Monthly Archives: July 2012

ಸಣ್ಣಕತೆ : ತಬ್ಬಲಿ


-ಚಿದಂಬರ ಬೈಕಂಪಾಡಿ


 

‘ತಂದೆ ಇನ್ನಿಲ್ಲ. ನಿನ್ನನ್ನು ನೋಡ್ಬೇಕು ಅಂತಿದ್ರು, ಹೊರಟಿದ್ದಾನೆ, ಬರ್ತಾ ಇದ್ದಾನೆ ಅಂದೆ. ಎಲ್ಲಿಗೆ ಬಂದ್ದಾನಂತೆ, ಇನ್ನೂ ಎಷ್ಟು ಹೊತ್ತಿಗೆ ಬರ್ತಾನೆ ಅಂತ ಕೇಳ್ತಿದ್ರು. ಸ್ವಲ್ಪ ಹೊತ್ತಲ್ಲಿ ಮೌನವಾದರು, ಬೇಗ ಹೊರಡು.’ ಹೀಗೆಂದು ತಂಗಿ ಹೇಳಿದಾಗ ರಾತ್ರಿ ಹನ್ನೊಂದು ಗಂಟೆ. ಜನ ತಣ್ಣಗೆ ನಿದ್ದೆ ಮಾಡುತ್ತಿದ್ದ ಹೊತ್ತಲ್ಲಿ ತಂದೆ ತಮ್ಮ ಪಯಣ ಮುಗಿಸಿ ಮತ್ತೆಂದೂ ಬಾರದ ಲೋಕಕ್ಕೆ ಹೊರಟುಹೋಗಿದ್ದರು.

ತಂದೆಯ ಸಾವು ಅನಿರೀಕ್ಷಿತವೇನಾಗಿರಲಿಲ್ಲ. ಆಸ್ಪತ್ರೆಗೆ ಸೇರಿಸಿರುವುದು ಗೊತ್ತಿತ್ತು. ಹಾಗೆಂದು ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದು ನರಳಿದವರಲ್ಲ. ತುಸು ಮೈಗೆ ಹಿತವಿಲ್ಲದಿದ್ದರೂ ಆಸ್ಪತ್ರೆಗೆ ಹೋಗಿ ಬರುವ ಅಭ್ಯಾಸ. ವೈದ್ಯರು ನಾಡಿ ಮುಟ್ಟಿ ಹೇಳುತ್ತಿದ್ದ ಮಾತಿಗೆ ಮತ್ತೆ ಲವಲವಿಕೆಗೆ ಮರಳುತ್ತಿದ್ದರು. ಹಾಗೆಯೇ ಅಂದುಕೊಂಡಿದ್ದೆ. ಆದರೆ ನನ್ನ ಊಹೆ ಈ ಸಲ ಸುಳ್ಳಾಯಿತು.

ತಂದೆಯ ಸಾವಿನಿಂದ ಎಲ್ಲರಂತೆಯೇ ವಿಚಲಿತನಾದೆ. ಬೇರೆಯವರು ತಂದೆ ತೀರಿಕೊಂಡರು ಅಂದಾಗ ಅವರ ವಯಸ್ಸು ಕೇಳುತ್ತಿದ್ದೆ. ಇಳಿವಯಸ್ಸಿನವರಾಗಿದ್ದರೆ ಬೇಸರವಾಗುತ್ತಿರಲ್ಲಿಲ್ಲ. ಆದರೂ ತಂದೆ ಮತ್ತೆ ಎಂದೆಂದಿಗೂ ನೋಡಲು ಸಿಗುವುದಿಲ್ಲವಲ್ಲ ಎನ್ನುವ ನೋವು ಕಾಡತೊಡಗಿತು. ರಾತ್ರಿಯೆಲ್ಲ ನಿದ್ದೆ ಹತ್ತಲ್ಲಿಲ್ಲ. ಮಗ್ಗುಲು ಬದಲಿಸಿದರೂ ತಂದೆಯ ಕೃಶ ಶರೀರ ಕಣ್ಣಿಗೆ ಕಟ್ಟುತ್ತಿತ್ತು. ಅವರ ಮೊಂಡುತನ, ಛಲ, ಹಠಮಾರಿತನ, ಸಿಟ್ಟು ಸಿನಿಮಾದ ರೀಲುಗಳಂತೆ ಸುರುಳಿಬಿಚ್ಚಿಕೊಂಡು ಓಡುತ್ತಿದ್ದವು. ದೂರದ ಊರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದಿದ್ದಾಗ ಬೇಡ ಅಂದಿರಲಿಲ್ಲ. ತಾನು ಕೊನೆಯುಸಿರೆಳೆದರೆ ಮುಖ ನೋಡಲು ಬರಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಅವರನ್ನು ಕಾಡಿರಲಿಲ್ಲ. ಆದರೆ ಜನ್ಮಕೊಟ್ಟ ತಂದೆಯ ಮುಖವನ್ನು ಕೊನೆಯ ಬಾರಿ ನೋಡಲೇ ಬೇಕೆಂದು ಬೆಳ್ಳಂಬೆಳಗ್ಗೆ ಹೊರಟು ನಿಂತೆ. ಬಸ್‌ನಲ್ಲಿ ಹೊರಟರೆ ಸಂಜೆಯ ಹೊತ್ತಿಗೆ ಮನೆ ತಲಪುತ್ತೇನೆ. ಅಲ್ಲಿಯ ತನಕ ಹೆಣ ಇಟ್ಟುಕೊಂಡು ಕಾಯುವಂತೆ ಮಾಡುವುದು ಸರಿಯಲ್ಲವೆಂದು ಕಾರು ಮಾಡಿಕೊಂಡು ಹೊರಟೆ. ನನ್ನ ಮೌನಮುಖವನ್ನು ಕಾರಿನ ಚಾಲಕ ಗಮನಿಸದಿದ್ದರೂ ವೇಗವಾಗಿ ಓಡಿಸುತ್ತಿದ್ದ. ಅದರಿಂದ ನನಗೂ ಲಾಭವೇ ಅಂದುಕೊಂಡು ಸುಮ್ಮನಾದೆ.

ತಂದೆಯ ಬಗ್ಗೆ ನನಗೆ ಅಪಾರವಾದ ಪ್ರೀತಿ ಇರದಿದ್ದರೂ ಅವರ ಹಠಮಾರಿತನವನ್ನು ಪ್ರೀತಿಸಿದ್ದೆ. ತನ್ನ ತಂದೆಯೊಂದಿಗೆ ಚಿಕ್ಕಂದಿನಲ್ಲಿ ಜಗಳಮಾಡಿಕೊಂಡು ಪಾಲಿನ ಆಸ್ತಿಗೂ ಕೈಚಾಚದೆ ಮನೆಯಿಂದ ಹೊರಬಿದ್ದಿದ್ದುದನ್ನು ಆಗಾಗ ಹೇಳುತ್ತಿದ್ದರು. ಯಾರ ಮಾತನ್ನೂ ಕೇಳುವ ಮನಸ್ಥಿತಿ ಅವರದಾಗಿರಲಿಲ್ಲ. ತಾನು ಹೇಳಿದ್ದೇ ಆಗಬೇಕು ಎನ್ನುವ ಹಠವನ್ನು ಚೆನ್ನಾಗಿ ತಿಳಿದಿದ್ದೆ. ಅವರ ಹಠಮಾರಿತನದಿಂದಾಗಿ ಕಷ್ಟಗಳನ್ನು ಎದುರಿಸಿದರು. ಅವರ ಕಷ್ಟಗಳಿಗೆ ಹೆಗಲು ಕೊಟ್ಟವಳು ಅಮ್ಮ. ಗಂಡನ ಹಠಮಾರಿ ತನದಿಂದಾಗಿಯೇ ಕಷ್ಟಗಳಿಗೆ ಗುರಿಯಾಗುತ್ತಿದ್ದೇನೆ ಎನ್ನುವ ಅರಿವಿದ್ದರೂ ಏನೂ ಮಾಡಲಾಗದ ಸ್ಥಿತಿ ಆಕೆಯದು. ಸಿಡುಕಿನ ಪತಿಯೊಂದಿಗೆ ಆರುದಶಕಗಳ ಕಾಲ ಸಂಸಾರ ಮಾಡಿರುವ ಅಮ್ಮ ಅದೆಷ್ಟು ಗೋಳಾಡುತ್ತಿದ್ದಾಳೋ ಎನ್ನುವ ಚಿಂತೆ ಕಾಡಿತು. ಎಲ್ಲ ಹೆಂಡತಿಯರು ಗಂಡ ಇಹಲೋಕ ತ್ಯಜಿಸಿದಾಗ ಪಡುವ ಸಂಕಟವನ್ನು ಆಕೆಯೂ ಪಡುತ್ತಿದ್ದಾಳೆ ಬಿಡು ಅಂದಿತು ಮನಸು.

ತಮ್ಮ ಮಕ್ಕಳಿಗೆಂದು ಆಸ್ತಿಮಾಡಿಟ್ಟು ಕೊನೆಯುಸಿರೆಳೆಯುವ ತಂದೆಯಂತವರಲ್ಲ ನನ್ನ ತಂದೆ. ಓದಿಸಿ ಬೆಳೆಸಿದ್ದೇ ನನ್ನ ಕೊಡುಗೆ. ನನ್ನಿಂದ ಏನನ್ನೂ ಕೇಳಬೇಡಿ ಎನ್ನುತ್ತಿದ್ದರು. ಹಾಗೆಯೇ ಮಾಡಿದರೂ ಕೂಡಾ. ತಂಗಿಗೆ ವರನನ್ನು ಹುಡುಕಿದ ಮೇಲೆ ‘ನನ್ನ ಕೆಲಸ ಮುಗಿಯಿತು, ಇನ್ನೇನಿದ್ದರೂ ನೀನು, ನಿನ್ನ ಅಣ್ಣನ ಜವಾಬ್ದಾರಿ’ ಅಂದಿದ್ದರು. ಈ ಮಾತು ಕೇಳಿ ಸಿಟ್ಟು ನೆತ್ತಿಗೇರಿ ಕೆರಳಿದ್ದೆ. ಹಣ ಹೊಂದಿಸಿಕೊಂಡಿಲ್ಲವೆಂದಾದರೆ ಮದುವೆ ಮಾಡಲು ಹೊರಟದ್ದೇಕೆ? ಅಂತಲೂ ಕೇಳಿದ್ದೆ. ಆಗಲೂ ಅವರು ಹೇಳಿದ ಮಾತು ‘ನೀವು ಇರೋದು ಯಾಕೆ? ತಂಗಿಗೆ ಮದುವೆ ಮಾಡಿಸಲಾಗದ ಹೇಡಿಗಳೇ ನೀವು?’ ಕೇಳಿದ್ದರು.

ಈ ಲೋಕದಲ್ಲಿ ಇಂಥವರೂ ಇದ್ದಾರೆಯೇ?. ಮಗಳಿಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ತಂದೆಯರನ್ನು ನೋಡಿದ್ದೆ. ಆದರೆ ವರನನ್ನು ಹುಡುಕಿದಾಕ್ಷಣವೇ ಜವಾಬ್ದಾರಿ ಮುಗಿಯೆತೆಂದು ಕೈ ಎತ್ತಿದಾಗ ಮಾನಸಿಕವಾಗಿ ತಂದೆಯ ಮೇಲೆ ಸಿಟ್ಟುಗೊಂಡಿದ್ದೆ. ತಂಗಿಯ ಮದುವೆ ಮುಗಿದ ಮೇಲೆ ಅವಳ ಬಾಣಂತನದ ಬಗ್ಗೆಯಾಗಲೀ, ತವರಿನಿಂದ ಆಕೆಯನ್ನು ಕಳುಹಿಸಿಕೊಡುವಾಗ ಮಾಡಬೇಕಾದ ಉಪಚಾರದ ಬಗ್ಗೆಯಾಗಲೀ ತಲೆಕೆಡಿಸಿಕೊಂಡವರೇ ಅಲ್ಲ. ಅದೇನಿದ್ದರೂ ನಿನ್ನದು, ನಿನ್ನ ಅಣ್ಣನ ಜವಾಬ್ದಾರಿಯೆಂದು ಹೇಳಿ ಸುಮ್ಮನಾಗಿದ್ದರು. ಅಣ್ಣಾ ಮದುವೆಯಾಗುವಾಗಲೂ ಹಣಕಾಸಿನ ನೆರವು ಕೊಟ್ಟವರೇ ಅಲ್ಲ. ಅಷ್ಟಕ್ಕೂ ಅವರು ಸಂಪಾದಿಸಿ ಉಳಿಸಿದ್ದರಲ್ಲವೇ ಆ ಚಿಂತೆ. ಇದ್ದಿದ್ದರೆ ಕೊಡುತ್ತಿದ್ದರು. ಆದರೆ ಇರದೇ ಇದ್ದಾಗ ಕೊಡುವುದಾದರೂ ಎಲ್ಲಿಂದ?

