Daily Archives: May 24, 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 8)


– ಡಾ.ಎನ್.ಜಗದೀಶ್ ಕೊಪ್ಪ


 

If there is to be revolution, there must be a revolutionary party.  -Mao

ಆಂಧ್ರದ ಗೋದಾವರಿ ನದಿಯಾಚೆಗಿನ ಆ ನೆಲಕ್ಕೆ ಹಿಂಸೆ ಅಥವಾ ಬಲಿದಾನ ಹೊಸದೇನಲ್ಲ. ವಿಶಾಖಪಟ್ಟಣ, ರಾಜಮಂಡ್ರಿ, ಶ್ರೀಕಾಕುಳಂ, ವಾರಂಗಲ್ ಮತ್ತು ಅದಿಲಾಬಾದ್ ಹಾಗೂ ಬೊಬ್ಬಿಲಿ  ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಿಗೆ ಹೋದರೆ, ಅಲ್ಲಿನ ಪೂರ್ವಜರ ಕಣ್ಣೀರಿನ ಇತಿಹಾಸದ ಕಥೆಯೊಂದು ನಮ್ಮೆದುರು ತೆರೆದುಕೊಳ್ಳತ್ತದೆ. 250 ವರ್ಷಗಳ ಹಿಂದಿನ ಬಲಿದಾನದ ಕಥನವೊಂದನ್ನು, ಮೌಖಿಕ ಕಾವ್ಯದ ರೂಪದಲ್ಲಿ ಅಲ್ಲಿನ ಜನ ತಮ್ಮ ಎದೆಯಲ್ಲಿ ಕಾಪಿಟ್ಟುಕೊಂಡು ಹಾಡುತ್ತಾ ಬಂದಿದ್ದಾರೆ. ಆ ಮಹಾ ಕಥನ ಕಾವ್ಯವೇ, “ಬೊಬ್ಬಿಲಿ ಕಥಾ”.

ದುರಂತ ಕಥನದ ಸಂಕ್ಷಿಪ್ತ ಸಾರಾಂಶವಿದು, ಅದು 1750 ರ ಕಾಲಮಾನ. ದಕ್ಷಿಣದಲ್ಲಿ ಮೊಗಲರ ನೆರವಿನಿಂದ ಅವರಿಗೆ ಒಂದಿಷ್ಟು ಕಪ್ಪ ಕಾಣಿಕೆ ಕೊಟ್ಟು ಹೈದರಾಬಾದ್ ಪ್ರಾಂತ್ಯವನ್ನು ನಿಜಾಮ ಆಳುತ್ತಿದ್ದ ಸಮಯ. ಇದೇ ಕಾಲಘಟ್ಟದಲ್ಲಿ ಭಾರತದ ಪೂರ್ವ ಕರಾವಳಿ ತೀರದಲ್ಲಿ, ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಈ ದೇಶದ ಮೇಲೆ ತಮ್ಮ ಅಸ್ತಿತ್ವ ಸಾಧಿಸಲು ಹೋರಾಟ ನಡೆಸುತ್ತಿದ್ದರು. ಇಂಗ್ಲಿಷರು, ಕೊಲ್ಕತ್ತ ಬಂದರು ನಗರವನ್ನು, ಫ್ರೆಂಚರು, ಪುದುಚೇರಿ,(ಪಾಡಿಚೇರಿ) ಮತ್ತು ಆಂಧ್ರದ ಮಚಲಿಪಟ್ಟಣ ಇವುಗಳನ್ನು ಡಚ್ಚರು ತಮಿಳುನಾಡಿನ ನಾಗಪಟ್ಟಣವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡು, ಸ್ಥಳೀಯ ಸಾಮಂತರಿಗೆ ಸೇನೆಯ ಸಹಾಯ ನೀಡುತ್ತಾ ಅವರಲ್ಲಿ ಕಲಹ ಹುಟ್ಟು ಹಾಕುತ್ತಾ, ಯುದ್ಧದ ನೆಪದಲ್ಲಿ ನಿಧಾನವಾಗಿ ಭಾರತದ ನೆಲದಲ್ಲಿ ಬೇರು ಬಿಡಲು ಹವಣಿಸಿದ್ದರು.

