Monthly Archives: December 2013

“ಗಲಿಯೋಕಿ ರಾಸಲೀಲ ರಾಮಲೀಲ” – ಅಚ್ಚರಿಗೊಳಿಸುವ ಫೆಮಿನಿಸಂ

– ಬಿ.ಶ್ರೀಪಾದ ಭಟ್

ಲೇಖಕಿ ಮತ್ತು ಫ್ಯಾಷನ್ ಕ್ವೀನ್ ಶೋಭಾ ಡೇ “ಗಲಿಯೋಕಿ ರಾಸಲೀಲ ರಾಮಲೀಲ” ಸಿನಿಮಾ ಕುರಿತು ಬರೆಯುತ್ತಾ ಅದರಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿತ್ತೆಂದು ಮತ್ತು ಎಷ್ಟೊಂದು ರೋಚಕವಾಗಿತ್ತಂದರೆ “Get a room guys! Go ahead and do it!” ಎನ್ನುವಂತಿದೆ ಎಂದೆಲ್ಲಾ ಬರೆದಿದ್ದಳು. 65 ರ ಹರೆಯದ ಶೋಭಾ ಡೇಯ ಈ ರೀತಿಯ ಬರವಣಿಗೆ ಆಕೆಯ ಟಿಪಿಕಲ್ sexes ತರಹವಷ್ಟೇ ಹಳಸಲು ಎಂದು ಗೆಳೆಯ ಮೂಗು ಮುರಿದಿದ್ದರೂram-leela ನನಗಂತೂ ಈ ಸಿನಿಮಾ ನೋಡಲೇಬೇಕೆನಿಸಿತು.

“ಗಲಿಯೋಂಕಿ ರಾಸಲೀಲ ರಾಮಲೀಲ” ಸಂಜಯ ಲೀಲಾ ಬನ್ಸಾಲಿಯ ಇತ್ತೀಚಿನ ಚಿತ್ರ. ತನ್ನ ಹಿಂದಿನ ಸಿನಿಮಾಗಳಾದ “ಸಾವರಿಯಾ”, “ಗುಜಾರಿಷ್”ನ ಸೋಲಿನಿಂದ ಹೊರಬಂದಿದ್ದೇನೆ, ಬೇಕಿದ್ದರೆ ಈ ರಾಮಲೀಲ ಸಿನಿಮಾ ನೋಡಿ ಎಂದು ಹೇಳಿಕೊಂಡಿದ್ದ. ಇದು ಶೇಕ್ಸಪಿಯರ್‌ನ ನಾಟಕ “ರೋಮಿಯೋ ಜ್ಯೂಲಿಯೆಟ್” ನಾಟಕದ ಎಳೆಯನ್ನು ಆಧರಿಸಿ ಇಂಡಿಯಾದ ಬಾಲಿವುಡ್ ವ್ಯಕ್ತಿತ್ವಕ್ಕೆ ಹೊಂದಿಸಿದ್ದೇನೆ ಎಂಬುದು ಬನ್ಸಾಲಿಯ ಮುನ್ನುಡಿ.

ಈ ಸಿನಿಮಾದ ಕಥೆ ಗುಜರಾತ್‌ನ ರಂಜಾರ್ ಎನ್ನುವ ಪಟ್ಟಣದ ರಜಾದಿ ಮತ್ತು ಸನೇರ ಕುಟುಂಬಗಳ ನಡುವಿನ ತಲೆಮಾರುಗಳ ವೈಮನಸ್ಸಿನ ನಡುವೆ, ಬುಲೆಟ್‌ಗಳ ಹಾರಾಟದ ನಡುವೆ ಪ್ರೇಮ ಕಥೆಯೊಂದನ್ನು ಕಟ್ಟಿಕೊಡುತ್ತದೆ. ಬನ್ಸಾಲಿ ತನ್ನ ಹಳೆಯ ಜನಪ್ರಿಯ ಶೈಲಿಗಳಾದ ಮೇಲೋಡ್ರಾಮ, ತೀವ್ರವಾದ ಪ್ರೇಮದ ವರಸೆಗಳು, ಅದ್ಭುತ ಕಲಾವಂತಿಕೆಯ ದೃಶ್ಯಗಳು, ದೀರ್ಘವಾದ ನೃತ್ಯರೂಪಕಗಳು, ಹೀಗೆ ಇವುಗಳನ್ನೆಲ್ಲ ಒಂದಕ್ಕೊಂದು ಕೊಲಾಜ್‌ನಂತೆ ರೂಪಿಸಲು ತನ್ನ ಅಪ್ಪಟ ಪರಿಣಿತ ನಿರ್ದೇಶಕನ ಕೈಚಳಕವನ್ನು ಬಳಸಿಕೊಂಡಿದ್ದಾನೆ. ಹಾಗೂ ಯಶಸ್ವಿಯೂ ಆಗಿದ್ದಾನೆ. ಈ ಮಿಶ್ರಣಕ್ಕೆ Romance and Lust ನ ರೋಚಕ ಕಾಂಬಿನೇಷನ್ ಅನ್ನು ಸಹ ಯಶಸ್ವಿಯಾಗಿ ಉಪಯೋಗಿಸಿಕೊಂಡಿದ್ದಾನೆ. ಅದೇ ಇಂದು ಪ್ರೇಕ್ಷಕರನ್ನು ಸಿನಿಮಾ ಮಂದಿರದೆಡೆಗೆ ಸೆಳೆಯುತ್ತಿದೆ. ಶೋಭಾ ಡೇಯಂತಹ 65 ರ ಹರೆಯದ ಲೇಖಕಿ ಮೇಲಿನಂತೆ ಉದ್ಗರಿಸುವಂತೆ ಮಾಡಿದ್ದು ಸಹ ಈ ram-leelaRomance and Lust ನ ರೋಚಕ ಕಾಂಬಿನೇಷನ್.

