Daily Archives: April 19, 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-3)


– ಡಾ.ಎನ್.ಜಗದೀಶ್ ಕೊಪ್ಪ


 

ಬರ್ದಾನ್ ಜಿಲ್ಲೆಯ ಸಮಾವೇಶದಿಂದ ಸಿಲಿಗುರಿಗೆ ಹಿಂತಿರುಗಿದ ಚಾರು ಮುಜಂದಾರ್ ಮತ್ತು ಅವನ ಸಂಗಡಿಗರು, ತಾವು ಕಮ್ಯೂನಿಷ್ಟ್ ಪಕ್ಷದ ಮುಂದೆ ಇರಿಸಿದ್ದ ಪ್ರಸ್ತಾವನೆಗಳನ್ನು ಕಾರ್ಯರೂಪಕ್ಕೆ ತರಲು ತಕ್ಷಣವೇ ಮುಂದಾದರು. ಇದೊಂದು ರೀತಿಯಲ್ಲಿ ಎಲ್ಲಾ ಅಸಮಾನತೆ, ದೌರ್ಜನ್ಯಗಳ ವಿರುದ್ಧ ಯುದ್ಧ ಘೋಷಿಸುವ ಮನಸ್ಥಿತಿಯಲ್ಲಿ ಇದ್ದಂತೆ ತೋರುತ್ತಿತ್ತು.

ಚಾರು ಯೋಜಿಸಿದ್ದ ಕನಸಿನ ರೂಪುರೇಷೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್, ಮುಂದಾಗಿ ಸಿಲಿಗುರಿ ಪ್ರಾಂತ್ಯದಲ್ಲಿ ಆದಿವಾಸಿಗಳನ್ನು ಸಂಘಟಿಸತೊಡಗಿದರು. ಜಂಗಲ್ ಸಂತಾಲ್ ಮೂಲತಃ ಸಂತಾಲ್ ಬುಡಕಟ್ಟು ಜನಾಂಗದಿಂದ ಬಂದವನಾದ್ದರಿಂದ ಸಂಘಟಿಸುವ ಕೆಲಸ ಅವನಿಗೆ ಕಷ್ಟವೆನಿಸಲಿಲ್ಲ. ಏಕೆಂದರೆ, ಜಮೀನ್ದಾರರ ಬಳಿ ಇರುವ ಹೆಚ್ಚುವರಿ ಭೂಮಿ ಹಾಗೂ ಸರ್ಕಾರ ಶ್ರೀಮಂತ ಜಮೀನ್ದಾರರಿಂದ ವಶಪಡಿಸಿಕೊಂಡಿರುವ ಭೂಮಿ ಈ ನೆಲದ ಭೂಹೀನರಿಗೆ ಸಲ್ಲಬೇಕು ಎಂಬ ಈ ಮೂವರ ಘೋಷಣೆ ಆದಿವಾಸಿಗಳನ್ನು ಸಮ್ಮೋಹನಗೊಳಿಸಿತು.

ಕಿಸಾನ್‌ಸಭಾ ಸಂಘಟನೆಗೆ ಸದಸ್ಯರಾಗ ಬಯಸುವವರು, ನಾಲ್ಕಾಣೆ (25ಪೈಸೆ) ನೀಡಿ ಸದಸ್ಯತ್ವ ಪಡೆಯಬೇಕಿತ್ತು. ಕಾಡಿನ ನಡುವೆ ಭೂಮಿಯ ಬಗ್ಗೆಯಾಗಲಿ, ಬೇಸಾಯದ ಬಗ್ಗೆಯಾಗಲಿ ಎಂದೂ ಕನಸು ಕಾಣದೆ ಬದುಕಿದ್ದ ಸಂತಾಲ್ ಮತ್ತು ರಾಜ್ಬನ್ಸಿ ಎಂಬ ಬುಡಕಟ್ಟು ಜನಾಂಗಕ್ಕೆ ಕಣ್ಣಮುಂದೆ ಬೃಹತ್ತಾದ ಆಶಾಗೋಪುರ ನಿರ್ಮಾಣವಾಗತೊಡಗಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಸದಸ್ಯರ ಸಂಖ್ಯೆ 40 ಸಾವಿರ ಮುಟ್ಟಿತು. ಈ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೇಸ್ ಮತ್ತು ಕಮ್ಯುನಿಷ್ಟ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ತನ್ನ ರಾಜ್ಯದ ಉತ್ತರ ಭಾಗದಲ್ಲಿ ಆದಿವಾಸಿಗಳು, ಜಮೀನ್ದಾರರ ವಿರುದ್ಧ ಸಂಘಟಿತರಾಗುತ್ತಿದ್ದಾರೆ ಎಂಬ ಸುಳಿವು ಸರ್ಕಾರಕ್ಕೆ ಇತ್ತಾದರೂ ಅನಿರೀಕ್ಷಿತ ಕ್ರಾಂತಿಯ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ.

