Daily Archives: May 4, 2012

ಮೂಲಭೂತ ಶಿಕ್ಷಣ ಒಂದು ಮರೀಚಿಕೆ


-ಬಿ. ಶ್ರೀಪಾದ ಭಟ್


 

ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ಎಸ್.ಎಚ್.ಕಪಾಡಿಯ, ನ್ಯಾಯಾಧೀಶ ಕೆ.ಎಸ್.ರಾಧಾಕೃಷ್ಣ, ಮತ್ತು ನ್ಯಾಯಾಧೀಶ ಜೆ.ಜೆ. ಸ್ವತಂತ್ರ ಕುಮಾರ ಅವರು ನೀಡಿರುವ ಐತಿಹಾಸಿಕ ತೀರ್ಪಿನ ಪ್ರಕಾರ ಕಡ್ಡಾಯ ಮೂಲಭೂತ ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡ 25 ರಷ್ಟು ಮೀಸಲಾತಿಯನ್ನು ಅನುಮೋದಿಸಿ, ಈ ಕಾಯ್ದೆಯನ್ನು ಎತ್ತಿ ಹಿಡಿದು ಇದನ್ನು 2012 ರಿಂದಲೇ ಜಾರಿಗೆ ಬರುವಂತೆ ಅನುಷ್ಟಾನಗೊಳಿಸಲು ಆದೇಶಿಸಿದೆ. ಈ ತೀರ್ಪಿನ ಪ್ರಕಾರ ಸರ್ಕಾರಿ ಶಾಲೆಗಳು, ಅನುದಾನಿತ ಖಾಸಗಿ ಶಾಲೆಗಳು, ಅನುದಾನರಹಿತ ಖಾಸಗಿ ಶಾಲೆಗಳು ಈ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಅದರೆ ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಈ ಕಾಯ್ದೆಯಿಂದ ವಿನಾಯಿತಿ ಕೊಡಲಾಗಿದೆ.

ಇಂದು ಸ್ವಾತಂತ್ರ್ಯ ಬಂದು 65 ವರ್ಷಗಳ ನಂತರವೂ ಮೂಲಭೂತ ಶಿಕ್ಷಣವು ಒಂದು ಮರೀಚಿಕೆಯಾಗಿರುವುದು, ಅದಕ್ಕಾಗಿ ನ್ಯಾಯಾಂಗವು ಪದೇ ಪದೇ ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿರುವುದು, ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲು ತಿಣುಕುತ್ತಿರುವುದು ಕಡೆಗೂ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳು (8ನೇ ತರಗತಿವರೆಗೆ) ಹಾಗೂ ಖಾಸಗೀ ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳು (8ನೇ ತರಗತಿಯವರೆಗೆ) ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡ 25 ರಷ್ಟು ಮೀಸಲಾತಿಯನ್ನು ಕೊಡಬೇಕೆನ್ನುವ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಶಿಕ್ಷಣ ಹಕ್ಕು ಕಾಯ್ದೆಯ ಕರಡು ನೀತಿಯನ್ನು ಎತ್ತಿ ಹಿಡಿದು ಐತಿಹಾಸಿಕ ತೀರ್ಪು ನೀಡಿದೆ, ಇದು ಇದೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬೇಕೆಂದು ಸಹ ಆದೇಶಿಸಿದೆ. ಇದು ದೇಶದ ಎಲ್ಲಾ ಸಂಬಂಧಪಟ್ಟ ಮೇಲ್ಕಾಣಿಸಿದ ಶಾಲೆಗಳು ಸಂವಿಧಾನದ ಪ್ರಕಾರ ದೇಶದ ನ್ಯಾಯಾಂಗ ವ್ಯವಸ್ಥೆಯ ಆದೇಶವನ್ನು ಪಾಲಿಸಲೇಬೇಕು. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣದಲ್ಲಿ ಶೇಕಡ 25 ರಷ್ಟು ಮೀಸಲಾತಿಯ ಆದೇಶವನ್ನು ಕಾನೂನಿನ ಪ್ರಕಾರ ಪಾಲಿಸಬೇಕು ಎನ್ನುವುದು ಒಂದು ಕಡೆಯಾದರೆ, ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡಲೇಬೇಕು ಎನ್ನುವ ಮಾನವೀಯ ನೆಲೆಗಟ್ಟಿನ ಹಕ್ಕೊತ್ತಾಯವೆನ್ನುವುದು ಮತ್ತೊಂದು ಪ್ರಮುಖ ನೀತಿ.

