ಸಾಂಸ್ಕೃತಿಕ ಜಾಗತೀಕರಣ ಹಾಗೂ ಪ್ರತಿರೋಧ

 -ಡಾ.ಎಸ್.ಬಿ. ಜೋಗುರ

ಜಾಗತೀಕರಣದ ಪರವಾಗಿ ಮಾತನಾಡುವವರಷ್ಟೇ ಅದರ ವಿರೋಧವಾಗಿ ಮಾತನಾಡುವವರೂ ಇದ್ದಾರೆ. ಪರ-ವಿರೋಧ ಮಾತನಾಡಲು ಇಬ್ಬರ ಬಳಿಯೂ ಅಷ್ಟೇ ಸಮರ್ಥನೀಯವಾದ ಸಂಗತಿಗಳಿವೆ. ಕೆಲವೊಮ್ಮೆ ಪೂರ್ವಗ್ರಹ ಪೀಡಿತರಾಗಿಯೂ ಈ ಜಾಗತೀಕರಣದ ಬಗೆಗಿನ ಮೇಲ್‍ಮೇಲಿನ ಗ್ರಹಿಕೆಯ ಮಟ್ಟದಲ್ಲಿಯೇ ಮಾತನಾಡುವುದೂ ಇದೆ. ಜಾಗತೀಕರಣದ ಭರಾಟೆಯಲ್ಲಿ ಆಯಾ ಸಮಾಜದ ಸಾಂಸ್ಕೃತಿಕ ಸಂಗತಿಗಳು ಕೂಡಾ ಕೊಚ್ಚಿಹೋಗುವ ಇಲ್ಲವೇ ಅಮೂಲಾಗ್ರವಾಗಿ ಬದಲಾವಣೆ ಹೊಂದುವ ಅಪಾಯಗಳ ನಡುವೆಯೇ ತನ್ನತನವನ್ನು ಕಾಪಾಡುವ ಕಾಳಜಿ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ.

ಜಾಗತೀಕರಣವೆನ್ನುವುದು ಪ್ರಧಾನವಾಗಿ ಆರ್ಥಿಕವಾದ ಪ್ರಕ್ರಿಯೆಯಾಗಿ ಗುರುತಿಸಿಕೊಂಡರೂ ಅನುಷಂಗಿಕವಾಗಿ ಆ ಸಮುದಾಯದ ಸಾಂಸ್ಕೃತಿಕ ಕಾಳಜಿಗಳನ್ನು ಬಾಹ್ಯ ಒತ್ತಡದ ಮೂಲಕ ಪ್ರಭಾವಿಸುವ ಅಂಶವಾಗಿಯೂ ಅದು ಕೆಲಸ ಮಾಡುವುದಿದೆ. ಸಾಂಸ್ಕೃತಿಕವಾದ ಜಾಗತೀಕರಣಕ್ಕೆ ಪ್ರತಿರೋಧ ಒಡ್ಡುವ ಕ್ರಿಯೆ ಅತ್ಯಂತ ಸೂಕ್ಷ್ಮ ಹಾಗೂ ಜಟಿಲವಾದುದು. ಧರ್ಮ, ಭಾಷೆ, ಸಮೂಹ ಮಾಧ್ಯಮ, ಸಾಂಸ್ಕೃತಿಕ ವ್ಯಾಪಾರಗಳೆಲ್ಲವೂ ಸ್ಥಾನಪಲ್ಲಟಗೊಳ್ಳುವ ಇಲ್ಲವೇ ಕಲುಷಿತಗೊಳ್ಳುವ ಕ್ರಿಯೆಯಾಗಿರುವಾಗಲೇ ಸಾಂಸ್ಕೃತಿಕ ಜಾಗತೀಕರಣಕ್ಕೆ ಪ್ರತಿರೋಧಗಳು ಎದುರಾಗುವುದಿದೆ. ಹಾಗೆ ನೋಡಿದರೆ ಜಾಗತೀಕರಣದ ಆರಂಭವೇ ತನ್ನ ಬೆನ್ನ ಹಿಂದೆ ಪ್ರತಿರೋಧವನ್ನು ಕಟ್ಟಿಕೊಂಡ ಚಲನೆಯಾಗಿರುತ್ತದೆ. ವಿಶ್ವದ ಮಾರುಕಟ್ಟೆಯ ಎಲ್ಲೆಗಳು ವಿಸ್ತೃತವಾಗುತ್ತಾ ಬಂದು, ಆರ್ಥಿಕ ವಿದ್ಯಮಾನಗಳು ವ್ಯಾಪಕವಾಗಿ ಹರಡಿ ಆ ಮೂಲಕ ಒಂದು ಬಗೆಯ ಆರ್ಥಿಕ ಉದ್ವೇಗ ಸ್ಥಾಪಿತವಾಗುವ ನಡುವೆ ಭಾವನಾತ್ಮಕವಾದ ಸಮಾಧಾನ ಇಲ್ಲವೇ ಅಭೌತ ಸಾಂಸ್ಕೃತಿಕ ನೆಮ್ಮದಿ ಕೈಗೂಡಲಿಲ್ಲ.