1967 ರ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸಂಘಟಿತರಾದ ಆದಿವಾಸಿ ರೈತರು, ಮತ್ತು ಕಾರ್ಮಿಕರು ತಮ್ಮ ಬಿಲ್ಲು ಬಾಣಗಳೊಂದಿಗೆ ಜಮೀನ್ದಾರರ ಮನೆಗೆ ದಾಳಿ ಇಟ್ಟು ಅವರ ಮನೆಯಲ್ಲಿದ್ದ ಭೂದಾಖಲೆಗಳು. ದವಸಧಾನ್ಯ ಮತ್ತು ಬಂದೂಕಗಳನ್ನು ವಶಪಡಿಸಿಕೊಂಡರು. ಶ್ರೀಮಂತರ ಮನೆಯಲ್ಲಿ ವಶಪಡಿಸಿಕೊಂಡಿದ್ದ ಅಪಾರ ಪ್ರಮಾಣದ ಭತ್ತ ಹಾಗೂ ಇತರೆ ದವಸಧಾನ್ಯಗಳನ್ನು ಎಲ್ಲರೂ ಸಮನಾಗಿ ಹಂಚಿಕೊಂಡು ಉಳಿದುದ್ದನ್ನು ಕಿಸಾನ್ ಸಂಘಟನೆಯ ಸದಸ್ಯರಲ್ಲದವರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಿದರು. ಮೂರು ತಿಂಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ದಾಳಿಗಳು ನಡೆದವು. ಈ ಎಲ್ಲಾ ದಾಳಿಗಳು ಚಾರು ಮುಜಂದಾರ್ ರೂಪಿಸಿದ್ದ ಮಾದರಿಯಲ್ಲಿ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್ ನೇತೃತ್ವದಲ್ಲಿ ನಡೆದವು. ಈ ಅನಿರೀಕ್ಷಿತ ಪ್ರತಿಭಟನೆ ಮತ್ತು ದಾಳಿಯಿಂದ ಕಂಗಾಲಾದ ಸಿಲಿಗುರಿ ಜಿಲ್ಲಾಡಳಿತ ಸರ್ಕಾರದ ಮಾರ್ಗದರ್ಶನಕ್ಕಾಗಿ ಕೊಲ್ಕತ್ತಾದತ್ತ ಮುಖ ಮಾಡಿಕುಳಿತುಬಿಟ್ಟಿತ್ತು.

ಹಿಂಸಾಚಾರ ಮತ್ತು ಪ್ರತಿಭಟನೆಗೆ ಕಾರಣರಾದವರನ್ನು ಬಂಧಿಸುವ ಸ್ಥೈರ್ಯ ಜಿಲ್ಲಾಡಳಿತಕ್ಕೆ ಇರಲಿಲ್ಲ. ಅಂತಿಮವಾಗಿ ಪಶ್ಚಿಮ ಬಂಗಾಳ ಸರ್ಕಾರ ಕಂದಾಯ ಇಲಾಖೆ ಸಚಿವ ಹರಿಕೃಷ್ಣಕೊನರ್‌ನನ್ನು ಸಿಲಿಗುರಿಗೆ ಕಳಿಸಿಕೊಟ್ಟಿತು. ಸರ್ಕಾರ ಮತ್ತು ಪ್ರತಿಭಟನಾಗಾರರ ನಡುವೆ ಹಲವು ಸುತ್ತಿನ ಸಂಧಾನದ ಮಾತುಕತೆಯ ನಂತರ ಮೇ 17 ರಂದು ಸುಕ್ನಾ ಅರಣ್ಯದ ಪ್ರದೇಶದ ಅತಿಥಿಗೃಹದಲ್ಲಿ ಸಚಿವನನ್ನು ಪ್ರತಿಭಟನಾಗಾರರ ಪರವಾಗಿ ಕನುಸನ್ಯಾಲ್ ಭೇಟಿಯಾಗುವುದು ಎಂಬ ಒಡಂಬಡಿಕೆಗೆ ಬರಲಾಯಿತು. ಇದಕ್ಕೂ ಮುನ್ನ ಎರಡು ಬಣಗಳ ನಡುವೆ ಹಲವು ಒಪ್ಪಂದಕ್ಕೆ ಬರಲಾಗಿತ್ತು. ಅವುಗಳಲ್ಲಿ ಸಂಧಾನದ ವೇಳೆ ಕಿಸಾನ್ ಸಭಾ ಘಟಕಗಳಿಂದ ಯಾವುದೇ ದಾಳಿ, ಲೂಟಿ, ಹಿಂಸಾಚಾರ ನಡೆಯಕೂಡದು, ಅದೇ ರೀತಿ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಕನುಸನ್ಯಾಲ್‌ನನ್ನು ಬಂಧಿಸಕೂಡದು. ಎಂಬ ಅಂಶಗಳು ಮುಖ್ಯವಾಗಿದ್ದವು.

