ವ್ಯಂಗ್ಯಚಿತ್ರ ಮತ್ತು ಇತಿಹಾಸದ ವ್ಯಂಗ್ಯ!


-ಬಿ. ಶ್ರೀಪಾದ ಭಟ್


 

ಈ ನರಕಕ್ಕೆ ಕೊನೆಯೇ ಇಲ್ಲವೆನಿಸುತ್ತದೆ. 1949ರಲ್ಲಿ ವ್ಯಂಗಚಿತ್ರಕಾರ ಶಂಕರ ಅವರು ರಚಿಸಿದ ಅಂಬೇಡ್ಕರ್ ಅವರು ಬಸವನ ಹುಳುವಿನ ಮೇಲೆ ಕುಳಿತ ಹಾಗು ನೆಹರೂ ಅವರು ಅದನ್ನು ಚಾಟಿಯಿಂದ ಬೀಸುತ್ತಿರುವ ವ್ಯಂಗ್ಯಚಿತ್ರವನ್ನು NCERT ಪಠ್ಯದಲ್ಲಿ ಮುದ್ರಿಸಿರುವುದರ ಬಗೆಗೆ ಇಂದು ವಿವಾದ ಸೃಷ್ಟಿಯಾಗಿದೆ.

ಇದನ್ನು ದಲಿತರು ತಮ್ಮ ಆತ್ಮಾಭಿಮಾನದ ಪ್ರಶ್ನೆಯನ್ನಾಗಿ ಪರಿಗಣಿಸಿ 63 ವರ್ಷಗಳ ನಂತರ ಈಗ ಪ್ರತಿಭಟಿಸಿದ್ದರೆ ಬಹುಪಾಲು ಮಾಧ್ಯಮಗಳು ಮತ್ತು ಅನೇಕ ಪ್ರಜ್ನಾವಂತರು ಇದನ್ನು ಅಂಬೇಡ್ಕರ್ ಅವರ ಮೇಲಿನ ಕುರುಡು ಅಭಿಮಾನದ ಪ್ರತೀಕವೆಂದೂ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ಪ್ರತಿಭಟಿಸುವುದರ ಅಗತ್ಯತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಇವರಿಗೇಕೆ ಈ ದುರಂತಗಳು ಅರ್ಥವಾಗುತ್ತಿಲ್ಲ? ಇಂದಿನ ಜಾಗತೀಕರಣದ ದಿನಗಳಲ್ಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಗೊಂದಲಗಳಲ್ಲಿ, ತಿರಸ್ಕಾರದಲ್ಲಿ ಸೋತಂತಹ ದಿನಗಳಲ್ಲಿ, ಪ್ರತಿಯೊಂದು ಪ್ರಬಲ ಜಾತಿಗಳೂ ಒಂದಾಗಿ ಸಬಲೀಕರಣಗೊಳ್ಳುತ್ತಿದ್ದರೆ ಶೋಷಿತ ಸಮುದಾಯಗಳು ತಮ್ಮೊಳಗಿನ ಅಸಮಾನತೆಯಿಂದಾಗಿ ಛಿದ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಉತ್ತರ ಪ್ರದೇಶದಲ್ಲಿ ಮಾಯವತಿ ಅಧಿಕಾರದಿಂದ ಕೆಳಗಿಳಿದ ಕೇವಲ ಎರಡು ವಾರಗಳಲ್ಲಿ ದಲಿತರ ಮೇಲಿನ ಅತ್ಯಾಚಾರ ಹಾಗೂ ಹಲ್ಲೆಗಳು ಪುನರಾರಂಭಗೊಂಡ ವಿಷಮತೆಯ ಘಳಿಗೆಯಲ್ಲಿ ಅಂದಕಾಲತ್ತಿನ ಈ ತರಹದ ವ್ಯಂಗಚಿತ್ರಗಳು ಈ ಕಾಲದಲ್ಲಿ ದಲಿತರ ತಲ್ಲಣಗಳನ್ನು ಇನ್ನಷ್ಟು ಗೋಜಲುಗೊಳಿಸುತ್ತವೆ ಎಂಬ ಕಾರಣಕ್ಕೆ ಇಲ್ಲಿನ ಪ್ರತಿಭಟನೆಯ ನಿಜವಾದ ಆತಂಕವಿರುವುದು. ಅದರ ಹೊರತಾಗಿ ಕೇವಲ ಅಭಿಮಾನದ ಉದ್ವೇಗದಿಂದ ಮಾತ್ರವಲ್ಲ. ಇದಕ್ಕಿಂತಲೂ ಮೊದಲು ಮೊನ್ನೆ ಯವನಿಕದಲ್ಲಿ ನಡೆದ ಸಂಕಿರಣದಲ್ಲಿ ಭಾಗವಹಿಸಿ ಅಲ್ಲಿ ದಲಿತ ಚಿಂತಕ ಕಂಚಾಲಯ್ಯ ಅವರ ಮಾತುಗಳನ್ನು ಕೇಳಿದಾಗ, ಅತಿಯಾದ, ಕಳೆದ 20 ವರ್ಷಗಳಿಂದ ಕೊಂಚವೂ ಭಿನ್ನ ಜಾಡು ಹಿಡಿಯದ ಅವರ ರಾಡಿಕಲ್ ಚಿಂತನೆಗಳು ನಿಜಕ್ಕೂ ದಲಿತರಿಗಾಗಲಿ, ಹಿಂದುಳಿದ ಜಾತಿಗಳಿಗಾಗಲಿ ಯಾವುದೇ ಹೊಸ ಮಾರ್ಗಗಳನ್ನು, ಗುರಿಗಳನ್ನು ತೆರೆದಿಡುವುದಿಲ್ಲ ಎಂದು ನನಗೂ ಹಾಗು ನನ್ನ ಗೆಳೆಯರಿಗೆ ಮನವರಿಕೆಯಾಯಿತು.

1930ರ ದಶಕದಲ್ಲಿ ಅಂತರ್ಜಾತೀಯ ವಿವಾಹಗಳು ಜಾತೀಯತೆಯನ್ನು ಹೆಚ್ಚೂ ಕಡಿಮೆ ನಾಶಮಾಡಬಲ್ಲವು ಎಂದು ನಂಬಿದ್ದ ಅಂಬೇಡ್ಕರ್ ಅವರು 1950ರ ದಶಕದ ವೇಳೆಗೆ ಇಂಡಿಯಾದ ಒಟ್ಟು ದಮನಿತ ಗುಣದ ಬಗೆಗೆ ತೀವ್ರ ನಿರಾಸೆ ಹೊಂದಿದ್ದರು. ಜಾತಿ ವಿನಾಶದ ಆಶಯವನ್ನೇ ಬಿಟ್ಟುಕೊಟ್ಟರು. ಇಲ್ಲಿ ಮೊದಲು ತುಳಿಯುವವರು ಬದಲಾಗಬೇಕು ಎಂದು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ಅವರಿಗೆ 50ರ ದಶಕದ ವೇಳೆಗೆ ಅದರ ಸಾಧ್ಯತೆಗಳೇ ಇಲ್ಲವೆನ್ನುವುದು ಮನವರಿಕೆಯಾಗಿ ಈ ಹಿಂದೂ ಧರ್ಮವೇ ಒಂದು ದುಷ್ಟ ಕೂಪ ಎಂದು ಕರೆದು ಬೌದ್ಧ ಧರ್ಮದ ಕಡೆಗೆ ನಡೆದರು. ವೈದಿಕ ಧರ್ಮವನ್ನು ಖಂಡಿಸಿದ ಬೌದ್ಧ ಧರ್ಮದ ಚಿಂತನೆಗಳೇ ಅಂಬೇಡ್ಕರ ಅವರಿಗೆ ದಲಿತರಿಗೆ ಹಿಂದೂ ಧರ್ಮದ ಶೋಷಣೆಯಿಂದ ಬಿಡುಗಡೆಗೆ ಹೊಸ ಬೆಳಕು ಗೋಚರಿಸಿತು. ಅವಮಾನದ ಸಂಸ್ಕೃತಿಯನ್ನೇ ಹಾಸಿ ಹೊದ್ದಿರುವ ದಲಿತ ಸಮುದಾಯಕ್ಕೆ  ಅವಮಾನ, ಆತ್ಮಾವಹೇಳನ, ದ್ವೇಷ, ಮೇಲು ಜಾತಿಗಳ ನಿರಂತರ ಅತ್ಯಾಚಾರ ಇವೆಲ್ಲ ವಿಷಪ್ರವೃತ್ತಿಗಳಿಂದ ದಲಿತರಿಗೆ ಬಿಡುಗಡೆ ಕೊಡಿಸಿ ಹೊಸ ಸಂಸ್ಕೃತಿ ಹಾಗೂ ಹೊಸ ಮೌಲ್ಯಗಳನ್ನು ಪಡೆದುಕೊಳ್ಳುವ ಮಾರ್ಗಗಳ  ಹುಡುಕಾಟದಲ್ಲಿ ತೊಡಗಿದ್ದ ಅಂಬೇಡ್ಕರ ಅವರಿಗೆ ಮಾಕ್ರ್ಸವಾದದ ಅತಿ ಬೌತಿಕವಾದ ಒಪ್ಪಿ ಕೊಳ್ಳಲು ಸಾಧ್ಯವೇ ಆಗಲಿಲ್ಲ. ಈ ಎಡಪಂಥೀಯ ನೆಲಗಟ್ಟಿನ ವರ್ಗ ಸಂಘರ್ಷದ ಮಾದರಿ ಎಂದೂ ತಳಸಮುದಾಯಗಳನ್ನು ಒಳಗೊಳ್ಳುವುದೇ ಇಲ್ಲ ಎಂದು ಅಂಬೇಡ್ಕರ್ ಅವರಿಗೆ ಸಂಪೂರ್ಣ ಮನದಟ್ಟಾಗಿತ್ತು. ಈ ಮಾಕ್ರ್ಸವಾದದ ಆರ್ಥಿಕ ಮಾರ್ಗಗಳು ಕಡೆಗೂ ಸೃಷ್ಟಿಸುವುದು ಕೊಳ್ಳುಬಾಕುತನವನ್ನು ಮತ್ತು ಜೊತೆಜೊತೆಗೇ ಅಪ್ರಜ್ನಾಪೂರಕವಾಗಿ ಜಾತೀಯತೆಯನ್ನು ಮಾತ್ರ ಎಂಬುದನ್ನು ಮನನ ಮಾಡಿಕೊಂಡ ಅಂಬೇಡ್ಕರ್ ದಲಿತರಿಗೆ ದೊಡ್ಡದಾದ ಪಾರಂಪರಿಕ ನೆಲೆಯನ್ನು, ಭದ್ರ ಬುನಾದಿಯನ್ನು, ಶೋಷಣೆರಹಿತ ವ್ಯವಸ್ಥೆಯನ್ನು, ಶಾಂತಿಯ ತೋಟವನ್ನು ಕಟ್ಟಿಕೊಡುವ ನೆಲೆಯಾಗಿಯೇ ಬೌದ್ಧ ಧರ್ಮದ ಕಡೆಗೆ ನಡೆದರು.

