Daily Archives: April 24, 2012

ಮೌಲ್ಯಗಳಿಲ್ಲದ ’ಮಲ್ಯ’


-ಬಿ. ಶ್ರೀಪಾದ ಭಟ್  


 

ಇವರ ಹೆಸರು “ವಿಜಯ್ ಮಲ್ಯ”. ವೃತ್ತಿಯಿಂದ ಇವರು ಹೆಂಡದ ಹಾಗೂ ನಾಗರೀಕ ವಿಮಾನಯಾನದ ಹಾಗೂ ರಾಸಾಯನಿಕ ಗೊಬ್ಬರ ತಯಾರಿಕೆಯಂತಹ ವಿಭಿನ್ನ ವೃತ್ತಿಗಳನ್ನು ನಡೆಸುತ್ತಿರುವ ನಮ್ಮ ಭಾರತ ದೇಶದ ಅತ್ಯಂತ ಪ್ರಮುಖ ಉದ್ಯಮಿ. ಬಹಿರ್ಮುಖಿ ಗುಣವುಳ್ಳ ಇವರು ಸಾರ್ವಜನಿಕವಾಗಿ ಮೋಜುಗಾರರು ಹಾಗೂ ಸೊಗಸುಗಾರರು. ಹಣ ಇವರಿಗೆ ಹುಣಿಸೇ ಬೀಜಕ್ಕೆ ಸಮ. ಸುಖದ ಲೋಲುಪ್ತತೆಯಲ್ಲಿ ಮೆರೆಯಲು ಇವರಿಗೆ ಯಾವುದೇ ಸಂಕೋಚವಿಲ್ಲ. ಎಲ್ಲವನ್ನೂ ಸಾರ್ವಜನಿಕರ ಸಮ್ಮುಖದಲ್ಲೇ ನಡೆಸುವ ವಿಜಯ್ ಮಲ್ಯ ಅವರಿಗೆ ಇದುವರೆಗೂ ತಮ್ಮ ಮೋಜುಗಾರಿಕೆಯನ್ನೂ, ದುಂದುಗಾರಿಕೆಯನ್ನೂ, ಬಂಡವಾಳಶಾಹೀ ದುರಹಂಕಾರವನ್ನೂ ಪ್ರದರ್ಶಿಸಿದಾಗ ಜನಸಾಮಾನ್ಯ ಭಾರತೀಯರು ಅನೇಕ ವೇಳೆ ಅಸಹ್ಯದಿಂದ ಮತ್ತು ಸಿನಿಕತನದಿಂದ, ಕೆಲವೊಮ್ಮೆ ಬೆರಗಿನಿಂದ, ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದರು. ಇದು ಹೆಚ್ಚೂ ಕಡಿಮೆ ವಿಜಯ್ ಮಲ್ಯನ ಖಾಸಗೀ ಸಂಬಂಧಗಳಾಗಿಯೂ ಮತ್ತು ಪೇಜ್‌ ಥ್ರೀ ಸುದ್ದಿಯ ಮಟ್ಟಕ್ಕೆ ಬಂದು ನಿಂತಿದ್ದರಿಂದ ಸಾರ್ವಜನಿಕವಾಗಿ ನೈತಿಕತೆಯ ಹಾಗೂ ಮೌಲ್ಯಗಳ ಮಾಪನದ ಪ್ರಶ್ನೆಯಾಗಿರಲಿಲ್ಲ. ಇದು ಕೇವಲ ವೈಯುಕ್ತಿಕ ಮಟ್ಟದ ಚಟಗಳಾಗಿ ಗೋಚರಿಸುತ್ತಿದ್ದವು.

ಆದರೆ ಇಂಡಿಯಾ ಜಾಗತೀಕರಣಗೊಂಡ ನಂತರ, ಸರ್ಕಾರೀ ಭ್ರಷ್ಟತೆಯ ನಿರಂತರ ಟೀಕೆಗಳು ಇದಕ್ಕೆ ಉತ್ತರವಾಗಿ ಖಾಸಗೀಕರಣದ ಹೊಸ ಹೊಸ ಆರ್ಥಿಕತೆಯ ವಾಮಮಾರ್ಗಗಳ, ಅಡ್ಡದಾರಿಗಳ ಚಟುವಟಿಕೆಗಳು ಅರ್ಥಾತ MOUಗಳು 90 ರ ದಶಕದ ಉತ್ತರಾರ್ಧದಲ್ಲಿ ಹಾಗೂ 21ನೇ ಶತಮಾನದ ಪ್ರಥಮ ದಶಕದಲ್ಲಿ ತನ್ನ ಕರಾಳ ಮುಖಗಳನ್ನು ತೆರೆದುಕೊಳ್ಳುವುದರ ಮೂಲಕ ವಿಜಯ್ ಮಲ್ಯ ತರಹದ ಪ್ಲೇಬಾಯ್ ವ್ಯಕ್ತಿತ್ವದ ಉದ್ಯಮಿಗಳಿಗೆ ತಮ್ಮ ಮೋಜಿಗೆ ಹೊಸ ರಹದಾರಿಯೇ ಸಿಕ್ಕಿದಂತಾಯಿತು. ಇವರು ಈ ಗೋಮುಖವ್ಯಾಘ್ರದ ಮುಖವಾಡದ ಕೃತ್ಯಗಳನ್ನು ಖಾಸಗೀಯಾಗಿ ನಡೆಸಿದ್ದರೆ ಇದಕ್ಕೆ ಅಂತಹ ಪ್ರಾಮುಖ್ಯತೆ ದೊರೆಯುತ್ತಿರಲಿಲ್ಲ. ಆದರೆ ಮಲ್ಯರಂತಹ ನರಿ ಬುದ್ದಿಯ ಉದ್ಯಮಿಗಳು ಕಳೆದ 15 ವರ್ಷಗಳಲ್ಲಿ ಮಾಧ್ಯಮಗಳ ಪ್ರಚಾರದ ಹಪಾಹಪಿತನವನ್ನು, ಸಿನಿಕತೆಯನ್ನು, ರೋಚಕತೆಯ ವೈಭವೀಕರಣದ ಕ್ರೌರ್ಯದ ಮುಖವಾಡಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಇಡೀ ಭಾರತಕ್ಕೆ ಮಣ್ಣು ಮುಕ್ಕಿಸಿದ್ದು ಮಾತ್ರ ಇಂದಿನ ಸುದ್ದಿ. ಅಬ್ಬರದ, ಕಿರುಚಾಟದ, ಅನೈತಿಕತೆಯ, ಜನವಿರೋಧಿ ಬಂಡವಾಳಶಾಹಿ ತತ್ವಗಳು, ನಿಯಮಗಳು ಕಳೆದ 15 ವರ್ಷಗಳಲ್ಲಿ ತನ್ನ ಮೇಲುಗೈ ಸಾಧಿಸಿದ್ದು ಇದರ ಜ್ವಲಂತ ಉದಾಹರಣೆ.

