Daily Archives: May 3, 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-5)


– ಡಾ.ಎನ್.ಜಗದೀಶ್ ಕೊಪ್ಪ


 

ಅನಿರೀಕ್ಷಿತವಾಗಿ ಜರುಗಿದ ನಕ್ಸಲ್‌ಬಾರಿ ಹಿಂಸಾಚಾರದ ಘಟನೆ ಕಮ್ಯೂನಿಷ್ಟ್ ಪಕ್ಷವನ್ನು ತನ್ನ ಸಿದ್ಧಾಂತ ಹಾಗೂ ಪ್ರಣಾಳಿಕೆ ಕುರಿತಾದ ವಿಷಯಗಳ ಬಗೆಗಿನ ಆತ್ಮಾವಲೋಕನಕ್ಕೆ ಪ್ರೇರೇಪಿಸಿತು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತ ಬಾರದ ಕಾರಣ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿಜವಾದ ನಿಲುವುಗಳನ್ನು ಮನವರಿಕೆ ಮಾಡಿಕೊಡುವ ಜವಬ್ದಾರಿ ಕೂಡ ಕಮ್ಯೂನಿಷ್ಟ್ ಪಕ್ಷದ ಮೇಲೆ ಇತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಹಿಂಸಾಚಾರ ಕುರಿತಂತೆ ಪಕ್ಷದ ಕಾರ್ಯಕರ್ತರಲ್ಲಿ ಹಲವು ಅನುಮಾನಗಳು, ಗೊಂದಲಗಳು ಸೃಷ್ಟಿಯಾಗ ತೊಡಗಿದವು. ಈ ಎಲ್ಲಾ ಗೊಂದಲಗಳಿಂದ ಹೊರಬಂದು ಪಕ್ಷದ ಭವಿಷ್ಯದ ನಿಲುವುಗಳನ್ನು ಸ್ಪಷ್ಟಪಡಿಸಬೇಕಾದ ಅನಿವಾರ್ಯ ಸ್ಥಿತಿಗೆ ನಾಯಕರು ಸಿಲುಕಿದರು ಏಕೆಂದರೆ, ಪಕ್ಷದ ಕಾರ್ಯಕರ್ತರ ಮೇಲೆ ನಾಯಕತ್ವದ ಹಿಡಿತವಿಲ್ಲ ಎಂಬುದನ್ನು ಈ ಘಟನೆ ಅನಾವರಣಗೊಳಿಸಿತ್ತು. ಜೊತೆಗೆ ಡಾರ್ಜಲಿಂಗ್ ಜಿಲ್ಲೆ ಮತ್ತು ಸಿಲಿಗುರಿ ಪ್ರಾಂತ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದು ಮೈತ್ರಿ ಸರ್ಕಾರದ ಅಸಮರ್ಥತೆಯನ್ನು ಸಹ ಎತ್ತಿ ತೋರಿಸಿತ್ತು.

ಪಕ್ಷದಲ್ಲಿ ಶಿಸ್ತು ಹಾಗೂ ತತ್ವ ಸಿದ್ಧಾಂತಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 1967 ರ ಆಗಸ್ಟ್ 17 ಮತ್ತು 18 ರಂದು ಪಕ್ಷದ ಕಾರ್ಯಕಾರಿಣಿ ಸಭೆಯನ್ನು ತಮಿಳುನಾಡಿನ ಮಧುರೈ ನಗರದಲ್ಲಿ ಕರೆಯಲಾಯಿತು. ಪಕ್ಷದಲ್ಲಿ ಬಾಹ್ಯಶಕ್ತಿಗಳು ಮಧ್ಯಪ್ರವೇಶ ಮಾಡಿ ಕಾರ್ಯಕರ್ತರನ್ನು ಹಾದಿ ತಪ್ಪಿಸುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಅಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಲವು ನಾಯಕರಿಂದ ಒತ್ತಾಯ ಕೇಳಿ ಬಂದ ಹಿನ್ನಲೆಯಲ್ಲಿ ಸಭೆ ಕರೆಯಲಾಯಿತು. ಕೇಂದ್ರ ಸಮಿತಿಯ ಸಭೆಯಲ್ಲಿ, ಪಕ್ಷದ ಕೆಲವರು, ಬಾಹ್ಯ ರಾಷ್ಟ್ರಗಳ (ಚೀನಾ) ಪ್ರೇರಣೆಗಳಿಂದ ಪಕ್ಷವನ್ನು, ಹಾಗೂ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುತ್ತಿರುವ ಬಗ್ಗೆ ಗಂಭೀರವಾಗಿ ಚರ್ಚಿಸಿ, ಭಾರತದ ಕಮ್ಯೂನಿಷ್ಟ್ ಪಕ್ಷಕ್ಕೆ ಯಾವುದೇ ಹೊರಗಿನ ರಾಷ್ಟ್ರಗಳ ಮಾರ್ಗದರ್ಶನ ಬೇಕಾಗಿಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು.