ಅಣ್ಣಾ ತನ್ನ ಮದುವೆಯ ಪ್ರಸ್ತಾಪ ಮಾಡಿದಾಗ ‘ನನ್ನನ್ನು ಹಣಕ್ಕೆ ಪೀಡಿಸಬೇಡ. ವರದಕ್ಷಿಣೆ ತೆಗೆದುಕೋ ಅಂತೇನೂ ಹೇಳುವುದಿಲ್ಲ. ನಿನಗೆ ತಾಕತ್ತಿದ್ದರೆ ಹಣ ಹೊಂದಿಸಿಕೊಂಡು ಮದುವೆಯಾಗು, ಇಲ್ಲವೇ ವರದಕ್ಷಿಣೆ ಎಷ್ಟು ಬೇಕು ತೆಗೆದುಕೋ’ ಅಂದಿದ್ದೆ. ಆಗ ತಂದೆ ನನಗೆ ಸಪೋರ್ಟ್ ಮಾಡಿದ್ದರು. ‘ನಿನ್ನ ಸಾಮರ್ಥ್ಯ ನೋಡಿಕೊಂಡು ಖರ್ಚು ಮಾಡು’ ಎಂದಷ್ಟೇ ಹೇಳಿ ಅಣ್ಣನ ಸಿಟ್ಟಿಗೂ ಕಾರಣರಾಗಿದ್ದರು. ಅಣ್ಣ ಮದುವೆಯಾದ. ತಂದೆಯಾಗಿ ಮದುವೆಯ ಸಂದರ್ಭದಲ್ಲಿ ಓಡಾಡಿಕೊಂಡು ಕೆಲಸ ಮಾಡಿದ್ದರು. ನನ್ನಿಂದ ಬಿಡಿಗಾಸೂ ಇಲ್ಲದೆ ಮದುವೆಯಾದೆ ಭೇಷ್ ಅಂದಿದ್ದರು.

ಹಾಗೆಂದು ಮಕ್ಕಳ ಮೇಲೆ ಅವರಿಗೆ ಅಪಾರ ಪ್ರೀತಿ. ಬಹಳ ದಿನಗಳ ಕಾಲ ನೋಡದಿದ್ದರೆ ಚಡಪಡಿಸುತ್ತಿದ್ದರು. ಕ್ಷಣ ನೋಡಿದ ಮೇಲೆ ಸುಮ್ಮನಾಗುತ್ತಿದ್ದರು. ಮಕ್ಕಳೊಂದಿಗೆ ಕುಳಿತು ಮಾತನಾಡುವ ತಂದೆಯಂದಿರನ್ನು ನೋಡಿದ್ದೇನೆ. ಆದರೆ ಇವರು ಮಾತ್ರ ಭಿನ್ನ. ದೂರದಿಂದ ಕರೆಸಿಕೊಂಡು ಒಂದೆರಡು ಶಬ್ಧ ಮಾತನಾಡಿ ಸುಮ್ಮನಾಗುತ್ತಿದ್ದರು. ಈ ವರ್ತನೆಯಿಂದ ಸಿಟ್ಟು ಬರುತ್ತಿತ್ತು. ನೂರಾರು ಕಿ.ಮೀ ನಿದ್ದೆಗೆಟ್ಟು ಪ್ರಯಾಣಿಸಿ ಹೋದರೇ ಒಂದೆರಡು ನಿಮಿಷ ಮಾತನಾಡಿ ಸುಮ್ಮನಾಗುತ್ತಾರಲ್ಲಾ, ಇದಕ್ಕೆ ಯಾಕೆ ಅಷ್ಟು ದೂರದಿಂದ ಖರ್ಚು ಮಾಡಿಕೊಂಡು ಬರಬೇಕು ಅನ್ನಿಸುತ್ತಿತ್ತು. ಅವರ ಸ್ವಭಾವವೇ ಹಾಗೆ, ಅವರು ಬದಲಾಗುವುದಿಲ್ಲ, ಬದಲಾಯಿಸುವುದು ಸಾಧ್ಯವೂ ಇಲ್ಲವೆಂದು ನಾನೂ ಸುಮ್ಮನಾಗುತ್ತಿದ್ದೆ.

ನನ್ನ ಬದುಕನ್ನು ಅವರು ನಿರ್ಧರಿಸಿದ ಕಾರಣ ಅವರ ಮೇಲೆ ಅಗಾಧವಾದ ಸಿಟ್ಟಿತ್ತು. ಎಸ್ಎಸ್ಎಲ್‌ಸಿ ಮುಗಿಸಿದಾಗ ಪಿಯುಸಿ ಮಾಡಿ, ಡಿಗ್ರಿ ಮಾಡಿ, ಸ್ನಾತಕೋತ್ತರ ಪದವಿ ಮಾಡಿ ಉಪನ್ಯಾಸಕನಾಗಬೇಕು ಎನ್ನುವ ಕನಸು ಕಂಡಿದ್ದೆ. ‘ನಿನ್ನನ್ನು ಕಾಲೇಜು ಓದಿಸಲು ನನ್ನನ್ನಿ ಹಣವಿಲ್ಲ. ಡಿಪ್ಲೊಮಾ ಮಾಡಿ ಕೆಲಸಕ್ಕೆ ಸೇರಿಕೋ’ ಅಂದವರೇ ಅವರ ಹಠದಂತೆಯೇ ಡಿಪ್ಲೊಮಾಗೆ ಸೇರಿಸಿದರು. ಅಲ್ಲಿ ಪಾಸಾದ ಮೇಲೆ ನನ್ನ ಹಾದಿ ಹಿಡಿದೆ. ಡಿಪ್ಲೊಮಾ ಮಾಡಿದವನು ಬದುಕಲು ಆಯ್ಕೆ ಮಾಡಿಕೊಂಡದ್ದು ಪತ್ರಿಕೋದ್ಯಮವನ್ನು. ನನ್ನ ನಿರ್ಧಾರದಿಂದ ಅವರಿಗೆ ಬೇಸರವಾಗಿರಲಿಲ್ಲ. ‘ಏನಾದರೂ ಮಾಡಿಕೋ, ನಿನ್ನಿಷ್ಟ’ ಅಂದಿದ್ದರು. ಆದರೆ ಉಪನ್ಯಾಸಕನಾಗಬೇಕೆಂದುಕೊಂಡಿದ್ದ ಕನಸನ್ನು ಸಾಯಿಸಿದ ತಂದೆಯ ಮೇಲಿನ ಸಿಟ್ಟು ಮಾತ್ರ ಹಾಗೆಯೇ ಉಳಿಯಿತು. ಶಾಲೆಗೆ ಕಟ್ಟಲು ಫೀಸ್ ಕೇಳಿದರೆ, ಪುಸ್ತಕ ಕೊಳ್ಳಲು ಹಣ ಕೇಳಿದರೆ ಸಿಡುಕುತ್ತಲೇ ಕೊಡುತ್ತಿದ್ದರು. ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ತಾವೇ ಖುದ್ದು ಹೋಗಿ ಫಲಿತಾಂಶ ನೋಡಿಕೊಂಡು ನಾನು ಹೇಳುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ನಾನು ಉತ್ತಮ ಅಂಕ ತೆಗೆದಾಗಲೆಲ್ಲಾ ನನಗಿಂತಲೂ ಖುಷಿಪಟ್ಟುಕೊಳ್ಳುತ್ತಿದ್ದರು. ಹಣಕೊಡಲು ಹಿಂದೆ ಮುಂದೆ ನೋಡುತ್ತಿದ್ದರೂ ಫಲಿತಾಂಶ ಬಂದಾಗ ಮಾತ್ರ ತಾವೇ ಓದಿ ಪರೀಕ್ಷೆ ಬರೆದಷ್ಟು ಸಂಭ್ರಮಪಡುತ್ತಿದ್ದರು. ಮಕ್ಕಳ ಯಶೋಗಾಥೆಯನ್ನು ಇತರರೊಂದಿಗೆ ಹಂಚಿಕೊಂಡು ಖುಷಿಪಡುತ್ತಿದ್ದರು.

ನಾನು ವಯಸ್ಸಿಗೆ ಬಂದಾಗ ‘ನೀನು ಯಾವಾಗ ಮದುವೆಯಾಗುತ್ತೀ’ ಎನ್ನುವ ಪ್ರಶ್ನೆಯನ್ನು ನೇರವಾಗಿ ಕೇಳುತ್ತಿದ್ದರು. ‘ನೀವು ಹಣಕೊಟ್ಟರೆ ಮದುವೆಯಾಗುತ್ತೇನೆ. ವರದಕ್ಷಿಣೆ ತೆಗೆದುಕೊಂಡು ಮದುವೆಯಾಗುವುದಿಲ್ಲ’ ಅಂದಾಗ ‘ನಾನು ಹಣಕೊಟ್ಟರೆ ಮಾತ್ರ ಮದುವೆಯಾಗುತ್ತೀಯೋ, ಏನಾದರೂ ಮಾಡಿಕೋ’ ಎಂದು ಸುಮ್ಮನಾಗಿದ್ದರು.

ನಾನು ಮದುವೆಗೆ ಸಮ್ಮತಿಸಿದಾಗ ವರದಕ್ಷಿಣೆ ಬಗ್ಗೆ ಚಕಾರ ಎತ್ತಬಾರದು ಎನ್ನುವ ತಾಕೀತು ಮಾಡಿದ್ದೆ. ಆಗ ಅವರಿಂದ ಬಂದ ಪ್ರಶ್ನೆ ‘ಖರ್ಚಿಗೇನು ಮಾಡುತ್ತೀ’. ‘ಹಣಕೊಡುವವರು ನೀವಲ್ಲ ತಾನೇ, ಆ ಚಿಂತೆ ನಿಮಗೆ ಯಾಕೆ ಬೇಕು? ಸ್ವಂತ ಮಗಳ ಮದುವೆಗೇ ಒಂದು ರೂಪಾಯಿ ಕೊಡದವರು ನನಗೆ ಎಲ್ಲಿಂದ ಕೊಡುತ್ತೀರೀ?’. ನನ್ನ ಈ ಪ್ರಶ್ನೆ ಅವರನ್ನು ಕೆರಳಿಸಿತ್ತು. ‘ನಿನ್ನನ್ನು ಸಾಕಿ, ಬೆಳೆಸಿ, ಓದಿಸಿದ್ದು ಯಾರು?’ ಗುಡುಗಿದ್ದರು. ನನ್ನ ಮದುವೆ ಮುಗಿದ ಮೇಲೆ ‘ಇನ್ನು ನನ್ನ ಜವಾಬ್ದಾರಿ ಮುಗಿಯಿತು, ಇನ್ನು ನೀವು ಏನಾದರೂ ಮಾಡಿಕೊಳ್ಳಿ’ ಎಂದಿದ್ದರು. ಆಗಲೂ ಅವರ ಈ ಮಾತಿಗೆ ಸಿಟ್ಟಿನಿಂದ ಒದರಿದ್ದೆ.

‘ಇನ್ನೂ ಎಷ್ಟು ಹೊತ್ತಾಗುತ್ತೆ ಮನೆ ತಲುಪಲು?’ ತಂಗಿ ಫೋನ್ ಮಾಡಿ ಕೇಳಿದಾಗ ತಂದೆಯನ್ನು ನೋಡಲು ಇನ್ನೂ ಮೂರು ಗಂಟೆಯಾದರೂ ಪ್ರಯಾಣಿಸಬೇಕಿತ್ತು. ‘ತಡ ಮಾಡುವಂತಿಲ್ಲವೆಂದು ತಕರಾರು ಮಾಡಿದರೆ ಶವಸಂಸ್ಕಾರ ಮಾಡಿ. ನನ್ನನ್ನು ಕಾಯಬೇಡಿ’ ಅಂದೆ ನೋವಿನಿಂದ. ‘ರಾಹುಕಾಲ ಕಳೆದ ಮೇಲೆ 1.30ಕ್ಕೆ ಅಂತಿಮ ಸಂಸ್ಕಾರವಂತೆ, ಬೇಗ ಬಾ’ ಅಂದಳು. ಅವಳು ಹೇಳುವ ಸಮಯದೊಳಗೆ ತಲಪುವುದು ಖಾತ್ರಿಯಾಯಿತು. ಹಠಮಾರಿ ತಂದೆ ಮಗನ ಮುಖ ನೋಡಲೆಂದೇ ರಾಹುಕಾಲದ ಗೆರೆ ಹಾಕಿರಬೇಕು ಅನ್ನಿಸಿತು. ತನ್ನ ಮಗ ಕೊನೆಯ ಬಾರಿ ಮುಖ ನೋಡಲೆಂದು ಈ ಅವಕಾಶವನ್ನಾದರೂ ಮಾಡಿಕೊಟ್ಟನಲ್ಲಾ ಅಂದುಕೊಂಡೆ.

