Monthly Archives: January 2012

ದಲಿತ, ಶೂದ್ರರು – ಹಿಂದೂಗಳಲ್ಲ ಎಂದು ತಿಳಿಯಬೇಕಿದೆ

: ಭೂಮಿ ಬಾನು

ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಮಡೆಸ್ನಾನ ಕುರಿತು ಬೆಂಗಳೂರಿನಲ್ಲಿ ಭಾನುವಾರ ನಡೆದ ಸಂವಾದ ಒಂದು ಬಹುಮುಖ್ಯ ಸಮಾರಂಭ. ಮಡೆಸ್ನಾನ ಅಷ್ಟೇ ಅಲ್ಲದೆ, ಅನೇಕ ವಿಚಾರಗಳು ಅಲ್ಲಿ ಚರ್ಚೆಗೆ ಬಂದವು. ಯಾವ ಪ್ರಶ್ನೆಗಳಿಗೂ ಸೂಕ್ತ ಪರಿಹಾರಗಳು ಸಿಗದಿದ್ದರೂ, ಚರ್ಚೆಗೆ ವೇದಿಕೆ ಸಿದ್ಧಗೊಂಡಿತ್ತು ಎನ್ನುವುದೇ ಸಮಾಧಾನದ ಸಂಗತಿ.

ಪೇಜಾವರ ಮಠದ ವಿಶ್ವೇಶತೀರ್ಥರು ಸಂವಾದದಲ್ಲಿ ಪಾಲ್ಗೊಂಡ ಏಕೈಕ ಕಾರಣಕ್ಕೆ ಅಭಿನಂದನಾರ್ಹರು. ಸಂವಾದದ ಚರ್ಚೆಗಳು, ಅಭಿಪ್ರಾಯ ವಿನಿಯಮ ಅವರ ಆಲೋಚನಾ ಕ್ರಮದಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ಆದರೂ, ಹೀಗೊಂದು ಚರ್ಚೆಯಲ್ಲಿ ಪಾಲ್ಗೊಳ್ಳಬಲ್ಲ ಪುರೋಹಿತಶಾಹಿ ಸ್ವಾಮಿ ಅವರೊಬ್ಬರೇ. ಅವರೂ ಕೂಡ ತಾನು ಬರುವುದಿಲ್ಲ ಎಂದು ನಿರಾಕರಿಸಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಅವರನ್ನು ಒತ್ತಾಯ ಮಾಡಲಾಗುತ್ತಿರಲಿಲ್ಲ. ಆದರೆ ಅವರ ಗುಂಪಿನ ಇತರೆ ಸ್ವಾಮಿಗಳನ್ನು ಇಂತಹದೊಂದು ಸಂವಾದಕ್ಕೆ ಒಪ್ಪಿಸಿ ಕರೆತರುವುದು ಊಹಿಸಲೂ ಸಾಧ್ಯವಿಲ್ಲ.

ಪೇಜಾವರ ಶ್ರೀಗಳು ತಮ್ಮ ಕೆಲ ಕಾರ್ಯಕ್ರಮಗಳಿಂದ (ದಲಿತರ ಕೇರಿಯಲ್ಲಿ ಪಾದಯಾತ್ರೆ, ದಲಿತ ಸ್ವಾಮಿಯೊಂದಿಗೆ ಭೋಜನ) ತಾವು ಸಮುದಾಯಗಳ ಮಧ್ಯೆ ಸಾಮರಸ್ಯ ಬಯಸುತ್ತೇವೆ ಎಂದು ತೋರಿದ್ದರೂ, ಅದರ ಹಿಂದೆ ‘ಹಿಂದೂ ಧರ್ಮ’ ಎಂಬ ದೊಡ್ಡ ಬ್ಯಾನರ್ ನ ಅಸ್ಥಿತ್ವವನ್ನು ಗಟ್ಟಿಗೊಳಿಸುವುದೇ ಹೊರತು ಬೇರೆ ಉದ್ದೇಶ ಇದ್ದಂತೆ ಕಾಣುವುದಿಲ್ಲ.

ಮಡೆಸ್ನಾನ ಕುರಿತ ಚರ್ಚೆಯಲ್ಲಿ ಪೇಜಾವರ ಶ್ರೀಯ ಒಳಗಡೆ ಎಂಥ ಕಠೋರ ಕೋಮುವಾದಿ ಅಡಗಿದ್ದಾನೆ ಎನ್ನುವುದು ಗೊತ್ತಾಯಿತು. ಮುಸಲ್ಮಾನ ಬಾಂಧವರು ರಂಜಾನ್ ವೇಳೆ ಉಪವಾಸ ಅಂತ್ಯ ಮಾಡುವಾಗ ಕುಟುಂಬ ವರ್ಗ, ಸ್ನೇಹಿತರೆಲ್ಲಾ ಸೇರಿ ಒಂದೇ ಅರಿವಾಣ (ತಟ್ಟೆ) ದಲ್ಲಿ ಊಟಮಾಡುವ ಶ್ರೇಷ್ಠ ನಡೆಯನ್ನು (gesture) ಮಡೆಸ್ನಾನದಂತಹ ಅನಿಷ್ಟ ಪದ್ಧತಿಗೆ ಹೋಲಿಸುತ್ತಾರೆ.

ಚರ್ಚೆಯ ಸಂದರ್ಭದಲ್ಲಿ ಮುಸಲ್ಮಾನ ಬಾಂಧವರೊಬ್ಬರು ತಮ್ಮ ಸಂಪ್ರದಾಯ ಭ್ರಾತೃತ್ವದ ಸಂಕೇತ ಎಂದು ಸ್ಪಷ್ಟಪಡಿಸಿದ ನಂತರವೂ, ಸ್ವಾಮೀಜಿ ಬದಲಾಗಲಿಲ್ಲ. ಅವರ ಪ್ರಕಾರ ಅದು ಒಬ್ಬರ ಎಂಜಲನ್ನು ಇನ್ನೊಬ್ಬರು ತಿಂದಂತೆಯೇ. ಅಪ್ಪ, ಮಗ, ಸ್ನೇಹಿತ ಎಲ್ಲರೂ ಒಂದೇ ತಟ್ಟೆಯಲ್ಲಿ ಕುಳಿತು ಊಟಮಾಡುವಾಗ ಅಸಹ್ಯ ಹುಟ್ಟಿಸುವ ಸಂಗತಿಯಾದರೂ ಏನಿರುತ್ತೆ? ಇಂತಹ ನಡೆಯನ್ನು ಸಮಚಿತ್ತದಿಂದ ಗ್ರಹಿಸದಷ್ಟು ಮೂಢರಲ್ಲ ಸ್ವಾಮೀಜಿ. ಆದರೆ ಅವರಲ್ಲಿ ಕೋಮುದ್ವೇಷ ಭಾವನೆಗಳು ಆಳವಾಗಿ ನೆಲೆಯೂರಿವೆ. ಆ ಕಾರಣವೇ ಅವರು ಮಡೆಸ್ನಾನ ಚರ್ಚೆ ಸಂದರ್ಭದಲ್ಲಿ ಮುಸಲ್ಮಾನರಲ್ಲಿ ಜಾರಿಯಲ್ಲಿರುವ ಕ್ರೂರ ವಿವಾಹ ವಿಚ್ಚೇದನ ಪದ್ಥತಿಯನ್ನು ಉದಾಹರಿಸುವ ಪ್ರಯತ್ನ ಮಾಡುತ್ತಾರೆ. ಮಹಿಳೆಯರನ್ನು ಶೋಷಿಸುವ ಅಂತಹ ಕ್ರೂರ ಪದ್ಥತಿ ಟೀಕೆಗೆ ಅರ್ಹವೇ. ಅದು ಬದಲಾಗಬೇಕು. ಆದರೆ ಮಡೆಸ್ನಾನದ ಸಮರ್ಥನೆಗೆ ದಾಳವಾಗಬಾರದಷ್ಟೆ.

ವೀರಭದ್ರ ಚನ್ನಮಲ್ಲ ಸ್ವಾಮಿಯವರು ಇಂತಹದೊಂದು ಚರ್ಚೆ ಆಯೋಜನೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಪಾತ್ರ ಶ್ಲಾಘನೀಯ. ಅಂತೆಯೇ ಸಾಣೇಹಳ್ಳಿ ಪಂಡಿತಾರಾಧ್ಯರು ಮತ್ತಿತರ ಸ್ವಾಮೀಜಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಇವರೆಲ್ಲಾ ಸೇರಿ ಮಡೆಸ್ನಾನ ನಿಷೇಧಕ್ಕೆ ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ. ಆದರೆ, ನೆನಪಿಡಲೇಬೇಕಾದ ಬಹುಮುಖ್ಯ ಸಂಗತಿ ಎಂದರೆ, ಶೂದ್ರ ಸಮುದಾಯಗಳನ್ನು ಪ್ರತಿನಿಧಿಸುವ ಬಹುಮುಖ್ಯ ಮತ್ತು ಪ್ರಭಾವಶಾಲಿ ಮಠಗಳನ್ನು ಪ್ರತಿನಿಧಿಸುವವರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ಕೊಡುವವರನ್ನ, ಆರ್.ಎಸ್.ಎಸ್ ಬೈಠಕ್ ಗಳಲ್ಲಿ ಕುಂತು ಬರುವವರನ್ನು ಇಂತಹದೊಂದು ಸಂವಾದಕ್ಕೆ ಕರೆಯುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನುವ ನಿರ್ಧಾರಕ್ಕೆ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಬಂದಿದ್ದರೆ ತಪ್ಪೇನಿಲ್ಲ.

ಚನ್ನಮಲ್ಲ ಸ್ವಾಮೀಜಿಯವರು ಪೇಜಾವರರ ಮುಂದೆ ಕೆಲವು ಬೇಡಿಕೆಗಳನ್ನಿಟ್ಟರು. ಪಂಕ್ತಿಬೇಧವನ್ನು ನಿಲ್ಲಿಸಿ, ಶೂದ್ರ, ದಲಿತ ಸಮುದಾಯ ಪ್ರತಿನಿಧಿಸುವ ಗುರುಗಳಿಗೆ ವರ್ಷಕ್ಕೆ ಒಮ್ಮೆಯಾದರೂ ಉಡುಪಿ ಕೃಷ್ಣನನ್ನು ಪೂಜಿಸುವ ಅವಕಾಶ ಕಲ್ಪಿಸಿ ಎಂದು ಮನವಿ ಇಟ್ಟರು. ಪೇಜಾವರರಿಂದ ಇದಾವುದರ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಅವರಿಂದ ಅದನ್ನು ನಿರೀಕ್ಷಿಸುವುದೂ ತಪ್ಪು. ಮುಖ್ಯವಾಗಿ ಅವರೊಬ್ಬ ಸಂಪ್ರದಾಯನಿಷ್ಠ, ಜಾತಿವ್ಯವಸ್ಥೆ ನಿಷ್ಠ, ಅತಿಯಾದ ಕೋಮುಭಾವನೆಗಳನ್ನು ತುಂಬಿಕೊಂಡಿರುವ ಸ್ವಾಮೀಜಿ.

