ಕಂಚ ಐಲಯ್ಯ, ಚಂದ್ರಬಾನು ಪ್ರಸಾದ್, ಡಿಆರ್‌ಎನ್: ವಿಧ್ವಂಸಕಾರಿ ಮತ್ತು ಒಳಗೊಳ್ಳುವಿಕೆ


-ಬಿ. ಶ್ರೀಪಾದ್ ಭಟ್


 

1995 ರ ವರ್ಷವಿರಬೇಕು. ಬೆಂಗಳೂರಿನ ಯವನಿಕಾದಲ್ಲಿ ಲೇಖಕ ಮಂಗ್ಳೂರು ವಿಜಯ ಅವರು ಅನುವಾದಿಸಿದ “ನಾನೇಕೆ ಹಿಂದು ಅಲ್ಲ” ಎನ್ನುವ ಪುಸ್ತಕದ ಬಿಡುಗಡೆ ಮತ್ತು ವಿಚಾರ ಸಂಕಿರಣ ಇತ್ತು. ಇದರ ಮೂಲ ಲೇಖಕ ದಲಿತ ಚಿಂತಕರಾದ ಕಂಚ ಐಲಯ್ಯ. ಅಂದಿನ ಸಮಾರಂಭದಲ್ಲಿ ದಿವಂಗತ ಡಿ.ಆರ್.ನಾಗರಾಜ, ದಲಿತ ಹೋರಾಟಗಾರರಾದ ಗಂಗಾಧರ ಮೂರ್ತಿಯವರು ಭಾಗವಹಿಸಿದ್ದರು. ಪುಸ್ತಕ ಬಿಡುಗಡೆಗೊಳ್ಳುವ ವೇಳೆಯಲ್ಲಿ ಹಿನ್ನೆಲೆಯಲ್ಲಿ ಮಂಗಳ ವಾದ್ಯವನ್ನು ನುಡಿಸಲಾಗಿತ್ತು. ಇದಕ್ಕೆ ಹೋರಾಟಗಾರರಾದ ಗಂಗಾಧರ ಮೂರ್ತಿಯವರು ಆಕ್ಷೇಪಣೆ ವ್ಯಕ್ತಪಡಿಸಿದರು. “ನಾನೇಕೆ ಹಿಂದು ಅಲ್ಲ” ಎನ್ನುವಂತಹ ವೈಚಾರಿಕ ಕೃತಿ ಬಿಡುಗಡೆ ಮಾಡುವಾಗ ಹಿಂದೂ ಧರ್ಮದ ಸನಾತನ ಪರಂಪರೆಯ ಈ ಮಂಗಳ ವಾದ್ಯವನ್ನು ನುಡಿಸುವುದು ಇಡೀ ವಿಚಾರ ಸಂಕಿರಣದ ಹಿನ್ನೆಲೆಗೆ ಅಪಮಾನಕರ ಎನ್ನುವ ಅರ್ಥದಲ್ಲಿ ಗಂಗಾಧರ ಮೂರ್ತಿಯವರು ಹೇಳಿದರು. ಆದರೆ ಡಿ.ಆರ್.ನಾಗರಾಜ್ ಇದಕ್ಕೆ ಒಪ್ಪಲಿಲ್ಲ. ಇದರಲ್ಲಿ ತಪ್ಪೇನಿಲ್ಲ, ನಾವೆಲ್ಲ ಇನ್ನು ಮುಂದೆ ಒಳಗೊಳ್ಳುವಿಕೆಯ (Inclusive policy) ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ದಿವಂಗತ ಡಿ.ಆರ್.ಎನ್. ಹೇಳಿದ್ದು ನೆನಪು.

ಮೊನ್ನೆ 17 ವರ್ಷಗಳ ನಂತರ ಯವನಿಕಾದಲ್ಲಿ ನಡೆದ “ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳು ಹಾಗು ಮುಂದಿನ ದಾರಿ” ಎನ್ನುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ದಲಿತ ಚಿಂತಕ “ಕಂಚ ಐಲಯ್ಯ” ಅವರ ಭಾಷಣವನ್ನು ಕೇಳಿದಾಗ ಮೇಲಿನ ಘಟನೆ ನೆನಪಾಯಿತು. ತಮ್ಮ ತಡೆರಹಿತ ಭಾಷಣದಲ್ಲಿ ಐಲಯ್ಯನವರು ಪುರೋಹಿತಶಾಹಿ ಪರಂಪರೆಗಳಿರಲಿ, ಹಿಂದುಳಿದವರ ದಲಿತರ ಎಲ್ಲಾ ಅವೈದಿಕ ಸ್ಮೃತಿಗಳನ್ನು, ತತ್ವಗಳನ್ನು, ನೆಲ ಸಂಸ್ಕೃತಿಯನ್ನು ಸಹ ಸಂಪೂರ್ಣವಾಗಿ ನಿರಾಕರಿಸಿದರು. ಎಲ್ಲಾ ಹಿಂದುಳಿದ ಮತ್ತು ದಲಿತ ಜಾತಿಗಳು ಇವಕ್ಕೆಲ್ಲ ತಿಲಾಂಜಲಿ ಕೊಟ್ಟು ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂ ಮತದೆಡೆಗೆ ಪಯಣಿಸಬೇಕು ಎಂದು ಅತ್ಯಂತ ರ್‍ಯಾಡಿಕಲ್ ಆಗಿ ಪ್ರತಿಪಾದಿಸಿದರು.

