Daily Archives: April 13, 2012

ಲೋಕಾಯುಕ್ತ ಪೊಲೀಸರ ವರದಿ ತಿರಸ್ಕರಿಸಿದ ನ್ಯಾಯಾಲಯ

ಸ್ನೇಹಿತರೆ,

ಇಂದು ಬೆಳಗ್ಗೆ ಹನ್ನೊಂದರಿಂದ ಸಂಜೆ ಐದರವರೆಗೆ ನನ್ನ ಊರಿನಿಂದ ಆರೇಳು ಕಿ.ಮೀ. ದೂರದ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ಲೋಕಾಯುಕ್ತ ಕೋರ್ಟ್‌ನಲ್ಲಿದ್ದೆ. ನಿಮ್ಮಲ್ಲಿ ಕೆಲವರಿಗೆ ಗೊತ್ತಿರುವಂತೆ ನಾನು ಯಡ್ಡ್‌ಯೂರಪ್ಪ, ಸೋಮಣ್ಣ, ಇತರರ ಮೇಲೆ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳಿಗೆ ಸಂಬಂಧಪಟ್ಟಂತೆ ಖಾಸಗಿ ದೂರೊಂದನ್ನು ಕಳೆದ ನವೆಂಬರ್‌ನಲ್ಲಿ ದಾಖಲಿಸಿದ್ದೆ. ಅದರ ಬಗ್ಗೆ ಎರಡು-ಮೂರು ವಾರದ ಹಿಂದೆ ಲೋಕಾಯುಕ್ತ ಪೋಲಿಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಆ ವರದಿಗೆ ಸಂಬಂಧಿಸಿದಂತೆ ಇಂದು ಆದೇಶ ಇತ್ತು.

ಅಂದ ಹಾಗೆ, ಈ ಕೋರ್ಟ್‌ನಲ್ಲಿ ಕಳೆದ ಐದು ತಿಂಗಳಿನಿಂದ ಎಂತಎಂತಹ ಜನರನ್ನೆಲ್ಲಾ ನಾನು ನೋಡಿದೆ! ನ್ಯಾಯಕ್ಕಾಗಿ ಹೋರಾಡುವವರನ್ನು ಕಂಡೆ (ಇಂದು ಸಿರಗುಪ್ಪದ ಶಾಸಕ ಸೋಮಲಿಂಗಪ್ಪರ ಮೇಲೆ ದೂರು ಕೊಟ್ಟಿರುವ ಅಲ್ಲಿನ ನಿವೃತ್ತ ಲೆಕ್ಚರರ್ ಈರಣ್ಣನವರ ಭೇಟಿಯಾಯಿತು). ಕೋರ್ಟ್‌ ಒಳಗೆ ಮಾತ್ರ ತಲೆತಗ್ಗಿಸಿ ಹೊರಗೆ ಬಂದಾಕ್ಷಣ ಎದೆಉಬ್ಬಿಸಿ ನಡೆಯುವ ಲಂಚಕೋರರನ್ನು ಕಂಡೆ. ಮಾಜಿ ಸಚಿವರೊಬ್ಬರನ್ನು ಕಟೆಕಟೆಯಲ್ಲಿ ನೋಡಿದೆ. ಇಂದು ಹಾಲಿ ಶಾಸಕರೊಬ್ಬರನ್ನು (ಸಂಪಂಗಿ) ಕಟೆಕಟೆಯಲ್ಲಿ ನೋಡಿದೆ. ಕೋರ್ಟ್‌ನ ಇಂದಿನ ಆದೇಶದಂತೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಚಿವರೊಬ್ಬರು ಸಹ ಕಟೆಕಟೆ ಹತ್ತಬಹುದು. ಹೌದು, ನ್ಯಾಯಾಲಯ ತನ್ನ ಇಂದಿನ ತೀರ್ಪಿನಲ್ಲಿ ನನ್ನ ದೂರಿಗೆ ಸಂಬಂದಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ವರದಿಯನ್ನು ತಿರಸ್ಕರಿಸಿ, ನಾವು ಹೆಸರಿಸಿರುವ ಎಲ್ಲಾ ನಾಲ್ಕು ಆರೋಪಿಗಳು ಇದೇ ತಿಂಗಳ 30ರಂದು ಕೋರ್ಟ್‌ಗೆ ಖುದ್ದು ಹಾಜರಾಗಬೇಕೆಂದು ಆದೇಶಿಸಿ ಸಮ್ಮನ್ಸ್ ಜಾರಿ ಮಾಡಿತು. ಯಡ್ಡಯೂರಪ್ಪ, ಶ್ರೀಮತಿ ಶೈಲಜಾ ಸೋಮಣ್ಣ, ಸೋಮಣ್ಣ, ಮತ್ತು ಲಿಂಗಣ್ಣ; ಇವರು ನಾವು ದೂರಿನಲ್ಲಿ ಹೆಸರಿಸಿರುವ ಆರೋಪಿಗಳು.

ನಮ್ಮ ಮೊಕದ್ದಮೆಯ ಆದೇಶ ಆದನಂತರ ನ್ಯಾಯಾಲಯ ಇನ್ನೊಂದು ಕೇಸಿನಲ್ಲೂ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ವರದಿಯನ್ನು ತಿರಸ್ಕರಿಸಿ, ಪುನರ್‌ವಿಚಾರಣೆ ನಡೆಸಲು ಆದೇಶಿಸಿತು.  ಅದು ಚಿಕ್ಕಮಗಳೂರಿನ ಶಾಸಕ ಸಿ.ಟಿ. ರವಿಯವರ ಮೇಲೆ ಅಲ್ಲಿಯ ಸ್ಥಳೀಯರೊಬ್ಬರು ಭೂಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರು.

ಇಂದಿನಿಂದ ಲೋಕಾಯುಕ್ತ ಪೊಲೀಸರು ತಾವು ಸಲ್ಲಿಸುವ ವರದಿಗಳ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಜವಾಬ್ದಾರಿ ನಿರ್ವಹಿಸಬಹುದು ಎನ್ನಿಸುತ್ತದೆ.

ಈ ಎಲ್ಲಾ ಆಶಾವಾದಗಳ ಮಧ್ಯೆಯೂ ಭ್ರಮನಿರಸನ ಆಗುತ್ತಿದೆ. ಒತ್ತಡಗಳು ಹೆಚ್ಚುತ್ತಿವೆ. ಆದರೆ ಅವು ನನ್ನನ್ನು ಬಾಧಿಸವು. ಬಾಧಿಸುವ ವಿಚಾರಗಳೇ ಬೇರೆ. ಏನನ್ನು ಸಾಧಿಸುವಂತಾಗುತ್ತದೆ ಎನ್ನುವುದು ಒಂದಾದರೆ, ಇಲ್ಲಿ ಜನ ಜನಪ್ರತಿನಿಧಿಗಳ ದುರುಳತನವನ್ನು ದುರುಳತನ ಎಂದು ಕಾಣದಿರುವುದು ಇನ್ನೊಂದು. ಈ ಒಂದು ಕೇಸಿನಿಂದ ಅಥವ ಕರ್ನಾಟಕದಲ್ಲಿ ರಾಜಕಾರಣಿಗಳ ವಿರುದ್ಧ ಹಾಕಿರುವ ಮೊಕದ್ದಮೆಗಳಿಂದ ಈ ರಾಜ್ಯದಲ್ಲಿ ಪರಿವರ್ತನೆ ಆಗಿಬಿಡುತ್ತದೆ ಎನ್ನುವ ಯಾವ ಹುಚ್ಚು ಭ್ರಮೆಯೂ ನನಗಿಲ್ಲ. ಜನ ಇಲ್ಲಿ ತಮಗೆ ನೇರವಾಗಿ ಬಾಧಿಸದ ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಅವರಿಗೆ ನಮ್ಮ ರಾಜ್ಯ-ದೇಶದಲ್ಲಿಯ ದುರಾಡಳಿತ ಮತ್ತು ಭ್ರಷ್ಚಾಚಾರವೆ ನಮ್ಮ ಮತ್ತು ನಮ್ಮ ಮುಂದಿನ ಸಂತತಿಗಳನ್ನು ತೀವ್ರವಾಗಿ ಕಾಡುವ, ಬಾಧಿಸುತ್ತಿರುವ, ಬಾಧಿಸುವ ವಿಚಾರ ಎಂದು ಗೊತ್ತಾಗುತ್ತಿಲ್ಲ.

