ಪರ್ಯಾಯ ರಾಜಕೀಯ ರೂಪಿಸಲು ಇದು ಸಕಾಲ

– ಆನಂದ ಪ್ರಸಾದ್

ಕರ್ನಾಟಕದಲ್ಲಿರುವ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಭ್ರಷ್ಟವಾಗಿದ್ದು ಮತದಾರರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.  ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಭಿನ್ನಮತದಿಂದ ಬೇಸತ್ತ ಹಾಗೂ ರೋಸಿ ಹೋದ ಜನ ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುವ ಸಂಭವ ಮುಂದಿನ ಚುನಾವಣೆಯಲ್ಲಿ ಇದೆ ಎಂಬ ವಾತಾವರಣ ಇರುವಾಗಲೇ ರಾಜ್ಯ ಕಾಂಗ್ರೆಸ್ಸಿನಲ್ಲೂ ಹಲವು ಗುಂಪುಗಳು ಪರಸ್ಪರ ಕಾಲೆಳೆಯುವ ಹುಂಬತನದಲ್ಲಿ ತೊಡಗಿದ್ದು ಮತ್ತೆ ರಾಜ್ಯ ಅತಂತ್ರ ವಿಧಾನ ಸಭೆಗೆ ಹಾಗೂ ತನ್ಮೂಲಕ ರಾಜಕೀಯ ಅಸ್ಥಿರತೆ, ಕುದುರೆ ವ್ಯಾಪಾರದ ವಿಕಾರ ಸ್ಥಿತಿಗೆ ಹೋಗುವ ಸಂಭವ ಕಾಣಿಸುತ್ತಿದೆ.  ಜೆಡಿಎಸ್ ಪಕ್ಷವೂ ಚುನಾವಣೆಗಳಲ್ಲಿ ಬಹುಮತ ಪಡೆಯುವ ಸ್ಥಿತಿಯಲ್ಲಿ ಇಲ್ಲ, ಅದು ಹೆಚ್ಚೆಂದರೆ ಚೌಕಾಸಿ ರಾಜಕೀಯ ಮಾಡುವಷ್ಟು ಸ್ಥಾನ ಪಡೆಯಬಹುದು.  ಇಂಥ ಅತಂತ್ರ ಸನ್ನಿವೇಶದಲ್ಲಿ ರಾಜ್ಯದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಇದು ಹದಗೊಂಡ ಕಾಲವಾಗಿದೆ.  ಆದರೆ ಆ ನಿಟ್ಟಿನಲ್ಲಿ ಮಹತ್ತರ ಕಾರ್ಯಕ್ರಮಗಳು ನಡೆಯುವುದು ಕಂಡುಬರುತ್ತಿಲ್ಲ.

