ಉಚಿತ ಶಿಕ್ಷಣ ಸಾಕೆ? ಗುಣಮಟ್ಟ ಬೇಡವೇ?


-ಡಾ.ಎಸ್.ಬಿ. ಜೋಗುರ


 

6-14 ವರ್ಷ ವಯೋಮಿತಿಯೊಳಗಿನ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ಕೊಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ನಮ್ಮ ರಾಜ್ಯವನ್ನೂ ಒಳಗೊಂಡು ಅದನ್ನು ಒಪ್ಪಿಕೊಂಡು ಅಂಗೀಕರಿಸಲಾಗಿದೆ. ತೀರ್ಪು 2009 ರಲ್ಲಿಯೇ ನೀಡಲಾದರೂ ಅದಕ್ಕೆ ಅಂಗೀಕಾರ ನೀಡಿದ್ದು ಎಪ್ರಿಲ್ 2010 ರ ಸಂದರ್ಭದಲ್ಲಿ.

ಸಮಾಜದ ಹಿಂದುಳಿದ ವರ್ಗಗಳ ಯಾವುದೇ ಮಗು ಆರ್ಥಿಕ ಹೊರೆಯಿಂದ ಶಿಕ್ಷಣವನ್ನು ಮಧ್ಯದಲ್ಲಿಯೇ ನಿಲ್ಲಿಸಕೂಡದು ಎನ್ನುವ ಆಶಯ ನ್ಯಾಯಾಲಯ ಹಾಗೂ ಸರ್ಕಾರದ್ದಾಗಿದೆ. ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೇ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ [ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯನ್ನು ಹೊರತುಪಡಿಸಿ] ಎಲ್ಲ ಶಾಲೆಗಳೂ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಬೇಕು. ಇನ್ನು ಮಗು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅದು ಹಿಂದುಳಿದ ಆರ್ಥಿಕ ವರ್ಗಗಳಿಗೆ ಸಂಬಂಧಿಸಿದ್ದರೆ ಕೇಂದ್ರ ಸರ್ಕಾರ ಅಂಥಾ ಮಕ್ಕಳಿಗೆ ಆರ್ಥಿಕ ನೆರವನ್ನು ನೀಡುವ ಬಗ್ಗೆಯೂ ತೀರ್ಮಾನಿಸಿದೆ.

ಸಂಬಂಧಿಸಿದ ಶಾಲೆಗಳು ಅಲ್ಲಿ ಅಧ್ಯಯನ ಮಾಡುವ ಮಕ್ಕಳ ಮೇಲೆ ಇದಕ್ಕಿಂತಲೂ ಹೆಚ್ಚಿಗೆ ಖರ್ಚು ಮಾಡುತ್ತವೆ ಎಂದಾದರೆ ಆ ಫೀ ಸವಿವರವನ್ನು ಸಲ್ಲಿಸಿದರೆ ಸರ್ಕಾರ ಆ ಮೊತ್ತವನ್ನೂ ಭರಿಸಲು ತಯಾರಿದೆ. ಇದು ಅಲ್ಪಸಂಖ್ಯಾತ ಅನುದಾನರಹಿತ ಶಾಲೆಗಳಿಗೆ ಸಂಬಂಧಿಸಿ ಮಾತ್ರ. ಮಿಕ್ಕಂತೆ ಈ ದೇಶದಲ್ಲಿ 12.50.775 ಸರ್ಕಾರಿ ಶಾಲೆಗಳಿವೆ. ಅಂದರೆ ಸುಮಾರು 80.2 ಪ್ರತಿಶತ ಸರ್ಕಾರಿ ಶಾಲೆಗಳು, 5.2 ಖಾಸಗಿ ಅನುದಾನಿತ ಶಾಲೆಗಳು, 13.1 ಖಾಸಗಿ ಅನುದಾನ ರಹಿತ ಶಾಲೆಗಳಿವೆ. ಇವುಗಳಲ್ಲಿ ಸುಮಾರು 87.2 ಪ್ರತಿಶತ ಶಾಲೆಗಳು ದೇಶದ ಗ್ರಾಮೀಣ ಭಾಗಗಳಲ್ಲಿವೆ. ಹೀಗಿರುವಾಗ ಉಚಿತ ಶಿಕ್ಷಣವನ್ನು ನೀಡುವಲ್ಲಿ ಅಷ್ಟೊಂದು ತೊಡಕಾಗಲಾರದು.

