ಬ ಮೊಬೈಲ್ ಕಿತ್ತುಕೊಳ್ಳುತ್ತಾನೆ, ತರುಣ ಪ್ರತಿಭಟಿಸುತ್ತಿದ್ದಂತೆ ಎಲ್ಲರೂ ಸೇರಿ ಅವನಿಗೆ ಹೊಡೆಯತ್ತಾರೆ. ತರುಣ ಕುಸಿದು ಬಸ್ಟಾಪಿನಲ್ಲಿ ಕೂರುತ್ತಾನೆ, ಕತ್ತಲಾಗಿದೆ. ಅಷ್ಟರಲ್ಲಿ ಸ್ಕೂಟರೊಂದು ಬರುತ್ತದೆ. ಅದರಲ್ಲಿ ಬಂದ ವ್ಯಕ್ತಿ ಯಾರನ್ನೋ ಹುಡುಕುತ್ತಾನೆ.)

ಗುಂಪಿನವನೊಬ್ಬ: (ಸ್ಕೂಟರಿನವನ ಗುರುತು ಹಿಡಿದು) ಏನು ಕೇಶವಣ್ಣ?

ಕೇಶವ: ನನ್ನ ಫ್ರೆಂಡೊಬ್ಬರು ಅವರ ಕಡೆಯ ಸ್ಟೂಡೆಂಟ್ ಒಬ್ಬರನ್ನು ಕಳಿಸ್ತೇನೆ ಅಂತ ಹೇಳಿದ್ರು ,ಬಸ್ ಹೋಗಿರ್ಬೇಕು. ನಾನು ಬರುವಾಗ ಸ್ವಲ್ಪ ತಡವಾಯ್ತು..

ಮತ್ತೊಬ್ಬ: ಇಲ್ಲಿ ಒಬ್ಬ ಇದ್ದಾನೆ ಇವನೋ ನೋಡಿ.

ಕೇಶವ:  (ಕೇಶವ ತರುಣನನ್ನು ನೋಡುತ್ತಾನೆ, ಅವನ ಬಟ್ಟೆ ಹರಿದಿದೆ ಮುಖಕ್ಕೆಲ್ಲ ಪೆಟ್ಟಾಗಿದೆ.) ಅಯ್ಯಯ್ಯೋ ಹೌದು ಇವರೇ… ಇದೆಲ್ಲ ಏನು..

ದಾಂಡಿಗ: ಏನಿಲ್ಲ ಕೇಶವಣ್ಣ, ಅವ ಕೇಳಿದ್ದಕ್ಕೆ ಒಂದಕ್ಕೂ ಸರಿಯಾಗಿ ಉತ್ತರ ಕೊಡ್ಲಿಲ್ಲ.. ಕಳ್ಳ ಕಳ್ಳನ ಹಾಗೆ ಆಡಿದ, ಹುಡುಗ್ರು ಒಂದೆರಡು ಏಟು ಕೊಟ್ಟರು ಅಷ್ಟೆ.. ನಮಗೇನುಗೊತ್ತು? ಅವನಿಗೆ ಬಾಯಿರಲಿಲ್ಲವೋ..

ತರುಣ: ನೋಡಿ ನನಗೆ ಸರಿಯಾಗಿ ಮಾತಾಡೋಕೆ ಇವರು..

ದಾಂಡಿಗ: ಹ್ಞೂಂ  ಸಾಕು.. ಇನ್ನೀಗ ಹೊರಡಿ..

ಕೇಶವ: (ತರುಣನಿಗೆ ಸುಮ್ಮನಿರುವಂತೆ ಕಣ್ಣಲ್ಲೇ ಸೂಚಿಸುತ್ತಾನೆ). ತಪ್ಪೆಲ್ಲಾ ನನ್ನದೇ. ನಾನು ಸರಿಯಾದ ಸಮಯಕ್ಕೆ ಬರ್ಬೇಕಿತ್ತು.. ಆದರೂ ನೀವು.. ಹೀಗೆ..

ದಾಂಡಿಗ : ಕೇಶವಣ್ಣ ನೀವು ಬೇಸರ ಮಾಡುವುದು ಬೇಡ..ನಿಮ್ಮ ಫ್ರೆಂಡಿಗೆ ಹೇಳಿ. ಅಂದ ಹಾಗೆ ಎಚ್ಚರ….. ಹ್ಞಾಂ.  ಇದನ್ನೇ ಒಂದು ದೊಡ್ಡ ವಿಷಯ ಅಂತ ಸುದ್ದಿ ಮಾಡ್ಬೇಡಿ. ದೇಶರಕ್ಷಣೆ ಅಂದರೆ ಸುಲಭದ ಮಾತಲ್ಲ…  ಹ್ಞೂಂ.. ಎಲ್ಲ ಹೊರಡಿ….