ಇವತ್ತು ಬೇರೆ ಪಕ್ಷದಲ್ಲಿರುವ ಭ್ರಷ್ಟ ನಾಳೆ ನನ್ನ ಪಕ್ಷಕ್ಕೆ ಬರುತ್ತಾನೆ ಮತ್ತು ಅದರಿಂದ ನಾಳೆ ನನಗೆ ಅಧಿಕಾರ ಸಿಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ರಾಜಕಾರಣಿಗಳಿದ್ದಾರೆ. ಮತ್ತು ಅದು ಅಂತಹ ಪಕ್ಷಗಳ ಕಾರ್ಯಕರ್ತರನ್ನು ಮತ್ತು ಜನರನ್ನು ಯಾವ ರೀತಿಯೂ ಸಂಕೋಚಕ್ಕೆ ಈಡುಮಾಡದು ಎನ್ನುವ ಸ್ಥಿತಿಗೆ ನಾವು ಮುಟ್ಟಿದ್ದೇವೆ. ನಮ್ಮ ಎಲ್ಲಾ ವೈಯಕ್ತಿಕ ಪ್ರಯತ್ನಗಳು ಬ್ರಹ್ಮರಾಕ್ಷಸ ಮತ್ತು ರಕ್ತ ಬೀಜಾಸುರರ ಸಂತತಿಯ ಸ್ಫೋಟಕ ಬೆಳವಣಿಗೆಯನ್ನು ನಿಧಾನಿಸಬಹುದು ಎನ್ನುವುದು ಬಿಟ್ಟರೆ, ಅವರ ನಿರ್ನಾಮ ಮಾಡದು.

ಅವರ ನಿರ್ನಾಮವಾಗದೆ ಅಥವ ಸಮಾಜದ ಮೇಲೆ ಆ ಸೈತಾನ ಮನಸ್ಥಿತಿಯ ಪ್ರಭಾವ ನಗಣ್ಯವಾಗದೆ ಇಲ್ಲೊಂದು ಸಹನೀಯ ಸಮಾಜ ಹುಟ್ಟದು. ಅದನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ?

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಭಾರತ ಸಂವಿಧಾನ ಮತ್ತು ದಲಿತ ಚಳವಳಿ

-ಮಂಗ್ಳೂರ ವಿಜಯ

ಸಮಾನತೆ ಹಾಗೂ ನ್ಯಾಯವನ್ನು ದೇಶದ ಸಮಸ್ತ ಜನತೆಗೆ ಒದಗಿಸುವ ಹೊಣೆಗಾರಿಕೆಯನ್ನು ಸ್ವಾತಂತ್ರ್ಯ ಭಾರತ ಹೊತ್ತುಕೊಳ್ಳಬೇಕೆಂಬುದು ಸಂವಿಧಾನ ರಚನಾ ಸಭೆಯ ಅಭಿಮತವಾಗಿತ್ತು. ರಚನೆಯಾಗಲಿರುವ ಭಾರತ ಗಣರಾಜ್ಯವು ತನ್ನ ಎಲ್ಲಾ ನಾಗರಿಕರಿಗೆ ಸಮಾನತೆ ಮತ್ತು ನ್ಯಾಯವನ್ನು ಖಾತ್ರಿ ಪಡಿಸಬೇಕೆಂದು ಅದು ತಾಕೀತುಪಡಿಸಿತು.

ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ತನಗೆ ನೀಡಲಾಗಿದ್ದ ಹೊಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿತು. ಭಾರತೀಯ ಸಾಂಪ್ರದಾಯಿಕ ಸಮಾಜ ರಚನೆಯ ಒಳಗಿನ ಕೆಲವೊಂದು ಬಿಕ್ಕಟ್ಟುಗಳಿಗೆ ಅದು ಸಮರ್ಥ ಪರಿಹಾರವನ್ನೂ ಸೂಚಿಸಿತು. ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವರ್ಗಗಳು ಅದುವರೆಗೆ ಅಸ್ತಿತ್ವದಲ್ಲಿ ಇದ್ದುದನ್ನು ಗುರುತಿಸಿದ ಸಂವಿಧಾನ ರಚನಾ ಸಮಿತಿ ಸಭೆ, ಎಲ್ಲಾ ವರ್ಗಗಳ ನಡುವೆ ಸಮಾನತೆಯನ್ನು ಸ್ಥಾಪಿಸುವ ದಿಕ್ಕಿನಲ್ಲಿ ಅಭೂತಪೂರ್ವ ಪ್ರಸ್ತಾವನೆಗಳನ್ನು ಮಂಡಿಸಿ, ಅವುಗಳು ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಅಂಗೀಕಾರವಾಗುವಂತೆ ನೋಡಿಕೊಂಡಿತು.

ಪರಿಣಾಮವಾಗಿ ಶತಮಾನಗಳಿಂದ ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ ಆಸ್ತಿ, ಉದ್ಯೋಗ, ವಿದ್ಯೆ, ಆರೋಗ್ಯ, ಬದುಕುವ ಹಕ್ಕುಗಳಿಂದ ವಂಚಿತವಾಗಿದ್ದ ಅಸಂಖ್ಯ ಸಮುದಾಯಗಳಿಗೆ ಸಮಾನ ಹಕ್ಕುಗಳು ದೊರಕಿ, ಅವುಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಇಚ್ಛಾ ಶಕ್ತಿಯನ್ನು ಪಡೆದುಕೊಳ್ಳುವುದಕ್ಕೆ ಅನುವು ದೊರಕಿತು. ಹೊಸ ಸಂವಿಧಾನವು ಈ ಶೋಷಿತ ಸಮುದಾಯಗಳಿಗೆ ಅದುವರೆಗಿನ ತಡೆಗೋಡೆಗಳನ್ನು ಧಿಕ್ಕರಿಸುವ ಆತ್ಮವಿಶ್ವಾಸವನ್ನು ನೀಡಿತಲ್ಲದೆ, ಅವುಗಳನ್ನು ಕಡಿದೊಗೆಯುವ ಧೀಶಕ್ತಿಯನ್ನೂ ನೀಡಿತು. ಪರಿಣಾಮವಾಗಿ ಪಾಳೆಯಶಾಹಿ ಮತ್ತು ಪುರೋಹಿತಶಾಹಿಗಳ ಅಡಿಯಲ್ಲಿ ನಲುಗಿದ್ದ ಸಮುದಾಯಗಳು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಪಡೆದುಕೊಳ್ಳುವ ಹಾಗೂ ಆಲೋಚನೆ, ಅಭಿವ್ಯಕ್ತಿ ಮತ್ತು ನಂಬಿಕೆ ಹೊಂದುವ ಸ್ವಾತಂತ್ರ್ಯವನ್ನು ಪಡೆದುಕೊಂಡವು.

