ರಾಹುಲ್ ಗಾಂಧಿ ಭವಿಷ್ಯದ ನಾಯಕರಾಬಗಲ್ಲರೇ?

– ಆನಂದ ಪ್ರಸಾದ್

ಕಾಂಗ್ರೆಸ್ ಪಕ್ಷವು ಭವಿಷ್ಯದ ನಾಯಕನಿಗಾಗಿ ರಾಹುಲ್ ಗಾಂಧಿಯೆಡೆಗೆ ಕಳೆದ ಕೆಲವು ವರ್ಷಗಳಿಂದ ನೋಡುತ್ತಿದೆ.  ಆದರೆ ರಾಹುಲ್ ಗಾಂಧಿ ನಾಯಕನಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿರುವುದು ಕಂಡುಬರುತ್ತಿಲ್ಲ.  42 ವರ್ಷ ವಯಸ್ಸಿನ ರಾಹುಲರಲ್ಲಿ ನಾಯಕತ್ವದ ಲಕ್ಷಣಗಳು ಇದ್ದಲ್ಲಿ ಈಗಾಗಲೇ ಕಂಡು ಬರಬೇಕಾಗಿತ್ತು.  ಕೇವಲ ವಂಶ ಪಾರಂಪರ್ಯದಿಂದ ನಾಯಕತ್ವದ ಲಕ್ಷಣಗಳು ಬರಲಾರವು.  ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸೊತ್ತಿಗೆಯಂತೆ ವಂಶ ಪಾರಂಪರ್ಯವಾಗಿ ನಾಯಕತ್ವದ ಪಟ್ಟ ಸಿಗಲಾರದು.  ಅದು ಸಿಕ್ಕುವುದಿದ್ದರೆ ಈಗಾಗಲೇ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಬಲದಿಂದಲೇ ಸರಕಾರ ರಚಿಸುವ ಮಟ್ಟಕ್ಕೆ ಬರಬೇಕಾಗಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ಒಂದು ಕುಟುಂಬಕ್ಕೆ ನಿಷ್ಠೆ ತೋರುವ ಪರಂಪರೆ ಸ್ವಾತಂತ್ರ್ಯಾನಂತರದ ಕಾಲದಲ್ಲಿ ನಡೆದುಕೊಂಡು ಬಂದಿದೆ.  ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು ನೆಹರೂ ಕುಟುಂಬದ ಸದಸ್ಯರೇ ಆಗಿದ್ದಾರೆ.  ಇಂದಿರಾ ಕಾಂಗ್ರೆಸ್ ರಚನೆಯಾದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಹಾಗೂ ಅವರ ಮಕ್ಕಳ ಮಾತೇ ಅಂತಿಮ ಎಂಬ ಪರಂಪರೆ ಇದೆ.  ಇಂಥ ಅನುಕೂಲ ಸನ್ನಿವೇಶ ಇದ್ದರೂ ಕಾಂಗ್ರೆಸ್ ಪಕ್ಷವು ದೇಶವನ್ನು ಸಮರ್ಪಕವಾಗಿ ಕಟ್ಟುವಲ್ಲಿ ಸೋತಿದೆ.  ದೇಶದ ಪ್ರಧಾನ ಸಮಸ್ಯೆಗಳ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡರೆ ಅದನ್ನು ವಿರೋಧಿಸುವ ಧ್ವನಿ ಕಾಂಗ್ರೆಸ್ ಪಕ್ಷದಲ್ಲಿ ಏಳದಂಥ ವಾತಾವರಣ ಇದ್ದಾಗ್ಯೂ ಇಂದಿರಾ ಗಾಂಧಿಯಾಗಲೀ, ರಾಜೀವ ಗಾಂಧಿಯಾಗಲೀ, ಸೋನಿಯಾ ಗಾಂಧಿಯಾಗಲೀ ದಿಟ್ಟ ನಿಲುವನ್ನು ತೆಗೆದುಕೊಳ್ಳಲಿಲ್ಲ.  ಭ್ರಷ್ಟಾಚಾರ ದೇಶದ ಪ್ರಧಾನ ಸಮಸ್ಯೆಯಾಗಿದ್ದರೂ ಅದನ್ನು ಹಗುರವಾಗಿ ಕಂಡವರು ಇಂದಿರಾ ಗಾಂಧಿ.  ಭ್ರಷ್ಟಾಚಾರವನ್ನು ಗಂಭೀರವಾಗಿ ತೆಗೆದುಕೊಂಡು ಅದರ ನಿಯಂತ್ರಣಕ್ಕೆ ಲೋಕಪಾಲದಂಥ ಬಲಿಷ್ಠ ವ್ಯವಸ್ಥೆಯನ್ನು ರೂಪಿಸುವುದು ಇಂದಿರಾ ಗಾಂಧಿಗಾಗಲೀ, ರಾಜೀವ ಗಾಂಧಿಗಾಗಲೀ ಅಸಂಭಾವ್ಯವೇನೂ ಆಗಿರಲಿಲ್ಲ.  ದೇಶದ ಬಗ್ಗೆ ಸಮರ್ಪಕ ಮುನ್ನೋಟ ಅವರಲ್ಲಿ ಇರಲಿಲ್ಲ.  ಇದ್ದಿದ್ದರೆ ಇದನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕಾಗಿತ್ತು.  ರಾಜೀವ ಗಾಂಧಿಯವರಂತೂ ಇಂದಿರಾ ಹತ್ಯೆಯ ನಂತರ ನಡೆದ ಚುನಾವಣೆಗಳಲ್ಲಿ 2/3 ಬಹುಮತ ಪಡೆದಿದ್ದು ಲೋಕಪಾಲ ವ್ಯವಸ್ಥೆಯನ್ನು ಸಂಸತ್ತಿನಲ್ಲಿ ಪಾಸು ಮಾಡಿಸಿಕೊಳ್ಳುವ ಸುವರ್ಣಾವಕಾಶ ಇತ್ತು.  ಓರ್ವ ಉತ್ತಮ ನಾಯಕ ಇಂಥ ಬಹುಮತ ಇದ್ದಿದ್ದರೆ ಮೊದಲು ಮಾಡಬೇಕಾದ ಕೆಲಸ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಲಿಷ್ಠ ಲೋಕಪಾಲ ವ್ಯವಸ್ಥೆ ರೂಪಿಸುವುದು.  ಹೀಗಾಗಿ ರಾಜೀವರು ಓರ್ವ ಮುತ್ಸದ್ಧಿ ನಾಯಕರಾಗಿರಲಿಲ್ಲ ಎಂಬುದು ಕಂಡುಬರುತ್ತದೆ.  ಶ್ರೀಲಂಕಾದ ಆಂತರಿಕ ಸಮಸ್ಯೆಯಲ್ಲಿ ಮೂಗು ತೋರಿಸಿದ್ದು ರಾಜೀವ ಗಾಂಧಿಯವರು ಮಾಡಿದ ಇನ್ನೊಂದು ದೊಡ್ಡ ತಪ್ಪು.  ಈ ತಪ್ಪು ಅಂತಿಮವಾಗಿ ಅವರ ಪ್ರಾಣವನ್ನೇ ಬಲಿ ತೆಗೆದುಕೊಂಡಿತು.  ಇಂಥದೇ ತಪ್ಪನ್ನು ಇಂದಿರಾಗಾಂಧಿಯವರು ಭಿಂದ್ರನ್ವಾಲೆಯಂಥವರನ್ನು ಬೆಳೆಸುವಲ್ಲಿಯೂ ಮಾಡಿ ಅದು ಕೂಡ ಅವರ ಬಲಿ ಪಡೆಯುವಲ್ಲಿಗೆ ಮುಟ್ಟಿತು.