ಪಕ್ಷದ ಭವಿಷ್ಯದ ದೃಷ್ಟಿಯಿಂದ ಮುಂದೆ ಪಕ್ಷದ ಆಂತರೀಕ ವಿಷಯಗಳಲ್ಲಿ ನೇರ ಪ್ರವೇಶಿಸಿ, ಸಲಹೆ ನೀಡುವ ಅಧಿಕಾರವನ್ನು ಸಹ ಪಕ್ಷದ ಕೇಂದ್ರ ಸಮಿತಿಗೆ ನೀಡಲಾಯಿತು. 1960 ರ ದಶಕದ ಕಮ್ಯೂನಿಷ್ಟ್ ಪಕ್ಷದಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಚೀನಾ ಮತ್ತು ಸೋವಿಯತ್ ರಷ್ಯಾ ಕಮ್ಯೂನಿಷ್ಟ್ ವಿಚಾರಧಾರೆಗಳು ಲಗ್ಗೆ ಇಟ್ಟ ಪರಿಣಾಮ ಈ ರೀತಿಯ ಗೊಂದಲಗಳು ಸಾಮಾನ್ಯವಾಗಿದ್ದವು. ಅಂತಿಮವಾಗಿ 1968 ರ ಏಪ್ರಿಲ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚೀನಾ ಮಾದರಿಯ ಹೋರಾಟವನ್ನು ಕೈಬಿಡಲು ನಿರ್ಧರಿಸಲಾಯಿತು.

ಪಕ್ಷದ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಚಾರು ಮುಜಂದಾರ್ ಇದು ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಮತ್ತೇ ಸಾಮಾನ್ಯ ಸ್ಥಿತಿಗೆ ಎಳೆದೊಯ್ಯುವ ನಿರ್ಧಾರ ಎಂದು ಆರೋಪಿಸಿದನು. ಇಂತಹ ಸ್ಥಿತಿಯಲ್ಲಿ ಅಸಮಾನತೆಯನ್ನು ಬಿತ್ತಿ ಪೋಷಿಸುತ್ತಿರುವ ಸರ್ಕಾರಗಳು ಮತ್ತು ದುಷ್ಟಶಕ್ತಿಗಳ ವಿರುದ್ಧ ಯುದ್ಧ ಅನಿವಾರ್ಯ ಎಂದು ಪ್ರತಿಪಾದಿಸಿದ ಚಾರು ಮತ್ತು ಅವನ ಗೆಳೆಯರು ಮಾರ್ಕ್ಸ್‌‍ವಾದದ ಕಮ್ಯುನಿಷ್ಟ್ ಪಕ್ಷವನ್ನು ತೈಜಿಸಲು ನಿರ್ಧರಿಸಿದರು. ಅಮೇರಿಕಾದ ಬಂಡವಾಳ ನೀತಿಯನ್ನು ಪರೋಕ್ಷವಾಗಿ ಅಪ್ಪಿಕೊಂಡು ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವ ಸೋವಿಯತ್ ರಷ್ಯಾದ ಕಮ್ಯೂನಿಷ್ಟ್ ಪ್ರಣಾಳಿಕೆಯನ್ನು ಸಹ ತಿರಸ್ಕರಿಸಿದರು.

ತಾವು ಈಗ ಅನುಸರಿಸಬೇಕಾದ ತೀವ್ರಗಾಮಿ ಧೋರಣೆಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಅವುಗಳೆಂದರೆ:

  1. ಎಲ್ಲಾ ಹಂತದಲ್ಲೂ ಹೋರಾಟವನ್ನು ತೀವ್ರಗೊಳಿಸುವುದು, ನಕ್ಷಲ್‌ಬಾರಿ ಮಾದರಿಯ ಹೋರಾಟಕ್ಕೆ ರೈತರು ಮತ್ತು ಆದಿವಾಸಿಗಳನ್ನು ಸಜ್ಜುಗೊಳಿಸುವುದು.
  2. ಪ್ರತಿ ಹಳ್ಳಿಯಲ್ಲಿ ತೀವ್ರಗಾಮಿ ಮನೋಭಾವದ ಯುವಕರ ಪಡೆಯನ್ನು ಹುಟ್ಟು ಹಾಕಿ, ರೈತರು, ಕೃಷಿಕೂಲಿ ಕಾರ್ಮಿಕರು, ವ್ಯವಸಾಯ ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳನ್ನು ಹೋಗಲಾಡಿಸುವುದು.
  3. ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಯ ಜೊತೆಗೆ ಮಾವೋತ್ಸೆ ತುಂಗನ ವಿಚಾರಗಳನ್ನು ಪಕ್ಷದ ಸಂಘಟನೆಯಲ್ಲಿ ಅಳವಡಿಸಿಕೊಂಡು, ಭಾರತದ ಸಂದರ್ಭಕ್ಕೆ ಅನುಗುಣವಾಗಿ ಕೆಲವು ಮಾರ್ಪಾಡು ಮಾಡಿಕೊಂಡು ಇವುಗಳ ಹಾದಿಯಲ್ಲಿ ಕಟ್ಟುನಿಟ್ಟಾಗಿ ನಡೆಯುವುದು.

ಇವುಗಳನ್ನು  ಆಚರಣೆಗೆ ತರುವ ನಿಟ್ಟಿನಲ್ಲಿ 1968 ಅಂತ್ಯದ ವೇಳೆಗೆ ಕೊಲ್ಕತ್ತ ನಗರದಲ್ಲಿ ಎಲ್ಲಾ ಉಗ್ರ ಕಮ್ಯೂನಿಷ್ಟ್ ವಾದಿಗಳ ಸಭೆಯನ್ನು ಗುಪ್ತವಾಗಿ ಕರೆಯಲಾಗಿತ್ತು. ಕ್ರಾಂತಿಕಾರಕ ವಿಚಾರಗಳನ್ನು ಆಚರಣೆಗೆ ತರಲು ಅಖಿಲ ಭಾರತ ಮಟ್ಟದಲ್ಲಿ ಒಂದು ಸಮನ್ವಯ ಸಮಿತಿಯನ್ನು ಸಹ ರಚಿಸಲಾಯಿತು. ಸಭೆಯ ನಂತರ ಚಾರು ಮುಜಂದಾರ್ ಮಾವೋ ವಿಚಾರಧಾರೆಯ ಅಡಿಯಲ್ಲಿ ಭಾರತದಲ್ಲಿ ಪ್ರಜಾಸತ್ತಾತ್ಮಕವಾದ ಕ್ರಾಂತಿಕಾರಕ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸಲಾಗುವುದು ಎಂದು ಘೊಷಿಸಿದನು. ಕೊಲ್ಕತ್ತ ಸಭೆಯ ನಿರ್ಣಯಕ್ಕೆ ಆಂಧ್ರದ ನಾಯಕ ನಾಗಿರೆಡ್ಡಿ ಕೆಲವು ಆಕ್ಷೇಪ ಎತ್ತಿದನು. ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಘಟನೆಯನ್ನು ಒಳಗೊಳ್ಳದ ಯಾವುದೇ ಹೋರಾಟಕ್ಕೆ ಜಯ ಸಿಗಲಾರದು ಎಂಬುದು ಆಂಧ್ರ ನಾಯಕರ ಅಭಿಪ್ರಾಯವಾಗಿತ್ತು. ನೂತನ ಪಕ್ಷದ ಸಂಘಟನೆಯ ಗೊಂದಲ ಹೀಗೆ ಮುಂದುವರಿದಾಗ, 1969 ರ ಫೆಬ್ರವರಿಯಲ್ಲಿ ಸಭೆ ಸೇರಿದ ನಾಯಕರು, ಪಕ್ಷದ ಸಮನ್ವಯ ಸಮಿತಿಯ ನಿಷ್ಕ್ರೀಯತೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರು. ಇದೇ ವೇಳೆಗೆ ಚೀನಾ ಸರ್ಕಾರ ಹಾಗೂ ಅಲಿನ್ಲ ಕಮ್ಯೂನಿಷ್ಟ್ ಪಕ್ಷ  ಭಾರತದ ಎಡಪಂಥೀಯ ಪಕ್ಷದ ಆಂತರೀಕ ವಿಷಯಗಳಿಗೆ ತಲೆ ಹಾಕಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದವು. ಈ ಅವಕಾಶವನ್ನು ಬಳಸಿಕೊಂಡು ಭಾರತದಲ್ಲಿ ಮಾರ್ಕ್ಸ್ ವಿಚಾರಧಾರೆಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆ ಅತ್ಯಾವಶ್ಯಕ ಎಂಬ ಬೀಜವನ್ನು ಇಲ್ಲಿನ ಉಗ್ರಗಾಮಿ ನಾಯಕರ ತಲೆಯೊಳಕ್ಕೆ ಚೀನಾ ಬಿತ್ತನೆ ಮಾಡಿತು. ಜೊತೆಗೆ ಸಂಘಟನೆಗೆ ಅವಶ್ಯಕವಾದ ಹಣ, ಶಸ್ರಾಸ್ತ್ರ ಪೂರೈಸುವ ಭರವಸೆ ನೀಡಿತು. ಅಂದಿನ ಶ್ರೀಲಂಕಾದ ಕಮ್ಯೂನಿಷ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯನಾದ ಷಣ್ಮುಗದಾಸ್‌ನನ್ನು ನೇಪಾಳ ಮೂಲಕ ಚೀನಾಕ್ಕೆ ಕರೆಸಿಕೊಂಡ ಅಲ್ಲಿನ ಸರ್ಕಾರ ಆತನ ಮೂಲಕ ಎಲ್ಲಾ ಸಂದೇಶಗಳನ್ನು ಭಾರತದ ಉಗ್ರಗಾಮಿ ನಾಯಕರಿಗೆ ರವಾನಿಸಿತು.

ಇದರಿಂದ ಪ್ರೇರಣೆಗೊಂಡ ಇಲ್ಲಿನ ನಾಯಕರು 1969 ರ ಏಪ್ರಿಲ್ 22 ರಂದು ಲೆನಿನ್‌ನ ಶತಮಾನೋತ್ಸವ ಜನ್ಮದಿನಾಚರಣೆಯಂದು ಹೊಸ ಪಕ್ಷದ ಅಸ್ತಿತ್ವವನ್ನು ಘೋಷಿಸಿದರು. ಪಕ್ಷಕ್ಕೆ ಕಮ್ಯೂನಿಷ್ಟ್ ಪಾರ್ಟಿ (ಮಾರ್ಕ್ಸ್ ಮತ್ತು ಲೆನಿನ್) ಬಣ ಎಂದು ಹೆಸರಿಸಲಾಯ್ತು. ಪಕ್ಷವನ್ನು ಹುಟ್ಟು ಹಾಕುವುದರ ಜೊತೆಗೆ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು. ಭಾರತ ದೇಶ ಅರೆ ವಸಾಹತುಶಾಯಿ ಮತ್ತು ಅರೆ ದಬ್ಬಾಳಿಕೆಯ ವ್ಯವಸ್ಥೆಯಲ್ಲಿ ನರಳುತ್ತಿದೆ, ಇಲ್ಲಿ ಅಧಿಕಾರಿಗಳು ಮತ್ತು ಭೂಮಾಲೀಕರು, ಬಂಡವಾಳಶಾಹಿಗಳ ಕೈಗೊಂಬೆಯಾಗಿ ವರ್ತಿಸುತ್ತಾ ಬಡಜನತೆಯನ್ನು ಶೋಷಿಸುತ್ತಿದ್ದಾರೆ. ಇಲ್ಲಿ ಈ ವ್ಯವಸ್ಥೆಗೆ ಭಾರತ ಸರ್ಕಾರ ಅಮೇರಿಕಾದ ಬಂಡವಾಳ ನೀತಿಯನ್ನು ಮತ್ತು ಸೋವಿಯತ್ ರಷ್ಯಾದ ಅರೆಬೆಂದ ಸಮಾಜವಾದ ನೀತಿಯನ್ನು ಅನುಸರಿಸುತ್ತಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಣಾಳಿಕೆಯಲ್ಲಿ ಇಲ್ಲಿನ ವ್ಯವಸ್ಥೆಯನ್ನು ಕಟು ವಿಮರ್ಶೆಗೆ ಒಳಪಡಿಸಲಾಗಿತ್ತು. ಭಾರತದ ದುಡಿಯುವ ವರ್ಗ ಮತ್ತು ರೈತರ ದಯನೀಯವಾದ ಈ ಸ್ಥಿತಿಯಲ್ಲಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ಅತ್ಯಗತ್ಯ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಬಲವಾಗಿ ಪ್ರತಿಪಾದಿಸಲಾಗಿತ್ತು.