ಸಂವಿಧಾನವು ಜಾರಿಗೆ ಬಂತು;  ಹೊಸ ಸರ್ಕಾರ ಉತ್ಸಾಹದಿಂದ ಆಡಳಿತ ನಡೆಸಿತು. ಕಾಯ್ದೆಗಳು ರಚನೆಗೊಂಡವು. ಅಭಿವೃದ್ಧಿ ಪಥ ನಿರ್ಧಾರವಾಯಿತು. ದೇಶ ನಾಗಾಲೋಟದಲ್ಲಿ ದಾಪುಗಾಲು ಹಾಕಿತು.

ನಾವು ನಡೆದು ಬಂದ ದಾರಿಯನ್ನು ಹಲವು ಬಾರಿ ಹಿಂತಿರುಗಿ ನೋಡಿಕೊಂಡಿದ್ದೇವೆ. ಆಡಳಿತ ನಡೆಸಿದವರಿಗೇ ತೃಪ್ತಿ ಇಲ್ಲ. ಇದನ್ನು ಅವರು ಅಧಿಕೃತವಾಗಿ ಕಾಲಕಾಲಕ್ಕೆ ದಾಖಲಿಸಿದ್ದಾರೆ. ಇನ್ನು ದೇಶದ ಶೋಷಿತ, ವಂಚಿತ, ಅವಕಾಶಹೀನ ಸಮುದಾಯಗಳ ಅಭಿವೃದ್ಧಿಯಂತೂ ಮರೀಚಿಕೆಯಾಗೇ ಉಳಿದಿದೆ. ಈ ಬಗ್ಗೆ ನಡೆದಿರುವ ಅಧ್ಯಯನಗಳೂ ಈ ನಗ್ನ ಸತ್ಯವನ್ನು ಬಯಲಾಗಿಸಿವೆ.

ಈಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ 27 ನವೆಂಬರ್ 2006 ರಂದು ದೆಹಲಿಯ ಸಮಾರಂಭವೊಂದರಲ್ಲಿ ಆಡಿದ ಮಾತುಗಳನ್ನೇ ನೋಡೋಣ: “ನಮ್ಮ ಸಮಾಜದಲ್ಲಿ ದಲಿತರು ಹೆಚ್ಚಿನ ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಅಸ್ಪೃಶ್ಯತೆಗೆ ಹೋಲಿಕೆ ಮಾಡಬಹುದಾದ ಇನ್ನೊಂದು ಜನಾಂಗದ್ವೇಷ ಇರಲಾರದು. ಅದು ಕೇವಲ ಸಾಮಾಜಿಕ ತಾರತಮ್ಯವಲ್ಲ; ಮಾನವತೆಗೆ ಅಂಟಿದ ನಾಚಿಕೆಗೇಡಿ ಕಲಂಕ. ಭಾರತದ ಅಮೋಘ ರಾಷ್ಟ್ರಪ್ರೇಮಿಗಳಲ್ಲಿ ಒಬ್ಬರೆನಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಭಾರತೀಯ ಸಂವಿಧಾನದ ಆಶಯ ಮತ್ತು ಕಾನೂನುಗಳು ಒದಗಿಸಿದ ರಕ್ಷಣೆಯು ಈ ಅರವತ್ತು ವರ್ಷಗಳಲ್ಲಿ ಪರಿಣಾಮಕಾರಿಯಾಗಿ ದಲಿತ ವರ್ಗಗಳಿಗೆ ದೊರೆತಿಲ್ಲ. ರಾಷ್ಟ್ರದ ಅನೇಕ ಭಾಗಗಳಲ್ಲಿ ದಲಿತರು ನಾನಾ ರೀತಿಯ ತಾರತಮ್ಯಕ್ಕೆ ಇನ್ನೂ ಗುರಿಯಾಗುತ್ತಿದ್ದಾರೆ. ಇಂಥ ತಾರತಮ್ಯದ ವಿರುದ್ಧ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಹೋರಾಟವು ಮುಂದುವರೆಯಬೇಕಿದೆ. ನಮ್ಮ ಸಮಾಜದ ಎಲ್ಲಾ ಸಮುದಾಯಗಳಿಗೆ ಸಮಾನತೆಯನ್ನು ಖಾತ್ರಿ ಪಡಿಸುವುದಕ್ಕೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕವಾಗಿ ಮತ್ತು ತೀವ್ರವಾಗಿ ಸ್ಪಂದಿಸುತ್ತೇವೆ. ದಲಿತರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತಾಸೆಯಾಗಿ ನಿಲ್ಲಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಇದು ನನ್ನ ಹೃತ್ಪೂರ್ವಕ ಭರವಸೆ. ಭಾರತದ ದಲಿತರು (ಮತ್ತು ಅಲ್ಪಸಂಖ್ಯಾತರು) ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಇನ್ನೂ ಹೋರಾಡುವ ಪರಿಸ್ಥಿತಿ ಇದೆ ಎಂಬುದೇ ಭಾರತದ ಪಾಲಿಗೆ ನಾಚಿಕೆಗೇಡಿನ ವಿಷಯ. ಅವರಿಗೆ ನ್ಯಾಯ ಸಿಕ್ಕಿಲ್ಲದಿರುವುದು ಭಾರತದ ಆತ್ಮವನ್ನು ಕಂಗೆಡಿಸಬೇಕು; ಭಾರತೀಯ ಆಡಳಿತಗಾರರನ್ನು ಬಡಿದೆಚ್ಚರಿಸಬೇಕು.”

ಇಂಥ ಮಾತುಗಳನ್ನು ರಾಷ್ಟ್ರದ ಹಾಗೂ ವಿವಿಧ ರಾಜ್ಯಗಳ ಉನ್ನತ ಆಡಳಿತಗಾರರು ಲೆಕ್ಕವಿಲ್ಲದಷ್ಟು ಬಾರಿ ಆಡಿಯಾಗಿದೆ. ಈ ಮಾತುಗಳು ಈಗ ಅರ್ಥವನ್ನು ಪಡೆದುಕೊಳ್ಳಬೇಕಿದೆ. ಆಡಳಿತಗಾರರು, ಯೋಜನಾತಜ್ಞರು ಮತ್ತು ದೇಶದ ಹಿತದ ಬಗ್ಗೆ ಕಾಳಜಿ ಉಳ್ಳವರು ಮೇಲಿಂದ ಮೇಲೆ ಈ ಬಗ್ಗೆ ತಮ್ಮ ಕಾಳಜಿಯನ್ನು ತೋಡಿಕೊಂಡಿದ್ದಾರೆ. ಜರುಗುತ್ತಾ ಬಂದಿರುವ ಪ್ರಮಾದಕ್ಕೆ ಕಾರಣಗಳೇನು ಎಂಬ ಬಗ್ಗೆ ಪುನರಾವಲೋಕನ ಮಾಡುತ್ತಾ ಬಂದಿದ್ದಾರೆ. ತಪ್ಪುಗಳನ್ನು ತಿದ್ದಿಕೊಳ್ಳುವ ಭರವಸೆಯನ್ನೂ ನೀಡುತ್ತಾ ಹೋಗಿದ್ದಾರೆ. ಆದರೆ, ಪ್ರಮಾದ ಜರುಗುವುದು ಮಾತ್ರ ಇನ್ನೂ ನಿಂತಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ದೊರಕಿದ ಆಡಳಿತ ವರ್ಗಕ್ಕೆ ಪ್ರಾಮಾಣಿಕವಾದ ಇಚ್ಛಾಶಕ್ತಿ ಇಲ್ಲದ ಕಾರಣಕ್ಕೆ ದೇಶದ ಸಾರ್ವಂಗೀಣ ಪ್ರಗತಿ ಕುಂಠಿತಗೊಂಡಿತು; ‘ಒಳಗೊಳ್ಳುವ ಪರಿಕಲ್ಪನೆ’ಯೇ ಅದಕ್ಕೆ ಅನ್ಯವಾಗಿತ್ತು. ಪಾಳೆಯಶಾಹಿ ಮತ್ತು ವೈದಿಕಶಾಹಿ ಬುದ್ಧಿ ಮೇಲುಗೈ ಪಡೆದು, ಶೋಷಿತ-ಶ್ರಮಜೀವಿ-ಅವಕಾಶಹೀನ ಸಮುದಾಯಗಳು ಮೂಲೆಗುಂಪಾಗುವುದು ಮುಂದುವರೆಯಿತು.

