Monthly Archives: September 2012

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಕಡೆಯ ಕಂತು

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಆಲ್ಫ್ಸ್ ಪರ್ವತ… ಕೊಲರ್ಯಾಡೊ ನದಿ..

ಈ ಬೆಳವಣಿಗೆಗಳ ನಡುವೆಯೂ ಖಂಡಗಳ ಅಲೆತ-ಘರ್ಷಣೆ ನಿಂತಿರಲಿಲ್ಲ. ಈ ಅಲೆತದ ಜೊತೆಗೆ ಸವಕಳಿ ಭೂಮಿಯ ಮೇಲೆ ವಿಚಿತ್ರವೂ, ವಿಶಿಷ್ಟವೂ ಆದ ಭೂರಚನೆಗೆ ಕಾರಣವಾಯಿತು.

ಸ್ವಿಟ್ಜರ್ಲ್ಯಾಂಡಿನ ಆಲ್ಫ್ಸ್ ಪರ್ವತ ಶ್ರೇಣಿ ರಚನೆಯಾದ ರೀತು ಅಚ್ಚರಿಯಾಗುತ್ತದೆ. ನಾವು ಇಲ್ಲಿಯವರೆಗೆ ನೋಡುತ್ತಾ ಬಂದಂತೆ ಈ ಪರ್ವತ ಜ್ವಾಲಾಮುಖಿ ಪರ್ವತವಲ್ಲ. ಸಮುದ್ರ ಮಟ್ಟದಿಂದ ಸುಮಾರು 3 ಮೈಲಿ ಎತ್ತರಕ್ಕಿದೆ. ಇಷ್ಟು ಎತ್ತರದ ಈ ಪರ್ವತದ ರಚನೆ ಹೇಗಾಯಿತು ಎನ್ನುವುದು ಅಚ್ಚರಿ…

ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಈ ಎತ್ತರಕ್ಕೆ ಖಂಡಗಳೆರಡರ ಘರ್ಷಣೆಯೇ ಕಾರಣ. ಆಪ್ರಿಕಾ ಮತ್ತು ಯೂರೋಪ್ ಖಂಡಗಳೆರಡು ಡಿಕ್ಕಿ ಹೊಡೆದು ಈ ಪರ್ವತ ರಚನೆ ಆಯಿತು ಎನ್ನುತ್ತಾರೆ ವಿಜ್ಞಾನಿಗಳು.

ಈ ಪ್ರತಿಪಾದನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಈ ಪರ್ವತ ಶ್ರೇಣಿಯ ಮ್ಯಾಟ್ ಹಾರ್ನ್ ಪರ್ವತವೇ ಸಾಕು. ಎರಡು ಖಂಡಗಳಿಂದಾದ ಪರ್ವತ ಇದು. ಪರ್ವತದ ತಳಭಾಗವು ಯೂರೋಪಿನದ್ದಾಗಿದ್ದರೆ, ತುದಿ ಆಫ್ರಿಕಾಕ್ಕೆ ಸೇರಿದ್ದು. ಹೇಗೆ?

ಆಫ್ರಿಕಾ ಮತ್ತು ಯೂರೋಪ್ ಖಂಡಗಳು ಚಲಿಸುತ್ತಾ ಒಂದಕ್ಕೊಂದು ಸಮೀಪಿಸಿ ನಂತರ ಒಂದರಮೇಲೊಂದು ಸೇರಿಕೊಂಡವು. ಈ ಚಲನೆ ನಿಲ್ಲುವ ಹೊತ್ತಿಗೆ ಪರ್ವತಾಕಾರ ಪಡೆದಿತ್ತು, ಎನ್ನುವುದು ವಿಜ್ಞಾನಿಗಳ ಮಾತು.

ಹೀಗೆ ಖಂಡಗಳ ಅಲೆತ ಮತ್ತು ಘರ್ಷಣೆ 45 ದಶಲಕ್ಷ ವರ್ಷಗಳ ಕಾಲ ನಡೆಯುತ್ತಲೇ ಇತ್ತು. ಈ ಚಟುವಟಿಕೆಗಳಿಂದ ಪರ್ವತ ಮತ್ತು ಪರ್ವತಶ್ರೇಣಿಗಳು ರಚನೆಯಾಗುತ್ತಲೇ ಇದ್ದವು. ಆದರೆ ಸವಕಳಿ ಈ ಪರ್ವತಗಳು ಎತ್ತರಕ್ಕೆ ಬೆಳೆಯದಂತೆ ತಡೆಯಿತು.

ಮಂಜು, ಗಾಳಿ, ನೀರಿನಿಂದ ಪರ್ವತಗಳ ಸವಕಳಿ ಪ್ರಕ್ರಿಯೆ ನಡೆದೇ ಇತ್ತು. ವರ್ಷಕ್ಕೆ 50 ದಶಲಕ್ಷ ಟನ್‌ನಷ್ಟು ಮಣ್ಣು ಸವೆಯುತ್ತಿತ್ತು. ಖಂಡಗಳ ಚಲನೆಯಿಂದ ಪರ್ವತ ನಿರ್ಮಾಣವಾಗುತ್ತಿದ್ದರೆ ಸವಕಳಿ ಅದರ ಎತ್ತರವನ್ನು ನಿರ್ಧರಿಸುತ್ತಿತ್ತು.

ಖಂಡಗಳ ಚಲನೆ ಕೇವಲ ಪರ್ವತಗಳನ್ನು ಮಾತ್ರ ನಿರ್ಮಿಸಲಿಲ್ಲ ಎನ್ನುವುದು ಗಮನಿಸಬೇಕಾದ ಮತ್ತೊಂದು ಅಂಶ. ಕೆಲವು ಸಂದರ್ಭಗಳಲ್ಲಿ ಈ ಚಟುವಟಿಕೆಗಳು ಗ್ರ್ಯಾಂಡ್ ಕ್ಯಾನ್ಯನ್ಯ್‌ನಂತಹ ರುದ್ರರಮಣೀಯ ಪರಿಸರವನ್ನೂ ಸೃಷ್ಟಿಸಿದವು.

1 ಮೈಲಿ ಆಳ, 10 ಮೈಲಿ ಅಗಲದ ಕ್ಯಾನ್ಯನ್ ಕೊಲರ‍್ಯಾಡೊ ನದಿಯ ಹರಿಯುವಿಕೆ ಮತ್ತು ಭೂಖಂಡದ ಚಲನೆಯಿಂದಾಗಿ ರೂಪುಗೊಂಡಿದ್ದು. ಸಮುದ್ರ ಮಟ್ಟದಿಂದ 8000 ಅಡಿ ಎತ್ತರದಲ್ಲಿ ಹರಿಯುವ ಕೊಲರ‍್ಯಾಡೊ ನದಿ ಸಣ್ಣದಾಗಿ ಹರಿಯುತ್ತಿದ್ದರೂ ಅದರ ವೇಗ ಹೆಚ್ಚು. ಹಾಗಾಗಿ ಖಂಡಗಳ ಚಲನೆಗೆ ಕೈಜೋಡಿಸಿದಂತೆ ಕೊಲರ‍್ಯಾಡೊ ಭೂಮಿಯನ್ನು ಬೇರ್ಪಡಿಸಿ ಕಣಿವೆಯನ್ನೇ ಸೃಷ್ಟಿಸಿದೆ.

20 ಲಕ್ಷ ವರ್ಷಗಳು. ಮನುಷ್ಯನ ಪೂರ್ವಜರು ಆಫ್ರಿಕಾದಿಂದ ಭೂಮಿಯ ವಿವಿಧ ಭಾಗಗಳತ್ತ ಹೆಜ್ಜೆ ಹಾಕಿದರು. ಈ ಹೊತ್ತಿಗೆ ಭೂಮಿಯನ್ನು ಹಿಮ ಆವರಿಸಿಕೊಳ್ಳಲಾರಂಭಿಸಿತ್ತು. ಅಂದರೆ ಐಸ್‍ಏಜ್ ಆರಂಭವಾಗಿತ್ತು. ಭೂಮಿ ಮತ್ತೆ ಹಿಮಗೋಳವಾಗಿತ್ತು.

ಇಂತಹದೊಂದು ಕಾಲಘಟ್ಟವನ್ನು ಭೂಮಿ ಕಂಡಿತ್ತು ಎಂದು ಗೊತ್ತಾಗಿದ್ದು ಸ್ವಿಟ್ಜರ್‌ಲೆಂಡಿನ ವಿಜ್ಞಾನಿ ಲೂಯಿ ಅಗಸಿಸ್‍ರಿಂದ.

ಆಲ್ಫ್ಸ್ ಪರ್ವತಗಳಲ್ಲಿ ಭಿನ್ನರೀತಿಯ ಶಿಲೆಗಳನ್ನು ನೋಡಿದ್ದ ಅಗಸಿಸ್ ಅಂತಹ ಶಿಲೆಗಳ ರಚನೆಗೆ ಕಾರಣ ಹುಡುಕಾಡಿದರು. ಹಿಮದ ಶೇಖರಣೆ, ಸರಿದಾಟ, ಇಂತಹ ಶಿಲೆಗಳನ್ನು ರಚಿಸಿದ್ದು ಎಂಬ ಅಂಶ ತಿಳಿದುಬಂತು. ಇದು ಭೂಮಿಯ ಐಸ್‍ಏಜ್ ಕುರಿತ ಸಿದ್ಧಾಂತಕ್ಕೆ ಕಾರಣವಾಯಿತು.

ಐಸ್‍ಏಜ್ ಅನ್ನೋದು ಕಟ್ಟುಕತೆ ಎಂದು ಹಲವರು ಜರೆದರು. ಆದರೆ ಐಸ್‍ಏಜ್ ಸಿದ್ಧಾಂತಕ್ಕೆ ಪೂರಕವಾಗಿ ಜಗತ್ತಿನ ಹಲವೆಡೆ ಪುರಾವೆ ಸಿಕ್ಕವು. ನ್ಯೂಯಾರ್ಕಿನ ಸೆಂಟ್ರಲ್ ಪಾರ್ಕ್‍ನಲ್ಲಿರುವ ಬಂಡೆ ಅಂತಹ ಪುರಾವೆಗಳಲ್ಲಿ ಒಂದು. ಹಿಮಯುಗದ (ಐಸ್‍ಏಜ್‍ನ) ಸಮಯದಲ್ಲಿ ಅಮೆರಿಕದ ಈಗಿನ ಅತಿ ಎತ್ತರದ ಕಟ್ಟಡ ಎಂಪೈರ್ ಸ್ಟೇಟ್‍ನ ಎರಡು ಪಟ್ಟು ಎತ್ತರಕ್ಕೆ ಹಿಮ ಈ ನಗರವನ್ನು ಆವರಿಸಿಕೊಂಡಿತ್ತೆಂದು ವಿಜ್ಞಾನಿಗಳು ಪ್ರತಿಪಾದಿಸಿದರು.

ವಾತಾವರಣದಲ್ಲಿ ಆದ ಭಾರೀ ಬದಲಾವಣೆಗಳಿಂದ ಕಾಲಾನಂತರದಲ್ಲಿ ಹಿಮ ಕರಗಿ ಸರೋವರಗಳಾದವು. ಭೂಮಿ ತನ್ನ ವಿಕಾಸದ ಹೆಜ್ಜೆಗಳನ್ನು ಮುಂದುವರೆಸಿತು.

ಮಾನವ ಹೆಜ್ಜೆಗಳು

10000 ವರ್ಷಗಳು. ಇಲ್ಲಿಂದ ಮನುಷ್ಯನ ಇತಿಹಾಸ ಆರಂಭ. ಈ ಅವಧಿಯಲ್ಲಿ ಮನುಷ್ಯನ ವಿಕಾಸದ ಹಾದಿ ಅತಿವೇಗದಲ್ಲಿ ಸಾಗಿ ಅವನು ಬೇರೆಲ್ಲ ಜೀವಿಗಳಿಗಿಂತ ಹೆಚ್ಚು ಪ್ರಾಬಲ್ಯವನ್ನು ಸಾಧಿಸಿದ್ದಾನೆ. ತಾನೇ ಕಂಡುಕೊಂಡ ತಂತ್ರಜ್ಞಾನ ಭೂಮಿಯನ್ನಷ್ಟೇ ಅಲ ಭಾನಿಗೂ ಚಾಚಿಕೊಂಡಿದೆ.

ಆದರೆ ಭೂಮಿಯ 4.5 ಶತಕೋಟಿ ವರ್ಷಗಳ ಅಸಾಧಾರಣ ಪಯಣವನ್ನು ನೋಡಿದರೆ ವಿಜ್ಞಾನಿಗಳು 15000 ವರ್ಷಗಳಲ್ಲಿ ಮತ್ತೊಂದು ಐಸ್‍ಏಜ್ ಬರಬಹುದು. ಮತ್ತೆ ಖಂಡಗಳು ಚಲಿಸಿ ಮುಂದೊಂದು ದಿನ ಈಗ ಇರುವ ಭೂಖಂಡಗಳೇ ಇಲ್ಲವಾಗಬಹುದು. ಇನ್ನು 3 ಶತಕೋಟಿ ವರ್ಷಗಳ ಹೊತ್ತಿಗೆ ಭೂಮಿ ಮಂಗಳನಂತೆ ಬಂಜರಾಗಬಹುದು ಎಂದು ಲೆಕ್ಕ ಹಾಕುತ್ತಾರೆ.

4.5 ಶತಕೋಟಿ ವರ್ಷಗಳಲ್ಲಿ ಆಗಿರುವ ಬದಲಾವಣೆಗಳನ್ನು ನೋಡುತ್ತಾ ಇದ್ದರೆ ವಿಜ್ಞಾನಿಗಳ ಈ ಲೆಕ್ಕಾಚಾರ ತಪ್ಪಾಗಬಹುದು ಎನ್ನಿಸೋದಿಲ್ಲ. ಆದರೆ ಮನುಷ್ಯನಲ್ಲಿರುವ ತಂತ್ರಜ್ಞಾನ ಮತ್ತೊಂದು ಭೂಮಿ ಹುಡುಕಬಹುದು. ಅಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಇದೆಲ್ಲ ನಡೆಯುವ ಸಹಸ್ರಸಹಸ್ರ ವರ್ಷಗಳ ಕಾಲಕ್ಕೆ ನಾವಿರ್ತೀವಾ?

(ಮುಗಿಯಿತು)


ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ನಾಟಕ, ಸಿನೆಮಾ, ರಾಜಕೀಯ, ಡಬ್ಬಿಂಗ್ ಬಗ್ಗೆ ಆನಂತ ನಾಗ್

[ಕನ್ನಡ ಚಿತ್ರರಂಗದಲ್ಲಿ ಅನಂತ ನಾಗ್‌ರಿಗೆ ವಿಶೇಷವಾದ ಸ್ಥಾನವಿದೆ. ಉಂಡೂ ಹೋದ ಕೊಂಡೂ ಹೋದ, ಗೋಲ್‌ಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಗೌರಿ ಗಣೇಶ; ಹೀಗೆ ಕಮರ್ಷಿಯಲ್ ವಿಭಾಗದ ವಿವಿಧ ಚಿತ್ರಗಳಲ್ಲಿ ಅಭಿನಯಿಸಿ ಮಿನಿಮಮ್ ಗ್ಯಾರಂಟಿ ನಟ ಎನ್ನುವ ಖ್ಯಾತಿಯ ಜೊತೆಗೆ ಅದಕ್ಕೂ ಮೊದಲು ಎಂ.ಎಸ್.ಸತ್ಯುರ ’ಬರ’, ಸೋದರ ಶಂಕರ್ ನಾಗ್ ಜೊತೆ ಹಲವು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಂಗಭೂಮಿ, ಚಿತ್ರರಂಗ, ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅನಂತ ನಾಗ್‌ರನ್ನು ಅವರ ಜನ್ಮ ದಿನದ ಸಂದರ್ಭದಲ್ಲಿ ಜನಶ್ರೀ ವಾಹಿನಿಯ ನ್ಯೂಸ್ ಚೀಫ್ ಅನಂತ ಚಿನಿವಾರ್  ಸಂದರ್ಶಿಸಿದ್ದರು. ಆ ಸಂದರ್ಶನದ ಕೆಲವು ಭಾಗಗಳನ್ನು ಬರಹದ ರೂಪದಲ್ಲಿ ಇಲ್ಲಿ ಕೊಡುತ್ತಿದ್ದೇವೆ. ಬರಹಕ್ಕಿಳಿಸಿದವರು ಜಿ. ಮಹಾಂತೇಶ್.]

