Monthly Archives: June 2012

ರಾಮಚಂದ್ರ ಗೌಡ ಗೆಲುವು, ಸಮಾಜದ ಸೋಲು

– ರವಿ ಕೃಷ್ಣಾರೆಡ್ಡಿ

ಭ್ರಷ್ಟಾಚಾರದ ಬಗ್ಗೆ ಈ ರೀತಿ ಕೂಗೆದ್ದಿದೆ; ಆದರೂ ಜನ ಭ್ರಷ್ಟಾಚಾರಿ ಎಂದು ಮೇಲ್ನೋಟಕ್ಕೆ ರುಜುವಾತಾಗಿರುವ ಆರೋಪಿಯನ್ನು, ಅದೇ ಕಾರಣಕ್ಕೆ ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾದ ವ್ಯಕ್ತಿಯನ್ನು, ಅದೂ ಇಂತಹ ಸಂದರ್ಭದಲ್ಲಿ ಆರಿಸಿ ಕಳುಹಿಸುತ್ತಾರಲ್ಲಾ, ಇದಕ್ಕೇನನ್ನಬೇಕು? ಜೊತೆಗೆ ಈ ಚುನಾವಣೆಯಲ್ಲಿ ಮತ ಹಾಕಿದವರೆಲ್ಲರೂ ಪದವೀಧರರೂ ಆಗಿದ್ದರಲ್ಲವೆ? ಇವರು ಕನಿಷ್ಟ ತಮ್ಮ ಮಕ್ಕಳಿಗೆ ಯಾವ ರೀತಿಯ ಆದರ್ಶ ಕೊಡಬೇಕೆಂದು ಬಯಸುತ್ತಿದ್ದಾರೋ, ಅರ್ಥವಾಗುತ್ತಿಲ್ಲ.

ಈ ಚುನಾವಣೆಯಲ್ಲಿ ಇನ್ನೂ ಒಂದು ವಿರೋಧಾಭಾಸ ಇದೆ. ಲೋಕಸತ್ತಾ ಪಕ್ಷದಿಂದ ನಿಂತಿದ್ದ ಅಶ್ವಿನ್ ಮಹೇಶರು ಅಣ್ಣಾ ಹಜಾರೆ ಮುಂದಾಳತ್ವದ ’ಭ್ರಷ್ಟಾಚಾರದ ವಿರುದ್ಧ ಭಾರತ’ ಸಂಘಟನೆಯ ಬೆಂಗಳೂರು ವಲಯದ ಪ್ರಮುಖ ನಾಯಕರು. ಅಣ್ಣಾ ಹಜಾರೆ ದೆಹಲಿಯಲ್ಲಿ ಉಪವಾಸ ಕುಳಿತಿದ್ದಾಗ ಇಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕಾರ್ಯಕ್ರಮಗಳ ರೂಪುರೇಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಅವರು ಈ ಬಾರಿಯ ಪದವೀಧರರ ಕ್ಷೇತ್ರದ ಚುನಾವಣೆಗೆ ನಿಂತಾಗ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆಯವರು ಬಹಿರಂಗ ಬೆಂಬಲ ಸಹ ಸೂಚಿಸಿದ್ದರು. ಅಷ್ಟೇ ಅಲ್ಲ, ಪ್ರಚಾರ ಕಾರ್ಯ ಸಹ ಕೈಗೊಂಡಿದ್ದರು. ಒಂದು ರೀತಿಯಲ್ಲಿ ಇವರಿಗೆ ಬೀಳುವ ಒಂದೊಂದು ಓಟೂ ಭ್ರಷ್ಟಾಚಾರದ ವಿರುದ್ಧ ಬೀಳುವ ಮತವಾಗಬೇಕಿತ್ತು.

ಆದರೆ.. ಪತ್ರಿಕಾವರದಿಗಳನ್ನು ನಂಬಬಹುದಾದರೆ, ರಾಮಚಂದ್ರ ಗೌಡರಿಗೆ ಬಿದ್ದ ಅನೇಕ ಮೊದಲ ಪ್ರಾಶಸ್ತ್ಯದ ಮತಪತ್ರಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತ ಅಶ್ವಿನ್‌ರದಾಗಿತ್ತು. ಅಶ್ವಿನ್ ಮಹೇಶ್‌ಗೆ ಬಿದ್ದ ಮೊದಲ ಪ್ರಾಶಸ್ತ್ಯದ ಅನೇಕ ಓಟುಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತ ರಾಮಚಂದ್ರ ಗೌಡರದಾಗಿತ್ತು. ಯಾವಾಗ ಅಶ್ವಿನ್‌ರಿಗೆ ಬಿದ್ದಿದ್ದ ಮತಪತ್ರದ ಎರಡನೇ ಪ್ರಾಶಸ್ತ್ಯದ ಮತಗಳು ರಾಮಚಂದ್ರ ಗೌಡರಿಗೆ ವರ್ಗಾವಣೆಯಾದವೊ, ಆಗಲೇ ಅಲ್ಲಿಯತನಕ ಎರಡನೇ ಸ್ಥಾನದಲ್ಲಿದ್ದ ರಾಮಚಂದ್ರ ಗೌಡ ಮೊದಲ ಸ್ಥಾನಕ್ಕೆ ಬಂದು ಗೆದ್ದಿದ್ದು. (ರಾಮಚಂದ್ರ ಗೌಡರಿಗೆ ಬಿದ್ದಿರುವ ಎರಡನೇ ಪ್ರಾಶಸ್ತ್ಯದ ಮತಗಳು ಸುಮಾರು ಎರಡು ಸಾವಿರ.)

ಇದು ಏನನ್ನು ಸೂಚಿಸುತ್ತದೆ? ಭ್ರಷ್ಟಾಚಾರದ ವಿರುದ್ಧದ ಮತಗಳಲ್ಲಿಯೇ ಭ್ರಷ್ಟಾಚಾರದ ಪರ ಮತಗಳೂ ಇವೆ. ಇದು ನಮ್ಮ ಸಮಾಜದಲ್ಲಿರುವ ಆಷಾಢಭೂತಿತನ ಮತ್ತು ಅದರ ಒಡಲಲ್ಲೇ ಇರುವ ಬೆಂಕಿ. ಹೆಚ್ಚಿನ ಜನರಿಗೆ ಬಿಜೆಪಿ ಮತ್ತು ಲೋಕಸತ್ತಾ ಪ್ರತಿನಿಧಿಸುವ ಮೌಲ್ಯಗಳು ಬೇರೆಬೇರೆಯಾಗಿ ಕಾಣಿಸುತ್ತಿಲ್ಲ.

ಆದರೂ, ಇದು ಒಂದು ರೀತಿಯಲ್ಲಿ ಭವಿಷ್ಯದ ದಿನಗಳಲ್ಲಿ ಬೆಂಗಳೂರಿನ ರಾಜಕೀಯದ ನಡೆಯನ್ನು ಸೂಚಿಸುತ್ತಿದೆ. ಸುಮಾರು 4349  ಮತಗಳನ್ನು ಪಡೆದಿರುವ ಅಶ್ವಿನ್‌ರ ಸಾಧನೆ ಕಮ್ಮಿಯೇನೂ ಅಲ್ಲ. ಅದಕ್ಕಾಗಿ ಅವರು ಮತ್ತವರ ತಂಡ ಪಟ್ಟಿರುವ ಶ್ರಮ ಕಮ್ಮಿಯೇನೂ ಅಲ್ಲ. ಸಂತೋಷ್ ಹೆಗಡೆ, ಕಾರ್ಪೊರೇಟ್ ಜಗತ್ತಿನ ಕಿರಣ್ ಮಜುಂದಾರ್ ಷಾ, ಮೋಹನ್‌ದಾಸ್ ಪೈ, ಇತ್ಯಾದಿಗಳ ಬೆಂಬಲದ ಹೊರತಾಗಿಯೂ ಚುನಾವಣೆಗಾಗಿ ಕಾರ್ಯಕರ್ತರ ಸಂಘಟನೆ ಮತ್ತು ಪ್ರಚಾರ ಅಪಾರ ಪ್ರಮಾಣದ ಶ್ರಮ ಮತ್ತು ಹಣವನ್ನು ಬೇಡುತ್ತದೆ. ಮತದಾರರ ನಿರ್ಲಕ್ಷ್ಯ, ಜಾತಿ-ಮತ-ಪಂಗಡ-ಉದ್ಯೋಗ-ಹಣದ ಪ್ರಭಾವ, ಇತ್ಯಾದಿ ನೆಲೆಯಲ್ಲಿ ಒಡೆದು ಹೋಗಿರುವ ಮತದಾರರ ಹಿನ್ನೆಲೆಯಲ್ಲಿ ಯೋಚಿಸಿದರೆ ಅಶ್ವಿನ್ ಮಹೇಶ್ ಪವಾಡವನ್ನೇ ಮಾಡಿದ್ದಾರೆ ಎಂದೆನಿಸದಿರದು; ಅವರ ಮತದಾರರಲ್ಲಿ ಅಂತರ್ಗತವಾಗಿರುವ ಹಿಪಾಕ್ರಸಿಯ ಹೊರತಾಗಿಯೂ.

ಆದರೆ, ಇದೇ ಪವಾಡವನ್ನು ಅವರು ಮತ್ತವರ ಪಕ್ಷ ಮುಂಬರುವ ಚುನಾವಣೆಗಳಲ್ಲಿ ಮಾಡಬಲ್ಲರೇ ಎನ್ನುವುದು ಸಂಶಯಾಸ್ಪದ. ಈ ನೆಲದ ಭಾಷೆ ಮತ್ತು ಇಲ್ಲಿಯ ಸಾಮಾಜಿಕ ಸಂರಚನೆಯನ್ನು ಅರಿಯದೆ ಕೇವಲ ಇಂಗ್ಲಿಷ್ ಮೀಡಿಯಾಗೆ ಪ್ರಿಯವಾದ ಭಾಷೆಯಲ್ಲಿ ಮಾತನಾಡುತ್ತಾ ಹೊರಟರೆ ಅವರಿಗೆ ಅಂತಹ ಯಶಸ್ಸು ಸಾಧ್ಯವಾಗುವುದಿಲ್ಲ. ಇವರ ಸದ್ಯದ ಹೋರಾಟ ಮತ್ತು ಕಾರ್ಯಕ್ರಮಗಳು ಮೇಲ್ಮಧ್ಯಮ ವರ್ಗ ಮತ್ತು ಐಟಿ-ಬಿಟಿ ಉದ್ಯೋಗಿಗಳ ಸಮಾನ ಚಿಂತನೆಯಿಂದ ಆರಂಭವಾಗಿ ಅಲ್ಲಿಯೇ ಕೊನೆಯಾಗುತ್ತಿದೆ. ಎಲ್ಲಿಯವರೆಗೆ ಅವರ ಆಮದಾದ ನುಡಿಗಟ್ಟು ಸ್ಥಳೀಯವಾಗುವುದಿಲ್ಲವೋ ಅಲ್ಲಿಯತನಕ ಅವರ ಮಾತು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹೊಸದಾದ, ಸ್ಥಳೀಯವಾದ ನಾಯಕತ್ವ ಅಲ್ಲಿ ಹುಟ್ಟಿ ಬೆಳೆದು, ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯಕ್ಕೆ ಪ್ರತಿಕ್ರಿಯಿಸುತ್ತ ಹೋದರೆ ಲೋಕಸತ್ತಾಗೆ ಬೆಂಗಳೂರಿನಲ್ಲಿ ಇನ್ನೊಂದೈದತ್ತು ವರ್ಷಗಳಲ್ಲಿ ಗಟ್ಟಿಯಾದ ನೆಲೆ ಸಿಗಬಹುದು. ಆದರೆ ಅಲ್ಲಿಯವರೆಗೆ ಲೋಕಸತ್ತಾ ಹಲ್ಲುಕಚ್ಚಿ ದುಡಿಯುತ್ತದೆಯೇ ಎನ್ನುವುದು ಪ್ರಶ್ನೆ. ಜೊತೆಗೆ ತಮ್ಮಲ್ಲೇ ಇರುವ ಬಿಜೆಪಿ ಬೆಂಬಲಿಗರನ್ನು ಮತ್ತು ಕಾರ್ಪೊರೇಟ್ ಹಿತಾಸಕ್ತಿಯನ್ನು ಇವರು ಯಾವ ರೀತಿ ಹತೋಟಿಯಲ್ಲಿಟ್ಟಿರುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ.