ಕನುಸನ್ಯಾಲ್ ಬಂಗಾಳದ ಕಂದಾಯ ಸಚಿವನನ್ನು ಭೇಟಿಯಾದಾಗ, ಸರ್ಕಾರದ ಪರವಾಗಿ, ವಿಷಯಗಳನ್ನು ಪ್ರಸ್ತಾಪಿಸಿದ ಸಚಿವ ಹರೆಕೃಷ್ಣಕೊನರ್, ನಿಗದಿತ ದಿನದೊಳಗೆ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಶರಣಾಗಬೇಕು ಮತ್ತು ಪೊಲೀಸ್ ನೀಡುವ ಪಟ್ಟಿಯಲ್ಲಿ ಹೆಸರಿರುವ ಆದಿವಾಸಿ ಮುಖಂಡರನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟ. ತಕ್ಷಣಕ್ಕೆ ಇವುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕನುಸನ್ಯಾಲ್ ಸಂಗಡಿಗರೊಂದಿಗೆ ಈ ಕುರಿತು ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿ ಸಂಧಾನದ ಸಭೆಯಿಂದ ಎದ್ದು ಬಂದ.

ನಂತರ ಚಾರು ಮುಜುಂದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಬೇಡಿಕೆಗಳಿಗೆ ಕಿಸಾನ್‌ಸಭಾ ನಾಯಕರಿಂದ ಮತ್ತು ಕಾರ್ಯಕರ್ತರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರದ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು. ಶರಣಾಗತಿಗೆ ಸರ್ಕಾರ ನೀಡಿದ್ದ ಎರಡು ದಿನಗಳ ಗಡುವು ಮುಕ್ತಾಯಗೊಂಡ ಹಿನ್ನಲೆಯಲ್ಲಿ , ಸಿಲಿಗುರಿಯ ಜಿಲ್ಲಾಡಳಿತ ಹೆಚ್ಚುವರಿ ಪೊಲೀಸ್ ಪಡೆಗಳ ನೆರವಿನಿಂದ ನಕ್ಸಲ್‌ಬಾರಿ ಹಳ್ಳಿಯ ಮೇಲೆ ದಾಳಿ ಮಾಡಿ ನಾಯಕರನ್ನು ಬಂಧಿಸಲು ಮುಂದಾಯಿತು.

ಮೇ 23 ರಂದು ಪೊಲೀಸ್ ಅಧಿಕಾರಿ ಸೊನಮ್‌ವಾಂಗಡಿ ನೇತೃತ್ವದ ತಂಡ ಹಳ್ಳಿಗೆ ಆಗಮಿಸುತ್ತಿದೆ ಎಂಬ ಸುಳಿವು ದೊರೆತ ಕೂಡಲೇ ಹಳ್ಳಿಯ ಗಂಡಸರು ತಮ್ಮ ಬಿಲ್ಲು ಬಾಣಗಳ ಸಹಿತ ಹಳ್ಳಿಯನ್ನು ತೊರೆದು ಪಕ್ಕದ ಗುಡ್ಡ ಗಾಡಿನ ಪೊದೆಗಳಲ್ಲಿ ಅವಿತು ಕುಳಿತರು. ಹಳ್ಳಿಯಲ್ಲಿ ಯಾವೊಬ್ಬ ಪುರುಷನೂ ಇಲ್ಲದ್ದನ್ನು ಮನಗಂಡ ಅಧಿಕಾರಿ ವಾಂಗಡಿ ನಕ್ಸಲ್‌ಬಾರಿಯ ಬೀದಿಯಲ್ಲಿ ನಿಂತು, ಮಹಿಳೆಯರಿಗೆ, ನಿಮ್ಮ ಗಂಡಂದಿರನ್ನು ಶರಣಾಗಲು ಮನವೊಲಿಸಿ, ಇಲ್ಲದಿದ್ದರೆ, ನಿಮ್ಮನ್ನು ಬಂಧಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾಗಲೇ ದೂರದ ಪೊದೆಯ ಮರೆಯಿಂದ ತೂರಿ ಬಂದ ಮೂರು ವಿಷಪೂರಿತ ಬಾಣಗಳು ಅವನ ದೇಹವನ್ನು ಹೊಕ್ಕವು ಕ್ಷಣಾರ್ಧದಲ್ಲಿ ಆತ ಸ್ಥಳದಲ್ಲೇ ಕುಸಿದು ಮೃತಪಟ್ಟ. ತಮ್ಮ ಹೆಂಗಸರನ್ನು ಪೊಲೀಸರು ಎಳೆದೊಯ್ಯುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಮತ್ತು ತಿಳುವಳಿಕೆಯಿಂದ ಆದಿವಾಸಿಗಳು ಸೊನಮ್‌ವಾಂಗಡಿಯ ಮೇಲೆ ಬಾಣ ಪ್ರಯೋಗ ಮಾಡಿದ್ದರು.

