Monthly Archives: October 2012

ಸೀಬೆಯ ಸೊಗಡು


-ಬಿ. ಶ್ರೀಪಾದ್ ಭಟ್


‘ನವಿಲು ನೆಲ’, ಒಂದು ಉದ್ದನೆಯ ನೆರಳು’ ಕಥಾಸಂಕಲನಗಳು, ಬಯಲು ಪರಿಮಳ (ವ್ಯಕ್ತಿಚಿತ್ರ ಸಂಪುಟ), ಲೋರ್ಕಾ ನಾಟಕ ಎರ್ಮಾ, ವೈಕುಂ ಬಷೀರ್‌ರವರ ಕತೆಗಳು ಹಾಗೂ ಇನ್ನೂ ಹಲವಾರು ಅನುವಾದಿತ ಕೃತಿಗಳನ್ನು ರಚಿಸಿರುವ ಅಧ್ಯಾಪಕ, ಲೇಖಕ ಎಸ್.ಗಂಗಾಧರಯ್ಯನವರ ಇತ್ತೀಚಿನ ಅನುವಾದಿತ ಕೃತಿ ಸೀಬೆಯ ಸೊಗಡು ಒಂದು ಕ್ರಿಯಾಶೀಲ, ಆಪ್ತವಾದ ಪುಸ್ತಕ. ಲ್ಯಾಟಿನ್ ಅಮೇರಿಕಾದ ಪ್ರಖ್ಯಾತ ಲೇಖಕ ‘ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನೊಂದಿಗೆ ಆತನ ಅಪ್ತ ಗೆಳೆಯ ಅಪುಲೆಯೋ ಮೆಂಡೋಜ್ ನಡೆಸಿದ ಮಾತುಕತೆಯನ್ನಾಧರಿಸಿದ ಮೂಲ ಪುಸ್ತಕ ‘ದ ಫ್ರಾಗನ್ಸ್ ಆಫ್ ಗ್ವಾವ’ ದ ಕನ್ನಡದ ಅನುವಾದವೇ ಈ ಸೀಬೆಯ ಸೊಗಡು’ ಕೃತಿ.

ಕಳೆದ ವರ್ಷ ಬಿಡುಗಡೆಗೊಂಡ ಲೇಖಕ ಕೇಶವ ಮಳಗಿಯವರು ಅತ್ಯಂತ ಸಮರ್ಥವಾಗಿ ಅನುವಾದಿಸಿದ ‘ಕಡಲಾಚೆಯ ಚೆಲುವೆ’ ಮತ್ತು’ಸಂಕಥನ’ (ಮೂಲ ಫ್ರಂಚ್ ಭಾಷೆ)ದ ನಂತರ ಈ ‘ಸೀಬೆಯ ಸೊಗಡು’ ಸಹ ಅತ್ಯಂತ ಅಪರೂಪದ ಅನುವಾದಿತ ಕೃತಿ.  ಈ ‘ಸೀಬೆಯ ಸೊಗಡು’ ಕೃತಿಯ ಬಗೆಗೆ ಲೇಖಕ ಗಂಗಾಧರಯ್ಯ ತಮ್ಮ ಮುನ್ನುಡಿಯಲ್ಲಿ ಇಲ್ಲಿ ಮಾರ್ಕ್ವೆಜ್ ತನ್ನ ಕಲೆಯ ಬಗ್ಗೆ, ಕಥನ ಕುತೂಹಲದ ಬಗ್ಗೆ, ತನ್ನ ಕಥೆಗಳು ನಡೆಯುವ ನೆಲದ ಬಗ್ಗೆ, ತನ್ನ ಗೆಳತಿಯರ ಬಗ್ಗೆ, ತನ್ನದೇ ಪುಸ್ತಕಗಳ ಬಗ್ಗೆ. ತಾನೇ ಕಡೆದ ಪಾತ್ರಗಳ ಬಗ್ಗೆ, ಅವುಗಳು ಮೈದಾಳಿದ ಕ್ಷಣಗಳ ಬಗ್ಗೆ, ಅಂಟಿಕೊಂಡ ಖ್ಯಾತಿ, ಪ್ರಭಾವಿಸಿದ ಮನಸ್ಸುಗಳು, ತನ್ನ ಬಾಲ್ಯ, ಅಲ್ಲಿ ಬರುವ ಅಜ್ಜ, ಅಜ್ಜಿಯರು, ಆಗಿನ ಪುರಾಣ, ಜಾನಪದ ಹತ್ತು ಹಲವು ಸಂಗತಿಗಳನ್ನು ಮೈದುಂಬಿಕೊಂಡವನಂತೆ ಬಿಚ್ಚಿಡುತ್ತಾ ಹೋಗುತ್ತಾನೆ ಎಂದು ಹೇಳುತ್ತಾರೆ. ಇದು ಸಂಪೂರ್ಣ ಸತ್ಯ. ತನ್ನ ವೈಯುಕ್ತಿಕ ಬದುಕನ್ನು ಕೇವಲ ಒಬ್ಬ ಪ್ರತಿಭಾವಂತ ಕಾದಂಬರಿಕಾರನಾಗಿಯೋ, ಕಥೆಗಾರನಾಗಿಯೋ ರೂಪಿಸಿಕೊಳ್ಳಲಿಚ್ಚಿಸದ ಮಾರ್ಕ್ವೆಜ್ ಅದರ ಜೊತೆ ಜೊತೆಗೆ ದಿನ ನಿತ್ಯ ಬದುಕಿನ ವಿವಿಧ ರೋಮಾಂಚನಗಳು, ತಲ್ಲಣಗಳು, ಮಾಂತ್ರಿಕ ಕ್ಷಣಗಳು, ವಾಸ್ತವ ಘಟನೆಗಳು ಮುಂತಾದುವುಗಳನ್ನು ಸಹ ತನ್ನೊಳಗೆ ಒಳಗೊಂಡು ಈ ಒಳಗೊಳ್ಳುವಿಕೆಯ ಪರಿಣಾಮವಾಗಿಯೇ ತನ್ನ ಲೇಖನಗಳು, ಕಥೆಗಳು, ಕಾದಂಬರಿಗಳು ಒಡಮೂಡುತ್ತವೆ ಎಂದು ನಂಬಿದವನು ಈ ಖ್ಯಾತ ಮಾಕ್ವೆಜ್.

ಈ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ‘ಒನ್ ಹಂಡ್ರೆಡ್ ಇಯರ್ಸ ಆಫ್ ಸಾಲಿಟ್ಯೂಡ್’ ಕಾದಂಬರಿಯ ಪ್ರೇರಕವಾದ ಅಂಶಗಳನ್ನು ಕುರಿತಾಗಿ ನಾನೀಗಲೇ ಹೇಳುವಂತೆ, ಬಹುಷಃ ನನ್ನ ಅಜ್ಜಿಯ ಕತೆಗಳು ನನಗೆ ಮೊದಲ ಸುಳಿವು ಕೊಟ್ಟಿದ್ದವು. ಅವಳು ಬದುಕುತ್ತಿದ್ದ ಪರಿಸರದ ಪುರಾಣಗಳು, ದಂತ ಕತೆಗಳು ಹಾಗೂ ನಂಬಿಕೆಗಳು, ಅವಳ ಪ್ರತಿದಿನದ ಬದುಕಿನಲ್ಲಿ ಸಹಜವಾಗಿ ಅವಿಭಾಜ್ಯ ಅಂಗವಾಗಿ ಹೋಗಿದ್ದವು. ಅವಳನ್ನು ಮನಸ್ಸಲ್ಲಿಟ್ಟುಕೊಂಡಿದ್ದ ನನಗೆ ತಕ್ಷಣ ಮನವರಿಕೆಯಾಯ್ತು-ನಾನು ಹೊಸದೇನು ಕಂಡು ಹಿಡಿಯುತ್ತಿಲ್ಲ, ಅಧಿಕೃತವಾಗಿ ನಮ್ಮದಾದ, ಅಸಲಿ ಲ್ಯಾಟಿನ್ ಅಮೇರಿಕಾದ, ಶಕುನಗಳು, ಮುನ್ನುಳುಕಗಳು, ಮದ್ದುಗಳು ಹಾಗೂ ಮೂಢನಂಬಿಕೆಗಳ ಲೋಕವನ್ನು ಸೆರೆ ಹಿಡಿಯುತ್ತಾ ಪುನರ್ ರೂಪಿಸುತ್ತಿದ್ದೇನೆ ಅಷ್ಟೇ. ಉದಾಹರಣೆಗೆ ಪ್ರಾರ್ಥನೆ ಮಾಡುವ ಮೂಲಕ ಹಸುವಿನ ಕಿವಿಯೊಳಗಿಂದ ಹುಳುಗಳು ಆಚೆ ಬರುವಂತೆ ಮಾಡುವ ಕೊಲಂಬಿಯಾದ ಆ ಜನ ನಿನಗೆ ನೆನಪಿರಬಹುದು. ಲ್ಯಾಟಿನ್ ಅಮೇರಿಕಾದ ನಮ್ಮ ಪ್ರತಿದಿನದ ಇಡೀ ಬದುಕು ಇಂಥ ಸಂಗತಿಗಳಿಂದ ತುಂಬಿಹೋಗಿದೆ ಎಂದು ವಿವರವಾಗಿ ವಿಶ್ಲೇಷಿಸುತ್ತಾನೆ. ತನ್ನ ಇತರ ಕೃತಿಗಳ ಕುರಿತಾಗಿ ಇದೇ ಮಾದರಿಯ ಅನೇಕ ವಿಶ್ಲೇಷಣೆಗಳನ್ನು ಈ ಸಂದರ್ಶನದುದ್ದಕ್ಕೂ ಮಾರ್ಕ್ವೆಜ್ ಬಿಚ್ಚಿಡುತ್ತಾನೆ.

ಇದು ನಮಗೆಲ್ಲ ಮತ್ತೊಂದು ಲೋಕವನ್ನೇ ತೆರೆದಿಡುತ್ತದೆ. ತನ್ನ ಕೃತಿಗಳಲೆಲ್ಲ ‘ಆಟಮ್ ಆಫ್ ದಿ ಪೇಟ್ರಿಯಾರ್ಕ’ ಅನ್ನು ಅತ್ಯಂತ ಮಹತ್ವದ ಕೃತಿಯೆಂದು ಹೇಳುತ್ತಾನೆ. ಈ ಪುಸ್ತಕವನ್ನು ಅಧಿಕಾರದ ಒಂಟಿತನ ಕುರಿತ ಒಂದು ಪದ್ಯ ಎಂದು ವಿವರಿಸುತ್ತಾನೆ. 108 ಪುಟಗಳ ಈ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ಬಾಲ್ಯ, ಮನೆತನ, ಶಿಕ್ಷಣ, ಅಧ್ಯಯನ, ಕೃತಿಗಳು, ರಾಜಕೀಯ, ಸ್ತ್ರೀಯರು, ಮೂಢನಂಬಿಕೆಗಳು ಹೀಗೆ ಅನೇಕ ವೈವಿಧ್ಯಮಯವಾದ ಸಂಗತಿಗಳನ್ನು ಅತ್ಯಂತ ತೀವ್ರತೆಯಿಂದ, ತೀಕ್ಷಣತೆಯಿಂದ, ತನ್ಮಯತೆಯಿಂದ ದೀರ್ಘವಾಗಿ ಚರ್ಚಿಸುತ್ತಾನೆ. ತನ್ನ ಖ್ಯಾತಿಯ ಕುರಿತಾದ ಪ್ರಶ್ನೆಯೊಂದಕ್ಕೆ ಇದು ನನ್ನನ್ನು ಆತಂಕಗೊಳಿಸುತ್ತದೆ. ಯಶಸ್ವಿ ಬರಹಗಾರರಿಗಾಗಿ ತಯಾರಿಲ್ಲದ ಭೂ ಖಂಡವೊಂದರಲ್ಲಿ, ಸಾಹಿತಿಕ ಯಶಸ್ಸಿನ ಪ್ರವೃತ್ತಿಯರದವನ ಪುಸ್ತಕಗಳು ಬಿಸಿ ಬಿಸಿ ಕೇಕುಗಳಂತೆ ಖರ್ಚಾಗುವುದೇ ಅವನಿಗೆ ಸಂಭವಿಸಬಹುದಾದ ಅತ್ಯಂತ ಕೆಟ್ಟ ಸಂಗತಿ. ಸಾರ್ವಜನಿಕ ಪ್ರದರ್ಶನ ಜುಗುಪ್ಸೆ ಅನಿಸುತ್ತದೆ. ಅಂತೆಯೇ ಈ ಟೆಲಿವಿಷನ್, ಸಮ್ಮೇಳನಗಳು, ಕಾನ್ಫರೆನ್ಸುಗಳು, ದುಂಡು ಮೇಜಿನ ಚರ್ಚೆಗಳು ಕೂಡ ನನಗೆ ಅಷ್ಟೇ ಜಿಗುಪ್ಸೆಯ ಸಂಗತಿಗಳು ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸುತ್ತಾನೆ ಮಾಕ್ವೆಜ್.

ಅತ್ಯಂತ ಯಶಸ್ವಿಯಾಗಿ ಅನುವಾದಿತಗೊಂಡಿರುವ ಈ ‘ಸೀಬೆಯ ಸೊಗಡು’ ಪುಸ್ತಕದಲ್ಲಿ ಈ ಸಂದರ್ಶನ ನಡೆದ ಕಾಲಘಟ್ಟದ ಕುರಿತಾಗಿ ಎಲ್ಲಿಯೂ ಪ್ರಸ್ತಾವನೆಗೊಳ್ಳದಿರುವುದು ಮಾತ್ರ ಕೊಂಚ ನಿರಾಸೆ ಮೂಡಿಸುತ್ತದೆ.

ಅಹರ್ನಿಶಿ ಪ್ರಕಾಶನದವರು ಪ್ರಕಟಿಸಿದ ಪತ್ರಕರ್ತ, ಲೇಖಕ ಬಿ.ಎಂ.ಬಶೀರ್ ಬರೆದ ಅಂಗೈಯಲ್ಲಿ ಆಕಾಶ’ ಎನ್ನುವ ಶೀರ್ಷಿಕೆಯ ಹನಿಹನಿ ಕತೆಗಳು ಈ ವರ್ಷ ಪ್ರಕಟಗೊಂಡ 96 ಪುಟಗಳ ಅತ್ಯಂತ ಮಹತ್ವದ ಕೃತಿ. ಈ ಪುಸ್ತಕದ ಮುನ್ನುಡಿಯಲ್ಲಿ ಅಕ್ಷತಾ ಅವರು ಒಬ್ಬ ಸೂಕ್ಷ್ಮತೆಯ ಕವಿ, ಲೇಖಕ ಹೇಗೆ ತನ್ನ ಸುತ್ತಣ ಜಗತ್ತನ್ನು ನೋಡುತ್ತಾನೆ, ಅದರ ವಿವರಗಳನ್ನು ಅವಲೋಕಿಸುತ್ತಾನೆ, ಅದನ್ನು ಅಥೈಸಿಕೊಳ್ಳಲು ಯತ್ನಿಸುತ್ತಾನೆ, ಮತ್ತು ಹೇಗೆ ಲೋಕದ ವ್ಯಾಪಾರಕ್ಕೆ ಸ್ಪಂದಿಸುತ್ತಾನೆ ಎಂಬ ಹಿನ್ನೆಲೆಯಲ್ಲಿ ಈ ಕಥೆಗಳು ರೂಪುಗೊಂಡಿವೆ. ಅಲ್ಲಿ ಯಾವುದೇ ತೋರಿಕೆಯ ಜಗತ್ತಿಲ್ಲ. ಅರಿವು ಮೂಡಿಸಬೇಕೆಂಬ ಹಠವೂ ಇಲ್ಲ. ನಾ ಕಂಡ ಸಂಗತಿಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ ಎಂಬ ಲೇಖಕನ ಪಾರದರ್ಶಕತೆ ಈ ಕಥೆಗಳಿಗೆ ನೀಡಿರುವ ಆಯಾಮವೇ ಬೇರೆ ತರದ್ದು ಎಂದು ಒಟ್ಟಾರೆ ಈ ಹನಿ ಹನಿ ಕತೆಗಳ ಸ್ವರೂಪವನ್ನು ವಿವರಿಸುತ್ತಾರೆ. ಅಲ್ಲದೆ ಇಲ್ಲಿ ಲೇಖಕ ಬಶೀರ್ ಅವರೇ ಹೇಳುವಂತೆ ಮಿಂಚಿ ಮಾಯವಾಗುವ ಕೆಲವು ಕ್ಷಣಗಳು, ಘಟನೆಗಳು, ದೃಶ್ಯಗಳು, ಮಾತುಗಳು, ಸಾಲುಗಳು ಜೀವದ ಕೊನೆಯ ಉಸಿರಿನವರೆಗೂ ಮುಳ್ಳಿನಂತೆ ಕಚ್ಚಿ ಹಿಡಿದುಬಿಡುವುದಿದೆ.

ಇಲ್ಲಿನ ಹನಿ ಹನಿ ಕತೆಗಳು ಪರಿಶುದ್ಧವಾದ, ಪ್ರಾಮಾಣಿಕವಾದ, ಸರಳವಾದ ಜಾತ್ಯಾತೀತ ಬದುಕಿನ ಅವಶ್ಯಕತೆಯ ಕುರಿತಾಗಿ ತಣ್ಣಗಿನ ಆದರೆ ತೀಕ್ಷಣವಾದ ಧ್ವನಿಯಲ್ಲಿ ಮಾತನಾಡುತ್ತದೆ. ಈ ಧ್ವನಿಯಲ್ಲಿ ಗಾಂಧಿಯೂ ಇದ್ದಾರೆ, ಏಸುವೂ ಇದ್ದಾನೆ, ಬುದ್ಧನೂ ಇದ್ಧಾನೆ ಕಡೆಗೆ ಪೈಗಂಬರರೂ ಸಹ. ಈ ದಾರ್ಶನಿಕರನ್ನು ಲೇಖಕ ಬಶೀರ್ ಅಥೈಸಿಕೊಂಡು ಆ ಮೂಲಕ ತಾನು ಕಂಡುಕೊಂಡ ಕಾಣ್ಕೆಯನ್ನು ಸಣ್ಣ ಸಣ್ಣ ಕತೆಗಳ ಮೂಲಕ, ರೂಪಕಗಳ ಮೂಲಕ ವಿವರಿಸುತ್ತಾ ಸಾಗಿರುವುದು ಒಂದು ಅರ್ಥಪೂರ್ಣ ಪಯಣ. ಈ ಬದುಕು ವೈಯುಕ್ತಿಕವೂ ಹೌದು, ಸಾರ್ವಜನಿಕವೂ ಹೌದು. ಈ ಬದುಕಿನಲ್ಲಿ ಮನುಷ್ಯನ ಕೊಳ್ಳುಬಾಕುತನದ ಹಪಾಹಪಿತನದಿಂದ, ಕ್ರೌರ್ಯದಿಂದ ಮತ್ತು ತಿಳಿಗೇಡಿತನದಿಂದ ಸಮಾಜದಲ್ಲಿ ಉಂಟಾಗುವ ಅವ್ಯವಸ್ಥೆ, ಅಸ್ವಾಸ್ಥ್ಯ ಮತ್ತು ಅನಾಗರಿಕ ಸ್ಪರ್ದೆ ಹೇಗೆ ಇಡೀ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುತ್ತದೆ ಎಂದು ಲೇಖಕರು ಈ ಹನಿ ಹನಿ ಕತೆಗಳ ಮೂಲಕ ಹೃದಯಂಗಮವಾಗಿ ಕಟ್ಟಿದ್ದಾರೆ. ಇದು ಅತ್ಯಂತ ಜನಪ್ರಿಯ ಪುಸ್ತಕವೆನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಜನಪ್ರಿಯತೆ ಸೃಜನಶೀಲತೆಯ ಮೂಲಕ, ಸಹನೆ, ಕುರುಣೆ, ಭ್ರಾತೃತ್ವದ ಮೂಲಕ, ಮೌಲ್ಯಾಧಾರಿತ ವರ್ತನೆಗಳ ಮೂಲಕ ಸಾಧಿಸಿದ್ಧು ಮಾತ್ರ ಅರ್ಥಪೂರ್ಣ.