ಇನ್ನು, ಕಮ್ಯುನಿಸ್ಟ್ ಪಕ್ಷದ ಪೋಟಿ. ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡದ ಹಲವು ಪ್ರಗತಿಪರ ಚಿಂತಕರ ಬೆಂಬಲದ ಹೊರತಾಗಿಯೂ ಎಡಪಂಥೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಲಕ್ಷ್ಮಿಯವರಿಗೆ ಬಿದ್ದಿರುವುದು ಅಶ್ವಿನ್ ಮಹೇಶರಿಗೆ ಬಿದ್ದಿರುವ ಓಟುಗಳಲ್ಲಿ ಶೇ. 12 ಮಾತ್ರ (536). ಕರ್ನಾಟಕದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಚುನಾವಣಾ ಸ್ಪರ್ಧೆ, ಸ್ಪರ್ಧೆಗಾಗಿ ಸ್ಪರ್ಧೆ ಎಂಬಂತಾಗಿದೆ. ಇಂತಹುದೊಂದು ಚುನಾವಣೆಯಲ್ಲಿ ಇಡೀ ರಾಜ್ಯದ ತಮ್ಮ ಸಂಘಟನೆಗಳ ಎಲ್ಲಾ ಬಲವನ್ನು ಬಳಸಿಕೊಂಡು ಚುನಾವಣೆ ಎದುರಿಸಬೇಕಿದ್ದ ಅಗತ್ಯತೆಯನ್ನು ಅವರು ಅರಿಯಲಾರದೆ ಹೋಗಿದ್ದಾರೆ. ಸಾರ್ವತ್ರಿಕ ಚುನಾವಣೆಯದ್ದಾದರೆ ಅದು ಬೇರೆ ವಿಷಯ. ಆದರೆ ಈ ಚುನಾವಣೆಯಲ್ಲಿ ಅವರು ಕನಿಷ್ಟ ತಮ್ಮ ರಾಜ್ಯವ್ಯಾಪಿ ಸಂಘಟನೆಗಳನ್ನು ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳಬೇಕಿತ್ತು. ತಮ್ಮೆಲ್ಲಾ ಶಕ್ತಿಯನ್ನು ಇಲ್ಲಿ ಕ್ರೋಢೀಕರಿಸಿಕೊಳ್ಳಬೇಕಿತ್ತು. ಇವರ ಸಭೆಗಳಲ್ಲಿ ಯಾವಾಗ ನೋಡಿದರೂ ಅದೇ Usual Suspects ಕಾಣಸಿಗುತ್ತಾರೆ. ಅದೇ ಮಾತುಗಳು ಪುನರಾವರ್ತನೆಯಾಗುತ್ತಿರುತ್ತವೆ. ಮತ್ತು, ಚುನಾವಣೆ ಬಂದಾಗ ಕರಪತ್ರ ಹೊರಡಿಸಲೂ ಹಿಂದೆಮುಂದೆ ನೋಡುತ್ತಾರೆ. (ಹಾಗೆ ನೋಡಿದರೆ ನನ್ನ ವಿಳಾಸಕ್ಕೆ ಮತ ಕೋರಿ ಬಂದದ್ದು ಮೂರೇ ಅಂಚೆಪತ್ರಗಳು: ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ರಾಮಚಂದ್ರ ಗೌಡರ ಪೇಯ್ಡ್ ಸಪ್ಲಿಮೆಂಟ್ ಕೇವಲ ಎರಡು ರೂ ಅಂಚೆಚೀಟಿ ಹೊತ್ತು ಬಂದಿತ್ತು. ಅದರ ಮೇಲೆ ಅಂಚೆಕಚೇರಿಯ ಸೀಲ್ ಸಹ ಇರಲಿಲ್ಲ. ಬಹುಶಃ ಯಾರಾದರೂ ಕೊರಿಯರ್‌ನವರು ಹಾಕಿ ಹೋದರೇನೊ. ಎರಡನೆಯದು ಜೆಡಿಎಸ್‌ನವರದು. ಮೂರನೆಯದು ಅಶ್ವಿನ್ ಮಹೇಶರಿಗೆ ಮತ ನೀಡಬೇಕೆಂದು ಕೋರಿ ನಾಗರಿಕರ ವೇದಿಕೆಯೊಂದು ಕಳುಹಿಸಿದ ಇನ್‌ಲ್ಯಾಂಡ್ ಲೆಟರ್.) ಇಷ್ಟೆಲ್ಲ ಪೂರ್ವಸಿದ್ದತೆಗಳಿಲ್ಲದ ಚಿಂತನೆ ಮತ್ತು ಪತ್ರ ಕಳುಹಿಸಲೂ ಆಗದಷ್ಟು ಆರ್ಥಿಕ ಬಡತನವಿದ್ದರೂ ಕಮ್ಯುನಿಸ್ಟರಿಗೆ ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸು. ಶಸ್ತ್ರಾಭ್ಯಾಸ ಮಾಡದೇಯೂ ಯುದ್ದವನ್ನು ಗೆದ್ದುಬಿಡುವ ಉಮೇದು. ಇವರ ಮಾತಿನ ಶೂರತ್ವ ಮತ್ತು ಸಿದ್ದತೆಗಳಿಲ್ಲದ ಸ್ಪರ್ಧೆ ಬರುಬರುತ್ತಾ ಆತ್ಮಹತ್ಯಾಕಾರಿಯಾಗುತ್ತದೆ ಎನ್ನುವುದನ್ನು ಕಮ್ಯುನಿಸ್ಟರು ಆದಷ್ಟು ಬೇಗ ಅರಿಯಬೇಕು. ಇವರನ್ನು ಬೆಂಬಲಿಸುವವರಿಗೂ ಇದು ಅಪ್ರಿಯವಾದ ಸಂದರ್ಭ. ಬೆಂಗಳೂರಿನಂತಹ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುವ ಸ್ಥಳದಲ್ಲಿಯೇ ಈಗ ತಾನೆ ಕಣ್ಣುಬಿಡುತ್ತಿರುವ ಲೋಕಸತ್ತಾದ ಅಭ್ಯರ್ಥಿ ಗಳಿಸುವ ಮತಗಳಲ್ಲಿ ಶೇ. 12ರನ್ನೂ ಮೀರಲಾರದಷ್ಟು ಇವರು ಗಳಿಸುತ್ತಾರೆ ಎಂದರೆ ಇದು ಅವರು ನಿರ್ವಂಚನೆಯಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ. ತಮ್ಮ ರಾಜಕೀಯ ಹೋರಾಟದ ಮಂತ್ರತಂತ್ರಗಳನ್ನು ತುಲನೆಗೆ ಹಚ್ಚಬೇಕಾದ ಸಂದರ್ಭ.

ಕಳೆದೆರಡು ವರ್ಷಗಳಿಂದ ಭ್ರಷ್ಟಾಚಾರ ಜನರ ನಡುವೆ ಚರ್ಚೆಗೆ ಬಂದಿತ್ತು. ಬಹಳಷ್ಟು ಅಮಾಯಕರು ದೇಶ ಇನ್ನೇನು ಭ್ರಷ್ಟಾಚಾರದಿಂದ ಮುಕ್ತವಾಗಿಬಿಟ್ಟಿತು ಎಂದೇ ಭಾವಿಸಿದ್ದರು. ಆದರೆ ದೇಶದಾದ್ಯಂತ ನಡೆಯುತ್ತಿರುವ ಚುನಾವಣೆಗಳು ಪ್ರತಿಸಾರಿಯೂ ಆ ಅಮಾಯಕರ ಆಶಾವಾದ ಎಷ್ಟು ಹುಸಿಯಾದದ್ದು ಎಂದು ನಿರೂಪಿಸುತ್ತಲೇ ಬರುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿಯೇ ಇರುವ ದ್ವಂದ್ವಗಳು. ಎಲ್ಲಿಯವರೆಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವವರು ಭ್ರಷ್ಟಾಚಾರಿಗಳ ಜೊತೆಗೂ ಸಂಬಂಧ ಇಟ್ಟುಕೊಂಡಿರುತ್ತಾರೊ (ಅಶ್ವಿನ್ ಮಹೇಶ್‌ಗೊಂದು ಓಟು, ರಾಮಚಂದ್ರ ಗೌಡರಿಗೂ ಒಂದು ಓಟು ತರದಲ್ಲಿ) ಅಲ್ಲಿಯವರೆಗೆ ಈ ಸಮಾಜ ಎಚ್ಚತ್ತಿಲ್ಲ ಎಂದೇ ಹೇಳಬೇಕು. ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಹೋರಾಟ ಸಮಾಜಕ್ಕೆ ಈಗ ಬೇಕಿಲ್ಲ. ಅದಕ್ಕಿನ್ನೂ ಸಮಯ ಬಂದಿಲ್ಲ. ಇನ್ನೂ ಸಾಕಷ್ಟು ಅನಾಚಾರಗಳು, ಅನ್ಯಾಯಗಳು, ಅಪಮೌಲ್ಯಗಳು ಆಗಬೇಕಿದೆ. ವರ್ತಮಾನದ ದುರಂತ ಇದು.