ಸಂವಿಧಾನ ನಿರ್ದೇಶಿತ ಧ್ಯೇಯ ಈಡೇರುವುದನ್ನು ನೋಡಿಕೊಳ್ಳುವ ಹೊಣೆಯೂ ಇದೇ ಆಡಳಿತದ ಅಧಿಕಾರ ವ್ಯಾಪ್ತಿಗೆ ಬರುತ್ತಿದ್ದ ಕಾರಣಕ್ಕೆ, ಆ ಧ್ಯೇಯವೂ ಕಡೆಗಣಿಸಲ್ಪಟ್ಟಿತು. ಇದಕ್ಕೆ ನಾನಾ ಕುಂಟು ನೆಪಗಳನ್ನು ಪಟ್ಟಿ ಮಾಡಿ ನೀಡಲಾಯಿತು.

ಸಂವಿಧಾನದಲ್ಲಿ ಆಸ್ತಿ ಹಕ್ಕು ಸುರಕ್ಷಿತವಾಗಿ ಉಳಿದ ಕಾರಣಕ್ಕೆ, ಶಿಕ್ಷಣ ಹಕ್ಕು ಎಂಬುದು ನಿರಪಾಯಕರ ‘ ನಿರ್ದೇಶಕ ತತ್ವ’ ಗಳಲ್ಲಿ ಸೇರ್ಪಡೆಯಾಗಿದ್ದಕ್ಕೆ ಈ ಎರಡೂ ದಿಕ್ಕಿನಲ್ಲಿ ಭಾರತದ ಬಹುಸಂಖ್ಯಾತ ಶೋಷಿತ ಜನತೆ ನಿರಂತರವಾಗಿ ವಂಚನೆಗೆ ಗುರಿಯಾಗುತ್ತಾ ಹೋಗುವುದು ಅನಿವಾರ್ಯವಾಯಿತು.

ಸಮಾನತೆಯ ಹಕ್ಕು, ವಿಶೇಷ ಅವಕಾಶಗಳ ಹಕ್ಕು, ಗೌರವಯುತ ಜೀವನದ ಹಕ್ಕು, ಶೋಷಣೆಯಿಂದ ವಿಮೋಚನೆ ಹೊಂದುವ ಹಕ್ಕು ಇತ್ಯಾದಿಗಳು ದುರ್ಬಲ ವರ್ಗಗಳ ಪಾಲಿಗೆ ಅಲಂಕಾರಿಕ ತತ್ವಗಳಾಗಿ ಸಂವಿಧಾನದಲ್ಲಿ ಉಳಿಯುವಂತೆ ಪಾಳೆಯಶಾಹಿ ಮತ್ತು ಪುರೋಹಿತಶಾಹಿ ಶಕ್ತಿಗಳು ನೋಡಿಕೊಂಡವು.

ಪಂಚವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳ ಉದ್ದೇಶವು ದೇಶದ ಭೌತಿಕ ಅಭಿವೃದ್ಧಿಯ ಮೇಲೆ ಮಾತ್ರ ಕಣ್ಣಿಟ್ಟು, ದೇಶದ ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನು ಕಡೆಗಣಿಸಿದ ಪರಿಣಾಮವಾಗಿ ವಿಕೃತ ಅಭಿವೃದ್ಧಿ ಕಣ್ಣಿಗೆ ರಾಚುತ್ತಿದೆ.

ಊಳಿಗಮಾನ್ಯ ಪದ್ಧತಿ ನಿರ್ಮೂಲನೆ ಆಗಬೇಕಾದರೆ, ವರ್ಗ ತಾರತಮ್ಯ ಮಾತ್ರ ತೊಲಗಿದರೆ ಸಾಲದು; ಜಾತಿ ತಾರತಮ್ಯವೂ ನಿರ್ಮೂಲನೆ ಆಗಬೇಕು; ಜಮೀನುದಾರಿ ಪದ್ಧತಿ ನಾಶ, ಉಳುವವರಿಗೇ ಭೂಮಿ ಎಂಬ ಆಶಯದ ಜೊತೆಗೆ ‘ಕೃಷಿಯಲ್ಲಿ ಕೆಲಸ ಮಾಡುವವರಿಗೇ ಭೂಮಿ’ ಎಂಬುದು ಒಗ್ಗೂಡಬೇಕು. ಕೃಷಿ ಕೂಲಿಕಾರರು ಗೌರವದಿಂದ ಜೀವಿಸುವ ಅವಕಾಶಗಳನ್ನು ಪಡೆದುಕೊಳ್ಳುವುದನ್ನು. ಖಾತ್ರಿಪಡಿಸಬೇಕು. ‘ಬೇಟ್ ಬೇಗಾರ್’ ಪದ್ಧತಿಯನ್ನು ಕಿತ್ತು ಹಾಕಲು ಜನಜಾಗೃತಿ ಮೂಡಿಸಿದ ಡಾ. ಅಂಬೇಡ್ಕರ್ ಅವರು ಮಹಾರ್ ವತನದಾರಿಕೆಯನ್ನು ರದ್ದುಪಡಿಸುವಂತೆ ಮತ್ತು ಖೋಟಿ ಪದ್ಧತಿಯನ್ನು ವಿರೋಧಿಸುವಂತೆ ಒತ್ತಾಯಪಡಿಸಿದರು. ಕಡೆಯದಾಗಿ ಅವರು ಕೃಷಿ ಭೂಮಿಯ ರಾಷ್ಟ್ರೀಕರಣ ಹಕ್ಕೊತ್ತಾಯವನ್ನು ಮಂಡಿಸಿದರು.

