Daily Archives: May 5, 2012

ಬಾಲಮಂದಿರಗಳು ಬಂದಿಖಾನೆಗಳಾದರೆ ಸಾಕೆ?

– ರೂಪ ಹಾಸನ

ಬಾಲಾಪರಾಧಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 2500 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವ ಕುರಿತು ಹೈಕೋರ್ಟ್‌ಗೆ ಅಧ್ಯಯನ ವರದಿಯೊಂದನ್ನು ಸಲ್ಲಿಸಿರುವುದು ಮೊನ್ನೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂತಹ ಮಕ್ಕಳು ಅನುಭವಿಸುತ್ತಿರುವ ಹಿಂಸೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಆಧಾರದ ಮೇಲೆ ಕೋರ್ಟ್ ಖುದ್ದಾಗಿ ದೂರು ದಾಖಲು ಮಾಡಿಕೊಂಡು, ಸರ್ಕಾರದ ವಿರುದ್ಧವಾಗಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸುತ್ತಿರುವುದು ನಿಜಕ್ಕೂ ಆಶಾದಾಯಕವಾದ ವಿಚಾರ.

ಮಕ್ಕಳು ಖಂಡಿತ ಸ್ವಯಂ ತಿಳಿವಳಿಕೆಯಿಂದಾಗಲಿ, ಉದ್ದೇಶಪೂರ್ವಕವಾಗಿಯಾಗಲಿ ಅಪರಾಧಗಳಲ್ಲಿ ತೊಡಗುವುದಿಲ್ಲ. ಮುಗ್ಧತೆ ಮತ್ತು ಅಸಹಾಯಕತೆಯಿಂದ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಬಲಿಪಶುಗಳಾಗುತ್ತಾರಷ್ಟೇ. ಹೆಚ್ಚಿನ ಸಂದರ್ಭಗಳಲ್ಲಿ ಹಿರಿಯರು ಮಕ್ಕಳ ಕೈಗಳಿಂದ ಅಪರಾಧಗಳನ್ನು ಮಾಡಿಸಿ ತಾವು ಕಾನೂನಿನ ಕೈಗಳಿಂದ ನುಣುಚಿಕೊಳ್ಳುವುದೂ ಉಂಟು. ಒಂದು ವೇಳೆ ಮಕ್ಕಳೇ ತಪ್ಪು ಮಾಡಿದ್ದರೂ ಅದಕ್ಕೆ ಅವರನ್ನು ಹಾಗೆ ರೂಪುಗೊಳಿಸುವುದು ನಮ್ಮ ಕಲುಷಿತವಾಗಿರುವ ವ್ಯವಸ್ಥೆ, ಮಕ್ಕಳ ಕಡೆಗೆ ನೀಡಲೇ ಬೇಕಾದಷ್ಟು ಪ್ರೀತಿ-ಗಮನ ಹಾಗೂ ಸಮಯವನ್ನು ನೀಡದಿರುವ ಪೋಷಕರ ಹೊಣೆಗೇಡಿತನವೂ ಕಾರಣವಾಗುತ್ತದೆ. ಹೀಗಾಗಿ ಅವರ ಮೇಲಿನ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸದೇ ನಿಧಾನಿಸುವುದರಿಂದ, ಆ ಮಕ್ಕಳನ್ನು ಈ ವಿಳಂಬ ಶಾಶ್ವತ ಅಪರಾಧಿಗಳನ್ನಾಗಿಸಿಬಿಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ವಿಳಂಬವೆಂದರೆ ಇಂಥ ಮಕ್ಕಳ ಅಮೂಲ್ಯ ಬದುಕಿನೊಂದಿಗೆ ಚೆಲ್ಲಾಟವಾಡಿದಂತೆಯೇ ಸರಿ.