ವೀರಣ್ಣ ಮಡಿವಾಳರಿಗೆ ಅಭಿನಂದನೆ ಮತ್ತು ಕವಿಗೋಷ್ಟಿ

ಸ್ನೇಹಿತರೆ,

ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪುರಸ್ಕೃತ ಕವಿ ವೀರಣ್ಣ ಮಡಿವಾಳರಿಗೆ ಇದೇ ಭಾನುವಾರದಂದು (ಜೂನ್ 17, 2012) ಬೆಂಗಳೂರಿನಲ್ಲಿ ಅಭಿನಂದನೆ ಕಾರ್ಯಕ್ರಮವೊಂದನ್ನು “ಸಂವಹನ”ದ ಗೆಳೆಯರು ಹಮ್ಮಿಕೊಂಡಿದ್ದಾರೆ.  ಆ ಸಂದರ್ಭದಲ್ಲಿ ನಟರಾಜ್ ಹುಳಿಯಾರ್, ದಿನೇಶ್ ಅಮೀನ್‌ಮಟ್ಟು, ಸುಬ್ಬು ಹೊಲೆಯಾರ್, ಮತ್ತು ನಾನು ಭಾಗವಹಿಸಲಿದ್ದೇವೆ. ಅಭಿನಂದನೆ ಕಾರ್ಯಕ್ರಮದ ನಂತರ ಸುಮಾರು 20 ಕವಿಗಳ ಕವಿಗೋಷ್ಟಿ ಇದೆ. ಸ್ಥಳ ಮತ್ತು ಸಮಯದ ವಿವರಗಳು ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ತಾವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವರ್ತಮಾನ.ಕಾಮ್‌ನ ಪರವಾಗಿ ವಿನಂತಿಸುತ್ತೇನೆ.

-ರವಿ ಕೃಷ್ಣಾರೆಡ್ಡಿ


ಚೆ – ಸಮಾನತೆ ಬಯಸುವವರ ಜೊತೆಗಾರ

 – ಕೆ.ಮಹಾಂತೇಶ

ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿ, ಇನ್ನೆಲ್ಲೋ ಬೆಳೆಯುತ್ತಾ, ಸಮಾನತೆಯ ಬೆಳೆಯನ್ನು ಬೆಳೆದು, ಮತ್ತೆಲ್ಲೋ ಕ್ರಾಂತಿ ಬೀಜ ಬಿತ್ತುವ ಕನಸು ಕಾಣುತ್ತಾ ಸಾಮ್ರಾಜ್ಯಶಾಹಿ ಹೆಣೆದ ಪಿತೂರಿಗೆ ಬಲಿಯಾದ ಹೋರಾಟಗಾರ ಆರ್ನೆಸ್ಟೊ ಚೆಗೆವಾರ ಅಥವ ಚೆ ಜಗತ್ತಿನಲ್ಲೆಡೆ ಹೋರಾಟ ಮನೋಭಾವದ ಜನರನ್ನು ಪ್ರಭಾವಿಸಿರುವ ರೀತಿ ಅಸಾಮಾನ್ಯವಾದದ್ದು.  ಅರ್ಜೆಂಟೈನಾದಲ್ಲಿ 1928 ರ ಜೂನ್ 14 ರಂದು ಜನಿಸಿದ ಆರ್ನೆಸ್ಟೊ ಚೆಗೆವಾರ ಹುಟ್ಟಿನಿಂದಲೇ ಆಸ್ತಮರೋಗಿ. ಹಾಗಿದ್ದೂ, ಚೆಗೆವಾರನೊಳೊಗೊಬ್ಬ ಡಾಕ್ಟರ್ ಇದ್ದ, ಬರಹಗಾರನಿದ್ದ, ಬುದ್ದಿಜೀವಿ ಇದ್ದ, ಸಾಹಸಗಾರನಿದ್ದ, ರಾಜತಾಂತ್ರಿಕನಿದ್ದ, ಸಮಾನತೆಗಾಗಿ ಹಾತೊರೆಯುವ ಕ್ರಾಂತಿಕಾರಿ ಯೋಧ, ಗೆರಿಲ್ಲಾ ಕಮಾಂಡರ್, ಹೀಗೆ ಎಲ್ಲವೂ ಅಡಗಿಕುಳಿತ್ತಿದ್ದ.

ಹುಟ್ಟಿದ್ದು ಲ್ಯಾಟೀನ್ ಅಮೇರಿಕಾದ ಅರ್ಜೆಂಟೈನಾವಾದರೂ.. ನಂತರ. ಗ್ವಾಟೆಮಾಲದಿಂದ ಆರಂಭಗೊಳ್ಳುವ ಚೆಗೆವಾರನ ಪಯಣ ಬೋರಿಸ್ ಐರಿಸ್, ಮೆಕ್ಸಿಕೊ, ಕ್ಯೂಬಾ ದಾಟಿ ನಂತರ ಕಾಂಗೋ, ಆಫ್ರಿಕಾ ತಲುಪಿ ಅಂತಿಮವಾಗಿ ಬೋಲಿವಿಯಾದಲ್ಲಿ ಕೊನೆಗೊಳ್ಳುವ ತನಕ ನಿರಂತರ ದುಡಿತ. ಓದಿದ್ದು ವೈದ್ಯಕೀಯವಾದರೂ ಚೆಗುವಾರನ ಮನಸು ಸದಾ ಹಾರುವ ಕುದುರೆ.

ವೈದ್ಯಕೀಯ ಶಿಕ್ಷಣ ಮುಗಿಯುತ್ತಿದ್ದಂತೆ ಚೆ ಇಡೀ ಲ್ಯಾಟಿನ್ ಅಮೇರಿಕಾವನ್ನೆ ಸುತ್ತಾಡಲು ತನ್ನ ಮೋಟರ್ ಬೈಕ್ ಏರಿಯೇ ಬಿಟ್ಟ! ಆಗಲೇ ಅಲ್ಲಿನ ಬಡತನದ ಕ್ರೂರ ದರ್ಶನ, ಆರ್ಥಿಕ ಅಸಮಾನತೆ, ವಸಹಾತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳು ಮತ್ತವರ ಏಜೆಂಟರು ನಡೆಸುತ್ತಿದ್ದ  ಕ್ರೂರ ದಬ್ಬಾಳಕೆಗಳು ಚೆಗೆವಾರನ ಮನಸಿನೊಳಗೆ ಬೆಂಕಿಯ ಜ್ವಾಲೆಯನ್ನೆಬ್ಬಿಸಿದವು. ಹೀಗಾಗಿಯೇ ಲ್ಯಾಟೀನ್ ಅಮೇರಿಕಾದ ತನ್ನ ತಿರುಗಾಟದಿಂದ ವಾಪಸ್ಸಾದ ಚೆ, ಅಲ್ಲಿಂದ ಅಮೇರಿಕಾದ ಕೈಗೊಂಬೆಯಾಗಿ ಜನರ ಶೋಷಣೆಯಲ್ಲಿ ನಿರತನಾಗಿದ್ದ ಗ್ವಾಟೆಮಾಲದ ಸರ್ವಾಧಿಕಾರಿ ವಿರುದ್ದ ನಂತರ ಮೆಕ್ಸಿಕೊಗಳಲ್ಲಿ ಹೋರಾಟಗಳನ್ನು ನಡೆಸುತ್ತಾ ಬಂದ. ಆಗ ಮೆಕ್ಸಿಕೊದಲ್ಲಿ ಭೂಗತರಾಗಿದ್ದುಕೊಂಡೆ ಅಮೇರಿಕಾದ ಸಿಐಎ ಏಜೆಂಟನಾಗಿ ಅಧಿಕಾರ ನಡೆಸುತ್ತಿದ್ದ ಕ್ಯೂಬಾದ ಬಾಟಿಸ್ಟ್ ಆಡಳಿತ ಕೊನೆಗಾಣಿಸಲು ಹೋರಾಟನಿರತರಾಗಿದ್ದ ಫಿಡೆಲ್‌ ಹಾಗೂ ರಾಹುಲ್ ಕ್ಯಾಸ್ಟ್ರೊರನ್ನು ಚೆ ಕೂಡಿಕೊಂಡ.

ನನಸಾದ ಕ್ರಾಂತಿಯ ಕನಸು

ಲ್ಯಾಟೀನ್ ಅಮೇರಿಕಾದಲ್ಲಿ ಸಾಮ್ರಾಜ್ಯಶಾಹಿಯ ಕ್ರೂರಮುಖವನ್ನು ತನ್ನ ತಿರುಗಾಟದಲ್ಲಿ ಕಂಡಿದ್ದ ಚೆಗುವಾರನ ಮನಸು ಸದಾ ಕ್ರಾಂತಿಗಾಗಿ ಹಂಬಲಿಸುತ್ತಿತ್ತು. ಹಾಗಾಗಿ ಚೆ “ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆಯಲಿ ಅದನ್ನು ನೀನು ಪ್ರತಿಭಟಿಸುವೆಯಾದರೆ ನೀನು ನನ್ನ ಸಂಗಾತಿ” ಎಂದು ಕರೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಫಿಡೆಲ್‌ ಕ್ಯಾಸ್ಟ್ರೋ ಹಾಗೂ ರಾಹುಲ್ ಕ್ಯಾಸ್ಟ್ರೊ ಮತ್ತಿತರೆ ಸಂಗಾತಿಗಳು ಕ್ಯೂಬಾವನ್ನು ಸರ್ವಾಧಿಕಾರಿ ಬಾಟಿಸ್ಟ್‌ನಿಂದ ವಿಮೋಚನೆಗೊಳಿಸಲು ಯುದ್ದವನ್ನೇ ಸಾರಿದ್ದರು. ಅವರೊಂದಿಗೆ ಸಿಯೆರ್ರಾ ಮೆಸ್ತಾ ಅರಣ್ಯ ಸೇರಿದ ಚೆಗೆವಾರ ಕ್ಯೂಬಾ ವಿಮೋಚನಾ ಪಡೆಯ ಕಮಾಂಡರ್ ಆಗಿ ಸತತ ಎರಡು ವರ್ಷಗಳ ಕಾಲ ಬಾಟಿಸ್ಟ್‌ನ ಸೈನ್ಯವನ್ನು ಎದುರಿಸಿ ಅಪಾರ ಕಷ್ಟಗಳನ್ನು ಅನುಭವಿಸಿದರು. ನಂತರ ಅಂತಿಮವಾಗಿ ’ಗಾನ್ಮ’ ಎನ್ನುವ ನೌಕೆಯೊಂದಿಗೆ ತನ್ನ ಯಾನ ಆರಂಭಿಸಿ ರಾಜಧಾನಿ ’ಹವನಾ’ ತಲುಪುತ್ತಿದ್ದಂತೆ ಬಾಟಿಸ್ಟನ ವಿರುದ್ದ ಹೋರಾಡುತ್ತಿದ್ದ ಜನರಿಂದ ಫಿಡೆಲ್‌, ರಾಹುಲ್ ಜೊತೆಗೆ ಚೆಗೂ ವೀರೋಚಿತ ಸ್ವಾಗತ ದೊರಕಿತು. ಅಂತಿಮವಾಗಿ 1959 ಜನವರಿ 1 ರಂದು ಕ್ಯೂಬಾ ವಿಮೋಚನೆಗೊಂಡು ಸಮಾಜವಾದಕ್ಕೆ ತನ್ನನ್ನು ಅರ್ಪಿಸಿಕೊಂಡಿತು.

