Monthly Archives: July 2012

ಪೇಜಾವರ ಸ್ವಾಮಿ ಉಪವಾಸ ನಾಟಕದಲ್ಲಿ ಉಪವಾಸ ಬಿದ್ದ ಕುಡುಬಿಗಳು

-ನವೀನ್ ಸೂರಿಂಜೆ

ಮಂಗಳೂರು ವಿಶೇಷ ಆರ್ಥಿಕ ವಲಯದ ಎರಡನೇ ಹಂತದ ಯೋಜನೆಗಾಗಿ ಸರ್ಕಾರ ಭೂಸ್ವಾಧೀನಗೊಳಿಸಲು ಮಾಡಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ಜುಲೈ 13 ಕ್ಕೆ ಬರೋಬ್ಬರಿ ಒಂದು ವರ್ಷ ಸಂದುತ್ತದೆ. ಎರಡನೇ ಹಂತದ ಭೂಸ್ವಾಧೀನಕ್ಕಾಗಿ ಅಧಿಸೂಚನೆಗೊಳಿಸಿದ 2035 ಎಕರೆ ಪ್ರದೇಶವನ್ನು ಕೈಬಿಡಬೇಕು ಎಂದು ರೈತ ಹೋರಾಟದ ಭಾಗವಾಗಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಬೆಂಗಳೂರಿನಲ್ಲಿ 2011 ಜುಲೈ 12 ರಂದು ಪತ್ರಿಕಾಗೋಷ್ಠಿ ನಡೆಸಿ ಉಪವಾಸ ಘೋಷಣೆ ಮಾಡಿದ್ದರು. ಮರುದಿವಸವೇ ಸರ್ಕಾರ ಎರಡನೇ ಹಂತಕ್ಕಾಗಿನ ಭೂಸ್ವಾಧೀನವನ್ನು ಕೈಬಿಟ್ಟಿತ್ತು. ಪಕ್ಕಾ ರೈತರ ಹೋರಾಟವಾಗಿದ್ದ ಈ ಸೆಝ್ ವಿರುದ್ಧದ ಹೋರಾಟಕ್ಕೆ ಪೇಜಾವರ ಎಂಟ್ರಿ ನೀಡಿದ್ದು ಕುಡುಬಿಪದವಿನ ಭೂಸ್ವಾಧೀನ ಹಿನ್ನಲೆಯಲ್ಲಿ. ಬಡವರೂ ಅನಕ್ಷರಸ್ಥರೂ ಆಗಿರುವ ಮತ್ತು  ಪರಿಶಿಷ್ಠ ಪಂಗಡಕ್ಕೆ ಸೇರಬೇಕಿದ್ದ 9 ಕುಡುಬಿ ಕುಟುಂಬಗಳ ಬಲವಂತದ ಭೂಸ್ವಾಧೀನದ ವಿರುದ್ಧ ಇದ್ದ ಅಲೆಯನ್ನು ಬಳಕೆ ಮಾಡಿಕೊಂಡ ಪೇಜಾವರ ಸ್ವಾಮಿ, ಸೆಝ್ ವಿರುದ್ಧದ ಹೋರಾಟಕ್ಕೆ ದುಮುಕಿದರು. ಇದೀಗ ಪೇಜಾವರ ಉಪವಾಸ ಘೋಷಣೆ ಮತ್ತು ಅಧಿಸೂಚನೆ ರದ್ದಿಗೆ ಒಂದು ವರ್ಷ ಸಂದುತ್ತಾ ಬಂದರೂ ಕುಡುಬಿಗಳ ಭೂಮಿ ಮರಳಲೇ ಇಲ್ಲ. ಕುಡುಬಿಗಳ ಉಪವಾಸ ನಿಲ್ಲಲೇ ಇಲ್ಲ.

ಪೇಜಾವರರ ಉಪವಾಸ ನಾಟಕ

ಮಂಗಳೂರು ವಿಶೇಷ ಆರ್ಥಿಕ ವಲಯದ ಎರಡನೇ ಹಂತಕ್ಕಾಗಿ ಅಧಿಸೂಚನೆಗೊಳಿಸಿದ 2035 ಎಕರೆ ಪ್ರದೇಶವನ್ನು ಡಿನೋಟಿಫೈಗೊಳಿಸಬೇಕು ಮತ್ತು ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರದ ಸಾಧಕ ಬಾಧಕ ಅಧ್ಯಯನದ ತಂಡದಲ್ಲಿ ನಾಗರಿಕರ ಪರವಾಗಿ ಇಬ್ಬರನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು 2011 ಜುಲೈ 13 ರಂದು ಉಪವಾಸ ಕುಳಿತುಕೊಳ್ಳುವುದಾಗಿ ಜುಲೈ 12 ರಂದು ಅಂತಿಮ ನಿರ್ಧಾರ ಪ್ರಕಟಿಸಿದ್ದರು. ಪೇಜಾವರ ತನ್ನ ನಿಲುವನ್ನು ಪ್ರಕಟಿಸಿದ ಒಂದೆರಡು ತಾಸುಗಳಲ್ಲೇ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾಧ್ಯಮ ಹೇಳಿಕೆಯನ್ನು ನೀಡಿ “ಪೇಜಾವರ ಶ್ರೀಗಳ ಬೇಡಿಕೆಗೆ ಸರ್ಕಾರ ಒಪ್ಪಿದೆ. 2035.31 ಎಕರೆಯಲ್ಲಿ 1998.03 ಎಕರೆ ಪ್ರದೇಶವನ್ನು ಡಿನೋಟಿಫೈ ಮಾಡಲಾಗುವುದು. ಉಳಿದ 37.27 ಎಕರೆ ಪ್ರದೇಶ ರಸ್ತೆ ಮತ್ತಿತರರ ಮೂಲಭೂತ ಸೌಕರ್ಯಗಳಿಗೆ ಬೇಕಾಗಿದೆ” ಎಂದಿದ್ದರು. ಆಶ್ಚರ್ಯವಾದರೂ ಸತ್ಯ ಏನೆಂದರೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಈ ಉತ್ತರವನ್ನು ಜೂನ್ 26 ರಂದೇ ಸಿದ್ಧಪಡಿಸಿದ್ದರು!

2011 ಜೂನ್ 26 ರಂದು ರವಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಖಾಸಗಿ ನಿವಾಸದಲ್ಲಿ ಸಭೆಯೊಂದನ್ನು ನಿಗಧಿಗೊಳಿಸಲಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯದ ವಿವಾದದ ಕುರಿತಾಗಿಯೇ ಈ ಸಭೆಯನ್ನು ಕರೆಯಲಾಗಿತ್ತು. ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಅಂದಿನ ಪರಿಸರ ಸಚಿವ ಕೃಷ್ಣ ಜೆ.ಪಾಲೇಮಾರ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಸಹಿತ ಮಂಗಳೂರು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್, ಆರ್‌ಎಸ್‌ಎಸ್‌ನ ಕಲ್ಲಡ್ಕ ಪ್ರಭಾಕರ ಭಟ್, ಜಯದೇವ್ ಭಾಗವಹಿಸಿದ್ದರು. ಸುಮಾರು 8 ಗಂಟೆಗೆ ಆರಂಭವಾದ ಸಭೆ 9.30ಕ್ಕೆ ಕೊನೆಗೊಂಡಿತ್ತು. ಮುಖ್ಯಮಂತ್ರಿ ನಿವಾಸದಲ್ಲಿ ಅಧಿಕೃತವಾಗಿಯೇ ನಡೆದ ಸಭೆಯಲ್ಲಿ 1998.03 ಎಕರೆ ಜಮೀನನ್ನು ಡಿನೋಟಿಪೈ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಎಸ್ಇಝಡ್ ವಿರುದ್ಧ ದಲಿತರಿಂದ ಆರಂಭವಾದ ರೈತ ಹೋರಾಟವನ್ನು ಪೇಜಾವರರ ಕೈಗೆ ಒಪ್ಪಿಸಿದವರಲ್ಲಿ ಒಬ್ಬರಾಗಿರುವ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಈ ಸಭೆಯಲ್ಲಿದ್ದರು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಮಧುಕರ ಅಮೀನ್ ಈ ಸಭೆಯ ನಿರ್ಣಯಗಳನ್ನು ಪೇಜಾವರ ಸ್ವಾಮಿಯ ಗಮನಕ್ಕೆ ತಂದಿಲ್ಲದಿರುವ ಸಾಧ್ಯತೆಗಳೇ ಇಲ್ಲ. ಇನ್ನೊಂದೆಡೆ ಆರ್‌ಎಸ್‌ಎಸ್‌ನ ಪ್ರಮುಖರಿದ್ದ ಸಭೆಯ ನಿರ್ಣಯಗಳು ಪೇಜಾವರ ಶ್ರೀಗಳಿಗೆ ತಿಳಿದಿರಲೇಬೇಕು. ಹಾಗಿದ್ದರೆ ಜೂನ್ 26 ರಂದು ಸರ್ಕಾರ 1998.03 ಎಕರೆಯನ್ನು ಡಿನೋಟಿಪೈಗೊಳಿಸಲು ನಿರ್ಧಾರ ಮಾಡಿತ್ತಾದರೂ ಜುಲೈ 12 ರಂದು ಪೇಜಾವರ ಪತ್ರಿಕಾಗೋಷ್ಠಿ ನಡೆಸಿ ನಿರಶನ ಕೈಗೊಳ್ಳುವ ಬಗ್ಗೆ ಪ್ರಕಟ ಮಾಡಿದ್ದೇಕೆ? ಜೂನ್ 26 ರಂದು ಮಾಡಿದ ನಿರ್ಣಯವನ್ನು ಪೇಜಾವರ ಉಪವಾಸ ಘೋಷಣೆಯ ನಂತರ ಸರ್ಕಾರ ಬಹಿರಂಗಗೊಳಿಸಿದ್ದೇಕೆ ಎಂಬ ಪ್ರಶ್ನೆಗಳಲ್ಲೇ ಉತ್ತರವಿದೆ.

2011 ಜೂನ್ 26 ರಂದು ಮುಖ್ಯಮಂತ್ರಿ ನಿವಾಸದಲ್ಲಿ ಸೆಝ್ ಕುರಿತಾದ ಸಭೆ ನಡೆದಿರುವ ಬಗ್ಗೆ ಯಾರೂ ಅಲ್ಲಗಳೆಯುವಂತಿಲ್ಲ. ರಾಜ್ಯದ ಪ್ರಮುಖ ದಿನಪತ್ರಿಕೆಗಳ ಬೆಂಗಳೂರು ಆವೃತ್ತಿಯಲ್ಲಿ ಈ ಬಗ್ಗೆ ವರದಿಯಾಗಿತ್ತು. ಜೂನ್ 27 ರಂದು ಧರ್ಮಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದನ್ನು ಸ್ಪಷ್ಟಪಡಿಸಿದ್ದರೂ ಕೂಡಾ. ಆದರೆ ಮಾಧ್ಯಮಗಳಿಗೆ ಆ ಸುದ್ಧಿ ಬೇಕಾಗಿರಲಿಲ್ಲ. ಪತ್ರಕರ್ತರಿಗೆ (ನನಗೂ ಸೇರಿ) ಬೇಕಾಗಿದ್ದಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ನಡೆಯಬೇಕಿದ್ದ ಆಣೆ ಪ್ರಮಾಣದ ವಿಚಾರ ಮಾತ್ರ! ಮಾತ್ರವಲ್ಲದೆ ಜೂನ್ 26 ರಂದು ನಡೆದ ಈ ಸಭೆಯಲ್ಲಿ ಕೃಷಿಕರ ಪರವಾಗಿ ಕೃಷಿಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಭಾಗವಹಿಸಿದ್ದು ಎಲ್ಲಾ ರೈತರಿಗೂ ಗೊತ್ತಿರುವ ಸಂಗತಿಯೇ. ಹಾಗಿದ್ದರೂ ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ವ್ಯವಸ್ಥೆಯ ವಿರುದ್ಧದ ರೈತ ಬಂಡಾಯದ ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ. ಸಾಧು ಸಂತರ ಕಡೆಯಿಂದ ಹೋರಾಟ ನಡೆದರೆ ತಕ್ಷಣ ನ್ಯಾಯ ಸಿಗುತ್ತದೆ ಎಂಬ ಬಗ್ಗೆ ಜನರಲ್ಲಿ ನಂಬಿಕೆಯನ್ನು ಹುಟ್ಟಿಸಿ ಜನರಲ್ಲಿನ ಹೋರಾಟದ ಕಿಚ್ಚನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದಲೇ ಪೇಜಾವರ ವಿಶ್ವೇಶತೀರ್ಥರಿಂದ ಉಪವಾಸ ಘೋಷಣೆ ಮಾಡಿಸಿ ಸರ್ಕಾರ ತಕ್ಷಣ ಸ್ಪಂದನೆ ನೀಡೋ ನಾಟಕವಾಡಿದೆ.

ಸೆಝ್ ವಿರುದ್ಧ ಹೋರಾಟ ಆರಂಭಿಸಿದ್ದು ದಲಿತರು

ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧ ನೇರವಾಗಿ ಹೋರಾಟ ಆರಂಭಿಸಿದ್ದು ದಲಿತರು ಎಂಬುದನ್ನು ಪೇಜಾವರರ ಮುಖ ಪ್ರಭಾವ ಅಳಿಸಿ ಹಾಕಿದ್ದರಿಂದ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಮುದೆ, ಕಳವಾರು ಗ್ರಾಮದಲ್ಲಿ ಎಂಎಸ್ಇಝೆಡ್‌ನ ಪ್ರಥಮ ಹಂತಕ್ಕಾಗಿ ಫಲವತ್ತಾದ 1800 ಎಕರೆ ಕೃಷಿ ಭೂಮಿ ಸ್ವಾಧೀನಗೊಂಡ ಬಳಿಕ 2007 ಮೇ 05 ರಲ್ಲಿ ದ್ವಿತೀಯ ಹಂತದ ಎಂಎಸ್ಇಝೆಡ್‌ಗಾಗಿ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ 2035 ಎಕರೆ ಭೂಮಿ ಅಧಿಸೂಚನೆಗೊಳಡಿಸಲಾಗಿತ್ತು. 1800 ಎಕರೆ ಭೂಮಿಯಲ್ಲಿನ ರೈತರು ಸೆಝ್ ವಿರುದ್ಧ ಹೋರಾಟ ನಡೆಸದ ಹಿನ್ನಲೆಯಲ್ಲಿ ಅವರ ಭೂಮಿಯನ್ನು ಸ್ವಾಧೀನಗೊಳಿಸುವುದು ಕಷ್ಟಕರವಾಗಿರಲಿಲ್ಲ. ಪೆರ್ಮುದೆ ಕಳವಾರು ಗ್ರಾಮದ ರೈತರಲ್ಲಿ ಕಾಂಚಣ ಕುಣಿದಾಡೋ ಸಂಧರ್ಭದಲ್ಲಿ ಪಕ್ಕದ ಎಕ್ಕಾರಿನ ಗ್ರಾಮಸ್ಥರಲ್ಲಿ ಸೆಝ್ ವಿರುದ್ಧ ಜನಜಾಗೃತಿ ಮೂಡಿಸುವುದು ಸುಲಭವಾಗಿರಲಿಲ್ಲ. ಈ ಸಂಧರ್ಭದಲ್ಲಿ ಸೆಝ್ ಭಾದಕಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದ ಪರಿಸರವಾದಿಗಳಾದ ನಟೇಶ್ ಉಳ್ಳಾಲ್ ಮತ್ತು ವಿದ್ಯಾದಿನಕರ್‌ಗೆ ಸಿಕ್ಕಿದ್ದು ಎಕ್ಕಾರು ಗ್ರಾಮಸ್ಥರೇ ಆಗಿರುವ . “ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ” ಯ ಜಿಲ್ಲಾ ಪದಾಧಿಕಾರಿಗಳಾದ ಕೃಷ್ಣಪ್ಪ, ರಘು, ಕೃಷ್ಣ ಮತ್ತೊಂದಿಷ್ಟು ದಲಿತ ಮಹಿಳೆಯರು.