ಆದರೆ, ದಲಿತ ವರ್ಗಗಳನ್ನು ಇಂದು ಜಾಗತೀಕರಣ ಎಂಬ ಪೈಶಾಚಿಕ ಶಕ್ತಿ ಮುತ್ತಿಕೊಂಡಿದೆ. ಮಾರುಕಟ್ಟೆಯೇ ಆರ್ಥಿಕ ಕೇಂದ್ರವಾಗಿದೆ. ಲಾಭ ಕೊಳ್ಳೆ ಹೊಡೆಯುವುದೇ ಪರಮ ಧ್ಯೇಯವಾಗಿವೆ. ರಾಷ್ಟ್ರಗಳನ್ನು ಕಪಿಮುಷ್ಟಿಯಲ್ಲಿ ಬಂಧಿಸಿಟ್ಟುಕೊಳ್ಳುವುದು ಅಮೆರಿಕಾ ನೇತೃತ್ವದಲ್ಲಿ ಕೊಬ್ಬಿ ಮುನ್ನುಗ್ಗುತ್ತಿರುವ ಮುಂದುವರೆದ ರಾಷ್ಟ್ರಗಳ ಹುನ್ನಾರವಾಗಿದೆ. ಏಕಕಾಲಕ್ಕೆ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಆಕ್ರಮಣ ನಡೆಸುವುದು ಇಂದಿನ ವರಸೆಯಾಗಿದೆ. ಪರಿಣಾಮವಾಗಿ ಡಾ. ಅಂಬೇಡ್ಕರ್ ಕನಸು ಕಂಡಿದ್ದ ಭೂಮಿಯ ರಾಷ್ಟ್ರೀಕರಣವು ಹತ್ತಿಕ್ಕಲ್ಪಟ್ಟು, ಭೂಮಿಯು ಕೈಗಾರಿಕಾ ಬಂಡವಾಳಿಗರ ಕೈಗೊಂಬೆಯಾಗುತ್ತಿದೆ; ಭೂಮಿ ತಾಯಿಯ ಮೇಲೆ ಬಲಾತ್ಕಾರ ಅವ್ಯಾಹತವಾಗಿ ನಡೆಯುತ್ತಿದೆ.

ಸಂವಿಧಾನದ ಅನುಚ್ಛೇದ 15(4) ದಲಿತ ವರ್ಗಗಳಿಗೆ ಯಾವುದೇ ಹೆಚ್ಚಿನ ಪ್ರಯೋಜನವನ್ನು ತರಲಿಲ್ಲ; ಸ್ವಾತಂತ್ರ್ಯನಂತರದ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಕ್ತಿಗಳ ಮಧ್ಯಪ್ರವೇಶ ಹೆಚ್ಚುತ್ತಾ ಬಂದಂತೆ ಈ ಅನುಚ್ಛೇದ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳಲಿಲ್ಲ. ಪ್ರಾಥಮಿಕ ಶಿಕ್ಷಣ ಎಲ್ಲಾ ದಲಿತ ವರ್ಗಗಳ ಮಕ್ಕಳಿಗೆ ಲಭ್ಯವಾಗದೇ ಹೋಯಿತು; ಉನ್ನತ ಶಿಕ್ಷಣವು ಆಸಕ್ತಿ ಇರುವ ದಲಿತ ಮಕ್ಕಳಿಗೆ ಗಗನಕುಸುಮವಾಯಿತು. ಇನ್ನು ಇದೇ ಸಂವಿಧಾನದ ಅನುಚ್ಛೇದ 16(4) ಒದಗಿಸುವ ಉದ್ಯೋಗಾವಕಾಶಗಳಲ್ಲಿ ವಿಶೇಷ ಹಕ್ಕು ಕೇವಲ ಅಲಂಕಾರವಾಗಿ ಉಳಿಯಿತು. ನೇಮಕಾತಿ ಸ್ಥಾನದಲ್ಲಿದ್ದವರ ಬ್ರಾಹ್ಮಣಿಕೆಯಿಂದಾಗಿ ಇದ್ದ ಉದ್ಯೋಗಗಳು ಭರ್ತಿಯಾಗದೇ ಉಳಿದು, ಕ್ರಮೇಣ ಪರರ ಪಾಲಾದವು. ಈ ಬಗ್ಗೆ ದಲಿತ ವರ್ಗಗಳಲ್ಲಿನ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳುವುದರೊಳಗೆ ಉದಾರೀಕರಣ-ಖಾಸಗೀಕರಣ-ಜಾಗತೀಕರಣ ದಾಂಗುಡಿ ಇಟ್ಟು ಬಂದಿದೆ. ದಲಿತರ ಅತಂತ್ರ ಸ್ಥಿ ತಿ ಮುಂದುವರಿದೇ ಇದೆ.

ಸಂವಿಧಾನದಲ್ಲಿ ಒದಗಿಸಲಾದ ವಿಶೇಷ ರಾಜಕೀಯ ಪ್ರಾತಿನಿಧ್ಯದ ಪರಿಣಾಮವಾಗಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ದಲಿತ ವರ್ಗಗಳ ಪ್ರತಿನಿಧಿಗಳಿಗೆ ಕಡ್ಡಾಯ ಸ್ಥಾನ ಸಿಗುವುದು ಸಾಧ್ಯವಾಗಿದೆ. ಆದರೆ ಈ ರಾಜಕೀಯ ಮೀಸಲಾತಿಯ ಏರ್ಪಾಟಿನಲ್ಲಿ ಗುರುತಿಸಲಾಗುತ್ತಿರುವ ದೋಷದಿಂದಾಗಿಯೋ ಅಥವಾ ಚುನಾಯಿತ ದಲಿತ ಪ್ರತಿನಿಧಿಗಳು ದಲಿತ ಸಮುದಾಯದ ಬಗ್ಗೆ ಹೊಂದಿರುವ ಕಾಳಜಿಯಲ್ಲಿನ ಕೊರತೆಯಿಂದಾಗಿಯೋ ಸಂವಿಧಾನದ ಈ ವಿಶೇಷ ರಾಜಕೀಯ ಪ್ರಾತಿನಿಧ್ಯದ ನೇರ ಹಾಗೂ ಸಮರ್ಥ ಪರಿಣಾಮ ಇದುವರೆಗೂ ಕಂಡಿಲ್ಲ. ದಲಿತ ಪ್ರತಿನಿಧಿಗಳು ಸ್ವಂತಿಕೆಯನ್ನು ರೂಢಿಸಿಕೊಳ್ಳುವಲ್ಲಿ, ತಮ್ಮ ಹಕ್ಕು ಚಲಾಯಿಸುವಲ್ಲಿ ಸೋತಿದ್ದಾರೆ; ವ್ಯವಸ್ಥೆಯೊಂದಿಗೆ ರಾಜಿ ಆಗುತ್ತಾ ಬಂದಿದ್ದಾರೆ; ಸ್ವಹಿತಾಸಕ್ತಿಯನ್ನು ಪೋಷಿಸಿಕೊಳ್ಳುತ್ತಾ ಬಂದಿದ್ದಾರೆ; ದಲಿತ ಸಮುದಾಯದ ಹಿತರಕ್ಷಣೆಗೆ ಎರಡನೇ ಸ್ಥಾನವನ್ನು ನೀಡುತ್ತಾ ಬಂದಿದ್ದಾರೆ. ಹಾಗಾಗಿಯೇ, ದಲಿತ ಚುನಾಯಿತ ಪ್ರತಿನಿಧಿಗಳು ಈ ವ್ಯವಸ್ಥೆಯಲ್ಲಿ ದಲಿತ ಸಮುದಾಯದ ಪ್ರತಿನಿಧಿಗಳಾಗಿಲ್ಲ; ಬದಲಾಗಿ, ತಮಗೆ ಟಿಕೆಟ್ ನೀಡಿರುವ ಪಕ್ಷಗಳ ಚಮಚಾಗಳಾಗುವುದರಲ್ಲಿ ತೃಪ್ತಿ ಕಾಣುತ್ತಾ ಬಂದಿದ್ದಾರೆ ಎಂಬ ಆರೋಪವನ್ನು ಅವರು ಹೊರಬೇಕಾಗಿದೆ.