ಈ ವಿಜಯ್ ಮಲ್ಯ ಎನ್ನುವ ಉದ್ಯಮಿ ಮೋಜುಗಾರ ಮತ್ತು ಸೊಗಸುಗಾರ. ಕಳೆದ 80 ವರ್ಷಗಳಿಂದ ಖಾಸಗೀ ಉದ್ಯಮಿಗಳಾಗಿದ್ದೂ ಆ ಖಾಸಗೀಕರಣಕ್ಕೆ ಒಂದು ರೀತಿಯ ಮಾನವೀಯತೆಯನ್ನು, ಮೌಲ್ಯವನ್ನು, ಘನತೆಯನ್ನು, ಕೆಲವು ವೇಳೆ ಸಾಮಾಜಿಕ ಜವಾಬ್ದಾರಿಯನ್ನು ತಂದುಕೊಟ್ಟಂತಹ ಟಾಟಾ ಸಂಸ್ಥೆಗಳು ಸಹ ಹೆಚ್ಚೂ ಕಡಿಮೆ ಕಳೆದ ಈ 15 ವರ್ಷಗಳ ಖಾಸಗೀಕರಣದ ಅಮಾನವೀಯತೆಯ ಪಿತೂರಿಗೆ ಬಲಿಯಾದದ್ದೂ ಇಂದಿನ ದುರಂತ. ಇಂದಿನ ಆರ್ಥಿಕ ಗೋಜಲುಗಳಿಗೆ ನೇರ ಹೊಣೆಗಾರಿಕೆ ಕೇಂದ್ರ ಸರ್ಕಾರಗಳು, ತಲೆಬುಡವಿಲ್ಲದ ರಾಜ್ಯ ಸರ್ಕಾರಗಳು ಹಾಗೂ ಈ ಖಾಸಗೀಕರಣದ ದುರಂತಕ್ಕೆ ಸಕ್ಕರೆಯ ಸಿಹಿಲೇಪನ ಹಚ್ಚಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಹುಪಾಲು ಮಾಧ್ಯಮಗಳು ಹೊರಬೇಕು. ಇಂದು ಸುದ್ದಿಯಲ್ಲಿರುವ, ಬಹು ಚರ್ಚಿತ ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ವಿಮಾನಯಾನದ ದುರ್ಗತಿಯನ್ನು ಅದು ಪ್ರಾರಂಭಗೊಂಡ 2005 ರಲ್ಲೇ ತನ್ನ ಒಡಲಲ್ಲಿ ಹೊತ್ತುಕೊಂಡು ಬಂದಿತ್ತು. ನಾಗರೀಕ ವಿಮಾನಯಾನದಲ್ಲಿ ಲವಲೇಶವೂ ಅನುಭವವಿಲ್ಲದ ಈ ವಿಜಯ್ ಮಲ್ಯ ಕೇವಲ ತನ್ನ ಮೋಜಿಗಾಗಿ ಈ ಕಿಂಗ್‌ಫಿಷರ್ ನಾಗರೀಕ ವಿಮಾನಯಾನವನ್ನು ಬಳಸಿಸಿಕೊಂಡ. ಈ ವಿಮಾನಯಾನದ ಉದ್ಯಮದ ಮೂಲಕ ಈ ಜಾಗತೀಕರಣದ ಲಾಭಕೋರತನವನ್ನು ತಾನು ಸಹ ಹೊಡೆದುಕೊಳ್ಳಬಹುದೆಂದು ಯೋಜಿಸಿದ ವಿಜಯ್ ಮಲ್ಯ ಮತ್ತು ಇದಕ್ಕೆ ಕಣ್ಣು ಮುಚ್ಚಿಕೊಂಡು ಪೋಷಿಸಿದ ಕೇಂದ್ರ ಸರ್ಕಾರ ಇಂದು ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿವೆ.

2005 ರಿಂದ ಅಂದರೆ ಶುರುವಾದ ದಿನದಿಂದ ಇಲ್ಲಿಯವೆರೆಗೂ ಈ ಕಿಂಗ್‌ಫಿಷರ್  ವಿಮಾನಯಾನ ನಷ್ಟದಲ್ಲಿತ್ತು. ಆದರೆ ಈ ವಿಜಯ್ ಮಲ್ಯರ ಸಲುವಾಗಿ ತನ್ನ ನೀತಿ ನಿಯಮಾವಳಿಗಳನ್ನು ಸಡಲಿಸಿ ಸಾರ್ವಜನಿಕರ ರೊಕ್ಕವನ್ನು ಬಳಸಿಕೊಂಡು ಈ ಒಂದು ಖಾಸಗೀ ಉದ್ಯಮ ಸಂಪೂರ್ಣ ದಿವಾಳಿಯಾಗಲು ಕೇಂದ್ರ ಸರ್ಕಾರದ ರಾಜಕೀಯ ರಂಗ ಮೂಲ ಕಾರಣಕರ್ತರು. ಇವರಿಗೆ ಸಹಕಾರ ನೀಡಿದವರು ಈ ಕಿಂಗ್‌ಫಿಷರ್ ವಿಮಾನಯಾನದ ನಾಮನಿರ್ದೇಶಿತ ನಿರ್ದೇಶಕರು, ನಾಮಕಾವಸ್ತೆಯ ಛೇರ್‍ಮನ್, ನಿಗಾ ಇಡುವಲ್ಲಿ ಸೋತಂತಹ ಷೇರು ಮಾರುಕಟ್ಟೆಯ ನಿಯಂತ್ರಣಾಧಿಕಾರಿಗಳು, ಅತ್ಯಂತ ನಷ್ಟದಲ್ಲಿ ನಡೆಯುತ್ತಿದ್ದರೂ ಸಾರ್ವಜನಿಕರ ಹಣವನ್ನು ದುರಪಯೋಗಪಡೆಸಿಕೊಂಡು, ಹಣಕಾಸಿನ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆತೂರಿದ ಈ ಒಂದು ಪ್ರಮುಖ ಸಂಸ್ಥೆಯನ್ನು ಹತೋಟಿಗೆ ತರಲಾರದೆ ಪಲಾಯನಗೈದ SEBI ಮತ್ತು ಷೇರು ಪೇಟೆಯ ಉದ್ಯಮ. ಶುರುವಾದ ದಿನದಿಂದ ಕಿಂಗ್‌ಫಿಷರ್ ವಿಮಾನಯಾನ ಆರ್ಥಿಕ ದುಸ್ಥಿತಿಯಲ್ಲಿದ್ದರೂ ಈ ಸಂಸ್ಥೆಗೆ ಸರ್ಕಾರದ ನಿಯಮಾವಳಿಗಳನ್ನೆಲ್ಲ ಅನುಸರಿಸದೆ ತನಗೆ ಬೇಕಾದ ಇಂಧನವನ್ನು ನೇರವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ ಕೇಂದ್ರದ ವಿಮಾನಯಾನ ಇಲಾಖೆಯ ವೈಫಲ್ಯಗಳು ಇಂದು ದಾಖಲೆಗೊಂಡಿವೆ. ಇಂತಹ ಸಂದರ್ಭದಲ್ಲಿ ಈ ನಷ್ಟದಲ್ಲಿರುವ ಸಂಸ್ಥೆಗೆ ಷೇರುಗಳ ಮೂಲಕ ತಮ್ಮ ಹಣ ತೊಡಗಿಸಿದಂತಹ ಭಾರತದ ನಾಗರೀಕರಿಗೆ ಇದರ ದೌರ್ಬಲ್ಯಗಳನ್ನು ಹಾಗೂ ದಿಕ್ಕೆಟ್ಟ ಹಣಕಾಸಿನ ಪರಿಸ್ಥಿತಿಯನ್ನು ತಮಗಿರುವ ಅಧಿಕಾರ ಹಾಗೂ ಜವಬ್ದಾರಿಯನ್ನು (ಇದಕ್ಕಾಗಿಯೇ ಇವರಿಗೆ ಬಲು ದೊಡ್ಡ ಸಂಬಳ ನೀಡಲಾಗುತ್ತಿದೆ) ಬಳಸಿಕೊಂಡು ಸಾರ್ವನಿಕವಾಗಿ ಹಾಗೂ ಅಧಿಕೃತವಾಗಿ ಬಹಿರಂಗಪಡಿಸಬೇಕಾಗಿದ್ದ ನಾಮನಿರ್ದೇಶಿತ ನಿರ್ದೇಶಕರು ಹಾಗೂ ಇದರ ಛೇರ್‍ಮನ್  ಆರೋಪಿ ಸ್ಥಾನದ ಮೊದಲ ಸ್ಥಾನದಲ್ಲಿದ್ದಾರೆ. ಇವರ ಈ ಕರ್ತವ್ಯಲೋಪದ ಆರೋಪಕ್ಕೆ ತನಿಖೆಯಾಗಬೇಕಾಗಿದೆ. ಏಕೆಂದರೆ ಕಿಂಗ್‌ಫಿಷರ್  ವಿಮಾನಯಾನದಲ್ಲಿ ಸಾರ್ವಜನಿಕರ ಹಣವೂ ಬಳಸಿಕೊಳ್ಳಲಾಗಿದೆ.