ಈ ಭಾಷಣದ ಭರದಲ್ಲಿ ಗಾಂಧಿ ಹಾಗೂ ಲೋಹಿಯಾರವರನ್ನು “ಅಪಾಯಕಾರಿ ಬನಿಯಾಗಳೆಂದು” ಜರಿದು ಇವರ ಚಿಂತನೆಗಳಿಗೆ ಇಂದು ಪ್ರೇಕ್ಷಕರಿಲ್ಲ ಎಂದೇ ಹೀಗೆಳೆದರು. ಐಲಯ್ಯನವರು ಪ್ರತಿಪಾದಿಸುವ ಈ ವಸ್ತುನಿಷ್ಠ ಮಾದರಿ ದಲಿತರಿಗಾಗಲಿ, ಹಿಂದುಳಿದ ಮಾದರಿಗಾಗಲಿ ಯಾವುದೇ ಹೊಸ ಮಾರ್ಗಗಳನ್ನು, ದಿಕ್ಕುಗಳನ್ನು ತೋರಲಾರವೆಂದು ನನಗೂ ಮತ್ತು ಗೆಳೆಯರಿಗೂ ಅಂದು ಮನದಟ್ಟಾಯಿತು. ಏಕೆಂದರೆ ಗಾಂಧಿ ಮತ್ತು ಲೋಹಿಯಾರವರು ತಮ್ಮ ಅಪೂರ್ವ ಸೈದ್ಧಾಂತಿಕ ಮತ್ತು ವೈಚಾರಿಕ ಚಿಂತನೆಗಳ ಮೂಲಕ, ಸರ್ವ ಜನಾಂಗದ ಶಾಂತಿಯ ತೋಟಕ್ಕಾಗಿ ನಿರಂತರವಾಗಿ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ 30 ವರ್ಷಗಳ ಕಾಲ ಭೌತಿಕವಾಗಿ ಭಾಗವಹಿಸಿ ಕಟ್ಟಿದ ಸಹನೆ, ಸಹಬಾಳ್ವೆ, ಸರ್ವರಿಗೂ ಸಮಪಾಲು ತತ್ವಗಳನ್ನು ಐಲಯ್ಯನವರು ಈ ರೀತಿಯಾಗಿ ಗಾಂಧಿ ಅಥವಾ ಲೋಹಿಯಾರನ್ನು ಅಪಾಯಕಾರಿಗಳೆಂದು ಜರಿದು ಏಕರೂಪಿಯಾಗಿ ಹರಿಯುವ ತಮ್ಮ ಈ ಅತಿಯಾದ ರ್‍ಯಾಡಿಕಲ್ ತತ್ವಗಳ ಮೂಲಕ ಒಂದೇ ಏಟಿಗೆ ಹೊಡೆದುರುಳಿಸುವ ಈ ವಿಧ್ವಂಸಕಾರಿ ಚಿಂತನೆಗಳು ಬಲು ಸೀಮಿತ ನೆಲೆಯುಳ್ಳದ್ದು. ಐಲಯ್ಯನವರ ಚಿಂತನೆಗಳು ಸಂಪೂರ್ಣ ನಿರಾಕರಣೆಯ ಮಾದರಿಯಾಗಿದ್ದರೆ ಗಾಂಧಿ ಮತ್ತು ಲೋಹಿಯಾರ ತತ್ವಗಳು ವ್ಯಾಪಕ ಹರಹು ಮತ್ತು ಒಳಗೊಳ್ಳುವಿಕೆಯ (Inclusive policy) ದಾರಿದೀಪಗಳು.

ಇಲ್ಲಿ ಕೇವಲ ಆದರ್ಶಗಳ ಬೊಗಳೆಗಳಿಲ್ಲ. ಬದಲಾಗಿ ಇಲ್ಲಿ ಅನೇಕ ಪರಿಹಾರ ಮಾರ್ಗಗಳಿವೆ. ಗಾಂಧಿ ಮತ್ತು ಲೋಹಿಯಾರನ್ನು ಒಬ್ಬ ಸಾಮಾನ್ಯ ಮನುಷ್ಯನ ನೆಲೆಗಟ್ಟಿನಲ್ಲಿ ಗ್ರಹಿಸದೆ ಬೇಕೆಂತಲೇ ಮಾರ್ಕ್ಸ್‌ವಾದಿಗಳ ತೀವ್ರವಾದಿ ನೆಲೆಗಟ್ಟಿನಲ್ಲಿ ನೋಡುವುದರ ಮೂಲಕ ಐಲಯ್ಯನವರು ಇಂಡಿಯಾ ನೆಲದಲ್ಲಿರುವ ಸೆಕ್ಯುಲರಿಸಂನ ತತ್ವಾಧಾರಿತ ರಾಜಕಾರಣದ ಅಸ್ತಿತ್ವವನ್ನೇ ನಿರಾಕರಿಸುತ್ತಾರೆ. ಲೋಹಿಯಾರವರ ಜಾತಿವಿನಾಶದ ತತ್ವಗಳನ್ನು ಅನಗತ್ಯವಾಗಿ ಯುರೋಪಿಯನ್ ಮಾದರಿಯ ಆಡಂಬರದ, ರೋಮ್ಯಾಂಟಿಕ್ ಸಮಾಜವಾದಕ್ಕೆ ಹೋಲಿಸಿ ಸೋಲುತ್ತಾರೆ. ಏಕೆಂದರೆ ಲೋಹಿಯಾವಾದದ ಸಮಾಜವಾದವು ಮತ್ತು ಗಾಂಧಿವಾದವು ಪಶ್ಚಿಮ ನಾಗರಿಕತೆಯನ್ನು ಮತ್ತು ಅದರ ಆಧುನಿಕತೆಯನ್ನು 50 ಹಾಗೂ 60ರ ದಶಕದಲ್ಲಿಯೇ ಕಟುವಾದ ವಿಮರ್ಶೆಗೆ ಒಳಪಡಿಸುತ್ತದೆ ಹಾಗೂ ಇದಕ್ಕೆ ಪ್ರತಿಯಾಗಿ ಎತ್ತಿಕೊಳ್ಳುವುದು ಇಲ್ಲಿನ ನೆಲ ಸಂಸ್ಕೃತಿಯ ಬೀಜಗಳನ್ನು, ಇಲ್ಲಿನ ಗ್ರಾಮ ಸ್ವರಾಜ್ಯ ಮಾದರಿಗಳನ್ನು ಮತ್ತು ವೈವಿಧ್ಯತೆಯಲ್ಲಿ ಏಕತೆಯ ಆಶಯವನ್ನು. ಇದನ್ನು ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ ಐಲಯ್ಯನವರ ಮಾದರಿ. ಕಡೆಗೂ ಐಲಯ್ಯನವರ ನಾಸ್ತಿಕವಾದದ ಮಾದರಿ ಸಹ ಪಶ್ಚಿಮ ಶೈಲಿಯದು. ಪಶ್ಚಿಮದ ಈ ಏಕರೂಪಿ ದುರಹಂಕಾರದ ನಿರಾಕಾರಣೆಯ ಮಾದರಿಗಳು ಮತ್ತು ಅನೇಕ ಮಿತಿಗಳು ಐಲಯ್ಯನವರಿಗೆ ಕಳೆದ 25 ವರ್ಷಗಳಿಂದಲೂ ಅರ್ಥವಾಗದೇ ಹೋದದ್ದು ನಿಜಕ್ಕೂ ಸೋಜಿಗವೇ ಸರಿ.

