Monthly Archives: April 2013

ಯುವಕರು: ಮಾದಕ ವ್ಯಸನ ಮತ್ತು ಮಸಣ

-ಡಾ.ಎಸ್.ಬಿ.ಜೋಗುರ

“ವ್ಯಕ್ತಿಯೊಬ್ಬ ತನ್ನನ್ನು ತಾನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸುವುದಿಲ್ಲ.” ಎನ್ನುವ ಸತ್ಯವನ್ನು ಅಣಕಿಸಲೆಂಬಂತೆಯೇ ಈ ಬಗೆಯ ವ್ಯಸನ ಮತ್ತು ಅದರ ಬೆನ್ನಲ್ಲಿಯೇ ಮಸಣ ಎರಡನ್ನೂ ಅಪ್ಪಿಕೊಳ್ಳುವ ಅನಾಹುತಗಳಿಗೆ ಕಾರಣವಾದರೂ ಏನು ಎನ್ನುವ ಬಗ್ಗೆ ಡಾ ರಿಚರ್ಡ್ಸ್ ಫೀಲ್ಡ್ಸ್ ಎನ್ನುವವರು ತಮ್ಮ ಕೃತಿಯಾದ “ಡ್ರಗ್ಸ್ ಇನ್ ಪರ್ಸ್ಪೆಕ್ಟಿವ್” drugs-in-perspectiveಎನ್ನುವ ಕೃತಿಯಲ್ಲಿ ದೃಷ್ಟಾಂತಗಳ ಸಮೇತ ಚರ್ಚಿಸಿರುವದಿದೆ. ಮಾದಕ ವ್ಯಸನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಒಂದು ವ್ಯಾಪಕವಾದ ಪಿಡುಗಾಗಿ ಪರಿಣಮಿಸುತ್ತಿದೆ. 1960-70 ರ ದಶಕದಲ್ಲಿ ಹಿಪ್ಪಿ ಸಂಸ್ಕೃತಿಯೊಂದಿಗೆ ಥಳಕು ಹಾಕಿಕೊಂಡು ಬೆಳೆದು ಬಂದ ಈ ವ್ಯಸನ, ಕ್ರಮೇಣವಾಗಿ ಯುವಜನತೆಯ ಶಕ್ತಿ ಮತ್ತು ಸತ್ವವನ್ನು ಹಿಂಡಿ ಹಿಪ್ಪೆ ಮಾಡುತ್ತಲೇ ನಡೆಯಿತು. ವೈದ್ಯಕೀಯ ಕಾರಣಗಳಿಗಾಗಿ ನಾವೆಲ್ಲರೂ ಒಂದಿಲ್ಲಾ ಒಂದು ರೀತಿಯ ಡ್ರಗ್ಸ್ ತೆಗೆದುಕೊಳ್ಳುವುದು ತೀರಾ ಅನಿವಾರ್ಯ. ಆದರೆ ಅದನ್ನು ವ್ಯಸನ ಎಂದು ಕರೆಯಲಾಗುವುದಿಲ್ಲ. ಅದರ ಮೇಲಿನ ಅವಲಂಬನೆಯ ಪ್ರಮಾಣ ಹೆಚ್ಚುತ್ತಾ ಹೋಗುವ, ಇಲ್ಲವೇ ಅದು ಬೇಕೇ ಬೇಕು ಎನ್ನುವ ಸ್ಥಿತಿ ತಲುಪಿದಾಗ ಮಾತ್ರ ಅದನ್ನು ಮಾದಕ ವ್ಯಸನ ಎಂದು ಕರೆಯಲಾಗುತ್ತದೆ. ತೀರಾ ಪ್ರಾಚೀನ ಕಾಲದಿಂದಲೂ ಮಾದಕ ದ್ರವ್ಯಗಳು ಇವೆಯಾದರೂ ಅವುಗಳನ್ನು ಹೀಗೆ ಮಂಪುಕಾರಕ, ಭ್ರಮಾಜನಕ ಸ್ಥಿತಿಯಲ್ಲಿ ಉಳಿಯುವ ಸಲುವಾಗಿಯೇ ಸೇವಿಸುವವರ ಪ್ರಮಾಣ ತೀರಾ ಕಡಿಮೆ. ಡಾ ರಿಚರ್ಡ್ ಫೀಲ್ಡ್ಸ್ ಪ್ರಾಚೀನ ಗ್ರೀಕರಲ್ಲಿಯೂ ಈ ಮಾದಕ ದ್ರವ್ಯದ ಬಳಕೆ ಇತ್ತು ಆದರೆ ತೀರಾ ಹಿತಮಿತವಾಗಿತ್ತು ಎಂದಿರುವದಿದೆ. ಸದ್ಯದ ನಾಗಾಲೋಟದ ತೀವ್ರ ಸ್ಪರ್ಧಾತ್ಮಕ ಸಂದರ್ಭದಲ್ಲಂತೂ ತೀವ್ರವಾಗಿ ಒಬ್ಬ ವ್ಯಸನಕ್ಕೆ ಅಂಟಿಕೊಂಡವನು ಪ್ರತಿ 20 ನಿಮಿಷಕ್ಕೆ ಒಂದರಂತೆ ಇಂಜೆಕ್ಟ್ ಮಾಡಿಕೊಳ್ಳುವದಿದೆ ಎಂದಿರುವರು.

ತಾನು ಅತ್ಯಂತ ಸ್ವನಿಯಂತ್ರಣ ಹೊಂದಿದವನು ಎಂದು ಹೇಳುವವರೂ ಇದರ ಸಹವಾಸದಿಂದ ತಪ್ಪಿಸಕೊಳ್ಳಲಾಗಲ್ಲ. ಅದರಲ್ಲೂ 15-24 ವರ್ಷ ವಯೋಮಿತಿಯ ಯುವಕರು ಈ ಬಗೆಯ ವ್ಯಸನಕ್ಕೆ ಅಂಟಿಕೊಳ್ಳುವದರಿಂದ ಒಂದು ದೇಶದ ಭವಿಷ್ಯವಾಗಬೇಕಾದವರು ಶಾಪವಾಗಿ ಪರಿಣಮಿಸುವ ಅಪಾಯಗಳೇ ಹೆಚ್ಚಾಗುತ್ತಿವೆ. ತೀರಾ ಇತ್ತೀಚಿಗೆ ಗಲ್ಲಿಗೇರಿಸಿದ ಕಸಬ್ ನನ್ನು ಈ ಮಾದಕ ದ್ರವ್ಯದ ಸಹವಾಸದಲ್ಲಿಯೇ ಆ ಬಗೆಯ ಕುಕೃತ್ಯದಲ್ಲಿ ನೂಕಲಾಗಿತ್ತು ಎನ್ನುವದನ್ನು ಮಾಧ್ಯಮಗಳು ಬಹಿರಂಗಗೊಳಿಸಿರುವದಿತ್ತು. ಇಂಥಾ ಅನೇಕ ಉದಾಹರಣೆಗಳು ನಮ್ಮ ನಡುವೆ ಇವೆ. ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಚಟವಾಗಿದ್ದ ಈ ಮಾದಕ ವ್ಯಸನ, ಈಗೀಗ ಮಧ್ಯಮ ವರ್ಗದ ಸಂತಾನದ ಪಾಲಿಗೂ ಶಾಪವಾಗುತ್ತಿದೆ. ತೀರ ಈಚೆಗೆ ಮಂಗಳೂರಿನ ಸ್ನೇಹಾ ಎನ್ನುವ ಬಾಲಕಿ ಈ ವ್ಯಸನಕ್ಕೆ ಬಲಿಯಾದದ್ದು ಒಂದು ದೊಡ್ದ ದುರಂತ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಆಕೆಯನ್ನು ಈ ಡ್ರಗ್ಸ್ ಎನ್ನುವ ಮಹಾಮಾರಿ ನುಂಗಿ ಹಾಕಿತು.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 80 ಪ್ರತಿಶತ ಹೆರಾಯಿನ್ ಚಟಕ್ಕೆ ಅಂಟಿಕೊಂಡವರು 15-25 ವರ್ಷ ವಯೋಮಿತಿಯವರೇ no-to-drugsಇದ್ದಾರೆನ್ನುವದು ಅರಗಿಸಿಕೊಳ್ಳಲಾಗದ ಸತ್ಯ. ಪಂಜಾಬ ರಾಜ್ಯದಲ್ಲಂತೂ ಪ್ರತಿ 10 ಯುವಜನರಲ್ಲಿ 7 ಜನರು ಈ ಚಟಕ್ಕೆ ಅಂಟಿಕೊಂಡವರಿದ್ದಾರೆ ಎನ್ನುವುದನ್ನು ಅಕ್ಟೊಬರ್ 14, 2012 ರಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವದಿದೆ. 2010 ರ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯೊಂದು ದೆಹಲಿಯ ಇಂದಿರಾಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಶಿಮ್ಲಾದ ಶಾಲೆಯೊಂದರ 2000 ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಿ ಬೆಚ್ಚಿ ಬೀಳಬಹುದಾದ ವರದಿಯೊಂದನ್ನು ಹೊರಹಾಕಿದೆ. 55 ಪ್ರತಿಶತ ಬಾಲಕರು ಮತ್ತು 25 ಪ್ರತಿಶತ ಬಾಲಕಿಯರು ನಿಯಮಿತವಾಗಿ ಈ ಚಟಕ್ಕೆ ಅಂಟಿಕೊಂಡವರಿದ್ದಾರೆ ಎನ್ನುವ ಸತ್ಯ ಬಯಲಾಗಿದೆ.

ಈ ಬಗೆಯ ವ್ಯಸನಕ್ಕೆ ಕಾರಣಗಳು ಹತ್ತು ಹಲವಾರು. ಅಧ್ಯಯನದಲ್ಲಿ ಮಹತ್ತರ ಸಾಧನೆ ಮಾಡಬೇಕಾದ ಒತ್ತಡ, ತೀವ್ರವಾದ ಸ್ಪರ್ಧಾತ್ಮಕ ಜಗತ್ತು, ಪಾಲಕರ ಒತ್ತಾಸೆ ಮತ್ತು ವಿಪರೀತ ನಿರೀಕ್ಷೆ, ವೈಯಕ್ತಿಕ ವಿಘಟನೆ, ಕೌಟುಂಬಿಕ ವಿಘಟನೆ,ಗೆಳೆಯರ ಬಳಗ, ಕಾರ್ಯದೊತ್ತಡ, ಪ್ರಾಯದ ಸಂದರ್ಭ ಮತ್ತು ಕುತೂಹಲ, ಪ್ರೀತಿ-ಪ್ರಣಯ ವೈಪಲ್ಯತೆ. ಇಂಥಾ ಹತ್ತಾರು ಸಂಗತಿಗಳು ಯುವಕರನ್ನು ಮಾದಕವ್ಯಸನಕ್ಕೆ ಸಿಲುಕಿಸುವಲ್ಲಿ ಕಾರಣವಾಗುತ್ತಿವೆ. ಅಪ್ಪ-ಅಮ್ಮ ಇಬ್ಬರೂ ಉದ್ಯೋಗದಲ್ಲಿದ್ದು, ಮಕ್ಕಳು ಕೇಳುವದಕ್ಕಿಂತಲೂ ಹೆಚ್ಚಿನ ಪಾಕೇಟ್ ಮನಿ ಕೊಟ್ಟು ಖರ್ಚಿನ ವಿವರವನ್ನು ಕೇಳದಿರುವದೂ ಈ ಬಗೆಯ ದುಬಾರಿ ಹವ್ಯಾಸಗಳಿಗೆ ನಮ್ಮ ಸಂತಾನ ಬಲಿಯಾಗಲು ಕಾರಣ. ಈ ಬಗೆಯ ವ್ಯಸನಕ್ಕೆ ಅಂಟಿಕೊಂಡವರ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ವ್ಯಕ್ತಿ ಹಾಗೂ ಸಮಾಜ ಎರಡಕ್ಕೂ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಮಾದಕ ವ್ಯಸನಕ್ಕೆ ಅಂಟಿಕೊಂಡಿರುವವರನ್ನು ಗುರುತಿಸುವ ಬಗೆ ಹೇಗೆ..?

ಮಾದಕ ವ್ಯಸನಿಗಳನ್ನು ರಿಚರ್ಡ್ ಫ಼ೀಲ್ಡ್ ಹೀಗೆ ಗುರುತಿಸಿರುವದಿದೆ. ಹೊಣೆಗೇಡಿತನ, ಕಳಪೆ ಪ್ರಮಾಣದ ಶೈಕ್ಷಣಿಕ ಸಾಧನೆ, ಏಕಾಂಗಿಯಾಗಿರಲು ಬಯಸುವುದು, ಸಂಬಂಧಗಳಲ್ಲಿ ಬಿರುಕು, ವಿಚಿತ್ರ ಬಗೆಯ ವರ್ತನೆ, ಸಹನೆ, ತಾಳ್ಮೆ ಇಲ್ಲದಿರುವುದು, ಕಲಹ, ವೈಮನಸ್ಸು, ಅಪಘಾತದಲ್ಲಿ ಮತ್ತೆ ಮತ್ತೆ ಸಿಲುಕುವುದು, ನಿಸ್ತೇಜವಾಗಿರುವುದು, ಚಿಂತೆ ಮತು ಕಿರಿಕಿರಿಯನ್ನು ಅನುಭವಿಸುವುದು, ಊಟ ಕಡಿಮೆ..ತೂಕ ಕಡಿಮೆ, ನಿದ್ರಾಹೀನತೆ ಇಲ್ಲವೇ ಅಸ್ತವ್ಯಸ್ಥತೆ, ಕೈಗಳು ನಡುಗುವುದು. ಇಂಥಾ ಇನ್ನೂ ಅನೇಕ ಬಗೆಯ ಚಿತ್ರ ವಿಚಿತ್ರವಾದ ಲಕ್ಷಣಗಳನ್ನು ಹೊರನೋಟದಲ್ಲಿ ತೋರಬಹುದಾದರೂ ಒಳಗಡೆ ಅನುಭವಿಸುವ ನೋವು ಯಾತನೆ ಮಾತ್ರ ಅಗೋಚರವಾದುದು. ಜಗತ್ತಿನ ಶ್ರೇಷ್ಟ ಮನೋವಿಜ್ಞಾನಿ ಸಿಗ್ಮಂಡ್ ಫ಼್ರಾಯ್ಡ್ ಮತ್ತು ಅಮೇರಿಕೆಯ ಕತೆಗಾರ ಎಡ್ಗರ್ ಅಲೆನ್ ಪೋ, ಕಾಮಿಡಿಯನ್ ರಿಚರ್ಡ್ ಪ್ರೇಯರ್, ಈ ಬಗೆಯ ಮಾದಕ ವ್ಯಸನಿಗಳಾಗಿರುವ ಅನೇಕ ಉಲ್ಲೇಖಗಳು ದೊರೆಯುತ್ತವೆ.

ಇನ್ನು ಈ ಬಗೆಯ ಚಟದಿಂದ ಮುಕ್ತಿ ಪಡೆಯುವದಾದರೂ ಹೇಗೆ..? ರಿಚರ್ಡ್ ಫ಼ೀಲ್ಡ್ ತಮ್ಮ ಕೃತಿಯಲ್ಲಿ ಹತ್ತಾರು ಕೇಸ್ ಸ್ಟಡಿಗಳನ್ನು ಪರಿಚಯಿಸಿದ್ದಾರೆ. ಇವರಲ್ಲಿ ಬಹುತೇಕರು ಡ್ರಗ್ಸ್ ಸೇವನೆಯನ್ನು ಕೈಬಿಟ್ಟು, ನಂತರ ಶುರು ಮಾಡಿದವರೇ ಹೆಚ್ಚು. ಹಾಗಿದ್ದರೆ ಈ ಚಟದಿಂದ ಮುಕ್ತಿ ಇಲ್ಲವೇ..? ಖಂಡಿತ ಸಾಧ್ಯವಿದೆ. ಕುಟುಂಬದ ಸದಸ್ಯರ ನೆರವು, ಸ್ನೇಹಿತರ ನೆರವು, ವೈದ್ಯರ ಸಲಹೆ ಮತ್ತು ಚಿಕಿತ್ಸೆ, ಈ ಚಟವನ್ನು ಬಿಟ್ಟು ಸುಧಾರಣೆಯಾದವರ ಮೂಲಕ ತಿಳಿಹೇಳುವುದು.,ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಇಂಥಾ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಈ ಚಟಕ್ಕೆ ಸಿಲುಕಿರುವವರನ್ನು ಪಾರು ಮಾಡಬಹುದಾಗಿದೆ. ಅವರಿಗೆ ಸರಿಯಾದ ನಿಯಮಿತ ಚಿಕಿತ್ಸೆ ಮತ್ತು ಸಲಹೆಗಳ ಮೂಲಕ ಮತ್ತೆ ಹೊಸ ಮನುಷ್ಯರನ್ನಾಗಿ ಮಾಡಬಹುದಾಗಿದೆ. ಜೀವನ ಎನ್ನುವದು ಬರೀ ಚಟ ಅಲ್ಲ. ಅದನ್ನು ಮೀರಿಯೂ ಇದು ಅಮೂಲ್ಯವಾದುದು ಎಂದು ತಿಳಿ ಹೇಳಿ ಜೀವನಪ್ರೀತಿ ಹುಟ್ಟುವ ಹಾಗೆ ಮಾಡಬೇಕು. ಮಾದಕ ವ್ಯಸನಕ್ಕೆ ಯಾವುದೇ ಕಾರಣಕ್ಕೂ ಬಲಿಬೀಳಬಾರದು ಎನ್ನುವ ಮನೋಬಲವನ್ನು ಅವರಲ್ಲಿ ತುಂಬಬೇಕು.