ಇದು ನೈತಿಕತೆಯ, ಮೌಲ್ಯಗಳ ಪ್ರಶ್ನೆ. ಆದರೆ ಈ ನೈತಿಕತೆ ಹಾಗೂ ಮೌಲ್ಯಗಳ ಅರ್ಥಗಳ ಅರಿವೇ ಇಲ್ಲದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದ 65 ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ರೂಪಿಸಿದ ನೀತಿಗಳು ಅತ್ಯಂತ ದುರ್ಬಲವಾಗಿದ್ದವು. ಏಕೆಂದರೆ ಇದು ಖಾಸಗೀ ಶಾಲೆಗಳಿಗೆ ಅನುಕೂಲಕರವಾಗುವಂತೆ ಇತ್ತು ಮತ್ತು ಇಲ್ಲಿ ರಾಜಕೀಯ ಇಚ್ಛಾಶಕ್ತಿ ಇರಲೇ ಇಲ್ಲ ಹಾಗೂ ಸಾಮಾಜಿಕ ಜವಬ್ದಾರಿ ಹಾಗೂ ಸಾಮಾಜಿಕ ನ್ಯಾಯದ ಪರವಾದ ಮನಸ್ಸು ಸರ್ಕಾರಗಳಿಗೆ ಅಸ್ಪೃಶ್ಯವಾಗಿತ್ತು. ಇನ್ನು ಕೇವಲ ಆರ್ಥಿಕ ಲಾಭವನ್ನೇ ತನ್ನ ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಂಡಿರುವ ನಮ್ಮ ದೇಶದ ಖಾಸಗಿ ಶಾಲೆಗಳು ಮೀಸಲಾತಿಯೆಂದರೆ ಬೆಚ್ಚಿ ಬೀಳುತ್ತವೆ. ಇನ್ನಿಲ್ಲದ ಆತಂಕವನ್ನೂ, ಇದರಿಂದ ದೇಶದ ಭವಿಷ್ಯವೇ ನಾಶವಾಗುತ್ತದೆ ಎಂದು ಕೀಳು ಮಟ್ಟದ ಪಿತೂರಿಯನ್ನೇ ಹುಟ್ಟು ಹಾಕುತ್ತವೆ. ಇದೆಲ್ಲದರ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣದಲ್ಲಿ ಶೇಕಡ 25 ರಷ್ಟು ಮೀಸಲಾತಿಯ ಆದೇಶವನ್ನು ಖಾಸಗೀ ಶಾಲೆಗಳು ಅತ್ಯಂತ ಅಮಾನವಿಯವಾಗಿ, ಅನೈತಿಕವಾಗಿ, ಆತ್ಮದ್ರೋಹದಿಂದ ಪ್ರಶ್ನಿಸುತ್ತಿದ್ದರೆ, ಸರ್ಕಾರ ಇನ್ನು ತನ್ನ ಜವಬ್ದಾರಿ ಮುಗಿಯಿತು ಏನಿದ್ದರೂ ಖಾಸಗೀ ಶಾಲೆಗಳುಂಟು ಹಾಗೂ ಸುಪ್ರೀಂಕೋರ್ಟ್‌ನ ಆದೇಶವುಂಟು ಎಂದು ಅತ್ಯಂತ ಬೇಜವಬ್ದಾರಿಯಿಂದ ವರ್ತಿಸುತ್ತಿವೆ.

ಮೊದಲು ಖಾಸಗೀ ಶಾಲೆಗಳ ಆಕ್ಷೇಪಣೆಗಳನ್ನು ನೋಡೋಣ:

1. ಈ ಮೀಸಲಾತಿಯು ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹಾಳು ಮಾಡುತ್ತವೆ. ಮಧ್ಯಮ ವರ್ಗದ ಹಾಗೂ ಮೇಲ್ವರ್ಗದ ಶ್ರೀಮಂತ ವಿದ್ಯಾರ್ಥಿಗಳು ಕೆಳವರ್ಗಗಳ ಬಡ ವಿದ್ಯಾರ್ಥಿಗಳೊಂದಿಗೆ ಬೆರೆಯುವುದಿಲ್ಲ. ಬಡ ವಿದ್ಯಾರ್ಥಿಗಳು ಕೀಳರಿಮೆಯಿಂದ ಬಳಲುತ್ತಾರೆ. ಇದು ಶಾಲೆಯಲ್ಲಿ ತಾರತಮ್ಯ ನೀತಿಯನ್ನು ಹುಟ್ಟಿ ಹಾಕುತ್ತದೆ.

ಪ್ರಜ್ಞಾವಂತರ ಉತ್ತರ: ಪ್ರಾರಂಭದಲ್ಲಿ ವಿಭಿನ್ನ ವರ್ಗಗಳ ವಿದ್ಯಾರ್ಥಿಗಳು ಒಂದುಗೂಡಿ ಬೆರೆಯಲು ತೊಂದರೆ ಇರುತ್ತದೆ. ಇದು ಸಹಜ. ಆದರೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಯರು ಇಲ್ಲಿ ಅತ್ಯಂತ ಸೂಕ್ಷವಾಗಿ, ಜವಬ್ದಾರಿಯಿಂದ, ಹೆಚ್ಚಿನ ಹೊಣೆಗಾರಿಕೆಯಿಂದ ಈ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಇದು ಕಷ್ಟದ ಕೆಲಸವೇನಲ್ಲ. ಈ ನಡುವಳಿಕೆಗಳನ್ನು ಶಿಕ್ಷಣದ ತರಬೇತಿಯ ಸಂದರ್ಭದಲ್ಲಿ ಕಲಿಸಿಕೊಡಲಾಗುತ್ತದೆ. ಒಂದು ವೇಳೆ ಕಲಿಸಿಕೊಡದಿದ್ದರೆ ಕಲ್ಪಿಸಿಕೊಡಬೇಕು. ಈ ರೀತಿಯ ಸಾಮಾಜಿಕ ಹಿನ್ನೆಲೆಯ, ಶೈಕ್ಷಣಿಕ ಹಿನ್ನೆಲೆಯ ಅಸಮತೋಲನವನ್ನು ನಿಭಾಯಿಸಲು ಮಾನವ ಶಾಸ್ತ್ರೀಯ ಅಧ್ಯಯನದಲ್ಲಿ ಅನೇಕ ಪರಿಕರಗಳು, ಉತ್ತರಗಳು, ಸಿದ್ಧ ಮಾದರಿಗಳು ದೊರಕುತ್ತವೆ. ಶಿಕ್ಷಕರು ಇವನ್ನು ಅಭ್ಯಸಿಸಬೇಕು. ಇದು ಬಹಳ ಸುಲಭ. ಕೇವಲ ಇಚ್ಛಾಶಕ್ತಿ ಬೇಕು. ಅಷ್ಟೇ. ಆದರೆ ಇವರೆಲ್ಲ ಸಾಮಾಜಿಕ ಜವಾಬ್ದಾರಿ ಹಾಗೂ ಸಾಮಾಜಿಕ ನ್ಯಾಯದ ಅರ್ಥವನ್ನು, ಅಗತ್ಯತೆಯನ್ನು ಮನದೊಳಗೆ ಪ್ರಾಮಾಣಿಕವಾಗಿ ಬಿಟ್ಟುಕೊಂಡರೆ ಕೆಲವೇ ತಿಂಗಳುಗಳೊಳಗೆ ತಮ್ಮ ಶಾಲೆಯನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬಹುದು.ಮಾಡಲೇಬೇಕು. ಇದು ನ್ಯಾಯಾಂಗದ ಆದೇಶ.ಒಂದು ವೇಳೆ ಹಾಗಾಗದಿದ್ದರೆ ಇದು ನ್ಯಾಯಾಂಗದ ನಿಂದನೆಯಾಗುತ್ತದೆ ಎಂದು ನಾವೆಲ್ಲ ಈ ಮುನುವಾದಿಗಳಿಗೆ ಪದೇ ಪದೇ ಎಚ್ಚರಿಸುತ್ತಿರಬೇಕು.