ಆಂಧ್ರಪ್ರದೇಶದ ಉತ್ತರ ಈಶಾನ್ಯ ಭಾಗದ ಬಂದರಾಗಿದ್ದ ಮಚಲಿಪಟ್ಟಣದಲ್ಲಿ ಫ್ರೆಂಚರ 12 ಸಾವಿರ ಯೋಧರಿದ್ದ ಸೇನಾ ಪಡೆಯು ಮಾರ್‌ಕ್ವಿಸ್‌ ದೆ ಬಸ್ಸಿ ಎಂಬ ದಂಡನಾಯಕನ ನೇತೃತ್ವದಲ್ಲಿ ಹೈದರಾಬಾದ್ ನಿಜಾಮನಿಗೆ ಸೇವೆ ಸಲ್ಲಿಸುತ್ತಿತ್ತು. 1756 ರಲ್ಲಿ ವಿಶಾಖಪಟ್ಟಣದ ಸಮೀಪದ ವಿಜಯನಗರಂ ಬಳಿ ಇರುವ ಬೊಬ್ಬಿಲಿ ಎಂಬ ಪುಟ್ಟ ಸಂಸ್ಥಾನದ ಸಾಮಂತ ವಿಜಯರಾಮರಾಜು ಎಂಬಾತ, ನಿಜಾಮ ಕೇಳಿದಷ್ಟು ವಾರ್ಷಿಕ ಕಂದಾಯ ನೀಡಲು ನಿರಾಕರಿಸಿದ. ಬೊಬ್ಬಿಲಿ ಕೋಟೆಯ ಮೇಲೆ ನಿಜಾಮನ ಪರವಾಗಿ, ಅವನ ಆದೇಶದಂತೆ ಫ್ರೆಂಚರ ಸೇನೆ ದಂಡೆತ್ತಿ ಬಂದಿತು. ಆ ಪುಟ್ಟ ಸಂಸ್ಥಾನದಲ್ಲಿ ಸಾಮಂತನ ಪರವಾಗಿ ಇದ್ದವರು ಇದೇ ಪ್ರಾಂತ್ಯದ ಬುಡಕಟ್ಟು ಜನಾಂಗ ಮಾತ್ರ. ಯಾವುದೇ ಅತ್ಯಾಧುನಿಕ ಶಸ್ರಾಸ್ತ್ರಗಳಿಲ್ಲದೆ, ಬಿಲ್ಲು ಬಾಣಗಳ ಮೂಲಕ ಇನ್ನೂರು ಮಂದಿ ಫ್ರೆಂಚ್ ಸೈನಿಕರನ್ನು ಕೊಂದು ಹಾಕಿದ ಈ ಅರಣ್ಯವಾಸಿಗಳ ಸಮುದಾಯ, ನಂತರ ಸೇನೆಯ ಪಿರಂಗಿ ದಾಳಿಗೆ ಕೋಟೆ ತುತ್ತಾದಾಗ ಅನಿವಾರ್ಯವಾಗಿ ಫ್ರೆಂಚರಿಗೆ ಶರಣಾಯಿತು. ಆನಂತರ ನಡೆದದ್ದು ಅಂದಿನ ಜಗತ್ತು ಕಂಡರಿಯದ ಭೀಕರ ನರಮೇಧ. ಕೋಟೆಯ ಒಳಗೆ ಪ್ರವೇಶ ಪಡೆದ ಫ್ರೆಂಚ್ ಸೈನಿಕರು ಎಲ್ಲಾ ಸ್ಥಳೀಯರನ್ನು ಹೊಸಕಿ ಹಾಕಿದರು. ಸುಮಾರು ಮೂರರಿಂದ ನಾಲ್ಕು ಸಾವಿರ ಬುಡಕಟ್ಟು ಜನಾಂಗದ ಯೋಧರು ಈ ಯುದ್ಧದಲ್ಲಿ ಬಲಿಯಾದರು. ಈಗ ಹಲವು ರೂಪಗಳಲ್ಲಿ ಹಾಡುವ ಈ ಕಾವ್ಯಕ್ಕೆ ಹಲವಾರು ಬುಡಕಟ್ಟು ಜನಾಂಗದ ನಾಯಕರಿದ್ದಾರೆ. ಅದೇ ರೀತಿ ನಾಯಕಿಯರೂ ಇದ್ದಾರೆ.