“ಪ್ರಾಥಮಿಕ ಚುನಾವಣೆ”ಗಳ ಮೂಲಕ ಅಭ್ಯರ್ಥಿಗಳನ್ನು ಆರಿಸಿ…

– ರವಿ ಕೃಷ್ಣಾರೆಡ್ಡಿ

ವಾರದಿಂದೀಚೆಗೆ ನಡೆಯುತ್ತಿರುವ ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ತೀರಾ ನಾಚಿಕೆಗೇಡಿನ ಸಂಗತಿಯಾಗಿ ಹೋಗಿದೆ. ಇದು ಅಪಾರ ಭ್ರಷ್ಟತೆ, ಸ್ವಜನಪಕ್ಷಪಾತ, ಮತ್ತು ಗುಲಾಮಗಿರಿಯ ಮುಂದುವರಿಕೆ ಮಾತ್ರವಲ್ಲದೆ, ಅಪ್ರಜಾಸತ್ತಾತ್ಮಕ ಕೂಡ. ಬಹಳ ಸರಳವಾದ ಅಭ್ಯರ್ಥಿ ಆಯ್ಕೆಯನ್ನು ತಮ್ಮ ಸ್ವಾರ್ಥಕ್ಕಾಗಿ ತೀರಾ ಕಗ್ಗಂಟಾಗಿಸಿಕೊಂಡು ರಾಜಕೀಯ ಪಕ್ಷಗಳು ನಿರ್ವಹಿಸುತ್ತಿರುವ ಈ ರೀತಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಅವು ಮೌಲ್ಯ ಮತ್ತು ಸಿದ್ಧಾಂತಗಳಿಗೆ ಯಾವುದೇ ಬೆಲೆಯನ್ನು ನೀಡುತ್ತಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ.

ಯಾವುದೇ ರಾಜಕೀಯ ಪಕ್ಷ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಆ ಪಕ್ಷದ ಸದಸ್ಯರಿಗೆ ಸೇರಿದ್ದು ಮತ್ತು ಅದರ ನಾಯಕರು ಆ ಸದಸ್ಯರ ಚುನಾಯಿತ ಪ್ರತಿನಿಧಿಗಳು ಮಾತ್ರ. ಆದರೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವದ ಯಾವೊಂದೂ ನಿಯಮಗಳನ್ನು ಪಾಲಿಸುತ್ತಿಲ್ಲ. ದುರದೃಷ್ಟಕರ ಸಂಗತಿ ಏನೆಂದರೆ, ಆ ಪಕ್ಷಗಳ ಅನೇಕ ಮೊದಲ ಸಾಲಿನ ನಾಯಕರಿಗೆ ಯಾವುದೇ ಸೈದ್ದಾಂತಿಕೆ ಹಿನ್ನೆಲೆ ಇಲ್ಲ. ಓದುವ ಅಭ್ಯಾಸವೇ ಇಲ್ಲದ, ಜನಪರ ಚಿಂತನೆಗಳೇ ಇಲ್ಲದ, ಹಣದ ಥೈಲಿ ಮತ್ತು ಚಮಚಾಗಿರಿಯಂತಹ ಅನೈಸರ್ಗಿಕ ಮಾರ್ಗಗಳ ಮೂಲಕ ನಾಯಕರಾಗಿರುವ ಇವರಿಗೆ “ನೈಜ ಪ್ರಜಾಪ್ರಭುತ್ವ” ಮತ್ತು “ಆಂತರಿಕ ಪ್ರಜಾಪ್ರಭುತ್ವ” ಎಂಬ ಪದಪುಂಜಗಳು ಅರ್ಥವಾಗುವುದಾದರೂ ಹೇಗೆ?

ಈ ಪಕ್ಷಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇ ಆದಲ್ಲಿ ಟಿಕೆಟ್ ಹಂಚಿಕೆ ಎಂಬ ವಿಷಯ ತಲೆನೋವಿನ ಅಥವ ಲಾಭ-ನಷ್ಟಗಳ ಸಂಗತಿಯೇ ಅಲ್ಲ. ಅದು ಸ್ಥಳೀಯ ಮಟ್ಟಗಳಲ್ಲಿಯೇ ನಿರ್ಧಾರವಾಗುವಂತಹುದು. ಪ್ರಜಾಪ್ರಭುತ್ವ ಪ್ರಬುದ್ಧತೆಯನ್ನು ಪಡೆದುಕೊಂಡಿರುವ ಅನೇಕ ದೇಶಗಳಲ್ಲಿ ಇದು ನಿಭಾಯಿಸಲ್ಪಡುವುದೇ ಹೀಗೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿರುವ ಆಯಾ ಪಕ್ಷದ ಪ್ರಾಥಮಿಕ ಸದಸ್ಯರೇ ತಮ್ಮ ಕ್ಷೇತ್ರದ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಮತ್ತು ಗೌರವ ಹೊಂದಿರುತ್ತಾರೆ. ಒಂದು ಪಕ್ಷದ ಅಭ್ಯರ್ಥಿಯಾಗಿ ನಿಲ್ಲಬೇಕೆನ್ನುವ ಮನುಷ್ಯ ತನ್ನ ಕ್ಷೇತ್ರದ ತನ್ನ ಪಕ್ಷದ ಸದಸ್ಯರ ಮತ್ತು ಕಾರ್ಯಕರ್ತರ ಗೌರವ ಮತ್ತು ಬೆಂಬಲ ಗಳಿಸುವುದು ಮುಖ್ಯವೇ ಹೊರತು ಆತನ ಹಣ ಮತ್ತು ಪ್ರಭಾವ ಆ ಪಕ್ಷದ ನಾಯಕರನ್ನು ಹೇಗೆ ಮುಟ್ಟುತ್ತದೆ ಎನ್ನುವುದು ಅಲ್ಲ. ವಿಕೇಂದ್ರಿಕರಣ ಎನ್ನುವುದು ರಾಜಕೀಯ ಪಕ್ಷಗಳೂ ಪಾಲಿಸಬೇಕಾದ ನಿಯಮ.

ದುರದೃಷ್ಟವಷಾತ್,  ನಮ್ಮ ರಾಜ್ಯದ ಮೂರೂ ಪ್ರಮುಖ ಪಕ್ಷಗಳಲ್ಲಿ ಇಂತಹ ಅಭ್ಯಾಸವೇ ಇಲ್ಲ. DBChandregowdaಜನಬೆಂಬಲ ಪಡೆದಿರುವ ರಾಜಕಾರಣಿಗಳೂ ಸಹ ಕೊನೆಯ ದಿನದ ತನಕ ತಮ್ಮ ಪಕ್ಷದ ’ಬಿ-ಫಾರ್ಮ್’ ಕೈಗೆ ಸಿಗುತ್ತದೆಯೋ ಅಥವ ಕೈ ತಪ್ಪುತ್ತದೆಯೋ ಎನ್ನುವ ಭಯಾತಂಕಗಳಲ್ಲಿಯೇ ಇರುತ್ತಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರದ ಅತಿ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ, ಶೃಂಗೇರಿ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಎಂದುಕೊಂಡಿದ್ದ ಮಾಜಿ ಸ್ಫೀಕರ್ ಡಿ.ಬಿ.ಚಂದ್ರೇಗೌಡರಿಗೆ ಕೊನೆಯ ಗಳಿಗೆಯವರೆಗೂ “ಆಟ” ಆಡಿಸಿ ಕೊಡಲಾಯಿತು. ಪ್ರಚಾರಕ್ಕೆ ಬಳಸಬೇಕಾದ ಅಮೂಲ್ಯ ಸಮಯವನ್ನು ಇಂತಹ ಕ್ಷುಲ್ಲಕ ವಿಚಾರಗಳಿಗಾಗಿ ಅಲ್ಲಿನ ಅಭ್ಯರ್ಥಿ ಹಾಳುಮಾಡಿಕೊಳ್ಳಬೇಕಾಯಿತು. ಅದೇ ರೀತಿ ದಾವಣಗೆರೆ-ಉತ್ತರ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಗೆ ನೀಡಿದ್ದ ಬಿ=ಫಾರ್ಮ್ ಅನ್ನು ಅಲ್ಲಿಯ ಒತ್ತಡಗಳಿಂದಾಗಿ ಶಾಮನೂರು ಶಿವಶಂಕರಪ್ಪನವರ ಮಗ ಮಲ್ಲಿಕಾರ್ಜುನರ ಹೆಸರಿಗೆ ಕೈಯ್ಯಲ್ಲಿ ಅಳಿಸಿ-ತಿದ್ದಿ ಬರೆದ ಕಾರಣ ಆ ಬಿ-ಫಾರ್ಮ್ ತಿರಸ್ಕೃತವಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದಂತಾಗಿತ್ತು. ಶೃಂಗೇರಿಯಲ್ಲಿ ಸೋಲುಂಡ ಡಿ.ಬಿ.ಚಂದ್ರೇಗೌಡರು ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಿಗುವುದಕ್ಕಿಂತ “ಹೆಚ್ಚಿನ” ಗೌರವ ಬಿಜೆಪಿಯಲ್ಲಿ ಸಿಗುತ್ತದೆ ಎಂದು ಆ ಪಕ್ಷ ಸೇರಿಕೊಂಡರು.

ಇದೆಲ್ಲವನ್ನೂ ಸರಿಪಡಿಸುವ ಇಚ್ಚೆ ನಮ್ಮ ನಡುವೆಯ ಸಭ್ಯ ರಾಜಕಾರಣಿಗಳಿಗೂ ಇದ್ದಂತಿಲ್ಲ. VRSudarshanತಮಗೆ ಟಿಕೆಟ್ ನೀಡಲಾಗುತ್ತಿಲ್ಲ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ರಾಜ್ಯದ ಸಭ್ಯ ರಾಜಕಾರಣಿಗಳಲ್ಲಿ ಒಬ್ಬರಾದ ಕಾಂಗ್ರೆಸ್‌ನ ವಿ.ಆರ್.ಸುದರ್ಶನ್‌ರವರು ತಮ್ಮ ವರಿಷ್ಟರಿಗೆ ಪತ್ರ ಬರೆದಿದ್ದರು. ಅದರಲ್ಲಿ ಅಡ್ದ-ಮತದಾನ ಮಾಡಿ ಪಕ್ಷವಿರೋಧಿ ಚಟುವಟಿಕೆ ಮಾಡಿದವರಿಗೆಲ್ಲ ಟಿಕೆಟ್ ನೀಡಿ, ಆ ಬಗ್ಗೆ ಪಕ್ಷಕ್ಕೆ ಪ್ರಾಮಾಣಿಕ ವರದಿ ನೀಡಿದ ತಮಗೇ ಟಿಕೆಟ್ ನಿರಾಕರಿಸಲಾಗುತ್ತಿದೆ, ಇದು ಸರಿಯಲ್ಲ ಎಂದು ದೂರಿದ್ದರು.  ಆದರೆ, ಸುದರ್ಶನ್‌ರವರು ಇದಕ್ಕಿಂತ ಪ್ರಮುಖ ವಿಷಯವಾದ ಟಿಕೆಟ್ ಹಂಚಿಕೆಯ ವಿಧಾನವನ್ನೇ ಪ್ರಶ್ನಿಸಿ, ತಮ್ಮ ಪಕ್ಷದಲ್ಲಿ “ಪ್ರಾಥಮಿಕ ಚುನಾವಣೆ”ಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ ಅನುಸರಿಸಬೇಕೆಂದು ಪ್ರಬಲವಾಗಿ ಆಗ್ರಹಿಸಿದ್ದರೆ ಅದು ದೀರ್ಘಕಾಲೀನವಾದ ಸಕಾರಾತ್ಮಕ ಪರಿಣಾಮ ಬೀರುತ್ತಿತ್ತು. ಇಂತಹವರೇ ವಿಸ್ಮೃತಿಯಲ್ಲಿ ಮುಳುಗಿ ತಮ್ಮ ಒಂದು ಟಿಕೆಟ್‌ಗೆ ಬಡಿದಾಡುವಂತಾಗಿಬಿಟ್ಟರೆ ಅದು ಈ ರಾಜಕೀಯ ಪಕ್ಷಗಳ ಸಂಸ್ಕೃತಿ ಮತ್ತು ಅಪ್ರಸ್ತುತತೆಯನ್ನು ತೋರಿಸುತ್ತದೆ.

ರಾಜಕಾರಣ ಮಾಡಬೇಕಿರುವುದು ವ್ಯಕ್ತಿಯೊಬ್ಬನ ತೆವಲಿಗಾಗಲಿ ಅಥವ ಸ್ವಾರ್ಥಕ್ಕಾಗಲಿ ಅಲ್ಲ. ಜನರಿಗಾಗಿ, ಸಮುದಾಯದ ಹಿತಕ್ಕಾಗಿ, ಸಮಾಜ ಕಟ್ಟುವುದಕ್ಕಾಗಿ ರಾಜಕಾರಣ ಮಾಡಬೇಕಿದೆ. ಆದರೆ ಈ ವಿಷಯ ಈಗಿನ ದಡ್ದ ಮತ್ತು ಅಹಂಕಾರಿ ರಾಜಕೀಯ ನಾಯಕರಿಗೆ ಬೇಕಿಲ್ಲ. ಬೇಸರದ ಸಂಗತಿ ಏನೆಂದರೆ ಇದು ರಾಜಕೀಯ ಪಕ್ಷಗಳ ಪೋಷಕರಾದ ಆ ಪಕ್ಷಗಳ ಸದಸ್ಯರಿಗೂ ಗೊತ್ತಿರುವುದಿಲ್ಲ. ಆದರೆ ಇದೆಲ್ಲವನ್ನೂ ಅರಿಯುವ ಮತ್ತು ಆಗ್ರಹಿಸುವ ಜವಾಬ್ದಾರಿ ನಾಡಿನ ಪ್ರಜ್ಞಾವಂತರ ಮತ್ತು ಮತದಾರರ ಮೇಲಿದೆ.

