ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 4)


– ಡಾ.ಎನ್.ಜಗದೀಶ್ ಕೊಪ್ಪ


 

ನಕ್ಸಲ್‌ಬಾರಿ ಪ್ರತಿಭಟನೆಯ ಯಶಸ್ವಿನ ಬಗ್ಗೆ ಚಳವಳಿಗಾರರಾಗಲಿ ಅಥವಾ ಈ ಹಿಂಸಾಚಾರ ಮತ್ತು ಚಳವಳಿಯನ್ನು ಹತ್ತಿಕ್ಕಿದ ಬಗ್ಗೆ ಪಶ್ಚಿಮ ಬಂಗಾಳದ ಸರ್ಕಾರವಾಗಲಿ ಉಭಯ ಬಣಗಳು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ಈ ಘಟನೆ ಸರ್ಕಾರ ಮತ್ತು ಪ್ರತಿಭಟನಾಗಾರರಿಗೆ ಪರೋಕ್ಷವಾಗಿ ಹಲವಾರು ಎಚ್ಚರಿಕೆಯ ಪಾಠಗಳನ್ನು ಕಲಿಸಿಕೊಟ್ಟಿತು.

ಯಾವುದೇ ಒಂದು ಚಳವಳಿಯನ್ನು ಪ್ರಲೋಭನೆ ಮತ್ತು ಆಮಿಷದ ಮೂಲಕ ಹುಟ್ಟು ಹಾಕುವುದು ಅತಿಸುಲಭ ಆದರೆ, ಅದನ್ನು ನಿಯಂತ್ರಿಸುವ ನೈತಿಕತೆ ಮತ್ತು ತಾಕತ್ತು ಈ ಎರಡುಗುಣಗಳು ನಾಯಕನಿಗಿರಬೇಕು. ಭಾರತದ ಸಂದರ್ಭದಲ್ಲಿ ಅಂತಹ ತಾಕತ್ತು ಮಹಾತ್ಮಗಾಂಧಿಗೆ ಇತ್ತು. ಅವರು ಎಷ್ಟೋಬಾರಿ ಭಾರತ ಸ್ವಾತಂತ್ರ್ಯ ಚಳವಳಿ ದಿಕ್ಕು ತಪ್ಪಿದಾಗಲೆಲ್ಲಾ ಇಡೀ ಚಳವಳಿಯನ್ನು ಸ್ಥಗಿತಗೊಳಿಸಿದ್ದರು. ಇದಕ್ಕೆ ಚೌರಿಚೌರ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಮತ್ತು ಪೊಲೀಸರ ಹತ್ಯಾಕಾಂಡದ ಘಟನೆ ನಮ್ಮೆದುರು ಸಾಕ್ಷಿಯಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರುವ, ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂಬಂತೆ ಪರಿಭಾವಿಸುವ ವ್ಯಕ್ತಿಗಳು ಮಾತ್ರ ನಾಯಕತ್ವದ ಗುಣ ಹೊಂದಿರುತ್ತಾರೆ. ಅಂತಹ ಗುಣ ಈ ನೆಲದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣರವರಿಗೆ ಇತ್ತು.