2. ಈ ಮೀಸಲಾತಿಯ ಮೂಲಕ ಕಳ್ಳರು, ರೌಡಿ ಹಿನ್ನೆಲೆಯವರು ಶಾಲೆಗಳಲ್ಲಿ ಪ್ರವೇಶವನ್ನು ಪಡೆದುಕೊಂಡು ಒಟ್ಟಾರೆಯಾಗಿ ಶಾಲೆಯ ಶಾಂತಿ ವ್ಯವಸ್ಥೆ ಹಾಳಾಗುತ್ತದೆ. ಅವರ ಊಟದ ವ್ಯವಸ್ಥೆಯಲ್ಲಿನ ತಾರತಮ್ಯದಿಂದ ಶಾಲೆಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಫಲಿತಾಂಶದ ಮಟ್ಟ ಕುಸಿಯುತ್ತದೆ.

ಪ್ರಜ್ಞಾವಂತರ ಉತ್ತರ: ಇಂತಹ ನೀಚತನದ, ದುರಹಂಕಾರದ ಅಭಿಪ್ರಾಯಗಳಿಗೆ ಒಂದೇ ಉತ್ತರ. ನಾವೆಲ್ಲ ಈ ಹೇಳಿಕೆಗಳನ್ನು ನೀಡಿದವರ ವಿರುದ್ಧ ನ್ಯಾಯಾಂಗನಿಂದನೆಯ, ವೈಯುಕ್ತಿಕ ಮಾನಹಾನಿ ಅಪಾದನೆಯಡಿಯಲ್ಲಿ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬೇಕು. ಕೆಲವು ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಛೀಮಾರಿ ಹಾಕಿಸಿ ಶಿಕ್ಷೆ ಕೊಡಿಸಿದರೆ ಮಿಕ್ಕವರು ತೆಪ್ಪಗಾಗುತ್ತಾರೆ. ಸುಮ್ಮನಾಗುತ್ತಾರೆ. ಸಾಮಾಜಿಕ ನ್ಯಾಯದ ಪರವಾಗಿ ಕೇವಲ ಮಾತನಾಡುವ ನಾವು ಸಾರ್ವಜನಿಕವಾಗಿ ಕ್ರಿಯಾಶೀಲರಾಬೇಕು ಅಷ್ಟೇ. ಇದು ಬಿಟ್ಟು ಮತ್ತೆ ವಾದ ಪ್ರತಿವಾದಗಳಲ್ಲಿ ತೊಡಗಿದರೆ ಅದು ನಮ್ಮನೀಚತನವನ್ನು, ಅನೈತಿಕತೆಯನ್ನು ತೆರೆದಿಡುತ್ತದೆ.

3. ಈ ಮೀಸಲಾತಿಯ ಮೂಲಕ ನಾವು ಕೆಳವರ್ಗದ ಬಡ ವಿದ್ಯಾರ್ಥಿಗಳನ್ನು ಸೇರಿಸಿಕೊಂಡರೆ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಶೇಕಡಾ 25 ರಷ್ಟು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡಬೇಕಾದರೆ ಇದಕ್ಕೆ ಬೇಕಾದ ಹಣವನ್ನು ಎಲ್ಲಿಂದ ತರುವುದು? ಇದನ್ನು ಸರಿತೂಗಿಸಲು ಮಧ್ಯಮ ಹಾಗೂ ಮೇಲ್ವರ್ಗದ ಶ್ರೀಮಂತ ಪೋಷಕರಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಬೇಕು. ಇದನ್ನು ಪ್ರತಿಭಟಿಸಿ ಅವರು ನಮ್ಮ ಶಾಲೆಯನ್ನೇ ತೊರೆಯಬಹುದು.