ಪ್ರಶ್ನೆ ಅಲ್ಲಿ ನೀಡುವ ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದೆ. ಆಂಗ್ಲ ಪತ್ರಿಕೆಯೊಂದು ಮಾಡಲಾದ ವರದಿಯಂತೆ ಅನೇಕ ಮಕ್ಕಳು ದೆಹಲಿಯ ವಕೀಲರುಗಳಿಗೆ ಪತ್ರ ಬರೆಯುತ್ತಿದ್ದು ಆ ಪತ್ರಗಳಲ್ಲಿ ತಾವು ಓದುತ್ತಿರುವ ಶಾಲೆಯಲ್ಲಿಯ ಅನಾನುಕೂಲ ಮತ್ತು ಮೂಲ ಸೌಲಭ್ಯಗಳ ಕೊರತೆ, ಒಟ್ಟಾರೆ ಪಾಠ ಮಾಡದ ಶಿಕ್ಷಕರು, ವಿದ್ಯುತ್ ಸಂಪರ್ಕವಿಲ್ಲದ ಶಾಲೆಗಳು, ಪಾಠ ಮಾಡದೇ ಇರುವ ಶಿಕ್ಷಕರು ಕೇಳಿದರೆ ವಿದ್ಯಾರ್ಥಿಗಳನ್ನು ಥಳಿಸುವ ಬಗ್ಗೆ ಪತ್ರದಲ್ಲಿ ಬರೆದಿರುವುದಿದೆ. ನಮ್ಮ ರಾಜ್ಯದ ಗ್ರಾಮೀಣ ಭಾಗಗಳಲ್ಲಿಯೂ ಈ ಬಗೆಯ ಸೌಲಭ್ಯವಂಚಿತ ಶಾಲೆಗಳು ಇಲ್ಲದಿಲ್ಲ. ಆ ದಿಶೆಯಲ್ಲಿ ಪ್ರತಿಯೊಂದು ರಾಜ್ಯ ಗಂಭೀರವಾಗಿ ಯೋಚಿಸಬೇಕು. ಕ್ರಮ ಕೈಗೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಶಯ ಈ ದೇಶದ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಬರೀ ಉಚಿತ ಶಿಕ್ಷಣ ದೊರೆಯುವುದು ಮಾತ್ರವಾಗಿರದೇ ಗುಣಮಟ್ಟದ ಶಿಕ್ಷಣ ದೊರೆಯುವುದೂ ಆಗಿದೆ. ದೆಹಲಿಯ ಒಂದು ಶಾಲೆಯಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆಯಿಲ್ಲ. ದೆಹಲಿ ಹೈಕೋರ್ಟ್ ಈ ವಿಷಯವಾಗಿ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗದಿರುವ ಬಗ್ಗೆ ಆ ಪತ್ರಿಕೆ ವರದಿ ಮಾಡಿರುವುದಿದೆ.