ಇಂತಹ ಯಾವುದೇ ಗುಣಗಳು ಕಿಸಾನ್‌ಸಭಾ ಮೂಲಕ ರೈತರು ಮತ್ತು ಗೇಣಿದಾರರು, ಹಾಗೂ ಕೃಷಿ ಕೂಲಿಕಾರ್ಮಿಕರ ಬಗ್ಗೆ ಧ್ವನಿ ಎತ್ತಿದ ಚಾರು ಮುಜುಂದಾರ್ ಅಥವಾ ಕನು ಸನ್ಯಾಲ್‌ಗೆ ಇರಲಿಲ್ಲ. ಇಂತಹ ದೂರದೃಷ್ಟಿಕೋನದ ಕೊರತೆ ಒಂದು ಜನಪರ ಚಳವಳಿಯಾಗಬೇಕಿದ್ದ ಮಹತ್ವದ ಘಟನೆಯನ್ನು ಹಿಂಸೆಯ ಹಾದಿಗೆ ನೂಕಿಬಿಟ್ಟಿತು. ಗಾಂಧಿಯ ವಿಚಾರ ಧಾರೆಯ ಬಗ್ಗೆ ಅಪನಂಬಿಕೆ ಹೊಂದಿದ್ದ ಈ ಎಡಪಂಥೀಯ ನಾಯಕರಿಗೆ ತಮ್ಮದೇ ಪಶ್ಚಿಮ ಬಂಗಾಳದಲ್ಲಿ 1860 ರ ದಶಕದಲ್ಲಿ ರೈತರು ನಡೆಸಿದ ನೀಲಿ ಕ್ರಾಂತಿಯಾದರೂ ಮಾದರಿಯಾಗಬೇಕಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯ ಕಂಪನಿ ಮತ್ತು ಪ್ಲಾಂಟರ್‌ಗಳ ವಿರುದ್ಧ ಸ್ಥಳೀಯ ಗೇಣಿದಾರ ರೈತರು ನಡೆಸಿದ ಕಾನೂನು ಬದ್ಧ, ಹಾಗೂ ಅಹಿಂಸಾತ್ಮಕ ಹೋರಾಟವನ್ನು ಮಾವೋವಾದಿ ಬೆಂಬಲಿಗರು ಅವಲೋಕಿಸಬೇಕಿತ್ತು. ಏಕೆಂದರೆ, ಅಣುಬಾಂಬ್‌ಗಿಂತ ಅಹಿಂಸೆ ಎಂಬ ಅಸ್ತ್ರ ಹೆಚ್ಚು ಪರಿಣಾಮಕಾರಿ ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟ ಈ ನೆಲದಲ್ಲಿ ಯಾರೂ ಹಿಂಸೆಯನ್ನು ಪ್ರತಿಪಾದಿಸಲಾರರು, ಅಥವಾ ಬೆಂಬಲಿಸಲಾರರು.

ಭಾರತೀಯ ಮುಗ್ದ ರೈತರನ್ನು ನಿರಂತರವಾಗಿ ಶೋಷಿಸಿಕೊಂಡ ಬಂದ ಇತಿಹಾಸ ಇಂದು ನಿನ್ನೆಯದಲ್ಲ, ಅದಕ್ಕೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷರ ವಸಾಹತು ಶಾಹಿಯ ಆಡಳಿತ, ಅವರ ಭೂಕಂದಾಯ ಪದ್ಧತಿ, ಆರ್ಥಿಕ ನೀತಿಗಳು ಇವೆಲ್ಲವೂ ರೈತರ ರಕ್ತವನ್ನು ಹೀರಿವೆ. ಅನಕ್ಷರತೆ, ಸಂಘಟನೆಯ ಕೊರತೆ ಇಂತಹ ಶೋಷಣೆಗೆ ಪರೋಕ್ಷವಾಗಿ ಕಾರಣವಾದವು. 1859-60 ರಲ್ಲಿ ಪಶ್ಚಿಮ ಬಂಗಾಳದ ರೈತರು ನೀಲಿ ಬೆಳೆಯ ವಿರುದ್ಧ ಬಂಡಾಯವೆದ್ದ ಘಟನೆ ಭಾರತದ ಇತಿಹಾಸದಲ್ಲಿ ಪ್ರಥಮ ರೈತರ ಬಂಡಾಯವೆಂದು ಕರೆಯಬಹುದು. ಈಸ್ಷ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಬಹುತೇಕ ಪ್ಲಾಂಟರ್‌ಗಳು ಯರೋಪಿಯನ್ನರೇ ಆಗಿದ್ದರು. ತಮ್ಮ ತಾಯ್ನಾಡಿನ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಗೇಣಿದಾರರನ್ನು ನೀಲಿ ಬೆಳೆ ಬೆಳೆಯುವಂತೆ ಒತ್ತಾಯಿಸುತ್ತಿದ್ದರು. ರೈತರು, ತಮ್ಮ ಕುಟುಂಬದ ಆಹಾರಕ್ಕಾಗಿ ಭತ್ತ ಬೆಳೆಯಲು ಆಸ್ಪದ ನೀಡದೆ ಕಿರುಕುಳ ನೀಡುತ್ತಿದ್ದರು. ರೈತರು ಕಷ್ಟ ಪಟ್ಟು ಬೆಳೆದ ನೀಲಿ ಬೆಳೆಗೆ ಅತ್ಯಂತ ಕಡಿಮೆ ಬೆಲೆಯನ್ನ ನೀಡಲಾಗುತಿತ್ತು. ಪ್ಲಾಂಟರ್‌ಗಳ ಆದೇಶವನ್ನು ಧಿಕ್ಕರಿಸಿದ ರೈತರನ್ನು ತಮ್ಮ ಮನೆಗಳಲ್ಲಿ ಕೂಡಿ ಕಾಕಿ ಚಾಟಿ ಏಟಿನ ಶಿಕ್ಷೆ ನೀಡಲಾಗುತ್ತಿತ್ತು. ಇದಕ್ಕಾಗಿ ಪ್ರತಿಯೊಬ್ಬ ಬ್ರಿಟಿಷ್ ಪ್ರಜೆಯ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಿದ್ದವು ಇವುಗಳನ್ನು ವಿಪ್ಟಿಂಗ್‌ಹೌಸ್ ಎಂದು ಕರೆಯಲಾಗುತ್ತಿತ್ತು. ಚಾಟಿ ಏಟು ಹೊಡೆಯಲು ಭಾರತೀಯ ಗುಲಾಮರನ್ನು ನೇಮಕ ಮಾಡಲಾಗಿತ್ತು ಪ್ರತಿ ಒಂದು ಏಟಿಗೆ ಒಂದಾಣೆಯನ್ನು (ಒಂದು ರೂಪಾಯಿಗೆ ಹದಿನಾರು ಆಣೆ) ಏಟು ತಿನ್ನುವ ರೈತನೇ ಭರಿಸಬೇಕಾಗಿತ್ತು.