ಈ ಹಿನ್ನೆಲೆಯಲ್ಲಿ ದಲಿತ ವರ್ಗಗಳಿಗಾಗಿ ಮೀಸಲು ಸ್ಥಾನಗಳನ್ನು ಗುರುತಿಸುವ ಚುನಾವಣಾ ವ್ಯವಸ್ಥೆಯು ಬದಲಾಗಿ, ದಲಿತರಿಗಾಗಿ ಪ್ರತ್ಯೇಕ ಸ್ಥಾನಗಳನ್ನು ಗುರುತಿಸುವ ವ್ಯವಸ್ಥೆಯು ಜಾರಿಗೆ ಬರಬೇಕೆಂಬ ದನಿಯೊಂದು ದಲಿತ ವರ್ಗಗಳಲ್ಲೇ ಕೇಳಿ ಬರುತ್ತಿದೆ. ಸುಮಾರು ಎಂಬತ್ತು ವರ್ಷಗಳ ಹಿಂದೆ ಬಾಬಾಸಾಹೇಬ್ ಅಂಬೇಡ್ಕರ್ ಮಂಡಿಸಿದ್ದ ಹಕ್ಕೊತ್ತಾಯದ ಮೂಲ ಆಶಯ ಇದೇ ಆಗಿತ್ತು. ಆಗ ಅವರ ಹಕ್ಕೊತ್ತಾಯವನ್ನು ಗಾಂಧೀಜಿ ನಡೆಸಿದ ಉಪವಾಸ ಸತ್ಯಾಗ್ರಹ ಹತ್ತಿಕ್ಕಿದ್ದು ಚರಿತ್ರೆಯ ಪುಟಗಳಲ್ಲಿ ಕಾಣುವ ವಾಸ್ತವಾಂಶ. ದಲಿತ ವರ್ಗಗಳ ವಿಷಯದಲ್ಲಿ ದಲಿತ ಚುನಾಯಿತ ಪ್ರತಿನಿಧಿಗಳಿಂದ ಇದುವರೆಗೆ ಕಂಡು ಬಂದಿರುವ ರಾಜಕೀಯ ನಿರ್ಲಕ್ಷ್ಯವು ‘ದಲಿತರಿಗಾಗಿ ಪ್ರತ್ಯೇಕ ಸ್ಥಾನಗಳನ್ನು ಗುರುತಿಸುವ ವ್ಯವಸ್ಥೆ ಜಾರಿಗೆ ಬಂದ ಬಳಿಕವಾದರೂ’ ನಿವಾರಣೆಯಾದೀತೆ? ನಿಖರವಾಗಿ ಉತ್ತರವನ್ನು ನೀಡುವುದು ದು:ಸಾಧ್ಯ. ಏಕೆಂದರೆ, ದಲಿತ ಚುನಾಯಿತ ಪ್ರತಿನಿಧಿಗಳು ದಲಿತ ಸಮುದಾಯವನ್ನು ಇದುವರೆಗೆ ನಿರ್ಲಕ್ಷಿಸಿಕೊಂಡು ಬಂದಿರುವುದಕ್ಕೆ ವ್ಯವಸ್ಥೆಯಲ್ಲಿನ ದೋಷಕ್ಕಿಂತ ಸ್ವಹಿತಾಸಕ್ತಿ ಸಾಧನೆಯ ಬಗ್ಗೆ ಹೊಂದಿರುವ ವ್ಯಾಮೋಹವೇ ಹೆಚ್ಚಿನ ಕಾರಣವಾಗಿದೆ ಎಂಬ ವಿಶ್ಲೇಷಣೆಯಲ್ಲಿ ಬಹುಮಟ್ಟಿಗಿನ ಸತ್ಯವೇ ಕಾಣುತ್ತದೆ.

* * *

ಕರ್ನಾಟಕದ ದಲಿತ ಚಳವಳಿಗೆ ಅನನ್ಯ ಹಿನ್ನೆಲೆ ಇದೆ. ಬಹುತೇಕವಾಗಿ ಕಾಂಗ್ರೆಸ್‍ಗೆ ತಮ್ಮನ್ನು ಮಾರಿಕೊಂಡಂತೆ ಇದ್ದ ದಲಿತ ಸಮುದಾಯದಲ್ಲಿ ಅಪೂರ್ವ ಜಾಗೃತಿಯನ್ನು ಮೂಡಿಸಿ, ಅತ್ಮಾಭಿಮಾನವನ್ನು ಬಡಿದೆಬ್ಬಿಸಿ, ಸಂಘಟಿಸಿ ಹೋರಾಟಕ್ಕೆ ಇಳಿಸಿದ ಚಾರಿತ್ರಿಕ ಘಟ್ಟ ಈಗಾಗಲೇ ರಾಜ್ಯದ ಇತಿಹಾಸದಲ್ಲಿ ದಾಖಲಾಗಿದೆ. ವಿದ್ಯೆ, ಭೂಮಿ, ಸಮಾನತೆ, ಪಾಳೆಯಶಾಹಿ ಮತ್ತು ಪುರೋಹಿತಶಾಹಿ ವಿರುದ್ಧ ಗಟ್ಟಿ ದನಿಯಲ್ಲಿ ಗುಡುಗಿದ ದಲಿತ ಚಳವಳಿಯು, ರಾಜ್ಯದ ಮೂಲೆ ಮೂಲೆಗಳಿಗೆ ಹಬ್ಬಿ ದಲಿತ ಯುವಜನರ ನರನಾಡಿಯಲ್ಲಿ ಛಲದ, ಹೋರಾಟದ ಕೆಚ್ಚನ್ನು ಮೂಡಿಸಿದೆ. ದಲಿತ ವರ್ಗಗಳ ಬದುಕನ್ನು ಆಮೂಲಾಗ್ರವಾಗಿ ಪುನರ್ ರಚಿಸುವ ದಿಕ್ಕಿನಲ್ಲಿ ಕರ್ನಾಟಕ ದಲಿತ ಚಳವಳಿಯ ಕೊಡುಗೆ ಅಪರೂಪವಾದುದು.

ಆದರೆ, ಕಾಲಾಂತರದಲ್ಲಿ ದಲಿತ ಚಳವಳಿಯಲ್ಲೂ ಸ್ವಹಿತಾಸಕ್ತ ಗುಂಪುಗಳು ಬೆಳೆದುಕೊಂಡು ಬರಲು ಸಾಧ್ಯವಾಗಿದ್ದು ಯಾರೂ ನಿರಾಕರಿಸಲಾಗದ ವಾಸ್ತವ. ಹೋರಾಟ ಮನೋಭಾವ ವ್ಯವಸ್ಥೆಯಲ್ಲಿ ಕೊಆಪ್ಟ್ ಆಗಿದ್ದು ಈಚಿನ ದಿನಗಳಲ್ಲಿ ಸ್ಪಷ್ಟವಾಗಿರುವ ವ್ಯಂಗ್ಯ. ಪರಿವರ್ತನೆಯ ಯಾವುದೇ ಚಳವಳಿಯನ್ನು ಸ್ವಾಹಾ ಮಾಡಲು ವ್ಯವಸ್ಥೆ ಹೆಣೆಯುವ ಜಾಲದಲ್ಲಿ ದಲಿತ ಚಳವಳಿ ಕೂಡ ಸಿಕ್ಕು ಬಿದ್ದುದನ್ನು, ವ್ಯಥೆಯಿಂದಲಾದರೂ ಸರಿಯೆ, ಒಪ್ಪಬೇಕಾಗುತ್ತದೆ. ರಾಜ್ಯದ ದಲಿತ ಚಳವಳಿಯು ವಿಭಜನೆ ಆಗಿರಬಹುದು; ಹೆಚ್ಚು ಗುಂಪುಗಳು ಕಾಣುತ್ತಿರಬಹುದು; ಆದರೆ ಮೂಲ ದಲಿತ ಚಳವಳಿಯ ಅಂತ:ಶಕ್ತಿ ಮಾತ್ರ ಇನ್ನೂ ಕುಂದಿಲ್ಲ. ದಲಿತ ಸಂಘಟನೆಗಳ ಧೃವೀಕರಣ ಸಾಧ್ಯವಾಗಿ, ಕ್ರೋಢೀಕೃತ ದಲಿತ ಶಕ್ತಿಯು ಮತ್ತೆ ಮೈ ಕೊಡವಿಕೊಂಡು ಎದ್ದು ನಿಂತಿದ್ದೇ ಆದಲ್ಲಿ, ರಾಜ್ಯದ ದಲಿತ ವರ್ಗಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಅವಕಾಶ ಇನ್ನೂ ಇದೆ. ನಮ್ಮ ಮುಂದಿನ ಸವಾಲುಗಳನ್ನು ಸಮರ್ಪಕವಾಗಿ ಅರ್ಥೈಸಿಕೊಂಡು, ಅವುಗಳನ್ನು ನಿಭಾಯಿಸುವ ಮಾರ್ಗವನ್ನು ಕಂಡುಕೊಳ್ಳುವುದು ಸಾಧ್ಯ ಇದೆ.