ಮುಖ್ಯವಾಗಿ ಶೂದ್ರ ಹಾಗೂ ದಲಿತ ವರ್ಗಗಳು ಅರಿತು ಕೊಳ್ಳಬೇಕಿರುವ ಸತ್ಯ, ಅವರ್ಯಾರೂ ಹಿಂದುಗಳಲ್ಲ, ಬದಲಿಗೆ ಹಿಂದುಗಳೆಂದು ‘ಗುರುತಿಸಲ್ಪಡುತ್ತಿರುವವರು’. ದಲಿತ ಅಥವಾ ಶೂದ್ರ ಕುಟುಂಬಗಳಲ್ಲಿ ಚಾಲ್ತಿಯಲ್ಲಿರುವುದು ಜಾತಿ ಮಾತ್ರ, ಧರ್ಮವಲ್ಲ. ಹುಟ್ಟಿದ ಮಗುನಿಗೆ ಅಪ್ಪ-ಅಮ್ಮ ತಾವು ಯಾವ ಜಾತಿಯವರು ಎಂಬುದನ್ನು ಹೇಳಿಕೊಡುತ್ತಾರೆಯೇ ಹೊರತು ಯಾವ ಧರ್ಮದವರೆಂದಲ್ಲ. ಅಪ್ಪ-ಅಮ್ಮ ನೇ ‘ನೀನು ಇಂತಹ ಧರ್ಮಕ್ಕೆ ಸೇರಿದವನು’ ಹೇಳಿಲ್ಲ. ಹಿಂದುಗಳೆಂದು ಗುರುತಿಸುವುದು, ಗುರುತಿಸಿಕೊಳ್ಳುವುದು ಇತ್ತೀಚಿನ ಸಂಪ್ರದಾಯ. ಯಾರು ಕ್ರಿಶ್ಚಿಯನ್ ಅಲ್ಲವೋ, ಯಾರು ಜೈನರಲ್ಲವೋ, ಯಾರು ಮುಸಲ್ಮಾನರಲ್ಲವೋ ಅವರನ್ನೆಲ್ಲಾ ಹಿಂದೂಗಳೆಂದು ಗುರುತಿಸುವ ಪ್ರಕ್ರಿಯೆ ಇತ್ತೀಚಿನದ್ದು. ಈ ಮಾತನ್ನು ಅನೇಕರು ಒಪ್ಪದೇ ಇರಬಹುದು. ಸಾವಿರಾರು ವರ್ಷಗಳ ಹಿಂದಿನ ಪುರಾತನ ಗ್ರಂಥಗಳನ್ನು ಉಲ್ಲೇಖಿಸಿ ‘ಶೂದ್ರ, ದಲಿತರೆಲ್ಲಾ ಹಿಂದುಗಳೇ’ ಎಂದು ಹೇಳಲು ಬರಬಹುದು. ಆದರೆ ಒಂದಂತೂ ಸ್ಪಷ್ಟ. ದಲಿತ, ಶೂದ್ರರಿಗೆ ಶತಶತಮಾನಗಳಿಂದ ಅಕ್ಷರ ಜ್ಞಾನ ನಿರಾಕರಿಸಲಾಗಿತ್ತು. ಹಾಗಾಗಿ ಯಾವು ಪುರಾತನ ಗ್ರಂಥಗಳ ಉಲ್ಲೇಖಕ್ಕೂ, ಇವರಿಗೂ ಯಾವುದೇ ಸಂಬಂಧವಿಲ್ಲ.

ಈ ನಿಟ್ಟಿನಲ್ಲಿ ಯೋಚನೆ ಆರಂಭವಾದಾಗ, ಜಾಗೃತಿಯಾದಾಗ, ಸಹಪಂಕ್ತಿ ಭೋಜನಕ್ಕೆ, ಗರ್ಭಗುಡಿ ಪ್ರವೇಶಕ್ಕೆ, ಬೇಡಿಕೆ ಇಡುವ ಚಾಳಿ ಬಿಟ್ಟುಹೋಗುತ್ತದೆ. ಆಗ ಸಮಾಜದಲ್ಲಿ ನಿಜ ಅಲ್ಪಸಂಖ್ಯಾತರು ಯಾರು ಎಂಬುದು ಅರಿವಾಗುತ್ತದೆ. ಹಾಗಾದಾಗ, ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳು ತಾನೇತಾನಾಗಿ ನಿಂತುಹೋಗುತ್ತವೆ.

ಸಾಕ್ರೆಟೀಸನಿಗೇ ಸಚ್ಚಾರಿತ್ರ್ಯ ಗೊತ್ತಿಲ್ಲವೆಂದಮೇಲೆ ನಮಗಿನ್ಯಾತಕ್ಕೆ ಅದು!

-ಬಿ. ಶ್ರೀಪಾದ್ ಭಟ್

“The world is a dangerous place not because of those who do evil, but because of those who look on and do nothing.” -Albert Einstein.

“ಕೆಟ್ಟದ್ದನ್ನು, ಕೆಟ್ಟವರನ್ನು ಹುಡುಕಲು ಹೊರಟ ನನಗೆ ಕೆಟ್ಟದ್ದು, ಕೆಟ್ಟವರಾರೂ ಸಿಗಲಿಲ್ಲ, ನನ್ನ ಮನಸ್ಸನ್ನೇ ಬಿಚ್ಚಿಕೊಂಡಾಗ ನನಗಿಂತಾ ಕೆಟ್ಟವರು ಯಾರೂ ಇರಲಿಲ್ಲ.” -ಸಂತ ಕಬೀರ್.

ಮೆನೊ: ಪ್ರಿಯ ಸಾಕ್ರೆಟೀಸ್, ಸಚ್ಚಾರಿತ್ರ್ಯವನ್ನು ಬೋಧಿಸಲು ಸಾಧ್ಯವೆ? ಅಥವ ಬೋಧನೆಯ ಮೂಲಕವಲ್ಲದೆ ಆಚರಣೆಯ ಮೂಲಕ ಅದನ್ನು ಸಾಧಿಸಬಹುದೇ? ಇಲ್ಲವೆ ಮನುಷ್ಯ ಇವೆರಡರಿಂದಲೂ ಅಲ್ಲದೆ ನಿಸರ್ಗದಿಂದಲೇ ಅದನ್ನು ಪಡೆಯಬೇಕೆ ಎಂಬುದನ್ನು ನನಗೆ ತಿಳಿಸುತ್ತೀಯ?
ಸಾಕ್ರೆಟೀಸ್: ಸಚ್ಚಾರಿತ್ರ್ಯವನ್ನು ಬೋಧಿಸಬಹುದೇ ಇಲ್ಲವೆ ಎಂದು ನಾನು ಬಲ್ಲೆ ಎಂಬುದು ನಿನಗರಿವಾದರೆ ನೀನು ಖುಷಿಪಡಬಹುದು…. ಆದರೆ ಸಚ್ಚಾರಿತ್ರ್ಯವನ್ನು ಬೋಧಿಸಬಹುದೇ ಇಲ್ಲವೆ ಎಂಬುದು ನನಗೆ ಈವರೆಗೆ ತಿಳಿಯದು, ಮಾತ್ರವಲ್ಲ ಸಚ್ಚಾರಿತ್ರ್ಯವೆಂದರೇನು ಎಂಬುದೇ ಅರಿಯದು.
-ಕೇಶವ ಮಳಗಿ ಸಂಪಾದಿತ “ಸಂಕಥನ” ಪುಸ್ತಕದಿಂದ.

“ಆ ಓಲಗ ಯಾರ ಸಾವನ್ನು, ನೋವನ್ನು, ಅನ್ಯಾಯವನ್ನು, ಯಾವ ಮಾಯವಾದ ಕನಸು, ಕ್ರಿಯಾಶೀಲತೆಯನ್ನು, ಯಾವ ಭ್ರಷ್ಟತೆ, ಹುಂಬುತನವನ್ನು, ಯಾವ ದ್ವೀಪವನ್ನು, ಸ್ವಾರ್ಥದ ಪರಿಣಾಮವನ್ನು ಸೂಚಿಸುತ್ತದೆ ? ಕೋಟ್ಯಾಂತರ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬಂದ ರಾಜಕಾರಣಿ ತನ್ನ ಗೆಲುವಿನ ಬಗ್ಗೆ ಹೆಮ್ಮೆ ಪಡುತ್ತಾನೆ. ಆತ ತನ್ನ ಹಣದಿಂದ ಬಿತ್ತಿದ ವಿಷಬೀಜ ಅವನಿಗೆ ಕಾಣಿಸುವುದೇ ಇಲ್ಲ. ಆದರೆ ಆತ ತನ್ನ ಗೆಲುವನ್ನು ಸೋಲು ಎಂದು ತಿಳಿಯುವ ಕಾಲ ದೂರ ಇರುವುದಿಲ್ಲ. ಆತನ ವಿಷಬೀಜದಿಂದ ಬೆಳೆದ ಕಪ್ಪು ವ್ಯಕ್ತಿಗಳು, ಕರಾಳ ಕೀಟಗಳು ಅತನನ್ನು ಬೆನ್ನಟ್ಟತೊಡಗುತ್ತವೆ, ವಿಚಿತ್ರ ಸದ್ದುಗಳನ್ನು ಮಾಡತೊಡಗುತ್ತವೆ, ತನ್ನ ಸುತ್ತ ಅನ್ಯಾಯವನ್ನು ಬೆಳೆಸತೊಡಗುತ್ತವೆ.”
– ಪಿ.ಲಂಕೇಶ್ ( 1985ರಲ್ಲಿ ಬರೆದ ಒಂದು ಅದ್ಭುತ ಟೀಕೆ ಟಿಪ್ಪಣಿ)

ಈ ಯಡಿಯೂರಪ್ಪ ಹಾಗೂ ಸಂಘಪರಿವಾರದವರು ನಿಜಕ್ಕೂ ಸಾಕ್ರೆಟೀಸನನ್ನು ಖುಣಾತ್ಮಕವಾಗಿ ಅರ್ಥಮಾಡಿಕೊಂಡಂತಿದೆ. ಅಲ್ಲವೇ ಮತ್ತೆ !! ಸಾಕ್ರೆಟೀಸನಿಗೇ ಸಚ್ಚಾರಿತ್ರ್ಯ ಗೊತ್ತಿಲ್ಲವೆಂದಮೇಲೆ ನಮಗಿನ್ಯಾತಕ್ಕೆ ಅದು!!! ಎಂದು ತಲೆ ಹಾರಿಸುತ್ತಾ ಈ ರಾಜ್ಯದ ರಾಜಕೀಯವನ್ನು, ಸಾಮಾಜಿಕತೆಯನ್ನು ನೈತಿಕವಾಗಿ ಸಂಪೂರ್ಣವಾಗಿ ನೆಲಕಚ್ಚಿಸಿದ್ದರೂ ಏನೂ ಆಗಿಲ್ಲವೆಂಬಂತೆ, ಮುಖದ ಮೇಲೆ ಉಗುಳು ಹನಿಗಳು ಬಿದ್ದರೂ ಅದು ಮಳೆ ಹನಿಗಳೆಂದು, ಹಾಗೆಯೇ ಜನರನ್ನು ನಂಬಿಸುತ್ತಾ, ಇನ್ನು ನಮ್ಮ ಬಹುಪಾಲು ಮಾಧ್ಯಮಗಳು ಕಬೀರನಂತೆ ಹುಡುಕಲೂ, ಚಿಂತಿಸಲೂ ಹೊರಡದೆ ಸಮಾಜದಲ್ಲಿನ ಕೆಟ್ಟದನ್ನು ಕೇವಲ ರೋಚಕತೆಗಾಗಿ ಮುಖಪುಟದಲ್ಲಿ ಅಚ್ಚುಹಾಕಿ ತಮ್ಮ ಮನಸ್ಸುಗಳನ್ನು ಮಾತ್ರ (ಲಂಕೇಶ್ ರವರು ಸದಾಕಾಲ ತಮ್ಮೊಳಗೆ ಜೀವಂತವಾಗಿಟ್ಟುಕೊಂಡಿದ್ದ ಆತ್ಮದ ಸೊಲ್ಲನ್ನು) ಬಿಚ್ಚಲು ನಿರಾಕರಿಸಿ ತಮ್ಮನ್ನು ತಾವು “moral police” ಎಂಬಂತೆ ಭ್ರಮಿಸುತ್ತಾ ಮಿಂಚುತ್ತಿದ್ದಾರೆ.