ಕ್ಯೂಬಾದ ನಾಗರಿಕತ್ವ…ವಿದೇಶಿ ತಿರುಗಾಟ..

ಅರ್ಜೆಂಟೈನಾದಲ್ಲಿ ಹುಟ್ಟಿ ಬೋರಿಸ್ ಐರಿಸ್‌ನಲ್ಲಿ ವೈದ್ಯಕೀಯ ಪದವಿ ಪಡೆದು ಇಡೀ ಲ್ಯಾಟೀನ್ ಅಮೇರಿಕಾವನ್ನೇ ಮೋಟರ್‌ಬೈಕ್‌ನಲ್ಲಿ ಎರಡು ಸುತ್ತು ಹಾಕಿದ (ಮೊದಲನೆ ಬಾರಿ ಕ್ರಮಿಸಿದ ದಾರಿ 4500 ಕಿ.ಮೀ., ಎರಡನೆ ಬಾರಿ ಸುತ್ತಾಡಿದ ದಾರಿ 8000 ಕಿ.ಮೀ.) ಹಾಗೂ ಗ್ವಾಟೆಮಾಲ ಹಾಗೂ ಮೆಕ್ಸಿಕೊಗಳಲ್ಲಿ ನಡೆದ ಚಳವಳಿಗಳಲ್ಲಿ ಪಾಲ್ಗೊಂಡ ಯುವ ಚೆಗುವಾರನಿಗೆ ಅಂತಿಮವಾಗಿ ತಾನು ಕಂಡ ಕ್ರಾಂತಿಯ ಕನಸನ್ನು ಕ್ಯೂಬಾ ಮಣ್ಣಿನಲ್ಲಿ ನನಸಾಗಿಸಲು ಸಾಧ್ಯವಾದದ್ದು ಒಂದು ವಿಚಿತ್ರವೇ. ಆದರೆ ಬಾಪಿಸ್ಟನ ದುರಾಡಳಿತವನ್ನು ಕಿತ್ತೊಗೆಯಲು ತನ್ನನ್ನೇ ಸಮರ್ಪಿಸಿಕೊಂಡ ಚೆಗೆವಾರನನ್ನು ಕ್ಯೂಬಾ ಮತ್ತು ಆ ದೇಶದ ಜನತೆ ಮಾತ್ರ ಕೈ ಬಿಡಲಿಲ್ಲ. ಕ್ರಾಂತಿಯ ನಂತರದ ಕೆಲವೇ ದಿನಗಳಲ್ಲಿ ಚೆ ಮತ್ತು ಆತನ ಕುಟುಂಬಕ್ಕೆ ತನ್ನ ದೇಶದ ಪೌರತ್ವವನ್ನು ನೀಡಿ ಕ್ಯೂಬಾಕ್ಕೆ ಬರಮಾಡಿಕೊಂಡಿತು. ಮಾತ್ರವಲ್ಲ ಅವರ ಕುಟುಂಬವನ್ನು ಸಾಕುವ ಜವಾಬ್ದಾರಿಯನ್ನು ಸ್ವತ: ಕ್ಯೂಬಾದ ಹೊಸ ಸರ್ಕಾರ ವಹಿಸಿಕೊಂಡಿತು. ನಂತರ ಫಿಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಚೆಗೆವಾರ ಆರ್ಥಿಕ ಮತ್ತು ಕೈಗಾರಿಕಾ ಸಚಿವರಾಗಿ ಅಲ್ಲದೆ ಕ್ಯೂಬಾ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ನೇಮಕವಾದರು.

ಬಾಪಿಸ್ಟನ ದುರಾಡಳಿತವು ಕ್ಯೂಬಾದ ಆರ್ಥಿಕತೆಯನ್ನು ನಾಶಮಾಡಿತ್ತು. ಇಂತಹ ಸನ್ನಿವೇಶದಲ್ಲಿ ಸಂಕಷ್ಟದಲ್ಲಿದ್ದ ಕ್ಯೂಬಾ ಜನರಿಗೆ ಶಿಕ್ಷಣ, ಉದ್ಯೋಗ, ಆಹಾರ, ವಸತಿಯಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ತುರ್ತು ಕರ್ತವ್ಯಗಳು ಫಿಡೆಲ್ ಸರ್ಕಾರದ ಮುಂದಿದ್ದವು. ಬಹುಶ: ಆ ಸಂಕಷ್ಟದ ದಿನಗಳಲ್ಲಿ ಫಿಡಲ್‌ಗೆ ಚೆ ನಿಜವಾದ ಸಂಗಾತಿಯಾಗಿ ಕೆಲಸ ಮಾಡಿದರು. ಕ್ಯೂಬಾದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಅವರು ಅಂದಿನ ಸೋವಿಯತ್ ರಷ್ಯಾಕ್ಕೆ ಹಲವು ಸಲ ಭೇಟಿ ನೀಡಿ ಕ್ಯೂಬಾಕ್ಕೆ ಅಗತ್ಯವಿದ್ದ ವಿಜ್ಞಾನ ಹಾಗೂ ತಂತ್ರಜ್ಞಾನದ ನೆರವನ್ನು ಪಡೆದರು. ಅಲ್ಲದೆ ಕ್ಯೂಬಾದಲ್ಲಿ ವಿಪುಲವಾಗಿ ಬೆಳೆಯುತ್ತಿದ್ದ ಅತ್ಯತ್ತಮ ಸಿಹಿಗುಣ ಹೊಂದಿದ ಕಬ್ಬಿನ ಸಕ್ಕರೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಯೋರೋಪ್, ಏಷ್ಯಾ ಹಾಗೂ ಅಫ್ರಿಕಾದ ಹಲವು ದೇಶಗಳಲ್ಲಿ ಸಂಚರಿಸಿದರು. ಆ ಮೂಲಕ ದೇಶದ ವಿದೇಶಿ ವಿನಿಮಯವನ್ನು ಹೆಚ್ಚಿಸಿದರು. ಆದರೆ, ಬಾಪಿಸ್ಟನ ಆಡಳಿದಿಂದ ಕ್ಯೂಬಾವನ್ನು ಲೂಟಿಹೊಡೆದ ಅಮೇರಿಕಾ ಮಾತ್ರ ಕ್ರಾಂತಿಯಾಗಿ ಫಿಡಲ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ಯೂಬಾದ ಮೇಲೆ ಎಲ್ಲಾ ರೀತಿಯ ನಿರ್ಬಂಧಗಳನ್ನು ವಿಧಿಸಿತು. ವಿಶ್ವಸಂಸ್ಥೆಯಲ್ಲಿ ಸ್ವತ: ಚೆಗೆವಾರ ಕ್ಯೂಬಾ ಸೇರಿದಂತೆ ಲ್ಯಾಟೀನ್ ಅಮೆರಿಕಾದ ವಿವಧ ದೇಶಗಳಲ್ಲಿ ಹೇಗೆ ಅಮೇರಿಕನ್ ಸಾಮ್ರಾಜ್ಯಶಾಹಿ ತನ್ನ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನಡೆಸುತ್ತಿದ್ದ ಸುಲಿಗೆಕೋರತವನ್ನು  ಅಂಕಿ ಸಂಖ್ಯೆಯ ಮೂಲಕ ಬಯಲು ಮಾಡಿ ಜಗತ್ತಿನ ಇತರೆ ದೇಶಗಳ ಬೆಂಬಲವನ್ನು ಕ್ಯೂಬಾದ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಬಹುಶ: ಕ್ರಾಂತಿಯಾದ ಎರಡೇ ವರ್ಷದಲ್ಲಿ ಕ್ಯೂಬಾದಲ್ಲಿ ಪ್ರತಿಯೊಬ್ಬ ಅನಕ್ಷರಸ್ಥರನ್ನು ಸಂಪೂರ್ಣ ಅಕ್ಷರಸ್ಥರನ್ನಾಗಿ ಮಾಡಿದ್ದು ಹಾಗೂ ಕೇಲವೇ ವರ್ಷಗಳಲ್ಲಿ ಕ್ಯೂಬಾಕ್ಕೆ “ಜಗತ್ತಿನ ಸಕ್ಕರೆ ಬಟ್ಟಲು” ಎಂಬ ಖ್ಯಾತಿ ಬರುವಂತೆ ಮಾಡುವಲ್ಲಿ ಚೆ ನಿರ್ಣಾಯಕ ಪಾತ್ರವಸಿಹಿದರು. ಅದಕ್ಕಾಗಿ ತನ್ನ ದೇಹ-ಮನಸನ್ನು ದಂಡಿಸಿದರು.

ತೀರಲಿಲ್ಲ ಕ್ರಾಂತಿಯ ದಾಹ..

ಹೀಗೆ, ಒಂದೆಡೆ ಸನಿಹದಲ್ಲೇ ಅಮೇರಿಕನ್ ಸಾಮ್ರಾಜ್ಯಶಾಹಿ ನೀಡುತ್ತಿದ್ದ ನಿತ್ಯ ಕಿರುಕುಳಗಳ ಮಧ್ಯೆಯೂ ಜಗದಗಲ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಕಡೆ ಚೆ ನ ಕ್ರಾಂತಿಕಾರಿ ಮನಸ್ಸು ತೀವ್ರ ಶೋಷಣೆಗೊಳಗಾಗಿದ್ದ ಆಫ್ರಿಕಾದ ಕಾಂಗೋ ಹಾಗೂ ಲ್ಯಾಟೀನ್ ಅಮೇರಿಕಾದ ಬೊಲಿವಿಯಾದ ಜನರತ್ತ ಮುಖಮಾಡಿತ್ತು. 1955 ಸುಮಾರಿನಲ್ಲಿ ಚೆ ಇದ್ದಕ್ಕಿದ್ದಂತೆ ಕ್ಯೂಬಾದಿಂದ ಕೆಲದಿನಗಳ ಕಾಲ ನಾಪತ್ತೆಯಾಗಿದ್ದರು. ಅವರು ಎಲ್ಲಿದ್ದರೂ ಎಂಬುದು ಸ್ವತ: ಫಿಡೆಲ್ ಕ್ಯಾಸ್ಟ್ರೋಗೂ ಗೊತ್ತಿರಲಿಲ್ಲ. ಸಾಮ್ರಾಜ್ಯಶಾಹಿ ಮಾಧ್ಯಮಗಳೆಲ್ಲಾ ಚೆ ಸತ್ತೆ ಹೋಗಿದ್ದಾರೆಂಬ ಪ್ರಚಾರ ನಡೆಸಿದರು. ಆಗ ಕ್ಯಾಸ್ಟ್ರೋ ನೀಡಿದ ಉತ್ತರ ಹೀಗಿತ್ತು: “ಚೆಗೆವಾರ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ ಎಲ್ಲಿ ಜನ ಅವರ ಸಹಾಯ ಬಯಸುತ್ತಿದ್ದಾರೋ ಅಲ್ಲಿ ಚೆ ಖಂಡಿತಾ ಇರುತ್ತಾರೆ.” ಇದಾದ ಕೆಲವೆ ದಿನಗಳಲ್ಲಿ ಚೆ ಕ್ಯೂಬಾಕ್ಕೆ ವಾಪಸ್ಸಾದರು. ಒಂದು ಮೂಲದ ಪ್ರಕಾರ ಅವರು ಕಾಂಗೋದಲ್ಲಿದ್ದರು ಎನ್ನಲಾಗಿತ್ತು.