ಜನಪ್ರತಿನಿಧಿಗಳೂ ಸೇರಿದಂತೆ ಇಡೀ ಊರಿಗೆ ಊರೇ ಎಸ್ಇಝಡ್‌ನ ಪರಿಹಾರದ ದುಡ್ಡಿಗಾಗಿ ಹಲುಬುತ್ತಿದ್ದ ಸಂಧರ್ಭ ದಲಿತ ಸಂಘರ್ಷ ಸಮಿತಿ ಸದಸ್ಯರಾಗಿರೋ ಕೃಷ್ಣಪ್ಪ, ರಘು, ಕೃಷ್ಣ ಒಂದಷ್ಟು ಜನರನ್ನು ಕಟ್ಟಿಕೊಂಡು ಸೆಝ್ ವಿರುದ್ಧ ಸಂಘರ್ಷಕ್ಕಿಳಿದಿದ್ದರು. ಸಂಘರ್ಷವೆಂದರೆ ಕೇವಲ ಭಾಷಣದ ಸಂಘರ್ಷವಲ್ಲ. ದೈಹಿಕವಾಗಿಯೂ ಸೆಝ್ ಅಧಿಕಾರಿಗಳು, ಕೆಐಎಡಿಬಿ ಸಿಬ್ಬಂಧಿಗಳು, ಸೆಝ್ ಪರ ದಳ್ಳಾಲಿಗಳು, ಗೂಂಡಾಗಳ ವಿರುದ್ಧ ಹೋರಾಡಲಾಗಿತ್ತು. ಆಗ ಪ್ರತೀ ಪತ್ರಿಕೆಗಳಿಗೂ ಪುಟಗಟ್ಟಲೆ ಜಾಹೀರಾತು ಇದ್ದಿದ್ದರಿಂದ ಕೃಷ್ಣಪ್ಪನ ಗಲಾಟೆ ದೊಡ್ಡ ಸುದ್ಧಿಯಾಗಿರಲಿಲ್ಲ. ಕೃಷ್ಣಪ್ಪ, ರಘು, ಕೃಷ್ಣ, ಲಾರೆನ್ಸ್, ವಿಲಿಯಂ, ನಟೇಶ್ ಉಳ್ಳಾಲ್, ವಿದ್ಯಾ ದಿನಕರ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ 9 ದೂರುಗಳು ದಾಖಲಾಗಿರುವುದೇ ಅಂದಿನ ಸಂಘರ್ಷಕ್ಕೆ ಸಾಕ್ಷಿ. ಇಷ್ಟೆಲ್ಲಾ ಸಂಘರ್ಷದ ನಂತರ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ ಕೃಷಿಕರಲ್ಲಿ ಜಾಗೃತಿ ಮೂಡಿದ್ದು. ಇವರ ಹೋರಾಟದ ಮಧ್ಯೆಯೂ ಅಲ್ಲೊಬ್ಬರು ಇಲ್ಲೊಬ್ಬರು ಭೂಮಿ ನೀಡಲು ಮುಂದೆ ಬಂದು ಕೆಐಎಡಿಬಿಗೆ ಒಪ್ಪಿಗೆ ಪತ್ರ ನೀಡಿದ್ದರು. ಕೃಷಿಕರಿಂದ ಒಪ್ಪಿಗೆ ಪತ್ರ ಪಡೆದುಕೊಂಡ ಕೆಐಎಡಿಬಿ ಅಧಿಕಾರಿಗಳು ಜಾರ್ಜ್ ಎಂಬವರ ಮನೆಗೆ ಸರ್ವೆ ಮಾಡಲು ಬಂದಾಗ ಕೃಷ್ಣಪ್ಪ, ರಘು, ಲಾರೆನ್ಸ್ ಬಂದರು ಎಂಬ ಒಂದೇ ಕಾರಣಕ್ಕೆ ದಾಖಲೆಗಳನ್ನು ಬಿಟ್ಟು ಅಧಿಕಾರಿಗಳು ಪರಾರಿಯಾಗಿದ್ದರು. ನಂತರ ಬಜಪೆ ಠಾಣೆಗೆ ಬಂದು ಹೋರಾಟಗಾರರ ವಿರುದ್ಧ ಸುಳ್ಳು ನೀಡಿದ್ದರು ಎಂಬುದು ಬೇರೆ ಮಾತು. ಇಂತಹ ಹೋರಾಟದಿಂದಾಗಿಯೇ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಬಲಗೊಂಡಿತ್ತೇ ಹೊರತು ಸಮಿತಿಯ ಪದಾಧಿಕಾರಿಗಳ ಪ್ರಭಾವದಿಂದಲ್ಲ.

ಜಮಾಅತೆ ಇಸ್ಲಾಮೀ ಹಿಂದ್ ಮತ್ತು ಪೇಜಾವರ

2007 ರಲ್ಲಿ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ ರೈತರು ಹೋರಾಟ ನಡೆಸುತ್ತಿದ್ದ ಸಂಧರ್ಭ ಯಾವೊಬ್ಬರೂ ಜನಪ್ರತಿನಿಧಿಗಳಾಗಲೀ, ಸಂಘಸಂಸ್ಥೆಗಳಾಗಲೀ ರೈತರಿಗೆ ಹೋರಾಟ ನೀಡುತ್ತಿರಲಿಲ್ಲ. ಒಂದೆರಡು ಪತ್ರಕರ್ತರು ಸಣ್ಣ ಡಿಜಿಟಲ್ ಕ್ಯಾಮರ ಹಿಡಿದುಕೊಂಡು ಸುತ್ತಾಡುವುದು ಬಿಟ್ಟರೆ ಪತ್ರಕರ್ತರೂ ಹೋರಾಟವನ್ನು ಕ್ಯಾರೇ ಮಾಡದ ದಿನಗಳವು. ಸೆಝ್‌ನ ದುಡ್ಡಿನ ಪ್ರಭಾವವೇ ಅಂತದ್ದು! ಇಂತಹ ಸಂದರ್ಭದಲ್ಲಿ ಪ್ರಚಾರ ಸಿಗುವುದಿಲ್ಲವೆಂದು ಗೊತ್ತಿದ್ದರೂ ಹೋರಾಟಕ್ಕೆ ಬಂದವರು ಜಮಾ ಅತೆ ಇಸ್ಲಾಮೀ ಹಿಂದ್‌ನ ಮಹಮ್ಮದ್ ಕುಂಜ್ಞ ಮತ್ತು ಒಂದಷ್ಟು ಹುಡುಗರು. ನಿರಂತರವಾಗಿ ನಡೆದ ಹೋರಾಟವನ್ನು ಧರ್ಮಾತೀತ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಮಹಮ್ಮದ್ ಕುಂಜ್ಞರವರು ಕೇಮಾರು ಸಾಂಧೀಪಿನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮಿಯವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಂಡರು. ಅದು ಫಸ್ಟ್ ಟೈಮ್ ಒಬ್ಬ ಕೇಸರಿ ವಸ್ತ್ರಧಾರಿ ವ್ಯಕ್ತಿ ಸೆಝ್ ವಿರುದ್ಧ ಕುಡುಬಿಗಳ ಗದ್ದೆಯ ಬದುಗಳಲ್ಲಿ ನಡೆದಾಡಿದ್ದು. ನಂತರ ನಡೆದಿದ್ದೆಲ್ಲವೂ ಕರಾಳ ಇತಿಹಾಸ. ಧರ್ಮಾತೀತವಾಗಿರಲಿ ಎಂಬ ಉದ್ದೇಶದಿಂದ ಕೇಮಾರು ಸ್ವಾಮಿಯೊಬ್ಬರನ್ನು ಕರೆದರೆ ಕೇಮಾರು ಸ್ವಾಮಿ ಇಡೀ ಹೋರಾಟವನ್ನು ಹೈಜಾಕ್ ಮಾಡಿ ಬಿಟ್ಟಿದ್ದರು. ಮತ್ತೊಂದು ವಾರ ಬಿಟ್ಟು ನಡೆದ ಸಭೆಯಲ್ಲಿ ಗುರುಪುರ ವಜ್ರದೇಹಿ ಸ್ವಾಮಿ, ಕೊಲ್ಯ ರಮಾನಂದ ಸ್ವಾಮಿ, ಒಡಿಯೂರು ಗುರುದೇವಾನಂದ ಸ್ವಾಮಿಗಳಿದ್ದರು. ಸಾಲದೆಂಬಂತೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳ ದಿವ್ಯ ಸಾನಿಧ್ಯವಿತ್ತು. ಯಾವಾಗ ಪೇಜಾವರ ಸ್ವಾಮಿ ಎಂಟ್ರಿಯಾದರೋ ಇಡೀ ಸಂಘಪರಿವಾರ ಕುಡುಬಿಗಳ ಗದ್ದೆಯಲ್ಲಿ ನಡೆದಾಡಿತು. ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಮಾಯವಾಗಿದ್ದು ಯಾರಿಗೂ ಗೊತ್ತಾದಂತೆ ಅನ್ನಿಸಲೇ ಇಲ್ಲ. 2007 ರಲ್ಲೇ ಉಪವಾಸದ ಅಸ್ತ್ರವನ್ನು ಪ್ರಯೋಗಿಸಿದ್ದ ಪೇಜಾವರ ಸ್ವಾಮಿಗಳು ಇಡೀ ಹೋರಾಟವನ್ನು ತನ್ನ ಕೈಗೆ ತೆಗೆದುಕೊಂಡರು. ಜನ ಕ್ರಾಂತಿಕಾರಿ ಹೋರಾಟವನ್ನು ಕೈಬಿಟ್ಟು ಬ್ಲ್ಯಾಕ್‌ಮೇಲ್ ಹೋರಾಟವನ್ನು ಆಯ್ಕೆ ಮಾಡಿಕೊಂಡರು. ಪೇಜಾವರರ ಸುತ್ತ ಇದ್ದ ಈ ಕೇಸರಿ ರೈತ ಹೋರಾಟಗಾರರ ರಶ್ ಮಧ್ಯೆ ಜಮಾ ಅತೆ ಇಸ್ಲಾಮೀ ಹಿಂದ್ ಪೆರ್ಮುದೆಯಿಂದ ಹಿಂದಕ್ಕೆ ನೂಕಲ್ಪಟ್ಟಿತ್ತು.

ಆಗಿನ್ನೂ ಕುಡುಬಿಗಳ 16.04 ಎಕರೆ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿರಲಿಲ್ಲ. ಕುಡುಬಿಗಳಿಗೆ ನೋಟೀಸ್ ಮಾತ್ರ ಜಾರಿಗೊಳಿಸಲಾಗಿತ್ತು. ಈ ಸಂಧರ್ಭವೇ ಕುಡುಬಿಪದವಿಗೆ ಬಂದ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಕುಡುಬಿಗಳಿಗಿಂತ ಹತ್ತಡಿ ದೂರದಲ್ಲಿ ನಿಂತು ಭೂಮಿ ಉಳಿಸಿಕೊಡುವ ಭರವಸೆ ನೀಡಿದ್ದರು. ಭೂಸ್ವಾಧೀನಕ್ಕೆ ಬರೋ ಅಧಿಕಾರಿಗಳನ್ನು ಒದ್ದೋಡಿಸೋ ನಿರ್ಧಾರ ಮಾಡಿದ್ದ ಕೃಷಿಕರು ಪೇಜಾವರ ಸ್ವಾಮಿಗಳ ಭರವಸೆಯನ್ನು ನಂಬಿ ಕೈಕಟ್ಟಿ ಕುಳಿತುಬಿಟ್ಟರು. ಪೇಜಾವರ ಶ್ರೀಗಳು ಬಿಜೆಪಿಯಲ್ಲಿ ಪ್ರಭಾವಶಾಲಿಗಳು. ಅವರೇನಾದರೂ ನಮ್ಮ ಪರವಾಗಿ ಉಪವಾಸ ಕುಳಿತರೆ ಭೂಮಿ ಮುಟ್ಟೋ ಸಾಹಸವನ್ನು ಸರ್ಕಾರ ಮಾಡುವುದಿಲ್ಲ ಎಂದು ರೈತರು ನಂಬಿದ್ದರು. ಆದರೆ ನಡೆದದ್ದೇ ಬೇರೆ.  2007 ನವೆಂಬರ್ 16 ರಂದು ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಒಂದು ದಿನದ ಉಪವಾಸ ವ್ರತ ಕೈಗೊಂಡರು. ಬೆಳಿಗ್ಗೆ 8 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹಾಲು ಬಿಟ್ಟು ಬೇರೇನೂ ಸೇವಿಸದೆ ಕೈಗೊಂಡ ಉಪವಾಸ ಸರ್ಕಾರದ ಮೇಲೆ ಪ್ರಭಾವ ಬೀರಲೇ ಇಲ್ಲ. ಸರ್ಕಾದ ವಿರುದ್ಧ ತೀವ್ರತರಹದ ಹೋರಾಟಗಳು ನಡೆಯಬಾರದು ಎನ್ನೋ ಕಾರಣಕ್ಕಾಗಿಯೇ ಆರ್‌ಎಸ್‌ಎಸ್‌ನ ಕುತಂತ್ರದ ಫಲವಾಗಿಯೇ ಪೇಜಾವರ ಸ್ವಾಮೀಜಿ ಎಸ್ಇಝಡ್ ವಿರುದ್ಧದ ಹೋರಾಟಕ್ಕೆ ದುಮುಕ್ಕಿದ್ದರು ಎಂಬುದು ಅಂದಿನ ದಿನಗಳಲ್ಲೇ ಸಂದೇಹಗಳು ವ್ಯಕ್ತವಾಗಿತ್ತು. 2011 ರ ಜುಲೈ 12 ರದ್ದೂ ಸೇರಿ ಒಟ್ಟು ಐದು ಬಾರಿ ಉಪವಾಸದ ಘೋಷಣೆಯನ್ನು ಪೇಜಾವರ ಸ್ವಾಮಿಗಳು ಮಾಡಿದ್ದಾರೆ. ಪೇಜಾವರ ಸ್ವಾಮಿಗಳು ಮನಸ್ಸು ಮಾಡಿದ್ದರೆ ಅಥವಾ ಮನಸ್ಸು ಮಾಡದೇ ಇದ್ದಿದ್ದರೆ ಅಂದೇ ಕುಡುಬಿಗಳ ಭೂಮಿಯನ್ನು ಉಳಿಸಬಹುದಿತ್ತು. ಪೇಜಾವರ ಸ್ವಾಮಿಗಳು ಹೋರಾಟದ ಮನಸ್ಸು ಮಾಡದೇ ಇದ್ದಿದ್ದರೆ ಕುಡುಬಿಗಳು ಖಂಡಿತವಾಗಿಯೂ ಸಂಘರ್ಷದ ಹಾದಿಯನ್ನು ಹಿಡಿಯುತ್ತಿದ್ದರು. ಆದರೆ ಪೇಜಾವರರನ್ನು ನಂಬಿದ ಮುಗ್ದ, ಅನಕ್ಷರಸ್ಥ ಕುಡುಬಿಗಳನ್ನು ಸರ್ಕಾರ ತನಗೆ ಬೇಕಾದಂತೆ ಬಳಸಿಕೊಂಡು ಕಾರ್ಯಸಾಧನೆ ಮಾಡಿದೆ. ಪೇಜಾವರರ ಬೇಡಿಕೆಯ 2035 ಎಕರೆಯಲ್ಲಿ 37 ಎಕರೆಯನ್ನು ಹೊರತುಪಡಿಸಿ 1998 ಎಕರೆಯನ್ನು ಡಿನೋಟಿಫೈಗೊಳಿಸಿದೆ. ಡಿನೋಟಿಫೈಗೊಳಿಸದ 37.28 ಎಕರೆಯಲ್ಲಿ ಬಹುತೇಕ ಭೂಮಿ ಕುಡುಬಿಗಳಿಗೆ ಸಂಬಂಧಪಟ್ಟಿದ್ದು. ಯಾವ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಪೇಜಾವರ ಸೆಝ್ ವಿರುದ್ಧದ ಹೋರಾಟ ನಡೆಸಿದರೋ ಆ ಮಂದಿಗೆ ನ್ಯಾಯ ಕೊನೆಗೂ ಮರಿಚೀಕೆಯಾಯಿತು.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-27)


– ಡಾ.ಎನ್.ಜಗದೀಶ್ ಕೊಪ್ಪ


1939 ರಲ್ಲಿ ಭಾರತಕ್ಕೆ ವೈಸ್‌ರಾಯ್ ಹುದ್ದೆಗೆ ನೇಮಕವಾಗಿ ದೆಹಲಿಗೆ ಬಂದ ಲಿನ್‌ಲಿಥ್‌ಗೌ, ಜಿಮ್ ಕಾರ್ಬೆಟ್‌ನ ಲೇಖನಗಳನ್ನು ಓದಿ ಅವುಗಳಿಂದ ಪ್ರಭಾವಿತನಾಗಿ, ಕಾರ್ಬೆಟ್‌ನನ್ನು ದೆಹಲಿಗೆ ಕರೆಸಿ ಅವನನ್ನು ಪರಿಚಯಿಸಿಕೊಂಡು ತನ್ನ ಕುಟುಂಬ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. ಲಿನ್‌ಲಿಥ್‌ಗೌ ವೃತ್ತಿಯಲ್ಲಿ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಿರ್ಜನ ಅರಣ್ಯ ಪ್ರದೇಶದಲ್ಲಿ ಅಲೆಯುವುದು, ರಾತ್ರಿ ಟೆಂಟ್ ಹಾಕಿ ಅಲ್ಲಿಯೇ ತಂಗುವುದು, ಮೀನು ಶಿಕಾರಿ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದ. ಹಾಗಾಗಿಯೇ ಲಿನ್‌ಲಿಥ್‌ಗೌ‌ಗೆ ಕಾರ್ಬೆಟ್‌ನ ಅಭಿರುಚಿಗಳು ಇಷ್ಟವಾದವು. ಆನಂತರ ಇಬ್ಬರೂ ಸಮಾನ ಮನಸ್ಕ ಗೆಳೆಯರಾಗಿ ಉತ್ತರ ಭಾರತದ ಕಾಡುಗಳಲ್ಲಿ ವಾರಾಂತ್ಯ ಕಳೆಯುತ್ತಿದ್ದರು.

ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ತಪ್ಪದೇ ನೈನಿತಾಲ್ ಹಾಗೂ ಕಲದೊಂಗಿ ಮತ್ತು ಚೋಟಿಹಲ್ದಾನಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ವೈಸ್‌ರಾಯ್ ಕುಟುಂಬ ಜಿಮ್ ಕಾರ್ಬೆಟ್ ಮತ್ತು ಅವನ ಸಹೋದರಿ ಮ್ಯಾಗಿ ಜೊತೆ ವಾರಗಟ್ಟಲೆ ಕಾಲ ಕಳೆಯುತ್ತಿತ್ತು. ಕಲದೊಂಗಿಯಲ್ಲಿದ್ದ ಮನೆಗೆ ವೈಸ್‌ರಾಯ್ ಬಂದಾಗ ಕಾರ್ಬೆಟ್ ಕಲದೊಂಗಿ ಮತ್ತು ಚೋಟಿ ಹಲ್ದಾನಿಯ ರೈತರು, ಕಾರ್ಮಿಕರು ಎಂಬ ಬೇಧ ಭಾವವಿಲ್ಲದೆ ಎಲ್ಲರನ್ನೂ ತನ್ನ ಮನೆಗೆ ಕರೆಸಿ ದೇಶದ ಪ್ರಥಮ ಪ್ರಜೆಯಂತಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌಗೆ ಪರಿಚಯ ಮಾಡಿಕೊಡುತ್ತಿದ್ದ. ಮನೆಯಲ್ಲಿ ಚಹಾ ಕೂಟ ಏರ್ಪಡಿಸಿ ಭಾರತದ ಬಡತನ ಮತ್ತು ಇಲ್ಲಿನ ಜನರ ಮುಗ್ಧತೆ, ಅಜ್ಙಾನ, ಇವುಗಳನ್ನು ವಿವರಿಸುತ್ತಾ, ಬಡತನದ ನಡುವೆಯೂ ಬಹು ಸಂಸ್ಕೃತಿ, ಭಾಷೆ ಮತ್ತು ಧರ್ಮ ಇವುಗಳ ನಡುವೆ ಇರುವ ಸಾಮರಸ್ಯವನ್ನು, ಇಲ್ಲಿನ ಜನರ ಪ್ರಾಮಾಣಿಕತೆಯನ್ನು ಬಲು ಅರ್ಥಗರ್ಭಿತವಾಗಿ ವೈಸ್‌ರಾಯ್ ಕುಟುಂಬಕ್ಕೆ ಮತ್ತು ಅವನ ಜೊತೆ ಬರುತ್ತಿದ್ದ ಅಧಿಕಾರಿಗಳಿಗೆ ಕಾರ್ಬೆಟ್ ಮನವರಿಕೆ ಮಾಡಿಕೊಡುತ್ತಿದ್ದ.

ದೆಹಲಿಯ ಔತಣಕೂಟವೊಂದರಲ್ಲಿ ಅನುಭವಗಳನ್ನು ಕೃತಿಗೆ ಇಳಿಸುವಂತೆ ಒತ್ತಾಯಿಸಿದ್ದ ಅಧಿಕಾರಿಯ ಪತ್ನಿ ಲೇಡಿ ವೈಲೆಟ್‌ಹೇಗ್ ಮಾತಿನಿಂದ ಉತ್ತೇಜಿತನಾಗಿ ಪತ್ರಿಕೆಗಳಲ್ಲಿ ಲೇಖನ ಬರೆಯಲು ಆರಂಭಿಸಿದ ಕಾರ್ಬೆಟ್ ಇವುಗಳನ್ನು ಪುಸ್ತಕದ ರೂಪದಲ್ಲಿ ತರುವ ಬಗ್ಗೆ ವೈಸರಾಯ್ ಲಿನ್‌ಲಿಥ್‌ಗೌನ ಸಲಹೆ ಕೇಳಿದ. ಜಿಮ್ ಕಾರ್ಬೆಟ್‌ನ ನರಭಕ್ಷಕ ಹುಲಿ ಮತ್ತು ಚಿರತೆಗಳ ಅನುಭವಗಳನ್ನು ಸ್ವತಃ ಕೇಳಿ, ಲೇಖನಗಳ ಮೂಲಕ ಓದಿ ಪುಳಕಿತನಾಗಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌ ಪುಸ್ತಕ ಪ್ರಕಟನೆಗೆ ಉತ್ತೇಜನ ನೀಡಿದ.

ಕಾರ್ಬೆಟ್ ಅದುವರೆಗೆ ಇಂಡಿಯನ್ ವೈಲ್ಡ್ ‌ಲೈಪ್ ಪತ್ರಿಕೆಗೆ ಬರೆದಿದ್ದ ’ದ ಲಾಸ್ಟ್ ಪ್ಯಾರಡೈಸ್’ ಮತ್ತು “ವೈಲ್ಡ್ ಲೈಪ್ ಇನ್ ದ ವಿಲೇಜ್”, “ದ ಟೆರರ್ ದಟ್ ವಾಕ್ಸ್ ಇನ್ ದ ನೈಟ್”,  “ದ ಫಿಶ್ ಆಪ್ ಮೈ ಡ್ರೀಮ್ಸ್” ಹಾಗೂ “ಪೂರ್ಣಗಿರಿ ಅಂಡ್ ಇಟ್ಸ್ ಮಿಸ್ಟೀರಿಯಸ್ ಲೈಟ್ಸ್”, ಈ ಲೇಖನಗಳ ಸಂಗ್ರಹವನ್ನು ಜಂಗಲ್ ಸ್ಟೋರಿಸ್ ಎಂಬ ಹೆಸರಿನಲ್ಲಿ  104 ಪುಟಗಳ ಮೊದಲ ಕೃತಿಯನ್ನಾಗಿ ಹೊರತಂದ. ಪುಸ್ತಕ ನೈನಿತಾಲ್ ಪಟ್ಟಣದಲ್ಲಿದ್ದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಣವಾಯಿತು. ನೂರು ಪ್ರತಿಗಳನ್ನು ಮಾತ್ರ ಮುದ್ರಣ ಮಾಡಲಾಗಿತ್ತು. ಅದರ ಕರಡಚ್ಚು ತಿದ್ದುವುದರಿಂದ ಹಿಡಿದು, ಪ್ರಸ್ತಾವನೆ ಬರೆಯುವ ಹೊಣೆಯನ್ನು ವೈಸ್‌ರಾಯ್ ಲಿನ್‌ಲಿಥ್‌ಗೌ ಹೊತ್ತಿದ್ದು ವಿಶೇಷವಾಗಿತ್ತು.

ಪುಸ್ತಕ ಪ್ರಕಟಣೆ ಮೂಲಕ ಲೇಖಕನೂ ಆದ ಕಾರ್ಬೆಟ್‌ನ ಜೀವನ ನೈನಿತಾಲ್ ಗಿರಿಧಾಮದಲ್ಲಿ ಒಂದು ರೀತಿ ಆರಾಮದಾಯಕ ನಿವೃತ್ತಿ ಜೀವನವಾಗಿತ್ತು. ಬೆಳಿಗ್ಗೆ ಸಂಜೆ ಸಹೋದರಿ ಮ್ಯಾಗಿ ಜೊತೆ ಪರ್ವತದ ಕಿರುದಾರಿಗಳಲ್ಲಿ ವಾಕ್ ಮಾಡುತ್ತಿದ್ದ. ಹಗಲಿನಲ್ಲಿ ತನ್ನ ಮೆಚ್ಚಿನ ನಾಯಿಯ ಜೊತೆ ನೈನಿ ಮತ್ತು ಬೀಮ್ ಸರೋವರಕ್ಕಿಂತ ಚಿಕ್ಕದಾಗಿದ್ದ, ಊರಾಚೆಗಿನ ಅರಣ್ಯದ ನಡುವೆ ಇದ್ದ ಸರೋವರದಲ್ಲಿ ಮೀನು ಶಿಕಾರಿ ಮಾಡುವುದು ಅವನ ಹವ್ಯಾಸವಾಗಿತ್ತು. ಮೀನಿಗೆ ಗಾಳ ಹಾಕಿ ಧ್ಯಾನಸ್ತ ಮನುಷ್ಯನಂತೆ ಕುಳಿತಿರುತ್ತಿದ್ದ ಕಾರ್ಬೆಟ್‌ನ ಹೃದಯದೊಳಗೆ ಆ ಕ್ಷಣಗಳಲ್ಲಿ ಭವಿಷ್ಯದ ಬದುಕಿನ ಬಗ್ಗೆ ಜಿಜ್ಞಾಸೆಗಳು ಮೂಡುತ್ತಿದ್ದವು. ಅವನ ಎದೆಯೊಳಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಸಿಸಬೇಕೆ? ಬೇಡವೆ? ಎಂಬ ಪ್ರಶ್ನೆಗಳ ಬಿರುಗಾಳಿ ಏಳುತ್ತಿತ್ತು.

1930 ರಲ್ಲಿ ಭಾರತದಾದ್ಯಂತ ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ತೀರಾ ಹತ್ತಿರದಿಂದ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು, ಬ್ರಿಟಿಷರ ಕುರಿತಾದ ಅವರ ಅಸಹನೆಯನ್ನು ಕಂಡಿದ್ದ ಕಾರ್ಬೆಟ್‌ಗೆ ಮುಂದಿನ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಂಗ್ಲೆಂಡ್ ಮೂಲದ ಪ್ರಜೆಯಾಗಿ ಇಲ್ಲಿ ಬದುಕುವುದು ದುಸ್ತರ ಎಂಬ ಅಭದ್ರತೆಯ ಭಾವನೆ ಮೂಡತೊಡಗಿತು. ಭಾರತದಲ್ಲಿ ಹುಟ್ಟಿ, ಅಪ್ಪಟ ಭಾರತೀಯನಂತೆ ಬದುಕಿದ ಜಿಮ್ ಕಾರ್ಬೆಟ್ ತನ್ನ ಕೊನೆಯ ದಿನಗಳಲ್ಲಿ ಏಕೆ ಭಾರತವನ್ನು ತೊರೆದು ಹೋಗಿ, ಕೀನ್ಯಾದಲ್ಲಿ ಅನಾಮಿಕನಂತೆ ಅಸುನೀಗಿದ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಮೂಲವನ್ನು ಹುಡುಕಿದರೆ, ಇದಕ್ಕೆ ಮೂಲ ಕಾರಣ ಅವನ ತಾಯಿ ಮೇರಿ ಕಾರ್ಬೆಟ್ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು. ಆಕೆ 1857ರ ಸಿಪಾಯಿ ದಂಗೆಯ ಸಮಯದಲ್ಲಿ ಭಾರತದ ಸೈನಿಕರು ಉತ್ತರ ಭಾರತದ ನಗರಗಳಲ್ಲಿ ಆಂಗ್ಲರನ್ನು ಹೆಂಗಸರು, ಮಕ್ಕಳೆನ್ನದೆ ನಡುಬೀದಿಯಲ್ಲಿ ತರಿದು ಹಾಕಿದ್ದನ್ನು ಕಣ್ಣಾರೆ ಕಂಡವಳು. ಜೊತೆಗೆ ತನ್ನ ಮೊದಲ ಪತಿ ಭಾರತೀಯರ ದಾಳಿಗೆ ತುತ್ತಾದಾಗ ಅದಕ್ಕೆ ಸಾಕ್ಷಿಯಾದವಳು. ಈ ಎಲ್ಲಾ ಕಥೆಗಳನ್ನ ಚಿಕ್ಕಿಂದಿನಲ್ಲೇ ಕಾರ್ಬೆಟ್‌ಗೆ ವಿವರಿಸುತ್ತಾ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಬ್ರಿಟಿಷರಿಗೆ, ಅವರ ಆಸ್ತಿ ಪಾಸ್ತಿಗಳಿಗೆ ಉಳಿಗಾಲವಿಲ್ಲ ಎಂಬ ಭಯದ ಬೀಜವನ್ನು ಬಿತ್ತಿದ್ದಳು. ಅದು ಮುಂದಿನ ದಿನಗಳಲ್ಲಿ, ಅಂದರೆ ಕಾರ್ಬೆಟ್‌ನ ಕೊನೆಯ ದಿನಗಳಲ್ಲಿ ಅವನ ಎದೆಯೊಳಗೆ ಹೆಮ್ಮರವಾಗಿ ಬೆಳೆದು ನಿಂತಿತು.

ಭಾರತ ತೊರೆಯುವ ನಿರ್ಧಾರವನ್ನು ಬಹಿರಂಗವಾಗಿ ಎಲ್ಲಿಯೂ ಪ್ರಕಟಿಸದೆ ತನ್ನ ಸಹೋದರಿ ಮ್ಯಾಗಿ ಜೊತೆ ಸುದೀರ್ಘವಾಗಿ ಚರ್ಚಿಸಿ ನಂತರ ಭಾರತ ತೊರೆಯಲು ನಿರ್ಧರಿಸಿದ ಕಾರ್ಬೆಟ್ ನೈನಿತಾಲ್ ಗಿರಿಧಾಮದಲ್ಲಿದ್ದ ಅವನ ಕುಟುಂಬದ ಎಲ್ಲಾ ಮನೆಗಳು (ಎಂಟು ಅತಿಥಿ ನಿವಾಸಗಳು) ಮತ್ತು ನಿವೇಶನಗಳು, ಹಾಗೂ ಅಂತಿಮವಾಗಿ ತಾವು ವಾಸಿಸುತ್ತಿದ್ದ ಗಾರ್ನಿಹೌಸ್ ಎಂಬ ಬೃಹತ್‌ಬಂಗಲೆಯನ್ನು ಮಾರಾಟ ಮಾಡಿದನು. ಈ ಬಂಗಲೆಯನ್ನು ಖರೀದಿಸಿದ ಸಕ್ಕರೆ ವ್ಯಾಪಾರಿ, ಶರ್ಮ ಎಂಬಾತ ಸ್ವರ್ಗದ ಮೇಲೆ ಭೂಮಿಯ ತುಣುಕೊಂದನ್ನು ಖರೀದಿಸಿದ್ದೀನಿ ಎಂದು ತನ್ನ ಬಂಧು ಮಿತ್ರರ ಜೊತೆ ತನ್ನ ಸಂತಸ ಹಂಚಿಕೊಂಡ. ಆಸ್ತಿ ಮಾರಾಟ ಮತ್ತು ಅಂಗಡಿ (ಮ್ಯಾಥ್ಯು ಅಂಡ್ ಕೊ) ಮಾರಾಟದಿಂದ ಬಂದ ಹಣದಲ್ಲಿ ಅರ್ಧ ಭಾಗವನ್ನು ತನ್ನ ಮತ್ತು ಸಹೋದರಿ ಹೆಸರಿನಲ್ಲಿ ಇನ್ಸೂರೆನ್ಸ್ ಕಂಪನಿಯಲ್ಲಿ ತೊಡಗಿಸಿದ. ಉಳಿದರ್ಧ ಹಣವನ್ನು ಜೊತೆಯಲ್ಲಿ ಇಟ್ಟಕೊಂಡು, ನಂಬಿಕಸ್ಥರಿಗೆ ಸಾಲವಾಗಿ ನೀಡತೊಡಗಿದ.

ಕಾರ್ಬೆಟ್ ಬಳಿ ಜೈಪುರದ ಮಹಾರಾಜ ಕೂಡ ವಾರ್ಷಿಕ ಬಡ್ಡಿಗೆ ಹಣವನ್ನು ಸಾಲವಾಗಿ ಪಡೆಯುತ್ತಿದ್ದ. ನೈನಿತಾಲ್‌ನ ಎಲ್ಲಾ ಆಸ್ತಿ ಮಾರಿದ ಜಿಮ್ ಕಾರ್ಬೆಟ್ ತನ್ನ ಬಳಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂಬಿಕಸ್ತ ಸೇವಕರನ್ನ ಕಾರ್ಬೆಟ್ ಮರೆಯಲಿಲ್ಲ. ಅವರಿಗೆ ಮನೆ ಕಟ್ಟಿಸಿಕೊಟ್ಟು, ತನ್ನ ಮನೆಗಳಲ್ಲಿ ಇದ್ದ  ಮಂಚ, ಮೇಜು, ಕುರ್ಚಿ ಮುಂತಾದ ಸಾಮಾನುಗಳನ್ನು ಉಚಿತವಾಗಿ ಹಂಚಿದ. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇರಿಸಿದ. ಅವನ ಶಿಕಾರಿ ಸಾಹಸಗಳಿಂದ ಹಿಡಿದು, ಮೊಕಮೆಘಾಟ್ ರೈಲ್ವೆ ನಿಲ್ದಾಣ ಮತ್ತು ನೈನಿತಾಲ್‌ನ ನಿವೃತ್ತಿಯ ಬದುಕಿನ ವರೆಗೂ ಸೇವೆ ಸಲ್ಲಿಸಿದ ಮಾದೂಸಿಂಗ್ ಮೋತಿಸಿಂಗ್, ಅವನ ಮಗ ಬಲ್ವ, ಹಾಗೂ ರಾಮ್ ಸಿಂಗ್ ಬಲಸಿಂಗ್ ಇವರೆಲ್ಲರೂ ಶಾಶ್ವತವಾಗಿ ನೆಮ್ಮದಿಯ ಬದುಕು ಕಂಡುಕೊಳ್ಳುವಂತೆ ಮಾಡಿದ. ಇವರ ಜೊತೆಗೆ ಚಳಿಗಾಲದ ತನ್ನ ಹಳ್ಳಿಯಾದ ಚೊಟಿಹಲ್ದಾನಿಯ ಮುಸ್ಲಿಮ್ ಗೆಳೆಯ ಬಹುದ್ದೂರ್ ಖಾನ್ ಮತ್ತು ಬಾಲ್ಯದಲ್ಲಿ ಶಿಕಾರಿ ಕಲಿಸಿದ ಕುನ್ವರ್ ಸಿಂಗ್ ಇವರಿಗೂ ಕೂಡ ಆರ್ಥಿಕ ನೆರವು ನೀಡಿದ. ಆದರೆ, ನಾನು ಭಾರತ ತೊರೆಯುತ್ತಿದ್ದೇನೆ ಎಂಬ ಸುಳಿವನ್ನು ಎಲ್ಲಿಯೂ ಕಲದೊಂಗಿ ಮತ್ತು ಚೋಟಿ ಹಲ್ದಾನಿ ಹಳ್ಳಿಗಳ ಜನರಿಗೆ ಕಾಬೆಟ್ ಬಿಟ್ಟುಕೊಡಲಿಲ್ಲ. ಅವರ ಮನಸನ್ನು ನೋಯಿಸಲು ಇಚ್ಚಿಸದೇ ಕಲದೊಂಗಿಯಲ್ಲಿದ್ದ ಅವನ ಬಂಗಲೆಯನ್ನು ಮಾರಾಟ ಮಾಡದೇ ಹಾಗೆಯೇ ಉಳಿಸಿಕೊಂಡ.

