ಬಸವ ಜಯಂತಿ ಶ್ರಮಸಂಸ್ಕೃತಿಯ ಸಂಕೇತವಾಗಬೇಕು


-ಡಾ.ಎಸ್.ಬಿ. ಜೋಗುರ


 

ಶ್ರಮವಿಭಜನೆ ಒಂದು ಸಾಂಸ್ಕೃತಿಕ ಸಂಗತಿಯಾಗಿ ಮಾರ್ಪಡುಗೊಳ್ಳುವ ಹೊತ್ತಿಗೆ ಸಾವಿರಾರು ವರ್ಷಗಳು ಗತಿಸಿದ್ದವು. ಆದಿಮ ಹಂತದ ತೀರಾ ಸರಳವಾದ ‘ಒಲೆಗೆ ಸ್ತ್ರೀ ಹೊಲಕ್ಕೆ ಪುರುಷ’ ಎನ್ನುವ ಲಿಂಗಭೇದವನ್ನಾಧರಿಸಿದ ಶ್ರಮವಿಭಜನೆಯಿಂದ ಆರಂಭವಾಗಿ ಇಂದಿನ ಸಂಕೀರ್ಣ ಹಂತದ ಶ್ರಮವಿಭಜನೆಯವರೆಗೂ ಅದು ಬಂದು ತಲುಪಿರುವುದಿದೆ. ವೈದ್ಯಲೋಕ ಒಂದರಲ್ಲಿಯೆ ಮನುಷ್ಯನ ಪ್ರತಿಯೊಂದು ಅಂಗಕ್ಕೂ ಪ್ರತ್ಯೇಖವಾದ ವಿಭಾಗಗಳು ಹುಟ್ಟಿ, ಗಂಟಲಿನವರೆಗೆ ಅಧ್ಯಯನ ಮಾಡುವಾತ ಅಲ್ಲೇ ಎರಡಿಂಚು ಕೆಳಗಿರುವ ಹೃದಯದ ಅಧ್ಯಯನ ತನ್ನದಲ್ಲವೆಂದು ವಿಶೇಷೀಕೃತ ಕಾರ್ಯಕ್ಷೇತ್ರವನ್ನು ಪ್ರತಿಪಾದಿಸುವ ಕ್ರಮ ಆಧುನಿಕ ಸಂದರ್ಭದ ಶ್ರಮವಿಭಜನೆಯ ಸಂಕೀರ್ಣತೆಗೊಂದು ಸ್ಪಷ್ಟ ನಿದರ್ಶನ. ಅಷ್ಟಕ್ಕೂ ಶ್ರಮ ಎನ್ನುವದು ಮನುಷ್ಯನಿಗೆ ಮಾತ್ರ ಸೀಮಿತವಾದ ಒಂದು ದೈಹಿಕ ಮತ್ತು ಮಾನಸಿಕ ಕ್ರಿಯೆ. ಮನುಷ್ಯನನ್ನು ‘ಉತ್ಪಾದಕ ಜೀವಿ’ ಎಂದು ಗುರುತಿಸುವಲ್ಲಿಯೂ ಆತನ ಶ್ರಮ ಸಂಸ್ಕೃತಿಯೆ ಕಾರಣ. ಕೀಳು ಪ್ರಾಣಿಗಳು ಸಂಪೂರ್ಣವಾಗಿ ನಿಸರ್ಗವನ್ನು ಅವಲಂಬಸಿ, ತಮ್ಮ ಸಹಜಪ್ರವೃತ್ತಿಗಳ ನಿರ್ದೇಶನದಂತೆ ಕಾರ್ಯವೆಸಗಿದರೆ ಮನುಷ್ಯ ಸಹಜ ಪ್ರವೃತ್ತಿಯ ಜೊತೆಜೊತೆಯಲ್ಲಿ ಮನ:ಪ್ರವೃತ್ತಿಗಳ ಅಡಿಯಲ್ಲಿಯೂ ವರ್ತಿಸಬೇಕಾಗುತ್ತದೆ. ಮನುಷ್ಯನ ಮಹತಿ ಇರುವುದೇ ಆತನ ಶ್ರಮಜೀವನದಲ್ಲಿ.

