ಕಾಂಗ್ರೆಸ್ ಪಕ್ಷದಲ್ಲಿ ಚಿಂತನಶೀಲತೆಯ ಕೊರತೆ

– ಆನಂದ ಪ್ರಸಾದ್

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಾಯಕತ್ವ ಹಾಗೂ ಚಿಂತನೆಯ ಕೊರತೆಯಿಂದ ಬಳಲುತ್ತಿದೆ. ಪರಮ ಭ್ರಷ್ಟರನ್ನು ಜಾತಿಯ ಮುಖ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎಂಬ ಪರೋಕ್ಷ ಸುಳಿವುಗಳು ಇವೆ. ಇದರಿಂದ ಪಕ್ಷಕ್ಕೆ ಹಾನಿಯೇ ಹೊರತು ಲಾಭವಾಗಲು ಸಾಧ್ಯವಿಲ್ಲ. ಇದುವರೆಗೆ ಕರ್ನಾಟಕವು ಕಂಡು ಕೇಳರಿಯದ ಪರಮ ಭ್ರಷ್ಟ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಅವರು ತಮ್ಮ ಮಾತೃ ಪಕ್ಷವನ್ನು ತೊರೆದರೆ ಮತ್ತು ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡರೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಸಿದ್ಧವಿದೆ ಎಂಬ ಸುಳಿವನ್ನು ಕಾಂಗ್ರೆಸ್ಸಿನ ರಾಜ್ಯ ಅಧ್ಯಕ್ಷರು ಹೇಳಿರುವ ವರದಿಯಾಗಿದೆ. ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿದ ಕೂಡಲೇ ಭ್ರಷ್ಟರ ಭ್ರಷ್ಟಾಚಾರ ತೊಳೆದು ಹೋಗುತ್ತದೆಯೇ? ಇಂಥ ಸಮಯಸಾಧಕತನದ ಧೋರಣೆಗಳಿಂದ ಪಕ್ಷವು ಜನರ ವಿಶ್ವಾಸ ಗಳಿಸಲಾರದು ಮತ್ತು ಗಳಿಸಿದ ವಿಶ್ವಾಸವೂ ಕಳೆದುಹೋಗಬಹುದು. ಇದೇ ರೀತಿ ಅಕ್ರಮ ಗಣಿವೀರ ಹಾಗೂ ಈಗ ಜೈಲಿನಲ್ಲಿರುವ ದೇಶದ್ರೋಹಿ ಮಾಜಿ ಮಂತ್ರಿಯೊಬ್ಬರನ್ನು ಹಾಗೂ ಅವರ ಅಕ್ರಮ ಗಣಿ ಹಣದಿಂದ ಹೊಸ ಪಕ್ಷ ಕಟ್ಟಿದ ಇನ್ನೊಬ್ಬರನ್ನೂ ಕೂಡ ಸೇರಿಸಿಕೊಳ್ಳಲು ಹಿಂಜರಿಯದ ಮನೋಸ್ಥಿತಿ ಕಾಂಗ್ರೆಸಿನ ಕೆಲವರಲ್ಲಿ ಇರುವಂತೆ ಕಾಣುತ್ತದೆ. ಒಂದು ಶತಮಾನಕ್ಕಿಂತಲೂ ಹೆಚ್ಚು ಇತಿಹಾಸ ಇರುವ ಕಾಂಗ್ರೆಸ್ ಪಕ್ಷವು ಸೂಕ್ತ ಚಿಂತನೆ ಇಲ್ಲದೆ ಬಳಲುತ್ತಿರುವ ಕಾರಣ ಇಂಥ ವಿಕೃತ ಆಲೋಚನೆಗಳು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಹುಟ್ಟಿಕೊಳ್ಳುತ್ತವೆ ಎನ್ನಲು ಅಡ್ಡಿಯಿಲ್ಲ. ಯಾರು ಮೊದಲಿನ ಸರ್ಕಾರದಲ್ಲಿ ಭಾಗಿಯಾಗಿ ಪರಮ ಭ್ರಷ್ಟಾಚಾರ ನಡೆಸಿ ಮತ್ತೆ ಚುನಾವಣೆಗೆ ಹೋಗುತ್ತಾರೋ ಅಂಥ ಸಂದರ್ಭದಲ್ಲಿ ಜನ ಅವರನ್ನು ತಿರಸ್ಕರಿಸುತ್ತಾರೆ ಎಂಬ ಮೂಲಭೂತ ಚಿಂತನೆಯೂ ಇಲ್ಲದ ಕಾಂಗ್ರೆಸ್ಸಿನ ಚಿಂತನೆಯ ದಿವಾಳಿಕೋರತನವೇ ಅದಕ್ಕೆ ಮುಳುವಾಗಬಹುದು.

ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟತೆಯಿಂದ ಜನ ರೋಸಿಹೋಗಿರುವ ಸಂದರ್ಭದಲ್ಲಿ ಉತ್ತಮ ಆಡಳಿತದ ಭರವಸೆಯನ್ನು ನೀಡುವಂಥ ನಾಯಕನ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಹೋದರೆ ಗೆಲ್ಲುವ ಸಾಧ್ಯತೆ ಮುಂಬರುವ ಚುನಾವಣೆಗಳಲ್ಲಿ ಇದೆ. ಇದಕ್ಕಾಗಿ ಪರಮ ಭ್ರಷ್ಟರಿಗೂ, ಅಕ್ರಮ ಗಣಿಕಳ್ಳರಿಗೂ, ದೇಶದ್ರೋಹಿಗಳಿಗೂ ಜಾತಿ ಅಥವಾ ಹಣದ ಮುಖ ನೋಡಿ ಮಣೆ ಹಾಕಬೇಕಾದ ಅಗತ್ಯ ಇಲ್ಲ. ನಾಯಕತ್ವದ ಗುಣ ಎಲ್ಲರಲ್ಲೂ ಇರುವುದಿಲ್ಲ ಮತ್ತು ಅದು ಮೂಲಭೂತವಾಗಿ ಹುಟ್ಟಿನಿಂದಲೇ ಬರುವಂಥ ಒಂದು ಗುಣ. ಹೀಗಾಗಿಯೇ ನಾಯಕರನ್ನು ತರಬೇತಿ ಮಾಡಿ ರೂಪಿಸಲು ಆಗುವುದಿಲ್ಲ. ಹೀಗಾಗಿ ಇಂಥ ನಾಯಕತ್ವದ ಗುಣ ಯಾರಲ್ಲಿ ಇದೆಯೋ ಅದನ್ನು ಗುರುತಿಸಿ ಅವರಿಗೆ ನಿರ್ಣಯ ತೆಗೆದುಕೊಳ್ಳುವ ಅವಕಾಶ ಕೊಟ್ಟರೆ ಮತ್ತು ಜನರನ್ನು ತಮ್ಮತ್ತ ಆಕರ್ಷಿಸಿ ಸಂಘಟಿಸುವ ಹೊಣೆಗಾರಿಕೆ ಕೊಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಏರಿ ಉತ್ತಮ ಆಡಳಿತ ನೀಡುವ ಸಾಧ್ಯತೆ ಇದೆ. ಪ್ರಸಕ್ತ ರಾಜ್ಯದಲ್ಲಿ ಅಂಥ ನಾಯಕತ್ವದ ಸಾಮರ್ಥ್ಯ ಇರುವ ಮುಂಚೂಣಿ ವ್ಯಕ್ತಿ ಎಂದರೆ ಸಿದ್ಧರಾಮಯ್ಯ. ಸಮಾಜವಾದಿ ಹಿನ್ನೆಯಿಂದ ಬಂದಿರುವ ಸಿದ್ಧರಾಮಯ್ಯ ಅಧಿಕಾರಿ ವರ್ಗವನ್ನು ಹದ್ದುಬಸ್ತಿನಲ್ಲಿಟ್ಟು ಉತ್ತಮ ಆಡಳಿತ ನೀಡಬಲ್ಲ ಹಾಗೂ ಅರ್ಥಿಕ ಶಿಸ್ತು ತರಬಲ್ಲ ನಾಯಕ. ಇಂಥ ವ್ಯಕ್ತಿಗೆ ನಾಯಕತ್ವದ ಸ್ಪಷ್ಟ ಭರವಸೆ ಸಿಗದಿರುವ ಅತಂತ್ರ ಸ್ಥಿತಿ ಇರುವ ಕಾರಣ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ತನ್ನನ್ನು ತಾನು ಪೂರ್ಣವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿಲ್ಲದಂತೆ ಕಂಡು ಬರುತ್ತದೆ. ಅದೇ ರೀತಿ ಸಿದ್ಧರಾಮಯ್ಯನವರೂ ಒಂದು ಜಾತಿಗೆ ಸೀಮಿತವಾಗದೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಮುತ್ಸದ್ಧಿತನ ತೋರಿದರೆ ರಾಜ್ಯಕ್ಕೆ ಉತ್ತಮ ನಾಯಕತ್ವ ನೀಡುವ ಎಲ್ಲ ಸಾಧ್ಯತೆಯೂ ಇದೆ.