ಪ್ರಜ್ಞಾವಂತರ ಉತ್ತರ: ಕಡ್ಡಾಯ ಶಿಕ್ಷಣ ಹಕ್ಕಿನ ಕರಡು ನೀತಿಯ ಪ್ರಕಾರ ವಿದ್ಯಾಭ್ಯಾಸದ ಶುಲ್ಕದ ಶೇಕಡ 35 ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಿದರೆ ಶೇಕಡ 65 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ಈ ಅನುಕೂಲ ಕಲ್ಪಿಸಕೊಡುವುದಕ್ಕಾಗಿ ಖಾಸಗೀ ಶಾಲೆಗಳು ಇತರೇ ಸೌಲಭ್ಯಗಳನ್ನು ಶೇಕಡ 25 ರಷ್ಟು ಹೆಚ್ಚುವರಿ ಬಡ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಬೇಕು. ಈ ಹೆಚ್ಚುವರಿಯಾದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುವು ಮಾಡಿಕೊಡಲು ತಮ್ಮ ಪೇಮೆಂಟ್ ವಿಭಾಗದ ಪ್ರವೇಶದಲ್ಲಿ ಶೇಕಡವಾರು 25 ರಷ್ಟು ಕಡಿತಗೊಳಿಸಲೇಬೇಕು. ಇದಕ್ಕಾಗಿ ತಮ್ಮ ಲಾಭಂಶದಲ್ಲಿ ಕೊಂಚ ಕಡಿಮೆಗಳಿಕೆ ಉಂಟಾಗಬಹುದು. ಈ ಮೂಲಕವಾದರೂ ಪ್ರಾಥಮಿಕ ಶಿಕ್ಷಣವೆನ್ನುವುದು ವ್ಯಾಪಾರದ ಸರಕಲ್ಲ ಬದಲಾಗಿ ಮೂಲಭೂತ ಅವಶ್ಯಕತೆ ಮತ್ತು ಇದನ್ನು ಉಚಿತವಾಗಿ ಪಡೆಯುವುದು ಬಡವರ ಹಕ್ಕು ಎನ್ನುವ ಜೀವಪರ ನೈಸರ್ಗಿಕ ನೀತಿಯನ್ನು ಖಾಸಗೀ ಶಿಕ್ಷಣ ಸಂಸ್ಥೆಗಳು ಗೌರವಿಸಲೇಬೇಕು. ಇದನ್ನೂ ಮಾಡಲಾಗದಿದ್ದರೆ ಅವರು ಈ ವಲಯವನ್ನೇ ಬಿಟ್ಟು ಹೋಗಬೇಕಾಗುತ್ತದೆ ಮತ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರಗಳು ತಾಕೀತು ಮಾಡಲೇಬೇಕು.

4. ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನು ಜಾರಿಗೊಳಿಸಲು ತಮ್ಮ ಸರ್ವ ಶಿಕ್ಷಣದ ಅಭಿಯಾನದ ಅಡಿಯಲ್ಲಿ ಸರ್ಕಾರವೇ ಏತಕ್ಕೆ ಹೆಚ್ಚುವರಿ ಶಾಲೆಗಳನ್ನು ಆರಂಭಿಸಿ ಪ್ರವೇಶಕ್ಕಾಗಿ ಕಾದಿರುವ ಸುಮಾರು 10 ಲಕ್ಷದಷ್ಟು ಬಡ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಿಕೊಳ್ಳಬಾರದು ? ನಮ್ಮನ್ನೇಕೆ ಪೀಡಿಸುತ್ತೀರಿ?

ಪ್ರಜ್ಞಾವಂತರ ಉತ್ತರ: ನೋಡಿ ಇವರ ನೈತಿಕ ಪತನ!! ಕೆಳವರ್ಗಗಳ ಬಡಜನತೆಯೊಂದಿಗೆ ಮಾನಸಿಕ ಹಾಗೂ ಭೌತಿಕ ಸಂಪರ್ಕವನ್ನು ಸಂಪೂರ್ಣ ಕಡೆದುಕೊಂಡಿರುವ ಈ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು 30  ವರ್ಷಗಳ ಹಿಂದೆ ಹೀಗಿರಲಿಲ್ಲ. ಕಳೆದ 20 ವರ್ಷಗಳ ಖಾಸಗೀಕರಣದ ಲಾಭವನ್ನು ಏಕಪಕ್ಷೀಯವಾಗಿ ಹೊಡೆದುಕೊಂಡ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು ಆರ್ಥಿಕವಾಗಿ ಬಲವಾಗುತ್ತಾ ತಮ್ಮ ಮಾನಸಿಕ ಭ್ರಷ್ಟಾಚಾರವನ್ನೂ, ಬೌದ್ಧಿಕ ದಿವಾಳಿತನವನ್ನೂ ಕೂಡ ಅದೇ ವೇಗದಲ್ಲಿ ಬೆಳೆಸಿಕೊಂಡಿವೆ. ಈ ವರ್ಗಗಳು ತಮ್ಮ ಆರ್ಥಿಕ ಬಲದಿಂದ ಆಗಲೇ ಈ ಖಾಸಗೀ ಶಾಲೆಗಳ ಅನುಕೂಲತೆಗಳನ್ನು, ಗುಣಮಟ್ಟವನ್ನು ಬಳಸಿಕೊಂಡು ಜೀವನದಲ್ಲಿ ಮೇಲೇರಿದ್ದಾರೆ. ಉತ್ತಮ ಸಂಬಳ ತೆಗೆದುಕೊಳ್ಳುತಿದ್ದಾರೆ. ಇದನ್ನಾಗಲೇ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳ ಮೂರು ತಲೆಮಾರುಗಳು ಇದರ ಫಲವನ್ನು ಅನುಭವಿಸಿವೆ.ಆದರೆ ಇದೇ ಸೌಲಭ್ಯ, ದುಬಾರಿಯಾದ ಖಾಸಗೀ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೆಳವರ್ಗಗಳ, ದಲಿತರ ಬಡಮಕ್ಕಳು ಲಭ್ಯವಾಗಿಲ್ಲ. ಏಕೆಂದರೆ ದುಬಾರಿಯಾದ ಈ ಖಾಸಗೀ ಶಿಕ್ಷಣ ಮಾಧ್ಯಮ ಇವರಿಗೆ ಗಗನಕುಸುಮ ಎಂದು ಎಲ್ಲರಿಗೂ ಗೊತ್ತು. ಇದನ್ನು ಪಡೆದುಕೊಳ್ಳುವುದೇ ಸಾಮಾಜಿಕ ನ್ಯಾಯದ ಮೂಲ ತಿರುಳು ಇದನ್ನು ಅನುಷ್ಟಾನಗೊಳಿಸುವುದರ ಮೊದಲ ಹೆಜ್ಜೆಯೇ ಈ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಮೂಲ ನೀತಿ. ಇದನ್ನು ಶತಮಾನಗಳಿಂದ ಹೇಳುತ್ತಲೇ ಬಂದಿದ್ದರೂ ಈ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳು ಅದನ್ನು ಒಪ್ಪಿಕೊಂಡು ಅನುಸರಿಸಲು ತಯಾರಿಲ್ಲವೆಂದರೆ ನಾವೆಲ್ಲ ಈ ಜನಗಳ ಮನಪರಿವರ್ತನೆಗೆ ಕಾಯುತ್ತಾ ಮತ್ತೆ ಶತಮಾನಗಳವರೆಗೆ ಕಾಯುತ್ತಾ ಕೂಡಬೇಕೇ (ಆತ್ಮವಂಚನೆಯ ಮಾರ್ಗ) ಅಥವಾ ಸುಪ್ರೀಂಕೋರ್ಟನ ಆದೇಶವನ್ನೇ ಒಂದು ದೊಡ ಅಸ್ತವನ್ನಾಗಿ ಬಳಸಿಕೊಂಡು (ಆತ್ಮಸಾಕ್ಷಿಯ ಮಾರ್ಗ) ಕ್ರಿಯಾಶೀಲರಾಗಬೇಕೇ.

