ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

– ಮಹಾದೇವ ಹಡಪದ

ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಾಹಾನ್ ನಾಯಕರು ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನು ಪರಶೀಲಿಸಿ  ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲ. ಮತ್ತು ಇಂದಿಗೂ ಆ ವ್ಯಂಗ್ಯಚಿತ್ರ ಅಂಬೇಡ್ಕರ್ ಅವರ ಘನತೆಯನ್ನೇನೂ ಕಡಿಮೆ ಮಾಡಲಾರದು. ಆದರೆ ಅದನ್ನು ಪಠ್ಯದಲ್ಲಿ ಹಾಕಿರುವುದು ಒಂದು ಅಪರಾಧವೇ ಸೈ. ಆ ಚಿತ್ರ ಅವತ್ತಿನ ಭಾರತದ ಆ ಸಂದರ್ಭಕ್ಕೆ ಸರಿಯಾಗಿ ಕಲಾವಿದನ ಮೊನಚು ನೋಟದಲ್ಲಿ ಅರಳಿರುವುದು ಒಪ್ಪೋಣ. ಹಾಗೆಂದ ಮಾತ್ರಕ್ಕೆ ಇಂದಿನ ಭಾರವಾದ ಬದುಕಿನ ಮೆಕಾಲೆ ಮೊಮ್ಮಕ್ಕಳಿಗೆ ಆ ಚಿತ್ರದ ಬಗ್ಗೆ ಏಕಮುಖಿ ಅಭಿಪ್ರಾಯ ಹೋಗುತ್ತದೆ. ಅದು ಭವಿಷ್ಯದಲ್ಲಿ ತಪ್ಪು ತಿಳುವಳಿಕೆ ನೀಡಲಾರದು ಎನ್ನುವುದು ಗ್ರಹಿಕೆಗೆ ನಿಲುಕಲಾರದ್ದೇನಲ್ಲ.

ಒಂದು ಉದಾಹರಣೆ ಹೇಳುತ್ತೇನೆ- ಹೆಗ್ಗೋಡು ಹೈಸ್ಕೂಲಿನ ಒಬ್ಬ ಮಾಸ್ತರರು ಗಾಂಧಿಯ ಪಾಠವನ್ನು ಮತಾಂಧ ಹಿಂದುತ್ವ ಪ್ರತಿಪಾದನೆಯ ಮಾದರಿಯಲ್ಲಿಯೇ ಮಾಡುತ್ತಾರೆ. ಅವರ ಶಿಷ್ಯನು ಇತಿಹಾಸಕ್ಕೆ ಜಾಣಕುರುಡನಾಗಿ ಗಾಂಧಿಯನ್ನು ದ್ವೇಷಿಸುತ್ತಾನೆ. ಆ ಹುಡುಗ ಆ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ. (ನಾನು ಹೆಗ್ಗೋಡಿನಲ್ಲಿದ್ದಾಗ ಆತ ನನ್ನ ನೆರೆಮನೆಯಾತನೂ ಆಗಿದ್ದ.) ಹೀಗಿರುವಾಗ ವ್ಯಂಗ್ಯಚಿತ್ರವನ್ನು ಪಾಠವಾಗಿ ವಿವರಿಸುವ ಆಸಾಮಿ ದೇವರ ಸೇವೆಗೆ ಬಂದವನಾಗಿದ್ದರೆ ಅಥವಾ ಅಂಬೇಡ್ಕರ್ ಕುರಿತು ಗೌರವ ಇಲ್ಲದವನಾಗಿದ್ದರೆ ಹೇಗೆ ಅದನ್ನು ಚಿತ್ರಿಸಬಹುದು ಎಂಬುದನ್ನು ಯೋಚಿಸುವುದು ಸದ್ಯದ ಅವಶ್ಯಕತೆಯಾಗಿದೆ. ಆದ್ದರಿಂದ ಅದು ಅಂಬೇಡ್ಕರರಿಗೆ ಮಾಡಿದ ಅವಮಾನವೇ ಆಗಿದೆ.