ಬಶೀರರ ಈ ಹನಿ ಹನಿ ಕತೆಗಳು ವೈಚಾರಿಕತೆಯನ್ನು, ಸಮಕಾಲೀನತೆಯ ಸ್ವಾರ್ಥ ಮನೋಭೂಮಿಕೆಯನ್ನು, ವಾಸ್ತವಿಕ ಹಿಂಸೆಯ ಅನಾವರಣವನ್ನು ಸಂಯಮದಿಂದ ಆದರೆ ತೀವ್ರ ಒಳನೋಟಗಳ ಮೂಲಕ  ಹೊರಸೂಸುತ್ತವೆ.

‘ಚೋಮನ ದುಡಿ’ ಕೇಂದ್ರಿತ ವಿಮರ್ಶೆಗಳು ಮತ್ತು ಜಾತಿ ಪ್ರಶ್ನೆಯ ಆಯಾಮಗಳು

-ಸುಭಾಷ್ ರಾಜಮಾನೆ

ಕನ್ನಡ ಸಾಹಿತ್ಯ ವಿಮರ್ಶೆಯು ಸಮಕಾಲೀನ ಕೃತಿಗಳಿಗೆ ಪ್ರತಿಕ್ರಿಯಿಸುತ್ತ ಮತ್ತು ಸಾಹಿತ್ಯವನ್ನು ವಿಶ್ಲೇಷಣೆ ಮಾಡುತ್ತಾ ಬಂದಿದೆ. ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಸಾಹಿತ್ಯ ವಿಮರ್ಶೆಗೆ ಪ್ರತ್ಯೇಕ ಸ್ಥಾನವಿರಲಿಲ್ಲ. ಆಗ ಸೃಜನಶೀಲ ಸಾಹಿತ್ಯದಂತೆ ವಿಮರ್ಶೆ ಒಂದು ಪ್ರಕಾರವಾಗಿಯೂ ಬೆಳೆದಿರಲಿಲ್ಲ. ವಿಮರ್ಶೆಯು ಸಾಹಿತ್ಯವನ್ನು ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡುವ ಸ್ವತಂತ್ರ ಶಿಸ್ತಾಗಿ 1950ರ ದಶಕದ ನಂತರ ಬೆಳೆಯಿತು. ನವ್ಯ ಸಾಹಿತ್ಯ ಘಟ್ಟದಲ್ಲಿ ವಿಮರ್ಶೆಯು ಮತ್ತಷ್ಟು ಹುಲುಸಾಗಿ ಬೆಳೆದು ಒಂದು ಪ್ರತ್ಯೇಕ ಪ್ರಕಾರವಾಗಿಯೂ ಗುರುತಿಸಿಕೊಂಡಿತು. ವಿಮರ್ಶೆಯ ಮುಖ್ಯ ಕೆಲಸವೆಂದರೆ ಕೃತಿಯನ್ನು ಒಂದು ತಾತ್ವಿಕ ಚೌಕಟ್ಟಿನಲ್ಲಿ ವಿಶ್ಲೇಷಿಸುವುದು. ಒಟ್ಟು ಸಾಹಿತ್ಯ ಪರಂಪರೆಯಲ್ಲಿ ಕೃತಿಯ ಸ್ಥಾನವನ್ನು ಮೌಲ್ಯಮಾಪನ ಮಾಡುವುದು.

ನವೋದಯದ ದಿನಗಳ ನಂತರ ಸಾಹಿತ್ಯ ವಿಮರ್ಶೆ ಕೇವಲ ರಸಾನುಭವದ ಅಭಿವ್ಯಕ್ತಿಯಾಗಿ ಉಳಿಯಲಿಲ್ಲ. ಅದು ಹೆಚ್ಚಾಗಿ ಕೃತಿಯ ತಾತ್ವಿಕ ಮತ್ತು ಬೌದ್ಧಿಕ ವಿಶ್ಲೇಷಣೆಗೆ ತೊಡಗಿತು. ಅದು ಸಾಹಿತ್ಯ ಕೃತಿಯ ನಿಲುವುಗಳನ್ನು ಚರ್ಚಿಸಲು ಆರಂಭಿಸಿತು. ಆದ್ದರಿಂದ ಸಾಹಿತ್ಯ ವಿಮರ್ಶೆಯೂ ಯಾವುದೇ ಕೃತಿಯ ಮೇಲೆ ಮಾಡುವ ಪ್ರತಿಕ್ರಿಯೆ ಮಾತ್ರವಲ್ಲ; ಅದು ಬದುಕು ಮತ್ತು ಲೋಕವನ್ನು ನೋಡುವ ದೃಷ್ಟಿಕೋನವನ್ನೂ ಮಂಡಿಸುತ್ತದೆ. ಪ್ರತಿ ವಿಮರ್ಶೆಯು ಸಾಹಿತ್ಯ ಕೃತಿಯನ್ನು ಹೊಸ ರೂಪದಲ್ಲಿಯೇ ಕಟ್ಟಿಕೊಡುತ್ತದೆ. ವಿಮರ್ಶೆ ಎಂಬುದು ಸಾಹಿತ್ಯ ಕೃತಿಯನ್ನು ಆಧರಿಸಿ ನಡೆಯುವ ಬೌದ್ಧಿಕ ಚಟುವಟಿಕೆಯಾದರೂ ಅದು ಕೃತಿಯಾಚೆಗಿನ ಅನೇಕ ಸಂಗತಿಗಳನ್ನು ಅವಲೋಕಿಸುತ್ತದೆ. ಆದ್ದರಿಂದ ವಿಮರ್ಶೆ ಎಂಬುದು ಈಚೆಗೆ ಅದು ಕೃತಿ ವಿಮರ್ಶೆಯ ಭಾಗವಾಗಿ ನಡೆವ ಸಾಂಸ್ಕೃತಿಕ ವಾಗ್ವಾದ. ಅದರಲ್ಲೂ ದಮನಿತ ಸಮುದಾಯದಿಂದ ಬಂದ ವಿಮರ್ಶಕರು ಕೃತಿಯ ಮುಖಾಮುಖಿಯನ್ನು ತಾತ್ವಿಕವಾದ ಪ್ರಶ್ನೆಗಳ ಮೂಲಕವೇ ಮಾಡಲು  ಯತ್ನಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯ ಮೇಲೆ ಬಂದಿರುವ ವಿಮರ್ಶೆಗಳನ್ನು ಚರ್ಚಿಸಬಹುದಾಗಿದೆ. ಕನ್ನಡ ಕಾದಂಬರಿ ಪರಂಪರೆಯಲ್ಲಿ ಕಾರಂತರ ‘ಚೋಮನ ದುಡಿ’ ಬಹುಚರ್ಚಿತ ಕೃತಿಯಾಗಿದೆ. ಈ ಕಾದಂಬರಿ ಕುರಿತು ಸಾಕಷ್ಟು ವಿಮರ್ಶೆಗಳು ಬಂದಿವೆ. ಪ್ರಸ್ತುತ ಲೇಖನದಲ್ಲಿ ಅಧ್ಯಯನಕ್ಕಾಗಿ ‘ಚೋಮನ ದುಡಿ’ ಕಾದಂಬರಿಯನ್ನು ಜಾತಿ ಪ್ರಶ್ನೆಯ ನೆಲೆಯಲ್ಲಿ ಪ್ರಧಾನವಾಗಿ ಚರ್ಚಿಸಿರುವ ವಿಮರ್ಶೆಗಳನ್ನು ಪರಿಗಣಿಸಲಾಗಿದೆ. ಕಾದಂಬರಿಯಲ್ಲಿನ ಜಾತಿ ಮತ್ತು ಅಸ್ಪೃಶ್ಯತೆಯ ಸಮಸ್ಯೆಯನ್ನು ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸುವ ವಿಮರ್ಶಾ ಲೇಖನಗಳನ್ನೂ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿದೆ.

‘ಚೋಮನ ದುಡಿ’ ಕಾದಂಬರಿಯ ಕೇಂದ್ರ ವ್ಯಕ್ತಿ ಅಸ್ಪೃಶ್ಯ ಜಾತಿಯ ಚೋಮ. ಅವನೊಬ್ಬ ಮೇಲ್ವರ್ಗದ ಬ್ರಾಹ್ಮಣನ ಜೀತದಾಳು. ಚೋಮ ಒಂದು ತುಂಡು ಭೂಮಿಯ ಬೇಸಾಯಗಾರನಾಗಲು ಬಯಸುತ್ತಾನೆ. ಆದರೆ ಚೋಮ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಹೋರಾಟದಲ್ಲಿ ಸಂಪೂರ್ಣವಾಗಿ ವಿಫಲನಾಗುತ್ತಾನೆ. ಚೋಮನ ದುರಂತ ಹಾಗೂ ಅವನ ಕೌಟುಂಬಿಕ ವಿಘಟನೆಯನ್ನು ಕಾದಂಬರಿ ರೋಮ್ಯಾಂಟಿಕ್ ನೆಲೆಯಲ್ಲಿ ನಿರೂಪಿಸುತ್ತದೆ.

ಪ್ರಸ್ತುತ ಪ್ರಬಂಧದಲ್ಲಿ ಈ ‘ಚೋಮನ ದುಡಿ’ ಕಾದಂಬರಿಯ ಆಂತರಿಕ ವಿನ್ಯಾಸಗಳನ್ನು ಕನ್ನಡ ವಿಮರ್ಶೆ ಗ್ರಹಿಸಿರುವ ವಿಧಾನವನ್ನು ಪ್ರಧಾನವಾಗಿ ಶೋಧಿಸಲಾಗುವುದು. ಕೃತಿಯಲ್ಲಿನ ಜಾತಿ ಸಮಸ್ಯೆಯನ್ನು ಕನ್ನಡ ವಿಮರ್ಶೆ ಗ್ರಹಿಸಿರುವ ರೀತಿಯನ್ನು ಗುರುತಿಸಲಾಗುವುದು. ಇದರೊಂದಿಗೆ ಕನ್ನಡ ವಿಮರ್ಶೆಯ ಮುಖ್ಯ ಆಸಕ್ತಿಗಳನ್ನು ಪ್ರಾಸಂಗಿಕವಾಗಿ ಗುರುತಿಸಲಾಗುವುದು. ಕಾದಂಬರಿಯಲ್ಲಿ ನಿರೂಪಿತವಾಗಿರುವಂತೆ ಚೋಮನ ಅವಮಾನಕ್ಕೆ ಆತನ ವೈಯಕ್ತಿಕ ಆಸೆ ಕಾರಣವೇ? ಚೋಮನ ಕೌಟುಂಬಿಕ ದುರಂತಕ್ಕೆ ಅವನ ಕುಡಿತ ಅಥವಾ ಆರ್ಥಿಕ ತುಡಿತಗಳು ಕಾರಣವೇ? ಅಥವಾ ಸಾಮಾಜಿಕವಾಗಿ ನಿರ್ದಿಷ್ಟ ವರ್ಗವೊಂದು ಕಾರಣವಾಗಿದೆಯೋ? ಜಾತಿ ಪದ್ಧತಿಯ ಕ್ರೌರ್ಯ ಮತ್ತು ಅಸ್ಪೃಶ್ಯತೆಯ ಆಚರಣೆ ಚೋಮನ ಸಾಮಾಜಿಕ ಮತ್ತು ಆರ್ಥಿಕ ಚಲನೆಗೆ ಯಾವ ರೀತಿಯ ನಿರ್ಬಂಧ ಹಾಕಿವೆ? ಎಂಬ ಈ ಮುಖ್ಯ ಪ್ರಶ್ನೆಗಳನ್ನು ಎತ್ತಿಕೊಂಡು ‘ಚೋಮನ ದುಡಿ’ ಮೇಲಿನ ವಿಮರ್ಶಾ ಲೇಖನಗಳನ್ನು ಅಧ್ಯಯನ ಮಾಡಲಾಗುವುದು.

ಕೃತಿಯನ್ನು ಆಧರಿಸಿ ಹುಟ್ಟುವ ವಿಮರ್ಶೆಗಳು ಕೃತಿಯೊಳಗಿನ ಕೆಲವು ಸಂಗತಿಗಳನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವೆಂದು ಚರ್ಚಿಸುತ್ತವೆ. ಅಥವಾ ಸಾಮಾನ್ಯವಾಗಿ ಕೆಲವು ಘಟನೆಗಳನ್ನು ಎತ್ತಿಕೊಂಡು ವಿಶ್ಲೇಷಣೆ ಮಾಡುತ್ತವೆ. ಕೃತಿಯೊಳಗಿನ ಕೆಲವು ವಿಚಾರಗಳು ಅಷ್ಟೇನೂ ಮಹತ್ವವಾದವಲ್ಲವೆಂದು ನಿರ್ಣಯಿಸಿ ಅವಗಳನ್ನು ಗುಪ್ತವಾಗಿ ಮರೆಮಾಚುವ ಸಾಧ್ಯತೆಯು ಇರುತ್ತದೆ. ತಾತ್ವಿಕವಾಗಿ ವಿಮರ್ಶೆಗಳು ಕೆಲವು ವಿಚಾರಗಳನ್ನು ‘ಮುಚ್ಚಿಡು’ವ ಹಾಗೂ ‘ತೆರೆದಿಡು’ವುದರ ಮೂಲಕ ಸಾಂಸ್ಕೃತಿಕ ರಾಜಕಾರಣವನ್ನು ಹುಟ್ಟು ಹಾಕುತ್ತವೆ. ವಿಮರ್ಶೆಗಳು ಮಾಡುವ ಇಂತಹ ‘ಸಾಂಸ್ಕೃತಿಕ ರಾಜಕಾರಣ’ದ ಹಿಂದಿರುವ ಪ್ರೇರಣೆ ಮತ್ತು ಸಾಂಸ್ಕೃತಿಕ ಒತ್ತಡಗಳನ್ನು ಹುಡುಕಲು ಯತ್ನಿಸಲಾಗುವುದು. ಇಂತಹ ವಿಮರ್ಶೆಗಳ ಹಿಂದಿರುವ ತಾತ್ವಿಕ ಮತ್ತು ಸೈದ್ಧಾಂತಿಕ ಧೋರಣೆಗಳು ಯಾವವು ಎಂಬುದನ್ನು ವಿಶ್ಲೇಷಿಸುವ ವಿಧಾನವನ್ನು ಇಲ್ಲಿ ಅನುಸರಿಸಲಾಗುವುದು.

ಜಾತಿ ಪ್ರಶ್ನೆಯನ್ನು ಚರ್ಚಿಸುವ ವಿಮರ್ಶೆಗಳು ಬಳಸಿರುವ ಭಾಷೆಯನ್ನು ವಿಶ್ಲೇಷಿಸಲಾಗುತ್ತದೆ. ಅವುಗಳ ಭಾಷಿಕ ವಿನ್ಯಾಸವನ್ನು ಆಮೂಲಾಗ್ರವಾಗಿ ಚರ್ಚಿಸಿ ಅದರ ಹಿಂದಿರುವ ಸಾಂಸ್ಕೃತಿಕ ರಾಜಕಾರಣವನ್ನು ಗುರುತಿಸಲಾಗುತ್ತದೆ. ಈ ವಿಮರ್ಶೆಗಳನ್ನು ಕಾದಂಬರಿ ಕುರಿತು ಸಂಶೋಧಕನ ನಿಲುವುಗಳನ್ನು ಮುಖಾಮುಖಿಯಾಗಿಸಿ ಆ ವಿಮರ್ಶೆಯ ಇತಿಮಿತಿಗಳನ್ನು ಇಲ್ಲಿ ಚರ್ಚಿಸಲು ಯತ್ನಿಸಲಾಗುವುದು. ವಿಮರ್ಶೆಗಳು ಸಾಹಿತ್ಯ ಕೃತಿಗೆ ಪ್ರತಿಕ್ರಿಯೆ ಮಾಡುತ್ತ ಹುಟ್ಟಿದರೂ ಅವು ಕೇವಲ ಸಾಹಿತ್ಯಕವಾಗಿ ಉಳಿಯುವುದಿಲ್ಲ. ಕೃತಿಯ ಚೌಕಟ್ಟು ದಾಟಿ ಅವು ದಾರ್ಶನಿಕ ಚರ್ಚೆಗೆ ಹೊರಳಿಕೊಳ್ಳುತ್ತವೆ. ಆಗ ಅವು ನಮ್ಮ ಸಮಾಜ, ಜಾತಿ, ರಾಜಕಾರಣ, ಧರ್ಮಗಳನ್ನು ಕುರಿತು ತಮ್ಮ ಸ್ವತಂತ್ರ ನಿಲುವುಗಳನ್ನು ಮಂಡಿಸುತ್ತವೆ. ವಿಮರ್ಶೆಗಳ ಈ ‘ರೂಪಾಂತರ ಪ್ರಕ್ರಿಯೆ’ಯನ್ನು ಗಮನಿಸುವ ಯತ್ನವನ್ನು ಇಲ್ಲಿ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ‘ಚೋಮನ ದುಡಿ’ ಕಾದಂಬರಿಯ ಮೇಲೆ ಬಂದಿರುವ ಈ ಕೆಳಕಂಡ ವಿಮರ್ಶಾ ಲೇಖನಗಳನ್ನು ಅಧ್ಯಯನಕ್ಕೊಳಪಡಿಸಲಾಗುವುದು.

  •  ಕೀರ್ತಿನಾಥ ಕುರ್ತಕೋಟಿ -‘ಸಾಮಾಜಿಕತೆಯ ಅರಿವು: ಕಾರಂತ’
  •  ಜಿ.ಎಸ್. ಆಮೂರ – ‘ಮುಲ್ಕ್ರಾಜ್ ಆನಂದರ ಅನ್ಟಚಬಲ್ ಮತ್ತು ಶಿವರಾಮ ಕಾರಂತರ ಚೋಮನ ದುಡಿ’
  •  ಯು.ಆರ್. ಅನಂತಮೂರ್ತಿ- ‘ಕಾರಂತರ ಅಥೆಂಟಿಕ್ ಪ್ರಪಂಚ’
  •  ಆರ್.ವಿ. ಭಂಡಾರಿ – ‘ಚೋಮನ ದುಡಿಯ ವಸ್ತು ಮತ್ತು ವಿನ್ಯಾಸ’
  •  ಜಿ.ರಾಜಶೇಖರ – ‘ಚೋಮನ ದುಡಿ’
  • ಡಿ.ಆರ್. ನಾಗರಾಜ – ‘ಆಧುನಿಕ ಸಾಹಿತ್ಯ ಮತ್ತು ಸಾಮಾನ್ಯ ಮನುಷ್ಯ’
  •  ಕೆ.ವಿ. ನಾರಾಯಣ – ‘ಚೋಮನ ದುಡಿ’
  •  ಬಿ.ಎಂ. ಪುಟ್ಟಯ್ಯ – ‘ಕಾರಂತರ ಆತ್ಮಕಥೆಗಳು: ಕಾದಂಬರಿಗಳ ಒಳಗೆ ಮತ್ತು ಹೊರಗೆ’
  •  ಟಿ.ಪಿ. ಅಶೋಕ – ‘ಶಿವರಾಮ ಕಾರಂತ: ಎರಡು ಅಧ್ಯಯನಗಳು’
  •  ಮೊಗಳ್ಳಿ ಗಣೇಶ್ – ‘ವೈದಿಕ ತವರಿಗೆ ಮರಳುವ ಕಾರಂತರು’

ಈ ವಿಮರ್ಶಾ ಲೇಖನಗಳನ್ನು ಅನುಕ್ರಮವಾಗಿ ಪರಿಶೀಲಿಸುವುದಕ್ಕೆ ಬದಲಾಗಿ ಅವುಗಳ ತಾತ್ವಿಕ ನೆಲೆಯ ಆಧಾರದಲ್ಲಿ ವಿಂಗಡಿಸಿಕೊಂಡು ವಿಶ್ಲೇಷಿಸಲಾಗುವುದು. ಮೊದಲನೆಯದಾಗಿ ‘ಚೋಮನ ದುಡಿ’ ಕಾದಂಬರಿಯ ಕಲಾತ್ಮಕ ಅಂಗಗಳನ್ನು ಮುಖ್ಯವೆಂದು ಭಾವಿಸುವ ವಿಮರ್ಶೆಗಳನ್ನು ‘ಕಲಾತ್ಮಕ ಪ್ರಶ್ನೆಯ ವಿಮರ್ಶೆ’ ಎಂಬ ಭಾಗದಲ್ಲಿ  ಚರ್ಚಿಸಲಾಗುವುದು. ಎರಡನೆಯದಾಗಿ ‘ಚೋಮನ ದುಡಿ’ ಕಾದಂಬರಿಯ ಸಾಮಾಜಿಕ ಸಮಸ್ಯೆಯನ್ನು ಮುಖ್ಯವೆಂದು ಭಾವಿಸಿ ಅದನ್ನು ವಿಶ್ಲೇಷಿಸುವ ವಿಮರ್ಶೆಗಳನ್ನು ‘ಸಾಮಾಜಿಕ ನ್ಯಾಯದ ವಿಮರ್ಶೆ’ಯ ವಿಭಾಗದಲ್ಲಿ ಚರ್ಚಿಸಲಾಗುವುದು.

ಕಲಾತ್ಮಕ ಪ್ರಶ್ನೆಯ ವಿಮರ್ಶೆ:

ಕನ್ನಡ ಸಾಹಿತ್ಯ ಪರಂಪರೆಯ ದೊಡ್ಡ ವಿಮರ್ಶಕರಲ್ಲಿ ಒಬ್ಬರಾದ ಕೀರ್ತಿನಾಥ ಕುರ್ತಕೋಟಿಯವರು ಕನ್ನಡ ವಿಮರ್ಶೆಗೆ ಹೊಸ ಛಾಪು ನೀಡಿದವರು. ಸಂಸ್ಕೃತ ವಿದ್ವಾಂಸರಾಗಿದ್ದ ಅವರು ಪಾಶ್ಚಾತ್ಯ ಸಾಹಿತ್ಯ ಮತ್ತು ಚಿಂತನೆಯಿಂದಲೂ ಸಾಕಷ್ಟು ಪ್ರಭಾವಿತರಾಗಿದ್ದವರು. ಕನ್ನಡ ಸಾಹಿತ್ಯದ ಪ್ರಾತಿನಿಧಿಕ ವಿಮರ್ಶಕರಾದ ಅವರು ಕನ್ನಡದ ಅನೇಕ ಕಾದಂಬರಿಗಳನ್ನು ಸಮೀಕ್ಷಿಸಿದ್ದಾರೆ.

ಕುರ್ತಕೋಟಿಯವರು ಕಾರಂತರ ‘ಚೋಮನ ದುಡಿ’ಯನ್ನು ಕುರಿತು ಹೀಗೆ ಹೇಳುತ್ತಾರೆ: ಚೋಮನ ದುಡಿಯಲ್ಲಿ ಹೊಲೆಯರ ಜಾತಿಯಲ್ಲಿ ಹುಟ್ಟಿದ್ದರಿಂದ ಅನೇಕ ದುಃಖಪರಂಪರೆಗಳಿಗೆ ಈಡಾಗಬೇಕಾದ ಹೊಲೆಯನ ಜೀವನಚಿತ್ರವಿದೆ. ಈ ಕೃತಿಯ ಕಥನದ ವೇಗವೇ ಬೆರಗುಗೊಳಿಸುವಂಥದ್ದು. ಚೋಮನ ಜೀವನ ಇಳಿಜಾರಿಗೆ ಬಿದ್ದ ಬಂಡಿಯಂತೆ ದುರಂತದ ಕಡೆಗೆ ವೇಗವಾಗಿ ಸಾಗಿದೆ. ಅವನ ದುಡಿಯ ಬಡಿತ ಈ ವೇಗದ ಸಂಕೇತದಂತಿದೆ. ಮಲೆನಾಡಿನ ಅಜ್ಞಾತ ಆವರಣದಲ್ಲಿ ಕೂಡ ನಡೆದ ಜೀವಹತ್ಯೆ ಅಂತಃಕರಣವನ್ನು ಕಲುಕುತ್ತದೆ. ಇಷ್ಟಾದರೂ ಕಾರಂತರ ದೃಷ್ಟಿ ವಿಕೃತವಾಗಿಲ್ಲ. ಸಂಕಪ್ಪಯ್ಯನವರಿಂದ ಹಿಡಿದು, ಮನ್ವೇಲ, ಮಿಂಗೇಲ ದೊರೆಗಳವರೆಗೆ ಎಲ್ಲರೂ ಒಬ್ಬ ಚೋಮನನ್ನು ತುಳಿಯಲು ಹಾತೊರೆಯುತ್ತಿದ್ದಾರೆನೋ ನಿಜ. ಆದರೆ ಚೋಮ ಇನ್ನೂ ಬದುಕಿದ್ದಾನೆ. ಅವನ ದುಡಿ ಕತ್ತಲಲ್ಲೂ ಕೇಳುತ್ತಿದೆ ಎಂಬ ದರ್ಶನವೇ ಕಾರಂತರ ಬದುಕಿನ ಶ್ರದ್ಧೆಗೆ ಸಾಡ್ಷಯಾಗಿದೆ.2  ಕುರ್ತಕೋಟಿಯವರು ಇಲ್ಲಿ ಚೋಮನ ದುರಂತದ ಮೂಲ ಅವನ ಜಾತಿಯಲ್ಲಿಯೇ ಇದೆ ಎಂದು ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ನಿರ್ಧರಿಸಿಬಿಟ್ಟಿದ್ದಾರೆ. ಅವರಿಗೆ ಚೋಮನ ದುರಂತಕ್ಕೆ ಕಾರಣವಾಗಿರುವ ಚೋಮನ ಜಾತಿ ಕುರಿತು ಸಾಕಷ್ಟು ಸಹಾನುಭೂತಿಯೂ ವ್ಯಕ್ತವಾಗಿದೆ. ಕುರ್ತಕೋಟಿ ಅವರ ವಿಮರ್ಶೆ ಜಾತಿ ವ್ಯವಸ್ಥೆಯ ದಬ್ಬಾಳಿಕೆ ಮತ್ತು ಕ್ರೌರ್ಯಕ್ಕೆ ಚೋಮ ನಲುಗಿ ಹೋದರೂ ಅವನಿನ್ನೂ ಬದುಕಿದ್ದಾನೆಂದು ಹೇಳಿ ಸಮಾಧಾನ ಪಡಿಸುತ್ತದೆ. ಇನ್ನೂ ವಿಚಿತ್ರವೆಂದರೆ ಬಡತನ ಮತ್ತು ಅವಮಾನಗಳಿಂದ ತತ್ತರಿಸಿಹೋದ ಚೋಮನ ‘ದುಡಿ’ಯ ಬಡಿತದಲ್ಲಿ ‘ದರ್ಶನ’ವನ್ನು ಕಾಣುವುದು!

ಕುರ್ತಕೋಟಿಯವರು ಕಾದಂಬರಿಯ ಕಥನದ ಬಗ್ಗೆ ಹೆಚ್ಚಿನ ಆಸಕ್ತಿ ತಾಳುತ್ತಾರೆ. ಅವರಿಗೆ ‘ಚೋಮನ ದುಡಿ’ಯ ಕಥನದ ವೇಗದ ಕುರಿತು ಅಪಾರ ಕೌತುಕವಿದೆ. ಕೃತಿಯ ರೂಪ, ವಿನ್ಯಾಸ, ನಿರೂಪಣೆಗೆ ಅವರು ಹೆಚ್ಚಿನ ಒತ್ತು ನೀಡುತ್ತಾರೆ. ವರ್ಗ ತಾರತಮ್ಯಗಳನ್ನು ಸೃಷ್ಟಿಸಿದ ಜಾತಿ ಪದ್ಧತಿ ಎಂಬ ಸಾಮಾಜಿಕ ಸಮಸ್ಯೆಯೊಂದು ಅಷ್ಟಾಗಿ ಅವರ ಗಮನ ಸೆಳೆದಂತೆ ಕಾಣುವುದಿಲ್ಲ. ಚೋಮನ ಸಮಸ್ಯೆಗಳಾದ ಬಡತನ, ಜೀತ, ಅಸ್ಪೃಶ್ಯತೆ, ಜಾತಿಯತೆ ಕುರಿತು ಅವರ ವಿಮರ್ಶೆ ನಿರ್ಲಿಪ್ತವಾಗಿದೆ. ಚೋಮನ ದುಃಖಪರಂಪರೆಗೆ ಕಾರಣ ಚೋಮ ಬದುಕುವ ಸಮಾಜದ ಸಂರಚನೆಯಲ್ಲಿಯೇ ಇದೆ ಎಂಬುದನ್ನು ಅವರ ವಿಮರ್ಶೆ ನಿರಾಕರಿಸುತ್ತದೆ. ಕುರ್ತಕೋಟಿಯವರು ಚೋಮನ ಬದುಕನ್ನು ಅವನ ಸುತ್ತಮುತ್ತಲಿನ ವರ್ಗ ಸಮಾಜ, ಭೂಮಾಲೀಕ ಪರಿಸರ, ಜಾತಿ ವ್ಯವಸ್ಥೆಗಳಿಗೆ ಸಂಬಂಧವೇ ಇಲ್ಲದ ಪ್ರತ್ಯೇಕ ಘಟಕದಂತೆ  ನೋಡುತ್ತಾರೆ.

ಕುರ್ತಕೋಟಿಯವರು ಚೋಮನ ಸೂಕ್ಷ್ಮ ಸಂವೇದನೆಗಳೆಲ್ಲ ಅವನ ದುರಂತದ ಕತ್ತಲೆಯಲ್ಲಿ ದುಡಿಯ ಸಪ್ಪಳದಲ್ಲಿ ಮುಳುಗಿಹೋಗಿವೆ. ಮನುಷ್ಯ ಸಹನೆಯನ್ನೂ ಮೀರಿದ ಅವನ ದುಃಖ ಅವನ ವ್ಯಕ್ತಿತ್ವವನ್ನೆಲ್ಲ ನುಂಗಿ ನೀರು ಹಿಡಿದಿದ್ದರಿಂದ ವೈವಿಧ್ಯದ ವಿಕಸನಕ್ಕೆ ಆ ಪಾತ್ರದಲ್ಲಿ ಎಡೆ ದೊರೆಯುವಂತಿಲ್ಲ3 ಎಂದು ಹೇಳುವ ಅವರ ಮಾತನ್ನು ಒಪ್ಪಲಾಗುವುದಿಲ್ಲ. ಚೋಮ ಅತ್ಯಂತ ಸಂವೇದನಾಶೀಲ ವ್ಯಕ್ತಿಯೇ ಆಗಿದ್ದಾನೆ. ಆದರೆ ಕುರ್ತಕೋಟಿಯವರ ಸೂಕ್ಷ್ಮ ಸಂವೇದನೆಗೆ ಚೋಮನ ದುರಂತದ ಒಳಸುಳಿಗಳನ್ನು ಗ್ರಹಿಸಲು ಸಾಧ್ಯವಾಗಿಲ್ಲ. ಚೋಮನ ಪಾತ್ರದ ವಿಶ್ಲೇಷಣೆಗಿಂತಲೂ ತಮ್ಮ ಪಾರಂಪರಿಕ ತೀರ್ಮಾನಗಳನ್ನೇ ಹೇಳುವುದು ಕುರ್ತಕೋಟಿಯವರ ವಿಮರ್ಶೆಯ ಕ್ರಮವಾಗಿದೆ.

ಕುರ್ತಕೋಟಿಯವರ ದೃಷ್ಟಿಯಲ್ಲಿ ‘ಮರಳಿಮಣ್ಣಿಗೆ’, ‘ಅಳಿದ ಮೇಲೆ’, ‘ಬೆಟ್ಟದ ಜೀವ’ ಕೃತಿಗಳು ಶ್ರೇಷ್ಠ ಕಲಾಕೃತಿಗಳು. ಚೋಮನ ಪಾತ್ರದಲ್ಲಿ ವೈವಿಧ್ಯಕ್ಕೆ ಅವಕಾಶವಿಲ್ಲದ್ದರಿಂದ ಚೋಮನ ದುಡಿ ಉದಾತ್ತ ಕೃತಿಯಾಗಿಲ್ಲ ಎನ್ನುತ್ತಾರೆ. ಆದರೆ ‘ಚೋಮನ ದುಡಿ’ ನಮ್ಮ ಸಮಾಜದ ಜ್ವಲಂತ ಸಮಸ್ಯೆಯೊಂದನ್ನು ಅನಾವರಣಗೊಳಿಸಿದೆ. ಕುರ್ತಕೋಟಿಯವರ ವಿಮಶರ್ೆಯು ಕೃತಿಯ ಸಾಹಿತ್ಯಿಕ ತಂತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅದರೊಳಗಿನ ಸಾಮಾಜಿಕ ಸಮಸ್ಯೆ ಕುರಿತು ಮೌನ ವಹಿಸಿದೆ. ಚೋಮನ ಸಮಸ್ಯೆಗಳಾದ ಜಾತಿ, ಅಸ್ಪೃಶ್ಯತೆ, ಜೀತಗಳಿಗೆ ಪ್ರತಿಕ್ರಿಯಿಸದೇ ಹೋದದ್ದು ಅವರ ವಿಮರ್ಶೆಯ ಮಿತಿಯಾಗಿದೆ.

ಆಧುನಿಕ ಸಾಹಿತ್ಯದ ಹೊಸ ರೂಪವಾದ ‘ಕಾದಂಬರಿ’ ಪ್ರಕಾರವನ್ನು ಆಳವಾಗಿ ಅಧ್ಯಯನ ಮಾಡಿದ ವಿಮರ್ಶಕರಲ್ಲಿ ಜಿ.ಎಸ್. ಆಮೂರರು ಪ್ರಮುಖರಾಗಿದ್ದಾರೆ. ಆಮೂರರು ‘ಚೋಮನ ದುಡಿ’ಯನ್ನು ಮುಲ್ಕರಾಜ ಆನಂದರ ‘ಅನಟಚಬಲ್’ ಕೃತಿಯೊಂದಿಗೆ ತೌಲನಿಕವಾಗಿ ವಿಶ್ಲೇಸಿದ್ದಾರೆ. ಈ ಎರಡು ಕೃತಿಗಳ ಸ್ವರೂಪದಲ್ಲಿರುವ ಹೋಲಿಕೆಗಳನ್ನು ತೆರೆದು ತೋರಿಸುವುದರಲ್ಲೇ ಅವರ ಪಾಂಡಿತ್ಯ ಪ್ರದರ್ಶನವಷ್ಟೇ ಹೆಚ್ಚು ಪ್ರಕಟವಾದಂತೆ ತೋರುತ್ತದೆ. ಕಾದಂಬರಿ ನಿರೂಪಿಸುವ ಕತೆಯನ್ನು ‘ಯಥಾಸ್ಥಿತಿ’ಯಲ್ಲಿ ಒಪ್ಪಿಕೊಂಡು ತಮಗೆ ಮುಖ್ಯ ಎನಿಸಿದ ಕತೆಯ ಭಾಗಗಳನ್ನು ಅವರು ಪ್ರಸ್ತಾಪಿಸುತ್ತಾ ಹೋಗುವುದು ಅವರ ವಿಮರ್ಶೆಯ ವಿಧಾನವಾಗಿದೆ.

ಆಮೂರರು ಕಾದಂಬರಿಯ ಪ್ರಸಂಗ ಒಂದನ್ನು ಕುರಿತು ಹೀಗೆ ಹೇಳುತ್ತಾರೆ: ಚೋಮನನ್ನು ರೈತನಾಗಲಿಕ್ಕೆ ಬಿಟ್ಟಲ್ಲದಿರುವ ಅಸ್ಪೃಶ್ಯತೆ ಅವನಿಗೆ ಶಾಪವಾಗಿ ಕಾಣಿಸುತ್ತದೆ. ಆದರೆ ಅವನಿಗೆ ಕೂಡ ತಪ್ಪಿಸಿಕೊಳ್ಳಲಾಗದ ತನ್ನ ಪ್ರತ್ಯೇಕತೆಯ ಅರಿವು ಆಗುವುದು ಒಂದು ಭಯಂಕರ ಸನ್ನಿವೇಶದಲ್ಲಿಯೇ. ಈ ಸನ್ನಿವೇಶದಲ್ಲಿ ಸ್ಪರ್ಶದ ಹೆದರಿಕೆ ತನ್ನ ರಾಕ್ಷಸೀಯ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅವನ ಕಿರಿಯ ಮಗ ನೀಲ ಹೊಳೆಯಲ್ಲಿ ಮುಳುಗುತ್ತಿರುವುದನ್ನು ಇಡೀ ಹಳ್ಳಿಯ ಜನರು ನೋಡುತ್ತಿದ್ದರೂ, ಒಬ್ಬರೂ ಅವನನ್ನು ಉಳಿಸುವುದಕ್ಕೆ ಪ್ರಯತ್ನಿಸುವುದಿಲ್ಲ. ಈ ಸಂದರ್ಭದ ನಿರೂಪಣೆಯಲ್ಲಿ ಈ ಮಾತುಗಳಿವೆ. ‘ಒಬ್ಬ ಬ್ರಾಹ್ಮಣ ತರುಣನು ದಾವಿಸಿ ನೀಲನನ್ನು ಎಳೆದು ತರಲು ಮುಂದುವರಿದನು. ಅವನ ಹಿರಿಯರು ಅವನನ್ನು ತಡೆದರು. ಅವನು ಹೊಲೆಯನಲ್ಲವೇ?’ ಎಂದರು [ಚೋಮನ ದುಡಿ]. ಕಡೆಯಲ್ಲೇನೋ ಬ್ರಾಹ್ಮಣರ ಹುಡುಗ ಹೊಳೆಗೆ ಧುಮುಕುತ್ತಾನೆ. ಆದರೆ ಪ್ರಯೋಜನ ವಾಗುವುದಿಲ್ಲ. ಅವನು ಹೆಣವನ್ನು ಮಾತ್ರ ಎಳೆದು ತರುತ್ತಾನೆ. ಅಸಹಾಯಕನಾಗಿ ಆ ದೃಶ್ಯವನ್ನು ನೋಡುವಾಗ, ಅವನಿಗೆ ಈ ಸಂದರ್ಭದಲ್ಲಿ ತನ್ನ ಪರಿಸ್ಥಿತಿಯ ಅರ್ಥ ಹೊಳೆಯುತ್ತದೆ.

ಆಮೂರರು ಕಾದಂಬರಿಯ ಕಥನವನ್ನು ಅಪಾರವಾಗಿ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಈ ಮಾತುಗಳೇ ಸಾಕ್ಷಿಯಾಗಿವೆ. ಚೋಮನ ಮಗನೊಬ್ಬ (ನೀಲ) ಮೇಲ್ವರ್ಗದ ಜನರ ಸಮ್ಮುಖದಲ್ಲಿ ನೀರು ಪಾಲಾಗುವುದನ್ನು ಆಮೂರರ ವಿಮರ್ಶೆ ಪ್ರಸ್ತಾಪಿಸಿ, ಅಸ್ಪೃಶ್ಯತೆ ಒಂದು ‘ಶಾಪ’ ‘ರಾಕ್ಷಸ ರೂಪ’ ಎಂದು ವಿಷಾದಿಸುತ್ತದೆ. ಅವರು ಅಸ್ಪೃಶ್ಯತೆಯ ಸಮಸ್ಯ ಚೋಮನಿಗೆ ಮಾತ್ರವೇ ಸಂಬಂಧಿಸಿದ್ದೆಂದು ತಿಳಿಯುತ್ತಾರೆ.  ಆದರೆ ಹಿಂದೂ ಸಮಾಜದ ಜ್ವಲಂತ ಸಮಸ್ಯೆಯಾದ ಅಸ್ಪೃಶ್ಯತೆ ಅಮಾಯಕ ಜೀವವೊಂದನ್ನು ಬಲಿತೆಗೆದುಕೊಳ್ಳುವುದು ಕ್ರೌರ್ಯದ ಪರಮಾವಧಿಯಾಗಿದೆ. ಪ್ರಾಣಾಪಾಯದ ಸನ್ನಿವೇಶದಲ್ಲಿ ಜೀವವನ್ನು ರಕ್ಷಿಸುವುದು ಮಾನವೀಯತೆಯ ಕುರುಹು.

ಆದರೆ ಹಿಂದೂ ಸಮಾಜ ಮಾನವೀಯತೆ ಮತ್ತು ಸಮಾನತೆಯ ಅಡಿಗಲ್ಲಿನ ಮೇಲೆ ನಿರ್ಮಾಣವಾದದ್ದಲ್ಲ. ಅದು ನಿಂತಿರುವುದೇ ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯ ತತ್ತ್ವಗಳನ್ನು ಆಧರಿಸಿದ ಭದ್ರ ಬುನಾದಿಯ ಮೇಲೆ. ಮೇಲ್ವರ್ಗದ ಬ್ರಾಹ್ಮಣ ಕೆಳ ಜಾತಿಯವನ ನೆರಳು ಕಂಡರೂ ಮೈಲಿ ದೂರ ಹಾರುವಾಗ ನೀರಲ್ಲಿ ಮುಳುಗುತ್ತಿದ್ದ ಚೋಮನ ಮಗನನ್ನು ಮುಟ್ಟಿ ಮೇಲೆತ್ತಿ ರಕ್ಷಿಸುತ್ತಾನೆಂದು ಅಪೇಕ್ಷಿಸುವುದು ಮೂರ್ಖತನವಾಗುತ್ತದೆ. ಅದು ತನ್ನ ಜಾತಿಯ ಗೌರವಕ್ಕೆ ಚ್ಯುತಿಯಾಗುವುದೆಂದೇ ಭಾವಿಸುತ್ತಾನೆ. ಮೇಲ್ವರ್ಗದ ಬ್ರಾಹ್ಮಣನೊಬ್ಬ ಕೆಳ ಜಾತಿಯವನನ್ನು ಸ್ಪರ್ಶಿಸಿದರೆ ಅವನು ತನ್ನ ಸಮಾನನಾಗುವುದನ್ನು ಯಾವತ್ತೂ ಸಹಿಸುವುದಿಲ್ಲ. ಇದು ತನ್ನ ಸಾಮಾಜಿಕ ಪ್ರತಿಷ್ಠೆಗೆ ಕುಂದು ತರುವುದೆಂದೇ ಅವನು ತಿಳಿಯುತ್ತಾನೆ. ಮೇಲ್ವರ್ಗದವನಲ್ಲಿ ಕನಿಷ್ಠ ಸಾಮಾಜಿಕ ಪ್ರಜ್ಞೆಯೂ ಇಲ್ಲ. ಇನ್ನು ನಾಗರೀಕ ಪ್ರಜ್ಞೆ ಎಂಬುದು ದೂರದ ಮಾತು. ಏಕೆಂದರೆ ತನ್ನ ಜಾತಿಯ ಸ್ಥಾನಮಾನಗಳನ್ನು ಉಳಿಸಿಕೊಳ್ಳುವುದರಲ್ಲಿಯೇ ಅವನು ಆಸಕ್ತನಾಗಿರುತ್ತಾನೆ.

ಚೋಮನ ಮಗನ ಸಾವಿಗೆ ಸಾಕ್ಷಿಯಾಗುವ ಮೇಲ್ವರ್ಗದ ಅಮಾನವೀಯತೆ ಹಾಗೂ ಅಮಾನುಷತೆಯನ್ನು ಗುರುತಿಸುವಲ್ಲಿ ಆಮೂರರ ವಿಮರ್ಶೆ ವಿಫಲವಾಗಿದೆ ಅನ್ನಿಸುತ್ತದೆ. ಅಸ್ಪೃಶ್ಯತೆಯ ಸಮಸ್ಯೆಯನ್ನು ಉದಾರ ಮಾನವತಾವಾದದ ಸಹಾನುಭೂತಿಯಲ್ಲಿ ಅವರು ತೇಲಿಸಿಬಿಡುತ್ತಾರೆ. ಅಸ್ಪೃಶ್ಯತೆಯ ಸಂಕೀರ್ಣತೆ ಮತ್ತು ಅದರ ಬೇರೆ ಬೇರೆ ಆಯಾಮಗಳನ್ನು ಶೋಧಿಸಲು ಅವರಿಗೆ ಸಾಧ್ಯವಾಗಿಲ್ಲ. ಅಸ್ಪೃಶ್ಯತೆಯ ಬೇರುಗಳ ಆಳವನ್ನು ಗ್ರಹಿಸಲಾಗದ ಅವರ ವಿಮರ್ಶೆ ಬರಿ ಹಳಹಳಿಕೆಯಾಗಿ ವ್ಯಕ್ತವಾಗಿದೆ. ಪಾಶ್ಯಾತ್ಯ ವಿಮರ್ಶೆಯ ವಿಧಾನಗಳನ್ನು ಅಪಾರವಾಗಿ ಮತ್ತು ವ್ಯಾಪಕವಾಗಿ ಅಧ್ಯಯನ ಮಾಡಿದ ಆಮೂರರಂತಹ ನಿಶಿತಮತಿಗೆ ಸಾಮಾಜಿಕ ಸಮಸ್ಯೆಯೊಂದರ ವೈರುಧ್ಯಗಳನ್ನು ಶೋಧಿಸಲು ಸಾಧ್ಯವಾಗಿಲ್ಲದಿರುವುದು ಸೋಜಿಗದ ಸಂಗತಿಯಾಗಿದೆ. ಆಧುನಿಕ ವಿಮರ್ಶೆಯ ಹೊಸ ಪಂಥಗಳಿಗೆ ತಮ್ಮನ್ನು ತೆರೆದುಕೊಂಡಿದ್ದರೂ ಸಾಮಾಜಿಕ ವಾಸ್ತವವಾಗಿರುವ ಜಾತಿ ವ್ಯವಸ್ಥೆ ಮತ್ತು ಅದರ ಅವಿಭಾಜ್ಯ ಕೊಂಡಿಯಾಗಿರುವ ಅಸ್ಪೃಶ್ಯತೆಯ ಭೀಕರ ಪರಿಣಾಮಗಳನ್ನು ಕುರಿತು ತಮ್ಮ ಖಚಿತವಾದ ನಿಲುವುಗಳನ್ನು ವ್ಯಕ್ತಪಡಿಸಲು ಅವರಿಗೆ ಸಾಧ್ಯವಾಗಿಲ್ಲ.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರಲ್ಲಿ ಯು.ಆರ್.ಅನಂತಮೂರ್ತಿ ಪ್ರಮುಖರು. ಆಳವಾದ ಅಧ್ಯಯನವಿಲ್ಲದಿದ್ದರೂ, ತಮ್ಮ ಹೊಚ್ಚ ಹೊಸ ಒಳನೋಟಗಳಿಂದ ಅವರ ವಿಮರ್ಶೆ ತಕ್ಷಣಕ್ಕೆ ಗಮನ ಸೆಳೆಯುತ್ತದೆ. ಅನಂತಮೂರ್ತಿಯವರು ‘ಕಾರಂತರ ಅಥೆಂಟಿಕ್ ಪ್ರಪಂಚ’ ಎಂಬ ಲೇಖನದಲ್ಲಿ- ಚೋಮನ ದುಡಿ ಅಸ್ಪೃಶ್ಯತೆಯ ಬಗ್ಗೆ ಮಡಿವಂತ ಪರಿಸರದಲ್ಲಿ ಬೆಳೆದ ನನ್ನ ದೃಷ್ಟಿಯನ್ನೇ ಬದಲು ಮಾಡಿ ಬಿಟ್ಟಿತು. ಪ್ರ್ರಾಯಶಃ ಈ ದಿಸೆಯಲ್ಲಿ ಕನ್ನಡ ಕಾದಂಬರಿ ಲೋಕದಲ್ಲಿ ಇದೊಂದು ಅಪೂರ್ವ ಕೃತಿ. ಕಾರಂತರ ಬ್ರಾಹ್ಮಣರ ಪಾತ್ರಗಳು ಆ ವರ್ಗದ ಎಲ್ಲರಿಗೂ ಸಾಮಾನ್ಯವಾದ ಲಕ್ಷಣಗಳನ್ನು ಪಡೆದವಾಗಿ ಪ್ರಾತಿನಿಧಿಕನಾದರೆ, ಚೋಮ ಮಾತ್ರ ಅಸಾಧಾರಣ ಭಾವ ತುಮುಲಗಳನ್ನು ಪಡೆದ, ನಾನು ಆಗ ಕಂಡ ಯಾವ ಅಸ್ಪೃಶ್ಯನಂತೆಯೂ ಇಲ್ಲದ ಅಸಾಮಾನ್ಯನಾದ್ದರಿಂದಲೇ ಪಂಚಮರೆಲ್ಲರಲ್ಲಿ ಸುಪ್ತವಾದದ್ದನ್ನು ಪ್ರತಿನಿಧಿಸಬಲ್ಲ ಪಾತ್ರವಾಗುತ್ತಾನೆ. ಕಾರಂತರು ಈ ಪಾತ್ರ ರಚನೆಯಲ್ಲಿ ಬಳಸುವ ಕೃತಿ ನಿರ್ಮಾಣದ ಬಗೆ -ಅಂದರೆ ಪ್ರಕಟವಾಗಬೇಕಾದ ಸತ್ಯಕ್ಕಾಗಿ ವಾಸ್ತವದ ಮೂಲಾಂಶಗಳನ್ನು ಮಾತ್ರ ಹಿಡಿದು ಉತ್ಕಟಗೊಳಿಸುವ ಬಗೆ- ನನ್ನ ಬರವಣಿಗೆಗೆ ಮುಖ್ಯ ಪ್ರೇರಣೆಕೊಟ್ಟ ಕೃತಿಯಾಗಿರಬಹುದು. ಜೀವನವನ್ನು ದಟ್ಟ ವಿವರಗಳಲ್ಲಿ ಹಿಡಿಯುವುದೊಂದು ಬಗೆಯಾದರೆ ‘ಚೋಮನ ದುಡಿ’ಯದು ರೂಪಕ ಪ್ರತಿಭೆೆಯ ದಿಟ್ಟ ನೆಗೆತದ ಇನ್ನೊಂದು ಕ್ರಮ. ವಿಶೇಷವಾದ್ದರ ಮುಖಾಂತರ ಪ್ರಕಟವಾದ್ದನ್ನು ಸುಪ್ತವಾದ್ದನ್ನು ಒಟ್ಟಿಗೇ ಧ್ವನಿಸಬಹುದೆಂದೂ ಒಂದರ ಮುಖಾಂತರ ಹಲವನ್ನು ಒಳಗೊಳ್ಳಲು ಇಂತಹ ವಿಶೇಷ ಪಾತ್ರ ರಚನೆ ಅಗತ್ಯವೆಂಬುದನ್ನು ‘ಚೋಮನ ದುಡಿ’ಯಲ್ಲಿ ನಾನು ಕಂಡುಕೊಂಡೆ. ಚೋಮ ನಾವು ಕಂಡಿರಬಹುದಾದ ಯಾವೊಬ್ಬ ಅಸ್ಪೃಶ್ಯನಲ್ಲದಿದ್ದರೂ ಎಲ್ಲ ಕಾಲದ ಎಲ್ಲ ದೇಶದ ದಲಿತನ ನೋವನ್ನು ಪ್ರಕಟಿಸಬಲ್ಲವನಾಗುತ್ತಾನೆ- ಯಾಕೆಂದರೆ ಅವನು ವಿಶೇಷ ವ್ಯಕ್ತ್ತಿಯಾದ್ದರಿಂದ5 ಎಂದು ಬರೆಯುತ್ತಾರೆ.

ಅನಂತಮೂರ್ತಿಯವರು ತಮ್ಮ ಸೃಜನಶೀಲ ಬರವಣಿಗೆಯನ್ನು ‘ಚೋಮನ ದುಡಿ’ ಪ್ರಭಾವಿಸಿದ್ದನ್ನು ಹೇಳುತ್ತಾರೆ. ‘ಚೋಮನ ದುಡಿ’ಯನ್ನು ಕಲಾಕೃತಿಯನ್ನಾಗಿಸಿದ ತಂತ್ರಗಳನ್ನು ಕುರಿತು ಅವರು ಚಿಂತಿಸಿದ್ದಾರೆ. ಅವರ ದೃಷ್ಟಿಯಲ್ಲಿ ಚೋಮ ದಲಿತರ ನೋವನ್ನು ಪ್ರಕಟಿಸುವ ಒಂದು ಅಸಾಧರಣ ಪಾತ್ರವಾಗಿದ್ದಾನೆ. ಕಾರಂತರು ಚಿತ್ರಿಸಿದ ಬ್ರಾಹ್ಮಣರ ಪಾತ್ರಗಳು ಪ್ರಾತಿನಿಧಿಕವೆಂದು ಹೇಳಿ ಚೋಮನದು ಮಾತ್ರ ವಿಶೇಷ ಪಾತ್ರವೆಂಬ ಲೇಬಲ್‌ಅನ್ನು ಅವರು ಅನಾಯಾಸವಾಗಿ ಅಂಟಿಸಿಬಿಡುತ್ತಾರೆ. ಚೋಮ ಎಲ್ಲ ಕಾಲ ದೇಶಗಳ ನೋವನ್ನು ವ್ಯಕ್ತಪಡಿಸುವ ದಲಿತನೆಂಬ ಹಣೆಪಟ್ಟಿ ಬೇರೆ. ಆದರೆ ಆ ದಲಿತನ ನೋವಿಗೆ ಕಾರಣವಾದ ಸಾಮಾಜಿಕ ವ್ಯವಸ್ಥೆಯ ಕ್ರೌರ್ಯ ಕುರಿತು ಅವರ ಚಕಾರವಿಲ್ಲ.  ಆದ್ದರಿಂದ ಚೋಮ ‘ಅಸಾಧಾರಣ ಭಾವ ತುಮುಲಗಳನ್ನು ಪಡೆದ’ ವಿಶೇಷ ವ್ಯಕ್ತಿಯಾಗಿ ಕಂಡು ಚೋಮನ ಮೂಲಭೂತ ಸಮಸ್ಯೆಯನ್ನು ಅವರು ಗೌಣವಾಗಿಸುತ್ತಾರೆ. ಚೋಮನ ಪಾತ್ರವನ್ನು ಹೊಗಳಿ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಚ್ಚಿಡುವ ಉಪಾಯವೂ ಆಗಿರುತ್ತದೆ. ಕಾದಂಬರಿಯ ಕಲಾತ್ಮಕ ಗುಣಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅದರ ಸಾಮಾಜಿಕ ಪ್ರಸ್ತುತತೆಯನ್ನೆ ಬದಿಗೆ ಸರಿಸುವ ಕ್ರಮವಾಗಿದೆ.

ಅನಂತಮೂರ್ತಿಯವರು ಚೋಮನ ಪಾತ್ರ ರಚನೆಯ ತಂತ್ರಗಳನ್ನು ವಿಶ್ಲೇಷಿಸುತ್ತಾ ಅದನ್ನು ಉತ್ಕಟಗೊಳಿಸಿದ ಬಗೆಯನ್ನು ಮಾತ್ರ ಮೆಚ್ಚುವುದರಿಂದ ‘ಚೋಮನ ದುಡಿ’ ಅವರಿಗೆ ಕೇವಲ  ‘ರೂಪಕ ಪ್ರತಿಭೆಯ ದಿಟ್ಟ ನೆಗೆತ’ವಾಗಿ ಗೋಚರಿಸುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅನಂತಮೂರ್ತಿಯವರು ಚೋಮ ದಲಿತನೊಬ್ಬನ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ ಒಬ್ಬ  ಸಿನಿಮಾ ಅಥವಾ ರಂಗಭೂಮಿ ನಟನಂತೆ ಕಂಡಿದ್ದಾರೆ ಹೊರತು, ಚೋಮ  ಪ್ರತಿನಿಧಿಸುವ ವರ್ಗದ ಧಾರುಣತೆ ಕುರಿತು ಮೌನವಾಗಿದ್ದಾರೆ. ಚೋಮನ ಪಾತ್ರವನ್ನು ಸೃಷ್ಟಿಸಿದ ಕಲಾಲೋಕ ಮತ್ತು ಸೃಜನಶೀಲತೆಯ ಬಗ್ಗೆಯೇ ಅವರ ಆಲೋಚನೆಯಿದೆ.

ಸಾಮಾಜಿಕ ನ್ಯಾಯದ ವಿಮರ್ಶೆ:

ಕೆಲವು ವಿಮರ್ಶಕರು ಕಾದಂಬರಿಯ ಕಲಾತ್ಮಕ ಸಂಗತಿಗಳಿಗಿಂತ ಅದರೊಳಗಿನ ಸಾಮಾಜಿಕ ಅಂಶಗಳನ್ನು ಪ್ರಧಾನವಾಗಿವಾಗಿ ಚರ್ಚಿಸಿದ್ದಾರೆ. ‘ಚೋಮನ ದುಡಿ’ ಕಾದಂಬರಿಯ ಸಾಮಾಜಿಕ ಸಮಸ್ಯೆಯನ್ನು ಚರ್ಚಿಸಿರುವ ವಿಮರ್ಶಾ ಲೇಖನಗಳನ್ನು ಈ ಭಾಗದಲ್ಲಿ ಗಮನಿಸಲಾಗುವುದು.

ಆರ್.ವಿ.ಭಂಡಾರಿಯವರು ಕನ್ನಡದ ಮಾರ್ಕ್ಸ್‌ವಾದಿ ವಿಮರ್ಶಕರಲ್ಲಿ ಮುಖ್ಯರಾಗಿದ್ದಾರೆ. ಅವರು ಮಾರ್ಕ್ಸ್‌ನ ಸಿದ್ಧಾಂತದಿಂದ ಸಾಕಷ್ಟು ಪ್ರಭಾವಿತರಾದವರು. ಅವರು ‘ಚೋಮನ ದುಡಿ’ಯಲ್ಲಿನ ಜಾತಿ ಪ್ರಶ್ನೆಯನ್ನು ಪ್ರಧಾನವಾಗಿ ಮಾರ್ಕ್ಸ್‌ವಾದಿ ನೆಲೆಯಲ್ಲೆ ವಿಶ್ಲೇಷಿಸುತ್ತಾರೆ. ಚೋಮನಿಗೆ ತಾನು ಬೇಸಾಯಗಾರನಾಗಬೇಕೆಂಬ ಆಸೆ ಕುತ್ತಿಗೆ ತುಂಬ ಇದೆ. ಹಾಗೆ ಆ ಒತ್ತಡದಲ್ಲಿ ಧಣಿಯನ್ನು ಮೂರು ಸಂದರ್ಭದಲ್ಲಿ ಕೇಳುತ್ತಾನೆ. ಆದರೆ ಮೂರೂ ಸಂದರ್ಭದಲ್ಲಿ ಆತನಿಗೆ ನಿರಾಸೆಯೇ ಸಿಕ್ಕುತ್ತದೆ. ‘ಅಬ್ಬ ಹೊಲೆಯರ ಸೊಕ್ಕೇ?’ ಎಂದು ಸಂಕಪ್ಪಯ್ಯನವರ ಅಮ್ಮ ಕೇಳಿಕೊಳ್ಳುತ್ತಾಳೆ. ಹೊಲೆಯರು ಜೀತದವರು ಸ್ವತಃ ಉಳಲು ಶುರುಮಾಡಿದರೆ ತಮಗೆ ಬಿಟ್ಟಿ ಕೆಲಸಮಾಡುವವರಾರು? ಎಂಬಂತಹ ಸಮಾಜ ಇದು. ಸಂಕಪ್ಪಯ್ಯನ ಮನಸ್ಸಿನಲ್ಲಿ ತಮಗೆ ಇಷ್ಟೊಂದು ಬಂಜರು ಬಿದ್ದ ಭೂಮಿ ಇದೆ. ಒಂದು ತುಂಡು ಯಾಕೆ ಕೊಡಬಾರದು ಎನ್ನಿಸುತ್ತದೆ. ಆದರೆ ಇದು ಅವರ ಮಾನವೀಯ ಕಳಕಳಿ ಅಲ್ಲ. ಬದಲಾಗಿ ಬಂಜರು ಭೂಮಿ ಬೆಳೆಯಾದರೆ ಲಾಭವಲ್ಲವೇ ಎನ್ನುವ ಬುದ್ಧಿವಂತಿಕೆಯದು. ಅಂದರೆ ಉಳಬಾರದ ಜಾತಿಯೊಂದು ಉಳಲು ಸಾಧ್ಯವಾಗುವುದಾದರೆ ಅದರ ಅಂತಶ್ಯಕ್ತಿ ಸಂಪತ್ತಿನ ಒತ್ತಡವೇ ಆಗಿದೆ. ಅಂದರೆ ಚರಿತ್ರೆಯ ಗತಿಶೀಲತೆಗೆ ಆರ್ಥಿಕ ಒತ್ತಡವೇ ಕಾರಣವಾಗುತ್ತದೆ. ಬಹುಶಃ ಈ ಆರ್ಥಿಕ ಶಕ್ತಿಯ ಒತ್ತಡ ತೀವ್ರವಾದಾಗ ಜಾತಿ ನಿಷ್ಠೆಯನ್ನು ತೊಡೆದುಹಾಕೀತು. ಅಂದರೆ ಚರಿತ್ರೆ ಒಂದು ಹೆಜ್ಜೆ ಮುನ್ನೆಡೆದೀತು ಎಂದು ಆರ್.ವಿ.ಭಂಡಾರಿ ಹೇಳುತ್ತಾರೆ. ಅವರು ಜಾತಿ ಪ್ರಶ್ನೆಯನ್ನು ಮಾರ್ಕ್ಸ್‌ನಿಂದ ಪ್ರೇರಿತವಾದ ವರ್ಗ ತಾರತಮ್ಯತೆಯ ನೆಲೆಯಲ್ಲಿ  ಚರ್ಚಿಸುತ್ತಾರೆ. ಚೋಮ ಆರ್ಥಿಕವಾಗಿ ಸ್ವತಂತ್ರನಾದರೆ ಜಾತಿ ವ್ಯವಸ್ಥೆ ಶಿಥಿಲವಾಗಬಹುದೆಂದು ಅವರು ಭಾವಿಸುತ್ತಾರೆ. ಇದರಿಂದ ಚರಿತ್ರೆಯ ಮುನ್ನೆಡೆಯಾಗುತ್ತದೆ ಎಂದೂ ತಿಳಿಯುತ್ತಾರೆ.

ತಾನು ಜಮೀನು ಕೊಡಬೇಕಾದರೆ ತನ್ನ ಅಮ್ಮ ಸಾಯಬೇಕು ಎಂದು ಸಂಕಪ್ಪಯ್ಯ ಹೇಳಿರುವುದು ಕೂಡಾ ಸಂಪ್ರದಾಯ ಸಾಯಬೇಕು ಎಂಬ ಒತ್ತಡ ಆಳುವವರಲ್ಲೂ ಬಂದದ್ದು ಕಾಣುತ್ತದೆ ಎಂಬ ಆರ್.ವಿ.ಭಂಡಾರಿಯವರ ಈ ಅಭಿಪ್ರಾಯವನ್ನು ಒಪ್ಪುವುದು ಕಷ್ಟ. ಯಾಕೆಂದರೆ ಜಮೀನ್ದಾರಿ ವ್ಯವಸ್ಥೆಯ ಪ್ರತಿನಿಧಿಯಾದ ಸಂಕಪ್ಪಯ್ಯ ತಮ್ಮ ಊಳಿಗಮಾನ್ಯ ವ್ಯವಸ್ಥೆ ಸಾಯಬೇಕೆಂದು ಭಾವಿಸಲು ಸಾಧ್ಯವಿಲ್ಲ. ಈ ವ್ಯವಸ್ಥೆಯನ್ನು ಸಡಿಲಗೊಳಿಸುವ ಸಂಪ್ರದಾಯಗಳು ನಾಶವಾಗಬೇಕೆಂದು ಸಂಕಪ್ಪಯ್ಯ ಬಯಸಲಾರ. ಚೋಮನಿಗೆ ಭೂಮಿ ಕೊಡುವುದನ್ನು ಮುಂದೂಡಲು ಸಂಕಪ್ಪಯ್ಯನಿಗೆ ತನ್ನ ತಾಯಿ ಒಂದು ನೆಪವಷ್ಟೇ ಆಗಿದ್ದಾಳೆ. ಭಂಡಾರಿಯವರ ಹೇಳಿಕೆಯಲ್ಲಿ ಮಾರ್ಕ್ಸ್‌ವಾದದ ಸೈದ್ಧಾಂತಿಕ ನಿಲುವಿದೆ. ಅವರ ಅಭಿಪ್ರಾಯದಂತೆ ಚೋಮನ ಸಾಮಾಜಿಕ ಚಲನಶೀಲತೆಗೆ ರೂಢಿಗತ ಸಂಪ್ರದಾಯ ಸಾಯಬೇಕು. ಆದರೆ ಗತಕಾಲದ ಸಂಪ್ರದಾಯಗಳು ಯಾವ ಪ್ರಯತ್ನವಿಲ್ಲದೆ ಅವು ಸಹಜವಾಗಿ ನಿರ್ನಾಮವಾಗುತ್ತವೆ ಎಂದು ಭಂಡಾರಿಯವರು ನಂಬಿದಂತೆ ತೋರುತ್ತದೆ. ಆದರೆ ಕಾದಂಬರಿಯಲ್ಲಿ ಸಂಕಪ್ಪಯ್ಯನ ತಾಯಿ ಚೋಮನೊಂದಿಗೆ ನೇರವಾಗಿ ಮುಖಾಮುಖಿಯಾಗಿ ಮಾತಾಡುವುದೇ ಇಲ್ಲ. ಅವಳ ‘ಅಗೋಚರ ಧ್ವನಿ’ ಮಾತ್ರ ಕೇಳಿಸುತ್ತದೆ. ಗತಕಾಲದ ಸಂಪ್ರದಾಯಗಳು ಹೀಗೆ ಅಗೋಚರವಾಗಿ ‘ಜಮೀನ್ದಾರಿ ವ್ಯವಸ್ಥೆ’ಯನ್ನು ಜೀವಂತವಾಗಿಟ್ಟಿರುತ್ತವೆ ಎಂಬುದನ್ನು ಸೂಚಿಸಲು  ಕಾರಂತರು ಈ ತಂತ್ರವನ್ನು ಬಳಸಿರಬಹುದೇ? ಆರ್.ವಿ.ಭಂಡಾರಿಯವರ ಮಾರ್ಕ್ಸ್‌ವಾದಿ ವಿಮರ್ಶೆಗೆ ಸಾಮಾಜಿಕ ಬದಲಾವಣೆಯ ಸಂಕೀರ್ಣ ಸ್ವರೂಪಗಳನ್ನು ಶೋಧಿಸಲು ಸಾಧ್ಯವಾಗಿಲ್ಲ. ಜಮೀನ್ದಾರಿ ವ್ಯವಸ್ಥೆ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರೂಢಿಗತ ಸಂಪ್ರದಾಯವನ್ನು ಈ ರೀತಿ ಮುನ್ನೆಲೆಗೆ ತರುತ್ತದೆ. ಗತಕಾಲದ ಸಂಪ್ರದಾಯಗಳ ಇಂತಹ ‘ರೂಪಾಂತರ ಪ್ರಕ್ರಿಯೆ’ಯ ಸೂಕ್ಷ್ಮತೆಯನ್ನು ಭಂಡಾರಿಯವರ ವಿಮರ್ಶೆಗೆ ಗ್ರಹಿಸಲು ಸಾಧ್ಯವಾಗಿಲ್ಲ.

ಆರ್.ವಿ.ಭಂಡಾರಿಯವರು ಚೋಮನ ಪ್ರತಿಭಟನೆಯ ಸ್ವರೂಪ ಕುರಿತು ಹೀಗೆ ಹೇಳುತ್ತಾರೆ: ಚೋಮನ ಪ್ರತಿಭಟನೆ ಏನಿದ್ದರೂ ಅವನ ವೈಯಕ್ತಿಕ ಮಟ್ಟದಲ್ಲೇ ನಡೆಯುತ್ತದೆ. ಧಣಿಗಳ ಮೇಲಿನ ಸಿಟ್ಟನ್ನು ತನ್ನ ಎತ್ತಿನ ಕಾಲು ಕುಂಟು ಮಾಡುವುದರಲ್ಲಿ ತೀರಿಸುತ್ತಾನೆ. ಪ್ರತಿಭಟನೆಯ ಒಂದು ಸಾಮೂಹಿಕ ಪ್ರಜ್ಞೆಯಾಗಿ ಬೆಳೆಯುವ ಹಂತ ಸಮಾಜದ್ದಾಗಿರುವುದಿಲ್ಲ. ಚೋಮನ ಮನೆಗೆ ಬಂದ ನೆಂಟರು ನಾಲ್ಕೈದು ದಿನ ಇದ್ದು ತಿಂದು ಕುಡಿದು ಕುಣಿದು ಹೋಗುತ್ತಾರೆಯೇ ಹೊರತು ತಮ್ಮ ಮೇಲೆ ಮೇಲ್ವರ್ಗದಿಂದಾಗುವ ಶೋಷಣೆಯ ಕುರಿತು ಒಂದು ಸೊಲ್ಲನ್ನೂ ಎತ್ತದಿರುವುದು ಆ ಸಾಮಾಜಿಕ ಸ್ತಬ್ಧತೆಯನ್ನೇ ತೋರುತ್ತದೆ. ಭಂಡಾರಿಯವರು ‘ಚೋಮನ ದುಡಿ’ಯಲ್ಲಿ ಸಾಮೂಹಿಕ ಪ್ರತಿಭಟನೆಯ ಗೈರು ಹಾಜರಿಯನ್ನು ಪ್ರಶ್ನಿಸಿದ್ದಾರೆ. ಇದು ಎರವಲು ಪಡೆದ ಮಾರ್ಕ್ಸ್‌ವಾದಿ ಚಿಂತನೆಯನ್ನು ನೇರವಾಗಿ ಸಾಹಿತ್ಯ ಕೃತಿಯೊಂದಕ್ಕೆ ಆಪಾದಿಸಿ ವಿಶ್ಲೇಷಣೆ ಮಾಡುವ ಕ್ರಮವಾಗಿದೆ. ಅಂದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾಗುವ ಕಾರ್ಮಿಕರೆಲ್ಲಾ ಒಗ್ಗಟ್ಟಾಗಿ ಮಾಲೀಕರ ವಿರುದ್ಧ ಸಾಮೂಹಿಕ ದಂಗೆ ಏಳುವಂತೆ ಚೋಮನ ಜಾತಿಯವರೆಲ್ಲ ಸೇರಿ ಭೂ ಮಾಲೀಕರ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿಲ್ಲವೇಕೆ? ಎಂದು ಭಂಡಾರಿಯವರು ಕೇಳಿದಂತಿದೆ. ಚೋಮನ ಜಾತಿಯವರು ಆರ್ಥಿಕವಾಗಿ ಮೇಲ್ವರ್ಗದವರ ಮೇಲೆ ಅವಲಂಬನೆಯಾಗಿರುವುದರಿಂದ ಸಾಮೂಹಿಕ ಪ್ರತಿಭಟನೆ ಹೇಗೆ ಸಾಧ್ಯವಾಗುತ್ತದೆ? ಆದ್ದರಿಂದ ಚೋಮನ ಪ್ರತಿಭಟನೆ ಅದೊಂದು ಸಾಮೂಹಿಕ ಪ್ರಜ್ಞೆಯಾಗಿ ಬೆಳೆಯಲು ತೊಡಕಾಗಿದೆ.

ನಮ್ಮ ನಡುವಿನ ಚಿಂತನಶೀಲ ವಿಮರ್ಶಕರಲ್ಲಿ ಜಿ.ರಾಜಶೇಖರ ಒಬ್ಬರಾಗಿದ್ದಾರೆ. ಅವರು ಒಂದು ಕೃತಿಯ ಎಲ್ಲ ಬಗೆಯ ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನು ದ್ವಂದ್ವಾತ್ಮಕವಾಗಿ ಮಂಡಿಸಬಲ್ಲರು. ಅವರು ‘ಚೋಮನ ದುಡಿ’ ಕುರಿತು ಹೀಗೆ ಹೇಳುತ್ತಾರೆ: ಚೋಮನ ಕುಟುಂಬದ ಒಟ್ಟಂದದ ವಿನಾಶ – ಚೋಮ ಮಾಡಿದ ಸಾಲವನ್ನು ತೀರಿಸಲೆಂದು ಅವನ ಹಿರಿಯ ಗಂಡುಮಕ್ಕಳಿಬ್ಬರು, ಮತ್ತು ಮಗಳು ಬೆಳ್ಳಿ, ಇನ್ನೊಬ್ಬ ಮಗ ತಮ್ಮ ಊರು ಬಿಟ್ಟು ಘಟ್ಟದಾಚೆಯ ಕಾಫಿ ತೋಟಕ್ಕೆ ತೆರಳುವುದು, ಒಬ್ಬ ಮಗ ಜಾತಿ ಬಿಟ್ಟು ಕ್ರಿಶ್ಚಿಯನ್ನರ ಹುಡುಗಿಯನ್ನು ಮದುವೆಯಾಗಿ ಕುಟುಂಬಕ್ಕೆ ಹೊರತಾಗುವುದು, ಇನ್ನೊಬ್ಬ ಮಗ ಯಾರೂ ರಕ್ಷಿಸುವವರಿಲ್ಲದೆ ನೀರಿನಲ್ಲಿ ಮುಳುಗಿ ಸಾಯುವುದು, ಮಗಳು ಶೀಲ ಮಾರಿಕೊಳ್ಳುವುದು, ಸ್ವತಃ ಚೋಮನೇ ಬೇಸಾಯಗಾರನಾಗುವ ಆಸೆಗೆ ಮತಾಂತರವಾಗಿ ಊರು ಬಿಡುವ ಯೋಚನೆ ಮಾಡುವುದು- ಈ ದುರಂತಕ್ಕೆ ಆರ್ಥಿಕ ಶಕ್ತಿಗಳ ಸೆಳೆತಗಳೇ ಕಾರ್ಯಕಾರಣ ಹಿನ್ನೆಲೆಯಾಗಿರುವುದನ್ನು ಕಾದಂಬರಿ ಯಥಾವತ್ತಾಗಿ ಚಿತ್ರಿಸುತ್ತದೆ. ಆದರೆ ಕಾದಂಬರಿಯ ಹೆಚ್ಚುಗಾರಿಕೆ ಎಂದರೆ ಈ ಸೆಳೆತ ಚೋಮನಂತಹವರ ಬದುಕನ್ನು ಕೊಚ್ಚಿಕೊಂಡು ಹೋಗುವುದನ್ನು ಮಾತ್ರ ಚಿತ್ರಿಸುವುದಿಲ್ಲ. ಚೋಮನಂತಹವರ ಬದುಕಿಗೆ ಅನ್ಯವಾದ ಆರ್ಥಿಕ ವ್ಯವಸ್ಥೆಯ ಹೊಸ ಬೆಳವಣಿಗೆಗಳು ಅನೈತಿಕ ಎಂಬ ಧ್ವನಿ ಕಾದಂಬರಿಯ ಉದ್ದಕ್ಕೂ ಮಿಡಿಯುತ್ತದೆ.

ಜಿ.ರಾಜಶೇಖರ ಅವರು ಸಾಮಾಜಿಕ ಅನ್ಯಾಯವನ್ನು ನಿರ್ಭಯವಾಗಿ ಖಂಡಿಸುವ ಛಾತಿಯುಳ್ಳವರಾಗಿದ್ದಾರೆ. ಚೋಮನ ಕುಟುಂಬದ ಛಿದ್ರತೆಗೆ ಹೊಸ ಆರ್ಥಿಕ ಶಕ್ತಿಗಳ ಸೆಳೆತವೇ ಕಾರಣ ಎನ್ನುವ ರಾಜಶೇಖರ ಅವರ ಅಭಿಪ್ರಾಯ ಒಂದು ಅರ್ಥದಲ್ಲಿ ನಿಜ ಇದ್ದಿರಬಹುದು. ಕೇವಲ ಚೋಮನ ಸಾಮಾಜಿಕ ಆಧಾರದ ನೆಲೆಯಿಂದ ಆಲೋಚಿಸಿದಾಗ ಮಾತ್ರ ಇಂತಹ ಅಭಿಪ್ರಾಯಗಳು ಹುಟ್ಟುತ್ತವೆ. ಚೋಮ ತನ್ನ ಜೀತ ವೃತ್ತಿಯನ್ನು ಬಿಟ್ಟು ಬೇರೆ ಆರ್ಥಿಕ ಉತ್ಪಾದನೆಯಲ್ಲಿ ತೊಡಗಬಾರದೇ? ಚೋಮ ಅನ್ಯ ಆರ್ಥಿಕ ಚಟುವಟಿಕೆಯಿಂದ ಪ್ರಚೋದಿತನಾಗಿದ್ದೇ ಅವನ ದುರಂತಕ್ಕೆ ಕಾರಣವಾಯಿತೇ? ಜಾತಿ ಪದ್ಧತಿಯು  ಸಾಮಾಜಿಕ ಮತ್ತು ಆರ್ಥಿಕ ಭೇದಭಾವಗಳನ್ನಷ್ಟೆ ಉಂಟು ಮಾಡಿಲ್ಲ. ಅದು ಚೋಮನಂಥವರು ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವ ಕುಲಕಸುಬನ್ನು ತೊರೆಯದಂತೆಯೂ ಮಾಡಿದೆ. ದ್ವಿಜ ಮತ್ತು ಅಸ್ಪೃಶ್ಯನೊಬ್ಬನ ನಡುವೆ ಮುಕ್ತ ಸಂವಾದವೇ ಸಾಧ್ಯವಿರದ ಸಮಾಜದಲ್ಲಿ ಚೋಮ ಯಾವ ಕ್ರಿಯೆಯಲ್ಲಿ ತೊಡಗಿದರೂ ಅಪರಾಧದಂತಯೇ ಕಾಣುತ್ತದೆ. ಅಸ್ಪೃಶ್ಯತೆ ಮತ್ತು ವರ್ಗ ಪ್ರತಿಷ್ಠೆ ಪರಸ್ಪರ ಕೂಡಿಕೊಂಡೇ ಚೋಮನು ಸಮಾನತೆಯ ಆಧಾರದ ಮೇಲೆ ಬದುಕುವ ಹಕ್ಕನ್ನು ಕೊಂದುಹಾಕಿವೆ. ಅಸ್ಪೃಶ್ಯತೆಯು ಸಮಾನತೆಯನ್ನು ಕೇಳುವುದೇ ಅಧರ್ಮವೆಂದು ಹೇಳಿ ಬಾಯಿ ತೆರೆಯದಂತೆ ಮಾಡಿದೆ. ಒಂದು ವೇಳೆ ಕೇಳಿದರೆ ಮೇಲ್ವರ್ಗವು ಹಾಗೆ ಕೇಳಬಹುದಾದ ಹಕ್ಕನ್ನೇ ದಮನಿಸುತ್ತದೆ.

ಚೋಮನಿಗೆ ಜೀತದಿಂದ ಮುಕ್ತನಾಗಿ ಬೇರೊಂದು ಉತ್ಪಾದನೆಯಲ್ಲಿ ತೊಡಗಲು ಮುಖ್ಯವಾಗಿ ಜಾತಿಯೇ ತಡೆ ಗೋಡೆಯಾಗಿದೆ. ಚೋಮನ ಸಾಮಾಜಿಕ ಚಲನಶೀಲತೆಗೆ ಸಮಾಜದ ನಿರ್ದಿಷ್ಟ ವರ್ಗವೊಂದರ ಆರ್ಥಿಕ ಶಕ್ತಿಗಳ ಮೇಲಿನ ಹತೋಟಿಯೂ ಕಾರಣವಾಗಿದೆ ಎಂಬುದನ್ನು ಜಿ. ರಾಜಶೇಖರ ಅವರ ವಿಮರ್ಶೆ ಉಪಾಯವಾಗಿ ಉದಾಸೀನ ಮಾಡಿದೆ. ಚೋಮನ ಜಾತಿಗೆ ಆರ್ಥಿಕತೆಯೂ ಸೇರಿದಂತೆ ಸಾಮಾಜಿಕ ಕಟ್ಟುಪಾಡುಗಳೂ ಅವನನ್ನು ಕಟ್ಟಿಹಾಕಿವೆ. ಬ್ರಾಹ್ಮಣ ವರ್ಗ ವಿಧಿಸಿದ ಪಾರಂಪರಿಕ ನಿರ್ಬಂಧಗಳು ಜಾತಿ ಸಮಸ್ಯಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ಆರ್ಥಿಕ ಉತ್ಪಾದನೆಯ ಮೇಲಿನ ನಿಯಂತ್ರಣದ ಮೂಲಕ ಮೇಲ್ವರ್ಗವೊಂದು ಸಮಾಜದಲ್ಲಿ ‘ಸಾಂಸ್ಕೃತಿಕ ಯಜಮಾನಿಕೆ’ಯನ್ನು ಉಳಿಸಿಕೊಳ್ಳಲು ಯತ್ನಿಸುವುದನ್ನು ಕಾಣಬಹುದಾಗಿದೆ.

ಕನ್ನಡ ವಿಮರ್ಶೆಗೆ ಗಂಭೀರತೆ ಮತ್ತು ಘನತೆಯನ್ನು ತಂದುಕೊಟ್ಟವರಲ್ಲಿ ಡಿ.ಆರ್.ನಾಗರಾಜ ಪ್ರಮುಖರು. ಅವರ ವಿಮರ್ಶೆ ಅನೇಕ ಜ್ಞಾನ ಶಿಸ್ತುಗಳನ್ನು ಅಳವಡಿಸಿಕೊಂಡು ವಿಮರ್ಶಾ ಪರಂಪರೆಗೆ ಹೊಸ ಚಹರೆಯನ್ನು ನೀಡಿತು. ಅವರು ‘ಚೋಮನ ದುಡಿ’ಯನ್ನು ಕುರಿತು ಹೀಗೆ ಹೇಳುತ್ತಾರೆ: ಚೋಮನಿಗೆ ನೆಲ ಏಕೆ ದಕ್ಕಲಿಲ್ಲ ಎಂಬುದಕ್ಕೆ ಕೃತಿಯ ವಿವರಗಳಿಂದ ದೊರಕುವ ಕಾರಣಗಳು ಎರಡು: ಅ) ಚೋಮ ಕುಡುಕ. ಸಂಪಾದಿಸಿದ್ದನ್ನೆಲ್ಲಾ ಕುಡಿದು ಹಾಳು ಮಾಡಿದ. ಆದ್ದರಿಂದ ನೆಲ ದಕ್ಕಲಿಲ್ಲ. ಆ) ಚೋಮನ ಮಕ್ಕಳು ಅವನ ಬಳಿ ನಿಲ್ಲಲಿಲ್ಲ. ಆತನ ಒಡೇರು ನೆಲ ಕೊಡುವ ದೊಡ್ಡಮನಸ್ಸು ಮಾಡಲಿಲ್ಲ. ಈ ಎರಡು ಕಾರಣಗಳನ್ನು ಕೊಡುವುದರಲ್ಲಿಯೇ ಕಾದಂಬರಿ ನಿಂತು ಹೋಗುತ್ತದೆ. ಚೋಮನ ಸ್ಥಿತಿಯನ್ನು ರೊಮ್ಯಾಂಟಿಕ್ ಆಗಿ ಆವೇಶದಿಂದ ಚಿತ್ರಿಸಿ ಕಾದಂಬರಿಕಾರರು ಸಮಾಧಾನ ಹೊಂದುತ್ತಾರೆ. ಈ ಕಾದಂಬರಿಯ ಭಾಷೆ, ಮಹತ್ವದ ಸನ್ನಿವೇಶಗಳು ಈ ಮಾತಿಗೆ ಸಾಕ್ಷಿ. ಕಾದಂಬರಿಯಲ್ಲೇ ಹೊರಡುವ ಈ ಎರಡು ಕಾರಣಗಳು ಅಸಮಗ್ರ ಮತ್ತು ವ್ಯಕ್ತಿನಿಷ್ಠವಾದವುಗಳು. ಚೋಮ ಚರಿತ್ರೆಯ ಬೆಳವಣಿಗೆಯ ಫಲ. ಅವನ ಮಕ್ಕಳು ಅವನ ಒಡೆಯ ಇವರು ಒಂದು ವೃತ್ತದ ಬೇರೆ ಬೇರೆ ಭಾಗಗಳು. ಚೋಮನ ದುರಂತಕ್ಕೆ ಕಾರಣ ಆತ ಬದುಕುವ ವ್ಯವಸ್ಥೆಯ ರಚನೆಯಲ್ಲಿಯೇ ಇದೆ ಎಂಬ ಅರಿವು ಈ ಕೃತಿಯಲ್ಲೆಲ್ಲೂ ವ್ಯಕ್ತವಾಗುವುದಿಲ್ಲ.

ಡಿ.ಆರ್.ನಾಗರಾಜ ಅವರು ಅಧುನಿಕ ಕಾದಂಬರಿ ಪ್ರಕಾರವು ಕೆಳ ವರ್ಗದ  ಸಾಮಾನ್ಯ ಮನುಷ್ಯನೊಬ್ಬನನ್ನು ಚಿತ್ರಿಸಿರುವ ಬಗೆಯನ್ನು ವಿಶ್ಲೇಷಿಸಿದ್ದಾರೆ. ಚೋಮನ ವೈಫಲ್ಯಕ್ಕೆ ಕಾರಣವೆಂದರೆ ಅವನ ಸಮಸ್ಯೆಯು ವ್ಯಕ್ತಿನಿಷ್ಠವಾಗಿ ಪ್ರತಿಪಾದಿತವಾಗಿರುವುದು. ಅಂದರೆ ಕಾರಂತರು ಚೋಮನ ಸಮಸ್ಯೆಯನ್ನು ವ್ಯಕ್ತಿಗತ ನೆಲೆಯಲ್ಲಿ ಅರ್ಥಮಾಡಕೊಂಡಿದ್ದಾರೆ. ಡಿ.ಆರ್.ನಾಗರಾಜ ಅವರು ಚೋಮನನ್ನು ಒಟ್ಟು ಚಾರಿತ್ರಿಕ ಮತ್ತು ಸಾಹಿತ್ಯಿಕ ಸಂದರ್ಭದಲ್ಲಿಟ್ಟು ನೋಡುವುದರಿಂದ ಅದು ಕೃತಿಯ ಚೌಕಟ್ಟಿನಾಚೆ ನಿಂತು ಚೋಮನ ಸಮಾಜವನ್ನು ನೋಡುವ ಕ್ರಮವೂ ಆಗಿದೆ. ಆದ್ದರಿಂದಲೇ ಡಿ. ಆರ್.ನಾಗರಾಜ ಅವರಿಗೆ ಚೋಮನ ದುರಂತಕ್ಕೆ ಕಾರಣ ಆತ ಬದುಕುವ ವ್ಯವಸ್ಥೆಯ ರಚನೆಯಲ್ಲಿಯೇ ಇದೆ ಎಂದು ಹೇಳಲು ಸಾಧ್ಯವಾಗಿದೆ. ಕಾರಂತರು ಚೋಮನ ದುರಂತಕ್ಕೆ ಅವನ ವೈಯಕ್ತಿಕ ಜಾತಿ ಮತ್ತು ಸಾಮಾಜಿಕ ಸ್ಥಿತಿಗಳೇ ಮೂಲ ಕಾರಣಗಳು ಎಂಬಂತೆ ಪರಿಭಾವಿಸಿಕೊಂಡಿದ್ದಾರೆ. ಜಾತಿ ಪದ್ಧತಿಯ ಸಮಾಜದಲ್ಲಿ ಚೋಮ ಒಬ್ಬ ದಲಿತ ಮತ್ತು ಅಸ್ಪೃಶ್ಯನಾಗಿರುವುದು ಅವನ ಸ್ವಂತ ಆಯ್ಕೆಯಿಂದಲ್ಲ. ತಮ್ಮ ಜಾತಿ ‘ಶ್ರೇಷ್ಠ’ವೆಂದು ಬಿಂಬಿಸಿಕೊಳ್ಳುವ ವರ್ಗವು ಚೋಮನಂಥವರ ಜಾತಿಯನ್ನು ‘ಕನಿಷ್ಟ’ವೆಂದು ಮಾನ್ಯ ಮಾಡಿಲ್ಲವೇ?

ಕನ್ನಡ ಸಾಹಿತ್ಯದ ಸೂಕ್ಷ್ಮಪ್ರಜ್ಞೆಯ ವಿಮರ್ಶಕರಲ್ಲಿ ಕೆ.ವಿ.ನಾರಾಯಣ ಅವರು ಮುಖ್ಯರಾಗಿದ್ದಾರೆ. ಅವರು – ಚೋಮನ ಬದುಕಿನ ದುರಂತ ಒಂದು ಸಾಮಾಜಿಕ ದುರಂತವೂ ಹೌದು. ಒಬ್ಬ ವ್ಯಕ್ತಿಯ ದುರಂತವೂ ಹೌದು. ಕಾದಂಬರಿಯಲ್ಲಿ ಅದು ವ್ಯಕ್ತಿಯ ದುರಂತವೆಂಬ ಅಂಶಕ್ಕೆ ಒತ್ತು ಹೆಚ್ಚು ಬಿದ್ದಿದೆ ಎನ್ನುತ್ತಾರೆ. ಅಂದರೆ ಕಾರಂತರು ಚೋಮನ ಸಮಸ್ಯೆಯನ್ನು ಒಂದು ಸಾಮುದಾಯಿಕ ಸವಾಲಿಗಿಂತಲೂ ಅವನ ವೈಯಕ್ತಿಕ ಸವಾಲನ್ನಾಗಿ ಮಾಡಿದ್ದರಿಂದ ಚೋಮ ವಿಫಲನಾಗುತ್ತಾನೆ. ಇದಕ್ಕೆ ಕಾರಂತರ ತಾತ್ವಿಕ ದೃಷ್ಟಿಕೋನವೂ ಕಾರಣವಾಗಿದೆ. ಇದನ್ನು ಬಿ.ಎಂ.ಪುಟ್ಟಯ್ಯನವರು ಹೀಗೆ ಹೇಳುತ್ತಾರೆ: ಚೋಮನು ಸಂಕಪ್ಪಯ್ಯನಲ್ಲಿ ಗೇಣಿ ಕೇಳುವ ವಿಧಾನವಾಗಲೀ ‘ಬೆಟ್ಟದ ಜೀವ’ದಲ್ಲಿ ನಾರಾಯಣನು ಚೂರು ಜಾಗದ ಗೇಣಿಗಾಗಿ ಆಸೆ ಪಡುವ ವಿಧಾನವಾಗಲೀ, ಮೂಕಜ್ಜಿಯ ಅತೀಂದ್ರಿಯ ಶಕ್ತಿಯಾಗಲೀ ಇವುಗಳೆಲ್ಲ ಎಲ್ಲೊ ಒಂದು ಕಡೆ ಸಾಮುದಾಯಿಕರಣಗೊಳ್ಳದೆ ಪ್ರತ್ಯೇಕವಾಗಿ ಹೊರಗೆ ನಿಂತು ಬಿಡುತ್ತವೆ. ವ್ಯಕ್ತಿಕೇಂದ್ರಿತ ವರ್ತುಲದಲ್ಲಿ ಕ್ರಿಯಾಶೀಲವಾಗುತ್ತವೆ. ಕೆ.ವಿ.ನಾರಾಯಣ ಅವರು ‘ಚೋಮನ ದುಡಿ’ ಒಂದು ಪ್ರತಿಗಾಮಿ ಧೋರಣೆಯ ಕಾದಂಬರಿಯಾಗಿರಬಹುದೇ? ಎಂಬ ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ಎರಡು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದು ಚೋಮ ಭೂಮಿಗಾಗಿ ಆಸೆ ಪಟ್ಟದ್ದು ಮತ್ತು ತನ್ನ ಮಿತಿಗಳನ್ನು ಮೀರುವುದರಿಂದ ಈ ದುರಂತವಾಗಿದೆ. ಎರಡನೆಯದಾಗಿ ಚೋಮ ಕೆಳಜಾತಿಯವನಾಗಿದ್ದರಿಂದ ತನ್ನ ಹುಟ್ಟಿನ ಮಿತಿಗಳನ್ನು ಮೀರಲು ಹೋಗಿದ್ದರಿಂದ ದುರಂತವನ್ನು ಅನುಭವಿಸುತ್ತಾನೆ.

ವರ್ಗ ವ್ಯವಸ್ಥೆಯಲ್ಲಿ ಚೋಮನಿಗೆ ತುಂಡು ಸ್ವಂತ ಭೂಮಿಯನ್ನು ಹೊಂದಬೇಕೆಂಬ ಆಸೆ ಹುಟ್ಟಿದ್ದು ನಿಸರ್ಗ ಸಹಜವಾದದ್ದು ಮಾತ್ರವಲ್ಲ. ಸಾಮಾಜಿಕವಾಗಿ ಅವನ ಹೀನ ಸ್ಥಿತಿಯೂ ಭೂಮಿಯ ಒಡೆತನಕ್ಕೆ ಪ್ರೇರೇಪಿಸಿದೆ. ಆದರೆ ಕಾದಂಬರಿ ಚೋಮನ ಈ ಆಸೆಯನ್ನು ಜಮೀನ್ದಾರಿ ವರ್ಗದ ಅವನ ಯಜಮಾನ ದಮನಿಸುವುದನ್ನು ಚಿತ್ರಿಸುತ್ತದೆ. ಜಮೀನ್ದಾರ ಸಂಕಪ್ಪಯ್ಯನಿಗೆ ಭೂಮಿಯ ಮೇಲಿನ ಒಡೆತನ ಅವನಿಗೆ ಅಧಿಕಾರ ಮತ್ತು ಸಾಮಾಜಿಕ ಬಲವನ್ನೂ ನೀಡಿದೆ. ಭೂರಹಿತ ಕೆಳ ಜಾತಿಯ ಚೋಮನನ್ನು ಜಮೀನ್ದಾರಿ ವರ್ಗದವು ತನ್ನ ಅಧೀನನಾಗುವಂತೆ ಮಾಡಿದೆ. ಚೋಮ ತನ್ನ ಆರ್ಥಿಕ ಮಿತಿಗಳನ್ನು ಮೀರಲು ಪ್ರಯತ್ನಿಸಿದ್ದರಿಂದ ಅವನ ಬದುಕು ದುರಂತಮಯವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆ.ವಿ.ನಾರಾಯಣ ಅವರು ‘ಚೋಮನ ದುಡಿ’ ಪ್ರಗತಿ ವಿರೋಧಿ ಕೃತಿಯೆಂದು ಭಾವಿಸಿದ್ದಿರಬಹುದು.

ಜಾತಿ ಪದ್ಧತಿ ವಿಧಿಸಿರುವ ಸಾಮಾಜಿಕ ಕಟ್ಟಳೆಯ ಬೇಡಿಯಿಂದ ಕಳಚಿಕೊಳ್ಳಲು ಚೋಮ ಪ್ರಯತ್ನಿಸುತ್ತಾನೆ. ಚೋಮ ಭೂಮಿ ಪಡೆಯುವ ಆಸೆಗೆ ಜಮೀನ್ದಾರಿ ವರ್ಗ ಮತ್ತು ಮೇಲ್ವರ್ಗ ಎರಡೂ ವಿರೋಧಿಯಾಗಿವೆ. ಚೋಮ ಈ ಎರಡೂ ವರ್ಗಗಳನ್ನು ಎದುರಿಸಿ ಭೂಮಿಯನ್ನು ಪಡೆಯಲು ಅವನ ಕೆಳ ಅಸ್ಪೃಶ್ಯ ಜಾತಿ ಮತ್ತೂ ದೊಡ್ಡ ತಡೆಯಾಗಿದೆ. ಹುಟ್ಟನ್ನು ಆಧರಿಸಿದ ತನ್ನ ಜಾತಿಯ ಮಿತಿಗಳನ್ನು ಮೀರಿ ನಿಲ್ಲಲು ಚೋಮ ಪ್ರಯತ್ನಿಸುತ್ತಾನೆ. ಆದರೆ ಕಾದಂಬರಿ ಚೋಮನ ಜಾತಿಯ ಕಾರಣದಿಂದಾಗಿ ಅವನಿಗೆ ಭೂಮಿ ಸಿಗಲಿಲ್ಲ ಎಂಬುದನ್ನೆ ಭಾವುಕವಾಗಿ ಚಿತ್ರಿಸುತ್ತದೆ. ಆದ್ದರಿಂದ ಕಾದಂಬರಿಯು ಓದುಗರಲ್ಲಿ ಪ್ರಗತಿಶೀಲವಾಗಿಲ್ಲ ಎಂಬ ಮನೋಭಾವನೆಯನ್ನುಂಟು ಮಾಡುತ್ತದೆ.

ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಒಬ್ಬರಾದ ಟಿ.ಪಿ. ಅಶೋಕ ಅವರು ‘ಚೋಮನ ದುಡಿ’ಯನ್ನು ಉದಾರವಾದಿ ನೆಲೆಯಲ್ಲಿ ಚರ್ಚಿಸುತ್ತಾರೆ. ಚೋಮನಂತಹ ವ್ಯಕ್ತಿಯ ಆಸೆಗೆ ಹಿಂದೂ ಸಮಾಜ ಸ್ಪಂದಿಸಬೇಕು. ಹಿಂದೂ ಸಮಾಜ ತನ್ನ ಎಲ್ಲಾ ಶ್ರೇಣಿಯ ಜನಗಳ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ವಿನಾಶ ಅನಿವಾರ್ಯ ಎನ್ನುತ್ತಾರೆ. ಚೋಮನ ಭೂ ಒಡೆತನದ ಪ್ರಶ್ನೆಯನ್ನು ವಸಾಹತುಶಾಹಿ ಮತ್ತು ಆಧುನಿಕತೆಯಲ್ಲಿ ಅರಸಲು ಅವರು ಪ್ರಯತ್ನಿಸುತ್ತಾರೆ. ವಸಾಹತುಶಾಹಿಯ ಅಪಾಯಗಳನ್ನು ಕುರಿತು ಉತ್ಸಾಹದಿಂದ ಚರ್ಚಿಸುವ ಟಿ.ಪಿ ಅಶೋಕ ಅವರು ಚೋಮನ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮರೆಮಾಚುತ್ತಾರೆ. ಹಿಂದೂ ಸಮಾಜ ಚೋಮನ ಮಾನವ ಸಹಜ ಅಭೀಪ್ಸೆಯೊಂದನ್ನು ಈಡೇರಿಸುವಷ್ಟು ಬದಲಾಗಿಲ್ಲ. ಪ್ರತಿಭಟನೆಯ ಮೂಲಕ ತನ್ನ ಆಸೆಯನ್ನು ಪೂರೈಸಿಕೊಳ್ಳುವಷ್ಟು ರಾಜಕೀಯ ಸಾಮರ್ಥ್ಯವನ್ನು ಚೋಮನ ವರ್ಗ ಪಡೆದುಕೊಂಡಿಲ್ಲ. ಹಿಂದೂ ಸಂಸ್ಕೃತಿಯ ಚೌಕಟ್ಟಿನಲ್ಲೇ ದಲಿತರ ಸಮಸ್ಯೆಗಳು ಬಗೆಹರಿಯುವಷ್ಟು ಸಮಾಜ ಬೆಳೆದಿಲ್ಲ ಎಂದು ಹೇಳುವ ಅಶೋಕರ ಈ ಅಭಿಪ್ರಾಯ ‘ಯಥಾಸ್ಥಿತಿವಾದ’ವನ್ನೆ ಸಮರ್ಥಿಸುತ್ತದೆ. ಏಕೆಂದರೆ ಜಾತಿಯಂತಹ ಗಂಭೀರ ಪ್ರಶ್ನೆಯನ್ನು ಗುಪ್ತವಾಗಿಟ್ಟು ಇರುವ ವ್ಯವಸ್ಥೆಗೆ ತೇಪೆ ಹಚ್ಚಿ ಸರಿಪಡಿಸುವುದು ಹೇಗೆ ಎಂಬುದರ ಬಗ್ಗೆಯೇ ಅವರ ವಿಮರ್ಶೆಯ ಒಲವಿದೆ.

ಚೋಮ ದಿನನಿತ್ಯ ದುಡಿಯುವ ಭೂಮಿಯ ಮೇಲೇಯೇ ಅವನಿಗೆ ಹಕ್ಕಿಲ್ಲದಿರುವುದು ಈ ಸಮಾಜದ ದುರಂತವಾಗಿದೆ. ಚೋಮನಿಗೆ ಭೂಮಿಯ ಮೇಲಿನ ಹಕ್ಕನ್ನು ಪ್ರತಿಭಟನೆಯಿಂದ ಪಡೆಯುವಷ್ಟು ರಾಜಕೀಯ ಸಾಮರ್ಥ್ಯಯಿಲ್ಲವೆಂದು ಅಶೋಕ ಅವರು ಹೇಳಿದ್ದಾರೆ. ಆದರೆ ಚೋಮನ ವರ್ಗದಲ್ಲಿರುವ ‘ಪ್ರತಿಭಟನೆಯ ಶಕ್ತಿ’ ಮತ್ತು ‘ರಾಜಕೀಯ ಸಾಮರ್ಥ್ಯ’ವನ್ನು ಕುಗ್ಗಿಸುವ ಹಾಗೂ ದಮನ ಮಾಡುತ್ತ ಬಂದಿರುವ ಸಂಗತಿಗಳ ಕುರಿತು ಅಶೋಕ ಅವರು ಒಂದು ಸೊಲ್ಲನ್ನೂ ಎತ್ತಲಾರರು. ಅವರು ಚೋಮನ ಧಣಿ ಬ್ರಾಹ್ಮಣ ವರ್ಗದ ಸಂಕಪ್ಪಯ್ಯನ ಕ್ರೌರ್ಯದ ಕುರಿತು ಏನನ್ನೂ ಹೇಳಲಾರರು.

ಚೋಮನಂತಹವರಿಗೆ ಭೂಮಿ ದೊರಕಲು ಹಿಂದೂ ಸಮಾಜ ಇನ್ನೂ ಪಕ್ವವಾಗಿಲ್ಲ ಎಂದು ಅಶೋಕರವರು ಹೇಳುವಂತಿದೆ. ಹಿಂದೂ ಸಮಾಜ ಮೊದಲಿನಿಂದಲೂ ದಲಿರನ್ನು ‘ಅನ್ಯ’ರೆಂದೇ  ಬಹಿಷ್ಕರಿಸಿದೆ. ಹಿಂದೂ ಸಮಾಜದ ಮೇಲ್ವರ್ಗ ದಲಿತರನ್ನು ಯಾವತ್ತೂ ಸಮಾನವಾಗಿ ಕಂಡದ್ದೇ ಇಲ್ಲ. ಹಿಂದೂ ಸಮಾಜದ ಸಂರಚನೆಯಲ್ಲಿ ಮೂಲಭೂತ ಬದಲಾವಣೆಯಾಗಬೇಕಾದ ಅನಿವಾರ್ಯತೆಗಿಂತ ಚೋಮನಂತವರು ರಾಜಕೀಯವಾಗಿ ಪ್ರಬಲರಾಗಬೇಕೆಂದು ಅವರು ಬಯಸುತ್ತಾರೆ. ಅಂದರೆ ಸಮಾನತೆಯ ಹಕ್ಕಿಗಾಗಿ ಚೋಮ ಮತ್ತು ಅವನ ವರ್ಗದವರೇ ಬದಲಾಗಬೇಕೆಂಬುದೇ ಅಶೋಕ ಅವರ ವಿಮರ್ಶೆಯ ಒಳಾರ್ಥವಾಗಿದೆ. ಚೋಮನನ್ನು ದಮನಕಾರಿ ಶಕ್ತಿಯಾಗಿ ಕಾಡುವ ಅವನ ಯಜಮಾನ ಬ್ರಾಹ್ಮಣ ವರ್ಗದ ಸಂಕಪ್ಪಯ್ಯ ಕೊಂಚವಾದರೂ ಪರಿವರ್ತನೆಯಾಗಬೇಕೆಂದು ಅಶೋಕ ಅವರ ವಿಮರ್ಶೆ ಬಯಸುವುದಿಲ್ಲ.

ಚೋಮನ ಸಮಸ್ಯೆಯ ಪರಿಹಾರಕ್ಕೆ ಪರೋಕ್ಷವಾಗಿ ಮತಾಂತರವನ್ನು ಅವರು ಸೂಚಿಸಿದಂತಿದೆ. ಅಂದರೆ ಜಾತಿ ಪ್ರಶ್ನೆಯನ್ನು ಅವರು ಸಮಾಜದ ಮೇಲ್ವರ್ಗದ ಹಿತದೃಷ್ಟಿಯಿಂದ ನೋಡುತ್ತಾರೆ. ಚೋಮನಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಅದು ಹಿಂದೂ ಸಮಾಜದ ಉದಾರ ಭಾವದಿಂದ ಎಂದು ನಂಬಿದಂತೆ ಕಾಣುತ್ತದೆ. ಚೋಮನನ್ನು ಸಾಮಾಜಿಕ ನ್ಯಾಯದಿಂದ ವಂಚಿತನನ್ನಾಗಿ ಮಾಡಿರುವ ಜಾತಿ ವ್ಯವಸ್ಥೆಯ ಪರಿಣಾಮಗಳ ಕುರಿತು ಅಶೋಕ ಅವರ ವಿಮರ್ಶೆ ಅಸಡ್ಡೆ ಮಾಡಿದೆ. ಅವರ ವಿಮರ್ಶೆ ಹೆಚ್ಚಾಗಿ ಸಾಮಾನ್ಯೀಕೃತ ಹೇಳಿಕೆಗಳನ್ನು ಕೊಡುವುದರಲ್ಲೇ ನಿಂತುಬಿಡುತ್ತದೆ.

ದಲಿತ ನೆಲೆಯ ಚಿಂತಕರಲ್ಲಿ ಮೊಗಳ್ಳಿ ಗಣೇಶ್ ಪ್ರಮುಖರಾಗಿದ್ದಾರೆ. ಅವರು ಕಾರಂತರ ಕಾದಂಬರಿಯಲ್ಲಿ ದಲಿತ ಪಾತ್ರಗಳಿಗಾದ ಅನ್ಯಾಯವನ್ನು ಕುರಿತು- ದಲಿತರ ಜೀತದ ಬದುಕನ್ನು ತುಂಬ ದೂರದಲ್ಲಿ ಒರಟಾದ ತೆರೆಯನ್ನು ಎಳೆದು ಅವರ ನಿಜವಾದ ಮಣ್ಣಿನ ಬದುಕಿನ ದರ್ಶನವನ್ನೇ ಮರೆಮಾಡಿ ರಾಮ ಐತಾಳರ ಬದುಕಿನ ಗತ ವೈಭವವನ್ನೇ ಮತ್ತೆ ಮತ್ತೆ ಹೇಳುವುದು ಸೃಜನಶೀಲತೆಯ ನ್ಯಾಯವಲ್ಲ. ದಲಿತ ಸಂಕಟವನ್ನು ‘ಚೋಮನ ದುಡಿ’ಯಲ್ಲಿ ಕಾರಂತರು ಯಶಸ್ವಿಯಾಗಿ ಸೃಜನಶೀಲ ಅಭಿನಯದಂತೆ ಮಾಡಿದ್ದರೂ ಅದಕ್ಕೆ ನಾವು ಮಾನವೀಯ ಅರ್ಥಗಳನ್ನು ಹುಡುಕಿಕೊಂಡು ಸಮಾಧಾನ ಪಟ್ಟುಕೊಂಡರೂ ‘ಮರಳಿ ಮಣ್ಣಿಗೆ’ ಕಾದಂಬರಿಯ ಸಂದರ್ಭದಲ್ಲಿ ವೈದಿಕ ಪಾತ್ರಗಳ ಹುಸಿ ಮಣ್ಣಿನ ಸಂಬಂಧವನ್ನು ವೈಭವೀಕರಿಸುತ್ತಾ ಅದೇ ದಲಿತರ ಮಣ್ಣಿನ ವ್ಯವಸಾಯದ ಸಾವಯವ ಸಂಸ್ಕೃತಿಯನ್ನು ಬಚ್ಚಿಡುವ ಬರಹದ ಕ್ರಮವನ್ನು ನೋಡಿದರೆ ಸೃಜನಶೀಲತೆಯ ಅಸ್ಪೃಶ್ಯತೆಯು ಹೇಗೆ ಜಾತಿನಿಷ್ಠವಾದ, ಧರ್ಮಬದ್ಧವಾದ ತಾರತಮ್ಯವನ್ನು ಬೆಳೆಸುತ್ತದೆ ಎಂಬುದು ಈ ಕಾದಬರಿಯ ಮೂಲಕ ತಿಳಿಯುತ್ತದೆ ಎಂದು ಹೇಳುತ್ತಾರೆ.

ಇಲ್ಲಿ ಚೋಮನ ಪಾತ್ರವನ್ನು ಸೃಜಿಸಿದ ಲೇಖಕರನ್ನು ಕಟಕಟೆಯಲ್ಲಿ ನಿಲ್ಲಿಸಿ ವ್ಯಗ್ರವಾಗಿ ತರಾಟೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಮೊಗಳ್ಳಿಯವರ ಆಪಾದನೆಗಳಿವೆ. ಅವರಿಗೆ ಕಾರಂತರ  ಸೃಜನಶೀಲ ತಾರತಮ್ಯತೆಯ ಬಗ್ಗೆ ತೀವ್ರ ಆಕ್ರೋಶವಿದೆ. ಚೋಮನ ಪಾತ್ರವನ್ನು ‘ಮರಳಿ ಮಣ್ಣಿಗೆ’ ಕಾದಂಬರಿಯ ಬ್ರಾಹ್ಮಣ ಪಾತ್ರದೊಂದಿಗೆ ಹೋಲಿಸಿ ಕಾರಂತರು ಒಂದೇ ಸಮಸ್ಯೆಯನ್ನು ಜಾತ್ಯತೀತರಾಗಿ ಚಿತ್ರಿಸಿಲ್ಲವೆಂದು ಆಪಾದಿಸಿದ್ದಾರೆ. ಕಾದಂಬರಿಕಾರರ ಜಾತಿನಿಷ್ಠೆಯೇ ಇದಕ್ಕೆಲ್ಲ ಕಾರಣವೆಂದು ಮೊಗಳ್ಳಿಯವರು ನಂಬಿದಂತಿದೆ. ಮೊಗಳ್ಳಿಯವರ ಈ ಏಕಮುಖಿಯಾದ ಗ್ರಹಿಕೆಯನ್ನು ಒಪ್ಪುವುದು ಕಷ್ಟ. ಕಾರಂತರು ‘ಚೋಮನ ದುಡಿ’ಯನ್ನು ಬರೆದ ಸಾಮಾಜಿಕ ಸಂದರ್ಭ ಮತ್ತು ವಸಾಹತುಶಾಹಿ ಕಾಲಘಟ್ಟವನ್ನು ಪರಿಗಣಿಸಬೇಕಾಗುತ್ತದೆ. ವೈದಿಕ ವರ್ಗ ಪರಂಪರಾಗತವಾಗಿ ಮಣ್ಣಿನ ಮೇಲೆ ಹಕ್ಕುಳ್ಳ ವರ್ಗವಾಗಿದೆ. ಚೋಮನಂತವರದ್ದು ಮಣ್ಣಿನ ಮೇಲೆ ಹಕ್ಕಿಲ್ಲದವರ ವರ್ಗ. ಇವೆರಡೂ ಸಾಮಾಜಿಕ ವಾಸ್ತವಗಳೇ ಆಗಿರುವುದರಿಂದ ಕಾರಂತರು ಎರಡು ಭಿನ್ನದೃಷ್ಟಿಕೋನದಲ್ಲೇ ‘ಮರಳಿ ಮಣ್ಣಿಗೆ’ ಮತ್ತು ‘ಚೋಮನ ದುಡಿ’ ಕಾದಂಬರಿಗಳನ್ನು ಬರೆದಿರುವ ಸಾಧ್ಯತೆಯಿದೆ.

ಮೊಗಳ್ಳಿಯವರ ಅಭಿಪ್ರಾಯದಂತೆ ಕಾರಂತರ ವೈಚಾರಿಕ ವ್ಯಕ್ತಿತ್ವಕ್ಕೂ ಅವರ ಸೃಜನಶೀಲ ವ್ಯಕ್ತಿತ್ವಕ್ಕೂ ತುಂಬ ಅಂತರವಿದೆ. ಕಾರಂತರು ಚೋಮನನ್ನು ತಮ್ಮ ವೈಚಾರಿಕತೆಯ ಕೌಶಲ್ಯವನ್ನು ಕಲಾತ್ಮಕವಾಗಿ ದಾಖಲಿಸಲು ಬಳಸಿಕೊಂಡಿದ್ದಾರೆ. ಚೋಮನ ದೀನ ಸ್ಥಿತಿಯನ್ನೇ ಕಲಾತ್ಮಕತೆಯ ಬಂಡವಾಳವಾಗಿಸಿಕೊಂಡಿದ್ದನ್ನು ಮೊಗಳ್ಳಿ ತೀವ್ರವಾಗಿ ವಿರೋಧಿಸುತ್ತಾ ಹೀಗೆ ಹೇಳುತ್ತಾರೆ: ಪಾತ್ರಗಳ ದೀನ ಸ್ಥಿತಿಯನ್ನೇ ಓದುಗರ ಸಂವೇದನೆಗೆ ತುಂಬಿ ಅದರಲ್ಲೇ ಮೈಮರೆತು ಕಣ್ಣೀರು ಹಾಕಿಸಿ ಎಲ್ಲವನ್ನು ಮರೆಸಿ ಬಿಡುವ ಇಕ್ಕಟ್ಟು ಇಂತಲ್ಲಿ ಎದುರಾಗುತ್ತದೆ. ಭಾವುಕತೆಯು ರಮ್ಯವಾದಷ್ಟು ವಾಸ್ತವ ಜಗತ್ತಿನ ಶೋಷಣೆಯ ವ್ಯವಸ್ಥೆಯು ಮಸುಕಾಗಿ ಅದರ ವಿರೂಪವೇ ಕಾಣದಾಗಿ ಬಿಡುತ್ತದೆ. ಇದರಿಂದಾಗಿ ನಿಜವಾದ ದುರಂತ ಓದುಗರ ಪ್ರಜ್ಞೆಯಲ್ಲಿ ಬೆಳೆಯದೇ ರಸಾನಂದವಾಗಿ ಸೌಂದರ್ಯದ ಧ್ಯಾನವಾಗಿ ಅದರ ತನ್ಮಯತೆಯಲ್ಲಿ ಲೀನವಾಗಿ ವಾಸ್ತವತೆಯನ್ನು ಮರೆತು ಬಿಡುವುದೇ ಹೆಚ್ಚಾಗುತ್ತದೆ.

ಕಾರಂತರು ಕಲಾತ್ಮಕವಾಗಿ ಚೋಮನ ನೋವು ಸಂಕಟವನ್ನು ಮುನ್ನೆಲೆಗೆ ತಂದು ಅವನ ಮಣ್ಣಿನ ಮೇಲಿನ ಹಕ್ಕಿನ ಸಮಸ್ಯೆಯನ್ನು ಮರೆಮಾಚುವುದರ ಕುರಿತು ಮೊಗಳ್ಳಿಯವರ ವಿರೋಧವಿದೆ. ಕಾರಂತರು ತಮ್ಮ ಸೃಜನಶೀಲ ಕಲಾತ್ಮಕತೆಯನ್ನು ರೂಪಿಸಲು ಚೋಮನಂತಹ ಪಾತ್ರವನ್ನು ಬಳಸಿಕೊಂಡಿರುವುದನ್ನು ಮೊಗಳ್ಳಿಯವರು ತೀವ್ರವಾಗಿ ಆಕ್ಷೇಪಿಸಲು ಅವರ ಸಾಮಾಜಿಕ ಹಿನ್ನೆಲೆಯೂ ಕಾರಣವಾಗಿರಬಹುದು. ಮೊಗಳ್ಳಿಯವರಿಗೆ ಚೋಮನ ಸಾಮಾಜಿಕ ನ್ಯಾಯವೂ ಸೇರಿದಂತೆ ಸೃಜನಶೀಲ ನ್ಯಾಯವೂ ಅಷ್ಟೇ ಮುಖ್ಯವಾಗಿದೆ. ಕೆಲವು ಕಾದಂಬರಿಗಳಲ್ಲಿ ಕೆಳ ಜಾತಿಯ ಪಾತ್ರಗಳು ತುಚ್ಚವಾಗಿ ಅನಾವರಣಗೊಂಡಿವೆ ಎಂದು ಎಪ್ಪತ್ತರ ದಶಕದಲ್ಲಿ ಕೆಲವು ವಿಮರ್ಶಕರು ತೀವ್ರವಾಗಿ ಆಕ್ಷೇಪಿಸಿದ್ದರು. ಭಗವಾನ ಅವರು ‘ಸಂಸ್ಕಾರ’ ಕಾದಂಬರಿಯ ಮೇಲೆ ಮತ್ತು ಬಿ. ಕೃಷ್ಣಪ್ಪನವರು ಕುವೆಂಪು ಕಾದಂಬರಿಗಳಲ್ಲಿ ದಲಿತರ ಬದುಕು ಮೇಲ್ವರ್ಗಗಳಿಗೆ ಹೋಲಿಕೆ ಮಾಡಿದಾಗ ತೀರ ನಿಕೃಷ್ಟವಾಗಿ ಚಿತ್ರಣಗೊಂಡಿರುವುದನ್ನು ನಿದರ್ಶನಗಳ ಸಹಿತವಾಗಿ ವಿಶ್ಲೇಷಣೆ ಮಾಡಿದ್ದರು. ದಲಿತ ಪಾತ್ರಗಳನ್ನು ವಾಸ್ತವಿಕವಾಗಿ ಮೂಲೆ ಗುಂಪಾಗಿಸುವುದಲ್ಲದೇ ಅಕ್ಷರ ಲೋಕದಲ್ಲೂ ಕಡೆಗಣಿಸುವ ‘ಸೃಜನಶೀಲ ರಾಜಕಾರಣ’ವನ್ನು ಮೊಗಳ್ಳಿಯವರು ಆಕ್ಷೇಪಿಸುತ್ತಾರೆ. ಇದನ್ನೇ ಅವರು ಜಾತಿ ಪರಿಭಾಷೆಯಲ್ಲಿ ‘ಸೃಜನಶೀಲತೆಯ ಅಸ್ಪೃಶ್ಯತೆ’ ಎಂದು ಕರೆಯುತ್ತಾರೆ.

ಕನ್ನಡ ಸಾಹಿತ್ಯದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಬಿ.ಎಂ.ಪುಟ್ಟಯ್ಯನವರು ಚೋಮನಿಗೆ ಭೂಮಿ ಸಿಗದಿರುವ ಎರಡು ಕಾರಣಗಳನ್ನು ಕುರಿತು ಚರ್ಚಿಸಿದ್ದಾರೆ. ಮೊದಲನೆಯದಾಗಿ ಸಂಕಪ್ಪಯ್ಯನ ತಾಯಿಯ ಅಂಧಶ್ರದ್ಧೆಯಿಂದ ಚೋಮನಿಗೆ ಗೇಣಿಗೆ ಭೂಮಿ ಸಿಗುವುದಿಲ್ಲ. ಎರಡನೆಯದಾಗಿ ಚೋಮ ನಂಬಿರುವ ಪಂಜುರ್ಲಿ ಭೂತದ ಅಂಧಶ್ರದ್ಧೆ. ಪುಟ್ಟಯ್ಯನವರು ಜಾತಿ ವ್ಯವಸ್ಥೆ ನಿರ್ಮಿಸಿದ ಸನಾತನ ಪ್ರಜ್ಞೆ ಆಯಾ ವರ್ಗದ ಮನೋಭೂಮಿಕೆಯನ್ನು ನಿಯಂತ್ರಿಸುವ ರೀತಿಯನ್ನು ವಿಶ್ಲೇಷಿಸಿದ್ದಾರೆ. ಅಂದರೆ ಮೇಲ್ಜಾತಿಯಲ್ಲಿರುವ ಅಂಧಶ್ರದ್ಧೆಯು ಚೋಮನನ್ನು ಗೇಣಿಯಿಂದ ವಂಚಿತನಾಗುವಂತೆ ಮಾಡಿದೆ. ಕೆಳಜಾತಿಯಲ್ಲಿರುವ ಅಂಧಶ್ರದ್ಧೆ ಕೂಡ ಚೋಮ ಭೂಮಿಯ ಮೇಲೆ ಒಡೆತನ ಹೊಂದುವುದನ್ನು ತಪ್ಪಿಸಿದೆ. ಪಂಜುರ್ಲಿ ಭೂತದ ಬಗ್ಗೆ ಚೋಮನಿಗಿರುವ ಭಯವನ್ನು ವೈಚಾರಿಕ ನೆಲೆಯಲ್ಲಿ ಮೂಢನಂಬಿಕೆ ಎನ್ನುವಂತೆ ಮಾಡಿದೆ. ಆದರೆ ಕಾದಂಬರಿಯಲ್ಲಿ ಪಂಜುರ್ಲಿ ಭೂತ ಚೋಮನನ್ನು ಹೆದರಿಸುವ ಸನ್ನಿವೇಶವು ಅದು ಚೋಮನ ಆಂತರಿಕ ಲೋಕವನ್ನು ನಿಯಂತ್ರಿಸುವ ಬಗೆಯನ್ನು ಸೂಚಿಸುತ್ತದೆ. ಅದು ಸಾಮಾಜಿಕ ವ್ಯವಸ್ಥೆಯೊಂದು ಚೋಮನ ಮಾನಸಿಕ ಸ್ಥಿತಿಯನ್ನು ರೂಪಿಸಿದ ಬಗೆಯೂ ಆಗಿದೆ. ಇದು ಕೆಳ ಜಾತಿಗಳ ಜಗತ್ತು ಮೇಲ್ಜಾತಿಗಳಷ್ಟೇ ಪ್ರತಿಗಾಮಿಯಾಗಿರುವುದನ್ನು ಸಂಕೇತಿಸುತ್ತದೆ.

ಪುಟ್ಟಯ್ಯನವರು: ಚೋಮನಿಗೆ ಗೇಣಿ ಸಿಗದಿರುವಿಕೆಗೆ ಸಂಕಪ್ಪಯ್ಯನನ್ನು ಒಳಗೊಂಡಂತೆ ಅದೊಂದು ಜಮೀನ್ದಾರಿ ಸಂಬಂಧದ ಮೌಲ್ಯವೇ ಹೊರತು ಮಾನಸಿಕವಾದುದಲ್ಲ. ಅಂದರೆ ಉತ್ಪಾದನಾ ಸಂಬಂಧಗಳಿಂದ ಉಂಟಾಗಿರುವ ಸಮಸ್ಯೆಯೊಂದನ್ನು ನಯವಾಗಿ ಮತ್ತು ಸುಲಭವಾಗಿ ಮಾನಸಿಕ ನೆಲೆಗೆ ವರ್ಗಾಯಿಸಲಾಗಿದೆ. ಇದರಿಂದಾಗಿ ಇಲ್ಲಿ ಜಮೀನ್ದಾರಿ ಹಿತಾಸಕ್ತಿಯೇ ಆಳದಲ್ಲಿ ಕಾಣುತ್ತದೆ ಎನ್ನುತ್ತಾರೆ. ಸನಾತನ ಪ್ರಜ್ಞೆಯೊಂದು ವರ್ಗ ಹಿತಾಸಕ್ತಿಯನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಎಂಬುದನ್ನು ಅವರು ತಾತ್ವಿಕವಾಗಿ ವಿಶ್ಲೇಷಿಸಿದ್ದಾರೆ. ಇದು ಮಾರ್ಕ್ಸ್‌ನ ವರ್ಗ ವಿಶ್ಲೇಷಣೆಯ ಮಾದರಿಯೂ ಆಗಿದೆ. ಚೋಮನಿಗೆ ಭೂಮಿ ಸಿಗದಿರುವಿಕೆಗೆ ಮುಖ್ಯ ಕಾರಣ ಅವನ ಜಾತಿಗಿಂತಲೂ ಜಮೀನ್ದಾರಿ ವ್ಯವಸ್ಥೆಯ ರಚನೆಯಲ್ಲಿದೆ ಅನ್ನಿಸುತ್ತದೆ. ಅದಕ್ಕಿಂತಲೂ ಮೊದಲು ಭೂಮಿಯ ಸಂಪತ್ತಿನ ಒಡೆತನವೇ ಅಸಮಾನವಾಗಿ ಹಂಚಿಕೆಯಾಗಿದೆ. ಇದರಲ್ಲಿ ಜಾತಿ ವ್ಯವಸ್ಥೆಯ ಪಾತ್ರವೂ ದೊಡ್ಡದೇ. ಜಮೀನ್ದಾರಿ ವರ್ಗ ಉತ್ಪಾದನೆಯ ಸಾಧನಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದು ಅಲ್ಲದೇ ಅದು ಏಕಸ್ವಾಮ್ಯವನ್ನು ಪಡೆಯುವುದರಿಂದ ಚೋಮ ಭೂಮಿ ಕೇಳುವ ನೈತಿಕತೆಯನ್ನು ನಯವಾಗಿಯೇ ದಮನಿಸುತ್ತದೆ. ಜಮೀನ್ದಾರಿ ವರ್ಗದೊಂದಿಗೆ ಜಾತಿ ಪ್ರಜ್ಞೆಯೂ ಸೇರಿಕೊಂಡು ಚೋಮ ಭೂಮಿ ಕೇಳುವ ನೈತಿಕತೆಯನ್ನೇ ಅದು ಅಪರಾಧವೆಂಬ ಮನಸ್ಥಿತಿಯನ್ನು ಬೆಳೆಸುತ್ತದೆ.

‘ಚೋಮನ ದುಡಿ’ ಕಾದಂಬರಿ ಕುರಿತ ಈ ಎಲ್ಲ ವಿಮರ್ಶೆಗಳ ಅಧ್ಯಯನ ಅನೇಕ ಕುತೂಹಲಕರ ಪ್ರವೃತ್ತಿಗಳನ್ನು ಹೊರಹಾಕಿವೆ. ಈ ಚರ್ಚೆಗಳ ಆಧಾರದಿಂದ ಕನ್ನಡ ವಿಮರ್ಶಾ ಪರಂಪರೆಯಲ್ಲಿ ಈ ಕೆಳಕಂಡ ಗುಣಲಕ್ಷಣಗಳನ್ನು ಗುರುತಿಸಬಹುದಾಗಿದೆ.

  1.  ‘ಚೋಮನ ದುಡಿ’ಯ ಕಲಾತ್ಮಕತೆಯನ್ನು ವಿಶ್ಲೇಷಿಸುವ ವಿಮರ್ಶೆಗಳು ಕೃತಿಯೊಳಗಿನ ಸಾಮಾಜಿಕ ಸಮಸ್ಯೆಯನ್ನು ಚರ್ಚಿಸುವ ಗೋಜಿಗೆ ಹೋಗಿಲ್ಲ. ಕಲಾತ್ಮಕತೆಯನ್ನು ಮುಖ್ಯವೆಂದು ಭಾವಿಸುವ ವಿಮರ್ಶೆಗಳು ಸಾಮಾಜಿಕ ಸಮಸ್ಯೆಗೆ ಮುಖಾಮುಖಿಯಾಗುವ ಪ್ರಯತ್ನವನ್ನೇ ಮಾಡುವುದಿಲ್ಲ.
  2. ‘ಚೋಮನ ದುಡಿ’ಯ ಕಲಾತ್ಮಕ ತಂತ್ರಗಳನ್ನು ಉತ್ಸಾಹದಿಂದ ಚರ್ಚಿಸುವ ವಿಮರ್ಶೆಗಳು ಸಾಮಾಜಿಕ ಅನ್ಯಾಯಕ್ಕೆ ತುತ್ತಾದ ಚೋಮನ ಸಾಮಾಜಿಕ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಕಾಣುತ್ತದೆ. ಈ ವಿಮರ್ಶೆಗಳು ಚೋಮನ ಪಾತ್ರದ ಕುರಿತು ಅನುಕಂಪ ಸೂಚಿಸಿ ಜಾತಿ ಪ್ರಶ್ನೆಯನ್ನು ಗೌಣವಾಗಿಸುತ್ತವೆ.
  3.  ಸಾಮಾಜಿಕ ಪ್ರಶ್ನೆಯನ್ನು ಪ್ರಧಾನವಾಗಿ ಚರ್ಚಿಸುವ ವಿಮರ್ಶೆಗಳು ಕೃತಿಯ ಸಾಹಿತ್ಯಿಕ ಅಂಶಗಳನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿಲ್ಲ. ಅವು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅಡಿಯಲ್ಲಿ ಚೋಮನ ದುರಂತದ ಸಮಸ್ಯೆಯನ್ನು ಚರ್ಚಿಸುತ್ತವೆ.
  4.  ಚೋಮನ ಬದುಕಿನ ದುರಂತಕ್ಕೆ ಕಾರಣ ಕಾರಂತರು ಚೋಮನನ್ನು ವ್ಯಕ್ತಿಗತ ನೆಲೆಯಿಂದ ಚಿತ್ರಿಸಿರುವುದನ್ನು ಕೆಲವು ವಿಮರ್ಶೆಗಳು ವಿಶ್ಲೇಷಣೆ ಮಾಡಿವೆ. ಒಟ್ಟು ಚಾರಿತ್ರಿಕ ನೆಲೆಯಿಂದ ಚೋಮನನ್ನು ಚಿತ್ರಿಸಲಾಗಿಲ್ಲವೆಂದು ಈ ವಿಮರ್ಶೆಗಳು ಟೀಕಿಸಿವೆ.
  5.  ಚೋಮನ ಕೌಟುಂಬಿಕ ವಿಘಟನೆಗೆ ಆರ್ಥಿಕತೆ ಪ್ರಮುಖ ಕಾರಣವಾಗಿದೆ ಎಂದು ಚರ್ಚಿಸುವ ವಿಮರ್ಶೆಗಳು ಸಂಪ್ರದಾಯ, ಗತಕಾಲದ ನಂಬಿಕೆ, ಸನಾತನ ಪ್ರಜ್ಞೆಗಳನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿಲ್ಲದಿರುವುದು ಕಾಣುತ್ತದೆ.

ಉಪಸಂಹಾರ:

‘ಚೋಮನ ದುಡಿ’ ಕಾದಂಬರಿ ಚೋಮನಿಗೆ ಭೂಮಿ ದಕ್ಕದಿರುವುದಕ್ಕೆ ಅವನ ಅಸ್ಪೃಶ್ಯ ಜಾತಿ ಮತ್ತು ಹೀನ ಸ್ಥಿತಿಯ ಕಾರಣಗಳನ್ನು ರಮ್ಯ ಭಾವುಕವಾಗಿ ವರ್ಣಿಸುವುದರಲ್ಲೆ ತೃಪ್ತವಾಗುತ್ತದೆ. ಚೋಮನ ದುರಂತಕ್ಕೆ ಕಾರಣವಾಗುವ ಮೇಲ್ವರ್ಗ ಕುರಿತು ಕಾದಂಬರಿ ಮೃದು ಧೋರಣೆ ಹೊಂದಿದೆ. ಕನ್ನಡ ವಿಮರ್ಶೆ ಜಾತಿ ಸಮಸ್ಯೆ ಕುರಿತು ಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದೆ. ಹೆಚ್ಚಿನ ವಿಮರ್ಶೆಗಳು ಚೋಮನ ದುರಂತದ ಮೂಲಗಳನ್ನು ಜಾತಿ ವ್ಯವಸ್ಥೆ ಮತ್ತು ವರ್ಗದ ನೆಲೆಯಲ್ಲಿ ಚರ್ಚೆ ಮಾಡಿವೆ. ಇವುಗಳನ್ನು ಲಗತ್ತಿಸಿಕೊಂಡು ಬಹುಮುಖಿ ಆಯಾಮಗಳ ಮೂಲಕ ಜಾತಿ ಪ್ರಶ್ನೆಯನ್ನು ಶೋಧಿಸುವ ವಿಮರ್ಶೆಗಳ ಕೊರತೆಯಿದೆ. ಕಾದಂಬರಿಯ ಕಲಾತ್ಮಕ ಗುಣವನ್ನೂ ಒಳಗೊಂಡಂತೆ ಅದರ ಸಾಮಾಜಿಕ ಮತ್ತು ತಾತ್ವಿಕ ಧೋರಣೆಗಳ ಚರ್ಚೆ ಮಾಡಿರುವ ವಿಮರ್ಶಾ ಲೇಖನಗಳು ಇಲ್ಲವೆಂದೇ ಹೇಳಬೇಕು. ಆದರೆ ಒಟ್ಟಾರೆ ಕನ್ನಡ ವಿಮರ್ಶಾ ಪರಂಪರೆಗೆ ಜಾತಿ ವ್ಯವಸ್ಥೆಯ ಧಾರುಣತೆಯ ಹಿಂದಿರುವ ಕಾರಣಗಳನ್ನು ವಿಮರ್ಶಾತ್ಮಕವಾಗಿ ದ್ವಂದ್ವಾತ್ಮಕವಾಗಿ ನೋಡುವ ದೃಷ್ಟಿಕೋನದ ಕೊರತೆಯಿದೆ ಅನ್ನಿಸುತ್ತದೆ.

ಆಕರ ಕೃತಿಗಳು:

  • ತರೀಕೆರೆ, ರಹಮತ್, ‘ಇಲ್ಲಿ ಯಾರೂ ಮುಖ್ಯರಲ್ಲ’, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2005.
  •  ಕುರ್ತಕೋಟಿ, ಕೀರ್ತಿನಾಥ್, ‘ಯುಗಧರ್ಮ ಹಾಗೂ ಸಾಹಿತ್ಯ ದರ್ಶನ’, ಮನೋಹರ ಗ್ರಂಥಮಾಲೆ, ಧಾರವಾಡ, 1991.
  •  ಆಮೂರ, ಜಿ.ಎಸ್, ‘ಅರ್ಥಲೋಕ’, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು,  1998.
  •  ಅನಂತಮೂರ್ತಿ, ಯು.ಆರ್., ‘ಕಾರಂತರ ಅಥೆಂಟಿಕ್ ಪ್ರಪಂಚ’, ‘ಕಾರಂತ ಪ್ರಪಂಚ’, ಕಾರಂತ ಅಭಿನಂದನ ಸಮಿತಿ, ಉಡುಪಿ, 1969.
  •  ಭಂಡಾರಿ, ಆರ್.ವಿ., ‘ದಲಿತ ಮಾರ್ಗ’, ಸಂ:ಅರವಿಂದ ಮಾಲಗತ್ತಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2002.
  •  ರಾಜಶೇಖರ, ಜಿ., ‘ಕಾರಂತ ಪ್ರಪಂಚ’, ಕಾರಂತ ಅಭಿನಂದನ ಸಮಿತಿ, ಉಡುಪಿ, 1969.
  •  ನಾಗರಾಜ, ಡಿ.ಆರ್., ‘ಅಮೃತ ಮತ್ತು ಗರುಡ’, ಅಕ್ಷರ ಪ್ರಕಾಶನ, ಹೆಗ್ಗೋಡು, 1983.
  •  ನಾರಾಯಣ, ಕೆ.ವಿ., ‘ತೊಂಡುಮೇವು ಕಂತೆ-3’, ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು, 2010.
  •  ಪುಟ್ಟಯ್ಯ, ಬಿ.ಎಂ., ‘ಕದಡು’, ಸಿದ್ಧಾರ್ಥ ಪ್ರಕಾಶನ, ಹೊಸಪೇಟೆ, 2008.
  •  ಅಶೋಕ, ಟಿ.ಪಿ., ‘ಶಿವರಾಮ ಕಾರಂತ: ಎರಡು ಅಧ್ಯಯನಗಳು’, ಅಕ್ಷರ ಪ್ರಕಾಶನ, ಹೆಗ್ಗೋಡು, 1992.
  •  ಗಣೇಶ್, ಮೊಗಳ್ಳಿ, ‘ತಕರಾರು’, ಪಲ್ಲವ ಪ್ರಕಾಶನ, ಚೆನ್ನಪಟ್ಟಣ, 2008.