ಹರ್ಷ ಮಂದೇರ್ ಬರಹ – 1: ಹಾಜರಾತಿಪಟ್ಟಿ ಕೇಳಿದರೆ ಗಂಟುಮೂಟೆ ಕಟ್ಟಿ

ಹೊಸ ಬರಹ ಸರಣಿ:

ಕೆ. ಅಕ್ಷತಾ ಅವರ ಅಹರ್ನಿಶಿ ಪ್ರಕಾಶನ ಸದ್ಯದಲ್ಲೇ ಹರ್ಷ ಮಂದೇರ್ ಅವರ ಆಯ್ದ ಬರಹಗಳನ್ನು ಕನ್ನಡದಲ್ಲಿ ಹೊರತರುತ್ತಿದೆ. ಕನ್ನಡದ ಹಿರಿಯ ಚಿಂತಕರಾದ ಜಿ.ರಾಜಶೇಖರ್ ಮತ್ತು ಕೆ. ಫಣಿರಾಜ್ ಬರಹಗಳನ್ನು ಸಂಪಾದಿಸಿದ್ದಾರೆ. ಪುಸ್ತಕವಾಗಿ ಪ್ರಕಟವಾಗುವ ಮುನ್ನ ಕೆಲ ಲೇಖನಗಳು ವರ್ತಮಾನದಲ್ಲಿ ಪ್ರಕಟಮಾಡಲು ಪ್ರಕಾಶಕಿ ಅನುಮತಿ ನೀಡಿದ್ದಾರೆ. ವಾರಕ್ಕೊಂದು ಬರಹ ಇಲ್ಲಿ ಪ್ರಕಟವಾಗಲಿದೆ. ಮೂಲ ಲೇಖಕ ಹರ್ಷ ಮಂದೇರ್, ಕೃತಿಯ ಸಂಪಾದಕರಾದ ಜಿ.ರಾಜಶೇಖರ್, ಫಣಿರಾಜ್, ಲೇಖನಗಳ ಅನುವಾದಕರಿಗೆ ಮತ್ತು ಅಕ್ಷತಾ ಅವರಿಗೆ ವರ್ತಮಾನ ಬಳಗದ ಧನ್ಯವಾದಗಳು. ಹೊಸ ಲೇಖನ ಸರಣಿ ಆರಂಭವಾಗಿದೆ.
– ವರ್ತಮಾನ

ಹರ್ಷ ಮಂದೇರ್ ಪರಿಚಯ:Harsha Manderಹರ್ಷ ಮಂದೇರ್ ದಿ ಹಿಂದು ಪತ್ರಿಕೆ ಓದುಗರಿಗೆ ಪರಿಚಿತ ಹೆಸರು. ಎರಡು ದಶಕಗಳ ಕಾಲ ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಇವರು ಸದ್ಯ ಲೇಖಕ ಮತ್ತು ಅಭಿವೃದ್ಧಿ ಚಿಂತಕ. ಸಮಾಜದ ಒಳಿತಿಗಾಗಿ ಹಲವು ಹೋರಾಟಗಳನ್ನು ಹುಟ್ಟುಹಾಕಿದವರು. ಜಾತ್ಯತೀತ, ನೆಮ್ಮದಿಯ ಹಾಗೂ ನ್ಯಾಯಸಮ್ಮತ ಸಮಾಜಕ್ಕಾಗಿ ‘ಅಮನ್ ಬಿರ್ದಾರಿ’, ‘ನ್ಯಾಯಾಗ್ರಹ’ ಹಾಗೂ ಬೀದಿ ಮಕಳು ಮತ್ತು
ಸೂರಿಲ್ಲದವರಿಗಾಗಿ ‘ದಿಲ್ ಸೆ’ ಎಂಬ ಹೋರಾಟಗಳನ್ನು ಮುನ್ನಡೆಸಿದರು. ಅಷ್ಟೇ ಅಲ್ಲ, ದಲಿತರ, ಗುಡ್ಡಗಾಡು ಜನರ ಮತ್ತು ಅಂಗವಿಕಲರ ಒಳಿತಿಗಾಗಿ ವಿವಿಧ ಕಾರ್ಯಕ್ರಮಗಳಲ್ಲಿ
ತೊಡಗಿಸಿಕೊಂಡಿದ್ದಾರೆ. ಮಂದೇರ್ ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟೂಟ್ ಆಫ್ ಮ್ಯಾನೆಜ್ಮೆಂಟ್, ದೆಹಲಿಯ ಸೆಂಟ್ ಸ್ಟೀಫನ್ಸ್ ಕಾಲೇಜು, ಸಾನ್ ಫ್ರಾನ್ಸಿಸ್ಕೊದ ಕ್ಯಾಲಿಫೋನರ್ಿಯಾ ಇನ್ಸಿಟಿಟೂಟ್ ಆಫ್ ಇಂಟಿಗ್ರಲ್ ಸ್ಟಡೀಸ್, ಮಸ್ಸೂರಿಯ ಎಲ್ ಬಿ ಎಸ್ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೀಷನ್ ಮತ್ತು ನೆಲ್ಸನ್ ಮಂಡೇಲ ಸೆಂಟರ್ ಫರ್ ಪೀಸ್ ಅಂಡ್ ಕಾನ್ಫ್ಲಿಕ್ಟ್
ರೆಸಲೂಷನ್ ಸಂಸ್ಥೆಗಳಲ್ಲಿ ಪಾಠ ಮಾಡಿದ್ದಾರೆ.

ಅವರ ಕೃತಿಗಳು:
Unheard Voices: Stories of Forgotten Lives
Fear and Forgiveness: The Aftermath of Massacre
The Ripped Chest: Public Policy and Poor in India
Untouchability in Rural India (co-authored)

ಅನುವಾದಕರ ಪರಿಚಯ:
ವಿ.ಬಿ .ತಾರಕೇಶ್ವರ -ಹೈದರಾಬಾದ್ ನ ಇ.ಎಫ಼್.ಎಲ್ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ತಾರಕೇಶ್ವರ್ ಮೂಲತಃ ಬೆಂಗಳೂರಿನವರು . ಭಾಷಾ ಸಂಶೋಧನಾ ರಂಗದಲ್ಲಿ ಆಸಕ್ತರಾಗಿರುವ ಇವರು ಹಂಪಿ ವಿವಿಯಲ್ಲಿ ಕೆಲ ಕಾಲ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ . ‘ವಸಹಾತುಶಾಹಿ ಮತ್ತು ಭಾಷಾಂತರ’ ಇವರ ಮುಖ್ಯ ಕೃತಿ.

ಹರ್ಷ ಮಂದೇರ್ ಬರಹ – 1

ವಿ.ಬಿ .ತಾರಕೇಶ್ವರ

ವಿ.ಬಿ .ತಾರಕೇಶ್ವರ

ಹಾಜರಾತಿಪಟ್ಟಿ ಕೇಳಿದರೆ ಗಂಟುಮೂಟೆ ಕಟ್ಟಿ

ಭ್ರಷ್ಟಾಚಾರದ ವಿರುದ್ಧದ ಚಳುವಳಿಯ ಕಾವಿನ ಸಂದರ್ಭದಲ್ಲಿ, ನಾನಿಂದು ವ್ಯವಸ್ಥೆಯೊಳಗಿಂದಲೇ ಭ್ರಷ್ಟಾಚಾರವನ್ನು ತೊಲಗಿಸಲು ಪ್ರಯತ್ನಿಸಿದ ಜಿಲ್ಲಾಧಿಕಾರಿಯೊಬ್ಬರ ಕಥೆಯನ್ನು ಹೇಳಲು ಹೊರಟಿರುವೆ. ಆ ಅಧಿಕಾರಿಯು ಬಿಟ್ಟು ಹೋದ ಪ್ರಶ್ನೆಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಉತ್ತರಗಳು ಇಂದಿಗೂ ಸಿಕ್ಕಿಲ್ಲ..

ತನ್ನ ಹೊಸ ಜಿಲ್ಲೆಯ ಅಧಿಕಾರವನ್ನು  ವಹಿಸಿಕೊಂಡಾಗ ಬೇಸಿಗೆಯ ಬಿಸಿಲು ತನ್ನ ಚರಮಸೀಮೆಯನ್ನು ತಲುಪಿತ್ತು. ತಾನು ಎರಡು ವರ್ಷ ಕೆಲಸ ಮಾಡಿದ ಪಕ್ಕದ ಚಿಕ್ಕ ಜಿಲ್ಲೆಯ ಬಗೆಗಿನ ಅವರ ಪ್ರೀತಿ ಮನಸ್ಸಿನಲ್ಲಿ ಇನ್ನು ತೊನೆದಾಡುತ್ತಿತ್ತು. ಅಲ್ಲಿ ಅವರುು ಮಾಡಿದ್ದ ಕೆಲಸ ಅವನಿಗೆ ಬಹಳ ಫಲದಾಯಕವಾದದ್ದು ಎಂದೆನಿಸಿತ್ತು. ಈ ನೆನೆಪಿನಲ್ಲೇ ಅವರು ರಾಜಕೀಯವಾಗಿ ಸೂಕ್ಷ್ಮವಾದ, ಬಹಳ ದೊಡ್ಡದು ಮತ್ತು ಸಂಕೀರ್ಣವೂ ಆದ ಈ ಹೊಸ ಜವಾಬ್ದಾರಿಯ ಸವಾಲುಗಳನ್ನು ಎದುರಿಸಲು ಸನ್ನದ್ದನಾಗಿ ಕಾತುರದಿಂದ ಎದುರು ನೋಡುತ್ತಿದ್ದರು. ಹೊಸ ಜಿಲ್ಲೆಯ ಅಧಿಕಾರವನ್ನು ವಹಿಸಿಕೊಂಡ ಕೇವಲ ಎರಡೇದಿನಗಳಲ್ಲಿ ಅಧಿಕಾರಿಯು ಜಿಲ್ಲೆಯ ಜನತೆಯ ಸಮಸ್ಯೆಗಳನ್ನು ಅರಿಯಲು ಅದರ ಪರಿಚಯವನ್ನು ಮಾಡಿಕೊಳ್ಳಲು ಪ್ರವಾಸ ಕೈಗೊಂಡರು..

ಅದು ಬರಗಾಲ, ಅಭಾವದ ವರ್ಷವಾದ್ದರಿಂದ ಪರಿಹಾರ ಕಾರ್ಯ ಭರದಿಂದ ಸಾಗಿತ್ತು. ಕೆಲವೊಮ್ಮೆ ಪರಿಹಾರ ಕಾರ್ಯದಲ್ಲಿ ಕೆಲಸಕ್ಕಿದ್ದವರ ಸಂಖ್ಯೆ ಒಂದು ಲಕ್ಷವನ್ನು ದಾಟಿತ್ತು. ಅವರ ಪ್ರವಾಸದ ಬಹುಪಾಲು ವೇಳೆ ಈ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಯನ್ನು ಗಮನಿಸುವುದರಲ್ಲೆ ಕಳೆದು ಹೋಗಿದ್ದು ಸ್ವಾಭಾವಿಕವಾಗಿತ್ತು.

ಜಿಲ್ಲಾಧಿಕಾರಿಗೆ ಪ್ರವಾಸದಲ್ಲಿ ಗೋಚರವಾದ ಕೆಲವು ಸಂಗತಿಗಳು ಅವರನ್ನು ಬಹಳ ಚಕಿತಗೊಳಿಸಿದವು. ಪ್ರತಿಯೊಂದು ಯೋಜನೆಗಳಲ್ಲಿ ಯಾವ ಎಗ್ಗೂ ಇಲ್ಲದೆ ಮಂಜೂರಾದ ಹಣದ ಬಹುಪಾಲನ್ನು ನುಂಗಲಾಗಿತ್ತು. ದಾಖಲೆಗಳಲ್ಲಿ ಇದ್ದದ್ದೇ ಒಂದಾದರೆ ಆಗಿದ್ದ ಕೆಲಸದ ಸ್ವರೂಪವೇ ಬೇರೆಯಾಗಿತ್ತು. ಕೆಲಸಗಾರರ ಹಾಜರಾತಿ, ಕೆಲಸ ನಡೆದ ದಾಖಲೆ, ಹಣ ಪಾವತಿಸಿದ ದಾಖಲೆಗಳೆಲ್ಲವೂ ಕೃತಕ ಸೃಷ್ಟಿಯಾಗಿತ್ತು. ಸುಳ್ಳು ಹೆಸರುಗಳು ಮತ್ತು ಸುಳ್ಳು ಹೆಬ್ಬೆಟ್ಟಿನ ದಾಖಲೆಗಳೇ ಎಲ್ಲೆಡೆ ಕಂಡುಬರುತ್ತಿದ್ದವು. ನಡೆಯದ ಕೆಲಸಗಳನ್ನು ತೋರಿಸಿ ಇವರೆಲ್ಲ ಅದರಲ್ಲಿ ಕೆಲಸ ಮಾಡಿದ್ದಾರೆ ಎಂದು ತೋರಿಸಲಾಗಿತ್ತು. ಹಮ್ಮಿಕೊಂಡಿದ್ದ ಬಹುತೇಕ ಕೆಲಸಗಳು ಭೂಮಿಗೆ ಸಂಬಂಧಿಸಿದ ಕೆಲಸಗಳಾಗಿದ್ದವು. ಕೆರೆಗಳ ಹೂಳುತೆಗೆಯುವಿಕೆ, ಮಣ್ಣಿನ ಕಚ್ಚಾ ರಸ್ತೆಯ ನಿಮರ್ಾಣ ಇಂತವುಗಳೇ ಆಗಿದ್ದವು. ಈ ಕೆಲಸಗಳಲ್ಲಿ ಮೊದಲ ಮಳೆಯ ನಂತರ ಕೆಲಸ ಆಗಿದೆಯೇ ಇಲ್ಲವೇ ಎಂದು ಪರಿಶೀಲಿಸುವುದೇ ಕಷ್ಟಕರವಾದದ್ದಾಗಿತ್ತು.

ವ್ಯವಸ್ಥೆಗೆ ಹೊಸಬ ಜಿಲ್ಲಾಧಿಕಾರಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದ ಕೆಳಗಿನ ಅಧಿಕಾರಿಗಳಿಗೆ ಈ ಅಧಿಕಾರಿಯ ನಡವಳಿಕೆ ಮುಜುಗರ ತಂದಿತ್ತು. ಪ್ರತಿಯೋಜನೆಯ ಬಗೆಗಿನ ವಿವರಗಳನ್ನು ಅವರು ವಿಚಾರಿಸುತ್ತಿದ್ದ ರೀತಿ, ದಾಖಲೆಗಳ ಪರಿಶೀಲನೆ, ಕೆಲಸಗಾರರೊಂದಿಗೆ ಸುಧೀರ್ಘ ಮಾತುಕತೆ ಇವೆಲ್ಲವನ್ನು ಅವರು ಜಿಲ್ಲಾಧಿಕಾರಿಯ ಅನನುಭವ ಮತ್ತು ತಾರುಣ್ಯದ ಪ್ರಭಾವ ಎಂದುಕೊಂಡರು. ಆದರೆ  ಯಾವುದನ್ನು ನೇರವಾಗಿ ಬಾಯಿಬಿಟ್ಟು ಪ್ರಸ್ತಾಪಿಸಲಿಲ್ಲ.

ಅಧಿಕಾರಿಯು ಚಕಿತನಾಗಿ ನೋಡಿದ ಸಂಗತಿಗಳನ್ನು ಆಶ್ಚರ್ಯಪಡುವಂತದ್ದೇನಲ್ಲ, ಬಹಳ ಸಹಜವಾದದ್ದು, ದಶಕಗಳಿಂದ ನಡೆದುಕೊಂಡು ಬಂದಿರುವಂತದ್ದು ಎಂದು ಉಳಿದ ಅಧಿಕಾರಿಗಳು ಬಹಳ ತಾಳ್ಮೆಯಿಂದಲೇ ವಿವರಿಸುತ್ತಿದ್ದರು. ಪ್ರತಿವರ್ಷವೂ ಮುಂಗಾರು ಮಳೆಯ ನಂತರ ಖರೀಫ್ ಬೆಳೆಯ ಕಟಾವಾದ ನಂತರ ಬೆಳೆಯ ಪ್ರಮಾಣವನ್ನು ಲೆಕ್ಕಹಾಕಬೇಕಾದರೆ ರಾಜಕೀಯವಾಗಿ ಅಭಾವದ ಪರಿಸ್ಥಿತಿಯನ್ನು ಸೃಷ್ಟಿಸಲು ಅನುವಾಗುವಂತೆ ದಾಖಲೆಗಳನ್ನು ತಿದ್ದಲಾಗುತ್ತದೆ. ಇದರ ಪರಿಣಾಮವಾಗಿ ಪರಿಹಾರ ಕಾಮಗಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಮಂಜೂರಾದ ಹಣದಲ್ಲಿನ ದೊಡ್ಡ ಪ್ರಮಾಣವನ್ನು ಕಾಮಗಾರಿ ಕೈಗೊಳ್ಳುವ ಇಲಾಖೆಯು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನುಂಗುವುದು ಅಲಿಖಿತ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಈ ರೀತಿಯಾಗಿ ನುಂಗಿದ ದುಡ್ಡನ್ನು ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಂಚಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಕಾಮಗಾರಿಗಳನ್ನು ನೇರವಾಗಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಿಂದಲೇ ಮಾಡಿಸಲಾಗುತ್ತಿದೆ. ಇದರಲ್ಲಿ ಸರಕಾರಿ ಅಧಿಕಾರಿಗಳ ಹಸ್ತಕ್ಷೇಪ ಬಹಳ ಕಡಿಮೆ ಪ್ರಮಾಣದ್ದಾಗಿದೆ. ಎಲ್ಲರೂ ಈ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗೆ ವಿವರಿಸಲಾಯಿತು. ಇಲ್ಲದಿದ್ದರೆ ಪ್ರತಿವರ್ಷವೂ ತೀವ್ರ ಬರಗಾಲವೆಂದು ಘೋಷಿಸುವುದಾದರೂ ಏಕೆ? ಈ ಅಧಿಕಾರಿ ಪಕ್ಕದ ಜಿಲ್ಲೆಯ ಅನುಭವಿ ಸಹೋದ್ಯೋಗಿಯನ್ನು ಈ ಕುರಿತು ವಿಚಾರಿಸಿದರು. ಅವರು, `ಇದನ್ನು ನೀವೇನೂ ಮಾಡಲು ಸಾಧ್ಯವಿಲ್ಲ, ನೀವು ಇದನ್ನು ತಪ್ಪೆಂದು ಭಾವಿಸಿ ದು:ಖಪಟ್ಟುಕೊಳ್ಳಬಹುದಷ್ಟೇ, ಇಲ್ಲಾ ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಬಹುದು’ ಎಂದರು. `ಯಾವುದೇ ಕಾರಣಕ್ಕೂ ಹಳೆಯ ಗೋರಿಗಳನ್ನು ಕೆದಕಬೇಡಿ’ ಎಂದರು. ಆದರೆ ಈ ಅಧಿಕಾರಿಯು ಮನಸ್ಸಿನಲ್ಲಿ ಗಟ್ಟಿ ನಿಧರ್ಾರ ಮಾಡಿದ್ದರು. ತಾನು ಅಲ್ಲಿಗೆ ಬಂದ 15 ದಿನಗಳ ಒಳಗೆಯೇ, ಅಭಾವ ಕಾಮಗಾರಿಗಳನ್ನು ಕುರಿತು ಪೂರ್ಣಪ್ರಮಾಣದ ತನಿಖೆಯನ್ನು ಆರಂಭಿಸುವುದಾಗಿ ಪ್ರಕಟಿಸಿದರು. ಮುಂಗಾರು ಆರಂಭವಾಗುವುದರೊಳಗೆ ತನಿಖೆ ಮುಗಿಯಬೇಕೆಂದೂ
ಆದೇಶಿಸಿದ್ದರು. ತನ್ನ ಆದೇಶಕ್ಕೆ ವಿರೋಧವಷ್ಟೇನೂ ಇರಲಾರದೆಂದು ಅವರು ಭಾವಿಸಿದ್ದರು.