1949 ರಲ್ಲಿ ಶಂಕರಪಿಳ್ಳೆ ಬರೆದ ಆ ಚಿತ್ರ ಮೂರು ವರ್ಷದ ವಿಳಂಬವನ್ನ ವಿಡಂಬಿಸಿರುವುದು ರಾಜ್ಯಶಾಸ್ತ್ರ, ಸಮಾಜವಿಜ್ಞಾನವೇನೂ ಆಗಲಾರದು. ಆ ಶ್ರಮದ ಫಲವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಪಠ್ಯವೊಂದರಲ್ಲಿ ಸೇರಿಸುವ ಮೂಲಕ (ಯಾದವ್ ಮತ್ತು ಫಲೀಷ್ಕರ್ ಅವರು ಯಾವ ಕುತಂತ್ರವನ್ನು ಹೊಂದಿದವರಲ್ಲ) ಅಂಬೇಡ್ಕರ್ ಅವರ ರಥದ ಗಾಲಿಗೆ ಕೈ ಹಾಕಿದವರ ಅಭಿಮಾನಕ್ಕೆ ಧಕ್ಕೆ ಆಗಿರುವುದಂತು ಸತ್ಯವಾದ ಮಾತು. ಆದರೆ ಪ್ರಿಯ ಪ್ರಗತಿಪರ ಚಿಂತಕರು ಆ ಪಠ್ಯವನ್ನು ಸ್ವತಃ ಸರಕಾರವೇ ಪಠ್ಯದಿಂದ ಕೈ ಬಿಡುವಾಗ ’ಅದನ್ನು ಪಠ್ಯದಿಂದ ಕೈ ಬಿಟ್ಟರೆ ಅಂಬೇಡ್ಕರ್ ಅವರಿಗೆ ಅವಮಾನ,’ ಎಂದೆಲ್ಲ ಹೇಳಿ ತಮ್ಮ ಫೇಸ್‌ಬುಕ್ಕಿನ ಹಾಳೆಗಳಿಗೆ ಪ್ರತಿಕ್ರಿಯೆಯನ್ನು ಸಂಪಾದಿಸುತ್ತಿದ್ದಾರೆ. ಅವರಿಗೆ ಗೊತ್ತಿರಲಿಕ್ಕಿಲ್ಲ.. ಹಸಿವೆಗಿಂತಲೂ ಅವಮಾನದ ಕಹಿ ನುಂಗಲಾರದ ತುತ್ತೆಂಬುದು.

ಈ ಇಂಡಿಯಾದ ವರ್ಣ-ವರ್ಗ ವ್ಯವಸ್ಥೆಯಲ್ಲಿ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿರುವ ಅಸ್ಪೃಶ್ಯತೆ ಮತ್ತೆ ಯಾವ ಮಾದರಿಯಲ್ಲಿ ಹುಟ್ಟಿಕೊಳ್ಳುತ್ತದೋ ತಿಳಿಯದು. ಇವತ್ತಿನ ಖಾಸಗೀಕರಣದಲ್ಲಿ ಅವರವರದೇ ಸಂವಿಧಾನಗಳು, ಅವರವರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತ್ತಿವೆ. ನ್ಯಾಯಕಟ್ಟೆಗಳು ಅವರ ಇಚ್ಛೆಯಂತೆ ಅವರಿಗೆ ಬೇಕಾದವರಿಗೆ ಬೇಕುಬೇಕಾದಂತೆ ನ್ಯಾಯ ಹೇಳುತ್ತಿವೆ. ರಾಳೇಗಾಂವ್ ಸಿದ್ಧಿಯ ಗಾಂಧಿಟೋಪಿ ಬಾಬಾನೂ ಅವರೂರಿನಲ್ಲಿ ಅವರೇ ನ್ಯಾಯಾಧೀಶ, ಸರಕಾರ ಎಲ್ಲವೂ ಆಗಿದ್ದಾರೆ. ಹಾಗೆ ಮಾಡುವವರು ಸಂವಿಧಾನವನ್ನೆ ಧಿಕ್ಕರಿಸುವ ನಿಲುವುಳ್ಳವರು. ಇಂದಿಗೂ ಕರ್ನಾಟಕದ ಮಧ್ಯಭಾಗದಲ್ಲಿ ಒಂದು ಮಠ (ತರಳಬಾಳು) ಸ್ವಂತ ನ್ಯಾಯಾಲಯವನ್ನು ನಡೆಸುತ್ತದೆ ಎಂದರೆ ನಂಬುತ್ತೀರಾ? ಅಲ್ಲಿ ನ್ಯಾಯಾಧೀಶರು ಒಬ್ಬ “ಪ್ರಗತಿಪರ” ಮಠಾಧೀಶರು. ಹೀಗೇ ತಮ್ಮ ಸುಪರ್ದಿಯ ಯಾವ ಹಕ್ಕನ್ನೂ ಬಿಟ್ಟುಕೊಡದ ಒಂದು ವ್ಯವಸ್ಥೆ ಹನ್ನೆರಡನೆಯ ಶತಮಾನದಿಂದ ಏಕೆ ಅನಾದಿ ಕಾಲದಿಂದಲೂ ನಿರಂತರವಾಗಿ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವಾಗ ಆ ಪಠ್ಯವನ್ನ ಖಂಡಿಸಲೇಬೇಕಾಗಿತ್ತು.