ಇಂಗ್ಲಂಡ್ ಮೂಲದ ಥಾಮಸ್ ಕಾರ್ಲ್ ‘ವರ್ಕ್ ಈಸ್ ವರ್ಷಿಪ್’ ಎನ್ನುವ ಪರಿಕಲ್ಪನೆಯನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರೆ ಅವನಿಗಿಂತಲೂ 600 ವರ್ಷಗಳ ಮುಂಚೆಯೆ ಕರುನಾಡಿನ ಶರಣ ಸಂಸ್ಕೃತಿ, ಅದರಲ್ಲೂ ಮಹಾಮಾನವತಾವಾದಿ ಬಸವಣ್ಣನವರು ‘ಕಾಯಕವೇ ಕೈಲಾಸ’ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಿರುವದು ಮಾತ್ರವಲ್ಲದೇ ಅನುಸರಿಸಿ ಗುರು-ಲಿಂಗ-ಜಂಗಮ ಮೆಚ್ಚುವಂತೆ ಬದುಕಿ ತೋರಿಸಿರುವದಿತ್ತು. ದುಡಿಯದಿರುವ ಕಾಯ ಕೊಳೆತ ಶರೀರ, ದಂಡಪಿಂಡಗಳಾಗಿ ಬದುಕುವದನ್ನು, ಪರರನ್ನು ಹೆದರಿಸಿ ಬೆದರಿಸಿ ಹೊಟ್ಟೆಹೊರೆಯುವವರನ್ನು ಖಡಾ ಖಂಡಿತವಾಗಿ ಖಂಡಿಸಿದ ಬಸವಣ್ಣನವರು ಆತ ರಾಜಕುಮಾರನೇ ಆಗಿರಲಿ, ಇಲ್ಲವೇ ದಾಸಿಯ ಪುತ್ರನೇ ಆಗಿರಲಿ ಇಬ್ಬರೂ ದುಡಿಯಲೇಬೇಕು. ಲಕ್ಕಮ್ಮ ನಂಥಾ ಮಹಿಳೆ ‘ಈಸಕ್ಕಿ ಆಸೆ ನಿನಗೇಕೆ ಮಾರಾಯಾ?’ ಎಂದು ಗಂಡನಿಗೆ ಕೇಳುವ ಮೂಲಕ ಆಗ ಹಪಾಪಿತನದ ಹಂಗಿರಲಿಲ್ಲ ಎನ್ನುವದು ವಿಧಿತವಾಗುತ್ತದೆ. ಮಿಗುತಾಯವನ್ನು ಮೌಲ್ಯವೆಂದು ಕರೆದು ಅದನ್ನು ಸಮಾಜದ ದಾಸೋಹಕ್ಕೆ ಸಮರ್ಪಿಸಬೇಕು ಎನ್ನುವ ಅವರ ವಿಚಾರದಲ್ಲಿ ಅಪ್ಪಟ ಸಮಾಜವಾದದ ಹೊಳಹು ಇದೆ. ‘ಕೃಷಿ ಕೃತ್ಯ ಕಾಯಕವಾದಡೇನು ತನು ಮನ ಬಳಲಿಸಿ ದಾಸೋಹ ಮಾಡುವ ಪರಮ ಸದ್ಭಕ್ತನ ಪಾದವ ತೋರಯ್ಯಾ ಎನಗೆ’ ಎನ್ನುವಲ್ಲಿ ಮತ್ತು ‘ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು’ ಎನ್ನುವ ವಿಚಾರದಲ್ಲಿ ಕಾಯಕದ ಪ್ರತಿಪಾದನೆಯ ಆಗ್ರಹ ಬಲವಾಗಿ ಎದ್ದು ತೋರುತ್ತದೆ. ಬಸವಣ್ಣನವರ ಕಾಯಕತತ್ವದಲ್ಲಿ ರೋಗಗ್ರಸ್ಥ ಸಮಾಜಕ್ಕೆ ಒಂದು ಸೂಕ್ತವಾದ ಚಿಕಿತ್ಸೆಯಿದೆ. ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳು ವ್ಯಷ್ಟಿ ಹಾಗೂ ಸಮಷ್ಟಿ ಎರಡನ್ನೂ ಆರೋಗ್ಯದಿಂದಿಡಬಲ್ಲವು. ಮಾರ್ಕ್ಸ್ ಹೇಳುವ ನಮಿಸುವ ಕೈಗಳಿಗಿಂತಲೂ ದುಡಿಯುವ ಕೈಗಳು ಬಲಿಷ್ಟ ಎನ್ನುವ ವಿಚಾರವನ್ನು ಬಸವಣ್ಣನವರು ಮಾರ್ಕ್ಸ್‌ಗಿಂತಾ ಮುಂಚೆಯೆ ಪ್ರತಿಪಾದಿಸಿರುವವರು.

‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದ ಬಸವಣ್ಣನವರ ಮೂರ್ತಿಗಳಿಗೆ ಇಂದು ಲೆಕ್ಕವಿಲ್ಲ. ಇದು ದೀಪದ ಕೆಳಗಡೆಯ ಕತ್ತಲಿನ ಪ್ರತೀಕ. ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವವರ ಪಾಲಿಗೆ ನೊಸಲ ವಿಭೂತಿಯಷ್ಟೇ ಸಾಕ್ಷಿಯಾದದ್ದು ಇನ್ನೊಂದು ದುರಂತ. ನಡಾವಳಿ ಮತ್ತು ನುಡಿವಳಿ ಎರಡರಲ್ಲೂ ಒಂದಾಗದಿದ್ದರೆ ಕೂಡಲಸಂಗಯ್ಯ ಮೆಚ್ಚನು ಎಂದ ಬಸವಣ್ಣನವರು ಮತ್ತು ಅವರ ತತ್ವಗಳು ಬಳಕೆದಾರರ ಸಾಮಗ್ರಿಯಷ್ಟೇ ಜನಪ್ರಿಯವಾಗಿವೆಯೆ ಹೊರತು ಅಳವಡಿಕೆಯಾಗಲಿಲ್ಲ. ಮಾತೆತ್ತಿದರೆ ಬಸವಣ್ಣನ ಮತ್ತು ಇತರ ಶರಣರ ವಚನಗಳನ್ನು ಪುಂಖಾನುಪುಂಖವಾಗಿ ಉದುರಿಸುವವರು ಆ ವಚನಗಳಲ್ಲಿಯ ವಿಚಾರಗಳ ಆಚರಣೆಯನ್ನು ಅರ್ಧದಷ್ಟಾದರೂ ಮಾಡಿದ್ದರೆ ಬಸವಣ್ಣನವರು ಖಂಡಿತ ಇವ ನಮ್ಮವ ಎನ್ನುತ್ತಿದ್ದರು.

ಪುರಾಣ ಮತ್ತು ಪ್ರವಚನದ ಸಂದರ್ಭವನ್ನು ಹೊರತು ಪಡಿಸಿದರೆ ಮತ್ತೆ ಬಸವ ನೆನಪಾಗುವದು ಅವನ ಜಯಂತಿಯ ಸಂದರ್ಭದಲ್ಲಿ. ಜಾತಿ, ಜನ್ಮ, ಲಿಂಗ, ವರ್ಣಮುಕ್ತ ಸಮಾಜವನ್ನು ರೂಪಿಸಿಹೊರಟ ಬಸವಣ್ಣನವರ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಪ್ರಯತ್ನ ಪಡುತ್ತಿರುವವರು ಅತ್ಯಂತ ವಿರಳ. ಕೆಲವು ಮಠಾಧೀಶರ ಪಾಲಿಗಂತೂ ಬಸವಣ್ಣ ಗುಡಿಯ ಮುಂದಿನ ಮೂರ್ತಿಯಾಗಿ ಉಳಿಯುವುದೇ ಕ್ಷೇಮ. ದುಡಿಯದೇ ಬದುಕುವವರಿಗೆ ಬಸವ ನುಂಗಲಾಗದ ತುತ್ತು. ತೊತ್ತಾಗದೇ ಸಿಂಹಾಸನರೂಢರಾಗುವವರಿಗೆ ಬಸವಣ್ಣ ಇಷ್ಟವಾಗುವದಾದರೂ ಹೇಗೆ?