ಆದರೆ ಎದ್ದಿದ್ದು ವಿರೋಧವಲ್ಲ ದೊಡ್ಡ ಬಿರುಗಾಳಿಯೇ ಆಗಿತ್ತು. ಜಿಲ್ಲೆಯ ಹಿರಿಯ ರಾಜಕಾರಣಿಗಳು ಈ ಆದೇಶವನ್ನು ಜನಪ್ರತಿನಿಧಿಗಳ ಗೌರವದ ಮೇಲಿನ ಹೀನಾಯವಾದ ಮತ್ತು ಹಿಂಸಾತ್ಮಕವಾದ ದಾಳಿಯೆಂದು ಕರೆದರು. ಪತ್ರಿಕೆಗಳ ಮುಖಪುಟಗಳಲ್ಲಿ ದೊಡ್ಡ ಚಚರ್ೆಯೇ ನಡೆಯಿತು. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದು ಸ್ಥಳೀಯ ರಾಜಕಾರಣಿಗಳ ಹೇಳಿಕೆಗಳು. ಜಿಲ್ಲಾಧಿಕಾರಿಯನ್ನು ಜನ-ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ದುರಹಂಕಾರಿ ಎಂದೆಲ್ಲ ಹೀಗಳೆದು ಹೇಳಿಕೆಗಳನ್ನು ನೀಡಲಾಗಿತ್ತು. ಪತ್ರಿಕೆಗಳು ಈ ಅಧಿಕಾರಿಯ ಸಂದರ್ಶನ, ಹೇಳಿಕೆಗಳನ್ನು ಕೆಲವೊಮ್ಮೆ ಪಡೆದರೂ ಅವು ಯಾವುದೂ ಪ್ರಕಟಗೊಳ್ಳಲಿಲ್ಲ. ಕಪ್ಪು-ಬಿಳುಪಿನ ಸಂಗತಿ ಎಂದು ತಾನು ಭಾವಿಸಿದ್ದನ್ನು ಹೇಗೆಲ್ಲಾ ತಿರುಚಿ ಬರೆಯಲಾಗುತ್ತಿದೆ ಎಂದು ಅಧಿಕಾರಿಗೆ ಆಶ್ಚರ್ಯವಾಯಿತು. ಕೇವಲ ಸಂಪಾದಕೀಯ ಮತ್ತು ಸಂಪಾದಕರಿಗೆ ಬಂದ ಪತ್ರಗಳು ಮಾತ್ರ ಜಿಲ್ಲಾಧಿಕಾರಿಯ ಪರವಾಗಿದ್ದವು.  ತನಿಖೆಯ ಆದೇಶವನ್ನು ಹೊರಡಿಸಿದ ಕೆಲ ದಿನಗಳ ತರುವಾಯ ಎಲ್ಲಾ ಪಕ್ಷಗಳ ಹಿರಿಯ
ರಾಜಕಾರಣಿಗಳು, ಎಂ.ಪಿ.ಗಳು, ಎಂ.ಎಲ್.ಎ.ಗಳು, ಸರಪಂಚರು ಜಿಲ್ಲಾಧಿಕಾರಿಯು ಕಚೇರಿಗೆ ಬಂದು ತನಿಖೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಸಾರ್ವಜನಿಕರ ಹಣಬಳಕೆಯಾಗಿರುವ ಯಾವುದೇ ಕೆಲಸಗಳಲ್ಲಿ ಆ ಹಣದ ಸದ್ವಿನಿಯೋಗ ಆಗಿದೆಯೇ ಇಲ್ಲವೇ ಎಂದು ತಿಳಿಯುವುದು ಸಾರ್ವಜನಿಕರ ಕರ್ತವ್ಯ, ಲೆಕ್ಕ ತನಿಖೆಯಿಂದ ಅತ್ಯಂತ ಪ್ರಾಮಾಣಿಕ ಅಧಿಕಾರಿಯೂ ಹೊರತಲ್ಲ, ನೀವು ಈ ತನಿಖೆಯನ್ನು ಸ್ವಾಗತಿಸಬೇಕೆಂದು ಅಧಿಕಾರಿಯು ತನ್ನನ್ನು ಭೇಟಿಮಾಡಲು ಬಂದ ನಿಯೋಗಕ್ಕೆ ತಿಳಿಸಿದರು.

ತನಿಖೆಯು ತನ್ನ ವ್ಯಾಪ್ತಿಯಲ್ಲಿ ಕೇವಲ ಪಂಚಾಯಿತಿಗಳು ನಿರ್ವಹಿಸಿದ ಕಾಮಗಾರಿಯನ್ನಷ್ಟೇ ಒಳಗೊಳ್ಳದೆ ಇಲಾಖಾ ಕಾಮಗಾರಿಗಳನ್ನು ಒಳಗೊಂಡಿದೆ. ತಾನೇ ಸ್ವತ: ಖುದ್ದು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಹಣದ ದುರುಪಯೋಗ ಕಂಡುಬಂದಿದ್ದರಿಂದ ಈ ತನಿಖೆಗೆ ಆದೇಶಿಸಿದ್ದೇನೆಯೇ ಹೊರತು ಸುಮ್ಮನೆ ಅಥವಾ ಆಟಕ್ಕಾಗಿ ಅಲ್ಲ. ಮತ್ತು ಈ ತನಿಖೆಯನ್ನು ವಿರೋಧಿಸುವ ಮೂಲಕ ನೀವು ಸ್ವತ: ಆಪಾದನೆಯನ್ನು ಒಪ್ಪಿಕೊಳ್ಳುತ್ತಿದ್ದೀರಿ. ಆದ್ದರಿಂದ ಈ ತನಿಖೆಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಅವರಿಗೆ ವಿನಯದಿಂದ ಆದರೆ ದೃಢನಿಧರ್ಾರದ
ಧ್ವನಿಯಲ್ಲಿ ತಿಳಿಸಿದರು. ಅವರ ವಿರೋಧವು ಆತನ ತನಿಖೆಯ ನಿಧರ್ಾರವನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ಹೀಗೆ ನಿಯೋಗದೊಂದಿಗಿನ ಭೇಟಿ ಗೊಂದಲದಲ್ಲಿ ಮುಗಿದಿತ್ತು.

ಜಿಲ್ಲಾಧಿಕಾರಿಯು ಹಿಂದಿನ ಚರಿತ್ರೆಯ ಕಾರಣದಿಂದಾಗಿ ಅವರ ವಿರೋಧದ ಕಾವು ಹೆಚ್ಚಾಯಿತು. ಈ ಮುಂಚೆ  ಕೆಲಸಮಾಡಿದ್ದ ಪಕ್ಕದ ಜಿಲ್ಲೆಯಲ್ಲಿ ಕೂಡ ಅಭಾವ ಕಾಮಗಾರಿ ಆರಂಭವಾದ ಒಂದೇ ತಿಂಗಳಿಗೆ ಇದೇ ರೀತಿಯ ತನಿಖೆಗೆ ಆದೇಶಿಸಿದ್ದರು. ಅದರ ಪರಿಣಾಮವಾಗಿ 40ಕ್ಕೂ ಹೆಚ್ಚು ಸರಪಂಚರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ಕೇಸು ನಮೂದಾಗಿತ್ತು. ನಂತರ ಅವರನ್ನು ಬಂಧಿಸಿ ಕೋಟರ್್ನಲ್ಲಿ ಚಾಜರ್್ಶೀಟ್ ಹಾಕಿದ್ದರು. ಆ ಕಾರಣದಿಂದಾಗಿ ಅನುತ್ಪಾದಕವಾದ ಮತ್ತು ಪರಿಶೀಲನೆಗೆ ನಿಲುಕದ ಹೂಳೆತ್ತುವ ಮತ್ತು ಮಣ್ಣು ರಸ್ತೆಗಳನ್ನು ಮಾಡುವಂತಹ ಕೆಲಸಗಳನ್ನು ನಿರ್ಭಂದಿಸಲಾಗಿತ್ತು. ಬರಗಾಲದ ಉಳಿದ ತಿಂಗಳುಗಳಲ್ಲಿ ಹಣದ ದುರ್ಬಳಕೆ ಇದರಿಂದಾಗಿ ನಿಯಂತ್ರಣದಲ್ಲಿತ್ತು. ಮೊದಲಬಾರಿಗೆ ಅಭಾವಕಾಲದ ಕಾಮಗಾರಿಗಳು ವಾಸ್ತವ ರೂಪ ತಳೆದು ಹಲವಾರು ದೀರ್ಘಕಾಲೀನ ಉಪಯುಕ್ತ ಸಾಮುದಾಯಿಕ ಸಂಪನ್ಮೂಲಗಳನ್ನು ಹಳ್ಳಿಗಳು ಹೊಂದಿದ್ದವು. ಇವುಗಳಲ್ಲಿ 1,000 ಕೆರೆಗಳೂ ಸೇರಿದ್ದವು.

ನಿಯೋಗದೊಂದಿಗಿನ ಮಾತುಕತೆ ಮುರಿದುಹೋದ ಮೇಲೆ, ತಕ್ಷಣವೇ ಜಿಲ್ಲಾಧಿಕಾರಿ ಜಿಲ್ಲೆಯ ಅಧಿಕಾರಿಗಳನ್ನು ಹೊಂದಿದ್ದ  ತಂಡಗಳನ್ನು ತನಿಖೆಗೆ ನಿಯುಕ್ತಗೊಳಿಸಿದರು. ತನಗೆ ನಂಬಿಕೆ ಇದ್ದ ಕೆಲವೇ ಪ್ರಾಮಾಣಿಕ ಅಧಿಕಾರಿಗಳನ್ನು ಆಯ್ಕೆಮಾಡಿ, ತಾನು ಅವರು ಕೂಡಿ ತನಿಖೆಗೆ ಒಳಪಟ್ಟಿರುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ನಿರ್ಧರಿಸಿದ್ದ. ಮಳೆ ಬೀಳುವುದಕ್ಕೆ ಆರಂಭವಾಗುವ ಮುಂಚೆಯೇ ತನಿಖೆ ಪೂರ್ಣಗೊಳಿಸಲು ತನಿಖೆಯ ನೀಲಿನಕ್ಷೆಯನ್ನೂ ತಯಾರಿಸಲಾಗಿತ್ತು. ಈ ತನಿಖೆಯಲ್ಲಿ ತೊಡಗಿದ್ದ ತನ್ನೆಲ್ಲ ಸಹೋದ್ಯೋಗಿಗಳ ಸಭೆಯನ್ನು ಕರೆದು ನಿಷ್ಪಕ್ಷಪಾತವಾಗಿ ಮತ್ತು ನಿಭರ್ೀತವಾಗಿ ಕಾರ್ಯನಿರ್ವಹಿಸಲು ತಿಳಿಸಿದ್ದ. ತನಿಖೆಯು ತನ್ನ ಅಣತಿಯಂತೆ ಆರಂಭವಾಗಿದೆ ಎಂದು ಎಲ್ಲರಿಗೂ ಗೊತ್ತಿರುವುದರಿಂದ ಅದರ ಜವಾಬ್ದಾರಿಯಾಗಲಿ ಅಥವಾ ಪರಿಣಾಮವಾಗಲಿ ಅವರ ಮೇಲೆ ಆಗುವುದಿಲ್ಲ ಎಂದು ಅಭಯವನ್ನೂ ನೀಡಿದ್ದ.

ತನಿಖೆಯ ಮೊದಲ ಹಂತದಲ್ಲಿ ಎಲ್ಲಾ ಇಲಾಖೆಗಳಿಂದ ಮತ್ತು ಪಂಚಾಯತ್ಗಳಿಂದ ಹಾಜರಾತಿ ಪುಸ್ತಕಗಳನ್ನು ತರಿಸಲು ನಿರ್ಧರಿಸಿದರು. ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ಈ ನಿಟ್ಟಿನಲ್ಲಿ ಶೀಘ್ರವೇ ಸೂಕ್ತಕ್ರಮ ಕೈಗೊಳ್ಳಲು ನಿದರ್ೇಶಿಸಿದ್ದರು. ಎಲ್ಲಾ ಪಂಚಾಯತ್ಗಳಿಗೆ ಹಾಜರಾತಿಪುಸ್ತಕಗಳನ್ನು ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿಯು ಸುತ್ತೋಲೆಯನ್ನು ಕಳುಹಿಸಿದ್ದರು.

ಮತ್ತೊಂದು ವಿವಾದ :

ಸುತ್ತೋಲೆಯಲ್ಲಿನ ಸೀಜರ್ (ಹಿಂದಿಯಲ್ಲಿನ ಜಪ್ತಿ) ಪದದ ಬಳಕೆಯು ಮತ್ತೊಂದು ವಿವಾದದ ಬಿರುಗಾಳಿಯನ್ನು ಎಬ್ಬಿಸಿತು. ಅನೇಕ ರಾಜಕಾರಣಿಗಳ ಅಭಿಪ್ರಾಯದಲ್ಲಿ ಈ ಪದದ ಬಳಕೆಯು ಜಿಲ್ಲಾಧಿಕಾರಿಯ ದುರಹಂಕಾರ ಮತ್ತು ಉದ್ಧಟತನದ ಕುರುಹು ಆಗಿತ್ತು. ನಮ್ಮನ್ನು ತನಿಖೆಗೆ ಮುಂಚೆಯೇ ಅಪರಾಧಿಗಳನ್ನಾಗಿ ನೋಡುತ್ತಿರುವುದರ ಧ್ಯೋತಕವಿದು ಎಂಬುದು ಅವರ ಅಭಿಪ್ರಾಯವಾಗಿತ್ತು. ಜಿಲ್ಲಾಧಿಕಾರಿಯು ತಾನು ಆ ಪದದ ಬಳಕೆಯನ್ನು ಪ್ರತಿಷ್ಠೆಯ ಧ್ಯೋತಕವಾಗಿ ತೆಗೆದುಕೊಳ್ಳದೆ ‘ಜಪ್ತಿ’ಯ ಬದಲಿಗೆ ‘ತರಿಸಿಕೊಳ್ಳಲಾಗಿದೆ’ ಎಂದು
ಬದಲಾಯಿಸಲು ಸಿದ,್ಧ ಆದರೆ ಅದರಿಂದ ಸುತ್ತೋಲೆಯ ಮುಖ್ಯ ಸಾರಾಂಶವೇನು ಬದಲಾಗದು ಎಂದು ಹೇಳಿದರು. ಆದರೆ ಅದು ಅವರ ವಿರೋಧಿಗಳನ್ನು ತಣ್ಣಗಾಗಿಸಲಿಲ್ಲ. ಅವರಿಗೆ ತನಿಖೆಯ ಆದೇಶವನ್ನು ಹಿಂಪಡೆಯುವುದು ಮತ್ತು ಜಿಲ್ಲಾಧಿಕಾರಿಯ ಸಾರ್ವಜನಿಕ ಕ್ಷಮೆಯಾಚನೆ ಬೇಕಾಗಿತ್ತು.

ಕಾಲಕಳೆದಂತೆ, ರಾಜಕಾರಣಿಗಳ ಕೋಪದ ಕೂಗಿನ ಹಿಂದೆ, ಅವರನ್ನು ಎತ್ತಿಕಟ್ಟಿರುವ, ಸಂಘಟಿಸಿರುವ ಮತ್ತು ಯೋಜಿಸಿರುವ ಜಿಲ್ಲೆಯ ಸರಕಾರಿ ಅಧಿಕಾರಿಗಳಿರುವುದು ಆತನಿಗೆ ಕಂಡುಬಂತು. ಅಭಿವೃದ್ಧಿ ಅಧಿಕಾರಿಯೇ ಉದ್ಧೇಶಪೂರ್ವಕವಾಗಿ ‘ಜಪ್ತಿ’ ಪದವನ್ನು ಬಳಸಿ ಸ್ಥಳೀಯ ರಾಜಕಾರಣಿಗಳಿಗೆ ಅದರ ವಿರುದ್ಧ ತಿರುಗೇಳುವಂತೆ ಪ್ರಚೋದಿಸಿರುವುದರ ಅರಿವು ಆತನಿಗಾಗಿತ್ತ್ತು. ಹೋರಾಟದಲ್ಲಿ ಜಿಲ್ಲಾಧಿಕಾರಿ ಏಕಾಂಗಿಯಾಗಿದ್ದರು. ಸ್ವಲ್ಪ ಸಮಯದಲ್ಲೇ ಅವರ ಆಪ್ತ ಸ್ನೇಹಿತನಾಗಿದ್ದ ಯುವ ಎಸ್.ಪಿ. ಮಾತ್ರ ಈ ಬಿರುಗಾಳಿಯ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಿಂತಿದ್ದನು.

ಎರಡೇ ವಾರಗಳಲ್ಲಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ ನಾಟಕೀಯ ಪರಿಣಾಮಗಳು ಕಾಣಿಸಿಕೊಂಡವು. ರಾಜ್ಯದಲ್ಲೇ ಸಾರ್ವಜನಿಕವಾಗಿ ಗೌರವಾನ್ವಿತ ವ್ಯಕ್ತಿ ಎನಿಸಿಕೊಂಡಿದ್ದ ಜಿಲ್ಲೆಯ ಹಿರಿಯ ಮಂತ್ರಿಯೊಬ್ಬರು ಈ ಸಮಯದಲ್ಲಿ ಜಿಲ್ಲೆಯ ಪ್ರವಾಸ ಕೈಗೊಂಡರು. ಸಾಮಾನ್ಯವಾಗಿ ರಾತ್ರಿ ಸಕ್ಯರ್ೂಟ್ಹೌಸ್ನಲ್ಲಿ ತಮ್ಮ ಎಂದಿನ ಹವ್ಯಾಸದಂತೆ ಬಹಳಷ್ಟು ಸ್ಥಳೀಯ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವಂತೆ ಹೇಳಿಕಳುಹಿಸಿದರು.

ಜಿಲ್ಲಾಧಿಕಾರಿಯವರು ರೂಮಿನೊಳಗೆ ಪ್ರವೇಶಿಸುತ್ತಿದ್ದಂತೆ ಮಿನಿಸ್ಟರ್ ಗಹನವಾದ ವ್ಯಂಗ್ಯದ ಧ್ವನಿಯಲ್ಲಿ ಎಷ್ಟು ಕೋಟಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದೀರಿ? ಎಂದು ಪ್ರಶ್ನಿಸಿದರು. ಹಠಾತ್ತನೆ ಎರಗಿದ ಈ ಪ್ರಶ್ನೆಗೆ ಅಧಿಕಾರಿಯು ತಮ್ಮ ಎಂದಿನ ಧಾಟಿಯಲ್ಲಿ ಇದುವರೆವಿಗೂ ಕೋಟಿಗಳೇನಾಗಿಲ್ಲ ಸಾರ್. ತನಿಖೆ ಮುಂದುವರೆದಿದೆ. ಆದರೆ ಪರಿಸ್ಥಿತಿ ಬಹಳ ಕೆಟ್ಟದಾಗಿರುವಂತೆ ಕಂಡುಬರುತ್ತಿದೆ ಎಂದರು.

ಇದಾದ ನಂತರ 15 ನಿಮಿಷಗಳ ಕಾಲದ ವಾಗ್ದಾಳಿ ಆರಂಭವಾಯಿತು, ಜಿಲ್ಲಾಧಿಕಾರಿಯು ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿದ್ದರು. ಒಂದು ಸಂದರ್ಭದಲ್ಲಿ ಮಾತ್ರ ತಮ್ಮ ಮೂಗುತೂರಿಸಿ ನಾನು ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ ಎಂದು ನೈತಿಕವಾಗಿ ಉಸುರಿದ್ದರು.

ಈ ಭೇಟಿ ಅಪರಿಪೂರ್ಣವಾಗಿಯೇ ಕೆಟ್ಟ ವಾತಾವರಣದಲ್ಲಿ ಮುಗಿಯಿತು. ಆದರೆ ಇದಾದ ಕೆಲ ದಿನಗಳ ನಂತರ ನಡೆದ ಘಟನೆಯೊಂದು ಇದಕ್ಕಿಂತ ಕೆಟ್ಟದಾಗಿ ಅವರನ್ನು ಘಾಸಿಗೊಳಿಸಿತು. ತರುಣ ಸಬ್-ಇಂಜಿಯರ್ ಒಬ್ಬ ತನ್ನ ರೂಮಿನ ಛಾವಣಿಗೆ ಹಗ್ಗಬಿಗಿದು ನೇಣುಹಾಕಿಕೊಂಡಿದ್ದ ಸುದ್ದಿ ಅದಾಗಿತ್ತು. ವಿಧವೆ ತಾಯಿಯೊಬ್ಬಳ ಏಕಮಾತ್ರ ದುಡಿಯುವ ಹಿರಿಮಗ ಆತನಾಗಿದ್ದ. ತನ್ನ ಡೆತ್ನೋಟ್ನಲ್ಲಿ ತನ್ನ ಹಿರಿಯ ಸಹೋದ್ಯೋಗಿಗಳ ಮಾರ್ಗದರ್ಶನದಲ್ಲಿ ತನ್ನ ಸುಪದರ್ಿಯ ಕಾಮಗಾರಿಗಳಲ್ಲಿ ಬಹಳಷ್ಟು ಕೆಟ್ಟದ್ದನ್ನು ಮಾಡಿರುವುದಾಗಿ ಹೇಳಿಕೊಂಡಿದ್ದ. ತನಿಖೆಯ ಅವಮಾನ, ಬಯಲಿಗೆ ಬೀಳುವ ಸಾಧ್ಯತೆ, ನೋವನ್ನು ತಾಳುವುದು ಅವನಿಗೆ ಸಾಧ್ಯವಾಗದೆ ಮತ್ತು ಬೇರೆ ಯಾವುದೇ ದಾರಿ ಕಾಣದೆ ಸಾವನ್ನು ಅಪ್ಪಿಕೊಂಡಿದ್ದ.

ಈ ಮಧ್ಯೆ ಪತ್ರಿಕೆಗಳಲ್ಲಿ ಮತ್ತಷ್ಟು ಏಕಪಕ್ಷೀಯವಾದ ವರದಿಗಳು ದೊಡ್ಡದಾಗಿ ಪ್ರಕಟಗೊಳ್ಳತೊಡಗಿದವು. ಜಿಲ್ಲಾಧಿಕಾರಿಯ ಬೆಂಬಲಕ್ಕೆ ಆಗೊಂದು ಈಗೊಂದು ಸಂಪಾದಕೀಯಗಳು ಬಂದಿದ್ದವು. ಮಿಡಲ್ಕಾಲಂನಲ್ಲಿ ಪ್ರಕಟಗೊಂಡಿದ್ದ ವಿಡಂಬನಾತ್ಮಕ ಕವನವೊಂದು ಜಿಲ್ಲಾಧಿಕಾರಿಗೆ ಖುಷಿ ಕೊಟ್ಟಿತ್ತು. ದುಡ್ಡುಮಾಡುವುದು ಅಧಿಕಾರಿಗಳು ಮತ್ತು ಆಯ್ಕೆಗೊಂಡವರ ಜನ್ಮಸಿದ್ಧಹಕ್ಕು ಮತ್ತು ಡಿಎಂ ಆ ಹಕ್ಕಿಗೆ ಚ್ಯುತಿ ತರುವುದರ ಮೂಲಕ (ತನಿಖೆ ಕೈಗೊಳ್ಳುವುದರ ಮೂಲಕ) ಪ್ರಜಾಪ್ರಭುತ್ವವನ್ನು ವಿರೋಧಿಸುತ್ತಿದ್ದಾರೆ ಎಂದು ಅದರಲ್ಲಿ ಲೇವಡಿ ಮಾಡಲಾಗಿತ್ತು. ಹಿಂದಿಯಲ್ಲಿದ್ದ ಆ ಕವನದ ಪಲ್ಲವಿ ಹೀಗಿತ್ತು:
ಮಸ್ತರ್ ರೋಲ್ ಭಾಯಿ, ಮಸ್ತರ್ ರೋಲ್! ಕರೆ ಕಲೆಕ್ಟರ್ ಬಿಸ್ತರ್ ಗೋಲ್!.
ಭಾವಾನುವಾದ:
ಹಾಜರಾತಿ ಪಟ್ಟಿ! ಹಾಜರಾತಿ ಪಟ್ಟಿ! ಕಲೆಕ್ಟರ್ ಸುತ್ಕೊಂಡೋದ ಹಾಸಿಗೆಪೆಟ್ಟಿ!
(ಹಾಜರಾತಿಪಟ್ಟಿ ಕೇಳಿದ್ರೆ ಗಂಟುಮೂಟೆ ಕಟ್ಟಿ!!)

ಕೊನೆಯಲ್ಲಿ ಪ್ರತಿಭಟನೆಯ ಅಂತಿಮ ಘಟ್ಟ ಎನ್ನುವಂತೆ ಜಿಲ್ಲೆಯ ಎಲ್ಲಾ ಪಾಟರ್ಿಯ 500ಕ್ಕೂ ಹೆಚ್ಚು ಸರಪಂಚರು ಮತ್ತು ಆಡಳಿತಾರೂಢ ಪಕ್ಷದ ಆಯ್ಕೆಯಾದ ಎಲ್ಲಾ ಎಂಎಲ್ಎಗಳು ಜಿಲ್ಲಾಧಿಕಾರಿಯ ವಿರುದ್ಧ ಘೋಷಣೆ ಕೂಗುತ್ತಾ ನಗರದಲ್ಲಿ ಮೆರವಣಿಗೆ ಮಾಡಿದರು. ಕಲೆಕ್ಟರ್ ಕಛೇರಿಗೆ ಮೆರವಣಿಗೆಯಲ್ಲಿ ಬಂದು ಡಿಎಂರವರನ್ನು ಭೇಟಿಯಾಗಬೇಕೆಂದರು. ಡಿಎಂ ಮತ್ತು ಅವರ ಸ್ನೇಹಿತ ಎಸ್ಪಿ ಇಬ್ಬರೂ ಹೊರಬರುತ್ತಿದ್ದಂತೆ ಮತ್ತೊಂದು ಸುತ್ತಿನ ಘೋಷಣೆಗಳನ್ನು ಅವರ ವಿರುದ್ಧ ಕೂಗಲಾಯಿತು. ನಂತರ ಎಲ್ಲಾ ಸರಪಂಚರ ಜಂಟಿ ರಾಜಿನಾಮೆ ಪತ್ರವನ್ನು ತನಿಖೆಯೆಂಬ ಅವಮಾನವನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ನೀಡಲಾಯಿತು. ಇದೊಂದು ನಿರೀಕ್ಷಿಸದೆ ಇದ್ದ ಬರಸಿಡಿಲಾಗಿತ್ತು. ಪ್ರತಿಯೊಂದು ಪತ್ರಿಕೆಯು ಮಾರನೆಯ ದಿನ ಬೆಳಿಗ್ಗೆ ತಮ್ಮ ಪತ್ರಿಕೆಯ ಇದನ್ನು ಮುಖಪುಟದ ಪ್ರಮುಖ ಸುದ್ದಿಯಾಗಿಸಿದ್ದಲ್ಲದೇ ಸಂಪಾದಕೀಯವನ್ನು ಬರೆದವು. ಮುಖ್ಯಮಂತ್ರಿಗಳು ತಕ್ಷಣವೇ ತನ್ನನ್ನು ರಾಜಧಾನಿಯಲ್ಲಿ ಭೇಟಿಯಾಗುವಂತೆ ಜಿಲ್ಲಾಧಿಕಾರಿಯನ್ನು ಕರೆದರು. ವಿಶೇಷ ವಿಮಾನದಲ್ಲಿ ರಾಜಧಾನಿಗೆ ಆತನು ತಕ್ಷಣವೇ ತೆರಳಿದನು.

ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋದ ತಕ್ಷಣವೇ ಅವನಿಗೆ ಅವಕಾಶ ಕಲ್ಪಿಸಲಾಯಿತು. ವಿಮಾನದ ಪ್ರಯಾಣದುದ್ದಕ್ಕೂ ಮುಖ್ಯಮಂತ್ರಿಗಳ ಮುಂದೆ ಏನನ್ನು ಹೇಳಬೇಕೆಂದು ಆತ ಮನದಲ್ಲೇ ರಿಹರ್ಸಲ್ ಮಾಡಿಕೊಂಡಿದ್ದ. ಸಮಯವನ್ನು ವ್ಯರ್ಥಮಾಡದೆ ರಕ್ಷಣಾತ್ಮಕವಾದ ಕೋಪದ ಧ್ವನಿಯ ಛಾಯೆಯಲ್ಲಿ ಅವನಿಂತೆಂದ: ಸರ್, ನೀವು ತನಿಖೆಯನ್ನು ನಿಲ್ಲಿಸುವುದಾದರೆ ನಾನು ರಾಜಿನಾಮೆ ನೀಡಬೇಕಾಗುತ್ತದೆ.

ಆತನ ನಿರೀಕ್ಷೆ ಆಶ್ಚರ್ಯದಾಯಕವಾಗಿ ಹುಸಿಯಾಗುವಂತೆ, ಮುಖ್ಯಮಂತ್ರಿಗಳು ಸಮಾಧಾನದಿಂದ ಮತ್ತು ಬೆಂಬಲಯುತವಾಗಿ ಮಾತನಾಡಿದಾಗ ಆತ ನಿರಾಯುಧನಾಗಿದ್ದ. ಜಿಲ್ಲಾಧಿಕಾರಿಯಿಂದ
ಪೂರ್ಣ ಕಥೆಯನ್ನು ಕೇಳಿದ್ದಲ್ಲದೆ ನೀನು ಸಂಪೂರ್ಣವಾಗಿ ಸರಿಯಾದ ಕೆಲಸವನ್ನೇ ಮಾಡಿದ್ದೀಯ ಎಂದರು. ನಿನ್ನ ತತ್ವಾಧಾರಿತ ನಿಧರ್ಾರವನ್ನು ಕಾಂಪ್ರೊಮೈಸ್ ಮಾಡಿಕೊಳ್ಳುವ ಅಗತ್ಯವಿಲ್ಲ ಮತ್ತು ನಿನ್ನ ಒಪ್ಪಿಗೆಯಿಲ್ಲದೆ ನಾನು ಯಾವುದೇ ನಿಧರ್ಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮಟ್ಟಿಗೆ ಮುಂದುವರೆದರು.

ರಾಜಕೀಯ ಒತ್ತಡಗಳು:

ಅದರೊಂದಿಗೇ ತನ್ನ ಮೇಲಿರುವ ರಾಜಕೀಯ ಒತ್ತಡಗಳನ್ನು ಮತ್ತು ಇಕ್ಕಟ್ಟುಗಳನ್ನು ವಿವರಿಸಿದರು. ಜಿಲ್ಲಾಧಿಕಾರಿಯು ಸ್ವತ: ತನಿಖೆಯ ಸ್ವಯಂನಿಧರ್ಾರ ತೆಗೆದುಕೊಂಡಿದ್ದರೂ, ತಮ್ಮ ಪಕ್ಷದಲ್ಲಿನ ತಮ್ಮ ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಮುಖ್ಯಮಂತ್ರಿಗಳು ಅವರ ಮೇಲೆ ಒತ್ತಡ ಹೇರಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದರು. ಆದ್ದರಿಂದಾಗಿ ತಾನು ತನ್ನ ವಿರೋಧಿಗಳನ್ನು ಸಮಾಧಾನಪಡಿಸುವ ಮತ್ತು ಜಿಲ್ಲಾಧಿಕಾರಿಯು ತನ್ನ ನಿಧರ್ಾರವನ್ನು ಕಾಂಪ್ರೊಮೈಸ್ ಮಾಡಿಕೊಂಡಂತೆ ಆಗದ ರೀತಿಯ ಪರಿಹಾರದ ದಾರಿ ಹುಡುಕುತ್ತಿದ್ದೇನೆ ಎಂದರು.

ಹೀಗೆ ಸುಧೀರ್ಘವಾದ ಪೀಠಕೆಯೊಡನೆ ಅವರು ಮುಂದಿಟ್ಟ ನಿಧರ್ಾರವೇನೆಂದರೆ ತನಿಖೆಯನ್ನು ಜಿಲ್ಲಾಧಿಕಾರಿಯ ಬದಲಿಗೆ ದೊಡ್ಡ ತನಿಖಾ ಆಯೋಗಕ್ಕೆ (ಕಮಿಷನ್ ಆಫ್ ಎನ್ಕ್ವೈರಿ) ವಹಿಸುವುದು. ಇದು ನಿಮಗೆ ಒಪ್ಪಿಗೆಯೇ ಎಂದು ಮುಖ್ಯಮಂತ್ರಿಗಳು ಈ ಅಧಿಕಾರಿಯನ್ನು ಕೇಳಿದರು. ಇದು ತನಿಖೆಯನ್ನು ದಾರಿತಪ್ಪಿಸುವ ಯತ್ನವಾಗಿದೆ ಎಂದು ಇವರು ಹೇಳಿದರು.