ಚೆ ಕ್ಯೂಬಾಕ್ಕೆ ವಾಪಸ್ಸಾದ ಮೇಲೂ ಒಂದು ರೀತಿಯಲ್ಲಿ ದೈಹಿಕವಾಗಿ ಮಾತ್ರವೇ ಅಲ್ಲಿದ್ದರು. ಕ್ಯೂಬಾದಲ್ಲಿದ್ದರೂ ಅವರು ಯಾರೊಂದಿಗೂ ಕಾಣಿಸಿಕೊಳ್ಳದೆ ಒಂದು ರೀತಿಯಲ್ಲಿ ಭೂಗತರಾಗೇ ಇದ್ದರು. ಅವರ ಇಡೀ ಮನಸ್ಸೆಲ್ಲಾ ಬೋಲಿವಿಯಾದ ಕಡೆ ಅಲ್ಲಿ ಮುಂಬರುವ ದಿನಗಳಲ್ಲಿ ನಡೆಸಬೇಕಿದ್ದ ಗೆರಿಲ್ಲಾಯುದ್ದದ ಸುತ್ತನೇ ತಿರುಗುತ್ತಿತ್ತು. ಅಂತಿಮವಾಗಿ ಶೋಷಣೆಯಿಂದ ಮುಕ್ತವಾದ ಸುಂದರ ಸಮಾಜ ಈ ಜಗದಗಲ ಸೃಷ್ಠಿಯಾಗಬೇಕೆಂಬ ಹಂಬಲ ಮತ್ತು ದೃಢ ವಿಶ್ವಾಸದೊಂದಿಗೆ 1965 ಏಪ್ರಿಲ್ ನಲ್ಲಿ ಕ್ಯೂಬಾವನ್ನು ತೊರೆದರು. ಮತ್ತು, ಮತ್ತೊಂದು ಕ್ರಾಂತಿಕಾರಿ ಕರ್ತವ್ಯದ ಕನಸಿನೊಂದಿಗೆ ಬೊಲಿವಿಯದತ್ತ ಹೆಜ್ಜೆ ಹಾಕಿದರು.

ವಿದಾಯದ ಪತ್ರಗಳು

ಚೆ ಕ್ಯೂಬಾದಿಂದ ಹೊರಡುವಾಗ ಅವರು ತನ್ನ ಕ್ರಾಂತಿಕಾರಿ ಹೋರಾಟದ ಹಾಗೂ ಜೀವದ ಗೆಳೆಯ ಫಿಡಲ್ ಕ್ಯಾಸ್ಟ್ರೋಗೆ ಹಾಗೂ ತನ್ನ ಪ್ರೀತಿಯ ಮಕ್ಕಳಿಗೆ ಎರಡು ವಿದಾಯದ ಪತ್ರಗಳನ್ನು ಬರೆದರು. ಫಿಡಲ್‌‌ಗೆ ಬರೆದ ಪತ್ರದಲ್ಲಿ ಅವರ ಜೊತೆಗಿನ ಒಡನಾಟದ ದಿನಗಳು, ಸಿಯೆರ್ರಾ ಮೇಸ್ತಾ ಕಾಡಿನಲ್ಲಿ ಕ್ರಾಂತಿಗೆ ಮುನ್ನ ಜೊತೆಯಾಗಿ ಕಳೆದ, ಹತ್ತಾರು ವಿಷಯವಾಗಿ ಚರ್ಚಿಸಿದ ನಿದ್ರೆಯಿಲ್ಲದೆ ಕಳೆದ ಆ ದಿನಗಳ ಬಗ್ಗೆ, ಬಡದೇಶಗಳ ಮೇಲೆ ಸಾಮ್ರಾಜ್ಯಶಾಹಿ ನಡೆಸುತ್ತಿರುವ ಶೋಷಣೆಯನ್ನು ಕೊನೆಗಾಣಿಸಲು ನಡೆಸಬೇಕಾದ ಹೋರಾಟಗಳು ಬಗ್ಗೆ ಹಾಗೂ ಕ್ಯೂಬಾದಲ್ಲಿನ ಸರ್ಕಾರವನ್ನು ಮುನ್ನಡೆಸುವ ಕುರಿತು ಹಲವು ವಿಚಾರಗಳನ್ನು ಚೆ ಚರ್ಚಿಸುತ್ತಾರೆ. ಇನ್ನೂ ಮಕ್ಕಳಿಗೆ ಅದರಲ್ಲೂ ಹಿರಿ ಮಗಳಾದ ಹಿಲ್ಡಾನಾಗೆ ಸುಮಾರು ಮೂರು ಪತ್ರಗಳನ್ನು ಚೆ ಬರೆಯುತ್ತಾರೆ. ಅದರಲ್ಲಿ ಪತ್ರದಲ್ಲಿ ಯಾವ ಮಕ್ಕಳದ್ದು ಯಾವ ಸ್ವಾಭಾವವೆಂದು ತಿಳಿದಿದ್ದ ಚೆ ಅದಕ್ಕೆ ಪೂರಕವಾದ ಸಲಹೆಗಳನ್ನು ನೀಡುತ್ತಾರೆ. ಅಲ್ಲದೆ ದೊಡ್ಡ ಮಗಳಾಗಿ ಹಿಲ್ಡಾನಾ ಮಾಡಬೇಕಾದ ಜವಬ್ದಾರಿಗಳ ಬಗ್ಗೆ, ಅವರು ಹೇಗೆ ಬದುಕಬೇಕು, ಪರಸ್ಪರ ಬೆಳೆದು ದೊಡ್ಡ ಕ್ರಾಂತಿಕಾರಿಗಳಾಗಬೇಕು, ಅದಕ್ಕಾಗಿ ಉತ್ತಮವಾದ ಹಾಗೂ ಸಮಾಜ ಬದಲಾವಣೆಗೆ ಪೂರಕವಾದ ತಾಂತ್ರಿಕ ಕೌಶಲ್ಯ ಇರುವ ಶಿಕ್ಷಣ ಪಡೆಯಬೇಕು, ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಬೊಲಿವಿಯಾದಲ್ಲಿ ಅವರು ಶತ್ರುಗಳ ವಿರುದ್ದ ನಡೆಸುತ್ತಿರುವ  ಹೋರಾಟ, ಅದು ಕ್ರಮಿಸಬೇಕಾದ ದಾರಿ ಹಾಗೂ ತಂದೆಯ ಕ್ರಾಂತಿಕಾರಿ ಆದರ್ಶಗಳನ್ನು ಗೌರವಿಸುವ ಮತ್ತು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸುವ ಕುರಿತು, ಮನೆಯಲ್ಲಿ ತಾಯಿಗೆ ಶಾಲೆಯಲ್ಲಿ ಶಿಕ್ಷಕರಿಗೆ ಗೌರವ ನೀಡುವುದು ಹಾಗೂ ಸಂಗಾತಿ ಭಾವ ಬೆಳೆಸಿಕೊಳ್ಳುವುದು, ಮಾತ್ರವಲ್ಲ ಮಗಳು ಬೆಳೆದು ದೊಡ್ಡವಳಾಗುತ್ತಿರುವುದು, ಹೀಗೆ ಹಲವು ವಿಷಯಗಳ ಬಗ್ಗೆ ಬರೆಯುತ್ತಾರೆ.

ಬೋಲಿವಿಯಾದಲ್ಲಿ ವಿಮೋಚನಾ ಹೋರಾಟ

ನಂತರ ಬೋಲಿವಿಯಾದ ಸರ್ವಾಧಿಕಾರಿ ಸಿಐಎ ಕೈಗೊಂಬೆ ಸರ್ಕಾರದ ವಿರುದ್ದದ ಹೋರಾಟವನ್ನು ಬೆಳೆಸುವಲ್ಲಿ ಚೆ ಇಡೀ ತನ್ನ ಸಮಯವನ್ನೆಲ್ಲಾ ಮಿಸಲಿಟ್ಟು ಅಪಾರವಾದ ಕಷ್ಟಗಳನ್ನು ಎದುರಿಸಿದರು. ಎಷ್ಟೋ ಸಂದರ್ಭದಲ್ಲಿ ಅಹಾರ, ನೀರಿಗಾಗಿ ಆ ಕಾಡಿನ ನಡುವೆ ಪರಿತಪಿಸಿ ಕೊನಗೆ ಸವಾರಿಗಾಗಿ ಜೊತೆಗಿದ್ದ ಕುದುರೆಯನ್ನೇ ಆಹಾರವಾಗಿ ತಿನ್ನಬೇಕಾದ ಪರಿಸ್ಥಿತಿಗಳನ್ನು ಚೆ ಎದುರಿಸಿದರು. ಆದಾಗ್ಯೂ ಬೋಲಿವಿಯಾ ಸರ್ಕಾರದ ಸೇನೆ ಹಾಗೂ ಆಡಳಿತದ ವಿರುದ್ದ ಎಡಬಿಡದೆ ಹೋರಾಟಗಳನ್ನು ನಡೆಸುತ್ತಲೇ ಮುನ್ನೆಡೆದರು. ಕಾಡು ಮೇಡುಗಳನ್ನು ದಾಟುತ್ತಾ ಜನರನ್ನು ಸಂಘಟಿಸಿತ್ತಾ ಅವರಿಗೆ ಸಮಯ ಸಿಕ್ಕಾಗಲೆಲ್ಲಾ ಅಕ್ಷರಾಭ್ಯಾಸ ಮಾಡಿಸುತ್ತಾ, ಅವರ ತಿಳುವಳಿಕೆ ಹೆಚ್ಚಿಸುತ್ತಾ, ಅವರ ಜೊತೆ ಸಂವಾದಿಸುತ್ತಾ,  ಆ ಬಡವರ ಮನೆಗಳಲ್ಲೇ ಸಿಕ್ಕಿದ್ದನ್ನು ತಿನ್ನುತ್ತಾ, ಕೆಲವೂಮ್ಮೆ ಖಾಲಿ ಹೊಟ್ಟೆಯಲ್ಲೇ ಮಲಗುತ್ತಾ ಚಳುವಳಿಯನ್ನು ಚೆ ಮತ್ತು ಆತನ ಹಲವು ಸಂಗಾತಿಗಳು ನಡೆಸುತ್ತಾರೆ.

