ವೀರಪ್ಪನ್ ಅಟ್ಟಹಾಸ ಮತ್ತು ಎಎಂಆರ್ ರಮೇಶ್

-ಬಸವರಾಜು

ವೀರಪ್ಪನ್… ಹೆಸರೇ ವಿಚಿತ್ರ. ವ್ಯಕ್ತಿಯೂ ವಿಚಿತ್ರ. ನಾವು ನಾಡಿನಲ್ಲಿರಲು ಬಯಸಿದರೆ, Veerappanಈತ ಕಾಡಿನಲ್ಲಿ ಕಣ್ಮರೆಯಾಗಲು ಕಾತರಿಸುತ್ತಿದ್ದ. ಕರ್ನಾಟಕ, ತಮಿಳುನಾಡು, ಕೇರಳದ ದಟ್ಟ ಕಾಡುಗಳನ್ನೇ ತನ್ನ ಕಾರಾಸ್ಥಾನವನ್ನಾಗಿಸಿಕೊಂಡಿದ್ದ. ಕೋಟ್ಯಂತರ ರೂಪಾಯಿಗಳ ಕಾಡಿನ ಸಂಪತ್ತನ್ನು ಲೂಟಿ ಮಾಡುತ್ತಿದ್ದ. ತನ್ನ ದಾರಿಗೆ ಅಡ್ಡ ಬಂದ 184ಕ್ಕೂ ಹೆಚ್ಚು ಜನರನ್ನು ಕ್ರೂರವಾಗಿ ಕೊಂದಿದ್ದ. ಕಾಯ್ದೆ, ಕಾನೂನು, ಕಟ್ಟುಪಾಡುಗಳು ನನಗಲ್ಲ ಎನ್ನುತ್ತಿದ್ದ. ತಲೆಗೆ ಐದು ಕೋಟಿ ಬಹುಮಾನ ಘೋಷಿಸುವಷ್ಟು ಭಯಂಕರ ವ್ಯಕ್ತಿಯಾಗಿ ಬೆಳೆದಿದ್ದ. ಕಾಡಿನ ಅಂಚಿನಲ್ಲಿ ವಾಸಿಸುವ ಜನಗಳಿಗೆ ರಾಬಿನ್ ವುಡ್ ಥರ ಕಾಣುತ್ತಿದ್ದ. ತಮಿಳು ಭಾಷೆ ಬಲ್ಲವನಾಗಿದ್ದರಿಂದ ತಮಿಳರಿಗೆ ಹೀರೋ, ಕನ್ನಡಿಗರಿಗೆ ವಿಲನ್ ಆಗಿದ್ದ. ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿ, 109 ದಿನ ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದ. ಹಿಡಿಯಲು ಹೋದ ಪೊಲೀಸಿನವರ ಪಾಲಿಗೆ ದುಃಸ್ವಪ್ನವಾಗಿದ್ದ. 20 ವರ್ಷಗಳ ಕಾಲ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ತಲೆನೋವಾಗಿದ್ದ. ನಕ್ಕಿರನ್ ಗೋಪಾಲನ್, ನೆಡುಮಾರನ್ ಗಳಿಗೆ ಮಿತ್ರನಾಗಿದ್ದ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಅನುಕೂಲಕ್ಕೊದಗುವ ಆಪ್ತನಾಗಿದ್ದ. ಪತ್ರಕರ್ತರ ಸ್ಟೋರಿಗೆ ಸಾಲಿಡ್ ಸ್ಪಫ್ ಆಗಿದ್ದ. 52 ವರ್ಷ ಬದುಕಿದ್ದು, ಅಕ್ಟೋಬರ್ 18, 2004ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಇಂತಹ ವೀರಪ್ಪನ್‍ನನ್ನು ಖುದ್ದಾಗಿ ಕಂಡವರು ಎಷ್ಟು ಜನ?