* * *

ದಲಿತ ಚಳವಳಿಯ ಮುಂದಿನ ಪ್ರಮುಖ ಸವಾಲುಗಳು ಯಾವವು? ಅವುಗಳಿಗೆ ದಲಿತ ಚಳವಳಿ ಹೇಗೆ ಮುಖಾಮುಖಿಯಾಗುವುದು ತುರ್ತಾಗಿದೆ? ದಲಿತ ವರ್ಗ ‘ಕೇವಲ ಗ್ರಾಹಕ ವರ್ಗ’ ಆಗಿ ಪರಿಣಮಿಸದಂತೆ ಎಚ್ಚರ ವಹಿಸುವುದು ಹೇಗೆ? ವರ್ಗ-ಜಾತಿ ಹಿತಾಸಕ್ತಿ ರಕ್ಷಣೆಯ ಪಗಡೆಯಾಟದಲ್ಲಿ ದಲಿತ ಧ್ವನಿಯೂ ಕೊಆಪ್ಟ್ ಆಗದಿರುವುದು ಹೇಗೆ? ‘ಗಾಂಧಿಯ ಸನಾತನಿ ಬೂರ್ಜ್ವಾದೃಷ್ಟಿ’ಯನ್ನು ತಿರಸ್ಕರಿಸಿ, ದಲಿತ ವರ್ಗಗಳಿಗೆ ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಅಂಬೇಡ್ಕರ್ ಅವರು ತೋರಿದ ಪರ್ಯಾಯ ‘ರಾಡಿಕಲ್ ದೃಷ್ಟಿ’ ಕೂಡ ಬೂರ್ಜ್ವಾ ಆಗದಂತೆ ನೋಡಿಕೊಳ್ಳುವುದು ಹೇಗೆ? ಇವು ನಮಗೆ ಅತಿ ಮಹತ್ವದ ಅಂಶಗಳಾಗಬೇಕಿದೆ.

ಈ ಘಟ್ಟವನ್ನು ಹೀಗೆ ವಿವರಿಸಿಕೊಳ್ಳಬಹುದು. ದಲಿತ ವರ್ಗಗಳ ಅಭಿವೃದ್ಧಿ ಎಂಬ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆ/ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬಂದಿವೆ. ಪ್ರತಿ ವರ್ಷ ಈ ಯೋಜನೆ/ಕಾರ್ಯಕ್ರಮಗಳಿಗಾಗಿ ಲಕ್ಷಾಂತರ ಕೋಟಿ ರೂ. ಹಂಚಿಕೆ ಮಾಡುವ, ಬಿಡುಗಡೆ ಮಾಡುವ, ಖರ್ಚು ಮಾಡುವ ನಾಟಕ ನಡೆಯುವುದನ್ನು ನಾವು ಗಮನಿಸಿದ್ದೇವೆ. ಈ ಬಗ್ಗೆ ಚುನಾಯಿತ ದಲಿತ ಪ್ರತಿನಿಧಿಗಳಾಗಲೀ, ದಲಿತ ಸಂಘ-ಸಂಸ್ಥೆಗಳಾಗಲೀ ಇದುವರೆಗೆ ವ್ಯವಸ್ಥಿತವಾಗಿ ಧ್ವನಿ ಎತ್ತಿಲ್ಲ. ದಲಿತ ವಿದ್ಯಾವಂತರು ಹೊಣೆಗೇಡಿಗಳಾಗುತ್ತಾ ಚುನಾಯಿತ ದಲಿತ ಪ್ರತಿನಿಧಗಳು ಸ್ವಹಿತಾಸಕ್ತರಾಗುತ್ತಾ ಬಂದಂತೆ ದಲಿತ ವರ್ಗಗಳ ಅಭಿವೃದ್ಧಿಯ ದೃಷ್ಟಿಯಿಂದ ರೂಪುಗೊಂಡಿವೆ ಎಂದು ಹೇಳಲಾಗುವ ಎಲ್ಲಾ ಯೋಜನೆ/ಕಾರ್ಯಕ್ರಮಗಳು ಕೇವಲ ಕಾಗದದ ಮೇಲೆ ಉಳಿದಿವೆ. ಪಾಳೆಯಶಾಹಿ ಮತ್ತು ಪುರೋಹಿತಶಾಹಿ ಶಕ್ತಿಯನ್ನೇ ಪ್ರತಿನಿಧಿಸುವ ರಾಷ್ಟ್ರೀಯ ಆಳುವ ವರ್ಗ, ಇದುವರೆಗೆ ದಲಿತ ವರ್ಗಗಳ ಸಬಲೀಕರಣದ ಬಗ್ಗೆ ಮಾತನಾಡುತ್ತಾ ಆದರೆ ಕಾರ್ಯದಲ್ಲಿ ಸಬಲೀಕರಣವನ್ನು ಹತ್ತಿಕ್ಕುತ್ತಾ ಬಂದಿದೆ. ಇಲ್ಲದಿದ್ದರೆ, 1985ರವರೆಗೆ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಕೇವಲ 433.24 ಕೋಟಿಯನ್ನು ಮಾತ್ರ ಪ.ಜಾತಿ/ಪಂಗಡಗಳಿಗೆ ವೆಚ್ಚ ಮಾಡಿರುವುದಕ್ಕೆ ಏನು ವಿಶ್ಲೇಷಣೆ ಇರಬಲ್ಲದು? 6ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ದೇಶದ ಒಟ್ಟು ಯೋಜನಾ ಗಾತ್ರ ಇದ್ದುದು ರೂ. 1,09,291.70 ಕೋಟಿ; ಈ ಪೈಕಿ ಪ.ಜಾತಿ/ಪಂಗಡಗಳಿಗೆ ಆ ಅವಧಿಯಲ್ಲಿ ವೆಚ್ಚ ಮಾಡಿದ್ದು ಕೇವಲ 1.35%ರಷ್ಟು ಅಂದರೆ ರೂ. 1,480 ಕೋಟಿಯನ್ನು ಮಾತ್ರ! ನಂತರದ 7ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ದೇಶದ ಒಟ್ಟು ಯೋಜನಾ ಗಾತ್ರ ಇದ್ದುದು ರೂ. 2,18,729.60 ಕೋಟಿ; ಈ ಪೈಕಿ ಪ.ಜಾತಿ/ಪ. ಪಂಗಡಗಳಿಗೆ ಆ ಅವಧಿಯಲ್ಲಿ ವೆಚ್ಚ ಮಾಡಿದ್ದು ಕೇವಲ 1.63%ರಷ್ಟು ಅಂದರೆ ರೂ. 3,567.60 ಕೋಟಿಯನ್ನು ಮಾತ್ರ!! 8ನೇ ಪಂಚವಾರ್ಷಿಕ ಯೋಜನೆಯ ರೂ. 4,85,457 ಕೋಟಿಯಲ್ಲಿ ಕೇವಲ 7,266 ಕೋಟಿಯನ್ನು ಹಾಗೂ 9ನೇ ಪಂಚವಾರ್ಷಿಕ ಯೋಜನೆಯ ರೂ. 8,59,200 ಕೋಟಿಯಲ್ಲಿ ಕೇವಲ 17,000 ಕೋಟಿಯನ್ನು ಮಾತ್ರ ದೇಶದ ಪ.ಜಾತಿ/ಪಂಗಡಗಳಿಗೆ ವೆಚ್ಚ ಮಾಡಿದ್ದರಿಂದ ಜರುಗಿದ ಭಾರಿ ಮೋಸವೆಂದಲ್ಲದೆ ಇನ್ನು ಹೇಗೆ ತಾನೆ ವ್ಯಾಖ್ಯಾನಿಸಲು ಸಾಧ್ಯ?