ಮಾರ್ಕ್ಸ್‌ವಾದದ ಭೌತಿಕವಾದದ ಚಿಂತನೆಗಳು ಈ ನೆಲಕ್ಕೆ ಸಂಪೂರ್ಣವಾಗಿ ಅಪರಿಚಿತವಾದವು ಎಂದು ಅತ್ಯಂತ ತರ್ಕಬದ್ಧವಾಗಿ ನಮಗೆಲ್ಲ ತೋರಿಸಿಕೊಟ್ಟವರು ಲೋಹಿಯಾರವರು. ಇವರ 60ರ ದಶಕದ ಮಾರ್ಕ್ಸ್‌ವಾದದ ವಿಮರ್ಶೆಗಳು ಇಂದು ನಿಜವಾಗತೊಡಗಿವೆ. ಐಲಯ್ಯನವರಿಗೆ ಇದನ್ನು ಗಮನಿಸುವ ವ್ಯವಧಾನವಾಗಲೀ, ಸಹನೆಯಾಗಲೀ ಇಲ್ಲ. ಇದು ಇವರ ಬಲು ದೊಡ್ಡ ಮಿತಿಗಳಲ್ಲೊಂದು. ಲೋಹಿಯಾರವರ ವಿಕೇಂದ್ರಿಕರಣದ, ಜಾತಿವಿನಾಶದ ಚಿಂತನೆಗಳು ಅಪಾರವಾದ ನಿರಂತರ ಅಧ್ಯಯನದ ಮೂಲಕವೂ, ನಿರಂತರ ರಾಜಕೀಯ ಹೋರಾಟಗಳು, ಸಂಘರ್ಷಗಳು, ಕಟ್ಟುವಿಕೆಯ ಕ್ರಿಯಾತ್ಮಕತೆಯ ಭಾಗವಾಗಿಯೂ ಮತ್ತು ಕೆಡವುದರ ಋಣಾತ್ಮಕ ಭಾಗವಾಗಿಯೂ ಹುಟ್ಟಿಕೊಂಡಂತದ್ದು. ಇದು ಕೇವಲ ಪುಸ್ತಕದ ಬದನೇಕಾಯಿಯಾಗಿದ್ದರೆ ಲೋಹಿಯಾ ಎಂದೋ ಅಪ್ರಸ್ತುತರಾಗಿಬಿಡುತ್ತಿದ್ದರು.

ಆದರೆ ಇಂದು ಐಲಯ್ಯ ಮತ್ತು ಮಾರ್ಕ್ಸ್‌ವಾದಿಗಳು ಮಾಡುವ ಅಪಾಯಕಾರಿ ಅಪಪ್ರಚಾರವೆಂದರೆ ಇಂದಿನ ಭಾರತದ ಗ್ರಾಮ ಪಂಚಾಯ್ತಿಯ, ಪಂಚಾಯ್ತಿರಾಜ್ ಮಾದರಿಯ ವಿಕೇಂದ್ರಿಕರಣದ ಸೋಲನ್ನು ಲೋಹಿಯಾರ ತಲೆಗೆ ಕಟ್ಟಲು ಹವಣಿಸುತ್ತಿರುವುದು. ಅವರ ಅನುಯಾಯಿಗಳ ಸೋಲಿನ ಜವಾಬ್ದಾರಿಯನ್ನು ಲೋಹಿಯಾವಾದಕ್ಕೆ ವಹಿಸುವ ಅನಗತ್ಯ ಆತುರ ಮತ್ತು ಬೇಕೆಂತಲೇ ಯಾವುದೇ ಸಂಬಂಧವಿಲ್ಲದಿದ್ದರೂ ನೋಡಿ ಲಾಲು ಪ್ರಸಾದ ಯಾದವ್, ಮುಲಾಯಂ ಸಿಂಗ್ ಯಾದವ್ ಅವರೂ ಸಹ ಲೋಹಿಯಾವಾದಿಗಳೇ ಎಂದು ಗೇಲಿಮಾಡುವುದು. ಇದು ಅನಗತ್ಯವಾಗಿ ಹೊಸ ತಲೆಮಾರಿನ ತರುಣರನ್ನು ಸಂಪೂರ್ಣವಾಗಿ ಹಾದಿ ತಪ್ಪಿಸುತ್ತದೆ. ಆಧುನಿಕ ವೈಚಾರಿಕತೆಯನ್ನು ತಮ್ಮೊಳಗೆ ಬಿಟ್ಟುಕೊಳ್ಳುತ್ತಲೇ ಇಂಡಿಯಾದಲ್ಲಿ ಜಾತ್ಯಾತೀತತೆಯ, ಜಾತಿ ವಿನಾಶದ, ಮಹಿಳೆಯರಿಗೆ ಸಮಾನ ಹಕ್ಕುಗಳ ಹೊಸ ನಾಗರಿಕತೆಯನ್ನು ಕಟ್ಟುವಂತಹ ಕನಸನ್ನು ಕಂಡ ಲೋಹಿಯಾ ನಿಜವಾದ ವಿಗ್ರಹಭಂಜಕರು ಹಾಗೂ ಸ್ವತಂತ್ರ ಭಾರತದ ಬಲು ದೊಡ್ಡ ಪ್ರತಿ ನಾಯಕ (Anti hero) ಮತ್ತು ದಿವಂಗತ ತೇಜಸ್ವಿಯವರು ಹೇಳಿದ ಹಾಗೆ ಭಾರತದ ಒರಿಜಿನಲ್ ಚಿಂತಕ.

ಪುರೋಹಿತಶಾಹಿಯ ಮನುವಾದಿ ಮತ್ತು ಸನಾತನವಾದವನ್ನು ಹಾಗೂ ದಲಿತರ ಅವೈದಿಕ ನೆಲ ಸಂಸ್ಕೃತಿಯನ್ನು ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಐಲಯ್ಯನವರು ಹೆಚ್ಚೂ ಕಡಿಮೆ ಚಲನಶೀಲತೆಯನ್ನೇ ನಿರಾಕರಿಸುತ್ತಾರೆ ಮತ್ತು ಇದನ್ನು ನೆಚ್ಚಿಕೊಂಡರೆ ಮುಂದೆ ಯಾವುದೇ ದಾರಿಗಳಿಲ್ಲವೇ ಇಲ್ಲ ಎಂದು ದಿಕ್ಕು ತಪ್ಪಿಸುತ್ತಾರೆ. ಇಲ್ಲಿ ಜ್ಯೋತಿ ಬಾ ಪುಲೆಯವರನ್ನು ಆದರ್ಶವಾಗಿ ಪರಿಗಣಿಸುವ ಐಲಯ್ಯನವರು ಸರಿಯಾಗಿಯೇ ಮತ್ತು ನ್ಯಾಯಯುತವಾಗಿಯೇ ಹಿಂದೂ ಧರ್ಮದ ಬ್ರಾಹ್ಮಣ್ಯಶಾಹಿಯನ್ನು, ಪ್ರತಿಷ್ಠಿತ ಮಧ್ಯಮ ಜಾತಿಗಳನ್ನು ತೀವ್ರವಾಗಿ ಖಂಡಿಸುತ್ತಾ ಅವುಗೊಳೊಂದಿಗೆ ಯಾವುದೇ ರೀತಿಯ ಅನುಸಂಧಾನದ ಮಾರ್ಗಗಳನ್ನೂ ನಿರಾಕರಿಸುತ್ತಾರೆ. ಇವರ ಈ ಚಿಂತನೆಗಳು ಜ್ಯೋತಿ ಬಾ ಫುಲೆ ನೆಲೆಗಟ್ಟಿನಿಂದ ಹುಟ್ಟಿಕೊಂಡದ್ದು. Total inclusive  policy ಯನ್ನು ಮೊಟ್ಟಮೊದಲ ಬಾರಿಗೆ ಚಿಂತಿಸಿದವರು ಜ್ಯೋತಿ ಬಾ ಫುಲೆಯವರು.

150 ವರ್ಷಗಳ ಹಿಂದೆ ಫುಲೆಯವರು ಇಲ್ಲಿನ ಜಾತೀಯತೆಯನ್ನು ವಿಶ್ಲೇಷಿಸುವಾಗ ಹಿಂದುತ್ವವಾದಕ್ಕಿಂತಲೂ ಬ್ರಾಹ್ಮಣವಾದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಇವರ ಪ್ರಕಾರ ಹಿಂದುತ್ವವೆನ್ನುವುದು ವೇದಗಳು, ಮನುಸ್ಮೃತಿ ಎನ್ನುವ ಎರಡು ಕೃತಿಗಳಿಂದ, ಚಿಂತನೆಗಳಿಂದ ರೂಪುಗೊಂಡಿದೆ. ಈ ಕೃತಿಗಳು ಬ್ರಾಹ್ಮಣವಾದದಿಂದ ಬರೆಯಲ್ಪಟ್ಟವು. ಈ ಮೂಲಕ ತಮ್ಮ ಸಾರ್ವಭೌಮತ್ವವನ್ನು ಸಮಾಜದಲ್ಲಿ ಪ್ರತಿಷ್ಠಾಪಿಸಿದವು. ಬ್ರಾಹ್ಮಣಿಕೆಯ ಈ ಶ್ರೇಷ್ಟತೆಯ ಯಜಮಾನಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಫುಲೆಯವರು ಈ ವೈದಿಕಶಾಹಿ ಕೃತಿಗಳ ಏಕಸ್ವಾಮ್ಯತೆಯನ್ನೂ ತಿರಸ್ಕರಿದರು. ಅಂದರೆ ಈ ಪುರೋಹಿಶಾಹಿ ಕೃತಿಗಳನ್ನು ಪರಿಷ್ಕರಿಸಿ ಇವಕ್ಕೆ ಮಾನವೀಯ ಸ್ಪರ್ಶ ನೀಡಬೇಕನ್ನುವ ಉದಾರವಾದ ಚಿಂತನೆಯನ್ನು ಫುಲೆ ಪ್ರತಿಪಾದಿಸಲಿಲ್ಲ. ಬದಲಾಗಿ ಫುಲೆ ಪ್ರತಿಪಾದಿಸಿದ್ದು ಬ್ರಾಹ್ಮಣೀಕೃತ ಪ್ರೇರೇಪಿತ ಎಲ್ಲ ಶೈಕ್ಷಣಿಕ, ಸಾಮಾಜಿಕ ಸಿದ್ಧಾಂತದ ಪುಸ್ತಕಗಳನ್ನೂ ನಿಷೇದಿಸಬೇಕೆಂಬುದನ್ನು. ಶೂದ್ರಾತಿಶೂದ್ರ ನೆಲೆಗಟ್ಟಿನಲ್ಲಿ ಈ ಬ್ರಾಹ್ಮಣತ್ವ ಆಧಾರಿತ ಚರಿತ್ರೆಯನ್ನು ಅಲ್ಲಗೆಳೆಯುತ್ತಾ ಅದನ್ನು ತಿರಸ್ಕರಿಸಿ ಚರಿತ್ರೆಯನ್ನು ತಳಸಮುದಾಯಗಳ ಮೂಲಕ ಪುನರ್ರಚಿಸುವುದಕ್ಕೆ ಚಾಲನೆ ನೀಡುತ್ತಾರೆ. ತಮ್ಮ ಚಿಂತನೆಗಳಲ್ಲಿ ಜಾತೀಯತೆಗಿಂತಲೂ ವರ್ಣಾಶ್ರಮತೆಗೆ ಪ್ರಾಧಾನ್ಯತೆ ನೀಡುತ್ತ ಆ ಮೂಲಕ Dichotomous Structure ಅನ್ನು ಸೃಷ್ಟಿಸುತ್ತಾ ಇಲ್ಲಿ ಬ್ರಾಹ್ಮಣತ್ವ ಹಾಗೂ ಶೂದ್ರಾತಿಶೂದ್ರರೆನ್ನುವ ಎರಡು ಧೃವಗಳ ಸಮಾಜದ ಪರಿಕಲ್ಪನೆಯನ್ನು ಬಳಸುತ್ತಾರೆ. ತೀವ್ರವಾದ ಬದಲಾವಣೆಯ ಹರಿಕಾರರಾಗಿದ್ದ, ಬ್ರಾಹ್ಮಣೀಕರಣದ ಕಟು ವಿರೋದಿಯಾಗಿದ್ದ, ಆದರೆ ಭಕ್ತಿ ಪಂಥದಿಂದ ಪ್ರಭಾವಕ್ಕೊಳಗಾಗಿದ್ದ, ಚರ್ಚೆ, ಸಿದ್ಧಾಂತಗಳ ಗಂಗೋತ್ರಿಯಾಗಿದ್ದ, ಹತೊಂಬತ್ತನೇ ಶತಮಾನದ ಬಲು ದೊಡ್ಡ ಸಮಾಜ ಸುಧಾರಕರಾಗಿದ್ದ ಜ್ಯೋತಿ ಬಾ ಫುಲೆಯವರು ಸಂವಾದದಲ್ಲಿ ನಂಬುಗೆ ಇಟ್ಟಿದ್ದರು.