ಇನ್ನು ಕಡೆಯದಾಗಿ ರಾಜ್ಯ ಸರ್ಕಾರಗಳ ಆತ್ಮವಂಚನೆ ಹಾಗೂ ಸಮಾಜದ್ರೋಹ. ಸುಪ್ರೀಂಕೋರ್ಟನ ಆದೇಶದಡಿಯಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆದೇಶಗಳನ್ನು, ಗಡುವನ್ನೂ ಜಾರಿಗೊಳಿಸಬೇಕಲ್ಲವೇ? ಇದಕ್ಕಾಗಿ ಸಮಿತಿಯನ್ನು ರಚಿಸಿ ಈಗಾಗಲೇ ಇದರ ಅನುಷ್ಠಾನಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಇದಾವುದನ್ನೂ ಮಾಡದೆ ಸರ್ಕಾರಗಳು ನಿದ್ರಿಸುತ್ತಿವೆ. ಈ ಖಾಸಗೀ ಶಿಕ್ಷಣ ಸಂಸ್ಥೆಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲಿ ಎಂದು ಬಕಪಕ್ಷಿಯಂತೆ ಕಾಯುತ್ತಿವೆ. ಈಗಾಗಲೇ ಖಾಸಗೀ ಶಿಕ್ಷಣ ಸಂಸ್ಥೆಗಳು ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿತವಾಗಲು ವಾಮಮಾರ್ಗಗಳನ್ನು ಹುಡುಕುತ್ತಿವೆ. ಏಕೆಂದರೆ ಅಲ್ಲಿ ಈ ಕಾಯ್ದೆಗೆ ವಿನಾಯಿತಿ ಇದೆ. ಇದಕ್ಕೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಇದು ಎಂತಹ ನೀಚತನ !!!