18 ವರ್ಷದೊಳಗಿನ ಮಕ್ಕಳು ಮಾಡಿದ ಅಪರಾಧಗಳು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲಾಪರಾಧಿಗಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವಾಗ ಅವರನ್ನು ಪೊಲೀಸ್ ಠಾಣೆಗಳಲ್ಲಿ ಇರಿಸಿಕೊಳ್ಳುವಂತಿಲ್ಲ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಬಾಲಮಂದಿರಗಳಲ್ಲೇ ಬೇರೆ ಮಕ್ಕಳಿಂದ ಪ್ರತ್ಯೇಕವಾಗಿ ಈ ಬಾಲಾಪರಾಧಿಗಳನ್ನೂ ಇರಿಸುವ ವ್ಯವಸ್ಥೆ ಹೆಚ್ಚಿನ ಜಿಲ್ಲಾ ಕೇಂದ್ರಗಳಲ್ಲಿದೆ. ಇವು ಅನಧಿಕೃತ ಜೈಲುಗಳು. ಆದರೆ ಅಲ್ಲಿ ಅವರನ್ನು ಗಮನಿಸಲು, ರಕ್ಷಣೆ ನೀಡಲು, ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಹೆಚ್ಚಿನ ಸಿಬ್ಬಂದಿಯಿಲ್ಲದೇ, ಕೆಲವೊಮ್ಮೆ ಮಕ್ಕಳೊಂದಿಗಿನ ದುರ್ವರ್ತನೆಯಿಂದಲೂ ಆ ಮಕ್ಕಳು ಬಾಲಮಂದಿರಗಳಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಲೇ ಇರುತ್ತಾರೆ. ಹೀಗೆ ಓಡಿಹೋಗುವ ಮಕ್ಕಳ ಪ್ರಮಾಣ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕಕಾರಿಯಾಗಿದೆ. ಹೀಗೆ ಓಡಿ ಹೋದವರು ಹೊಟ್ಟೆಹೊರೆಯಲು ಅನಿವಾರ್ಯವಾಗಿ ಮತ್ತೆ ಕಳ್ಳತನದಲ್ಲಿ ತೊಡಗಿ ವಾಪಸ್ಸು ಬಾಲಮಂದಿರಗಳಿಗೇ ಹಿಂದಿರುಗುತ್ತಾರೆ! ಹೆಚ್ಚಿನವರಿಗೆ ಬೇಲ್ ದೊರಕಿ ಬಿಡುಗಡೆ ಹೊಂದುತ್ತಾರಾದರೂ ಮತ್ತೆ ಹಿಂದಿರುಗಿ ಅದೇ ಪರಿಸರ, ಕೆಟ್ಟ ಸಹವಾಸಗಳಿಗೆ ಬಿದ್ದು ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಂಥಹಾ ಬಾಲಾಪರಾಧಿಗಳು, ಬೆಳೆದಂತೆ ಮುಂದೆ ಇನ್ನೂ ಹೆಚ್ಚಿನ ಮತ್ತು ದೊಡ್ಡ ಅಪರಾಧಗಳಲ್ಲಿ ತೊಡಗಿಕೊಳ್ಳುವುದು ಅಸಹಜವೇನಲ್ಲ.

ಸದ್ಯಕ್ಕೆ ನಮ್ಮ ಬಾಲಮಂದಿರಗಳು ಬಾಲಾಪರಾಧಿಗಳನ್ನಲ್ಲದೇ ಬಹುಮುಖ್ಯವಾಗಿ ಅನಾಥ ಮಕ್ಕಳು, ಒಂಟಿ ಪೋಷಕರ-ಅಸಹಾಯಕರ ಮಕ್ಕಳು, ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಂಡವರು, ವಿವಿಧ ಕಾರಣಗಳಿಂದ ಮನೆ ಬಿಟ್ಟು ಓಡಿ ಬಂದವರು, ಚಿಕ್ಕಪುಟ್ಟ ಕಳ್ಳತನಗಳಲ್ಲಿ ಭಾಗಿಯಾದವರನ್ನು ಒಳಗೊಂಡಿರುತ್ತದೆ. ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಮಕ್ಕಳು. ಪ್ರಸ್ತುತ ಬಾಲಮಂದಿರಗಳು ’ಪರಿವರ್ತನೆ’ಯ ಕೇಂದ್ರಗಳಾಗಿಲ್ಲ. ಬದಲಿಗೆ ’ಬಂದಿಖಾನೆ’ಗಳಾಗಿ ಮತ್ತು ’ಗಂಜಿಕೇಂದ್ರ’ಗಳಾಗಿ ಮಾತ್ರ ಕಾರ್ಯನಿರ್ವಹಿಸುತ್ತಿವೆ! ಬಾಲಮಂದಿರದಲ್ಲಿ ಮಕ್ಕಳಿಗೆ ಕನಿಷ್ಟ ಊಟ, ವಸತಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಅವರು ಇಲ್ಲಿಂದ ತಪ್ಪಿಸಿಕೊಂಡು ಓಡಿಹೋಗದಂತೆ  ರಕ್ಷಿಸುವ ಕೆಲಸವನ್ನಷ್ಟೇ ಇವು ಮಾಡುತ್ತಿವೆ. ಕೆಲವು  ಕಡೆ ಅದನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ.