ಬನ್ಸಾಲಿಯ ಬಣ್ಣಬಣ್ಣದ ಈ ಕನಸುಗಳಿಗೆ ನಾಯಕಿ ದೀಪಿಕಾ ಪಡುಕೋಣೆ ಅದ್ಭುತವಾಗಿಯೇ ಸ್ಪಂದಿಸಿದ್ದಾಳೆ. ತನ್ನ ಕಣ್ಣುಗಳ ಮೂಲಕವೇ ಆ Lust ಅನ್ನು ಯಶಸ್ವಿಯಾಗಿ ವ್ಯಕ್ತಪಡಿಸುವ ದೀಪಿಕಾ ತನ್ನ ಬಿಲ್ಲಿನಂತಹ ದೇಹವನ್ನು ಬಳಸಿ ನಾಯಕ ರಣವೀರ್‌ನೊಂದಿಗೆ Romance ನಡೆಸುವುದರ ಮೂಲಕ ಪ್ರೇಕ್ಷಕರನ್ನು ಮುದಗೊಳಿಸುತ್ತಾಳೆ. ಆಕೆ ಈ ಬಗೆಯ ಪರಿಣಿತಿಯನ್ನು ತನ್ನ ನಟನೆಯಲ್ಲಿ ಸಾಧಿಸಿರುವುದು ಈ ಸಿನಿಮಾದ ಅಚ್ಚರಿಗಳಲ್ಲೊಂದು. ಅಲ್ಲದೆ ಟಿಕೇಟ್ ಕೊಟ್ಟು ಥೇಟರ್‌ನ ಒಳಗೆ ಕಾಲಿಡುತ್ತಲೇ ದೀಪಿಕಾ ಮತ್ತು ನಾಯಕ ರಣವೀರ್‌ನೊಂದಿಗಿನ ಚುಂಬನದ ದೃಶ್ಯಗಳಿಗಾಗಿ ಕಾತರಿಸುತ್ತಾನೆ ಪ್ರೇಕ್ಷಕ. ಮತ್ತು ಪ್ರೇಕ್ಷಕನ ಈ ಕಾತುರವನ್ನು ದೀಪಿಕಾ ಮತ್ತು ರಣವೀರ್ ನಿರಾಶೆಗೊಳಿಸುವುದಿಲ್ಲ. ಆದರೆ ಈ ಚುಂಬನದ ದೃಶ್ಯಗಳಲ್ಲಿಯೂ ಫೆಮಿನಿಸಂ ಮೇಲುಗೈ ಸಾಧಿಸುವುದು ಸಿನಿಮಾದ ಹೊಸ ಭಾಷ್ಯೆಯೇ ಸರಿ.

ನಿಮ್ಮ ಮನೆತನದ ವ್ಯಾಪಾರವೇನೆಂದು ಪ್ರಶ್ನಿಸಿದಾಗ “ಶೂಟಿಂಗ್, ಕಳ್ಳ ಸಾಗಾಣಿಕೆ, ಕೊಲ್ಲುವುದು” ಎಂದು ತಣ್ಣಗಿನ ಕ್ರೌರ್ಯದ ದನಿಯಲ್ಲಿ ಉತ್ತರಿಸುವ ಸುಪ್ರಿಯಾ ಪಾಠಕ್ ಅದ್ಭುತವಾಗಿ ನಟಿಸಿದ್ದಾಳೆ. ಇಲ್ಲಿಯೂ ಫೆಮಿನಿಸಂ ಮೇಲುಗೈ ಸಾಧಿಸುತ್ತದೆ.

ಕಡೆಗೆ ಅತಿಯಾದ ಮೆಲೋಡ್ರಾಮ, ಅತಿಯಾದ ಕ್ರೌರ್ಯ, ಅತಿಯಾದ Romance and Lust ನ ನೆರಳುಗಳು ಮತ್ತು ತೆಳುವಾದ ಕಥೆ, ಸಂಪೂರ್ಣವಾಗಿ ಗುರಿ ತಪ್ಪಿದ ದ್ವಿತೀಯಾರ್ಧ “ಗಲಿಯೋಕಿ ರಾಸಲೀಲ ರಾಮಲೀಲ” ಸಿನಿಮಾವನ್ನು ‘ಒಂದು Different Film ಮಾರಾಯ’ ಎಂದು ಉದ್ಗರಿಸಲು ಅವಕಾಶ ಕೊಡುವುದೇ ಇಲ್ಲ. ಅಷ್ಟರ ಮಟ್ಟಿಗೆ ಇದು ನಿರ್ದೇಶಕ ಬನ್ಸಾಲಿಯು ತನ್ನ ಮಿತಿಯನ್ನು ಮೀರದಂತೆ ತಡೆಯುತ್ತದೆ. ಕಡೆಗೆ ದೀಪಿಕಾ ಪಡುಕೋಣೆ ಮತ್ತು ಸುಪ್ರಿಯಾ ಪಾಠಕ್ ಇವರಿಬ್ಬರ ಫೆಮಿನಿಸಂ ಈ ನಿರ್ದೇಶಕನನ್ನು, ಸಿನಿಮಾವನ್ನು ರಕ್ಷಿಸುತ್ತವೆ. ಆದರೆ ಅದೃಷ್ಟದ ಈ ಯಶಸ್ಸನ್ನೇ ಬಂಡವಾಳ ಮಾಡಿಕೊಂಡು ಭವಿಷ್ಯದಲ್ಲಿಯೂ ಇದೇ ತಾನು ನಡೆಯುವ ದಾರಿ ಎಂದು ಬನ್ಸಾಲಿ ಮಹಾಶಯ ನಿರ್ಧರಿಸಿದರೆ ಶಿವಾಯನಮಃ!!