ಜಿಮ್ ಕಾರ್ಬೆಟ್‌ನ ಈ ನೋವಿನ ವಿದಾಯದ ಸಂದರ್ಭವನ್ನು ವಿವೇಚಿಸಿದರೆ, ಇದು ಆ ಕಾಲಘಟ್ಟದಲ್ಲಿ  ಕಾರ್ಬೆಟ್ ಒಬ್ಬ ಮಾತ್ರ ಅನುಭವಿಸಿದ ಸಂಕಟ ಮತ್ತು ತಳಮಳಗಲ್ಲ. ಭಾರತದಲ್ಲಿದ್ದ ಎಲ್ಲಾ ಬ್ರಿಟಿಷರ ತಲ್ಲಣ ಮತ್ತು ತಳಮಳವೂ ಹೌದು ಎನಿಸುತ್ತದೆ. ಭಾರತದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ, ಇಲ್ಲಿನ ಚಿಕ್ಕಮಗಳೂರು, ನೀಲಗಿರಿ, ಕೇರಳ, ಡಾರ್ಜಲಿಂಗ್ ಅಸ್ಸಾಂ ಮುಂತಾದ ಕಡೆ ಕಾಫಿ ಮತ್ತು ಚಹಾ ತೋಟಗಳನ್ನು ಮಾಡಿಕೊಂಡಿದ್ದ ಬ್ರಿಟಿಷ್ ಅಧಿಕಾರಿಗಳು 1947ರಲ್ಲಿ ಭಾರತಕ್ಕೆ ಸ್ವತಂತ್ರ್ಯ ಬಂದಾಗ ತಮ್ಮ ಆಸ್ತಿಗಳನ್ನು ಮಾರಿ, ಜೀವ ಭಯದಿಂದ ತಾಯ್ನಾಡಿಗೆ ಮರಳಿದರು. ಆದರೆ, ಆರೋಗ್ಯ, ಮತ್ತು ಶಿಕ್ಷಣದ ಸೇವೆಯ ಉದ್ದೇಶಕ್ಕಾಗಿ ಭಾರತಕ್ಕೆ ಬಂದಿದ್ದ ಮಿಷನರಿ ಸಂಸ್ಥೆಗಳು, ಅದರ ಕಾರ್ಯಕರ್ತರು ಮಾತ್ರ ಧೈರ್ಯದಿಂದ ಇಲ್ಲೆ ಉಳಿದು ನೆಲೆ ಕಂಡುಕೊಂಡರು.

ಜಿಮ್ ಕಾರ್ಬೆಟ್ ಭಾರತ ತೊರೆಯಲು ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲೇ ಎರಡನೇ ಮಹಾಯುದ್ಧ ಆರಂಭಗೊಂಡಿತು. ಬ್ರಿಟಿಷರ ಪರ ಭಾರತೀಯ ಸೇನೆ ಹೋರಾಟ ನಡಸಬೇಕೆ ಬೇಡವೇ ಎಂಬುದರ ಬಗ್ಗೆ ಗಾಂಧೀಜಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಜಿಜ್ಙಾಸೆ ಉಂಟಾಯಿತು. ಯುದ್ಧ ಮುಗಿದ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡಲಾಗುವುದು ಎಂಬ ನಿರ್ಣಯವನ್ನು ಇಂಗ್ಲೆಂಡಿನ ಸಂಸತ್ತಿನಲ್ಲಿ ಅಂಗೀಕರಿಸಿದ ಮೇಲೆ ಇಲ್ಲಿನ ನಾಯಕರು ಭಾರತೀಯ ಸೈನಿಕರು ಬ್ರಿಟಿಷ್ ಸೇನೆಯ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದರು.

ಆ ವೇಳೆಗಾಗಲೇ ಮಿತ್ರ ರಾಷ್ಟ್ರಗಳ ಮೇಲೆ ಮಿಂಚಿನ ದಾಳಿ ನಡೆಸುತ್ತಾ ಮುನ್ನುಗ್ಗುತ್ತಿದ್ದ ಜಪಾನ್ ಸೇನೆ ಭಾರತದ ನೆರೆಯ ರಾಷ್ಟ್ರ ಬರ್ಮಾದವರೆಗೆ ಬಂದು ನಿಂತಿತ್ತು. ಭಾರತದಲ್ಲಿದ್ದ ಬ್ರಿಟಿಷ್ ಸೇನೆಯ ಜೊತೆಗೆ ಭಾರತೀಯ ಸೇನೆಯನ್ನು ಬರ್ಮಾ ಗಡಿಭಾಗಕ್ಕೆ ಕಳಿಸಿಕೊಡಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಆದರೆ, ಬರ್ಮಾದ ಮಳೆಕಾಡುಗಳಲ್ಲಿ, ಮತ್ತು ಅಲ್ಲಿನ ಶೀತ ಪ್ರದೇಶದಲ್ಲಿ ಅನುಭವವಿರದ ನಮ್ಮ ಸೈನಿಕರು ಹೋರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಹಾಗಾಗಿ ಸರ್ಕಾರ ಜಿಮ್ ಕಾರ್ಬೆಟ್‌ನ ಮೊರೆ ಹೋಗಿ, ಅರಣ್ಯದಲ್ಲಿ ಸೈನಿಕರು ಯುದ್ಧ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡುವಂತೆ ಕೇಳಿಕೊಂಡಿತು. ಇದಕ್ಕಾಗಿ  ಭಾರತದ ಬ್ರಿಟಿಷ್ ಸರ್ಕಾರ 1944ರ ಫೆಬ್ರವರಿಯಲ್ಲಿ ಮಧ್ಯ ಪ್ರದೇಶದ ದಂಡಕಾರಣ್ಯದಲ್ಲಿ ಅಲ್ಪಾವಧಿಯ ತರಬೇತಿ ಶಿಬಿರಗಳನ್ನು, ಕಾರ್ಬೆಟ್ ನೃತೃತ್ವದಲ್ಲಿ ಆಯೋಜಿಸಿತು.

ವಿಶ್ವದ ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್ ಪರ ಫ್ರಾನ್ಸ್ ರಣಭೂಮಿಯಲ್ಲಿ ಹೋರಾಟ ನಡೆಸಿ ಅನುಭವ ಹೊಂದಿದ್ದ, ಕಾರ್ಬೆಟ್, ಸೈನಿಕರಿಗೆ, ಅರಣ್ಯ, ಅಲ್ಲಿನ ಜೀವಜಾಲ, ಅವುಗಳ ವೈಶಿಷ್ಟ್ಯತೆ ಮತ್ತು ವರ್ತನೆ ಇವುಗಳೆಲ್ಲವನ್ನು ಪರಿಚಯ ಮಾಡಿಕೊಟ್ಟ. ಅಪಾಯಕಾರಿ ಪ್ರಾಣಿಗಳು ಹತ್ತಿರ ಸುಳಿಯುವ ಸಂದರ್ಭದಲ್ಲಿ ಯಾವ ಪಕ್ಷಿ ಮತ್ತು ಪ್ರಾಣಿಗಳು ಹೇಗೆ ಸೂಚನೆ ನೀಡುತ್ತವೆ, ಅವುಗಳ ಧ್ವನಿ ಹೇಗಿರುತ್ತದೆ ಎಂಬುದನ್ನ ಅನುಕರಣೆ ಮಾಡಿ ತೋರಿಸಿಕೊಟ್ಟ. ಕಾಡಿನಲ್ಲಿ ದಿಕ್ಕು ತಪ್ಪಿದಾಗ ಅನುಸರಿಸಬೇಕಾದ ಕ್ರಮ, ಸೊಳ್ಳೆ, ಜೇನು ನೊಣ ಮುಂತಾದ ಕ್ರಿಮಿ ಕೀಟಗಳ ಕಡಿತದಿಂದ ತಪ್ಪಿಸಿಕೊಳ್ಳಲು ಯಾವ ಗಿಡದ ಸೊಪ್ಪಿನ ರಸವನ್ನು ಶರೀರಕ್ಕೆ ಲೇಪಿಸಬೇಕೆಂಬುದನ್ನು ಸಹ ಕಾರ್ಬೆಟ್ ಸೈನಿಕರಿಗೆ ಮನವರಿಕೆ ಮಾಡಿಕೊಟ್ಟ. ಹಸಿವು, ನೀರಡಿಕೆ ಇವುಗಳನ್ನು ನೀಗಿಸುವ ಸಹಕಾರಿಯಾಗುವ ಕಾಡಿನಲ್ಲಿ ದೊರೆಯಬಹುದಾದ ಹಣ್ಣು ಹಂಪಲಗಳ ಬಗ್ಗೆ ಮಾಹಿತಿ ನೀಡಿದ. ಮಳೆಕಾಡುಗಳಲ್ಲಿ  ಮನುಷ್ಯರಿಗೆ ಎದುರಾಗುವ ಅತಿದೊಡ್ಡ ಸಮಸ್ಯೆಯೆಂದರೆ, ಜಿಗಣೆಗಳ ಕಾಟ. ಇವುಗಳ ನಿವಾರಣೆಗೆ ಪ್ರತಿಯೊಬ್ಬ ಸೈನಿಕ ತನ್ನ ಬಳಿ ತಂಬಾಕು ಮತ್ತು ಸುಣ್ಣವನ್ನು  ಇಟ್ಟುಕೊಳ್ಳುವಂತೆ ಸೂಚಿಸಿದ.

ಜೊತೆಗೆ ಸರ್ಕಾರದ ಮನವೊಲಿಸಿ ಪ್ರತಿಯೊಬ್ಬ ಸೈನಿಕನು ತನ್ನ ಕಾಲುಗಳ ಮಂಡಿಯವರೆಗೂ ಸುತ್ತಿಕೊಳ್ಳಲು ನುಣುಪಾದ ರೇಷ್ಮೆಯ ಬಟ್ಟೆಯನ್ನು ಒದಗಿಸಿಕೊಟ್ಟ. ಜಿಗಣೆಗಳಿಗೆ ಹಿಡಿತ ಸಿಗಲಾರದೆ ಕಾಲಿಗೆ ಹತ್ತಿಕೊಳ್ಳಲಾರವು ಎಂಬುದು ಕಾರ್ಬೆಟ್ ತನ್ನ ಅನುಭವದಲ್ಲಿ ಕಂಡುಕೊಂಡ ಸತ್ಯವಾಗಿತ್ತು. ಹೀಗೆ ಬ್ರಿಟಿಷ್ ಮತ್ತು ಭಾರತೀಯ ಸೈನಿಕರನ್ನು ಸಜ್ಜುಗೊಳಿಸಿ, ಬರ್ಮಾದ ಯುದ್ದ ಭೂಮಿಗೆ ಕಳಿಸಿಕೊಟ್ಟ ಜಿಮ್ ಕಾರ್ಬೆಟ್, ಆ ಬೇಸಿಗೆಯ ದಿನಗಳಲ್ಲಿ ತನ್ನ ವೃದ್ಧಾಪ್ಯವನ್ನು ಲೆಕ್ಕಿಸದೆ ಬರ್ಮಾಕ್ಕೆ ತೆರಳಿ ಸೈನಿಕರ ಆಹಾರ ಸರಬರಾಜು ವ್ಯವಸ್ಥೆಯ ಉಸ್ತುವಾರಿಗೆ ನಿಂತ. ಆ ವೇಳೆಗೆ ಅವನ ವಯಸ್ಸು ಎಪ್ಪತ್ತು ವರುಷಗಳು. 1945ರಲ್ಲಿ ಜಪಾನ್ ಮತ್ತು ಜರ್ಮನಿ ರಾಷ್ಟ್ರಗಳ ಸೋಲಿನಿಂದ ಎರಡನೇ ಮಹಾಯುದ್ಧ ಕೊನೆಗೊಂಡಾಗ, ಭಾರತದ ಬ್ರಿಟಿಷ್ ಸರ್ಕಾರ ಜಿಮ್ ಕಾರ್ಬೆಟ್‌ನ ಸೇವೆಯನ್ನು ಮನ್ನಿಸಿ ಆತನಿಗೆ ’ಕಂಪಾನಿಯನ್ ಆಫ್ ದ ಇಂಡಿಯನ್ ಎಂಪೈರ್’ ಎಂಬ ಭಾರತದ ಅತ್ಯನ್ನುತ ಮಿಲಿಟರಿ ಗೌರವ ನೀಡಿ ಸನ್ಮಾನಿಸಿತು.

                                                                                       (ಮುಂದುವರಿಯುವುದು)

ಅಪ್ರಾಮಾಣಿಕ ಮಧ್ಯಮವರ್ಗ ಮತ್ತು ಹಾದಿತಪ್ಪಿದ ನಾಗರಿಕ ಸಮಾಜ


-ಬಿ. ಶ್ರೀಪಾದ್ ಭಟ್  


 

ಇಂದು ಭಾರತದ ಮಧ್ಯಮವರ್ಗ ಕಳವಳಕ್ಕೆ ಈಡಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂಡಿಯಾದಲ್ಲಿ ಏರುತ್ತಿರುವ ಸಾಮಾನ್ಯ ವಸ್ತುಗಳ ಬೆಲೆಗಳು ಮತ್ತು ಹಣದುಬ್ಬರ ಹೆಚ್ಚುತ್ತಿರುವುದರ ಪರಿಣಾಮವಾಗಿ ಅನುಭವಿಸುತ್ತಿರುವ ತೊಂದರೆಗಳು, ಸುಖದ ಜೀವನವನ್ನು ದಿನವೂ ಸರಿದೂಗಿಸಲು ಇರುವ ಅನೇಕ ತೊಡರುಗಳು, ಕೈಜಾರುತ್ತಲಿರುವ ಐಷಾರಾಮಿ ಜೀವನ ಇಲ್ಲಿನ ಮಧ್ಯಮವರ್ಗಕ್ಕೆ ಒಂದು ಕಂಟಕವಾಗಿದೆ. ಇದಕ್ಕೆ ಮೂಲಭೂತ ಕಾರಣವಾಗಿ ಈ ಮಧ್ಯಮವರ್ಗ ದೂಷಿಸುತ್ತಿರುವುದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ಮತ್ತು ಇವರ ತೀವ್ರ ಆಕ್ರೋಶವಿರುವುದು ಇವರ ಒಂದು ಕಾಲದ ಡಾರ್ಲಿಂಗ್ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿರುದ್ಧ.

ಎಲ್ಲಾ ಮಧ್ಯಮವರ್ಗದ ಕುಟುಂಬದವರ ದೂರು, ಅಳಲು ಹಾಗೂ ಕಳವಳ ಒಂದೇ ತೆರನಾಗಿರುತ್ತದೆ. ಏರುತ್ತಿರುವ ದಿನನಿತ್ಯದ ವಸ್ತುಗಳ ಬೆಲೆಗಳು, ದಿನ ದಿನಕ್ಕೂ ದುಬಾರಿಯಾಗುತ್ತಿರುವ ಜೀವನ ಮಟ್ಟ ಅದರಲ್ಲೂ ಪ್ರಮುಖವಾಗಿ ದುರ್ಭರವಾಗುತ್ತಿರುವ ನಗರ ಜೀವನ, ಇದರಿಂದಾಗಿ ತಮಗೆ ಹಣವನ್ನು ಉಳಿತಾಯ ಮಾಡಲಾಗುತ್ತಿಲ್ಲ, ಭವಿಷ್ಯದ ಕನಸುಗಳು ನನಸಾಗಲಾರವೇನೋ ಎನ್ನುವ ಆತಂಕ. ಇದು ನಿಜಕ್ಕೂ ವಾಸ್ತವವೇ. ಇವರ ಈ ಕಳಕಳಿ ಪ್ರಾಮಾಣಿಕವಾದದ್ದೆ. ಇಂದು ದೇಶದ ಜನಸಂಖ್ಯೆಯಲ್ಲಿ ಸುಮಾರು 15 ಕೋಟಿಯಷ್ಟಿರುವ ಭಾರತೀಯ ಮಧ್ಯಮವರ್ಗಗಳ ವಾರ್ಷಿಕ ಆದಾಯ ರೂಪಾಯಿ 4 ಲಕ್ಷದಿಂದ -ರೂಪಾಯಿ 17 ಲಕ್ಷ. ಈ ಈ ಗುಂಪಿನ ಏರಿಕೆ ವರ್ಷಕ್ಕೆ ಶೇಕಡ 13ರ ಮಟ್ಟದಲ್ಲಿದೆ. ಈ ಮಧ್ಯಮವರ್ಗ ಹಾಗೂ ಮೇಲ್ಮಧ್ಯಮವರ್ಗದ ಗುಂಪಿನ ಜನಸಂಖ್ಯೆ 2030ರ ವೇಳೆಗೆ 60 ಕೋಟಿ ದಾಟಬಹುದೆಂದು ಅಂದಾಜಿಸಲಾಗಿದೆ.

