Daily Archives: April 18, 2012

ಬಲಿಷ್ಠ ರಾಷ್ಟ್ರಗಳ ಸೇನಾ ಶಕ್ತಿಯ ಸನ್ನಿ

ಆನಂದ ಪ್ರಸಾದ್

ಪ್ರಪಂಚದಲ್ಲಿ ದೇಶದೇಶಗಳ ನಡುವೆ ಅಪನಂಬಿಕೆ ಹಾಗೂ ಆಕ್ರಮಣದ ಭೀತಿಯಿಂದಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಪಾರವಾದ ಹಣ ಮಿಲಿಟರಿಗಾಗಿ ವೆಚ್ಚವಾಗುತ್ತಿದೆ. 2010 ರಲ್ಲಿ ವಿಶ್ವದಾದ್ಯಂತ ಮಿಲಿಟರಿಗಾಗಿ ವ್ಯಯಿಸಿದ ಹಣದ ಒಟ್ಟು ಮೊತ್ತ 81 ಲಕ್ಷ ಕೋಟಿ ರೂಪಾಯಿಗಳು ಎಂದು ಅಂತರ್ಜಾಲ ಮಾಹಿತಿಯಿಂದ ತಿಳಿದುಬರುತ್ತದೆ. ಇದರಲ್ಲಿ ಸಿಂಹಪಾಲು ಅಂದರೆ 43% ಹಣ ಅಮೆರಿಕಾದ ಮಿಲಿಟರಿ ವೆಚ್ಚವಾದರೆ ನಂತರದ ಸ್ಥಾನದಲ್ಲಿ ಚೀನಾ (7.3%), ಬ್ರಿಟನ್ (3.7%), ಫ್ರಾನ್ಸ್ (3.6%), ರಷ್ಯಾ (3.6%) ಬರುತ್ತವೆ. ಒಂದು ನಾಗರೀಕ, ಮಾನವೀಯ ಹಾಗೂ ವಿವೇಕಯುತ ಸ್ಥಿತಿಯನ್ನು ನಮ್ಮ ಮಾನವ ಜನಾಂಗ ಇನ್ನೂ ತಲುಪಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಶ್ರೀಮಂತ ದೇಶಗಳೇ ತಮ್ಮ ರಕ್ಷಣೆಗಾಗಿ ಹೆಚ್ಚು ವೆಚ್ಚಮಾಡಬೇಕಾಗಿ ಬಂದಿರುವುದು ಅವರ ಶ್ರೀಮಂತಿಕೆಯನ್ನು ರಕ್ಷಿಸಿಕೊಳ್ಳಲಿಕ್ಕೆ ಆಗಿರಬಹುದು. ಮಿಲಿಟರಿಗಾಗಿ ಈ ರೀತಿ ಅಪಾರ ವ್ಯಯ ಮಾಡುವ ಬದಲು ಇದೇ ಹಣವನ್ನು ವಿಶ್ವದ ಎಲ್ಲೆಡೆ ವಿಕಾಸಕ್ಕೆ ಬಳಸಿದ್ದರೆ ಈ ಅಪನಂಬಿಕೆ ಕಡಿಮೆಯಾಗಿ ಎಲ್ಲರೂ ಸಮಾನ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡು ಮಿಲಿಟರಿ ವೆಚ್ಚವನ್ನು ತಗ್ಗಿಸಿ ಅದೇ ಹಣವನ್ನು ಮಾನವ ಜನಾಂಗದ ವಿಕಾಸಕ್ಕೆ ಬಳಸಲು ಮುಂದಾಗುವ ವಿಶ್ವ ನಾಯಕತ್ವದ ಅಗತ್ಯವಿದೆ.