ಕೇಂದ್ರ ಸರ್ಕಾರ ನಿಯೋಜಿಸಿದ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಸಮಿತಿಯು ಶಿಕ್ಷಣ ಕಾಯ್ದೆ ಹಕ್ಕು ಕಾನೂನಿಗೆ ಪೂರಕವಾಗಿ ದೇಶದ ಸರ್ಕಾರಿ ಶಾಲೆಗಳ ಬಗೆಗೆ ಒಂದು ವರದಿಯನ್ನು ನೀಡಲು ಇಲ್ಲಿನ ಕೆಲವು ಪ್ರಮುಖ ರಾಜ್ಯಗಳನ್ನು ತನ್ನ ಸಂಶೋಧನೆಗಾಗಿ ಆರಿಕೊಂಡು ಕೆಳಗಿನಂತೆ ವರದಿ ನೀಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಶೇಕಡಾ 55-60 ರಷ್ಟು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಧ್ಯದಲ್ಲೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ಶೇಕಡಾ 30 ರಷ್ಟು ಶಾಲೆಗಳು ಏಕೋಪಾಧ್ಯಾಯ ಶಾಲೆಗಳು. ಇನ್ನೂ ಕನಿಷ್ಟ 6 ಲಕ್ಷ ಶಿಕ್ಷಕರ ಅವಶ್ಯಕತೆ ಇದೆ. ಉತ್ತರ ಭಾರತದ ಅನೇಕ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯನ್ನು ಹೊರ ಗುತ್ತಿಗೆ ನೀಡುತ್ತಾರೆ. ಶೇಕಡಾ 8 ರಷ್ಟು ಶಾಲೆಗಳಿಗೆ ಕಟ್ಟಡಗಳಿಲ್ಲ. ಶೇಕಡಾ 15 ರಷ್ಟು ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೇಕಡಾ 60 ರಷ್ಟು ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಶೇಕಡಾ 70 ರಷ್ಟು ಶಾಲೆಗಳಲ್ಲಿ ವಿದ್ಯುತ ವ್ಯವಸ್ಥೆ ಇಲ್ಲ. ಇದಕ್ಕೆ ಅತ್ಯಂತ ತೀವ್ರವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ ಸುಪ್ರೀಂಕೋರ್ಟ ರಾಜ್ಯ ಸರ್ಕಾರಗಳಿಗೆ ತಮ್ಮ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಇನ್ನಿತರ ಸೌಕರ್ಯಗಳ ಬಗೆಗೆ ತಕ್ಷಣ ವರದಿ ನೀಡಲು ಸೂಚಿಸಿದಾಗ ಆತ್ಮಸಾಕ್ಷಿ ಇಲ್ಲದ ಸರ್ಕಾಗಳು ಮೇಲ್ಕಾಣಿಸಿದ ಎಲ್ಲಾ ಸೌಲಭ್ಯಗಳು ಲಭ್ಯವಿದೆ ಎಂದು ಸುಪ್ರೀಂಕೋರ್ಟಗೆ ಸುಳ್ಳು ವರದಿಯನ್ನು ಸಲ್ಲಿಸಿತು ಅದೂ ಸುಳ್ಳು ಅಂಕಿ ಅಂಶಗಳೊಂದಿಗೆ. ಇದನ್ನು ಸಮ್ಮತಿಸದ ಸುಪ್ರೀಂಕೋರ್ಟ 2013 ರಲ್ಲಿ ಸಂಪೂರ್ಣ ಪರಿಶೋಧನೆ ನಡೆಸಲು ಸೂಚಿಸಿದೆ. ಇದು ನಮ್ಮ ಸರ್ಕಾರಿ ಶಾಲೆಗಳ ಎಂದೂ, ಎಂದೆಂದೂ ಮುಗಿಯದ ದುರಂತ ಕಥೆ. ಇದನ್ನು ವಿಸ್ರೃತವಾಗಿ ಬರೆದರೆ ನೂರಾರು ಪುಟಗಳು ಸಾಲದು. ನಿಜ ನಾನು ಮತ್ತು ನಮ್ಮ ತಲೆಮಾರು ಮತ್ತು ನಮ್ಮ ಹಿರಿಯ ತಲೆಮಾರಿನವರೆಲ್ಲ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ಓದಿದ್ದು.