ರೈತ ಸಂಘ, ದಲಿತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಕೂಡಿಕೊಂಡು ಪರ್ಯಾಯ ರಾಜಕೀಯ ಶಕ್ತಿ ರೂಪಿಸುವ ಕ್ರಿಯೆಗೆ ಚಾಲನೆ ನೀಡಿವೆಯಾದರೂ ಅವು ಮಾತ್ರವೇ ಪರ್ಯಾಯ ರಾಜಕೀಯ ಶಕ್ತಿಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ.  ಒಬ್ಬ ಜನಪ್ರಿಯ ಹಾಗೂ ಅನುಭವೀ ರಾಜಕೀಯ ಮುಖದ ಅವಶ್ಯಕತೆ ಈ ಒಕ್ಕೂಟಕ್ಕೆ ಇದೆ.  ಎಲ್ಲರೂ ಒಪ್ಪಬಲ್ಲ, ಸಮೃದ್ಧ ಕರ್ನಾಟಕವನ್ನು ಕಟ್ಟಬಲ್ಲ ಅಂಶಗಳನ್ನು ಉಳ್ಳ ಒಂದು ಪ್ರಣಾಳಿಕೆ ರೂಪಿಸಬೇಕಾದ ಅಗತ್ಯವಿದೆ.  ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಇರುವಂತೆ ಕಾಣುವುದಿಲ್ಲ.  ಅವರ ಗುರಿ ಮುಖ್ಯಮಂತ್ರಿ ಆಗುವುದು.  ಕರ್ನಾಟಕದ ಕಾಂಗ್ರೆಸ್ಸಿನ ಗುಂಪುಗಾರಿಕೆ, ಆ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿರುವ ನಾಯಕರ ಸಂಖ್ಯೆ ನೋಡಿದರೆ ಸಿದ್ಧರಾಮಯ್ಯನವರ ಕನಸು ನನಸಾಗುವ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.  ಹೆಚ್ಚೆಂದರೆ ಒಬ್ಬ ಪ್ರಭಾವಿ ಮಂತ್ರಿ ಸ್ಥಾನವಷ್ಟೇ ಅಲ್ಲಿ ಸಿದ್ಧರಾಮಯ್ಯನವರಿಗೆ ಸಿಗಬಹುದು.  ಈ ಭಾಗ್ಯಕ್ಕೆ ಸಿದ್ಧರಾಮಯ್ಯನವರು ಕಾಂಗ್ರೆಸ್ ಸೇರಬೇಕಾದ ಅಗತ್ಯ ಇರಲಿಲ್ಲ. ಶಾಮನೂರು ಶಿವಶಂಕರಪ್ಪನವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ ನೀಡಬೇಕು ಮತ್ತು ತಾನೇ ಅದಕ್ಕೆ ಸೂಕ್ತ ವ್ಯಕ್ತಿ ಎಂದು ಗರ್ಜಿಸುವುದನ್ನು ನೋಡಿದರೆ ಅವರೂ ಮುಖ್ಯಮಂತ್ರಿ ಸ್ಥಾನದ ಪ್ರಧಾನ ಆಕಾಂಕ್ಷಿ ಎಂದು ತಿಳಿಯಬಹುದು. ಏಕೆಂದರೆ ಚುನಾವಣಾಪೂರ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದವರೇ ಚುನಾವಣೆಗಳಲ್ಲಿ ಗೆದ್ದರೆ ಮುಖ್ಯಮಂತ್ರಿಯಾಗುವ ಸಂಭಾವ್ಯತೆ ಕಾಂಗ್ರೆಸ್ ಪಕ್ಷದಲ್ಲಿದೆ.  ಹೀಗಾದರೆ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕೇಳುವವರೂ ಇರುವುದಿಲ್ಲ.  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆದ ಸಿದ್ಧರಾಮಯ್ಯನವರು ಸಾಮಾನ್ಯ ಮಂತ್ರಿ ಸ್ಥಾನ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ.  ಒಂದು ವೇಳೆ ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಸಿನಲ್ಲಿ ಲಭಿಸಿದರೂ ಅದರ ಜೊತೆಗೆ ಭೀಕರ ಭಿನ್ನಮತವೂ ಭುಗಿಲೇಳುವ ಸಂಭವ ಹೆಚ್ಚಾಗಿರುವುದರಿಂದ ಸಮರ್ಪಕ ಆಡಳಿತ ನಡೆಸಲು ಸಾಧ್ಯವಾಗಲಿಕ್ಕಿಲ್ಲ.   ಹೀಗಾಗಿ ಸಿದ್ಧರಾಮಯ್ಯನವರ ರಾಜಕೀಯ ಜೀವನ ಅಲ್ಲಿಗೆ ಕೊನೆಗೊಳ್ಳುವ ಸಂಭವ ಇದೆ.  ಇಂಥ ಅತಂತ್ರ ಸನ್ನಿವೇಶದಲ್ಲಿ ಸಿದ್ಧರಾಮಯ್ಯನವರು ಪರ್ಯಾಯ ರಾಜಕೀಯ ರೂಪಿಸುವ ಒಂದು ಪ್ರಯೋಗ ಮಾಡಿ ನೋಡಲು ಸಾಧ್ಯವಿದೆ.  ಇಂದಿನ ರಾಜ್ಯದ ಅತಂತ್ರ ಸ್ಥಿತಿಯಲ್ಲಿ ಇದು ಒಂದೇ ಚುನಾವಣೆ ಎದುರಿಸಿ ಸಾಧ್ಯವಾಗಲೂಬಹುದು ಅಥವಾ ವಿಫಲವಾಗಲೂಬಹುದು.  ಹೇಗಿದ್ದರೂ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಕಾಣಿಸುತ್ತಿಲ್ಲ.  ಜೆಡಿಎಸ್ ಪಕ್ಷಕ್ಕೆ ಅವರು ಮರಳಿ ಹೋಗುವ ಸಾಧ್ಯತೆ ಇಲ್ಲ, ಹೋದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಂಭವ ಇಲ್ಲ.   ಆ ಸ್ಥಾನ ಹೇಗಿದ್ದರೂ ದೇವೇಗೌಡರ ಕುಟುಂಬದ ಸದಸ್ಯರಿಗೆ ಮೀಸಲಾಗಿದೆ.   ಹೀಗಾಗಿ ಪರ್ಯಾಯ ರಾಜಕೀಯದ ನಾಯಕತ್ವವನ್ನು ಸಿದ್ಧರಾಮಯ್ಯ ವಹಿಸಿಕೊಳ್ಳುವುದರಿಂದ ನಷ್ಟವೇನೂ ಇಲ್ಲ ಎನಿಸುತ್ತದೆ.