ಪ್ರಪಂಚದ ಎಲ್ಲ ದೇಶಗಳೂ ಈಗ ಇರುವ ಭೌಗೋಳಿಕ ಗಡಿಯ ಸ್ಥಿತಿಯನ್ನು ಒಪ್ಪಿಕೊಂಡು ಇದೇ ಸ್ಥಿತಿಯನ್ನು ಕಾಯ್ದುಕೊಳ್ಳಲು ಹಾಗೂ ಯಾವುದೇ ಒಂದು ದೇಶ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗದಂತೆ ಅಂತರರಾಷ್ಟ್ರ್ರೀಯ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ಯಾವುದೇ ದೇಶ ಅದು ಸಣ್ಣದಿರಲಿ ದೊಡ್ಡದಿರಲಿ, ಶ್ರೀಮಂತ ಅಥವಾ ಬಡ ದೇಶವಿರಲಿ ಮಿಲಿಟರಿಗಾಗಿ ಅಪಾರ ವೆಚ್ಚ ಮಾಡದೆ ಅದೇ ಹಣವನ್ನು ತನ್ನ ನಾಗರೀಕರ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗಬಹುದು. ಯಾವುದೇ ಒಂದು ದೇಶ ಒಪ್ಪಂದವನ್ನು ಉಲ್ಲಂಘಿಸಿ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಿದ್ದೇ ಆದಲ್ಲಿ ಆ ದೇಶವನ್ನು ಎಲ್ಲ ದೇಶಗಳೂ ಸೇರಿ ಸೋಲಿಸಿ ಇನ್ನೆಂದೂ ಆ ರೀತಿ ಆಕ್ರಮಣ ಮಾಡದಂತೆ ಮಾಡಲು ಸಾಧ್ಯವಿದೆ.

ಇದಕ್ಕಾಗಿ ಎಲ್ಲ ದೇಶಗಳ ಸೈನಿಕರನ್ನು ಒಳಗೊಂಡ ಒಂದು ಅಂತರರಾಷ್ಟ್ರೀಯ ಸೈನ್ಯದ ಸ್ಥಾಪನೆ ಮಾಡಬೇಕು ಹಾಗೂ ಇದರ ವೆಚ್ಚವನ್ನು ಎಲ್ಲ ದೇಶಗಳು ನಿಗದಿಪಡಿಸಿದ ರೀತಿಯಲ್ಲಿ ಪಾವತಿಸುವ ವ್ಯವಸ್ಥೆ ಮಾಡಬಹುದು. ಈ ವೆಚ್ಚ ಈಗ ಪ್ರತೀ ದೇಶವೂ ತನ್ನ ರಕ್ಷಣೆಗಾಗಿ ವ್ಯಯಿಸುತ್ತಿರುವ ವೆಚ್ಚದ 5% ಕ್ಕಿಂತ ಹೆಚ್ಚು ಬರಲಾರದು. ರಕ್ಷಣಾ ಸಾಮಗ್ರಿಗಳಾದ ಆಯುಧಗಳು, ಬಂದೂಕುಗಳು, ಟ್ಯಾಂಕ್, ಫಿರಂಗಿ, ಯುದ್ಧ ವಿಮಾನ, ಯುದ್ಧ ಹಡಗು, ಖಂಡಾಂತರ ಕ್ಷಿಪಣಿಗಳು, ಜಲಾಂತರ್ಗಾಮಿ ಇತ್ಯಾದಿಗಳ ಅಭಿವೃದ್ಧಿಯನ್ನು ಎಲ್ಲ ದೇಶಗಳೂ ಸ್ಥಗಿತಗೊಳಿಸಬೇಕು ಮತ್ತು ಇಂಥ ಉತ್ಪಾದನೆ ಅಂತರರಾಷ್ಟ್ರೀಯ ಸೈನ್ಯ ಮಾತ್ರ ಮಾಡುವಂತೆ ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಎಲ್ಲ ದೇಶಗಳೂ ರಕ್ಷಣಾ ಸಾಧನಗಳಿಗಾಗಿ ಅಪಾರ ಹಣ ವ್ಯಯಿಸುವುದನ್ನು ತಡೆದು ಆ ಹಣವನ್ನು ತನ್ನ ನಾಗರೀಕರ ಉನ್ನತಿಗೆ ಬಳಸಲು ಸಾಧ್ಯವಾಗುತ್ತದೆ. ಇಂಥ ಒಂದು ವ್ಯವಸ್ಥೆ ಅಸಾಧ್ಯ ಎಂದು ಅನಿಸಬಹುದು. ಆದರೆ ಇಂಥ ಚಿಂತನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದರೆ ಮುಂದೊಂದು ದಿನ ಇಂಥ ವ್ಯವಸ್ಥೆ ಸಾಕಾರವಾಗಲು ಸಾಧ್ಯವಿದೆ.