ಇಂದು 6500 ಕೋಟಿ ರೂಪಾಯಿಗಳಷ್ಟು ನಷ್ಟದಲ್ಲಿರುವ ಈ ಸಂಸ್ಥೆ ಪಾವತಿಸಬೇಕಾದ 7500 ಕೋಟಿ ಸಾಲದ ಮೇಲಿನ ಬಡ್ಡಿಯ ಮೊತ್ತವೇ ಸಾವಿರ ಕೋಟಿಗಳಾಗುತ್ತದೆ. ಇನ್ನು ಅಸಲು ಮೊತ್ತದ ಪಾವತಿ ಬೇರೆ ಬಾಕಿ ಇದೆ !!! ಅಲ್ಲದೆ ಸಂಬಂಧಪಟ್ಟ ಅನೇಕ ಸರ್ಕಾರಿ ಸಂಸ್ಥೆಗಳಿಗೆ, ಕೇಂದ್ರದ ವಿಮಾನ ಖಾತೆಯಡಿ ಬರುವ ವಿಮಾನ ನಿಲ್ದಾಣದ ಕಾರ್ಯಕ್ರಿಯೆಗೆ, ಇಂಧನ ಪೂರೈಸುವ ಉದ್ದಿಮೆಗಳಿಗೆ ಈ ಸಂಸ್ಥೆ ತನ್ನ ಕೋಟ್ಯಾಂತರ ಮೊತ್ತದ ಬಾಕೀ ಹಣವನ್ನು ಪಾವತಿಸಬೇಕಾಗಿದೆ. ಇವೆಲ್ಲವೂ ಸಾರ್ವಜನಿಕ ಸಂಸ್ಥೆಗಳು. ಇದಲ್ಲದೆ ಈ ವಿಜಯ್ ಮಲ್ಯ ಅವರು ಸಾರ್ವಜನಿಕರಿಂದ ವಸೂಲಿ ಮಾಡಿದ ಕೋಟ್ಯಾಂತರ ಮೊತ್ತದ ಸೇವಾ ತೆರಿಗೆಯ ಹಣವನ್ನು ಸಹ ಸರ್ಕಾರಕ್ಕೆ ಪಾವತಿಸಿಲ್ಲ !!! ನೋಡಿ ಸರ್ಕಾರಿ ಸಂಸ್ಥೆಗಳನ್ನು ದೂಷಿಸಿ ಖಾಸಗೀಕರಣದ ಅಮಲಿನಲ್ಲಿರುವ ಈ ವ್ಯವಸ್ಥೆಯ ದುರಂತದ ಅಧ್ಯಾಯಗಳು. ಮೇಲುನೋಟಕ್ಕೇ ಇಂತಹ ಸಂಸ್ಥೆಯನ್ನು BIFR ಅಧಿ ನಿಯಮದಡಿ ರೋಗಗ್ರಸ್ಥ ಸಂಸ್ಥೆಯೆಂದೇ ಪರಿಗಣಿಸಿ ಅದರ ಎಲ್ಲಾ ಸಾರ್ವಜನಿಕ ಆಸ್ಥಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆದರೆ ನಮ್ಮ ಭಾರತದಲ್ಲಿ ಇದು ಮುಟ್ಟುಗೋಲಿಗೆ ಬದಲಾಗಿ ಸಹಾಯ ಹಸ್ತದ ನೆರವಿನ ರೂಪ ತಾಳಿಕೊಳ್ಳುತ್ತದೆ. ಈ ಎಲ್ಲದಕ್ಕೂ ಕಾರಣರಾದ ವಿಜಯ್ ಮಲ್ಯ ಅನುಕಂಪೆಗೆ ಪಾತ್ರರಾಗುತ್ತಾರೆ.

ಇಲ್ಲಿ ಮಾರುಕಟ್ಟೆಯಲ್ಲಿ ಕಾವಲು ಪಡೆಗಳಂತೆ ಕಾರ್ಯನಿರ್ವಹಿಸಬೇಕಿದ್ದ ಹಾಗೂ ನಷ್ಟದಲ್ಲಿರುವಂತಹ ಉದ್ಯಮಗಳ ವ್ಯವಹಾರವನ್ನು ನಿಷ್ಪಕ್ಷಪಾತವಾಗಿ ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾದ SEBI ಮತ್ತು ಷೇರು ಪೇಟೆಯ ಉದ್ಯಮದ ಸೋಲು ಇಡೀ ವ್ಯವಹಾರದಲ್ಲಿ ಮೂಕಪ್ರೇಕ್ಷಕರಂತೆ ನಿದ್ರಿಸಿದ್ದು ಇಲ್ಲಿ ಎರಡನೇ ತಪ್ಪಿತಸ್ಥರು. ದಿನಕ್ಕೆ ಕೇವಲ 30 ರೂಪಾಯಿಯ ವರಮಾನವಿರುವ ಭಾರತದ ಬಡವರ ಹಾಗೂ ರೈತರ ಅತ್ಯಂತ ಕ್ಷುಲ್ಲಕ ಸಾಲವನ್ನೂ ಅವರ ಸಾಮಾನುಗಳನ್ನು ಹಾರಜು ಹಾಕುವಷ್ಟರ ಮಟ್ಟಿಗೆ ಕ್ರೂರತೆಯನ್ನು, ವ್ಯವಹಾರ ಬದ್ಧತೆಯನ್ನು, ನೀತಿ ನಿಯಮಾವಳಿಗಳನ್ನು ಪ್ರದರ್ಶಿಸುವ ನಮ್ಮ ಸರ್ಕಾರಿ ಒಡೆತನದ ಬ್ಯಾಂಕುಗಳು ಕಳೆದ 7 ವರ್ಷಗಳಿಂದ ಈ ಕಿಂಗ್‌ಫಿಷರ್ ವಿಮಾನಯಾನ ಆರ್ಥಿಕ ದುಸ್ಥಿತಿಯಲ್ಲಿದ್ದರೂ ಈ ಆರ್ಥಿಕ ದುರ್ಬಳಕೆಯಲ್ಲಿ ತಮ್ಮ ಹಣ ಪೋಲಾಗಿದ್ದನ್ನು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರೂ ಸಹ ಎಚ್ಚರಗೊಳ್ಳದೆ ನಿದ್ರಿಸಿದೆ. ಇದು ಇಲ್ಲಿ ಮೂರನೇ ತಪ್ಪಿತಸ್ಥರು. ಇಲ್ಲಿ ತಮ್ಮ ಕೋಟ್ಯಾಂತರ ಹಣವನ್ನು ದುರುಪಯೋಗಪಡೆಸಿಕೊಂಡ ಈ ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡು ಅದರ ಒಡೆಯ ವಿಜಯ್ ಮಲ್ಯರ ಮೇಲೆ ಮೊಕದ್ದಮೆ ಹೂಡಬೇಕಾಗಿದ್ದ ನಮ್ಮ ಸರ್ಕಾರಿ ಬ್ಯಾಂಕುಗಳು ಬದಲಾಗಿ ಮಾಡಿದ್ದು ಮತ್ತಷ್ಟು ಕೋಟ್ಯಾಂತರ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು. ಇದು ಬ್ರಹ್ಮಾಂಡ ಭ್ರಷ್ಟಾಚಾರ ಅಲ್ಲವೇ?

(ಆಧಾರ ಡೆಕ್ಕನ್ ಹೆರಾಲ್ಡ್ ನಲ್ಲಿನ ಲೇಖನ. ಲೇಖಕ ಎನ್.ವಿ. ಕೃಷ್ಣಕುಮಾರ) ಇಲ್ಲಿ ಈ ವಿಜಯ್ ಮಲ್ಯ ತಮ್ಮ ಹೆಂಡ ಹಾಗೂ ರಾಸಾಯನಿಕ ಗೊಬ್ಬರಗಳ ಇತರ ಉದ್ದಿಮೆಗಳಿಂದ ಹಣವನ್ನು ತಂದು ಈ ನಷ್ಟದಲ್ಲಿರುವ ವಿಮಾನಯಾನದಲ್ಲಿ ಮತ್ತೆ ತೊಡಗಿಸಬಹುದಾಗಿತ್ತು. ಆದರೆ ಹಾಗೆ ಮಾಡದೆ ಆತ್ಮವಂಚನೆಯ ಈ ಮಲ್ಯ ಮತ್ತೆ ಸಾರ್ವಜನಿಕ ಹಣಕ್ಕೆ ಕೈಚಾಚುತ್ತಾನೆ. ಇದು ದೇಶದ್ರೋಹವಲ್ಲದೇ ಮತ್ತಿನ್ನೇನು? ಇವೆಲ್ಲ ಭ್ರಹ್ಮಾಂಡ ಭ್ರಷ್ಟತೆ ತನ್ನ ಕಣ್ಣಳತೆಯಲ್ಲಿ ನಡೆದರೂ ಇದರ ವಿರುದ್ಧ ಕಾರ್ಯಪ್ರವೃತ್ತರಾಗದ ಕೇಂದ್ರದ ನಾಗರೀಕ ವಿಮಾನಯಾನ ಸಚಿವಾಲಯ ಮೂಲಭೂತ ಹೊಣೆಯನ್ನು ಹೊರಬೇಕಾಗುತ್ತದೆ. ಇಷ್ಟರಲ್ಲಾಗಲೇ ಈ ವಿಜಯ್ ಮಲ್ಯ ಹಾಗೂ ಅವರ ಒಡೆತನದ ಕಿಂಗ್‌ಫಿಷರ್ ವಿಮಾನಯಾನದ ವಿರುದ್ಧ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿ ಮೊಕದ್ದಮೆಯನ್ನು ಚಲಾಯಿಸಬೇಕಾಗಿದ್ದ ಕೇಂದ್ರದ ಖಾತೆ ಇನ್ನೂ ಕಣ್ಣಾಮುಚ್ಚಾಲೆಯಾಡುತ್ತಿದೆ. ಇದು ಖಾಸಗೀಕರಣದ ಅಸ್ಪಷ್ಟ ಹಾಗೂ ದೂರಗಾಮಿ ಪರಿಣಾಮಗಳ ತಿಳುವಳಿಕೆಯಿಲ್ಲದೆ ಅತ್ಯಂತ ರೋಚಕತೆಯಿಂದ ಹಾಗೂ ರೋಮಾಂಚನಗೊಂಡು ವರ್ತಿಸಿದುದರ ದುರಂತ ಇದು.