ಆದ್ದರಿಂದ ಆ ಸಂಘಟನೆಯ ಮುಖಂಡನಿಗೆ ಅದು ಬರೀ ಕುರುಡು ಅಭಿಮಾನ ಇದ್ದಿರಬಹುದು. ಹಾಗೆಂದ ಮಾತ್ರಕ್ಕೆ ಅವರ ಹಲ್ಲೆಯನ್ನು ತಿರಸ್ಕರಿಸುವಷ್ಟು ಅಪರಾಧವೇನೂ ಅಲ್ಲ. ಯಾಕೆಂದರೆ ಯಾವ ಹುತ್ತದಲ್ಲಿ ಎಂಥ ವಿಷಕಾರಿ ಹಾವು ಕೂತಿರುತ್ತದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಜಾತಿ ರಾಜಕಾರಣದ ನಡುವೆ ತಳಸಮುದಾಯಗಳು ಒಡೆದಮನೆಗಳಂತೆ ಮೇಲುಕೀಳಿನ ಅಂದಾಜು ಲೆಕ್ಕಾಚಾರದಲ್ಲಿ ನೆನೆಗುದಿಗೆ ಬಿದ್ದಿರುವಾಗ ಮತ್ತೆ ಸನಾತನ ವ್ಯವಸ್ಥೆ ಸ್ಥಾಪಿಸುವ ಎಲ್ಲ ತಯಾರಿಯನ್ನು ಈ ಮೇಲ್ಜಾತಿಗಳು ಮಾಡಿಕೊಂಡು ಕೂತಿರುವುದನ್ನು ಕಾಣುತ್ತಿದ್ದೇವೆ. ಅಲ್ಲಾ ಸ್ವಾಮಿ, ಈ ಕನ್ನಡದ ಪಿಚ್ಚರ್ ಒಂದರಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಕಿರಚಾಡುವ ಕಪಿ ಸೈನ್ಯದಂತೆ ದಲಿತ ಸಂಘಟನೆಗಳೂ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಗ್ರಹಿಕೆ. ನಿಜವಾಗಲೂ ದಲಿತ ಸಂಘಟನೆಗಳಿಗೆ ಈಗಲೂ ಬದ್ಧತೆ ಇದೆ. ಬದುಕಿನ ಬಗ್ಗೆ ತೀವ್ರ ಕಾಳಜಿ ಇದೆ.

ಅದೆಷ್ಟೋ ವರ್ಷಗಳಿಂದ ಕತ್ತಿನ ಮೇಲೆ ಕಾಲಿಟ್ಟು ಒತ್ತಲ್ಪಟ್ಟ ಉಸುರಿಗೆ ಹೊಸ ಚೈತನ್ಯ ಕೊಟ್ಟ ಜೀವಧಾತುವಿನ ವಿಳಂಬದ ವ್ಯಂಗ್ಯ ಚಿತ್ರವನ್ನಿಟ್ಟುಕೊಂಡು ಇತಿಹಾಸದ ಪಾಠ ಮಾಡುವುದಾದರೆ ಇವತ್ತಿನ ವಾಸ್ತವವನ್ನು ಕಲಿಯುವ ವಿದ್ಯಾರ್ಥಿಗೆ ಸ್ವತಃ ಅನುಭವಕ್ಕೆ ಬರುವಂತೆ ಮಾಡಲು ತಹಶೀಲ್ದಾರನೊಬ್ಬ ತನ್ನ ಸ್ವಂತ ಮಗಳಿಗೆ ತಟ್ಟೆ ಕೊಟ್ಟು ದೇವಸ್ಥಾನದ ಮುಂದೆ ಕೂತು ಭಿಕ್ಷೆ ಬೇಡುವುದನ್ನು ಪಠ್ಯವಾಗಿ ಇಡಲು ಬಯಸುತ್ತೀರಾ?