ಈ ಕಾರಣಕ್ಕಾಗಿಯೇ ವೀರಪ್ಪನ್ ಎಂದರೆ ಕುತೂಹಲದ ಕಡಲು. ಇದನ್ನು ಅರಿತಿರುವ ನಿರ್ದೇಶಕ ಎಎಂಆರ್ ರಮೇಶ್, attahasa-rameshವೀರಪ್ಪನ್‌ನನ್ನು ಮುಖ್ಯ ಭೂಮಿಕೆಯಲ್ಲಿಟ್ಟು `ಅಟ್ಟಹಾಸ’ ಎಂಬ ಚಿತ್ರ ನಿರ್ಮಿಸಿದ್ದಾರೆ. ಸುಮಾರು ಹನ್ನೆರಡು ವರ್ಷಗಳ ಕಾಲ, ಇನ್ನೂರೈವತ್ತಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿ ವೀರಪ್ಪನ್ ಬಗೆಗಿನ ಮಾಹಿತಿಯನ್ನು ಕಲೆಹಾಕಿದ್ದಾರೆ. ವೀರಪ್ಪನ್ ಜೊತೆಗಿದ್ದವರನ್ನೇ ಚಿತ್ರಕ್ಕೆ ದುಡಿಸಿಕೊಂಡು ಅಥೆಂಟಿಸಿಟಿ ತಂದಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಕೆಂಪಯ್ಯ ಮತ್ತು ಗೋಪಾಲ್ ಹೊಸೂರ್ ಅವರ ಬಳಿಯಿದ್ದ ಮಹತ್ವಪೂರ್ಣ ಮಾಹಿತಿಯನ್ನು ಪಡೆದು ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ವೀರಪ್ಪನ್ ಓಡಾಡಿದ ಜಾಗಗಳಲ್ಲೇ ಚಿತ್ರೀಕರಿಸಿ, ಚಿತ್ರಕ್ಕೆ ಜೀವ ತುಂಬಿದ್ದಾರೆ. ವೀರಪ್ಪನ್ ಪಾತ್ರಕ್ಕೆ ಕನ್ನಡದ ಕಿಶೋರ್‌ರನ್ನು ಆಯ್ಕೆ ಮಾಡಿದ್ದಾರೆ. ಒಂಟಿಗಣ್ಣಿನ ಹಂತಕ ಶಿವರಾಸನ್ ಕುರಿತ `ಸೈನೈಡ್’ ಚಿತ್ರದ ನಂತರ ನರಹಂತಕ ವೀರಪ್ಪನ್ ಕುರಿತ `ಅಟ್ಟಹಾಸ’ ಚಿತ್ರಕ್ಕೆ ಬರೋಬ್ಬರಿ ಏಳು ವರ್ಷಗಳನ್ನು ತೆಗೆದುಕೊಂಡಿದ್ದಾರೆ.

ವೀರಪ್ಪನ್ ಎಂದಮೇಲೆ ವಿವಾದಗಳಿಲ್ಲದಿದ್ದರೆ ಹೇಗೆ?

“ನನ್ನ ಪತಿಯನ್ನು ವಿಲನ್ ಮಾಡಿ, ರಾಜಕುಮಾರ್ ಅವರನ್ನು ಹೀರೋ ಮಾಡಲಾಗಿದೆ, ನನ್ನ ಮತ್ತು attahasa-veerappan-4ನನ್ನ ಮಕ್ಕಳ ಭವಿಷ್ಯದ ಬದುಕಿಗೆ ಈ ಚಿತ್ರ ತೊಂದರೆ ಕೊಡುತ್ತದೆ” ಎಂದು ತಗಾದೆ ತೆಗೆದಿದ್ದರು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ. “ವೀರಪ್ಪನ್‌ಗಿದ್ದ ಒಬ್ಬನೇ ಒಬ್ಬ ನಂಬಿಕಸ್ಥ ಸ್ನೇಹಿತ ನಾನು, ಚಿತ್ರದಲ್ಲಿ ನನ್ನ ಪಾತ್ರವೇನು?” ಎಂದಿದ್ದರು ನಕ್ಕಿರನ್ ಗೋಪಾಲನ್. “ನನ್ನ ಕತೆ ಕದ್ದು ಚಿತ್ರ ಮಾಡಲಾಗಿದೆ” ಎಂದಿದ್ದರು ಮೈಸೂರಿನ ಪತ್ರಕರ್ತ ಗುರುರಾಜ್. “ಅಪ್ಪಾಜಿಯನ್ನು ಚಿತ್ರದಲ್ಲಿ ಹೇಗೆ ಬಳಸಿಕೊಂಡಿದ್ದೀರಿ” ಎಂದಿತ್ತು ಡಾ. ರಾಜ್ ಕುಟುಂಬ.