ಇವರ ಮಾರ್ಗ ಬುದ್ಧನ ಮಾರ್ಗವಾಗಿತ್ತು. ಬುದ್ಧನದೂ ಸಂವಾದದ ಮಾರ್ಗವಾಗಿತ್ತು. ಆದರೆ ಸಂತ ಜ್ಯೋತಿ ಬಾ ಫುಲೆಯವರಿಂದ ಬ್ರಾಹ್ಮಣತ್ವ ಮತ್ತು ಬ್ರಾಹ್ಮಣೀಕರಣದ ಕಟುಟೀಕೆಯನ್ನು ಸರಿಯಾಗಿಯೇ ಗ್ರಹಿಸಿದ ಐಲಯ್ಯನವರು ಫುಲೆಯವರ ಸಂವಾದದ ಮಾರ್ಗವನ್ನು ಒಳಗೊಳ್ಳಲು ಸೋತಿದ್ದಾರೆ. 19ನೇ ಶತಮಾನದ ಫುಲೆಯವರ ಚಿಂತನೆಗಳನ್ನು 21ನೇ ಶತಮಾನಕ್ಕೆ ಸಮೀಕರಿಸುವ ಸಂದರ್ಭದಲ್ಲಿ ಇಲ್ಲಿ ಮುಂಟೇ ಸ್ವಾಮಿಗಳು, ಸಿದ್ದಯ್ಯ ದೇವರು, ಮತ್ತು ಮಾರಮ್ಮ, ಹೊಸೂರಮ್ಮ, ಜಂಬಲಮ್ಮ, ಪೂಚಮ್ಮ ಇತ್ಯಾದಿ ಗ್ರಾಮ ದೇವತೆಗಳು ಸಹ ನಾಗರೀಕತೆಯ ಆಧುನಿಕ ಸಮಾಜದೊಂದಿಗೆ ಮುಖಾಮುಖಿಯಾಗುತ್ತಾ ದಲಿತರಿಗೆ ಅಪಾರವಾದ ನೈತಿಕ ನೆಲೆಯನ್ನು, ಬ್ರಾಹ್ಮಣತ್ವ ಮತ್ತು ಬ್ರಾಹ್ಮಣೀಕರಣದ ಶೋಷಣೆಯನ್ನು ಎದುರಿಸಲು ಬಲು ದೊಡ್ಡ ಸಾಂಸ್ಕೃತಿಕ ಆಯಾಮವನ್ನು ದೊರಕಿಸಿಕೊಡುತ್ತವೆ ಈ ಮೂಲಕ ಆಧುನಿಕ ದಲಿತರು ಮಾತ್ರ ಈ ನೆಲದ ಬಹು ಸಂಸ್ಕೃತಿಯನ್ನು ಮರಳಿ ಸ್ಥಾಪಿಸುವುದಕ್ಕೆ ಮಾರ್ಗಗಳೂ ಸಹ ಎಂಬುದು ಮತ್ತೇನಲ್ಲದೆ ಜ್ಯೋತಿ ಬಾ ಫುಲೆಯವರ ಆಶಯಗಳಿಗೆ ನ್ಯಾಯ ದೊರಕಿಸಿಕೊಟ್ಟಂತೆ. ಆದರೆ ಕಾಂಚ ಐಲಯ್ಯ ಮಾದರಿ ಚಿಂತಕರಿಗೆ ಇದೇಕೆ ಗೌಣವಾಗಿ ಕಂಡಿತು ಎಂಬುದು ಇಂದಿಗೂ ಚಿದಂಬರ ರಹಸ್ಯ.

ಚಿಂತಕ ದಿವಂಗತ ಡಿ.ಆರ್.ನಾಗರಾಜ್ ಅವರು ಪೆರಿಯಾರ್ ಮಾದರಿಯನ್ನು ವಿಮರ್ಶಿಸುತ್ತ ಬಹಳ ಅದ್ಭುತವಾಗಿ ಹೇಳುತ್ತಾರೆ “ಪೆರಿಯಾರರ ಮಾದರಿಯ ಮುಖ್ಯ ಸಮಸ್ಯೆಯೆಂದರೆ ಶೂದ್ರಾತಿಶೂದ್ರರಿಗೆ ಈ ಸಂಸ್ಕೃತಿಯಲ್ಲಿ ಯಾವ ಪಾಲೂ ಇಲ್ಲ ಎಂದು ಭಾವಿಸುವುದು. ಆಧುನಿಕ ಪಾಶ್ಚಾತ್ಯ ನಾಸ್ತಿಕವಾದದ, ವಿಚಾರವಾದದ ಎಲ್ಲ ಘೋರ ಮಿತಿಗಳು ಪೆರಿಯಾರರನ್ನು ಕಬಳಿಸಿ ಹಾಕಿ ಬಿಟ್ಟವು. ಇಲ್ಲಿ ಪ್ರತಿಷ್ಟಿತ ಮತ್ತು ಕೆಳಜಾತಿಗಳ ನಡುವಣ ಘರ್ಷಣೆ ಸಂಸ್ಕೃತಿಯ ಮೇಲು ಹಾಗು ಕೆಳಗಿನ ಸ್ತರಗಳಲ್ಲಿ ಜತೆಜತೆಯಾಗಿಯೇ ಹರಿದು ಬಂದದನ್ನು ಪೆರಿಯಾರರು ಗುರುತಿಸಲು ವಿಫಲರಾದರು. ಪೆರಿಯಾರರ ಮಾದರಿ ಭಾರತೀಯ ಸಂಪ್ರದಾಯ ಶರಣತೆಗೆ ಗಾಳಿಗುದ್ದುಗಳನ್ನು ಮಾತ್ರ ಕೊಡುತ್ತದೆ. ತನ್ನ ತೀವ್ರತೆಯಿಂದಲೇ ಎದುರಾಳಿ ನಾಶವಾಗಿದ್ದಾನೆ ಎಂಬ ಧೋರಣೆ ಇದು”. ಇದು ಕಂಚ ಐಲಯ್ಯನವರಿಗೆ ಕೂಡ ಅನ್ವಯಿಸುತ್ತದೆ. ಕಡೆಗೂ ಕಂಚ ಐಲಯ್ಯನವರ ಚಿಂತನೆಗಳು ಮತ್ತು ಮಾರ್ಗಗಳು ಚರ್ಚೆಗೆ ಒಳಪಡಲೇಬೇಕು. ಏಕೆಂದರೆ ಕಂಚ ಐಲಯ್ಯನವರು ನಮ್ಮ ಕಾಲದ ಬಲು ಮುಖ್ಯ ದಲಿತ ಚಿಂತಕರು. ಇವರನ್ನು ಕಡೆಗಣಿಸಿದ ದಲಿತರ ಚಿಂತನೆಗಳು ನಿಜಕ್ಕೂ ಅಪೂರ್ಣ.

ಕಡೆಗೆ ಇಂಡಿಯಾದ ಮತ್ತೊಂದು ದುರಂತವೆಂದರೆ “ಕೆಲಸ ಕೊಡುವವರಾಗಿ, ಕೆಲಸ ಕೇಳುವವರಾಗಬೇಡಿ” ಎನ್ನುವ ಸ್ವಾಯತ್ತತೆಯ, ಸ್ವಾವಲಂಬನೆಯ ಘೋಷಣೆಯೊಂದಿಗೆ ಹುಟ್ಟಿಕೊಂಡ “ದಲಿತ ಉದ್ಯಮಿಗಳು ಅರ್ಥಾತ ದಲಿತ ಛೇಂಬರ್ಸ್ ಆಫ್ ಕಾಮರ್ಸ್” ಹಾಗೂ ಕಳೆದ 20 ವರ್ಷಗಳಿಂದ ಇದರ ಪರವಾಗಿ ಚಿಂತಿಸಿದ ಖ್ಯಾತ ದಲಿತ ಚಿಂತಕ ಚಂದ್ರಬಾನು ಪ್ರಸಾದ್ ಇವರ ಚಿಂತನೆಗಳಿಗೆ ಮತ್ತು ಮಾರ್ಗಗಳಿಗೆ ನಮ್ಮ ಅಕಡೆಮಿಕ್ ಬುದ್ಧಿಜೀವಿಗಳು ತೋರಿಸಿದ ನಿರ್ಲಕ್ಷ್ಯತನ. ಇದು ನಿಜಕ್ಕೂ ಆತ್ಮವಂಚನೆಯೇ ಸರಿ. ದಲಿತರು ಹಾಗೂ ಆದಿವಾಸಿಗಳನ್ನು ಸಮಾಜದ ಮಖ್ಯವಾಹಿನಿಗೆ ತರಲು ದಿಗ್ವಿಜಯಸಿಂಗ್‌ರವರ ನಾಯಕತ್ವದಲ್ಲಿ ಐತಿಹಾಸಿಕ ಭೂಪಾಲ ದಾಖಲೆಯನ್ನು ರೂಪಿಸಿದ ಚಂದ್ರಬಾನು ಪ್ರಸಾದರು ಈ ಮೂಲಕ ಸರ್ಕಾರವು ದಲಿತ ಹಾಗೂ ಆದಿವಾಸಿಗಳ ಉದ್ಯಮಗಳಿಂದ ಶೇಕಡಾ 30 ರಷ್ಟನ್ನು ಕೊಳ್ಳಬೇಕು ಎನ್ನುವ ಭೂಪಾಲ ಘೋಷಣೆಯನ್ನೂ ಸಹ ಮಾಡಲಾಯಿತು. ಇಲ್ಲಿಯೂ ಸಹ ಯಾವುದೇ ಗೊಂದಲಗಳಿಲ್ಲ. ಸಮಾಜದ ಮುಖ್ಯವಾಹಿನಿಗೆ ದಲಿತರು ಪ್ರವೇಶ ಪಡೆಯಲೇಬೇಕಾದರೆ ದಲಿತ ಮಧ್ಯಮ ವರ್ಗ ಸೃಷ್ಟಿಯಾಗಬೇಕು, ನಂತರ ಇದೇ ದಲಿತ ಮಧ್ಯಮ ವರ್ಗ ಮುಂದೆ ಬೆಳೆದು ದಲಿತ ಉದ್ಯಮಿಗಳಾಗಬೇಕು ಎನ್ನುವ ಘೋಷಣೆ ಹಾಗು ಚಿಂತನೆ ಇಲ್ಲಿನ ಮೂಲ ಆಶಯ. ಇದರ ಮೂಲ ತಿರುಳು ಚಲನಶೀಲತೆ. ಇದು ಸಾಕಾರಗೊಂಡರೆ ದಲಿತರು ಸ್ವತಹ ತಾವೇ ಮಾಲೀಕರಾಗುವುದರ ಜೊತೆಗೆ, ಸರ್ಕಾರಿ ಕಛೇರಿಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಶಾಲೆಗಳಲ್ಲಿ ಮತ್ತು ಇನ್ನಿತರ ಸಾರ್ವಜನಿಕ ವಲಯಗಳಲ್ಲಿ ಮೇಲ್ಜಾತಿಗಳಿಂದ ಪದೇ ಪದೇ ಅವಮಾನಕ್ಕೊಳಗಾಗುವ ನಿರಂತರ ವಿದ್ಯಾಮಾನಕ್ಕೆ ಮುಂದೊಂದು ದಿನ ಸಂಪೂರ್ಣ ತಿಲಾಂಜಲಿ ಇಡಬಹುದು.