ಇನ್ನು ಪ್ರಜ್ಞಾವಂತರಾದ ನಾವೆಲ್ಲ ವ್ಯವಸ್ಥೆಯಲ್ಲಿನ ಕೊಳಕುಗಳನ್ನು, ಮೌಡ್ಯವನ್ನು, ರಾಜಕೀಯ ಅಧಃಪತನವನ್ನೂ ನೋಡುತ್ತ ಅದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿಭಟನಾತ್ಮಕವಾಗಿ ಯಾವುದೇ ಕ್ರಿಯಾತ್ಮಕ, ವೈಚಾರಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೆ ಈ ದುರಂತದ ಸರಣಿಗಳಿಗೆ ನಮ್ಮ ಪಾಲನ್ನೂ ಸೇರಿಸುತ್ತಿದ್ದೇವೆ. ಆದರೆ ಸಂಘಪರಿವಾರದ “ಅವರಿಗೆ” ಸರಿಯಾಗಿ ಪಾಠಕಲಿಸುತ್ತೇವೆ ಎನ್ನುವ ಒಂದಂಶದ ಕಾರ್ಯಕ್ರಮದ ಸುಳಿಯಿಂದ ಆತ್ಮಹೀನರಾದ ನಮ್ಮ ಬಹುಪಾಲು ವಿದ್ಯಾವಂತರು ಇನ್ನೂ ಹೊರಬಂದಿಲ್ಲ. ಈ ವಿದ್ಯಾವಂತರು ಭೈರಪ್ಪನವರಂತಹ, ವೈದಿಕಶಾಹಿ, ಜೀವವಿರೋಧಿ ಲೇಖಕರನ್ನು ಇಂದಿಗೂ ಆದರ್ಶವನ್ನಾಗಿ ಮಾಡಿಕೊಂಡಿರುವುದು, ಸರ್ಕಾರಗಳ ಸಾಮಾಜಿಕ ನಾಶದ ದೈತ್ಯ ಯೋಜನೆಗಳ ಬಗ್ಗೆ ವಿವೇಚನೆ ಇಲ್ಲದ ಕುರುಡು ಪ್ರೀತಿ, ಇತ್ತೀಚೆಗೆ ರಾಜ್ಯದ ಮಾನ ಕಳೆದ ಮಡೆಸ್ನಾನದಂತಹ ಅಮಾನವೀಯ ಅಚರಣೆಯ ಬಗ್ಗೆ ಈ ಜನ ತೋರಿಸಿದ ದಿವ್ಯ ನಿರ್ಲಕ್ಷ್ಯ, ಯಾವುದೇ ರೀತಿಯ ಪ್ರಗತಿಪರ ಚಳುವಳಿಗಳ ಬಗೆಗಿನ ಇವರ ಮಹಾನ್ ಅಸ್ಪೃಶ್ಯತೆ. ಸದ್ಯಕ್ಕೆ ಈ ವಿದ್ಯಾವಂತರು ಬಹಳ ಕಾತುರದಿಂದ ಕಾಯುತ್ತಿರುವುದು ಈ ವರ್ಷದ ಬಜೆಟ್ ಗಾಗಿ. ಅಲ್ಲಿ ಎಷ್ಟು ವರಮಾನ ತೆರಿಗೆ ವಿನಾಯ್ತಿ ಸಿಗಬಹುದು, ತಮ್ಮ ಕೊಳ್ಳುಬಾಕುತನಕ್ಕೆ ಪೂರಕವಾಗಿ ಇನ್ನೇನೇನು ಹೊಸ ಘೋಷಣೆಗಳು ಸಿಗಬಹುದು!! ಆದರೆ ತಮ್ಮ ಈ ಕೊಳ್ಳುಬಾಕುತನವನ್ನು, ವಾಕರಿಕೆಯ ಶ್ರೀಮಂತಿಕೆಯನ್ನು ಸಾಧ್ಯವಾಗಿಸುವ ರಾಜಕೀಯ, ಚುನಾವಣೆ ಮಾತ್ರ ಇವರಿಗೆ ಅಲರ್ಜಿ ಹಾಗೂ ಹೇಸಿಗೆ.

ಇದೇ ವಿದ್ಯಾವಂತರಿಂದ ಹಣ ಹಾಗೂ ಹೆಂಡಕ್ಕಾಗಿ ತಮ್ಮನ್ನು ಮಾರಿಕೊಳ್ಳುತ್ತಾರೆ ಎಂದು ಸದಾ ಜರಿತಕ್ಕೆ, ಮೂದಲಿಕೆಗೆ ಬಲಿಯಾಗುವ ನಮ್ಮ ರಾಜ್ಯದ ಬಡ, ಹಿಂದುಳಿದ, ಅನಕ್ಷರಸ್ತ ಜನತೆ ಈ ವಿದ್ಯಾವಂತರಿಗೆ ಈ ಎಲ್ಲ ಅನುಕೂಲಗಳನ್ನು ತಂದುಕೊಡುವ ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಚುನಾವಣೆಗಳಲ್ಲಿ ಅತ್ಯಂತ ಮುಗ್ಧತೆಯಿಂದ ಬಾಗವಹಿಸಿ, ತಾವು ಮಾತ್ರ ಅನುದಿನ ಸಂಕಷ್ಟಗಳಲ್ಲಿ ಮುಳುಗಿ ಕಣ್ಮರೆಯಾಗುತ್ತಾರೆ. ಈ ವಿದ್ಯಾವಂತರಾಗಲೇ ಆ ಅಮಾಯಕ, ಸರಳ, ಮುಗ್ಧ ಅಣ್ಣಾ ಹಜಾರೆಯವರನ್ನು ಎತ್ತಿ ಕಸದ ಬುಟ್ಟಿಗೆ ಹಾಕಿಯಾಯ್ತು !!!

ದೃಶ್ಯ 1 :
ಜನವರಿ 7ರಂದು ಬೆಂಗಳೂರಿನಲ್ಲಿ ಜರುಗಿದ ವೈದಿಕವರ್ಗದ ಅತ್ಯಂತ ಮೂಢ ಆಚರಣೆ ಮಡೆಸ್ನಾನದ ವಿರುದ್ಧದ ಬ್ರಾಹ್ಮಣೇತರ ಮಠಾಧೀಶರ ಸಮಾವೇಶಕ್ಕೆ ನಾನೂ ಭಾಗವಹಿಸಿದ್ದೆ. ನಿಜಕ್ಕೂ ಆಲ್ಲಿನ ಬಹುಪಾಲು ಸ್ವಾಮಿಜೀಗಳಲ್ಲಿ, ಅವರ ಚಿಂತನೆಗಳಲ್ಲಿ ನನಗೆ ಮೊಟ್ಟಮೊದಲ ಬಾರಿಗೆ ಜೀವಂತಿಕೆ ಕಾಣಿಸುತಿತ್ತು. ಈ ಪುರೋಹಿತಶಾಹಿಗಳ ಕುಟಿಲತೆಯ ವಿರುದ್ಧ ಸಾಣೇಹಳ್ಳಿ ಸ್ವಾಮಿಗಳ ಆಕ್ರೋಶ ನನ್ನಲ್ಲಿ ಮೊಟ್ಟಮೊದಬಾರಿಗೆ ಇವರ ಬಗ್ಗೆ ಅಭಿಮಾನ ಮೂಡಿಸಿದ್ದು ನಿಜ. ಹೌದು 80ರ ದಶಕದಲ್ಲಿ ಕಾಲೇಜಿನಲ್ಲಿದ್ದ ನಾವೆಲ್ಲ ವೈಚಾರಿಕತೆಯ, ಎಡಪಂಥೀಯ ಚಿಂತನೆಗಳ ಅತ್ಯುತ್ಸಾಹದ ಹಿನ್ನೆಲೆಯಲ್ಲಿ ನಮ್ಮ ಜನರಲ್ಲಿನ ಜಾತೀಯತೆಯನ್ನು, ಮೌಢ್ಯತೆಯನ್ನು ಬೇರು ಸಮೇತ ಕಿತ್ತು ಹಾಕುವುದು ಹೇಗೆ, ಅದಕ್ಕಾಗಿ ಯಾವ ರೀತಿ ಹೋರಾಟ ನಡೆಸಬೇಕು ಎಂದು ಆಗ ಪ್ರಗತಿರಂಗದ ಸಭೆಯೊಂದರಲ್ಲಿ ಭಾಗವಹಿಸಲು ಬಂದಿದ್ದ ತೇಜಸ್ವಿ ಅವರನ್ನು ಅತ್ಯಂತ ಮುಗ್ಧತೆಯಿಂದ ಕೇಳಿದಾಗ ಅವರು “ರೀ ಅವಕ್ಕೆಲ್ಲ ನಾವು ನೀವೆಲ್ಲ ಏನೂ ಮಾಡಲಿಕ್ಕೆ ಆಗಲ್ಲ ಕಣ್ರೀ ಸುಮ್ಮನೆ ನಿಮ್ಮ ವೇಳೆ ವ್ಯರ್ಥ ಮಾಡಬೇಡ್ರಿ, ಮಠಾಧೀಶರುಗಳು ಮಾತ್ರ ಇವನ್ನೆಲ್ಲ ಕಿತ್ತೊಗೆಯುವ ಸಾಧ್ಯತೆಯುಳ್ಳವರು,” ಎಂದು ಹೇಳಿ ನಮ್ಮಲ್ಲಿ ದಂಗು ಬಡಿಸಿದ್ದರು.

ನಮ್ಮಲ್ಲಿನ ಬಂಡಾಯಕ್ಕೆ ಇವರ ಸಮಾಜವಾದಿ ವ್ಯಕ್ತಿತ್ವವೇ ಕಾರಣ ಎಂದುಕೊಂಡಿದ್ದ ನಮಗೆಲ್ಲ ಆಗ ಇವರು ಈ ರೀತಿ ಹೇಳಿದ್ದು, ನಾವೆಲ್ಲ ಹತಾಶೆಗೊಂಡದ್ದು, ಇದಕ್ಕೆ ಪೂರಕವೆನ್ನುವಂತೆ ಆಗ ಪ್ರಗತಿರಂಗದ ಸಭೆಗಳಲ್ಲಿ ಸೇರುತ್ತಿದ್ದ ಕೇವಲ 30 ರಿಂದ 50 ರಷ್ಟು ಜನರು ಇವೆಲ್ಲ ಸೇರಿ ನಮ್ಮಲ್ಲಿ ಇನ್ನಿಲ್ಲದ ನಿರಾಶೆಯನ್ನು, ರೇಜಿಗೆಯನ್ನು ಮೂಡಿಸುತ್ತಿದ್ದವು. ನಂತರ ವರ್ಷಗಳು ಕಳೆದ ಹಾಗೆ ಬಂಡಾಯದ ತೀವ್ರತೆ ನಮ್ಮಿಂದ ಇಳಿಯುತ್ತ ಹೋದ ಹಾಗೆ ತೇಜಸ್ವಿಯವರ ಅನುಭವದ ಮಾತುಗಳ ಜೀವಾಮೃತ ನಮಗೆ ಮನದಟ್ಟಾಗತೊಡಗಿತು. ಇಂದಿನ ಈ ಬ್ರಾಹ್ಮಣೇತರ ಸ್ವಾಮಿಗಳ ನಡೆಗಳು 25 ವರ್ಷಗಳ ಹಿಂದಿನ ತೇಜಸ್ವಿಯವರ ಚಿಂತನೆಯನ್ನು ಸಾಕಾರಗೊಳಿಸುವಂತಿತ್ತು. ನಾವೆಲ್ಲ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಹಾಗೂ ಈ ಸ್ವಾಮಿಗಳ ಈ ವೈಚಾರಿಕ ಧೋರಣೆ ಎಲ್ಲಿಯವರೆಗೆ ?

ತಮ್ಮ ಭ್ರಷ್ಟ ಅಧಿಕಾರ ಅವಧಿಯಲ್ಲಿ ರಾಜ್ಯದ ಮಠಗಳಿಗೆ ಜನತೆಯ ರೊಕ್ಕವನ್ನು ಬೇಕಾಬಿಟ್ಟಿಯಾಗಿ ಹಂಚಿ ಈ ಮಠದ ಸ್ವಾಮಿಗಳೆಲ್ಲ ನನ್ನ ಜೇಬಿನೊಳಗಿದ್ದಾರೆ ಹೀಗಾಗಿ ಈ ರಾಜ್ಯ ನನ್ನ ಮುಷ್ಟಿಯೊಳಗೆ ಎನ್ನುವ ದುರಹಂಕಾರದದಿಂದ ಹೆಜ್ಜೆ, ಹೆಜ್ಜೆಗೂ ತಪ್ಪು, ಆನೀತಿ ಹೆಜ್ಜೆಗಳನ್ನಿಡುತ್ತಿರುವ ಯಡಿಯೂರಪ್ಪ, ಈ ಕಾರಣಕ್ಕೆ ಹಾಗೂ ಕೇವಲ ಜಾತೀಯತೆಯಿಂದ ಯಡಿಯೂರಪ್ಪನವರನ್ನು ಬೆಂಬಲಿಸಿದ ಬಹುಪಾಲು ಮಠಗಳು ಹಾಗೂ ಅವುಗಳ ಆರ್ಥಿಕ ಮತ್ತು ಬೌದ್ಧಿಕ ಭ್ರಷ್ಟತೆ, ಮಾತು ಮಾತಿಗೆಲ್ಲ ಜನ ನನ್ನ ಹಿಂದೆ ಇದ್ದಾರೆ ಎಂದು ಯಡಿಯೂರಪ್ಪ ಹೂಂಕರಿಸಿದಾಗಲೆಲ್ಲ ಆ ಜನ ಮತ್ತ್ಯಾರು ಅಲ್ಲ ಲಿಂಗಾಯತರು ಎನ್ನುವ ಅಪಾದನೆಗೆ ಇಂಬು ಕೊಡುವಂತೆ ಯಡಿಯೂರಪ್ಪನವರಲ್ಲಿ ಇನ್ನಿಲ್ಲದ ಹುಂಬ ಆತ್ಮವಿಶ್ವಾಸಕ್ಕೆ ಕಾರಣವಾಗಿರುವ ಲಿಂಗಾಯಿತರು, ಇವರು ತಮ್ಮ ಈ ಅನಾಹುತಕಾರಿ, ಜಾತೀವಾದಿ ಧೋರಣೆ ಎಂತಹ ಅಸಮರ್ಥ, ಸಂಪೂರ್ಣ ಹಾದಿ ತಪ್ಪಿದ ನಾಯಕನನ್ನು ಸೃಷ್ಟಿಸಿದೆಯಲ್ಲ ಎನ್ನುವ ತೀವ್ರವಾದ ವಿಷಾದದ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾರೆಯೇ? ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆಯೇ? ಇಂತಹ ವಿಷಮಯ ಪರಿಸ್ಥಿಯಲ್ಲಿ ಈ ವಿರಕ್ತ ಮಠಗಳ ಪ್ರಗತಿಪರ ಧೋರಣೆಗಳು ತಮ್ಮ ನಿಷ್ಟ ಅನುಯಾಯಿಗಳಾದ ಅಮಾಯಕ ಲಿಂಗಾಯಿತರಿಗೆ ನಿಜಕ್ಕೂ ಹೊಸ ಚಿಂತನೆಗಳನ್ನು ತುಂಬಿಸುತ್ತವೆಯೇ, ಹಾಗೂ ಇನ್ನು ಮುಂದಾದರೂ ಇವರೆಲ್ಲ ಈ ಯಡಿಯೂರಪ್ಪ ಹಾಗು ಮಠಗಳ ಜಂಟಿ ಭ್ರಷ್ಟಾಚಾರಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆ ? ಇದು ಆರಂಭ ಮಾತ್ರ. ನಾವು ಸಿನಿಕರಾಗುವ ಅಗತ್ಯವಿಲ್ಲವೆನಿಸುತ್ತಿತ್ತು ಈ ಸಮಾವೇಶದಿಂದ ಮರಳುವಾಗ.

ದೃಶ್ಯ 2 :
ಬಿಜಾಪುರದ ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ವಿಷಯವಾಗಿ ಆ ಊರು ಅತ್ಯಂತ ಪ್ರಕ್ಷುಬ್ದವಾಗಿ ಇನ್ನೇನು ಸ್ಫೋಟಿಸಲು ತಯಾರಾಗಿತ್ತು. ನಮ್ಮ ಮಧ್ಯಮವರ್ಗಗಳ ವಿದ್ಯಾವಂತರು ನೋಡಿ ನಾವು ಹೇಳಲಿಲ್ಲವೇ ಎನ್ನುವ ತಮ್ಮ ಎಂದಿನ ಸ್ವಾರ್ಥ ಮುಖಭಾವದಿಂದ ಸೂಡೋ ಸೆಕ್ಯುಲರ್ ಗಳ ಮೇಲೆ ಇನ್ನೇನು ಮುಗಿಬೀಳಬೇಕು ಎನ್ನುವಷ್ಟರಲ್ಲಿ, ಈ ಘಟನೆಯನ್ನು ಅತ್ಯಂತ ರೋಚಕವಾಗಿ ಮುಖಪುಟದಲ್ಲಿ, ಬ್ರೇಕಿಂಗ್ ನ್ಯೂಸ್ನಲ್ಲಿ ಐದು ನಿಮಿಷಕ್ಕೊಮ್ಮೆ ಬಿತ್ತರಿಸುತ್ತಾ ಮುಂದಿನ ದಿನಗಳಲ್ಲಿ ಅದು ತಂದುಕೊಡುವ ರೋಚಕತೆಯನ್ನು ನೆನೆದು ಸಂಪೂರ್ಣ ಖುಷಿಯಲ್ಲಿದ್ದ ಕೆಲವು ಪತ್ರಿಕಾ ಮಾಧ್ಯಮಗಳು ಹಾಗೂ ಬಹುಪಾಲು ದೃಶ್ಯ ಮಾಧ್ಯಮಗಳು. ಅಷ್ಟರಲ್ಲೇ ಈ ಪ್ರಕರಣ ಅತ್ಯಂತ ವಿಚಿತ್ರ ತಿರುವು ಪಡೆದುಕೊಂಡು ಇದೆಲ್ಲ ಸಂಘಪರಿವಾರದ ಅಂಗ ಸಂಸ್ಥೆಯಾದ “ಶ್ರೀರಾಮ ಸೇನೆಯ” ಕೈವಾಡವೆಂದು ಪೋಲೀಸರ ಪ್ರಥಮ ತನಿಖೆಯಿಂದ ಬಯಲಾಗುತ್ತಲೇ ಈ ಸತ್ಯಸಂಗತಿಯನ್ನು ಸಣ್ಣ ಸುದ್ದಿಯನ್ನಾಗಿ ಎಲ್ಲೋ 4ನೇ ಅಥವಾ 5ನೇ ಪುಟದಲ್ಲಿ ಹಾಕಿದ ನಮ್ಮ ಬಹುಪಾಲು ಮಾಧ್ಯಮಗಳ, ಇಂತಹ ಘೋರ ಪಾತಕ ವಿಷಯವನ್ನು ಎಂದೂ ಮುಖ್ಯ ವೇದಿಕೆಗಳಲ್ಲಿ ಚರ್ಚಿಸದ ದೃಶ್ಯ ಮಾಧ್ಯಮಗಳ ಆತ್ಮವಂಚನೆ, ಬಹುಸಂಖ್ಯಾತ ಹಿಂದೂಗಳ ರಕ್ಷಕರು ಎಂದು ಅಬ್ಬರಿಸುವ ಶ್ರೀರಾಮ ಸೇನೆಯ ಈ ಸಮಾಜಘಾತುಕ, ವೈಷಮ್ಯದ, ದೇಶದ್ರೋಹಿ ಕೃತ್ಯದ ಬಗ್ಗೆ ತುಟಿ ಬಿಚ್ಚದ ನಮ್ಮ ಮಧ್ಯಮವರ್ಗದ ಕ್ಯಾಂಡಲ್ ವೀರರ ಆತ್ಮವಂಚನೆ.

ಇನ್ನು ಪ್ರಮುಖ ವಿರೋಧ ಪಕ್ಷವಾದ, ಸೋ ಕಾಲ್ಡ್ ಸೆಕ್ಯುಲರ್ ಕಾಂಗ್ರೆಸ್ ವತಿಯಿಂದ ಸಣ್ಣ ಪ್ರಮಾಣದ ಗೊಣಗುವಿಕೆಯೂ ಕೂಡ ಇಲ್ಲದ ಒಂದು ಹೆಳವಂಡ ಸ್ಥಿತಿ, ಇದು ಉತ್ತಮ ಪ್ರಜಾಪ್ರಭುತ್ವ ಎಂದರೆ ಒಂದು ಲೊಳಲೊಟ್ಟೆಯೇ ಎನ್ನುವ ನೀತಿಯನ್ನು ಮತ್ತೆ ಮತ್ತೆ ಬಯಲಾಗಿಸುತ್ತಿದೆ. ಇನ್ನು ಇಲ್ಲಿ ಬಿಜೆಪಿ ಆಡಳಿತವಿರುವುದರಿಂದ, ಎಂದಿನಂತೆ ಶಾಸಕಾಂಗ, ಕಾರ್ಯಾಂಗದ ಒಬ್ಬರಿಗೊಬ್ಬರು ಮಿಲಾಕತ್ತಾಗಿರುವುದರಿಂದ ಈ ಶ್ರೀರಾಮ ಸೇನೆಯ ದೇಶದ್ರೋಹದ ಘಾತಕ ಕೃತ್ಯದ ನಿಷ್ಪಕ್ಷಪಾತ ತನಿಖೆ ನ್ಯಾಯದ ತಾರ್ಕಿಕ ಅಂತ್ಯಕ್ಕೆ ಮುಟ್ಟುವ ಸಾಧ್ಯತೆಗಳೂ ತುಂಬಾ ಕಡಿಮೆಯೇ.

ಅಷ್ಟಕ್ಕೂ ಯಾರಿಗೆ ಬೇಕು ಸತ್ಯದ ಅನಾವರಣ !!! ಸದ್ಯಕ್ಕೆ ಏನಿದ್ದರು ರಾಜ್ಯದ ಅಧಿಕಾರ ನನಗೆ ಸಿಕ್ಕ ಹಾಗೂ ನಿರಂತರವಾಗಿ ಸಿಗಬೇಕಾದ ಜಹಗೀರು ಎನ್ನುವ ಮಾನಸಿಕ ಅಸ್ವಸ್ಥತೆಯ ಸಿಂಡ್ರೋಮಿನಿಂದ ನರಳುತ್ತಿರುವ ಯಡಿಯೂರಪ್ಪನವರ ಆತ್ಮಹತ್ಯಾತ್ಮಕ ನಡೆಗಳನ್ನು ಸದಾಕಾಲ ಬಿತ್ತರಿಸುವುದಷ್ಟೇ ನಮ್ಮ ಮಾಧ್ಯಮಗಳ ಸದ್ಯದ ಕಾಯಕವಾಗಿದೆ. ನೀನನಗಿದ್ದರೆ ನಾನಿನಗೆ ಎನ್ನುವ ಅವಕಾಶವಾದಿ ಧೋರಣೆ. ಇಲ್ಲಿ, ಲಂಕೇಶರ ಗುಣಮುಖ ನಾಟಕದ ನಾದಿರ್ ನ ಮಾತುಗಳು “ಹಿಂದೂಸ್ತಾನಕ್ಕೆ ಬಂದ ಮೇಲೆ ಚಿಕ್ಕ ಪ್ರಶ್ನೆಗಳೂ ಇಲ್ಲಿ ಪರ್ವತದಂತೆ, ನದಿಗಳಂತೆ… ಕಡೆಗೆ ಮಂಜಿನಂತೆ ಆಗಿ ಪ್ರಶ್ನೆಯೇ ಇಲ್ಲ ಅನಿಸಿಬಿಡ್ತವೆ. ಸುಳ್ಳು ನಿಜದಂತೆ, ನಿಜ ಸುಳ್ಳಿನಂತೆ ಆಗ್ತದೆ, ಇಲ್ಲಿ ಮಾತನಾಡಿದರೆ ಪ್ರತಿಧ್ವನಿಗಳು ಮಾತ್ರ ಬರುತ್ತದೆ, ಸತ್ಯದ ಹೆಸರಿನಲ್ಲಿ ಸುಳ್ಳು ಕುತಂತ್ರಗಳು ಮಾತ್ರ ಹೊಮ್ಮುತ್ತವೆ.” ಹಾಗೂ ಅಲಾವಿಖಾನ್‌ನ “ಭೂಮಿಯನ್ನು ಮರೆಯುವ ಮನುಷ್ಯ, ಎಷ್ಟು ಮದರಾಸಗಳು, ಎಷ್ಟು ಬೃಹತ್ ಗ್ರಂಥಗಳು, ಎಷ್ಟು ಶೋಧನೆಗಳು, ಎಷ್ಟು ಜನ ಸಂತರು ಬಂದರೂ ಮನುಷ್ಯ ಏಕೆ ಹೀಗೆ ಭೀಕರ ವ್ಯಸನಗಳಲ್ಲಿ, ಅಜ್ಞಾನದಲ್ಲಿ ಸಿಕ್ಕಿಕೊಂಡಿದ್ದಾನೆ,” ಎನ್ನುವ ಮಾರ್ಮಿಕ ಮಾತುಗಳು ಎಲ್ಲಾ ಕಾಲಕ್ಕೂ ಕೈದೀಪಗಳು ಹಾಗೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತವೆ.

ದೃಶ್ಯ 3:
ಎಂದಿನಂತೆ ಸಂಕ್ರಾಂತಿಯ ನಂತರ ತನ್ನ ಪಥ ಬದಲಿಸುವ ಸೂರ್ಯ ಹಾಗೂ ಭೂತಾಯಿಗೆ ಬಲಿ ಬೇಕು. ಇದೇ ವೇಳೆಗೆ ನಮ್ಮ ರಾಜ್ಯಕ್ಕೆ ಶ್ರೀರಾಮುಲು ಅವರ “ಬಡವರ ಹಿಂದುಳಿದವರ ಪಕ್ಷ” ಉದಯವಾಗುತ್ತಲಿದೆ. ಈ ಮರೀಚಿಕೆಗೆ, ಖೆಡ್ಡಾಗೆ ಬಲಿಯಾಗಲು ಅಮಾಯಕ ಹಿಂದುಳಿದ ವರ್ಗಗಳ ಜನತೆ, ರುದ್ರರು, ಉಜ್ಜರು ರಾಜ್ಯದಲ್ಲಿ ತಮಗೆ ಗೊತ್ತಿಲ್ಲದೆಯೇ ತಯಾರಾಗಿರುವುದು ಶ್ರೀರಾಮುಲುರಂತಹ ರಾಜಕಾರಣಿಗಳಲ್ಲಿ ಇನ್ನಿಲ್ಲದ ಉತ್ಸಾಹವನ್ನು ಹುಟ್ಟಿಹಾಕಿದಂತಿದೆ. ಅಲ್ಲದೆ ನಮ್ಮ ಯಡಿಯೂರಪ್ಪನವರೂ ಬದಲಾಗುತ್ತಿದ್ದಾರಂತೆ ಸಂಕ್ರಾಂತಿಯ ನಂತರ. ಇವರನ್ನೆಲ್ಲ ಬದಲಾಯಿಸಿ ಹೊಸ ಗಾಳಿ ಬೀಸುವಂತೆ ಮಾಡುವ ಗುರುತರ ಹೊಣೆಗಾರಿಕೆಯ ನಾವೆಲ್ಲ ನಿದ್ರಿಸುತ್ತಿದ್ದೇವೆ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ-2)

-ಡಾ. ಎನ್. ಜಗದೀಶ್ ಕೊಪ್ಪ

ಜಿಮ್ ಕಾರ್ಬೆಟ್‌ ಭಾರತದಲ್ಲಿ ಹುಟ್ಟಿ ಅಪ್ಪಟ ಭಾರತೀಯನಂತೆ ಬದುಕಿದ. ಇಲ್ಲಿನ ಗ್ರಾಮೀಣ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದ ಕಾರ್ಬೆಟ್‌ ಹಿಂದಿ ಒಳಗೊಂಡಂತೆ ಸ್ಥಳೀಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಈತನ ಪೂರ್ವಿಕರು ಇಂಗ್ಲೆಂಡ್‌ನ ಆಳ್ವಿಕೆಯಲ್ಲಿದ್ದ ಐರ್ಲೆಂಡ್ ದೇಶದಿಂದ ಸಿಪಾಯಿ ದಂಗೆಗೆ ಮುನ್ನ ಭಾರತದಲ್ಲಿದ್ದ ಬ್ರಿಟಿಷರ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಬಂದವರು.

ಅದು 18ನೇ ಶತಮಾನದ ಅಂತ್ಯದ ಕಾಲ. ಆಗತಾನೆ ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಯತ್ತ ಹೆಜ್ಜೆ ಇಡುತಿತ್ತು. ಅಂದಿನ ದಿನಗಳಲ್ಲಿ ಇಂಗ್ಲೆಂಡ್ ಸೇರಿದಂತೆ ಐರ್ಲೆಂಡ್ ದೇಶದಲ್ಲಿ ಜನಸಾಮಾನ್ಯರು ಬದುಕುವುದು ದುಸ್ತರವಾಗಿತ್ತು. ಇದೇ ವೇಳೆಗೆ ಜಗತ್ತಿನಾದ್ಯಂತ ಇಂಗ್ಲೆಂಡ್ ಸಾಮ್ರಾಜ್ಯ ವಿಸ್ತರಿಸುತಿತ್ತು. ಬ್ರಿಟಿಷ್ ವಸಾಹತುಶಾಹಿ ಪ್ರದೇಶಗಳಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಜೊತೆ ಸಂವಹನದ ಕೊರತೆ ಇದ್ದ ಕಾರಣ ಬ್ರಿಟಿಷರು ಬಹುತೇಕ ಜವಾಬ್ದಾರಿ ಹುದ್ದೆಗಳಿಂದ ಹಿಡಿದು, ಸೈನಿಕ ವೃತ್ತಿಗೂ ತಮ್ಮವರನ್ನೇ ನೇಮಕ ಮಾಡಿಕೊಳ್ಳುತ್ತಿದರು. ಜೊತೆಗೆ ತಮ್ಮ ವಸಾಹತು ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳಿಗೆ ತಮ್ಮ ಜನರನ್ನು ಪ್ರೊತ್ಸಾಹಿಸುತಿದ್ದರು. ಹಿಗಾಗಿಯೇ ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಬ್ರಿಟಿಷರು ನೆಲೆಯೂರಲು ಸಾಧ್ಯವಾಯಿತು.

ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಭ್ರಮೆಯಲ್ಲಿ ಓಲಾಡುತಿದ್ದ ಇಂಗ್ಲೆಂಡ್ ಮತ್ತು ಅಲ್ಲಿನ ಜನತಗೆ ತಾವು ಹುಟ್ಟಿರುವುದು ಜಗತ್ತನ್ನು ಆಳುವುದಕ್ಕೆ ಎಂಬ ನಂಬಿಕೆಯಿತ್ತು. ತಾವು ಈ ನೆಲದ ಮೇಲಿನ ದೊರೆಗಳು, ಉಳಿದವರು ನಮ್ಮ ಸೇವೆ ಮಾಡುವುದಕ್ಕಾಗಿ ಹುಟ್ಟಿದ ಸಂಸ್ಕೃತಿಯಿಲ್ಲದ ಗುಲಾಮರು ಎಂಬ ಭ್ರಮೆ ಅವರಲ್ಲಿ ಬಲವಾಗಿ ಬೇರೂರಿತ್ತು.

ಇಂತಹದ್ದೇ ಸಂದರ್ಭದಲ್ಲಿ ಕಾರ್ಬೆಟ್‌ನ ತಾತ ಹಾಗೂ ಅಜ್ಜಿ ಜೊಸೆಪ್ ಮತ್ತು ಹ್ಯಾರಿಯೆಟ್ ಎಂಬುವರು 1814ರ ಜುಲೈ 26ರಂದು ಐರ್ಲೆಡಿನಿಂದ ರಾಯಲ್ ಜಾರ್ಜ್ ಎಂಬ ಹಡಗಿನ ಮೂಲಕ ಪ್ರಯಾಣ ಆರಂಭಿಸಿ, 1815ರ ಪೆಬ್ರವರಿ 7 ರಂದು ಭಾರತದ ನೆಲಕ್ಕೆ ಕಾಲಿಟ್ಟರು. ಬರುವಾಗಲೇ ಈ ಯುವ ದಂಪತಿಗಳಿಗೆ ಒಂದು ವರ್ಷದ ಎಲಿಜಾ ಎಂಬ ಹೆಣ್ಣು ಮಗುವಿತ್ತು. 1796 ರಲ್ಲಿ ಐರ್ಲೆಂಡಿನ ಬೆಲ್ಫಾಸ್ಟ್ ನಗರದಲ್ಲಿ ಜನಿಸಿದ್ದ ಜೋಸೆಪ್ ಅಲ್ಲಿ ಕೆಲ ಕಾಲ ಕ್ರೈಸ್ತ ಸನ್ಯಾಸಿಯಾಗಿ ಕಾರ್ಯ ನಿರ್ವಹಿಸಿದ್ದ. ಅವನು ತನ್ನ ಪತ್ನಿ ಹ್ಯಾರಿಯೆಟ್ ಜೊತೆ ಐರ್ಲೆಂಡ್ ತೊರೆಯುವ ಮುನ್ನವೇ ಅಂದರೆ 1814 ಜೂನ್ 15 ರಂದು ಭಾರತದ ಬ್ರಿಟಿಷ್ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಉದ್ಯೋಗ ಪತ್ರ ಪಡೆದುಕೊಂಡಿದ್ದರಿಂದ ಇಲ್ಲಿಗೆ ನೇರವಾಗಿ ಬಂದವನೇ ಸೇನೆಯಲ್ಲಿ ಸೇರ್ಪಡೆಯಾದ. ಕೇವಲ ಎರಡು ವರ್ಷಗಳಲ್ಲಿ ಭಡ್ತಿ ಪಡೆದು, ಅಶ್ವರೋಹಿ ಪಡೆಗೆ ವರ್ಗವಾಗಿ ಮೀರತ್ ನಲ್ಲಿ ಸಾರ್ಜೆಂಟ್ ಆಗಿ ಸೇವೆ ಸಲ್ಲಿಸುತಿದ್ದಾಗಲೇ ತನ್ನ 33ನೇ ವಯಸ್ಸಿನಲ್ಲಿ ಅಂದರೆ, 1830ರ ಮಾಚ 28ರಂದು ಅಸುನೀಗಿದ. ಈ ವೇಳೆಗಾಗಲೇ ಜೋಸೆಪ್ ಮತ್ತು ಹ್ಯಾರಿಯೆಟ್ ದಂಪತಿಗಳಿಗೆ ಒಂಬತ್ತು ಮಂದಿ ಮಕ್ಕಳಿದ್ದರು. ಇವರಲ್ಲಿ ಆರನೇಯವನಾಗಿ 1822ರಲ್ಲಿ ಮೀರತ್ ನಲ್ಲಿ ಜನಿಸಿದವನು ಕ್ರಿಸ್ಟೋಪರ್ ವಿಲಿಯಮ್ ( ಜಿಮ್ ಕಾರ್ಬೆಟ್‌ ತಂದೆ).

ಈತ ಕೂಡ ತಂದೆಯಂತೆ ಸೇನೆಯಲ್ಲಿ ವೈದ್ಯಕೀಯ ಚಿಕಿತ್ಸಕನ ಸಹಾಯಕನಾಗಿ ಸೇರ್ಪಡೆಯಾಗಿ ಮಸ್ಸೂರಿಯಲ್ಲಿ ಕಾರ್ಯನರ್ವಹಿಸುತಿದ್ದ. ತನ್ನ 20 ನೇ ವಯಸ್ಸಿಗೆ ಉಪ ಶಸ್ತ್ರಚಿಕಿತ್ಸಕನಾಗಿ ಭಡ್ತಿ ಪಡೆದು ಆಘ್ಪಾನಿಸ್ಥಾನದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ, ಸ್ಥಳೀಯ ಬುಡಕಟ್ಟು ಜನಾಂಗದೊಡನೆ ಬ್ರಿಟಿಷರು ನಡೆಸಿದ ಯುದ್ಧದಲ್ಲಿ ಪಾಲ್ಗೊಂಡು ತನ್ನ ಸೇವೆಗಾಗಿ ಪದಕವನ್ನೂ ಪಡೆದ. ಯುದ್ದ ಮುಗಿದ ಬಳಿಕ ಕ್ರಿಸ್ಟೋಪರ್ ವಿಲಿಯಮ್‌ನನ್ನು ಸರ್ಕಾರ ಮಸ್ಸೂರಿ ಬಳಿಯ ಡೆಹರಾಡೂನ್‌ಗೆ ವರ್ಗಾವಣೆ ಮಾಡಿತು. ಈ ವೇಳೆಯಲ್ಲಿ ಅಂದರೆ, 1845 ರಲ್ಲಿ ಮಸ್ಸೂರಿಯಲ್ಲಿ ಬೇಟಿಯಾದ ಮೇರಿ ಆನ್ನ್‌ಳನ್ನು ಮೊದಲ ನೋಟದಲ್ಲೇ ಮೋಹಗೊಂಡು ಪ್ರೀತಿಸಿ ಡಿಸೆಂಬರ್ 19 ರಂದು ಮದುವೆಯಾದ. ಅವನ ಮಧುಚಂದ್ರ ಮುಗಿಯುವುದರೊಳಗೆ ಬ್ರಿಟಿಷ್ ಸೇನೆ ಅವನನ್ನು ಮತ್ತೇ ಪಂಜಾಬ್‌ಗೆ ವರ್ಗ ಮಾಡಿತು. ಅಲ್ಲಿ ಸಿಖ್ಖರೊಡನೆ ನಡೆಯುತಿದ್ದ ಸಂಘರ್ಷದಲ್ಲಿ ಹಲವಾರು ಸೈನಿಕರು ಗಾಯಗೊಂಡ ಕಾರಣ ಕ್ರಿಸ್ಟೋಪರ್ ಸೇವೆ ಅಲ್ಲಿ ಅಗತ್ಯವಾಗಿತ್ತು. ಈತನನ್ನು 18ನೇ ವಯಸ್ಸಿಗೆ ಮದುವೆಯಾಗಿದ್ದ ಮೇರಿ ಆನ್ನ್ ಎರಡು ಮಕ್ಕಳಿಗೆ ಜನ್ಮ ನೀಡಿ ತನ್ನ 20ನೇ ವಯಸ್ಸಿಗೆ ಆಕಸ್ಮಿಕವಾಗಿ ಮರಣ ಹೊಂದಿದಳು. ತನ್ನ ಎರಡು ಮಕ್ಕಳೊಂದಿಗೆ ಪಂಜಾಬ್ ಬಂಗಾಳ ದೆಹಲಿ ಮುಂತಾದ ಕಡೆ ಕಾರ್ಯನಿರ್ವಹಿಸಿ, 1857ರಲ್ಲಿ ನಡೆದ ಸಿಪಾಯಿ ದಂಗೆ ಯುದ್ಧದಲ್ಲಿ ಬ್ರಿಟಿಷ್ ಸೇನೆ ಪರ ಶೌರ್ಯ ಪ್ರದರ್ಶಿಸಿ ಪದಕಗಳನ್ನು ಪಡೆದ ಕ್ರಿಸ್ಟೋಪರ್ 1858ರಲ್ಲಿ ಸೇನೆಯಿಂದ ನಿವೃತ್ತಿ ಪಡೆದು,1959ರಲ್ಲಿ ಮಸ್ಸೂರಿಯ ಅಂಚೆ ಇಲಾಖೆಗೆ ಪೊಸ್ಟ್ ಮಾಸ್ಠರ್ ಆಗಿ ಸೇರ್ಪಡೆಗೊಂಡ. ಅಲ್ಲಿನ ಚರ್ಚ್ ಒಂದರ ಸಮಾರಂಭದಲ್ಲಿ ಬೇಟಿಯಾದ ನಾಲ್ಕು ಮಕ್ಕಳ ತಾಯಿ ಹಾಗೂ ವಿಧವೆ ಮೇರಿ ಜೇನ್‌ ಡೋಯಲ್‌ಳನ್ನು ಮರು ವಿವಾಹವಾದ. ಈ ವೇಳೆಗೆ ಕ್ರಿಸ್ಟೋಪರ್ ವಿಲಿಯಮ್‌ಗೆ ಇಬ್ಬರು, ಆಕೆಗೆ ನಾಲ್ವರು ಒಟ್ಟು ಆರು ಮಕ್ಕಳಿದ್ದರು. (ಇವರಲ್ಲಿ ಆಕೆಯ ಮೂರು ಮಕ್ಕಳು ಅಸು ನೀಗಿ ಏಕೈಕ ಹೆಣ್ಣು ಮಾತ್ರ ಉಳಿಯಿತು.)

ಮೇರಿ ಜೇನ್ ಡೊಯಲ್‌ಳದು ಒಂದು ರೀತಿ ಹೋರಾಟದ ಬದುಕು. ತನ್ನ 14ನೇ ವಯಸ್ಸಿಗೆ ಮಿಲಿಟರಿಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತಿದ್ದ ಡಾ. ಚಾರ್ಲ್ಸ್ ಜೇಮ್ಸ್ ಎಂಬಾತನ ಜೊತೆ ವಿವಾಹವಾಗಿ ಆಗ್ರಾ ನಗರದಲ್ಲಿ ನೆಮ್ಮದಿಯ ಜೀವನ ನಡೆಸುತಿದ್ದಳು.1857ರಲ್ಲಿ ಸಂಭವಿಸಿದ ಸಿಪಾಯಿ ದಂಗೆ ಹೋರಾಟದ ಸಮಯದಲ್ಲಿ ದೆಹಲಿಯಲ್ಲಿ ಭಾರತೀಯರು ನಡೆಸಿದ ಬ್ರಿಟಿಷರ ನರಮೇಧದಿಂದ ಎಚ್ಚೆತ್ತುಕೊಂಡ ಆಗ್ರಾ ಬ್ರಿಟಿಷರ ಸೇನೆ ತಮ್ಮ ಹೆಂಗಸರು ಮತ್ತು ಮಕ್ಕಳನ್ನು ಕೋಟೆಯೊಳೆಗೆ ಸುರಕ್ಷಿತ ಜಾಗದಲ್ಲಿರಿಸಿ ಭಾರತೀಯ ಸಿಪಾಯಿಗಳ ಜೊತೆ ಹೋರಾಟ ನಡೆಸಿತು. ಈ ಸಮಯದಲ್ಲಿ ಸೇನಾ ತುಕಡಿಯ ಕಮಾಂಡರ್ ಆಗಿದ್ದ ಈಕೆಯ ಪತಿ ಡಾ. ಚಾರ್ಲ್ಸ್ ಜೇಮ್ಸ್ ಭಾರತೀಯರ ಧಾಳಿಗೆ ತುತ್ತಾಗಿ ಅಸುನೀಗಿದ. ಈ ವೇಳೆಯಲ್ಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಮೇರಿ ತನ್ನ ಮಕ್ಕಳೊಂದಿಗೆ ಸೀರೆಯ ಸಹಾಯದಿಂದ ಆಗ್ರಾ ಕೋಟೆಯನ್ನು ಹಾರಿ ಯಮುನಾ ನದಿ ತೀರದುದ್ದಕ್ಕೂ ನಡೆದು, ನಂತರ ಯುರೋಪಿಯನ್ ಮಹಿಳೆಯರೊಂದಿಗೆ ಭಾರತದ ಸಿಪಾಯಿಗಳ ದಾಳಿಗೆ ಸಿಲುಕದೆ, ಕಾಲು ನಡಿಗೆಯಲ್ಲಿ ಬ್ರಿಟಿಷರ ಸುರಕ್ಷಿತ ಸ್ಥಳವಾದ ಮಸ್ಸೂರಿ ತಲುಪಿದ ದಿಟ್ಟ ಹೆಂಗಸು ಆಕೆ.

ಮೇರಿ ಕ್ರಿಸ್ಟೋಪರ್‌ನನ್ನು ಮದುವೆಯಾಗುವವರೆಗೂ ಬ್ರಿಟಿಷ್ ಸರ್ಕಾರ ತನ್ನ ಮೃತ ಗಂಡನಿಗೆ ನೀಡುತಿದ್ದ ಜೀವನಾಂಶದಲ್ಲಿ ತನ್ನ ಮಕ್ಕಳೊಂದಿಗೆ ಮಸ್ಸೂರಿಯಲ್ಲಿ ಬದುಕು ದೂಡುತಿದ್ದಳು.

ಈ ಇಬ್ಬರೂ ಮರು ವಿವಾಹವಾದ ನಂತರ ದಂಪತಿಗಳು ಎರಡು ವರ್ಷ ಮಸ್ಸೂರಿಯಲ್ಲಿದ್ದರು. ನಂತರ 1862ರಲ್ಲಿ ಕ್ರಿಸ್ಟೋಪರ್ ವಿಲಿಯಮ್ಸ್ ಶಾಶ್ವತವಾಗಿ ನೈನಿತಾಲ್ ಗಿರಿಧಾಮದ ಅಂಚೆಕಚೇರಿಗೆ ವರ್ಗವಾದ ಕಾರಣ ಕಾರ್ಬೆಟ್ ಕುಟುಂಬ ಇಲ್ಲಿ ನೆಲೆಯೂರಲು ಸಾಧ್ಯವಾಯಿತು. ಇವರು ನೈನಿತಾಲ್‌ಗೆ ಬಂದಾಗ ಈ ಗಿರಿಧಾಮ ಆಗ ತಾನೆ ಹೊರಜಗತ್ತಿಗೆ ತನ್ನನ್ನು ತಾನು ತೆರೆದುಕೊಳ್ಳುತಿತ್ತು.

