Daily Archives: April 27, 2012

ದಲಿತ ಸಂಚಿಕೆ: ಓದುಗರ ವಿಶ್ವಾಸವನ್ನು ‘ರಿಫ್ರೆಶ್’ ಮಾಡಿಕೊಳ್ಳುವ ಪ್ರಯತ್ನ

– ಶಿವರಾಮ್ ಕೆಳಗೋಟೆ

ಕಳೆದ ಎರಡು ವಾರಗಳಿಂದ ವಿಶೇಷ ದಲಿತ ಸಂಚಿಕೆಗೆ ವ್ಯಕ್ತವಾದ ಪ್ರತಿಕ್ರಿಯೆಯಿಂದ ಪ್ರಜಾವಾಣಿ ಸಂಪಾದಕರು ಮತ್ತು ಹಿರಿಯ ಸಿಬ್ಬಂದಿ ವರ್ಗ ಸಹಜವಾಗಿಯೇ ಬೀಗುತ್ತಿದ್ದಾರೆ. ಅಂತಹದೊಂದು ಪ್ರಯತ್ನ ಇದುರವರೆಗೂ ಯಾರಿಂದಲೂ ಆಗದ ಕಾರಣ  ಆ ಸಂಚಿಕೆ ಮತ್ತು ಅದನ್ನು ಹೊರತರುವಲ್ಲಿ ದುಡಿದ ಮನಸ್ಸುಗಳು ಮೆಚ್ಚುಗೆಗೆ ಅರ್ಹ. ಫೇಸ್‌ಬುಕ್ ಭಾಷೆಯಲ್ಲಿ ಹೇಳುವುದಾದರೆ ಅವರ ಶ್ರಮ ಸಾವಿರಾರು ಲೈಕುಗಳಿಗೆ ಅರ್ಹ. (ಸಂಚಿಕೆ ಹೊಸ ಆಲೋಚನೆಗಳಿಗೆ ಮತ್ತಷ್ಟು ವೈವಿಧ್ಯತೆಗೆ ವೇದಿಕೆ ಆಗಬಹುದಿತ್ತು ಎನ್ನುವುದರ ಹೊರತಾಗಿಯೂ…)

ಆ ಮೂಲಕ ಪ್ರಜಾವಾಣಿ ಪತ್ರಿಕೆ ಇತ್ತೀಚೆಗಿನ ತನ್ನ ಕೆಲ ಧೋರಣೆಗಳಿಂದ ಓದುಗ ಸಮುದಾಯದ ಒಂದು ವರ್ಗದಿಂದ ಕಳೆದುಕೊಂಡಿದ್ದ ವಿಶ್ವಾಸವನ್ನು ‘ರಿಫ್ರೆಶ್’ ಮಾಡಿಕೊಂಡಿದೆ. ದಲಿತ ಸಂಚಿಕೆ ಹೊರತರುವ ಮೂಲಕ ಮೆಚ್ಚುಗೆ ಗಳಿಸಿದೆ ಪ್ರಜಾವಾಣಿ, ಕೆಲವೇ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನ ಸಂದರ್ಶನವನ್ನು ಬರೋಬ್ಬರಿ ಒಂದೂವರೆ ಪುಟ (ಮುಖಪುಟ ಸೇರಿದಂತೆ) ಪ್ರಕಟಿಸಿ ಸಂಪಾದಿಸಿದ್ದು ಟೀಕೆಗಳನ್ನು, ಮೂದಲಿಕೆಗಳನ್ನು ಎನ್ನುವುದನ್ನು ಮರೆಯಬಾರದು. ಆ ಸಂದರ್ಶನವನ್ನು ಓದಿ/ನೋಡಿ ಕೆಲ ಓದುಗರಾದರೂ ಪತ್ರಿಕೆ ಸಂಪಾದಕರ ಹಾಗೂ ಸಂದರ್ಶಕರ ವೈಯಕ್ತಿಕ ನಿಷ್ಠೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು ಎನ್ನುವುದು ಸುಳ್ಳಲ್ಲ. ಪತ್ರಿಕೆ ಸಿಬ್ಬಂದಿ ಪ್ರಜ್ಞಾವಂತ ಓದುಗರಿಗೆ ಫೋನ್ ಮಾಡಿ (ದಲಿತ ಸಂಚಿಕೆ ರೂಪುಗೊಂಡಾಗ ಮಾಡಿದಂತೆ) ಪ್ರತಿಕ್ರಿಯೆ ಕೇಳಿದ್ದರೆ ಅದು ವಿವರವಾಗಿ ಗೊತ್ತಾಗುತ್ತಿತ್ತು.

ಅಥವಾ ದಿನೇಶ ಅಮಿನ್ ಮಟ್ಟು ಅವರು ಆ ಸಂದರ್ಶನ ಸ್ವೀಕರಿಸಿದ ಪ್ರತಿಕ್ರಿಯೆಗಳನ್ನು ಮತ್ತು ಸಂದರ್ಶನದ ಹಿಂದೆ ಸಂಪಾದಕರಿಗಿದ್ದ ಉದ್ದೇಶಗಳನ್ನು ಸ್ಪಷ್ಟಪಡಿಸುವಂತಹ ಅಂಕಣವನ್ನು (ದಲಿತ ಸಂಚಿಕೆ ಕುರಿತು ಬರೆದಂತೆ) ಬರೆದಿದ್ದರೆ ಅನುಮಾನಗಳು ಪರಿಹಾರ ಆಗುತ್ತಿದ್ದವು. ಆದರೆ ಅವರು ಹಾಗೆ ಮಾಡಲಿಲ್ಲ. (ಬಹುಶಃ ಯಡಿಯೂರಪ್ಪನ ಸಂದರ್ಶನದಲ್ಲಿ ಅವರ ಪಾತ್ರ ಇರಲಿಲ್ಲವೇನೋ. ಅಥವಾ, ‘ಪತ್ರಿಕೆಯೊಂದಿಗಿನ ಜನರ ವಿಶ್ವಾಸವನ್ನು’ ಕಾಯ್ದುಕೊಂಡು ಬರುವಂತಹ ಕೆಲಸಗಳಲ್ಲಿ ಮಾತ್ರ ಅವರ ಪಾಲ್ಗೊಳ್ಳುವಿಕೆ ಇರುತ್ತದೇನೋ?)

ಇರುವ ನಾಲ್ಕೈದು ಪತ್ರಿಕೆಗಳಲ್ಲಿ  ಹೆಚ್ಚು ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯೇ, ಅನುಮಾನ ಬೇಡ. ಆದರೆ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೇ ಜನರ ವಿಶ್ವಾಸಕ್ಕೆ ಧಕ್ಕೆ ತಂದಾಗ? ಪ್ರಜಾವಾಣಿ ಯಡಿಯೂರಪ್ಪನವರ ಡಿ-ನೋಟಿಫಿಕೇಶನ್ ಕೃತ್ಯಗಳನ್ನು ವರದಿ ಮಾಡದೆ ವೃತ್ತಿ ಧರ್ಮ ಮರೆಯಿತು. ಪ್ರಜಾವಾಣಿ ಸಂಪಾದಕರು ಮತ್ತವರ ಸಿಬ್ಬಂದಿ ಡಿನೋಟಿಫಿಕೇಶನ್ ಪ್ರಕರಣಗಳನ್ನು ವರದಿ ಮಾಡುವಾಗ ಆ ಪತ್ರಿಕೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿತೆಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವೇ? ಡಿನೋಟಿಫಿಕೇಶನ್ ಪ್ರಕರಣ ಕುರಿತ ದಾಖಲೆಗಳು ಮೊದಲ ಬಾರಿಗೆ ತಲುಪಿದ ಕೆಲವೇ ಕೆಲವು ಪತ್ರಿಕಾ ಕಚೇರಿಗಳಲ್ಲಿ ಪ್ರಜಾವಾಣಿಯೂ ಒಂದು ಎಂದು ಇದೇ ವೃತ್ರಿಯಲ್ಲಿರುವ ಬಹುತೇಕರಿಗೆ ಗೊತ್ತು. ಬಹುಶಃ ಈ ಸಂಗತಿ ಪ್ರಜಾವಾಣಿ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ.

ದಲಿತರ ಸಂಖ್ಯೆ:

ದಲಿತ ಸಂಚಿಕೆ ಹೊರತಂದ ನಂತರ ಪ್ರಜಾವಾಣಿ ಜವಾಬ್ದಾರಿ ಹೆಚ್ಚಿದೆ. ಇನ್ನು ಮುಂದೆ ಪತ್ರಿಕೆಯ ನಡವಳಿಕೆಯನ್ನು ಓದುಗರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಸಂಪಾದಕ ಕೆ.ಎನ್. ಶಾಂತಕುಮಾರ್ ತಮ್ಮ ಬರಹದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. ಅವರ ಕಾಳಜಿಗೆ ಸಹಜವಾಗಿಯೇ ಮೆಚ್ಚುಗೆ ಇದೆ. ಅವರಾದರೂ ಪ್ರಜಾವಾಣಿಯಲ್ಲಿ ದಲಿತರ ಸಂಖ್ಯೆ ಎಷ್ಟಿದೆ ಎಂದು ಗುರುತಿಸಿ ಅವರ ಸಂಖ್ಯೆ ಹೆಚ್ಚಿಸಲು ಪ್ರಯತ್ನ ಮಾಡಬೇಕು. ಪತ್ರಿಕೋದ್ಯಮ ಕಾಲೇಜುಗಳಲ್ಲಿ ಕಲಿಯುತ್ತಿರುವ ದಲಿತ ಹುಡುಗ-ಹುಡುಗಿಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ, ಅವರು ಕೂಡಾ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಪತ್ರಿಕಾಲಯಗಳಲ್ಲಿ ಸೇರಿಸಿಕೊಳ್ಳಬೇಕು. ಪ್ರಜಾವಾಣಿ ಈ ನಿಟ್ಟಿನಲ್ಲಿ ಕೆಲಸ ಮಾಡಿ ಮೇಲ್ಪಂಕ್ತಿ ಹಾಕಬೇಕು.