ಕೆ.ಪಿ.ಎಸ್.ಸಿ ಅವ್ಯವಹಾರ: ಪ್ರಮುಖ ಪಕ್ಷಗಳ ಮೌನ

– ಸುಧಾಂಶು ಕಾರ್ಕಳ

ಕೆಲ ದಿನಗಳ ಹಿಂದೆಯಷ್ಟೆ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೆ.ಪಿ.ಎಸ್.ಸಿ ಅವ್ಯವಹಾರ ಚರ್ಚೆಯಾಗುತ್ತೆ ಎಂದು ಅನೇಕರು ನಿರೀಕ್ಷಿಸಿದ್ದರು. ಕರ್ನಾಟಕ ಆಡಳಿತ ಸೇವೆಗಳು, ಉಪನ್ಯಾಸಕ ವರ್ಗ, ವಿವಿಧ ಇಲಾಖೆಗಳು ಮುಖ್ಯಸ್ಥರು ಸೇರಿದಂತೆ ಬಹುತೇಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸರಕಾರ ಎದುರು ನೋಡುವ ಸಂಸ್ಥೆ ಈ ಕೆ.ಪಿ.ಎಸ್.ಸಿ.

ಈ ಸಂಸ್ಥೆಯ ಮೂಲಕ ನೇಮಕವಾಗಲು ವಿವಿಧ ಹುದ್ದೆಗಳಿಗೆ ಮೂರು-ನಾಲ್ಕು KPSC-bribe-ratesಲಕ್ಷಗಳಿಂದ ಎಪ್ಪತ್ತು-ಎಂಬತ್ತು ಲಕ್ಷಗಳ ವರೆಗೆ ಲಂಚ ಕೊಟ್ಟವರು ಅಧಿಕಾರ ವಹಿಸಿಕೊಂಡ ನಂತರ ನಿಯತ್ತಾಗಿ ಕೆಲಸ ಮಾಡಲಿ ಎಂದು ನಿರೀಕ್ಷಿಸುವುದು ಕಷ್ಟ. ಇತ್ತೀಚೆಗೆ ಕೆ.ಪಿ.ಎಸ್.ಸಿ ಮೂಲಕ ನೇಮಕವಾದ ಪೊಲೀಸ್ ಅಧಿಕಾರಿಯೊಬ್ಬರು ವಿವಿಧ ಪ್ರಕರಣಗಳಲ್ಲಿ ಬೇಕಾದವರನ್ನು ಗುಡ್ಡೆ ಹಾಕಿಕೊಂಡು ಇಂತಿಷ್ಟು ವಸೂಲಿ ಮಾಡಿದರು. ಅವರು ಆರೋಪಿಗಳೊಂದಿಗೆ ವಸೂಲಿ ಬಗ್ಗೆ ಮಾತುಕತೆ ನಡೆಸುವಾಗ ಹೇಳಿದ್ದ ಒಂದು ಮಾತು, ’ನಾವೇನು ಪುಕ್ಸಟೆ ಇಲ್ಲಿಗೆ (ಈ ಹುದ್ದೆಗೆ) ಬಂದಿಲ್ಲ’. ಅದರರ್ಥ ಹೀಗೆ ನೇಮಕ ಆದವರು ಪ್ರಾಮಾಣಿಕತೆಯಿಂದ ದುಡಿಯುವ ಸಾಧ್ಯತೆಗಳು ಕ್ಷೀಣ.

ಲಂಚ ಕೊಟ್ಟು ಉಪನ್ಯಾಸಕರಾದವರು ಮುಂದೆ ಇದೇ ಕೆ.ಪಿ.ಎಸ್.ಸಿ ಸಂಸ್ಥೆಯಿಂದ ನಡೆಸುವ ಪರೀಕ್ಷೆಗಳ ಮೌಲ್ಯಮಾಪಕರಾಗಿ ಅನ್ಯಮಾರ್ಗಗಳಿಂದ ದುಡ್ಡು ಮಾಡುವ ಪ್ರಯತ್ನ ಮಾಡುತ್ತಾರೆ. ಅಷ್ಟೇ ಅಲ್ಲ, ಉಪನ್ಯಾಸದ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ಕಾಲೇಜಿಗೆ ಆಗಾಗ ಬಿಡುಗಡೆಯಾಗುವ ಹಣ ದುರುಪಯೋಗ ಮಾಡಿಕೊಳ್ಳಲು ಉತ್ಸುಕರಾಗಿರುತ್ತಾರೆ. ಅಥವಾ, ತಮ್ಮ ವಾರಿಗೆ ಇತರರು ಕಮಾಯಿ ಹೆಚ್ಚು ಇರುವ ಇಲಾಖೆಗಳಲ್ಲಿ ನೇಮಕಗೊಂಡು ದುಡ್ಡು ಮಾಡುತ್ತಿರುವುದನ್ನು ನೋಡಿ ಸಹಿಸಲಾರದೆ, ಇತ್ತ ಮಕ್ಕಳಿಗೆ ನಿಯತ್ತಾಗಿ ಪಾಠವೂ ಮಾಡದೆ ಎಡಬಿಡಂಗಿಗಳಾಗಿ ಉಳಿದು ಬಿಡುತ್ತಾರೆ.