ಅಂದುಕೊಂಡಂತೆಯೇ ರಾಹುಕಾಲ ಮುಗಿಯುವ ಮೊದಲೇ ನಾನು ಮನೆ ತಲುಪಿದೆ. ನೆಂಟರಿಷ್ಟರು, ನೆರೆಕರೆಯವರು ಮನೆ ಮುಂದೆ ಜಮಾಯಿಸಿದ್ದರು. ಕಾರಿನಿಂದ ಇಳಿದಾಗ ಅಣ್ಣಾ ಬಿಕ್ಕಿ ಬಿಕ್ಕಿ ಅಳತೊಡಗಿದ. ಮೆಲ್ಲಗೆ ಅಂಗಳ ದಾಟಿದೆ. ತಂದೆ ಮಲಗಿದ್ದರು. ತಾಯಿ ಪಕ್ಕದಲ್ಲಿ ಕುಳಿತು ಅಳುತ್ತಿದ್ದರು. ಹಠ ಮಾರಿ, ಮಕ್ಕಳ ಮುಂದೆ ಮುಖದಲ್ಲಿ ನಗೆ ಮೂಡಿಸಲು ಹಿಂದೇಟು ಹಾಕುತ್ತಿದ್ದ ತಂದೆ ನಗುಮುಖದೊಂದಿಗೆ ಮಲಗಿದ್ದರು. ಇಂಥ ಸಂತೃಪ್ತ ಮುಖವನ್ನು ಕಂಡವನೇ ಅಲ್ಲದ ನನಗೆ ಅಳುವನ್ನು ಅದುಮಿಟ್ಟುಕೊಳ್ಳಲಾಗಲಿಲ್ಲ, ಅತ್ತುಬಿಟ್ಟೆ ಮಗನಾಗಿ.

‘ಇದು ಮುಂಗಾರು’ – ‘ಮುಂಗಾರು’ ಅಂದ್ರೆ ಇಷ್ಠೇನಾ?

– ಶಿವರಾಮ್ ಕೆಳಗೋಟೆ

ಈ ಹೊತ್ತಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ ಪಡೆದವರಿಗೆ ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ ಕೇವಲ ಹಿರಿಯರಿಂದ ಕೇಳಿ ಗೊತ್ತು. ಅದರ ಒಂದು ಪ್ರತಿಯನ್ನೂ ಓದದವರಿಗೆ ಆ ಪತ್ರಿಕೆ ಬಗ್ಗೆ ಹಲವು ಕುತೂಹಲಗಳಿವೆ. ಅದು ಜನರ ಒಡೆತನದ ಪತ್ರಿಕೆ, ‘ಚಿಂತನೆಯ ಮಳೆ ಸುರಿಸಿ, ಜನಶಕ್ತಿಯ ಬೆಳೆ ತೆಗೆವ’ ಉದ್ದೇಶದೊಂದಿಗೆ ಹೊರಬಂದ ಪತ್ರಿಕೆ… ಹೀಗೇ ಅಲ್ಲಲ್ಲಿ ಕೇಳಿ ಬರುತ್ತಿದ್ದ ಮಾತುಗಳು ಅಂತಹದೊಂದು ಪ್ರಯೋಗದ ಬಗ್ಗೆ ನವ ಪತ್ರಕರ್ತರಲ್ಲಿ ಕುತೂಹಲ ಹುಟ್ಟಿಸಲು ಕಾರಣವಾಗಿದ್ದವು.

ಈ ಕುತೂಹಲದಿಂದಾಗಿಯೇ “ಕೆಂಡಸಂಪಿಗೆ”ಯಲ್ಲಿ ಪ್ರಕಟವಾದ ಚಿದಂಬರ ಬೈಕಂಪಾಡಿ ಬರೆದ ಸರಣಿ ಅನೇಕರನ್ನು ಆಕರ್ಷಿಸಿತ್ತು .ಜಿ.ಎನ್ ಮೋಹನ್ ಇದೇ ಸರಣಿಯನ್ನು ಅಂಕಿತ ಪ್ರಕಾಶನದ ‘ಮೀಡಿಯಾ ಮಾಲಿಕೆ’ ಯ ಮೊದಲ ಪುಸ್ತಕವಾಗಿ ಪ್ರಕಟಿಸಿದರು. ಆ ಮೂಲಕ ಮುಂಗಾರು, ಅದರ ಸಂಪಾದಕ ವಡ್ಡರ್ಸೆಯವರು ಮತ್ತು ಚಿದಂಬರ ಬೈಕಂಪಾಡಿಯವರ ವೃತ್ತಿ ಜೀವನ, ವಿಶಾಲ ಓದುಗರಿಗೆ ಪರಿಚಯವಾಗಲು ಸಾಧ್ಯವಾಯಿತು. ಪುಸ್ತಕದ ಹೆಸರು ಹೇಳುವಂತೆ ಇದು ಮುಂಗಾರಿನ ಕತೆ ಅಥವಾ ಚರಿತ್ರೆ.

ಪುಸ್ತಕ ಓದಿದ ನಂತರ ಮನಸ್ಸಿನಲ್ಲಿ ಉಳಿಯುವ ಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಪ್ರಮುಖವಾಗಿ ಕಾಣುವುದು –ಒಂದು ಆದರ್ಶಕ್ಕಾಗಿ ಪತ್ರಿಕೆ ಹುಟ್ಟು ಹಾಕಿದ ವಡ್ಡರ್ಸೆ, ಅವರೊಂದಿಗೆ ಪ್ರಜಾವಾಣಿಯಂತಹ ಸಂಸ್ಥೆಯನ್ನು ಬಿಟ್ಟು ಬಂದ ಗಟ್ಟಿ ಪತ್ರಕರ್ತರ ತಂಡ, ಅವರೊಟ್ಟಿಗೆ ಸೇರಿಕೊಂಡು ನಂತರ ಅತ್ಯುತ್ತಮ ಪತ್ರಕರ್ತರಾಗಿ ರೂಪುಗೊಂಡ ತರುಣರು, ಚಿದಂಬರ ಬೈಕಂಪಾಡಿಗೆ ಕಡಿಮೆ ಸಂಬಳ ಫಿಕ್ಸ್ ಆಗಿದ್ದು, ನಂತರ ಸಂಪಾದಕರು ಅದನ್ನು ಸರಿಮಾಡಿದ್ದು, ಅವರು ವರದಿಗಾರರಾಗಿ ಬೀದರ್, ಕಾರವಾರಕ್ಕೆ ಭೇಟಿ ನೀಡಿದ್ದು, ಪತ್ರಿಕೆ ಉಳಿವಿಗಾಗಿ ಸಾಲ ಮಾಡಿದ್ದು, ವಡ್ಡರ್ಸೆಯವರ ಕಾರನ್ನು ಹೂಡಿಕೆದಾರರೊಬ್ಬರು ಹಿಂದಕ್ಕೆ ತೆಗೆದುಕೊಂಡದ್ದು.. ಕೊನೆಗೆ ವಡ್ಡರ್ಸೆ ಪತ್ರಿಕೆಗೆ ವಿದಾಯ ಹೇಳಿದ್ದು.

ಹಾಗಾದರೆ ಕನ್ನಡ ಪತ್ರಿಕೋದ್ಯಮದ ವಿಶಿಷ್ಟ ಪ್ರಯತ್ನ ‘ಮುಂಗಾರು’ ಅಂದ್ರೆ ಇಷ್ಟೇನಾ?

ಪತ್ರಕರ್ತ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ತೀವ್ರವಾಗಿ ಆಸಕ್ತಿ ಕೆರಳಿಸುವ ಸಂಗತಿ – ಮುಂಗಾರು ‘ಓದುಗರ ಒಡೆತನದ ಪತ್ರಿಕೆ’ ಎಂಬ ಮಾತು. ಈ ಪುಸ್ತಕ ಈ ಅಂಶವನ್ನು ವಿವರವಾಗಿ ಹೇಳುವುದೇ ಇಲ್ಲ. ಅದ್ಹೇಗೆ ಓದುಗರ ಒಡೆತನದ ಪತ್ರಿಕೆಯಾಗಿತ್ತು? ‘ಸಾರ್ವಜನಿಕರಿಂದ ಶೇರು ಸಂಗ್ರಹಿಸುತ್ತಿದ್ದರು’ (ಪುಟ 21) ಎಂಬ ಮಾತಿದೆ. ಹಾಗಾದರೆ ಸಾರ್ವಜನಿಕರು ಅನ್ನುವುದನ್ನು ‘ಓದುಗರು’ ಎಂದು ಗ್ರಹಿಸಬೇಕೆ? ಶೇರು ಸಂಗ್ರಹಿಸಿದ್ದವರೆಲ್ಲ ಓದುಗರಾಗಿದ್ದರೆ? ಹಾಗಾದರೆ, ಓದುಗರ ಹೂಡಿಕೆ ಕಂಪನಿಯಲ್ಲಿ ಎಷ್ಟಿತ್ತು? ಓದುಗರ ಒಡೆತನ ಎಂದ ಮೇಲೆ, ಪತ್ರಿಕೆಯ ಸಂಪಾದಕೀಯ ಹೂರಣದಲ್ಲಿ ಓದುಗರ ಪಾತ್ರ ಏನಿತ್ತು, ಎಷ್ಟಿತ್ತು?

ಕೆಲ ಹಿರಿಯರಿಂದ ಕೇಳಿರುವ ಹಾಗೆ, ವಡ್ಡರ್ಸೆಯವರು ವಾರಕ್ಕೊಮ್ಮೆ ಓದುಗರ ಪ್ರಶ್ನೆಗಳಿಗೆ ಉತ್ತರಿಸುವ ಅಂಕಣವೊಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಓದುಗರು, ಪತ್ರಿಕೆ, ಅದರ ಸಂಪಾದಕೀಯ ನಿಲುವುಗಳು ಹೀಗೆ ಅನೇಕ ಸಂಗತಿಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಸಂಪಾದಕರು ಓದುಗರೊಂದಿಗೆ ಅವರು ಎತ್ತಿದ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದರು. ಬೈಕಂಪಾಡಿಯವರ ‘ಇದು ಮುಂಗಾರು’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖ ಕಾಣಲಿಲ್ಲ. ಒಬ್ಬ ಸಂಪಾದಕ ಓದುಗರೊಂದಿಗೆ ಸಂವಾದ ನಡೆಸುವ ಪ್ರಯೋಗವೇ ವಿಶಿಷ್ಟ. ಈ ಬಗ್ಗೆ ಲೇಖಕರು ವಿವರವಾಗಿ ದಾಖಲಿಸಿದ್ದರೆ ಉಪಯೋಗವಾಗುತ್ತಿತ್ತು.