ಚಿಂತಕ ದಿವಂಗತ ಡಿ.ಆರ.ನಾಗರಾಜ ಪ್ರಕಾರ ಏಷ್ಯಾ ಖಂಡದ 20ನೇ ಶತಮಾನದ ಬೌದ್ಧ ಧರ್ಮದಲ್ಲಿ ಇಬ್ಬರು ತುಂಬ ಮುಖ್ಯರು. ಥಾಯ್ಲೆಂಡಿನ ಬುದ್ಧದಾಸ ಭಿಕ್ಕು ಮತ್ತು ಭಾರತದ ಬಾಬಾ ಸಾಹೇಬ ಅಂಬೇಡ್ಕರ್. ಅವರಿಬ್ಬರೂ ನಿಜವಾದ ಬೌದ್ಧ ಬಿಕ್ಷುಗಳು. ಇವರಿಬ್ಬರೂ 20ನೇ ಶತಮಾನದ ಸಮಾಜವದಿ ಮೌಲ್ಯಗಳು ಮತ್ತು ಬೌದ್ಧ ಧರ್ಮದ ನಡುವೆ ಅತ್ಯಂತ ಅರ್ಥಪೂರ್ಣ ಸಂವಾದ ನಡೆಸಿದರು. ಅಂಬೇಡ್ಕರರ ಉರಿಯುವ ಛಲ ಹೆಚ್ಚು ಆಳವಾದ ನೆಲೆಗೆ ತಲುಪುವ ಹಠವುಳ್ಳದ್ದು. ಭಾರತೀಯ ನಾಗರೀಕತೆಯ ಮೂಲಕ್ಕೆ ತಮ್ಮ ಹೋರಾಟವನ್ನು ಒಯ್ಯುವ ಹಠ ಅಂಬೇಡ್ಕರರದು. ಹೀಗಾಗಿ ಅಸ್ಪೃಶ್ಯತೆಯ ಚರಿತ್ರೆ ಮತ್ತು ಬೌದ್ಧ ಧರ್ಮದ ನಡುವೆ ಹೊಸ ರೀತಿಯ ಸಂಬಂಧಗಳನ್ನು ಅಂಬೇಡ್ಕರ ಕಂಡರು. ಅಸ್ಪೃಶ್ಯ ಸಂಸ್ಕೃತಿಹೀನನಲ್ಲ. ಬದಲಾಗಿ ದೀರ್ಘವಾದ, ಉದಾತ್ತವಾದ ಹಿನ್ನೆಲೆ ಉಳ್ಳವನು ಎಂದು ವ್ಯಾಖ್ಯಾನಿಸುವ ಮೂಲಕ ವರ್ತಮಾನದ ಹೋರಾಟಕ್ಕೆ ಹೊಸ ನೆಲೆ ಕೊಡಲು ಪ್ರಯತ್ನಿಸಿದರು.

ಅಂಬೇಡ್ಕರ ಅವರ ಮೂಲ ಆಶಯವಾಗಿದ್ದ ದಲಿತರಿಗೆ ತಮ್ಮ ಹಕ್ಕುಗಳ ಪರವಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೋರಾಟಕ್ಕೆ ರಾಜಕೀಯ ಆಯಾಮವೂ ಹೆಗಲುಕೊಡುತ್ತಾ ಸಹಭಾಗಿತ್ವ ನೀಡಲೇಬೇಕೆನ್ನುವ ಮಹಾತ್ವಾಕಾಂಕ್ಷೆಯಿಂದ ಕಟ್ಟಿದ ಪಕ್ಷವು ಅವರ ನಿಧನದ ನಂತರ ಅಂಬೇಡ್ಕರ ಅವರ ಉತ್ತರದಾಯತ್ವವನ್ನು ದೀರ್ಘ ಕಾಲವಧಿಯವರೆಗೆ ನಿಭಾಯಿಸಲು ಸೋತಿತು. ದಲಿತರಿಗೆ ಸಾಮಾಜಿಕ ಹೋರಾಟವನ್ನು ಬಳಸಿಕೊಂಡು ರಾಜಕೀಯ ಅಧಿಕಾರ ತಂದುಕೊಡುವ ಆ ಮೂಲಕ ಅಸ್ಪೃಶ್ಯ ಜಾತಿಗಳು ಕಾಲಕ್ರಮೇಣ ವರ್ಗಗಳಾಗಿ ಬದಲಾಗಬೇಕೆಂಬ ಅಂಬೇಡ್ಕರರ ಮಹಾತ್ವಾಕಾಂಕ್ಷೆಯ ಆಶಯಗಳನ್ನು ಬೇರು ಮಟ್ಟದಲ್ಲಿ ನೀರೆರೆದು ಬೆಳೆಸಲು ಬೇಕಾದ ಅಪಾರ ಸಹನೆ, ಬದ್ಧತೆ ಹಾಗೂ ಪರಸ್ಪರ ತಿಳುವಳಿಕೆಗಳ ಕೊರತೆಯಿಂದ ಈ ಪಕ್ಷವು ಸೊರಗತೊಡಗಿತು. ಇಲ್ಲಿನ ಹಳೆಯ ಮಂದಿ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಉತ್ಸುಕರಾಗಿದ್ದರೆ, ಹೊಸ ತರುಣ ಜನಾಂಗ ನಗರ ಕೇಂದ್ರಿತ ಚಳುವಳಿಯನ್ನು ನಡೆಸಲು ಹೊರಟಿದ್ದರು. ಈ ತಲೆಮಾರಿನ ನಡುವಿನ ಭಿನ್ನತೆ 1962ರಲ್ಲಿ ಖಕ ಪಕ್ಷದಲ್ಲಿ ಬಿರುಕನ್ನು ಹುಟ್ಟಿ ಹಾಕಿತು. ಈ ವಿಭಜನೆಯ ನಂತರ ನಗರ ಕೇಂದ್ರಿತ ಹೊಸ ತಲೆಮಾರಿನ ತರುಣರ ಗುಂಪು ಹೆಚ್ಚು ಪ್ರಭಾವಶಾಲಿಯಾಗಿ ಹೊಸ ಹುರುಪಿನಿಂದ ದಲಿತ ಚಳುವಳಿಗಳನ್ನು ರೂಪಿಸತೊಡಗಿತು. ಚುನಾವಣಾ ರಾಜಕೀಯದಲ್ಲೂ ಭಾಗವಹಿಸಿ ವಿದಾನಸಭಾ ಚುನಾವಣೆಗಳಲ್ಲಿ ಕೆಲವು ಸ್ಥಾನಗಳನ್ನೂ ಸಹ ಪಡೆಯುವಲ್ಲಿ ಯಶಸ್ವಿಯಾಯಿತು. ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಆ ಕಾಲದಲ್ಲಿ ಉತ್ರರ ಪ್ರದೇಶಕ್ಕೂ ಖಕ ಪಕ್ಷ ತನ್ನ ಪ್ರಭಾವವನ್ನು ವ್ಯಾಪಿಸಿಕೊಂಡಿತ್ತು. ಖಕ ಪಕ್ಷದ ಸೀಮಿತ ಪ್ರಭಾವಕ್ಕೆ ಉತ್ತರವೇನೋ ಎಂಬಂತೆ ಅಮೇರಿಕಾದ ಬ್ಲಾಕ ಪ್ಯಾಂಥರ್ಸನ ಸ್ಪೂರ್ಥಿಯಿಂದಾಗಿ 1970ರಲ್ಲಿ ಮಹಾರಾಷ್ಟದಲ್ಲಿ ದಲಿತ ಪ್ಯಾಂಥರ್ಸ ಎನ್ನುವ ಸಂಘಟನೆ ಹುಟ್ಟಿಕೊಂಡಿತು. ಆಗ ಜೆ.ಪಿ. ಚಳುವಳಿ ತನ್ನ ಬಿರುಸನ್ನು, ವ್ಯಾಪ್ತಿಯನ್ನು ದೇಶದಾದ್ಯಾಂತ ವ್ಯಾಪಿಸಿಕೊಳ್ಳುತ್ತಿದ್ದಂತಹ ಕಾಲ. ಭ್ರಷ್ಟಾಚಾರದ ವಿರುದ್ದ ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟಿದ್ದ ಜೆ.ಪಿ.ಯವರು ಆ ಕಾಲಕ್ಕೆ ಅತ್ಯಂತ ಪ್ರಭಾವಿಶಾಲಿ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಪ್ರಬಲ ಸವಾಲನ್ನು ಒಡ್ಡಿದ್ದರು. ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದ, ಬಹುಪಾಲು ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗಗಳನ್ನ ಆಕರ್ಷಿಸಿದ್ದ ಜೆ.ಪಿ ಯವರ ನವನಿರ್ಮಾಣ ಚಳುವಳಿಗೆ, ನವ ಅಂಬೇಡ್ಕರವಾದಿಗಳ ತರುಣರ ಗುಂಪಾದ ದಲಿತ ಪ್ಯಾಂಥರ್ಸ ತಮ್ಮ ಸಹಯೋಗದ ಕೊಂಡಿಯನ್ನು ಜೋಡಿಸಿಕೊಳ್ಳಲು ವಿಫಲವಾಯಿತು.

ಈ ಜಾತ್ಯಾತೀತ ಪ್ರಗತಿಪರ ಗುಂಪು ಅತ್ತ ಎಡಪಂಥೀಯರೊಂದಿಗೂ ಗುರುತಿಸಿಕೊಳ್ಳದೆ, ಇತ್ತ ನವ ನಿರ್ಮಾಣದ ಜೆ.ಪಿ.ಚಳುವಳಿಯೊಂದಿಗೂ ಗುರತಿಸಿಕೊಳ್ಳದೆ ತಠಸ್ಥವಾಗುಳಿದಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಅತ್ಯಂತ ಪ್ರಖರ ವೈಚಾರಿಕ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜ ಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್ಸ ಸಂಘಟನೆಯನ್ನೂ ಸಹ ಬಿಡಲಿಲ್ಲ. ರಾಜ ಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ನೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾಕ್ರ್ಸವಾದದ ನೆಲೆಗಟ್ಟಿನಲ್ಲಿ,  ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ.

ಇಲ್ಲಿ ಢಸಾಳರು ಮಾಕ್ರ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು. ಇದು ಅಂಬೇಡ್ಕರವಾದದ ಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು. ಕಡೆಗೆ ಢಸಾಳರು 1977ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್ಸ ಇಬ್ಭಾಗವಾಯಿತು. ನಂತರ ಮಹಾರಾಷ್ಟ್ರದಲ್ಲಿನ ದಲಿತ ಚಳುವಳಿಗಳು ಮತ್ತು ಸಂಘಟನೆಗಳು ಸೂಕ್ತವಾದ ರಾಜಕೀಯ ನೆಲೆ ದೊರಕದೆ ಅತಂತ್ರರಾಗಿ ಹೋರಾಟ ನಡೆಸಬೇಕಾಯಿತು. ಇವರ ಹೋರಾಟಕ್ಕೆ ಅಪಾರ ಜನಬೆಂಬಲ ಹಾಗೂ ಜನಪ್ರಿಯತೆ ದೊರಕಿದ್ದರೂ ಒಂದು ಗಟ್ಟಿಯಾದ ಕೇಂದ್ರ, ಸೂಕ್ತವಾದ ರಣನೀತಿ ದೊರೆಯದೆ ಒಂದು ಬಿಡಿಯಾದ ಸಂಘಟನೆಗಳಾಗಿ ಉಳಿದುಕೊಂಡವು. ಕಡೆಗೆ ನಾಮದೇವ ಢಸಾಳರು ಸಿನಿಕರಾಗಿ ಹತಾಶೆಯಿಂದ ಅತ್ಯಂತ ನಿರಾಶೆಯ ಸ್ಥಿತಿಯಲ್ಲಿ, ಏಕಾಂಗಿ ಭಾವದಲ್ಲಿ, ಅಸಹಾಯಕರಾಗಿ 90ರ ದಶಕದಲ್ಲಿ ಶಿವಸೇನೆಯನ್ನು ಸೇರಿದ್ದು ಇಡೀ ಪ್ರಗತಿಪರ ದಲಿತ ಚಳುವಳಿಯ ಒಂದು ದೊಡ್ಡ ಸೋಲಾಗಿತ್ತು. ಅದು ರಾಜ್ಯದ ಎಲ್ಲಾ ಬುದ್ದಿಜೀವಿಗಳ, ಎಡಪಂಥೀಯ ಚಿಂತಕರ ಸೋಲಾಗಿತ್ತು.