ಸ್ಥಳೀಯರ ದಾಳಿಯಿಂದ ಬೆಚ್ಚಿಬಿದ್ದ ಪೊಲೀಸರು ಮತ್ತಷ್ಟು ಹೆಚ್ಚುವರಿ ಪಡೆಯನ್ನು ಕರೆಸಿಕೊಂಡು ಮಾರನೇದಿನ ಮತ್ತೇ ನಕ್ಸಲ್‌ಬಾರಿ ಹಳ್ಳಿ ಮೇಲೆ ಮುಗಿಬಿದ್ದರು. ಆ ದಿನ ನಕ್ಸಲ್‌ಬಾರಿ ಎಂಬ ಪುಟ್ಟ ಹಳ್ಳಿ ಅಕ್ಷರಶಃ ರಣರಂಗವಾಗಿ ಹೋಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 1500 ಪೊಲೀಸರು ಇಡೀ ಹಳ್ಳಿಯನ್ನು ನಾಲ್ಕು ದಿಕ್ಕಿನಿಂದ ಸುತ್ತುವರಿದು ಗ್ರಾಮದೊಳಕ್ಕೆ ಪ್ರವೇಶ ಮಾಡಿದಾಗ, ಸ್ಥಳೀಯ ಆದಿವಾಸಿ ಜನಗಳ ಬಿಲ್ಲಿನ ಬಾಣಗಳನ್ನು ಎದುರಿಸಲಾರದೆ. ಗುಂಡು ಹಾರಿಸಿದಾಗ ಹತ್ತು ಮಂದಿ ಬಲಿಯಾದರು ಇವರಲ್ಲಿ ಆರು ಮಂದಿ ಆದಿವಾಸಿ ಮಹಿಳೆಯರು ಸೇರಿದ್ದರು. ಈ ಘಟನೆಯಿಂದ ಆ ಕ್ಷಣಕ್ಕೆ ನಕ್ಸಲ್‌ಬಾರಿಯಲ್ಲಿ ಪ್ರತಿಭಟನೆ ತಣ್ಣಗಾದರೂ ಪ್ರತಿಭಟನೆಯ ಕಿಚ್ಚು ಇತರೆಡೆ ಆವರಿಸಿತು.