“ಆದರ್ಶ, ಸೇವೆ ಇವೆಲ್ಲವೂ ಶೆಟ್ರ ಭಾಷೆಯಲ್ಲೇ ಹೇಳುವುದಾದರೆ ಮಣ್ಣಂಗಟ್ಟಿ. ಆದ್ದರಿಂದಲೇ ‘ಮುಂಗಾರು’ಮುನ್ನಡೆಯಲಿಲ್ಲ. ರಘುರಾಮ ಶೆಟ್ರು ‘ಮುಂಗಾರು’ ಹುಟ್ಟುಹಾಕಿದ್ದು ಸರಿ, ಅವರ ಧ್ಯೇಯೋದ್ದೇಶಗಳೂ ಸರಿಯಾದವೇ. ಆದರೆ ಅವರ ಸಂಸ್ಥೆ ಇರಬೇಕಿದ್ದ ಸ್ಥಳ ಕರಾವಳಿ ಅಲ್ಲವೇ ಅಲ್ಲ” – ಎಂದು ಲೇಖಕರು ತಮ್ಮ ಆರಂಭಿಕ ಮಾತುಗಳಲ್ಲಿ (ಪುಟ 12) ಹೇಳುತ್ತಾರೆ. ಪತ್ರಿಕೆ ಉದ್ದೇಶಿತ ಗುರಿ ಮತ್ತು ವಿಸ್ತಾರ ತಲುಪದೇ ಇದ್ದಾಗ ವಡ್ಡರ್ಸೆಯವರು ಆಡಿರಬಹುದಾದ ಮಾತನ್ನು ಇಟ್ಟುಕೊಂಡು ಲೇಖಕರು ತಮ್ಮ ಅಭಿಪ್ರಾಯವನ್ನು ಈ ವಾಕ್ಯದಲ್ಲಿ ಹೇಳಿದ್ದಾರೆ.

ಕರಾವಳಿ ಈ ಪ್ರಯೋಗಕ್ಕೆ ಸೂಕ್ತ ಅಲ್ಲ ಎನ್ನುವ ಲೇಖಕರು, ತಮ್ಮ ಪ್ರಕಾರ ‘ಸೂಕ್ತ ಸ್ಥಳ’ ಯಾವುದು ಎಂಬುದನ್ನು ಹೇಳಲಿಲ್ಲ. ಆದರೆ, ಕರಾವಳಿ ಪ್ರದೇಶವನ್ನು ತಮ್ಮ ಕಾರ್ಯಸ್ಥಾನವಾಗಿ ಆಯ್ಕೆ ಮಾಡಿಕೊಳ್ಳುವಲ್ಲಿಯೇ ವಡ್ಡರ್ಸೆಯವರ ಧ್ಯೇಯೋದ್ದೇಶಗಳು ಸ್ಟಷ್ಟವಾಗಿದ್ದವು. ಸಣ್ಣ–ಪುಟ್ಟ ಪ್ರಚೋದನೆಗಳಿಗೆ ಕೋಮು ಭಾವನೆಗಳನ್ನು ಕೆರಳಿಸಿಕೊಂಡು ಶಾಂತಿ ಹಾಳು ಮಾಡಿಕೊಳ್ಳುವ ಪರಿಸರದಲ್ಲಿ ‘ಚಿಂತನೆಯ ಮಳೆ’ ಅಗತ್ಯವಾಗಿತ್ತು ಎನಿಸುವುದಿಲ್ಲವೆ?.

ಈ ಕೃತಿಯಿಂದ ನಿರೀಕ್ಷಿಸಬಹುದಾದ ಪ್ರಮುಖ ಅಂಶ – ‘ಮುಂಗಾರು’ ತನ್ನ ಕಡಿಮೆ ಜೀವಿತಾವಧಿಯಲ್ಲಿ ಓದುಗ ವಲಯದಲ್ಲಿ ಉಂಟುಮಾಡಿದ ಸಂಚಲನೆ ಎಂಥದ್ದು? ಲೇಖಕರು ಅಲ್ಲಲ್ಲಿ ಸಂಪಾದಕರ ‘ಧ್ಯೇಯ, ಸಿದ್ಧಾಂತ,ಕಾಳಜಿ’ಗಳನ್ನು ಕೊಂಡಾಡುತ್ತಾರೆ. ಆದರೆ 2012 ರಲ್ಲಿ ಈಗಷ್ಟೆ ಪತ್ರಿಕೋದ್ಯಮಕ್ಕೆ ಕಣ್ಣು ಬಿಟ್ಟ ಓದುಗ ಮುಂಗಾರು ಬಗ್ಗೆ ಬಂದಿರುವ ಈ ಪುಸ್ತಕ ಹಿಡಿದು ಕೂತಾಗ, ಏಳುವ ಪ್ರಶ್ನೆ – ವಡ್ಡರ್ಸೆಯವರು ಪ್ರತಿನಿಧಿಸಿದ ಧ್ಯೇಯ, ಸಿದ್ಧಾಂತ, ಕಾಳಜಿಗಳು ಯಾವುವು? ಅವರು ಲೋಹಿಯಾರಿಂದ ಪ್ರಭಾವಿತರಾಗಿದ್ದರು. ಶೂದ್ರ ಅಥವಾ ದಲಿತ ನೇತಾರರ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದರು. ಶೂದ್ರ ನಾಯಕರು ತಪ್ಪು ಮಾಡಿದಾಗ ಅಂತಹ ಪ್ರಕರಣಗಳನ್ನು ಮೃದುವಾಗಿಯೇ ಹ್ಯಾಂಡಲ್ ಮಾಡಬೇಕು –ಎಂಬರ್ಥದ ಮಾತುಗಳನ್ನು ವಡ್ಡರ್ಸೆ ಆಗಾಗ ಆಡುತ್ತಿದ್ದರು ಎಂದು ಲೇಖಕರು ಉಲ್ಲೇಖಿಸುತ್ತಾರೆ. ಆದರೆ ಒಟ್ಟಾರೆ, ಪ್ರಚಲಿತ ರಾಜಕೀಯ ಬೆಳವಣಿಗೆಗಳ ಬಗ್ಗೆ, ಮುಂದುವರೆದ ಸಾಮಾಜಿಕ ಅಸಮಾನತೆ ಬಗ್ಗೆ ಒಂದು ವಿಶಿಷ್ಟ ಪತ್ರಿಕೆಯ ಸಂಪಾದಕರಾಗಿ ವಡ್ಡರ್ಸೆ ತಾಳಿದ್ದ ನಿಲುವುಗಳು ಮತ್ತು ಆ ನಿಲುವುಗಳನ್ನು ತಮ್ಮ ಪತ್ರಿಕೆಯಲ್ಲಿ ವ್ಯಕ್ತಪಡಿಸಿದ ಬಗ್ಗೆ ವಿವರಗಳು ಈ ಕೃತಿಯಲ್ಲಿ ವಿರಳ.

ಚಿದಂಬರ ಬೈಕಂಪಾಡಿ

ಈ ಎಲ್ಲಾ ವಿವರಗಳು ಈ ಕೃತಿಯಲ್ಲಿ ಇರಬೇಕಿತ್ತು ಎಂದು ಬಯಸುವುದಕ್ಕೆ ಕಾರಣ ಈ ಕೃತಿಯ ಶೀರ್ಷಿಕೆ. ಮೀಡಿಯಾ ಮಾಲಿಕೆ ಸಂಪಾದಕರು ಮತ್ತು ಲೇಖಕರು ಕೃತಿಗೆ ಕೊಟ್ಟ ಹೆಸರು – ‘ಇದು ಮುಂಗಾರು’. ದೃಢವಾಗಿ ಮುಂಗಾರು ಎನ್ನುವ ಪತ್ರಿಕೆ ಹೀಗೇ ಇತ್ತು ಎನ್ನುವ ಧೋರಣೆ ಈ ಶೀರ್ಷಿಕೆಯಲ್ಲಿದೆ. ಕೆಲ ಹಿರಿಯ ವರದಿಗಾರರು ಕಿರಿಯರ ಕಾಪಿ ತಿದ್ದುವಾಗ ‘ಇದು ಸುದ್ದಿ’ ಎಂದು ಯಾವ ಅಂಶವನ್ನು ಹೈಲೈಟ್ ಮಾಡಬೇಕಿತ್ತೋ ಅದನ್ನು ತೋರಿಸಿ ಹೇಳುತ್ತಾರೆ. ಅದರರ್ಥ ಕಿರಿಯ ವರದಿಗಾರ ಲೀಡ್ ಆಗಿ ತೆಗೆದುಕೊಂಡ ಅಂಶ ಅಷ್ಟು ಮುಖ್ಯ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವುದು. ಅಂತೆಯೇ ‘ಇದು ಮುಂಗಾರು’ ಎನ್ನುವಾಗ ಈ ಕೃತಿಗೆ ಮಹತ್ವವನ್ನೂ, ಗಾಂಭೀರ್ಯವನ್ನೂ ಜೊತೆಗೆ ಅಧಿಕೃತತೆಯನ್ನು ದಯಪಾಲಿಸುವ ಉದ್ದೇಶವಿದೆ.

‘ಮುಂಗಾರು’ಗೆ ದುಡಿದ ಅನೇಕ ಪ್ರತಿಭೆಗಳು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. (ಅವರಲ್ಲಿ ಕೆಲವರು ಒಂದು ಕಾಲದಲ್ಲಿ ವಡ್ಡರ್ಸೆಯವರ ಪತ್ರಿಕೆಯಲ್ಲಿದ್ದರು ಎಂಬ ವಾಸ್ತವವನ್ನು ಸಂಶಯಿಸುವ ಮಟ್ಟಿಗೆ ಬದಲಾಗಿದ್ದಾರೆ ಅಥವಾ ನಿಜ ರೂಪ ಪ್ರದರ್ಶಿಸಿದ್ದಾರೆ!). ಪತ್ರಿಕೆ ಕಟ್ಟುವಾಗ ವಡ್ಡರ್ಸೆಯವರ ಜೊತೆ ಇದ್ದ ಇಂದೂಧರ ಹೊನ್ನಾಪುರ, ಕೆ. ಪುಟ್ಟಸ್ವಾಮಿ, ಈ ಪತ್ರಿಕೆ ಮೂಲಕ ವೃತ್ತಿ ಪ್ರವೇಶಿಸಿದ ದಿನೇಶ್ ಅಮಿನ್ ಮಟ್ಟು ಮತ್ತಿತರರು ಈ ಮೇಲೆ ಎತ್ತಿರುವ ಪ್ರಶ್ನೆಗಳಿಗೆ ಸೂಕ್ತ ವಿವರ ಕೊಡಬಲ್ಲರೇನೋ. ಅವರು ತಮ್ಮ ಅನುಭವ ದಾಖಲಿಸಿದ್ದರೆ ಚೆನ್ನಾಗಿರುತ್ತಿತ್ತು. ಮುಂದೆಯಾದರೂ ಅಂತಹ ಪ್ರಯತ್ನ ಮಾಡಿದರೆ ತರುಣ ಪತ್ರಕರ್ತರಿಗೆ ಅನುಕೂಲವಾಗುತ್ತದೆ.

ಇಲ್ಲವಾದರೆ -ವಡ್ಡರ್ಸೆ ಎಂದರೆ ಹಿರಿಯ ಪೊಲೀಸ್ ಅಧಿಕಾರಿಗಳು ಗೌರವ ಕೊಡುತ್ತಿದ್ದರು, ವಿಧಾನಸೌಧದ ದ್ವಾರದಲ್ಲಿರುವ ಪೊಲೀಸ್ ಪೇದೆ ಅವರ ಬಳಿ ಗುರುತಿನ ಪತ್ರ ಕೇಳದೆ ಸೆಲ್ಯೂಟ್ ಹೊಡೆದು ಒಳಗೆ ಬಿಡುತ್ತಿದ್ದ, ಮಂತ್ರಿಗಳು, ರಾಜಕಾರಣಿಗಳು ಅವರೊಂದಿಗೆ ಚರ್ಚೆ ನಡೆಸಲು ಅವರ ಕಚೇರಿಗೆ ಬರುತ್ತಿದ್ದರು ಅಥವಾ ಗೆಸ್ಟ್ ಹೌಸ್ ಗೆ ಆಹ್ವಾನಿಸುತ್ತಿದ್ದರು, ಬೀದರ್ ನಲ್ಲಿ ಅವರ ಪತ್ರಿಕೆ ವರದಿಗಾರರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ರಾಜ್ಯ ಸಭೆ ಸದಸ್ಯರು ಮುತುವರ್ಜಿ ವಹಿಸುತ್ತಿದ್ದರು – ಎಂಬಂತಹ ಸಂಗತಿಗಳೇ ಮುಂಗಾರುವಿನ ಚರಿತ್ರೆಯಾಗಿ ಉಳಿದುಬಿಡುವ ಅಪಾಯವಿದೆ.

ಅಂಕಿತ ಪುಸ್ತಕದ ಮೀಡಿಯಾ ಮಾಲಿಕೆ ಉದ್ದೇಶ ಸ್ತುತ್ಯಾರ್ಹ. ಮಾಧ್ಯಮ ಸಂಗತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಹೆಚ್ಚಾಗುತ್ತಿರುವ ಈ ಹೊತ್ತಲ್ಲಿ ಇಂತಹದೊಂದು ಪ್ರಯತ್ನ ಅಗತ್ಯವಿತ್ತು. ಅಷ್ಟೇ ಅಲ್ಲ ಕನ್ನಡ ಪತ್ರಿಕೋದ್ಯಮದ ವಿವಿಧ ಆಸಕ್ತಿಕರ ಆಯಾಮಗಳನ್ನು, ಮಜಲುಗಳನ್ನು ದಾಖಲಿಸುವ ಮೌಲಿಕ ಕೃತಿಗಳು ಹೆಚ್ಚೆಚ್ಚು ಬರಲಿ.

“ಇದು ಮುಂಗಾರು”
ಲೇಖಕ: ಚಿದಂಬರ ಬೈಕಂಪಾಡಿ
ಪ್ರಕಾಶಕರು: ಅಂಕಿತ ಪುಸ್ತಕ
53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ,
ಬಸವನಗುಡಿ, ಬೆಂಗಳೂರು – 04
ಬೆಲೆ: ₹ 70

ವಸ್ತ್ರ ಸಂಹಿತೆ ಎಂಬ ಎರಡು ಅಲಗಿನ ಕತ್ತಿ

– ಭಾರತೀ ದೇವಿ. ಪಿ

ನಮ್ಮ ದೇಶದಲ್ಲಿ ವಸ್ತ್ರ ಸಂಹಿತೆಯ ವಿಷಯ ಬಂದಾಗಲೆಲ್ಲ ಅದು ಯಾವಾಗಲೂ ಎರಡು ಅತಿಯಾದ ವಾದಗಳಿಗೆ ಹೋಗಿ ನಿಲ್ಲುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಉಂಟುಮಾಡುವಲ್ಲಿ, ಶಿಸ್ತು ಮೂಡಿಸುವಲ್ಲಿ ಒಂದೇ ಬಗೆಯ ಬಟ್ಟೆ ಎಂಬ ತಿಳುವಳಿಕೆ ನಮ್ಮಲ್ಲಿ ಎಲ್ಲೆಡೆ ಕಾಣಬರುವ ಸಮಾಚಾರ. ಇದು ಪ್ರಜಾಪ್ರಭುತ್ವೀಯ ನೆಲೆಯದು. ಆದರೆ ಅದರಾಚೆಗೆ ವಯಸ್ಸಿನಲ್ಲಿ ಒಂದು ಹಂತ ದಾಟಿದ ಮಕ್ಕಳ ಮೇಲೆ, ಕೆಲಸದ ಸ್ಥಳದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಇಂತಹುದೇ ಬಟ್ಟೆ ಧರಿಸಬೇಕೆಂದು ಹೇರುವುದು ಇಂದು ಸಂಸ್ಕೃತಿಯ ಹೆಸರಿನಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇಲ್ಲಿ ಸಮಾನ ಭಾವನೆ ಮೂಡಿಸಬೇಕು ಎನ್ನುವುದಕ್ಕಿಂತ  ಹೆಚ್ಚಾಗಿ ’ಇಂಥವರಿಗೆ ಪಾಠ ಕಲಿಸಬೇಕು’ ಎಂದು ಕತ್ತಿ ಹಿರಿದ ಸಂಸ್ಕೃತಿಯ ಪೊಲೀಸರ ದರ್ಬಾರು ಹೆಚ್ಚು.

ಇಂತಹ ಜನಗಳಿಗೆ ಸಂಸ್ಕೃತಿ ಎನ್ನುವುದು ನಿಂತ ನೀರಲ್ಲ, ಸದಾ ಬದಲಾವಣೆಗೆ ಒಡ್ಡಿಕೊಳ್ಳುತ್ತಾ ಚಲನಶೀಲವಾಗಿರುವುದು ಎಂಬ ತಿಳುವಳಿಕೆ ಇಲ್ಲ. ಸಾವಿರ ವರ್ಷಗಳ ಹಿಂದೆ ಇದ್ದಂತೆ ಇಂದು ನಾವಿಲ್ಲ. ಇವರ್‍ಯಾರೂ ಇಂದು ಬಸ್, ಮೊಬೈಲ್ ಫೋನ್, ಕಂಪ್ಯೂಟರ್ ಬಳಸದಿರಲಾರರು. ಸಂಸ್ಕೃತಿ ಎಂಬುದು ಕೇವಲ ಆಹಾರ, ಉಡುಗೆ ತೊಡುಗೆ, ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ್ದಲ್ಲ. ಇಡೀ ಜೀವನಶೈಲಿಗೆ ಸಂಬಂಧಿಸಿದ್ದು ಎಂಬ ಅರಿವಿಲ್ಲದಾಗ ಇಂತಹ ದುಡುಕುಗಳು ಉಂಟಾಗುತ್ತವೆ. ಅಲ್ಲದೆ, ಪಂಚೆ ಉಡುವುದು, ಸೀರೆ ತೊಡುವುದು ಮಾತ್ರ ಸಂಸ್ಕೃತಿಯಲ್ಲ, ಇನ್ನೂ ಹಲವು ಬಗೆಯ ಉಡುಗೆ ತೊಡುಗೆಗಳೂ ಇವೆ ಎಂಬ ಬಹುತ್ವದ ಕಲ್ಪನೆ ಇದ್ದಾಗಲೂ ಈ ಬಗೆಯ ಕೂಗು ಕೇಳಿಬರುವುದಿಲ್ಲ.

ಆದರೆ ಒಂದು ವಿಚಾರ ನೀವು ಗಮನಿಸಿ, ವಸ್ತ್ರ ಸಂಹಿತೆಯ ಆಯುಧ ಬಹುತೇಕ ಸಂದರ್ಭದಲ್ಲಿ ಪ್ರಯೋಗವಾಗುವುದು ಹೆಣ್ಣಿನ ಮೇಲೆ ಮತ್ತು ಅದು ಪ್ರಯೋಗವಾಗುವುದು ಸಂಸ್ಕೃತಿಯ ಹೆಸರಿನಲ್ಲಿ. ಹೆಣ್ಣುಮಕ್ಕಳು ಪ್ಯಾಂಟ್ ಶರ್ಟು ಧರಿಸಬಾರದು, ಪಬ್‌ಗೆ ಹೋಗಬಾರದು, ರಾತ್ರಿ ಒಬ್ಬಳೇ ತಿರುಗಬಾರದು… ಹೀಗೆ ಇದು ಮುಂದುವರೆಯುತ್ತದೆ. ಇದನ್ನು ಪ್ರಶ್ನಿಸಿದಾಗಲೆಲ್ಲ ’ಹಾಗಿದ್ದರೆ ಹೆಣ್ಣುಮಕ್ಕಳು ಗಂಡುಮಕ್ಕಳಂತೆ ಕುಡಿದರೆ, ಪ್ಯಾಂಟು ಹಾಕಿದರೆ ಸಮಾನತೆಯೇ?’ ಎಂಬ ಸವಾಲು ಸಿದ್ಧವಿರುತ್ತದೆ. ಇದರರ್ಥ ಹೆಣ್ಣುಮಕ್ಕಳೂ ಹಾಗೆ ಮಾಡಲೇಬೇಕೆಂದಲ್ಲ. ಬಯಸಿದ ಬಟ್ಟೆ ಹಾಕುವುದು, ಬೇಕಿದ್ದನ್ನು ಸೇವಿಸುವುದು ಅವರವರ ಖುಷಿಗೆ ಬಿಟ್ಟ ವಿಚಾರ. ಆದರೆ ಈ ಸಂಸ್ಕೃತಿಯ ಹೆಸರಿನ ಬೇಲಿ ಸದಾ ಯಾಕೆ ಹೆಣ್ಣುಮಕ್ಕಳ ಸುತ್ತಲೇ ಕಟ್ಟಲಾಗುತ್ತದೆ ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಒಂದೊಮ್ಮೆ ಗಂಡಸರಂತೆ ಹೆಣ್ಣೂ ಇಂಥವುಗಳಿಗೆ ಒಳಗಾದರೆ ಈಕೆಯ ಬಗ್ಗೆ ಮಾತ್ರ ಯಾಕೆ ಇಂತಹ ವರ್ತನೆ ಕಾಣುತ್ತದೆ? ನಮ್ಮ ಸ್ತ್ರೀಯರು ಹಾಳಾದರೆ ಸಂಸ್ಕೃತಿ ಹಾಳಾಗುತ್ತದೆ, ಹೆಣ್ಣು ಸರಿಯಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಹೇಳುವ ಮಂದಿ ತಮ್ಮ ಜವಾಬ್ದಾರಿಯನ್ನು ಹೆಣ್ಣುಮಕ್ಕಳನ್ನು ಕಾಯುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆಯೇ? ಎಂಬ ಪ್ರಶ್ನೆಯೂ ಏಳುತ್ತದೆ. ಹೆಣ್ಣು ಸಂಸ್ಕೃತಿಯನ್ನು ಸಿಕ್ಕಿಸುವ ಗೂಟವಾಗಿ ಕಾಣುತ್ತಾಳೆ.

ಇತ್ತೀಚೆಗೆ ವಸ್ತ್ರ ಸಂಹಿತೆ ಬಗ್ಗೆ ಹೆಚ್ಚಿನ ಕೂಗು ಕೇಳಿಬರುತ್ತಿರುವುದಕ್ಕೆ ಹಿನ್ನೆಲೆಯಾಗಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಇವತ್ತಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೋಡೆಗಳನ್ನು ದಾಟಿ ಹೊರಬಂದಿದ್ದಾರೆ. ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಅನೇಕ ಮೂಲಭೂತವಾದಿಗಳಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಬಹುಶಃ ಈ ಪ್ರಕ್ರಿಯೆಯನ್ನು ಹಿಂದಕ್ಕೊಯ್ಯುವುದಂತೂ ಸಾಧ್ಯವಿಲ್ಲ. ಆದರೆ ನಿಧಾನಗೊಳಿಸುವ ರೀತಿಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಅಡ್ಡಗಾಲು ಹಾಕುವುದನ್ನು ಕಾಣುತ್ತೇವೆ. ಇಂದು ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೂ ಈ ಮನೋಭಾವವೇ ಕಾರಣವಾಗಿದೆ ಎನಿಸುತ್ತದೆ.

ಅಲ್ಲದೆ, ಹಿಂದಿನಿಂದಲೂ ನಾಗರಿಕವೆನಿಸಿಕೊಂಡ ಸಮಾಜಗಳಲ್ಲಿ ಹೆಣ್ಣಿನ ದೇಹ ಅದು ಸದಾ ಮುಚ್ಚಿಡಬೇಕಾದದ್ದು ಎಂಬ ಭಾವನೆ ಇದೆ. ಆದರೆ ಗಂಡಿನ ದೇಹದ ಬಗ್ಗೆ ಈ ಭಾವನೆ ಇಲ್ಲ. ಇಂದಿಗೂ ಬುಡಕಟ್ಟು ಜನಾಂಗಗಳ ಹೆಣ್ಣುಮಕ್ಕಳು ತಮ್ಮ ದೇಹದ ಬಗ್ಗೆ ನಮ್ಮಷ್ಟು ಚಿಂತಿತರಲ್ಲ. ಎಂದು ಹೆಣ್ಣೊಬ್ಬಳ ದೇಹ ಒಬ್ಬನ ಆಸ್ತಿ ಎಂಬ ಕಲ್ಪನೆ ಮೂಡಿತೋ ಆಗ ಅದು ಕಾಪಿಟ್ಟುಕೊಳ್ಳಬೇಕಾದ, ಅನ್ಯರ ಕಣ್ಣಿಗೆ ಬೀಳಬಾರದಾದ ವಸ್ತು ಎಂಬ ತಿಳುವಳಿಕೆ ಮೂಡಿತು. ಪರ್ದಾ, ಬುರ್ಖಾ ಇದರ ತೀರಾ ಮುಂದುವರಿದ ಹಂತಗಳು ಅಷ್ಟೆ.