18 ನೇ ಶತಮಾನದ ಅಂತ್ಯದ ವೇಳೆ ಯಾರೋ ಒಬ್ಬ ಅನಾಮಿಕ ಮಹಾನುಭಾವ ಈ ಮೌಖಿಕ ಕಾವ್ಯವನ್ನು ದಾಖಲಿಸಿದ್ದ ಪರಿಣಾಮವಾಗಿ ಇದರ ಮೊದಲ ಹಸ್ತಪ್ರತಿ 1832 ರಲ್ಲಿ ಮದ್ರಾಸ್‌ನ ಒರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ್ ಲೈಬ್ರರಿಯಲ್ಲಿ ಲಭ್ಯವಾಯಿತು. ಇವತ್ತಿಗೂ ಗೋದಾವರಿ ನದಿಯಾಚೆಗಿನ ನಾಡಿನಲ್ಲಿ ಇದೊಂದು ಅತ್ಯಂತ ಜನಪ್ರಿಯ ಕಥನಕಾವ್ಯ. ಇದನ್ನು ಹಾಡುವ ವೃತ್ತಿ ಗಾಯಕರಿದ್ದಾರೆ. (ಚಿತ್ರ ಗಮನಿಸಿ) ವಿಶೇಷ ವೇಷಭೂಷಣಗಳಿಂದ ಅಂಲಕೃತರಾಗಿ ಇಡೀ ರಾತ್ರಿ ಕಾವ್ಯವನ್ನು ಹಾಡುತ್ತಾರೆ. ಇಂತಹ ಬಲಿದಾನದ ಕಥನಕಾವ್ಯವನ್ನು ಚಿಕ್ಕಂದಿನಿಂದ ಆಲಿಸಿಕೊಂಡು ಬಂದಿದ್ದ, ಶಿಕ್ಷಕ ವೆಂಪಟಾಪು ಸತ್ಯನಾರಾಯಣನಿಗೆ ನಿಜಾಮನ ರೂಪದಲ್ಲಿ ತಲೆಯೆತ್ತಿರುವ ಈ ಜಮೀನ್ದಾರರ ಆರ್ಭಟವನ್ನು ಮಣಿಸದಿದ್ದರೆ, ಈ ನೆಲದ ಮಕ್ಕಳಿಗೆ ಉಳಿಗಾಲವಿಲ್ಲವೆಂದು ತೀರ್ಮಾನಿಸಿದನು. ಇದಕ್ಕಾಗಿ ಶಿಕ್ಷಕ ವೃತ್ತಿಯಲ್ಲಿ ಇದ್ದುಕೊಂಡು ಗಿರಿಜನರನ್ನು ಸಂಘಟಿಸತೊಡಗಿದನು. ಅನಕ್ಷರಸ್ತ, ಬುಡಕಟ್ಟು ಜನಾಂಗಕ್ಕೆ ಆಗಿರುವ ಅನ್ಯಾಯವವನ್ನು, ಅವರಿಗಾಗಿ ಇರುವ ಆಜನ್ಮಸಿದ್ಧ  ಹಕ್ಕುಗಳನ್ನು ವಿವರಿಸಲು, ಸತ್ಯನಾರಾಯಣ ಕೂಡ ಜನಪದ ಹಾಡುಗಳಿಗೆ ಮೊರೆಹೋದನು. ಆದಿವಾಸಿಗಳ ಅನ್ಯಾಯ ಕುರಿತು, ಜಮೀನ್ದಾರರ ಕ್ರೌರ್ಯ ಕುರಿತು ತಾನೇ ಹಾಡು ಬರೆದು, ಗಿರಿಜನರ ಪೋಡುಗಳಿಗೆ (ಹಳ್ಳಿ) ಹೋಗಿ ರಾತ್ರಿಯೆಲ್ಲಾ ಕುಳಿತು ಹಾಡತೊಡಗಿದನು.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಜನಪದರು ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಲಾವಣಿಗಳನ್ನು ರಚಿಸಿ ಸಾಮಾನ್ಯ ಜನರೆದುರು, ದೇಶ ಪ್ರೇಮದ ಪ್ರಚೋದನೆಗಾಗಿ ಹಾಡಿದ್ದು ಬಿಟ್ಟರೆ, ದೇಶದಲ್ಲಿ ಪ್ರಪಥಮವಾಗಿ ತುಳಿತಕ್ಕೆ ಒಳಗಾದವರ, ಬಾಯಿಲ್ಲದವರ ಬಗ್ಗೆ ಕ್ರಾಂತಿಕಾರಿ ಹಾಡುಗಳನ್ನು ಬರೆದು