ಇನ್ನೊಂದು ಬದಿಯಲ್ಲಿ ಅರುಂಧತಿ ರಾಯ್‌ರಂತಹ ಲೇಖಕಿಯರು ಖಾಸಗೀಕರಣದ ವಿರುದ್ಧದ ಉಗ್ರವಾದ ವಿರೋಧಿನೀತಿಯನ್ನು ತಲೆಗೇರಿಸಿಕೊಂಡು ಆ ಚಿಂತನೆಗಳ, ಹಳಹಳಿಕೆಗಳ ರೋಚಕತೆಗೆ ಹಾಗೂ ಈ ರೋಚಕತೆ  ತಂದುಕೊಡುವ ಜನಪ್ರಿಯತೆಗೆ ಬಲಿಯಾಗಿದ್ದಾರೆ. ಅದ್ಭುತವಾಗಿ ತಲೆದೂಗಿಸುವಂತೆ ಆಕರ್ಷಕವಾಗಿ ಬರೆಯುವ ನೈಪುಣ್ಯತೆ ಇರುವ ಅರುಂಧತಿ ರಾಯ್ ಅವರ ಪ್ರಕಾರ ಇಂದು ಆದಿವಾಸಿಗಳ ದುರಂತಕ್ಕೆ, ದೇಶದ ಸಂಪಲ್ಮೂಲಗಳ ಕಣ್ಮರೆಗೆ ಸಂಪೂರ್ಣವಾಗಿ ಖಾಸಗೀಕರಣವನ್ನು, ಖಾಸಗೀ ಒಡೆತನದ ಉದ್ದಿಮೆದಾರರನ್ನೂ ಹೊಣೆಯಾಗಿಸುತ್ತಾ ಇದಕ್ಕೆ ಪೂರಕವಾಗಿ ಮಾಧ್ಯಮಗಳು, ರಾಜಕೀಯ ಪಕ್ಷಗಳು, ಸ್ವಾಯುತ್ತ ಸಂಸ್ಥೆಗಳು, ಪರಿಸರವಾದಿಗಳು, ಖಾಸಗೀ ಸಂಸ್ಥೆಗಳು, ರಾಜಕಾರಣಿಗಳು ಹೀಗೆ ಜಗತ್ತಿನಲ್ಲಿ ಬದುಕುವ ಎಲ್ಲಾ ಜೀವಚರಗಳನ್ನು ದೂಷಿಸುತ್ತಾ ಕಡೆಗೆ ಈ ಮಾವೋವಾದಿಗಳ ಹತ್ತಿರ ಬಂದು ಸುಮ್ಮನೆ ನಿಂತು ಬಿಡುತ್ತಾರೆ. ಈ ಅರುಂಧತಿ ರಾಯ್‌ರಂತಹ ಮಾರ್ಕ್ಸ್ ವಾದಿಗಳಿಗೆ ಬಂಡವಾಳಶಾಹಿಯ ಅರ್ಥ ಹಾಗೂ ಅದರ ಸ್ವರೂಪವನ್ನು ಬಹು ಸೀಮಿತಾರ್ಥದಲ್ಲಿ ಕಂಡುಕೊಂಡುಬಿಡುವ ಚಟವೇ ಇಲ್ಲಿನ ಈ ಗೋಜಲುಗಳಿಗೆ ಹಾಗೂ ಎಡಪಂಥೀಯ ಚಿಂತನೆಗಳ ಹೆಸರಿನಲ್ಲಿ ಸುಲಭವಾಗಿ ಹಾದಿ ತಪ್ಪುವ ರೋಚಕತೆಗೆ ದಾರಿ ಮಾಡಿಕೊಡುತ್ತದೆ.

ಇವರೆಲ್ಲರ ಪ್ರಕಾರ ಬಂಡವಾಳಶಾಹಿಗಳೆಂದರೆ ಯಾವನೋ ಶ್ರೀಮಂತನೊಬ್ಬ ತನ್ನಲ್ಲಿರುವ ದುಡ್ಡಿನಿಂದ (ಅದು ಜನರ ದುಡ್ಡು) ಒಂದು ಎಕರೆ ಜಾಗವನ್ನು (ಅದು ಜನರ ಜಾಗ) ಖರೀದಿಸಿ ಅಲ್ಲಿ ಒಂದು ಕಾರ್ಖಾನೆಯನ್ನು ಕಟ್ಟಿಸಿ (ಅಲ್ಲಿ ದುಡಿಯುವ ವರ್ಗ) ಕೆಲವು ಯಂತ್ರಗಳನ್ನು ತಂದು ಅದಕ್ಕೆ ಆಪರೇಟರನ್ನು ನೇಮಿಸಿಕೊಂಡು ಕಾರ್ಖಾನೆಯನ್ನು ಪ್ರಾರಂಭಿಸಿದ ತಕ್ಷಣ ಅಲ್ಲಿ ಮಾಲೀಕ, ಕಾರ್ಮಿಕ, ಹಾಗೂ ಯಂತ್ರಗಳೆಂಬ ಒಂದು ಬೂಜ್ವ ವ್ಯವಸ್ಥೆ ನಿರ್ಮಾಣಗೊಳ್ಳುತ್ತದೆ. ಸರಿ ಇನ್ನು ಶೋಷಣೆ ಶುರು. ಇದು ಅತ್ಯಂತ ಸರಳೀಕೃತಗೊಂಡ, ನಿಂತನೀರಾದ ಕಳೆದ 50 ವರ್ಷಗಳಲ್ಲಿ ಚಲನಶೀಲತೆಯನ್ನು ಕಳೆದುಕೊಂಡ ಚಿಂತನೆಯ ಮಾದರಿ. ಇದಕ್ಕೆ ನಾವು ಯಾವುದೇ ಘನ ಪಂಡಿತರ ಚಿಂತನೆಗಳ ವಾಕ್ಯಗಳನ್ನು, ಸಂಸ್ಕೃತಿ ಚಿಂತನೆಗಳನ್ನು, ಬೌದ್ಧಿಕತೆಯ ಕಸರತ್ತುಗಳನ್ನು ಜೋಡಿಸುತ್ತಾ ಹೋದರೂ ಕಡೆಗೆ ಬಂದು ನಿಲ್ಲುವುದು ಮರಳಿ ಅಲ್ಲಿಗೆ. ಈ ಬೂಜ್ವಾ ಜಗತ್ತಿನ ಸುತ್ತಾಟದಲ್ಲಿ ಭ್ರಷ್ಟತೆ ಸೇರಿಕೊಂಡು ಮತ್ತೊಂದು ಬಗೆಯ ಕಗ್ಗಂಟನ್ನು ಹುಟ್ಟು ಹಾಕುತ್ತದೆ. ಆದರೆ ನಾವು ಹೋಟೆಲಿಗೆ ಹೋಗಿ ಅಲ್ಲಿನ ವೇಟರನಿಗೆ ಏಕವಚನದಲ್ಲಿ ಕರೆದು ತಿಂಡಿ ಆರ್ಡರ ಮಾಡುವುದೂ ಸಹ ಬೂಜ್ವ ವರ್ತನೆ, ಶೂ ಪಾಲೀಶು ಮಾಡಿಸಿಕೊಳ್ಳುವುದು ಸಹ ಬೂಜ್ವ ವರ್ತನೆ, ಕೆಲಸದ ಆಳನ್ನು ಇಟ್ಟುಕೊಳ್ಳುವುದೂ ಸಹ ಬೂಜ್ವ ವರ್ತನೆ, ಹೀಗೆ ದಿನ ನಿತ್ಯದ ನಮ್ಮ ವರ್ತನೆಗಳನ್ನು ಸಹ ಶೋಷಣೆಗೆ ಉದಾಹರಿಸಿ ಹಾಸ್ಯಾಸ್ಪದರಾಗಬಹುದು ಎಂದು ಅರುಂಧತಿ ರಾಯ್ ತರದ ಚಿಂತಕರಿಗೆ ಇಂದಿಗೂ ಅರ್ಥವಾದಂತಿಲ್ಲ.