ಜಾಗತೀಕರಣ ತಂದೊಡ್ಡುವ ಬಾಹ್ಯ ಒತ್ತಡಗಳಿಗೆ ನಲುಗಿದ ಆಯಾ ದೇಶದ ಅಸ್ಮಿತೆ ಪರೋಕ್ಷವಾದ ಪ್ರತಿರೋಧಕ್ಕೆ ಮುಂದಾಯಿತು. ತನ್ನ ದೇಶದ ಜೀವನ ವಿಧಾನವೇ ಬುಡ ಮೇಲಾಗುವ ಪ್ರಸಂಗಗಳು ಸನಿಹದಲ್ಲಿವೆ ಎನಿಸತೊಡಗಿದ್ದೇ ಈ ಬಗೆಯ ಸಾಂಸ್ಕೃತಿಕ ಜಾಗತೀಕರಣದ ಪ್ರತಿರೋಧಗಳು ಮೂಡತೊಡಗುತ್ತವೆ. ಆಷ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿಗಳ ಮೇಲಣ ಹಲ್ಲೆಯ ಹಿಂದೆ ತನ್ನ ನೆಲೆಯ ಸಂಸ್ಕೃತಿ ಕಳೆದುಹೋಗುತ್ತದೆ ಎನ್ನುವ ಭಯವೇ ಆಗಿರಲಿಕ್ಕೆ ಸಾಕು. ವಸಹಾತು ಪೂರ್ವ ಮತ್ತು ವಸಾಹತೋತ್ತರ ಸಂದರ್ಭದಲ್ಲಿ ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರಗಳು ತನ್ನ ಅನನ್ಯವಾದ ಜೀವನ ವಿಧಾನವನ್ನು ಕಾಪಾಡಲು ಸ್ವದೇಶಿ ಮಂತ್ರ ಪಠಣವನ್ನು ಮಾಡಬೇಕಾಯಿತು. ಈಗಂತೂ ಗ್ಲೋಬಲೈಜೇಷನ್  ಮೂಲಕ ತನ್ನತನವನ್ನು ಎತ್ತಿ ತೋರಿಸುವತ್ತ ಅನೇಕ ರಾಷ್ಟ್ರಗಳು ಮುಂದಾಗಿವೆ. ಮತ್ತೆ ಕೆಲ ರಾಷ್ಟ್ರಗಳು ಈ ಜಾಗತೀಕರಣದ ಹಾವಳಿಯಿಂದ ತನ್ನ ದೇಶದ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವಲ್ಲಿ ಹರಸಾಹಸ ಮಾಡುತ್ತಿವೆ. ಆ ಮೂಲಕ ಕಲುಷಿತವಾಗುವ ಇಲ್ಲವೇ ಸಂಕರಗೊಳ್ಳಲಿರುವ ತಮ್ಮ ಸಂಸ್ಕೃತಿಯನ್ನು ಬಚಾವ್ ಮಾಡುವ ಹವಣಿಕೆಯಲ್ಲಿದ್ದಾರೆ. ಈ ಬಗೆಯ ಪ್ರತಿರೋಧ ಒಂದು ಅಮೂರ್ತವಾದ ಗೋಡೆಯನ್ನು ನಿರ್ಮಿಸುವ ಮೂಲಕವಾದರೂ ಅದನ್ನು ಸಾಧ್ಯ ಮಾಡಬೇಕು ಎಂದು ಹೊರಟಿರುವುದಿದೆ. ಕೆಲ ರಾಷ್ಟ್ರಗಳಂತೂ ತಮ್ಮ ಪ್ರಭುತ್ವದ ಶಕ್ತಿ ಮತ್ತು ಅಧಿಕಾರವನ್ನು ಸಂಚಯಗೊಳಿಸಿ ಸಾಂಸ್ಥಿಕವಾಗಿಯೇ ಸಾಂಸ್ಕೃತಿಕವಾದ ಜಾಗತೀಕರಣವನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ತೊಡಗಿವೆ.