ಆದರೆ, ಇಡೀ ಲ್ಯಾಟೀನ್ ಅಮೇರಿಕಾದಲ್ಲಿ ಸರ್ವಾಧಿಕಾರಿಗಳಿಗೆ ಮತ್ತು ಸಾಮ್ರಾಜ್ಯಶಾಹಿಗಳಿಗೆ ಸಿಂಹ ಸ್ವಪ್ನವಾಗಿದ್ದ ಚೆ ಯನ್ನು ಸಾಯಿಸಿಯಾದರೂ ಸರಿಯೆ ಅಥವಾ ಜೀವಂತವಾದರೂ ಸರಿಯೇ ಸೆರೆಹಿಡಿಯಲೇಬೇಕೆಂದು ಸಿಐಎ ಹಟ ತೊಟ್ಟಿತ್ತು. 1967 ರ ಅಕ್ಟೋಬರ್ 8 ರಂದು ಚೆಯನ್ನು ಸುತ್ತುವರೆದ ಅಮೆರಿಕಾದ ಸಿಐಎ ಬೆಂಬಲಿತ ಬೋಲಿವಿಯಾ ಸರ್ಕಾರದ ಪಡೆ ಅದೇ ದಿನವೇ ಅವರನ್ನು ಗುಂಡಿಕ್ಕಿ ಕೊಂದಿತು.

ಆದರ ಅಷ್ಟೊತ್ತಿಗೆಲ್ಲ ಚೆಗುವಾರನ ಹೆಸರು ಜಗದಗಲ ಹರಡಿತ್ತು. ಅದರಲ್ಲೂ ಲ್ಯಾಟೀನ್ ಅಮೆರಿಕಾದ ಜನರ ಮನೆ-ಮನಗಳನ್ನು ಹೊಕ್ಕಿತ್ತು. ಹಾಗಾಗಿ ಚೆ ಸತ್ತಿದ್ದಾನೆ ಎಂಬ ಸಂಗತಿಯನ್ನು ಅವರು ಹೇಳಿದರೆ ಜನರು ನಂಬುವುದಿಲ್ಲ ಎಂಬ ಕಟು ಸತ್ಯ ಸಿಐಎ ಮತ್ತು ಬೊಲಿವಿಯಾ ಸರ್ಕಾರಕ್ಕೆ ಕಾಡಿತು. ಹಾಗಾಗಿಯೆ ಚೆ ನ ಕಳೆಬರವನ್ನು ಕ್ಯೂಬಾಕ್ಕೆ ಅಥವಾ ಆತನ ಕುಟುಂಬಕ್ಕೂ ನೀಡದೆ ಕೇವಲ ಆತನ ಮುಂಗೈಯನ್ನು ಕತ್ತರಿಸಿ ಜಗತ್ತಿಗೆ ಚೆ ಸಾವಿನ ಸುದ್ದಿಯನ್ನು ಖಾತ್ರಿಪಡಿಸಿದರು. ಚೆ ಸಾವಿನ ಸುದ್ದಿ ಗೊತ್ತಾದಾಗ ಫಿಡೆಲ್ ಕ್ಯಾಸ್ಟ್ರೊ ನೀಡಿದ ಹೇಳಿಕೆ, “ಚೆ ನಮ್ಮಿಂದ ದೈಹಿಕವಾಗಿ ಮಾತ್ರವೇ ದೂರವಾಗಿದ್ದಾರೆ. ಆದರೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆದರೆ ಅಲ್ಲಿ ಚೆ ಇದ್ದೆ ಇರುತ್ತಾರೆ.”

ಚೆಗೆವಾರ ಇಲ್ಲ.. ಆದರೆ ಸ್ಪೂರ್ತಿಗೆ ಕೊರತೆಯಿಲ್ಲ..

ಆರ್ನೆಸ್ಟೋ ಚೆಗೆವಾರ ಜಗತ್ತಿನಿಂದ ದೂರವಾಗಿ ಸುಮಾರು ನಾಲ್ಕು ದಶಕಗಳು ಕಳೆದಿವೆ. ಆದರೆ ಯಾವ ಸಾಮ್ರಾಜ್ಯಶಾಹಿ ದೇಶಗಳಿಗೂ ಚೆ ನ ಪ್ರಭಾವದಿಂದ ಅಲ್ಲಿನ ಯುವಜನರನ್ನು ದೂರ ಮಾಡಲು ಸಾಧ್ಯವಾಗಿಲ್ಲ. ಚೆ ಯನ್ನು ಕೊಂದ ಅಮೇರಿಕದ ವಾಷಿಂಗ್ಟನ್ ಡಿಸಿಯ ರಸ್ತೆಗಳಿಂದ ಹಿಡಿದು ಯೂರೋಪ್-ಇಂಡಿಯಾದ ಬೀದಿ ಬೀದಿಗಳಲ್ಲಿ ಚೆ ನ ಆಕರ್ಷಕ ಮುಖಚಿತ್ರ ಹೊಂದಿದ ಅಚ್ಚೆಗಳನ್ನು, ಟೀ ಶರ್ಟಗಳನ್ನು, ಕೀ ಚೈನ್‌ಗಳನ್ನು ತಮ್ಮದಾಗಿಸಲು ಈಗಲೂ ಯುವ ಜನರು ಮುಗಿಬೀಳುತ್ತಾರೆ. ಬ್ರಿಟಿಷ್ ಜೈಲಿನಲ್ಲಿ ರಾಜಕೀಯ ಖೈದಿಯಾಗಿ ಬಂಧಿಸಲ್ಪಟ್ಟಿದ್ದ ರಾಜಕೀಯ ಯುವಕನೊರ್ವ ತನಗೆ ಚೆ ಭಾವಚಿತ್ರವಿರುವ ಟೀ ಶರ್ಟ ಬೇಕೆಂದು ಅಧಿಕಾರಿಗಳ ಮುಂದೆ ಬೇಡಿಕೆಯನ್ನಿಟ್ಟಿದ್ದ. ಚೆಗೆವಾರನ ಅಭಿಮಾನಿಗಳ ಯುವಕರ ದಂಡೊಂದು ಪ್ರೀತಿಯಿಂದ ಚೆ ನ ಟೀ ಶರ್ಟವೂಂದನ್ನು ಮೆರವಣಿಗೆ ಮಾಡಿಕೊಂಡು ಆ ಯುವಕನಿಗೆ ನೀಡಲು ಜೈಲಿನ ಬಾಗಿಲಿಗೆ ಬಂತು. ಆದರೆ ಅದನ್ನು ಆ ಖೈದಿಗೆ ನೀಡಲು ಜೈಲಾಧಿಕಾರಿಗಳು ನಿರಾಕರಿಸಿದರು. ಅದರಲ್ಲಿ ರಾಜಕೀಯ ಸಂದೇಶವಿದೆ ಎಂಬುದು ಅವರ ಆರೋಪ.

ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಹೋರಾಟಗಳಿಗೆಲ್ಲಾ ಚೆ ಈಗಲೂ ಸ್ಪೂರ್ತಿಯೇ. ಬಹುಶಃ ಜಗತ್ತಿನಲ್ಲಿ ಚೆ ಗಿರುವಷ್ಟು ಅಭಿಮಾನಿಗಳು, ಅವರ ಹೆಸರಿನಲ್ಲಿರುವಷ್ಟು ವೆಬ್‌ಸೈಟ್ ಹಾಗೂ ಬ್ಲಾಗ್‌ಗಳಿಗೆ ಲೆಕ್ಕವೇ ಇಲ್ಲ. ಅದು ಉತ್ತರ-ದಕ್ಷಿಣ ಅಮೆರಿಕಾವೇ ಇರಲಿ, ಆಫ್ರಿಕಾ-ಯುರೋಪ್‌ಗಳಾಗಲಿ ಅಥವಾ ಏಷ್ಯಾ-ಆಸ್ಟ್ರೇಲಿಯಾ ಖಂಡಗಳೇ ಆಗಲಿ, ಯಾವುದೇ ಸಾಮ್ರಾಜ್ಯಶಾಹಿ ವಿರುದ್ದದ ಅಂತರಾಷ್ಟ್ರೀಯ ಸೆಮಿನಾರುಗಳು, ಉತ್ಸವಗಳು ಹಾಗೂ ಕಾರ್ಯಕ್ರಮಗಳು ಚೆ ಗೈರುಹಾಜರಿಯಲ್ಲಿ ನಡೆಯುವುದೆ ಇಲ್ಲ! ಯಾತಕ್ಕೆಂದರೆ ಸಮಾನತೆಯ ಸಮಾಜವನ್ನು ಕಟ್ಟುವ ಕನಸು ಕಾಣುತ್ತಿರುವವರಿಗೆ, ಅನ್ಯಾಯವನ್ನು ಪ್ರತಿಭಟಿಸುತ್ತಿರುವವರಿಗೆ ಹಾಗೂ ಜಗದಗಲ ನಡೆಯುವ ಶೋಷಣೆಯನ್ನು ಕೊನೆಗಾಣಿಸಬೇಕೆಂದು ಹಂಬಲಸುತ್ತಿರುವ ಎಲ್ಲರಿಗೂ ಚೆ ಸ್ಪೂರ್ತಿ.

27 ವರ್ಷಗಳ ಸುದೀರ್ಘ ಜೈಲುವಾಸದಿಂದ ಬಿಡುಗಡೆ ಹೊಂದಿದ ನೆಲ್ಸನ್ ಮಂಡೆಲಾ ಗೆಳೆತನದ ಪದಕ ಪಡೆಯಲು ಕ್ಯೂಬಾಕ್ಕೆ ಬಂದಾಗ ಹೇಳಿದ ಮಾತಿದು: “ಈ ಜಗತ್ತಿನ ಯಾವ ಬಂಧಿಖಾನೆಗಳಿಗೂ, ಸೆನ್ಸಾರ್‌ಶಿಪ್‌‌ಗಳಿಗೂ ಚೆಗುವಾರನನ್ನು ನಮ್ಮಿಂದ ಅಡಗಿಸಿಡಲು ಸಾಧ್ಯವಿಲ್ಲ.”

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-11)


– ಡಾ.ಎನ್.ಜಗದೀಶ್ ಕೊಪ್ಪ


 

The seed ye sow, another reaps;
The wealth ye find, another keeps;
The robes ye weave, another wears;
The arms ye forge, another bears
-Shelley.