ಇಂತಹ ಕ್ರೂರ ಅಮಾನವೀಯ ಶೋಷಣೆಯನ್ನು ಸಹಿಸಲಾರದೆ, ರೈತರು ಸಣ್ಣ ಪ್ರಮಾಣದ ಗುಂಪುಗಳ ಮೂಲಕ ಪ್ರತಿಭಟಿಸಲು ಮುಂದಾದರು. ಇದೇ ಸಮಯಕ್ಕೆ ಸರಿಯಾಗಿ ಕಲರೋವ ಜಿಲ್ಲೆಯ ಜಿಲ್ಲಾಧಿಕಾರಿ ರೈತರ ಪರವಾಗಿ ಆದೇಶವನ್ನು ಹೊರಡಿಸಿ, ಗೇಣಿ ಪಡೆದ ಭೂಮಿಯನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲು ರೈತರು ಸ್ವತಂತ್ರರು ಹಾಗೂ ತಮಗಿಷ್ಟ ಬಂದ ಬೆಳೆ ತೆಗೆಯುವುದು ಅವರ ವ್ಯಯಕ್ತಿಕ ಹಕ್ಕು ಎಂದು ಘೋಷಿಸಿದನು. ಇದು ರೈತರಿಗೆ ನೂರು ಆನೆಯ ಬಲ ತಂದುಕೊಟ್ಟಿತು. ದಿಗಂಬರ ವಿಶ್ವಾಸ್ ಮತ್ತು ವಿಷ್ಣು ವಿಶ್ವಾಸ್ ಎಂಬ ವಿದ್ಯಾವಂತ ರೈತರ ನೇತೃತ್ವದಲ್ಲಿ ದೊಡ್ಡ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಇದರಿಂದ ಆತಂಕಗೊಂಡ ಪ್ಲಾಂಟರ್‌ಗಳು ತಮ್ಮ ಭೂಮಿಯ ಗೇಣಿ ದರ ಹೆಚ್ಚಿಸುವುದರ ಮೂಲಕ ರೈತರನ್ನು ಮಣಿಸಲು ಯತ್ನಿಸದರು. ಒಗ್ಗೂಡಿದ ರೈತರು ಗೇಣಿ ಕೊಡುವುದಿರಲಿ, ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದರು. ಸಂಪೂರ್ಣವಾಗಿ ನೀಲಿ ಬೆಳೆ ತೆಗೆಯುವುದನ್ನು ನಿಲ್ಲಿಸಿ ತಮಗೆ ಬೇಕಾದ ಆಹಾರ ಬೆಳೆಗಳ ಕೃಷಿಯಲ್ಲಿ ತೊಡಗಿಕೊಂಡರು. ಅನಿವಾರ್ಯವಾಗಿ ಕಚ್ಚಾ ವಸ್ತುಗಳಿಲ್ಲದೆ ಪಶ್ಚಿಮ ಬಂಗಾಳದ ಎಲ್ಲಾ ಕಂಪನಿಗಳು ಮುಚ್ಚತೊಡಗಿದವು. ಈ ಆಂದೋಲನದ ಮತ್ತೊಂದು ವೈಶಿಷ್ಟತೆಯೆಂದರೆ, ಮುಗ್ಧ ರೈತರ ಬಂಡಾಯಕ್ಕೆ ಬಂಗಾಲದ ಎಲ್ಲಾ ವಿದ್ಯಾವಂತರು, ಬುದ್ಧಿಜೀವಿಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದರು. ಇವರೆಲ್ಲರೂ ಬಂಗಾಳದಾದ್ಯಂತ ಸಭೆ ನಡೆಸಿ ರೈತರ ಜ್ವಲಂತ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಸಮಾಜ ಮತ್ತು ಸರ್ಕಾರದ ಗಮನ ಸೆಳೆದರು. ಹರೀಶ್ಚಂದ್ರ ಮುಖರ್ಜಿಯವರ ‘ “ಹಿಂದೂ ದೇಶ ಭಕ್ತ” ಎಂಬ ಪತ್ರಿಕೆ ಹಾಗೂ “ಧೀನ ಬಂಧು ಮಿತ್ರ” ಅವರ “ನೀಲಿ ದರ್ಪಣ” ಎಂಬ ನಾಟಕ ಜನಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು ಕೊನೆಗೆ ಎಚ್ಚೆತ್ತುಕೊಂಡ ಸರ್ಕಾರ ಒಂದು ಆಯೋಗವನ್ನು ರಚಿಸಿ ರೈತರ ಸಮಸ್ಯೆ ಪರಿಹರಿಸಲು ಮುಂದಾಯಿತು.