ನವೀಯತೆಯ ಕುರುಡು ಆರಾಧನೆಯನ್ನು, ಎಲ್ಲವೂ ಸರಿ ಇದೆ ಎನ್ನುವ ತೆಳುವಾದ ಧೋರಣೆಯನ್ನು ನಾವ್ಯಾರೂ ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ ಚಂದ್ರಬಾನು ಪ್ರಸಾದರ ಈ ವಿಶಾಲ ಮನೋಭಾವದ, ದಲಿತರ ಆಧುನೀಕರಣದ ಚಲನಶೀಲತೆಯನ್ನು ತಲಸ್ಪರ್ಶಿಯಾಗಿ, ಆಳವಾಗಿ ಚರ್ಚಿಸದೆ ಕೇವಲ ವಿರೋಧಕ್ಕಾಗಿ ಎಡಪಂಥೀಯ ಚಿಂತಕರು ತೀವ್ರವಾಗಿ ವಿರೋಧಿಸುವುದು ಮಾತ್ರ ಪಲಾಯನವಾದವೆನಿಸಿಕೊಳ್ಳುತ್ತದೆ. ಇವರ ವಿರೋಧಕ್ಕೆ ಮೂಲಭೂತ ಕಾರಣ ಇದು ಪಶ್ಚಿಮದ ಬಂಡವಾಳಶಾಹೀ ಮಾರ್ಗ ಮತ್ತು ಇದು ವಸಾಹತುಶಾಹಿಯನ್ನು ಪುನಹ ನೀರೆರೆದು ಪೋಷಿಸುತ್ತದೆ ಎಂದು. ಹಿಂದೊಮ್ಮೆ ಲೇಖಕ ದಿವಂಗತ ಪಿ.ಲಂಕೇಶ್ ಹೇಳಿದಂತೆ ತಮ್ಮ ಕೂಪ ಮಂಡೂಕತನದ ಚಿಂತನೆಗಳು, ಪ್ರತಿಯೊಂದು ಪ್ರಯೋಗವನ್ನು, ಚಲನಶೀಲತೆಯನ್ನು, ಬದಲಾವಣೆಯ ಹೊಸಗಾಳಿಯನ್ನು ಬಂಡವಾಳ ಶಾಹಿ, ಜಾಗತೀಕರಣವೆಂದು ಪಟ್ಟ ಕಟ್ಟುತ್ತಾ ಆತ್ಮವಂಚನೆಯಲ್ಲಿ ತೊಡಗಿರುವ ಈ ಬುದ್ಧಿಜೀವಿಗಳು ದೇಶವನ್ನು ಮುಂದಕ್ಕೂ ಕೊಂಡಯ್ಯಲು ಬಿಡುವುದಿಲ್ಲ, ಹಿಂದಕ್ಕೂ ತಳ್ಳುವುದಿಲ್ಲ. ಇಲ್ಲಿ ನಾವು ನಮ್ಮ ತಲ್ಲಣಗಳನ್ನು ಸಾಕಾರಿಸಿಕೊಳ್ಳಲು ನಿರಾಕರಿಸುತ್ತಿದ್ದೇವೆ. ಹೊಸ ಬಗೆಯ ಸಂವಾದಗಳನ್ನು ಸೃಷ್ಟಿಸಲು ತಡಕಾಡುತ್ತಿರುವ ನಾವೆಲ್ಲ ನಮ್ಮೆದುರಿಗೇ ಇರುವ ಚಲಶೀಲತೆಯ ಮಾರ್ಗಗಳನ್ನು ಮುಚ್ಚಿಕೊಳ್ಳುವ ಅವಸರ ಮಾತ್ರ ಊಹೆಗೂ ನಿಲುಕದ್ದು. ದಿನನಿತ್ಯ ಕಾಣಿಸಿಕೊಳ್ಳುವ ದುರಂತಗಳಿಗೆ ಸ್ಪಂದಿಸುವ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ. ಏಕೆಂದರೆ ನಮಗೆ ಎಲ್ಲವೂ ಅಪರೂಪವಾಗಿರಬೇಕು ಆಗಲೇ ಪ್ರತಿಕ್ರಿಯಾತ್ಮಕವಾಗಿ ಸಂಘಟಿತರಾಗುವುದು ನಮ್ಮ ಅನಾದಿ ಕಾಲದ ಚಾಳಿಗಳಲ್ಲೊಂದು.