ತನಿಖೆ ಮುಂಗಾರುವಿನೊಳಗೆ ಮುಗಿಯದಂತೆ ನೋಡಿಕೊಂಡು ಇಡೀ ತನಿಖೆ ಅರ್ಥಹೀನವಾಗುವಂತೆ ನೋಡಿಕೊಳ್ಳುವವರನ್ನು ತನಿಖಾ ಆಯೋಗಕ್ಕೆ ಸೇರಿಸಬಹುದು ಎಂಬುದು ಅವರ ಭಯವಾಗಿತ್ತು. ತನಿಖಾ ಆಯೋಗಕ್ಕೆ ನಿಭರ್ೀತಿಯಿಂದ ಸ್ವತಂತ್ರವಾಗಿ ತನಿಖೆ ನಡೆಸುವವರನ್ನು ನೇಮಿಸುತ್ತೇನೆ ಮತ್ತು ಮುಂಗಾರಿಗೆ ಮುಂಚೆಯೇ ತನಿಖೆ ಮುಗಿಸುವಂತೆ ಹೇಳುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಇದಾದ ನಂತರ ಈ ಪ್ರಸ್ತಾವವನ್ನು ಒಪ್ಪದೇ ಇರಲು ಡಿಎಂಗೆ ಯಾವುದೇ ಕಾರಣಗಳಿರಲಿಲ್ಲ.

ಮುಖ್ಯಮಂತ್ರಿಗಳು ಕೊಟ್ಟ ಮಾತು ಸತ್ಯವಾಗಿತ್ತು. ತನಿಖಾ ಆಯೋಗದ ನೇಮಕವಾಯಿತು. ಸ್ಥಳೀಯ ರಾಜಕಾರಣಿಗಳು ಜಿಲ್ಲಾಧಿಕಾರಿಗಳಿಂದ ತನಿಖೆ ತಪ್ಪಿಹೋದದ್ದಕ್ಕೆ ನಿಟ್ಟುಸಿರು ಬಿಟ್ಟು ತಮ್ಮ ಜಂಟಿ ರಾಜಿನಾಮೆಯನ್ನು ಹಿಂಪಡೆದರು. ಪತ್ರಿಕೆಗಳಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಜಿಲ್ಲಾಧಿಕಾರಿಯ ವಿರುದ್ಧ ನಡೆಯುತ್ತಿದ್ದ ವಾಗ್ದಾಳಿಯೂ ನಿಂತಿತು. ತಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಜಿಲ್ಲಾಧಿಕಾರಿಯು ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಲು ಆರಂಭಿಸಿದರು.

ಹಿರಿಯ ಗೌರವಾನ್ವಿತ ಪ್ರಾಮಾಣಿಕ ಅಧಿಕಾರಿಗಳ ತಂಡವನ್ನೇ ತನಿಖಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಸಮಿತಿಯು ನಂತರದ ತಿಂಗಳಲ್ಲಿ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿತು. ಅವರ ಬಳಿಯಿದ್ದ ಸಂಪನ್ಮೂಲ ಡಿಎಂರ ಬಳಿ ಇರಲಿಲ್ಲ. ಆದ್ದರಿಂದಾಗಿ ತನಿಖೆಯು ಪೂರ್ಣಪ್ರಮಾಣದಲ್ಲಿ, ಅಂದರೆ ಜಿಲ್ಲಾಧಿಕಾರಿಗಳು ನಡೆಸಿದ್ದರೆ ನಡೆಯುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು. ಅಧಿಕಾರಿಯು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದ ಹಾನಿ/ಭ್ರಷ್ಟಾಚಾರವನ್ನು ಆಯೋಗ ಬಿಚ್ಚಿ ಇಟ್ಟಿತು. ಕೆಲವು ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಪ್ರಮಾಣ ಶೇ. 80ನ್ನು ಮೀರಿತ್ತು. ಕಾಮಗಾರಿಗಳು ಹೆಸರಿಗಷ್ಟೇ ನಡೆದಿದ್ದವು. ಖಚರ್ುಮಾಡಲು ಮೀಸಲಿಟ್ಟಿದ್ದ 18ಕೋಟಿಗಳಲ್ಲಿ 10ಕೋಟಿಗಳಷ್ಟು ನುಂಗಣ್ಣಗಳ ಪಾಲಾಗಿತ್ತು. ಬರಗಾಲದಿಂದ ತತ್ತರಿಸುತ್ತಿದ್ದ ಹಳ್ಳಿಗಳಿಗೆ ಒಂದು ರೂಪಾಯಿಯೂ ತಲುಪಿರಲಿಲ್ಲ. ಇದರಿಂದಾಗಿ ಒಂದಿಂಚಿನಷ್ಟೂ ಸಾಮುದಾಯಿಕ ಸ್ವತ್ತು ಹಳ್ಳಿಗಳಲ್ಲಿ ಸೃಷ್ಟಿಯಾಗಿರಲಿಲ್ಲ. ತನಿಖಾವರದಿಯನ್ನು ರಾಜ್ಯದ ನ್ಯಾಯಲಯಕ್ಕೆ ಮತ್ತು ಅದರ ಪ್ರತಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ವರದಿಯಲ್ಲಿ ನಮೂದಾಗಿದ್ದ ಪ್ರತಿಯೊಂದು ವಿಷಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯು ತಕ್ಷಣವೇ ಸರಕಾರಿ ಅಧಿಕಾರಿಗಳು ಮತ್ತು ಸರಪಂಚರ ವಿರುದ್ಧ ಪೋಲಿಸರ ಮೂಲಕ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದರು. ಇಲ್ಲದಿದ್ದರೆ ತಡವಾಗಿದ್ದರೆ ಮಳೆಬಂದು ಸಾಕ್ಷ್ಯಗಳೆಲ್ಲವೂ ಕೊಚ್ಚಿಹೋಗುವ ಸಾಧ್ಯತೆ ಇತ್ತು.

ಕೆಲವುತಿಂಗಳ ನಂತರ: ಬೆಳಿಗ್ಗೆಯೇ ಎದ್ದು ದಿನಪತ್ರಿಕೆ ತೆರೆದು ಅದನ್ನು ಓದುತ್ತಿದ್ದಂತೆ ತಮ್ಮ ಮನೆಯ ಮುಂದಿನ ತೋಟದ ಮೂಲೆಯಲ್ಲಿ ಅರ್ಧಘಂಟೆಗಳ ಕಾಲ ಜಿಲ್ಲಾಧಿಕಾರಿಗಳು ಸುಮ್ಮನೆ ಕುಳಿತುಬಿಟ್ಟರು. ನಂತರ ತಮ್ಮ ಪತ್ನಿಯನ್ನು ಎಬ್ಬಿಸಿದರು. ಅವಳಿಗೆ ತಮ್ಮ ವಗರ್ಾವಣೆಯ ವಿಷಯವನ್ನು ತಿಳಿಸಿದರು. ಆಕೆ ಒಂದೇ ದಿನದಲ್ಲಿ ಮನೆಯ ಸಾಮಾನುಗಳನ್ನು ಗಂಟು ಮೂಟೆ ಕಟ್ಟಿದರು. ಆ ಜಿಲ್ಲೆಗೆ ವಗರ್ಾವಣೆಯಾಗಿ ಬಂದು ಕೇವಲ ಮೂರೇ ತಿಂಗಳಾಗಿತ್ತು. ಬಹಳಷ್ಟು ಜನ ಅವರನ್ನು ಕಾಣಲು ಬಂದರು. ಅವರಲ್ಲಿ ಹೆಚ್ಚಿನವರು  ಜನಸಾಮಾನ್ಯರಾಗಿದ್ದರು. ಉಳಿದಂತೆ ಈ ಹಿಂದೇ ಅವರು ಕೆಲಸ ಮಾಡಿದ್ದ ಪಕ್ಕದ ಜಿಲ್ಲೆಯ ಕೆಲ ಅಧಿಕಾರಿಗಳೂ ಬಂದಿದ್ದರು.

ಇದೆಲ್ಲಾ ಬೇಕಿತ್ತೇ?

ತನಿಖಾ ವರದಿಯು ಸಚಿವಾಲಯದಲ್ಲಿ ಧೂಳು ಕುಡಿಯುತ್ತಾ ಕೂತಿದ್ದಂತೆ ಆತನ ಸ್ನೇಹಿತರು ಇದೆಲ್ಲಾ ಬೇಕಿತ್ತೇ? ಕೊನೆಗೆ ಏನನ್ನು ಸಾಧಿಸಿದೆ? ಎಂದು ಕೇಳಲಾರಂಭಿಸಿದರು. ಅವರಿಗೆ ಏನು ಉತ್ತರಿಸಬೇಕೆಂದು ಗೊತ್ತಾಗಲಿಲ್ಲ. ತಾನು ಜಿಲ್ಲೆಗಾಗಿ ಹಮ್ಮಿಕೊಂಡಿದ್ದ ಹಲವಾರು ಯೋಜನೆಗಳು ಅಪೂರ್ಣಗೊಂಡಿದ್ದ ಸಂಗತಿ ಅವರಲ್ಲಿ ಉದ್ವೇಗ ಮತ್ತು ಕಳವಳವನ್ನು ಹುಟ್ಟಿಹಾಕಿತ್ತು.

ಆ ಜಿಲ್ಲೆಯನ್ನು ಬಿಟ್ಟ ಬಹುದಿನಗಳ ನಂತರವೂ ಹಲವಾರು ಪ್ರಶ್ನೆಗಳು ಅವರ ಮನಸ್ಸನ್ನು, ಹೃದಯವನ್ನು ಕಾಡುತ್ತಿದ್ದವು. ಭ್ರಷ್ಟಾಚಾರವು ನಮ್ಮ ವ್ಯವಸ್ಥೆಯಲ್ಲಿ ಅನಿವಾರ್ಯವೇ? ಅದನ್ನು ವಿರೋಧಿಸುವ ಪ್ರಯತ್ನವು ವ್ಯರ್ಥವೇ? ನಮ್ಮ ಸುತ್ತಮುತ್ತಲಿನ ಭ್ರಷ್ಟಾಚಾರವನ್ನು ನಿಯಂತ್ರಿಸದೇ ನಾವಷ್ಟೇ ಸರಿಯಿದ್ದರೆ ಸಾಕೇ? ಹಿರಿಯ ಅಧಿಕಾರಿಗಳು ಹೇಳಿದ್ದಂತೆ ಹಿಂದಿನ ಗೋರಿಗಳನ್ನು ಕೆದಕದೆ ತನ್ನ ಅವಧಿಯಲ್ಲಿ ಮಾತ್ರ ಭ್ರಷ್ಟಾಚಾರವಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕಿತ್ತೇ? ಸ್ಥಳೀಯ ಅಧಿಕಾರವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ತನ್ನ ವಿರುದ್ಧ ತಿರುಗಿಬಿದ್ದದು ಏಕೆ? ಅಷ್ಟೊಂದು ಜನರು ತನ್ನ ಬೆಂಬಲಕ್ಕಿದ್ದರೂ ಅವರ ಬೆಂಬಲ ಸಕ್ರಿಯಾತ್ಮಕವಾಗಿರಲಿಲ್ಲವೇಕೆ? ತಾನು ಬೇರೆ ರೀತಿ ವತರ್ಿಸಿದ್ದರೆ ತನ್ನ ಉದ್ಧೇಶ ಯಶಸ್ವಿಯಾಗುತ್ತಿತ್ತೇ? ಕಾಯಂ ಆಗಿ ಭ್ರಷ್ಟಾಚಾರವನ್ನು ತೊಡೆದುಹಾಕಿ ಬಡವರಿಗೆ ನ್ಯಾಯ ಒದಗಿಸಲು ಏನಾದರು ಮಾಡಲು ಸಾಧ್ಯವೇ? ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟ, ಏಕೆ ಏಕಾಂಗಿ ಹೋರಾಟವಾಗುತ್ತದೆ?

ಇರಿಯುವಂತಹ ಈ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರಲಿಲ್ಲ. ಆದರೆ ಅವರಿಗೆ ಒಂದು ವಿಷಯದ ಬಗೆಗೆ ಖಚಿತತೆ ಇತ್ತು. ಮತ್ತೊಮ್ಮೆ ಕಾಲದಲ್ಲಿ ಹಿಂದಕ್ಕೆ ಹೋಗಲು ಸಾಧ್ಯವಿದ್ದರೆ ಅವರು ಮತ್ತೆ ಅದೇ ರೀತಿ ವತರ್ಿಸುತ್ತಿದ್ದರು, ಖಂಡಿತವಾಗಿ ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವುದಾಗಲಿ ಅಥವಾ ಆಳುವ ಶಕ್ತಿಗಳೊಂದಿಗೆ ರಾಜಿ/ಒಪ್ಪಂದಕ್ಕೆ ಮುಂದಾಗುತ್ತಿರಲಿಲ್ಲ.

ಅನುವಾದ: ವಿ.ಬಿ. ತಾರಕೇಶ್ವರ

ತೇಜಸ್ವಿ ನೆನಪಿನಲ್ಲಿ : ಜೀವಂತ ರೋಲ್ ಮಾಡೆಲ್ ಇನ್ನಿಲ್ಲ…

[ಇದು “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ಏಪ್ರಿಲ್ 20, 2007 ರ ಸಂಚಿಕೆಯ ನನ್ನ ಅಂಕಣಕ್ಕೆ ಬರೆದ ಲೇಖನ. ಇಂದಿಗೆ ತೇಜಸ್ವಿಯವರು ಮರಣ ಹೊಂದಿ (5/4/2007) ಆರು ವರ್ಷಗಳಾದವು.  ಆ ನೆನಪಿಗೆ ಈ ಲೇಖನ ಇಲ್ಲಿ ಪ್ರಕಟಿಸುತ್ತಿದ್ದೇನೆ. ರವಿ]

– ರವಿ ಕೃಷ್ಣಾರೆಡ್ಡಿ

ಪತ್ರಿಕೆಯ ಕೆಲಸಕ್ಕೆಂದು ಎರಡು ವಾರದ ಹಿಂದೆ ಅಮೇರಿಕಾದಿಂದ ಬೆಂಗಳೂರಿಗೆ ವಿಮಾನ ಹತ್ತಿದಾಗ ದಾರಿ ಓದಿಗೆಂದು ನನ್ನ ಕೈಯ್ಯಲ್ಲಿದ್ದ ಪುಸ್ತಕ ನಾನು ಈ ಹಿಂದೆಯೆ ಓದಿದ್ದ ‘ಕರ್ವಾಲೊ’. ಆ ಸುದೀರ್ಘ ವಿಮಾನ ಪ್ರಯಾಣದಲ್ಲಿ ನಿದ್ದೆಯಿಂದ ಎಚ್ಚೆತ್ತಾಗಲೆಲ್ಲ 23 ನೆ ಮುದ್ರಣದ ಕರ್ವಾಲೊ ಕೈಯಲ್ಲಿರುತ್ತಿತ್ತು. ಬೆಂಗಳೂರಿಗೆ ಬಂದು ಮೂರು ದಿನ ಮಂಡ್ಯ-ಮೈಸೂರು-ಮಂಗಳೂರು-ಶಿವಮೊಗ್ಗ ಇಲ್ಲೆಲ್ಲ ಸುತ್ತಾಡಿಕೊಂಡು ಬಂದ ಮೇಲೆ ಕಳೆದ ವಾರದ ಲೇಖನ ಬರೆಯಲು ಕುಳಿತಾಗ ಅದರಲ್ಲಿ ತೇಜಸ್ವಿಯವರೂ ಕಾಣಿಸಿಕೊಂಡಿದ್ದರು. ಅದರ ಪುಟವಿನ್ಯಾಸ ಮಾಡುವಾಗ ನಮ್ಮ ವಿನ್ಯಾಸಕಾರ ವೀರೇಶ್ ತೇಜಸ್ವಿಯವರ ಅದ್ಭುತವಾದ ಚಿತ್ರವೊಂದನ್ನು ಅಲ್ಲಿ ಅಳವಡಿಸಿದ್ದರು. ಇವೆಲ್ಲ ಕಾಕತಾಳೀಯವೊ ಏನೊ ಗೊತ್ತಾಗುತ್ತಿಲ್ಲ. ಅದರೆ, ತೇಜಸ್ವಿ ನಮಗೆಲ್ಲ ಹೇಗೆ ಪ್ರಸ್ತುತವಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ.

ಕರ್ನಾಟಕದ ಯುವಜನತೆ ಎಲ್ಲಾ ತರಹದ ಮೌಢ್ಯ, ಶೋಷಣೆ, ಜಾತಿವಾದ ಹಾಗು ಕೋಮುವಾದಗಳನ್ನು ನಿವಾರಿಸಿಕೊಂಡು, ವಿಜ್ಞಾನದೀವಿಗೆಯನ್ನು ಹಿಡಿದು kuvempuನಿರಂಕುಶಮತಿಗಳಾಗಬೇಕೆಂದು ಸಂದೇಶ ನೀಡಿದ ಕುವೆಂಪುರವರ ಬಗ್ಗೆ ತೇಜಸ್ವಿಯವರು “ಅಣ್ಣನ ನೆನಪು” ವಿನಲ್ಲಿ ಹೀಗೆ ಬರೆಯುತ್ತಾರೆ: “(ಅಣ್ಣ) ಮಂತ್ರವನ್ನೇನೋ ಹೇಳಿದರು, ಆದರೆ ಅದನ್ನು ಕಾರ್ಯಗತಗೊಳಿಸುವ ತಂತ್ರದ ಬಗ್ಗೆ ಯೋಚಿಸಿರಲೇ ಇಲ್ಲ.