ಕುಮಾವನ್ ಪರ್ವತಗಳ ಶ್ರೇಣಿಗಳ ನಡುವೆ 6800 ಅಡಿ ಎತ್ತರದಲ್ಲಿ ಇದ್ದ ನೈನಿ ಎಂಬ ಪರಿಶುದ್ಧ ತಿಳಿನೀರಿನ ಸರೋವರವನ್ನು ಕಂಡುಹಿಡಿದ ಕೀರ್ತಿ ಬ್ರಿಟಿಷ್ ವರ್ತಕ ಬ್ಯಾರನ್ ಎಂಬಾತನದು. ಶಹಜಾನ್ಪುರದಲ್ಲಿ ವರ್ತಕನಾಗಿದ್ದ ಈತನಿಗೆ ಬಿಡುವು ಸಿಕ್ಕಾಗಲೆಲ್ಲಾ ಗುಡ್ಡ ಕಣಿವೆಗಳನ್ನು ಹತ್ತಿ ಇಳಿಯುವ ಹವ್ಯಾಸ. 1841ರಲ್ಲಿ ಒಮ್ಮೆ ಅಲ್ಮೋರ ಬಳಿಯ ಕೋಸಿ ನದಿ ತೀರದ ಕಣಿವೆಯಲ್ಲಿ ಅಡ್ಡಾಡುತಿದ್ದಾಗ ಎತ್ತರದ ಪರ್ವತವನ್ನೇರಿ ಈ ಸರೋವರವನ್ನು ಗುರುತಿಸಿದ. ಮತ್ತೊಮ್ಮೆ ಸೇನೆಯ ಇಂಜಿನೀಯರ್ ಕ್ಯಾಪ್ಟನ್ ವೆಲ್ಲರ್ ಹಾಗೂ ಕುಮಾವನ್ ಪ್ರಾಂತ್ಯದ ಅಧಿಕಾರಿ ಲುಷಿಂಗ್ಟನ್ ಇವರನ್ನ ಕರೆದೊಯ್ದು ಅವರಿಗೆ ಬೇಸಿಗೆಯಲ್ಲಿ ಯುರೋಪಿಯನ್ನರು ವಾಸಿಸಲು ಇದು ಪ್ರಶಸ್ತವಾದ ಸ್ಥಳ ಎಂದು ಮನದಟ್ಟು ಮಾಡಿಕೊಟ್ಟ.

1842 ರಲ್ಲಿ ಅಧಿಕಾರಿ ಲುಷಿಂಗ್ಟನ್ ಅಲ್ಲಿನ ಜಾಗವನ್ನು ಗುರುತಿಸಿ, ವಾಸಸ್ಥಳದ ರೂಪುರೇಷೆಗಳನ್ನು ವಿನ್ಯಾಸಗೊಳಿಸಿದ. ವಾಸಸ್ಥಳಕ್ಕಾಗಿ ಗುರುತಿಸಿದ ಸ್ಥಳಗಳನ್ನು ಈ ಗಿರಿಧಾಮದಲ್ಲಿ ವಾಸಿಸಲು ಬರುವವರಿಗೆ (ಬ್ರಿಟಿಷರಿಗೆ ಮಾತ್ರ) ಎಕರೆಗೆ 12 ಆಣೆಗಳಂತೆ ( ಮುಕ್ಕಾಲು ರೂಪಾಯಿ ಅಂದರೆ ಈಗಿನ 75 ಪೈಸೆ) ಮಾರಲಾಯಿತು. ಈ ಸ್ಥಳವನ್ನು ಕಂಡು ಹಿಡಿದ ಬ್ಯಾರನ್ ತಾನೂ ಜಮೀನು ಖರೀದಿಸಿ ಅಲ್ಲಿ ಪ್ರವಾಸಿಗರಿಗಾಗಿ ವಸತಿಗೃಹ ಪ್ರಾರಂಭಿಸಿದ. ಕೇವಲ 10 ವರ್ಷಗಳಲ್ಲಿ ಈ ಗಿರಿಧಾಮ ಯುರೋಪಿಯನ್ನರ ಮೆಚ್ಚಿನ ತಾಣವಾಯಿತು. 1857ರ ಸಿಪಾಯಿ ದಂಗೆಯ ಸಮಯದಲ್ಲೂ ಕೂಡ ಸುರಕ್ಷಿತವಾಗಿದ್ದ ಕಾರಣ, ಸಮೀಪದ ರಾಮ್‌ಪುರ್, ಮುರದಾಬಾದ್,  ರಾಯ್‌ಬರೇಲಿ ಮುಂತಾದ ಊರುಗಳಲ್ಲಿ ವಾಸವಾಗಿದ್ದ ಬ್ರಿಟಿಷರು ಇಲ್ಲಿಗೆ ಬರಲು ಆರಂಭಿಸಿದರು.

1862ರಲ್ಲಿ ಜಿಮ್ ಕಾರ್ಬೆಟ್ ತಂದೆ ಕ್ರಿಸ್ಟೋಪರ್ ವಿಲಿಯಮ್ಸ್ ಹಾಗೂ ತಾಯಿ ಮೇರಿಜನ್ ಡೊಯಲ್ ನೈನಿತಾಲ್ ಬರುವ ವೇಳೆಗೆ ಅದು ಪ್ರವಾಸ ತಾಣ ಪಟ್ಟಣವಾಗಿ ರೂಪುಗೊಂಡಿತ್ತು. ಪಾರಂಭದಲ್ಲಿ ಮಲ್ಲಿ ಎಂಬ ಸರೋವರದ ಬಳಿ ಬಾಡಿಗೆ ಮನೆಯಲ್ಲಿದ್ದು ನಂತರ ತಾವು ಕೂಡ ಒಂದು ನಿವೇಶನ ಖರೀದಿಸಿ ಸ್ವಂತ ಮನೆ ಮಾಡಿಕೊಂಡರು. ಕ್ರಿಸ್ಟೋಪರ್ ವಿಲಿಯಮ್ಸ್ ಪೋಸ್ಟ್ ಮಾಸ್ಟರ್ ಆಗಿದ್ದ ಕಾರಣ ಎಲ್ಲರ ಜೊತೆ ನಿಕಟ ಸಂಬಂಧ ಹೊಂದಿದ್ದ. ಜೊತೆಗೆ ನಿವೃತ್ತ ಸೇನಾಧಿಕಾರಿಯಾಗಿದ್ದ. ಆತ ಆಗಿನ ಜಿಲ್ಲಾಧಿಕಾರಿ ಸರ್ ಹೆನ್ರಿ ರಾಮ್ಸೆ ಅವರ ಮನವೊಲಿಸಿ ನೈನಿತಾಲ್ ತಪ್ಪಲಿನ ಚೋಟ ಹಲ್ದಾನಿ ಮತ್ತು ಕಲದೊಂಗಿ ಹಳ್ಳಿಗಳ ನಡುವೆ 10 ಎಕರೆ ಭೂಮಿಯನ್ನು ಮಂಜೂರು ಮಾಡಿಸಿಕೊಂಡ. ನೈನಿತಾಲ್ ಬೇಸಿಗೆಗೆ ಹೇಳಿ ಮಾಡಿಸಿದ ಪ್ರಶಸ್ತ ಸ್ಥಳವಾದರೂ, ಚಳಿಗಾಲದ ನವೆಂಬರ್‌ನಿಂದ ಫೆಬ್ರವರಿವರೆಗೆ ಅಲ್ಲಿ ಚಳಿ ತಡೆಯಲು ಅಸಾಧ್ಯವಾಗಿತ್ತು. ಹಾಗಾಗಿ ಕ್ರಿಸ್ಟೋಪರ್ ತನ್ನ ಕುಟುಂಬದ ಚಳಿಗಾಲಕ್ಕಾಗಿ ಕಲದೊಂಗಿಯಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡ.

1860 ಕ್ಕೂ ಮುನ್ನವೆ ಈ ಎರಡು ಹಳ್ಳಿಗಳು ಅಸ್ತಿತ್ವದಲ್ಲಿದ್ದವು. ಸುತ್ತ ಮುತ್ತಲಿನ ಅರಣ್ಯ ಪ್ರದೇಶದಿಂದ ಆವರಿಸಿಕೊಂಡಿದ್ದ ಈ ಹಳ್ಳಿಗಳು ಮಲೇರಿಯಾ ಸೊಳ್ಳೆಗಳ ವಾಸಸ್ಥಾನವಾಗಿದ್ದವು. ಆದರೂ ಕೂಡ ಚಳಿಗಾಲದ ವಾಸಕ್ಕೆ ಕಲದೊಂಗಿ ಹಳ್ಳಿ ಕಾರ್ಬೆಟ್ ಕುಟುಂಬಕ್ಕೆ ಅನಿವಾರ್ಯವಾಗಿತ್ತು.

ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಆಗತಾನೆ ದೇಶದುದ್ದಕ್ಕೂ ರೈಲ್ವೆ ಮಾರ್ಗ ಹಾಕಲು ಆರಂಭಿಸಿತ್ತು. ರೈಲ್ವೆ ಹಳಿಗಳನ್ನು ತಯಾರು ಮಾಡುವ ಇಂಗ್ಲೆಂಡ್ ಮೂಲದ ಡೆವಿಸ್ ಅಂಡ್ ಕೋ ಎಂಬ ಕಂಪನಿ ಈ ಹಳ್ಳಿಯಲ್ಲೇ ಕಬ್ಬಿಣದ ಹಳಿಗಳನ್ನು ತಯಾರು ಮಾಡುತಿತ್ತು. ಕಬ್ಬಿಣದ ಅದಿರನ್ನು ಕಾಯಿಸಲು ಬೇಕಾದ ಮರದ ಇದ್ದಿಲು ತಯಾರು ಮಾಡುವ ಅನೇಕ ಘಟಕಗಳು ಇಲ್ಲಿ ಕಾರ್ಯ ನಿರ್ವಹಿಸುತಿದ್ದವು. ಇದ್ದಿಲು ಸುಡುವುದಕ್ಕಾಗಿ ಮರಗಳನ್ನು ಅಪಾರ ಪ್ರಮಾಣದಲ್ಲಿ ಕಡಿಯುತಿದ್ದರಿಂದ ಮುಂದಿನ ದಿನಗಳಲ್ಲಿ ಈ ಘಟಕಗಳನ್ನು ಮುಚ್ಚಿಹಾಕಲಾಯಿತು. ಅಷ್ಟರ ವೇಳೆಗಾಗಲೆ ಕಲದೊಂಗಿ ಸುತ್ತಮುತ್ತಲಿನ ನಗರಗಳ ಪಾಲಿಗೆ ಸಂಪರ್ಕ ಕೇಂದ್ರವಾಗಿತ್ತು. ರೈಲ್ವೆ ಹಳಿಗಳನ್ನು ಸಾಗಿಸಲು ಬ್ರಿಟಿಷ್ ಸರ್ಕಾರ ಮುರದಾಬಾದ್‌ನಿಂದ ಕಲದೊಂಗಿಯವರೆಗೆ ರೈಲು ಮಾರ್ಗವನ್ನು ಸಹ ನಿರ್ಮಿಸಿತ್ತು. ಆದರೆ ಕಲದೊಂಗಿಯಿಂದ ನೈನಿತಾಲ್‌ಗೆ ಹೋಗಿ ಬರುವ ಮಾರ್ಗ ಮಾತ್ರ ದುರ್ಗಮವಾಗಿತ್ತು. ಹೆಂಗಸರು ಮತ್ತು ಮಕ್ಕಳನ್ನು ಡೋಲಿ ಇಲ್ಲವೆ ಕುದುರೆಯ ಮೇಲೆ ಕೂರಿಸಿ, ಗಂಡಸರು ನಡೆಯಬೇಕಾದ ಸ್ಥಿತಿ. ಜೊತಗೆ ಅರಣ್ಯದ ನಡುವೆ ಹುಲಿ, ಚಿರತೆ ಮತ್ತು ಡಕಾಯಿತರ ಕಾಟ. ಇದರಿಂದ ತಮ್ಮ ಜೊತೆ ಹಲವಾರು ಹಳ್ಳಿಗರನ್ನು ದಿನಗೂಲಿ ಆಧಾರದ ಮೇಲೆ ರಕ್ಷಣೆಗಾಗಿ ತಮ್ಮ ಜೊತೆ ಕರೆದೊಯ್ಯುವುದು ಕಾರ್ಬೆಟ್ ಕುಟುಂಬಕ್ಕೆ ಅನಿವಾರ್ಯವಾಗಿತ್ತು.

1862 ರ ನಂತರ ನೈನಿತಾಲ್‌ನಲ್ಲಿ ಶಾಶ್ವತವಾಗಿ ನೆಲೆ ನಿಂತ ಕ್ರಿಸ್ಟೋಪರ್ ಮತ್ತು ಮೇರಿ ದಂಪತಿಗಳಿಗೆ ತಮ್ಮ ಮರು ವಿವಾಹದ ನಂತರ ಒಂಬತ್ತು ಮಕ್ಕಳು ಜನಿಸಿದರು. ಮೇರಿ ತನ್ನ ಮೊದಲ ಪತಿಯಿಂದ ನಾಲ್ಕು, ಎರಡನೆ ಪತಿ ಕ್ರಿಸ್ಟೋಪರ್‌ನಿಂದ ಒಂಬತ್ತು, ಒಟ್ಟು ಹದಿಮೂರು ಮಕ್ಕಳ ತಾಯಿಯಾದರೆ, ಕಾರ್ಬೆಟ್ ನ ತಂದೆ ಕ್ರಿಸ್ಟೋಪರ್ ತನ್ನ ಮೊದಲ ಪತ್ನಿಯಿಂದ ಎರಡು ಹಾಗೂ ಮೇರಿಯಿಂದ ಪಡೆದ ಒಂಬತ್ತು ಮಕ್ಕಳು ಒಟ್ಟು ಹನ್ನೊಂದು ಮಕ್ಕಳ ತಂದೆಯಾದ. ಇವರಲ್ಲಿ ಮೇರಿಯ ಮೂರು ಮಕ್ಕಳು ಅಕಾಲಿಕ ಮರಣಕ್ಕೆ ತುತ್ತಾದುದರಿಂದ ಹನ್ನೆರಡು ಮಕ್ಕಳ ದೊಡ್ಡ ಕುಟುಂಬ ಇವರದಾಗಿತ್ತು. ಇವರಲ್ಲಿ ನಮ್ಮ ಕಥಾನಾಯಕ ಜಿಮ್ ಕಾರ್ಬೆಟ್ ಎಂಟನೆಯವನು.

ಬಹುತೇಕ ಯುರೋಪಿಯನ್ ಕುಟುಂಬಗಳು ಬ್ರಿಟಿಷ್ ಸರ್ಕಾರದಲ್ಲಿ ತಮ್ಮ ಸೇವಾವಧಿ ಮುಗಿದ ನಂತರ ತಾಯ್ನಾಡಿನ ಸೆಳೆತದಿಂದ ಇಂಗ್ಲೆಂಡ್‌ಗೆ ತೆರಳಿದರೆ, ಕಾರ್ಬೆಟ್ ಕುಟುಂಬ ಮಾತ್ರ ಭಾರತೀಯರಾಗಿ ಬದಕಲು ಇಚ್ಚಿಸಿ ನೈನಿತಾಲ್‌ನಲ್ಲೇ ಉಳಿದುಕೊಂಡಿತು. ಹಾಗಾಗಿ ಜಿಮ್ ಕಾರ್ಬೆಟ್ ನ ವ್ಯಕ್ತಿತ್ವ ಅಪ್ಪಟ ಭಾರತೀಯವಾಗಿ ರೂಪುಗೊಳ್ಳಲು ಕಾರಣವಾಯಿತು.

(ಮುಂದುವರೆಯುವುದು.)

(ಚಿತ್ರಗಳು: ವಿಕಿಪೀಡಿಯ ಮತ್ತು ಲೇಖಕರದು)

ಸಿಂಧಗಿ ಪ್ರಕರಣ: ಮೂಲಭೂತವಾದಿ ಸಂಘಟನೆಗಳನ್ನು ನಿಯಂತ್ರಿಸಲೇಬೇಕು

 -ಭೂಮಿ ಬಾನು

ಸಿಂಧಗಿ ತಾಲೂಕು ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣದ ಮೂಲಕಮೂಲಭೂತವಾದಿಗಳ ನಿಜ ಬಣ್ಣ ಬಯಲಾಗಿದೆ. ಜಿಲ್ಲಾ ಪೊಲೀಸರು ಶ್ರೀರಾಮ ಸೇನೆ ವಿದ್ಯಾರ್ಥಿ ಘಟಕಕ್ಕೆಸೇರಿದ ಆರು ಮಂದಿಯನ್ನು ಬಂಧಿಸಿದೆ. ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಂಧಿತರು ತಮ್ಮಸೇನೆಯವರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ಅವರೆಲ್ಲಾ ಆರ್.ಎಸ್.ಎಸ್ ನವರು ಎಂದು ದೂರಿದ್ದಾರೆ. ಬಂಧಿತವರ ಪೈಕಿ ಒಬ್ಬ ಆರ್.ಎಸ್.ಎಸ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಫೋಟೋವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ರಾಮಸೇನೆಯ ವಿದ್ಯಾರ್ಥಿ ಘಟಕವೇ ಇಲ್ಲ. ಬಂಧಿತರ ಬಳಿ ಅವರು ರಾಮಸೇನೆಯವರು ಎನ್ನಲುಇರುವ ಆಧಾರವೇನು ಎಂದು ಕೇಳಿದ್ದಾರೆ. ಆರ್.ಎಸ್.ಎಸ್ ಅಥವಾ ಶ್ರೀರಾಮ ಸೇನೆಯವರು ತಮ್ಮ ಸದಸ್ಯರಿಗೆ ಗುರುತಿನ ಚೀಟಿ ಕೊಡುವ ಪದ್ಧತಿ ಇದೆಯೇ?

ಪೊಲೀಸ್ ಅಧಿಕಾರಿಗಳು ಹೇಳಿರುವಂತೆ ಬಂಧಿತರು ಈಗಾಗಲೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರು ಇನ್ನೂ ಆರೋಪಿಗಳು. ಆರೋಪ ಸಾಬೀತಾಗಬೇಕಿರುವುದು ನ್ಯಾಯಾಲಯದಲ್ಲಿ. ಅದಿರಲಿ, ಆದರೆ ಪ್ರಮೋದ್ ಮುತಾಲಿಕ್ ಮಾತುಗಳನ್ನು ಕೇಳಿದ ನಂತರ ಗ್ರಹಿಸಬಹುದಾದ ಒಂದು ಅಂಶವೆಂದರೆ– ಈ ಕೃತ್ಯ ಹಿಂದೂ ಮೂಲಭೂತವಾದಿಗಳದ್ದೇ! ಅವರು ಶ್ರೀರಾಮ ಸೇನೆಯವರು ಇರಬಹುದು ಅಥವಾಆರ್.ಎಸ್.ಎಸ್ ನವರಾಗಿರಬಹುದು.

ವಿಚಿತ್ರ ನೋಡಿ ಪಾಕ್ ಧ್ವಜ ಹಾರಿಸಿ ಕೋಮುಭಾವನೆ ಕೆರಳಿಸುವವರೂ ಇವರೆ, ಅದನ್ನು ಖಂಡಿಸಿ ಪ್ರತಿಭಟನೆ ಮಾಡುವವರು, ಬಂದ್ ಕರೆ ನೀಡುವವರೂ ಅವರೆ. ಕೋಮುಭಾವನೆ ಕೆರಳಿಸುಮೂಲಕವಷ್ಟೇ ಅಧಿಕಾರ ಚುಕ್ಕಾಣಿ ಹಿಡಿಯುವ ಹಕೀಕತ್ತು ಈ ಘಟನೆಯ ಹಿಂದೆ ಕೆಲಸ ಮಾಡಿದೆ.

ಮೇಲ್ನೋಟಕ್ಕೆ ಯಾವುದೋ ಮುಸಲ್ಮಾನ ಸಂಘಟನೆ ಮಾಡಿರಬಹುದು ಎನ್ನುವ ಸಂಶಯಹುಟ್ಟಿಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಾರೆ. ಸುಖಾ ಸುಮ್ಮನೆ ಮುಸ್ಲಿಂ ಸಂಘಟನೆಗಳನ್ನು ಗುಮಾನಿಯಿಂದ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ಇತ್ತೀಚೆಗೆ ಪ್ರಮೋದ್ ಮುತಾಲಿಕ್ ಬಣ ಬೆಂಗಳೂರು ವಿಶ್ವವಿದ್ಯಾನಿಲಯ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರ ಮೇಲೆಯೂ ಹಲ್ಲೆ ನಡೆಸಿತು. ನಾಲ್ಕು ದಿನಗಳ ಹಿಂದೆಯಷ್ಟೆ ಮುತಾಲಿಕ್ ಗೆ ಇದೇ ಪ್ರಕರಣದಲ್ಲಿ ಜಾಮಿನು ಸಿಕ್ಕಿದೆ. ಈ ಹಿಂದೆಯೂ ಅನೇಕ ಕಡೆ ಕೋಮುದ್ವೇಷ ಬಿತ್ತುವ ಪ್ರಚೋದನಕಾರಿ ಭಾಷಣ ಮಾಡಿದ ಕುಖ್ಯಾತಿ ಈ ಮುತಾಲಿಕ್ ಗೆ ಇದೆ. ಆಡಳಿತದಲ್ಲಿರುವವರು ಈತನ ಪ್ರಚೋದನಾತ್ಮಕ ಮಾತುಗಳಿಗೆ ತಕ್ಕಶಾಸ್ತಿ ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ.

ಮುಖ್ಯವಾಗಿ ಇಂತಹ ಸಂಘಟನೆಗಳಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಗೌರವ ಇಲ್ಲ ಮತ್ತು ಜೊತೆಗೆ ಒಂಚೂರೂ ನಾಚಿಕೆ ಇಲ್ಲ! ಇಲ್ಲವಾದಲ್ಲಿ ಇಂತಹ ಕೃತ್ಯ ಮಾಡುವ ಆಲೋಚನೆಯೂ ಅವರಿಗೆ ಬರುತ್ತಿರಲಿಲ್ಲ.

ದೇಶಭಕ್ತಿ, ದೇಶಪ್ರೇಮ ಎಂದೆಲ್ಲಾ ಮಾತನಾಡುವ ಈ ಸಂಘಟನೆಗಳು ಪಾಕ್ ಧ್ವಜಹಾರಿಸುವುದನ್ನೂ ಹೇಳಿಕೊಟ್ಟರೆ? ಈ ಘಟನೆಯಿಂದ ಆದ ನಷ್ಟ ಲೆಕ್ಕಕ್ಕೆ ಸಿಗುತ್ತಿಲ್ಲ. ಬಂದ್ ನಕಾರಣ ವ್ಯಾಪಾರ ವಹಿವಾಟು ನಿಂತಿತ್ತು. ಶಾಲಾ ಕಾಲೇಜುಗಳು ಮುಚ್ಚಿದ್ದವು. ವಾಹನಗಳು ಬೆಂಕಿಗೆಆಹುತಿಯಾದವು. ಆಗಿರುವ ನಷ್ಟಕ್ಕೆಲ್ಲಾ ಯಾರು ಹೊಣೆ?

ಸರಕಾರದಲ್ಲಿರುವ ಬಹುತೇಕರು ಈ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಆ ಕಾರಣವೇ ಈ ಸಂಘಟನೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ. ಸರಕಾರ ಈಗಲಾದರೂ ಎಚ್ಚತ್ತುಕೊಳ್ಳದಿದ್ದರೆ ಮುಂದೆ ಈ ಸಂಘಟನೆಗಳಿಂದ ಮತ್ತಷ್ಟು ದುಷ್ಕೃತ್ಯಗಳು ನಡೆಯುವ ಮೊದಲು ಅವನ್ನು ನಿಯಂತ್ರಿಸಬೇಕು.