ಇಂತಹ ಒಂದು ಅನನ್ಯವಾದ ಅಪೂರ್ವ ಇತಿಹಾಸವಿದ್ದ ಬಂಗಾಳದ ನೆಲದಲ್ಲಿ ರೈತರ, ಕೃಷಿ ಕೂಲಿಕಾರ್ಮಿಕರ ನೆಪದಲ್ಲಿ ರಕ್ತ ಸಿಕ್ತ ಇತಿಹಾಸದ ಅಧ್ಯಾಯ ಆರಂಭಗೊಂಡಿದ್ದು ನೋವಿನ ಹಾಗೂ ವಿಷಾದಕರ ಸಂಗತಿ. ನಕ್ಸಲ್‌ಬಾರಿಯ ಹಿಂಸಾತ್ಮಕ ಹೋರಾಟ ಪಶ್ಚಿಮ ಬಂಗಾಳ ಸೇರಿದಂತೆ ಆಂಧ್ರಪ್ರದೇಶದಲ್ಲಿ ಹಲವು ಮಹತ್ವದ ಬದಲಾವಣೆಗೆ ಕಾರಣವಾಯಿತು. ಅವುಗಳಲ್ಲಿ ಕನು ಸನ್ಯಾಲ್ ಸಮರ್ಥಿಸಿಕೊಂಡ ಪ್ರಮುಖವಾದ ಅಂಶಗಳೆಂದರೆ.