ಸಾಂಸ್ಕೃತಿಕ ಜಾಗತೀಕರಣಕ್ಕೆ ಪ್ರತಿರೋಧವನ್ನು ಕುರಿತು ಮಾತನಾಡುವಾಗ ಜಾಗತೀಕರಣದ ಅಂತರ್ಯದಲ್ಲಿಯೇ ಸೂಕ್ಷ್ಮವಾಗಿ ವಿರೋಧಗಳನ್ನು ಹುಟ್ಟುಹಾಕುವ ಮೂಲಕ ಇಲ್ಲವೇ ಬಾಹ್ಯ ಒತ್ತಡದ ಪ್ರಭಾವವನ್ನು ತಡೆಯಲು ಎಲ್ಲ ಬಗೆಯ ಪ್ರತಿರೋಧಗಳನ್ನು ಒಡ್ಡುವ ಮೂಲಕ ಅದನ್ನು ತಡೆಯುವುದಾಗಿದೆ. ಈ ಬಗೆಯ ಕ್ರಿಯಾತ್ಮಕತೆಯಲ್ಲಿ ಸಂಸ್ಕೃತಿಗಳ ಸಮಂಜನವಾಗಲೀ..  ಸ್ವಾಂಗೀಕರಣವಾಗಲೀ.. ಮುಖ್ಯವಾಗದೇ ಪ್ರತಿರೋಧವೇ ಮುಖ್ಯವಾಗುತ್ತದೆ. ಸಾಂಸ್ಕೃತಿಕ ಕೊಡುಕೊಳ್ಳುವ ಭರಾಟೆಯಲ್ಲಿ ಸ್ಥಾನೀಯ ಸಂಸ್ಕೃತಿ ಬದಲಾಗುವ ಇಲ್ಲವೇ ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು. ಸಂಸ್ಕೃತಿ ಯಾವಾಗಲೂ ಬದಲಾವಣೆಯನ್ನು ಆಪ್ತವಾಗಿ ಬರಮಾಡಿಕೊಳ್ಳುತ್ತದೆ. ಹೀಗೆ ಮಾಡುವಾಗ ತನ್ನತನವನ್ನು ಮೀರುವ ಅಪಾಯವೂ ಇಲ್ಲದಿಲ್ಲ ಎನ್ನುವ ನಿಟ್ಟಿನಲ್ಲಿಯೇ ಪ್ರಭುತ್ವಗಳು ಸಾಂಸ್ಕೃತಿಕ ಜಾಗತೀಕರಣವನ್ನು ಪ್ರತಿರೋಧಿಸುವ ಧೋರಣೆಯನ್ನು ರೂಪಿಸುವ ಮೂಲಕ ಆಯಾ ರಾಷ್ಟ್ರದ ಜೀವನ ವಿಧಾನವನ್ನು ಕಾಪಾಡುವ ದಿಶೆಯಲ್ಲಿ ಯತ್ನಿಸಬೇಕು ಎನ್ನುವುದನ್ನು ಸಾಂಸ್ಕೃತಿಕ ಸಂಘರ್ಷವನ್ನು ಕುರಿತು ಅಧ್ಯಯನ ಮಾಡಿದ ಹೆಲ್ಮೆಟ್ ನಿಹರ್ ಮತ್ತು ಇಸಾರ್ ಎನ್ನುವ ಚಿಂತಕರು ಅಭಿಪ್ರಾಯ ಪಡುವುದಿದೆ.

ಒಂದು ಪ್ರಬಲ ಸಂಸ್ಕೃತಿಯ ಒಟ್ಟು ಜನಸಮುದಾಯ ಹಾಗೂ ಅಲ್ಲಿಯ ಪ್ರಭುತ್ವ ಹೇಗೆ ಈ ಬಗೆಯ ಜಾಗತೀಕರಣದ ಹಾವಳಿಯಿಂದ ತನ್ನ ಸಂಸ್ಕೃತಿಯನ್ನು ಕಾಪಾಡಬಲ್ಲದು ಎನ್ನುವುದು ಕೂಡಾ ಮುಖ್ಯವಾಗುತ್ತದೆ. ಈ ಕೆಳಗಿನ ಕೆಲವು ಪ್ರಮುಖ ಸಂಗತಿಗಳು ಸಾಂಸ್ಕೃತಿಕ ಜಾಗತೀಕರಣದ ಪ್ರತಿರೋಧಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲವು.

1. ಸಂಘರ್ಷದಿಂದ ಉಂಟಾಗಬಹುದಾದ ಬಾಹ್ಯ ಮತ್ತು ಆಂತರೀಕ ಒತ್ತಡಗಳು.

2. ಆರ್ಥಿಕ ವಿದ್ಯಮಾನಗಳ ಮೂಲಕ ಅನ್ಯ ಸಂಸ್ಕೃತಿಯ ಹೇರಿಕೆಯನ್ನು ತಡೆಯಬೇಕು ಎನ್ನುವ ಪ್ರಬಲ ಇಚ್ಛೆ.