ಕೇಂದ್ರ ಸರ್ಕಾರ ನೇಮಿಸಿದ ಅರ್ಜುನ್ ಸೇನಾ ಗುಪ್ತಾ ಸಮಿತಿ ವರದಿಯು ದೇಶದಲ್ಲಿ 33.60 ಕೋಟಿ ಜನರು ತಮ್ಮ ಜೀವನ ನಿರ್ವಹಣೆಗೆ ದಿನಕ್ಕೆ ಕೇವಲ ರೂ. 20 ವೆಚ್ಚ ಮಾಡುವ ಶಕ್ತಿ ಹೊಂದಿದ್ದಾರೆ; ಈ ಪೈಕಿ 78.2%ರಷ್ಟು ಜನರು ಪ.ಜಾತಿ-ಪಂಗಡ-ಹಿಂದುಳಿದ ವರ್ಗಗಳವರಾಗಿದ್ದಾರೆ ಎಂಬ ಭೀಕರ ಸತ್ಯವನ್ನು ಬಯಲಿಗಿಟ್ಟಿದೆ. ಇಂಥ ವಿಷಯಗಳೊಂದಿಗೆ ಅನುಸಂಧಾನಕ್ಕೆ ಮುಂದಾಗಲೇಬೇಕಾದ ಅನಿವಾರ್ಯತೆ ದಲಿತ ಚಳವಳಿಗಿದೆ. ಕರ್ನಾಟಕದಲ್ಲಿ 403 ಮಂದಿ ದಲಿತರು ಮಲ ಹೊರುತ್ತಿದ್ದಾರೆ; ಪ.ಜಾತಿ/ಪಂಗಡ ಮಕ್ಕಳು ಶಾಲೆ ಬಿಡುವ ಪ್ರಮಾಣ ಪ್ರಾಥಮಿಕ ಹಂತದಲ್ಲಿ 47.6% ರಷ್ಟಿದೆ; ಆಶ್ರಮ ಶಾಲೆಯ ಮಕ್ಕಳಿಗೆ ಊಟ-ಉಪಾಹಾರಕ್ಕಾಗಿ ಸರ್ಕಾರ ದಿನವೊಂದಕ್ಕೆ ವೆಚ್ಚ ಮಾಡುತ್ತಿರುವ ಮೊತ್ತ ಕೇವಲ ರೂ. 7, ಕಾಲೇಜ್ ವಿದ್ಯಾಭ್ಯಾಸ ಮಾಡಲು ಹಾಸ್ಟೆಲ್ ಸೌಲಭ್ಯ ಇರುವುದು ಕೇವಲ 14,000 ಪ.ಜಾತಿ/ಪಂಗಡ ವಿದ್ಯಾರ್ಥಿನಿಯರಿಗೆ; ವಿದ್ಯಾರ್ಥಿನಿಯರ 217 ಕಾಲೇಜ್ ಹಾಸ್ಟೆಲ್‍ಗಳಿಗೆ ಬಾಡಿಗೆಯಾಗಿ ನೀಡುತ್ತಿರುವ ಮೊತ್ತ ಅವರಿಗೆ ಊಟ-ಉಪಾಹಾರಕ್ಕಾಗಿ ಆಗುತ್ತಿರುವ ವೆಚ್ಚದ ಮೂರು ಪಟ್ಟು; 2000-01 ಮತ್ತು 2004-05ರ ನಡುವಣ ಅವಧಿಯಲ್ಲಿ ಕೇವಲ 2063 ಜೀತದಾಳುಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲಾಗಿದೆ; 2001ರ ಜನಗಣತಿಯಂತೆ ರಾಜ್ಯದ ಒಟ್ಟು 70.79 ಲಕ್ಷ ಹಿಡುವಳಿಗಳ ಪೈಕಿ 8.23 ಲಕ್ಷ (11.65%) ಹಿಡುವಳಿಗಳು ಮಾತ್ರ ಪ.ಜಾತಿಯವರಿಗೆ ದಕ್ಕಿವೆ. ರಾಜ್ಯದಲ್ಲಿ ಒಟ್ಟು 123.07 ಲಕ್ಷ ಹೆಕ್ಟೇರ್ ಸಾಗುವಳಿ ಪ್ರದೇಶದ ಪೈಕಿ ಪ.ಜಾತಿಗಳ ಪಾಲಿಗೆ ದೊರಕಿರುವುದು 10.71 ಲಕ್ಷ (8.53%) ಹೆಕ್ಟೇರ್ ಪ್ರದೇಶ ಮಾತ್ರ; ದೇವದಾಸಿಯರ ಸಂಖ್ಯೆ ವರ್ಷ ವರ್ಷವು ಏರುತ್ತಿದೆ. ಇತ್ಯಾದಿ ಕ್ಷೋಭೆಗೊಳಿಸುವ ಸಂಗತಿಗಳಿಗೆ ದಲಿತ ಚಳವಳಿ ರಾಜಿರಹಿತ ಹೋರಾಟಗಳ ಮೂಲಕ ಶ್ರದ್ಧಾ-ನಿಷ್ಠೆಯೊಂದಿಗೆ ಪ್ರತಿಕ್ರಿಯಿಸಬೇಕಿದೆ.

ದಲಿತರ ಭೌತಿಕ ಸ್ಥಿತಿಗತಿ ಉತ್ತಮಗೊಳ್ಳುವುದಕ್ಕೆ ಸಂಬಂಧಿಸಿದ ಯೋಜನೆ/ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಗೊಳ್ಳುವುದನ್ನು ದಲಿತ ಚಳವಳಿ ಖಾತ್ರಿಪಡಿಸಿಕೊಳ್ಳಬೇಕು; ಇದರ ಜೊತೆಗೇ, ದಲಿತ ವರ್ಗ ಲಾಭಕೋರತನ/ವೇತನ-ಕೂಲಿ ಹೆಚ್ಚಳ ಎಂಬ ರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದೂ ಮುಖ್ಯವಾಗಬೇಕು. ದೂರದೃಷ್ಟಿ, ವಿವೇಕ ಹಾಗೂ ನಿಷ್ಠಾಪೂರ್ವಕ ಹೋರಾಟ ನಮ್ಮ ನಿಲುವು-ನಡೆ ಆಗಿದ್ದಲ್ಲಿ ಇದನ್ನು ಅದ್ಭುತವಾಗಿ ಸಾಧಿಸಬಹುದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ)