Daily Archives: May 11, 2012

ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ?


– ಪರಶುರಾಮ ಕಲಾಲ್  


 

ಪತ್ರಿಕೆಗಳ ವಿಶ್ವಾಸಾರ್ಹತೆಯು ಈಗ ದೊಡ್ಡ ಪ್ರಶ್ನೆಯಾಗಿದೆ. ಯಾವ ಪತ್ರಿಕೆಯನ್ನು ವಿಶ್ವಾಸಾರ್ಹ ಎನ್ನುವುದು? ಅತ್ಯಂತ ಜನಪ್ರಿಯ ದಿನಪತ್ರಿಕೆ ಎಂದು ಹಾಕಿಕೊಳ್ಳುತ್ತಿದ್ದ ಪ್ರಜಾವಾಣಿ, ವಿಜಯ ಕರ್ನಾಟಕ ಬಂದ ಮೇಲೆ ಅದನ್ನು ತೆಗೆದು ಹಾಕಿ ಆ ಜಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಎಂದು ಹಾಕಿಕೊಂಡಿತು.

ಪ್ರಜಾವಾಣಿಯನ್ನು ನೆನೆದರೆ ದುಃಖ, ವಿಷಾದ ಎರಡೂ ಆಗುತ್ತದೆ. ಕೆ.ಎನ್.ಹರಿಕುಮಾರ್ ಇದ್ದಾಗ ಪ್ರಜಾವಾಣಿ ಹೇಗಿತ್ತು? ದಲಿತರ, ಹಿಂದುಳಿದ ವರ್ಗಗಳ ಪಾಲಿಗೆ ಎಲ್ಲಾ ಬಾಗಿಲು ತೆರೆದು ಪತ್ರಿಕೋದ್ಯಮದಲ್ಲಿ ಅವಕಾಶ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹರಿಕುಮಾರ್ ಅವರಿಗಿದ್ದ ಬದ್ಧತೆ, ದೂರದೃಷ್ಠಿ, ಸಾಮಾಜಿಕ ನ್ಯಾಯದ ಕಲ್ಪನೆ ಅನುಕರಣೀಯವಾಗಿತ್ತು. ಇದು ಹರಿಕುಮಾರ್‌ರ ನಂತರದ ದಿನಗಳಲ್ಲಿ ಪ್ರಜಾವಾಣಿಯಲ್ಲಿ ಕಂಡು ಬರಲಿಲ್ಲ. ಸಂಪಾದಕೀಯ ಹೊಣೆ ಹೊತ್ತವರು ಅದನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಇದು ನಮ್ಮ ಕೆಲಸ ಅಲ್ಲ ಎಂದುಕೊಂಡರು. ಹೀಗಾಗಿ ಪತ್ರಿಕೆ ಹೊಣೆ ಹೊತ್ತ ಸಂಪಾದಕರು ಮಾಲೀಕರ ಸಂಪ್ರೀತಿ ಗಳಿಸುವ ಕೆಲಸ ನಡೆಸಿದರು. ಈ ಲೋಪವೇ ಪ್ರಜಾವಾಣಿಯ ಇವತ್ತು ಈ ಸ್ಥಿತಿ ಮುಟ್ಟಲು ಕಾರಣವಾಗಿದೆ.

ಹರಿಕುಮಾರ್ ನಂತರ ಬಂದ ಕೆ.ಎನ್. ತಿಲಕ್‌ಕುಮಾರ್, ಶಾಂತಕುಮಾರ್ ಅವರು ಹರಿಕುಮಾರರಷ್ಟು ಬುದ್ಧಿವಂತರಲ್ಲ. ಅವರು ತುಂಬಾ ಒಳ್ಳೆಯವರು. ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಸಂಪಾದಕೀಯ ಬಳಗ ತನ್ನ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾ ಬಂತು. ಇದರಿಂದಾಗಿಯೇ, ಅತ್ಯಂತ ಜನಪ್ರಿಯವಾಗಿದ್ದ ಪತ್ರಿಕೆಯೊಂದು ವಿಜಯ ಕರ್ನಾಟಕ ಬಂದ ಮೇಲೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡು ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ ಎಂದು ಕರೆದುಕೊಳ್ಳಬೇಕಾಯಿತು. ಈಗ ಆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅಂಬೇಡ್ಕರ್ ಜಯಂತಿಯಂದು ದೇವನೂರು ಮಹಾದೇವರ ಅತಿಥಿ ಸಂಪಾದಕತ್ವದಲ್ಲಿ ವಿಶೇಷ ಸಂಚಿಕೆ ರೂಪಿಸಿ ಸಾಂಸ್ಕೃತಿಕ ಲೋಕದವರಿಂದ ಭೇಷ್ ಅನ್ನಿಸಿಕೊಳ್ಳುತ್ತಿದೆ.

ಆದರೆ, ಇದೊಂದು ಸರ್ಕಸ್ ಎನ್ನುವುದು ಪ್ರಜಾವಾಣಿಯನ್ನು ಬಲ್ಲ ಎಲ್ಲರಿಗೂ ಗೊತ್ತು.

ಪ್ರಜಾವಾಣಿ ಮುಟ್ಟಿರುವ ದುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸ್ಥಳೀಯವಾಗಿ ಎರಡು ಅಥವಾ ಕೆಲವು ಕಡೆ ಮೂರು ಇರುವ ಸ್ಥಳೀಯ ಫೇಜ್‌ಗಳತ್ತ ಒಮ್ಮೆ ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಅಲ್ಲಿಯ ಭಾಷಾ ಶೈಲಿ, ಸುದ್ದಿಗಳ ಸಾರ ಎಲ್ಲವನ್ನೂ ಗಮನಿಸಿದರೆ ಪ್ರಜಾವಾಣಿಯ ಬಣ್ಣ ಬಯಲಾಗುತ್ತದೆ. ಪ್ರಜಾವಾಣಿಯಲ್ಲಿರುವ ಸ್ಥಾಪಿತ ಹಿತಾಸಕ್ತಿಗಳು ಇದನ್ನು ಮಾಲೀಕರಿಗೆ ಅನಿವಾರ್ಯ ಎಂದು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿವೆ. ಬರುತ್ತಿವೆ ಕೂಡಾ.

ಇಷ್ಟೆಲ್ಲದರ ನಡುವೆಯೂ ಪ್ರಜಾವಾಣಿ ರಾಜ್ಯಮಟ್ಟದಲ್ಲಿ ಇವತ್ತಿಗೂ ವಿಶ್ವಾಸಾರ್ಹ ಪತ್ರಿಕೆಯೇ. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ನಮ್ಮ ಆಯ್ಕೆ ಎನ್ನುವಂತಾಗಿದೆ.

ಪ್ರಜಾವಾಣಿಗೆ ಈಗಲೂ ಬದಲಾಗುವ ವಿಪುಲ ಅವಕಾಶಗಳಿವೆ. ಪ್ರಜಾವಾಣಿಯು ತನ್ನ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದರೆ ಕರ್ನಾಟಕದಲ್ಲಿ ಅದು ಮತ್ತೇ ನಂಬರ್ ವನ್ ಆಗಲಿದೆ. ಆದರೆ ಇದಕ್ಕಾಗಿ ಕೆ.ಎನ್. ಶಾಂತಕುಮಾರ್ ತಮ್ಮ ಸುತ್ತಮುತ್ತಲು ಇರುವ ಬಹುಪರಾಕ್ ಜನರಿಂದ ಹೊರ ಬರಬೇಕಿದೆ. ಅವರು ಪ್ರಜಾವಾಣಿಯ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಸಹಜವಾಗಿ ಯೋಚಿಸಿದರೆ ಸಾಕು, ಸಾಕಷ್ಟು ಬದಲಾವಣೆಗಳು ಘಟಿಸುತ್ತವೆ. ಕರ್ನಾಟಕದ ಇವತ್ತಿನ ಪರಿಸ್ಥಿತಿಯಲ್ಲಿ ಪ್ರಜಾವಾಣಿಯು ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದು ವಿಶ್ವಾಸಾರ್ಹತೆ ಎನ್ನುವುದು ಕೇವಲ ಹೇಳಿಕೆಯಾಗಿ ಉಳಿಯಬಾರದು. ಮತ್ತು ಅದಕ್ಕಾಗಿ ಸರ್ಕಸ್ ಮಾಡಬೇಕಿಲ್ಲ. ಅದು ತಾನು ತಾನಾಗಿಯೆ ರೂಪಗೊಳ್ಳಬೇಕು.

ಪ್ರಜಾವಾಣಿಯ ಜೊತೆ ಗುರುತಿಸಿಕೊಂಡೆ ಬೆಳೆದಿರುವ ನಮ್ಮಂತವರ ಹಾರೈಕೆ ಇದು. ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ ಎಂಬುದೇ ಇವತ್ತಿನ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ.

ಸಚಿವ ಮುರುಗೇಶ್ ನಿರಾಣಿ ಮತ್ತು ಆಲಂ ಪಾಷ

– ಬಿ.ಎಸ್. ಕುಸುಮ

ನಾಲ್ಕೈದು ವರ್ಷಗಳಿಂದ ಕರ್ನಾಟಕದಲ್ಲಿ ಗಣಿ ಅವ್ಯವಹಾರ ಮತ್ತು ಭೂಹಗರಣಗಳದ್ದೇ ಸುದ್ದಿ. ಲೋಕಾಯುಕ್ತ ಸಂತೋಷ ಹೆಗಡೆಯವರು ಗಣಿ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ನು ಸರ್ಕಾರ ಇಲ್ಲಿಯತನಕ ಒಪ್ಪಿಕೊಂಡಿಲ್ಲ. ಹಾಗೆಯೇ ತಳ್ಳಿಯೂ ಹಾಕಿಲ್ಲ. ಇನ್ನು ಭೂಹಗರಣಗಳದ್ದು ಇನ್ನೊಂದು ಕತೆ. ಇಲ್ಲಿ ಯಾವುದೇ ಸರ್ಕಾರಿ ಅಥವ ಸಂವಿಧಾನಿಕ ಸಂಸ್ಥೆ ರಾಜ್ಯದಲ್ಲಿ ಆಗಿರುವ ಭೂಹಗರಣಗಳ ಬಗ್ಗೆ ಯಾವುದೇ ವರದಿ ನೀಡಿಲ್ಲ. ಹಾಗೆಯೇ ಸ್ವಯಂಪ್ರೇರಿತವಾಗಿ ಈ ಅವ್ಯವಹಾರಗಳ ಪತ್ತೆ ಮಾಡಿ ತಪ್ಪಿತಸ್ತರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಈ ವಿಭಾಗದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅನೇಕ ಸಮಾಜಮುಖಿ ವ್ಯಕ್ತಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಸರ್ಕಾರದ ಭ್ರಷ್ಟಾಚಾರವನ್ನು ತಡೆಯಲು ಹೋರಾಡುತ್ತಿದ್ದಾರೆ.

“ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರ ವಿರುದ್ದ ಭೂಹಗರಣ (ಡಿ-ನೋಟಿಫಿಕೇಷನ್) ಹಾಗೂ ಗಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಸುಮಾರು 16 ಮೊಕದ್ದಮೆಗಳು ದಾಖಲಾಗಿದ್ದವು. ಅದೇ ಸಮಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವುಂಟುಮಾಡಿದ್ದಾರೆ, ಇಬ್ಬರು ಆರೋಪಿಗಳ ಮೇಲೆ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು,” ಎಂದು “ಪಾಷ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್”ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉದ್ಯಮಿ ಆಲಂ ಪಾಷಾ ಲೋಕಾಯುಕ್ತ ನ್ಯಾಯಾಲಯದಲ್ಲಿ 21/10/2011 ರಂದು ಖಾಸಗಿ ದೂರನ್ನು ದಾಖಲಿಸಿದ್ದರು.

2010 ರಲ್ಲಿ ಆರಂಭಗೊಂಡ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ (GIM -Global Investors meet)ದಲ್ಲಿ  ಉದ್ಯಮಿ ಆಲಂ ಪಾಷ ಸಹಾ ಭಾಗವಹಿಸಿದ್ದರು.  ಅರಮನೆ ಮೈದಾನದಲ್ಲಿ ಜೂನ್ 3 ಮತ್ತು 4 ರಂದು ನಡೆದ ಸಮಾವೇಶದಲ್ಲಿ ಪಾಷ ತಮ್ಮ ಯೋಜನೆಯನ್ನು ಸರ್ಕಾರದ ಮುಂದೆ ಇಟ್ಟಿದರು. ಸರ್ಕಾರ ಜಮೀನು ಮಂಜೂರು ಮಾಡುವುದಾಗಿ ಒಂಪ್ಪದ ಮಾಡಿಕೊಂಡಿತ್ತು. ಜಿಮ್ ಹೆಸರಿನಲ್ಲಿ  2010 ರಂದು ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೇವನಹಳ್ಳಿ ಅಂತಾರಾಷ್ಟೀಯ ವಿಮಾನ ನಿಲ್ಡಾಣದ ಬಳಿ ವಿಶೇಷ ಆರ್ಥಿಕ ವಲಯ (SEZ) ಸ್ಥಾಪನೆಗೆ 6000 ಎಕರೆ ಭೂಸ್ವಾಧೀನ ಮಾಡಿಕೊಂಡು ಬಂಡವಾಳ ಹೂಡಿಕೆಗೆ ರಾಷ್ಟೀಯ ಮತ್ತು ಬಹು ರಾಷ್ಟೀಯ ಕಂಪನಿಗಳಿಗೆ ಇಲ್ಲಿ ಜಮೀನು ನೀಡಲಾಗಿದೆ. ಆದರೆ, ಈ ಬಂಡವಾಳ ಹೂಡಿಕೆಯಲ್ಲಿ ಬಹಳಷ್ಟು ಕಂಪನಿಗಳು ಮೋಸಹೋಗಿವೆ. ಅವುಗಳಲ್ಲಿ  “ಪಾಷ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್” ಕೂಡ ಸೇರಿದೆ ಎನ್ನುವುದು ಆಲಂ ಪಾಷ ಅವರ ಪ್ರಕರಣದ ಹಿನ್ನೆಲೆ.

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಷ ಕಂಪನಿಗೆ ಐಟಿ ಪಾರ್ಕ್, ಏರೊಸ್ಪೇಸ್ ಪಾರ್ಕ್ ಮತ್ತು ಹಾರ್ಡ್‌ವೇರ್ ಪಾರ್ಕ್‌ನಲ್ಲಿ 26 ಎಕರೆ ಜಮೀನು ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಮನೆಯನ್ನು ನಿರ್ಮಿಸುವ ಯೋಜನೆಯನ್ನು ಆಲಂ ಪಾಷ ರೂಪಿಸಿದ್ದರು. ಯೋಜನೆಯನ್ನು ಜಾರಿಗೆ ತರಲು ವಿದೇಶಿ ಕಂಪನಿಗಳ ಜೊತೆ ಒಂಪ್ಪದವನ್ನು ಸಹಾ ಮಾಡಿಕೊಂಡಿದ್ದರು. ಇದಕ್ಕೆ 2010 ರಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸರ್ಕಾರದ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿತ್ತು. ಅದರಂತೆ ಪಾಷ ಜಿಓ ನಂ ಸಿಐ-365-2010 ಅಧಿಸೂಚನೆಯಂತೆ 26 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿಗೆ ಅರ್ಜಿಯನ್ನು ಸಲ್ಲಿಸಿದರು. ಕೆಐಎಡಿಬಿ ಜಮೀನನ್ನು ಪಾಷರವರಿಗೆ ಹಸ್ತಾಂತರಿಸಬೇಕು ಎನ್ನುವಷ್ಟರಲ್ಲಿ, “ಸರ್ಕಾರದ ಜೊತೆಗಿನ ಒಪ್ಪಂದದಂತೆ ಯೋಜನೆಯನ್ನು ಮುಂದುವರಿಸುವುದು ಇಷ್ಟವಿಲ್ಲ ಎಂದು ತಾವು ಪತ್ರ ಬರೆದಿರುವುದರಿಂದ ಜಮೀನನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ” ಎಂದು ಕೆಐಎಡಿಬಿ ಕೊಟ್ಟ ಉತ್ತರದಿಂದ ಪಾಷ ಗೊಂದಲಕ್ಕೆ ಒಳಗಾದರು.

ನಾನು ಸರ್ಕಾರಕ್ಕೆ ಯೋಜನೆಗೆ ಸಂಬಂಧ ಪಟ್ಟಂತೆ ಯಾವ ಪತ್ರವನ್ನು ಬರೆದಿಲ್ಲ. ಹಾಗೂ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆ ರದ್ದುಪಡಿಸಿರುವುದರ ಬಗ್ಗೆ ಕೂಡ ನನಗೆ ಯಾವುದೇ ಮಾಹಿತಿ ಇಲ್ಲ. ಆದರೇ ಜಮೀನನ್ನು ನೀಡಲು ಸರ್ಕಾರ ಏಕೆ ವಿಳಂಬ ಮಾಡುತ್ತಿದೆ. ಎಂದು ಕಾರಣ ತಿಳಿಯದೆ. ಅನುಮಾನದಿಂದ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದರು. ಮಾಹಿತಿ ಪಡೆದ ನಂತರ ಪಾಷ ಗಾಬರಿಯಾದರು. ನಾನು ಯಾವ ಪತ್ರವನ್ನು ಕೆಐಎಡಿಬಿ ಬರೆದಿಲ್ಲ. ಆದರೇ ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದ ನಮ್ಮ ಕಂಪನಿಯ ಲೆಟರ್‌ಹೆಡ್‌ನ್ನು ನಕಲಿ ಮಾಡಿ “ಯೋಜನೆ ಅನುಷ್ಟಾನಕ್ಕೆ ಆಸಕ್ತಿ ಇಲ್ಲ” ಎಂದು ಬರೆದುಕೊಂಡು,  ನನ್ನ ಸಹಿ ಮತ್ತು ಮೊಹರನ್ನು ಸ್ಕ್ಯಾನ್ ಮಾಡಿ,  2011ರ ಜನವರಿ 20 ರಂದು ನಾನು ಪತ್ರ ಬರೆದಿರುವುದಾಗಿ ಹೇಳಿ ನಕಲಿ ದಾಖಲೆಯನ್ನು ಸೃಷ್ಟಿಸಿ ಯೋಜನೆಯನ್ನು ಹಿಂಪಡೆದಿದ್ದಾರೆ ಎಂದು ಪಾಷ ದೂರಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಿರಾಣಿ ಅಕ್ರಮ ಡಿ-ನೋಟಿಫೈ ಮಾಡಿದ್ದಾರೆ ಎಂದು ಸಹಾ ಪಾಷ ದೂರಿನಲ್ಲಿ ದಾಖಲಿಸಿದ್ದಾರೆ. ಅದಕ್ಕೆ ಸಂಬಂಧ ಪಟ್ಟಂತೆ ದಾಖಲೆಗಳನ್ನು ಒದಗಿಸಿದ್ದಾರೆ. ಸಚಿವರಾಗಿರುವ ನಿರಾಣಿ ಕೆಐಎಡಿಬಿ ಹಾಗೂ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಛೇರ್‌ಮೆನ್ ಆಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಕೈಗಾರಿಕಾ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಜಮೀನನ್ನು ಕಾನೂನು ಬಾಹಿರವಾಗಿ ಡಿ-ನೋಟಿಫೈ ಮಾಡಿದ್ದಾರೆ. ದೇವನಹಳ್ಳಿ ಅಂತಾರಾಷ್ಟೀಯ ವಿಮಾನ ನಿಲ್ಡಾಣದ ಸಮೀಪ ಪಾರ್ಕ್ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿದ್ದ 1000 ಎಕರೆ ಭೂಮಿಯನ್ನು ಅಭಿವೃದ್ದಿ ಪಡಿಸಿ ಮೂಲಭೂತ ಸೌಕರ್ಯ ಕಲ್ಲಿಸಿ 20 ಎಕರೆಯನ್ನು ಡಿ-ನೋಟಿಫೈ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 27 ಕೋಟಿ ನಷ್ಟವಾಗಿದೆ. ಹಾಗೂ ಡಾಬಸ್‌‌ಪೇಟೆ ಬಳಿ ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆ ಜಮೀನನ್ನು ಡಿ-ನೋಟಿಫೈ ಮಾಡಿದ್ದಾರೆ. ನೊಂದಣಿಯಾಗದ ಒಟ್ಟು ನಾಲ್ಕು ನಕಲಿ ಕಂಪನಿಗೆ ಸುಮಾರು 1100 ಎಕರೆ ಜಮೀನನ್ನು ಲಪಾಟಯಿಸಿದ್ದಾರೆ.