ಚಿಂತನಶೀಲ ಗುಣ ಹಾಗೂ ನಾಯಕತ್ವದ ಗುಣ ಒಂದೇ ವ್ಯಕ್ತಿಯಲ್ಲಿ ಕಂಡುಬರುವುದು ಬಹಳ ಅಪರೂಪ. ಚಿಂತನಶೀಲ ಗುಣ ಇರುವ ಸಾಹಿತಿಗಳು, ವಿಜ್ಞಾನಿಗಳು, ಚಿಂತಕರು, ಪ್ರಾಧ್ಯಾಪಕರು ಮೊದಲಾದವರಲ್ಲಿ ನಾಯಕತ್ವದ ಗುಣ ಇರುವುದಿಲ್ಲ. ಅದೇ ರೀತಿ ನಾಯಕತ್ವದ ಗುಣ ಉಳ್ಳ ರಾಜಕಾರಣಿಗಳು, ಉದ್ಯಮಿಗಳು ಮೊದಲಾದವರಲ್ಲಿ ಸಮರ್ಪಕ ಚಿಂತನೆಯ ಅಭಾವ ಇರುತ್ತದೆ. ಇವೆರಡೂ ಗುಣಗಳು ಒಂದೇ ವ್ಯಕ್ತಿಯಲ್ಲಿ ಬಂದಂಥ ಸಂದರ್ಭದಲ್ಲಿ ಅವರು ಒಂದು ದೇಶ ಅಥವಾ ಜನಾಂಗವನ್ನು ಸರ್ವತೋಮುಖ ಹಾಗೂ ಸಮತೋಲಿತ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಲ್ಲರು. ಹೀಗಾಗಿ ನಾಯಕತ್ವದ ಗುಣ ಉಳ್ಳವರು ಚಿಂತನಶೀಲರಿಂದ ಸಲಹೆಗಳನ್ನು ಪಡೆದುಕೊಂಡು ಮುನ್ನಡೆಯುವುದು ಯಾವಾಗಲೂ ಆರೋಗ್ಯಕರ ಹಾಗೂ ಪ್ರಯೋಜನಕಾರಿ. ಇದರಿಂದ ದೇಶಕ್ಕೆ, ಮಾನವ ಜನಾಂಗಕ್ಕೆ ನಿಸ್ಸಂಶಯವಾಗಿ ಒಳಿತಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಚಿಂತನಶೀಲ ಗುಣ ಹಾಗೂ ನಾಯಕತ್ವದ ಗುಣ ಎರಡೂ ಇರುವ ನಾಯಕ ಸಿದ್ಧರಾಮಯ್ಯ ಎಂದರೆ ತಪ್ಪಾಗಲಾರದು. ಸಿದ್ಧರಾಮಯ್ಯನವರು ಮೂಲತಃ ಕಾಂಗ್ರೆಸ್ ನಾಯಕರಲ್ಲದಿದ್ದರೂ ಅವರ ಕೈಗೆ ಮುಂದಿನ ಚುನಾವಣೆಗಳನ್ನು ಮುನ್ನಡೆಸುವ ಜವಾಬ್ದಾರಿ ನೀಡಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ ರಾಜ್ಯಕ್ಕೆ ಉತ್ತಮ ನಾಯಕತ್ವ ಸಿಗಲು ಸಾಧ್ಯ. ಕಾಂಗ್ರೆಸಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಪರಮೇಶ್ವರ್ ಮೊದಲಾದ ನಾಯಕರು ಇದ್ದರೂ ಸಿದ್ಧರಾಮಯ್ಯನವರಂತೆ ಜನರ ಮೇಲೆ ಪ್ರಭಾವ ಬೀರಬಲ್ಲ ವರ್ಚಸ್ಸು ಹೊಂದಿಲ್ಲ. ಇದನ್ನು ಉಳಿದ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