30 ವರ್ಷಗಳಿಂದ ಡಾ. ರಾಜ್ ಅಭಿಮಾನಿ ಸಂಘದಲ್ಲಿರುವ, ಗೋಕಾಕ್ ಚಳುವಳಿಯಲ್ಲಿ ಗುರುತಿಸಿಕೊಂಡಿರುವ, ಮದ್ರಾಸ್ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಿಂದ ಚಿನ್ನದ ಪದಕ ಪಡೆದಿರುವ, `ಸೈನೈಡ್’, `ಪೊಲೀಸ್ ಕ್ವಾರ್ಟರ್ಸ್’ಗಳಂತಹ ಭಿನ್ನ ಆಯಾಮದ ಚಿತ್ರಗಳನ್ನು ಮಾಡಿ ಹೆಸರು ಮಾಡಿರುವ, ಪ್ರತಿಭಾವಂತ ನಿರ್ದೇಶಕ ಎಎಂಆರ್ ರಮೇಶ್, ಈ ಎಲ್ಲ ಪ್ರಶ್ನೆಗಳಿಗೆ, ಗೊಂದಲಗಳಿಗೆ, ವಿವಾದಗಳಿಗೆ ನೇರವಾಗಿ ಉತ್ತರಿಸಿದ್ದಾರೆ, ಓದಿ.

“ನನ್ನ `ಅಟ್ಟಹಾಸ’ ವೀರಪ್ಪನ್ ಬದುಕನ್ನು ಕುರಿತ ಚಿತ್ರ. ಇದು ರೆಗ್ಯುಲರ್ ಫಾರ್ಮ್ಯಾಟ್ ಚಿತ್ರವಲ್ಲ. attahasa-veerappan-2ಲವ್, ಸಾಂಗ್, ಡಾನ್ಸು, ರೊಮಾನ್ಸ್, ಸೆಂಟಿಮೆಂಟ್ಸ್, ಕಾಮಿಡಿ ಖಂಡಿತ ಇಲ್ಲಿಲ್ಲ.

“ವೀರಪ್ಪನ್‌ನನ್ನು ನಟೋರಿಯಸ್ ಅಂತಾರೆ, ಆದರೆ ಆತನಿಂದ ಡೈರೆಕ್ಟಾಗಿ ಯಾರಿಗೂ ತೊಂದರೆಯಾಗಿಲ್ಲ. ಪೊಲೀಸಿನವರಿಗೆ ತೊಂದರೆಯಾಗಿದೆ, ನಿಜ. ಆದರೆ ವನ್ನಿಯಾರ್ ಜನರ ಪಾಲಿಗೆ ಆತ ದೇವರ ಸಮ. ಆ ಊರಿಗೆ ಕುಡಿಯುವ ನೀರು ಬಂದಿದ್ದೆ ವೀರಪ್ಪನ್‌ನಿಂದ. ಆ ಜನಗಳಲ್ಲಿ, ಕಾಡಿನ ಸ್ವತ್ತನ್ನು ಲೂಟಿ ಮಾಡುತ್ತಿದ್ದಾನೆ, ನಮ್ಮದಲ್ಲವಲ್ಲ ಎಂಬ ಭಾವನೆ ಇದೆ. ಕಾಡು ಯಾರ ಸ್ವತ್ತು, ಅದನ್ನು ಕಾಪಾಡುವ ಜವಾಬ್ದಾರಿ ಯಾರದು? ನನ್ನ ಚಿತ್ರದಲ್ಲಿ ಇದೂ ಇದೆ.

“ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅಪಹರಣವಾದಾಗಲೇ ನಮಗೆ ಈತ ಡೇಂಜರಸ್ ಅನ್ನಿಸಿದ್ದು. ಅಲ್ಲಿಯವರೆಗೆ ಎಷ್ಟು ಪೊಲೀಸ್ ಅಧಿಕಾರಿಗಳನ್ನ, ಎಂಥೆಂಥವರನ್ನ ಕೊಂದಿದ್ದ? ರಾಜ್ ಅಪಹರಣವಾದಾಗ ಫಸ್ಟ್ ಟೈಮ್ ಕಾಡಿಗೆ ಹೋದವನೆ ನಾನು. ನೆಡುಮಾರನ್, ಕೊಳತ್ತೂರು ಮಣಿಯನ್ನು ಮೊದಲಿಗೆ ಭೇಟಿ ಮಾಡಿದವನೂ ನಾನೆ. ಅಲ್ಲಿಂದಲೇ ನನಗೆ ವೀರಪ್ಪನ್ ಬಗೆಗೆ ಆಸಕ್ತಿ ಬೆಳೆಯುತ್ತಾ ಹೋಯಿತು. ಅವನ ವಿವರಗಳ ಹುಡುಕಾಟಕ್ಕಾಗಿ 12 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವನನ್ನು ಬಲ್ಲ 200 ಜನರನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. attahasa-veerappan-1ರಾಜ್ ಅಪಹರಣ ಕಾರ್ಯದಲ್ಲಿ ಭಾಗಿಯಾಗಿದ್ದ ವೀರಪ್ಪನ್ ಬಂಟರಾದ ಮುಗಿಲನ್, ಪೆರುಮಾಳ್, ಸೆಲ್ವಂ ಹಾಗೂ ಕಾಡಿನಿಂದ ತಪ್ಪಿಸಿಕೊಂಡು ಬಂದು ಭಯಾತಂಕ ಸೃಷ್ಟಿಸಿದ್ದ ನಾಗಪ್ಪ ಮಾರಡಗಿ ಅವರನ್ನೇ ಚಿತ್ರದೊಳಗೆ ಪಾತ್ರಧಾರಿಗಳನ್ನಾಗಿ ಬಳಸಿಕೊಂಡಿದ್ದೇನೆ. ರಾಜ್ ಅಪಹರಣದ ಭಾಗ ನನಗಿಷ್ಟವಾದ್ದು. ಸುರೇಶ್ ಓಬೇರಾಯ್ ಅಣ್ಣಾವ್ರ ಪಾತ್ರಕ್ಕೆ ಜೀವ ತುಂಬಿದ್ದಾರೆ.

“ವೀರಪ್ಪನ್ ಚಿತ್ರ ಮೂರು ಭಾಷೆಗಳಲ್ಲಿ- ಕನ್ನಡ, ತಮಿಳು ಮತ್ತು ತೆಲುಗುಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮತ್ತು ತಮಿಳು ಭಾಷೆಗಾಗಿ ಬೇರೆ ಬೇರೆಯಾಗಿ ಚಿತ್ರೀಕರಿಸಲಾಗಿದೆ. ತಮಿಳಿನ ಚಿತ್ರವನ್ನು ತೆಲುಗಿಗೆ ಡಬ್ ಮಾಡಲಾಗಿದೆ. ಹಾಗೆಯೇ ತಮಿಳು-ತೆಲುಗು ಭಾಷೆಗಳ ಚಿತ್ರಗಳಲ್ಲಿ ಹಣ ಹೂಡಿರುವ ಹಂಚಿಕೆದಾರರಿಗಾಗಿ ಫಾಸ್ಟ್ ಟ್ರಾಕ್ ನಲ್ಲಿ, ಕಮರ್ಷಿಯಲ್ಲಾಗಿ ಯೋಚಿಸಿ, ಚಿತ್ರದ ಅವಧಿಯನ್ನು 2 ಗಂಟೆ 5 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಕನ್ನಡದ `ಅಟ್ಟಹಾಸ’ ಚಿತ್ರ ಪೂರ್ತಿ ನನ್ನದು. 2 ಗಂಟೆ 45 ನಿಮಿಷದ ಚಿತ್ರ ಖಂಡಿತ ನಿಮಗಿಷ್ಟವಾಗುತ್ತದೆ, ಆ ಬಗ್ಗೆ ನನಗೆ ವಿಶ್ವಾಸವಿದೆ.