***

*ಎರಡು*

ರೈತರೊಬ್ಬರ ಮನೆ ಹಸುವೊಂದನ್ನು ಕೊಳ್ಳಲು ಗಿರಾಕಿಯೊಬ್ಬ ಬಂದಿದ್ದಾನೆ. ಹಸುವನ್ನು ನೋಡಿ ಮಾತಾಡಿ ವ್ಯಾಪಾರ ಕುದುರಿದೆ. ರೈತರು ಹಸುವನ್ನು ಎಂಟು ಸಾವಿರಕ್ಕಿಂತ ಕಡಿಮೆಗೆ ಕೊಡಲು ಒಪ್ಪುತ್ತಿಲ್ಲ.

ಗಿರಾಕಿ: ನೀವು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು. ನನಗೆ ಮನೆ ತಲಪುವಾಗ ಅದಕ್ಕೆ ಹತ್ತು ಸಾವಿರ ಬೀಳುತ್ತೆ.

ರೈತ:  ನೋಡಿ ನನಗೆ ಮಾರಬೇಕೆಂದೇನೂ ಇರಲಿಲ್ಲ. ನೋಡಿಕೊಳ್ಳಲು ಜನ ಇಲ್ಲ ಕೊಟ್ಟಿಗೆಯಲ್ಲಿ ಜಾಗ ಇಲ್ಲ.  ಅದಕ್ಕೆ ಕೊಡ್ತಾ ಇದ್ದೇನೆ. ಇಲ್ಲದಿದ್ದರೆ ಇಂಥಾ ಹಸುವನ್ನು ಹತ್ತು ಸಾವಿರಕ್ಕೆ ಕಮ್ಮಿ ನಾನು ಬಿಡುವವನೇ ಅಲ್ಲ.. ನಿಮಗೆ ಇಲ್ಲಿಂದ ಹದಿನೈದು ಕಿ.ಮೀ. ದೂರ ಇರವುದು. ಅದಕ್ಕೆಷ್ಟು ಖರ್ಚು ಬಂದೀತು?

ಗಿರಾಕಿ: ಸ್ವಾಮಿ ನಿಮಗೆ ಗೊತ್ತಿದ್ದೂ ಕೇಳುತ್ತೀರಿ ಈಗ ಹಸು ಸಾಗಣೆಗೆ ಕಷ್ಟ ಎಷ್ಟುಂಟು, ಪಂಚಾಯಿತಿಯಿಂದ ಒಪ್ಪಿಗೆ ಪತ್ರಬೇಕು, ಗೋಸಂರಕ್ಷಣೆಯವರನ್ನು ಕಾಣಬೇಕು, ಅವರು ಒಪ್ಪಬೇಕು. ಆಮೇಲೆ ವಾಹನದವರು, ಅವರಂತೂ ದನ ಸಾಗಿಸುವುದು ಅಂದರೆ ಸುಲಭದಲ್ಲಿ ಬರುವುದೇ ಇಲ್ಲ. ಇನ್ನು ಹೆಚ್ಚಿನ ಬಾಡಿಗೆ ವಾಹನಗಳೆಲ್ಲ ಇರುವುದು ಬ್ಯಾರಿಗಳದ್ದು, ಅವರಂತೂ ನಮಗ್ಯಾಕೆ ಇಲ್ಲದ ಉಸಾಬರಿ ಎಂದು ಹೆಚ್ಚಿಗೆ ಬಾಡಿಗೆ ಕೊಡುತ್ತೇನೆಂದರೂ ಹಸು ಸಾಗಿಸಲು ಬರುವುದಿಲ್ಲ. ಹಾಗಾಗಿ ಬಹಳ ಕಷ್ಟ.. ಸ್ವಾಮಿ

ರೈತ: ಅದಕ್ಕೆಲ್ಲ ನೀವು ಹೆದರ ಬೇಕಾಗಿಲ್ಲ, ನಿಮ್ಮ ಮನೆವರೆಗೆ ನಾನೇ ಬರುತ್ತೇನೆ, ಯಾರು ಏನು ಮಾಡ್ತಾರೆ?