ನೂರೈವತ್ತು ಸಂತಾಲ್ ಆದಿವಾಸಿಗಳ ಗುಂಪು ಜೂನ್ 10 ರಂದು ನಕ್ಸಲ್‌ಬಾರಿ ಸಮೀಪದ ಖಾರಿಬಾರಿ ಎಂಬ ಹಳ್ಳಿಯಲ್ಲಿ ನಾಗೆನ್ ರಾಯ್‌ಚೌಧುರಿ ಎಂಬ ಜಮೀನ್ದಾರನ ಮನೆಗೆ ನುಗ್ಗಿ ಭತ್ತದ ಚೀಲಗಳು, ಜೋಡುನಳಿಕೆಯ ಬಂದೂಕ, ಮತ್ತು ಆಭರಣಗಳನ್ನು ದೋಚಿತು. ಈ ಗುಂಪಿನ ಎಲ್ಲಾ ಸದಸ್ಯರು ತಮ್ಮ ಕೈಯಲ್ಲಿ ಆಯುಧ ಮತ್ತು ಕೆಂಪು ಬಾವುಟ ಹಿಡಿದು ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು. ಜೊತೆಗೆ ನಾಗೆನ್ ರಾಯ್‌ಚೌಧುರಿಯನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದರು. ಅಲ್ಲಿ ಕನುಸನ್ಯಾಲ್ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಜಮೀನ್ದಾರ ಚೌಧುರಿ ಆವರೆಗೆ ನಡೆಸಿದ್ದ ಮಹಿಳೆಯರ ಮೇಲಿನ ಆತ್ಯಾಚಾರ, ಬಡವರ ಶೋಷಣೆ, ದಬ್ಬಾಳಿಕೆ ಈ ಕುರಿತಂತೆ ವಿಚಾರಣೆ ನಡೆಸಿ, ಆತನಿಗೆ ಮರಣದಂಡನೆ ವಿಧಿಸಲಾಯಿತು. ಅಲ್ಲದೆ, ಸಾರ್ವಜನಿಕವಾಗಿ ಆತನನ್ನು ನೇಣು ಹಾಕಲಾಯಿತು. ಇದೇ ದಿನ ಮತ್ತೊಂದು ಗುಂಪು ಬರಮನಿಜೋಟೆ ಎಂಬ ಹಳ್ಳಿಯ ಜೈನಂದನ್ ಸಿಂಗ್ ಎಂಬ ಜಮೀನ್ದಾರನ ಮನೆಯ ಮೇಲೆ ದಾಳಿ ನಡೆಸಿ, ದವಸ, ಧಾನ್ಯಗಳ ಜೊತೆಗೆ ಬಂದೂಕ ಹಾಗೂ 25 ಸುತ್ತುಗಳಿಗೆ ಬೇಕಾಗುವಷ್ಟು ಮದ್ದುಗುಂಡುಗಳನ್ನು ದೋಚಿತು.

ಸಿಡಿದೆದ್ದ ಆದಿವಾಸಿಗಳು, ಮತ್ತು ರೈತರು ಮತ್ತು ಕೂಲಿಕಾರ್ಮಿಕರ ದಾಳಿ, ಹತ್ಯೆ, ಹಿಂಸಾಚಾರ ಇವುಗಳಿಂದ  ಆಘಾತಕ್ಕೊಳಗಾದ ಬಂಗಾಳ ಸರ್ಕಾರ ತನ್ನ ಇತರೆ ಚಟುವಟಿಕೆಗಳನ್ನು ಬದಿಗೊತ್ತಿ ಹಲವು ತಿಂಗಳುಗಳ ಕಾಲ ಪ್ರತಿಭಟನೆಯನ್ನು ಹತೋಟಿಗೆ ತರಲು ಶ್ರಮಿಸಿತು. ರಾಜ್ಯದ ನಾನಾ ಭಾಗಗಳಿಂದ ಪೋಲೀಸ್ ತುಕಡಿಗಳನ್ನು ಸಿಲಿಗುರಿ ಜಿಲ್ಲೆಗೆ ರವಾನಿಸಿ 700 ಕ್ಕೂ ಹೆಚ್ಚು ಮಂದಿ ಚಳವಳಿಗಾರರನ್ನು ಬಂಧಿಸುವುದರ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು. ಆಗಸ್ಟ್ 10ರ ವೇಳೆಗೆ ಜಂಗಲ್‌ಸಂತಾಲ್ ಮತ್ತು ಕನುಸನ್ಯಾಲ್ ಇವರ ಬಂಧನದೊಂದಿಗೆ ಸಿಲಿಗುರಿಯ ರೈತರು ಮತ್ತು ಕೃಷಿಕೂಲಿ ಕಾರ್ಮಿಕರ ಪ್ರತಿಭಟನೆಯ ಮೊದಲ ಅಧ್ಯಾಯ ಪೂರ್ಣಗೊಂಡಿತು. ಚಳವಳಿಯನ್ನು ಮುಂದುವರಿಸುವ ದೃಷ್ಟಿಯಿಂದ ಆದಿವಾಸಿ ನಾಯಕ ಜಂಗಲ್‍ಸಂತಾಲ್ ಎರಡು ದಿನಗಳ ಅನ್ನ ನೀರು ಇಲ್ಲದೆ, ಪೊಲೀಸರ ಕಣ್ತಪ್ಪಿಸಿ ಕಾಡಿನೆಲ್ಲೆಡೆ ಅಲೆದಾಡಿ ಕೊನೆಗೆ ಶರಣಾಗತನಾಗಿದ್ದ. ನಕ್ಸಲ್‍ಬಾರಿಯ ಈ ಹೋರಾಟ ಅಂದಿನ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

(ಮುಂದುವರಿಯುವುದು)