ಇಲ್ಲಿ ಸೋತವನಾದ, ಅವಮಾನಿತನಾದ, ಭ್ರಷ್ಟನಾದ, ಕಳಂಕಿತನಾದ, ಅನೈತಿಕತೆಯನ್ನು ಹೊದ್ದುಕೊಂಡ ಯಡಿಯ್ಯೂರಪ್ಪ, ಶ್ರೀರಾಮುಲು, ರೆಡ್ಡಿಗಳಂತಹ ಮೌಲ್ಯರಹಿತ ರಾಜಕಾರಣಿಗಳು ಮತ್ತೆ ಮತ್ತೆ ಫೀನಿಕ್ಸನಂತೆ ಮರಳಿ ಬರುತ್ತೇವೆ, ನಿರಂತರ ಹೋರಾಟ ಮಾಡುತ್ತೇವೆ, ರಾಜ್ಯದಾದ್ಯಂತ ಪಾದಯಾತ್ರೆ ಮಾಡುತ್ತೇವೆ, ಪ್ರವಾಸ ಮಾಡಿ ಜನರ ಬಳಿಗೆ ಮರಳುತ್ತೇವೆ ಎಂದು ನಿರ್ಲಜ್ಯರಾಗಿ ಹೇಳುತ್ತಿದ್ದರೆ, ಇಲ್ಲಿ ಪ್ರಗತಿಪರರು ತಮ್ಮ ಪ್ರತಿಭಟನೆಯ ಚಹರೆಗೆ ಹುಡುಕಾಡುತ್ತ, ಹದಗೆಟ್ಟ ವ್ಯವಸ್ಥೆಯಲ್ಲಿ ದನಿಯಾಗಲು ಇಷ್ಟು ವರ್ಷಗಳ ನಂತರವೂ ಸ್ವರಗಳಿಗೆ, ಭಾಷೆಗಳಿಗೆ ಹುಡುಕಾಡುತ್ತಿದ್ದರೆ, ನಮ್ಮ ಕಣ್ಣೆದುರಿಗೆ ಇರುವ ಸೃಜನಶೀಲತೆಯ ಸ್ವರೂಪಗಳು ಮತ್ತು ಆಶಯಗಳು ನಮಗೆ ಅಗೋಚರವಾಗಿವೆಯೆಂದರೆ ಯೇಟ್ಸ್ ಕವಿಯ things falls apart ಕವನ ನೆನಪಾಗುತ್ತದೆ ಜೊತೆ ಜೊತೆಗೆ ನೀಷೆಯ I Felt a cry in the whole universe ಎನ್ನುವ ಮಾತು ನೆನಪಾಗುತ್ತದೆ.

2 thoughts on “ಕಂಚ ಐಲಯ್ಯ, ಚಂದ್ರಬಾನು ಪ್ರಸಾದ್, ಡಿಆರ್‌ಎನ್: ವಿಧ್ವಂಸಕಾರಿ ಮತ್ತು ಒಳಗೊಳ್ಳುವಿಕೆ

  1. prasad raxidi

    ನಮ್ಮ ಯುವಪೀಳಿಗೆಯ ಚಿಂತನೆಯನ್ನು ಹಾದಿತಪ್ಪಿಸುವಲ್ಲಿ ಕೋಮುವಾದಿಗಳಷ್ಟೇ ಪಾಲು ಅನೇಕ ಪ್ರಗತಿಪರಚಿಂತಕರದ್ದೂ ಇದೆ. ತಮ್ಮ ವಾದದ ಗೆಲುವಿಗಾಗಿ ಅರ್ಧಸತ್ಯಗಳನ್ನು ಹೇಳುವುದರಿಂದ ಏನನ್ನೂ ಸಾದಿಸಲಾಗುವುದಿಲ್ಲವೆಂದು ಗೊತ್ತಿದ್ದೂ ಹೀಗೇಕೆ ಮಾಡುತ್ತಾರೆಂದು ಚಿಂತೆಯಾಗುತ್ತದೆ.ದಾರಿ ಮತ್ತು ಗುರಿಗಳ ಬಗೆಗಿನ ಗಾಂಧಿಯ ವಿವೇಚನೆ ಸಾರ್ವಕಾಲಿಕವಾದುದು .. ಒಳ್ಳೆಯ ಲೇಖನಕ್ಕೆ ಕೃತಜ್ಞತೆಗಳು.. ಅಂದಹಾಗೆ ದಿವಂಗತ..ತೇಜಸ್ವಿ,ಲಂಕೇಶ್..ಡಿ.ಆರ್. ಅಂತ ಬರೆಯಬೇಕೆ..? ಯಾಕೋ ಮನಸ್ಸು ಒಪ್ಪುತ್ತಿಲ್ಲ..

    Reply
  2. shashikumar

    ಶ್ರೀಪಾದ ಭಟ್ಟರಿಗೆ ನಮಸ್ಕಾರ. ತುಂಬ ಒಳ್ಳೆಯ ಬರೆಹ. ಕಾಂಚ ಇಳಯ್ಯ ಯಾಕೋ ಇತ್ತೀಚಿನ ದಿನಗಳಲ್ಲಿ ಮೂಲಭೂತವಾದಿಯಂತೆ ವರ್ತಿಸತೊಡಗಿದ್ದಾರೆ. ಅಶ್ಟು ಅತಿರೇಕಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಡಿ.ಆರ್. ಹೇಳಿದ ಹಾಗೆ ನಾವು “ಒಳಗೊಳ್ಳುವ ಪ್ರಕ್ರಿಯೆ”ಯನ್ನು ಪಾಲಿಸಬೇಕಾದ ಜರೂರು ಇದೆ. ಅಂದ ಹಾಗೆ, ಡಿ.ಆರ್.ರ ಕನ್ನಡ ಬರೆಹಗಳನ್ನು ಇಂಗ್ಲಿಶ್ ಗೆ ಅನುವಾದಿಸಿ ಪ್ರಕಟಿಸುವ ಮೂಲಕ ಪೃಥ್ವಿ ದತ್ತ ಚಂದ್ರ ಶೋಭಿ ಡಿ.ಆರ್.ಚಿಂತನೆ ಎಲ್ಲರಿಗೂ ದೊರೆಯುವಂತೆ ಮಾಡಿದ್ದಾರೆ. ಕನ್ನಡದಲ್ಲಿ ಡಿ.ಆರ್. ಹಾಗೆ ಚಿಂತಿಸುವ, ಬರೆಯುವ, ಮಾತನಾಡುವ ಚಿಂತಕರು ಹುಟ್ಟಿಕೊಳ್ಳಬೇಕಾದ ಜರೂರು ಕೂಡ ಇದೆ. ಇಲ್ಲವಾದಲ್ಲಿ, ‘ದಲಿತ ಚಿಂತನೆ’ ಸೊನ್ನೆಯಾಗುವ ಸಾಧ್ಯತೆ ಇದೆ. ‘ದಲಿತ ಚಿಂತನೆ’ಯನ್ನು ಒರೆಗೆ ಹಚ್ಚುವ ಇಂತಹ ಬರೆಹಗಳು ಹೆಚ್ಚೆಚ್ಚು ಬರಲಿ.

    Reply

Leave a Reply

Your email address will not be published. Required fields are marked *