ಹಾಡಿದವನು ವೆಂಪಟಾಪು ಸತ್ಯನಾರಾಯಣ. ಈತ, ಇವತ್ತಿಗೂ ತನ್ನ ಕ್ರಾಂತಿಕಾರಿ ಹಾಡುಗಳಿಂದ ಆಂಧ್ರಪ್ರದೇಶದ ಜನ ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಗಾಯಕ, ಕವಿ ಗದ್ದಾರ್ಗೂ ಸಹ ಪ್ರೇರಣೆಯಾದವನು. (ಗದ್ದಾರ್ನಿಂದ ನಮ್ಮ ಕರ್ನಾಟಕದ ದಲಿತ ಸಂಘಟನೆಗಳು ಪ್ರೇರಣೆಗೊಂಡು ಹಾಡು ರಚಿಸಿ ಹಾಡತೊಡಗಿದವು.) ಗಿರಿಜನ ಸಂಘಟನೆಯಿಂದ ಮೇಲ್ವರ್ಗದ ಸಮಾಜದ ಮತ್ತು ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಸತ್ಯನಾರಾಯಣ ಅಂತಿಮವಾಗಿ ಶಿಕ್ಷಕ ವೃತ್ತಿಯನ್ನು ತೊರೆದು, ಗಿರಿಜನರ ಪರವಾಗಿ ನಿಂತನು. ಅವರುಗಳ ವಿಶ್ವಾಸಗಳಿಸಿಕೊಳ್ಳುವ ನಿಟ್ಟಿನಲ್ಲಿ, ಜಟಪು ಮತ್ತು ಸವರ ಎಂಬ ಎರಡು ಆದಿವಾಸಿ ಪಂಗಡಗಳಿಂದ ಇಬ್ಬರು ಹೆಣ್ಣು ಮಕ್ಕಳನ್ನು ವಿವಾಹವಾಗಿ ಅವರ ಜೊತೆ ಬದುಕತೊಡಗಿದನು.

ಗಿರಿಜನರ ಸಂಘಟನೆಯಿಂದಾಗಿ ಸಾಹುಕಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಕೃಷಿಕಾರ್ಮಿಕರ ಕೂಲಿ ಒಂದು ರೂಪಾಯಿನಿಂದ ಎರಡು ರೂಪಾಯಿಗೆ ಹೆಚ್ಚಿತು. ಅದೇ ರೀತಿ. ಜಮೀನ್ದಾರ ಭೂಮಿಯಲ್ಲಿ ಗೇಣಿ ಆಧಾರದ ಮೇಲೆ ದುಡಿಯುತ್ತಿದ್ದ ರೈತರಿಗೆ ಈ ಮೊದಲು ಸಿಗುತ್ತಿದ್ದ ಐದು ಬುಟ್ಟಿ ಭತ್ತದ ಫಸಲಿಗೆ ಬದಲಾಗಿ ಇಪ್ಪತ್ತರಿಂದ, ಇಪ್ಪತ್ತೈದು ಬುಟ್ಟಿ ಭತ್ತ ಸಿಗತೊಡಗಿತು. (56 ಸೇರು ಭತ್ತದ ಪ್ರಮಾಣವನ್ನು ಒಂದು ಬುಟ್ಟಿ ಎಂದು ಕರೆಯುವ ವಾಡಿಕೆ ಆ ಪ್ರದೇಶದಲ್ಲಿ ಜಾರಿಯಲ್ಲಿತ್ತು) ಇವುಗಳ ಜೊತೆ ಜೊತೆಯಲ್ಲಿ ಗಿರಿಜನರೆಲ್ಲಾ ಸತ್ಯನಾರಾಯಣ ನೇತೃತ್ವದಲ್ಲಿ ಸಾಮೂಹಿಕವಾಗಿ ಸಂಘಟಿತರಾದ ಪರಿಣಾಮ, ಪೋಲಿಸರ, ಅರಣ್ಯಧಿಕಾರಿಗಳ ಕಿರುಕುಳ ತಪ್ಪಿತು. ಹೆಬ್ಬೆಟ್ಟಿನ ಸಹಿ ಮೂಲಕ ಅಕ್ರಮವಾಗಿ ಭೂಮಾಲಿಕರ ಪಾಲಾಗಿದ್ದ ಎರಡು ಸಾವಿರ ಎಕರೆ ಭೂಮಿಯನ್ನು ಅವರಿಂದ ಬಲವಂತವಾಗಿ ವಾಪಸ್ ಪಡೆಯುವಲ್ಲಿ ಆದಿವಾಸಿಗಳು ಯಶಸ್ವಿಯಾದರು.