ಆದರೆ ಅದು ಭೂತಕಾಲದ ಮಾಧ್ಯಮದಲ್ಲಿ ಓದಿಸಿ ಸಾರ್ವಜನಿಕವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣದ ಪರವಾಗಿ ಮಾತನಾಡಿದರೆ ಇದು ಕಂಡವರ ಮಕ್ಕಳನ್ನು ಬಾವಿಗೆ ದೂಡಿದಂತಲ್ಲದೇ ಮತ್ತಿನ್ನೇನು? ನಮಗೆಲ್ಲಾ ಕನ್ನಡ ಮಾಧ್ಯಮದ ಶಿಕ್ಷಣದ ಹೋರಾಟಕ್ಕೆ ಈ ಅಲ್ಪಸಂಖ್ಯಾತ, ದಲಿತ, ಕೆಳ ವರ್ಗಗಳ ಜನಾಂಗ ಒಂದು ಆಟಿಕೆ ಮಾತ್ರ. ನಮ್ಮ ಕನ್ನಡಾಭಿಮಾನಕ್ಕೆ, ನಾವು ಪಲಾಯನವಾದಿಗಳಲ್ಲ ಎಂದು ಇಡೀ ಜಗತ್ತಿಗೆ ತೋರ್ಪಡಿಸಿಕೊಳ್ಳುವುದಕ್ಕೆ, ಕಮ್ಮಟಗಳಲ್ಲಿ ನಾಡಿನ ಭಾಷೆಯ ಮಹತ್ವದ ಮೇಲೆ ಚಿಂತಿಸಿ, ಮಂಥಿಸಿ ಮಿಂಚುವುದಕ್ಕೆ ನಾವು ತಳ ಸಮುದಾಯಗಳ, ಅಲ್ಪ ಸಂಖ್ಯಾತರ ಮಕ್ಕಳನ್ನ, ಹಿಂದುಳಿದವರ, ಬಡವರ ಮಕ್ಕಳನ್ನ ಬಳಸಿಕೊಂಡು, ಅವರನ್ನು ಕನ್ನಡದ ಪರವಾದ ಹೋರಾಟಕ್ಕೆ ಎಳೆದು ತಂದು ನಮ್ಮ ಅಹಂನ ಕನ್ನಡ ಉಳಿಸಿಸಲು ಇವರನ್ನ ಹಾದಿ ತಪ್ಪಿಸಿ ವೇದಿಕೆಗಳ ಮೇಲೆ ನಮ್ಮ ಕನ್ನಡ ಉದ್ಧಾರ ಮಾಡಿಕೊಳ್ಳುವುದಾದರೆ, ಈ ರೀತಿ ಶೋಷಿಸುವುದೇ ಕನ್ನಡಪರ ಚಿಂತನೆ ಎನ್ನುವುದಾದರೆ ಇಂತಹ ಲೊಳಲೊಟ್ಟೆ, ಬುಡುಬುಡಿಕೆಯ ಹೋರಾಟಕ್ಕೆ ನನ್ನಂತಹವರ ವಿರೋಧವಿದೆ. ಇದು ಅತಿಯಾದ ಮಾತು ಎಂದು ನನಗೆ ಗೊತ್ತು. ಆದರೆ ದಯವಿಟ್ಟು ಇದನ್ನು ನಾವೆಲ್ಲ ಬಹಳ ಎಚ್ಚರಿಕೆಯಿಂದ, ಆತ್ಮಸಾಕ್ಷಿಯಿಂದ ಗಮನಿಸಬೇಕು. ಇಂದು ನಿಜಕ್ಕೂ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಅನ್ನ ತಂದುಕೊಡುವ ಸಿದ್ಧ ಸೂತ್ರಗಳಾಗಲೀ, ಮಂತ್ರದಂಡಗಳಾಗಲೀ, ದೇಸೀ ಮಾರ್ಗಗಳಾಗಲೀ, ಭವಿಷ್ಯದ ಕಾಣ್ಕೆಗಳಾಗಲೀ ಖಂಡಿತ ಇಲ್ಲವೇ ಇಲ್ಲ. ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಈ ಅನ್ನ ತಂದು ಕೊಡುವ ಮಾರ್ಗೋಪಾಯಗಳನ್ನು ಸರ್ಕಾರದ ಜೊತೆಗೆ ಸೇರಿ ನಾವೆಲ್ಲ ರೂಪಿಸಬೇಕು. ಅದಕ್ಕಾಗಿ ನಮ್ಮ ಖಾಸಗೀ ಸಮಯವನ್ನು ತ್ಯಾಗ ಮಾಡಲೇಬೇಕು. ಆಗ ಮಾತ್ರ ನಮ್ಮ ಕನ್ನಡಪರ ಹೋರಾಟಕ್ಕೆ ಮಾನ್ಯತೆ ದೊರಕುತ್ತದೆ. ನಮ್ಮ ಕನ್ನಡ ಮಾಧ್ಯಮದಲ್ಲಿನ ಶಿಕ್ಷಣದ ಬಗೆಗಿನ ಸಂವಾದದಲ್ಲಿ ದಲಿತ ಸಂಘಟನೆಗಳನ್ನೂ, ಅಲ್ಪಸಂಖ್ಯಾತ ಸಮುದಾಯದವರನ್ನೂ ಒಳಗೊಳ್ಳಬೇಕು. ಅವರ ನಿರ್ಣಯವೇ ನಿರ್ಣಾಯಕವಾಗಿರಬೇಕು. ಆಗಲೇ ಇದಕ್ಕೆ ನ್ಯಾಯ ದೊರಕುತ್ತದೆ. ಆಗ ನಮ್ಮ ಕನ್ನಡ ಮಾಧ್ಯಮದ ಪರವಾದ ನಿಲುವಿಗೆ ಸ್ವಯಂ ಮಾನ್ಯತೆ ದೊರಕುತ್ತದೆ.

ಈಗಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು 200 % ಸಾಧ್ಯವಿಲ್ಲ. ಇಲ್ಲಿನ ನೌಕರಶಾಹಿ, ಶಿಕ್ಷಣ ಮಂತ್ರಿ, ಶಿಕ್ಷಕರು, ಮತ್ತು ಶಿಕ್ಷಕರ ತರಬೇತಿ ಪರಿಕರಗಳು ಎಲ್ಲವೂ ಒಟ್ಟಿಗೇ ಈಗಿರುವ ಮಟ್ಟದಿಂದ ಕನಿಷ್ಟ ಶೇಕಡ 70ರಷ್ಟು ಮೇಲೇರಬೇಕು. ಇದು ಸಾಧ್ಯವೇ? ಅದಕ್ಕಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣಕ್ಕಾಗಿ ಅತ್ಯಂತ ನಿಷ್ಟುರ, ಸತ್ಯಪರ. ಅನಿವಾರ್ಯ ಕ್ರಾಂತಿಕಾರಿ ಕ್ರಮಗಳು (ಘನ ಸರ್ಕಾರ ಮನಸ್ಸಿದ್ದರೆ ತೆಗೆದುಕೊಳ್ಳಬೇಕಾದದ್ದು):

  1. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕುಹಕಿಗಳ ಪ್ರಕಾರ ಟಿಎ,ಡಿಎ ಪ್ರಾಧಿಕಾರ), ಕನ್ನಡ ಪುಸ್ತಕ ಪ್ರಾಧಿಕಾರ (ಕುಹಕಿಗಳ ಪ್ರಕಾರ ಸದ್ಯಕ್ಕೆ ಪುನರ್ವಸತಿ ಕೇಂದ್ರ), ಸಂಸ್ಕೃತ ವಿಶ್ವವಿದ್ಯಾಲಯ (ಕುಹಿಕಿಗಳ ಪ್ರಕಾರ ಸದ್ಯಕ್ಕೆ ಬಾಜಾ ಬಜಂತ್ರಿಗಳ, ಭಟ್ಟಂಗಿಗಳ, ಅನೇಕ ಬಾರಿ ಕೇಸರೀ ಪಡೆಗಳ, ಬಹುಮಾನ ವಿತರಕರ ಆಡೊಂಬಲ)ಗಳನ್ನು ಕೆಲವು ವರ್ಷಗಳಷ್ಟು ಕಾಲ ತಾತ್ಕಾಲಿಕವಾಗಿ ವಿಸರ್ಜಿಸಿ ಅಮಾನತ್ತಿನಲ್ಲಿಡಬೇಕು.
  2. ಮೇಲಿನ ಕನ್ನಡದ ಮೂರೂ ಬೇಜವಬ್ದಾರಿ ಸರ್ಕಾರಿ ಸಂಸ್ಥೆಗಳನ್ನು 4 ಕನ್ನಡ ಶಾಲಾ ಘಟಕಗಳಾಗಿ ಪರಿವರ್ತಿಸಬೇಕು. ಇವುಗಳನ್ನು ಹೈದರಾಬಾದ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು 4 ಘಟಕಗಳಾಗಿ ಪುನರ್ರಚಿಸಬೇಕು. ಮೂಲ ಸಂಸ್ಥೆಗಳಲ್ಲಿನ ಸಿಬ್ಬಂದಿಗಳನ್ನು ಈ ಕನ್ನಡ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಕೊರತೆಯಾದರೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎರವಲು ಪಡೆಯಬೇಕು.
  3. ಮೇಲಿನ 4 ಘಟಕಗಳಿಗೆ ಕನ್ನಡದ ಅತ್ಯುತ್ತಮ ಪ್ರಗತಿಪರ, ಜಾತ್ಯಾತೀತ ಶಿಕ್ಷಣ ತಜ್ಞರನ್ನು ಮುಖ್ಯಸ್ತರನ್ನಾಗಿ ನೇಮಿಸಬೇಕು. ಇವರಿಗೆ ಕನ್ನಡ ಮಾಧ್ಯಮದಲ್ಲಿನ ಅತ್ಯುತ್ತಮ ಶಿಕ್ಷಣಕ್ಕಾಗಿ ಅತ್ಯಂತ ತುರ್ತಿನ ಕರಡು ನೀತಿ ಮತ್ತು ಯೋಜನೆಗಳು (Short term plan)ಮತ್ತು ದೂರಗಾಮಿ ಕರಡು ನೀತಿ ಮತ್ತು ಯೋಜನೆಗಳು (Short term plan) ಸಿದ್ಧಪಡಿಸಲು ಕಾಲಮಿತಿಯನ್ನು ನಿಗದಿಪಡಿಸಬೇಕು.
  4. ಮೇಲಿನ ಶಿಕ್ಷಣ ತಜ್ಞರು ಮತ್ತು ಅವರ ಸಹಾಯಕರು ಕನ್ನಡ ಮಾಧ್ಯಮದ ಉನ್ನತೀಕರಣಕ್ಕೆ ತಯಾರಿಸಿದ ಕರಡು ನೀತಿ ಮತ್ತು ಯೋಜನೆಗಳ ಅನುಷ್ಟಾನಕ್ಕೆ ಸ್ವಯಂಸೇವಕರ ಪಡೆಯನ್ನು ಸರ್ಕಾರ ನೇಮಿಸಿಕೊಳ್ಳಬೇಕು. ಇದಕ್ಕೆ ಬುದ್ಧಿಜೀವಿಗಳು, ಕನ್ನಡಪರ ಉತ್ಸಾಹಿಗಳು ನೇರವಾಗಿ ಅಖಾಡಕ್ಕೆ ಧುಮುಕಬೇಕು. ಬೇಕಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮತ್ತು ಕನ್ನಡಪರ ಹೋರಾಟದ ಸಂಘಟನೆಗಳಿಂದ ಸೇವೆಯನ್ನು ಪಡೆದುಕೊಳ್ಳಬೇಕು.
  5. ಕಡೆಯದಾಗಿ ಸರ್ಕಾರ ಇದಕ್ಕೆ ಯಾವುದೇ ರೀತಿಯ ಕಾನೂನು ತೊಡಕು ಎದುರಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದು ಸುಮ್ಮನೇ ಯೋಚಿಸಿದಾಗ ಹೊಳೆದದ್ದು. ಇದು ನಿಜಕ್ಕೂ ಸೀಮಿತವಾದದ್ದು. ಇದಕ್ಕಿಂತಲೂ ಉತ್ತಮವಾದ ಅನೇಕ ಹೊಳಹುಗಳು, ಯೋಜನೆಗಳು ನೂರಾರು ಇದೆ. ಇದನ್ನು ಮುಕ್ತ ಸಂವಾದದ ಮೂಲಕ ಜಾರಿಗೊಳಿಸಬಹುದು. ಏಕೆಂದರೆ ಕನ್ನಡ ಮಾದ್ಯಮಗಳ ಉನ್ನತೀಕರಣವೆನ್ನುವ ಕತ್ತಲ ದಾರಿ ಬಲು ದೂರ. ನಾವು ಕಡೇ ಪಕ್ಷ ಮಿಣುಕು ದೀಪಗಳಾಗದಿದ್ದರೆ ಹೇಗೆ?

ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕಲಾಚಿತ್ರ

The Scream” ಚಿತ್ರಕಾರ ಎಡ್ವರ್ಡ್ ಮುಂಕ್ 1983ರಲ್ಲಿ ಚಿತ್ರಿಸಿದ ಚಿತ್ರ. ಎರಡು ದಿನದ ಹಿಂದೆ ನ್ಯೂ ಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಸುಮಾರು 12 ಕೋಟಿ ಡಾಲರ್‌ಗೆ (ಸುಮಾರು 600 ಕೋಟಿ ರೂ.)  ಮಾರಾಟವಾಗಿದೆ. ಹರಾಜಿನಲ್ಲಿ ಮಾರಾಟವಾದ ಅತಿ ಹೆಚ್ಚು ಬೆಲೆಯ ಕಲಾಚಿತ್ರ ಇದು.

 

ಇಲ್ಲಿಯವರೆಗೆ ಆ ದಾಖಲೆ ಹೊಂದಿದ್ದದ್ದು ಪಿಕಾಸೋನ 1932ರ ಚಿತ್ರ, “Nude, Green Leaves and Bust