3.  ಸಂಸ್ಕೃತಿಯ ವಿವಿಧ ಆಯಾಮಗಳ ಮೇಲಿನ ದಟ್ಟ ಪ್ರಭಾವದ ಭಯ.

4. ತಮ್ಮ ಸಂಸ್ಕೃತಿಯ ಬಗೆಗೆ ಮೇಲರಿಮೆಯ ಭಾವನೆ.

ಇಂದು ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಅಮೇರಿಕೆಯ ಆರ್ಥಿಕ ಬಾಹುಳ್ಯದ ವಿಸ್ತೃತ ಚಟುವಟಿಕೆಗಳ ಮೂಲಕ ಉಂಟಾಗಬಹುದಾದ ಸಾಂಸ್ಕೃತಿಕ ತೊಡಕುಗಳ ಬಗೆಗಿನ ಜಾಗೃತ ಪ್ರಜ್ಞೆ ಪರೋಕ್ಷವಾಗಿ ಸಾಂಸ್ಕೃತಿಕ ಜಾಗತೀಕರಣದ ಪ್ರತಿರೋಧವೇ ಆಗಿದೆ. ಜೊತೆಗೆ ತನ್ನ ಅನನ್ಯವಾದ ಸಾಂಸ್ಕೃತಿಕ ಆಯಾಮಗಳನ್ನು ಇದ್ದ ಸ್ಥಿತಿಯಲ್ಲಿಯೇ ಸಾಧ್ಯವಾಗದಿದ್ದರೂ ತಕ್ಕಮಟ್ಟಿಗಾದರೂ ಅದರ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವ ಯತ್ನವಾಗಿದೆ. ಕೆನಡಾದಂತಹ ರಾಷ್ಟ್ರಗಳು ತಮ್ಮ ದೇಶದ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಳ್ಳಲು ಅಮೇರಿಕಾದ ಸಂಸ್ಕೃತಿಯ ಪ್ರಭುತ್ವವನ್ನು ನಮ್ರವಾಗಿಯಾದರೂ ವಿರೋಧಿಸುತ್ತವೆ. ಸ್ವಾತಂತ್ರ್ಯಾನಂತರ ಮಲೇಶಿಯಾದಂತಹ ರಾಷ್ಟ್ರ ಚೀನಾ ಮತ್ತು ಭಾರತದ ವಲಸೆಗಾರರಿಂದ ಉಂಟಾಗಬಹುದಾದ ಸಾಂಸ್ಕೃತಿಕ ಸ್ವಾಂಗೀಕರಣದ ತೊಡಕುಗಳನ್ನು ಅನುಲಕ್ಷಿಸಿ ತನ್ನ ನೆಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಶಾಸನವನ್ನೇ ರೂಪಿಸಿಕೊಳ್ಳಬೇಕಾಯಿತು. ಕಜಖಸ್ಥಾನ ರಷ್ಯಾದ ಸಾಂಸ್ಕೃತಿಕ ದಬ್ಬಾಳಿಕೆಯನ್ನು ಪ್ರತಿರೋಧಿಸುತ್ತಲೇ ನಡೆದಿದೆ. ಹೀಗೆ ಜಾಗತೀಕರಣದ ರಭಸದಲ್ಲಿ ಸ್ಪರ್ಧೆಯೊಡ್ಡುವ ಸಾಮರ್ಥ್ಯದ ಜೊತೆಜೊತೆಗೆ ಆಯಾ ರಾಷ್ಟ್ರಗಳು ತಮ್ಮ ನೆಲದ ಸಂಸ್ಕೃತಿಯ ಉಳಿವಿಗಾಗಿ ಹೆಣಗಬೇಕಾಗಿದೆ. ಈ ನಡುವೆ ತಾನು ಸಾಂಸ್ಕೃತಿಕವಾಗಿ ಪರಿಶುದ್ಧವಾಗಿ ಉಳಿಯಬೇಕು ಎನ್ನುವ ಹಂಬಲದೊಳಗಿರುವ ರಾಷ್ಟ್ರಗಳೆಲ್ಲಾ ಎಲ್ಲೋ ಒಂದು ಯುಟೊಪಿಯಾದ ಬೆನ್ನಿಗೆ ಬಿದ್ದಿವೆ ಇಲ್ಲವೇ ಸಾಂಸ್ಕೃತಿಕ ಏಕತಾನತೆಯ ತಹತಹಿಕೆಯ ಆದರ್ಶವನ್ನು ಹಂಬಲಿಸುತ್ತಿವೆ ಎನಿಸುವುದಿಲ್ಲವೇ?

Leave a Reply

Your email address will not be published. Required fields are marked *