ಪಾಳು ಬಿದ್ದಿದ್ದ ನಾಲ್ಕು ಸಾವಿರ ಸರ್ಕಾರಿ ಭೂಮಿಯನ್ನು ಭೂರಹಿತ ಆದಿವಾಸಿ ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಹಂಚಲಾಯಿತು. ಶಿಕ್ಷಕನಾಗಿದ್ದ ಸತ್ಯನಾರಾಯಣ, ಯಾವುದೇ ಕಮ್ಯೂನಿಷ್ಟ್ ವಿಚಾರಧಾರೆಗಳ ಹಂಗಿಲ್ಲದೆ, ಸತತ ಐದು ವರ್ಷಗಳ ಅವಿರತ ಹೋರಾಟದಿಂದ, ಶ್ರೀಕಾಕುಳಂ ಪ್ರಾಂತ್ಯದ ಭೂಮಾಲಿಕರಿಗೆ ಸಿಂಹಸ್ವಪ್ನವಾದನು. ಬಡವರಿಗೆ, ಕೃಷಿಕಾರ್ಮಿಕರಿಗೆ ಗಿರಿಜನರ ಪಾಲಿಗೆ ಆಶಾಕಿರಣವಾದನು. ಇದು ಸಹಜವಾಗಿ ಆಂಧ್ರದ ಕಮ್ಯೂನಿಷ್ಟ್ ನಾಯಕರ ಗಮನ ಸೆಳೆಯಿತು. ತೆಲಂಗಾಣ ರೈತರ ಹೋರಾಟವೆಂದು, ಪ್ರಸಿದ್ಧಿಯಾಗಿದ್ದ ಈ ಹೋರಾಟ ನಂತರ ನಕ್ಸಲ್ ಹೋರಾಟವಾಗಿ ಪರಿವರ್ತನೆ ಹೊಂದಿತು. ಈ ವೇಳೆಗೆ ಪಂಚಡಿ ಕೃಷ್ಣಮೂರ್ತಿ, ಸಿ.ತೇಜೇಶ್ವರರಾವ್, ಎಂಬ ಮುಖಂಡರು, ಸತ್ಯನಾರಾಯಣರಿಗೆ ಕೈ ಜೋಡಿಸಿದರು. ನೆರೆಯ ಒರಿಯಾದ ಪ್ರಸಿದ್ಧ ಕವಿ ಸುಬ್ಬರಾವ್ ಪ್ರಾಣಿಗ್ರಹಿ ಎಂಬುವರು, ಒರಿಸ್ಸಾದಲ್ಲಿ ತಮ್ಮ ಜಮುಕಲಾ ಕಥಾ ಎಂಬ ಹೆಸರಿನಲ್ಲಿ, ಸ್ಥಳೀಯ ಗಿರಿಜನರ ಸಮಸ್ಯೆಗಳನ್ನು ಜನಪದ ಶೈಲಿಯಲ್ಲಿ ಹಾಡು ಕಟ್ಟಿ ಸಂಘಟನೆಗೆ ನೆರವಾಗಿದ್ದರು. ಅದೇ ಪ್ರಯೋಗವನ್ನು ಇಲ್ಲಿ ಮುಂದುವರಿಸಿದರು. ಇವರ ನಡುವೆ ಅಪ್ಪಲಸೂರಿ ಎಂಬ ಮತ್ತೊಬ್ಬ ಮುಖಂಡ ನಗರಗಳಿಗೆ ಹೋಗಿ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮನವೊಲಿಸಿ ನಕ್ಸಲ್ ಸಂಘಟನೆಗೆ ಕರೆತಂದು ಮತ್ತಷ್ಟು ಹುರುಪು ತುಂಬಿದನು.