ಇವರ ಮೇಲೆ ದಾಳಿ ಮಾಡಿದ್ದ, ನರಸಿಂಗ್‌ಪುರ್‌ ಗ್ರಾಮದ ಜಮೀನ್ದಾರ ಬಿಜಿಲಿಸಿಂಗ್ ಹಾಗೂ ಅವನ ಸೇವಕರನ್ನು ಹಾಡು ಹಗಲೇ ಬೀದಿಯಲ್ಲಿ ಕೊಚ್ಚಿಹಾಕಿ, ಅವರ ದೇಹದ ತುಂಡುಗಳನ್ನು ರಸ್ತೆಯುದ್ಧಕ್ಕೂ ಬಿಸಾಡಿದರು. ಒಂದು ವರ್ಷ ಪಶ್ಚಿಮ ಬಂಗಾಳ ಮತ್ತು ಆಂಧ್ರದಲ್ಲಿ 1960 ರ ದಶಕದಲ್ಲಿ ಹೊತ್ತಿಕೊಂಡ ನಕ್ಸಲ್ ಹೋರಾಟದ ಕಿಡಿ, 70ರ ದಶಕದ ವೇಳೆಗೆ ಚಳವಳಿಯ ಪ್ರಮುಖ ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಚಾರುಮುಜಂದಾರ್ ಇವರ ಹತ್ಯೆಯಿಂದ ಈ ಎರಡು ರಾಜ್ಯಗಳಲ್ಲಿ ಕೆಲವು ದಿನಗಳ ಕಾಲ ತಣ್ಣಗಾಯಿತಾದರೂ, ಅದು ಭಾರತದ ಹನ್ನೊಂದು ರಾಜ್ಯಗಳಿಗೆ ವ್ಯಾಪಿಸುವಲ್ಲಿ ಸಹಕಾರಿಯಾಯಿತು. ಒರಿಸ್ಸಾ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಮ್, ಜಮ್ಮು, ಕಾಶ್ಮೀರ, ತಮಿಳುನಾಡು, ಕೇರಳ, ರಾಜಸ್ಥಾನ್, ದೆಹಲಿ ರಾಜ್ಯಗಳಿಗೆ ನಕ್ಸಲ್ ಹೋರಾಟದ ಬೆಂಕಿಯ ನದಿ ಹರಿಯಿತಾದರೂ, ಅದು ತನ್ನ ಕಾವನ್ನು ಉಳಿಸಿಕೊಂಡಿದ್ದು, ಕೇವಲ ನಾಲ್ಕು ರಾಜ್ಯಗಳಲ್ಲಿ ಮಾತ್ರ. ಒರಿಸ್ಸಾ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಬೆಂಕಿಯ ಕಾವು ಇನ್ನೂ ಜೀವಂತವಾಗಿದೆ. 70ರ ದಶಕದಲ್ಲಿ ಚಾರುವಿನ ಸಾವಿಗೆ ಮುನ್ನ ಈ ರಾಜ್ಯಗಳಲ್ಲಿ ನಡೆದ ಘಟನೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ.

ಬಿಹಾರದ ಮುಜಾಪುರ್ ಜಿಲ್ಲೆಯ ಮುಶ್ರಾಯ್ ಎಂಬ ತಾಲೂಕಿನ ಹಳ್ಳಿಗಳ ಹತ್ತುಸಾವಿರ ಜನತೆ ಪ್ರಪಥಮ ಬಾರಿಗೆ ಜಮೀನ್ದಾರರ ವಿರುದ್ಧ ಸಿಡಿದೆಳುವುದರ ಮೂಲಕ ಬಿಹಾರದಲ್ಲಿ ಕೆಂಪು ಬಾವುಟವನ್ನು ಹಾರಿಸಿದರು. ಇವರೆಲ್ಲರೂ ಭೂಹೀನ ಕೃಷಿ ಕಾಮರ್ಮಿಕರಾಗಿದ್ದು, ದಲಿತ ವರ್ಗಕ್ಕೆ ಸೇರಿದವರಾಗಿದ್ದರು. ಉತ್ತರ ಬಿಹಾರದ ಈ ಪ್ರಾಂತ್ಯದ ಜನ, ಪಶ್ಚಿಮ ಬಂಗಾಳದ ಸಿಲಿಗುರಿಯ ನಕ್ಸಲ್‌ಬಾರಿ ಹಳ್ಳಿಯಲ್ಲಿ ನಡೆದ ಘಟನೆಯಿಂದ ಪ್ರೇರಿತರಾಗಿದ್ದು ವಿಶೇಷ. ಮೊದಲಿಗೆ ಗಂಗಾಪುರ್ ಎಂಬ ಸಾಮಾನ್ಯ ಹಳ್ಳಿಯಲ್ಲಿ ಕೃಷಿಕಾರ್ಮಿಕರು, 1968ರ ಏಪ್ರಿಲ್ ತಿಂಗಳಿನಲ್ಲಿ  ಜಮೀನ್ದಾರನ ಹೊಲಕ್ಕೆ ದಾಳಿ ಇಟ್ಟು, ಬೆಳೆದಿದ್ದ ಅರಾರ್ ಎಂಬ ದ್ವಿದಳ ಧಾನ್ಯದ ಬೆಳೆಯನ್ನು ಕುಯಿಲು ಮಾಡಿ ಕೊಂಡೊಯ್ದರು. ಇದರಿಂದ ಸಿಟ್ಟಿಗೆದ್ದ ಬಿಜಿಲಿಸಿಂಗ್ ಎಂಬ ಜಮೀನ್ದಾರ, ಮುನ್ನೂರು ಗೂಂಡಾ ಸೇವಕರನ್ನು ಕರೆದು ಕೊಂಡು, ಆನೆಯ ಮೇಲೆ, ಕಲ್ಲು, ಬಡಿಗೆ, ಇವುಗಳನ್ನು ಹೇರಿಕೊಂಡು ಬಂದು, ಹಳ್ಳಿಗಳಿಗೆ ದಾಳಿ ಇಟ್ಟು, ಎಲ್ಲಾ ದಲಿತ ಕೂಲಿ ಕಾರ್ಮಿಕರನ್ನ ಮನಸೋ ಇಚ್ಚೆ ಥಳಿಸಿದ.

ಈ ಘಟನೆ ಇಡೀ ಪ್ರಾಂತ್ಯದ ರೈತರು ಮತ್ತು ಕೂಲಿ ಕಾರ್ಮಿಕರನ್ನು ಕೆರಳಿಸಿತು. ಹನ್ನೆರೆಡು ಹಳ್ಳಿಗಳ ಎಲ್ಲಾ ದಲಿತರು, ರೈತರು, ಸಂಘಟಿತರಾಗಿ, ಸತ್ಯನಾರಾಯಣಸಿಂಗ್ ಎಂಬಾತನ ನೇತೃತ್ವದಲ್ಲಿ  “ಕಿಸಾನ್ ಸಂಗ್ರಾಮ್ ಸಮಿತಿ” ಮತ್ತು “ಗ್ರಾಮ್ ರಕ್ಷಣ್ ದಳ್” ಎಂಬ ಹೆಸರಿನಲ್ಲಿ ಸಮಿತಿಗಳನ್ನು ರಚಿಸಿಕೊಂಡರು. ಇವರಿಗೆ ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿ ನೀಡಲು, ನೆರೆಯ ಪಶ್ಚಿಮಬಂಗಾಳದಿಂದ ನಾಯಕರು ಬಂದು, ದಾಳಿಗೆ ಮಾರ್ಗದರ್ಶನ ನೀಡಿದರು. 1969 ಜನವರಿ ವೇಳೆಗೆ ಚಂಡಮಾರುತದಂತೆ ಉತ್ತರ ಬಿಹಾರವನ್ನು ಆವರಿಸಿಕೊಂಡ ಹೋರಾಟಗಾರರು, ಶೋಷಣೆಯನ್ನೇ ವೃತ್ತಿ ಮಾಡಿಕೊಂಡಿದ್ದ ಭೂಮಾಲಿಕರಿಗೆ, ಬಡ್ಡಿ ಹಣದ ಲೇವಾದೇವಿಗಾರರಿಗೆ ಹಿಂಸೆಯ ರುಚಿಯನ್ನು ಪ್ರಥಮ ಬಾರಿಗೆ ತೋರಿಸಿಕೊಟ್ಟರು. ಹಿಂದೊಮ್ಮೆದ ಅವಧಿಯಲ್ಲಿ ಹದಿಮೂರು ಮಂದಿ ಭೂಮಾಲೀಕರು ಹತ್ಯೆಯಾಗುವುದರ ಮೂಲಕ ಉತ್ತರ ಬಿಹಾರವೆಂದರೆ, ಭೂಮಾಲೀಕರ ರುಧ್ರಭೂಮಿ ಎಂಬಂತಾಯಿತು. ಮುಜಾಪುರ್ ಜಿಲ್ಲೆಯ ಈ ಹೋರಾಟ ಸಹಜವಾಗಿ ದರ್ಭಾಂಗ ಮತ್ತು ಚಂಪಾರಣ್ಯ ಜಿಲ್ಲೆಗಳಿಗೂ ಹರಡಿತು. ಇದರ ಜೊತೆಗೆ ಚೋಟಾ ನಾಗ್ಪುರ್ ಪ್ರದೇಶದಲ್ಲಿ ಆದಿವಾಸಿಗಳ ಪ್ರತ್ಯೇಕ ಹೋರಾಟ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿತು. ಎಂ,ಎಂ,ಜಿ. (Man, Money, Gun) ಇದರ ನೇತೃತ್ವವನ್ನು ಬಂಗಾಳಿ ಮೂಲದ ಸುಬೋತ್ರ ರಾಯ್ ಎಂಬಾತ ವಹಿಸಿಕೊಂಡಿದ್ದ. ಈ ತಂಡದ ಬಹುತೇಕ ಸದಸ್ಯರು ನಗರ ಜೀವನದಿಂದ ಬಂದವರಾಗಿದ್ದರಿಂದ ಅರಣ್ಯದಲ್ಲಿ ಅಡಗಿ ಹೋರಾಟ ನಡೆಸಲು ಸಾಧ್ಯವಾಗದೆ, ಅತಿ ಶೀಘ್ರದಲ್ಲಿ ಬಿಹಾರ ಪೊಲೀಸರಿಂದ ಬಂಧಿತರಾದರು. 54 ಮಂದಿ ಬಂಧಿತ ಸದಸ್ಯರಲ್ಲಿ ಮೇರಿ ಟೈಲರ್ ಎಂಬ ಓರ್ವ ಬ್ರಿಟಿಷ್ ಯುವತಿ ಸಿಕ್ಕಿ ಬಿದ್ದುದು ವಿಶೇಷ. (ವಿಚಾರಣೆಯ ನಂತರ ಈಕೆಯನ್ನ ತಾಯ್ನಾಡಿಗೆ ಗಡಿಪಾರು ಮಾಡಲಾಯಿತು)