ಗಿರಾಕಿ: ನೀವು ದೊಡ್ಡವರು, ನಿಮ್ಮನ್ನು ಹೇಗೆ ನಾನು ಕರೆಯಲಿ? ಆದರೆ ನೀವೇ ಜೊತೆಯಲ್ಲಿ ಬಂದರೆ ಒಳ್ಳೆಯದೇ ಆಯ್ತ..

ರೈತ: ಸರಿ ಹಾಗಾದರೆ ಹಸುವಿಗೆ ಹತ್ತು ಸಾವಿರ ಕೊಡ್ತೀರೋ?

ಗಿರಾಕಿ: ಸ್ವಾಮೀ ನೀವೇ ಮನೆವರೆಗೆ ಸಾಗಿಸಿಕೊಟ್ಟರೆ ಐನೂರು ಹೆಚ್ಚಿಗೆ ಸೇರಿಸಿ ಕೊಡ್ತೇನೆ. ಹೇಗೂ ಅವರಿವರಿಗೆ ಕೊಡುವ ಹಣ..

(ಪಂಚಾಯತ್ ಪರವಾನಿಗೆಯನ್ನು ಪಡೆದು ರೈತರು ಬಾಡಿಗೆ ವಾಹನ ಮಾತಾಡಿ ಸ್ವತಃ ಹಸುವಿನೊಂದಿಗೆ ಪ್ರಯಾಣಮಾಡಿ ಹದಿನೈದು ಕಿ.ಮೀ. ದೂರದ ಗಿರಾಕಿಯ ಮನೆಗೆ ತಲಪಿಸಿ ಬಂದರು.)

***

 *ಮೂರು*

(ಸಂಜೆ ರೈತರ ಮನೆಯ ಲ್ಯಾಂಡ್ ಫೋನು ರಿಂಗಾಯಿತು..ರೈತರು ಫೋನೆತ್ತಿದರು..)

ಹಲೋ.. ನಮಸ್ಕಾರ ನಾನು ಗೋರಕ್ಷಕದಳದ ಅಧ್ಯಕ್ಷ ಮಾತಾಡ್ತಾ ಇರೋದು…

ರೈತ: ನಮಸ್ಕಾರ…

ಗೋರಕ್ಷಕ : ಏನಿಲ್ಲಾ ಹೀಗೇ.. ನೀವು ನಿನ್ನೆ ಒಂದು ಹಸು ಮಾರಾಟ ಮಾಡಿದ್ರಂತೆ..

ರೈತ: ಮಾರಾಟ ಹೌದು ಅದು ನಿಜವಾದ ಅರ್ಥದಲ್ಲಿ ಮಾರಾಟ ಅಲ್ಲ.. ತುಂಬಾ ಕಡಿಮೆಗೆ ಕೊಟ್ಟೆ.. ಸಾಕುವುದಕ್ಕೆ ಕಷ್ಟ ಆಗ್ತಿತ್ತು. ಹಾಲು ಸ್ವಲ್ಪ ಕಡಿಮೆ ಆಗ್ತಾ ಇತ್ತು.

ಗೋರಕ್ಷಕ: ನೀವು ಕಡಿಮೆಗೆ ಕೊಡುವುದಾಗಿದ್ರೆ ಅದರ ಬದಲಿಗೆ ಮಠಕ್ಕೋ ಗೋಶಾಲೆಗೋ ಕೊಡಬಹುದಾಗಿತ್ತು. ನಿಮಗೇನು ಅದು ದೊಡ್ಡ ಹಣ ಅಲ್ಲ, ಅಲ್ಲದೇ ಪುಣ್ಯದ ಕೆಲಸ, ನೀವೇ ಹೋಗಿ ಗಿರಾಕಿಯ ಮನೆಗೆ ತಲುಪಿಸಿ ಬಂದಿರಂತೆ?

ರೈತ:  ಹೌದು  ಅವರಿಗೆ ಸಾಗಿಸಲು ಧೈರ್ಯವೇ ಇಲ್ಲ. ಹಾಗಾಗಿ ನಾನೇ ಹೋಗಬೇಕಾಯ್ತು.

ಗೋಕರಕ್ಷಕ: ನಿಮ್ಮ ಮುನ್ನೆಚ್ಚರಿಕೆ ಮೆಚ್ಚುವಂಥಾದ್ದೇ.. ಇರಲಿ … ಅಲ್ಲ ಕೆಲವುಸಾರಿ ಹೆಸರು ಸುಳ್ಳುಹೇಳಿಕೊಂಡು ಬ್ಯಾರಿಗಳು ವ್ಯಾಪಾರಕ್ಕೆ ಬರ್ತಾರೆ. ಅಲ್ಲ ನೀವು ಅಂತವರಿಗೆಲ್ಲ ಕೊಡುವವರಲ್ಲ ನಮಗೆ ಗೊತ್ತು. ಆದರೂ ಎಚ್ಚರಿಕೆಗೆ ಹೇಳಿದ್ದು.