ವಿಚಿತ್ರವೆಂದರೆ ಬಸವಣ್ಣ ವೀರಶೈವ ಧರ್ಮದ ಅನುಯಾಯಿಗಳ ಪಾಲಿಗೆ ಮಾತ್ರವಲ್ಲದೇ ಅವನ ವಚನಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡು ತಮ್ಮ ನುಡಿವಳಿಯನ್ನು ಶ್ರೀಮಂತಗೊಳಿಸಿಕೊಳ್ಳುವವರ ಪಾಲಿಗೆ ಬಸವಣ್ಣ ಹಾಗೂ ಆ ಸಂದರ್ಭದ ಶರಣರು ಒಂದು ಪಾಪ್ಯುಲರ್ ಬ್ರ್ಯಾಂಡ್ ಇದ್ದಂತೆ. ಹೇಗೆ ಜಾಗತೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಸರಕಾಗಿ ವಸ್ತುವೊಂದು ವಿನಿಮಯವಾಗುತ್ತದೋ ಹಾಗೆ ಬಸವಣ್ಣನವರ ಹಾಗೂ ಇತರ ಶರಣರ ವಚನಗಳು ಒಂದು ಜನಪ್ರಿಯ ಸರಕಿನ ಹಾಗೆಯ ಸರಬರಾಜಾಗುತ್ತಿವೆ. ಇಲ್ಲಿ ಬಳಕೆಯಷ್ಟೇ ಮುಖ್ಯವಾಗಿ ಅಳವಡಿಕೆ ನಗಣ್ಯವಾಗುತ್ತಿರುವದು ಒಂದು ದೊಡ್ಡ ವಿಷಾದ. ಅತಿ ಮುಖ್ಯವಾಗಿ ಬಸವಣ್ಣನವರನ್ನು ಅವರ ವಿಚಾರಗಳನ್ನು ವಾಣಿಜ್ಯೀಕರಣಗೊಳಿಸಿಕೊಂಡು ಬಂಡವಾಳಶಾಹಿಗಳಾದವರೇ ಇಂದು ಅವರನ್ನು ಅನುಸರಿಸದಿರುವದು ಇನ್ನೊಂದು ದೊಡ್ಡ ದುರಂತ.

ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಬಸವಣ್ಣನನ್ನು ಎತ್ತುಗಳಿಗೆ ಸಾಂಕೇತಿಸಲಾಗಿದೆ. ಇದು ಯಾರ ಕುತಂತ್ರವೋ ತಿಳಿಯದು. ಬಸವ ಜಯಂತಿಯ ದಿನ ಎತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ.. ಮೂಕ ಎತ್ತುಗಳಿಗೆ ಬಸವ ಎಂದು ಕರೆಯುವ ಮೂಲಕ ಪುರೋಹಿತಶಾಹಿ ವ್ಯವಸ್ಥೆ ಮತ್ತೊಮ್ಮೆ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸಿರುವುದಿದೆ. ಹಾಗೆ ಎತ್ತುಗಳನ್ನು ಬಸವಣ್ಣನವರಿಗೆ ಸಂಕೇತಿಸುವದಾಗಲೀ.. ಎತ್ತುಗಳಂದ್ರೆ ಬಸವಣ್ಣ ಎಂದಾಗಲೀ ಬಗೆಯುವ ಯೋಚನೆ ಅತ್ಯಂತ ಕ್ಷುದ್ರವಾದುದು. ಅಷ್ಟಕ್ಕೂ ಬಸವ ಜಯಂತಿಯ ಸಂದರ್ಭದಲ್ಲಿ ಮೂರ್ತಿ ಸ್ಥಾಪನೆ, ಎತ್ತುಗಳ ಮೆರವಣಿಗೆ, ಭಾವಚಿತ್ರದ ಪೂಜೆ, ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ಅವರ ಒಂದಾದರೂ ವಿಚಾರವನ್ನು ಆ ದಿನದ ಮಟ್ಟಿಗಾದರೂ ಅನುಸರಿಸುವುದಿದೆಯೆ ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ.

4 thoughts on “ಬಸವ ಜಯಂತಿ ಶ್ರಮಸಂಸ್ಕೃತಿಯ ಸಂಕೇತವಾಗಬೇಕು

  1. ಮಹಾದೇವ ಹಡಪದ

    ನಾನು ಜಾತ್ಯಾಧಾರಿತ ಅವಮಾನಗಳನ್ನು ಎದುರಿಸಿದ್ದು ಈ ಬಸವನ ಅನುಯಾಯಿಗಳಿಂದಲೇ ಹೆಚ್ಚು… ಅವರೊಳಗಿರುವಷ್ಟು ಶ್ರೇಷ್ಟತೆಯ ಗರ್ವ ಮತ್ತ್ಯಾವ ಜಾತಿಯಲ್ಲು ನಾ ಕಾಣಲಿಲ್ಲ. ಓದಲು ಮಠಕ್ಕೆ ಬರುವ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ವಿಭೂತಿ ಹಚ್ಚಿಸಿ ಮತಾಂತರ ಮಾಡುವ ಈ ನಾಡಿನ ಲಿಂಗಾಯತರೊಳಗೆ ಮನುಷ್ಯತ್ವವೇ ಇರುವುದಿಲ್ಲ.