  1. ವಂಶಪಾರಂಪರ್ಯವಾಗಿ ಬೀಡು ಬಿಟ್ಟಿದ್ದ ಪಾಳೇಗಾರತನದ ಅಡಿಪಾಯ ಬಿರುಕು ಬಿಟ್ಟಿತು.
  2. ಜಮೀನ್ದಾರರ ಮನೆಯಲ್ಲಿದ್ದ ರೈತರ ಒಪ್ಪಂದ ಪತ್ರಗಳೆಲ್ಲಾ ನಾಶವಾದವು.
  3.  ಅನೈತಿಕತೆಯ ಮಾರ್ಗದಲ್ಲಿ ಶ್ರೀಮಂತ ಜಮೀನ್ದಾರರು ಮತ್ತು ಬಡ ರೈತರ ನಡುವೆ ಏರ್ಪಟ್ಟಿದ್ದ ಒಪ್ಪಂದಗಳನ್ನು ಶೂನ್ಯ ಎಂದು ಘೋಷಿಸಲಾಯಿತು.
  4. ಹಳ್ಳಿಗಳಲ್ಲಿ ಜಮೀನ್ದಾರರು ಪೋಷಿಸಿಕೊಂಡು ಬಂದಿದ್ದ ಅಮಾನವೀಯ ಮುಖದ ಎಲ್ಲಾ ಕಾನೂನು, ಕಟ್ಟಳೆಗಳನ್ನು ರದ್ದು ಪಡಿಸಲಾಯಿತು.
  5. ಮುಕ್ತವಾಗಿ ನಡೆದ ವಿಚಾರಣೆಯಲ್ಲಿ ಶೋಷಣೆ ಮಾಡುತ್ತಿದ್ದ ಜಮೀನ್ದಾರರನ್ನು ಕಠಿಣವಾಗಿ ಶಿಕ್ಷೆಗೆ ಒಳಪಡಿಸಲಾಯಿತು.
  6. ಜಮೀನ್ದಾರರೊಂದಿಗೆ ಬೆಳೆದು ಬಂದಿದ್ದ ಗೂಂಡಾ ಪಡೆ ಸಂಪೂರ್ಣನಾಶವಾಯಿತು.
  7. ಕೇವಲ ಬಿಲ್ಲು ಬಾಣಗಳೋಂದಿಗೆ ಸೆಣಸಾಡುತ್ತಿದ್ದ ಪ್ರತಿಭಟನಾನಿರತ ರೈತರಿಗೆ ಜಮೀನ್ದಾರರ ಮನೆಯಲ್ಲಿ ಅಪಹರಿಸಿ ತಂದ ಬಂದೂಕಗಳು ಹೊಸ ಆಯುಧಗಳಾದವು.
  8. ಜಮೀನ್ದಾರರ ಬಗ್ಗೆ ರೈತರಿಗೆ ಇದ್ದ ಭಯ ಭೀತಿ ಕಾಣದಾದವು.
  9. ರಾತ್ರಿ ವೇಳೆ  ಹಳ್ಳಗಳನ್ನು ಕಾಯಲು ರೈತರು, ಕಾರ್ಮಿಕರು ಮತ್ತು ಆದಿವಾಸಿಗಳಿಂದ ಕೂಡಿದ ಗಸ್ತು ಪಡೆಯೊಂದು ಸೃಷ್ಟಿಸಲಾಯಿತು.
  10. ಕಿಸಾನ್‌ಸಭಾ ಸಂಘಟನೆಯೊಳಗೆ ಕ್ರಾಂತಿಕಾರಿ ತಂಡವೊಂದನ್ನು ಹುಟ್ಟು ಹಾಕಲಾಯಿತು.

ಈ ಹೊರಾಟ ಕುರಿತಂತೆ ನಕ್ಸಲ್ ಚರಿತ್ರೆಯ ಸಂಪುಟಗಳನ್ನೇ ಬರೆದಿರುವ ಬಂಗಾಳಿ ಲೇಖಕ ಸಮರ್‌ಸೇನ್ ಬಣ್ಣಿಸುವುದು ಹೀಗೆ: ನಕ್ಸಲ್‌ಬಾರಿಯ ಪ್ರತಿಭಟನೆ ಎಡಪಂಥೀಯ ತತ್ವ ಸಿದ್ಧಾಂತಗಳಲ್ಲಿ ಹುದುಗಿಹೋಗಿದ್ದ ಹಲವು ಕ್ರಾಂತಿಕಾರಿ ಅಂಶಗಳನ್ನು ರೈತರ ಬಂಡಾಯದ ಮೂಲಕ ಹೊರಹಾಕಿದೆ. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಇದ್ದ ಅಂತರವನ್ನು ಇದು ಕಡಿಮೆ ಮಾಡಿತು. ತೆಲಂಗಾಣ ರೈತರ ಹೋರಾಟ ಕೂಡ ಇದಕ್ಕೆ ಪೂರಕವಾಗಿ ಪರಿಣಮಿಸಿತು. ಹಿಂಸೆಯ ಮೂಲಕ ಶೋಷಣೆ ಕೂಪಕ್ಕೆ ತಳ್ಳಲ್ಪಟ್ಟಿದ್ದ ಎಲ್ಲಾ ಶೋಷಿತರು ತಮ್ಮ ತಮ್ಮ ನಿಜವಾದ ಸ್ಥಾನಮಾನಗಳನ್ನು ಗುರುತಿಸಿಕೊಂಡರು. ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಹೋರಾಟದ ಮೂಲಕ ಅವರು ಮತ್ತಷ್ಟು ಸದೃಢರಾದರು.