ಪ್ರಸಕ್ತ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಇರುವ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ, ವಂಶವಾಹಿ ರಾಜಕೀಯವನ್ನು ವಿರೋಧಿಸುವ, ಪ್ರಗತಿಶೀಲ ನಿಲುವಿನ ಚಿಂತನಶೀಲ ರಾಜಕಾರಣಿಗಳು ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಪರ್ಯಾಯ ರಾಜಕೀಯ ರೂಪಿಸುವ ಕಾರ್ಯದಲ್ಲಿ ತೊಡಗಬೇಕಾದ ಅಗತ್ಯ ಇದೆ.  ಉದಾಹರಣೆಗೆ ಉಗ್ರಪ್ಪ, ಬಿ.ಎಲ್. ಶಂಕರ್, ಕೃಷ್ಣ ಭೈರೇಗೌಡ, ವಿ.ಆರ್. ಸುದರ್ಶನ್, ಪಿ.ಜಿ. ಆರ್. ಸಿಂಧ್ಯಾ ಇತ್ಯಾದಿ ತಮ್ಮ ಪಕ್ಷವನ್ನು ಬಿಟ್ಟು ಹೊರಬಂದು ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಬೇಕಾದ ಅಗತ್ಯ ಇದೆ.  ಎಲ್ಲರೂ ಒಗ್ಗೂಡಿ ಪರ್ಯಾಯ ರಾಜಕೀಯ ಶಕ್ತಿಗೆ ಬಲ ತುಂಬಬೇಕಾದ ಅಗತ್ಯ ಇದೆ.  ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟತೆಯ ವಿರುದ್ಧ ದಿಟ್ಟ ನಿಲುವಾಗಲಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವವಾಗಲಿ ಕಂಡುಬರುತ್ತಿಲ್ಲ.  ಕಾಂಗ್ರೆಸ್ಸಿನ ಯಾವ ನಾಯಕರೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇಚ್ಛಾಶಕ್ತಿಯನ್ನು ತೋರಿಸುವ ಸಂಭವ ಕಾಣಿಸುತ್ತಿಲ್ಲ.  ಹೀಗಿರುವಾಗ ಆ ಪಕ್ಷದಲ್ಲಿ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವ ಇರುವ ರಾಜಕಾರಣಿಗಳು ಇದ್ದು ಮಾಡುವುದೇನೂ ಉಳಿದಿಲ್ಲ.  ಅಲ್ಲಿ ಜೀ ಹುಜೂರ್ ಎಂದು ಬೆನ್ನು ಬಗ್ಗಿಸಿ ಗುಲಾಮಗಿರಿ ಮಾಡುವ ಬದಲು ಆತ್ಮಾಭಿಮಾನ ಇರುವ ರಾಜಕಾರಣಿಗಳು ಆ ಪಕ್ಷವನ್ನು ಧಿಕ್ಕರಿಸಿ ಹೊರಬರಬೇಕು.  ಎಡ ಪಕ್ಷಗಳು, ಪ್ರಗತಿಶೀಲ ಸಂಘಟನೆಗಳು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳು ಪ್ರಣಾಳಿಕೆಯೊಂದನ್ನು ರೂಪಿಸಿ ಒಗ್ಗೂಡಿ ಪರ್ಯಾಯ ಚುನಾವಣಾಪೂರ್ವ ಮೈತ್ರಿಕೂಟವೊಂದನ್ನು ಸ್ಥಾಪಿಸಿ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಚುನಾವಣೆಗೆ ಹೋದರೆ ಅನುಕೂಲ ಆಗಬಹುದು.  ಇಂದಿನ ಕರ್ನಾಟಕದ ಅತಂತ್ರ ಸ್ಥಿತಿಯನ್ನು ನೋಡಿದರೆ ಯಾವುದೇ ರಾಜಕೀಯ ಪಕ್ಷ ಬಹುಮತ ಪಡೆಯುವ ಸಂಭವ ಕಾಣಿಸುತ್ತಿಲ್ಲ.  ಹೀಗಾಗಿ ಕೇರಳದಲ್ಲಿ ಇರುವಂತೆ ಹಲವು ರಾಜಕೀಯ ಪಕ್ಷಗಳ  ಮೈತ್ರಿಕೂಟವೊಂದನ್ನು ಸ್ಥಾಪಿಸಿ ದೃಢವಾದ ಪ್ರಗತಿಶೀಲ ಸರಕಾರವೊಂದನ್ನು ನೀಡಲು ಸಾಧ್ಯವಿದೆ.