ರೋಚಕತೆಯ ತಮ್ಮ ಎಡಪಂಥೀಯ ಚಿಂತನೆಗಳಿಗೆ ಗಾಂಧೀ, ಲೋಹಿಯಾ ಹಾಗೂ ಅಂಬೇಡ್ಕರರನ್ನು ಒಳಗೊಳ್ಳಲು ನಿರಾಕರಿಸುವ ಅರುಂಧತಿ ರಾಯ್, ಈ ತ್ರಿವಳಿ ಚಿಂತಕರನ್ನು ಒಳಗೊಳ್ಳದೆ ಇಂದಿನ ಸಾಮಾಜಿಕ ಹಾಗೂ ರಾಜಕೀಯ ದುರಂತಕ್ಕೆ ಯಾವುದೇ ಉತ್ತರ ದೊರೆಯದು ಎನ್ನುವ ವಾಸ್ತವತೆಯನ್ನು ಬೇಕೆಂತಲೇ ತಿರಸ್ಕರಿಸುತ್ತಾರೆ. ಇವರ ಪ್ರಕಾರ ಇವರೆಲ್ಲರಿಗೆ ಈಗ ಪ್ರೇಕ್ಷಕರಿಲ್ಲ. ಆದರೆ ಅರುಂಧತಿ ರಾಯ್ ತರಹದ ಚಿಂತಕರಿಗೆ ಪರಿಹಾರಗಳು ಬೇಕಿಲ್ಲ. ಕೇವಲ ರೋಮಾಂಚನಗೊಳಿಸುವ, ಅಸ್ಪಷ್ಟ ಚಿಂತನೆಗಳು, ಮಾತುಗಳು ಹಾಗೂ ಇವು ನಿರಂತರವಾಗಿ ತಂದುಕೊಡುವ ಜನಪ್ರಿಯತೆಗಳ ಮೇಲೆ ಇವರ ಕಣ್ಣು. ಅಷ್ಟೇ. ಏನಿಲ್ಲದಿದ್ದರೂ ಈ ವಿಜಯ್ ಮಲ್ಯರನ್ನು ಮೊಕದ್ದಮೆಗೆ ಒಳಪಡಿಸಿ, ಅವರ ಅವ್ಯವಹಾರಕ್ಕೆ ನ್ಯಾಯಾಂಗ ಶಿಕ್ಷೆ ಸಿಗುವವರೆಗೂ ನಾನು ವಿಮಾನಯಾನವನ್ನು ಮಾಡುವುದಿಲ್ಲ ಎನ್ನುವ ಎದೆಗಾರಿಕೆ ಬೇಕು, ಏನಿಲ್ಲದಿದ್ದರೂ ಬಹುಸಂಖ್ಯಾತ ಬಡವರಿಗೆ ಶುದ್ಧ ಕುಡಿಯುವ ನೀರು ಸಿಗುವವರೆಗೂ ನಾನು ಶುದ್ದೀಕರಿಸಿದ ನೀರನ್ನು ಕುಡಿಯುವುದಿಲ್ಲ ಎನ್ನುವ ಎದೆಗಾರಿಕೆ ಬೇಕು, ಏನಿಲ್ಲದಿದ್ದರೂ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಎರಡು ಹೊತ್ತಿನ ಊಟ ದೊರಕುವವರೆಗೂ ನಾನು ಒಂದು ಹೊತ್ತಿನ ಊಟ ಮಾಡುವುದಿಲ್ಲ ಎನ್ನುವ ಎದೆಗಾರಿಕೆ ಬೇಕು ಈ ಎದೆಗಾರಿಕೆ ಗಾಂಧೀ ಮಾರ್ಗದಿಂದ ಪಡೆಯಬಹುದು. ಆದರೆ ಅರುಂಧತಿ ರಾಯ್‌ಗೆ ಗಾಂಧೀ ಹೆಸರೇ ಅಪಥ್ಯ. ಇಲ್ಲಿ ಅರಂಧತಿ ರಾಯ್ ಒಂದು ನೆಪವಷ್ಟೇ. ಯಾವುದೇ ಜನಪರ, ಸಾಮಾಜಿಕ ನ್ಯಾಯದ ವಾಸ್ತವ ಮಾರ್ಗದ ಪರಿಹಾರಗಳಿಲ್ಲದ ಚಿಂತನೆಗಳಿಗೆ ಹಾಗೂ ಚಿಂತಕರಿಗೆ ಕೂಡ ಇದು ಅನ್ವಯಿಸುತ್ತದೆ.

ಬಸವ ಜಯಂತಿ ಶ್ರಮಸಂಸ್ಕೃತಿಯ ಸಂಕೇತವಾಗಬೇಕು


-ಡಾ.ಎಸ್.ಬಿ. ಜೋಗುರ


 

ಶ್ರಮವಿಭಜನೆ ಒಂದು ಸಾಂಸ್ಕೃತಿಕ ಸಂಗತಿಯಾಗಿ ಮಾರ್ಪಡುಗೊಳ್ಳುವ ಹೊತ್ತಿಗೆ ಸಾವಿರಾರು ವರ್ಷಗಳು ಗತಿಸಿದ್ದವು. ಆದಿಮ ಹಂತದ ತೀರಾ ಸರಳವಾದ ‘ಒಲೆಗೆ ಸ್ತ್ರೀ ಹೊಲಕ್ಕೆ ಪುರುಷ’ ಎನ್ನುವ ಲಿಂಗಭೇದವನ್ನಾಧರಿಸಿದ ಶ್ರಮವಿಭಜನೆಯಿಂದ ಆರಂಭವಾಗಿ ಇಂದಿನ ಸಂಕೀರ್ಣ ಹಂತದ ಶ್ರಮವಿಭಜನೆಯವರೆಗೂ ಅದು ಬಂದು ತಲುಪಿರುವುದಿದೆ. ವೈದ್ಯಲೋಕ ಒಂದರಲ್ಲಿಯೆ ಮನುಷ್ಯನ ಪ್ರತಿಯೊಂದು ಅಂಗಕ್ಕೂ ಪ್ರತ್ಯೇಖವಾದ ವಿಭಾಗಗಳು ಹುಟ್ಟಿ, ಗಂಟಲಿನವರೆಗೆ ಅಧ್ಯಯನ ಮಾಡುವಾತ ಅಲ್ಲೇ ಎರಡಿಂಚು ಕೆಳಗಿರುವ ಹೃದಯದ ಅಧ್ಯಯನ ತನ್ನದಲ್ಲವೆಂದು ವಿಶೇಷೀಕೃತ ಕಾರ್ಯಕ್ಷೇತ್ರವನ್ನು ಪ್ರತಿಪಾದಿಸುವ ಕ್ರಮ ಆಧುನಿಕ ಸಂದರ್ಭದ ಶ್ರಮವಿಭಜನೆಯ ಸಂಕೀರ್ಣತೆಗೊಂದು ಸ್ಪಷ್ಟ ನಿದರ್ಶನ. ಅಷ್ಟಕ್ಕೂ ಶ್ರಮ ಎನ್ನುವದು ಮನುಷ್ಯನಿಗೆ ಮಾತ್ರ ಸೀಮಿತವಾದ ಒಂದು ದೈಹಿಕ ಮತ್ತು ಮಾನಸಿಕ ಕ್ರಿಯೆ. ಮನುಷ್ಯನನ್ನು ‘ಉತ್ಪಾದಕ ಜೀವಿ’ ಎಂದು ಗುರುತಿಸುವಲ್ಲಿಯೂ ಆತನ ಶ್ರಮ ಸಂಸ್ಕೃತಿಯೆ ಕಾರಣ. ಕೀಳು ಪ್ರಾಣಿಗಳು ಸಂಪೂರ್ಣವಾಗಿ ನಿಸರ್ಗವನ್ನು ಅವಲಂಬಸಿ, ತಮ್ಮ ಸಹಜಪ್ರವೃತ್ತಿಗಳ ನಿರ್ದೇಶನದಂತೆ ಕಾರ್ಯವೆಸಗಿದರೆ ಮನುಷ್ಯ ಸಹಜ ಪ್ರವೃತ್ತಿಯ ಜೊತೆಜೊತೆಯಲ್ಲಿ ಮನ:ಪ್ರವೃತ್ತಿಗಳ ಅಡಿಯಲ್ಲಿಯೂ ವರ್ತಿಸಬೇಕಾಗುತ್ತದೆ. ಮನುಷ್ಯನ ಮಹತಿ ಇರುವುದೇ ಆತನ ಶ್ರಮಜೀವನದಲ್ಲಿ.