ಅನಂತ ಚಿನಿವಾರ್ : ಇಷ್ಟು ವರ್ಷಗಳ ನಂತರ ಹಿಂದಕ್ಕೆ ತಿರುಗಿ ನೋಡಿದರೇ…

ಅನಂತ ನಾಗ್ : ಅಂದುಕೊಂಡದ್ದಕಿಂತ ಅಂದುಕೊಳ್ಳದಿರುವುದೇ ನನಗೆ ಜಾಸ್ತಿ ಸಿಕ್ಕಿದೆ. ಈ ಸಿನಿಮಾ, ರಾಜಕೀಯ ಪ್ಲಾನ್ ಮಾಡಿರಲಿಲ್ಲ. ಚಿಕ್ಕಂದಿನಿಂದಲೂ ತಂದೆ ತಾಯಿ ಅವರ ಮನಸ್ಥಿತಿ, ಆಶ್ರಮ. ಅಂದ್ರೇ ನನ್ನ ತಾಯಿಯವರು ದಕ್ಷಿಣ ಕನ್ನಡ, ತಂದೆ ಉತ್ತರ ಕನ್ನಡ. ತಾಯಿಯ ಊರಿನಲ್ಲೇ ಬೆಳೆದೆ. ತಾಯಿಯನ್ನೇ ತಂದೆ ನೋಡಿ ಮೆಚ್ಚಿದ್ದೂ ದಕ್ಷಿಣ ಕನ್ನಡದಲ್ಲೇ. ಆಶ್ರಮದ ವಾತಾವರಣದಲ್ಲೇ ನಾನು ಬೆಳೆದೆ. ಅನಂತ ನಾಗರಕಟ್ಟೆ ನನ್ನ ಮೂಲ ಹೆಸರು. ಆನಂದಾಶ್ರಮ ಗುರುಗಳು ನನ್ನ ತಂದೆಯನ್ನ ಆಶ್ರಮದ ಸೆಕ್ರೇಟರಿ ಮ್ಯಾನೇಜರ್ ಮಾಡಿದರು. ಹೀಗಾಗಿ ಬಾಲ್ಯದಲ್ಲೇ ಆಶ್ರಮ, ಮಠದ ವಾತಾವರಣದಲ್ಲಿ ಬೆಳೆದೆ. ಅಲ್ಲಿಯೇ ನನಗೆ ಸಂಸ್ಕಾರ ಸಿಕ್ಕಿದ್ದು. ಶಾಲೆಯಲ್ಲಿ ಚೆನ್ನಾಗಿ ಓದ್ತಾ ಇದ್ದೆ. ಹೊನ್ನಾವರ, ಸಿದ್ದಾಪುರದಲ್ಲಿ ಓದಿದ್ದೇನೆ. ಶಾಲೆಯಲ್ಲಿ ಡಿಬೇಟ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ನಾಟಕ, ಪ್ರಹಸನಗಳಲ್ಲಿ ಭಾಗವಹಿಸುತ್ತಿದ್ದೆ. ಎಲ್ಲರೊಂದಿಗೆ ನಾನು ಚೆನ್ನಾಗಿ ಬೆರೆಯುತ್ತಿದ್ದೆ. ನನ್ನ ತಂದೆ ಸ್ನೇಹಿತರು ಮುಂಬೈನಿಂದ ಬಂದು, ನನ್ನ ಪ್ರಗತಿ ನೋಡಿ ಮುಂಬೈಗೆ ಕರೆಸಿಕೊಂಡರು. ಪಟ್ಟಣ ನೋಡಿದ್ದೇ ನಾನು ಹೊನ್ನಾವರ, ಕುಮುಟಾ, ಕಾರವಾರ, ಮಂಗಳೂರೇ. ಇದನ್ನ ಬಿಟ್ಟರೇ ನಾನು ಬೇರೆ ಪಟ್ಟಣಗಳನ್ನ ನೋಡಿಯೇ ಇರಲಿಲ್ಲ. ಕನ್ನಡ ಮಾಧ್ಯಮದಲ್ಲಿ ಓದ್ತಿದ್ದ ನನಗೆ ಇಂಗ್ಲೀಷ್ ಕಂಟಕವಾಯ್ತು. ಇಂಗ್ಲೀಷ್‌ನಿಂದಾಗಿ ನನ್ನ ವ್ಯಕ್ತಿತ್ವ ಕ್ಷೀಣಿಸ್ತಾ ಹೋಯಿತು. ಕಲ್ಚರಲ್ ಶಾಕ್ ಆಯಿತು. ಹೆಚ್ಚು ಅರ್ಥ ಆಗ್ತಿರಲಿಲ್ಲ. ಮೊದಲ ಸ್ಥಾನದಲ್ಲಿ ಬರುತ್ತಿದ್ದ ನಾನು, ಕಡೆಯ ಸ್ಥಾನಕ್ಕೆ ತಳ್ಳಲ್ಪಟ್ಟೆ. ಮಠದಲ್ಲಿ ಬೆಳೆದಿದ್ದರಿಂದ ಸಂಸ್ಕೃತ ಕಷ್ಟ ಅಗ್ತಿರಲಿಲ್ಲ. ಇಂಗ್ಲೀಷ್, ಮರಾಠಿ, ಹೀಗೆ ಬೇರೆ ಬೇರೆ ಭಾಷೆಗಳನ್ನ ಕಲಿತೆ. ವಿಜ್ಞಾನ, ಭೂಗೋಳ, ಇತಿಹಾಸ ಅರ್ಥ ಆಗ್ತಿರಲಿಲ್ಲ.  9ನೇ ತರಗತಿಯಲ್ಲಿ ಫೈಲ್ ಆದೆ. ಹೊರಗಿನಿಂದ ಬಂದಿದ್ದೇನೆ ಅನ್ನುವ ಕಾರಣದಿಂದ 10ನೇ ತರಗತಿಗೆ ಕಳಿಸಿದರು. 10ನೇ ತರಗತಿಯಲ್ಲಿ ಇನ್ನೂ ಕಷ್ಟ ಆಗ್ಹೋಯ್ತು. ಇಲ್ಲಿ ನನಗೆ ಏನಾಯ್ತು… ಊರಿನಲ್ಲಿ ಚೆನ್ನಾಗಿ ಇದ್ದೆ. ಮಾನಸಿಕವಾಗಿ ಕುಗ್ಗಿ ಹೋದೆ. ಜೊತೆಗಾರರೊಂದಿಗೆ ಬೆರೆಯಲು ಕಷ್ಟ ಆಗ್ತಿತ್ತು. ಒಂಥರಾ ಶಾಕ್ ಆಯ್ತು. ಮೊದಲ 6 ತಿಂಗಳು ಮೌನವಾಗಿದ್ದೆ. ನಂತ್ರ ಸ್ಕೂಲು ಬಂಕ್ ಮಾಡ್ತಿದ್ದೆ. ಹೊರಗೆ ಹೋಗ್ತಿದ್ದೆ. ಮೆಟ್ರೋ ಥೇಟರ್ನಲ್ಲಿ ನನ್ನ ಚಿಕ್ಕಪ್ಪ ಅಕೌಂಟೆಂಟ್ ಆಗಿದ್ದ್ರು. ಅವ್ರನ್ನ ನೋಡ್ಲಿಕ್ಕೆ ಹೋಗ್ತಿದ್ದೆ. ಪ್ರತಿ ದಿನವೂ ಸಿನಿಮಾ ನೋಡ್ಲಿಕ್ಕೆ ಶುರು ಮಾಡಿದ್ದೇ ಆವಾಗ. ಇಂಗ್ಲೀಷ್ ಸಿನಿಮಾ ನೋಡಿದ್ದೇ ಹೆಚ್ಚು. 6 ತಿಂಗಳು ಹಾಗೇ ನಡೀತು. ಆ ಮೇಲೆ ಸಿಕ್ಕಾಕ್ಕೊಂಡೆ. ಇಂಗ್ಲೀಷ್‌ನಲ್ಲಿ ಬರೀಲಿಕ್ಕೆ ಬರಲ್ಲ…ನಾನು ಫೇಲ್  ಅಗಿದೆ. ಕ್ಲಾಸ್‌ನಲ್ಲಿ ಕೂರಲಿಕ್ಕೆ ನನಗೆ ನಾಚಿಕೆ ಆಗಿದೆ ಅಂತ ಹೇಳಿದೆ. ಮತ್ತೆ 10ನೇ ಕ್ಲಾಸನ್ನು ಹಾಗೂ ಹೀಗೂ ಪಾಸ್ ಮಾಡಿದೆ. ನಂತರ ಆರ್ಟ್ಸ್, ಕಾಮರ್ಸ್ ಬಿಟ್ಟು ಸೈನ್ಸ್‌ಗೆ ಹೋದೆ. ಆ ಸಮಯದಲ್ಲಿ ನನಗೆ ನಿಗೂಡ್ ಅನ್ನೋರ ಪರಿಚಯ ಆಯ್ತು. ನಾಟಕದಲ್ಲಿ ಹೆಸರು ಮಾಡಿದವರು ಅವರು. ಕೊಂಕಣಿ ಭಾಷೆಯಲ್ಲಿ ನಾಟಕ, ಚೈತನ್ಯ ಮಹಾಪ್ರಭುವಿನ ಜೀವನ ಕುರಿತ ನಾಟಕವದು. ನಾಟಕ ಮಾಡ್ತಾ ಮಾಡ್ತಾ ನನ್ನಲ್ಲಿ ಉಡುಗಿ ಹೋಗಿದ್ದ ಚೈತನ್ಯ ಬರಲಿಕ್ಕೆ ಶುರು ಆಯ್ತು. ಜನರ ಮೆಚ್ಚುಗೆ ಸಿಕ್ತು. ಕನ್ನಡ ಕೊಂಕಣಿ ನಾಟಕಗಳಲ್ಲಿ ಪಾತ್ರ ಮಾಡ್ತಾ ಹೋದೆ. ಸ್ಟೇಜ್‌ನಲ್ಲಿ ನಿಂತು ನಾಟಕ ಆಡೋದು ಇದ್ಯಲ್ಲ, ಅದು ಒಂಥರಾ ಸವಾಲು. ರಿಹರ್ಸಲ್‌ನಲ್ಲಿ ಸರಿ ಬರ್ತಿತ್ತು. ಸ್ಟೇಜ್‌ನಲ್ಲಿ ಒಂದೊಂದ್ಸಲ ಕಷ್ಟ ಆಗ್ತಿತ್ತು. ನಟ ಆಗ್ತಿನಿ ಅಂತ ನಾನು ಯಾವ ಕಾಲ್ದಲ್ಲೂ ಅಂದ್ಕೊಂಡಿರಲಿಲ್ಲ. ಕನ್ನಡಿಯಲ್ಲಿ ಮುಖ ನೋಡ್ಕೊಂಡಿದ್ಯೋ ಹ್ಯಂಗೇ, ನಾಟಕ ಗೀಟಕಾ ಸರಿ ಊಟಕ್ಕೇನು ಅಂತ ಕೆಲವರು ಕೇಳ್ಲಿಕ್ಕೆ ಶುರು ಮಾಡಿದರು. ಕೊಂಕಣಿ, ಕನ್ನಡ ನಾಟಕಗಳ ಮೂಲಕ ಬಂದೋನು. ಅಮೋಲ್ ಪಾಲೇಕರ್ ಪರಿಚಯ ಆಯಿತು. ಪಾಲೇಕರ್ ಸತ್ಯದೇವ್ ದುಬೆ ಅವರನ್ನ ಪರಿಚಿಯಿಸಿದರು. ಭೋಪಾಲ್‌ನಿಂದ  ಬಂದೋರು ಅವರು. ಸಂಪ್ರದಾಯಸ್ಥ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ ನಾನು, ಆಧುನಿಕ ನಾಟಕಗಳಲ್ಲೂ ಪಾತ್ರ ಮಾಡ್ಲಿಕ್ಕೆ ಶುರು ಮಾಡಿದರು. ಆಗ ಸಹಾಯಕ್ಕೆ ಬಂದಿದ್ದು ಸತ್ಯದೇವ್ ದುಬೆ. ಬಾಡಿ ಲಾಂಗ್ವೇಜ್ ಕಲಿಸಿದ್ದೇ ಅವರು. ರಿಹರ್ಸಲ್‌ನಲ್ಲಿ ಸಹಾಯ ಮಾಡಿದರು. ಸ್ಮಾರ್ಟ್ ನಡಿಗೆ ಕಲಿಸಿದ್ದೂ ದುಬೆ ಅವರು. ಕೊಂಕಣಿ, ಕನ್ನಡ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ ನಾನು, ಮರಾಠಿ, ಹಿಂದಿ ಭಾಷೆಯ ರಂಗ ಪ್ರಯೋಗಗಳಲ್ಲೂ ಕಾಣಿಸಿಕೊಂಡೆ. ಅಷ್ಟರಲ್ಲಿ ಸೈನ್ಸ್ ಮರೆತು ಹೋಗಿತ್ತು. ಇದೇ ನಾಟಕಗಳಲ್ಲಿ ಮೆಚ್ಚುಗೆ ಸಿಕ್ತಿತ್ತು. ನನ್ನನ್ನ ನೋಡಿ, ಯೂನಿಯನ್ ಬ್ಯಾಂಕ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ನನಗೆ ಕೆಲ್ಸ ಕೊಡಿಸಿದರು. ನನ್ನ ತಂದೆ ಮೇಲಿನ ನನ್ನ ಭಾರ ಕಡಿಮೆ ಆಗಿದ್ದೇ ಆಗ. ಅಷ್ಟೊತ್ತಿಗೆ ನನ್ನ ತಮ್ಮ ಶಂಕರ ಕೂಡ ನನ್ನ ಜೊತೆ ಸೇರಿಕೊಂಡೆ. ನಾಟಕಗಳಿಂದ ನನಗೆ ನೆರವು ಸಿಕ್ತಿತ್ತು. ಸತ್ಯದೇವ್ ದುಬೆ ಜತೆ ಕೆಲ್ಸ ಮಾಡ್ತಿದ್ದಾಗ ವೆಂಕಟರಾವ್ ಅನ್ನೋರು ಒಂದು ಪಾತ್ರಕ್ಕಾಗಿ ಹುಡುಕ್ತಾ ಇದ್ದ್ರು. ಕನ್ನಡದಲ್ಲಿ. ವಂಶವೃಕ್ಷಕ್ಕೆ. ನನ್ನನ್ನೂ ಕರೆಸಿದರು. ವೈ.ಎನ್.ಕೃಷ್ಣಮೂರ್ತಿ, ಜಿ.ವಿ.ಅಯ್ಯರ್, ಗಿರೀಶ್ ಕಾರ್ನಾಡ್ ಅವರ ಮೂಲಕ ಮೊದಲ ಚಿತ್ರ ಸಂಕಲ್ಪದಲ್ಲಿ ಪಾತ್ರ ಮಾಡಿದೆ. ನಂತ್ರ ಮುಂಬೈಗೆ ಹೋದೆ. ಸತ್ಯದೇವ್ ದುಬೆ ಅವರ ಎಲ್ಲಾ ನಾಟಕಗಳಲ್ಲಿ ರಿಹರ್ಸಲ್ ಮಾಡ್ತಿದ್ದೆ. ಒಟ್ಟು 5 ನಾಟಕಗಳ ರಿಹರ್ಸಲ್‌ನಲ್ಲಿ ಭಾಗವಹಿಸಿದ್ದೆ. ನಾಟಕಗಳಲ್ಲಿ ನೆಲೆ ನಿಲ್ಲಬೇಕು ಅಂದ್ಕೊಂಡಾಗಲೇ ಸಿನಿಮಾ ಕಡೆ ವಾಲಿದೆ. ಇದ್ರ ಬಗ್ಗೆ ದುಬೆ ಅವರಿಗೆ ನನ್ನ ಮೇಲೆ ಸ್ವಲ್ಪ ಸಿಟ್ಟಿತ್ತು. ಪುನಃ ಸಿನಿಮಾ, ನಂತ್ರ ನಾಟಕ, ಹೀಗೆ ನಡೀತಾ ಇತ್ತು. ನಂತರ ಸೈನ್ಸ್ ಬದಲಿಸಿ ಕಾಮರ್ಸ್‌ಗೆ ಸೇರಿಕೊಂಡೆ. ಕಾಮರ್ಸ್ ಪೂರೈಸಿದರೆ ಬ್ಯಾಂಕ್ ಕೆಲ್ಸಕ್ಕೆ ಅನ್ಕೂಲ ಆಗುತ್ತೆ ಅಂತ. ಸಂಜೆ ಪುನಃ ನಾಟಕಗಳಲ್ಲಿ ಪಾತ್ರ. ಇದು ದಿನನಿತ್ಯದ ದಿನಚರಿಯಾಯ್ತು. ಶಂಕರ ಆಗ ಸ್ಕೂಲ್ಗೆ ಹೋಗ್ತಿದ್ದ. ನನಗೂ ನಿನಗೂ ಯೋಗಾಯೋಗ, ಋಣ ಇಲ್ಲವೇನೋ, ನಾನು ಮಾಡ್ತಿರೋ ನಾಟಕಗಳಲ್ಲಿ ನೀನು ಪಾತ್ರ ಮಾಡ್ಲಿಕ್ಕೆ ಆಗ್ತಿಲ್ಲ, ನೋಡು ಶಾಂತರಾಂ ಫಿಲ್ಮ್ ಮಾಡ್ತಿದಾರೆ, ನೋಡು ಅಲ್ಲಿಗೆ ಹೋಗು ಅಂತ ದುಬೆ ಅಂದ್ರು. ಆಗಿನ್ನೂ ಸಂಕಲ್ಪ ಚಿತ್ರ ರಿಲೀಸ್ ಆಗಿರಲಿಲ್ಲ. ಇಲ್ಲಿ ಬಂದಾಗ ಶಾಂತರಾಂ ಜತೆ ಕೆಲ್ಸ ಮಾಡಿದೆ. ಹೀಗೆ ನಾನು ಯಾವ್ದನ್ನೂ ಅಂದ್ಕೊಂಡಂಗೆ ಆಗಿಲ್ಲ ಅನ್ನೋದಿಕ್ಕೆ ಇವೇ ಸಾಕು. ಹಳ್ಳಿಯಲ್ಲಿ ಎಷ್ಟು ಅಸಹಾಯಕನಾಗಿದ್ದೆ. ಕೆಳ ಮಧ್ಯಮ ವರ್ಗದಿಂದ ಬಂದಿದ್ದರೂ ಊಟಕ್ಕೇನೂ ತೊಂದರೆ ಇರಲಿಲ್ಲ. ಹಿಂದಿ, ಮರಾಠಿ, ಕನ್ನಡ, ಇಂಗ್ಲೀಷ್ ನಾಟಕಗಳಲ್ಲಿ ಪಾತ್ರ ಮಾಡ್ದೆ. ನನ್ನ ವೈಯಕ್ತಿಕವಾಗಿ ಕ್ರೈಸಿಸ್‌ನಲ್ಲಿ ಬೆಳೆದು ಬಂದೋನು.

ಅನಂತ ಚಿನಿವಾರ್ : ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ವಿಚಾರದ ಬಗ್ಗೆ, ಮಾಧ್ಯಮ ತೊಡಕಾಗಲ್ವೇ? ಇವತ್ತಿನ ದಿನದಲ್ಲಿ ಕನ್ನಡ ಓದ್ಕೊಂಡೇ ಇಂಗ್ಲೀಷ್ ಕಲಿಯುವುದಕ್ಕಾಗಲ್ವಾ?

ಅನಂತ ನಾಗ್ : ಇದರ ಬಗ್ಗೆ ಇವತ್ತಿಗೂ ಚರ್ಚೆ ನಡೀತಾ ಇದೆ. ನನಗೆ ಅನೇಕರು ಕೇಳ್ತಾರೆ. ಕನ್ನಡ ಕಲಿತ್ಕೊಂಡು ಹಿಂದಿಯಲ್ಲಿ ಪಾತ್ರ ಮಾಡಿರೋ ಬಗ್ಗೆ. ಚಿಕ್ಕಂದಿನ ವಯಸ್ಸಿನಲ್ಲಿ ಮಕ್ಕಳು ಎಲ್ಲ ಬಹು ಭಾಷೆಗಳನ್ನೂ ಕಲಿಯುವ ಸಾಮರ್ಥ್ಯ ಇರುತ್ತೆ. ನನಗೇನೇ ಮರಾಠಿ, ಹಿಂದಿ, ಗುಜರಾತಿ, ಇಂಗ್ಲೀಷ್ ಕಲೀಲಿಕ್ಕೆ ಆಯ್ತು. ದುಬೆ ಅವರು ಇದಕ್ಕೆಲ್ಲ ನನಗೆ ಸಹಾಯ ಮಾಡಿದರು. ಹಳೆಯ ಪುಸ್ತಕಗಳನ್ನ ಕೊಟ್ಟು ಸಹಾಯ ಮಾಡಿದರು. ಭಾಷೆ ಕಲೀಲಿಕ್ಕೆ ಪರಿಶ್ರಮ ಹಾಕಿದೀನಿ. ಕನ್ನಡ ಕಲಿಯೋ ಜತೇಲೇ ಇಂಗ್ಲೀಷ್ ಕಲಿಸಬೇಕು. ಇಂಗ್ಲೀಷ್ ಅಂತರ್ರಾರಾಷ್ಟ್ರೀಯ ಭಾಷೆ, ನನ್ನ ಮಗಳನ್ನ ಕಾನ್ವೆಂಟ್ಗೆ ಕಳಿಸಿದೀನಿ. ಆದರೂ ಕನ್ನಡವನ್ನ ತುಂಬಾ ಚೆನ್ನಾಗಿ ಮಾತಾಡ್ತಾಳೆ. ಕನ್ನಡವೂ ಇದ್ದೇ ಇರುತ್ತೆ, ಇಂಗ್ಲೀಷ್ ಬೇಕು. ನನ್ನ ಹೆಂಡತಿ ಕನ್ನಡದವಳಲ್ಲ. ಆದರೂ ಕನ್ನಡದಲ್ಲೂ ಚೆನ್ನಾಗಿ ಮಾತಾಡ್ತಾಳೆ. ನನ್ನ ಮಗಳಂತೂ ತುಂಬಾ ಬೇಗ ಕನ್ನಡ ಮತ್ತು ಇಂಗ್ಲೀಷ್ ಕಲಿತಳು. ನಾನು ಇಂಗ್ಲೀಷ್‌ನಲ್ಲಿ ಟೈಪಿಂಗ್ ಕಲಿತಿದ್ದೆ, ಅದೀಗ ಕಂಪ್ಯೂಟರ್ ಕನ್ನಡಕ್ಕೂ ಸಹಾಯ ಆಗಿದೆ. ಇದು ಹೆಚ್ಚುವರಿ ಜ್ಞಾನ. ಇಂಗ್ಲೀಷ್ ಕಲಿತ ಕೂಡಲೇ ಕನ್ನಡ ಅಭಿಮಾನ ಇಲ್ಲ ಅಂತ ಹೇಳೋದಿಕ್ಕೆ ಬರೋದಿಲ್ಲ. ಎಲ್ಲಾ ದಿನಪತ್ರಿಕೆಗಳಲ್ಲಿ ಕನ್ನಡವೇ ನಂಬರ್ ಒನ್ ಆಗಿತ್ತು. ಈಗ ಇಂಗ್ಲೀಷ್ ಪೇಪರ್‌ಗಳೂ ಆ ನಿಟ್ಟಿನಲ್ಲಿ ಸಾಗ್ತಿದೆ.