ಈ ಗುಂಪಿನಲ್ಲಿ ಶೇಕಡ 89 ರಷ್ಟು ಜನಸಂಖ್ಯೆಯ ಭಾರತೀಯರು ಆದಾಯ ತೆರಿಗೆಯನ್ನು ಪಾವತಿಸುತ್ತಾರೆ. ಮಧ್ಯಮವರ್ಗ ಹಾಗೂ ಮೇಲ್ಮಧ್ಯಮವರ್ಗದವರಿಗೆ ಮುಂಗಡಪತ್ರದಲ್ಲಿ ಸುಮಾರಾಗಿ 50,000 ಕೋಟಿಯಷ್ಟು ವಿವಿಧ ರೀತಿಯ ಪ್ಯಾಕೇಜ್‌ಗಳು, ಸೌಲಭ್ಯಗಳು ಮತ್ತು ತೆರಿಗೆ ವಿನಾಯಿತಿಗಳು ದೊರೆತರೆ, ಬಂಡವಾಳ ಶಾಹಿಗಳಾದ ಮೇಲ್ವರ್ಗಗಳಿಗೆ ಸಿಗುತ್ತಿರುವ ವಿವಿಧ ರೀತಿಯ ಪ್ಯಾಕೇಜ್‌ಗಳು, ಅನುದಾನಗಳು, ಸೌಲಭ್ಯಗಳು ಮತ್ತು ತೆರಿಗೆ ವಿನಾಯಿತಿಗಳ ಮೊತ್ತ ಸುಮಾರು 500,000 ಕೋಟಿಗಳು. ಆದರೆ ಸ್ವತಹ ತಮಗೆ ಸರ್ಕಾರದಿಂದ ಇಷ್ಟೆಲ್ಲ ಅನುಕೂಲಗಳು ಇದ್ದರೂ ಜನಸಂಖ್ಯೆಯಲ್ಲಿ ಶೇಕಡ 75ರಷ್ಟಿರುವ ಸಮಾಜದ ಕೆಳವರ್ಗಗಳಿಗೆ ಸರ್ಕಾರದಿಂದ ವಿವಿಧ ರೀತಿಯ ಸಬ್ಸಿಡಿ ರೂಪದಲ್ಲಿ ಸಿಗುತ್ತಿರುವ ಅನುದಾನಗಳ ವಿರುದ್ಧ ಈ ಎರಡೂ ಶ್ರೀಮಂತ ಎಲೈಟ್ ಗುಂಪುಗಳು ಬಲು ದೊಡ್ಡದಾಗಿ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.

ತಮ್ಮ ಪಾಲಿನ ಆದಾಯವನ್ನು ಕೆಳವರ್ಗಗಳು ನುಂಗುತ್ತಾರೆ ಎಂದು ಕಿಡಿಕಾರುತ್ತಾರೆ. ಅಷ್ಟರಮಟ್ಟಿಗೆ ನೈತಿಕವಾಗಿ ಅಧಃಪತನಕ್ಕೆ ಕುಸಿದಿದೆ ಈ ಮಧ್ಯಮವರ್ಗಗಳ ಮನೋಧರ್ಮ. ಆದರೆ ಇಲ್ಲಿನ ದುರಂತವೆಂದರೆ ಮೇಲಿನ ಎರಡೂ ಶ್ರೀಮಂತ ಎಲೈಟ್ ಗುಂಪುಗಳಿಗೆ ಮೇಲ್ಕಾಣಿಸಿದ ಎಲ್ಲ ಸಂಬಂಧಪಟ್ಟ ಸೌಲಭ್ಯಗಳು ಸರ್ಕಾರದಿಂದ ಎಲ್ಲಿಯೂ ವಂಚನೆಯಾಗದೆ ಶೇಕಡಾ 100ರಷ್ಟು ಲೆಕ್ಕದಲ್ಲಿ ಸರಿಯಾದ ಕಾಲಕ್ಕೆ ದೊರೆಯುತ್ತದೆ. ಇಲ್ಲಿ ಕಾನೂನುಬದ್ಧವಾಗಿಯೇ ಈ ಪ್ರಕ್ರಿಯೆ ನಡೆಯುತ್ತದೆ. ಆದರೆ ಸರ್ಕಾರದ ಅನುದಾನಗಳು, ಸಬ್ಸಿಡಿ ನೀತಿಗಳು, ವಿವಿಧ ಯೋಜನೆಗಳು ಸಂಬಂಧಪಟ್ಟ ಕೆಳವರ್ಗಗಳ ಬಡವರಿಗೆ ತಲಪುವ ಸಾಧ್ಯತೆ ಶೇಕಡಾ 15 ರಷ್ಟಿರುತ್ತದೆ. ಮಿಕ್ಕ ಶೇಕಡಾ 85 ರಷ್ಟು ಅನುದಾನಗಳು, ಸಬ್ಸಿಡಿಗಳು ಭ್ರಷ್ಟ ವ್ಯವಸ್ಥೆಯಲ್ಲಿ ಸಂಪೂರ್ಣ ಸೋರಿಹೋಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕವಡೆಕಾಸೂ ದೊರೆಯುವುದಿಲ್ಲ. ಇದರ ಬಗೆಗೆ ಇವರ್ಯಾರೂ ಚಕಾರವೆತ್ತುವುದಿಲ್ಲ. ಬದಲಾಗಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷಗಳು ತಮ್ಮನ್ನು ಓಲೈಸುತ್ತಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷವೂ ಹಾಗೂ ಸರ್ಕಾರವೂ ತಮ್ಮನ್ನು ಒಂದು ಶಕ್ತಿಯಾಗಿ ಎಂದೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬಹುಪಾಲು ಮಧ್ಯಮವರ್ಗಗಳು ಆರೋಪಿಸುತ್ತವೆ.

ಇದು ಅರ್ಧಸತ್ಯ ಮಾತ್ರ. ಪೂರ್ಣಸತ್ಯವೇನೆಂದರೆ ಯಾವುದೇ ರಾಜಕೀಯ ವ್ಯವಸ್ಥೆಯನ್ನಾಗಲೀ, ರಾಜಕೀಯ ಪಕ್ಷಗಳನ್ನಾಗಲೀ, ರಾಜಕಾರಣಿಗಳನ್ನಾಗಲೀ, ಪ್ರಜಾಪ್ರಭುತ್ವದ ಬಲು ದೊಡ್ಡ ಶಕ್ತಿಯಾದ ಚುನಾವಣಾ ಪ್ರಕ್ರಿಯೆಯನ್ನಾಗಲೀ, ಈ ಪ್ರಜಾಪ್ರಭುತ್ವದ ಉಳಿವಿಗಾಗಿ ನಿರಂತರವಾಗಿ ನಡೆಯುತ್ತಿರುವ ಸಾಮಾಜಿಕ ಹೋರಾಟಗಳನ್ನಾಗಲೀ ಸ್ವತಃ ಈ ಮಧ್ಯಮವರ್ಗಗಳೇ ಎಂದೂ ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಕಳೆದ 20 ವರ್ಷಗಳಿಂದ ಬಹಿರಂಗವಾಗಿ ಬೆಂಬಲಿಸಿಲ್ಲ. ಇವರ ಆತ್ಮವಂಚನೆಯ ಮಟ್ಟ ಯಾವ ತರನಾಗಿರುತ್ತದೆಯೆಂದರೆ  ಈ ಎರಡೂ ಶ್ರೀಮಂತ ಎಲೈಟ್ ಗುಂಪುಗಳು ಚುನಾವಣೆಯ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ. ಬದಲಾಗಿ ಈ ಚುನಾವಣೆಯ ಬಗೆಗೆ ಅಪಾರ ಮಟ್ಟದ ಸಿನಿಕತನ, ಮತ್ತು ಕ್ಷಮೆಯಿಲ್ಲದ ನಿರ್ಲಕ್ಷ್ಯವನ್ನು ಪ್ರದರ್ಶಿಸುತ್ತವೆ.

ಈ ಗುಂಪಿನ ಶೇಕಡ 60ರಷ್ಟು ಜನಸಂಖ್ಯೆ ಚುನಾವಣೆಗಳಲ್ಲಿ ಭಾಗವಹಿಸುವುದೂ ಇಲ್ಲ, ಮತದಾನ ಮಾಡುವುದೂ ಇಲ್ಲ. ಆದರೆ ಇವರು ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಳ್ಳುವ ಸರ್ಕಾರದಿಂದ ಮಾತ್ರ ಅಪಾರ ನಿರೀಕ್ಷೆಗಳನ್ನು, ಎಣೆಯಿಲ್ಲದ ಸೌಲಭ್ಯಗಳನ್ನು ನಿರೀಕ್ಷಿಸುತ್ತಾರೆ. ಸರ್ಕಾರ ಇರುವುದೇ ತಮಗಾಗಿ ಎನ್ನುವಂತೆ ವರ್ತಿಸುತ್ತಾರೆ. ಈ ಸರ್ಕಾರಗಳ ನೀತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಅಭ್ಯಾಸ ಮಾಡುತ್ತಾರೆ. ವಿಮರ್ಶಿಸುತ್ತಾರೆ.

ಆದರೆ ಚುನಾವಣೆಯ ಸಂದರ್ಭದಲ್ಲಿ ಹೆಂಡ ಹಾಗೂ ಮೂರು ಕಾಸಿಗಾಗಿ ಯಾವುದೇ ಗುರಿಯಿಲ್ಲದೆ ವರ್ತಿಸುತ್ತ ವೋಟು ಮಾಡುತ್ತಾರೆ ಎಂದು ಈ ಮಧ್ಯಮವರ್ಗಗಳಿಂದ ನಿರಂತರವಾಗಿ ಟೀಕೆಗೆ, ಅಸಹನೆಗೆ ಗುರಿಯಾಗುತ್ತಿರುವುದು ಸಮಾಜದ ಬಡ ಕೆಳವರ್ಗಗಳು. ಆದರೆ ಈ ಕೆಳವರ್ಗಗಳೇ ಯಾವುದೇ ದೂರಗಾಮಿ ಆಶಯಗಳು, ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಜಾಪ್ರಭುತ್ವವನ್ನು ಕಾಪಾಡುತ್ತಿರುವುದು. ದನಿಯಿಲ್ಲದ ಈ ಬಡಜನರೇ ತಮ್ಮ ಈ ಮುಗ್ಧತೆಯ ಮೂಲಕ ಕೇವಲ ಸೀಮಿತ ಲಾಭಕ್ಕಾಗಿ, ಕಳಂಕವನ್ನು ಹೊತ್ತುಕೊಂಡು ಚುನಾವಣೆಯಲ್ಲಿ ಪಾಲ್ಗೊಂಡು ಸರ್ಕಾರವನ್ನು ಚುನಾಯಿಸುತ್ತಾರೆ. ಈ ಚುನಾಯಿತ ಸರ್ಕಾರದ ಯೋಜನೆಗಳು, ಮುಂಗಡಪತ್ರಗಳ ಆಶಯಗಳು ಹೆಚ್ಚೂ ಕಡಿಮೆ ಕರಾರುವಕ್ಕಾಗಿ ತಲುಪುವುದು ಈ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಅನುಮಾನಿಸಿದ ಮತ್ತು ನಿರ್ಲಕ್ಷಿಸಿದ ಮಧ್ಯಮವರ್ಗ ಹಾಗೂ ಮೇಲ್ವರ್ಗಗಳಿಗೆ ಮಾತ್ರ. ಇದು ಯಾವ ರೀತಿಯ ಅನಾಚಾರ? ಇದರ ಬಗೆಗೆ ಸ್ವಲ್ಪವೂ ಕೀಳರಿಮೆಯನ್ನು ಬೆಳಸಿಕೊಳ್ಳದಷ್ಟು ನಮ್ಮ ಮಧ್ಯಮವರ್ಗ ಜಡಗೊಂಡಿದೆ ಮತ್ತು ಹಿಂದೆಂದೂ ಇಲ್ಲದಂತೆ ಸ್ವಾರ್ಥಮಯವಾಗಿದೆ. ಜಾಗತೀಕರಣ ಹಾಗೂ ಮುಕ್ತ ಆರ್ಥಿಕ ನೀತಿಗೆ ಇಂಡಿಯಾ ದೇಶ ತನ್ನನ್ನು ತಾನು ಒಡ್ಡಿಕೊಂಡು ಇಂದು 20 ವರ್ಷ ತುಂಬುತ್ತವೆ. ಈ ಜಾಗತೀಕರಣ ಕಲ್ಪಿಸಿಕೊಟ್ಟ ಉಪಭೋಗಗಳನ್ನು ಹೆಚ್ಚೂ ಕಡಿಮೆ ತಮ್ಮ ಜೀವನದಿಯ ತೆಕ್ಕೆಗೆ ಹೊರಳಿಸಿಕೊಂಡಿದ್ದು ಇಂಡಿಯಾದ ಮಧ್ಯಮವರ್ಗ.

90 ವರ್ಷಗಳ ಹಿಂದೆ ಗಾಂಧೀಜಿಯವರು ಇದೇ ಜಾಗತೀಕರಣವನ್ನು ಬಂಡವಾಳಶಾಹಿಯ ಜೊತೆಗಾರನೆಂದೂ ಇವೆರೆಡೂ ಜೊತೆಗೂಡಿದರೆ ಒಂದು ರಾಕ್ಷಸ ಶಕ್ತಿಯನ್ನು ಹುಟ್ಟು ಹಾಕುತ್ತದೆಂದೂ ಎಚ್ಚರಿಸಿದ್ದರು. ಅದು ಇಂದು ಸಂಪೂರ್ಣವಾಗಿ ನಿಜವಾಗಿದೆ. ಜಾಗತೀಕರಣ ಪಶ್ಚಿಮದ ಆಧುನಿಕತೆಯನ್ನು ತಂದುಕೊಡುತ್ತದೆ ಎನ್ನುವುದು ಎಷ್ಟು ನಿಜವೋ ಅಷ್ಟೇ ನಿಜ ಅದು ಮೋಡಿ ಮಾಡಿ ತನ್ನೊಳಗೆ ಸೆಳೆದುಕೊಳ್ಳುವ ಪಶ್ಚಿಮದ ಅತಿಯಾದ ಲೌಕಿಕತೆ ಮತ್ತು ಲೋಭತನ. ಕಳೆದ 20 ವರ್ಷಗಳ ಜಾಗತೀಕರಣದ ಸಂದರ್ಭದಲ್ಲಿ ಈ ಮಧ್ಯಮವರ್ಗಗಳ ಆದಾಯ ನಿರಂತರವಾಗಿ ಮೇಲೇರುತ್ತಾ ಸಾಗಿದೆಯೆ ಹೊರತು ಎಲ್ಲಿಯೂ ನಿಂತಿಲ್ಲ ಹಾಗೂ ಕೆಳಗೆ ಜಾರಿಲ್ಲ. ಈ ಕಾಲಘಟ್ಟದಲ್ಲಿ ಈ ಮಧ್ಯಮವರ್ಗಗಳ ಸರಾಸರಿ ಜೀವನಮಟ್ಟ ಅದ್ಭುತವೆನ್ನುವಷ್ಟರ ಮಟ್ಟಿಗೆ ಸುಧಾರಿಸಿದೆ. ಹಾಗು ಇಂದಿಗೂ ಮೇಲ್ಮುಖವಾಗಿದೆ. ಇವರ ಕೊಳ್ಳುಬಾಕುತನ ಕಳೆದ 20 ವರ್ಷಗಳಲ್ಲಿ ಶೇಕಡ 80ರಷ್ಟು ಏರಿಕೆಯಾಗಿದೆ. ಮುಕ್ತ ಆರ್ಥಿಕತೆಯ ಫಲವಾಗಿ ಹಣದ ವಹಿವಾಟು ಹತ್ತುಪಟ್ಟು ಹೆಚ್ಚಾಗಿ ಇದರ ಸಂಪೂರ್ಣ ಲಾಭ ದೊರೆತಿರುವುದು ಈ ಮಧ್ಯಮ ವರ್ಗ ಮತ್ತು ಮೇಲ್ವರ್ಗಗಳಿಗೆ.

ಇತ್ತೀಚಿನ ಸರ್ವೆ ಪ್ರಕಾರ ಇದೇ ರೀತಿಯ ಸೋ ಕಾಲ್ಡ್ ಆರ್ಥಿಕ ಮುನ್ನಡೆಯನ್ನು ಕಾಯ್ದುಕೊಂಡರೆ ಮುಂದಿನ 20 ವರ್ಷಗಳಲ್ಲಿ ಈ ಮಧ್ಯವರ್ಗಗಳ ಆದಾಯದಲ್ಲಿ ಐದುಪಟ್ಟು ಹೆಚ್ಚಳವಾಗಲಿದೆ. ಇದೇ ಕಾರಣಕ್ಕೆ ಎಲ್ಲಿಯಾದರೂ ಈ ಆರ್ಥಿಕ ಬೆಳವಣಿಗೆಯಲ್ಲಿ ಕೊಂಚವೂ ಏರುಪೇರಾದರೂ ಈ ಮಧ್ಯಮವರ್ಗ ಮತ್ತು ಮೇಲ್ವರ್ಗಗಳು ಇನ್ನಿಲ್ಲದ ಆತಂಕ ವ್ಯಕ್ತಪಡಿಸುತ್ತವೆ. ಅದಕ್ಕೆ ಕಾರಣವಾದ ಕೇಂದ್ರ ಸರ್ಕಾರವನ್ನು ಇನ್ನಿಲ್ಲದಂತೆ ನಿರಂತರವಾಗಿ ಟೀಕಿಸುತ್ತವೆ. ಆದರೆ ಇದೇ ಗೊತ್ತು ಗುರಿಯಿಲ್ಲದ, ಅಮಾನವೀಯ ಆರ್ಥಿಕ ಬೆಳವಣಿಗೆಯ ಕಾರಣಕ್ಕಾಗಿಯೇ ಶೇಕಡ 75ರಷ್ಟು ಜನಸಂಖ್ಯೆಯ ಕೆಳವರ್ಗಗಗಳ ಬಡವರ ದೈನಂದಿನ ಜೀವನ ನಿರಂತರವಾಗಿ ಕೆಳಮುಖವಾಗಿ ಜಾರುತ್ತಿದೆ. ಇವರಿಗೆ ಭವಿಷ್ಯವಿರಲಿ ವರ್ತಮಾನವೇ ದುರ್ಭರವಾಗಿದೆ. ಮಧ್ಯಮವರ್ಗ ಮತ್ತು ಕೆಳವರ್ಗಗಳ ನಡುವಿನ ಕಂದಕ ದಿನದಿನಕ್ಕೆ ಬೆಳೆಯುತ್ತಿದೆ. ಇವರಿಗೆ ಭವಿಷ್ಯವಿರಲಿ ವರ್ತಮಾನವೇ ಭಯ ಹುಟ್ಟಿಸುತ್ತದೆ ಎಂದು ಈ ಮಧ್ಯಮವರ್ಗಕ್ಕೆ ಗೊತ್ತಿದೆ.

ಆದರೂ ಸಹ ಈ ಮಧ್ಯಮವರ್ಗ ಒಳಗೊಳ್ಳುವಿಕೆಯ ಸಾಮಾಜಿಕ ನ್ಯಾಯದ ನೀತಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಇವರ ಜಾಣ ಮೌನ ಮತ್ತು ಮರೆಮೋಸದ ಆತ್ಮವಂಚನೆಗೆ ಕಡಿವಾಣವೇ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಸುಪ್ರೀಂಕೋರ್ಟ ನೀಡಿದ ತೀರ್ಪಿನ ಅನ್ವಯ ದೇಶದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನ ಮತ್ತು ಅನುದಾನರಹಿತ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇಕಡ 25ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿದೆ. ಇದಕ್ಕೆ ನಮ್ಮ ಮಧ್ಯಮವರ್ಗ ಪ್ರತಿಕ್ಯಿರ್ಸಿದ ರೀತಿ ನಿರಾಸೆಯನ್ನು ಹುಟ್ಟಿಸುತ್ತದೆ. ಇಲ್ಲಿಯೂ ಇವರ ಆತಂಕವೇನೆಂದರೆ ಎಲ್ಲಿ ಈ ತೀರ್ಪು ತಮ್ಮ ಪಾಲಿನ ಸೌಲಭ್ಯಗಳನ್ನು ಕಸಿದುಕೊಳ್ಳುತ್ತದೆಯೇ ಎನ್ನುವುದರ ಕುರಿತಾಗಿ. ಮೀಸಲಾತಿಯ ಕುರಿತಾಗಿ ಈ ವರ್ಗ ವ್ಯಕ್ತಪಡಿಸುವ ಮಡಿವಂತಿಕೆ, ಆಕ್ರೋಶದ ಉಗ್ರತೆ ಪ್ರಜ್ಞಾವಂತರಲ್ಲಿ ಇವರ ಕುರಿತಾಗಿ ತಿರಸ್ಕಾರ ಮೂಡಿಸುತ್ತದೆ. ಬೇರೆ ಯಾವುದೇ ದೌರ್ಜನ್ಯಗಳಿಗೆ ವಿರೋಧವಾಗಿ ಬೀದಿಗಿಳಿದು ಹೋರಾಟ ನಡೆಸದ ಈ ಮಧ್ಯಮವರ್ಗ ಮೀಸಲಾತಿ ವಿರೋಧಿ ಚಳವಳಿ ಎಂದಾಕ್ಷಣ ತೋರಿಸುವ ಅತ್ಯುತ್ಸಾಹ ಮತ್ತು ಕೊಡುವ ಬೆಂಬಲ, ಸಂದರ್ಭ ದೊರೆತರೆ ಆಕ್ಟಿವಿಸ್ಟ್‌ಗಳು ಸಹ ಅಗುವ ಇವರ ಇಂದಿನ ಈ ಅಮಾನವೀಯ ನೆಲೆಗಳನ್ನು, ಭ್ರಷ್ಟ ಮನಸ್ಥಿತಿಯನ್ನು ಕುರಿತಾಗಿ ಹೇಳಲು ಪದಗಳೇ ಸಾಲದು. ಇದನ್ನು ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ.

ಲಕ್ಷಾಂತರ ಆದಿವಾಸಿಗಳು ಮತ್ತು ರೈತರ ಅತಂತ್ರ ಬದುಕನ್ನು ಹಸನುಗೊಳಿಸಲು ಹೋರಾಡುತ್ತಿದ್ದ ನರ್ಮದ  ಬಚಾವ್ ಆಂದೋಲನ ಇವರ ಕಣ್ಣಲ್ಲಿ ತಂಟೆಕೋರರ, ಅಭಿವೃದ್ಧಿವಿರೋಧಿ ಚಳವಳಿಗಳಾಗಿ ಕಾಣಿಸುತ್ತದೆ. ಸಮಾನತೆಗಾಗಿ, ಹಿಂಸೆಯನ್ನು ವಿರೋಧಿಸಿ ಅಹಿಂಸಾತ್ಮಕ ಹೋರಾಟ ನಡೆಸುತ್ತಿರುವ ದಲಿತ, ರೈತ ಚಳವಳಿಗಳು ಮಧ್ಯಮವರ್ಗಗಳ ಪ್ರಕಾರ ತಮ್ಮ ಹಕ್ಕನ್ನು ಕಸಿದುಕೊಳ್ಳುವ  ಹುನ್ನಾರವಾಗಿಬಿಡುತ್ತದೆ. ಬೀದಿ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ತಮ್ಮ ದಿನನಿತ್ಯದ ಪುಡಿಗಾಸನ್ನು ಗಳಿಸುವ ಬಡವರು ಇವರ ಪ್ರಕಾರ ಕಾನೂನನ್ನು ಉಲ್ಲಂಘಿಸುತ್ತಿರುವ ಅಪರಾಧಿಗಳು. ಇದರ ಫಲವೇನೆಂದರೆ ಒಂದು ಕಾಲದಲ್ಲಿ ಎಲ್ಲರಿಗೂ ಉದಾಹರಣೆಯಾಗಿ ಬದುಕಿ ಮಾದರಿಯಾಗಿ ಆದಷ್ಟೂ ಸರಳವಾಗಿ ಜೀವಿಸುವದರ ಮೂಲಧರ್ಮವಾಗಿದ್ದ ಈ ಮಧ್ಯಮವರ್ಗಗಳು ಇಂದು ಸಂಪೂರ್ಣವಾಗಿ ರೂಪಾಂತರಗೊಂಡು ಜೀವನವನ್ನು, ಅದರ ಎಲ್ಲ ಸುಖವನ್ನು ತಳಮಟ್ಟವನ್ನು ಬಿಡದಂತೆ ಅದರ ಕಟ್ಟಕಡೆಯ ತುದಿಯವರೆಗೂ ಅನುಭವಿಸಿ ಬದುಕಬೇಕು ಅದೂ ತಾನು ಮಾತ್ರ ಎನ್ನುವ ಘಟ್ಟಕ್ಕೆ ಬಂದು ತಲುಪಿದೆ.

ಒಂದು ಕಾಲಕ್ಕೆ ಆದರ್ಶ ಸಾಮಾಜಿಕ ಜೀವನದ ಮಾನವೀಯ, ಜೀವಪರ, ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನೇ ತಮ್ಮ ಮೌಲ್ಯಗಳನ್ನಾಗಿಸಿಕೊಂಡಿದ್ದ ಮಧ್ಯಮವರ್ಗದ ಚಿಂತನೆಗಳು ಮತ್ತು ಬದುಕು ಇಂದು ಸಂಪೂರ್ಣವಾಗಿ ಬದಲಾಗಿದೆ. ಇಲ್ಲಿ ಸಮುದಾಯದ ವೈವಿಧ್ಯತೆಯ ಬದಲಾಗಿ ಏಕವ್ಯಕ್ತಿಯ ಸ್ವರೂಪ, ಬಹುರೂಪಿ ಸಂಸ್ಕೃತಿಯ ಬದಲಾಗಿ ಏಕರೂಪಿ ಸಂಸ್ಕೃತಿ, ಸರ್ವಧರ್ಮಗಳನ್ನು ಗೌರವಿಸುವ ಚಿಂತನೆಗಳ ಬದಲಾಗಿ ಕೋಮುವಾದದ ವಿವಿಧ ಸ್ವರೂಪಗಳು, ಸಮಾನತೆಯ ಬದಲಾಗಿ ಶ್ರೇಣೀಕೃತ ವ್ಯವಸ್ಥೆ, ಸಹಬಾಳ್ವೆಯ ಬದುಕಿನ ಬದಲಾಗಿ ಸ್ಪರ್ಧಾತ್ಮಕ ಬದುಕು, ಸರ್ವರಿಗೂ ಸಮಾನ ಶಿಕ್ಷಣದ ಬದಲಾಗಿ ಅರ್ಹತೆಯನ್ನಾಧಾರಿಸಿದ ಶಿಕ್ಷಣ ಇವೆಲ್ಲವೂ ಮಧ್ಯವರ್ಗಗಳ ಇಂದಿನ ಮೌಲ್ಯಗಳು. ಒಂದು ಕಾಲಕ್ಕೆ “ಮದರ್ ಇಂಡಿಯಾ”, “ದೋ ಆಂಖೇ ಬಾರಹ್ ಹಾತ್”, “ಬಂಗಾರದ ಮನುಷ್ಯ”, “ಭೂತಯ್ಯನ ಮಗ ಅಯ್ಯು” ಮಾದರಿಯ ಸಾಮಾಜಿಕ ಕಳಕಳಿ ಮತ್ತು ಸರ್ವರಿಗೂ ಸಮಪಾಲು ನೀತಿಯನ್ನು ಎತ್ತಿ ಹಿಡಿಯುವ, ಯಾವುದೇ ವಾಂಛಲ್ಯಕ್ಕೆ ಬಲಿಯಾಗದೆ ಆತ್ಮಸಾಕ್ಷಿಯನ್ನು ನೆಚ್ಚಿಕೊಂಡ ಜೀವಪರ, ಮಾನವೀಯ ಚಿಂತನೆಗಳು ಮಧ್ಯಮವರ್ಗಕ್ಕೆ ಆದರ್ಶವಾಗಿದ್ದವು. ಇಂದು ಆದು ಸ್ಥಾನಪಲ್ಲಟಗೊಂಡು “ದಿಲ್ವಾಲೇ ದುಲ್ಹನಿಯಾ ಲೇಜಾಯೆಂಗೇ”, “ಕಭೀ ಕುಷಿ ಕಭೀ ಗಂ”, “ಸೂಪರ್” ತರಹದ ಮೌಲ್ಯಗಳು ಇಂದಿನ ಮಧ್ಯಮವರ್ಗಗಳನ್ನು ಕಬ್ಜಾ ಮಾಡಿಕೊಂಡಿವೆ. ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ನನ್ನ ಮಕ್ಕಳು ಎನ್ನುವ ಆದರ್ಶ, ಕುಟುಂಬವೆಂದರೆ ಕೇವಲ ವೈಯುಕ್ತಿಕ ಸಂಸಾರ ಮಾತ್ರವಲ್ಲದೆ ಇಡೀ ಹಳ್ಳಿಯೇ ನನ್ನ ಕುಟುಂಬ ಎನ್ನುವ ತೀವ್ರವಾದ ಮಾತೃಪ್ರೇಮ, ಹಣಕ್ಕಿಂತ ಮಾನವತಾವಾದಕ್ಕೆ ಪ್ರಮುಖ ಆದ್ಯತೆಯನ್ನು ಹೊಂದಿದಂತಹ ಚಂದವಳ್ಳಿಯ ತೋಟದ ಎಲ್ಲ ನೈತಿಕ ಮೌಲ್ಯಗಳು ಕರಗಿಹೋಗಿ ಅದರ ಸ್ಥಾನವನ್ನು ಹಮ್ ಆಪ್ಕೆ ಹೈ ಕೌನ್ ತರಹದ ಕುಟುಂಬದ ವೈಯುಕ್ತಿಕ ಹಳಹಳಿಕೆಗಳು, ನಾನು ಮತ್ತು ನನ್ನ ಸಂಸಾರದ ಒಂದು ಚಲನಹೀನ ಸ್ಥಿತಿ ಇದು ಮಧ್ಯಮವರ್ಗವನ್ನು ಆಕ್ರಮಿಸಿಕೊಂಡಿವೆ.

ಆಧುನಿಕತೆಯ ಹೆಸರಿನಲ್ಲಿ ಒಳಗೊಳ್ಳುವಿಕೆಯನ್ನು ಧಿಕ್ಕರಿಸಿ ಪ್ರತ್ಯೇಕತೆಯನ್ನು ಅಪ್ಪಿಕೊಂಡಿರುವ ನಮ್ಮ ಮಧ್ಯಮವರ್ಗ ಆಧುನಿಕ ಉನ್ನತ ಶಿಕ್ಷಣವನ್ನು ತಮ್ಮದಾಗಿಸಿಕೊಂಡರೂ ಇವರು ಮರಳಿ ಮೌಢ್ಯವನ್ನು, ಪರಂಪರೆಯನ್ನು ಹುಡುಕಿಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇನ್ನಿಲ್ಲದೆ ಹೆಣಗುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಸಂಘಪರಿವಾರದ ನೆಲೆಗಳಲ್ಲಿ ಅರ್ಥೈಸಿಕೊಂಡಿರುವ ಇಂದಿನ ಮಧ್ಯಮವರ್ಗದ ಬೌದ್ಧಿಕತೆ ಸಲೀಸಾಗಿ ಕೋಮುವಾದಿಗಳ ಕೈಗೆ ಜಾರಿರುವುದು ಪ್ರಜ್ಞಾವಂತರಲ್ಲಿ ಆತಂಕ ಹುಟ್ಟಿಸಿದೆ. ಇದೇ ಸಂಘ ಪರಿವಾರ ಹಿಂದುತ್ವದ ಅನನ್ಯತೆಯ ಮುಖವಾಡದಲ್ಲಿ ಹಿಂದೂ ಮತೀಯವಾದ ಮೂಲಕ ಇಡೀ ಭಾರತವನ್ನು ಆಪೋಶನ ತೆಗೆದುಕೊಳ್ಳಲು ದಾಪುಗಾಲು ಇಟ್ಟಾಗ ಮೈಯೆಲ್ಲ ಬಾಯಿಯಾಗಿರುವ ಈ ಉರಿವ ಬೆಂಕಿಯ ದಹನಕ್ಕೆ ವಾಹಕವಾಗಿ ಸುಲುಭವಾಗಿ ಬಳಕೆಯಾದದ್ದು ಇಂಡಿಯಾದ ಮಧ್ಯಮವರ್ಗ. ಹಿಂದೂ ಮತಾಂಧನೊಬ್ಬ ಗಾಂಧೀಜಿಯನ್ನು ಹತ್ಯೆಗೈದಾಗ ಸುಮಾರು ಮೂರು ದಶಕಗಳ ಕಾಲ ವಿಷಾದ, ಪಶ್ಚತ್ತಾಪದಲ್ಲಿ ಬೇಯುತ್ತಿದ್ದ ಮಧ್ಯಮವರ್ಗಕ್ಕೆ 21ನೇ ಶತಮಾನದ ಹೊತ್ತಿಗೆ ನಾಥುರಾಮ ಗೋಡ್ಸೆ, ಸಾವರ್ಕರ್‌ಗಳು ಅಧ್ಯಯನದ ವ್ಯಕ್ತಿತ್ವಗಳಾಗಿ ರೂಪಿತಗೊಂಡಿದ್ದು ಮಧ್ಯಮವರ್ಗಗಳ ಬಲು ದೊಡ್ಡ ಸೋಲು. ಇವರಿಗೆ ಧರ್ಮನಿರಪೇಕ್ಷತೆಯ ಆದರ್ಶವು ಮಸ್ಲಿಂರ ಓಲೈಕೆಯಾಗಿ ಗೋಚರಿಸುತ್ತದೆ. ಸಂಘ ಪರಿವಾರವು ಹಿಂದುತ್ವವನ್ನು ಹಕ್ಕಿನ ಪ್ರಶ್ನೆಯಾಗಿ ಮಾರ್ಪಡಿಸಿ ಆಕ್ರಮಣ ಶೀಲತೆಯನ್ನು, ದಮನನೀತಿಯನ್ನು ಪ್ರದರ್ಶಿಸಿದಾಗ ಮಧ್ಯಮವರ್ಗ ಜಾಣ ಮೌನಕ್ಕೆ ಶರಣಾಗುತ್ತಾರೆ.