ಸಿದ್ಧರಾಮಯ್ಯನವರಂಥ ರಾಜಕಾರಣಿಗಳು ಕಾಂಗ್ರೆಸ್ಸಿನಂಥ ಯಜಮಾನ ಸಂಸ್ಕೃತಿಯ ಪಕ್ಷವನ್ನು ಸೇರಿದ್ದೇ ದೊಡ್ಡ ತಪ್ಪು.  ಆ ಪಕ್ಷದಲ್ಲಿ ಪ್ರಾಮಾಣಿಕ ಹಾಗೂ ಶಕ್ತ ನಾಯಕತ್ವ ಗುಣ ಉಳ್ಳ ರಾಜಕಾರಣಿಗಳಿಗೆ ಬೆಲೆ ಇಲ್ಲ.  ನಾಯಕತ್ವ ಗುಣ ಉಳ್ಳ ರಾಜಕಾರಣಿಗಳನ್ನು ಗುರುತಿಸುವ ವ್ಯವಸ್ಥೆಯೂ ಆ ಪಕ್ಷದಲ್ಲಿ ಇಲ್ಲ.  ಅಲ್ಲಿ ಏನಿದ್ದರೂ ಪಕ್ಷದ ಅಧ್ಯಕ್ಷರಿಗೆ, ಒಂದು ಕುಟುಂಬಕ್ಕೆ ನಿಷ್ಠೆ ತೋರುವವರಿಗೆ ಮಾತ್ರ ಬೆಲೆ.  ಆ ಕುಟುಂಬಕ್ಕೆ ರಾಜಕೀಯದ ಸಮರ್ಪಕ ಜ್ಞಾನವಾಗಲೀ, ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳೂ ತಿಳಿದಿರುವಂತೆ ಕಾಣುವುದಿಲ್ಲ.  ಭ್ರಷ್ಟಾಚಾರದ ವಿರುದ್ಧ ಹೋರಾಡುವ, ದೇಶದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವ ಎಲ್ಲ ಅಧಿಕಾರವಿದ್ದರೂ ಇಚ್ಚಾಶಕ್ತಿಯನ್ನು ಪ್ರದರ್ಶಿಸದ, ಅದನ್ನು ಬಳಸದ ನಿಷ್ಕ್ರಿಯ ನಾಯಕತ್ವ ದೇಶಕ್ಕೆ ಶಾಪವಾಗಿದೆ.  ಇದರಿಂದ ಹೊರಬರುವ, ಪರ್ಯಾಯವನ್ನು ರೂಪಿಸುವ ಅಗತ್ಯ ಇಂದು ಇದೆ.

One thought on “ಪರ್ಯಾಯ ರಾಜಕೀಯ ರೂಪಿಸಲು ಇದು ಸಕಾಲ

Leave a Reply

Your email address will not be published. Required fields are marked *