Daily Archives: May 18, 2012

ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೊಂದು ಬಹಿರಂಗ ಸವಾಲು

– ದಯಾನಂದ ಟಿ.ಕೆ.
ಸಂಶೋಧಕ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯ ಯೂನಿವರ್ಸಿಟಿ,
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರ, ಬೆಂಗಳೂರು.

ನಿನ್ನೆ ತಾನೇ SSLC ಫಲಿತಾಂಶ ಬಂದಿದೆ. ಸಾಕಷ್ಟು ಕಾರಣಗಳಿಗಾಗಿ ಈ ಸಲದ ಫಲಿತಾಂಶ ಗಮನಾರ್ಹವೂ ಆಗಿದೆ. ಈ ಬಾರಿಯ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಎಸ್ಸೆಸ್ಸೆಲ್ಸಿಯ ಫಲಿತಾಂಶದ ಶೇಕಡಾವಾರು ಅವಲೋಕನದಲ್ಲಿ ಸರ್ಕಾರಿ ಶಾಲೆಗಳು ಮುನ್ನಡೆ ಸಾಧಿಸಿದ್ದರೆ ಖಾಸಗಿ ಕ್ಷೇತ್ರದ 47 ಶಾಲೆಗಳಲ್ಲಿ ಶೇಕಡ ಸೊನ್ನೆಯಷ್ಟು ಫಲಿತಾಂಶ ದಾಖಲಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಕಳಪೆಯೆಂದೂ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಗುಣಮಟ್ಟ ಅತ್ಯದ್ಭುತವೆಂದೂ ಹಾಡಿ ಹೊಗಳುವವರ ಮುಖಕ್ಕೆ ಮಂಗಳಾರತಿ ಎತ್ತಿದಂತೆ ಈ ಸಲದ ಎಸ್ಸೆಸ್ಸೆಲ್ಸಿ ಫಲಿತಾಂಶ ಬಹಳಷ್ಟು ವಿಷಯಗಳನ್ನು ತಿರುವು-ಮುರುವು ಮಾಡಿ ಬಿಸಾಕಿದೆ. ಇದೇ ಸಂದರ್ಭದಲ್ಲಿ ದೇಶದಾದ್ಯಂತ ಶಾಲೆಯಿಂದ ಹೊರಗುಳಿದಿರುವ ಲಕ್ಷಗಟ್ಟಲೆ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಬಡಮಕ್ಕಳಿಗೆ ಸುಪ್ರೀಂಕೋರ್ಟ್ ನೀಡಿದ ಖಾಸಗಿ ಶಾಲೆಗಳಲ್ಲಿ 25 ಪ್ರತಿಶತ ಕಡ್ಡಾಯ ಪ್ರವೇಶಾವಕಾಶದ ಆದೇಶ ಸಮಾನತೆಯ ಆಶಯವುಳ್ಳ ಎಲ್ಲರಲ್ಲೂ  ಆಶಾದಾಯಕ ಭಾವನೆ ಮೂಡಿಸಿದೆ. ಈ ಮೂಲಕವಾದರೂ ಉಳ್ಳವರೊಟ್ಟಿಗೆ ಸರ್ವರಿಗೂ ಶಿಕ್ಷಣ ಎಂಬ ಘೋಷಣೆ ಗುಣಮಟ್ಟದ ಶಿಕ್ಷಣದೊಂದಿಗೆ ಈಡೇರಬಹುದಾದ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯವೊಂದರಲ್ಲೇ ಶಾಲೆಯ ಕನಸು ಬಿಟ್ಟು ದುಡಿಮೆಯತ್ತ ತಿರುಗಿದ 6 ಲಕ್ಷ ಬಡಮಕ್ಕಳ ಭವಿಷ್ಯಕ್ಕೆ ಒಂದೊಳ್ಳೆಯ ಭವಿಷ್ಯ ಕಟ್ಟಿಕೊಳ್ಳುವ ಅವಕಾಶವನ್ನು ಶಿಕ್ಷಣ ಹಕ್ಕು ಕಾಯ್ದೆ ಒದಗಿಸಿಕೊಡಲಿರುವುದು ಕ್ರಾಂತಿಕಾರಕ ಬೆಳವಣಿಗೆಯೇ ಸರಿ. ಈ ನಿಟ್ಟಿನಲ್ಲಿ ಈ ತೀರ್ಪು ಸರ್ವತ್ರ ಸ್ವಾಗತಾರ್ಹವಾಗಿದೆ.

ನಿರೀಕ್ಷೆಯಂತೆಯೇ ಇತ್ತೀಚೆಗೆ ಸುಪ್ರೀಂಕೋರ್ಟ್ ಎತ್ತಿಹಿಡಿದ ಶಿಕ್ಷಣ ಹಕ್ಕು ಕಾಯ್ದೆಯ ಕುರಿತಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಅಡ್ಡಸ್ವರ ನುಡಿಸಲು ಪ್ರಾರಂಭಿಸಿವೆ. ಪ್ರತಿತೊಂದು ಬಡತನದ ಹಿನ್ನೆಲೆಯ ಮಗುವಿಗೆ ಸರ್ಕಾರವೇ 11 ಸಾವಿರ ರೂಗಳ ವಾರ್ಷಿಕ ಶಿಕ್ಷಣ ವೆಚ್ಚವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಒದಗಿಸಲು ಮುಂದಾಗಿದೆ. ತನ್ಮೂಲಕ ಶಿಕ್ಷಣ ಸಂಸ್ಥೆಗಳು ಉಚಿತವಾಗಿ ಈ ವರ್ಗದ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದಾರತೆಯ ಮಾತುಗಳನ್ನಾಡಲು ಕಡಿವಾಣವನ್ನೂ ಹಾಕಲಾಗುತ್ತಿದೆ. ಬಡವರ್ಗದ ಮಕ್ಕಳಿಗೆ ಪ್ರವೇಶ ನಿರಾಕರಣೆ, ದಾಖಲಾತಿ ಸಮಯದಲ್ಲಿ ಈ ಮಕ್ಕಳ ಪೋಷಕರ ಸಂದರ್ಶನ ರದ್ದು, 8ನೇ ತರಗತಿಯವರೆಗೂ ಅನುತ್ತೀರ್ಣಗೊಳಿಸದಿರುವಿಕೆ ಈ ಅಂಶಗಳುಳ್ಳ ಸುಪ್ರೀಂಕೋರ್ಟಿನ ತೀರ್ಪು ತಮ್ಮ ಇಚ್ಛೆಗೆ ಪ್ರತಿರೋಧವಾಗಿ ಬರುತ್ತಿದ್ದಂತೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ನ್ಯಾಯಾಲಯದ ಆದೇಶದ ರಂಗೋಲಿಯ ಕೆಳಗೆ ನುಸಿಯುವುದು ಹೇಗೆ ಎಂಬ ಸಂಶೋಧನೆಗಳಲ್ಲಿ ನಿರತವಾಗಿರುವುದು ಅವರ ಇತ್ತೀಚಿನ ಹೇಳಿಕೆಗಳಲ್ಲಿ ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಅಧ್ಯಕ್ಷ ಜಿ.ಎಸ್. ಶರ್ಮರವರು ಬಡಮಕ್ಕಳಿಗೆ ದಾಖಲಾತಿ ನೀಡುವುದು ಅನಿವಾರ್ಯವಾದರೆ ಆ ಮಕ್ಕಳಿಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲು ಒತ್ತಾಯ ಹೇರುತ್ತೇವೆ, ಆ ಮಕ್ಕಳಿಗೆ ಏನೆಲ್ಲ ಖಾಯಿಲೆ ಇರುತ್ತದೋ ಯಾರಿಗೆ ಗೊತ್ತು? ಬೇರೆ ಮಕ್ಕಳಿಗೆ ಖಾಯಿಲೆ ಹರಡಿದರೆ ಯಾರು ಹೊಣೆ, ಬಡಮಕ್ಕಳಿಗೆ 25ರಷ್ಟು ಸೀಟು ಮೀಸಲಾತಿ ನೀಡಲು ನಮ್ಮಿಂದ ಸಾಧ್ಯವೇ ಇಲ್ಲ, ನಮಗೆ ಸರ್ಕಾರದ ಅನುದಾನ ಬೇಕಿಲ್ಲ, ನಾವು ಸರ್ಕಾರದ ಗುಲಾಮರಾಗಲು ಇಷ್ಟವಿಲ್ಲ, ಎಂಬಂಥ ದರ್ಪದ ಮಾತುಗಳನ್ನು ಆಡಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಅಖಂಡ ದೇಶವೊಂದರ ಸಾಮಾಜಿಕ ಮತ್ತು ಆರ್ಥಿಕತೆಯ ಮೂಲಬೇರುಗಳನ್ನೇ ಕಾಲಕಸದಂತೆ ಕಾಣುವ ಇಂತಹ ಮನಸ್ಥಿತಿಯ ಹಿಂದೆ ಅಕ್ಷರ ಕಲಿಯಬೇಕಾದ ಬಡವರ್ಗದ ಎಳೆಯ ಮಕ್ಕಳನ್ನೂ ತುಚ್ಛವಾಗಿ ನೋಡುವ ಮತ್ತು ಶ್ರೇಣೀಕೃತ ಜಾತಿವ್ಯವಸ್ಥೆಯ ಪಾಲನೆ ಪೋಷಣೆಗಳ ನೆರಳಿರುವುದು ಕಂಡುಬರುತ್ತಿದೆ. ಬಡಮಕ್ಕಳನ್ನು ನಮ್ಮ ಶಾಲೆಗಳಿಗೆ ಸೇರಿಸಿಕೊಳ್ಳುವುದಿಲ್ಲ ಎಂಬ ಉದ್ಧಟತನದ ಹೇಳಿಕೆಯೊಳಗೆ ಸನಾತನ ಆಶ್ರಮಗಳ ಶಿಕ್ಷಣ ಸಂಸ್ಕೃತಿಯಂತೆ ಮೇಲ್ಜಾತಿ-ವರ್ಗಗಳ ಮಕ್ಕಳಷ್ಟೇ ಶಿಕ್ಷಣ ಪಡೆಯಲು ಅರ್ಹರು ಎಂಬ ನೀಚ ಸಿದ್ದಾಂತವೂ ಅಡಗಿಕೊಂಡಿರುವುದು ಖಂಡನೀಯ ವಿಚಾರ. ದೇಶವೊಂದರಲ್ಲಿ ಬಹುಸಂಖ್ಯಾತರಾಗಿರುವ ಬಡವರ್ಗದ ಸಾಂವಿಧಾನಿಕ ಸಮಾನ ಶಿಕ್ಷಣವನ್ನೇ ನಿರಾಕರಿಸುವಷ್ಟರ ಮಟ್ಟಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ದುರಹಂಕಾರ ತಲುಪಿರುವುದು ವರ್ತಮಾನದ ದುರಂತಗಳಲ್ಲೊಂದು.

ವಿಷಯಕ್ಕೆ ಬರುವುದಾದರೆ ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳಿಕೊಳ್ಳುವಂತೆ ಸರ್ಕಾರದ ಗುಲಾಮರಲ್ಲ, ಸಿಕ್ಕಾಪಟ್ಟೆ ಸ್ವಾಭಿಮಾನಿಗಳು ಎಂಬುದೇ ಹಾಸ್ಯಾಸ್ಪದ ವಿಚಾರ. ಸಂಸ್ಥೆಗಳನ್ನು ಆರಂಭಿಸುವ ಸಮಯದಲ್ಲಿ ರಿಯಾಯಿತಿ ದರದಲ್ಲಿ ಭೂಮಿಯೂ ಸೇರಿದಂತೆ ಬಹಳಷ್ಟು ಸರ್ಕಾರದ ಸವಲತ್ತುಗಳನ್ನು ಶಿಕ್ಷಣಸೇವೆಯ ಅಂಶವನ್ನು ಮುಂದಿಟ್ಟು ಪಡೆಯಲಾಗುತ್ತದೆ. ಹಾಗೆ ನೋಡಿದರೆ ಈ ಶಿಕ್ಷಣ ಸಂಸ್ಥೆಗಳ ಮುಂದೆ ಅನುದಾನರಹಿತ ಎಂಬ ಪದವನ್ನು ತೆಗೆದುಹಾಕುವುದೇ ಸೂಕ್ತ. ಏಕೆಂದರೆ ಪ್ರತಿಯೊಬ್ಬ ಶಾಸಕ ಮತ್ತು ಸಂಸದರಿಗೆ ಕ್ರಮವಾಗಿ ವಾರ್ಷಿಕ 1 ಕೋಟಿ ಮತ್ತು 5 ಕೋಟಿ ರೂಗಳ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ ತರಗತಿ ಕೋಣೆಗಳನ್ನು ಕಟ್ಟಿಕೊಳ್ಳಲು, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲು, ವ್ಯಾಯಾಮಕೋಣೆಗಳನ್ನು ಕಟ್ಟಿಕೊಳ್ಳಲು ಹತ್ತು ಲಕ್ಷಗಳವರೆಗೆ ಜನರ ತೆರಿಗೆಯ ಹಣವನ್ನು ಕೊಸರಿಕೊಳ್ಳುವ ಎಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳ ಉದಾಹರಣೆಗಳು ಬೇಕು? ಒದಗಿಸಲು ನಾನು ಸಿದ್ದವಿದ್ದೇನೆ. ಒಂದು ಉದಾಹರಣೆಗೆ ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರವೊಂದನ್ನೇ ತೆಗೆದುಕೊಂಡರೆ ಈ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಮಣ್ಯರು ತಮ್ಮ ಪ್ರದೇಶವ್ಯಾಪ್ತಿಯ ಶ್ರೀ ವಿನಾಯಕ ವಿದ್ಯಾಸಂಸ್ಥೆಗೆ 2 ಶಾಲಾಕೊಠಡಿಗಳ ನಿರ್ಮಾಣಕ್ಕಾಗಿ ಹತ್ತು ಲಕ್ಷ ರೂಗಳ ಅನುದಾನ, ವಿಜಯಬಾರತಿ ವಿದ್ಯಾಲಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‌ಗೆ ಹೆಚ್ಚುವರಿ ಶಾಲಾಕೊಠಡಿಗಳ ನಿರ್ಮಾಣಕ್ಕೆ 12 ಲಕ್ಷದ 50 ಸಾವಿರ ರೂಗಳ ಅನುದಾನ, ಇದೇ ಶಿಕ್ಷಣ ಸಂಸ್ಥೆಯ ಆವರಣದೊಳಗೆ ರಂಗಮಂದಿರ ನಿರ್ಮಾಣಕ್ಕೆ 10 ಲಕ್ಷ ರೂಗಳ ಅನುದಾನ (ಈ ಹಣವನ್ನು ದಲಿತರಿಗಾಗಿ ಮೀಸಲಿಡಬೇಕಾದ ಶಾಸಕರ ಅನುದಾನದ 22.75% ಮೀಸಲು ನಿಧಿಯಿಂದ ಅನಧಿಕೃತವಾಗಿ ಬಳಸಲಾಗಿದೆ), ಶ್ರೀ ವಿನಾಯಕ ವಿದ್ಯಾಸಂಸ್ಥೆಗೆ ವಿದ್ಯುಚ್ಛಕ್ತಿ ಒದಗಿಸಲು 75 ಸಾವಿರ ರೂಗಳ ಅನುದಾನ, ಇದರೊಂದಿಗೆ ಜಯನಗರದ ಶಾಸಕ ಬಿ.ಎಮ್. ವಿಜಯಕುಮಾರ್‌ರಿಂದ 10 ಲಕ್ಷ ಅನುದಾನ ಪಡೆದ ಜಯನಗರದ ಬಿಇಎಸ್ ಶಿಕ್ಷಣ ಸಂಸ್ಥೆ, ಎನ್.ಎಂ.ಕೆ.ಆರ್.ವಿ ಕಾಲೇಜುಗಳನ್ನೂ ಹೆಸರಿಸಬಹುದು.

ಇದು ಕೇವಲ ಬೆಂಗಳೂರಿನ ಎಲ್ಲ ಶಾಸಕರು ಸಂಸದರ ಅನುದಾನ ಬಳಕೆಯ ತಪಾಸಣೆಯ ವೇಳೆ ಪತ್ತೆಯಾದ ಒಂದಷ್ಟು ಅಂಶಗಳು. ಹೀಗೆ ಪಡೆದ ಹಣ ಜನರ ತೆರಿಗೆಯ ದುಡ್ಡಿನ ಪಾಲು ಮತ್ತು ಇದನ್ನು ಪ್ರದೇಶಾಭಿವೃದ್ಧಿಗೆ ಮೀಸಲಾಗಬೇಕಿದ್ದ ಹಣವನ್ನು ಲಕ್ಷಗಟ್ಟಲೆ ಡೊನೇಷನ್ ವಂತಿಗೆ ಪಡೆಯುವ ಶಿಕ್ಷಣ ಸಂಸ್ಥೆಗಳು ಶಾಸಕರ ಸಂಸದರ ಮುಂದೆ ಕೈಯೊಡ್ಡಿ ನಿಂತು ಜಾಣತನದಿಂದ ಲಪಟಾಯಿಸಿವೆ. ಸರ್ಕಾರದ ಪ್ರದೇಶಾಭಿವೃದ್ಧಿ ಅನುದಾನವನ್ನು ಶಾಸಕರ ಸಂಸದರ ಸಖ್ಯದಿಂದ ಕದ್ದು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ರಂಗಮಂದಿರ, ಶಾಲಾ ಕೊಠಡಿ, ನೀರು ಸೌಕರ್ಯ ಕಟ್ಟಿಸಿಕೊಳ್ಳುವಾಗ ನಾವು ಸರ್ಕಾರದ ಗುಲಾಮರಲ್ಲ ಎನ್ನುವ ಸ್ವಾಭಿಮಾನದ ಠೇಂಕಾರ ಎಲ್ಲಿ ಹೋಗಿತ್ತೋ ಕಾಣೆ? ಕಳ್ಳಗಿಂಡಿಯಿಂದ ಅನುದಾನ ಪಡೆದು ತಮ್ಮದು ಅನುದಾನರಹಿತ ಶಿಕ್ಷಣ ಸಂಸ್ಥೆಯೆಂದು ಬೋರ್ಡ್ ಹಾಕಿಕೊಂಡು ಎದೆ ತಟ್ಟಿಕೊಂಡು ಹೇಳಲು ಖಾಸಗಿ ಶಿಕ್ಷಣ ಮಂಡಳಿಗಳಿಗೆ ಆಗ ನಾಚಿಕೆಯಾದರೂ ಆಗುವುದಿಲ್ಲವೇ?

ಸರ್ಕಾರದಿಂದ ಪಡೆದ ಸಂಪೂರ್ಣ ಉಚಿತ ಅನುದಾನದ ಋಣಕ್ಕಾದರೂ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರದ ಬಡವರ್ಗದ ಮಕ್ಕಳಿಗೆ 25% ಕಡ್ಡಾಯ ಪ್ರವೇಶಾತಿಯನ್ನು ಖಾಸಗಿ ಸಂಸ್ಥೆಗಳು ನೀಡಬೇಕಲ್ಲವೇ? ಒಂದು ವೇಳೆ ಕೊಡಲಿಕ್ಕೇ ಸಾಧ್ಯವೇ ಆಗುವುದಿಲ್ಲವೆಂದು ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಪ್ರತಿಪಾದಿಸುವುದಾದರೆ ರಾಜ್ಯದ ಎಲ್ಲ ಶಾಸಕ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಪಡೆದ ಲಕ್ಷಗಟ್ಟಲೆ ಅನುದಾನವನ್ನು ಸರ್ಕಾರದ ಖಜಾನೆಗೆ ವಾಪಸ್ಸು ಕೊಟ್ಟು ತಮ್ಮ ಸ್ವಾಭಿಮಾನವನ್ನು ಅವಶ್ಯವಾಗಿ ಮೆರೆಯಬಹುದು. ರಾಜ್ಯದ ಜಿಲ್ಲೆಗಳ ಯಾವ್ಯಾವ ಖಾಸಗಿ ಶಿಕ್ಷಣಸಂಸ್ಥೆಯು ಎಷ್ಟೆಷ್ಟು ಸರ್ಕಾರದ ಅನುದಾನ ಪಡೆದು ಕೊಬ್ಬಿದೆ ಎಂಬುದರ ಸಾಕ್ಷ್ಯ ಪುರಾವೆಗಳನ್ನು ಧೃಢೀಕೃತ ದಾಖಲೆಗಳ ಸಮೇತ ಒದಗಿಸಲು ನಾನು ಸಿದ್ದನಿದ್ದೇನೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪಡೆದ ಜನರ ತೆರಿಗೆಯ ಹಣದ ಶಾಸಕರ/ಸಂಸದರ ಪ್ರದೇಶಾಭಿವೃದ್ಧಿಯ ನಿಧಿಯ ಅನುದಾನವನ್ನು ಕ್ಷಮಾಪಣೆಯೊಂದಿಗೆ ಸರ್ಕಾರಕ್ಕೆ ವಾಪಸ್ಸುಕೊಡುವ ಕನಿಷ್ಠ ಮಟ್ಟದ ನೈತಿಕತೆ ಕುಸ್ಮಾ ಆಡಳಿತ ಮಂಡಳಿಗಳಿಗೆ ಇದೆಯೇ ?