ಆದರೆ ಇಂಥಹ ಮಕ್ಕಳ ಕುರಿತು ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಬಾಲಮಂದಿರಗಳ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗಬೇಕಿದೆ. ಬಾಲಮಂದಿರಗಳು ’ಮನಃ ಪರಿವರ್ತನಾ’ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕಿದೆ. ಬಾಲಾಪರಾಧಿಗಳು ಹಾಗೂ ಬಾಲಮಂದಿರದ ಮಕ್ಕಳೊಡನೆಯ ನಿಕಟ ಸಂಪರ್ಕದಿಂದ, ಸಾಮೂಹಿಕ ಹಾಗೂ ವೈಯಕ್ತಿಕ ಆಪ್ತ ಸಲಹೆಯ ಮೂಲಕ ಮನಃಶಾಸ್ತ್ರೀಯ ನೆಲೆಗಳಲ್ಲಿ ಅವರನ್ನು ಹಲವು ಪರೀಕ್ಷೆಗೊಳಪಡಿಸಿದಾಗ, ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿದಾಗ ಅವರಲ್ಲಿ ಹೆಚ್ಚಿನ ಮಕ್ಕಳ ಮೂಲಭೂತ ಗುಣ-ಸ್ವಭಾವಗಳಲ್ಲಿ ಹಿಂಸೆ-ಕ್ರೌರ್ಯದ ಭಾವಗಳು ಇಲ್ಲದಿರುವುದು ಗೋಚರಿಸಿತು. ಜೊತೆಗೆ ಅವರಿರುವ ಈ ಸದ್ಯದ ಸ್ಥಿತಿಯ ಬಗೆಗೆ ಅವರಿಗೆ ತೀವ್ರ ಪಶ್ಚಾತ್ತಾಪ ಹಾಗೂ ಅಪರಾಧಿ ಭಾವವಿರುವುದು ತಿಳಿದು ಬಂತು. ಹೀಗಾಗಿ ಸಹವಾಸ ಹಾಗೂ ಪರಿಸರದ ಪ್ರಭಾವದಿಂದ ದಾರಿ ತಪ್ಪಿರುವ ಇಂತಹ ಬಹಳಷ್ಟು ಮಕ್ಕಳನ್ನು ಖಂಡಿತಾ ಸರಿ ದಾರಿಗೆ ತರಲು, ಉತ್ತಮ ನಾಗರಿಕರನ್ನಾಗಿ ರೂಪಿಸಲು ಸಾಧ್ಯವಿದೆ.