ಇವೆಲ್ಲವುಗಳ ಪರಿಣಾಮ, ಶ್ರೀಕಾಕುಳಂ ಜಿಲ್ಲೆಯ ಗಿರಿಜನರ ಸಂಘಟನೆ ಬಲಿಷ್ಟವಾಯಿತು. 1967 ರ ಅಕ್ಟೋಬರ್ 31 ರಂದು ಸಂಭವಿಸಿದ ಒಂದು ಘಟನೆ ಸಂಘಟನೆಯ ಹೋರಾಟಕ್ಕೆ ಹೊಸತಿರುವು ನೀಡಿತು. ಕಮ್ಯೂನಿಷ್ಟ್ ಪಕ್ಷದ ಸಭೆಗೆ ಹೋಗುತ್ತಿದ್ದ 800 ಗಿರಿಜನರ ಸದಸ್ಯರಿದ್ದ ಗುಂಪಿನ ಮೇಲೆ ಲೆವೆಡಿ ಎಂಬ ಹಳ್ಳಿಯೊಂದರಲ್ಲಿ ಭೂಮಾಲಿಕರ ಗೂಂಡಾಪಡೆ ಗುಂಡು ಹಾರಿಸಿ, ಇಬ್ಬರನ್ನು ಬಲಿ ತೆಗೆದುಕೊಂಡಿತು. ಆದಿನ ಗಿರಿಜನರ ಗುಂಪು ಗುಂಡೇಟಿನಿಂದ ಸತ್ತವರ ಎದೆಯ ಮೇಲೆ ಕೈಯಿಟ್ಟು ಇದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿತು. ಆ ಕ್ಷಣದಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟದ ಇತಿಹಾಸಕ್ಕೆ ರಕ್ತಸಿಕ್ತದ ಹೊಸ ಅಧ್ಯಾಯವೊಂದು ಸೇರ್ಪಡೆಯಾಯಿತು.

ವೆಂಪಟಾಪು ಸತ್ಯನಾರಾಯಣ, 800 ಗಿರಿಜನರ ಪಡೆಯೊಂದನ್ನು ಕಟ್ಟಿ, ಅದನ್ನು ತಲಾ ನೂರು ಜನರ 8 ದಳಗಳನ್ನು ವಿಭಜಿಸಿದ. ಅವರಿಗೆ ಹೋರಾಟದ ಕೆಚ್ಚನ್ನು ಮತ್ತು ಸ್ಥೈರ್ಯವನ್ನು ತುಂಬಿದ. ಇದರ ಪರಿಣಾಮ, 1968 ರ ಅಕ್ಟೋಬರ್ 23 ರಂದು ಸೊಂಪೇಟ ತಾಲ್ಲೋಕಿನ ಬೊದ್ದಪಡು ಎಂಬ ಗ್ರಾಮಕ್ಕೆ ನುಗ್ಗಿದ ಹೋರಾಟಗಾರರು, ಜಮೀನ್ದಾರರ ಮನೆಯಲ್ಲಿದ್ದ ಭತ್ತ, ಹಣವನ್ನು ಲೂಟಿ ಮಾಡಿದರು. ಮತ್ತೇ ಒಂದು ತಿಂಗಳಿನ ನಂತರ ತೆಕಳಿ ತಾಲೂಕಿನ ಗರುಡಬಾದ್ರ ಎಂಬ ಊರಿನ ಮೇಲೆ ದಾಳಿ ಮಾಡಿ, ಅಲ್ಲಿನ ಸಾಹುಕಾರರು, ಜಮೀನ್ದಾರರು, ಅವರ ಗೂಂಡಾಪಡೆಯನ್ನು ಥಳಿಸಿ, ಧವಸ, ಧಾನ್ಯ, ಹಣ, ಆಭರಣ, ಮತ್ತು ಬಂದೂಕಗಳನ್ನು ದೋಚಿದರು. ಪ್ರತಿಯೊಂದು ದಳಕ್ಕೂ ಸತ್ಯನಾರಾಯಣ, ಪಂಚಡಿ ಕೃಷ್ಣಮೂರ್ತಿ, ತಮ್ಮಡ ಗಣಪತಿ ಅಪ್ಪಾಲ್ ಸೂರಿ, ತೇಜೇಶ್ವರರಾವ್, ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು. ಒಂದು ವರ್ಷದ ಅವಧಿಯಲ್ಲಿ ನಡೆದ ನೂರಕ್ಕು ಹೆಚ್ಚು ದಾಳಿಗಳಿಂದ, ಭೂಮಾಲಿಕರು, ಹಣದ ಲೇವಾದೇವಿಗಾರರು, ಮತ್ತು ಅವರು ಸಾಕಿಕೊಂಡಿದ್ದ ಗೂಂಡಾ ಸದಸ್ಯರು, ಎಲ್ಲರೂ ತತ್ತರಿಸಿಹೋದರು. ದಾಳಿಯ ಜೊತೆಜೊತೆಯಲ್ಲಿ ಪೊಲೀಸರ ಜೊತೆ ನಡೆದ ಸಂಘರ್ಷದಲ್ಲಿ ಇಬ್ಬರು ಇನ್ಸಪೆಕ್ಟರ್‌ಗಳು ಸೇರಿದಂತೆ 31 ಮಂದಿ ಪೊಲೀಸರು ಹತರಾದರು.