ಅನಂತ ಚಿನಿವಾರ್ : ನಟ ಆಗಿದ್ದೀರಿ. ಬಹಳ ದಿನದಿಂದ ಕೇಳ್ಬೇಕು ಅಂದ್ಕೊಂಡಿದ್ದೆ, ವೈವಿಧ್ಯಮಯ ನಟನೆಯಲ್ಲಿ ಎಷ್ಟನ್ನ ಒಪ್ಪಿಕೊಂಡಿದ್ದೀರಿ? ಸಂತೋಷದಿಂದ ಒಪ್ಪಿಕೊಂಡಿದ್ದೀರಾ? ಸಂಖ್ಯೆ ದೃಷ್ಟಿಯಿಂದಲ್ಲ.

ಅನಂತ ನಾಗ್ : ಮೈನಾರಿಟಿ ಆಫ್ ರೋಲ್ಗಳು ನನ್ನ ಸಂತೋಷದಿಂದ ಕೂಡಿದಾವೆ. ನಾಟಕ ಮಾಡ್ದೇ ಇದ್ದ್ರೂ ರಿಹರ್ಸಲ್‌ನಲ್ಲಿ ಭಾಗವಹಿಸಿದ್ದೀನಿ. ಈ ಟೈಪ್ ರೋಲ್ ಇರಬೇಕು, ಅಂಥಾ ಪಾತ್ರ ಮಾಡ್ಬೇಕು ಅನ್ನೋ ಥರ ನಾನು ಬಯಸೋ ಥರ ಪಾತ್ರ ಸಿಕ್ಕೋದಿಲ್ಲ. ಆ ಮೇಲೆ 8-10 ಕಲಾತ್ಮಕ ಚಿತ್ರಗಳಲ್ಲೇ ಅಭಿನಯಿಸಿದ್ದೆ.  ಕಲಾತ್ಮಕ ಚಿತ್ರಗಳಿಂದಲೇ ನಾನು ಬಂದೋನು. ಹೀರೋ ಆಗ್ಬಿಟ್ಟೆ. ಆಕ್ಟರ್ ಆಗ್ಬಿಟ್ಟೆ ಭಾವನೆಯಿಂದ ಕೆಲ್ಸವನ್ನೂ ಬಿಟ್ಟೆ. ಯೂನಿಯನ್ ಬ್ಯಾಂಕ್ನೋರು ಹೇಳಿದ್ದೇನಂದ್ರೇ, ಅಲ್ಲಿ ಸರಿಯಾಗ್ಲಿಲ್ಲ, ಫೇಲ್ ಆದ್ದ್ರೇ ವಾಪಸ್ ಬ್ಯಾಂಕ್‌ಗೆ ಬಾ ಅಂತ ಅಂದ್ರು. ಆದ್ರೂ ರಾಜೀನಾಮೆ ಕೊಟ್ಟೆ.  ನಾನು ಕೆಲ್ಸ ಬಿಟ್ಮೇಲೆ ಕಲಾತ್ಮಕ ಚಿತ್ರಗಳಲ್ಲಿ ದುಡ್ಡು ಆಗ್ಲಿಲ್ಲ. ಹೀಗಾಗಿ ಕಮರ್ಷಿಯಲ್ ಚಿತ್ರಗಳಿಗೆ ಹೋದೆ. ವೃತ್ತಿ ಕರೆದ್ಮೇಲೆ ಲಕ್ಷ, 2 ಲಕ್ಷ ಅದರೂ ಬರಬೇಕು.

ಅನಂತ ಚಿನಿವಾರ್ : ಏನಾಯ್ತು ಅಂದ್ರೇ, ನಿಮ್ಮ ಕೆರೀಯರ್ ಪೀಕ್‌ನಲ್ಲಿದ್ದಾಗ ಚಂದನದ ಗೊಂಬೆ, ಬೆಂಕಿಯ ಬಲೆ, ಹೀಗೆ….

ಅನಂತ ನಾಗ್ : ಚಂದನದಗೊಂಬೆ, ಬೆಂಕಿಯ ಬಲೆಯಲ್ಲಿ ಗ್ರೇಟ್ ವ್ಯಾಲ್ಯು ಇತ್ತು. ಆ ಕಾಲ ಹಾಗಿತ್ತು.

ಅನಂತ ಚಿನಿವಾರ್ : ಕರೆಕ್ಟ್, ಕರೆಕ್ಟ್‌. ಒಬ್ಬ ಆರ್ಟಿಸ್ಟ್ ಆಗಿ?

ಅನಂತ ನಾಗ್ : ವಿಶೇಷವಾಗಿ ದೊರೆ ಭಗವಾನ್. ಭಗವಾನ್ ಅವ್ರು ವೆಂಕಟರಾವ್, ಸತ್ಯದೇವ್ ದುಬೆ ಥರ. ನನ್ನನ್ನೂ ಗೈಡ್ ಮಾಡಿದ್ರು. ಓಲ್ಡ್ ಮಾಡಲ್ ಥರ ಆಲ್ಲ. ಮಾಡ್ರನ್ ರೋಲ್. ಡಿಫರೆಂಟ್ ಪಾತ್ರಗಳನ್ನ ಕೊಟ್ಟರು. ಮಾರ್ಗದರ್ಶನ ಮಾಡಿದರು. ಅಟ್ ದ ಸೇಮ್ ಟೈಮ್, ಬೇರೆ ನಿರ್ದೇಶಕರು, ನಿರ್ಮಾಪಕರು, ಜನರು ನಿಮ್ಮನ್ನು ಈ ರೀತಿ ಇಷ್ಟ ಪಡ್ತಾರೆ ಅಂತ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದೆ. ನನಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾಯ್ತು.

ಅನಂತ ಚಿನಿವಾರ್ : ಎಕ್ಸಾಂಪಲ್‌ಗಳು ಹೇಳ್ಬೋದಾ? ನೀವು ಇಷ್ಟಪಡೋ ಪಾತ್ರಗಳು, ಮೇರಾ ನಾಮ್ ಜೋಕರ್ ಥರ ಪಾತ್ರವನ್ನ ಇಷ್ಟು ವರ್ಷಗಳಾದ್ರೂ ಇವತ್ತಿಗೂ ಒಪ್ಕೋಬೋದಲ್ಲಾ…

ಅನಂತ ನಾಗ್ : ಓಹೋ ಅಮೇಜಿಂಗ್. ಹಂಸಗೀತೆ, ಅನುರೂಪ, ಕನ್ನೇಶ್ವರರಾಮ, ಸಂಕಲ್ಪ, ಶ್ಯಾಮ್ ಬೆನೆಗಲ್  ಜೊತೆ ಅಂಕುರಾ, ಕಲಿಯುಗ್, ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ ಆಯ್ತು.

ಅನಂತ ಚಿನಿವಾರ್ : ಡ್ಯಾನ್ಸ್‌ಗೆ ನೀವು ಅನ್‌ಕಂಫರ್ಟಬಲ್…

ಅನಂತ ನಾಗ್ : ನಾನು ಹಳ್ಳಿಯಿಂದ ಬಂದೋನು. ಡ್ಯಾನ್ಸ್ ಅಷ್ಟಿರಲಿಲ್ಲ. ಬಹುತೇಕ ಡಾನ್ಸ್‌ಗಳಲ್ಲಿ ಸಾಹಿತ್ಯ ಸಂಗೀತ ಚೆನ್ನಾಗಿತ್ತು. ಟೀವಿಯಲ್ಲಿ ನನ್ನದೇ ಹಾಡುಗಳು ಪ್ರಸಾರ ಅಗ್ತಾ ಇರೋದನ್ನ ನೋಡಿದ್ರೇ ನನ್ನನ್ನ ಜನ ಹ್ಯಂಗೇ ಅಕ್ಸೆಪ್ಟ್ ಮಾಡಿದ್ರು ಅಂತ ಅನ್ನಿಸಿದ್ದೂ ಇದೆ.

ಅನಂತ ಚಿನಿವಾರ್ : 1960, 70, 80ರಲ್ಲಿ ಪ್ರಯೋಗಶೀಲ ಸಿನಿಮಾಗಳು ಬಂದಿದಾವೆ. ನಂತರ ಶಂಕರ್ ನಾಗ್ ಸೇರಿದರು. ಕಲಾತ್ಮಕ ಚಿತ್ರಗಳು ಬರ್ತಾ ಬರ್ತಾ ಕಮರ್ಷಿಯಲ್ ಚಿತ್ರಗಳ ಮಧ್ಯೆ ಅಂತರ ಹೆಚ್ಚಾಗ್ತಾ ಹೋಯ್ತು. ಈ ಸಂದರ್ಭದಲ್ಲಿ ಶಂಕರರನ್ನ ಹೇಗೆ ನೆನಪು ಮಾಡ್ಕೋತೀರಾ?

ಅನಂತ ನಾಗ್ : ಹೌದು, ಮಿಸ್ ಮಾಡ್ಕೊಳ್ತಿದೀನಿ. ಮಿಸ್ಸಿಂಗ್ ಮೋರ್ ಆಸ್ ಎ ಬ್ರದರ್. 6 ವರ್ಷಗಳ ಕಾಲ ನಾನು ಜತೇಲಿ ಇದ್ದೆ. ಬೆಳೆದಿದ್ದು ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್, ಸತ್ಯು… ಇನ್ ಫ್ಯಾಕ್ಟ್ ಸತ್ಯು ಜತೆ ಬರ ಮಾಡ್ದೆ. ಆ ಮೇಲೆ ಬರ ಬರ್ತಾ ಆರ್ಟ್ ಫಿಲ್ಮ್ ಕಡ್ಮೆ ಆಯ್ತು. ಶಂಕರನ ಒಂದಾನೊಂದು ಕಾಲದಲ್ಲಿ, ಬಾಕಿ ಕಮರ್ಷಿಯಲ್ ಆಯ್ತು. ಆಗ್ಲೂ ಕಮರ್ಷಿಯಲ್ ಫಿಲ್ಮ್ ಮಾಡಿದ್ವಿ. ಮಿಂಚಿನ ಓಟ, ಆಕ್ಸಿಡೆಂಟ್. ಸ್ಕ್ರಿಪ್ಟ್ ಚೆನ್ನಾಗೇ ಇತ್ತು. ಆಮೇಲೆ ಲಾಸ್ ಆಯ್ತು, ಶಂಕರ್ ಡೈರೆಕ್ಟ್ ಮಾಡಿ, ನಾನು ಆಕ್ಟ್ ಮಾಡಿದ್ರೂ. ಆ ಸಂದರ್ಭದಲ್ಲಿ ಮಾಲ್ಗುಡಿ ಡೇಸ್ ಸ್ಕ್ರಿಪ್ಟ್ ಬಂತು. ಶಂಕರ್ ವಾಸ್ ಹೆಸಿಟಂಟ್. ದಿಸ್ ಈಸ್ ಯುವರ್ ಮೀಡಿಯಂ, ಬಿಕಾಸ್ ನಾವು ಆರ್ಟ್ ಫಿಲ್ಮ್ ಕಡೆಯಿಂದ ಬಂದೋರು. ಮೆಂಟಲೀ ಒಪ್ಪಿತವಾಗಿರೋದು ಇದು. ಜನ ಏನನ್ನ ಬಯಸ್ತಾರೋ ಅದನ್ನ ಅವ್ರು ಮಾಡ್ತಾರೆ. ನಾವೇ ಹೇಳಿದ್ದು ಓಡಬೇಕು ಅನ್ನೋದು ನಿಜ ಆದ್ರೂ ನಾವು ಮಾಡಿದ್ದೂ ಓಡ್ಲಿಲ್ವಾ. ಶಂಕರ್ ವಾಸ್ ಎ ಯಂಗರ್ ಜನರೇಷನ್. ನಾವೇನಿದ್ದ್ರೂ ಓಲ್ಡ್ ಜನರೇಷನ್. ಶ್ಯಾಮ್ ಬೆನೆಗಲ್, ಸತ್ಯು, ದುಬೇ….

ಅನಂತ ಚಿನಿವಾರ್ : ಕಲಾತ್ಮಕ ಚಿತ್ರಗಳ ಬಗ್ಗೆ ಯಾಕೆ ಮಾತಾಡ್ತೀದಿನಿ ಅಂದ್ರೇ, ಬುದ್ದಿಜೀವಿ ಅನ್ನೋ ಪದಕ್ಕೆ ಇನ್ನೂ ವ್ಯಾಪಕ ಅರ್ಥ ಬಂದಿರಲಿಲ್ಲ. ಬುದ್ದಿಜೀವಿ ನಟ….

ಅನಂತ ನಾಗ್ : ದಟ್ ಇಸ್ ಥ್ಯಾಂಕ್ಸ್ ಟು ಲಂಕೇಶ್.

ಅನಂತ ಚಿನಿವಾರ್ : ನಾಸಿರುದ್ದೀನ್ ಶಾ ಥರದೋರು ಥೇಟರ್ ಕಡೆ ವಾಲ್ತಿದಾರೆ. ಆ ಥರ ಥೇಟರ್ ಕಡೆ ನೀವು ವಾಪಸ್?

ಅನಂತ ನಾಗ್ : ನಾಸಿರುದ್ದೀನ್ ಶಾ ಎನ್ಎಸ್‍ಡಿಯಲ್ಲಿ ಕಲಿತೋನು. ನಟನಾಗ್ಬೇಕು ಅಂತ ಹಂಬಲದಿಂದ ಬಂದೋನು ಅವ್ನು. ನಾನು ನಟನಾಗಬೇಕು ಅಂತ ಬಂದಿಲ್ಲ. ಅದ್ರೂ ನಾಟಕದಿಂದ ಬಂದೋನಾದ್ರೂ ಶ್ರೀನಿವಾಸಪ್ರಭು, ಶಂಕರ್ ಜತೆ ಒಂದಷ್ಟು ನಾಟಕಗಳನ್ನ ಆಡಿದ್ದೀನಿ. ಜೆ.ಪಿ. ಆಂದೋಲನ ಮೂಲಕ ರಾಜಕೀಯಕ್ಕೆ ಬಂದೆ. 1967ನೇ ಇಸವಿ. ಅಲ್ಲಿ ಬೇರೆ ನನಗೆ ಡೈಮನ್ಷನ್ ಆಫ್ ಲೈಫೇ ಬೇರೆ ಇತ್ತು. ಸಿನಿಮಾ ವೈಡೇಸ್ಟ್ ಮೀಡಿಯಾ. ಕ್ಯಾಂಪೇನ್ಗೆ ಹೋದಾಗ ಸಾವಿರ, ಲಕ್ಷ, ಹೀಗೆ ಜನ ಸೇರ್ತಾ ಇದ್ರು. ಇದೆಲ್ಲಾ ನಟ ಆಗಿದ್ದ್ರಿಂದ.

ಅನಂತ ಚಿನಿವಾರ್ : ಥೇಟರ್ ಆಫ್ ಪೊಲಿಟಿಕ್ಸ್, ನಿಮ್ಮನ್ನ ಸೆಳ್ಕೊಂಡು ಬಂತು.

ಅನಂತ ನಾಗ್ : ಈ ಪೊಲಿಟಿಕಲ್ ಥೇಟರ್ ಇದ್ಯಲ್ಲಾ, ರಿಯಲ್ ಲೈಫ್ ಪೊಲಿಟಿಕಲ್ ಥೇಟರ್, ಅನೇಕರು ಹೇಳ್ತಾರೆ, ಹಂಸಗೀತೆ ಎಷ್ಟು ಚೆನ್ನಾಗಿತ್ತು ಅಂತಾರೆ. ಟೈಮ್ ಈಸ್ ಫಾಸ್ಟ್. ಸಿಮಿಲರ್ಲಿ, ಯಂಗರ್ ಜನರೇಷನ್ ಕೇಳೋದೇ ಬೇರೆ. ನಸೀರುದ್ದೀನ್ ಶಾ ಈಸ್ ಫೈನ್. ಸಿನಿಮಾ ಆಕ್ಟರ್ ಆಗಿ ಇನ್ನೂ ನಟಿಸಬೇಕು ಅನ್ನೋ ಒಂದು ಫೈಯರ್ ಇನ್ ದಿ… ಹೊಟ್ಟೇಲಿ ಈಗ ಬೆಂಕಿಯೇ ಇಲ್ಲ.

ಅನಂತ ಚಿನಿವಾರ್ : ಆಸಕ್ತಿ ಕಳ್ಕೊಂಡಿದೀರಾ… ರಾಜಕೀಯದಲ್ಲೂ ಆಸಕ್ತಿ ಕಳ್ಕೊಂಡೀದೀರಾ?