ನಮ್ಮ ದೇಶವನ್ನೇ ತೆಗೆದುಕೊಂಡರೆ ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಮ್ಮ ದೇಶದಲ್ಲಿ ನೂರಾರು ರಾಜರುಗಳು ಮತ್ತು ಪಾಳೇಯಗಾರರು ಆಗಾಗ ಯುದ್ಧ ಮಾಡುತ್ತಾ ಪ್ರತಿಯೊಬ್ಬ ರಾಜನೂ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸೈನ್ಯ ಹಾಗೂ ಶಸ್ತ್ರಗಳನ್ನು ಹೊಂದಬೇಕಾಗಿತ್ತು. ಆಗ ಭಾರತದ ಎಲ್ಲ ರಾಜರುಗಳು ಒಂದೇ ಸೈನ್ಯ ಮತ್ತು ಒಂದೇ ಸರ್ಕಾರದಡಿ ಬರುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ ಅಲ್ಲವೇ? ಆದರೆ ಇಂದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರೂಪಿಸುವ ಮೂಲಕ ಎಲ್ಲಾ ರಾಜರುಗಳು ಒಂದೇ ಕೇಂದ್ರೀಯ ಆಡಳಿತದಲ್ಲಿ ಬರಲು ಸಾಧ್ಯವಾಗಿ ಪ್ರತಿ ರಾಜ್ಯವೂ ಸೈನ್ಯ ಹೊಂದಿರಬೇಕಾದ ಅಗತ್ಯ ಸಂಪೂರ್ಣವಾಗಿ ಬದಲಾಗಿಲ್ಲವೇ? ಸಂವಿಧಾನವೆಂಬ ಒಂದು ಒಪ್ಪಂದದಡಿ ಬಂದ ಕಾರಣ ಎಲ್ಲಾ ರಾಜ್ಯಗಳೂ ಇನ್ನೊಂದು ರಾಜ್ಯದ ಆಕ್ರಮಣದ ಭೀತಿಯಿಲ್ಲದೆ ಶಾಂತಿಯಿಂದ ಇರಲು ಸಾಧ್ಯವಾಗಿದೆ. ಇದು ಕೆಲವು ಶತಮಾನಗಳ ಹಿಂದೆ ಸಾಧ್ಯವೇ ಇರಲಿಲ್ಲ. ಇದೇ ರೀತಿ ಅಂತರರಾಷ್ಟ್ರೀಯ ಪ್ರಯತ್ನಗಳಿಂದ ಅನ್ಯ ದೇಶಗಳ ಮೇಲೆ ಆಕ್ರಮಣ ನಿಷೇಧ ಒಪ್ಪಂದ ರೂಪಿಸಿ ಜಗತ್ತಿನ ಮಿಲಿಟರಿ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಮಾನವನು ನಾಗರಿಕತೆಯ ಮುಂದಿನ ಹಂತವನ್ನು ಏರಿದಾಗ ಇಂಥ ಸ್ಥಿತಿ ರೂಪುಗೊಳ್ಳಲು ಸಾಧ್ಯ.