ಶ್ರೀಕಾಕುಳಂ ಹೋರಾಟದ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ, 1969 ರ ಮಾರ್ಚ್ ತಿಂಗಳಿನಲ್ಲಿ ಶ್ರೀಕಾಕುಳಂ ಜಿಲ್ಲೆಗೆ ಭೇಟಿ ನೀಡಿದ ಚಾರು ಮುಜಂದಾರ್, ಹೋರಾಟಗಾರರಿಗೆ ಅಗತ್ಯವಾದ ಶಸ್ರಾಸ್ತ್ರಗಳನ್ನು ನೀಡಿದುದಲ್ಲದೆ, ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿಗೆ ವ್ಯವಸ್ಥೆ ಮಾಡಿದ. ಚಾರು ಮುಜಂದಾರ್ ಭೇಟಿಯಿಂದ ಶ್ರೀಕಾಕುಳಂ ಹೋರಾಟಕ್ಕೆ ಹೊಸ ತಿರುವು ಸಿಕ್ಕಿತು. ಎಣ್ಣೆಯಲ್ಲಿ ಅದ್ದಿದ್ದ ದೊಂದಿಗೆ (ಪಂಜು) ಕಿಡಿ ತಗುಲಿದಂತಾಯಿತು. ಹತ್ತಿ ಉರಿದ ಹೋರಾಟದ ಈ ದೊಂದಿ, ಅವರೆಗೆ ಕಗ್ಗತ್ತಲಲ್ಲಿದ್ದ ಅಮಾಯಕ ಗಿರಿಜನರ ಪಾಲಿಕೆ ಬೆಳಕಾದರೆ, ಶೋಷಣೆ ಮಾಡುತ್ತಿದ್ದ ಭೂಮಾಲಿಕರ ಪಾಲಿಗೆ ಮೈಸುಡುವ ಬೆಂಕಿಯಾಯಿತು. ಅಲ್ಪಾವಧಿಯಲ್ಲಿ ನಕ್ಸಲ್ ಹೋರಾಟ ಆಂಧ್ರದ ತೆಲಂಗಾಣ ಮತ್ತು ಶ್ರೀಕಾಕುಳಂ ಪ್ರಾಂತ್ಯದ ಮುನ್ನೂರು ಹಳ್ಳಿಗಳಿಗೆ ವ್ಯಾಪಿಸಿತು.