ಅನಂತ ನಾಗ್ : ಅದೇ ಎಗೇನ್, ಸಿನಿಮಾ ನಟನಾಗಿ ಬರಬೇಕು ಅಂತ ಹ್ಯಾಗ್ ಅಂದ್ಕೊಂಡಿಲ್ವೋ, ಹಾಗೇನೇ ಪೊಲಿಟಿಕಲೀ ಕೂಡ. ಜೆಪಿ ಮೂವ್‌ಮೆಂಟ್, ಕಾಂಗ್ರೆಸ್ ವಿರೋಧಿ ಅಲೆ ಇತ್ತು. ಆವಾಗ ಜನತಾ ಪಾರ್ಟಿ, ಲಂಕೇಶ್, ಖಾದ್ರಿ ಶಾಮಣ್ಣ, ಪಟೇಲ್ ಜತೇಲಿ, ಅಲ್ಲಿಂದ ಚೇಂಜ್ ಮಾಡ್ಲಿಲ್ಲ. ನಾನು, ಶಂಕರ್ ಜತೆ ಸೇರ್ಕೋಂಡು 84-85ರಲ್ಲಿ ಕ್ಯಾಂಪೇನ್ ಮಾಡಿದ್ವಿ. ಆಗ ಏನಾದ್ರೂ ಕೇಳಿ ಅಂದ್ರು ಜೀವರಾಜ್ ಆಳ್ವಾ ಅವ್ರು. ಆದ್ರೆ ನಮ್ಗೇ ಯಾವ ಆಸೆನೂ ಇರಲಿಲ್ಲ. ಎಮ್ಮೆಲ್ಸಿ ಕೊಡೋದಾದ್ರೇ ತಗೋತೀನಿ ಅಂದೆ. ಅದು ಆಗ. ಆದ್ರೆ ನಮ್ ತಂದೆಗೆ ಹುಷಾರಿರಲಿಲ್ಲ. ಆಗ ಶಂಕರ್‌ಗೆ ಕೇಳಿದೆ. ಅವ್ನು ಒಪ್ಪಲಿಲ್ಲ. ನಾವು 89ರಲ್ಲಿ ಅಧಿಕಾರ ಕಳ್ಕೊಂಡ್ವಿ. ಆವಾಗ ನಾನು ಎಮ್‌ಎಲ್‌ಸಿ. 94ರಲ್ಲಿ ಎಲೆಕ್ಷನ್ಗೆ ಹೋದಾಗ ನನಗೆ ಭಾಷಣ ಕೊಟ್ಟರು. ಆಗ ನಾನು ವೀರಾವೇಶದಿಂದ ಭಾಷಣ ಮಾಡ್ದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ, ದೇಶದಲ್ಲಿ ಅನ್ಯಾಯ ನಡೀತಿದೆ, ಅಂತ. ನಂತ್ರ ಪಟೇಲ್ರು ಜತೆ ಕಾರಿನಲ್ಲಿ ಹೋಗೋವಾಗ ಪಟೇಲ್ರು ಕೇಳಿದ್ರು, ನಡೀತಿರೋದೇ ರಾಜಕಾರಣ ಅಧಿಕಾರಕ್ಕಾಗಿ, ಕೆಟ್ಟ ಹೆಸ್ರು ಬರುತ್ತೆ ಅಂತ ಅಧಿಕಾರ ಬೇಡ ಅಂತಲ್ಲ, ಅಧಿಕಾರಕ್ಕಾಗಿ ಬೇಡ ಅನ್ನೋದಾದ್ರೇ ರಾಜಕಾರಣ ಯಾಕ್ ಮಾಡ್ತೀರಿ ಅಂತ ಅಂದ್ರು. ಈ ಮಧ್ಯಮ ವರ್ಗದೋರು ಹೀಗೇ, ಹಿಪೋಕ್ರಸಿ, ಅಂತ ಹೇಳಿದರು. ಪಟೇಲ್ರು ಮುಖ್ಯಮಂತ್ರಿ ಆದ್ಮೇಲೆ ನನಗೆ ಮಂತ್ರಿ ಪಟ್ಟಾನೂ ಸಿಕ್ತು. ಮಿನಿಸ್ಟರ್  ಅಗ್ಬೇಕು, ಎಮ್ಮೆಲ್ಲೆ ಆಗ್ಬೇಕು ಅಂತ ಬಂದಿಲ್ಲ, ಆದ್ರೂ ನಗರಾಭಿವೃದ್ಧಿ ಖಾತೆಯ ದೊಡ್ಡ ಜವಾಬ್ದಾರಿ ಕೊಟ್ಟ್ರು. ಆದ್ರೆ ನಾನ್ ಕೇಳಿದ್ದೇನಂದ್ರೇ, ಈ ಖಾತೆ ಮುಖ್ಯಮಂತ್ರಿ ಖಾತೆಗೆ ಹೊಂದ್ಕೊಂಡಿರಬೇಕು ಅಂತ ಕೇಳ್ದೆ. ಅದಕ್ಕವರು ನಕ್ಕರು.

ಅನಂತ ಚಿನಿವಾರ್ : ನೀವಿದ್ದ ಪೋರ್ಟೋಫೊಲೀಯೋ ಬಗ್ಗೆ ಹೇಳೋದಾದ್ರೇ ಇವತ್ತು ನಾವು ಹೇಳ್ತಿರೋ ಡಿನೋಟಿಫಿಕೇಷನ್, ಆಗ್ಲೂ ನೋಟಿಫಿಕೇಷನ್, ಡಿನೋಟಿಫಿಕೇಷನ್, ಆಗ್ಲೂ ಆಗ್ತಿತ್ತಾ? ಈಗ ಯಾಕೇ ದೊಡ್ಡ ಸುದ್ದಿ ಆಗ್ತಿದೆ?

ಅನಂತ ನಾಗ್ : ನೋಡಿ, ಇದು ಸೂಕ್ಷ್ಮ ವಿಚಾರ. ನಾನು ಹೆಚ್ಚು ತಿಳ್ಕೊಂಡವನಲ್ಲಾ. ನಾನು ಹೇಳ್ತೀನಿ, ನನ್ನ ದಷ್ಟಿಕೋನದಲ್ಲಿ. ನಿಮ್ಮತ್ರ 50 ಎಕರೆ ಪಿತ್ರಾರ್ಜಿತವಾಗಿ ಬಂದಿದೆ. ಅದು ನೆಲಮಂಗಲ ಆಚೆ. ಆವಾಗ ಗ್ರೀನ್ ಬೆಲ್ಟ್ ಅಂತಾನೋ, ಇಂಡಸ್ಟ್ರೀಯಲ್ ಪರ್ಪಸ್ ಅಂತಾನೋ ಸರ್ಕಾರ ನೋಟಿಫೈ ಮಾಡುತ್ತೆ. ಆವಾಗ ನಿಮಗೆ ಶಾಕ್ ಆಗುತ್ತೆ. ಪಿತ್ರಾರ್ಜಿತವಾಗಿ ಬಂದಿದ್ದು ನೋಟಿಫೈ ಆಯ್ತಲ್ಲಾ ಅಂತ. ನೋಟಿಫೈ ಮಾಡೋದು ಯಾಕ್ ಬರುತ್ತೆ ಅಂತಲ್ಲ. ನೋಟಿಫೈ ಆಯ್ತು ಅಂತಾನೇ ಕೋರ್ಟ್ಗೆ ಹೋಗ್ತಾರೆ. ಆಗ ಡಿನೋಟಿಫಿಕೇಷನ್ ಆಯ್ತು. ಅನೇಕ ಸಲ ನೋಟಿಫಿಕೇಷನ್ಗಳು….ಅಲ್ಲೇ ಡಿನೋಟಿಫಿಕೇಷನ್ಗಳೂ ಭ್ರಷ್ಟಾಚಾರಕ್ಕೆ ತಿರುಗಿಕೊಂಡಿದಾವೆ. ನೋಟಿಫಿಕೇಷನ್ಗಳು ಯಾಕ್ ಮಾಡ್ಬೇಕು. ಸೆಟ್ ಆಫ್ ಪೀಪಲ್, ಗ್ರೀನ್ ಬೆಲ್ಟ್ ಅಬ್ಜೆಕ್ಷನ್ಸ್ಗಳನ್ನ ಹಾಕ್ಬೇಕು….

ಅನಂತ ಚಿನಿವಾರ್ : ಡಿನೋಟಿಫಿಕೇಷನ್ ಬಗ್ಗೆ ಯಾಕೆ ಕೇಳಿದೆ ಅಂದ್ರೆ…

ಅನಂತ ನಾಗ್ : ಡಿನೋಟಿಫಿಕೇಷನ್ ಸವಾಲು ಯಾಕ್ ಬರುತ್ತೆ ಅಂದ್ರೆ, ಬಿ ಕಾಸ್ ಆಫ್ ನೋಟಿಫಿಕೇಷನ್. ಅದನ್ನ ಮಾಡೋವಾಗ್ಲೇ ಯೋಚನೆ ಮಾಡಿ, ಪಬ್ಲಿಕ್ಗೂ ಹೇಳಿ ಅಹವಾಲು ಕೇಳ್ಕೋಬೇಕು. ಡಿನೋಟಿಫಿಕೇಷನ್ ಅಂದ್ಕೂಡ್ಲೇ ಭ್ರಷ್ಟಾಚಾರ ಥರ ಆಗ್ಹೋಗಿದೆ.

ಅನಂತ ಚಿನಿವಾರ್ : ಸಿನಿ ಜಗತ್ತಿನ ಯಾವ್ದೇ ಕಾರ್ಯಕ್ರಮದಲ್ಲೂ ಭಾಗವಹಿಸ್ತಿಲ್ಲ.

ಅನಂತ ನಾಗ್ : ಆ ಸದ್ದುಗದ್ದಲ ನಂಗ್ಯಾಕೋ ಇಷ್ಟ ಇಲ್ಲ. ಸಿನಿಮಾ ಲೈಫೇ ಒಂದು ಶೋ ಬ್ಯುಸಿನೆಸ್. ಒಂಥರಾ ಆರ್ಟಿಫಿಷಿಯಲ್ ಜಗತ್ತು. ಇವತ್ತಿಗೂ ಹಾಗೇ ಇದೆ. ಪ್ರೆಸೆಂಟ್ ಆಗಿ ಬದಕೋಕೋ ಆಗ್ತಿಲ್ಲ, ಮುಂದೆ ಹೋಗೋಕೂ ಆಗ್ತಿಲ್ಲ.

ಅನಂತ ಚಿನಿವಾರ್ : ಮತ್ತೆ ನಿಮ್ಮ ಸಿನೆಮಾ ಬಗ್ಗೆ. ನಿಮ್ಮ ಕಮರ್ಷಿಯಲ್ ಸಿನೆಮಾಗಳಲ್ಲಿ ಖುಷಿ ಪಟ್ಟ ಸಿನೆಮಾ ಬಗ್ಗೆ.

ಅನಂತ ನಾಗ್ : ಒಂದು ಬಹಳ ತೃಪ್ತಿ ಕೊಟ್ಟಂತಹ ಶ್ಯಾಮ್ ಬೆನಗಲ್ ಚಿತ್ರ, ಮರಾಠಿಯಲ್ಲಿ, ಉಂಡೂರಾ ಕಾದಂಬರಿ ಆಧರಿಸಿದ ಚಿತ್ರ. ತೆಲುಗು ಮತ್ತು ಮರಾಠಿಯಲ್ಲಿ. ಆ ಪಾತ್ರವೇ ಮೂರು ಸ್ತರದಲ್ಲಿ ಬಂದಿದೆ. ಹಂಸಗೀತೆಯಲ್ಲಿನ ಪಾತ್ರ, ಚಂದನದ ಬೊಂಬೆ, ಬೆಳದಿಂಗಳ ಬಾಲೆ, ಬೆಂಕಿಯ ಬಲೆ, ಹಾಗೇನೇ ಸತ್ಯು ಅವರ ಬರ ಚಿತ್ರ. ಇನ್ನೂ ಬೇರೆ ಬೇರೆ ಇದಾವೆ.

ಅನಂತ ಚಿನಿವಾರ್ : ಕನ್ನಡ ಚಿತ್ರರಂಗದ ಇವತ್ತಿನ ಸ್ಥಿತಿ ಬಗ್ಗೆ…

ಅನಂತ ನಾಗ್ : ಯಂಗರ್ ಜನರೇಷನ್ ಮಾಡ್ತಿದೆ. ಇಂಡಸ್ಟ್ರೀ ಉಳೀಬೇಕು. ಸಿನೆಮಾದಲ್ಲಿ ಸೃಜನಶೀಲತೆ ಇರಲೇಬೇಕು. ಬೇರೇ ಬೇರೆ ಡೋಸಸ್ ಇರಬೇಕು. ಶಿಕ್ಷಣ, ಎಂಟರ್ಟೈ‌ನ್ಮೆಂಟ್,  ಈಗ ಮಾಡ್ತಾ ಇದಾರೆ, ಆದ್ರೆ ಜನ ಬರ್ತಿಲ್ಲ.

ಅನಂತ ಚಿನಿವಾರ್ : ಡಬ್ಬಿಂಗ್ ಬಗ್ಗೆ?

ಅನಂತ ನಾಗ್ : ಸಂಕುಚಿತ ಅನ್ನಿಸಿದರೂ ಇಲ್ಲಿನ ಪರಿಸ್ಥಿತಿನೇ ಬೇರೆ ಇದೆ. ತಮಿಳುನಾಡು, ಕೇರಳ, ಉತ್ತರ ಭಾರತ, ಆಂಧ್ರ, ಹೋಲಿಸಿದರೇ ಇಲ್ಲಿ ಎಲ್ಲಾ ಭಾಷೆಗಳ ಚಿತ್ರಗಳೂ ಬರುತ್ತೆ. ಆದ್ರೆ ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು ಹೋಗೋದೇ ಇಲ್ಲ. ಈ ನಿಟ್ಟಿನಲ್ಲಿ ಡಬ್ಬಿಂಗ್ ಬೇಡ ಅನ್ನೋದು ನನ್ನ ಭಾವನೆ. ಮದ್ರಾಸಿನಿಂದ ನಮ್ಮ ಇಂಡಸ್ಟ್ರಿಯನ್ನ ಇಲ್ಲಿಗೆ ತರಬೇಕಾದರೇ ಹರ ಸಾಹಸ ಮಾಡ್ಬೇಕಾಯ್ತು. ಮೊನ್ನೆ ಶಿವರಾಜ್ ಕುಮಾರ್ ಮಾತಾಡಿದ್ರು. ನಂಗೆ ಖುಷಿ ಆಯ್ತು. ಪರ ಭಾಷೆಗಳ ಚಿತ್ರಗಳನ್ನ ನೋಡೋದಿಕ್ಕೆ ತಕರಾರು ಇಲ್ಲ. ಆ ಭಾಷೆಯವರು ತಮ್ಮ ಚಿತ್ರಗಳನ್ನ ನೋಡ್ಲಿ, ಆದ್ರೆ ಕನ್ನಡಕ್ಕೆ ಡಬ್ ಮಾಡೋದು ಸರಿಯಲ್ಲ.

ಪೊಲೀಸ್ ವ್ಯವಸ್ಥೆ ಸಂಪೂರ್ಣ ಸ್ವಾಯತ್ತ ಘಟಕ ಆಗಬೇಕು

– ಆನಂದ ಪ್ರಸಾದ್

ಪೊಲೀಸರು ಸ್ವತಂತ್ರವಾಗಿ ಆಡಳಿತ ಪಕ್ಷದ ರಾಜಕಾರಣಿಗಳ ಒತ್ತಡಗಳಿಲ್ಲದೆ ಕೆಲಸ ನಿರ್ವಹಿಸುವ ವಾತಾವರಣ ಇದ್ದಿದ್ದರೆ ಗುಜರಾತಿನ ಗೋಧ್ರೋತ್ತರ ಹಿಂಸಾಚಾರ ಅಥವಾ 1984ರ ದೆಹಲಿಯ ಸಿಖ್ಖರ ಹತ್ಯಾಕಾಂಡವನ್ನು ಹೆಚ್ಚು ಹಾನಿಯಾಗದಂತೆ ಮತ್ತು ಹಬ್ಬದಂತೆ ತಡೆಯಲು ಸಾಧ್ಯವಿತ್ತು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸುವ ಮೂಲಭೂತವಾದಿ ಸಂಘಟನೆಗಳ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳನ್ನೂ ಪೊಲೀಸರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವಾತಾವರಣ ಇದ್ದರೆ ತಡೆಯಬಹುದು. ಹಲವು ಅಪರಾಧ ಪ್ರಕರಣಗಳಲ್ಲೂ ಪೊಲೀಸರು ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಪರಾಧಿಗಳ ರಕ್ಷಣೆ ಮಾಡುವ ಪರಿಸ್ಥಿತಿಯನ್ನೂ ಪೊಲೀಸರು ಸ್ವತಂತ್ರವಾಗಿ ಅಳುವ ಪಕ್ಷದ ರಾಜಕಾರಣಿಗಳ ಒತ್ತಡವಿಲ್ಲದೆ ಕೆಲಸ ಮಾಡುವಂತಾದರೆ ತಡೆಯಲು ಸಾಧ್ಯ. ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಂವಿಧಾನಬದ್ಧವಾಗಿ ಕೆಲಸ ನಿರ್ವಹಿಸಬೇಕಾಗಿರುವುದು ಅತೀ ಅಗತ್ಯ. ಇದಕ್ಕಾಗಿ ಪೋಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವಾಯತ್ತ ಘಟಕವಾಗಿ ರೂಪಿಸಬೇಕಾದ ಅಗತ್ಯ ಇದೆ.

ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಪಕ್ಷದ ಪುಢಾರಿ ಅಥವಾ ಮಂತ್ರಿ ಹಸ್ತಕ್ಷೇಪ ಮಾಡಲು ಅವಕಾಶ ಇರಬಾರದು. ನಮ್ಮ ಇಂದಿನ ಪೊಲೀಸ್ ವ್ಯವಸ್ಥೆಯಲ್ಲಿ ಅಂಥ ವಾತಾವರಣ ಇಲ್ಲ. ಪೊಲೀಸರು ಸಂವಿಧಾನಕ್ಕೆ ಅನುಸಾರವಾಗಿ ಹಾಗೂ ಪೊಲೀಸ್ ಕಾನೂನುಗಳ ಅನುಸಾರವಾಗಿ ಪ್ರತಿಯೊಂದು ಪ್ರಕರಣದಲ್ಲೂ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಇಲ್ಲದೆ ಹೋದರೆ ಉತ್ತಮ ನಾಗರಿಕ ವ್ಯವಸ್ಥೆಯನ್ನು ಕಟ್ಟುವುದು ಅಸಾಧ್ಯ. ಹೀಗಾಗಿ ಇಡೀ ಪೊಲೀಸ್ ವ್ಯವಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಬೇಕು. ಪೋಲೀಸರ ವರ್ಗಾವಣೆ, ಭಡ್ತಿ ಇತ್ಯಾದಿಗಳು ಸಂಪೂರ್ಣವಾಗಿ ನಿಯಮಗಳ ಅನುಸಾರ ನಡೆಯುವಂತೆ ನೋಡಿಕೊಳ್ಳಬೇಕು. ಇದನ್ನು ನೋಡಿಕೊಳ್ಳಲು ಪೊಲೀಸ್ ನಿಯಂತ್ರಣ ಆಯೋಗವೊಂದನ್ನು ರಚಿಸಿ ಅದರ ಅಧ್ಯಕ್ಷರನ್ನು ಆಡಳಿತ ಪಕ್ಷ, ಪ್ರಮುಖ ವಿರೋಧ ಪಕ್ಷಗಳ ನಾಯಕರು, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವ ನಿಷ್ಪಕ್ಷಪಾತ, ಪ್ರಾಮಾಣಿಕ ಚರಿತ್ರೆ ಹೊಂದಿರುವ ಪೊಲೀಸ್ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸಿದ ವ್ಯಕ್ತಿಯನ್ನು ನೇಮಿಸುವಂತೆ ಆಗಬೇಕು. ಪೋಲೀಸರ ಅತಿರೇಕ ಹಾಗೂ ದೌರ್ಜನ್ಯ ಇತ್ಯಾದಿ ವಿಷಯಗಳ ಬಗ್ಗೆ ನಾಗರಿಕರ ದೂರುಗಳನ್ನು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವೂ ಪೊಲೀಸ್ ನಿಯಂತ್ರಣ ಆಯೋಗಕ್ಕೆ ಇರಬೇಕು. ಯಾವುದೇ ಸಂದರ್ಭದಲ್ಲೂ ಆಡಳಿತ ಪಕ್ಷದ ರಾಜಕಾರಣಿಗಳು ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸಲು ಅವಕಾಶ ನೀಡಬಾರದು. ಯಾವುದೇ ಪೊಲೀಸ್ ಅಧಿಕಾರಿಯನ್ನು ಅವಧಿಪೂರ್ವವಾಗಿ ವರ್ಗಾವಣೆ ಮಾಡುವ ಅವಕಾಶ ಇರಬಾರದು. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ಯಾವುದೇ ಕಿರುಕುಳ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ನಿಯಂತ್ರಣ ಆಯೋಗಕ್ಕೆ ಇರಬೇಕು. ಅದೇ ರೀತಿ ಯಾವುದೇ ಸಂದರ್ಭದಲ್ಲೂ ಧಾರ್ಮಿಕ ಮೂಲಭೂತವಾದಿಗಳು ಪೋಲೀಸರ ಕಾರ್ಯನಿರ್ವಹಣೆಯಲ್ಲಿ ಪ್ರಭಾವ ಬೀರದಂತೆ ಪೊಲೀಸ್ ನಿಯಂತ್ರಣ ಆಯೋಗ ತಡೆಯುವ ಅಧಿಕಾರ ಇರಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ಮೂಲಭೂತವಾದಿಗಳು ನುಸುಳದಂತೆ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೂಡ ಕೈಗೊಳ್ಳಬೇಕಾದ ಅಗತ್ಯ ಇದೆ. ದೇಶದ ಜಾತ್ಯತೀತ ಸ್ವರೂಪವನ್ನು ಕಾಯ್ದುಕೊಂಡು ಹೋಗಲು ಇದು ಅಗತ್ಯ. ಜಾತ್ಯತೀತ ಮನೋಭಾವವನ್ನು ಬೆಳೆಸುವ ತರಬೇತಿಯನ್ನು ಪೋಲೀಸರ ನೇಮಕಾತಿಯ ವೇಳೆಯೇ ನೀಡಬೇಕು.