“ನನಗೆ ಚಿತ್ರವನ್ನು ಕಾಂಟ್ರೋವರ್ಸಿ ಮಾಡ್ಲಿಕ್ಕೆ ಇಷ್ಟವಿಲ್ಲ. ಹಾಗೆ ಕಾಂಟ್ರೋವರ್ಸಿ ಮಾಡೋರು ಟಿವಿ ಸ್ಟುಡಿಯೋಗಳಲ್ಲಿ ಕುಳಿತಿರುತ್ತಾರೆ, attahasa-veerappan-4ಪ್ರಚಾರದ ಮೂಲಕ ಚಿತ್ರವನ್ನು ಗೆಲ್ಲಿಸಲು ಹವಣಿಸುತ್ತಿರುತ್ತಾರೆ. ನಾನು ಆ ಥರದ ವ್ಯಕ್ತಿಯಲ್ಲ, ನಾನೇ ಬೇರೆ ನನ್ನ ಸ್ಟೈಲೇ ಬೇರೆ. ನನ್ನ ಈ ಹಿಂದಿನ ಚಿತ್ರಗಳನ್ನು ನೋಡಿದರೆ ಅದು ನಿಮಗರ್ಥವಾಗಬಹುದು. ನನ್ನ ಚಿತ್ರಕ್ಕೆ ಅಂತಹ ಯಾವ ಪ್ರಚಾರವೂ ಬೇಕಿಲ್ಲ. ಚಿತ್ರ, ಅದರ ತಾಖತ್ತಿನ ಮೇಲೇ ನಿಲ್ಲಬೇಕು, ನಿಲ್ಲುತ್ತೆ.

“ಇನ್ನು ಮುತ್ತುಲಕ್ಷ್ಮಿ… ವೀರಪ್ಪನ್ ಆಕೆಗೆ ಪತಿ ಇರಬಹುದು. ಆದರೆ ವೀರಪ್ಪನ್ ಯಾರ ಸ್ವತ್ತೂ ಅಲ್ಲ. ಕೋರ್ಟಿಗೆ ಹೋಗಿದ್ದರು, ಬೇರೆಯವರ ಕಡೆಯಿಂದ ದುಡ್ಡಿಗೆ ಡಿಮ್ಯಾಂಡ್ ಇಟ್ಟಿದ್ದರು. ಈಗ ಅದೆಲ್ಲ ಕ್ಲಿಯರ್ ಆಗಿದೆ. ಅದೇ ರೀತಿ ನಕ್ಕಿರನ್ ಗೋಪಾಲನ್ ಕೂಡ ಕೋರ್ಟಿಗೆ ಹೋಗಿದ್ದರು. ಚಿತ್ರ ನೋಡಿದ ಮೇಲೆ, ನನ್ನ ಬೆನ್ನು ತಟ್ಟಿ ಕಳಿಸಿದರು. ಅಣ್ಣಾವ್ರ ಮನೆಯವರದಂತೂ ವಿರೋಧವಿಲ್ಲ ಬಿಡಿ.

“ಕತೆ ನನ್ನದು ಅಂತ ಹೇಳೋರಿಗೆ ನನ್ನ ಪ್ರಶ್ನೆ ಏನಂದರೆ, ಬರೆಯುವವರಿಗೆ ಒಂದು ನ್ಯಾಯ, ಸಿನಿಮಾ ಮಾಡುವವರಿಗೇ ಒಂದು ನ್ಯಾಯಾನಾ? ವೀರಪ್ಪನ್ ಬಗ್ಗೆ ಸಾವಿರಾರು ಪತ್ರಕರ್ತರು ಬರೆದಿದ್ದಾರೆ. ಅವರೆಲ್ಲ ವೀರಪ್ಪನ್‌ನಿಂದ ಪರ್ಮಿಷನ್ ಪಡೆದಿದ್ದರಾ? ಅವರಿಗೆ ಕಂಡಂತೆ ಅವರು ಬರೆದಿದ್ದಾರೆ. ಹಾಗೆಯೇ ನನ್ನ ಚಿತ್ರದಲ್ಲಿ ನಾನು ಕಂಡ ವೀರಪ್ಪನ್‌ನನ್ನು ಚಿತ್ರಿಸಿದ್ದೇನೆ.

“ಚಿತ್ರದ ಪೂರ್ತಿ ಡಿಜಿ ವಿಜಯಕುಮಾರ್ ಇದಾರೆ. ಈ ಪಾತ್ರವನ್ನು ಅರ್ಜುನ್ ಸರ್ಜಾ ನಿರ್ವಹಿಸಿದ್ದಾರೆ. ವೀರಪ್ಪನ್ ಕಥಾನಕದಲ್ಲಿ ವಿಜಯಕುಮಾರ್ ಪಾತ್ರ ಎಷ್ಟಿತ್ತು ಎನ್ನುವುದು ಗೊತ್ತಿದೆಯಾ? ಸೇತುಕುಳಿ ಗೋವಿಂದನ್ ವೀರಪ್ಪನ್ ಬಂಟ- ಇದು ಎಲ್ಲರಿಗೂ ಗೊತ್ತು. ಈತ ಬರುವುದಕ್ಕೆ ಮುಂಚೆ ಯಾರಿದ್ರು ಗೊತ್ತಾ? ಗುರುನಾಥನ್, ವೀರಪ್ಪನ್ ರೈಟ್ ಹ್ಯಾಂಡ್ ಆಗಿದ್ದ. ಇದು ಎಷ್ಟು ಜನಕ್ಕೆ ಗೊತ್ತಿದೆ ಹೇಳಿ? ಈತನ ಪಾತ್ರವನ್ನು ನಾನೇ ಮಾಡಿದ್ದೇನೆ. ನನ್ನ ಚಿತ್ರದಲ್ಲಿ ಯಾವುದೂ ರೀಲ್ ಇಲ್ಲ, ಎಲ್ಲ ರಿಯಲ್. ವ್ಯಕ್ತಿಗಳು, ಜಾಗಗಳು, ಘಟನೆಗಳು ಎಲ್ಲವೂ.

“ಸಿನಿಮಾಕ್ಕಾಗಿ ಭೇಟಿ ಮಾಡಿದವರು, ಬಳಸಿಕೊಂಡವರು, ಸಣ್ಣಪುಟ್ಟ ಸಹಾಯ ಮಾಡಿದವರು ಎಲ್ಲರಿಗೂ ಚಿತ್ರ ತೋರಿಸುತ್ತೇನೆ. ಅವರಿಂದೆಲ್ಲ ಓಕೆ ಅನ್ನಿಸಿಕೊಂಡೇ ಚಿತ್ರ ಬಿಡುಗಡೆ ಮಾಡ್ತಿದೀನಿ. ಯಾಕೆ ಗೊತ್ತಾ? 99% ನನಗೆ ಕನ್ವಿನ್ಸ್ ಆದಮೇಲೆಯೇ ಚಿತ್ರ ಮಾಡ್ಲಿಕ್ಕೆ ಕೈ ಹಾಕಿರೋದು.