ಇಂತಹವರ ನೇಮಕ ಆಗುವಾಗ ನಡೆದ ಅಕ್ರಮಗಳ ಬಗ್ಗೆ ಸಿ.ಐ.ಡಿ ತನಿಖೆ ನಡೆಸಿ ಸೂಕ್ತ ಸಾಕ್ಷಿ ಆಧಾರಗಳೊಂದಿಗೆ ವರದಿ ಸಲ್ಲಿಸಿದರೂ, ಸರಕಾರಕ್ಕೆ ತಕ್ಕ ತೀರ್ಮಾನ ತೆಗೆದುಕೊಳ್ಳುವ ಮನಸ್ಸಿಲ್ಲ. ಕಾರಣ ಆ ಬಗ್ಗೆ ವಿರೋಧ ಪಕ್ಷಗಳೂ ಒತ್ತಾಯ ಹೇರುತ್ತಿಲ್ಲವಲ್ಲ. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಅವರ ಅಣ್ಣ ಎಚ್.ಡಿ.ರೇವಣ್ಣ ಆಗಾಗ ಕೆ.ಪಿ.ಎಸ್.ಸಿ ಮಾಜಿ ಅಧ್ಯಕ್ಷ gonal-bhimappaಗೋನಾಳ್ ಭೀಮಪ್ಪನವರನ್ನು ಬೆಂಬಲಿಸಿಯೇ ಮಾತನಾಡಿದರು. ’ಪಾಪ ಅವರು ದಲಿತರು ಅನ್ನೋ ಕಾರಣಕ್ಕೆ ಸರಕಾರ ಅವರನ್ನು ಶಿಕ್ಷಿಸಲು ಹವಣಿಸುತ್ತಿದೆ..’ ಎಂದು ರೇವಣ್ಣ ಅನೇಕ ಬಾರಿ ಹೇಳಿದ್ದನ್ನು ಪತ್ರಕರ್ತರು ಕೇಳಿಸಿಕೊಂಡಿದ್ದಾರೆ. ತಮ್ಮ ಊರಲ್ಲಿರುವ ದಲಿತರ ಬಗ್ಗೆ ಎಂದಿಗೂ ಕಾಳಜಿ ತೋರಿಸದ ಇವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ದಲಿತ ಅಧಿಕಾರಿ ಪರ ಮಾತನಾಡುವುದೇಕೆ?

ಕಾರಣ ಇಷ್ಟೆ… ದೇವೇಗೌಡರ ಕುಟುಂಬದ ಕೃಪೆಯಿಂದ ಗೋನಾಳ್ ಭೀಮಪ್ಪ ಅಧ್ಯಕ್ಷರಾದರು. ಆ ನಂತರ ಅಧ್ಯಕ್ಷರು ಆ ಕುಟುಂಬದ ನಿರ್ದೇಶನದಲ್ಲಿ ಹಲವರಿಗೆ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಿದರು ಎಂಬುದು ಅನೇಕರು ದೂರುವ ಸಂಗತಿ. ಹಾಗಾಗಿ ಪ್ರಮುಖ ಪ್ರತಿಪಕ್ಷದ ನೇತಾರರಿಗೆ ತನಿಖೆ ಅಗತ್ಯ ಇರಲಿಲ್ಲ. ಇನ್ನು ಬಿಜೆಪಿಯ ಅನೇಕ ರಾಜಕಾರಣಿಗಳು ತಮ್ಮ ಅವಧಿಯಲ್ಲಿ ನೇಮಕವಾದ ಕೆ.ಪಿ.ಎಸ್.ಸಿ ಸದಸ್ಯರ ಮೂಲಕ ತಮ್ಮ ಹಿತೈಷಿಗಳಿಗೆ ಕೆಲಸ ಕೊಡಿಸಿದ್ದಾರೆ. ಇನ್ನು ಕಾಂಗ್ರೆಸ್‌ನವರೂ ಇದಕ್ಕಿಂತ ಬೇರೆಯಲ್ಲ. ಹಾಗಾಗಿ ಯಾರಿಗೂ ತನಿಖೆ ಬೇಡ.

ಇತ್ತೀಚೆಗಷ್ಟೆ ಕಣ್ಣು ತೆರೆದಿರುವ ಲೋಕಸತ್ತಾ ಪಾರ್ಟಿ ಈ ವಿಚಾರವನ್ನು ಎತ್ತಿಕೊಂಡು ಪ್ರತಿಭಟನೆಗೆ ಇಳಿದಿದೆ. ಮೊದಲು ತನಿಖಾ ವರದಿಯನ್ನು ಬಹಿರಂಗ ಪಡಿಸಿ ಎಂದು ಸರಕಾರದ ಮೇಲೆ ಒತ್ತಡ ಹೇರಿತು. ಸರಕಾರ ಬಹಿರಂಗ ಮಾಡದೇ ಇದ್ದಾಗ ಪಕ್ಷದ ಮುಖಂಡರೇ ವರದಿಯನ್ನು ಬಿಡುಗಡೆ ಮಾಡಿದರು. ಆ ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ನೇರವಾಗಿ ಕೆಲ ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಕ್ಕೆ ಪುರಾವೆಗಳಿವೆ. ಮೌಲ್ಯಮಾಪನದಲ್ಲಿ ಅವ್ಯವಹಾರ ಆಗಿದ್ದಕ್ಕೆ ದಾಖಲೆಗಳಿವೆ. ಇನ್ನಾದರೂ ಸರಕಾರ ಇತ್ತ ಗಮನ ಹರಿಸಲಿ.


ಕೆಪಿಎಸ್‌ಸಿ ಹಗರಣದ ಕುರಿತು ತನಿಖೆ ನಡೆಸಿದ ರಾಜ್ಯ ಗುಪ್ತಚರ ಇಲಾಖೆ (ಸಿಐಡಿ) ಸರ್ಕಾರಕ್ಕೆ ಸಲ್ಲಿಸಿರುವ ಸಂಪೂರ್ಣ ತನಿಖಾ ವರದಿ ಇಲ್ಲಿದೆ.