ದಲಿತರು, ಹಿಂದುಳಿದವರ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ದೌರ್ಜನ್ಯ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಪೊಲೀಸರಿಗೆ ಇರಬೇಕು. ಇಂಥ ಸ್ವಾತಂತ್ರ್ಯ ಇರಬೇಕಾದರೆ ಅದು ಪ್ರಬಲ ಮೇಲ್ವರ್ಗದ ಜಾತಿಗಳ ರಾಜಕಾರಣಿಗಳ ಹಿಡಿತಕ್ಕೆ ಸಿಗದಂತೆ ರೂಪಿಸಲ್ಪಟ್ಟಿರಬೇಕು. ದಲಿತರ ಮೇಲಿನ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರು ರಾಜಕೀಯ ಒತ್ತಡಗಳಿಗೆ ಒಳಗಾಗಿ ಕೇಸು ದಾಖಲಿಸಿಕೊಳ್ಳುವುದಿಲ್ಲ. ರಾಜಕಾರಣಿಗಳ ಹಿಡಿತದಿಂದ ಪೋಲೀಸ್ ವ್ಯವಸ್ಥೆಯನ್ನು ಮುಕ್ತಗೊಳಿಸಿದರೆ ಪೊಲೀಸರು ದಿಟ್ಟತನದಿಂದ ಕ್ರಮ ಕೈಗೊಳ್ಳಲು ಸಾಧ್ಯ. ಸ್ವಾತಂತ್ರ್ಯ ದೊರಕಿದಾಗಲೇ ಪೋಲೀಸ್ ವ್ಯವಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಿದ್ದರೆ ಮತ್ತು ಸಂವಿಧಾನದಲ್ಲೇ ಈ ಕುರಿತು ದಾಖಲಿಸಿದ್ದರೆ ಆಗ ಇದಕ್ಕೆ ಒಪ್ಪಿಗೆ ಸಿಗುತ್ತಿತ್ತು. ಅಂದು ಸಂವಿಧಾನ ನಿರ್ಮಾತೃಗಳಿಗೆ ಪೋಲೀಸ್ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಗೋಚರಿಸಿರಲಿಲ್ಲವೆನಿಸುತ್ತದೆ. ಸ್ವತಂತ್ರ ಭಾರತದ ಆರು ದಶಕಗಳ ಪೋಲೀಸ್ ಕಾರ್ಯ ವೈಖರಿಯನ್ನು ನೋಡಿದಾಗ ಇಂದು ಇದರ ಅವಶ್ಯಕತೆ ಎದ್ದು ಕಾಣುತ್ತದೆ. ದುರದೃಷ್ಟವಶಾತ್ ಸಮಾಜದಲ್ಲಿ ಈ ಬಗ್ಗೆ ಸಮರ್ಪಕ ಜಾಗೃತಿ ಕೂಡ ಕಂಡುಬರುತ್ತಿಲ್ಲ. ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವಾಯತ್ತ ಘಟಕವಾಗಿ ಮಾಡುವ ಬಗ್ಗೆ ಸಮಾಜದ ಗಣ್ಯರು, ಹೋರಾಟಗಾರರು, ವಿವಿಧ ಸಂಘಟನೆಗಳು ಧ್ವನಿ ಎತ್ತಬೇಕಾಗಿದೆ. ಈ ಬಗ್ಗೆ ಪ್ರಮುಖ ಮಾಧ್ಯಮಗಳೂ ಧ್ವನಿ ಎತ್ತಬೇಕಾಗಿದೆ.

ಪ್ರಜಾ ಸಮರ-1 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


[ಪ್ರಿಯ ಓದುಗರೇ, ಪೀಪಲ್ಸ್ ವಾರ್ ಗ್ರೂಪ್ ಹೆಸರಿನಲ್ಲಿ 80ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ನಕ್ಸಲ್ ಹೋರಾಟಕ್ಕೆ ಹಲವಾರು ಆಯಾಮಗಳಿವೆ. ಈ ಹೋರಾಟಕ್ಕೆ ಪ್ರೇರಣೆಯಾದ ಸಂಗತಿಗಳು ಮತ್ತು ನೆರೆಯ ರಾಜ್ಯಕ್ಕೆ ವಿಸ್ತರಿಸಲು ಕಾರಣವಾದ ಮೂರು ಘಟನೆಗಳನ್ನು ಪ್ರಜಾಸಮರದ ಇತಿಹಾಸಕ್ಕೆ ಮೊದಲು ಮೂರು ಅಧ್ಯಾಯಗಳಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.]

ಅದು 2009 ರ ಸೆಪ್ಟಂಬರ್ ಇಪ್ಪತ್ತರ ದಿನಾಂಕ. ಹೈದರಾಬಾದ್ ನಗರದಿಂದ ಬಂದಿದ್ದ ಆಂಧ್ರ ಪೋಲಿಸರು ಹಾಗೂ ದೆಹಲಿಯ ಗುಪ್ತಚರ ಇಲಾಖೆಯ ಪೋಲಿಸರು ನಡು ಮಧ್ಯಾಹ್ನ ದೆಹಲಿಯ ರಾಯಭಾರಿ ಕಚೇರಿಗಳ ಹತ್ತಿರವಿರುವ ಪ್ರತಿಷ್ಠಿತ ಬಿಕಾಜಿಕಾಮ ಎಂಬ ವಾಣಿಜ್ಯ ಕಟ್ಟಡದ ಮುಂಭಾಗ ಅಂಬಾಸೆಡರ್ ಕಾರಿನಲ್ಲಿ ಕಾದು ಕುಳಿತಿದ್ದರು. ಎರಡು ದಶಕಗಳ ಕಾಲ ನಕ್ಸಲ್ ಚಳವಳಿ, ವಿಶೇಷವಾಗಿ 1980ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಗೆ ರೂಪು ರೇಷೆಯ ಜೊತೆಗೆ ವಿಚಾರಧಾರೆಗಳನ್ನು ರೂಪಿಸಿ, ಅದನ್ನು ಸಿದ್ಧಾಂತಗಳ ಆಧಾರದ ಮೇಲೆ ಮುನ್ನಡೆಸಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಬಿಹಾರ ರಾಜ್ಯಗಳಲ್ಲಿ ನಕ್ಸಲ್ ಹೋರಾಟದ ಬೀಜ ಬಿತ್ತಿ, ನಂತರ ಬಳಲಿ ಸೋತು ಸುಣ್ಣವಾಗಿದ್ದ ಹಿರಿಯ ಜೀವವೊಂದನ್ನು ಬೇಟೆಯಾಡುವುದು ಅವರ ಗುರಿಯಾಗಿತ್ತು. ಆದರೆ, ಆ ವ್ಯಕ್ತಿಯ ಮುಖ ಪರಿಚಯವಿಲ್ಲದ ಪೊಲೀಸರು 20 ವರ್ಷದ ಹಿಂದೆ ಅರಣ್ಯದಲ್ಲಿ ಈ ನಾಯಕನಿಗೆ ಸಹಾಯಕನಾಗಿ ದುಡಿದು ಬಂಧನದಲ್ಲಿದ್ದ ವ್ಯಕ್ತಿಯೊರ್ವನನ್ನು ಇದಕ್ಕಾಗಿ ವಿಶಾಖಪಟ್ಟಣದಿಂದ ಕರೆತಂದಿದ್ದರು.

ಗಂಟೆಗಳ ಕಾಲ ಕಾದ ಪೋಲಿಸರ ನಿರೀಕ್ಷೆ ಹುಸಿಯಾಗಲಿಲ್ಲ. ವಾಣಿಜ್ಯ ಕಟ್ಟಡದ ಯಾವುದೋ ಒಂದು ಕಛೇರಿಯಿಂದ ಹೊರ ಬಂದ ತೆಳ್ಳನೆಯ ಆದರೆ ಆರು ಅಡಿ ಎತ್ತರವಿದ್ದ, ಖಾದಿ ಜುಬ್ಬ ಮತ್ತು ಪೈಜಾಮ ಧರಿಸಿದ್ದ ಆ ಹಿರಿಯ ಜೀವ ನಿಧಾನವಾಗಿ ಹೆಗಲಿನಲ್ಲಿ ಇದ್ದ ಕೈಚೀಲವನ್ನು ಸರಿ ಪಡಿಸಿಕೊಳ್ಳುತ್ತಾ, ಕಚೇರಿಯ ಸಮೀಪವಿದ್ದ ಹ್ಯಾಬಿಟೇಟ್ ಸೆಂಟರ್ ಬಸ್ ನಿಲ್ದಾಣದ ಬಳಿ ಬಂದು ನಿಂತುಕೊಂಡಿತು. ತಡಮಾಡದೆ ಕಾರಿನಲ್ಲಿದ್ದ ಪೊಲೀಸರು ಕೆಳಗಿಳಿದು ಬಂದು ವ್ಯಕ್ತಿಯನ್ನು ಎತ್ತಿ ಹಾಕಿಕೊಂಡು ಕ್ಷಣಾರ್ಧದಲ್ಲಿ ಮರೆಯಾದರು. ಮಾರನೇ ದಿನ ಹಿರಿಯ ಜೀವವನ್ನು ನ್ಯಾಯಧೀಶರ ಗುಟ್ಟಾಗಿ ಹಾಜರುಪಡಿಸಿ ನಂತರ ತಮ್ಮ ವಶಕ್ಕೆ ತೆಗೆದುಕೊಂಡ ದೆಹಲಿಯ ಪೊಲೀಸರು ಸುದ್ಧಿಗೋಷ್ಠಿಯಲ್ಲಿ ವಿಷಯ ಪ್ರಕಟಿಸಿದರು. ಭಾರತದ ಅತ್ಯಂತ ಪ್ರಮುಖ ನಕ್ಸಲ್ ನಾಯಕ ಹಾಗೂ ಹತ್ತಕ್ಕೂ ಹೆಚ್ಚು ರಾಜ್ಯಗಳ ನಕ್ಸಲಿಯರ ಆರಾಧ್ಯ ದೈವ ಮತ್ತು ಭಾರತದ ಅಖಂಡತೆಗೆ ಮತ್ತು ಸಾರ್ವಭೌಮತ್ವಕ್ಕೆ ಕಂಟಕವಾಗಿದ್ದ ಕೊಬದ್ ಗಾಂಡಿ ಎಂಬ 76 ವರ್ಷದ ನಾಯಕನನ್ನು ಬಂಧಿಸಿರುವುದಾಗಿ  ಬಹಿರಂಗಪಡಿಸಿದರು. ಪೂರ್ವ ಮತ್ತು ಮಧ್ಯ ಭಾರತದ ಆದಿವಾಸಿಗಳ ಬಾಯಲ್ಲಿ ಗಾಂಧಿ ಎಂತಲೂ ನಕ್ಸಲಿಯರ ಬಾಯಲ್ಲಿ ಕೆ.ಜಿ. ಸರ್ ಎಂತಲೂ ಪರಿಚಿತವಾಗಿದ್ದ ಕೋಬದ್ ಗಾಂಡಿಯ ಹೋರಾಟದ ಬದುಕು ಹೀಗೆ ಬಂಧನದೊಂದಿಗೆ ಅಂತ್ಯಗೊಂಡಿತು.

ಈ ಬಂಧನ ಬಿ.ಬಿ.ಸಿ. ಚಾನಲ್ ಸೇರಿದಂತೆ ಅಂತರ್ರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಏಕೆಂದರೆ, ಬಂಧನಕ್ಕೆ ಎರಡು ವರ್ಷದ ಮುಂಚೆ ಈ ವ್ಯಕ್ತಿಯನ್ನು ಲಂಡನ್‌ನಿನ ಬಿ.ಬಿ.ಸಿ. ಚಾನಲ್ ತಂಡ ಪೊಲೀಸರ ಕಣ್ಣು ತಪ್ಪಿಸಿ ದಂಡಕಾರಣ್ಯದಲ್ಲಿ ಸಂದರ್ಶನ ಮಾಡಿ ಪ್ರಸಾರ ಮಾಡಿತ್ತು. ಏಕೆಂದರೆ, ಕೊಬಡ್ ಗಾಂಡಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ನಕ್ಸಲ್ ಚಳವಳಿಗೆ ಧುಮುಕದಿದ್ದರೆ, ಅಂತರ್ರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞನಾಗುವ ಎಲ್ಲಾ ಅವಕಾಶಗಳು ಇದ್ದವು. 1970 ದಶಕದಲ್ಲಿ ಲಂಡನ್ ನಗರದಲ್ಲಿ  ಚಾರ್ಟಡ್ ಅಕೌಟೆಂಟ್ ಪದವಿಗೆ ಓದುತಿದ್ದಾಗಲೇ, ಬ್ರಿಟಿಷರು ಭಾರತೀಯ ವಿದ್ಯಾರ್ಥಿಗಳ ವಿರುದ್ಧ ತೋರುತ್ತಿದ್ದ ವರ್ಣ ನೀತಿಯನ್ನು ಪ್ರತಿಭಟಿಸಿ, ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ, ಅಲ್ಲಿನ ಮಾಧ್ಯಗಳಲ್ಲಿ ಸುದ್ಧಿಯಾಗಿ ನಂತರ ಭಾರತಕ್ಕೆ ಮರಳಿದ್ದರು.

ಮುಂಬೈ ನಗರದ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದ ಕೊಬದ್ ಗಾಂಡಿಗೆ ದುಡಿಯುವ ಅವಶ್ಯಕತೆ ಇರಲಿಲ್ಲ. ಅವರ ತಂದೆ ಆದಿ ಗಾಂಡಿ ಪ್ರಸಿದ್ಧ ಬಹುರಾಷ್ಟೀಯ ಕಂಪನಿಯಾದ ಗ್ಲಾಸ್ಕೊ ಕಂಪನಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದವರು. ಮುಂಬೈ ನಗರದ ಪ್ರತಿಷ್ಠಿತ ಹಾಗೂ ಕಡಲಿಗೆ ಮುಖ ಮಾಡಿರುವ ವರ್ಲಿಯ ಪ್ರದೇಶದಲ್ಲಿ ನಾಲ್ಕು ಸಾವಿರ ಚದುರ ಅಡಿ ವಿಸ್ತಾರವಾದ ಜಾಗದಲ್ಲಿ ಬಂಗಲೆಯನ್ನು ನಿರ್ಮಿಸಿದ್ದರು. ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಬಾಲ್ಯದಿಂದಲೂ ಕೊಬದ್ ಗಾಂಡಿಗೆ ಬಡವರೆಂದರೆ ಅಪಾರ ಪ್ರೀತಿ ಮತ್ತು ಕಾಳಜಿ. ಒಮ್ಮೆ ತನ್ನ ತಂದೆಯ ಚಿನ್ನದ ಚೈನ್ ಹೊಂದಿದ್ದ ಕೈಗಡಿಯಾರವನ್ನು ಹೇಳದೆ ಕೇಳದೆ ಮನೆಯ ಸೇವಕನಿಗೆ ಧಾನ ಮಾಡಿದ ವ್ಯಕ್ತಿತ್ವ ಇವರದು. ಇಂತಹ ವ್ಯಕ್ತಿತ್ವವೇ ಅಂತಿಮವಾಗಿ ಕೊಬದ್ ಗಾಂಡಿಯನ್ನು ಅರಣ್ಯದ ಅಂಚಿಗೆ ತಂದು ನಿಲ್ಲಿಸಿತು. ಐಷಾರಾಮಿ ಬದುಕು, ಊಟ ತಿಂಡಿ ತೊರೆದು ದಂಡಕಾರಣ್ಯದ ದಟ್ಟ ಕಾನನದ ನಡುವೆ ಪ್ಲಾಸ್ಟಿಕ್ ಗುಡಾರದ ಕೆಳಗೆ ಅದೇ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಮಲಗುವಂತೆ ಮಾಡಿತು.

ಸತತ ಮೂವತ್ತು ವರ್ಷಗಳ ಕೊಬಡ್ ಗಾಂಡಿಯ ಹೋರಾಟದ ಬದುಕಿಗೆ ಬಾಳ ಸಂಗಾತಿಯಾಗಿ ಹೆಗಲುಕೊಟ್ಟು ಶ್ರಮಿಸಿದ ಜೀವವೇ, ಅನುರಾಧ ಶ್ಯಾನ್‌ಬಾಗ್ ಎಂಬ ಕನ್ನಡದ ಹೆಣ್ಣು ಮಗಳು. 1980ರ ದಶಕದಿಂದ ಆರಂಭವಾದ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನಷ್ಟೇ ಗೌರವವನ್ನು ಹೊಂದಿದ ಅಪೂರ್ವ ಜೋಡಿ ಇವರದು. ಇವರ ಕಥನ ಸಮಾಜದ ಮುಖ್ಯವಾಹಿನಿಗೆ ಬಾರದೇ ಕೇವಲ ಅರಣ್ಯದ ನಡುವೆ ನಕ್ಸಲಿಯರ ಬಾಯಲ್ಲಿ ನಕ್ಸಲಿಯರ ಗಾಂಧಿ ದಂಪತಿಗಳು ಎಂಬ ದಂತಕಥೆಯಾಗಿ ಇಂದಿಗೂ ಅನುರಣನಗೊಳ್ಳುತ್ತಿದೆ.

ದೆಹಲಿಯಲ್ಲಿ ಬಂಧನವಾಗಿ ವಿಚಾರಣೆಯ ನಂತರ ಮತ್ತೆ ನ್ಯಾಯಾಲಯಕ್ಕೆ ಕೊಬಡ್ ಗಾಂಡಿಯನ್ನು ಹಾಜರು ಪಡಿಸಿದಾಗ, ಕಿಕ್ಕಿರಿದು ತುಂಬಿದ್ದ ಮಾಧ್ಯಮ ಮಂದಿಯ ನಡುವೆ ನ್ಯಾಯಾಲಯದಲ್ಲಿ ಈ ವೃದ್ಧ ಜೀವ ಯಾವುದೇ ಅಳುಕಿಲ್ಲದೆ, ಭಗತ್‌ಸಿಂಗ್ ಜಿಂದಾಬಾದ್’, ಅನುರಾಧ ಗಾಂಡಿ ಅಮರ್ ಹೈ ಎಂಬ ಘೋಷಣೆ ಕೂಗಿತು.