“ಕಿಶೋರ್… ವೀರಪ್ಪನ್ ಮುಖ ಮರೆತುಹೋಗಿ ಅಲ್ಲಿ ಕಿಶೋರ್ ನೆಲೆ ನಿಲ್ತಾರೆ, ನೋಡ್ತಿರಿ. attahasa-veerappan-5ಅಷ್ಟರಮಟ್ಟಿಗೆ ಪಾತ್ರದಲ್ಲಿ ಕರಗಿಹೋಗಿದ್ದಾರೆ. ನಾನು ವೀರಪ್ಪನ್‌ಗಾಗಿ 12 ವರ್ಷದಿಂದ ಮಾಹಿತಿ ಕಲೆ ಹಾಕ್ತಿದ್ರೆ, ಕಿಶೋರ್ 6 ವರ್ಷಗಳಿಂದ ನನ್ನ ಜೊತೆ ಕಾಡಿನಲ್ಲಿ ಅಲೆದಾಡ್ತಿದ್ರು. ವೀರಪ್ಪನ್‌ನ ವಿಕ್ಷಿಪ್ತತೆ, ಅವನ ಕಲ್ಲುಗುಂಡಿಗೆ, ತಣ್ಣನೆಯ ಕ್ರೌರ್ಯ, ಜಿಗುಟುತನ, ಜಿಪುಣತನ- ಎಲ್ಲವನ್ನು ತುಂಬ ಹತ್ತಿರದಿಂದ ನೋಡಿದವರೊಡನೆ ಒಡನಾಡಿ, ಕೇಳಿ ತಿಳಿದುಕೊಂಡರು. ವೀರಪ್ಪನ್‌ನನ್ನು ಆವಾಹಿಸಿಕೊಂಡು ಹತ್ತಾರು ಶೇಡ್‌ಗಳನ್ನು ಅಭಿವ್ಯಕ್ತಿಗೊಳಿಸಿದರು. ಒಂದು ಪಾತ್ರಕ್ಕೆ, ಒಂದು ಚಿತ್ರಕ್ಕೆ, ಯಾವ ಹೀರೋ ಈ ರೀತಿ ಮಾಡ್ತರೆ ಹೇಳಿ?

“ಎಲ್ಲಕ್ಕಿಂತ ಹೆಚ್ಚಾಗಿ, ವೀರಪ್ಪನ್ ಸಾವಿನ ಗುಟ್ಟು ಎಷ್ಟು ಜನಕ್ಕೆ ಗೊತ್ತು? ಇದನ್ನ ನಾನು ರಿಲೀವ್ ಮಾಡಿದ್ದೇನೆ. ನಾನು ಕಂಡಿರೋ ಸತ್ಯವನ್ನು ಬಿಚ್ಚಿಟ್ಟಿದ್ದೇನೆ. ಚಿತ್ರದ ಕ್ಲೈಮ್ಯಾಕ್ಸ್ ನನ್ನದು. ಅಲ್ಲಿ ನನ್ನ ಕ್ರಿಯೇಟಿವಿಟಿ ಕಾಣುತ್ತದೆ. ನಾನೇ ನನ್ನ ಚಿತ್ರದ ಬಗ್ಗೆ ಹೇಳಿಕೊಳ್ಳೋದು ತಪ್ಪಾಗಬಹುದು, ಇರಲಿ. ಥಿಯೇಟರ್ ಗೆ ಬರೋರು, ಕಾಸು ಕೊಡೋರು, ಸಮಯ ಕೊಡೋರು ಪ್ರೇಕ್ಷಕರು. ಅವರು ಪ್ರಭುಗಳು. ಅವರ ತೀರ್ಮಾನವೆ ಅಂತಿಮ. ಚಿತ್ರ ನೋಡಿ ಅವರು ಹೇಳಲಿ.”

1 thought on “ವೀರಪ್ಪನ್ ಅಟ್ಟಹಾಸ ಮತ್ತು ಎಎಂಆರ್ ರಮೇಶ್

Leave a Reply

Your email address will not be published.