3 thoughts on “ಕಾಂಗ್ರೆಸ್ ಪಕ್ಷದಲ್ಲಿ ಚಿಂತನಶೀಲತೆಯ ಕೊರತೆ

  1. prasad raxidi

    ಕಾಂಗ್ರೆಸಿಗೆ ಚಿಂತನೆ ಮತ್ತು ನಾಯಕತ್ವ ಎರಡೂ ಇದ್ದುದು ಇಂದಿರಾಯುಗದ ಕೆಲವುಕಾಲಮಾತ್ರ (ಇಂದಿರಾ ಮಾಡಿದ ಕೆಲವು ತಪ್ಪುಗಳನ್ನು ಹೊರತುಪಡಿಸಿ) ಉಳಿದಂತೆ ನೆಹರೂ ಸಹಿತ ಕಾಂಗ್ರೆಸಿನ ನಾಯಕರು ಮಾಡಿದ್ದು ಬೇಜವಾಬ್ದಾರಿ, ಇಲ್ಲವೇ ಅವಕಾಶವಾದಿ ರಾಜಕಾರಣ- ಅದರ ಫಲ ಇಂದಿನ ಸ್ಥಿತಿ…

    Reply
    1. Ananda Prasad

      ನೆಹರೂ ಕಾಲದಲ್ಲಿ ಬಹಳಷ್ಟು ಸುಧಾರಣೆಗಳನ್ನು ಹಾಗೂ ಕಾನೂನುಗಳನ್ನು ಮಾಡಲು ಸಾಧ್ಯವಿತ್ತು ಏಕೆಂದರೆ ೧೯೫೧, ೧೯೫೭, ೧೯೬೨ ಈ ಮೂರೂ ಲೋಕಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವು ೨/೩ ಬಹುಮತ ಪಡೆದಿತ್ತು (ಹಳೆಯ ಎಲ್ಲಾ ಚುನಾವಣ ಫಲಿತಾಂಶಗಳು ಚುನಾವಣಾ ಕಮಿಶನ್ನಿನ ವೆಬ್ ಸೈಟಿನಲ್ಲಿ ಲಭ್ಯ ಇವೆ). ಭ್ರಷ್ಟಾಚಾರ ನಿಗ್ರಹ ಹಾಗೂ ನಿಯಂತ್ರಣಕ್ಕಾಗಿ ಲೋಕಪಾಲ್, ಸಾಮಾಜಿಕ ಸುಧಾರಣೆಗಳಿಗೆ ಭೂಸುಧಾರಣೆ ಕಾನೂನು ದೇಶಾದ್ಯಂತ ತರಲು ಸಾಧ್ಯವಿತ್ತು. ಯಾವುದೇ ಕಾನೂನು ತರಲು ಬೇಕಾದ ೨/೩ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಇತ್ತು ಮತ್ತು ಬೇರೆ ಪಕ್ಷಗಳ ಅವಲಂಬನೆಯೂ ಬೇಕಾಗಿರಲಿಲ್ಲ. ಅಗಲೆ ಭೂಸುಧಾರಣಾ ಕಾನೂನು ದೇಶಾದ್ಯಂತ ತಂದಿದ್ದರೆ ಇಂದು ದೇಶದಲ್ಲಿ ಬೆಳೆದಿರುವ ನಕ್ಸಲ್ ಸಮಸ್ಯೆ ಅಷ್ಟಾಗಿ ಬೆಳೆಯುತ್ತಿರಲಿಲ್ಲ. ಪ್ರಥಮ ಮೂರು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ೨/೩ ಬಹುಮತ ಪಡೆದದ್ದು ನೆಹರೂ ಅವರ ಕಾರಣದಿಂದ ಮಾತ್ರವಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂಬ ಕಾರಣದಿಂದ ಇರಬಹುದು.

      Reply
      1. prasad raxidi

        ಹೌದು ರಾಜೀವಗಾಂಧಿಯವರಿಗೂ ಅತಿದೊಡ್ಡ ಬಹುಮತ ದೊರೆತಿತ್ತು. ಇದನ್ನೆಲ್ಲ ಅವರು ಸರಿಯಾಗಿ ಬಳಸಿಕೊಳ್ಳಲಿಲ್ಲವಷ್ಟೇ ಮಾತ್ರವಲ್ಲ ಅದಕ್ಕ ಬೇಕಾದ ಮುತ್ಸದ್ದಿತನ ಅವರಲ್ಲಿ ಸ್ವಾತಂತ್ರ್ಯದ ನಂತರದ ಕಾಂಗ್ರೆಸ್ ಪಕ್ಷದಲ್ಲಿ ಉಳಿದಿರಲಿಲ್ಲ..

        Reply

Leave a Reply

Your email address will not be published. Required fields are marked *