ಮುಖ್ಯವಾಗಿ ಇಂತಹ ಮಕ್ಕಳಿಗೆ ಹೆಚ್ಚಿನ ಪ್ರೀತಿ-ವಾತ್ಸಲ್ಯ, ವೈಯಕ್ತಿಕ ಗಮನ, ನಿರಂತರ ನೈತಿಕ ಶಿಕ್ಷಣ, ಆಪ್ತಸಲಹೆ, ಮನಸ್ಸನ್ನು ಶಾಂತ ಹಾಗೂ ಏಕಾಗ್ರಗೊಳಿಸಲು ವ್ಯಾಯಾಮ, ಯೋಗ, ಧ್ಯಾನದ ಪ್ರಯೋಗಗಳು ಆಗಬೇಕು. ಹೆಚ್ಚಿನ ಬಾಲಮಂದಿರಗಳಲ್ಲಿ ಗ್ರಂಥಾಲಯಗಳಿಲ್ಲ. ಕೆಲವೆಡೆ ಸಣ್ಣ ಪ್ರಮಾಣದ ಪುಸ್ತಕಗಳಿದ್ದರೂ ಅವುಗಳನ್ನು ಮಕ್ಕಳಿಗೆ ಓದಲು ಕೊಡುವ, ಓದಿದ್ದನ್ನು ಮನನ ಮಾಡಿಸುವ, ಇತರ ಮಕ್ಕಳೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುವಂತಾ ಕೆಲಸಗಳು ಆಗುತ್ತಿಲ್ಲ. ಮೊದಲಿಗೆ ಇಲ್ಲಿ ಗ್ರಂಥಾಲಯಗಳನ್ನು ಹುಟ್ಟು ಹಾಕಿ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವುದು ಅತ್ಯವಶ್ಯಕ. ಇಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಧೀಮಂತರ ಜೀವನ ಚರಿತ್ರೆಗಳು, ಸಾಧನೆ ಮತ್ತು ಸಾಧಕರ ಕುರಿತು ಮಾಹಿತಿ, ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ, ಮಕ್ಕಳ ಕಲ್ಪನಾಶಕ್ತಿಯನ್ನು, ವಿವೇಚನೆ, ವಿವೇಕಗಳನ್ನು ಅರಳಿಸುವಂತಾ ಪುಸ್ತಕಗಳನ್ನು ದಾನಿಗಳಿಂದಲಾದರೂ ಸಂಗ್ರಹಿಸಿ ಮಕ್ಕಳಿಗೆ ಒದಗಿಸುವಂತಹ ಕೆಲಸಗಳು ತುರ್ತಾಗಿ ಆಗಬೇಕಿದೆ.

ಇದರ ಜೊತೆಗೆ ಮುಖ್ಯವಾಗಿ ಈ ಮಕ್ಕಳಲ್ಲಿ, ಹುಟ್ಟಿನಿಂದ ಸಹಜವಾಗಿ ಬಂದಿರಬಹುದಾದ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮತ್ತು ಅದನ್ನು ಮತ್ತಷ್ಟು ವೃದ್ಧಿಗೊಳಿಸಲು ತರಬೇತಿ ನೀಡುವಂತಾ ವ್ಯವಸ್ಥೆ ಆಗಬೇಕಿದೆ. ಆಸಕ್ತ ಮಕ್ಕಳಿಗೆ ಚಿತ್ರಕಲೆ, ಹಾಡು, ನೃತ್ಯ, ಅಭಿನಯ, ಆಟೋಟಗಳನ್ನು ಕಲಿಸುವಂತಾ ಗುಣಾತ್ಮಕ ಪ್ರಯೋಗಗಳನ್ನು ಮಾಡಿದರೆ, ಮಕ್ಕಳ ಮನಸ್ಸು ಆ ದಿಕ್ಕಿನೆಡೆಗೆ ಕೇಂದ್ರೀಕೃತಗೊಂಡು ಅನಾರೋಗ್ಯಕರ ಆಲೋಚನೆಗಳಿಗೆ ಅವಕಾಶಗಳು ಇಲ್ಲದಂತಾಗುತ್ತದೆ. ಬಾಲಾಪರಾಧಿಗಳು ಹಾಗೂ ಬಾಲಮಂದಿರದ ಮಕ್ಕಳನ್ನು ಸೃಜನಶೀಲ-ಕ್ರಿಯಾಶೀಲ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿದರೆ, ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುವ ಸಾಧ್ಯತೆಯೂ ಇರುತ್ತದೆ.

ಇಂತಹ ಚಟುವಟಿಕೆಗಳನ್ನು ನಿರಂತರವಾಗಿ ಮತ್ತು ಸಮರೋಪಾದಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಬಾಲಮಂದಿರಗಳ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಲು ಖಂಡಿತ ಸಾಧ್ಯವಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಬಾಲಮಂದಿರದ ಪರಿವೀಕ್ಷಕರು ಮತ್ತು ಸಿಬ್ಬಂದಿಗಳು ಒಂದಿಷ್ಟು ಶ್ರಮವಹಿಸಿದರೆ ಸಾಕು. ಇದರೊಂದಿಗೆ ಈಗಿರುವಂತೆ ಆ ಮಕ್ಕಳಿಗೆ ಯಾವಾಗಲಾದರೊಮ್ಮೆ ಕಾಟಾಚಾರದ ಕೌನ್ಸೆಲಿಂಗ್ ನೀಡುವ ಬದಲು, ದಿನನಿತ್ಯ ಆ ಮಕ್ಕಳೊಂದಿಗೇ ಇದ್ದು ವ್ಯಗ್ರಗೊಂಡ ಅವರ ಮನಸಿಗೆ ಸಾಂತ್ವನ ಹಾಗೂ ಆಪ್ತ ಸಲಹೆ ನೀಡುವ, ಅವರ ವ್ಯಕ್ತಿತ್ವ ನಿರ್ಮಾಣದ ಪ್ರತಿ ಹಂತದಲ್ಲಿ ಭಾಗಿಯಾಗುವಂತಹ ಆಪ್ತಸಮಾಲೋಚಕರನ್ನು ಪ್ರತಿ ಬಾಲಮಂದಿರಕ್ಕೆ ಒಬ್ಬರಂತೆ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು. ಜೊತೆಗೆ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ವಿವಿಧ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಈ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ.

ಆ ಮಕ್ಕಳು ಸಕಾರಾತ್ಮಕವಾದ ದಾರಿಯನ್ನು ಆಯ್ದುಕೊಳ್ಳುವಂತೆ, ಅವರ ಬದುಕನ್ನು ರೂಪಿಸುವ ಹೊಣೆಗಾರಿಕೆ ಖಂಡಿತಾ ನಮ್ಮೆಲ್ಲರದೂ ಆಗಿದೆ. ಬಾಲಮಂದಿರಗಳು ಬಂದಿಖಾನೆಗಳಾಗದೇ, ದಿಕ್ಕುತಪ್ಪಿರುವ ಮಕ್ಕಳ ಆರೋಗ್ಯಪೂರ್ಣ ವ್ಯಕ್ತಿತ್ವ ನಿರ್ಮಾಣ ಕೇಂದ್ರಗಳಾಗುವತ್ತ ಸರ್ಕಾರ ಇನ್ನಾದರೂ ಗಮನಹರಿಸಬೇಕಾಗಿದೆ.

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸೃತ ರೂಪ)

ಯಡಿಯೂರಪ್ಪ ಮತ್ತು ಸಿ.ಎಚ್. ಹನುಮಂತರಾಯ

ಬಿ.ಎಸ್. ಕುಸುಮ

ಸಮಾಜದಲ್ಲಿ ’ನ್ಯಾಯ’ ಎಂಬ ಕಲ್ಪನೆಯೂ ಇತ್ತೀಚಿನ ದಿನಗಳಲ್ಲಿ ಬಹಳ ಸೂಕ್ಷ್ಮಗೊಳ್ಳುತ್ತಿದೆ. ಮನುಷ್ಯ-ಸಮಾಜ-ಕಾನೂನು ಇವುಗಳ ಸಂಬಂಧ ಬಹಳ ಸಂಕೀರ್ಣವಾದದ್ದು. ಸಮಾಜದ ಉನ್ನತ ಹುದ್ದೆಯಲ್ಲಿರುವ ಅನೇಕ ವ್ಯಕ್ತಿಗಳು ಭ್ರಷ್ಟಚಾರದ ಪಾಲ್ಗೊಂಡು ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನೇ ಮರೆತು ಮೆರೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳ ಅನ್ಯಾಯದ ವಿರುದ್ದ ಹೋರಾಡುವವರ ಪರವಾಗಿ ನಿಂತು ನ್ಯಾಯಾಲಯದಲ್ಲಿ ನ್ಯಾಯ ದೊರಕಿಸುವುದು ವಕೀಲರ ಕರ್ತವ್ಯ. ನಮ್ಮ ಉದ್ಯಾನನಗರಿಯಲ್ಲಿ ಸುಮಾರು 7000 ಕ್ಕೂ ಹೆಚ್ಚು ಮಂದಿ ವಕೀಲ ವೃತ್ತಿಯಲ್ಲಿದ್ದಾರೆ. ಇವರಲ್ಲಿ ಕ್ರಿಮಿನಲ್ ಕೇಸ್‌ಗಳಲ್ಲಿ ಪ್ರಾವೀಣ್ಯತೆ ಪಡೆದು ಅವುಗಳನ್ನು ಕೈಗೆತ್ತಿಕೊಳ್ಳುವ ವಕೀಲರು ಕೇವಲ 350 ಮಂದಿ ಮಾತ್ರ. ಈ 350 ವಕೀಲರಲ್ಲಿ ಅನೇಕ ಜನರು ತಮ್ಮ ವೃತ್ತಿಯಲ್ಲಿ ಹೆಸರು ಮಾಡಿದ್ದಾರೆ. ಇವರಲ್ಲಿ ಕಳೆದ ನಾಲ್ಕು ದಶಕಗಳಿಂದ ವಕೀಲಿ ವೃತ್ತಿಯಲ್ಲಿ ತೊಡಗಿರುವ ಸಿ.ಎಚ್. ಹನುಮಂತರಾಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಕರ್ನಾಟಕದಲ್ಲಿ ಗಣಿ ಅವ್ಯವಹಾರ ಮತ್ತು ಭೂಹಗರಣಗಳದ್ದೇ ಸುದ್ದಿ. ಲೋಕಾಯುಕ್ತ ಸಂತೋಷ ಹೆಗಡೆಯವರು ಗಣಿ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ನು ಸರ್ಕಾರ ಇಲ್ಲಿಯತನಕ ಒಪ್ಪಿಕೊಂಡಿಲ್ಲ. ಹಾಗೆಯೇ ತಳ್ಳಿಯೂ ಹಾಕಿಲ್ಲ. ಇನ್ನು ಭೂಹಗರಣಗಳದ್ದು ಇನ್ನೊಂದು ಕತೆ. ಇಲ್ಲಿ ಯಾವುದೇ ಸರ್ಕಾರಿ ಅಥವ ಸಂವಿಧಾನಿಕ ಸಂಸ್ಥೆ ರಾಜ್ಯದಲ್ಲಿ ಆಗಿರುವ ಭೂಹಗರಣಗಳ ಬಗ್ಗೆ ಯಾವುದೇ ವರದಿ ನೀಡಿಲ್ಲ. ಹಾಗೆಯೇ ಸ್ವಯಂಪ್ರೇರಿತವಾಗಿ ಈ ಅವ್ಯವಹಾರಗಳ ಪತ್ತೆ ಮಾಡಿ ತಪ್ಪಿತಸ್ತರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಈ ವಿಭಾಗದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅನೇಕ ಸಮಾಜಮುಖಿ ವ್ಯಕ್ತಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಸರ್ಕಾರದ ಭ್ರಷ್ಟಾಚಾರವನ್ನು ತಡೆಯಲು ಹೋರಾಡುತ್ತಿದ್ದಾರೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂತಹುದೇ ಭೂಹಗರಣಕ್ಕೆ (ಡಿ-ನೋಟಿಫಿಕೇಷನ್) ಸಂಬಂಧಿಸಿದಂತೆ 22.01.2011 ರಂದು ಶಿವಮೊಗ್ಗದ ವಕೀಲಾರದ ಸಿರಾಜಿನ್ ಪಾಷಾ ಮತ್ತು ಕೆ.ಎನ್, ಬಾಲ್‌ರಾಜ್‌‍ರವರು ಯಡಿಯೂರಪ್ಪರವರ ವಿರುದ್ದದ 1625 ಪುಟಗಳ ಪ್ರಕರಣವನ್ನು ರಾಜ್ಯಪಾಲರ ಅನುಮತಿ ಪಡೆದು ಲೋಕಾಯುಕ್ತ ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದರು. 2 ಮತ್ತು 3ನೇ ಪ್ರಕರಣದ ಫಲವಾಗಿ 15.10.2011ರಂದು ಜೈಲು ಸೇರಿದ ಕರ್ನಾಟಕ ಮಾಜಿ ಮುಖ್ಯಮಂತ್ರಿಯೆಂಬ ಕುಖ್ಯಾತಿಗೆ ಯಡಿಯೂರಪ್ಪ ಪಾತ್ರವಾಗಿದ್ದಾರೆ. ಇದೇ ಪ್ರಕರಣದಲ್ಲಿ ಯಡಿಯೂರಪ್ಪನವರಿಗೆ ಜೈಲಿನಲ್ಲಿ ಜೊತೆಯಾಗಿದ್ದವರು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ. ಈ ಪ್ರಕರಣದಲ್ಲಿ ಯಡಿಯೂರಪ್ಪ 25 ದಿನಗಳ ಜೈಲುವಾಸವನ್ನು ಅನುಭವಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಮುಂದುವರೆಯುತ್ತಿದೆ.

ಈ ಮೊಕದ್ದಮೆಯಲ್ಲಿ ಸಿರಾಜಿನ್ ಪಾಷಾ ಮತ್ತು ಬಾಲ್‌ರಾಜ್‌ರ ಪರ ವಕೀಲರಾಗಿದ್ದವರು ಸಿ.ಎಚ್.ಹನುಮಂತರಾಯರು, ಮತ್ತವರ ಸಹೋದ್ಯೋಗಿ ನಿತಿನ್. ಒಟ್ಟು 5 ಖಾಸಗಿ ಪ್ರಕರಣಗಳಲ್ಲಿ 4 ಪ್ರಕರಣಗಳಿಗೆ ಕೋರ್ಟ್ ಈಗಾಗಲೇ ಸಮನ್ಸ್ ಜಾರಿಮಾಡಿದ್ದು, 5ನೇ ಖಾಸಗಿ ದೂರಿನ ವಿಚಾರಣೆ ನಡೆಸಲು ಲೋಕಾಯುಕ್ತ ಕೋರ್ಟ್‌ನ ನ್ಯಾಯಧೀಶರಾದ ಸುಧೀಂದ್ರರಾವ್ ಅವರು ಯಡಿಯೂರಪ್ಪ ಹಾಗೂ ಇನ್ನಿತರ ಆರೋಪಿಗಳಾದ ಧವಳಗಿರಿ ಪ್ರಾಪರ್ಟಿಸ್‌ನ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಆದರ್ಶ ಡೆವಲಪರ್ಸ್‌ನ ಜೈಶಂಕರ್ ಸೇರಿದಂತೆ ಆರೋಪಿತರೆಲ್ಲರಿಗೂ ಮೇ 24 ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಿಂದ ಬಂದ ಹನುಮಂತರಾಯರು ಹೈಸ್ಕೂಲ್ ತರಗತಿಯಲ್ಲಿದ್ದಾಗಲೇ ವಕೀಲನಾಗಬೇಕು ಎಂಬ ಆಕಾಂಕ್ಷೆ ಹೊತ್ತವರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿದರು. ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಹನುಮಂತರಾಯರು ಮುಂದೆ ಕಾನೂನಿನ ಕ್ಷೇತವನ್ನು ಆಯ್ದುಕೊಂಡರು. 1972ರಲ್ಲಿ ಕಾನೂನು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಹನುಮಂತರಾಯರು ಕರ್ನಾಟಕದ ಆಗಿನ ಖ್ಯಾತ ಕ್ರಿಮಿನಲ್ ವಕೀಲರಾದ ಪಿ,ಎಸ್. ದೇವದಾಸರ ಬಳಿ ಜೂನಿಯರ್ ಆಗಿ ಕೆಲಸ ಆರಂಭಿಸಿದರು. 1980ರಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಹನುಮಂತರಾಯರು ಈ 40 ವರ್ಷದ ವೃತ್ತಿ ಜೀವನದಲ್ಲಿ 1000ಕ್ಕೂ ಹೆಚ್ಚು ಖಾಸಗಿ ಕ್ರಿಮಿನಲ್ ಕೇಸ್‌ಗಳನ್ನು ನಡೆಸಿದ್ದಾರೆ. ಬಹುಶಃ ಕರ್ನಾಟಕದಲ್ಲಿ ಇಷ್ಟೊಂದು ಕ್ರಿಮಿನಲ್ ಮೊಕದ್ದಮೆಗಳನ್ನು ನಡೆಸಿದ ವಕೀಲರು ಅಪರೂಪವೆ. ಹನುಮಂತರಾಯರ ಅನೇಕ ಕೇಸುಗಳಲ್ಲಿ ಬಹಳ ಮುಖ್ಯವಾದವುಗಳೆಂದರೆ ಡಿ.ಸಿ.ಪಿ. ಎನ್. ಸೋಮಶೇಖರ್ ಅವರ ಕೇಸ್, ಬೀನ ಕೊಲೆ ಕೇಸ್, ಶ್ರದ್ದಾನಂದಸ್ವಾಮಿ ಕೇಸ್, ನಗರಿ ಬಾಬಯ್ಯ ಕೇಸ್, ಇತ್ಯಾದಿ..

ಹನುಮಂತರಾಯರು ಸಾಹಿತ್ಯ ವಿದ್ಯಾರ್ಥಿ ಆಗಿದ್ದ ಕಾರಣ ಅವರ ವೃತ್ತಿ ಜೀವನದ ಅನುಭವಗಳನ್ನು ಆಗಾಗ ಅಕ್ಷರರೂಪದಲ್ಲೂ ದಾಖಲಿಸುತ್ತಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಪಿ.ಲಂಕೇಶರ ಶಿಷ್ಯರೂ ಆಗಿದ್ದ ಹನುಮಂತ ರಾಯರು ’ಲಂಕೇಶ್ ಪತ್ರಿಕೆ’ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ಜೊತೆಗೆ ಕೆಲವು ಪುಸ್ತಕಗಳನ್ನು ಸಹ ಬರೆದಿದ್ದಾರೆ. ’ರುದ್ರಮಣೀಯ ಬೆಟ್ಟದಲ್ಲಿ ಹೆಜ್ಜೇನಿನ ಹೊಳೆ’,’ದೆವ್ವದ ದಿಗಿಲಿನಲ್ಲಿ’,’ಮಾಯಾಡುವ ಸಸ್ಯಗಳ ಯಕ್ಷಲೋಕ’,’ತಾಜ್‌ಮಹಲ್ ಬಡವರ ಪ್ರೇಮವನ್ನು ಅಣಕಿಸುತ್ತದೆ’,’ಕುಮಾರನ ಚಿತ್ತ ಛಿದ್ರಗೊಳಿಸಿದ ಸಮುದ್ರವತಿ’,’ಗರುಡಗಣ್ಣುಗಳ ಗಾರುಡಿಗ’, ಇವು ಅವರ ಪ್ರಕಟಿತ ಪುಸ್ತಕಗಳು. ಲಂಕೇಶರ ನಿಧನಾನಂತರ ’ಲಂಕೇಶ್ ಪತ್ರಿಕೆ’ಯಲ್ಲಿ ಹನುಮಂತರಾಯರು ’ವಕೀಲರೊಬ್ಬರ ವಗೈರೆಗಳು’ ಎಂಬ ಅಂಕಣ/ಧಾರಾವಾಹಿ ರೂಪದ ಲೇಖನಗಳನ್ನು ಬರೆದರು. ನಂತರ ಈ ಲೇಖನ ಮಾಲೆ “ವಕೀಲರೊಬ್ಬರ ವಗೈರೆಗಳು” ಪುಸ್ತಕವಾಗಿ ಪ್ರಕಟವಾಗಿದೆ. ಈ ಕೃತಿ ಓದುಗರಲ್ಲಿ ಕುತೂಹಲವನ್ನು ಕಾಪಾಡಿಕೊಳ್ಳುತ್ತಾ ನ್ಯಾಯಶಾಸ್ತ್ರದ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತದೆ. ಕಾನೂನು ಅಭ್ಯಾಸ ಮಾಡಿದವರಿಗಷ್ಟೇ ಅಲ್ಲದೆ, ಕಾನೂನಿನ ಪರಿಚಯ ಇಲ್ಲದ ಸಾಮಾನ್ಯ ಓದುಗರ ಮನಸ್ಸನ್ನು ಸಹ ಸೆರೆಹಿಡಿಯುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರರಿಂದ ಪ್ರಕಟಗೊಂಡ ಈ ಕೃತಿಗೆ 2008ನೇ ಸಾಲಿನ ’ಸಂಕೀರ್ಣ’ ವಿಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.