ವರ್ತಮಾನ.ಕಾಮ್‌ನಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯುವ ಭ್ರಷ್ಟಾಚಾರ, ಅಕ್ರಮ, ಅನೈತಿಕತೆಗಳ ಕುರಿತು ಬಂದಿರುವ ಕೆಲವು ಲೇಖನಗಳು:

ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಜನಲೋಕಪಾಲ್ ಮಸೂದೆಗಳ ನಡುವಿನ ಪ್ರಮುಖ ವ್ಯತ್ಯಾಸಗಳು

– ಆನಂದ ಪ್ರಸಾದ್

ಕೇಂದ್ರ ಸರ್ಕಾರವು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಉತ್ತಮ ಸಾಧನೆ ಮಾಡಿರುವುದನ್ನು ನೋಡಿ ಗಾಬರಿಯಾಗಿ ದುರ್ಬಲ ಲೋಕಪಾಲ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ತರಾತುರಿಯಲ್ಲಿ ಮುಂದಾಗಿದೆ. ಇದಕ್ಕೆ ವಿಪಕ್ಷ ಬಿಜೆಪಿಯೂ ಗಾಬರಿಯಿಂದ ಚರ್ಚೆ ಇಲ್ಲದೆ ಒಪ್ಪಿಕೊಳ್ಳುವ ಇಂಗಿತ ತೋರಿಸಿದೆ. ಈ ದುರ್ಬಲ ಮಸೂದೆಯನ್ನುanna-kejriwal ಹಿಂದೆ ಬಲಿಷ್ಠ ಲೋಕಪಾಲ ಮಸೂದೆಗಾಗಿ ಪಟ್ಟು ಹಿಡಿದಿದ್ದ ಅಣ್ಣಾ ಹಜಾರೆಯವರೂ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಗೆ ಹಲ್ಲಿಲ್ಲದ ಹಾವನ್ನು ಸೃಷ್ಟಿಸಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದ್ದು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಅಣ್ಣಾ ಅವರನ್ನು ದುರ್ಬಲ ಮಸೂದೆಗೆ ಕೆಲವು ಸ್ಥಾಪಿತ ಹಿತಾಸಕ್ತರು ದಾರಿ ತಪ್ಪಿಸಿ ಒಪ್ಪಿಸಿದ್ದಾರೆ ಎಂದೂ ಮತ್ತು ಇದನ್ನು ತಾವು ವಿರೋಧಿಸುವುದಾಗಿಯೂ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ವೆಬ್‌ಸೈಟಿನಲ್ಲಿ ಕೇಜ್ರಿವಾಲ್ ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಈ ಹಿಂದೆ ಅಣ್ಣಾ ನೇತೃತ್ವದ ಜನಲೋಕಪಾಲ್ ಚಳುವಳಿ ಸಿದ್ಧಪಡಿಸಿದ ಜನಲೋಕಪಾಲ್ ಮಸೂದೆಯ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳು ಇಂತಿವೆ:

  1. ಲೋಕಪಾಲರ ನೇಮಕ: ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 5 ಸದಸ್ಯರ ಸಮಿತಿ ಇರುತ್ತದೆ. ಅವರೆಂದರೆ ಪ್ರಧಾನಿ, ವಿರೋಧ ಪಕ್ಷದ ನಾಯಕ, ಲೋಕಸಭೆಯ ಸ್ಪೀಕರ್, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ, ಹಾಗೂ ಈ ನಾಲ್ವರು ಸೂಚಿಸುವ ಒಬ್ಬ ವಿದ್ವಾಂಸರು/ನ್ಯಾಯಾಧೀಶರು/ವಕೀಲರು ಅಥವಾ ತೀರ್ಪುಗಾರರು. ಜನಲೋಕಪಾಲ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 7 ಜನರ ಸಮಿತಿ ಇರುತ್ತದೆ. ಅವರ್ಯಾರೆಂದರೆ 2 ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು, 2 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು; ಸಿಎಜಿ, ಸಿವಿಸಿ, ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ಸೂಚಿಸಿದ ತಲಾ ಒಬ್ಬ ಸದಸ್ಯ; ಪ್ರಧಾನ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ. ಸರ್ಕಾರೀ ಮಸೂದೆಯ ಪ್ರಕಾರ ಇರುವ ಸಮಿತಿಯಲ್ಲಿ ರಾಜಕಾರಣಿಗಳೇ ಹೆಚ್ಚಿರುವ ಕಾರಣ ನಿಷ್ಪಕ್ಷಪಾತ ನೇಮಕ ಸಾಧ್ಯವಾಗಲಾರದು.
  2. ಲೋಕಪಾಲರನ್ನು ತೆಗೆದುಹಾಕುವುದು: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲರನ್ನು ತೆಗೆದುಹಾಕಲು ಒಂದೋ ಆಳುವ ಸರ್ಕಾರ ಅಥವಾ 100 ಜನ ಲೋಕಸಭಾ ಸದಸ್ಯರು ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಲು ಮಾತ್ರ ಅವಕಾಶ ಇದೆ. ಜನಲೋಕಪಾಲ್ ಮಸೂದೆ ಪ್ರಕಾರ ಯಾವುದೇ ನಾಗರಿಕನೂ ಸರ್ವೋಚ್ಛ ನ್ಯಾಯಾಲಯಕ್ಕೆ ದೂರು ನೀಡುವ ಮೂಲಕ ಲೋಕಪಾಲದ ಸದಸ್ಯರನ್ನು ತೆಗೆದುಹಾಕಲು ದೂರು ಕೊಡಬಹುದು. ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ತೆಗೆದು ಹಾಕಲು ದೂರು ನೀಡುವ ಅಧಿಕಾರ ಆಳುವ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಮಾತ್ರವೇ ಇರುವುದರಿಂದ ಲೋಕಪಾಲದ ದಕ್ಷತೆ ಹಾಗೂ ಸ್ವಾತಂತ್ರ್ಯದ ಮೇಲೆ ಗಂಭೀರ ಲೋಪ ಉಂಟಾಗಬಹುದು.
  3. ತನಿಖಾ ದಳ: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲಕ್ಕೆ ಬರುವ ದೂರುಗಳ ವಿಚಾರಣೆಯನ್ನು ಕೈಗೊಳ್ಳಲು ಸರ್ಕಾರೀ ಅಧೀನದಲ್ಲಿರುವ ಸಿಬಿಐ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಯನ್ನು ಅವಲಂಬಿಸಬೇಕು. ಸಿಬಿಐ ಅಧಿಕಾರಿಗಳ ನೇಮಕ, ವರ್ಗಾವಣೆ ಹಾಗೂ ನಿವೃತ್ತಿಯ ನಂತರದ ಸೇವೆಗಳಿಗೆ ನೇಮಕ ಮಾಡುವ ಅಧಿಕಾರ ಸಂಪೂರ್ಣವಾಗಿ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಇರುವ ಕಾರಣ ಸಿಬಿಐ ಸಂಸ್ಥೆಯ ಹಿಡಿತ ಸರ್ಕಾರದ ಬಳಿಯೇ ಇರಲಿದ್ದು ತನಿಖಾ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಗಂಭೀರ ಹಾನಿಯಾಗುತ್ತಿರುತ್ತದೆ (ಈಗ ಆಗುತ್ತಿರುವಂತೆ). ಜನಲೋಕಪಾಲ್ ಮಸೂದೆ ಪ್ರಕಾರ ಸಿಬಿಐ ತನಿಖಾ ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣವು ಲೋಕಪಾಲದ ಅಡಿಯಲ್ಲಿ ಇರುತ್ತದೆ ಮತ್ತು ಸರ್ಕಾರದಿಂದ ಸ್ವತಂತ್ರವಾಗಿರುತ್ತದೆ.
  4. ವಿಷಲ್ ಬ್ಲೋವರ್ ರಕ್ಷಣೆ: ಸರ್ಕಾರೀ ಮಸೂದೆ ಪ್ರಕಾರ ವಿಷಲ್ ಬ್ಲೋವರ್ಗಳಿಗೆ (ಅಂದರೆ ಜನಜಾಗೃತಿಗಾಗಿ ಕೆಲಸ ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರು ಇತ್ಯಾದಿ ಜನರಿಗೆ) ರಕ್ಷಣೆ ನೀಡುವ ಯಾವುದೇ ವಿಚಾರ ಇಲ್ಲ. ಜನಲೋಕಪಾಲ್ ಮಸೂದೆಯಲ್ಲಿ ವಿಷಲ್ ಬ್ಲೋವರ್‌ಗಳಿಗೆ ರಕ್ಷಣೆ ನೀಡುವ ವ್ಯವಸ್ಥೆ ಇರುತ್ತದೆ.
  5. ಸಿಟಿಜೆನ್ ಚಾರ್ಟರ್: ಸರ್ಕಾರೀ ಮಸೂದೆ ಪ್ರಕಾರ ಇಂಥ ಯಾವುದೇ ವ್ಯವಸ್ಥೆ ಇಲ್ಲ (ಸಿಟಿಜನ್ ಚಾರ್ಟರ್ ಎಂದರೆ ನಾಗರಿಕರಿಗೆ ಅವಶ್ಯವಿರುವ ಸರ್ಕಾರೀ ಸೇವೆಗಳನ್ನು ಮಾಡಿಕೊಡಲು ಕಾಲಾವಧಿ ನಿಗದಿಪಡಿಸುವುದು ಮತ್ತು ಆ ಕಾಲಾವಧಿಯೊಳಗೆ ಕೆಲಸ ಮಾಡಿಕೊಡದಿದ್ದರೆ ದಂಡ ವಿಧಿಸುವ ಅವಕಾಶ). ಜನಲೋಕಪಾಲ್ ಮಸೂದೆಯ ಪ್ರಕಾರ ಸಿಟಿಜನ್ ಚಾರ್ಟರ್ ಅನ್ನು ಲೋಕಪಾಲದೊಳಗೆ ಸೇರಿಸಲಾಗುತ್ತದೆ.
  6. ರಾಜ್ಯಗಳಲ್ಲಿ ಲೋಕಾಯುಕ್ತಗಳನ್ನು ರೂಪಿಸುವುದು: ಸರಕಾರೀ ಲೋಕಪಾಲದ ಪ್ರಕಾರ ಇದನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗುತ್ತದೆ. ಜನಲೋಕಪಾಲ್ ಮಸೂದೆ ಪ್ರಕಾರ ಲೋಕಪಾಲ್ ವ್ಯವಸ್ಥೆಯನ್ನು ಕೇಂದ್ರದಲ್ಲಿ ರೂಪಿಸಿದಂತೆಯೇ ರಾಜ್ಯಗಳಲ್ಲಿ ಅದೇ ಮಾದರಿಯಲ್ಲಿ ಲೋಕಾಯುಕ್ತಗಳನ್ನು ರೂಪಿಸಬೇಕು.
  7. ಸುಳ್ಳು ದೂರುಗಳು: ಸರ್ಕಾರೀ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ದೂರುದಾರರನ್ನು ಒಂದು ವರ್ಷದ ಅವಧಿಗೆ ಸೆರೆಮನೆಗೆ ತಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ನೀಡಲಾಗುತ್ತದೆ (ಇದರಿಂದಾಗಿ ಪ್ರಾಮಾಣಿಕ ದೂರುದಾರರೂ ಲೋಕಪಾಲಕ್ಕೆ ದೂರು ನೀಡಲು ಹಿಂಜರಿಯುವ ಸಂಭವ ಇದೆ). ಜನಲೋಕಪಾಲ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆಯನ್ನು ದೂರುದಾರರಿಗೆ ವಿಧಿಸಬಹುದು, ಆದರೆ ಜೈಲು ಶಿಕ್ಷೆ ಇಲ್ಲ.
  8. ಲೋಕಪಾಲದ ಮಿತಿ: ಸರ್ಕಾರೀ ಲೋಕಪಾಲ್ ಪ್ರಕಾರ ನ್ಯಾಯಾಂಗ ಹಾಗೂ ಜನಪ್ರತಿನಿಧಿಗಳನ್ನು ಅವರ ಸದನದ ಒಳಗಿನ ಮತ ಹಾಗೂ ಮಾತುಗಳ ವಿಷಯದಲ್ಲಿ ಲೋಕಪಾಲದಿಂದ ಹೊರಗಿಡಲಾಗುತ್ತದೆ. ಜನಲೋಕಪಾಲದ ಪ್ರಕಾರ ಎಲ್ಲಾ ಸರ್ಕಾರೀ ಸೇವಕರನ್ನು, ಜನಪ್ರತಿನಿಧಿಗಳನ್ನು ಹಾಗೂ ನ್ಯಾಯಾಂಗದ ನ್ಯಾಯಾಧೀಶರನ್ನೂ ಲೋಕಪಾಲದ ವ್ಯಾಪ್ತಿಗೆ ತರಲಾಗುತ್ತದೆ.