ಉಚಿತ ಶಿಕ್ಷಣದ ಅತಿ ಮುಖ್ಯವಾದ ಆಶಯವೇ ಮಧ್ಯದಲ್ಲಿ ಶಾಲೆ ಬಿಡಬಾರದು ಎನ್ನುವುದಾಗಿದೆ. ಜೊತೆಗೆ ಎಲ್ಲರಿಗೂ ಶಿಕ್ಷಣವನ್ನು ನೀಡುವ ಮೂಲಕ ಸಾಮಾಜಿಕ ಸಮಾನತೆಯನ್ನು ಸಾಧಿಸುವುದಾಗಿದೆ. ಈ ತೀರ್ಪು ಸುಮಾರು ಪ್ರಾಥಮಿಕ ಹಂತದಲ್ಲಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನಿದ್ದರೆ, ಹಿರಿಯ ಪ್ರಾಥಮಿಕ ಹಂತದಲ್ಲಿ 35 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನಿರಬೇಕು ಎಂದು ಹೇಳಿರುವುದಿದೆ. ಇಷ್ಟು ಮಾತ್ರವಲ್ಲದೇ ಪ್ರತಿಯೊಬ್ಬ ಶಿಕ್ಷಕನಿಗೆ ಒಂದು ವರ್ಗಕೋಣೆಯಾದರೂ ಇರಬೇಕು ಹಾಗೂ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ ಮತ್ತು ಕುಡಿಯಲು ಶುದ್ಧವಾದ ನೀರಿನ ಸೌಕರ್ಯವಿರಬೇಕು. ಆಟದ ಮೈದಾನದ ಜೊತೆಗೆ ಮಧ್ಯಾಹ್ನದ ಬಿಸಿ ಊಟದ ತಯಾರಿಗಾಗಿ ಒಂದು ಪ್ರತ್ಯೇಕವಾದ ಕೋಣೆಯನ್ನು ಹೊಂದಿರುವ ಅವಶ್ಯಕತೆಯನ್ನೂ ಅದು ಪ್ರತಿಪಾದಿಸಿದೆ.

ನಮ್ಮ ದೇಶದಲ್ಲಿ ಸುಮಾರು 9 ಪ್ರತಿಶತ ಶಾಲೆಗಳು ಕೇವಲ ಒಂದೇ ಒಂದು ಕೊಣೆಯನ್ನು ಹೊಂದಿರುವ ಶಾಲೆಗಳಿವೆ. 23 ಪ್ರತಿಶತ ಶಾಲೆಗಳು ಕೇವಲ ಎರಡು ಕೊಣೆಗಳನ್ನು ಹೊಂದಿರುವುದಿದೆ. 2011 ರ ಮಾನವ ಅಭಿವೃದ್ಧಿ ಸೂಚ್ಯಾಂಕದ ಪ್ರಕಾರ ನಮ್ಮ ದೇಶದಲ್ಲಿಯ ಸುಮಾರು 30 ಪ್ರತಿಶತ ಶಾಲೆಗಳು ರಿಪೇರಿಯ ಹಂತದಲ್ಲಿವೆ. ಸುಮಾರು ಅರ್ಧದಷ್ಟು ಶಾಲೆಗಳಲ್ಲಿ ಬಾಲಕಿಯರ ಶೌಚಾಲಯಗಳಿಲ್ಲ. ಬಿಹಾರದಲ್ಲಿ ಕೇವಲ 3 ಪ್ರತಿಶತ, ಜಾರ್ಖಂಡದಲ್ಲಿ 6.5 ಪ್ರತಿಶತ, ಆಸ್ಸಾಮ್ ರಾಜ್ಯದಲ್ಲಿ ಕೇವಲ 7 ಪ್ರತಿಶತ ಮಾತ್ರ ವಿದ್ಯುತ್ ಸಂಪರ್ಕ ಹೊಂದಿರುವ ಶಾಲೆಗಳಿವೆ. ನಮ್ಮ ದೇಶದ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಅನೇಕ ಬಗೆಯ ಕೊರತೆಗಳಿವೆ ಅವುಗಳ ನಡುವೆಯೇ ಹೀಗೆ ಉಚಿತ, ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶ ಸರ್ಕಾರದ ಮುಂದಿರುವುದು ಒಳ್ಳೆಯ ಹೆಜ್ಜೆಯಾದರೂ ಕೊರತೆಗಳ ನಿವಾರಣೆಗೆ ಮುಂದಾಗಬೇಕಾಗಿರುವುದು ಕೂಡಾ ಸದ್ಯದ ತುರ್ತಾಗಿದೆ. ಶಿಕ್ಷಕರ ಕೊರತೆ, ಕೊಠಡಿಗಳ ಕೊರತೆ, ಮೈದಾನದ ಕೊರತೆ, ಶೌಚಾಲಯಗಳ ಕೊರತೆ, ಕುಡಿಯುವ ಶುದ್ಧ ನೀರಿನ ಕೊರತೆ ಹೀಗೆ ಇನ್ನೂ ಅನೇಕ ಕೊರತೆಗಳ ನಡುವೆಯೇ ಗುಣಮಟ್ಟದ ಅನ್ವೇಷಣೆ ಅನಿರೀಕ್ಷಿತವಾಗಬಹುದು.