ಕಳೆದ ನಾಲ್ಕೈದು ವರ್ಷಗಳಿಂದ, ಈ ಮೇಲಿನ ವಾಕ್ಯದ ಕುರಿತು ಚಿಂತಿಸಿದಷ್ಟು ಬಹುಶಃ ನಾನು ಇನ್ಯಾವುದೆ ವಾಕ್ಯ ಅಥವ ಪದವನ್ನು ಕುರಿತು ಚಿಂತಿಸಿಲ್ಲ. ಭಾರತದ ಸಮಾಜದಲ್ಲಿ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೋಮುವಾದ, ಅಸಮಾನತೆ, ಶೋಷಣೆ; ಹೀನಾಯವಾಗಿ ಹೋಗುತ್ತಿರುವ ರಾಜಕಾರಣ ಮತ್ತು ಇಲ್ಲವಾಗುತ್ತಿರುವ ರಾಜಕೀಯ-ಸಾಂಸ್ಕೃತಿಕ ನಾಯಕತ್ವ; ಇನ್ನಿಲ್ಲದ ವೇಗದಲ್ಲಿ ಬೆಳೆಯುತ್ತಿರುವ ಮತಪ್ರೇಮವೇ ದೇಶಪ್ರೇಮ ಎಂಬ ಉನ್ಮಾದ; ಇಂತಹ ಪ್ರತಿಯೊಂದನ್ನು ಯೋಚಿಸಿದಾಗಲೂ ನನಗೆ ಕುವೆಂಪು ಮತ್ತು ತೇಜಸ್ವಿ ನೆನಪಾಗುತ್ತಾರೆ. ಮಂತ್ರದಿಂದ ತಂತ್ರದತ್ತ ಹೋಗುವುದು ಹೇಗೆ ಎಂಬ ಆಲೋಚನೆ ಆವರಿಸುತ್ತದೆ.

ಅದು 2004 ರ ಜನವರಿ ತಿಂಗಳು. ಕರ್ನಾಟಕದಲ್ಲಿ ನಾಡಗೀತೆಯ ವಿವಾದ ಭುಗಿಲೆದ್ದಿತ್ತು. ತೇಜಸ್ವಿಯವರು ಕೆಲವು ಸೈದ್ಧಾಂತಿಕ ಕಾರಣಗಳಿಗಾಗಿ ನಾಡಗೀತೆಯ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದಾಗ ಅವರ ಮೇಲೆ ಪ್ರತ್ಯಕ್ಷವಾಗಿ ಮತ್ತು ಕುವೆಂಪುರವರ ವಿರುದ್ಧ ಪರೋಕ್ಷವಾಗಿ ಮಾಧ್ಯಮಗಳಲ್ಲಿ ಜಾತಿವಾದಿಗಳು ಮುಗಿಬಿದ್ದರು. ಅಮೇರಿಕದಲ್ಲಿದ್ದ ನಾನು ಆ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸುತ್ತಿದ್ದೆ. ಇಂಟರ್‌ನೆಟ್‌ನಲ್ಲಂತೂ ಅಸಹ್ಯ-ಹೇಸಿಗೆ ಹುಟ್ಟಿಸುವಷ್ಟು ಜಾತಿವಾದ ಮತ್ತು ಅಸಹಿಷ್ಣುತೆ. ಆಗ ನನಗೆ ಅನ್ನಿಸಿದ್ದು, tejasviಕನ್ನಡದ ಇಂಟರ್‌ನೆಟ್ ಓದುಗರಿಗೆ ಕುವೆಂಪುರವರ ವಿಚಾರಗಳೇ ಗೊತ್ತಿಲ್ಲ, ಎಂದು. ಇದರ ಜೊತೆಜೊತೆಗೆ, 12 ನೆ ಶತಮಾನದಲ್ಲಿಯೇ ವೈಚಾರಿಕ ಕ್ರಾಂತಿ ಮಾಡಿದ ವಚನ ಸಾಹಿತ್ಯವನ್ನು ಯಾವೊಬ್ಬ ಶ್ರೀಮಂತ ಲಿಂಗಾಯತ ಮಠವಾಗಲಿ, ಸಂಘಸಂಸ್ಥೆಗಳಾಗಲಿ ಇಂಟರ್‌ನೆಟ್‌ನಲ್ಲಿ ಹಾಕಿಲ್ಲ ಎಂಬ ನೋವೂ ಕಾಡುತ್ತಿತ್ತು. ಹಾಗೆ ಹುಟ್ಟಿದ್ದು vicharamanatapa.net. ಆ ವೆಬ್‌ಸೈಟಿನಲ್ಲಿ ಕುವೆಂಪುರವರ “ವಿಚಾರಕ್ರಾಂತಿಗೆ ಆಹ್ವಾನ” ದಿಂದ ಕೆಲವು ಲೇಖನಗಳನ್ನು ಹಾಕಲು ತೇಜಸ್ವಿಯವರ ಅನುಮತಿಗಾಗಿ ಪ್ರಯತ್ನಿಸಬೇಕು ಎಂದುಕೊಂಡಾಗ ನೆನಪಿಗೆ ಬಂದಾತ ನನ್ನ ಇಂಜಿನಿಯರಿಂಗ್ ಸಹಪಾಠಿ ಸೋಮಶೇಖರ. ತೇಜಸ್ವಿಯವರ ಮಗಳು ಈಶಾನ್ಯೆ ಬೆಂಗಳೂರಿನ ಐಟಿ ಕಂಪನಿಯಲ್ಲಿ ಈತನ ಸಹೋದ್ಯೋಗಿ. ಆತನಿಗೆ ಹೇಳಿ ತೇಜಸ್ವಿಯವರ ಮೂಡಿಗೆರೆಯ ನಂಬರ್ ತರಿಸಿಕೊಂಡೆ. ಇಲ್ಲಿಯೇ ಇರುವ ಇನ್ನೊಬ್ಬ ಹಿರಿಯ ಗೆಳೆಯ ಮೃತ್ಯುಂಜಯ ಹರ್ತಿಕೋಟೆಯವರು ಈ ವಿಚಾರವಾಗಿ ಒಮ್ಮೆ ತೇಜಸ್ವಿಯವರ ಬಳಿ ಮಾತನಾಡಿಯಾದ ಮೇಲೆ ನಾನು ತೇಜಸ್ವಿಯವರಿಗೆ ಕರೆ ಮಾಡಿ ಅವರ ಅನುಮತಿ ಕೋರಿದೆ. “ಇಡೀ ಪುಸ್ತಕ ಬೇಡ್ರಿ. ಅದರಲ್ಲಿ ನಿಮಗೆ ಸೂಕ್ತ ಅನ್ನಿಸಿದ ಎರಡು-ಮೂರು ಲೇಖನ ಹಾಕಿಕೊಳ್ರಿ,” ಎಂದರು. ಮುಂದಿನ ಎರಡು ವಾರಗಳು ನಾನು ಮತ್ತು ನನ್ನ ಹೆಂಡತಿ ಪಟ್ಟಾಗಿ ಕುಳಿತು ಕುವೆಂಪುರವರು ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ ಮಾಡಿದ “ವಿಚಾರ ಕ್ರಾಂತಿಗೆ ಆಹ್ವಾನ” ಮತ್ತು 1974 ರಲ್ಲಿ ಮೈಸೂರಿನ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದಲ್ಲಿ ಮಾಡಿದ “ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ!” ಲೇಖನಗಳನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡಿ, ವೆಬ್‌ಸೈಟಿಗೆ ಏರಿಸಿದೆವು.

2004 ರ ಜುಲೈನಲ್ಲಿ ತೇಜಸ್ವಿಯವರು ಮತ್ತೊಂದು ಚರ್ಚೆಗೆ ದಾರಿ ಮಾಡಿಕೊಟ್ಟರು. ಅದು ಕಂಪ್ಯೂಟರ್‌ನಲ್ಲಿ ಕನ್ನಡ ಅಳವಡಿಕೆಗೆ ಸಂಬಂಧಿಸಿದಂತೆ. ಇದಕ್ಕೆ ಮಹತ್ತರ ತಿರುವು ಬಂದಿದ್ದು ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ತೇಜಸ್ವಿಯರ ಸಂದರ್ಶನ ಮಾಡಿದ ಮೇಲೆ. ಅದನ್ನು ಓದಿದ ಕೂಡಲೆ ನಾನು ನಾಗೇಶ ಹೆಗಡೆಯವರಿಗೆ ಫೋನ್ ಮಾಡಿ ಈ ಚರ್ಚೆಯನ್ನು ಸರ್ಕಾರದ ಎಮ್ಮೆ ಚರ್ಮಕ್ಕೆ ಚುರುಕು ಮುಟ್ಟುವ ತನಕ ಮುಂದುವರೆಸಬೇಕೆಂದು ಕೋರಿಕೊಂಡೆ. ಪ್ರಜಾವಾಣಿಯ ವಾಚಕರ ವಾಣಿಗೆ ಪತ್ರವನ್ನೂ ಬರೆದೆ. ಅದರ ಮುಂದಿನ ವರ್ಷ ಬೆಂಗಳೂರಿಗೆ ಬಂದಿದ್ದಾಗ ‘ಅಗ್ನಿ’ ವಾರಪತ್ರಿಕೆಯ ಪತ್ರಕರ್ತ ಮಿತ್ರ ಮಂಜುನಾಥ ಅದ್ದೆಯವರೊಡನೆ ‘ಆದರೆ ತೇಜಸ್ವಿಯವರನ್ನು ನೋಡಿ ಬರಬೇಕು,’ ಎಂದು ಪ್ರಸ್ತಾಪಿಸಿದ್ದೆ. ತೇಜಸ್ವಿಯವರ ಮನೆಯಲ್ಲಿ ಆಗಾಗ ಇದ್ದು ಬರುತ್ತಿದ್ದ ಅದ್ದೆ ಕೂಡಲೆ ತೇಜಸ್ವಿಯವರಿಗೆ ಫೋನ್ ಮಾಡಿದರು. ಆದರೆ ಅಂದು ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆ ವರ್ಷ ಅವರನ್ನು ನೋಡದೆ ವಾಪಸು ಬರಬೇಕಾಯಿತು.

ಕಳೆದ ವರ್ಷ “ವಿಕ್ರಾಂತ ಕರ್ನಾಟಕ” ಪ್ರಾರಂಭಿಸಲು ನಾನು ಬೆಂಗಳೂರಿಗೆ ಬಂದಿದ್ದಾಗ ತೇಜಸ್ವಿಯವರು ಆರೋಗ್ಯ ಸರಿಯಿಲ್ಲದೆ ಬೆಂಗಳೂರಿನಲ್ಲಿಯೆ ಇದ್ದರು. ಆ ಸಮಯದಲ್ಲಿ ಜಯಂತ ಕಾಯ್ಕಿಣಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದು ಗಾಂಧಿಬಜಾರಿನಲ್ಲಿತ್ತು. ನಾನು ಮತ್ತು ಆಗಿನ ನಮ್ಮ ಸಂಪಾದಕರಾಗಿದ್ದ ಸತ್ಯಮೂರ್ತಿಯವರು ಅಲ್ಲಿಗೆ ಹೋಗಿದ್ದೆವು. ಎಲ್ಲರಿಗೂ ಆಶ್ಚರ್ಯವಾಗುವಂತೆ ತೇಜಸ್ವಿಯವರು ಆ ಸಮಾರಂಭಕ್ಕೆ ಬಂದುಬಿಟ್ಟರು. ಇನ್ನೂ 68 ವರ್ಷದ ತೇಜಸ್ವಿ ಅಂದು ಬಹಳ ನಿತ್ರಾಣವಾಗಿ, ವಯಸ್ಸಿಗಿಂತ ಹಿರಿಯರಾದಂತೆ ಕಂಡರು. ಕಾರ್ಯಕ್ರಮ ಮುಗಿದ ಮೇಲೆ ಹೋಗಿ ಪರಿಚಯ ಮಾಡಿಕೊಂಡೆ. ಹೆಚ್ಚಿಗೆ ಮಾತನಾಡುವ ಪರಿಸ್ಥಿತಿ ಅಲ್ಲಿರಲಿಲ್ಲ.

ಎರಡು ವಾರದ ಹಿಂದೆ ನಮ್ಮ ಪತ್ರಿಕೆಯ ಮಲ್ಲನಗೌಡರು ಮತ್ತು ನಾನು ಕಾರ್ಕಳದಿಂದ ಶಿವಮೊಗ್ಗಕ್ಕೆ ಹೋಗುವಾಗ ಮೂಡಿಗೆರೆಯ ಮೇಲೆ ಹೋಗಿದ್ದರೆ ಚೆನ್ನಿತ್ತುTejaswi.-PHOTO :M.A.SRIRAM  - Tejaswi.-PHOTO :M.A.SRIRAM ಎಂದು ಅನೇಕ ಸಲ ಮಾತಾಡಿಕೊಂಡೆವು. ಶಿವಮೊಗ್ಗಾದಲ್ಲಿ ಹಿರಿಯ ಲೇಖಕ ಡಿ.ಎಸ್. ನಾಗಭೂಷಣ್‌ರ ಜೊತೆ ಮಾತನಾಡುತ್ತ, ತೇಜಸ್ವಿಯವರನ್ನು ನೋಡದೆ ಬಂದೆವು ಎಂದು ಹಲುಬಿದ್ದೆವು. ನಾಗಭೂಷಣ್ ಅವರು, ‘ಮುಂದಿನ ವಾರ ನಾನು ಮೂಡಿಗೆರೆಗೆ ಹೋಗುತ್ತಿದ್ದೇನೆ,’ ಎಂದರು. ಅವರು ಮೂಡಿಗೆರೆಗೆ ಹೋಗಿದ್ದನ್ನು ನಾನು ಟೀವಿಯಲ್ಲಿ ನೋಡಿದೆ. ಅದು ಅವರು ತೇಜಸ್ವಿಯವರ ಪಾರ್ಥಿವ ಶರೀರದ ಮುಂದೆ ನಿಂತಿದ್ದ ದೃಶ್ಯ. ಎಲ್ಲರದೂ ತಡವಾಗಿತ್ತು.

ಶುಕ್ರವಾರ ತೇಜಸ್ವಿಯವರ ಶವಸಂಸ್ಕಾರ. ನಾನು ಅಮೇರಿಕಕ್ಕೆ ಹೊರಡಬೇಕಿದ್ದದ್ದು ಶನಿವಾರ. ವಾಪಸು ಹೊರಡಲು ಮಾಡಿಕೊಳ್ಳಬೇಕಿದ್ದ ಯಾವುದೇ ತಯ್ಯಾರಿ ಇನ್ನೂ ಮಾಡಿಕೊಂಡಿರಲಿಲ್ಲ. ಆದರೂ ಅದ್ದೆಗೆ, ನಾನೂ ನಿಮ್ಮ ಜೊತೆ ಮೂಡಿಗೆರೆಗೆ ಬರುತ್ತೇನೆ ಎಂದು ತಿಳಿಸಿ ಕೊನೆಯ ಕ್ಷಣದಲ್ಲಿ ಹಿಂದೆಗೆದೆ. ಆ ವಿಷಾದ ಜೀವನ ಪರ್ಯಂತ ಬೆನ್ನಿಗಿರುತ್ತದೆ.

ಹೀಗೆ ಕಳೆದ ನಾಲ್ಕೈದು ವರ್ಷಗಳಿಂದ ನನ್ನ ಜೀವಂತ Role Model ಆಗಿದ್ದ, Conviction ಮೂಡಿಸುತ್ತಿದ್ದ ಮನೆಯ ಹಿರಿಯ ಇನ್ನಿಲ್ಲ. ಕಾನನದ ನಡುವಿನಿಂದ ನನ್ನ ಪೀಳಿಗೆಗೆ ಮೌನವಾಗಿ ಮಾರ್ಗದರ್ಶನ ಮಾಡುತ್ತಿದ್ದ ಋಷಿ ಇನ್ನಿಲ್ಲ. ಸಮಾಜ ಸುಧಾರಣೆಯ ಮಂತ್ರ ಮತ್ತು ತಂತ್ರಗಳ ಕುರಿತು ಮಾತನಾಡುತ್ತಿದ್ದ ಮಾಯಾಲೋಕದ ವಾಸ್ತವಜೀವಿ ಇನ್ನಿಲ್ಲ. ಕೊನೆಯ ಗುರು ಮತ್ತು ಹಿರಿಯನನ್ನು ಕಳೆದುಕೊಂಡ ತಬ್ಬಲಿಗಳು ನಾವೆಲ್ಲ.

ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ?


– ಚಿದಂಬರ ಬೈಕಂಪಾಡಿ


 

ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ ?- ಇಂಥ ಪ್ರಶ್ನೆ ಕೇಳುವ ಅನಿವಾರ್ಯತೆಗೂ ಕಾರಣವಿದೆ. ಮತಹಾಕುವ ಜನ ಬಾಯಿಬಿಟ್ಟು ಇಂಥದ್ದೇ ಪಕ್ಷಕ್ಕೆ ಎಂದಾಗಲೀ, ಈ ಅಭ್ಯರ್ಥಿಗೆ ಅಂತಾಗಲೀ ನಿರ್ದಿಷ್ಟವಾಗಿ ಹೇಳುವುದಿಲ್ಲ. ಯಾರು ಕೇಳಿದರೂ ನಿಮ್ಮ ಪಕ್ಷಕ್ಕೇ ನಮ್ಮ ಮತ ಅಂತಲೋ, ನಿಮಗೇ ನಮ್ಮವರ ಮತವೆಂದೋ ಹೇಳುತ್ತಾರೆ. ಆದರೆ ಅವರ ಆಯ್ಕೆ ಯಾವುದಾದರೂ ಒಂದು ಆಗಿರುತ್ತದೆ.

ಹಾಗೆಯೇ ರಾಜಕಾರಣಿಗಳು ಅಪ್ಪಿ ತಪ್ಪಿ ಜನರ ಸಮಸ್ಯೆಗಳನ್ನು ಆಧರಿಸಿ ಮತ ಕೇಳುವುದಿಲ್ಲ. ತಮ್ಮ ಪಕ್ಷ, ತಮ್ಮ ನಾಯಕರ ವರ್ಚಸ್ಸು, ಅವರ ಸಾಧನೆಯನ್ನು ಹೇಳಿಕೊಂಡು ಮತಯಾಚನೆ ಮಾಡುತ್ತಾರೆ.

ಜನರು ತಮ್ಮ ಮತ ಯಾರಿಗೆ ಎಂದು ಗುಟ್ಟು ಬಿಡದಿರುವುದಕ್ಕೆ ತನ್ನ ಮತದ ಪಾವಿತ್ರ್ಯತೆ ಉಳಿಸಿಕೊಳ್ಳುವುದು. ಆದರೆ ರಾಜಕಾರಣಿಗಳು ಜನರ ಸಮಸ್ಯೆಗಳ ಹಿನ್ನೆಲೆಯಲ್ಲಿ ಮತ ಕೇಳದಿರುವುದಕ್ಕೆ ಅವುಗಳನ್ನು ನಿವಾರಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟವಾದ ಅರಿವಿನಿಂದ. ಜನರಿಗೆ ಬೇಕಾಗಿರುವವರು ತಮ್ಮ ಸಮಸ್ಯೆಗಳಿಗೆ ಕಿವಿಯಾಗುವವರು, voteತಮಗೆ ಧ್ವನಿಯಾಗುವವರು. ಕಿವಿಯಾಗದವರು, ಧ್ವನಿಯಾಗದವರು ಕೇವಲ ಭಾಷಣ ಮಾಡಿಯೇ ರಾಜಕಾರಣದಲ್ಲಿ ಚಲಾವಣೆಯಲ್ಲಿರುತ್ತಾರೆ. ಆದರೆ ಇಂಥವರನ್ನು ಜನ ಒಂದಲ್ಲಾ ಒಂದು ಸಲ ಗುರುತಿಸಿ ಮನೆಗೆ ಕಳುಹಿಸುತ್ತಾರೆ. ಅಂಥ ಎಚ್ಚರಿಕೆ ಸಂದೇಶ ಚುನಾವಣೆಯ ಮೂಲಕ ರವಾನೆಯಾದಾಗ ಮಾತ್ರ ಜನ ನಿರೀಕ್ಷೆ ಮಾಡಲು ಅವಕಾಶವಾಗುತ್ತದೆ.

ರಾಜ್ಯದ 224 ಕ್ಷೇತ್ರಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಜನ ನಿರ್ಧರಿಸುವ ಮುನ್ನವೇ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾರು ಮುಖ್ಯಮಂತ್ರಿಯಾಗುತ್ತಾರೆಂದು ಮಾಧ್ಯಮಗಳು ಭವಿಷ್ಯ ನುಡಿದಿವೆ. ಚುನಾವಣೆಗೂ ಮುನ್ನವೇ ಬರುತ್ತಿರುವ ಇಂಥ ಜನಮತವನ್ನು ರಾಜಕೀಯ ಪಕ್ಷಗಳು ಯಾವರೀತಿ ಸ್ವೀಕರಿಸುತ್ತಿವೆ ಎನ್ನುವುದೂ ಮುಖ್ಯ.

ಜನಮತ ತಮ್ಮ ಪರವಾಗಿ ಬಂದಿದ್ದರೆ ಖುಷಿ ಪಡುತ್ತಾರೆ, ವಿರುದ್ಧವಾಗಿ ಬಂದಿದ್ದರೆ ಕೆಂಡಕಾರುತ್ತಾರೆ. ಮತದಾರನ ಮನದಾಳವನ್ನು ಮಾಧ್ಯಗಳು ಅರ್ಥಮಾಡಿಕೊಂಡಿರುವುದಾಗಿ ಹೇಳುತ್ತಿರುವುದು ಅದು ಆ ಮಾಧ್ಯಮಗಳ ವೈಯಕ್ತಿಕವಾದ ನಿಲುವು ಮತ್ತು ಅದು ನಿಜವಾದ ಜನಮತಕ್ಕೆ ಹತ್ತಿರವಿರಬಹುದು, ಇಲ್ಲದೆಯೂ ಇರಬಹುದು.
ರಾಜಕೀಯದಲ್ಲಿ ಟ್ರೆಂಡ್ ಎನ್ನುವ ಪದ ಬಹಳಷ್ಟು ಬಳಕೆಯಲ್ಲಿದೆ. ಟ್ರೆಂಡ್ ಶಾಶ್ವತವಲ್ಲ. ಕ್ಷಣ ಕ್ಷಣಕ್ಕೆ ಬದಲಾವಣೆಯಾಗುತ್ತಿರುತ್ತದೆ. ಒಂದು ದಿನದಲ್ಲಿ ಒಂದು ಪಕ್ಷ ಅಥವಾ ಅಭ್ಯರ್ಥಿಯ ಪರ ಜನರಿಗಿರುವ ಒಲವು ಮತ್ತೊಂದು ದಿನದಲ್ಲೂ ಹಾಗೆಯೇ ಇರುವುದಿಲ್ಲ. ಏರಿಳಿತವಾಗಬಹುದು, ಏರಿಕೆಯೇ ಹೆಚ್ಚಾಗಿರಬಹುದು, ಇಳಿಕೆಯೇ ಅತಿಯಾಗಿರಬಹುದು. ಈ ಟ್ರೆಂಡ್ ಶಾಶ್ವತವಲ್ಲದ ಕಾರಣ ಅದನ್ನೇ ಪೂರ್ಣವಾಗಿ ನಂಬುವಂತಿಲ್ಲ.

ಈಗಿನ ರಾಜಕಾರಣದಲ್ಲಿ ಟ್ರೆಂಡ್‌ಗಳ ಹಾವಳಿ ಹೆಚ್ಚಾಗಿದೆ. ಇದನ್ನು ನಂಬಿಯೇ ವಾಸ್ತವವನ್ನು ಮರೆತು ಭ್ರಮೆಗೆ ಒಳಗಾಗುತ್ತಾರೆ. INDIA-ELECTIONಈ ಭ್ರಮೆಗಳ ಭರಾಟೆ ರಾಜಕಾರಣಿಗಳು ಮೈಮರೆಯುವಂತೆ ಮಾಡುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ. ಚುನಾವಣಾ ಪೂರ್ವ ಸಮೀಕ್ಷೆ ನಿರ್ದಿಷ್ಟವಾಗಿ ಒಂದು ಪಕ್ಷದ ಪರವಾಗಿ ಬಂದಿದ್ದರೂ ಅದು ಪ್ರೀಮೆಚೂರ್.

ನಿರ್ದಿಷ್ಟವಾಗಿ ಗೆಲ್ಲುವ, ಅಧಿಕಾರಕ್ಕೇರುವ ಪಕ್ಷವನ್ನು ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವನ್ನು ಮಾನದಂಡವಾಗಿಟ್ಟುಕೊಂಡು ಆ ದಿನ ಊಹಿಸಿದ್ದಾಗಿನ ಸ್ಥಿತಿ ಟಿಕೆಟ್ ಹಂಚಿಕೆ ಕಾಲಕ್ಕೆ ಬದಲಾಗಿದೆ. ಅಭ್ಯರ್ಥಿಗಳು ಕಣಕ್ಕಿಳಿಯುವ ತವಕದಲ್ಲಿರುವ ಈ ಹಂತದಲ್ಲಿ ಕಾಣುತ್ತಿರುವ ಟ್ರೆಂಡ್ ಆಧರಿಸಿ ಏನನ್ನೂ ಹೇಳುವಂತಿಲ್ಲ. ಯಾವುದೇ ಪಕ್ಷ ಗೆಲುವನ್ನು ಬಯಸುವುದು ತಪ್ಪಲ್ಲ. ಸ್ಪರ್ಧೆ ಮಾಡುವುದು ಗೆಲ್ಲಬೇಕು ಎನ್ನುವ ಉದ್ದೇಶದಿಂದಲೇ ಆದರೂ ಮತದಾರರು ಮನಸ್ಸು ಮಾಡಬೇಕು. ಮತದಾರನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುವುದಾದರೆ ಅವನ ಮುಂದಿರುವ ಆಯ್ಕೆಯ ಮಾನದಂಡಗಳೇ ಬೇರೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣಗಳನ್ನು ಬದಿಗಿಟ್ಟು ತನ್ನ ಆಯ್ಕೆ ಏನೆಂದು ನಿರ್ಧರಿಸಲು ಮತದಾರ ತಿಣುಕಾಡುತ್ತಿದ್ದಾನೆ. ಅವನ ಆಶೋತ್ತರಗಳಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಕಣದಲ್ಲಿದ್ದವರ ಪೈಕಿ ಅನಿವಾರ್ಯವಾಗಿ ಆಯ್ಕೆ ಮಾಡಬೇಕಾಗಿದೆ. ಅಂಥ ಮುಖಗಳು ಇನ್ನಷ್ಟೇ ಅನಾವರಣವಾಗಬೇಕಿದೆ. vote-participate-democracyಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮೇಲೆ ಜನ ಒಲವು ತೋರಿಸಿರುವುದು ನಿಜವಾದರೂ ಆ ಒಲವಿನ ಹಿಂದೆ ತೀರಾ ಖಾಸಗಿತನವಿತ್ತು. ತನ್ನ ಪರಿಸರವನ್ನು ಗಮನದಲ್ಲಿಟ್ಟುಕೊಂಡೇ ಮತಚಲಾಯಿಸಿದ್ದ. ಆದರೆ ವಿಧಾನ ಸಭೆಯಲ್ಲಿ ಅಂಥ ಸ್ಥಿತಿ ಇಲ್ಲ. ಪಕ್ಷ, ಜಾತಿ, ಅಭ್ಯರ್ಥಿಯ ಪ್ರಭಾವಗಳೂ ಮುಖ್ಯವಾಗುತ್ತವೆ. ಬಿಜೆಪಿ, ಕೆಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಎಸ್‌ಆರ್, ಈ ಐದೂ ಪಕ್ಷಗಳು ತಮ್ಮ ತಮ್ಮ ಅಜೆಂಡಾವನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತವೆ. ಎಲ್ಲಾ ಪಕ್ಷಗಳಲ್ಲೂ ಬಂಡಾಯವಿದೆ, ಜೊತೆಗೆ ಪಕ್ಷೇತರರ ಸ್ಪರ್ಧೆಯೂ ಇದೆ. ಏಕಗಂಟಿನಲ್ಲಿ ಮತಗಳು ಯಾವ ಪಕ್ಷಕ್ಕೂ ಬೀಳುವುದಿಲ್ಲ. ಯಾಕೆಂದರೆ ಅವರ ಮುಂದೆ ಆಯ್ಕೆಗೆ ಹಲವು ಮುಖಗಳಿವೆ. ಜಾತಿ, ಧರ್ಮ, ಭಾಷೆ, ಹಣ, ಪಕ್ಷ ಇವುಗಳ ಆಧಾರದಲ್ಲಿ ಹಂಚಿಕೆಯಾಗುತ್ತವೆ. ಹೀಗಾಗಬಾರದು ಎನ್ನುವುದು ನಿರೀಕ್ಷೆಯಾದರೂ ಹಾಗೆ ಆಗುವುದು ಈಗಿನ ರಾಜಕೀಯದ ಅನಿವಾರ್ಯತೆ, ಪರಿಸ್ಥಿತಿಯ ಒತ್ತಡ. ಮತದಾರನ ಕಣ್ಣಮುಂದಿರುವ ಅಭ್ಯರ್ಥಿಗೆ ಗೆಲುವು ಅನಿವಾರ್ಯವಾದರೂ ಅವನಿಗೆ ಎಲ್ಲರೂ ಅನಿವಾರ್ಯವಲ್ಲ.

ಪಕ್ಷಕ್ಕೆ ಗೆದ್ದು ಅಧಿಕಾರಕ್ಕೇರುವುದೇ ಮುಖ್ಯಹೊರತು ಇಂಥವರೇ ಗೆಲ್ಲಬೇಕೆಂಬ ಸ್ವಾರ್ಥವಿಲ್ಲ. ಆದರೆ ನಾಯಕರಿಗೆ ತಮ್ಮದೇ ಆದ ಹಿಡನ್ ಅಜೆಂಡಾಗಳಿರುತ್ತವೆ. ತನ್ನ ಬೆಂಬಲಿಗರು ಗೆದ್ದು ಬರಬೇಕು ಎನ್ನುವ ಸ್ವಾರ್ಥ ಹೆಡೆಯೆತ್ತಿರುತ್ತದೆ. ಈ ಕಾರಣದಿಂದಲೇ ಪಕ್ಷಗಳಲ್ಲಿ ನಾಯಕರೊಳಗೇ ಆಂತರಿಕವಾದ ಲೆಕ್ಕಾಚಾರಗಳಿರುತ್ತವೆ. ಕೆಲವು ಆಯಕಟ್ಟಿನ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎನ್ನುವ ಅರಿವಿದ್ದೇ ಕಣಕ್ಕಿಳಿಸುವ ತಂತ್ರಗಾರಿಕೆಯೂ ಈಗಿನ ರಾಜಕೀಯದ ಒಳಸುಳಿ.

ಇಂಥ ತಾಜಾಸ್ಥಿತಿ ರಾಜಕೀಯದಲ್ಲಿರುವುದರಿಂದಲೇ ಮತದಾರ ಯಾರನ್ನು ಬೆಂಬಲಿಸುತ್ತಾನೆ ಎನ್ನುವುದು ಇನ್ನೂ ಅನಿಶ್ಚಿತ. ಟಿಕೆಟ್ ಹಂಚಿಕೆಯ ನಂತರದ ರಾಜಕೀಯ ಸ್ಥಿತಿ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಚುನಾವಣೆಯಲ್ಲೂ ಬಂಡಾಯ ಈಗಿನ ಟ್ರೆಂಡ್. ಅದು ಹುಟ್ಟುಹಾಕುವ ಅಲೆಗಳು ಪೂರ್ವನಿರ್ಧಾರಿತ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತದೆ. ಹೀಗಾಗುವುದು ರಾಜಕೀಯ ಪಕ್ಷಗಳ ನಾಯಕರುಗಳ ಸ್ವಯಂಕೃತ ಅಪರಾಧ ಹೊರತು ಮತದಾರ ಕೊಡುವ ತೀರ್ಮಾನವಲ್ಲ. ಮತದಾರನ ಇಂಗಿತವನ್ನು ಅರ್ಥಮಾಡಿಕೊಳ್ಳದ ರಾಜಕೀಯ ಪಕ್ಷ, ನಾಯಕರು ಸೋಲಿಗೆ ಕಾರಣರಾಗುತ್ತಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ಬಂದಿರುವ ಪಕ್ಷೇತರರ ಸಂಖ್ಯೆ ಈ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿಯ ಟ್ರೆಂಡ್. ಬಂಡಾಯ ಎದ್ದಷ್ಟೂ ಅಪಾಯ ಆ ಪಕ್ಷಕ್ಕೆ. ಇದು ರಾಜಕೀಯ ಪಕ್ಷಗಳ ನಾಯಕರುಗಳಿಗೂ ಗೊತ್ತಿದೆ. ಆದರೂ ಜಾಣಕುರುಡುತನ ಪ್ರದರ್ಶಿಸುವುದು ಅವರ ಚತುರತೆಯಲ್ಲ.