“ಜನ ನುಡಿ” ಸಮಾವೇಶದಲ್ಲಿ ಸಾರಾ ಅಬೂಬಕರ್ ಮತ್ತು ಕಡಿದಾಳ್ ಶಾಮಣ್ಣ

ಕಲಾಂಗಣ (ಮಂಗಳೂರು): ಹಿರಿಯ ಲೇಖಕಿ ಸಾರಾ ಅಬೂಬಕರ್ ಉದ್ಘಾಟನಾ ಸಮಾರಂಭದಲ್ಲಿ ಆಡಿದ ಮಾತಿನ ಕೆಲ ಭಾಗಗಳು:

  • ನಾನು ಮೊದಮೊದಲು ಮುಗ್ಧವಾಗಿ ಯಾರೇ ಕರೆದರೂ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಸಂಘಟಕರ ಉದ್ದೇಶವೇನು, ಹಿನ್ನೆಲೆ ಏನು..ಏನೊಂದೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ನಾನು ಹಾಗಿಲ್ಲ.
  • ಕೋಟಿಗಟ್ಟಲೆ ಖಚರ್ು ಮಾಡಿ ನುಡಿಸಿರಿ ಸಂಭ್ರಮ ಮಾಡುವವರಿಗೆ ನಮ್ಮ ಊರಿನ ಹತ್ತಿರದಲ್ಲೇ ಎಂಡೋಸಲ್ಫಾನ್ ದುರಂತದಿಂದabhimata-page1ಇಂದಿಗೂ ನರಳುತ್ತಿರುವ ಮಕ್ಕಳು ಕಾಣುತ್ತಿಲ್ಲವೇ? ಅವರ ಆರೋಗ್ಯಕ್ಕಾಗಿ, ಸೌಖ್ಯಕ್ಕಾಗಿ ಒಂದಿಷ್ಟು ಹಣ ಖಚರ್ುಮಾಡಿದರೂ ಎಷ್ಟೋ ಉಪಯೋಗವಾಗುತ್ತಲ್ಲವಾ?
  • ಕಳೆದ ವರ್ಷ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತನೊಬ್ಬನನ್ನು ಪೊಲೀಸರು ಉಗ್ರನೆಂದು ಶಂಕಿಸಿ ಬಂಧಿಸಿದರು. ಕೆಲ ತಿಂಗಳ ನಂತರ ಅವನು ಹುಡುಗ ಅಮಾಯಕ ಎಂದು ಬಿಟ್ಟರು. ಈ ಸಂದರ್ಭದ ಹಿನ್ನೆಲೆಯಲ್ಲಿ ಒಂದು ಕತೆ ಬರೆದಿದ್ದೆ. ಅದೇ ಹೊತ್ತಿಗೆ ಪ್ರಜಾವಾಣಿಯವರು ಒಂದು ಕತೆಯನ್ನು ಕೇಳಿದ್ದರು. ನಾನು ಅದೇ ಕತೆಯನ್ನು ಕಳುಹಿಸಿದೆ. ಆದರೆ ಆ ಕತೆ ಇದುವರೆಗೂ ಆ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ. ಯಾಕೆ ಹೀಗಾಗುತ್ತೆ..?
  • ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ಮುಸ್ಲಿಂ ಮಹಿಳೆಯರ ಸಮಾವೇಶವಿತ್ತು. ಉತ್ತರ ಭಾರತದ ರಾಜ್ಯಗಳಿಂದ ಅನೇಕ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ತಮ್ಮ ರಾಜ್ಯದಲ್ಲಿ ತಾವು ಅನುಭವಿಸುತ್ತಿರುವ ಹಿಂಸೆಯನ್ನು ವಿವರಿಸಿದರು. ‘ಇನ್ನೂ ಯಾಕೆ ಈ ದೇಶದಲ್ಲಿದ್ದೀರಿ..ಪಾಕಿಸ್ತಾನಕ್ಕೆ ಹೋಗಿ..’ ಎಂದು ಅಲ್ಲಿಯ ಬಹುಸಂಖ್ಯಾತರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರಂತೆ. ಯಾಕೆ ಈ ದೇಶ ಅವರದೂ ಅಲ್ಲವೇ..?