ಕೇವಲ ಆರು ತಿಂಗಳ ಹಿಂದೆ ವೃದ್ಧಾಪ್ಯದ ಕಾರಣ ಹಲವು ಕಾಯಿಲೆಯಿಂದ ಬಳಲುತ್ತಿದ್ದ ಕೊಬದ್ ಗಾಂಡಿ ನಕ್ಸಲಿಯರ ಸಹಾಯದಿಂದ ದೆಹಲಿಗೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕಾಗಿ ಇವರದೇ ಭಾವಚಿತ್ರವುಳ್ಳ ದಿಲಿಪ್ ಪಟೇಲ್ ಎಂಬ ಹೆಸರಿನಲ್ಲಿ ನಕಲಿ ಮತದಾರರ ಚೀಟಿಯನ್ನು ಸಿದ್ಧಪಡಿಸಲಾಗಿತ್ತು. ಕೂಲಿಕಾರ್ಮಿಕರು ಮತ್ತು ಬಿಕ್ಷುಕರು, ಹಾಗೂ ಸೈಕಲ್ ರಿಕ್ಷಾವಾಲಾಗಳು ವಾಸಿಸುತ್ತಿದ್ದ ಮೊಲರ್‌ಬಂದ್ ಎಂಬ ಕಾಲೋನಿಯ ತಗಡಿನ ಶೀಟಿನ ಮನೆಯೊಂದರಲ್ಲಿ ವಾಸಿಸುತ್ತಾ ಬದುಕು ದೂಡುತ್ತಿದ್ದ ಈ ನಾಯಕನಿಗೆ ನಕ್ಸಲಿಯರೇ ಒಬ್ಬ ನಿಷ್ಠಾವಂತ ಸೇವಕನನ್ನು ನೇಮಕ ಮಾಡಿದ್ದರು. ಗೌಪ್ಯತೆಯ ದೃಷ್ಟಿಯಿಂದ ಮೊಬೈಲ್ ಬಳಸುತ್ತಿರಲಿಲ್ಲ. ಎಲ್ಲಾ ಸಂದೇಶಗಳು ಮಾರು ವೇಷದ ನಕ್ಸಲಿಯರ ಮೂಲಕ ಅವರಿಗೆ ರವಾನೆಯಾಗುತಿದ್ದವು. ಅದೇ ರೀತಿ ಹಣಕಾಸು ಸಹಾಯದ ಜೊತೆಗೆ ಚಟುವಟಿಕೆಯ ವಿಷಯಗಳು ಇವರಿಗೆ ತಲುಪುತಿದ್ದವು. (ಇವತ್ತಿಗೂ ದಂಡಕಾರಣ್ಯದ ಮಧ್ಯೆ ಸುರಕ್ಷಿತ ಪ್ರದೇಶದಲ್ಲಿ 70 ವರ್ಷದ ದಾಟಿದ, 17 ಕ್ಕೂ ಹೆಚ್ಚು ಮಂದಿ ಇರುವ ಹಿರಿಯ ನಕ್ಸಲ್ ಹೋರಾಟಗಾರರನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಅವರ ಸಲಹೆ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ.)

ಬಾಲ್ಯದಲ್ಲಿ ಡೆಹರಾಡೂನ್‌ನ ಕಾನ್ವೆಂಟ್ ವಸತಿಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಅಂದಿನ ಬಾಂಬೆಯ ಪ್ರತಿಷ್ಠಿತ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಇಂಗ್ಲೆಂಡ್‌ನಲ್ಲಿ ಚಾರ್ಟಡ್ ಅಕೌಟೆಂಟ್ ಪದವಿಯ ಪಡೆದು ಮರಳಿ ಭಾರತಕ್ಕೆ ಬಂದ ಕೊಬದ್ ಗಾಂಡಿಯನ್ನು ವೃತ್ತಿಯ ಸೆಳೆತಕ್ಕೆ ಬದಲಾಗಿ ಎಡಪಂಥೀಯ ಚಿಂತನೆಗಳು ಆಕರ್ಷಿಸಿದವು. ಹೀಗೆ ಕೊಬದ್ ಶ್ರಮಿಕರ ಬಗ್ಗೆ ಬಡವರ ಬಗ್ಗೆ ಕಾಳಜಿ ತೋರುತ್ತಾ ನಕ್ಸಲ್ ಚಳವಳಿಯತ್ತ ಒಲವು ಬೆಳೆಸಿಕೊಂಡರು. ಇದಕ್ಕೆ ಅಂದು ಬಾಂಬೆಯಲ್ಲಿ ಅಸ್ತಿತ್ವದಲ್ಲಿದ್ದ ಪ್ರಗತಿಪರ ವಿದ್ಯಾರ್ಥಿ ಸಂಘಟನೆ ಕೂಡ ಪರೋಕ್ಷವಾಗಿ ಕಾರಣವಾಯ್ತು. ಅವರ ಅಂದಿನ ಹೋರಾಟಗಳ ದಿನಗಳಲ್ಲಿ ಪ್ರಗತಿಪರ ಮುಸ್ಲಿಂ ಚಿಂತಕ ಅಸ್ಗರ್ ಆಲಿ ಇಂಜಿನಿಯರ್ ಇವರ ಒಡನಾಡಿಯಾಗಿದ್ದರು. ಇಂತಹ ಕ್ರಾಂತಿಯ ದಿನಗಳಲ್ಲಿ ಕೊಬದ್ ಒಂದು ದಿನ ಅನುರಾಧ ಶಾನ್‌ಬಾಗ್‌ರನ್ನು ಭೇಟಿಯಾದರು.   ಅನುರಾಧರವರ ತಂದೆ ಗಣೇಶ್ ಶಾನ್‌ಬಾಗ್ ಮೂಲತಃ ಕರ್ನಾಟಕದವರು. ವಕೀಲರಾಗಿದ್ದ ಇವರು ತಮ್ಮ ಯೌವನದಲ್ಲಿ ಸುಭಾಷ್‌ಚಂದ್ರ ಭೋಸರರಿಂದ ಪ್ರಭಾವಿತರಾಗಿ ಮನೆ ಬಿಟ್ಟು ಕೊಲ್ಕತ್ತ ನಗರಕ್ಕೆ ತೆರಳಿದವರು, ಅಲ್ಲಿದ್ದ ದಿನಗಳಲ್ಲಿ ನಕ್ಸಲ್ ಪ್ರಭಾವಕ್ಕೆ ಒಳಗಾಗಿ, ನಂತರ ಮುಂಬೈ ನಗರಕ್ಕೆ ಬಂದು ನೆಲೆ ನಿಂತರೂ ಕೂಡ ತಮ್ಮ ವಕೀಲ ವೃತ್ತಿಯಲ್ಲಿ ಸರ್ಕಾರದಿಂದ ಬಂಧಿತರಾಗುತ್ತಿದ್ದ ನಕ್ಸಲಿಯರ ಬಿಡುಗಡೆಗಾಗಿ ತಮ್ಮ ಬಹುಭಾಗದ ಸಮಯವನ್ನು ವ್ಯಯಮಾಡುತ್ತಿದ್ದರು. ಇವರ ಪತ್ನಿ ಕುಮುದಾ ಸಹ ಪ್ರಗತಿಪರ ಮನೋಭಾವವುಳ್ಳ ಗೃಹಿಣಿಯಾಗಿದ್ದರು. ಇಂತಹ ದಂಪತಿಗಳ ಪುತ್ರಿಯಾಗಿ ಜನಸಿದ್ದ ಅನೂರಾಧ ಬಾಲ್ಯದಿಂದ ತಂದೆಯ ಕ್ರಾಂತಿಕಾರಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಶಾಲಾ ದಿನಗಳಲ್ಲಿ ಸುಂದರ ಕೈಬರವಣಿಗೆ ಇದ್ದ ಅನುರಾಧ ಶ್ರಮಿಕರ ಪರವಾಗಿ ಭಿತ್ತಿ ಪತ್ರಗಳನ್ನು ಬರೆದು ರಸ್ತೆಯ ವಿದ್ಯುತ್ ಕಂಬಗಳಿಗೆ ಅಂಟಿಸುತ್ತಿದ್ದರು. ಪ್ರತಿಷ್ಠಿತ ಎಲ್ಪಿಸ್ಟೋನ್ ಕಾಲೇಜಿನಲ್ಲಿ ಪದವಿ, ಹಾಗೂ ಮುಂಬೈ ವಿ.ವಿ.ಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಎಂ.ಫಿಲ್ ಪಧವೀಧರೆಯಾದ ಅನುರಾಧ, ಶಿಕ್ಷಣದ ನಂತರ ಮುಂಬೈನ ಕೊಳಗೇರಿಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು. 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ದಲಿತ ಪ್ಯಾಂಥರ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಂದಿನ ದಿನಗಳಲ್ಲಿ ಮಹಾರಾಷ್ಟ್ರದ ದಲಿತರ ದೌರ್ಜನ್ಯ ಕುರಿತು ಈಕೆ ಬರೆದ ನೂರಾರು ಲೇಖನಗಳು ಅನೇಕ ಯುವ ದಲಿತ ಲೇಖಕ, ಲೇಖಕಿಯರ ಹುಟ್ಟಿಗೆ ಕಾರಣವಾದವು.

ಕೊಬದ್ ಮತ್ತು ಅನೂರಾಧ ಒಂದೇ ಬಗೆಯ ನಿಲುವುಗಳನ್ನು ಹೊಂದಿ ಮುಂಬೈ ಕೊಳಚೇಗೇರಿಗಳಲ್ಲಿ ಹರಿಜನರ ಬಸ್ತಿಗಳಲ್ಲಿ (ಕೇರಿ) ಒಟ್ಟಿಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಆಕರ್ಷಿತರಾಗಿ, ತಮ್ಮ ಪೋಷಕರ ಒಪ್ಪಿಗೆ ಪಡೆದು 1977ರ ನವಂಬರ್ 5 ರಂದು ವಿವಾಹವಾದರು. ಆ ವೇಳೆಗೆ ಕೊಬದ್ ಗಾಂಡಿಯವರ ತಂದೆ ಗ್ಲಾಸ್ಕೊ ಕಂಪನಿಯ ಸೇವೆಯಿಂದ ನಿವೃತ್ತರಾಗಿ ಪೂನಾ ಸಮೀಪದ ಮಹಾಬಲೇಶ್ವರ್ ಎಂಬ ಗಿರಿಧಾಮದಲ್ಲಿ ಎಸ್ಟೇಟ್ ಖರೀದಿಸಿ ವಾಸವಾಗಿದ್ದರು.  ಒಂದು ವಾರ ಮಹಾಬಲೇಶ್ವರದ ತಂದೆಯ ಎಸ್ಟೇಟ್‌ನಲ್ಲಿ ಕಾಲ ಕಳೆದ ನವ ದಂಪತಿಗಳು ಮುಂಬೈನಗರಕ್ಕೆ ವಾಪಸ್ ಬಂದು ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಮಿಕ ಸಂಘಟನೆಯ ಪರವಾಗಿ ಮತ್ತು ದಲಿತರ ಪರವಾಗಿ ಹೋರಾಟದಲ್ಲಿ ಪಾಲ್ಗೊಂಡರು. ತಮ್ಮ ಭವಿಷ್ಯದ ಬದುಕಿನ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಒಂದು ಅಂತಿಮ ನಿರ್ಧಾರಕ್ಕೆ ಬಂದರು. ಅದನ್ನು ತಮ್ಮ ಬಂಧು ಮಿತ್ರರ ಎದುರು ತಮ್ಮ ಭವಿಷ್ಯದ ಕಾರ್ಯ ಕ್ಷೇತ್ರದ ವಿವರವನ್ನು ಬಹಿರಂಗ ಪಡಿಸಿದರು. 1956ರ ರಲ್ಲಿ ಡಾ. ಅಂಬೇಡ್ಕರ್ ತಾವು ನಿಧನರಾಗುವ ಕೆಲವು ದಿನಗಳ ಮುನ್ನ ಬೌದ್ಧ ಧರ್ಮ ಸ್ವೀಕರಿಸಿದ್ದ ನಾಗಪುರವನ್ನು ತಮ್ಮ ಕರ್ಮ ಭೂಮಿಯನ್ನಾಗಿ ಆರಿಸಿಕೊಂಡಿದ್ದರು. ದಲಿತರು ಮತ್ತು ಕೂಲಿ ಕಾರ್ಮಿಕರ ಪರ ದುಡಿಯಲು ಕೊಬದ್ ಮತ್ತು ಅನುರಾಧ ನಿರ್ದರಿಸಿದರು. ಅದರಂತೆ ಇಬ್ಬರೂ ನಾಗಪುರಕ್ಕೆ ಬಂದು ಹರಿಜನ ಕೇರಿಯಲ್ಲಿ ಒಂದು ಹೆಂಚಿನ ಮನೆ ಪಡೆದು ವಾಸ ಮಾಡತೊಡಗಿದರು.

ನಾಗಪುರದ ವಿ.ವಿಯಲ್ಲಿ ಅನುರಾಧಗೆ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿದ್ದರಿಂದ ತನ್ನ ವೃತ್ತಿಯ ನಡುವೆ ನಾಗಪುರ ನಗರದಿಂದ 20 ಕಿಲೋಮೀಟರ್ ದೂರವಿರುವ ಕಾಂಪ್ಟಿ ಎಂಬ ಕಾಲೋನಿಯಲ್ಲಿ ನೇಕಾರಿಕೆಯಲ್ಲಿ ತೊಡಗಿದ್ದ ಬಡ ಮುಸ್ಲಿಂ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಾ, ರಾತ್ರಿ ವೇಳೆಯಲ್ಲಿ ಮಧ್ಯರಾತ್ರಿ 12 ರವರೆಗೆ ತಾವು ವಾಸವಾಗಿದ್ದ ಹರಿಜನ ಕೇರಿಯ ಜನರ ಸಂಕಷ್ಟಗಳಿಗೆ ಕಣ್ಣು ಮತ್ತು ಕಿವಿಯಾಗುತ್ತಿದ್ದರು.

ಕೊಬದ್ ಗಾಂಡಿ ಆ ವೇಳೆಗಾಗಲೇ ಮಹರಾಷ್ಟ್ರದ ಗಡಿಜಿಲ್ಲೆಗಳಾದ ಗೊಂಡಿಯ, ಬಂಡಾರ ಚಂದ್ರಾಪುರ್ ಮತ್ತು ಗಡ್ ಚಿರೋಲಿ ಜಿಲ್ಲೆಯ ಪ್ರದೇಶಗಳಿಗೆ ನೆರೆಯ ಆಂಧ್ರದ ಪ್ರಜಾ ಸಮರಂ ತಂಡದ ನಕ್ಸಲರು ಪ್ರವೇಶ ಪಡೆದಿದ್ದರಿಂದ ಸ್ಥಳಿಯ ಗೊಂಡಾ ಆದಿವಾಸಿಗಳು ಮತ್ತು ನಕ್ಸಲರ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮುಂಬೈ ನಗರದಲ್ಲಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯಲ್ಲಿ ಇದ್ದಾಗಲೇ 1981ರಲ್ಲಿ ಆಂಧ್ರದ ವಿಜಯವಾಡ ಸಮೀಪದ ಗುಂಟೂರಿನಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಪರ್ಕ ಬಂದ ಕೊಬದ್ ಗಾಂಡಿ ಮುಂದಿನ ದಿನಗಳಲ್ಲಿ ಪ್ರಜಾ ಸಮರಂ (ಪೀಪಲ್ಸ್ ವಾರ್ ಗ್ರೂಪ್) ನಕ್ಸಲ್ ಸಂಘಟನೆಗೆ ಒಂದು ಸಂವಿಧಾನ ರಚನೆ ಮಾಡಿದರು. (ಇದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ.) ವ್ಯಯಕ್ತಿಕ ನೆಲೆಯಲ್ಲಿ ಹಿಂಸೆಯನ್ನು ವಿರೋಧಿಸುತ್ತಿದ್ದ ಕೊಬದ್ ಗಾಂಡಿ ತಮ್ಮ ಎರಡು ದಶಕಗಳ ನಕ್ಸಲಿಯರ ಒಡನಾಟದಲ್ಲಿ ಎಂದೂ ಬಂದೂಕನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ, ಅರಣ್ಯದ ನಡುವೆ ಮೂಕ ಪ್ರಾಣಿಗಳಂತೆ ಬದುಕಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುತ್ತಿದ್ದ ಅರಣ್ಯವಾಸಿ ಆದಿವಾಸಿಗಳಿಗೆ ನಕ್ಸಲ್ ಹೋರಾಟದಿಂದ ಮಾತ್ರ ಮುಕ್ತಿ ಎಂದು ಅವರು ನಂಬಿದ್ದರು. ಕೋಬದ್‌ಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮತ್ತು ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬಗ್ಗೆ ಅಪಾರ ನಂಬಿಕೆಯಿದ್ದರೂ ಕೂಡ, ಭಾರತಕ್ಕೆ ಅಂಟಿಕೊಂಡಿದ್ದ ಪ್ಯೂಡಲ್ ವ್ಯವಸ್ಥೆ ಮತ್ತು ತಲೆ ಎತ್ತುತ್ತಿದ್ದ ಬಂಡವಾಳ ವ್ಯವಸ್ಥೆಯ ಕುರಿತು ಆಕ್ರೋಶವಿತ್ತು. ಅಮಾಯಕರ ಮುಕ್ತಿಗೆ ನಕ್ಸಲ್ ಹೋರಾಟ ಹಿಂಸೆಯ ಹಾದಿ ತುಳಿದರೂ ನಾನು ಅದನ್ನು ಬೆಂಬಲಿಸ ಬೇಕಾದ್ದು ನನಗೆ ಅನಿವಾರ್ಯ ಎಂದು ಬಿ.ಬಿ.ಸಿ. ಚಾನಲ್‌ಗೆ 2008 ರ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಡಿದ್ದರು. ನಕ್ಸಲ್ ಚಳವಳಿಯನ್ನು ನಿಗ್ರಹಿಸಲು ಎನ್‌ಕೌಂಟರ್ ಒಂದೇ ಗುರಿ ಎಂದು ಸರ್ಕಾರ ನಂಬಿಕೊಂಡಿರುವಾಗ, ಈ ನೆಲದ ದಲಿತರು, ಆದಿವಾಸಿಗಳ ರಕ್ಷಣೆಗೆ ಹಿಂಸೆಯೊಂದೇ ಹಾದಿ ಎಂದು ನಕ್ಸಲರು ನಂಬಿಕೊಂಡಿದ್ದಾರೆ. ಎರಡೂ ತಪ್ಪು ಹಾದಿಗಳು ನಿಜ, ಆದರೆ, ತಪ್ಪು ಸರಿಪಡಿಸುವ ನೈತಿಕ ಜವಬ್ದಾರಿ ಸರ್ಕಾರದ ಮೇಲಿದೆ ಎಂದು ನಕ್ಸಲ್ ಹೋರಾಟ ಕುರಿತ ತಮ್ಮ ಅನಿಸಿಕೆಯನ್ನು ಹೊರ ಜಗತ್ತಿನ ಜೊತೆ ಹಂಚಿಕೊಂಡಿದ್ದರು.