    Reply
  2. vageesh kumar g a

    ಮನುಶ್ಯತ್ವವೊಂದೇ ಜಾತಿ ಎಂದು ಹೇಳಿದ ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿರುವವರು ಇಂದು ಜಾತಿಯೊಂದೇ ಈ ಜಗದಲ್ಲಿ ಎನ್ನುತ್ತಿದ್ದಾರೆ. ತಮ್ಮ ಭ್ರಶ್ಟಾಚಾರವನ್ನು ಮುಚ್ಚಿಕೊಳ್ಳಲು ಕಾಯಕವೇ ಕೈಲಾಸ ಎಂದ ಬಸವಣ್ಣನವರನ್ನು ಗುರಾಣಿಯನ್ನಾಗಿಸಿಕೊಳ್ಳುತ್ತಿದ್ದಾರೆ. ಇದು ವಿಪರ್ಯಾಸವಲ್ಲದೆ ಮತ್ತೇನು ? ಇಂತಹವರನ್ನು ತಿದ್ದಲು ಲೇಖನಗಳು ಸಾಕಾದೀತೇ ?

    Reply
  3. Ananda Prasad

    ಬಸವಣ್ಣನವರ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರೆ ಕರ್ನಾಟಕ ದೇಶದಲ್ಲಿಯೇ ಮಾದರಿ ರಾಜ್ಯವಾಗುತ್ತಿತ್ತು. ಆದರೆ ಬಸವಣ್ಣನವರನ್ನು ತಮ್ಮ ಸ್ವಾರ್ಥಕ್ಕೆ ಮಾತ್ರ ಉಪಯೋಗಿಸಿಕೊಳ್ಳುವವರಿಂದ ಕರ್ನಾಟಕ ಶ್ರೇಷ್ಠ ಪರಂಪರೆ ಇದ್ದೂ ಪ್ರಸಕ್ತ ದಿನಗಳಲ್ಲಿ ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ಕುಖ್ಯಾತವಾಗುತ್ತಿರುವುದು ವಿಷಾದನೀಯ. ಇಂಥ ಸನ್ನಿವೇಶದಲ್ಲಿಯೂ ಎಸ್. ಆರ್. ಹಿರೇಮಠ ಅವರಂಥವರು ಕರ್ನಾಟಕದ ಕೊಳೆಯನ್ನು ತೊಳೆಯಲು ದಿಟ್ಟತನದಿಂದ ನ್ಯಾಯಾಲಯದಲ್ಲಿ ಹೋರಾಡುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ.

    Reply
  4. dr.basavaraj ballur

    ಲೇಖನ ಅರ್ಥಪೂರ್ಣವಾಗಿದೆ. ಮಾನವಬದುಕಿನ ಅಭಿವೃದ್ದಿಯ ಹಿಂದೆ ಶ್ರಮ (ಕಾಯಕ)ಸಂಸ್ಕೃತಿಯ ಕೊಡುಗೆ ಅಪಾರ ಆದರೆ ಅದನ್ನು ಆದರದಿಂದ ಗೌರವಿಸಿ ಕಾಯಕಕ್ಕೆ ದೈವತ್ವ ಕಲ್ಪಿಸಿ “ಪೂಜೆ ಕಾಯಕವಲ್ಲ,ಕಾಯಕವೇ ಪೂಜೆ”ಎಂದು ಹೇಳಿ ನಡೆಯನ್ನು ನುಡಿಯಲ್ಲಿ ಪೂರೈಸಿದ್ದು ಬಸವಣ್ಣ . ಸಾಂಧರ್ಭಿಕ ಲೇಖನ ತುಂಬಾ ಪ್ರಸ್ತುತ,ಅಭಿನಂದನೆಗಳು.

    -ಡಾ.ಬಸವರಾಜ ಬಲ್ಲೂರ
    ಬೀದರ

    Reply

Leave a Reply

Your email address will not be published. Required fields are marked *