ರೈತ ಚಳವಳಿಯ ಮುಂದಾಳು ಕಡಿದಾಳ್ ಶಾಮಣ್ಣ ಆಡಿದ ಕೆಲ ಮಾತುಗಳು:

  • ರೈತರಿಗೆ ಅವರು ಬೆಳೆಯುವ ಬೆಳೆಗೆ ದರ ನಿಗದಿ ಮಾಡುವ ಹಕ್ಕು ದೊರಕಬೇಕು.
  • ಎಲ್ಲಾ ಊರುಗಳಲ್ಲಿ ರೈತನಿಗೆ ಸೂಕ್ತ ಬೆಲೆ ಸಿಗುವ ತನಕ ತನ್ನ ಬೆಳೆಯನ್ನು ಸಂಗ್ರಹಿಸಿಡಲು ಉಗ್ರಾಣಗಳ ಅಗತ್ಯವಿದೆ.

“ಜನ ನುಡಿ” ಸಮಾವೇಶದಲ್ಲಿ ಸಾರಾ ಅಬೂಬಕರ್ ಮತ್ತು ಕಡಿದಾಳ್ ಶಾಮಣ್ಣ

ಕಲಾಂಗಣ (ಮಂಗಳೂರು): ಹಿರಿಯ ಲೇಖಕಿ ಸಾರಾ ಅಬೂಬಕರ್ ಉದ್ಘಾಟನಾ ಸಮಾರಂಭದಲ್ಲಿ ಆಡಿದ ಮಾತಿನ ಕೆಲ ಭಾಗಗಳು:

  • ನಾನು ಮೊದಮೊದಲು ಮುಗ್ಧವಾಗಿ ಯಾರೇ ಕರೆದರೂ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಸಂಘಟಕರ ಉದ್ದೇಶವೇನು, ಹಿನ್ನೆಲೆ ಏನು..ಏನೊಂದೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ನಾನು ಹಾಗಿಲ್ಲ.
  • ಕೋಟಿಗಟ್ಟಲೆ ಖಚರ್ು ಮಾಡಿ ನುಡಿಸಿರಿ ಸಂಭ್ರಮ ಮಾಡುವವರಿಗೆ ನಮ್ಮ ಊರಿನ ಹತ್ತಿರದಲ್ಲೇ ಎಂಡೋಸಲ್ಫಾನ್ ದುರಂತದಿಂದabhimata-page1ಇಂದಿಗೂ ನರಳುತ್ತಿರುವ ಮಕ್ಕಳು ಕಾಣುತ್ತಿಲ್ಲವೇ? ಅವರ ಆರೋಗ್ಯಕ್ಕಾಗಿ, ಸೌಖ್ಯಕ್ಕಾಗಿ ಒಂದಿಷ್ಟು ಹಣ ಖಚರ್ುಮಾಡಿದರೂ ಎಷ್ಟೋ ಉಪಯೋಗವಾಗುತ್ತಲ್ಲವಾ?
  • ಕಳೆದ ವರ್ಷ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತನೊಬ್ಬನನ್ನು ಪೊಲೀಸರು ಉಗ್ರನೆಂದು ಶಂಕಿಸಿ ಬಂಧಿಸಿದರು. ಕೆಲ ತಿಂಗಳ ನಂತರ ಅವನು ಹುಡುಗ ಅಮಾಯಕ ಎಂದು ಬಿಟ್ಟರು. ಈ ಸಂದರ್ಭದ ಹಿನ್ನೆಲೆಯಲ್ಲಿ ಒಂದು ಕತೆ ಬರೆದಿದ್ದೆ. ಅದೇ ಹೊತ್ತಿಗೆ ಪ್ರಜಾವಾಣಿಯವರು ಒಂದು ಕತೆಯನ್ನು ಕೇಳಿದ್ದರು. ನಾನು ಅದೇ ಕತೆಯನ್ನು ಕಳುಹಿಸಿದೆ. ಆದರೆ ಆ ಕತೆ ಇದುವರೆಗೂ ಆ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ. ಯಾಕೆ ಹೀಗಾಗುತ್ತೆ..?
  • ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ಮುಸ್ಲಿಂ ಮಹಿಳೆಯರ ಸಮಾವೇಶವಿತ್ತು. ಉತ್ತರ ಭಾರತದ ರಾಜ್ಯಗಳಿಂದ ಅನೇಕ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ತಮ್ಮ ರಾಜ್ಯದಲ್ಲಿ ತಾವು ಅನುಭವಿಸುತ್ತಿರುವ ಹಿಂಸೆಯನ್ನು ವಿವರಿಸಿದರು. ‘ಇನ್ನೂ ಯಾಕೆ ಈ ದೇಶದಲ್ಲಿದ್ದೀರಿ..ಪಾಕಿಸ್ತಾನಕ್ಕೆ ಹೋಗಿ..’ ಎಂದು ಅಲ್ಲಿಯ ಬಹುಸಂಖ್ಯಾತರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರಂತೆ. ಯಾಕೆ ಈ ದೇಶ ಅವರದೂ ಅಲ್ಲವೇ..?

ರೈತ ಚಳವಳಿಯ ಮುಂದಾಳು ಕಡಿದಾಳ್ ಶಾಮಣ್ಣ ಆಡಿದ ಕೆಲ ಮಾತುಗಳು:

  • ರೈತರಿಗೆ ಅವರು ಬೆಳೆಯುವ ಬೆಳೆಗೆ ದರ ನಿಗದಿ ಮಾಡುವ ಹಕ್ಕು ದೊರಕಬೇಕು.
  • ಎಲ್ಲಾ ಊರುಗಳಲ್ಲಿ ರೈತನಿಗೆ ಸೂಕ್ತ ಬೆಲೆ ಸಿಗುವ ತನಕ ತನ್ನ ಬೆಳೆಯನ್ನು ಸಂಗ್ರಹಿಸಿಡಲು ಉಗ್ರಾಣಗಳ ಅಗತ್ಯವಿದೆ.