ಸಮರ್ ಸೇನ್‌ರವರ ಅತಿ ರಂಜಿತವಾದ ಈ ಹೇಳಿಕೆ ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದು ಮೇಲು ನೋಟಕ್ಕೆ ಕಂಡು ಬರುತ್ತದೆ. ಏಕೆಂದರೆ, ಒಂದು ಪಕ್ಷದ ಸಿದ್ಧಾಂತದ ಚೌಕಟ್ಟಿನಲ್ಲಿ ನಡೆಯಬೇಕಾದ ಹೋರಾಟದ ಲಕ್ಷಣಗಳನ್ನು ನಕ್ಸಲ್‌ಬಾರಿಯ ಹೋರಾಟ ಒಳಗೊಂಡಿರಲಿಲ್ಲ. ಜೊತೆಗೆ ಅದು ಸಿಲಿಗುರಿ ಪ್ರಾಂತ್ಯದ ಎಲ್ಲಾ ಸಮೂಹದ ಚಳವಳಿಯಾಗಿರಲಿಲ್ಲ. ಎಲ್ಲಾ ವರ್ಗದ ಭಾವನೆಗಳನ್ನು ಕ್ರೋಢೀಕರಿಸುವಲ್ಲಿ ಹೋರಾಟ ವಿಫಲವಾಯಿತು. ಜಮೀನ್ದಾರರ ಶೋಷಣೆಯ ಬಗ್ಗೆ ನ್ಯಾಯ ಪಡೆಯಲು ಪರ್ಯಾಯ ಮಾರ್ಗಗಳಿದ್ದರೂ ಕೂಡ ಕಾನೂನನ್ನು ಸ್ವತಃ ರೈತರು, ಆದಿವಾಸಿಗಳು ಕೈಗೆತ್ತಿಕೊಂಡಿದ್ದು ಪ್ರಜಾಪ್ರಭುತ್ವ ಸರ್ಕಾರದ ವ್ಯವಸ್ಥೆಯಲ್ಲಿ ಒಪ್ಪುವಂತಹ ಸಂಗತಿಗಳಲ್ಲ. 1919 ರಿಂದ ಭಾರತದಲ್ಲಿ ಬೇರು ಬಿಟ್ಟು, ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳ ಅಡಿಯಲ್ಲಿ ಸಾಗಿದ್ದ ಕಮ್ಯೂನಿಷ್ಟ್ ಪಕ್ಷಕ್ಕೆ ಚೀನಾದ ಮಾವೋತ್ಸೆ ತುಂಗನ ಉಗ್ರವಾದಿ ನಿಲುವುಗಳು ಜೀರ್ಣಿಸಿಕೊಳ್ಳಲು ಕಷ್ಟವಾಯಿತು. ಇದನ್ನು ಮಾವೋನ ಮಾತುಗಳಲ್ಲಿ ಹೇಳಬಹುದಾದರೆ, ನಮ್ಮ ಕಾಲುಗಳಿಗೆ ತಕ್ಕಂತೆ ಪಾದರಕ್ಷೆಗಳು ಇರಬೇಕೆ ಹೊರತು, ಪಾದರಕ್ಷೆ ಅಳತೆಗೆ ನಮ್ಮ ಕಾಲಿನ ಪಾದಗಳನ್ನು ಕತ್ತರಿಸಿಕೊಳ್ಳಬಾರದು. ನಕ್ಸಲ್‌ಬಾರಿಯ ಘಟನೆಯಲ್ಲಿ ಆದದ್ದು ಕೂಡ ಇದೇ ಸಂಗತಿ.

(ಮುಂದುವರೆಯುವುದು)

Leave a Reply

Your email address will not be published. Required fields are marked *