ಒಂದು ಕುಟುಂಬವು ಇನ್ನೊಂದು ಕುಟುಂಬದ ಜಮೀನಿನ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗದಂತೆ ನಮ್ಮಲ್ಲಿ ಕಾನೂನುಗಳು ಇದ್ದು ಯಾರೂ ಇನ್ನೊಬ್ಬರ ಜಮೀನಿನ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳಲಾಗದ ವ್ಯವಸ್ಥೆ ನಮ್ಮಲ್ಲಿ ಇದೆ. ಇದರ ಉಲ್ಲಂಘನೆ ಆಗದಂತೆ ನ್ಯಾಯಾಲಯಗಳು, ಪೋಲೀಸು ವ್ಯವಸ್ಥೆ ಇರುವ ಕಾರಣ ನಾವು ಪ್ರತಿಯೊಂದು ಕುಟುಂಬವೂ ಬೇರೊಬ್ಬರ ಆಕ್ರಮಣಕ್ಕೆ ಒಳಗಾಗದೆ ಬದುಕಲು ಸಾಧ್ಯವಾಗಿದೆ. ಇದರಿಂದ ನಾವು ಪ್ರತಿಯೊಂದು ಕುಟುಂಬವೂ ರಕ್ಷಣೆಗಾಗಿ ಆಯುಧಗಳನ್ನು ಹೊಂದಬೇಕಾಗಿಲ್ಲದ ಮತ್ತು ಅದಕ್ಕಾಗಿ ವೆಚ್ಚ ಮಾಡಬೇಕಾಗಿಲ್ಲದ ಭದ್ರತೆಯನ್ನು ಪಡೆದಿದ್ದೇವೆ. ಇದು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಅನ್ವಯವಾಗುತ್ತದೆ. ಇದೇ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ತರಲು ಸಾಧ್ಯವಿದೆ. ಅದಕ್ಕಾಗಿ ಮಾನವ ಜನಾಂಗ ಇನ್ನಷ್ಟು ನಾಗರೀಕತೆಯಲ್ಲಿ ಬೆಳೆಯಬೇಕಾದ ಅಗತ್ಯವಿದೆ.

ಅಂತರರಾಷ್ಟ್ರೀಯ ಶಸ್ತ್ರ ಮಾರಾಟ ಮಾಡಿ ಬಹಳಷ್ಟು ಆದಾಯ ಮಾಡಿಕೊಳ್ಳುವ ಕೆಲವು ಶ್ರೀಮಂತ ದೇಶಗಳಿಗೆ ಇಂಥ ಯೋಚನೆಗಳು ಹಿಡಿಸಲಾರವು. ಅವುಗಳೇ ಇಂಥ ಆಲೋಚನೆಗಳಿಗೆ ಅಡ್ಡಿಯಾಗಬಹುದು. ಉದಾಹರಣೆಗೆ ಅಮೆರಿಕಾವು 2010 ರಲ್ಲಿ 8.5 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಶಸ್ತ್ರಗಳನ್ನು (ಒಟ್ಟು ವಿಶ್ವ ಶಸ್ತ್ರ ವಹಿವಾಟಿನ 39%) ಬೇರೆ ದೇಶಗಳಿಗೆ ಮಾರಾಟ ಮಾಡಿ ಹಣಗಳಿಸಿದೆ. ಸುಮಾರು ಇದರ ಅರ್ಧದಷ್ಟು ಮೊತ್ತದ ಶಸ್ತ್ರಗಳನ್ನು ರಷ್ಯಾವು ಬೇರೆ ದೇಶಗಳಿಗೆ ಮಾರಾಟ ಮಾಡಿಗಳಿಸುತ್ತದೆ. ಶಸ್ತ್ರಾಸ್ತ್ರಗಳ ಮಾರಾಟ ಮಾಡಿ ಹಣಗಳಿಸುವ ದೇಶಗಳು ನಾಗರೀಕತೆಯ ವಿಕಾಸಕ್ಕೆ ದೊಡ್ಡ ಅಡ್ಡಿಯಾಗಿರುವಂತೆ ಕಾಣುತ್ತದೆ. ಶಸ್ತ್ರಾಸ್ತ್ರ ಮಾರಾಟದ ಮೇಲೆ ದೇಶದ ಅರ್ಥ ವ್ಯವಸ್ಥೆ ಅವಲಂಬಿತವಾಗದಂತೆ ಅಮೆರಿಕಾವು ಕ್ರಮಗಳನ್ನು ಕೈಗೊಂಡು ವಿಶ್ವದ ನಾಗರೀಕತೆಯ ವಿಕಾಸಕ್ಕೆ ಮುಂದೆ ಬರಬೇಕಾದ ಅಗತ್ಯ ಇದೆ. ಬಹುಶ: ಮಾನವ ನಾಗರೀಕತೆಯ ವಿಕಾಸಕ್ಕೆ ಅಮೆರಿಕಾವೇ ಬಹಳ ದೊಡ್ಡ ಅಡ್ಡಿಯಾಗಿರುವಂತೆ ಕಾಣುತ್ತದೆ.