1969 ರ ಮಾರ್ಚ್ ತಿಂಗಳಿನಿಂದ ಡಿಸಂಬರ್‌‍ವರೆಗೆ ಭೂಮಾಲಿಕರ ಮನೆಯ ಮೇಲೆ 40 ದಾಳಿಗಳು ಮತ್ತು 29 ಭೂಮಾಲಿಕರ ಹಾಗೂ ಲೇವಾದೇವಿದಾರರ ಹತ್ಯೆಗಳು ಸಂಭವಿಸಿದವು. 1969 ರ ಮೇ 26 ರ ರಾತ್ರಿ ಲಹೋರಿಜೋಲ ಎಂಬ ಹಳ್ಳಿಯ ಮೇಲೆ ದಾಳಿ ಇಟ್ಟ 600 ಮಂದಿ  ಹೋರಾಟಗಾರರು, ಅಂಗಾರು ಇಂದುವದನ ನಾಯ್ಡು ಎಂಬ ಜಮೀನ್ದಾರನ ಮನೆಗೆ ನುಗ್ಗಿ ಆತನ ಪತ್ನಿ ಎದುರು ಕತ್ತು ಕೊಯ್ದು ಹತ್ಯೆ ಮಾಡಿದರು. (ಈತ ತನ್ನ ಗೂಂಡಾ ಪಡೆಯ ಮೂಲಕ ಗಿರಿಜನರ ಮೇಲೆ ಗುಂಡು ಹಾರಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದವನು) ಅಲ್ಲದೆ ಅವನ ನೆತ್ತರಿನಲ್ಲಿ ತಮ್ಮ ಹಸ್ತಗಳನ್ನು ಅದ್ದಿ ಮನೆಯ ಹೊರಭಾಗದ ಗೋಡೆಯ ಮೇಲೆ ಅವುಗಳ ಅಚ್ಚು ಮೂಡಿಸಿದರು. ಅವರ ಸಿಟ್ಟು ಮತ್ತು ಅಮಾನುಷವಾದ ಈ ಕೃತ್ಯದಲ್ಲಿ ಶತಶತಮಾನಗಳಿಂದ ಅವರು ಅನುಭವಿಸಿದ, ಶೋಷಣೆಯ ನೋವುಗಳಿದ್ದವು, ಅವರ ಹೆಂಡತಿಯರು ಮತ್ತು ಅಕ್ಕ ತಂಗಿಯರ ಅತ್ಯಾಚಾರದ ನೆನಪುಗಳಿದ್ದವು. ಮತ್ತೇ ಜೂನ್ ತಿಂಗಳಿನಲ್ಲಿ ಅಕ್ಕುಪಲ್ಲಿ ಎಂಬ ಊರಿನ ಬಡ್ಡಿ ವ್ಯಾಪಾರಿ ಭೂಚಂದ್ರರಾವ್ ಎಂಬಾತನ ಮನೆಗೆ ನುಗ್ಗಿದ ಮಹಿಳಾ ಸದಸ್ಯರನ್ನು ಒಳಗೊಂಡಿದ್ದ ತಂಡ, ಆತನನ್ನೂ ಸಹ ಪತ್ನಿಯ ಎದುರು ಹತ್ಯೆಗೈದು, ಗಿರವಿ ಇಟ್ಟುಕೊಂಡಿದ್ದ ಗಿರಿಜನ ಚಿನ್ನಾಭರಣಗಳನ್ನು ದೋಚಲಾಯಿತು. ಈ ದಾಳಿಯ ನೇತೃತ್ವವನ್ನು ಪಂಚಡಿ ನಿರ್ಮಲ ಎಂಬಾಕೆ ವಹಿಸಿಕೊಂಡಿದ್ದಳು. ಹೀಗೆ ನಿರಂತರ ನಡೆದ ದಾಳಿಯಿಂದ ಬೆಚ್ಚಿ ಬಿದ್ದ ಭೂಮಾಲಿಕರು, ಸಾಹುಕಾರರು, ಅವರಿಗೆ ಬೆಂಗಾವಲಿಗೆ ಇದ್ದ ಗೂಂಡಾಗಳು ತಮ್ಮ ಮನೆ, ಜಮೀನು, ಎಲ್ಲವನ್ನು ಬಿಟ್ಟು ರಾತ್ರೋರಾತ್ರಿ ಊರು ಖಾಲಿ ಮಾಡಿ, ಪಟ್ಟಣ ಮತ್ತು ನಗರಗಳನ್ನು ಸೇರಿಕೊಂಡರು. ಬಹುತೇಕ ಈ ಎಲ್ಲಾ ಘಟನೆಗಳು, ಶ್ರೀಕಾಕುಳಂ ಜಿಲ್ಲೆ ಪಾರ್ವತಿಪುರ, ಸೊಂಪೇಟ, ತಕಾಳಿ ತಾಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ಜರುಗಿದ್ದು ವಿಶೇಷ.

(ಮುಂದುವರಿಯುವುದು)