ಸರ್ಕಾರದ ವಿರುದ್ಧ ವ್ಯವಸ್ಥಿತ ಹೋರಾಟಕ್ಕೆ ಗೆರಿಲ್ಲಾ ಯುದ್ಧವೊಂದೇ ಅನಿವಾರ್ಯ ಮಾರ್ಗ ಎಂದು ತಿಳಿಸಿ ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ರೈತರು, ಕೂಲಿಕಾರ್ಮಿಕರು, ಮತ್ತು ಆದಿವಾಸಿಗಳನ್ನು ಸಂಘಟಿಸಿ ಹೋರಾಟಕ್ಕೆ ಸಿದ್ಧವಾಗಬೇಕೆಂದು ಪಕ್ಷ ಕರೆ ನೀಡಿತ್ತು. ಪಕ್ಷದ ಸಂಘಟನೆಯನ್ನು ಅತ್ಯಂತ ಗೋಪ್ಯವಾಗಿ ಮಾಡಬೇಕೆಂದು ಹಾಗೂ ಯಾವ ಕಾರಣಕ್ಕೂ ಸಂಘಟನೆಯಲ್ಲಿ ನಿರತರಾದ ನಾಯಕರ ಮಾಹಿತಿಯನ್ನು ವಿಶೇಷವಾಗಿ ವ್ಯಯಕ್ತಿಕ ಮಾಹಿತಿಯನ್ನು ಪಕ್ಷದ ಕಾರ್ಯಕತ್ರಿಗೂ ತಿಳಿಸಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಲಾಯಿತು. ಈ ಕಾರಣಕ್ಕಾಗಿ ಈ ಹಿಂದೆ ಸಿಲಿಗುರಿ ಪ್ರಾಂತ್ಯದಲ್ಲಿ ಕಿಸಾನ್‌ಸಭಾ ಘಟಕಗಳನ್ನು ಸಂಘಟಿಸಿದ ಮಾದರಿಯನ್ನು ಅಂದರೆ, ಬಹಿರಂಗಸಭೆ ಕೈಬಿಟ್ಟು, ಪ್ರತಿಯೊಬ್ಬ ವ್ಯಕ್ತಿಯ ಜೊತೆ ಮಾತುಕತೆ ಮತ್ತು ಸಂಧಾನದ  ಪಕ್ಷವನ್ನು ತಳಮಟ್ಟದಿಂದ ಕಟ್ಟಲು ನಾಯಕರು ನಿರ್ಧರಿಸಿದರು. ಇದು ಭಾರತದ ರಾಜಕೀಯ ಇತಿಹಾಸದ ಎಡಪಂಥೀಯ ವಿಚಾರ ಧಾರೆಗಳ ಸಮಾನ ಮನಸ್ಕ ವ್ಯಕ್ತಿಗಳಲ್ಲಿ ಗೊಂದಲ, ಜಿಜ್ಙಾಸೆ ಮೂಡಿಸಿ, ತಮ್ಮ ಮುಂದಿನ ಮಾರ್ಗ ಯಾವುದು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತು.

(ಮುಂದುವರಿಯುವುದು)