90ರ ದಶಕದಲ್ಲಿ ‘ಏಕ್ ಧಕ್ಕ ಔರ್ ದೋ’ ಸ್ಲೋಗನ್ ಇವರಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಸ್ಯೂಡೋ ಸೆಕ್ಯುಲರ್ಸ್ ಎಂದು ಪ್ರಗತಿಪರ ಚಿಂತಕರನ್ನು ಹೀಯಾಳಿಸಿದ ಸಂಘಪರಿವಾರದ ನಾಯಕ  ಎಲ್.ಕೆ. ಅಧ್ವಾನಿ ಇವರಿಗೆ ಬಹಳ ಹತ್ತಿರವಾಗುತ್ತಾರೆ. ಆದರೆ ಇದೇ ಎಲ್.ಕೆ. ಅಧ್ವಾನಿ ದಿಲ್ಲಿಯ ಗದ್ದುಗೆಯನ್ನು ಆಕ್ರಮಿಸಲು 1990ರಲ್ಲಿ ನಡೆಸಿದ ರಥಯಾತ್ರೆಯ ಗುಪ್ತ ಅಜೆಂಡಗಳು, ಹಿಂದುತ್ವವಾದದ ಉಗ್ರತೆ, ಕೋಮುವಾದದ ಆಶಯಗಳು ಮಧ್ಯಮವರ್ಗಗಳ ಪ್ರಜ್ಞೆಗೆ ದಕ್ಕದೇ ಹೋಯಿತು. ಕೋಮುವಾದದ ಕರಾಳತೆ ಮಧ್ಯಮವರ್ಗಗಳ ಹೃದಯಕ್ಕೆ ನಾಟಲಿಲ್ಲ. ಕಣ್ಣು ತೆರಸಲಿಲ್ಲ. ಬದಲಾಗಿ ಸಂಘಪರಿವಾರದ ಅಲ್ಪಸಂಖ್ಯಾತ ದ್ವೇಷದ ಸಿಂದ್ಧಾಂತಗಳನ್ನು ಪ್ರಜ್ಞಾಪೂರ್ವಕವಾಗಿಯೇ ಅನುಮೋದಿಸಿದರು. ಮುಸ್ಲಿಂರ ಹತ್ಯೆನಡೆಸಿ ಈ ಮಾರಣಹೋಮದ ಕಳಂಕ ಹೊತ್ತಿರುವ ನರೇಂದ್ರ ಮೋದಿ ಹಾಗೂ ಈ ನರೇಂದ್ರ ಮೋದಿಯ ಫ್ಯಾಸಿಸ್ಟ್ ಮಾದರಿಯ ಅಡಳಿತ ಸಿದ್ಧಾಂತಗಳು ನಮ್ಮ ಮಧ್ಯಮವರ್ಗಕ್ಕೆ ಅಪ್ಯಾಯಮಾನವಾಗಿಯೂ ಈ ಸರ್ವಾಧಿಕಾರಿ ಮೋದಿಯು ಉತ್ತಮ ಆಡಳಿತಗಾರನಾಗಿಯೂ, ಒಬ್ಬ ಮಾದರಿ ನಾಯಕನಾಗಿಯೂ ರೂಪಿತಗೊಂಡಿರುವುದು ನಮ್ಮ ಮಧ್ಯಮವರ್ಗಗಳ ನೈತಿಕ ಅಧಪತನಕ್ಕೆ, ಬೌದ್ಧಿಕ ದಿವಾಳಿತನಕ್ಕೆ ಜ್ವಲಂತ ಸಾಕ್ಷಿ.

ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಭ್ರಷ್ಟಚಾರದ ಹಗರಣಗಳು ದಿನನಿತ್ಯದ ವ್ಯವಹಾರದಂತೆ ಬಯಲಾಗುತ್ತಿದ್ದರೂ, ಈ ಭ್ರಷ್ಟ ಸರ್ಕಾರದ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಆರೋಪಿತರಾಗಿ ಜೈಲುವಾಸ ಅನುಭವಿಸುತ್ತಿದ್ದರೂ ಮೊನ್ನೆ ನಡೆದ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಮತ ನೀಡಿ ಈ ಪಕ್ಷಕ್ಕೆ 5 ಸ್ಥಾನಗಳನ್ನು ಗೆಲ್ಲಿಸಿಕೊಡುವುದರ ಮೂಲಕ ತಮ್ಮೊಳಗಿನ ಹಿಪೋಕ್ರಸಿಯನ್ನು ಬಹಿರಂಗಗೊಳಿಸುತ್ತಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಮಂತ್ರಿ ಪದವಿ ಕಳೆದುಕೊಂಡ ರಾಮಚಂದ್ರೇಗೌಡ ಅವರು ಬೆಂಗಳೂರಿನ ಪಧವೀದರರ ಕ್ಷೇತ್ರದಿಂದ ಪುನರಾಯ್ಕೆಗೊಳ್ಳುತ್ತಾರೆ. ಬೆಂಗಳೂರು ಮಹಾನಗರ ಪಾಲಿಕೆಗೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ವಾನುಮತದಿಂದ ಚುನಾಯಿತಗೊಳ್ಳುತ್ತದೆ.

ಇದು ಇವರ ಆಚಾರ ಹೇಳೋದಕ್ಕೆ ಬದನೇಕಾಯಿ ತಿನ್ನೋದಕ್ಕೆ ನೀತಿಗೆ ಒಂದು ಸ್ಯಾಂಪಲ್. ಇದು ಇವರ ಭ್ರಷ್ಟಾಚಾರ ವಿರೋಧದ ಲೊಳಲೊಟ್ಟೆ ಶೈಲಿ. ಇಲ್ಲಿ ಜಾತೀಯತೆ ಮತ್ತು ಭ್ರಷ್ಟಾಚಾರ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಹಾಗು ಒಂದು ಇನ್ನೊಂದನ್ನು ಬಳಸಿಕೊಂಡೇ ಮೇಲ್ಮುಖವಾಗಿ ಚಲಿಸುತ್ತದೆ. ಕಡೆಗೆ ಅಸ್ಪೃಶ್ಯತೆಯೂ ಸಹ ಒಂದು ಭ್ರಷ್ಟಚಾರ ಎನ್ನುವ ಸರಳ ಸತ್ಯವನ್ನು ಅರಿಯುವಲ್ಲಿ ಇಂಡಿಯಾದ ಅಕ್ಷರಸ್ತರು ಸೋತಿದ್ದಾರೆ. ಇಂಡಿಯಾದಲ್ಲಿ ಭ್ರಷ್ಟಾಚಾರವನ್ನು ಕೇವಲ ಆಡಳಿತಾತ್ಮಕವಾಗಿ ನೋಡದೆ ಜೊತೆಜೊತೆಗೆ ಇದು ಸಾಂಸ್ಕೃತಿಕ ಬಿಕ್ಕಟ್ಟು ಮತ್ತು ಸಾಮಾಜಿಕ ನೀಚತನವನ್ನಾಗಿ ಅರ್ಥೈಸಿಕೊಳ್ಳಲು ಇರುವ ಅಪಾರವಾದ ಸಾಧ್ಯತೆಗಳನ್ನು ತಳ್ಳಿ ಹಾಕಿ ತೀರ ಸರಳವಾಗಿ ಅಣ್ಣಾ ಹಜಾರೆಯವರ ಘೋಷಣೆಯಾದ ರಾಜಕಾರಣಿಗಳು ಮಾತ್ರ ಭ್ರಷ್ಟರು ಎನ್ನುವ ಆತಂಕಕಾರಿ ರೋಚಕತೆಗೆ ಮಾರು ಹೋಗುತ್ತಾರೆ ಇಲ್ಲಿನ ವಿದ್ಯಾವಂತರು.

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಪ್ರಾಮಾಣಿಕ ಆಂದೋಲನ ಹಾದಿ ತಪ್ಪಿದ ಹಳಿಯಲ್ಲಿ ನಿಂತು ದೇಶಾಭಿಮಾನದ ಪ್ರಶ್ನೆಗಳನ್ನು ಎತ್ತುತ್ತಿರುವುದು ನಮಗೆಲ್ಲ ಅರಿವಾದಂತಿಲ್ಲ. ಈ ಬೇಜವಾಬ್ದಾರಿ ಮಾದರಿ ಕಡೆಗೆ ಪ್ರಜಾಪ್ರಭುತ್ವವನ್ನೇ ಧಿಕ್ಕರಿಸುತ್ತದೆ. ಈ ಮೂಲಕ ಸಾಮಾಜಿಕ ಅಸಹನೆ ಹಾಗೂ ಅರಾಜಕತೆಯ ನಡುವಿನ ತೆಳುವಾದ ಗೆರೆಯನ್ನು ಯಶಸ್ವಿಯಾಗಿ ಅಳಿಸಿ ಹಾಕುತ್ತದೆ ಈ ಅಣ್ಣಾ ಹಜಾರೆ ಮಾದರಿ. ಈ ಅಪಾಯಕಾರಿ ಮಾದರಿಗೆ ಈ ಗುಂಪು ಬಳಸಿಕೊಳ್ಳುತ್ತಿರುವುದು ಗಾಂಧಿಗಿರಿಯನ್ನು. ಆದರೆ ಇಲ್ಲಿ ಗಾಂಧೀಜಿಯನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಬಾಪು ಗಾಂಧಿಯನ್ನು ಒಂದು ಪ್ಯಾಕೇಜ್ ಪ್ರಾಡಕ್ಟ್ ಆಗಿ ಪರಿವರ್ತಿಸಿ ಜೊತೆಜೊತೆಗೆ ಈ ಪ್ಯಾಕೇಜ್‌ಗೆ ಸ್ವಃತಹ ತಾವೇ ರೂಪದರ್ಶಿಯಾಗುವ ದ್ವಿಪಾತ್ರ ಅಭಿನಯವನ್ನು ಮಿ.ಗಾಂಧಿಗೆ ವಹಿಸಿಕೊಟ್ಟಿದೆ ಈ 21ನೇ ಶತಮಾನದ ನಾಗರಿಕ ಸಮಾಜ. ಶಿಥಿಲಗೊಂಡು ಕುಸಿಯುತ್ತಿರುವ ಚಾವಣಿಯಡಿಯಲ್ಲಿ ತಮ್ಮ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಎರಡನೇ ಸ್ವಾತಂತ್ರ ಹೋರಾಟವೆಂದು ಕೂಗುತ್ತ ಆತ್ಮವಂಚನೆಯಲ್ಲಿ ಮುಳುಗಿದೆ ಈ ನಮ್ಮ ಸೋ ಕಾಲ್ಡ್ ನಾಗರಿಕ ಸಮಾಜ. ಈ ಅಣ್ಣಾ ಹಜಾರೆಯವರ ಚಳವಳಿಯನ್ನು ಕೋಮುವಾದಿ ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳು ಸಕ್ರಿಯವಾಗಿ ಬೆಂಬಲಿಸಿ ಹೈಜಾಕ್ ಮಾಡಲು ಯತ್ನಿಸಿದಾಗ ಇವುಗಳ ಗುಪ್ತ ಕಾರ್ಯಸೂಚಿಗಳ ಅರಿವಿದ್ದೂ ತಳಮಳಗೊಳ್ಳಲಿಲ್ಲ ಈ ನಾಗರಿಕ ಸಮಾಜ. ಅಣ್ಣಾ ಚಳವಳಿಯಡಿಯಲ್ಲಿ ಮಂಡಿತವಾಗುತ್ತಿರುವ ಸಾರ್ವಜನಿಕ ಹಕ್ಕೊತ್ತಾಯಗಳು ಕೇವಲ ಮಧ್ಯಮವರ್ಗವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆಯೇ ಹೊರತಾಗಿ ನಿರಂತರ ಹಿಂಸೆಗೆ ತುತ್ತಾಗುತ್ತಿರುವ ತಳ ಸಮುದಾಯಗಳ ಆತಂಕಗಳಲ್ಲ. ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರದಿಂದ ಈ ನಾಗರಿಕ ಸಮಾಜ ತೊಂದರೆಗೊಳಗಾಗಿದೆ ಎನ್ನುವುದು ಎಷ್ಟು ನಿಜವೋ ಈ ಭ್ರಷ್ಟ ವ್ಯವಸ್ಥೆಗೆ ಸ್ವತಃ ಈ ನಾಗರಿಕ ಸಮಾಜ ಸಹ ಅಷ್ಟೇ ಕಾರಣವೆಂಬುದನ್ನು ಚಾಪೆಯ ಕೆಳಗೆ ಮುಚ್ಚಿಟ್ಟಿದ್ದು ಇಡೀ ಚಳವಳಿಯ ಬಲು ದೊಡ್ಡ ಸೋಲು. ಇಂತಹ ವಿಷಮ ಸಂದರ್ಭದಲ್ಲಿ ಬಾಪೂಜಿ ಗಾಂಧಿಯ ಆದರ್ಶಗಳಾದ ಸರಳ ಜೀವನ, ಸತ್ಯವಂತಿಕೆ, ಜಾತ್ಯಾತೀತ ಮನೋಧರ್ಮ, ಅಹಿಂಸಾವಾದ ಮುಂತಾದವುಗಳನ್ನು ಬಳಸಿಕೊಂಡು ಮುಂದಿನ ತಲೆಮಾರಿಗೆ ಮಾದರಿಯಾಗಬಹುದಾಗಿದ್ದ ನಮ್ಮ ಈ ನಾಗರಿಕ ಸಮಾಜ ತಮಗೆ ದೊರೆತ ಅಪೂರ್ವ ಅವಕಾಶವನ್ನು ಸಹ ಹಾಳುಗೆಡವಿದೆ.

ಭಾರತೀಯರಾದ ನಮಗೆ ಅದೃಷ್ಟವಶಾತ್ ಗಾಂಧಿಯಂತಹ ಮಹಾತ್ಮ ದೊರಕಿದ್ದಾನೆ. ಇಂದಿನ ಜಾಗತೀಕರಣದ ದುಷ್ಟತೆಯ ಸಂದರ್ಭದಲ್ಲಿ ಗಾಂಧಿಯ ಮಾದರಿಗಳು ಬಹಳ ಉಪಯುಕ್ತವಾಗುತ್ತವೆ. ಆದರೆ ಈ ದಿಕ್ಕಿನಲ್ಲಿ ಪಯಣಿಸಲು ಮಾತ್ರ ನಾಗರಿಕ ಸಮಾಜ ಪದೇ ಪದೇ ನಿರಾಕರಿಸುತ್ತಿದೆ.

(ಚಿತ್ರಕೃಪೆ: ವಿವಿಧ ಮೂಲಗಳಿಂದ)

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ : ಸಮಾಜದ ಕಪ್ಪು ಮುಖ


-ಡಾ.ಎಸ್.ಬಿ. ಜೋಗುರ


ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳು ವಿಶ್ವದ ಎಲ್ಲ ರಾಷ್ಟ್ರಗಳಿಂದಲೂ ಗಮನ ಸೆಳೆಯುವ ಸಾಮಾಜಿಕ ಸಂಗತಿಯಾಗಿದೆ. ಈ ದಿಶೆಯಲ್ಲಿ ಅನೇಕರು ಸ್ಥಿತಿ ಅಧ್ಯಯನವನ್ನು ಮಾಡಿ ಕೆಲ ಅಪರೂಪವಾದ ಮಾಹಿತಿಯನ್ನು ಹೊರಹಾಕಿರುವುದಿದೆ. ಡಯಾನಾ ರಸಲ್ ಎನ್ನುವವರು ಸ್ಯಾನ್ ಫ್ರಾನ್ಸಿಸ್ಕೊದ ಸುಮಾರು 930 ಮಹಿಳೆಯರನ್ನು ಅಧ್ಯಯನ ಮಾಡಿ, ಅವರು ಬಾಲಕಿಯಾಗಿದ್ದಾಗ ಅವರ ಮೇಲೆ ಜರುಗಿದ ದೌರ್ಜನ್ಯಗಳನ್ನು ಕುರಿತು ಅವರಿಂದ ಮಾಹಿತಿ ಕಲೆಹಾಕಿ ಅಧ್ಯಯನ ಮಾಡಿರುವರು. ಅಲ್ಲಿ ಕೆಲವರು ಬೇಬಿ ಸಿಟರ್ ಒಬ್ಬನಿಂದ, ತಂದೆಯಿಂದ, ಸಹೋದರನಿಂದ, ನೆರೆಯವನಿಂದ, ಚಿಕ್ಕಪ್ಪನಿಂದ ಹೀಗೆ ಅನೇಕ ಹತ್ತಿರದ ಸಂಬಂಧಿಗಳಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ವಸ್ತು ಸ್ಥಿತಿ ಅಧ್ಯಯನಗಳನ್ನು ಆಕೆ ಮಾಡಿ ಮಾಹಿತಿ ನೀಡಿರುವುದಿದೆ.