ಆದರೆ 70ರ ದಶಕದ ಈ ತಲ್ಲಣಗಳು ಹಾಗೂ ದಲಿತ ಸಂಘಟನೆಗಳ ವಿಘಟನೆಗಳ ನಡುವೆಯೇ ಮರಾಠಿ ದಲಿತ ಲೇಖಕರು ಅತ್ಯಂತ ದಿಟ್ಟವಾಗಿ, ಸ್ಪಷ್ಟವಾಗಿ ಬರೆಯತೊಡಗಿದರು. ಅಂಬೇಡ್ಕರವಾದವನ್ನು ತಮ್ಮೊಳಗೆ ಬೇರು ಮಟ್ಟದಲ್ಲಿ ಬಿಟ್ಟುಕೊಂಡು ಇದರ ಸ್ಫೂರ್ತಿಯಿಂದ 70 ಹಾಗು 80ರ ದಶಕಗಳಲ್ಲಿ ಶ್ರೇಷ್ಟ ದಲಿತ ಸಾಹಿತ್ಯವನ್ನು ಬರೆದರು. ಹೊಸ ಚಿಂತನೆಯನ್ನೇ ರೂಪಿಸಿದರು.ಇದು ಅತ್ಯಂತ ಸೃಜನಶೀಲ ಸಾಹಿತ್ಯದ, ಜೀವಪರ ಸಾಹಿತ್ಯದ ಕಾಲಘಟ್ಟವಾಗಿತ್ತು. ದಲಿತ ಅಕ್ಷರಸ್ಥರಲ್ಲಿ ಹೊಸ ಚಿಂತನೆಗಳನ್ನು, ಬರವಣಿಗೆಯ, ಭಾಷೆಯ ಹೊಸ ನುಡಿಕಟ್ಟನ್ನೂ ಕಟ್ಟಿಕೊಟ್ಟಿತು. ಒಂದು ಹೊಸ ಪ್ರಜ್ನಾವಂತ ತಲೆಮಾರನ್ನೇ ರೂಪಿಸಿತು ಇವರ ಈ ಸಾಹಿತ್ಯದ ಮಾದರಿ ನಂತರ ಕನ್ನಡದ ದಲಿತ ಪ್ರಜ್ನೆಯೊಳಗೂ ತನ್ನ ಪ್ರಭಾವವನ್ನು ಬೀರಿತು.
ಕರ್ನಾಟಕದಲ್ಲಿ ದಲಿತ ನಾಯಕ ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿರುವುದೆಲ್ಲ ಬೂಸ ಎಂದು ಸಾರ್ವಜನಿಕವಾಗಿ ಹೇಳುವುದರ ಮೂಲಕ ಈ ಬೂಸ ಚಳುವಳಿ ದಲಿತ ಚಳುವಳಿಗೆ ತನ್ನ ಎಲ್ಲಾ ಬಾಗಿಲುಗಳನ್ನು ತರೆಯಿತು. ಆಗ ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಹುಟ್ಟಿಕೊಂಡ ದಲಿತ ಲೇಖಕರ ಸಂಘಟನೆ ಮುಂದೆ ದಲಿತ ಸಂಘರ್ಷ ಸಮಿತಿಯಾಗಿ ನಂತರ 20 ವರ್ಷಗಳ ಕಾಲ 90ರ ದಶಕದುದ್ದಕ್ಕೂ ಒಂದು ದೊಡ್ಡ ಪ್ರಗತಿಪರ, ಜಾತ್ಯಾತೀತ ಸಂಘಟನೆಯಾಗಿ ಬೆಳೆಯಿತು. ಅನೇಕ ದಲಿತ ಲೇಖಕರಲ್ಲಿ ಅನಾಥ ಪ್ರಜ್ನೆಯನ್ನು ತೊಡೆದು ಹಾಕಿತು.

ಆ ಕಾಲಘಟ್ಟದ ಈ ದಲಿತ ಚಳುವಳಿಗೆ ದಕ್ಕಿದ ವೈಚಾರಿಕತೆಯ ಆಯಾಮ, ಸಿದ್ಧಾಂತದ ಹಿರಿಮೆ ನಿಜಕ್ಕೂ ಬೆರಗುಗೊಳಿಸುತ್ತದೆ. ಇದಕ್ಕೆ ಕಾರಣರಾದ ಬಿ.ಕೃಷ್ಣಪ್ಪ, ದೇವನೂರು ಮಹದೇವರವರು ತಮ್ಮಲ್ಲಿನ್ನ ನೆಲ ಸಂಸ್ಕೃತಿಯ ಜೀವಂತಿಕೆಯನ್ನು ವೈಚಾರಿಕತೆಯೊಂದಿಗೆ ಬೆರೆಸಿ ಆ ಕಾಲಘಟ್ಟದ ದಲಿತ ಚಳುವಳಿಗೆ ಧಾರೆಯೆರೆದರು. ಅಂಬೇಡ್ಕರವಾದ ಹಾಗೂ ಲೋಹಿಯಾವಾದದ ಈ ಎರಕ ಎಪ್ಪತ್ತರ ಹಾಗೂ ಎಂಬತ್ತರ ದಲಿತ ಚಳುವಳಿಗೆ ನಿರಂತರ ಚಿಲುಮೆಯ ಧಾರೆಯಾಗಿತ್ತು. ಹಾಗೂ ಆ ಕಾಲಘಟ್ಟದಲ್ಲಿ ಸಮಾಜವಾದಿ ಚಳುವಳಿಗಳನ್ನು ನಿರಂತರವಾಗಿ ನಡೆಸಿದ ಎಂ.ಡಿ.ನಂಜುಂಡಸಾಮಿ, ಲಂಕೇಶ, ತೇಜಸ್ವಿ, ರಾಮದಾಸ ಅವರ ವೈಚಾರಿಕತೆ ಹಾಗೂ ಆದರ್ಶಗಳು ಈ ಚಳುವಳಿಗೆ ನೀರೆರೆದವು. ತನ್ನ ಒಳಗೊಳ್ಳುವಿಕೆಯ ನೀತಿಯಿಂದ ಸಾಮಾಜಿಕವಾಗಿಯೂ ಹಾಗೂ ರಾಜಕೀಯವಾಗಿಯೂ ಇದರ ಪ್ರಬಾವ ನಿರ್ಣಾಯಕವಾಗಿತ್ತು.

ಎಂಬತ್ತರ ದಶಕದ ಕರ್ನಾಟಕದ ದಲಿತ ಚಳುವಳಿಯ ಮತ್ತೊಂದು ಮಹ್ವದ ಸಾಧನೆಯೆಂದರೆ ತನ್ನ ಪ್ರಖರ ವೈಚಾರಿಕತೆಯ ಮೂಲಕ ದಲಿತೇತರ ಲೇಖಕರು, ಹಾಗೂ ಸಮಾನಮನಸ್ಕರನ್ನೂ ಸಹ ದಲಿತ ಪ್ರಜ್ನೆಯ ಬಗೆಗೆ, ದಲಿತ ಸಂಸ್ಕೃತಿಯ ಬಗೆಗೆ ಚಿಂತಿಸಲು ಬಲು ದೊಡ್ಡ ಪ್ರೇರಕ ಶಕ್ತಿಯಾಗಿದ್ದು. ಇದು ಕಡಿಮೆ ಸಾಧನೆಯೇನಲ್ಲ. ಆದರೆ ಈ ವೈಚಾರಿಕತೆ, ಸಾಮಾಜಿಕ ಬದ್ಧತೆ, ಸೆಕ್ಯುಲರ ನೀತಿ, ಆದರ್ಶಗಳನ್ನು ಸದಾಕಾಲ ಜೊತೆಜೊತೆಗೇ ಕೊಂಡೊಯ್ಯುವ ಬಲು ದೊಡ್ಡ ಜವಬ್ದಾರಿ ಈ 20 ವರ್ಷಗಳ ಕಾಲಘಟ್ಟ ಬಲು ಧೀರ್ಘವೇ ಆಯಿತೆನಿಸುತ್ತದೆ. ಅಂಬೇಡ್ಕರ ಹಾಗೂ ಅಂಬೇಡ್ಕರವಾದವನ್ನು ಪದೇ ಪದೇ ನವೀಕರಿಸುವ, ಜಾಗತೀಕರಣಕ್ಕೆ ತಕ್ಕಂತೆ ಹೊಸ ನುಡಿಕಟ್ಟಿನಲ್ಲಿ ಮಾತನಾಡುವ, ಅಂಬೇಡ್ಕರ ಅವರನ್ನು ಸವರ್ಣೀಯರ ಮನಸ್ಸಿನಲ್ಲಿ ಅಚ್ಚಳಿಯದಂತೆ ಬೇರೂರುವಂತೆ ಮಾಡಬೇಕಾದ ಒಳಗೊಳ್ಳುವಿಕೆಯ ಮಾರ್ಗಗಳೇನು ಎಂಬುದರ ಚಿಂತನೆಗಳನ್ನು ನಮ್ಮ ದಲಿತ ಚಳುವಳಿಗಳು ಕೈಗೆತ್ತಿಕೊಳ್ಳಲೇ ಇಲ್ಲ. ಇದಕ್ಕೇ ಕೇವಲ ದಲಿತ ಸಂಘಟನೆಗಳು ಮಾತ್ರ ಹೊಣೆಯೆಲ್ಲ ರಾಜ್ಯದ ಎಲ್ಲಾ ಪ್ರಜ್ನಾವಂತರು, ಪ್ರಗತಿಪರ ಚಿಂತಕರು ಈ ಹೊಸ ರೂಪದ, ಭಿನ್ನ ಮಾದರಿಯ ಚಿಂತನೆಗಳನ್ನು ದಲಿತ ಸಂಘಟನೆಗಳೊಂದಿಗೆ ಸೇರಿಕೊಂಡು ರೂಪಿಸಲು ಪ್ರಯತ್ನಿಸಲೇ ಇಲ್ಲ. ಎಲ್ಲದ್ದಕ್ಕೂ ದಲಿತ ಚಳುವಳಿಗಳನ್ನು ಮಾತ್ರ ದೂಷಿಸುವ ನಾವೆಲ್ಲ ನಮ್ಮೆಲ್ಮರ ಕೆಲಸಗಳನ್ನು ಕ್ಷಣಕಾಲ ಬದಿಗಿಟ್ಟು ನೇರವಾಗಿ ಚಳುವಳಿಯೊಳಗೆ ಗುರುತಿಸಿಕೊಂಟು ತಪ್ಪಾದಾಗಲೆಲ್ಲ ಎಚ್ಚರಿಸಿ ಮುನ್ನಡೆಸುವ ಗುರುತರ ಜವಾಬ್ದಾರಿಯುತ ಕಾರ್ಯಕ್ಕೆ ಧುಮುಕಲೇ ಇಲ್ಲವೆನಿಸುತ್ತದೆ. ನಮ್ಮ ಪ್ರಗತಿಪರ ಚಿಂತಕರ ಹಾಗೂ ದಲಿತ ಚಳುವಳಿಗಳೊಂದಿಗಿನ ಸಂಬಂಧ ಕೇವಲ ಸೆಮಿನಾರಗಳಲ್ಲಿ, ಅಕಡೆಮಿಕ ಚಿಂತನೆಗಳಲ್ಲಿ, ವೈಯುಕ್ತಿಕ ಸ್ನೇಹಗಳಲ್ಲಿ ಮಾತ್ರ ಸೀಮಿತವಾಯಿತೇನೋ ಎನಿಸುತ್ತದೆ. ಇದನ್ನು ನಾನು ಅತ್ಯಂತ ಎಚ್ಚರಿಕೆಯಿಂದ ಹೇಳುತಿದ್ದೇನೆ. ಅಲ್ಲದೆ ದಲಿತ ಚಳುವಳಿಗಳ ವಿಘಟನೆಗೆ ಸಿದ್ಧಾಂತದ ಭಿನ್ನಾಭಿಪ್ರಾಯಕ್ಕಿಂತಲೂ ವೈಯುಕ್ತಿಕ ನೆಲೆಯಲ್ಲಿನ ಬೇಧಗಳೇ ಮೂಲಭೂತ ಕಾರಣವಿದೆಯೆನಿಸುತ್ತದೆ. ಮೇಲ್ಕಾಣಿಸಿದ ಚಿಂತನೆಗಳ ಒಜ್ಜೆಗೆ ದಲಿತ ಚಳುವಳಿ ನಿಜಕ್ಕೂ ದಣಿದಿತ್ತು. ವಿಘಟನೆ ಅನಿವಾರ್ಯ ಎನ್ನುವ ಪರಿಸ್ಥಿತಿ ಉದ್ಭವಿಸಿತು.

90ರ ದಶಕದ ನಂತರ ನಡೆದಿದ್ದೆಲ್ಲಾ ಈಗ ಇತಿಹಾಸದ ದುರಂತ ಅಧ್ಯಾಯ. ಮಹಾರಾಷ್ಟ್ರದಂತೆ ಕರ್ನಾಟಕದ ದಲಿತ ಚಳುವಳಿ ಸಹ ನಗರ, ಪಟ್ಟಣ ಕೇಂದ್ರಿತವಾಗಿತ್ತು. ಹಳ್ಳಿಗಳ ಜಾತೀಯತೆ ಮತ್ತು ಕ್ರೂರತೆ, ಮಧ್ಯಮ ಜಾತಿಗಳಿಂದ ಅಲ್ಲಿ ನಡೆಯುವ ಅಮಾನುಷ ಹತ್ಯೆಗಳು, ತಳಸಮುದಾಯಗಳ ಅಸಹಾಯಕತೆ ಮತ್ತು ಒಬ್ಬಂಟಿತನಕ್ಕೆ ನಮ್ಮಲ್ಲಿನ ದಲಿತ ಸಂಘಟನೆಗಳ ಬಳಿ ಮಂತ್ರದಂಡವೇ ಇರಲಿಲ್ಲ ಅಥವಾ ಅತ್ಯಂತ ಸೀಮಿತವಾಗಿತ್ತು. ಇಲ್ಲಿ ಸಂಘಟನೆಗಳು ದಲಿತರ ಮೇಲಿನ ದೌರ್ಜನ್ಯಗಳಿಗೆ ಪ್ರತಿಕ್ರಿಯಾತ್ಮವಾಗಿಯೇ ಹೋರಾಡಬೇಕಾಯಿತು ಹೊರತಾಗಿ ಕ್ರಿಯಾತ್ಮಕವಾಗಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಬೇಕಾದ ಮಂತ್ರದಂಡ ಇವರ ಕೈಗೆ ದಕ್ಕಲೇ ಇಲ್ಲವೆನಿಸುತ್ತದೆ ಹಾಗೂ ಇದಕ್ಕೆ ಬೇಕಾದ ಸಿದ್ಧ ಮಾದರಿಗಳನ್ನು, ಆಯಾ ಕಾಲಮಾನಕ್ಕೆ ತಕ್ಕಂತೆ ಹೊಸ ಮಾರ್ಗಗಳನ್ನು ದಲಿತೇತರ ಪ್ರಗತಿಪರರು ದಲಿತ ಚಳುವಳಿಗೆ ಕಟ್ಟಿಕೊಡಲು ಸೋತರು. ನಾವೆಲ್ಲ ಜಾಗತೀಕರಣಕ್ಕೆ ತರೆದುಕೊಂಡಿದ್ದು ಸೀಮಿತ ನೆಲೆಯಲ್ಲಿ ಮಾತ್ರ ಎಂದೆನಿಸುತ್ತದೆ.

ಏತಕ್ಕೆ ಇಂಡಿಯಾದಲ್ಲಿ ಸಾಮಾಜಿಕ ನ್ಯಾಯ ಇಂದು ಸೋತಿದೆ ? ನಮ್ಮ ಬಹುಪಾಲು ಸಂಸ್ಕೃತಿ ಚಿಂತಕರು, ಪ್ರಗತಿಪರ ಹೋರಾಟಗಾರರು ಸಾಮಾಜಿಕ ನ್ಯಾಯದ ಮೂಲಭೂತ ಆಶಯಗಳನ್ನು, ಆದ್ಯತೆಗಳನ್ನು ಅತ್ಯಂತ ಸೀಮಿತ ಅರ್ಥದಲ್ಲಿ ಗ್ರಹಿಸಿದ್ದು, ಅಂಬೇಡ್ಕರ ಪ್ರತಿಪಾದಿಸಿದ ಜಾತಿವಿನಾಶ ಮತ್ತು ಸಹಬಾಳ್ವೆಯ ಮೂಲಭೂತ ಆಶಯಗಳನ್ನು ವ್ಯವಸ್ಥೆಯೊಳಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೇಕಾದ ಮಂತ್ರದಂಡದ ಹುಡುಕಾಟ ಇನ್ನೂ ನಡೆದಿರುವುದು ಬಲು ದೊಡ್ಡ ಸೋಲು, ದಲಿತರ ಹಕ್ಕಿನ ಬಗ್ಗೆ ಮಾತನಾಡುವಾಗ ಕೇವಲ ಅಕಡೆಮಿಕ್ ಶ್ರೇಷ್ಟತೆಯನ್ನು ಬಲವಾಗಿ ನೆಚ್ಚಿ ಅವರ ನೆಲಸಂಸ್ಕೃತಿಯನ್ನು, ಮೂಲ ಅವೈದಿಕ ಪರಂಪರೆಯನ್ನು ತಮ್ಮ ಚಿಂತನೆಯ ಮೂಸೆಯೊಳಗೆ ಒಳಗೊಳ್ಳದೇ ಹೋಗಿದ್ದು ಮತ್ತು ಈ ಅವೈದಿಕ ಪರಂಪರೆಯ ಬಗೆಗೆ ಅನೇಕ ಬಗೆಯ ಅಪಾಯಕಾರಿ ವಿಸ್ಮೃತಿಗೆ ನಮ್ಮನ್ನೆಲ್ಲಾ ಒಡ್ಡಿಕೊಂಡಿದ್ದು. ದಲಿತರಿಗೆ ಸಾಂಸ್ಕೃತಿಕ ಆಯಾಮ ಕೊಡುವ ಭರದಲ್ಲಿ ಭವಿಷ್ಯದಲ್ಲಿ ಈ ಸಾಂಸ್ಕೃತಿಕ ಎಚ್ಚರದ ಹಣತೆ ಸದಾ ಕಾಲ ಜೀವಂತವಾಗಿ ಉರಿಯುವಂತೆ ಅದಕ್ಕೆ ಬೇಕಾದ ಮೌಲ್ಯಾಧಾರಿತ ಆರ್ಥಿಕತೆಯ ತಳಹದಿಯನ್ನು ರೂಪಿಸುವಲ್ಲಿ ನಾವೆಲ್ಲಾ ಎಡವಿದ್ದು. ಗ್ರಾಮೀಣ ಭಾರತ ಹಾಗು ನಗರ ಭಾರತ ಎನ್ನುವ ಎರಡು ದಡಗಳಲ್ಲಿ ಬದುಕಬೇಕಾಗಿರುವ ದಲಿತರ ಮಾನಸಿಕ ತಯಾರಿ ಒಂದೇ ಮಟ್ಟದ್ದೇ ಅಥವಾ ವಿಭಿನ್ನವೇ ಇದಕ್ಕೆ ಉತ್ತರ ಹಾಗೂ ಪರಿಹಾರಗಳಲ್ಲಿ ಪ್ರಖರವಾದ ತೀಕ್ಷಣತೆಯ ಗ್ರಹಿಕೆಯ ಕೊರತೆ. ಈಗಾಗಲೇ ದಬ್ಬಾಳಿಕೆ ನಡೆಸುತ್ತಿರುವ ಹಳೆಯ ದಮನಕಾರಿ ನೀತಿಯನ್ನು ಸಮರ್ಥವಾಗಿ ಅರ್ಥೈಸುವಲ್ಲಿ ಯಶಸ್ವಿಯಾದ ದಲಿತ ಚಳುವಳಿ ಹಾಗೂ ಚಿಂತಕರು ಹೊಸ ರೀತಿಯ, ಜಾಗತೀಕರಣಗೊಂಡ ದೇಶದಲ್ಲಿ ಕ್ಷಣ ಕ್ಷಣಕ್ಕೂ ಹುಟ್ಟಿಕೊಳ್ಳುವ ಸವಾಲುಗಳಿಗೆ, ಅಸಮಾನತೆಗೆ, ದಮನಕಾರಿ ಪ್ರವೃತ್ತಿಗೆ ಸಮಂಜಸ ಉತ್ತರ ಹುಡುಕುವಲ್ಲಿ ಸೋತಿದ್ದು, ಜಾತಿ ಮತ್ತು ವರ್ಗವೆನ್ನುವ ಎರಡು ನೆಲೆಗಳನ್ನು ವೈಜ್ನಾನಿಕವಾಗಿ ವಿಶ್ಲೇಷಿಸುವಲ್ಲಿ ಅನಗತ್ಯ ಗೊಂದಲಗಳಿರುವುದು, ಒಂದೇ ನಾಣ್ಯದ ಎರಡು ಮುಖಗಳಾದ ಗಾಂಧೀವಾದ ಮತ್ತು ಅಂಬೇಡ್ಕರವಾದಕ್ಕೆ ದಿವಂಗತ ಡಿ.ಆರ್. ನಾಗರಾಜ ಕೊಟ್ಟ ಅದ್ಭುತ ಚಿಂತನೆಯಾದ ಗಾಂಧಿ ಗ್ರಾಮದಿಂದ ಹೊರಕ್ಕೆ ನಗರದ ಕಡೆಗೆ ನಡೆಯಬೇಕು ಮತ್ತು ಅಂಬೇಡ್ಕರ್ ನಗರದಿಂದ ಗ್ರಾಮದ ಕಡೆಗೆ ಚಲಿಸಬೇಕುಎನ್ನುವ ಮಾರ್ಗಕ್ಕೆ ನಿರ್ಲಕ್ಷ್ಯ ತೋರಿದ್ದು.

ಎಡಪಂಥೀಯ ಚಿಂತನೆ ಹಾಗು ಚಳುವಳಿ ದಲಿತ ಚಳುವಳಿ ಒಂದಕ್ಕೊಂದು ಸಹಭಾಗಿತ್ವದಲ್ಲಿ ಬೆರೆಯದೇ ಹೋದದ್ದು, ದಿವಂಗತ ಡಿ.ಆರ್.ಎನ್. ಹೇಳಿದಂತೆಭಾರತೀಯ ಬಂಡವಾಳಶಾಹಿ ಮತ್ತು ಜಾತಿಪದ್ಧತಿಗಳ ನಡುವಣ ಸಂಕೀರ್ಣ ಸಂಬಂಧಗಳನ್ನು ಅಂಬೇಡ್ಕರ ಅಷ್ಟು ಪ್ರಖರವಾಗಿ ಗ್ರಹಿಸಲಾಗಲಿಲ್ಲ. ಭಾರತೀಯ ಬಂಡವಾಳಶಾಹಿಯ ತರ್ಕ, ಮೂಲಭೂತವಾಗಿ ಮೇಲುಜಾತಿಗಳನ್ನು ಬಲಪಡಿಸುವಂತದ್ದು, ಭಾರತೀಯ ಬಂಡವಾಳಶಾಹಿ ದಲಿತರಿಗೆ ಕೆಲವು ತುಣುಕುಗಳನ್ನು ನೀಡಿ ಮೇಲುಜಾತಿಗಳಿಗೆ ಭರ್ಜರಿ ಔತಣವನ್ನು ಮುಂದುವರೆಸಿತು. ಭಾರತೀಯ ಬಂಡವಾಳಶಾಹಿ ಸಮಾಜದ ಆಯಕಟ್ಟಿನ ಕ್ಷೇತ್ರಗಳ ನಾಯಕತ್ವ ಮೇಲುಜಾತಿಯಲ್ಲೇ ಮುಂದುವರೆಯಿತು. ಮೇಲುಜಾತಿಗಳು ಮತ್ತು ಬಂಡವಾಳಶಾಹಿಗಳ ಹೊಂದಾಣಿಕೆಯನ್ನು ಅಂಬೇಡ್ಕರರಿಗಿಂತ ಲೋಹಿಯಾ ಹೆಚ್ಚು ಸೂಕ್ಷ್ಮವಾಗಿ ಗ್ರಹಿಸಿದ್ದರು. ಇಲ್ಲಿ ಅಂಬೇಡ್ಕರರವರ ಮಿತಿಯನ್ನು ನಾವೂ ಸಹ ಮೀರಲು ಸೋತೆವು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ದಲಿತರಿಗೆ ರಾಜಕೀಯವಾಗಿ ಹಕ್ಕಿನಿಂದ ಮಾತನಾಡುವ, ಕನಿಷ್ಟ ಎರಡಂಕಿಯ ಶಾಸಕ ಸ್ಥಾನಗಳನ್ನು ಗಳಿಸುವ ಬಿಎಸ್ಪಿ ಮಾದರಿ ಸಹ ಇಲ್ಲಿ ಸೋತು ಹೋಗಿದ್ದು, ಹಾಗು ಸಾಮಾಜಿಕ ನ್ಯಾಯದ ತಕ್ಕಡಿಯ ಅಡಿಯಲ್ಲಿ ಮೀಸಲಾತಿಯನ್ನು ಬಳಸಿಕೊಂಡು ವ್ಯವಸ್ಥೆಯ ಶ್ರೇಣೀಕೃತ ಮೆಟ್ಟಿಲುಗಳನ್ನು ಏರಿದ ಬಹುಪಾಲು ಅಕ್ಷರಸ್ಥ ದಲಿತರು ನಂತರ ತಮ್ಮ ಜನಾಂಗದ ಶೋಷಿತ ಬದುಕನ್ನೇ, ಶೋಷಿತರನ್ನೇ ಕಡೆಗಣಿಸಿ, ತಾವು ನಡೆದ ಬಂದ ದಾರಿಯನ್ನೇ ಮರೆತು ನವ ಭ್ರಾಹ್ಮಣರಾದದ್ದು. ಕೆಲವು ದಲಿತ ನಾಯಕರ ಅನುಕೂಲಸಿಂದು, ಅವಕಾಶವಾದಿ ರಾಜಕಾರಣ, ಕಡೆಗೆ ಅಂಬೇಡ್ಕರ ಅವರ ಚಲನಶೀಲ ರಾಜಕಾರಣವನ್ನು ಅರ್ಥೈಸಿಕೊಳ್ಳಲು ಸೋತಿದ್ದು. ಇವೆಲ್ಲವೂ ಪರಸ್ಪರ ಪೂರಕವಾಗಿಯೇ ಬೆಸೆದುಕೊಂಡು ತಳ ಸಮುದಾಯಗಳ ಬದುಕಿನ ಮೇಲೆ ಅತ್ಯಂತ ಖುಣಾತ್ಮಕ ಪರಿಣಾಮವನ್ನೇ ಬೀರಿದವು.

ಅತ್ಯಂತ ಮುಖ್ಯವಾಗಿ ಜಾಗತೀಕರಣಗೊಂಡ ಭಾರತದೊಳಗೆ ಈ ಹೆಮ್ಮಾರಿಯನ್ನು ಎದುರಿಸಲು ಇಲ್ಲಿನ ಪ್ರಗತಿಪರ ಚಿಂತಕರು ಅತ್ಯಂತ ವೈಜ್ನಾನಿಕವಾಗಿ ಕೇವಲ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿತ್ತೇನೂ ಅನಿಸುತ್ತದೆ.
ಮೊದಲನೆಯದಾಗಿ ದಣಿದ, ವಿಘಟನೆಗೊಂಡ ಚಳುವಳಿಗಳ ಪುನ ಸೃಷ್ಟಿಯ ಮೂಲಕ ದಲಿತರ ಸಬಲೀಕರಣ ಹಾಗು ಆತ್ಮಾಭಿಮಾನದ, ಇತರ ಜಾತಿಗಳಂತೆ ಆರ್ಥಿಕವಾಗಿ ನೆಮ್ಮದಿಯ ಬಾಳು ತಂದುಕೊಡಲು ಸಾಧ್ಯವೇ? ಯಜಮಾನ್ಯ ಸಂಸ್ಕೃತಿಗೆ ಸೆಡ್ಡು ಹೊಡೆಯುವ ಆ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಈ ಅತ್ಯಂತ ಹಳೆಯ ಮಾರ್ಗ ಇಂದು ತೆವಳುತ್ತಿದೆ. ಏಕೆಂದರೆ ಇದು ದಲಿತರಿಗೆ ಕ್ರಿಯಾತ್ಮಕವಾಗಿ ಪರ್ಯಾಯ ನೆಲೆಯನ್ನು, ಬಾಳನ್ನು ನೀಡಲು ಸಾಧ್ಯವಿಲ್ಲ.  ಇಲ್ಲಿನ ಕ್ರಾಂತಿಕಾರಿ ಆಶಯಗಳು ಪ್ರಭುತ್ವದೊಂದಿಗೆ ಇಲ್ಲಾ ಸೆಣೆಸಾಡುತ್ತಾ ಸಾಧಿಸಬೇಕು ಇಲ್ಲವೇ ಪ್ರಭುತ್ವದೊಂದಿಗೆ ಹಂಚಿಕೊಂಡು ಸಾಧಿಸಬೇಕು. ಮೊದಲನೇಯ ಮಾರ್ಗಕ್ಕೆ ಬದ್ಧತೆಯುಳ್ಳ ತಂಡದ ಕೊರತೆಯಿದ್ದರೆ, ಎರಡನೇ ಮಾರ್ಗಕ್ಕೆ ನೈತಿಕತೆಯ ಬಲು ದೊಡ್ಡ ಕೊರತೆಯಿದೆ. ಈ ಕತ್ತಲ ದಾರಿ ಬಲು ದೂರ ಎನ್ನುವಂತಹದ್ದೂ ಸೂರ್ಯಸ್ಪಷ್ಟ. ಇದು ನಿರಂತರವಾಗಿ ನಡೆದರೆ ಮಾತ್ರ ಇದರ ಫಲ ಎರಡು ಅಥವಾ ಮೂರು ತಲೆಮಾರುಗಳಿಗೆ ದೊರಕಬಹುದು.

ಎರಡನೇಯದಾಗಿ ಉತ್ತರ ಪ್ರದೇಶದ ಮಾದರಿಯಲ್ಲಿ ದಲಿತ ರಾಜಕೀಯ ನೆಲೆಗಟ್ಟನ್ನು ನಮ್ಮ ಕರ್ನಾಟಕದಲ್ಲಿ ಸ್ಥಾಪಿಸಲು ಸಾಧ್ಯವೇ ? ಎಪ್ಪತ್ತರ ದಶಕದಲ್ಲಿ ತಮ್ಮ ಸರ್ಕಾರಿ ಉದ್ಯೋಗವನ್ನು ತ್ಯಜಿಸಿ ಅಡಿಗಡಿಗೂ ಮೇಲ್ಜಾತಿಗಳ, ಮಧ್ಯಮವರ್ಗಗಳ ಹೀಯಾಳಿಕೆಯನ್ನು ಅನುಭವಿಸುತ್ತಾ ಬಿಎಸಪಿ ಎನ್ನುವ ದಲಿತರಿಗಾಗಿಯೇ ಒಂದು ರಾಜಕೀಯ ಪಕ್ಷವನ್ನು ಕಟ್ಟಿದವರು ಕಾನ್ಸೀರಾಮ್. ಆಗ ಕಾನ್ಸೀರಾಮ್ ಅವರು ತಮ್ಮ ಸ್ನೇಹಿತ ಖಾರ್ಪಡೆ ಅವರೊಂದಿಗೆ ಸೇರಿ 40 ವರ್ಷಗಳ ಹಿಂದೆ ಅಂಬೇಡ್ಕರ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ, ಚಳುವಳಿ ಎನ್ನುವ ಧ್ಯೇಯ ಮಂತ್ರವನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಅಖಿಲ ಭಾರತ ದಲಿತ ಹಾಗೂ ಆದಿವಾಸಿ ಹಾಗೂ ಹಿಂದುಳಿದವರ ಒಕ್ಕೂಟ ನಂತರ ದಲಿತ ಮತ್ತು ಅಲ್ಪ ಸಂಖ್ಯಾತ ಒಕ್ಕೂಟ ಸ್ಥಾಪಿಸಿದರು. ಇದಕ್ಕಾಗಿ ತಮ್ಮ ಜೀವಮಾನವನ್ನೆ ಮುಡಿಪಾಗಿಟ್ಟ ಕಾನ್ಸೀರಾಮ ತಮ್ಮ ಸಂಘಟನಾ ಚಾತುರ್ಯವನ್ನು ಬಳಸಿ ರಾಷ್ಟ್ರ ಮಟ್ಟದಲ್ಲಿ ದಲಿತರಿಗೆ ಒಂದು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಗಟ್ಟಿಯಾದ ಐಡೆಂಟಿಟಿಯನ್ನು ತಂದುಕೊಡಲು ಹಗಲಿರುಳೂ ದುಡಿದರು.

ಇಲ್ಲಿ ನಿಸ್ವಾರ್ಥವಿತ್ತು. ಎಪ್ಪತ್ತರ ಹಾಗೂ ಎಂಬತ್ತರ ದಶಕದಲ್ಲಿ ಕಾನ್ಸೀರಾಮ ಅವರು ಸೈಕಲ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ತಮ್ಮ ದಣಿವರಿಯದ ತಿರುಗಾಟ ಹಾಗೂ ಅಧ್ಯಯನದಿಂದ ಇಡೀ ಉತ್ತರ ಭಾರತದ ಒಟ್ಟು ಜನಸಂಖ್ಯೆಯ ವಿವರಗಳು, ಇದರಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಯವರೆಷ್ಟು, ಹಿಂದುಳಿದವರ ಹಾಗೂ ದಲಿತರ ಶೇಕಡವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗತಿಗಳು ಎಲ್ಲ ಮಾಹಿತಿಯನ್ನು ಕಲೆಹಾಕಿದರು. ಇದು ಕಾನ್ಸೀರಾಮ್ ಅವರ ಶೈಲಿ. 1984 ರಲ್ಲಿ ಬಿಎಸಪಿ ಎನ್ನುವ ತಮ್ಮ ಮಹಾತ್ವಾಕಾಂಕ್ಷೀ ರಾಜಕೀಯ ಪಕ್ಷವನ್ನು ಸ್ಥಾಪಿಸುವಷ್ಟರಲ್ಲೇ ಇಡೀ ಉತ್ರರ ಭಾರತದ ಸಾಮಾಜಿಕ ಹಾಗೂ ರಾಜಕೀಯ ಸ್ವರೂಪಗಳು, ಜಾತಿ ವ್ಯವಸ್ಥೆ, ಅವುಗಳ ಆಳ ಸ್ವರೂಪಗಳು ಎಲ್ಲವನ್ನೂ ಅರೆದು ಕುಡಿದಿದ್ದರು ಕಾನ್ಸೀರಾಮ್. ಆಗ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ದಲಿತ ಸಂಘಟನೆಗಳು ದಲಿತರ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯಾತ್ಮಕವಾದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿದ್ದರೆ ಉತ್ತರ ಭಾರತದಲ್ಲಿ ಕಾನ್ಸೀರಾಮ ಅವರು ಕ್ರಿಯಾತ್ಮಕವಾಗಿ 90ರ ದಶಕದಲ್ಲಿ ದಲಿತ ನಾಯಕ ಅಥವಾ ನಾಯಕಿ ಉತ್ತರ ಭಾರತದ ಮುಖ್ಯಮಂತ್ರಿಯ ಪಟ್ಟವನ್ನು ಗಳಿಸಲೇಬೇಕು ಎನ್ನುವ ಅತ್ಯಂತ ಸ್ಪಷ್ಟವಾದ ರಾಜಿಕೀಯ ಮಹಾತ್ವಾಕಾಂಕ್ಷೆಯೊಂದಿಗೆ ಮುನ್ನುಗಿದ್ದರು.

ಇಲ್ಲಿ ಅಕಡೆಮಿಕ ಚಿಂತನೆಗಳು, ಸಾಮಾಜಿಕ ಸಂಘಟನೆಗಳು, ಬೌದ್ಧಿಕ ಕಸರತ್ತುಗಳು, ಎಡಪಂಥೀಯ ನೆಲೆಯ ಚಿಂತನ ಮಂಥನಗಳು ಯಾವ ಕಾಲಕ್ಕೂ ದಲಿತರಿಗೆ ರಾಜಕೀಯ ಸ್ಥಾನಮಾನಗಳನ್ನು ದಕ್ಕಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ನಂಬಿದ್ದ ಕಾನ್ಸೀರಾಮ ಕಡೆವರೆಗೂ ಪ್ರಗತಿಪರ ಚಿಂತಕರನ್ನು, ಎಡಪಂಥೀಯ ಬುದ್ಧಿಜೀವಿಗಳನ್ನು ತಮ್ಮ ಬಳಿ ಹಾಗೂ ಪಕ್ಷದ ಹತ್ತಿರಕ್ಕೂ ಸಹ ಬಿಟ್ಟುಕೊಳ್ಳಲಿಲ್ಲ. ಇದೇನಾದರೂ ಸಾಧ್ಯವಾಗಿದ್ದರೆ ಮಾಯಾವತಿ ನಾಯಕತ್ವದ ಬಿಎಸಪಿ ಪಕ್ಷ ಇಂದು ಸೈದ್ಧಾಂತಿಕವಾಗಿ ಈಗಿನ ಕೆಳಮಟ್ಟಕ್ಕೆ ತಲುಪುತ್ತಿರಲಿಲ್ಲವೇನೋ. ಅದೇ ರೀತಿ ಈಗಲಾದರೂ ಒಂದು ಕಾಲದಲ್ಲಿ ವೈಚಾರಿಕ ಬದ್ಧತೆಯನ್ನು, ಬುದ್ಧಿಜೀವಿ ವ್ಯಕ್ತಿತ್ವವನ್ನು ತಮ್ಮೊಳಗೆ ಆಳವಾಗಿ ಬಿಟ್ಟುಕೊಂಡಿದ್ದ ಕರ್ನಾಟಕದ ದಲಿತ ಸಂಘಟನೆಗಳು ಆ ಸೈದ್ಧಾಂತಿಕ ವ್ಯಕ್ತಿತ್ವವನ್ನೇ ನೆಚ್ಚಿಕೊಂಡು ಕಾನ್ಸೀರಾಮ ಮಾದರಿಯ ರಾಜಕೀಯ ಪ್ರೇರಿತ ಕ್ರಿಯಾತ್ಮಕ ರಾಜಕೀಯವನ್ನು ಇಂದು ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಅಂಬೇಡ್ಕರ ಜನ್ಮ ದಿನದಂದು ಒಟ್ಟುಕೂಡಿ ಪ್ರಜಾ ಪ್ರಗತಿರಂಗವೆನ್ನುವ ರಾಜಕೀಯ ಪಕ್ಷವನ್ನು ಕಟ್ಟಿರುವ ಅನೇಕ ದಲಿತ ಹಾಗೂ ಅಲ್ಪ ಸಂಖ್ಯಾತ ಸಂಘಟನೆಗಳು ಕಾನ್ಸೀರಾಮ ಮಾದರಿಯನ್ನು ಅರಿತುಕೊಂಡಂತಿದೆ. ಇಲ್ಲಿ ಗೊಂದಲಗಳಿಲ್ಲ. ಇವರಲ್ಲಿ ಅಹಿಂದ ಸಮುದಾಯಕ್ಕೆ ಇಂದು ರಾಜಕೀಯವೊಂದೇ ಪಯರ್ಯಾ ಮಾರ್ಗ ಎನ್ನುವ ಸ್ಪಷ್ಟ ತಿಳುವಳಿಕೆಯಿದೆ. ಮುಂದಿನ ದಿನಗಳಲ್ಲಿ ಪ್ರಜಾ ಪ್ರಗತಿರಂಗದ ಸ್ಪಷ್ಟ ನಡೆಗಳು ಗೊತ್ತಾಗಲಿದೆ. ಸದ್ಯಕ್ಕೆ ಇದು ಅತ್ಯಂತ ವಾಸ್ತವ ಮಾರ್ಗ.
ಮೂರನೆಯದಾಗಿ ಆರ್ಥಿಕ ಸ್ವಾವಲಂಬನೆಯ, ಸಂಪೂರ್ಣ ಪಶ್ಚಿಮ ಮಾದರಿಯ ಬಂಡವಾಳಶಾಹಿಯ ಯಾವುದೇ ಗೊಂದಲಗಳಿಲ್ಲದ ಸ್ಪಷ್ಟವಾದ ಬೆಳಕಿನ ದಾರಿ. ದಲಿತರು ವಿಮುಕ್ತಿಯನ್ನು ಎತ್ತಿಹಿಡಿಯುವ, ಸಮಬಾಳು ಸಮಪಾಲು ತತ್ವದಡಿ ಕೆಲಸ ಮಾಡುವ, ಆಸ್ತಿಯನ್ನು ಸಮನಾಗಿ ಹಂಚುವ ಎಡಪಂಥೀಯ ಸಿದ್ಧಾಂತಗಳನ್ನು ತಮ್ಮೊಳಗೆ ಬಿಟ್ಟುಕೊಂಡಿದ್ದಾರೆ. ಆದರೆ ಬಹುಪಾಲು ಎಡಪಂಥೀಯ ಬುದ್ದಿಜೀವಿಗಳು ದಲಿತ ಸಂವೇದನೆಯನ್ನು, ಅಂಬೇಡ್ಕರವಾದವನ್ನು ತಮ್ಮೊಳಗೆ ಬಿಟ್ಟುಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಕಮ್ಯುನಿಷ್ಟ ಸರ್ಕಾರಗಳಿದ್ದ ಕೇರಳ ಹಾಗು ಪಶ್ಚಿಮ ಬಂಗಾಳದ ರಾಜ್ಯಗಳು. ಕೆಲಸ ಕೊಡುವವರಾಗಿ, ಕೆಲಸ ಕೇಳುವವರಾಗಬೇಡಿ ಎನ್ನುವ ಸ್ವಾಯತ್ತತೆಯ, ಸ್ವಾವಲಂಬನೆಯ ಘೋಷಣೆಯೊಂದಿಗೆ ಹುಟ್ಟಿಕೊಂಡ ದಲಿತ ಉದ್ಯಮಿಗಳು ಅರ್ಥತ ದಲಿತ ಛೇಂಬರ್ಸ ಆಫ ಕಾಮರ್ಸ ಹಾಗೂ ಕಳೆದ 20 ವರ್ಷಗಳಿಂದ ಇದರ ಪರವಾಗಿ ಚಿಂತಿಸಿದ ಖ್ಯಾತ ದಲಿತ ಚಿಂತಕ ಚಂದ್ರಬಾನು ಪ್ರಸಾದ ಇದರ ಕಟ್ಟಾ ಪ್ರತಿಪಾದಕರು. ಚಂದ್ರಬಾನು ಪ್ರಸಾದರು ದಲಿತರು ಹಾಗೂ ಆದಿವಾಸಿಗಳನ್ನು ಸಮಾಜದ ಮಖ್ಯವಾಹಿನಿಗೆ ತರಲು ದಿಗ್ವಿಜಯಸಿಂಗ ರವರ ನಾಯಕತ್ವದಲ್ಲಿ ಐತಿಹಾಸಿಕ ಭೂಪಾಲ ದಾಖಲೆಯನ್ನು ರೂಪಿಸಿದವರು. ಈ ಮೂಲಕ ಸರ್ಕಾರವು ದಲಿತ ಹಾಗೂ ಆದಿವಾಸಿಗಳ ಉದ್ಯಮಗಳಿಂದ ಶೇಕಡಾ 30ರಷ್ಟನ್ನು ಕೊಳ್ಳಬೇಕು ಎನ್ನುವ ಭೂಪಾಲ ಘೋಷಣೆ ಮಾಡಲಾಯಿತು. ಇಲ್ಲಿಯೂ ಸಹ ಯಾವುದೇ ಗೊಂದಲಗಳಿಲ್ಲ. ಸಮಾಜದ ಮುಖ್ಯವಾಹಿನಿಗೆ ದಲಿತರು ಪ್ರವೇಶ ಪಡೆಯಲೇಬೇಕಾದರೆ ದಲಿತ ಮಧ್ಯಮ ವರ್ಗ ಸೃಷ್ಟಿಯಾಗಬೇಕು, ನಂತರ ಇದೇ ದಲಿತ ಮಧ್ಯಮ ವರ್ಗ ಮುಂದೆ ಬೆಳೆದು ದಲಿತ ಉದ್ಯಮಿಗಳಾಗಬೇಕು ಎನ್ನುವ ಘೋಷಣೆ ಹಾಗು ಚಿಂತನೆ ಇಲ್ಲಿನ ಮೂಲ ಆಶಯ. ಚಿಂತಕ ಚಂದ್ರಬಾನು ಪ್ರಸಾದ ಅವರ ಪ್ರಕಾರ ಕಳೆದ 30 ವರ್ಷಗಳಲ್ಲಿ ಶೈಕ್ಷಣಿಕವಾಗಿ ಮೀಸಲಾತಿಯನ್ನು ಬಳಸಿಕೊಂಡು ನಂತರ ಸ್ವಾವಲಂಬನೆಯ ಮೂಲಕ, ಸತತ ಪರಿಶ್ರಮದ ಮೂಲಕ ಇಂದು ದಲಿತ ಉದ್ಯಮಿಯಾಗಿ ಬೆಳದ ಪ್ರಮುಖರೆಂದರೆ ಮಿಲಿಂದ ಕಾಂಬ್ಳೆ, ಅಶೋಕ ಖಡೆ, ಮಾಲ್ಕಿಯತ ಚಂದ, ಕಲ್ಪನಾ ಸರೋಜ, ಸುನೀಲ ಜೋಡೆ, ಕೋಬ್ರಗಡೆ, ಪ್ರಸಾದ ದಹಪುತೆ,ರಾಜೇಶ ಪಾಸ್ವಾನ ಮುಂತಾದವರು.

ಇವರೆಲ್ಲರೂ ಇಂದು ಕೋಟಿ ರೂಪಾಯಿಗಳ ತೆರಿಗೆಯನ್ನು ಕಟ್ಟಬಲ್ಲಷ್ಟು ಸಮರ್ಥರು. ಇದು ದಲಿತ ಹಕ್ಕುಗಳ ಚಳುವಳಿಗಳ ಯಶಸ್ಸಲ್ಲದೇ ಮತ್ತಿನ್ನೇನು ಎಂದು ಅತ್ಯಂತ ಹೆಮ್ಮೆಯಿಂದ ಪ್ರಶ್ನಿಸುತ್ತಾರೆ ಚಂದ್ರಬಾನು ಪ್ರಸಾದ. ಇದು ನಿಜವಲ್ಲವೇ? ಯಾವುದನ್ನು ನಾವೆಲ್ಲ ದಲಿತರ ಸಬಲೀಕರಣ ಎಂದು ಕರೆಯುತ್ತೇವೆಯೋ, ಯಾವುದನ್ನು ನಾವೆಲ್ಲ ದಲಿತರು ಸವರ್ಣೀಯರೊಂದಿಗೆ ಸಮಸಮವಾಗಿ ಹೆಜ್ಜೆ ಹಾಕಬೇಕೆಂದು ಕನಸಿದ್ದೆವೋ ಆ ಕನಸಿನ ಸಾಕಾರ ರೂಪವಲ್ಲವೇ ಈ ದಲಿತ ಉದ್ಯಮ ಹಾಗೂ ಉದ್ಯಮಿಗಳ ಯಶಸ್ಸು. ಇಲ್ಲಿ ಚಂದ್ರಬಾನು ಪ್ರಸಾದರು ಪ್ರತಿಪಾದಿಸುವುದು ವಲಸೆಯನ್ನು. ಅಂದರೆ ಗ್ರಾಮಗಳಲ್ಲಿನ ದಲಿತರು ಪಟ್ಟಣಕ್ಕೆ, ಪಟ್ಟಣಗಳಲ್ಲಿನ ದಲಿತರು ನಗರಕ್ಕೆ ವಲಸೆ ಹೋಗಲೇಬೇಕು, ಆ ಮೂಲಕ ಒಂದು ಚಲನಶೀಲತೆಯನ್ನು ಸೃಷ್ಟಿಸಬೇಕು, ಕಡೆಗೆ ಅಂಬೇಡ್ಕರ ಅವರು ಸಹ ನಗರಗಳಿಗೆ ವಲಸೆ ಹೋಗುವುದು ಹೊಸ ಜೀವನ ಚಳುವಳಿ ಎಂದೇ ಅಂಬೇಡ್ಕರ ವಿಶ್ಲೇಷಿಸಿದ್ದರು ಎಂದು ಚಂದ್ರಬಾನು ಪ್ರಸಾದ ಹೇಳುತ್ತಾರೆ. ಕಡೆಗೆ ಚಂದ್ರಭಾನು ಪ್ರಸಾದರು ಹೇಳುವುದು ಭಾರತದ ಸರ್ಕಾರ ದಲಿತೇತರರನ್ನು ದಲಿತರೊಂದಿಗೆ ಸಹ ಭೋಜನ ಮಾಡುವಂತೆ ಎಂದೂ ಒತ್ತಾಯ ಮಾಡುವುದಿಲ್ಲ, ಆದರೆ ಮುಕ್ತ ಮಾರುಕಟ್ಟೆ ಈ ಸಹಭೋಜನಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ದಲಿತರು ಹಾಗು ಸವರ್ಣೀಯರನ್ನು ಒಂದೇ ಊಟದ ಟೇಬಲಗೆ ತರುವಂತಹ ಶಕ್ತಿಯನ್ನು ಮುಕ್ತ ಮಾರುಕಟ್ಟೆಗೆ ಇದೆ.

2049ರ ವೇಳೆಗೆ ಭಾರತ ತನ್ನ ಸಂವಿಧಾನತ್ಮಕತೆಯ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ದಲಿತರು ಅಂಬೇಡ್ಕರ ರೂಪಿಸಿದ ಸಂವಿಧಾನ, ಪ್ರಜಾಸತ್ತೆ ಮತ್ತು ಮುಕ್ತ ಮಾರುಕಟ್ಟೆ ಇವು ತಮ್ಮ ಸಮುದಾಯಕ್ಕೆ ಆಶ್ಚರ್ಯಕರ ಅಭಿವೃದ್ಧಿಯನ್ನು ತಂದಿವೆ ಎಂದು ಸಾಬೀತುಪಡಿಸಬೇಕು. ಆ ದಿಸೆಯಲ್ಲಿ ದಲಿತರು ಮೀಸಲಾತಿ, ರೇಷನ ಕಾರ್ಡ್, ಸ್ಕಾಲರಶಿಪಗಳಿಂದ ಹೊರಬರಬೇಕು. ಎಲ್ಲಾ ದಲಿತರು ಒಂದು ಹಾಗೂ ಎರಡನೇ ದರ್ಜೆ ಅಧಿಕಾರಿಗಳು, ಡಾಕ್ಟರುಗಳೂ, ಇಂಜಿನಿಯರಗಳೂ, ಬ್ಯಾಂಕರಗಳೂ, ಸಂಸತ ಸದಸ್ಯರೂ, ವಿಧಾನ ಮಂಡಳಿ ಸದಸ್ಯರೂ ತಮ್ಮ ಮಕ್ಕಳು ಮೀಸಲಾತಿ ಉಪಯೋಗಿಸದಂತೆ ನೋಡಿಕೊಳ್ಳಬೇಕು. ಇದು ಮೀಸಲಾತಿ ಸ್ವತಂತ್ರಗೊಳಿಸುತ್ತದೆ ಎಂಬುದನ್ನು ಸಾಬೀತುಗೊಳಿಸುತ್ತದೆ. ಇದು ಮೀಸಲಾತಿ ವಿರೋಧಿಗಳನ್ನು ಬಾಯಿ ಮುಚ್ಚಿಸುತ್ತದೆ. ( ಆಧಾರ: ದಲಿತ ಡೈರಿ: ಸಂವಾದ ಮಾಸ ಪತ್ರಿಕೆ ).

ಆದರೆ ಈ ಚಂದ್ರಬಾನು ಪ್ರಸಾದರ ಈ ವಿಶಾಲ ಮನೋಭಾವದ, ದಲಿತರ ಆಧುನೀಕರಣದ ಚಲನಶೀಲತೆಯನ್ನು ಎಡಪಂಥೀಯ ಚಿಂತಕರು ತೀವ್ರವಾಗಿ ವಿರೋಧಿಸುತ್ತಾರೆ. ಇವರ ವಿರೋಧಕ್ಕೆ ಮೂಲಭೂತ ಕಾರಣಗಳು ಹಲವು. ಮೊದಲನೆಯದಾಗಿ ಈ ಜಾಗತೀಕರಣದ, ನವವಸಾಹತುಶಾಹಿಯ ಜಗತ್ತಿನಲ್ಲಿ ದಲಿತರು ಇದರೊಂದಿಗೆ ಹೆಜ್ಜೆ ಹಾಕಿದರೆ ಈ ಪೆಡಂಭೂತದ ಹರಿಕಾರರು ಕಾಲಕ್ರಮೇಣ ದಲಿತರನ್ನು ಬಳಸಿಕೊಂಡು ಉಂಡನಂತರ ಬಾಳೆ ಎಲೆಯನ್ನು ಬಿಸಾಡುವಂತೆ ಬಿಸಾಡುತ್ತಾರೆ ಎನ್ನುವ ಆತಂಕ. ಸಾವಿರಾರು ವರ್ಷಗಳಿಂದ ಅಸಮಾನತೆಯನ್ನು, ಅಸ್ಪೃಶ್ಯತೆಯನ್ನು ಪ್ರತಿಪಾದಿಸಿದ ಭಾರತದ ಸಮಾಜ ಸಲೀಸಾಗಿ ದಲಿತರು ತಮ್ಮ ಸಮನಾಗಿ ಆಧುನಿಕರಾಗಿ ಬೆಳೆಯುವುದನ್ನು ಅನುಮೋದಿಸುವುದೇ ಇಲ್ಲ ಆಗ ದಲಿತರು ಸಂಪೂರ್ಣವಾಗಿ ಅತಂತ್ರರಾಗುತ್ತಾರೆ ಎನ್ನುವ ಕಳಕಳಿ.ಇವರ ಈ ಆತಂಕ ನಿಜಕ್ಕೂ ಸಹಜವಾದದುದೇ. ಆದರೆ ಆದರೆ ಸಂವಿಧಾನವನ್ನು ಗೌರವಿಸುವ ನಮ್ಮ ಬುದ್ಧಿಜೀವಿಗಳಿಗೆ ಅತ್ಯಂತ ಮಗ್ಧ ಹಾಗೂ ಕೆಲವು ಸರಳ ಮೂಲಭೂತ ಪ್ರಶ್ನೆಗಳನ್ನು ಹಾಕಿಕೊಳ್ಳಲು ನಿರಾಕರಿಸುತ್ತಾರೆ. ಅತ್ಯಂತ ಮುಖ್ಯ ಪ್ರಶ್ನೆ 90ರ ದಶಕದ ನಂತರದ ಭಾರತದಲ್ಲಿ, ಸಂಪೂರ್ಣ ಜಾಗತೀಕರಣ ಹಾಗೂ ವಸಾಹುತೀಕರಣಗೊಂಡ ಭಾರತದಲ್ಲಿ ಸರ್ಕಾರೀ ನೇಮಕಾತಿಗಳು ಕುಸಿಯುತ್ತಾ ಕ್ರಮೇಣವಾಗಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ದಲಿತರು ಎಲ್ಲಿ ನಿಲ್ಲುತ್ತಾರೆ ಹಾಗೂ ಇವರ ಪ್ರಕಾರ ಎಲ್ಲಿ ನಿಲ್ಲಬೇಕು ?

ಖಾಸಗೀ ಕ್ಷೇತ್ರಗಳಲ್ಲಿ ನಮಗೂ ಮೀಸಲಾತಿಯನ್ನು ಕೊಡಿ ಎಂದು ನಿರಂತರ, ದಣಿವಾಗುವ ತನಕ ಹೋರಾಟ ಮಾಡುತ್ತಿರಬೇಕೇ ? ಇದಕ್ಕೆ ಯಾರು ಭೌತಿಕವಾಗಿ ಜೊತೆಗೂಡುತ್ತಾರೆ?  ಕೇವಲ ಸೆಮಿನಾರಗಳಲ್ಲಿ ಖಾಸಗೀ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಪ್ರತಿಪಾದಿಸುವ ಬುದ್ಧಿಜೀವಿಗಳು ಇದರ ಪರವಾಗಿ ಆಕ್ಟಿವಿಸಂನಲ್ಲಿ ದಲಿತ ಸಂಘಟನೆಗಳೊಂದಿಗೆ ಬೀದಿಗಳಲ್ಲಿ ಭಾಗವಹಿಸುವುದರ ಸಾಧ್ಯತೆಗಳು ಈ ಕಾಲಘಟ್ಟದಲ್ಲಿ ಸಂಪೂರ್ಣ ಕಡಿಮೆ. ಅಲ್ಲದೇ ಆಕ್ಟಿವಿಸಂ ಸಹ ಹೆಚ್ಚೂ ಕಡಿಮೆ ಕ್ಷೀಣಿಸಿರುವ ಇಂದಿನ ದಿನಗಳಲ್ಲಿ, ಇಂದು ಇಂಡಿಯಾ ದೇಶ ಸಂಪೂರ್ಣವಾಗಿ ಜಾಗತಿಕರಣಗೊಂಡು ಮೇಲು ಹಾಗೂ ಮಧ್ಯಮ ಜಾತಿಗಳು ಮತ್ತು ಮೇಲ್ವರ್ಗಗಳು ಮಾತ್ರ ಅದರ ಸಂಪೂರ್ಣ ಲಾಭವನ್ನು ಹೊಡೆದುಕೊಂಡರೆ ತಳಸಮುದಾಯಗಳು ಮತ್ತು ಆದಿವಾಸಿಗಳು ಬೀದಿಗೆ ಬಿದ್ದು ಮತ್ತೆ ಮತ್ತೆ ತಮ್ಮ ಹಕ್ಕುಗಳಿಗಾಗಿ ಸರ್ಕಾರದ ಕಡೆಗೆ, ಚಳುವಳಿಗಳ ಕಡೆಗೆ ಅಸಹಾಯಕತೆಯ, ದೈನ್ಯತೆಯ ನೋಟ ಬೀರಬೇಕಾಗಿ ಬಂದಿರುವ ದುಸ್ಥಿತಿಯಲ್ಲಿ ದಲಿತರು ಇವೆಲ್ಲವನ್ನು ಮೀರಿ ಚಾಲ್ತಿಯಲ್ಲಿರುವ ಜಾಗತೀಕರಣದ ನಡೆಗಳೊಂದಿಗೆ ಜೊತೆಜೊತೆಯಾಗಿ ಹೆಜ್ಜೆ ಹಾಕಿ ಈಗಾಗಲೇ ಅದು ತೆರೆದು ತೋರಿಸಿದ ಹೆಬ್ಬಾಗಿಲುಗಳ ಮೂಲಕ ತಾವೂ ಅದರೊಳಗಿನ ಭಾಗವಾಗುವುದು ಆತ್ಮಾಭಿಮಾನದ ಬದುಕಲ್ಲವೇ?  ಇದು ವಿವೇಕದ ಮಾತಲ್ಲವೇ? ? ಇದಕ್ಕೆ ಬುದ್ಧಿಜೀವಿಗಳು ಈ ರೀತಿಯಾಗಿ ದಲಿತರು ಬಂಡವಾಳಶಾಹಿಗಳಾಗುವುದೆಂದರೆ ತಮ್ಮ ದಲಿತ ಸಂಸ್ಕೃತಿಯನ್ನು ನಾಶಪಡಿಸಿಕೊಂಡಂತೆಯೇ ಸರಿ ಹಾಗೂ ಇದು ದಲಿತ ಪರಂಪರೆಗೆ ವಿರೋಧವಾದದ್ದು ಎಂದು ಎಚ್ಚರಿಸುತ್ತಾರೆ.

ಹಾಗಿದ್ದರೆ ಯಾವುದು ದಲಿತ ಪರಂಪರೆ ? ಮನುವಾದವೇ ? ( ದಲಿತರು ಆಸ್ತಿಯನ್ನು ಹೊಂದುವಂತಿಲ್ಲ) ವರ್ಣಾಶ್ರಮವೇ ? ( ದಲಿತರು ಶಿಕ್ಷಣ ಹಾಗೂ ಮೇಲುಸ್ಥರದಲ್ಲಿ ಬದುಕಲು ಅರ್ಹರಲ್ಲ) ಅಥವ ಮಧ್ಯಮ ಜಾತಿಗಳಿಂದ ದೈಹಿಕವಾಗಿ ನಿರಂತರವಾಗಿ ಹಲ್ಲೆಗೆ, ಅತ್ಯಾಚಾರಕ್ಕೆ ಒಳಗಾಗುತ್ತಿರುವ ಗ್ರಾಮ ಪರಂಪರೆಯೇ ? ಅಥವಾ ಚಮ್ಮಾರ ಪರಂಪರೆಯೇ, ಸತ್ತ ದನವನ್ನು ಎತ್ತುವ ಪರಂಪರೆಯೇ, ಜೀತದ ಪರಂಪರೆಯೇ, ಮಲ ಹೊರುವ ಪರಂಪರೆಯೇ? ನಾವೆಲ್ಲ ಯಾವುದು ಅವೈದಿಕ ಪರಂಪರೆ, ಯಾವುದನ್ನು ದಲಿತರು ಸಂಸ್ಕೃತಿಯೆಂದು ಮುನ್ನಡೆಸಿಕೊಂಡು ಹೋಗಬೇಕೆಂದು ನಮ್ಮ ಬುದ್ಧಿಜೀವಿಗಳಿಗೆ ಇನ್ನೂ ಸ್ಪಷ್ಟತೆಯೇ ಇಲ್ಲ. ಏಕೆಂದರೆ ಉದಾಹರಣೆಗೆ ದಲಿತರ ನಿಜದ ಪರಂಪರೆಯಾದ ಮುಂಟೇಸ್ವಾಮಿಯ ಸಂಸ್ಕೃತಿಯ ಬಗೆಗೆ ಇದುವರೆಗೂ ದಲಿತರೇ ಮಾತಾನಾಡಿದ್ದು ಮತ್ತು ಚಿಂತಿಸಿದ್ದು. ದಲಿತೇತರ ಚಿಂತಕರು ಮುಂಟೇಸ್ವಾಮಿ ಪರಂಪರೆಯನ್ನು ಎತ್ತಿಕೊಂಡು ಚಿಂತಿಸಿದ್ದಾಗಲಿ, ಸಂಶೋದಿಸಿದ್ದಾಗಲಿ ಉದಾಹರಣೆಗಳಿಲ್ಲ. ಹೀಗಿದ್ದ ಮೇಲೆ ಹೇಗೆ ಈ ಬುದ್ದಿಜೀವಿಗಳನ್ನು ನೆಚ್ಚಿಕೊಂಡು ದಲಿತರು ಮತ್ತು ಆದಿವಾಸಿಗಳು ಪರಂಪರೆಯ ರಕ್ಷಣೆಗೆ ಹೋರಾಡಬೇಕು ?

ನನ್ನ ಪ್ರಕಾರ ನಮ್ಮ ಬುದ್ಧಿಜೀವಿಗಳಿಗೆ ಶ್ರಮ ಪರಂಪರೆಯ ಬಗೆಗೆ ಅಪಾರ ಅಜ್ನಾನವಿದೆ. ಉದಾಹರಣೆಗೆ ಇಂದಿನ ಉದ್ಯಮಗಳಲ್ಲಿ ಇಂಜಿನಿಯರಗಳು ಹಾಗೂ ಗುಮಾಸ್ತರು ಸವರ್ಣೀಯರಾದರೂ ಕೆಳಹಂತಗಳಲ್ಲಿ ಅಂದರೆ ವರ್ಕ್ ಶಾಪಗಳಲ್ಲಿ, ಯಂತ್ರಗಳ ಮೇಲೆ ಕೆಲಸ ಮಾಡಲು ದಲಿತ, ಆದಿವಾಸಿಗಳೇ ಬೇಕು. ಈ ಕೆಳ ಹಂತದಿಂದ ಮೇಲಿನ ಹಂತವಾದ ಇಂಜಿನಿಯರಗಳು ಹಾಗೂ ಗುಮಾಸ್ರರು ಹಾಗೂ ಮುಂದೊಂದು ದಿನ ಮಾಲೀಕರೂ ಆಗುವ ಪ್ರಕ್ರಿಯೆಯೇ ಇಂದಿನ ಖಾಸಗಿಕರಣದ ದಿನಗಳಲ್ಲಿ ಬಂಡವಾಳಶಾಹಿಗಳೊಂದಿಗೆ ಜೊತೆಜೊತೆಯಾಗಿ ನಡೆಯುವುದು ಎಂದರ್ಥ. ಇದು ಶ್ರೇಣೀಕೃತ ಸಮಾಜದಲ್ಲಿ ದಲಿತರು ಮೇಲಿನ ಮೆಟ್ಟಿಲುಗಳನ್ನೇರುವುದಲ್ಲದೆ ಮತ್ತಿನ್ನೇನು? ಇದಕ್ಕೇಕೆ ಬುದ್ಧಿಜೀವಿಗಳು ತಗಾದೆ ಎತ್ತುತ್ತಾರೆ? ಕಠಿಣವಾಗಿ ಹೇಳಬೇಕೆಂದರೆ ಒಂದುವೇಳೆ ದಲಿತರು ಈ ರೀತಿಯಾಗಿ ಮೇಲೇರುತ್ತಾ ಮೇಲುಸ್ಥರವನ್ನು ತಲುಪುತಿದ್ದರೆ ಮುಂದಿನ ವರ್ಷಗಳಲ್ಲಿ ತಮ್ಮ ಸೆಮಿನಾರಗಳ ಭೂಗತಲೋಕ್ಕೆ ಖಠಿಚಿಛಿಜ ಸಿಗುವದು ಕಷ್ಟವೆಂದೇನಾದರೂ ಚಿಂತೆಯೇ? ಇದನ್ನು ವಿಸ್ತೃತವಾಗಿ ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಬಡತನದಲ್ಲಿ ಸೂಚ್ಯಾಂಕದಲ್ಲಿ, ದೌರ್ಜನ್ಯಕ್ಕೆ ಒಳಗಾದವರ ಸೂಚ್ಯಾಂಕದಲ್ಲಿ, ಅತ್ಯಾಚಾರಕ್ಕೆ ಒಳಗಾದವರ ಸೂಚ್ಯಾಂಕದಲ್ಲಿ ಇಂದಿಗೂ ದಲಿತ/ಆದಿವಾಸಿ ಜನತೆ ಕಂಡುಬರುತ್ತಾರೆ.ಇದಕ್ಕೆ ಬಿಡುಗಡೆಗೆ ಈ ದಲಿತ ಆರ್ಥಿಕ ಮಾರ್ಗವೂ ಸಹ ಬಿಡುಗಡೆಗೆ ದಾರಿ. ಇಷ್ಟೆಲ್ಲ ಹೇಳಿದ ನಂತರವೂ ನಾವೆಲ್ಲ ಚಂದ್ರಬಾನು ಪ್ರಸಾದರ ಚಿಂತನೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕೆಂದೇನಿಲ್ಲ. ಅನುಮೋದಿಸುವುದೂ ಕಷ್ಟ. ಆದರೆ ಚರ್ಚಿಸಲು ಯಾಕೆ ಹಿಂದೇಟು. ನಮ್ಮ ಬುದ್ಧಿಜೀವಿಗಳ ಈ ಅಸ್ಪೃಶ್ಯತೆ ಅರ್ಥವಾಗುತ್ತಿಲ್ಲ.

Leave a Reply

Your email address will not be published.