ವಿಜ್ಞಾನದ ಬೆಳವಣಿಗೆ ಮತ್ತು ಸಂಶೋಧನೆಗಳು ಮುಂದಿನ ದಿನಗಳಲ್ಲಿ ಮಾನವ ನಾಗರೀಕತೆಯ ವಿಕಾಸಕ್ಕೆ ಮಹತ್ವದ ಕೊಡುಗೆನೀಡಲು ಸಾಧ್ಯವಿದೆ. ಹೇಗೆಂದರೆ ಈಗ ವಿಶ್ವದ ವ್ಯವಸ್ಥೆ ನಿಂತಿರುವುದು ಪೆಟ್ರೋಲಿಯಂ ತೈಲದ ಮೇಲೆ. ಪೆಟ್ರೋಲಿಯಂ ತೈಲ ಮುಗಿದ ನಂತರ ಪರ್ಯಾಯ ಇಂಧನ ಅಭಿವೃದ್ಧಿ ಆದಾಗ ಪ್ರತಿ ದೇಶವೂ ತನ್ನದೇ ಆದ ಇಂಧನವನ್ನು ಉತ್ಪಾದಿಸಲು ಸಾಧ್ಯವಾದಾಗ ವಿಶ್ವದ ದೇಶಗಳ ನಡುವೆ ಇರುವ ಪೆಟ್ರೋಲಿಯಂ ತೈಲಕ್ಕಾಗಿ ಮೇಲಾಟ ನಿಲ್ಲಬಹುದು. ಪೆಟ್ರೋಲಿಯಂ ತೈಲಕ್ಕಿಂಥ ಅಗ್ಗವಾಗಿ ಬೇರೆ ಇಂಧನ ಉತ್ಪಾದಿಸುವ ತಂತ್ರಜ್ಞಾನವನ್ನು ವಿಜ್ಞಾನ ರೂಪಿಸಿದರೆ ಮತ್ತು ಇದು ಎಲ್ಲಾ ರಾಷ್ಟ್ರಗಳಿಗೂ ಉತ್ಪಾದಿಸಲು ಸಾಧ್ಯವಾಗುವಂತೆ ಅದಾಗ (ಉದಾ: ಸೌರ ವಿದ್ಯುತ್, ನೀರಿನಿಂದ ಇಂಧನ ಕೋಶಗಳು ಕೆಲಸ ಮಾಡುವಂಥ ತಂತ್ರಜ್ಞಾನ ಇತ್ಯಾದಿ) ದೇಶ ದೇಶಗಳ ನಡುವೆ ಇರುವ ಅಪನಂಬಿಕೆ ಕಡಿಮೆಯಾಗಿ ಮತ್ತು ಎಲ್ಲಾ ದೇಶಗಳೂ ಶಕ್ತಿ ಸಮೃದ್ಧತೆಯನ್ನು ಸಾಧಿಸಿ ಹೊಸ ವಿಶ್ವ ವ್ಯವಸ್ಥೆ ಬರಲು ಸಾಧ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಥ ಚಿಂತನೆ ನಡೆಯಬೇಕಾದ ಅಗತ್ಯ ಇದೆ.