ಪ್ರಾಥಮಿಕ ಹಂತದ ಶಿಕ್ಷಣ ಬುನಾದಿಯ ಶಿಕ್ಷಣ. ಉನ್ನತ ಶಿಕ್ಷಣದ ಗುಣಮಟ್ಟಕ್ಕೂ ಹಾಗೂ ಪ್ರಾಥಮಿಕ ಶಿಕ್ಷಣದ ಕಲಿಕೆಗೂ ನೇರವಾದ ಸಂಬಂಧವಿದೆ. ಅಡಿಪಾಯವೇ ಗಟ್ಟಿಯಿಲ್ಲದಿದ್ದರೆ ಗಿಡದ ಬುಡಕ್ಕೆ ನೀರನ್ನು ಹಾಕದೇ ಅದರ ಎಲೆಯ ಮೇಲೆ ಹಾಕಿದಂತಾಗುತ್ತದೆ. ಹಾಗಾದಾಗ ಉಚಿತ ಶಿಕ್ಷಣ ಮಧ್ಯಾಹ್ನದ ಬಿಸಿ ಊಟದ ಯೋಜನೆಯ ಹಾಗೆ ಒಂದು ಜನಪ್ರಿಯ ಯೋಜನೆಯಾಗಿ ಉಳಿಯಬಲ್ಲದೇ ಹೊರತು ಉತ್ಕೃಷ್ಟವಾದ ಶಿಕ್ಷಣವನ್ನು ನೀಡುವಲ್ಲಿ ನೆರವಾಗದು. ಕಲಿಕೆ ಎನ್ನುವುದು ಒಂದು ಮೌಲಿಕವಾದ ಪ್ರಕ್ರಿಯೇ. ಅದು ಕಲಿಯುವವರಿಗೆ ಮತ್ತು ಕಲಿಸುವವರಿಗೆ ಉಲ್ಲಾಸಿತ ಪರಿಸರವನ್ನು ರೂಪಿಸಿಕೊಟ್ಟಾಗ ಮಾತ್ರ ಉಚಿತ ಶಿಕ್ಷಣದ ಜೊತೆಯಲ್ಲಿ ಗುಣಮಟ್ಟದ ಶಿಕ್ಷಣವನ್ನೂ ನೀಡಿದಂತಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕವಿರುವ ಶಿಕ್ಷಕರ ಹುದ್ದೆಯನ್ನು ತುಂಬಬೇಕು. ವಿಶ್ವದ ಬೇರೆ ಬೇರೆ ರಾಷ್ರಗಳನ್ನು ಗಮನಿಸಿದಾಗ ನಮ್ಮಲ್ಲಿ ಸರಾಸರಿ 47 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿರುವ ಅಂಕಿ ಅಂಶಗಳಿವೆ. ಆದರೆ ಚೈನಾದಲ್ಲಿ 18 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಉತ್ತರ ಅಮೇರಿಕ ಮತ್ತು ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ 14 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಅರಬ್ ರಾಷ್ರಗಳಲ್ಲಿಯೂ 21 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕನಿದ್ದಾನೆ. ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಒಬ್ಬ ಶಿಕ್ಷಕ ಮೇಲ್ವಿಚಾರಣೆ ಮಾಡುವುದು ಭಾರತದಲ್ಲಿ ಮಾತ್ರ. ಇದು ಕೂಡಾ ಗುಣಮಟ್ಟದ ಸುಧಾರಣೆಯಲ್ಲಿ ತೊಡಕಾಗದೇ ಇರದು. ಇಂಥಾ ಹತ್ತಾರು ಪ್ರತಿಕೂಲ ಸಂಗತಿಗಳನ್ನು ಸುಧಾರಿಸುವ ಜೊತೆಗೆ ಉಚಿತ ಶಿಕ್ಷಣವನ್ನು ನೀಡುವಂತಾಗಬೇಕು.

Leave a Reply

Your email address will not be published. Required fields are marked *