ಇಂಗ್ಲಂಡ್ ಮೂಲದ ಥಾಮಸ್ ಕಾರ್ಲ್ ‘ವರ್ಕ್ ಈಸ್ ವರ್ಷಿಪ್’ ಎನ್ನುವ ಪರಿಕಲ್ಪನೆಯನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರೆ ಅವನಿಗಿಂತಲೂ 600 ವರ್ಷಗಳ ಮುಂಚೆಯೆ ಕರುನಾಡಿನ ಶರಣ ಸಂಸ್ಕೃತಿ, ಅದರಲ್ಲೂ ಮಹಾಮಾನವತಾವಾದಿ ಬಸವಣ್ಣನವರು ‘ಕಾಯಕವೇ ಕೈಲಾಸ’ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಿರುವದು ಮಾತ್ರವಲ್ಲದೇ ಅನುಸರಿಸಿ ಗುರು-ಲಿಂಗ-ಜಂಗಮ ಮೆಚ್ಚುವಂತೆ ಬದುಕಿ ತೋರಿಸಿರುವದಿತ್ತು. ದುಡಿಯದಿರುವ ಕಾಯ ಕೊಳೆತ ಶರೀರ, ದಂಡಪಿಂಡಗಳಾಗಿ ಬದುಕುವದನ್ನು, ಪರರನ್ನು ಹೆದರಿಸಿ ಬೆದರಿಸಿ ಹೊಟ್ಟೆಹೊರೆಯುವವರನ್ನು ಖಡಾ ಖಂಡಿತವಾಗಿ ಖಂಡಿಸಿದ ಬಸವಣ್ಣನವರು ಆತ ರಾಜಕುಮಾರನೇ ಆಗಿರಲಿ, ಇಲ್ಲವೇ ದಾಸಿಯ ಪುತ್ರನೇ ಆಗಿರಲಿ ಇಬ್ಬರೂ ದುಡಿಯಲೇಬೇಕು. ಲಕ್ಕಮ್ಮ ನಂಥಾ ಮಹಿಳೆ ‘ಈಸಕ್ಕಿ ಆಸೆ ನಿನಗೇಕೆ ಮಾರಾಯಾ?’ ಎಂದು ಗಂಡನಿಗೆ ಕೇಳುವ ಮೂಲಕ ಆಗ ಹಪಾಪಿತನದ ಹಂಗಿರಲಿಲ್ಲ ಎನ್ನುವದು ವಿಧಿತವಾಗುತ್ತದೆ. ಮಿಗುತಾಯವನ್ನು ಮೌಲ್ಯವೆಂದು ಕರೆದು ಅದನ್ನು ಸಮಾಜದ ದಾಸೋಹಕ್ಕೆ ಸಮರ್ಪಿಸಬೇಕು ಎನ್ನುವ ಅವರ ವಿಚಾರದಲ್ಲಿ ಅಪ್ಪಟ ಸಮಾಜವಾದದ ಹೊಳಹು ಇದೆ. ‘ಕೃಷಿ ಕೃತ್ಯ ಕಾಯಕವಾದಡೇನು ತನು ಮನ ಬಳಲಿಸಿ ದಾಸೋಹ ಮಾಡುವ ಪರಮ ಸದ್ಭಕ್ತನ ಪಾದವ ತೋರಯ್ಯಾ ಎನಗೆ’ ಎನ್ನುವಲ್ಲಿ ಮತ್ತು ‘ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು’ ಎನ್ನುವ ವಿಚಾರದಲ್ಲಿ ಕಾಯಕದ ಪ್ರತಿಪಾದನೆಯ ಆಗ್ರಹ ಬಲವಾಗಿ ಎದ್ದು ತೋರುತ್ತದೆ. ಬಸವಣ್ಣನವರ ಕಾಯಕತತ್ವದಲ್ಲಿ ರೋಗಗ್ರಸ್ಥ ಸಮಾಜಕ್ಕೆ ಒಂದು ಸೂಕ್ತವಾದ ಚಿಕಿತ್ಸೆಯಿದೆ. ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳು ವ್ಯಷ್ಟಿ ಹಾಗೂ ಸಮಷ್ಟಿ ಎರಡನ್ನೂ ಆರೋಗ್ಯದಿಂದಿಡಬಲ್ಲವು. ಮಾರ್ಕ್ಸ್ ಹೇಳುವ ನಮಿಸುವ ಕೈಗಳಿಗಿಂತಲೂ ದುಡಿಯುವ ಕೈಗಳು ಬಲಿಷ್ಟ ಎನ್ನುವ ವಿಚಾರವನ್ನು ಬಸವಣ್ಣನವರು ಮಾರ್ಕ್ಸ್‌ಗಿಂತಾ ಮುಂಚೆಯೆ ಪ್ರತಿಪಾದಿಸಿರುವವರು.

‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದ ಬಸವಣ್ಣನವರ ಮೂರ್ತಿಗಳಿಗೆ ಇಂದು ಲೆಕ್ಕವಿಲ್ಲ. ಇದು ದೀಪದ ಕೆಳಗಡೆಯ ಕತ್ತಲಿನ ಪ್ರತೀಕ. ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವವರ ಪಾಲಿಗೆ ನೊಸಲ ವಿಭೂತಿಯಷ್ಟೇ ಸಾಕ್ಷಿಯಾದದ್ದು ಇನ್ನೊಂದು ದುರಂತ. ನಡಾವಳಿ ಮತ್ತು ನುಡಿವಳಿ ಎರಡರಲ್ಲೂ ಒಂದಾಗದಿದ್ದರೆ ಕೂಡಲಸಂಗಯ್ಯ ಮೆಚ್ಚನು ಎಂದ ಬಸವಣ್ಣನವರು ಮತ್ತು ಅವರ ತತ್ವಗಳು ಬಳಕೆದಾರರ ಸಾಮಗ್ರಿಯಷ್ಟೇ ಜನಪ್ರಿಯವಾಗಿವೆಯೆ ಹೊರತು ಅಳವಡಿಕೆಯಾಗಲಿಲ್ಲ. ಮಾತೆತ್ತಿದರೆ ಬಸವಣ್ಣನ ಮತ್ತು ಇತರ ಶರಣರ ವಚನಗಳನ್ನು ಪುಂಖಾನುಪುಂಖವಾಗಿ ಉದುರಿಸುವವರು ಆ ವಚನಗಳಲ್ಲಿಯ ವಿಚಾರಗಳ ಆಚರಣೆಯನ್ನು ಅರ್ಧದಷ್ಟಾದರೂ ಮಾಡಿದ್ದರೆ ಬಸವಣ್ಣನವರು ಖಂಡಿತ ಇವ ನಮ್ಮವ ಎನ್ನುತ್ತಿದ್ದರು.

ಪುರಾಣ ಮತ್ತು ಪ್ರವಚನದ ಸಂದರ್ಭವನ್ನು ಹೊರತು ಪಡಿಸಿದರೆ ಮತ್ತೆ ಬಸವ ನೆನಪಾಗುವದು ಅವನ ಜಯಂತಿಯ ಸಂದರ್ಭದಲ್ಲಿ. ಜಾತಿ, ಜನ್ಮ, ಲಿಂಗ, ವರ್ಣಮುಕ್ತ ಸಮಾಜವನ್ನು ರೂಪಿಸಿಹೊರಟ ಬಸವಣ್ಣನವರ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಪ್ರಯತ್ನ ಪಡುತ್ತಿರುವವರು ಅತ್ಯಂತ ವಿರಳ. ಕೆಲವು ಮಠಾಧೀಶರ ಪಾಲಿಗಂತೂ ಬಸವಣ್ಣ ಗುಡಿಯ ಮುಂದಿನ ಮೂರ್ತಿಯಾಗಿ ಉಳಿಯುವುದೇ ಕ್ಷೇಮ. ದುಡಿಯದೇ ಬದುಕುವವರಿಗೆ ಬಸವ ನುಂಗಲಾಗದ ತುತ್ತು. ತೊತ್ತಾಗದೇ ಸಿಂಹಾಸನರೂಢರಾಗುವವರಿಗೆ ಬಸವಣ್ಣ ಇಷ್ಟವಾಗುವದಾದರೂ ಹೇಗೆ?

ವಿಚಿತ್ರವೆಂದರೆ ಬಸವಣ್ಣ ವೀರಶೈವ ಧರ್ಮದ ಅನುಯಾಯಿಗಳ ಪಾಲಿಗೆ ಮಾತ್ರವಲ್ಲದೇ ಅವನ ವಚನಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡು ತಮ್ಮ ನುಡಿವಳಿಯನ್ನು ಶ್ರೀಮಂತಗೊಳಿಸಿಕೊಳ್ಳುವವರ ಪಾಲಿಗೆ ಬಸವಣ್ಣ ಹಾಗೂ ಆ ಸಂದರ್ಭದ ಶರಣರು ಒಂದು ಪಾಪ್ಯುಲರ್ ಬ್ರ್ಯಾಂಡ್ ಇದ್ದಂತೆ. ಹೇಗೆ ಜಾಗತೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಸರಕಾಗಿ ವಸ್ತುವೊಂದು ವಿನಿಮಯವಾಗುತ್ತದೋ ಹಾಗೆ ಬಸವಣ್ಣನವರ ಹಾಗೂ ಇತರ ಶರಣರ ವಚನಗಳು ಒಂದು ಜನಪ್ರಿಯ ಸರಕಿನ ಹಾಗೆಯ ಸರಬರಾಜಾಗುತ್ತಿವೆ. ಇಲ್ಲಿ ಬಳಕೆಯಷ್ಟೇ ಮುಖ್ಯವಾಗಿ ಅಳವಡಿಕೆ ನಗಣ್ಯವಾಗುತ್ತಿರುವದು ಒಂದು ದೊಡ್ಡ ವಿಷಾದ. ಅತಿ ಮುಖ್ಯವಾಗಿ ಬಸವಣ್ಣನವರನ್ನು ಅವರ ವಿಚಾರಗಳನ್ನು ವಾಣಿಜ್ಯೀಕರಣಗೊಳಿಸಿಕೊಂಡು ಬಂಡವಾಳಶಾಹಿಗಳಾದವರೇ ಇಂದು ಅವರನ್ನು ಅನುಸರಿಸದಿರುವದು ಇನ್ನೊಂದು ದೊಡ್ಡ ದುರಂತ.

ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಬಸವಣ್ಣನನ್ನು ಎತ್ತುಗಳಿಗೆ ಸಾಂಕೇತಿಸಲಾಗಿದೆ. ಇದು ಯಾರ ಕುತಂತ್ರವೋ ತಿಳಿಯದು. ಬಸವ ಜಯಂತಿಯ ದಿನ ಎತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ.. ಮೂಕ ಎತ್ತುಗಳಿಗೆ ಬಸವ ಎಂದು ಕರೆಯುವ ಮೂಲಕ ಪುರೋಹಿತಶಾಹಿ ವ್ಯವಸ್ಥೆ ಮತ್ತೊಮ್ಮೆ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸಿರುವುದಿದೆ. ಹಾಗೆ ಎತ್ತುಗಳನ್ನು ಬಸವಣ್ಣನವರಿಗೆ ಸಂಕೇತಿಸುವದಾಗಲೀ.. ಎತ್ತುಗಳಂದ್ರೆ ಬಸವಣ್ಣ ಎಂದಾಗಲೀ ಬಗೆಯುವ ಯೋಚನೆ ಅತ್ಯಂತ ಕ್ಷುದ್ರವಾದುದು. ಅಷ್ಟಕ್ಕೂ ಬಸವ ಜಯಂತಿಯ ಸಂದರ್ಭದಲ್ಲಿ ಮೂರ್ತಿ ಸ್ಥಾಪನೆ, ಎತ್ತುಗಳ ಮೆರವಣಿಗೆ, ಭಾವಚಿತ್ರದ ಪೂಜೆ, ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ಅವರ ಒಂದಾದರೂ ವಿಚಾರವನ್ನು ಆ ದಿನದ ಮಟ್ಟಿಗಾದರೂ ಅನುಸರಿಸುವುದಿದೆಯೆ ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ.