ಶಿವಮೊಗ್ಗದ ಮಿತ್ರರಿಗೊಂದು ವಿವರಣೆ…

ಸ್ನೇಹಿತರೇ,

ನಾನು ವಾರದ ಹಿಂದೆ ಬರೆದಿದ್ದ “ರಾಜಕೀಯ ಅಸಹ್ಯವೇ? ಅದೊಂದು ಅನೈತಿಕ ನಿಲುವು…” ಲೇಖನ ವರ್ತಮಾನ.ಕಾಮ್‌ನ ಶಿವಮೊಗ್ಗದ ಓದುಗರಲ್ಲಿ ಮತ್ತು ಮಿತ್ರರಲ್ಲಿ ಒಂದಷ್ಟು ಮುಜುಗರ ಮತ್ತು ಅಸಮಾಧಾನ ಉಂಟು ಮಾಡಿದೆ. ಅವರಲ್ಲಿ ಯಾರೂ ಆ ಲೇಖನದಲ್ಲಿ ನಾನು ಪ್ರಮುಖವಾಗಿ ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಂಡ ಹಾಗೆ ಕಾಣುವುದಿಲ್ಲ. ಆದರೆ ಹಾಗೆ ಪ್ರಸ್ತಾಪಿಸುವಾಗ ಯಾವ ವ್ಯಕ್ತಿಯನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದೆನೊ ಆ ವ್ಯಕ್ತಿಯ ಬಗ್ಗೆ ತೀವ್ರವಾದ ಆಕ್ಷೇಪಗಳನ್ನು ಇಟ್ಟುಕೊಂಡಿದ್ದಾರೆ. ನಾನು ಆ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಬಲ್ಲಷ್ಟು ಆ ವ್ಯಕ್ತಿ ಒಳ್ಳೆಯವರಲ್ಲ ಎನ್ನುವುದು ಅವರ ಪ್ರಮುಖ ಆಕ್ಷೇಪ. ಅವರ ಆಕ್ಷೇಪಗಳಲ್ಲಿ ಕಾಣಿಸುವ ಪ್ರೀತಿಗೆ ಮತ್ತು ಕಾಳಜಿಗೆ ನಾನು ಕೃತಜ್ಞ.

ಮಿತ್ರರು ಆಕ್ಷೇಪಿಸುತ್ತಿರುವ ಗಾರಾ ಶ್ರೀನಿವಾಸ್ ಎಂಬ ಪತ್ರಕರ್ತ ನನಗೆ ಪರಿಚಯವಿಲ್ಲ. ಅದನ್ನು ಮೂಲ ಲೇಖನದಲ್ಲಿಯೂ ಹೇಳಿದ್ದೇನೆ. ಆ ಹೆಸರನ್ನು ನಾನು ಮೊದಲ ಬಾರಿ ಗಂಭೀರವಾಗಿ ಗಮನಿಸಿದ್ದೇ ಅವರು ಫೇಸ್‌ಬುಕ್‌ನಲ್ಲಿ ತಾವು ಚುನಾವಣೆಗೆ ನಿಲ್ಲುತ್ತಿರುವ ವಿಷಯದ ಬಗ್ಗೆ ಬರೆದ ಪೋಸ್ಟ್‌ನಲ್ಲಿ. Gara ಎನ್ನುವುದನ್ನು ಕನ್ನಡದಲ್ಲಿ “ಗಾರಾ” ಎಂದು ಬರೆಯಬೇಕು ಎಂದು ಗೊತ್ತಾಗಿದ್ದು ಆ ಲೇಖನ ಬರೆಯುವ ಮೊದಲು ಆ ಹೆಸರನ್ನು ಕನ್ನಡದಲ್ಲಿ ಬರೆಯುವುದು ಹೇಗೆ ಎಂದು ಪ್ರಶ್ನಿಸಿಕೊಂಡಾಗ. ಹಾಗಾಗಿ ಅವರ ಫೇಸ್‌ಬುಕ್‌ನಲ್ಲಿದ್ದ ಅವರ ಪತ್ರಿಕೆಯ ಇಮೇಜ್ ಅನ್ನು ದೊಡ್ಡದಾಗಿ ಮಾಡಿ ಕಂಡುಕೊಂಡೆ.

ಇಷ್ಟಕ್ಕೂ ನಾನು ಬರೆದ ಲೇಖನದಲ್ಲಿ ಗಾರಾ ಶ್ರೀನಿವಾಸ್ ಎನ್ನುವವರು ಪ್ರಾಸಂಗಿಕ. ಅದನ್ನು ಓದಿದ ಎಲ್ಲರಿಗೂ ತಿಳಿದಂತೆ ಅದರಲ್ಲಿ ನಾನು ಮುಖ್ಯವಾಗಿ ಚರ್ಚಿಸಬಯಸಿದ್ದು ಅಕ್ಷರಸ್ತರೆಂದು ಹೇಳಿಕೊಳ್ಳುವ ಮಧ್ಯಮವರ್ಗದ ಮನಸ್ಥಿತಿಯ ಬಗ್ಗೆ. ರಾಜಕೀಯ ಎಂದಾಕ್ಷಣ ಅದನ್ನು ಕೀಳಾಗಿ ಕಾಣುತ್ತ ತಮ್ಮ ನಾಗರೀಕ ಜವಾಬ್ದಾರಿಗಳನ್ನು ಕೀಳಾಗಿ ಕಾಣುವವರ ಬಗ್ಗೆ. ರಾಜಕೀಯದಲ್ಲಿ ಇರುವವರು ಮತ್ತು ರಾಜಕೀಯಕ್ಕೆ ಬರುವವರೆಲ್ಲರೂ ದುಷ್ಟರೂ ಭ್ರಷ್ಟರೂ ಮತ್ತು ಅವರ ಕೆಟ್ಟತನದಲ್ಲಿ ತಮ್ಮದೇನೂ ಪಾಲು ಇಲ್ಲ ಎನ್ನುವ ಒಂದು ವರ್ಗದ ಜನರ ಅಜ್ಞಾನ ಮತ್ತು ಅಹಂಕಾರದ ಬಗ್ಗೆ. ಹಾಗಾಗಿ ಗಾರಾರಾಗಲಿ, ಅವರಿಗೆ ಪ್ರತಿಕ್ರಿಯಿಸಿದ ಮಹಿಳೆಯಾಗಲಿ ಅಲ್ಲಿ ಗೌಣ. ಹಾಗಾಗಿಯೇ ನಾನು ಆ ಮಹಿಳಾಲೇಖಕರ ಹೆಸರನ್ನೂ ತೆಗೆದುಕೊಳ್ಳಲಿಲ್ಲ. ಅವರಿಬ್ಬರೂ ಅಲ್ಲಿ ನಾನು ಹೇಳಬೇಕೆಂದುಕೊಂಡ ವಿಚಾರಕ್ಕೆ ಕೇವಲ ಪ್ರಾಸಂಗಿಕ; purely incidental.

ಮತ್ತು ಇದೆಲ್ಲದರ ಬಗ್ಗೆ ಬರೆಯುತ್ತ ನಾನು ಎಲ್ಲಿಯೂ ಗಾರಾ ಶ್ರೀನಿವಾಸರ ಉಮೇದುವಾರಿಕೆಯನ್ನು ಬೆಂಬಲಿಸಿಲ್ಲ ಎನ್ನುವುದನ್ನು ಮಿತ್ರರು ಗಮನಿಸಬೇಕು. ಮೊದಲಿಗೆ ಗಾರಾ ಶ್ರೀನಿವಾಸ್ ನನಗೆ ಅಪರಿಚಿತರು. ಅವರ ಬಗ್ಗೆ ಇನ್ನಷ್ಟು ತಿಳಿದುಕೊಂಡು ಬರೆಯೋಣ ಎನ್ನಲು ಅವರು ನಾನು ಮತ ಹಾಕುವ ಕ್ಷೇತ್ರದಲ್ಲಿಲ್ಲ. ಆ ವ್ಯಕ್ತಿ ಮತ್ತು ಅವರ ಅರ್ಹತೆ, ಪ್ರಾಮಾಣಿಕತೆಯ ಬಗ್ಗೆ ತಿಳಿದುಕೊಳ್ಳುವುದು ಆ ಕ್ಷೇತ್ರದ ಮತದಾರರ ಕರ್ತವ್ಯ. ಹಾಗಾಗಿಯೇ, ನಾನು ಎಲ್ಲಿಯೂ ಅವರ ಉಮೇದುವಾರಿಕೆಯನ್ನು ಬೆಂಬಲಿಸಲು ಹೋಗಿಲ್ಲ. ಬದಲಿಗೆ ಗಾರಾ ಶ್ರೀನಿವಾಸರಿಗೇ ಒಂದಷ್ಟು ಪ್ರಶ್ನೆಗಳನ್ನು ಇಟ್ಟಿದ್ದೆ ಮತ್ತು ಅವು ಬಹಳ ತೀಕ್ಷ್ಣವಾಗೂ ಇದ್ದವು. ಆ ಲೇಖನದ ಕೊನೆಯ ಭಾಗಗಳನ್ನು ಗಮನಿಸಿದರೆ ಅದು ಗೊತ್ತಾಗುತ್ತದೆ.

ಆದರೆ, ನನ್ನ ಮೇಲಿನ ಪ್ರೀತಿಯಿಂದ ಶಿವಮೊಗ್ಗದ ಸ್ನೇಹಿತರು ಆ ಲೇಖನದ ಬಗ್ಗೆ ಗಂಭೀರವಾಗಿ ಮಾತನಾಡಿಕೊಂಡಿದ್ದಾರೆ ಮತ್ತು ಚರ್ಚಿಸಿದ್ದಾರೆ. ನನಗೂ ಫೋನ್ ಮಾಡಿದ್ಡಾರೆ ಮತ್ತು ಮುಖಪರಿಚಯ ಇಲ್ಲದ ಸ್ನೇಹಿತರು ಸಮಾನಸ್ನೇಹಿತರಿಂದ ಫೋನ್ ಮಾಡಿಸಿದ್ದಾರೆ. ಗಾರಾ ಶ್ರೀನಿವಾಸರು ಪತ್ರಿಕೋದ್ಯಮದ ಘನತೆಯನ್ನು ಎತ್ತಿಹಿಡಿಯುವ ಕೆಲಸವೇನೂ ಮಾಡುತ್ತಿಲ್ಲ ಮತ್ತು ಈಗಾಗಲೆ ಶಿವಮೊಗ್ಗದ ಪತ್ರಕರ್ತರೇ ಅವರ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದಾರೆ ಎಂದು ಶಿವಮೊಗ್ಗದ ಮಿತ್ರರು ಹೇಳುತ್ತಾರೆ. ಆ ಪತ್ರಕರ್ತ ತನ್ನ ಪತ್ರಿಕೆಯನ್ನು ತನ್ನ ಸ್ವಾರ್ಥ ಸಾಧನೆಗೆ ಮತ್ತು ಹಣವಸೂಲಿಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಅವರ ಆರೋಪ. ಸ್ನೇಹಿತರು ಆರೋಪಿಸಿದ ಎಲ್ಲವನ್ನೂ ಇಲ್ಲಿ ನಾನು ಬರೆಯಲು ಹೋಗುತ್ತಿಲ್ಲ. ಅದನ್ನೇ ಶಿವಮೊಗ್ಗದ ಮಿತ್ರರು ಬರೆದು ಕಳುಹಿಸಿದರೆ ಉತ್ತಮ. ಪತ್ರಕರ್ತರು ಯಾವಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಪತ್ರಿಕೋದ್ಯಮದ ಇನ್ನೊಂದು ಮುಖ ಎಷ್ಟು ಕೊಳಕಾಗಿದೆ ಎನ್ನುವುದಕ್ಕೆ ಅದು ಉದಾಹರಣೆಯೂ ಆಗಬಹುದು. ಅದನ್ನು ಶಿವಮೊಗ್ಗದ ಮಿತ್ರರೇ ಮಾಡಬೇಕೆ ಹೊರತು ನಾನು ಮಾಡಲಾಗುವುದಿಲ್ಲ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನೂ ಅನೇಕ ತರಹೇವಾರಿ ಜನ ಅಖಾಡಕ್ಕೆ ಇಳಿಯುತ್ತಾರೆ. ಬಹಳಷ್ಟು ಜನರಿಗೆ ಅದು ನಿಜವಾಗಲೂ ಅಖಾಡವೇ. ತಮ್ಮ ಐಡೆಂಟಿಟಿ ತೋರಿಸಿಕೊಳ್ಳಲು ಸಿಗುವ ಒಂದು ಅವಕಾಶ. ಅದರ ಜೊತೆಗೆ ಈಗಿನ ಭಾಷೆಯಲ್ಲಿ ಹೇಳುವುದಾದರೆ “ಡೀಲ್”ಗಳೂ ಸೇರಿಕೊಂಡಿರುತ್ತವೆ. ತಮ್ಮ ಪ್ರಮುಖ ಎದುರಾಳಿಗೆ ವಿರುದ್ಧವಾಗಿ ಆತನ ಎದುರಾಳಿಗಳು ಆತನದೇ ಹೆಸರಿನ ಇತರೆ ಡಮ್ಮಿಗಳನ್ನು ತಾವೇ ದುಡ್ಡುಕೊಟ್ಟು ನಿಲ್ಲಿಸುತ್ತಾರೆ. ಇನ್ನೂ ಏನೇನೋ ನಾಟಕಗಳು, ಅನೈತಿಕ ಕೆಲಸಗಳೂ ನಡೆಯುತ್ತವೆ. ಪ್ರಜಾಪ್ರಭುತ್ವ ಮತ್ತು ರಾಜಕಾರಣದ ಬಗ್ಗೆ ತಿಳುವಳಿಕೆ, ಬದ್ಧತೆ, ಅರ್ಹತೆ, ಮತ್ತು ಪ್ರಾಮಾಣಿಕತೆ ಇರುವ ಅಭ್ಯರ್ಥಿಗಳು ಕಮ್ಮಿ ಇರುತ್ತಾರೆ. ಹಾಗೆಂದು, ಎಲ್ಲರೂ ಭ್ರಷ್ಟರೂ ದುಷ್ಟರೂ ಎಂದುಕೊಂಡು ಸಮಾಜಕ್ಕೆ ನ್ಯಾಯಯುತ ನಾಯಕತ್ವ ಕೊಡಬಲ್ಲ ಅರ್ಹರನ್ನೂ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇತರರನ್ನೂ ನೋಡುವಂತೆ ಅವರನ್ನೂ ನೋಡಿಬಿಟ್ಟರೆ ಅದು ಅಕ್ಷಮ್ಯ. ತಮಗೆ ತಾವೆ ಮಾಡಿಕೊಳ್ಳುವ ಅನ್ಯಾಯ. ಜನ ಇಂತಹುದರ ಬಗ್ಗೆ ಎಚ್ಚರದಿಂದಿರಬೇಕು. ಅನರ್ಹರ ಅಯೋಗ್ಯರ ಬಗ್ಗೆ ಕಠಿಣವಾಗಿದ್ದಷ್ಟೇ ಅರ್ಹರು ಮತ್ತು ಪ್ರಾಮಾಣಿಕರ ಬಗ್ಗೆ ವೈಚಾರಿಕವಾಗಿ ಯೋಚಿಸಿ ಸಾಧ್ಯವಾದರೆ ಅವರ ಜೊತೆನಿಲ್ಲಬೇಕು. ಅದು ಪ್ರಜಾಪ್ರಭುತ್ವದಲ್ಲಿ ನಾವು ನಿಭಾಯಿಸಬೇಕಾದ ನಾಗರೀಕ ಕರ್ತವ್ಯಗಳಲ್ಲಿ ಒಂದು.

ತಮ್ಮದೇ ಊರಿನಲ್ಲಿ ಚುನಾವಣೆಗೆ ನಿಲ್ಲುತ್ತಿರುವ ವ್ಯಕ್ತಿಗಳ “ಜನ್ಮಜಾತಕ” ಬಯಲು ಮಾಡುವ ನಿಟ್ಟಿನಲ್ಲಿ ಶಿವಮೊಗ್ಗದ ಮಿತ್ರರು ಸಕ್ರಿಯರಾಗಿದ್ದಾರೆ. ಮತ್ತು ಆ ಮೂಲಕ ಅವರು ತಮ್ಮ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದಾರೆ. ಹಾಗೆಯೇ, ಉಳಿದ ಅಭ್ಯರ್ಥಿಗಳ ಇತಿಹಾಸ ಮತ್ತು ಅರ್ಹತೆಯನ್ನೂ ಅವರು ಜನರ ಮುಂದಿಡಲಿ ಎಂದು ಬಯಸುತ್ತೇನೆ. ಮತ್ತು ಅರ್ಹ ಅಭ್ಯರ್ಥಿಗಳನ್ನು–ಅವರು ಗೆಲ್ಲುವ ಅವಕಾಶ ಇಲ್ಲದಿದ್ದರೂ–ಗುರುತಿಸುವ ಕೆಲಸವನ್ನೂ ಎಲ್ಲಾ ಕಡೆಯ ಪ್ರಾಮಾಣಿಕ ಪತ್ರಕರ್ತ ಮಿತ್ರರು ಮಾಡಲಿ ಎಂದು ಆಶಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

2 thoughts on “ಶಿವಮೊಗ್ಗದ ಮಿತ್ರರಿಗೊಂದು ವಿವರಣೆ…

  1. Dr.kiran.m gajanur

    ಗೆಳೆಯ ರವಿ ಇಂದು ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕೆಹಲವಾರು ವ್ಯಾಖ್ಯಾನಗಳಿವೆ. ಸರಳವಾಗಿ ಹೇಳುವುದಾದರೆ ಪ್ರಭುತ್ವದ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಎಂದುವಿವರಿಸಿಕೊಳ್ಳಬಹುದು. ಪ್ರಖ್ಯಾತ ರಾಜಕೀಯಶಾಸ್ತ್ರಜ್ಞ ಡೇವಿಡ್ ಈಸ್ಟನ್ ರಾಜಕೀಯವನ್ನು ಮೌಲ್ಯಗಳ ಅಧಿಕಾರಯುತ ವಿತರಣೆಎಂದು ವಿಶ್ಲೇಷಿಸಿದ್ದಾನೆ. ಅಂದರೆ ರಾಜಕಾರಣ ಎಂಬುದು ಪ್ರಭುತ್ವದ ಕಾರ್ಯಚಟುವಟಿಕೆ ಅದರಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಮುಂತಾದವುಗಳ ಕುರಿತಂತೆ ತಿಳಿಸುವುದಾಗಿದೆ. ಆದರೆ ಜನಸಾಮನ್ಯರ ಸಾಮಾನ್ಯ ತಿಳುವಳಿಕೆಯಲ್ಲಿ ರಾಜಕೀಯ ಎಂದರೆ ಯಾವ ಮಾರ್ಗವನ್ನಾದರೂ ಹಿಡಿದು ಸಾರ್ವಜನಿಕ ಅಧಿಕಾರವನ್ನು ಪಡೆಯುವ ತಂತ್ರಗಾರಿಕೆ ಎನ್ನುವ ನೆಗೆಟಿವ್ ಆದಂತಹ ಭಾವನೆಪ್ರಬಲವಾಗಿದೆ. ಪ್ರಸ್ತುತ ಬಹುಪಾಲು ಚಿಂತರಕರು ಮತ್ತು ಮಾಧ್ಯಮಗಳು ಸಾಮಾನ್ಯ ಜನರ ಅರ್ಥದಲ್ಲಿನ ನೆಗೆಟಿವ್ ಮಾದರಿಯ ರಾಜಕಾರಣವನ್ನೇಸಮಸ್ಯೆಯನ್ನಾಗಿ ಗ್ರಹಿಸುತ್ತಾರೆ. ಇದರಿಂದಲೇ ಇಂದು ಸಮಾಜದ ಬಹು ದೊಡ್ಡ ಕಲಿತ ವರ್ಗ ರಾಜಕೀಯದ ಕುರಿತು ಋಣಾತ್ಮಕ ಭಾವನೆ ತೆಳೆದಿದೆ ಮತ್ತು ಇ ವಿದ್ಯಮಾನ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ನಿಜಕ್ಕೂ ಅಪಾಯಕಾರಿ. ಸಾಮಾನ್ಯ ಅದರಲ್ಲಿಯೂ ಕಲಿತ ಜನರ ಇ ಮನೋಭಾವನೆಯೇ ಇಂದು ಪೊಳ್ಳು ಸಾಮಾಜಿಕ ಚಳುವಳಿಯ ಗುಂಪುಗಳ ರಾಜಕಾರಣಕ್ಕೆ ಅಡಿಪಾಯವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಲ್ಲಿ ಒಬ್ಬ ಪ್ರಜೆ ನಿರ್ವಹಿಸಬೇಕಾದ ಕೆಲಸವನ್ನು ಇಂದು ಸಾಮಾಜಿಕ ಗುಂಪುಗಳ ಹೆಸರಿನಲ್ಲಿ ಕೆಲವು ಸಂಘಟನೆಗಳು ನಿರ್ವಹಿಸಲು ಹೊರಟಿವೆ ಅಲ್ಲದೆ ಇನ್ನೊಂದು ಅರ್ಥದಲ್ಲಿ ಅ ಗುಂಪುಗಳು ಸಹ ನೆಗೆಟಿವ್ ಅರ್ಥದ ರಾಜಕಾರಣವನ್ನೇ ಮಾಡುತ್ತಿವೆ ಇದಕ್ಕೆ ಅಣ್ಣ ಚಳುವಳಿ ಒಂದು ಒಳ್ಳೆಯ ಉದಾಹರಣೆ ಇದು ನಿಜವಾದ ಅಪಾಯ ದೆಹ್ಸದ ಯುವಜನತೆ ಕಲಿತ ವರ್ಗ ಇ ವಿದ್ಯಮಾನದ ವಿರುದ್ದ ತಮ್ಮ ನೈಜ ರಾಜಕೀಯ ಹಕ್ಕೊತ್ತಾಯ ಮಾಡುವ ಸಮಯ ಇದಾಗಿದೆ ಆದರೆ ನಮ್ಮ ಸುತ್ತಲಿನ ಕಲಿತ ವರ್ಗ ಬೇರೇನೋ ಕೆಲಸಗಳಲ್ಲಿ ಬಿಜಿಯಗಿದೆ

    Reply

Leave a Reply

Your email address will not be published. Required fields are marked *