ರೈತ: ಅದು ಹಾಗಲ್ಲ, ಈಗ ವಾಹನದವರೂ ಸಾಗಿಸಲು ಒಪ್ಪುತ್ತಿಲ್ಲ.

ಗೋರಕ್ಷಕ: ಹೌದು ಈಗ ನಾವು ಎಚ್ಚರಗೊಂಡಿದ್ದೇವೆ. ನಮ್ಮ ಕಣ್ಣು ತಪ್ಪಿಸುವುದು ಸುಲಭವಲ್ಲ. ಈಗ ನೀವೇ ಹೋದಿರಲ್ಲ ಆ ವ್ಯಾನಿನವನೂ ನನಗೆ ಮುಂಚಿತವಾಗಿ ಫೋನ್ ಮಾಡಿ ಒಪ್ಪಿಗೆ ಪಡೆದಿದ್ದ, ನೀವು ಎಂಟು ಸಾವಿರದ ಐನೂರಕ್ಕೆ ಕೊಟ್ಟದ್ದಲ್ಲವೋ ಹಸುವನ್ನು ..ಹ..ಹಹ್ಹ…ಹ್ಹಾ…

ರೈತ: ನಿಮಗೆ ಎಲ್ಲ ವಿವರ ಗೊತ್ತುಂಟು…

ಗೋರಕ್ಷಕ: ನಾವು ಹಾಗೇ ಸ್ವಾಮಿ, ರಕ್ಷಣೆ ಅಂದರೆ ಸುಲಭದ ಮಾತೇ..? ಅದಿರಲಿ, ನಾನೀಗ ಫೋನ್ ಮಾಡಿದ್ದು ಯಾಕಂದ್ರೆ ನಿಮ್ಮಲ್ಲಿ ಇನ್ನೂ ಒಂದೆರಡು ಮುದಿ ಹಸುಗಳು ಇದೆಯಲ್ಲ, ನಾವೀಗ ನಮ್ಮ ತಾಲೂಕಿನಿಂದ ಎಲ್ಲ ಮುದಿ ಜಾನುವಾರನ್ನೂ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ಈಗಾಗಲೇ ನಮ್ಮ ಕರಾವಳಿಯ ಗೋಶಾಲೆಗಳೆಲ್ಲ ಭರ್ತಿಯಾಗಿವೆ, ಹಾಗಾಗಿ ನಾವೀಗ ಘಟ್ಟದ ಮೇಲಿನ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ನೋಡಿ ರಾಮಣ್ಣ ಗೌಡ್ರಲ್ಲಿ ಎರಡು ಉಂಟು, ಪಟೇಲ್ರು ಒಂದು ಹೋರಿ ಕೊಡುತ್ತಿದ್ದಾರೆ, ಸೀನಪ್ಪಣ್ಣನಲ್ಲಿಂದ ಮೂರು ಹೀಗೆ.. ನೀವೇ ವಿಚಾರಿಸಿಕೊಳ್ಳಿ.. ಘಟ್ಟದ ಗೋಶಾಲೆ ಆದ್ರಿಂದ ಸ್ವಲ್ಪ ಸಾಗಾಣಿಕೆ ಖರ್ಚು ನೀವೂ ಕೊಡ್ಬೇಕು. ಒಂದು ಜಾನುವಾರಿಗೆ ಐನೂರು ಕೊಡಿ ಸಾಕು. ಇಲ್ಲೇ ಆಗಿದ್ರೆ ನಾವೇ ಕೈಯಿಂದ ಹಾಕ್ತಿದ್ದೆವು. ಮುಂದಿನ ವಾರ ಲಾರಿ ಬರುವ ಮುಂಚೆ ಫೋನ್ ಮಾಡ್ತೇನೆ. ಇನ್ನು ಯಾವುದನ್ನೂ ಮಾರುವ ಯೋಚನೆ ಇಲ್ವಲ್ಲ ನಿಮಗೆ.. ಹಾಗೆ  ..ಮಾರಿದರೂ ನಮ್ಮ ಹುಡುಗರೇ ಸಾಗಿಸಬೇಕಲ್ಲಾ… ಹಹ್ಹಹ್ಹಾ…… ನಿಮ್ಮಲ್ಲಿಂದ ಎರಡು ಹಸು ಅಂತ ಬರ್ಕೊಂಡಿದ್ದೇನೆ…