1990 ರಿಂದ ಈ ದಂಪತಿಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದ ಮಹಾರಾಷ್ಟ್ರದ ಪೊಲೀಸರು ಇವರನ್ನು ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾನ್ನಾಗಿಸಲು ಪ್ರಯತ್ನಿಸಿದ್ದರು. 92ರಲ್ಲಿ ನಾಗಪುರ ನಗರದಲ್ಲಿ ಸರ್ಕಾರದ ನಿಷೇಧಾಜ್ಞೆ ನಡುವೆ ಇವರು ಏರ್ಪಡಿಸಿದ್ದ ತೆಲುಗಿನ ಕ್ರಾಂತಿಕಾರಿ ಕವಿ ಗದ್ದಾರ್‌ನ ಹಾಡು ಮತ್ತು ನೃತ್ಯದ ಕಾರ್ಯಕ್ರಮಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ದಲಿತ ಮತ್ತು ಆದಿವಾಸಿಗಳು ಸೇರಿದ್ದರು. ಪೊಲೀಸರ ಪ್ರತಿಭಟನೆ ನಡುವೆ ವೇದಿಕೆ ಏರಿದ ಗಾಯಕ ಗದ್ದಾರ್ ಹಾಡಲು ಶುರು ಮಾಡುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದರು. ಪ್ರತಿಭಟಿಸಿದ ಜನರಿಗೆ ಲಾಠಿ ಏಟಿನ ರುಚಿ ತೋರಿಸಿದರು. ಇದೊಂದು ಕಾರ್ಯಕ್ರಮವನ್ನು ನೆಪವಾಗಿರಿಸಿಕೊಂಡು ಮಹರಾಷ್ಟ್ರ ಸರ್ಕಾರ ಕೊಬದ್ ಮತ್ತು ಅನುರಾಧ ಮೇಲೆ ಸಮಾಜದ ಶಾಂತಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂಬ ಮೊಕದ್ದೊಮ್ಮೆಯೊಂದನ್ನು ದಾಖಲಿಸಿದರು. ನಿರಂತರ ಪೊಲೀಸರ ಕಿರುಕುಳದಿಂದ ಬೇಸತ್ತು ಹೋಗಿದ್ದ ಈ ದಂಪತಿಗಳು ಅಂತಿಮವಾಗಿ ನಾಡನ್ನು ತೊರೆದು ಬಸ್ತಾರ್ ವಲಯದ ಕಾಡನ್ನು ಸೇರಿಕೊಂಡರು.

ನಕ್ಸಲರ ಸಹಾಯ ಮತ್ತು ಬೆಂಬಲದಿಂದ ಅಂದಿನ ಅವಿಭಜಿತ ಮಧ್ಯಪ್ರದೇಶದ (ಛತ್ತೀಸ್ ಗಡ ಸೇರಿದಂತೆ) ಅರಣ್ಯವಾಸಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಕೊಬಡ್ ಗಾಂಡಿ ಮತ್ತು ಅನುರಾಧ ತಮ್ಮನ್ನು ಸಮರ್ಪಿಸಿಕೊಂಡರು. ಲಿಪಿಯಿಲ್ಲದ ಗೊಂಡಿ ಭಾಷೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಇಬ್ಬರೂ ಅರಣ್ಯದ ನಡುವೆ ನಕ್ಸಲರ ಗುಡಾರದಲ್ಲಿ ವಾಸವಾಗಿದ್ದುಕೊಂಡು ಚಿತ್ರಗಳ ಮೂಲಕ ಶಿಕ್ಷಣ ನೀಡಬಹುದಾದ ಪಠ್ಯ ಮತ್ತು ಚಿತ್ರಗಳನ್ನು ತಯಾರಿಸಿದರು. ಬಸ್ತರ್ ಅರಣ್ಯ ಪ್ರದೇಶದಲ್ಲಿ ನೂರಾರು ಟೆಂಟ್ ಶಾಲೆಗಳನ್ನು ಆರಂಭಿಸಿ, ಮಕ್ಕಳಿಗೆ ಅಕ್ಷರ ಕಲಿಸಿಕೊಡುವುದರ ಜೊತೆಗೆ ಗೊಂಡ ಮತ್ತು ಮುರಿಯ ಜನಾಂಗದ ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಪಾಠ ಹೇಳಿಕೊಟ್ಟರು. ಪ್ರಾಥಮಿಕ ಆರೋಗ್ಯ ಚಿಕಿತ್ಸೆಯ ಬಗ್ಗೆ ವಿವರ ನೀಡಿ ಔಷಧಗಳನ್ನು ಉಚಿತವಾಗಿ ಹಂಚಿದರು. ಇವತ್ತಿಗೂ ಮಧ್ಯಭಾರತದ ಅರಣ್ಯ ವಾಸಿಗಳ ಸರಾಸರಿ ವಯಸ್ಸು ಕೇವಲ 55 ವರ್ಷ ಮಾತ್ರ. ತಾವು ಯಾವ ಕಾಯಿಲೆಗೆ ಬಲಿಯಾಗಿದ್ದೇವೆ ಎಂದು ತಿಳಿಯಲಾರದೇ ಸಾವನ್ನಪ್ಪುತ್ತಿದ್ದಾರೆ. ಕೊಬಡ್ ಗಾಂಡಿ ಶಿಕ್ಷಣಕ್ಕೆ ಒತ್ತು ಕೊಟ್ಟು ದುಡಿಯುತ್ತಿದ್ದ ಸಂದರ್ಭದಲ್ಲಿ ಅನುರಾಧ ಮಹಿಳೆಯರ ಅರೋಗ್ಯ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಿದರು. ಇವರ ಎಲ್ಲಾ ಚಟುವಟಿಕೆಗಳಿಗೆ ನಕ್ಸಲರು ಆರ್ಥಿಕ ನೆರವನ್ನು ಒದಗಿಸುತ್ತಿದ್ದರು.

1998ರಲ್ಲಿ ನಕ್ಸಲರ ನೆರವಿನಿಂದ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದ ಹಾಡಿಯ ಬಳಿ ಕೆರೆಗಳನ್ನು ನಿರ್ಮಿಸಲು ನಿರ್ಧರಿಸಿದ ಅನುರಾಧ ಶ್ರಮಧಾನದ ಮೂಲಕ 158 ಕೆರೆಗಳನ್ನು ನಿರ್ಮಿಸಿದರು. ಪ್ರತಿ ದಿನದ ಕೂಲಿಯಾಗಿ ಒಬ್ಬೊಬ್ಬರಿಗೆ ಒಂದು ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಮಧ್ಯಪ್ರದೇಶ ಸರ್ಕಾರ ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ 20 ಲಕ್ಷ ರೂಪಾಯಿ ನೀಡಲು ಮುಂದೆ ಬಂದಾಗ ನಿರ್ದಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಿದರು.

ನಗರದ ವಾತಾವರಣದಲ್ಲಿ ಬೆಳೆದಿದ್ದ ಈ ಎರಡು ಜೀವಗಳು ತಾವು ನಂಬಿದ್ದ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಲು ಅರಣ್ಯ ಜೀವನವನ್ನು ಆರಿಸಿಕೊಂಡ ಫಲವಾಗಿ 15 ವರ್ಷಗಳ ಆರಣ್ಯದ ಬದುಕಿನಲ್ಲಿ ಗುರುತು ಸಿಗಲಾರದಷ್ಟು ಬದಲಾಗಿ ಹೋಗಿದ್ದರು. ಅಕಾಲ ವೃದ್ಧಾಪ್ಯ ಅವರನ್ನು ಆವರಿಸಿಕೊಂಡಿತ್ತು. ಊಟ ನಿದ್ರೆ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಏರು ಪೇರಾಗಿತ್ತು. ಸದಾ ಪೊಲೀಸರ ಗುಂಡಿನ ದಾಳಿಯ ತೂಗುಕತ್ತಿಯ ಕೆಳೆಗೆ ಬದುಕು ದೂಡಬೇಕಾಗಿ ಬಂದ ಕಾರಣ ಕೆಲವು ಸಂದರ್ಭದಲ್ಲಿ ಅರಣ್ಯದಲ್ಲಿ ದಿನವೊಂದಕ್ಕೆ 20 ಕಿಲೋಮೀಟರ್ ನಡೆಯಬೇಕಾದ್ದು ಅನಿವಾರ್ಯವಾಯಿತು. 2007ರ ವೇಳೆಗೆ ಮಲೇರಿಯಾ ಕಾಯಿಲೆಗೆ ತುತ್ತಾದ ಅನುರಾಧ ನಂತರದ ದಿನಗಳಲ್ಲಿ ಅಂಗಾಂಗ ವೈಫಲ್ಯದ ಕಾಯಿಲೆ ಬಲಿಯಾಗ ಬೇಕಾಯಿತು. ಎರಡು ಬಾರಿ ಗುಪ್ತವಾಗಿ ಮುಂಬೈ ನಗರಕ್ಕೆ ಬಂದು ತನ್ನ ಅಣ್ಣ ಪ್ರಸಿದ್ಧ ರಂಗಕರ್ಮಿ ಸುನಿಲ್ ಶಾನ್‌ಬೋಗ್ ನೆರವಿನಿಂದ ಚಿಕಿತ್ಸೆ ಪಡೆದರು ಕೂಡ ಆ ವೇಳೆಗಾಗಲೇ ಕಾಲ ಮೀರಿ ಹೋಗಿತ್ತು. 2008 ಏಪ್ರಿಲ್ 8 ರಂದು ಬಸ್ತಾರ್  ಅರಣ್ಯ ನಿವಾಸಿಗಳ ಎದುರಲ್ಲಿ ಕೊನೆಯವರೆಗೂ ಅವರ ಸೇವೆ ಮಾಡಿದ ಸಂತೃಪ್ತಿಯಲ್ಲಿ ಅನುರಾಧ ಪ್ರಾಣಬಿಟ್ಟರು. ತನ್ನ ಬಾಳಸಂಗಾತಿಯ ಸಾವು ಕೊಬದ್ ಗಾಂಡಿಯ ಬದುಕಿನಲ್ಲಿ ದುಖಃಕ್ಕಿಂತ ಇನ್ನಷ್ಟು ಬದ್ಧತೆಯನ್ನು ಹೆಚ್ಚಿಸಿತು. ಆಕೆಯ ಛಲ, ಬಾಯಿಲ್ಲದವರ ಪರವಾಗಿ ಅನುರಾಧ ಎತ್ತಿದ ಪ್ರತಿಭಟನೆಯ ಧ್ವನಿ ಇವೆಲ್ಲವೂ ಕೊಬದ್ ಗಾಂಡಿಯ ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು. ಆದರೆ, ಆ ವೇಳೇಗಾಗಲೇ ಅವರ ಮನಸ್ಸು ದೇಹ ಎರಡೂ ದಣಿದಿದ್ದವು. ಮರು ವರ್ಷ ಅಂದರೆ, 2009ರಲ್ಲಿ ಅವರ ಅನಾರೋಗ್ಯವೂ ಹದಗೆಟ್ಟಿತು. ಚಿಕಿತ್ಸೆಗಾಗಿ ದೆಹಲಿಗೆ ಬಂದು ಪೊಲೀಸರ ಬಂಧಿಯಾಗಿ ತಿಹಾರ್ ಸೆರೆಮನೆಯಲ್ಲಿ ಅತ್ಯಂತ ಸುರಕ್ಷಿವಾದ ಜಾಗದಲ್ಲಿ ವಿಚಾರಣಾ ಕೈದಿಯಾಗಿ ಈಗ ದಿನ ನೂಕುತ್ತಿದ್ದಾರೆ. ಅವರ ಚಿಂತನೆಯಾಗಲಿ, ಪ್ರಖರ ವೈಚಾರಿಕತೆಯಾಗಲಿ, ಭವಿಷ್ಯ ಭಾರತದ ಬಗೆಗಿನ ಕನಸಾಗಲಿ, ಇವುಗಳು ಸೆರೆಮನೆಯ ವಾಸದಿಂದ ಒಂದಿಷ್ಟು ಮುಕ್ಕಾಗಿಲ್ಲ. ಮತ್ತಷ್ಟು ಬಲಿಷ್ಟವಾಗಿವೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ದೆಹಲಿ ಮೂಲದ ಪತ್ರಕರ್ತ ರಾಹುಲ್ ಪಂಡಿತ್ ಎಂಬುವರ ಕೃತಿಗೆ ಇವರು ಬರೆದಿರುವ ಒಂದು ಪತ್ರ ಅಭಿವೃದ್ಧಿಯ ಅಂಧಯುಗದಲ್ಲಿ ಹಾದಿ ತಪ್ಪಿರುವ ಭಾರತಕ್ಕೆ ಬೆಳಕಾಗಬಲ್ಲದು.

ಇತ್ತ ನಾಗಪುರ ನಗರದಲ್ಲಿ ಇವರ ವಾಸವಾಗಿದ್ದ ಅಂಚೆ ಕಚೇರಿಯ ದಲಿತ ನೌಕರನೊಬ್ಬನ ಬಾಡಿಗೆ ಮನೆ ಈಗಲೂ ಖಾಲಿ ಉಳಿದಿದೆ. ದೀದಿ (ಅನುರಾಧ) ಸಾವಿನ ಸುದ್ಧಿ ತಿಳಿದ ಮನೆಯ ಮಾಲಿಕ ಗಾಂಧಿ ಸಾಹೇಬ್ ಬಂದರೆ (ಕೊಬದ್ ಗಾಂಡಿ), ಅವರಿಗಾಗಿ ಮನೆ ಇರಲಿ ಎಂದು ಕಾಯ್ದಿರಿಸಿದ್ದಾನೆ. ಆ ಮನೆಯ ಬಾಗಿಲಿಗೆ ಅಂಟಿಸಿದ್ದ ಭಗತ್ ಸಿಂಗ್ ಚಿತ್ರ ಕೂಡ ಹಾಗೇ ಉಳಿದಿದೆ. ಇವತ್ತು ಬಂಡಾರ, ಗಡ್ ಚಿರೋಲಿ, ಚಂದ್ರಾಪುರ್ ಗೊಂಡಿಯಾ, ಬಾಳ್ಘಾಟ್ ಬಸ್ತಾರ್ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಅಲ್ಲಿನ ಬುಡಕಟ್ಟು ಜನಾಂಗ ಅನುರಾಧ ದೀದಿಯ ನೆನಪಲ್ಲಿ ಕಾಂತಿಕಾರಿ ಹಾಡೊಂದನ್ನು ಕಟ್ಟಿ ಗೊಂಡಿ ಭಾಷೆಯಲ್ಲಿ ಹಾಡುತ್ತಾರೆ. ಆ ಹಾಡಿನ ಅರ್ಥ ಹೀಗಿದೆ:

ನಾನು ಹಾಡುವ ಹಾಡಿಗೆ ಸಾವಿರ ವರ್ಷಗಳ ಇತಿಹಾಸವಿದೆ.
ದುಃಖ ದುಮ್ಮಾನದ ನಡುವೆ ಅದಕೆ ಅಷ್ಟೇ ಸಿಟ್ಟಿದೆ.
ನಾನು ಹಾಡುವ ಕಹಿ ರುಚಿಯ ಹಾಡಿನ ಅರ್ಥ ಹಳೆಯದು,
ಆದರೆ ಹಾಡುವ ರಾಗ ಮಾತ್ರ ಹೊಸದು. ಅದು ನನ್ನದು.
ಇದರಿಂದ ನಿಮಗೆ ಭಯವಾದರೆ ಕಾರಣ ನಾನಲ್ಲ,
ಈ ಕ್ರೂರ ವ್ಯವಸ್ಥೆಯದು, ಅದರ ಭಾಗವಾದ ನಿಮ್ಮದು.

ನಕ್ಸಲ್ ಹೋರಾಟದ ಕಥನದಲ್ಲಿ ಇಂತಹ ನೂರಾರು ಮನಕರಗುವ ಘಟನೆಗಳಿವೆ. ನಮ್ಮ ಕನ್ನಡಿಗ ಸಾಕೇತ್‌ ರಾಜನ್ ಮತ್ತು ಅವರ ಪತ್ನಿ ರಾಜೇಶ್ವರಿ ಎಂಬ ಹೆಣ್ಣು ಮಗಳ ಹೋರಾಟದ ಬದುಕು ಕೂಡ ಕೊಬದ್ ಗಾಂಡಿ ದಂಪತಿಗಳ ಬದುಕಿಗಿಂತ ಭಿನ್ನವಾಗಿಲ್ಲ. ಆದರೆ ಪ್ರಶ್ನೆಯಿರುವುದೇ ಇಲ್ಲಿ. ಯಾಕೆ ವಿದ್ಯಾವಂತರು, ಬುದ್ಧಿಜೀವಿಗಳು ನಕ್ಸಲರ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ ಎಂಬ ಪ್ರಶ್ನೆಯಿಟ್ಟುಕೊಂಟು ಭಾರತದ ಆದಿವಾಸಿಗಳ ನೋವಿನ ಹಾಗೂ ಧಾರುಣವಾದ ಬದುಕನ್ನು ಗಮನಿಸಿದರೆ, ಯಾರಿಗೂ ಇವರ ನೋವಿನ ಕಥೆ ಬರೆಯಲು ಲೇಖನಿ ಕೈಗೆತ್ತಿಕೊಳ್ಳಬೇಕು ಎನಿಸುವುದಿಲ್ಲ. ಮುಂದಿನ ಅಧ್ಯಾಯದಲ್ಲಿ ತೆರೆದಿಡುವ ಆದಿವಾಸಿಗಳ ನೋವಿನ ಕಥನ ಅವರು ಅಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಬಂದೂಕು ಕೈಗೆತ್ತಿಕೊಳ್ಳಲು ಇದ್ದಿರಬಹುದಾದ ಕಾರಣಗಳನ್ನು ಬಿಚ್ಚಿಡುತ್ತದೆ.

(ಮುಂದುವರಿಯುವುದು)

ಅಣುಸ್ಥಾವರಗಳ ಬಗೆಗಿನ ಭಯಾತಂಕಗಳು ಗುಂಡೇಟಿಗೆ ಅರ್ಹವೇ?


– ಡಾ. ಅಶೋಕ್. ಕೆ.ಆರ್.


 

ಕೂಡುಂಕುಳಂ ಅಣುಸ್ಥಾವರದಲ್ಲಿ ಮೊನ್ನೆ [10/09/1012] ಯುರೇನಿಯಂ ಇಂಧನವನ್ನು ತುಂಬುವುದರ ವಿರುದ್ಧ ನಡೆದ ಪ್ರತಿಭಟನೆ ಆ್ಯಂಟನಿ ಜಾನ್ ಎಂಬ ಮೀನುಗಾರನ ಹತ್ಯೆಯಿಂದ ಹೊಸ ತಿರುವು ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತೂತ್ತುಕುಡಿಯಲ್ಲಿ ಪೋಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ ಎಂಬುದು ಅಲ್ಲಿನ ಹಿರಿಯ ಪೋಲೀಸ್ ಅಧಿಕಾರಿಗಳ ಹೇಳಿಕೆ. ಇಷ್ಟಕ್ಕೂ ಪ್ರತಿಭಟನಾಕಾರರನ್ನು ಪ್ರತಿಭಟನೆಗೆ ಪ್ರಚೋದಿಸಿದ ಕಾರಣಗಳಾದರೂ ಯಾವುವು? ಅವುಗಳಿಗೆ ಸರ್ಕಾರ ಹಿಂಸೆ ಮತ್ತು ನಿರಾಕರಣೆ ಮೂಲಕವೇ ಉತ್ತರಿಸಬೇಕೆ?