ಓರ್ವ ಮುತ್ಸದ್ಧಿ ನಾಯಕನು ತಾನೇ ಪರಿಸ್ಥಿತಿಯ ಅವಲೋಕನ ಮಾಡಿ ಸ್ವತಂತ್ರವಾಗಿ ಚಿಂತಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವವನಾಗಿರುತ್ತಾನೆ.  ಸೋನಿಯಾ ಗಾಂಧಿಯವರ ವಿಚಾರದಲ್ಲಿ ಇದು ಕಂಡು ಬರುತ್ತಿಲ್ಲ.  ತಮ್ಮ ರಾಜಕೀಯ ಕಾರ್ಯದರ್ಶಿಗಳು ಕೊಡುವ ಸಲಹೆಗಳ ಮೂಲಕ ತೀರ್ಮಾನಗಳನ್ನು ತೆಗೆದುಕೊಳ್ಳುವವರು ಓರ್ವ ಮುತ್ಸದ್ಧಿ ನಾಯಕನಾಗಲು ಸಾಧ್ಯವೇ ಇಲ್ಲ.  ಇದುವೇ ಕಾಂಗ್ರೆಸ್ ಪಕ್ಷದ ಇಂದಿನ ಹಾಗೂ ಹಿಂದಿನ ದೊಡ್ಡ ಸಮಸ್ಯೆಯಾಗಿದೆ.  ಕಾಂಗ್ರೆಸ್ ಪಕ್ಷವು ತನ್ನ ಹಿಂದಿನ ಜನಪ್ರಿಯತೆಯನ್ನು ಕಳೆದುಕೊಂಡಿದೆ.  ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರ ನಿರ್ಧಾರಗಳೇ ಕಾರಣವಾಗಿವೆ.  ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲಾಗದವರು ಪಕ್ಷವನ್ನು ಮುನ್ನಡೆಸುತ್ತಿರುವುದೇ ಇದಕ್ಕೆ ಕಾರಣ.  ರಾಹುಲಗಾಂಧಿಯವರ ನಡೆನುಡಿಗಳನ್ನು ನೋಡುವಾಗ ಅವರಿಗೆ ದೇಶವನ್ನು ಮುನ್ನಡೆಸುವ ಆಸಕ್ತಿಯಾಗಲೀ, ಮುನ್ನೋಟವಾಗಲೀ  ಇರುವಂತೆ ಕಾಣುವುದಿಲ್ಲ.  ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವೂ ಅವರಲ್ಲಿ ಇರುವಂತೆ ಕಾಣುವುದಿಲ್ಲ.  ಅಂಥ ಸಾಮರ್ಥ್ಯ ಇದ್ದಿದ್ದರೆ ಅದು 42 ವರ್ಷಗಳ ವಯಸ್ಸನ್ನು ತಲುಪಿರುವ ಅವರಲ್ಲಿ ಈಗಾಗಲೇ ಪ್ರಕಟವಾಗಬೇಕಾಗಿತ್ತು.  ರಾಜಕುಮಾರನಂತೆ ಇಂದು ಜನರೊಡನೆ ಬೆರೆಯದೆ, ಜನರ ಸಮಸ್ಯೆಗಳಿಗೆ ಕಿವಿಗೊಡದೆ, ಅವರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬಂದು ಒಮ್ಮೆ ಮುಖ ತೋರಿಸಿ ಹೋಗುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ.  ಸಾಧ್ಯವಿದ್ದಿದ್ದರೆ ಕಾಂಗ್ರೆಸ್ ಬಹುಮತ ಪಡೆಯಬೇಕಾಗಿತ್ತು.

ದೇಶದ ಮುನ್ನಡೆಯ ಬಗ್ಗೆಯಾಗಲೀ, ದೇಶದ ಪ್ರಧಾನ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯಾಗಲೀ ರಾಹುಲ ಗಾಂಧಿ ಎಲ್ಲೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಂಡುಬರುವುದಿಲ್ಲ.  ದೇಶವನ್ನು ಮುನ್ನಡೆಸುವ ಬಗ್ಗೆ ತನ್ನ ಕನಸುಗಳೇನು ಎಂಬ ಬಗ್ಗೆಯೂ ರಾಹುಲರು ಎಲ್ಲಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಂಡುಬರುವುದಿಲ್ಲ.  ಇಂದಿನ ಇಂಟರ್ನೆಟ್ ಯುಗದಲ್ಲಿ ದೇಶದ ಜನರ ಜೊತೆ ನೇರವಾಗಿ ಸಂಪರ್ಕ ಏರ್ಪಡಿಸಿಕೊಳ್ಳಲು, ಜನರ ಅಭಿಪ್ರಾಯ, ಅನಿಸಿಕೆ ಅರಿತುಕೊಳ್ಳಲು, ಅವರ ಸಲಹೆಸೂಚನೆ ಪಡೆದುಕೊಳ್ಳಲು ಒಂದು ವೆಬ್ಸೈಟ್ ಆಗಲೀ, ಟ್ವಿಟ್ಟರ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿಯಾಗಲೀ ರಾಹುಲ್ ಉಪಸ್ಥಿತಿ ಕಂಡುಬರುವುದಿಲ್ಲ.  ಇದನ್ನೆಲ್ಲಾ ನೋಡುವಾಗ ರಾಹುಲ್ ಗಾಂಧಿಗೆ ನಾಯಕನಾಗುವ, ದೇಶವನ್ನು ಮುನ್ನಡೆಸುವ ಇಚ್ಛೆ ಇಲ್ಲ. ಯಾರದೋ ಒತ್ತಾಯಕ್ಕೆ ಅವರು ರಾಜಕೀಯಕ್ಕೆ ಬಂದಂತೆ ಕಾಣುತ್ತದೆ.  ಹೀಗಾಗಿ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದೆ ಒತ್ತಾಯಕ್ಕೆ ರಾಜಕೀಯಕ್ಕೆ ಬರುವ ಬದಲು ಸುಮ್ಮನೆ ತನ್ನ ಪಾಡಿಗೆ ಇದ್ದು ಅರ್ಹರು ಯಾರಾದರೂ ಇದ್ದರೆ ಅವರನ್ನು ಪಕ್ಷವನ್ನು ಮುನ್ನಡೆಸಲು ಬಿಡುವುದು ಒಳ್ಳೆಯದು.  ಇದರಿಂದ ದೇಶಕ್ಕೆ ಮುಂದೆ ಒಳ್ಳೆಯದಾಗಬಹುದು.  ವಂಶ ಪಾರಂಪರ್ಯ ಆಡಳಿತ ಕಾಂಗ್ರೆಸ್ ಪಕ್ಷದಿಂದ ತೊಲಗಬಹುದು ಅಥವಾ ಕಾಂಗ್ರೆಸ್ ಪಕ್ಷವೇ ತುಂಡು ತುಂಡಾಗಿ ಬೇರೆ ಪ್ರಜಾಸತ್ತಾತ್ಮಕ ಪಕ್ಷಗಳು ಉದಯವಾಗಿ ದೇಶವು ತನ್ನ ಸಮಸ್ಯೆಗಳಿಂದ ಬಿಡಿಸಿಕೊಳ್ಳುವ ನಾಯಕತ್ವ ನೀಡುವ ಜನ ಬರಬಹುದು.  ಹೀಗಾಗಿ ದೇಶವನ್ನು ಮುತ್ಸದ್ಧಿತನದಿಂದ ಮುನ್ನಡೆಸುವ ಆಸಕ್ತಿ, ಅಭಿರುಚಿ, ವಿಶಾಲ ಮನೋಭಾವ, ಕನಸುಗಳು ಇಲ್ಲದಿದ್ದರೆ ರಾಹುಲಗಾಂಧಿಯವರು ರಾಜಕೀಯದಿಂದ ಹೊರಗೆ ನಿಂತರೆ ದೇಶಕ್ಕೆ ಒಳ್ಳೆಯದು.  ಒಂದು ವೇಳೆ ದೇಶವನ್ನು ಮುನ್ನಡೆಸುವ ನಿಜವಾದ ಆಸಕ್ತಿ, ಕನಸು, ವಿಶಾಲ ಮನೋಭಾವ ಇದ್ದರೆ ಅದನ್ನು ತೋರಿಸಲು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿ ದೇಶಕ್ಕೆ ಒಳಿತನ್ನು ಉಂಟುಮಾಡಬಲ್ಲ ಲೋಕಪಾಲ ಮಸೂದೆ, ಕಪ್ಪು ಹಣ ವಾಪಸಾತಿ, ಕಪ್ಪು ಹಣ ನಿಯಂತ್ರಣ, ರಾಜಕೀಯ ಹಸ್ತಕ್ಷೇಪವಿಲ್ಲದ ಸ್ವತಂತ್ರ ತನಿಖಾ ಸಂಸ್ಥೆ ರಚನೆ, ನ್ಯಾಯಾಂಗ ಹಾಗೂ ಚುನಾವಣಾ ಸುಧಾರಣೆಗಳ ಬಗ್ಗೆ ತನ್ನ ದೃಢ ನಿಲುವನ್ನು ತೋರಿಸುವ ಬದ್ಧತೆ ತೋರಿಸಬೇಕಾದ ಅಗತ್ಯ ಇದೆ.

Leave a Reply

Your email address will not be published. Required fields are marked *