  • ಎಮ್.ಆರ್.ಎನ್ ಶುಗರ್ – 300 ಎಕರೆ
  • ಸಾಯಿ ಪ್ರಿಯ – 300 ಎಕರೆ
  • ವಿಜಯ ಸ್ಟೀಲ್ ಕಂಪನಿ
  • ಶಕ್ತಿ ಸ್ಟೀಲ್ ಕಂಪನಿ – (ಎರಡೂ ಸ್ಟೀಲ್ ಕಂಪನಿಗಳಿಗೆ ಒಟ್ಟು 500 ಎಕರೆ)

ಅಲ್ಲದೆ ಈ ಜಮೀನುಗಳನ್ನು ಖಾಸಗಿ ಬ್ಯಾಂಕಿನಲ್ಲಿ ಅಡವಿಟ್ಟು 500 ಕೋಟಿ ಹಾಗೂ ಅಪೆಕ್ಸ್ ಬ್ಯಾಂಕ್‌ನಲ್ಲಿ 66 ಕೋಟಿ ಸಾಲ ಪಡೆದು ವಂಚನೆ ಮಾಡಿದ್ದಾರೆ. ಮೂರೂ ಕೂಡ ಒಬ್ಬರ ಮಾಲೀಕತ್ವದಲ್ಲಿ ಇರುವುದಾಗಿ ಪಾಷ ಲೊಕಾಯುಕ್ತ ಸಂಸ್ಥೆಗೆ ಸೆಪ್ಟೆಂಬರ್ 5, 2011 ರಂದು ದಾಖಲೆಗಳ ಸಮೇತ ದೂರನ್ನು ಸಲ್ಲಿಸಿದ್ದರು.

ತಮಿಳುನಾಡಿನ ವಾಣಂಬಾಡಿಯವರಾದ ಪಾಷ ಬಿಕಾಂ ಪದವಿಧರರು. ತಂದೆ ಮತ್ತು ತಾಯಿ ಕೃಷಿಕರು. ಪಾಷ ಅವರ ತಾತ ಫಜಲ್ ಸಹೇಬ್ ಸ್ವಾತಂತ್ರ್ಯ ಹೋರಟಗಾರರು. ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡು ತರಬೇತಿ ಪಡೆಯಲು ಬೆಂಗಳೂರಿಗೆ ಬಂದವರು. ನಂತರ ಉದ್ಯಮಿಯಾಗಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನಿಟ್ಟು ಕೊಂಡು ದೂರು ಸಲ್ಲಿಸುವುದನ್ನು ಮೈಗೂಡಿಸಿಕೊಂಡರು. ಇದಕ್ಕೂ ಮೊದಲು ಪಾಷ ಕರ್ನಾಟಕದಲ್ಲಿರುವ 18 ಗುಟ್ಕಾ ತಯಾರಿಕೆ ಕಂಪನಿಗಳನ್ನು ರದ್ದು ಮಾಡುವಂತೆ ಸರ್ಕಾರದ ವಿರುದ್ದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟದಲ್ಲಿ ತೊಡಗಿದ್ದರು. ತಮಿಳುನಾಡಿನ ರೈತರ ಉತ್ಪನ್ನಗಳಿಗೆ ನೆರವಾಗುವ ಉದ್ದೇಶದಿಂದ “ಪಾಷ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್” ಅನ್ನು ಹುಟ್ಟುಹಾಕಿದರು. ರೈತರ ಪರ ಮಾಡಿದ ಒಳ್ಳೆಯ ಕೆಲಸಕ್ಕಾಗಿ ತಮಿಳುನಾಡಿನ ಸರ್ಕಾರ ಹೊಸೂರು ಬಳಿ 30 ಎಕರೆ ಜಮೀನನ್ನು ನೀಡಿತು. ಪಾಷ ಆ ಜಮೀನಿನಲ್ಲಿ ರೈತರಿಗೆ ನೆರವಾಗುಂತೆ ಪಾರ್ಕ್ ‌ನಿರ್ಮಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಬೆಂಗಳೂರಿನ ಇಂದಿರಾನಗರದಲ್ಲಿ ಪಾಷ ಸ್ವೇಸ್ ಆಡಳಿತ ಕಚೇರಿ ಹೊಂದಿರುವ ಆಲಂ ಪಾಷ, ಕರ್ನಾಟಕದಲ್ಲಿ ಕೈಗೆತ್ತಿಕೊಂಡ ಎರಡನೇ ಯೋಜನೆ ಭೂವಿವಾದದಲ್ಲಿ ಸಿಲುಕಿದ ಹಿನ್ನೆಯಲ್ಲಿ ದಾಖಲೆಗಳನ್ನು ಸಂಗ್ರಹಿಸಿ ವಕೀಲರ ಸಹಾಯ ಇಲ್ಲದೆ ನೇರವಾಗಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದಾರೆ.

2010 ರಿಂದ ನಡೆಯುತ್ತಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಈ ವರ್ಷದ ವಾರ್ಷಿಕ ಸಮಾವೇಶವನ್ನು ಜೂನ್ 7 ಮತ್ತು 8 ರಂದು ಬೆಂಗಳೂರು ಅಂತರರಾಷ್ಟೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದಾರೆ. ಆದರೆ 2010ರ ಸಮಾವೇಶದಲ್ಲಿ ನಡೆದ ಅವ್ಯವಹಾರ ಮತ್ತು ಅಕ್ರಮಗಳ ವಿರುದ್ದ ಸಮರ ಸಾರಿರುವ ಪಾಷ ಅವರಿಗೆ ನ್ಯಾಯ ದೊರಕುವುದೇ ಎಂದು ಕಾದು ನೋಡಬೇಬೇಕಿದೆ.


ಮೇಲಿನ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ “ವರ್ತಮಾನ”ದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾದ ಲೇಖನ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…”ಕ್ಕೆ ಇಲ್ಲಿ ಕ್ಲಿಕ್ ಮಾಡಿ.