ನಮಸ್ಕಾರ…

***

*ನಾಲ್ಕು*

ಮುಂದಿನ ಒಂದು ವಾರದಲ್ಲಿ ರೈತರ ಮನೆಯಂಗಳದಲ್ಲಿ ಗೋರಕ್ಷಕದಳದವರ ಲಾರಿಬಂದು ನಿಂತಿತು. ರೈತರು ಎರಡು ಮುದಿಹಸುಗಳನ್ನೂ ಲಾರಿಗೆ ಹತ್ತಿಸಿ ಒಂದುಸಾವಿರ ರೂಪಾಯಿ ಸಾಗಾಣಿಕೆ ಖರ್ಚು ನೀಡಿದರು. ಲಾರಿ ಡ್ರೈವರ್ ಹದಿನೈದು ವರ್ಷಗಳ ಹಿಂದೆ ಅವರದೇ ಊರಿನಲ್ಲಿ ಕೂಲಿ ಮಾಡುತ್ತಿದ್ದ ತನಿಯಪ್ಪನ ಮಗ ಸುಂದರ. ಅವನೇ ಗುರುತು ಹಿಡಿದು ರೈತರನ್ನು ಮಾತಾಡಿಸಿದ. ಲಾರಿಯಲ್ಲಿ ಆಗಲೇ ನಾಲ್ಕೈದು ಜಾನುವಾರುಗಳಿದ್ದವು. ಎಲ್ಲವನ್ನೂ ತುಂಬಿಕೊಂಡು ಲಾರಿ ಮುಖ್ಯ ರಸ್ತೆಯನ್ನು ಹಾದು ಹೈವೇಯತ್ತ ಚಲಿಸಿತು. ನಾಲ್ಕಾರು ಜನ ರೈತರು ಪುಣ್ಯ ಕಟ್ಟಿಕೊಂಡೆವೆಂದೋ ಮುದಿ ಹಸುಗಳನ್ನು ವಿಲೇವಾರಿಯಾದವೆಂದೋ ಹಗುರಾದರು.

ತಿಂಗಳ ನಂತರ ಪೇಟೆಯ ಹೋಟೆಲಿನಲ್ಲಿ ಕಾಫಿ ಕುಡಿಯುವಾಗ ರೈತರಿಗೆ ಲಾರಿ ಚಾಲಕ ಸುಂದರ ಕಾಣಸಿಕ್ಕಿದ. ತಮ್ಮೂರ ಹುಡುಗನೆಂಬ ಪ್ರೀತಿಯಿಂದ ರೈತರು ಮಾತಾಡಿಸಿದರು. ಅವತ್ತು ಯಾವ ಗೋಶಾಲೆಗೆ ಹಸುಗಳನ್ನು ಬಿಟ್ಟಿರಿ ಎಂದು ವಿಚಾರಿಸಿದರು. ಅದಕ್ಕೆ ಸುಂದರ ಕೊಟ್ಟ ಉತ್ತರ ಹೀಗಿತ್ತು. “ಅದು ನಾನು ಖಾಯಂ ಓಡಿಸುವ ಲಾರಿ ಅಲ್ಲಣ್ಣ.. ನಾನು ಅವತ್ತು ಟೆಂಪರರಿ, ಕೇರಳ ಗಡಿವರೆಗೆ ಮಾತ್ರ ನಾನು ಓಡಿಸಿದೆ. ನಂತರ ಡ್ರೈವರ್ ಬದಲಾದರು.ನನಗೆ ಒಂದು ಸಾವಿರ ಕೊಟ್ಟರು. ನಾನು ಬಸ್ಸಿನಲ್ಲಿ ವಾಪಸ್ ಬಂದೆ. ಯಾರಿಗೂ ಹೇಳ್ಬೇಡಿ.. ಬಡವ ಬದುಕ್ಬೇಕು…”

*** 

[ಇದು ಕತೆಯಲ್ಲ, ನಾಟಕದ ದೃಶ್ಯಗಳೂ. ಅಲ್ಲ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ನಡೆಯತ್ತಿರುವ ನಿಜ ಘಟನೆಗಳನ್ನು ಆಧರಿಸಿದ ಸಂಗತಿಗಳು.]