ರಾಶೆಲಾ ಎನ್ನುವ ಬಾಲಕಿ 10 ವರ್ಷದವಳಿದ್ದಾಗ ಆಕೆ ಇದ್ದ ವಸತಿಶಾಲೆಯ ವಾರ್ಡನ್ ಆಕೆಯನ್ನು ಬೆತ್ತಲು ಮಾಡಿ ತನ್ನ ಜನನಾಂಗಗಳನ್ನು ಮುಟ್ಟುವಂತೆ ಪ್ರಚೋದಿಸಿದ ಬಗ್ಗೆ ಆಕೆ ಸಂಶೋಧಕಿ ಡಯಾನಾ ರಸಲ್ ಎದುರು ಹೇಳಿಕೊಂಡಿರುವುದಿದೆ. ಇದು ಕೆವಲ ಒಂದು ಬಾರಿಯಲ್ಲ, ಸುಮಾರು ಹತ್ತಾರು ಬಾರಿ ಎನ್ನುವುದನ್ನು ರಾಶೆಲಾ ಹೇಳಿರುವದಿದೆ. [Sexual exploitation-Diana Russell-p25] ಡಯಾನಾ ರಸೆಲ್ ತನ್ನ ಅಧ್ಯಯನದಲ್ಲಿ ಕಂಡುಕೊಂಡ ಸಂಗತಿಗಳೆಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಹತ್ತಿರದ ಸಂಬಂಧಿಗಳು, ಅಗಮ್ಯಗಮನ ಸಂಬಂಧಗಳು, ಮಲತಂದೆ ಇಲ್ಲವೆ ಮಲತಾಯಿ, ವಸತಿಶಾಲೆಗಳಲ್ಲಿ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಹೆಚ್ಚು ಎನ್ನುವುದನ್ನು ತಮ್ಮ ಅಧ್ಯಯನದ ಮೂಲಕ ತೊರಿಸಿರುವುದಿದೆ. ತಂದೆ ಮಗಳನ್ನು ಲೈಂಗಿಕವಾಗಿ ಶೋಷಿಸುವ ಸಂಬಂಧದ ಪ್ರಮಾಣವನ್ನು ಸ್ಯಾನ್ ಫ್ರಾನ್ಸಿಸ್ಕೊ ನಗರದಲ್ಲಿ 4.5 ಪ್ರತಿಶತದಷ್ಟಿರುವ ಬಗ್ಗೆಯೂ ಆಕೆ ತನ್ನ ಅಧ್ಯಯನದಲ್ಲಿ ತಿಳಿಸಿರುವುದಿದೆ.

ಬಾಲಕ ಇಲ್ಲವೇ ಬಾಲಕಿ ಒಟ್ಟಾರೆ ನಿರಾಕರಿಸಲಾಗದ ಸ್ಥಿತಿಯಲ್ಲಿಯೇ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವ ರೀತಿಯನ್ನು ಆಕೆ ಕೆಲ ಸ್ಥಿತಿ ಅಧ್ಯಯನಗಳಲ್ಲಿ ಚಿತ್ರಿಸಿರುವುದಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎನ್ನುವದು 18 ವರ್ಷದೊಳಗಿನ ಬಾಲಕ ಇಲ್ಲವೇ ಬಾಲಕಿಯ ಜೊತೆಗಿನ ಲೈಂಗಿಕ ಕ್ರಿಯೆ ಎಂದಾಗುತ್ತದೆ. ಡಯಾನಾ ಮಾತ್ರ ಈ ಲೈಂಗಿಕ ಕ್ರಿಯೆ ಇಲ್ಲವೇ ದೌರ್ಜನ್ಯ ಎನ್ನುವದನ್ನು ಕೇವಲ ಅವರೊಂದಿಗೆ ಭೌತಿಕ ಸಂಪರ್ಕ ಹೊಂದುವುದಕ್ಕೆ ಮಾತ್ರ ಸೀಮಿತಗೊಳಿಸದೇ ಅವರನ್ನು ಮುಟ್ಟುವುದು, ಅವರ ಜನನಾಂಗಗಳನ್ನು ಸ್ಪರ್ಷಿಸುವುದು, ಅಶ್ಲೀಲವಾದ ಚಿತ್ರಗಳನ್ನು ತೋರಿಸುವುದು ಮುಂತಾದ ಅಂಶಗಳು ಈ ಲೈಂಗಿಕ ದೌರ್ಜನ್ಯ ಎನ್ನುವ ಅರ್ಥದಲ್ಲಿ ಅಡಕವಾಗಿರುವ ಬಗ್ಗೆ ಅವರು ಹೇಳಿರುವುದಿದೆ.

ಇದು ಅಮೆರಿಕೆಯಂಥಾ ಮಹಾನಗರಗಳಲ್ಲಾಯಿತು. ನಮ್ಮಲ್ಲಿ ಅದೆಲ್ಲಾ ತೀರಾ ಕಡಿಮೆ ಎಂದು ವಾದಮಾಡುವಂಥ ಸ್ಥಿತಿ ಈಗಿಲ್ಲ. ಕರ್ನಾಟಕದಂತಹ ಸಾಂಸ್ಕೃತಿಕ ನಾಡಿನಲ್ಲಿಯೂ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವುದಿದೆ. ರಾಜ್ಯ ಅಪರಾಧಿ ವಿಭಾಗದ ಅಂಕಿಅಂಶಗಳ ಪ್ರಕಾರ [ಎಸ್.ಸಿ.ಆರ್.ಬಿ.] ನಮ್ಮ ರಾಜ್ಯದಲ್ಲಿ 2006 ರ ಸಂದರ್ಭದಲ್ಲಿ 84 ಪ್ರಕರಣಗಳು ಲೈಂಗಿಕ ದೌರ್ಜನ್ಯದ ವಿಷಯವಾಗಿ ದಾಖಲಾಗಿದ್ದರೆ, 2008 ರಲ್ಲಿ ಆ ಪ್ರಮಾಣ 97ರಷ್ಟಿದೆ. 2009 ರಲ್ಲಿ ಅದು 104 ರಷ್ಟಿದೆ. 2010 ರಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಮ್ಮಲ್ಲಿ 107 ರಷ್ಟು ದಾಖಲಾಗಿವೆ. ಇದೆಲ್ಲವನ್ನು ನೋಡಿದಾಗ ನಮ್ಮಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣ ಕಡಿಮೆ ಇದೆಯೆಂದು ಭಾವಿಸುವ ಅವಶ್ಯಕತೆಯಿಲ್ಲ.

ಇನ್ನು ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ. 2010 ರ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಪ್ರಮಾಣ ಹೀಗಿದೆ. ಬೆಳಗಾಂವದಲ್ಲಿ ಅತೀ ಹೆಚ್ಚು ಅಂದರೆ 23 ಪ್ರಕರಣಗಳು, ಮೈಸೂರಿನಲ್ಲಿ 19 ಪ್ರಕರಣಗಳು, ಕೊಡಗಿನಲ್ಲಿ 12 ಪ್ರಕರಣಗಳು, ಚಿಕ್ಕಮಗಳೂರಿನಲ್ಲಿ 10 ಪ್ರಕರಣಗಳು, ಶಿವಮೊಗ್ಗದಲ್ಲಿ 9 ಪ್ರಕರಣಗಳು, ಮಂಡ್ಯದಲ್ಲಿ 8 ಪ್ರಕರಣಗಳು, ಬಿದರದಲ್ಲಿ 6 ಪ್ರಕರಣಗಳು, ಚಿತ್ರದುರ್ಗದಲ್ಲಿ 6 ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ನಮ್ಮಲ್ಲಿಯೂ ಈಗ ಮಕ್ಕಳ ಮೆಲಾಗುವ ಲೈಂಗಿಕ ದೌರ್ಜನ್ಯದ ಪ್ರಮಾಣಗಳು ಕಡಿಮೆಯಿಲ್ಲ ಎನ್ನುವುದು ವಿಧಿತವಾಗುತ್ತದೆ.

ಬೆಳಗಾಂವ ಜಿಲ್ಲೆಯಲ್ಲಿ ಕೇವಲ ಲೈಂಗಿಕ ದೌರ್ಜನ್ಯಗಳು ಮಾತ್ರವಲ್ಲದೇ ಮಕ್ಕಳ ಅಪಹರಣದ ಸಂಗತಿಗಳು ಕೂಡಾ ಬಯಲಾಗಿವೆ. ರಾಜ್ಯದ ಇತರೆ ಕಡೆಗಳಲ್ಲಿ ಮಕ್ಕಳ ಅಪಹರಣಗಳು ಜರುಗಿವೆಯಾದರೂ ಬೆಳಗಾವಿ ಮಾತ್ರ ಎಲ್ಲ ಜಿಲ್ಲೆಗಳಿಗಿಂತಲೂ ಈ ವಿಷಯವಾಗಿ ಮುಂಚೂಣಿಯಲ್ಲಿದೆ. 2010 ರ ಸಂದರ್ಭದಲ್ಲಿ ಸುಮಾರು 34 ರಷ್ಟು ಮಕ್ಕಳ ಅಪಹರಣದ ಪ್ರಕರಣಗಳು ಬೆಳಗಾವಿಯಲ್ಲಿ ಜರುಗಿದೆ [ದಿ ಹಿಂದೂ ಜೂನ್ 20-2012].

ಇಡೀ ದೇಶದಲ್ಲಿ ಮಕ್ಕಳ ಮೇಲೆ ಒಂದಿಲ್ಲಾ ಒಂದು ಬಗೆಯ ದೌರ್ಜನ್ಯಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ದಾಖಲಾಗುವ ಪ್ರಮಾಣ ತೀರಾ ಕಡಿಮೆ. ಮಕ್ಕಳನ್ನು ವಸ್ತುಗಳಂತೆ ಮಾರಾಟ ಮಾಡುವ ದೊಡ್ದ ಜಾಲವೂ ನಮ್ಮಲ್ಲಿದೆ. ಮಕ್ಕಳು ದೇವರು ಎಂದು ಹೇಳುತ್ತಲೇ ಈ ಬಗೆಯ ಲೈಂಗಿಕ ದೌರ್ಜನ್ಯ, ಮಾರಾಟ, ಬಾಲಕಾರ್ಮಿಕರನ್ನಾಗಿ ಮಾಡುವುದು ನಿರಂತರವಾಗಿ ನಡದೇ ಇವೆ ಎನ್ನುವುದು ನಾಗರಿಕ ಸಮಾಜದ ಒಂದು ಕಪ್ಪು ಮುಖದರ್ಶನ ಎಂದೇ ಅರ್ಥ.

ಈ ಬಗೆಯ ಲೈಂಗಿಕ ದೌರ್ಜನ್ಯಕ್ಕೆ ಅತಿ ಮುಖ್ಯವಾದ ಕಾರಣಗಳಾಗಿ ಈ ಕೆಳಗಿನ ಸಂಗತಿಗಳನ್ನು ಹೇಳಬಹುದು.

  •   ಪುರುಷ ಪ್ರಾಧಾನ್ಯತೆ
  •    ತಂದೆ-ತಾಯಿ ಇಲ್ಲದಿರುವುದು
  •    ತಾಯಿ ಮಾತ್ರ ಇರುವುದು
  •    ದುರ್ಬಲವಾಗಿರುವ ತಂದೆ ತಾಯಿಗಳು
  •    ಹೆಚ್ಚು ಜನ ಒಂದೇ ಕಡೆ ಮಲಗುವ ಕುಟುಂಬ
  •    ಮನೆಯಿಂದ ದೂರ ಉಳಿಯುವುದು
  •    ಇನ್ನೊಬ್ಬರ ಮನೆಯಲ್ಲಿ ಉಳಿಯುವುದು ಇಲ್ಲವೆ ವಸತಿಗೃಹದಲ್ಲಿ ಉಳಿಯುವುದು
  •    ಮಗುವಿನ ಮುಗ್ದತೆ ಮತ್ತು ಅಸಹಾಯಕತೆ

ಫಿಂಕ್ಲರ್ ಎನ್ನುವ ಚಿಂತಕರು ಹೇಳುವ ಹಾಗೆ ಮಕ್ಕಳಿಗೆ ಮನೆಯಲ್ಲಿ ಈ ಬಗೆಯ ಕೃತ್ಯಗಳನ್ನು ಪ್ರತಿರೋಧಿಸುವ ಬಗ್ಗೆ ತಿಳುವಳಿಕೆ ಮತ್ತು ಶಿಕ್ಷಣವನ್ನು ನೀಡಬೇಕು ಕೆಲಬಾರಿ ಒತ್ತಡದಿಂದ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವ ಬಗೆಯನ್ನು ಅವರು ಡಯಾನಾ ರಸಲ್‌ರ ಒಂದು ಸ್ಥಿತಿ ಅಧ್ಯಯನವನ್ನು ಆಧರಿಸಿ ಅವರು ಮಾತನಾಡಿರುವುದಿದೆ. ಆತ ಆ ಮಗುವಿನ ಮಲತಂದೆ. ಆಕೆ ಮಲಗುವ ಕೋಣೆಗೆ ನುಗ್ಗಿ, ಚೀರಿದರೆ ತಲೆದಿಂಬನ್ನು ಬಾಯಿಗೆ ಹಿಡಿದು ಸಾಯಿಸುವುದಾಗಿ ಹೇಳಿದ. ಆ ಬಾಲಕಿಯ ಮೇಲೆ ರಾಕ್ಷಸನಂತೆ ಎರಗಿದ. ಆ ಬಾಲಕಿಗೆ ದಿಕ್ಕೇ ತೋಚಲಿಲ್ಲ. ತಕ್ಷಣವೇ ಕೈಗೆ ಸಿಕ್ಕ ಹ್ಯಾಮರ್ ಒಂದರಿಂದ ಆತನ ತಲೆಗೆ ಹೊಡೆದು ಓಡಿ ಹೋದಳು. ಇದನ್ನು ಹೇಳುತ್ತಾ ಇದು ಎಲ್ಲ ಬಾಲಕಿಯರಿಗೆ ಸಾಧ್ಯವಾಗುವುದಿಲ್ಲ ಎನ್ನುವ ವಾಸ್ತವವನ್ನೂ ಅವರು ಚರ್ಚಿಸಿದ್ದಾರೆ. ಒಟ್ಟಾರೆ ಮೇಲೆ ಹೇಳಲಾದ ಕಾರಣಗಳಿಂದ ಅವಳನ್ನು ಬಿಡುಗಡೆಗೊಳಿಸಿದರೆ ತಕ್ಕ ಮಟ್ಟಿಗೆ ಈ ಬಗೆಯ ದೌರ್ಜನ್ಯದಿಂದ ಅವಳನ್ನು ಪಾರು ಮಾಡಬಹುದು. ಆ ದಿಶೆಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ಮತ್ತು ತರಬೇತಿಯ ಅವಶ್ಯಕತೆಯೂ ಇದೆ.

ಗಾಂಧಿ ಜಯಂತಿ ಕಥಾಸ್ಪರ್ಧೆ – 2012

ಸ್ನೇಹಿತರೆ,

2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ನಾನು. ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ನನಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಈಗ ವರ್ತಮಾನದ ಅಡಿಯಲ್ಲಿ ಅದನ್ನು ಮುಂದುವರೆಸಬೇಕೆಂದು ತೀರ್ಮಾನಿಸಿದ್ದೇನೆ. ಬಹುಶ: ಈ ವರ್ಷದಿಂದ ಇದನ್ನು ಪ್ರತಿ ವರ್ಷ ತಪ್ಪದೆ ನಡೆಸುವ ಯೋಜನೆ ಹಾಕುತ್ತಿದ್ದೇನೆ.

ಗಾಂಧಿ ಜಯಂತಿ ಕಥಾಸ್ಪರ್ಧೆಯ ಆರಂಭದಲ್ಲಿ ಈ ಸ್ಪರ್ಧೆಯ ಉದ್ದೇಶ ಮತ್ತು ಕತೆಗಳು ಯಾವುದರ ಹಿನ್ನೆಲೆಯಲ್ಲಿ ರೂಪುಗೊಂಡಿರಬೇಕು ಎಂದು ಕೆಲವು ಟಿಪ್ಪಣಿ ಬರೆದಿದ್ದೆ. ಆದರೆ ಈ ಬಾರಿ ಅಂತಹ ನಿಬಂಧನೆಗಳು ಏನೂ ಇಲ್ಲ. ಉತ್ತಮ ಕತೆಗಳನ್ನು ಬರೆಯಿರಿ ಮತ್ತು ಕಳುಹಿಸಿ ಎಂಬುದಷ್ಟೇ ವಿನಂತಿ.

ಬಹುಮಾನಗಳ ವಿವರ:

ಮೊದಲ ಬಹುಮಾನ: ರೂ. 6000
ಎರಡನೆ ಬಹುಮಾನ: ರೂ. 4000
ಮೂರನೆಯ ಬಹುಮಾನ: ರೂ. 3000
ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ: ಆಗಸ್ಟ್ 31, 2012

ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಒಂದು ಪುಟ್ಟ ಸಭೆ ಮಾಡಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಮಾಮೂಲಿನಂತೆ ಎಲ್ಲಾ ಕಥಾಸ್ಪರ್ಧೆಗಳ ನಿಬಂಧನೆಗಳು ಇಲ್ಲಿಯೂ ಅನ್ವಯಿಸುತ್ತವೆ: ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು; ಕನಿಷ್ಟ 1500 ಪದಗಳದ್ದಾಗಿರಬೇಕು.

ಮತ್ತು, ಕೆಲವು ತಾಂತ್ರಿಕ ಮತ್ತು ಅನುಕೂಲದ ಕಾರಣಕ್ಕಾಗಿ ದಯವಿಟ್ಟು ನಿಮ್ಮ ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಿ. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್  ವಿಳಾಸ: editor@vartamaana.com

ಈ ಪ್ರಕಟಣೆ ನೋಡಿರದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಎಂದು ವಿನಂತಿಸುತ್ತೇನೆ.

 ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