ಅತ್ಯಾಚಾರದ ಬಗ್ಗೆ ಮಾತು ಬಂದಾಗಲೆಲ್ಲ ಸದಾ ಕೇಳಿಬರುವ ಒಂದು ಮಾತು ’ಹುಡುಗಿಯರು ಅಂತಹ ಬಟ್ಟೆ ಧರಿಸಿದರೆ ಹುಡುಗರ ಮನಸ್ಸು ಕೆಡದಿರುತ್ತದೆಯೇ? ಹುಡುಗಿಯೇ ಸರಿ ಇಲ್ಲ, ಅದಕ್ಕೆ ಹಾಗಾಗಿದೆ’. ಆದರೆ ಗಮನಿಸಿದರೆ, ಕಟ್ಟಡ ಕಾರ್ಮಿಕನ ಮಗಳು, ಶಾಲೆಗೆ ಒಂಟಿಯಾಗಿ ಹೋಗುವ ಹುಡುಗಿ ಅಥವಾ ಏನೂ ಅರಿಯದ ಮೂರು ತಿಂಗಳ ಹಸುಳೆಯ ಮೇಲೆ ಎರಗುವ ಜನರಿರುವಾಗ ಅವರನ್ನು ಹುಡುಗಿಯರ ಯಾವ ಅಶ್ಲೀಲ ಭಂಗಿ ಕೆರಳಿಸಿರುವುದು ಸಾಧ್ಯ? ಮೂರು ತಿಂಗಳ ಹಸುಳೆ ಏನು ಮಾಡಬಲ್ಲದು? ಇಲ್ಲಿ ಮದ್ದು ಅರೆಯಬೇಕಾದದ್ದು ಹೆಣ್ಣನ್ನು ಒಂದು ಭೋಗದ ವಸ್ತುವಾಗಿ ನೋಡುವ ಮನಸ್ಸುಗಳಿಗೆ, ಕಣ್ಣುಗಳಿಗೆ ಹೊರತು ಹೆಣ್ಣುಮಕ್ಕಳ ನಡವಳಿಕೆಯನ್ನು ನಿರ್ಬಂಧಿಸುವುದು ಸರಿಯಾದ ದಾರಿಯಲ್ಲ.

ನಮ್ಮ ಸಮಾಜದಲ್ಲಿ ಗಂಡು ಹೆಣ್ಣುಗಳು ಪರಸ್ಪರರ ದೇಹದ ಬಗ್ಗೆ ತಿಳಿಯುವುದಕ್ಕೆ ಆರೋಗ್ಯಕರವಾದ ದಾರಿಗಳು ಇಲ್ಲ. ಅದರ ಕುರಿತು ಮಾತಾಡುವುದು ನಿಷಿದ್ಧ. ಅವರು ಯಾವುದೋ ಮೂರನೇ ದರ್ಜಿ ಪುಸ್ತಕವೋದಿ, ಸಿನೆಮಾ ನೋಡಿ ತಲೆತುಂಬಾ ವಿಚಿತ್ರವಾದ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಹೀಗಾದಾಗಲೇ ಹೆಣ್ಣಿನ ದೇಹವನ್ನು ಅದಿರುವಂತೆಯೇ ಸಹಜವಾಗಿ ನೋಡುವುದು ಇವರಿಗೆ ಸಾಧ್ಯವಾಗುವುದಿಲ್ಲ, ಮನಸ್ಸಿನಲ್ಲಿ ವಿಕಾರಗಳು ಹುಟ್ಟುತ್ತವೆ. ಇದಕ್ಕೆ ಇಬ್ಬರಲ್ಲೂ ಸರಿಯಾದ ತಿಳುವಳಿಕೆ ನೀಡುವುದು ಮುಖ್ಯವೇ ಹೊರತು ಕಟ್ಟಿಹಾಕುವುದಲ್ಲ.

ಸಂಸ್ಕೃತಿಯ ಬಗ್ಗೆ ನಮಗೆ ಗೌರವವಿದೆ. ಆದರೆ ದಮನಿಸುವ ಸಂಸ್ಕೃತಿಯ ಬಗ್ಗೆ ಅಲ್ಲ. ಹೆಣ್ಣಿನ ಸಮಾನತೆಯ ಬಗ್ಗೆ ಕಿಂಚಿತ್ತೂ ಅರಿವಿರದೆ ಮನೆಯಲ್ಲಿ ಇನ್ನೂ ಹೆಣ್ಣು ‘ಸರ್ವಿಸ್ ಪ್ರೊವೈಡರ್’ ಆಗಿರಬೇಕೆಂದು ಬಯಸುತ್ತಾ, ಗೃಹಿಣೀ ಧರ್ಮದ ಬಗ್ಗೆ ಹೊಗಳುತ್ತಾ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲರಿಗಿರುವ ಹಕ್ಕು, ಬಾಧ್ಯತೆಗಳನ್ನು ಮರೆತು ಮಾತಾಡುವ ಜನರ ‘ಸಂಸ್ಕೃತಿ’ ಇಂದಿನ ಸಂದರ್ಭದಲ್ಲಿ ಆರೋಗ್ಯಕರವಲ್ಲ.

ಉಚಿತ ಕಡ್ಡಾಯ ಶಿಕ್ಷಣಕ್ಕೆ ಎಳ್ಳುನೀರು?

– ರೂಪ ಹಾಸನ

ಅಳೆದುಸುರಿದು ಲೆಕ್ಕ ಹಾಕಿ ಅಂತೂ ಇಂತೂ ಈ ವರ್ಷ ಕರ್ನಾಟಕ ಸರ್ಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಭರವಸೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಇನ್ನೊಂದೆಡೆ ಕಡಿಮೆ ಮಕ್ಕಳಿರುವ ಮೂರು ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳನ್ನೂ ಭರದಿಂದ ಮುಚ್ಚಲು ಪ್ರಾರಂಭಿಸಿದೆ. ಆದರೆ ಈ ಪ್ರಕ್ರಿಯೆಯಿಂದ ಗ್ರಾಮೀಣ ಮಕ್ಕಳಿಗೆ ಆಗುತ್ತಿರುವ ಅನಾನುಕೂಲದ ಬಗೆ, ತಾನು ಗೊತ್ತಿದ್ದೂ ಮಾಡುತ್ತಿರುವ ನ್ಯಾಯಾಂಗ ನಿಂದನೆಯ ಕುರಿತು ಜಾಣ ಕುರುಡು ನಟಿಸುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ವಯ ಪ್ರತಿ ಒಂದು ಕಿ.ಮಿ.ಗೆ ಕನಿಷ್ಠ ಒಂದು ಕಿರಿಯ ಪ್ರಾಥಮಿಕ ಶಾಲೆಯನ್ನು ಹಾಗೂ ಪ್ರತಿ ಮೂರು ಕಿ.ಮಿ.ಗೆ ಒಂದು ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವುದಾಗಿ, ಹಾಗೂ ಅದಕ್ಕಿಂತಾ ದೂರವಾದಲ್ಲಿ ಮಕ್ಕಳಿಗೆ ಉಚಿತ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ. ಆದರೆ ಹಾಗೆ ನಡೆದು ಕೊಳ್ಳುತ್ತಿಲ್ಲವೆಂಬುದು ವಾಸ್ತವ ಸತ್ಯ.

ಮುಚ್ಚಿದ ಶಾಲೆಯ ಮಕ್ಕಳನ್ನು ಹತ್ತಿರದ ಇನ್ನೊಂದು ಸರ್ಕಾರಿ ಶಾಲೆಗೆ ವಿಲೀನ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ಆದರೆ ಹಳ್ಳಿಗಾಡಿನ ಪ್ರದೇಶಗಳಲ್ಲಿ ಶಾಲೆ ಮೊದಲೇ ಮಗುವಿನ ವಾಸಸ್ಥಾನದಿಂದ ದೂರವಿದ್ದು, ಅನೇಕ ಕಡೆಗಳಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ. ಒಂದೋ, ಎರಡೋ ಬಸ್ ವ್ಯವಸ್ಥೆ ಇದ್ದರೂ ಶಾಲೆಯ ಸಮಯಕ್ಕೆ ಬರುವುದಿಲ್ಲ. ಅಲ್ಲಿ ಸರಕಾರ ಕೊಡಲು ಬಯಸುವ ಬಸ್ ಪಾಸ್ ಯಾವ ಉಪಯೋಗಕ್ಕೆ? ಖಾಸಗಿ ಬಾಡಿಗೆ ವಾಹನಗಳಲ್ಲಿಯಾದರೂ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ತಯಾರಿದ್ದರೂ ಆ ವ್ಯವಸ್ಥೆಯೂ ಹೆಚ್ಚಿನ ಕಡೆಗಳಲ್ಲಿ ಇಲ್ಲ. ಸರ್ಕಾರ ಆಶ್ವಾಸನೆ ನೀಡಿದ್ದ ಸಾರಿಗೆ ಭತ್ಯೆಯಂತೂ ಇನ್ನೂ ಮಕ್ಕಳನ್ನು ತಲುಪಿಯೇ ಇಲ್ಲ.

ಹಾಸನ ತಾಲ್ಲೂಕಿನದೇ ಕೆಲವು ಉದಾಹರಣೆಯನ್ನು ನೋಡುವುದಾದರೆ ಈ ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ತಾಲ್ಲೂಕಿನಲ್ಲಿ 29 ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಸಾಣೆಹಳ್ಳಿ ಕ್ಲಸ್ಟರ್‌ನ ಹಿರಿಯ ಪ್ರಥಮಿಕ ಶಾಲೆಯಲ್ಲಿ 6 ಮಕ್ಕಳಿರುವ ಕಾರಣಕ್ಕೆ ಶಾಲೆಯನ್ನು ನಾಲ್ಕು ಕಿ.ಮಿ ವ್ಯಾಪ್ತಿಯ ಕುಪ್ಪಳ್ಳಿ ಶಾಲೆಗೆ ವಿಲೀನ ಮಾಡಲಾಗಿದೆ. ಆದರೆ ಈ ಮಕ್ಕಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಅವರು ಒಂದೂವರೆ ಕಿ.ಮಿ ದೂರದಲ್ಲಿರುವ ದೇವೇಗೌಡನಹಳ್ಳಿ[ಉಗನೆ]ಯಲ್ಲಿರುವ ಖಾಸಗಿ ಶಾಲೆಗೆ ದಾಖಲಾಗಿದ್ದಾರೆ. ಈಗ ಬಡ ಪೋಷಕರಿಗೆ ಜೀವನ ನಿರ್ವಹಣೆಯ ಜೊತೆಗೆ ಮಕ್ಕಳ ಶಿಕ್ಷಣದ ಜವಾಬ್ದಾರಿಯೂ ಹೆಗಲಿಗೇರಿ ಕಂಗಾಲಾಗಿದ್ದಾರೆ. ಹಾಗೇ ಗೇಕರವಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 2 ಕಿ.ಮಿ ದೂರದ ಕೆಂಚಟ್ಟಹಳ್ಳಿಗೆ ವಿಲೀನ ಮಾಡಲಾಗಿದೆ. ನಂಜೇದೇವರ ಕಾವಲಿನ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 4 ಕಿ.ಮಿ ದೂರದ ಕಂದಲಿ ಶಾಲೆಗೆ ವಿಲೀನಗೊಳಿಸಲಾಗಿದೆ. ಇಲ್ಲಿನ ಮಕ್ಕಳು ತಮ್ಮದೇ ವೆಚ್ಚದಲ್ಲಿ ಶಾಲೆಗೆ ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆಯ ನಿಯಮವನ್ನು ಗಾಳಿಗೆ ತೂರಲಾಗಿದೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 1,11,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ! ಸ್ವಯಂಸೇವಾ ಸಂಸ್ಥೆ ’ನೆಲೆ’ ನಡೆಸಿದ ಸಮೀಕ್ಷೆಯ ಪ್ರಕಾರ ಬೆಂಗಳೂರೊಂದರಲ್ಲೇ ಬೀದಿ ಮಕ್ಕಳ ಸಂಖ್ಯೆ 40 ಸಾವಿರ ದಾಟಿದೆ! ಇದರಲ್ಲಿ ಹೆಚ್ಚಿನವರು ಹತ್ತು ವರ್ಷದ ಒಳಗಿನವರಾಗಿದ್ದು ಬಹುತೇಕರು ಚಿಂದಿ ಆಯುವುದರಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಈ ಮಕ್ಕಳನ್ನೆಲ್ಲಾ ಕಡ್ಡಾಯವಾಗಿ ಶಾಲೆಗೆ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಸರಕಾರ ಮಾಡಿದರೆ ಈಗ ಇರುವ ಶಾಲೆಗಳು ಸಾಲದೇ ಸಾವಿರಾರು ಹೊಸ ಶಾಲೆಗಳನ್ನು ತಾನೇ ತೆರೆಯಬೇಕಾಗುತ್ತದೆ!

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ವಿಶೇಷ ಅಧ್ಯಯನ ನಡೆಸಿರುವ ’ಕೇಂದ್ರ ಸಂಪನ್ಮೂಲ ಸಚಿವಾಲಯ’ದ ಅಧಿಕಾರಿಗಳನ್ನು ಒಳಗೊಂಡ ಕಾರ್ಯತಂಡ ನೂರಕ್ಕೆ ನೂರರಷ್ಟು ಶಾಲಾ ದಾಖಲಾತಿ ಸಾಧ್ಯವಾಗಬೇಕಾದರೆ ದೇಶಾದ್ಯಂತ ಇನ್ನೂ ಸುಮಾರು 20 ಸಾವಿರ ಶಾಲೆಗಳನ್ನು, ಅದರಲ್ಲೂ ಕರ್ನಾಟಕದಲ್ಲೇ ಮುಂದಿನ ಐದು ವರ್ಷಗಳಲ್ಲಿ ಇನ್ನೂ 1241 ಸರ್ಕಾರಿ ಶಾಲೆಗಳನ್ನು ತೆರೆಯುವುದು ಅತ್ಯಂತ ಅವಶ್ಯಕವೆಂದು ಈ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ನೀಡಿದೆ. ಹೀಗಿದ್ದೂ ರಾಜ್ಯ ಸರ್ಕಾರ ಈ ಶಿಪಾರಸ್ಸಿಗೆ ಕವಡೆ ಕಿಮ್ಮತ್ತನ್ನೂ ಕೊಟ್ಟಿಲ್ಲ. ಬದಲಾಗಿ ಇರುವ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿದೆ.

ಸರಕಾರಿ ಶಾಲೆಗಳನ್ನು ಹೀಗೆ ಮುಚ್ಚುತ್ತಾ ಹೋದರೆ ವಿಲೀನಗೊಂಡ ದೂರದ ಶಾಲೆಗಳಿಗೆ ಕಳಿಸಲಾಗದ, ಕಳಿಸಲು ಇಷ್ಟವಿಲ್ಲದ, ಕಳಿಸಲು ಸಮಸ್ಯೆಗಳಿರುವ ಪೋಷಕರು ಅನಿವಾರ್ಯವಾಗಿ ಹತ್ತಿರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಥವಾ ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ ಅಥವಾ ಇಂದು ಹಳ್ಳಿ ಹಳ್ಳಿಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಅಧಿಕೃತವೋ ಅಥವಾ ಅನಧಿಕೃತವೋ ಒಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ ಸೇರುವ ಅಸಹಾಯಕ ಪರಿಸ್ಥಿತಿ ಉಂಟಾಗುತ್ತದೆ. ಈಗಾಗಲೇ ಸರ್ಕಾರಿ ಶಾಲೆ ಹಾಗೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಸಾವಿರದ ಲೆಕ್ಕದಲ್ಲಿ ಕಡಿಮೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದಲೇ ದೃಢಪಡುತ್ತದೆ. ಸರ್ಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗಿ ವಲಯವನ್ನು ಕದ್ದು ಮುಚ್ಚಿ ಬಲಗೊಳಿಸುತ್ತಾ ಬಂದಿರುವ ಸರ್ಕಾರದ ನೀತಿಯಿಂದಾಗಿ ಪ್ರಸ್ತುತ 46400 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 43.92 ಲಕ್ಷ ಮಕ್ಕಳು ಓದುತ್ತಿದ್ದರೆ, ಕೇವಲ 12,909ರಷ್ಟಿರುವ ಖಾಸಗಿ ಶಾಲೆಗಳಲ್ಲಿ 29.31 ಲಕ್ಷ ಮಕ್ಕಳು ಓದುತ್ತಿದ್ದಾರೆ! ಕಳೆದ ಎರಡು ವರ್ಷಗಳಲ್ಲಿ 3.37 ಲಕ್ಷ ಮಕ್ಕಳು ಸರಕಾರಿ ಶಾಲೆ ತೊರೆದಿದ್ದಾರೆ ಎಂದು ’ಇಂಡಿಯಾ ಗವರ್ನನ್ಸ ಇನ್ಸ್‌ಟಿಟ್ಯೂಟ್’ ಸರಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ದುರಂತವೆಂದರೆ ರಾಜ್ಯಾದ್ಯಂತ ಈಗಾಗಲೇ 3000 ಕ್ಕೂ ಅಧಿಕವಾಗಿರುವ ಅನಧಿಕೃತ ಶಾಲೆಗಳು ಹಾಗೂ ಅಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕುರಿತು ಶಿಕ್ಷಣ ಇಲಾಖೆಯಲ್ಲಿ ಯಾವ ಮಾಹಿತಿಯೂ ಲಭ್ಯವಿಲ್ಲ. ಏಕೆಂದರೆ ಅವುಗಳ ಮೇಲೆ ಇಲಾಖೆಗೆ ಯಾವ ನಿಯಂತ್ರಣವೂ ಇಲ್ಲ! ಪ್ರತಿ ಶೈಕ್ಷಣಿಕ ವಷದ ಆರಂಭದಲ್ಲಿ “ಈ ಶಾಲೆಗಳೆಲ್ಲ ಅನಧಿಕೃತ….. ಇಲ್ಲಿಗೆ ಮಕ್ಕಳನ್ನು ಸೇರಿಸಬೇಡಿ…….” ಎಂದು ಅನಧಿಕೃತ ಶಾಲೆಗಳ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಷ್ಟೇ ಇಲಾಖೆಯ ಜವಾಬ್ದಾರಿ! ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಇಚ್ಚೆಯಿಲ್ಲ. ಬದಲಾಗಿ ಸರ್ಕಾರವೇ ಕುಮ್ಮಕ್ಕು ಕೊಟ್ಟಂತೆ ಕಾಣಿಸುತ್ತಿದೆ.

ಏಕೆಂದರೆ ಪ್ರತಿವರ್ಷ ಇಂತಹ ಅನಧಿಕೃತ ಖಾಸಗಿ ಶಾಲೆಗಳಿಂದ ಇಂತಿಷ್ಟು ಎಂದು ಎಂಜಲು ನೈವೇದ್ಯ ತಿಂದು ವರ್ಷಗಟ್ಟಲೆ ಇಂದ ಭ್ರಷ್ಟಗೊಂಡಿರುವ ಶೈಕ್ಷಣಿಕ ಆಡಳಿತಶಾಹಿ, ಜಾಣ ಮೌನ ವಹಿಸಿ ಕೊಬ್ಬಿಸುತ್ತಿದೆ. ಎಲ್ಲೆಂದರಲ್ಲಿ ಸರ್ಕಾರದ ಪರವಾನಗಿ ಪಡೆಯದೆ ತಲೆ ಎತ್ತುತ್ತಿರುವ ಈ ಅನಧಿಕೃತ ಖಾಸಗಿ ಶಾಲೆಗಳು ಮನಬಂದಂತೆ ವಂತಿಗೆ, ಶುಲ್ಕದ ಹೆಸರಿನಲ್ಲಿ ಹಣ ಹಿರಿದು, ಕಳಪೆ ಶಿಕ್ಷಣವನ್ನು ನೀಡುತ್ತ ಇಡೀ ಶಿಕ್ಷಣ ವ್ಯವಸ್ಥೆಗೇ ಗೆದ್ದಲು ಹಿಡಿಸಿದೆ. ಇಂತಹ ಅನಧಿಕೃತ ಶಾಲೆಗಳಿಗೆ ಯಾವುದೇ ಸರ್ಕಾರಿ ಶೈಕ್ಷಣಿಕ ನಿಯಮಗಳಿಲ್ಲದೇ, ಶಿಕ್ಷಣ ಹಕ್ಕು ಕಾಯ್ದೆ-ಮೀಸಲಾತಿಯ ಗೊಡವೆಯೂ ಇಲ್ಲದೇ, ಭಾಷಾ ನೀತಿಯ ತಲೆಬಿಸಿಯೂ ಇಲ್ಲದೇ ಶಿಕ್ಷಣವನ್ನು ಲಾಭದ ದಂಧೆಯನ್ನಾಗಿ ಮಾಡಿಕೊಂಡಿವೆ. ಇವುಗಳಿಗೆ ಮೂಗುದಾರ ಹಾಕಲಾಗದ ಸರ್ಕಾರ, ಈಗ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಮುಚ್ಚಿ ಅನಧಿಕೃತ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಬಲಿ ನೀಡುತ್ತಿದೆ. ಯಾರ ಯಾವ ನಿಯಂತ್ರಣವೂ ಇಲ್ಲದೇ ನಿರ್ಭಿಡೆಯಿಂದ ಬೆಳೆಯಲು ಅವಕಾಶಗಳಿರುವುದರಿಂದಲೇ ಇನ್ನು ಮುಂದೆ ಹಳ್ಳಿಗಳಲ್ಲಿ ಅನಧಿಕೃತ ಖಾಸಗಿ ಶಾಲೆಗಳು ಇನ್ನಷ್ಟು ಹೆಚ್ಚುವ ಆತಂಕವಿದೆ. ಸರ್ಕಾರಿ ಶಾಲೆಯ ಮಕ್ಕಳನ್ನು ಅನಿವಾರ್ಯವಾಗಿ ’ಉಚಿತ’ ಶಿಕ್ಷಣದಿಂದ ವಂಚಿಸಿ ಸರ್ಕಾರ ಅನಧಿಕೃತ ಖಾಸಗಿ ಶಾಲೆಗಳ ಬಾಯಿಗೆ ಆಹಾರವಾಗಿಸಿದೆ.

3000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು “ಈ ಅನಧಿಕೃತ ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಾರೆ! “ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಬಯಸುವವರಿಗೆ ದತ್ತು ನೀಡಲು ಸಿದ್ಧ” ಎಂದು ಆಹ್ವಾನ ನೀಡುತ್ತಾರೆ! ಇವರು ನಮ್ಮ ಶಿಕ್ಷಣ ಸಚಿವರು! ಇದು ಖಾಸಗಿಗೆ ತನ್ನನ್ನು ಬಿಕರಿಗಿಟ್ಟುಕೊಂಡು ಆತ್ಮಸಾಕ್ಷಿ ಇಲ್ಲದೇ ಸರ್ಕಾರ ನಡೆಸುವ ಪರಿ!

ನಿಜಕ್ಕೂ ಶಿಕ್ಷಣ ಕಾಯ್ದೆಯನ್ವಯ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಮನಸು ಸರ್ಕಾರಕ್ಕಿದ್ದರೆ ತಕ್ಷಣವೇ ಕಳಪೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನಧಿಕೃತ ಖಾಸಗಿ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಂಡು, ಮುಂದೆ ಇಂತಹ ಶಾಲೆಗಳು ತಲೆ ಎತ್ತದಂತೆ ಪ್ರಬಲ ಶೈಕ್ಷಣಿಕ ಕಾಯ್ದೆಯೊಂದನ್ನು ರೂಪಿಸಬೇಕು. ಶಿಕ್ಷಣವನ್ನು ಖಾಸಗಿಯಾಗಿ ಹಣಕೊಟ್ಟು ಕೊಳ್ಳುವಂತಹ ಪರಿಸ್ಥಿತಿ ಯಾವುದೇ ಬಡ ಗ್ರಾಮೀಣ ಪೋಷಕರಿಗೆ ಬಂದೊದಗದಂತೆ ತಕ್ಷಣವೇ ಮುಚ್ಚಲ್ಪಟ್ಟ ಶಾಲೆಯ ಮಕ್ಕಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಭಾರತ ಅದರಲ್ಲೂ ಹೆಣ್ಣುಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಹಳ್ಳಿ ಹಳ್ಳಿಗಳಲ್ಲೂ ಲಂಗುಲಗಾಮಿಲ್ಲದೇ ಹುಟ್ಟಿಕೊಂಡಿರುವ-ಹುಟ್ಟಿ ಕೊಳ್ಳುತ್ತಿರುವ, ಅನಧಿಕೃತ ಖಾಸಗಿ ಶಾಲೆಗಳಿಗೆ ದಾಖಲಾಗದಂತೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಹಕ್ಕು ಕಾಯ್ದೆ ನಿಜವಾಗಿಯೂ ಜಾರಿಯಾಗಬೇಕೆಂದರೆ, ಶಾಲೆಯಿಂದ ಹೊರಗುಳಿದಿರುವ ಸಾವಿರಾರು ಮಕ್ಕಳನ್ನು ಶಾಲೆಗೆ ದಾಖಲಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು. ಇದಾಗದಿದ್ದರೆ ’ಉಚಿತ’ ಮತ್ತು ’ಕಡ್ಡಾಯ’ ಶಿಕ್ಷಣ ಎಂಬ ಕಾಯ್ದೆಗೇ ಎಳ್ಳು ನೀರು ಬಿಟ್ಟಂತಾಗುತ್ತದೆ. ಹಾಗಾಗದಿರಲೆಂಬುದು ನಮ್ಮ ಹಾರೈಕೆ.

ನೂತನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಮುಂದಿನ ಸವಾಲುಗಳು


– ಡಾ.ಎನ್.ಜಗದೀಶ್ ಕೊಪ್ಪ


ಉತ್ತರ ಕರ್ನಾಟಕದ ಸಜ್ಜನ ರಾಜಕಾರಣಿ ಮತ್ತು ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾದ ಹುಬ್ಬಳ್ಳಿಯ ಶಾಸಕ ಜಗದೀಶ್ ಶೆಟ್ಟರ್ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಹಾಗೂ ನಾಲ್ಕು ವರ್ಷಗಳ ಅವಧಿಯ ಬಿ.ಜೆ.ಪಿ. ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ ಇನ್ನೊಂದು ವರ್ಷದ ಅವಧಿಯಲ್ಲಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ. ಆದರೆ, ಸಧ್ಯದ ಬಿ.ಜೆ.ಪಿ. ಪಕ್ಷದ ಆಂತರೀಕ ಗೊಂದಲಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಗಾದಿ ಶೆಟ್ಟರ್ ಪಾಲಿಗೆ ಮುಳ್ಳಿನ ಹಾಸಿಗೆಯಾಗುವ ಲಕ್ಷಣಗಳು ಕಾಣತೊಡಗಿವೆ.

ಆರ್.ಎಸ್.ಎಸ್. ಸಂಘಟನೆಯ ನಿಷ್ಟಾವಂತ ಅನುಯಾಯಿಯಾಗಿ, ಬಿ.ಜೆ.ಪಿ. ಕಾರ್ಯಕರ್ತನಾಗಿ ಮೂರು ದಶಕಗಳ ಕಾಲ ದುಡಿದು, 1994ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್, ಬೊಮ್ಮಾಯಿ ಅವರನ್ನು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಮಣಿಸಿ, ವಿಧಾನಸಭೆ ಪ್ರವೇಶಿಸಿದ ಜಗದೀಶ್ ಶೆಟ್ಟರ್, ಮೃದು ಹೃದಯದ ಹಾಗೂ ಮಿತವಾದ ಮಾತಿಗೆ ಹೆಸರಾದವರು. ಬಿ.ಜೆ.ಪಿ. ಪಕ್ಷದಲ್ಲಿ ಇರುವ ಹಲವು ಸಜ್ಜನ ರಾಜಕಾರಣಿಗಳಲ್ಲಿ ಇವರೂ ಒಬ್ಬರು.

ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಮೈತ್ರಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿ, ನಂತರ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಾಗ, ವಿಧಾನಸಭೆಯ ಅದ್ಯಕ್ಷರಾಗಿ,ಆನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣಾಭಿವೃದ್ಧಿಯ ಸಚಿವರಾಗಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೆಟ್ಟರ್ ಈಗ ಮುಖ್ಯಮಂತ್ರಿಯಾಗದ್ದಾರೆ. ಆದರೆ, ಅವರ ಮುಂದಿನ ಹಾದಿ ಮಾತ್ರ ಅತ್ಯಂತ ಕಠಿಣವಾಗಿದೆ.

ಎಡ ಮತ್ತು ಬಲಕ್ಕೆ ಇಬ್ಬರು ಉಪ ಮುಖ್ಯಮಂತ್ರಿಗಳು. ಜೊತೆಗೆ ತಲೆಯ ಮೇಲೆ ಮುಖ್ಯಮಂತ್ರಿ ಮಾಡಿದ ಯಡಿಯೂರಪ್ಪನವರ ಭಯ ಮತ್ತು ಅತಂತ್ರತೆಯ ತೂಗುಕತ್ತಿ,  ಇವುಗಳ ನಡುವೆ ಕಳಸವಿಟ್ಟಂತೆ ಸಚಿವ ಸ್ಥಾನ ಸಿಗದ ಶಾಸಕರ ಅಸಹನೆ, ಅಸಹಕಾರ; ಇವುಗಳನ್ನು ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಜಗದೀಶ್ ಶೆಟ್ಟರ್ ಪಾಲಿಗೆ ಸುಲಭದ ಸಂಗತಿಯಲ್ಲ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿ.ಜೆ.ಪಿ. ಸರ್ಕಾರದ ಹಗರಣಗಳು, ಸಚಿವರ ನಡುವಳಿಕೆಗಳು, ಪಕ್ಷದ ನಾಯಕರ ಜಾತಿ ಸಂಘರ್ಷ ಇವುಗಳಿಂದ ಜನಸಾಮಾನ್ಯರಷ್ಟೇ ಅಲ್ಲ, ಸ್ವತಃ ಪಕ್ಷದ ನಿಷ್ಟಾವಂತ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಬಿ.ಜೆ.ಪಿ. ಸರ್ಕಾರದಿಂದಾಗಲಿ, ಅಥವಾ ನೂತನ ಮುಖ್ಯಮಂತ್ರಿಯಿಂದಾಗಲಿ ಯಾವುದೇ ಪವಾಡಗಳನ್ನು ಯಾರೊಬ್ಬರು ನಿರಿಕ್ಷಿಸಿಲ್ಲ.

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಇಲ್ಲದೆ, ಅವುಗಳನ್ನ ಕಸಾಯಿಖಾನೆಗೆ ಅಟ್ಟಿ ಇಲ್ಲಿನ ಜನ ದೂರದ ನಗರಗಳಿಗೆ ವಲಸೆ ಹೋಗುತಿದ್ದಾರೆ. ಮೂರು ವರ್ಷದ ಹಿಂದೆ ಸಂಭವಿಸಿದ ಅತಿವೃಷ್ಟಿಯಲ್ಲಿ ಮನೆ ಮಠಗಳನ್ನು ಕಳೆದುಕೊಂಡ ಉತ್ತರ ಕರ್ನಾಟಕದ ಜನರಿಗೆ ಈವರೆಗೆ ಮನೆಗಳನ್ನು ನಿರ್ಮಿಸಿಕೊಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರ ಗುರಿ ಹಾಕಿಕೊಂಡಿದ್ದ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗಳಲ್ಲಿ ಈವರೆಗೆ ಸಿದ್ಧವಾಗಿರುವ 33 ಸಾವಿರ ಮನೆಗಳು ಧಾನಿಗಳು ಕಟ್ಟಿಸಿಕೊಟ್ಟ ಮನೆಗಳು ಮಾತ್ರ.

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕರ್ನಾಟಕದ ಇತಿಹಾಸದಲ್ಲಿ ಕಂಡರಿಯದ ಭೂ ಹಗರಣ, ಸಚಿವರ ಮಿತಿ ಮೀರಿದ ಭ್ರಷ್ಟಾಚಾರ, ಲೈಂಗಿಕ ಹಗರಣ, ಗಣಿ ಹಗರಣ, ಇವುಗಳ ಫಲವಾಗಿ ಸಚಿವ ಸಂಪುಟ ಸದಸ್ಯರ ಸರತಿಯ ರಾಜಿನಾಮೆ ಇವೆಲ್ಲವೂ ಶಿಸ್ತಿಗೆ ಹೆಸರಾದ ಬಿ.ಜೆ.ಪಿ. ಪಕ್ಷದ ಮುಖಕ್ಕೆ ರಾಷ್ಟ್ರ ಮಟ್ಟದಲ್ಲಿ ಕಪ್ಪು ಮಸಿ ಬಳಿದಿವೆ. ಈಗ ಇವುಗಳ ಜೊತೆಗೆ ಜಾತಿ ರಾಜಕಾರಣ ಹೊಸದಾಗಿ ಸೇರ್ಪಡೆಯಾಗಿದ್ದು, ಇಂತಹ ಬೆಳವಣಿಗೆಗಳು ಪ್ರಜ್ಞಾವಂತರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ಮೂಡಿಸಿವೆ.

ಅತ್ಯಂತ ಸಜ್ಜನಿಕೆ ಸ್ವಭಾವದ ಜಗದೀಶ್‌ ಶೆಟ್ಟರಿಗೆ ಅವರ ಗುಣವೇ ಅವರ ಪಾಲಿಗೆ ಮಾರಕವಾಗುವ ಸಂಭವವಿದೆ. ಇಲ್ಲಿಯವರೆಗೆ, ಯಡಿಯೂರಪ್ಪನವರನ್ನು ಓಲೈಕೆ ಮಾಡಿಕೊಂಡು ಸಚಿವ ಸ್ಥಾನದಲ್ಲಿ ಮುಂದುವರಿದ, ಅಸಮರ್ಥ ಸಚಿವರುಗಳೆಲ್ಲಾ ಈಗಿನ ಶೆಟ್ಟರ್ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವುದು ನಿರಾಶೆಯ ಸಂಗತಿ.

ಈವರೆಗೆ ಹೆಚ್ಚುವರಿಯಾಗಿ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಾಗದ, ರಾಜ್ಯದ ರಸ್ತೆಗಳನ್ನು ದುರಸ್ತಿ ಮಾಡಲಾಗದ, ಗ್ರಾಮೀಣ ಜನತೆಗೆ ಕುಡಿಯುವ ನೀರು ಒದಗಿಸಲಾಗದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದ ಬಿ.ಜೆ.ಪಿ. ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳದ ಜನತೆ ಜಗದೀಶ್ ಶೆಟ್ಟರ್‌ರಿಂದ ಏನು ನಿರಿಕ್ಷಿಸಲು ಸಾಧ್ಯ?

ಉಳಿದ ಒಂದು ವರ್ಷದ ಅವಧಿಯಲ್ಲಿ ಸ್ವಚ್ಛ ಆಡಳಿತ ನೀಡುತ್ತೇನೆ ಎನ್ನುವ ಮಾತು ಕೇವಲ ಅವರ ಆವೇಶದ ಮಾತಾಗಬಹುದು. ಏಕೆಂದರೆ, ಹನ್ನೊಂದು ತಿಂಗಳ ಕಾಲ ಯಾವುದೇ ಹಗರಣಗಳಿಗೆ ಎಡೆ ಮಾಡಿಕೊಡದಂತೆ ಆಡಳಿತ ನಡೆಸಿದ ಸದಾನಂದ ಗೌಡರಿಗೆ ಪಕ್ಷ ನೀಡಿರುವ ಬಳುವಳಿ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ.

ಆಡಳಿತ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಒಂದು ವರ್ಷದ ಅವಧಿ ಅಗತ್ಯವಿರುವಾಗ, ಸಮರ್ಥ ಆಡಳಿತವನ್ನು ಜಗದೀಶ್ ಶೆಟ್ಟರ್ ಮತ್ತು ಅವರ ಮಂತ್ರ ಮಂಡಲದಿಂದ  ಬಯಸಲು ಸಾಧ್ಯವಿಲ್ಲ. ಯಡಿಯೂರಪ್ಪನಂತಹ ಮೋಹಿನಿ ಭಸ್ಮಾಸುರನ ಮನಸ್ಸಿರುವ ವ್ಯಕ್ತಿಯಿಂದ ಆಯ್ಕೆಯಾಗಿರುವ ಜಗದೀಶ್‌ ಶೆಟ್ಟರ್ ಈವರಗೆ ತಾವು ಕಾಪಾಡಿಕೊಂಡು ಬಂದಿದ್ದ ತಮ್ಮ ವರ್ಚಸ್ಸನು ಹಾಗೇ ಉಳಿಸಿಕೊಂಡರೆ ಸಾಕು ಅದು ಅವರ ಪಾಲಿಗೆ ದೊಡ್ಡ ಸಾಧನೆಯಾಗಬಲ್ಲದು. ಏಕೆಂದರೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ, ’ರೈಟ್ ಪರ್ಸನ್ ಇನ್ ದ ರಾಂಗ್ ಪ್ಲೇಸ್’ ಎಂದು. ಅದೇ ಸ್ಥಿತಿ ಈಗ ಶೆಟ್ಟರಿಗೆ ಎದುರಾಗಿದೆ.