ಸರಕಾರ ವ್ಯಂಗ್ಯಚಿತ್ರವನ್ನು ಪುಸ್ತಕದಿಂದ ನಿಷೇಧ ಮಾಡಿರುವುದು ಸ್ವಾಗತಾರ್ಹ.

7 thoughts on “ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

  1. b.m. basheer

    ಮಹಾದೇವ ಹಡಪದ ಅವರ ಅಭಿಮತ ನನ್ನದೂ ಆಗಿದೆ. ಒಳ್ಳೆಯ ಲೇಖನ.

    Reply
  2. ashok

    very truely said. i just dont understand what was the need to publish this cartoon in new books. That carried meaning only at that time but it gives complete different and unnecessry meaning at the present.

    Reply
  3. ಚರಿತಾ

    ‎”ಅವರಿಗೆ ಗೊತ್ತಿರಲಿಕ್ಕಿಲ್ಲ.. ಹಸಿವೆಗಿಂತಲೂ ಅವಮಾನದ ಕಹಿ ನುಂಗಲಾರದ ತುತ್ತೆಂಬುದು.”
    ಸರಿಯಾದ ಮಾತು ಮಹಾದೇವ್

    Reply
  4. ಕನ್ನಡಿಗ...

    ಅಬ್ಬ, ಇಷ್ಟು ವರ್ಷಗಳ ಅಬ್ಬರವನ್ನು ಹೀಗೆ ತನ್ನಗೆ ಮಾಡುವ ಈ ಹುನ್ನಾರ ಎಷ್ಟು ದಿನದಿಂದ ದಲಿತರನ್ನು ಸದೆಬಡಿಯಲು ಕಾದುಕುಳಿತಿತ್ತೋ.. ಈಗ ಅವರೆಲ್ಲ ಒಂದಾಗುತ್ತಿದ್ದಾರೆ. ಈ ದಲಿತರ ಸೊಕ್ಕು ಜಾಸ್ತಿಯಾಗಿತ್ತು, ಇದೆ ಅವಕಾಶ ಎಂದು ಆದಷ್ಟು ಸಮರ್ಥವಾಗಿ ಶಂಕರ ಪಿಳ್ಳೆಯ ವ್ಯಂಗ್ಯ ಚಿತ್ರದ ನೆಪ ಮಾಡಿಕೊಂಡು ಭಾರತದ ಇನ್ನಿತರ ಜಾತಿಯವರೆಲ್ಲ ಒಂದಾಗಿ ಹಣಿಯಲು ತಡಕಾಡುತ್ತಿದ್ದಾರೆ. ಬಸವನ ಕಾಲದಲ್ಲೊಮ್ಮೆ ಹೊಸಗಾಳಿ ಉಂಡಿದ್ದವರು ಮತ್ತೆ ಜೀವಂತಿಕೆಗಾಗಿ ಎಂಟು ಶತಮಾನ ಕಾದಿದ್ದರು. ಈಗ ಮತ್ತೆ ಈ ಮುಖೇನ ಶ್ರೇಷ್ಠರೆಲ್ಲ ಒಂದಾಗಿ ಮಾತಿನ ಜಾಣ್ಮೆಯಿಂದ ಹೊಡಿಯಲು, ತುಳಿಯಲು ಹೀಗೆ ಅಲ್ಲಲ್ಲಿ ಭೂಮಿಕೆ ಹಾಕಿಕೊಳ್ಳುತ್ತಿದ್ದಾರೆ. ಮಾತು ಮತ್ತು ಓದು, ಹಕ್ಕುಗಳನ್ನ ಕೊಟ್ಟವನನ್ನು ಪ್ರೀತಿಸುವುದು ಪೂಜಿಸುವುದು ಈಗ ಸನಾತನದಂತೆ ಸಂಕೇತವಾಗಿದೆ ಎಂದು ಹೇಳುತ್ತಿದ್ದಾರೆಂದ ಮೇಲೆ ಎಲ್ಲರೂ ಎಗರುತ್ತಾರೆ. ಈ ಎರಡು ದಿನಗಳಲ್ಲಿ ಬಂದ ಪ್ರತಿಕ್ರಿಯೆ ನೋಡುವಾಗ ಅಂದಾಜ ಆಯ್ತು ದಲಿತನು ಹುಂಬನೆಂಬುದನ್ನು ಈ ಬುದ್ಧಿವಂತ ವರ್ಗ ಸಮರ್ಪಕವಾಗಿ ನಿರೂಪಿಸುತ್ತಿದೆ.

    Reply

Leave a Reply

Your email address will not be published. Required fields are marked *