ಮಾರ್ಚ್ 2011ರಲ್ಲಿ ಸುನಾಮಿ ಹೊಡೆತಕ್ಕೆ ತತ್ತರಿಸಿದ ಜಪಾನಿನಲ್ಲಿ ಫುಕುಶಿಮಾ ಅಣುಸ್ಥಾವರದ ದುರಂತವೂ ಸೇರಿಹೋಯಿತು. ಉತ್ಕೃಷ್ಟ ತಂತ್ರಜ್ಞಾನ, ಯಾವ ಭೂಕಂಪಕ್ಕೂ ಜಗ್ಗಲಾರದೆಂದೇ ನಂಬಲಾಗಿದ್ದ ಅಲ್ಲಿನ ಅಣುಸ್ಥಾವರ ವಿಜ್ಞಾನಿಗಳ ನಂಬುಗೆಯನ್ನು ತಲೆಕೆಳಗು ಮಾಡಿ ಸುನಾಮಿಯ ಹೊಡೆತಕ್ಕೀಡಾಗಿ ಪರಿಸರಕ್ಕೆ ವಿಷಾಣುಗಳನ್ನು ಬಿಡುಗಡೆ ಮಾಡಿ ವಿಶ್ವದೆಲ್ಲೆಡೆ ಅಣುಸ್ಥಾವರಗಳ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ನೀಡಿತು. ಬಹುತೇಕ ವಿದ್ಯುತ್ತನ್ನು ಅಣುಸ್ಥಾವರಗಳಿಂದಲೇ ಉತ್ಪಾದಿಸುವ ಜರ್ಮನಿಯಂಥ ದೇಶಗಳೂ ಸಹ ‘ಇನ್ನು ಮುಂದೆ ಹೊಸ ಅಣುಸ್ಥಾವರಗಳನ್ನು ನಿರ್ಮಿಸುವುದಿಲ್ಲ. ಬದಲಿ ಇಂಧನ ಮೂಲಗಳು ಅವಶ್ಯವಿರುವ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿದ್ದ ಹಾಗೆ ಈಗ ಚಾಲ್ತಿಯಲ್ಲಿರುವ ಅಣುಸ್ಥಾವರಗಳನ್ನೂ ಸ್ಥಗಿತಗೊಳಿಸಲಾಗುವುದು’ ಎಂದು ಘೋಷಿಸುವ ಹಾಗೆ ಮಾಡಿದ್ದು ಫುಕುಶಿಮಾ ದುರಂತ. ಈ ಮಧ್ಯೆ ಸಮುದ್ರ ತೀರದಲ್ಲೇ ನಿರ್ಮಿಸಲಾಗುತ್ತಿದ್ದ ಕೂಡುಂಕುಳಂ ಸ್ಥಾವರದ ವಿರುದ್ಧವೂ ಪ್ರತಿಭಟನೆ ಹೆಚ್ಚಾಗುತ್ತ ಸಾಗಿತು. ಅಣುಸ್ಥಾವರದ ವಿರುದ್ಧ ಈ ಮಟ್ಟಿಗಿನ ಭಯ ಅವಶ್ಯಕವೇ? ಅಭಿವೃದ್ಧಿ ಹೊಂದಿದ ದೇಶಗಳೆಲ್ಲ ಅಣುಸ್ಥಾವರ ವಿದ್ಯುತ್ತನ್ನೇ ನೆಚ್ಚಿಕೊಂಡಿರುವಾಗ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಅಣುಸ್ಥಾವರ ವಿರೋಧಿಸುವುದು ಸರಿಯೇ?

ವಿದ್ಯುಚ್ಛಕ್ತಿ ಇಂದಿನ ಅನಿವಾರ್ಯತೆ. ನಾನಿದನ್ನು ಟೈಪಿಸುವುದಕ್ಕೂ ನೀವಿದನ್ನು ಓದುವುದಕ್ಕೂ ವಿದ್ಯುತ್ ಬೇಕೇ ಬೇಕು. ಭಾರತದಲ್ಲಿಂದು ವಿದ್ಯುತ್ ನ ಪ್ರಮುಖ ಮೂಲ ಕಲ್ಲಿದ್ದಲು ಆಧಾರಿತ ಥರ್ಮಲ್ ಪ್ಲ್ಯಾಂಟ್ ಗಳು ಮತ್ತು ಹೈಡ್ರೋ ಪವರ್ ಪ್ರಾಜೆಕ್ಟುಗಳು. ಮೊದಲನೆಯದು ಇವತ್ತಲ್ಲ ನಾಳೆ ಖಾಲಿಯಾಗುವ ಇಂಧನ ಮೂಲ, ಎರಡನೆಯದು ಮಳೆಯಾಧಾರಿತ. ಸೋಲಾರ್ ಮತ್ತು ವಾಯು ವಿದ್ಯುತ್ ಉತ್ಪಾದನಾ ಘಟಕಗಳು ಇನ್ನೂ ಶೈಶಾವಸ್ಥೆಯಲ್ಲಿವೆ ಮತ್ತು ಇವತ್ತಿಗೆ ಭಾರತದಲ್ಲಿ ಲಭ್ಯವಿರುವ ತಂತ್ರಜ್ಞಾನದಲ್ಲಿ ದುಬಾರಿಯೂ ಹೌದು. ಮೇಲಿನ ಅನಿಶ್ಚಿತ ಘಟಕಗಳಿಗೆ ಹೋಲಿಸಿದರೆ ವರ್ಷದ ಎಲ್ಲ ದಿನವೂ ಅನಿಯಮಿತವಾಗಿ ವಿದ್ಯುತ್ ಉತ್ಪಾದಿಸಿ ಕೊಡಬಲ್ಲ ಅಣುಸ್ಥಾವರಗಳು ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಕಾಣುವುದು ಸತ್ಯ. ಅಣೆಕಟ್ಟೆ ಕಟ್ಟಿ ಊರು ಮುಳುಗಿಸುವ ಅವಶ್ಯಕತೆಯಿಲ್ಲ, ಕಲ್ಲಿದ್ದಲು ಸ್ಥಾವರಗಳಿಂದ ಟನ್ನುಗಟ್ಟಲೆ ಹೊರಬಂದು ಗಾಳಿ – ನೀರನ್ನು ಕಲುಷಿತಗೊಳಿಸುವ ಹಾರುಬೂದಿಯ ಸಮಸ್ಯೆಯೂ ಇಲ್ಲ. ಅಣುಸ್ಥಾವರದ ಬೆಂಬಲಿಗರು ಹೇಳುವಂತೆ ಅಣು ವಿದ್ಯುತ್ ‘ಕಡಿಮೆ ದರದ ಸ್ವಚ್ಛ ವಿದ್ಯುತ್’.

ಇದಷ್ಟೇ ಸತ್ಯವಾಗಿದ್ದರೆ ಇಷ್ಟರಮಟ್ಟಿಗಿನ ಪ್ರತಿಭಟನೆ ವಿಶ್ವವ್ಯಾಪಿಯಾಗಿ  ನಡೆಯುತ್ತಿರಲಿಲ್ಲ. ಅಣುಸ್ಥಾವರದ ಬಗೆಗಿನ ಮೂಲಭಯ ಅಣು ವಿಕಿರಣದ್ದು. ಅಣು ವಿಕಿರಣಗಳು ಹೆಚ್ಚುಹೆಚ್ಚು ವಾತಾವರಣಕ್ಕೆ ಸೇರಿದಲ್ಲಿ ಆಗುವ ಅನಾಹುತಗಳಿಗೆ ನಾಗಾಸಾಕಿ ಮತ್ತು ಹಿರೋಷಿಮಾದ ಉದಾಹರಣೆ ಸಾಕೇನೋ? ಸಣ್ಣಪುಟ್ಟ ಚರ್ಮದ ಸಮಸ್ಯೆ, ಕ್ಯಾನ್ಸರಿನಿಂದ ಹಿಡಿದು ಮನುಷ್ಯ, ಪ್ರಾಣಿ – ಪಕ್ಷಿಗಳ ವಂಶವಾಹಿನಿಯನ್ನೇ ಬದಲಿಸಿಬಿಡುವ ಶಕ್ತಿ ಈ ಅಣು ವಿಕಿರಣಗಳಿಗಿದೆ. 1979 ರಲ್ಲಿ ಪೆನಿಸಿಲ್ವೇನಿಯಾದ ಥ್ರೀ ಮೈಲ್ ದ್ವೀಪದಲ್ಲಿ, 1986ರಲ್ಲಿ ಉಕ್ರೇನಿನ ಚರ್ನೋಬೈಲಿನಲ್ಲಿ ನಡೆದ ಅಣುಸ್ಥಾವರ ದುರಂತಕ್ಕೆ ಅಂದಿನ ಕಳಪೆ ತಂತ್ರಜ್ಞಾನವನ್ನು ದೂರಲಾಯಿತು. ಆದರೆ ಜಪಾನಿನಲ್ಲಿ ನಡೆದಿದ್ದು? ಇಲ್ಲಿಯವರೆಗೂ ಅಣುಸ್ಥಾವರ ದುರಂತಗಳು ಎಂದು ಕರೆಯಬಹುದಾದ ಘಟನೆಗಳು ಮೂರೇ ಮೂರಾದರೂ ಒಂದೊಮ್ಮೆ ಇಂಥ ದುರಂತ ನಡೆದುಹೋದರೆ ಎಂಬ ಭೀತಿ ಅಣುಸ್ಥಾವರ ವಿರೋಧಿಗಳದ್ದು. ಅಣುಸ್ಥಾವರಕ್ಕಿಂತ ಹೆಚ್ಚಾಗಿ ಸ್ಥಾವರದಿಂದ ಉತ್ಪತ್ತಿಯಾಗುವ ತ್ಯಾಜ್ಯದ ವಿಲೇವಾರಿಗೆ ಇನ್ನೂ ಸರಿಯಾದ ಪರಿಹಾರ ಕಂಡುಹಿಡಿಯಲಾಗಿಲ್ಲ. ಇದೇ ರೀತಿಯ ಭಯ ಕೂಡುಂಕುಳಂನ ಜನರನ್ನೂ ಕಾಡಿದ್ದರೆ ಅದನ್ನು ತಪ್ಪೆನ್ನಲಾದೀತೆ? ಮೇಲಾಗಿ ಸ್ಥಾವರದಿಂದ ಸಮುದ್ರಕ್ಕೆ ಸೇರುವ ಬಿಸಿ ನೀರಿನಿಂದ ಜಲಚರಗಳು ಸಾವನ್ನಪ್ಪಿ ತಮ್ಮ ಜೀವನೋಪಾಯವೂ ಕೈತಪ್ಪುವುದೆಂಬ ಭಯ ಅಲ್ಲಿನ ಮೀನುಗಾರರಿಗೆ.

ಕೂಡುಂಕುಳಂನಲ್ಲಿ ಸ್ಥಾವರ ವಿರೋಧಿ ಚಳುವಳಿ ಇವತ್ತು ನಿನ್ನೆ ಹುಟ್ಟಿದ್ದಲ್ಲ. ವರುಷಗಳ ಹಿಂದೆ ಆರಂಭವಾದ ಚಳುವಳಿ ಹೆಚ್ಚು ಪ್ರಖರವಾಗಿದ್ದು ಜಪಾನ್ ಅಣು ದುರಂತದ ನಂತರ. ಜನರ ಭೀತಿಯನ್ನು ಹೋಗಲಾಡಿಸಲು ವಿಫಲವಾದ ಸರಕಾರಗಳು ಗೋಲಿಬಾರಿನಿಂದ ಚಳುವಳಿಯನ್ನು ಹತ್ತಿಕ್ಕಲು ಹೊರಟಿವೆ. ಅಣುಸ್ಥಾವರವೊಂದೇ ಅಲ್ಲ, ದೇಶದ ಯಾವ ಮೂಲೆಯಲ್ಲೂ ದೊಡ್ಡ ವಿದ್ಯುತ್ ಸ್ಥಾವರ, ದೊಡ್ಡ ಅಣೆಕಟ್ಟೆಗಳನ್ನು ಕಟ್ಟುವಾಗಲೂ ಕೂಡ ಜನರ ವಿರೋಧ ಪ್ರಬಲವಾಗೇ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಹಿಂದಿನ ಬೃಹತ್ ಯೋಜನೆಗಳಲ್ಲಿ ಆ ಯೋಜನಾಸ್ಥಳದ ಸುತ್ತಮುತ್ತಲಿನ ಜನರಿಗಾದ ಅನ್ಯಾಯಗಳು. ಸರಿಯಾದ ಪುನರ್ವಸತಿ ಕಲ್ಪಿಸುವಲ್ಲಿ ವಿಫಲಗೊಳ್ಳುವ, ಯೋಜನೆಗಳಿಂದ ಸುತ್ತಮುತ್ತಲಿನ ಪರಿಸರದ ಮೇಲಾಗುವ ದುಷ್ಟರಿಣಾಮಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸರಕಾರಗಳನ್ನು ಜನ ನಂಬುವುದಾದರೂ ಹೇಗೆ? ಅಣುಸ್ಥಾವರಗಳ ವಿಷಯದಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ನಿಗೂಢತೆ ಕಾಯ್ದುಕೊಳ್ಳುವ ಸರಕಾರದ ನೀತಿ ಕೂಡ ಜನರಲ್ಲಿ ಭೀತಿಯುಂಟುಮಾಡುತ್ತದೆ.

ಸುಳ್ಯದಿಂದ ಮೂವತ್ತು ಕಿಮಿ ದೂರದಲ್ಲಿರುವ ಉರುಳುಗುಂಡಿ ಜಲಪಾತಕ್ಕೆ ಭೇಟಿನೀಡಿದ್ದಾಗ ಜಲಪಾತದ ಮೇಲ್ಬಾಗದಿಂದ ಪೈಪುಗಳನ್ನೆಳೆದು ಮನೆಗಳ ಬಳಿಯೇ ವರುಷದ ಎಲ್ಲ ಕಾಲದಲ್ಲೂ ವಿದ್ಯುತ್ ಉತ್ಪಾದಿಸಿ ನಾಲ್ಕಾರು ಮನೆಗಳಿಗೆ ಬಳಸಿಕೊಳ್ಳುವ ವಿಧಾನವನ್ನು ಕಂಡಿದ್ದೆ. ಅರ್ಧ ಹಣವನ್ನು ಸರಕಾರದಿಂದ ಸಹಾಯಧನವಾಗಿ ಪಡೆದು ಅಲ್ಲಿನ ಜನರೇ ಅಳವಡಿಸಿಕೊಂಡ ವಿಧಾನವದು. ಹೆಚ್ಚೇನೂ ಖರ್ಚಾಗದ, ಪರಿಸರಕ್ಕೆ ಯಾವ ರೀತಿಯಿಂದಲೂ ಹಾನಿಯುಂಟುಮಾಡದ ಇಂಥ ಸರಳ ಯೋಜನೆಗಳ್ಯಾಕೆ ಹೆಚ್ಚಿನ ಅಧಿಕಾರಸ್ಥರಲ್ಲಿ ಆಸ್ಥೆ ಮೂಡಿಸುವುದಿಲ್ಲ? ಮಲೆನಾಡಿನ ಇಂಥ ಜಲಪಾತಗಳು, ಉತ್ತರ ಕರ್ನಾಟಕದ ಯಥೇಚ್ಛ ಬಿಸಿಲು ಯಾಕೆ ಶಕ್ತಿ ಮೂಲದಂತೆ ಕಾಣುವುದಿಲ್ಲ? ಹತ್ತಿರದಲ್ಲೋ ದೂರದಲ್ಲೋ ಪರಿಸರಕ್ಕೆ ಮಾರಕವಾಗಿ ಪರಿಣಮಿಸುವ ಕೋಟ್ಯಾಂತರ ರುಪಾಯಿ ಬೇಡುವ ಬೃಹತ್ ಯೋಜನೆಗಳೆಡೆಗೆ ತೋರಿಸುವ ಆಸಕ್ತಿಯ ಕೊಂಚ ಪಾಲು ಬದಲಿ ವಿದ್ಯುತ್ ತಂತ್ರಜ್ಞಾನದ ಅಭಿವೃದ್ಧಿಗೂ ತೋರಿಸಿದರೆ ಆ್ಯಂಟನಿಯಂಥ ಅಮಾಯಕರ ಹತ್ಯೆಯನ್ನಾದರೂ ತಪ್ಪಿಸಬಹುದಲ್ಲವೇ? ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕೂಡುಂಕುಳಂ ಗಲಭೆಯ ಬಗ್ಗೆ ಪ್ರತಿಕ್ರಯಿಸುತ್ತ ‘ಈ ಪ್ರತಿಭಟನೆ ವಿದೇಶಿ ಎನ್ ಜಿ ಒ.ಗಳ ಕೈವಾಡ’ ಎಂದು ಹೇಳಿದ್ದಾರೆ! ತಿಂಗಳುಗಳ ಹಿಂದೆ ಪ್ರಧಾನಿಯವರೂ ಇದೇ ತೆರನಾದ ಹೇಳಿಕೆ ಕೊಟ್ಟಿದ್ದರು. ಅಣುಸ್ಥಾವರಕ್ಕೆ ಸರಬರಾಜಾಗುವ ಯುರೇನಿಯಂ ಕೂಡ ವಿದೇಶದ್ದೇ ಅಲ್ಲವೇ? ಪ್ರತಿಭಟನೆಯ ಹಿಂದೆ ವಿದೇಶಿ ಕೈವಾಡವಿರುವುದು ನಿಜವೇ ಆದಲ್ಲಿ ವಿದೇಶಿ ಶಕ್ತಿಗಳು ‘ಕೈ’ಯಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟವರ್ಯಾರು? ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಲಾಠಿ ಏಟು, ಗುಂಡಿನೇಟು ತಿಂದವರು ನಮ್ಮ ದೇಶದವರೇ ಅಲ್ಲವೇ? ಮೀನುಗಾರನ ಹತ್ಯೆಯಿಂದ ಪ್ರತಿಭಟನೆ ಹೆಚ್ಚಾದಲ್ಲಿ ‘ಇದರ ಹಿಂದೆ ಮಾವೋವಾದಿಗಳ ಕೈವಾಡವಿದೆ’ ಎಂದು ಹೇಳಲೂ ಇವರು ಹಿಂಜರಿಯಲಾರರು. ಪೋಲೀಸರ ಜಾಗದಲ್ಲಿ ಅರೆಸೇನಾ ಪಡೆಗಳನ್ನು ಕರೆಸಿ ‘ದೇಶರಕ್ಷಣೆಯ’ ಹೆಸರಿನಲ್ಲಿ ಮೀನುಗಾರರನ್ನು ‘ಮಾವೋವಾದಿಗಳೆಂದು’ ಹತ್ಯೆಗೈದು ಅಣುಸ್ಥಾವರ ನಿರ್ಮಿಸಲು ಆಗ ಸುಲಭವಾಗುತ್ತದೆಯಷ್ಟೇ!