ಬಿಹಾರ ಪೊಲೀಸರ ಕಾರ್ಯಾಚರಣೆಯ ನಡುವೆಯೂ, ನಕ್ಸಲ್ ಚಳವಳಿ, ರಾಂಚಿ ಮತ್ತು ಸಿಂಘಭೂಮಿ ಜಿಲ್ಲೆಗಳಿಗೆ ಹರಡಿತು. ಇದರಿಂದಾಗಿ ಚೋಟಾ ಕಲ್ಕತ್ತ ಎಂದು ಕರೆಯಲ್ಪಡುತ್ತಿದ್ದ ಜೆಮ್‌ಶೆಡ್‌‍ಪುರ ನಕ್ಸಲ್ ಹಾವಳಿಗೆ ತುತ್ತಾಗಬೇಕಾಯಿತು. 1970ರ ಅಕ್ಡೋಬರ್ ತಿಂಗಳಿನಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಟಾಟ ಕಂಪನಿ ನೌಕರರ ವಸತಿ ಕಾಲೋನಿಯ ಭದ್ರತಾ ದಳದ ಅಧಿಕಾರಿಯೊಬ್ಬನನ್ನು ಹೋರಾಟಗಾರರು ಕೊಂದು ಹಾಕಿದರು. ಇದಕ್ಕೂ ಮುನ್ನ ಆಗಸ್ಟ್ ತಿಂಗಳಿನಲ್ಲಿ ಶಾಲಾ ಕಟ್ಟಡಗಳನ್ನು ಧ್ವಂಸಗೊಳಿಸಿದ ನಕ್ಸಲ್ ಹೋರಾಟಗಾರರು ಜೆಮ್‌ಸೆಡ್‌ಪುರಕ್ಕೆ ತಾವು ಕಾಲಿಟ್ಟರಿವ ಬಗ್ಗೆ ಸರ್ಕಾರಕ್ಕೆ ಪರೋಕ್ಷ ಸೂಚನೆಯನ್ನು ನೀಡಿದ್ದರು. 1971 ರಲ್ಲಿ ಸರ್ಕಾರಕ್ಕೆ ಸೇರಿದ ನಾಲ್ಕು ಸಾರಿಗೆ ಬಸ್ಸುಗಳನ್ನು ಸುಟ್ಟು ಹಾಕಿದ್ದಲ್ಲದೆ,  ಜೆಮ್‌ಸೆಡ್‌ಪುರ ವಿಮಾನ ಕ್ಲಬ್‌ಗೆ ಸೇರಿದ ಪುಷ್ವಕ್ ಎಂಬ ಲಘು ವಿಮಾನವನ್ನು ಬಾಂಬ್ ಇಟ್ಟು ಸ್ಪೋಟಿಸಿದರು. ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಜಿಲ್ಲೆಯ ಗಡಿಭಾಗ ಹೊಂದಿದ್ದ, ಸಿಂಘಭೂಮಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಿಂಸೆ, ಕೊಲೆಯ ಯತ್ನ ಮತ್ತು ಲೂಟಿಗಳು ನಡೆದವು. ಈ ಎಲ್ಲಾ ಘಟನೆಗಳ ಹಿಂದೆ ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ನಕ್ಸಲ್ ನಾಯಕರ ಕೈವಾಡವಿತ್ತು. ಚಾರು ಮುಜಂದಾರ್ ಬೆಂಬಲಿಗರು, ಬಿಹಾರದಲ್ಲಿ ಮೇಲ್ವರ್ಗದ ಜಾತಿ ಮತ್ತು ಶ್ರೀಮಂತ ಸಮುದಾಯದ ಶೋಷಣೆಯಿಂದ ನರಳಿದ್ದ ದಲಿತರಿಗೆ, ಭೂಹೀನ ಕೃಷಿ ಕಾರ್ಮಿಕರಿಗೆ ನಕ್ಸಲ್ ಹೋರಾಟದ ದೀಕ್ಷೆ ನೀಡುವುದರ ಮೂಲಕ ಬಿಹಾರದಲ್ಲಿ ನಕ್ಸಲ್ ಅಧ್ಯಾಯಕ್ಕೆ ನಾಂದಿ ಹಾಡಿದರು.

ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಒಂದು ಎನಿಸಿರುವ ಉತ್ತರ ಪ್ರದೇಶಕ್ಕೆ 1970 ರಲ್ಲಿ ಚಾರುವಿನ ಹತ್ಯೆಯ ನಂತರ ನಕ್ಸಲ್ ಹೋರಾಟ ವ್ಯಾಪಿಸಿತು. ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಹಳ್ಳಿಗಳನ್ನ, ಬಡವರನ್ನ, ಮತ್ತು ಹಿಂದುಳಿದ ಜಾತಿಯ ಸಮುದಾಯಗಳನ್ನು ಹೊಂದಿರುವ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನು ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಪಡೆದಿವೆ. ಬಡತನ, ಶೋಷಣೆ ಮತ್ತು ಅನ್ಯಾಯಗಳೇ ತಾಂಡವವಾಡುವ ಈ ಪ್ರದೇಶಗಳಲ್ಲಿ ನಕ್ಸಲ್ ಹೋರಾಟ ಹರಡುವುದು ಕಷ್ಟಕರವೇನಲ್ಲ ಎಂಬ ಸತ್ಯವನ್ನು ಪಶ್ಚಿಮ ಬಂಗಾಳದ ಮತ್ತು ಆಂಧ್ರದ ನಕ್ಸಲ್ ನಾಯಕರು ಚೆನ್ನಾಗಿ ಅರಿತಿದ್ದರು. ಉತ್ತರ ಪ್ರದೇಶದಲ್ಲಿ ನಕ್ಸಲ್ ಚಳವಳಿ ಆರಂಭಗೊಂಡಿದ್ದು, ಉತ್ತರ ಭಾಗದ ಲಕ್ಷೀಪುರ್ ಜಿಲ್ಲೆಯಲ್ಲಿ. ಇದು, ತೆಹ್ರಿ ಪ್ರಾಂತ್ಯಕ್ಕೆ ಹೊಂದಿಕೊಂಡಿದ್ದು, ಅರಣ್ಯ ಪ್ರದೇಶದಿಂದ ಆವೃತ್ತವಾಗಿದೆ. ಥಾರುಸ್ ಎಂಬ ಬುಡಕಟ್ಟು ಜನಾಂಗ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ, 1960ರ ದಶಕದಲ್ಲಿ ಉತ್ತರಪ್ರದೇಶ ಸರ್ಕಾರ ಆದಿವಾಸಿಗಳಿಗೆ ಒಂದು ವಿಶೇಷ ಕಾನೂನನ್ನು ರೂಪಿಸಿತ್ತು. ಯಾವುದೇ ಆದಿವಾಸಿ ಕುಟುಂಬ 10 ರಿಂದ 12 ಎಕರೆ ಅರಣ್ಯ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು, ಬೇಸಾಯ ಮಾಡಬಹುದು ಎಂಬ ಈ ಕಾಯ್ದೆ ನಿಜಕ್ಕೂ ಆದಿವಾಸಿಗಳ ಪಾಲಿಗೆ ವರದಾನವಾಗಿತ್ತು. ಆದರೆ, ಇಲ್ಲೂ ಕೂಡ, ಅಕ್ಷರ ಲೋಕದಿಂದ ವಂಚಿತರಾದ ಈ ಮುಗ್ಧ ಜನಾಂಗ ದಳ್ಳಾಳಿಗಳಿಂದ ಮತ್ತು ಜಮೀನ್ದಾರರಿಂದ ವಂಚಿತರಾಗಬೇಕಾಯಿತು. ವಿಶ್ವನಾಥ ತಿವಾರಿ ಎಂಬ ನಕ್ಸಲ್ ನಾಯಕನ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 1969 ರಿಂದ 1972 ರ ನಡುವೆ ಅನೇಕ ಹಿಂಸಾಚಾರದ ಘಟನೆ ಮತ್ತು ಭೂಮಾಲೀಕರ ಹತ್ಯೆಗಳು ಜರುಗಿದವು. ಇದರ ಜೊತೆ ಜೊತೆಗೆ ನೆರೆಯ ಪಾಲಿಯ ಜಿಲ್ಲೆಗೆ ಹಿಂಸಾತ್ಮಕ ಹೋರಾಟ ವ್ಯಾಪಿಸಿತು.

ಪಾಲಿಯ ಜಿಲ್ಲೆ ನೇಪಾಳದ ಗಡಿ ಭಾಗವನ್ನು ಹೊಂದಿದ್ದರಿಂದ ನಾಯಕರಿಗೆ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ನೆರೆಯ ನೇಪಾಳಕ್ಕೆ ಪಲಾಯನ ಮಾಡಲು ಸೂಕ್ತ ಸ್ಥಳವಾಗಿತ್ತು. ಪಾಲಿಯ ಜಿಲ್ಲೆ ಜೊತೆಗೆ ಕಾನ್ಪುರ, ವಾರಾಣಾಸಿ, ಫರುಕ್ಕಾಬಾದ್, ಉನ್ನಾವೊ, ರಾಯ್ ಬರೇಲಿ, ಮೊರದಾಬಾದ್, ಅಜಮ್ಘರ್ ಜಿಲ್ಲೆಗಳಿಗೆ ನಕ್ಸಲ್ ಚಳವಳಿ ವ್ಯಾಪಿಸಿ 70ರ ದಶಕದಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆದವು. ಉತ್ತರ ಪ್ರದೇಶದಲ್ಲಿ ಅಲ್ಲಿನ ಜನರ ಬಡತನ ಮತ್ತು ಅನಕ್ಷರತೆಯ ಕಾರಣದಿಂದ ನಕ್ಸಲ್ ಹೋರಾಟ ಪ್ರಭಾವಶಾಲಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಕರಪತ್ರ ಮತ್ತು ಭಾಷಣ ಗಳ ಮೂಲಕ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡುವುದಕ್ಕೆ ಅಲ್ಲಿನ ನಾಯಕರು ತಮ್ಮ ಸಮಯವನ್ನು ವಿನಿಯೋಗಿಸಿದರು. ಆದರೆ, ಹಸಿದವನ ಮುಂದೆ ಉಪದೇಶ ಪ್ರಯೋಜನಕ್ಕೆ ಬಾರದು ಎಂಬಂತೆ, ಅಲ್ಲಿನ ಬಡವರನ್ನು ಹೋರಾಟಕ್ಕೆ ಸೆಳೆಯುವ ಯತ್ನ ವಿಫಲವಾಯಿತು.

ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವೆ ಇರುವ ಒರಿಸ್ಸಾದ ಕೊರಾಪೇಟ್ ಮತ್ತು ಗಂಜಾಂ ಜಿಲ್ಲೆಗಳಿಗೆ 1968 ರಲ್ಲೇ ನಕ್ಸಲ್ ಚಳವಳಿ ವ್ಯಾಪಿಸಿತ್ತು. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಹೋರಾಟದಿಂದ ಸ್ಪೂರ್ತಿ ಪಡೆದಿದ್ದ ಇಲ್ಲಿನ ಡಿ.ಬಿ.ಎಂ. ಪಟ್ನಾಯಕ್, ಜಲಧರ್ನಂದಾ, ರಬಿದಾಸ್, ಕುಂದನ್ರಾಮ್, ನಾಗಭೂಷಣ ಪಟ್ನಾಯಕ್, ಧೀನಬಂಧುಸಮಲ್, ಜಗನ್ನಾಥ್ ಮಿಶ್ರಾ ಮುಂತಾದವರು ಹೋರಾಟದ ಮುಂಚೂಣಿಯಲ್ಲಿದ್ದರು. 1969 ರಲ್ಲಿ ಚಾರುಮುಜಂದಾರ್ ಮನವಿ ಮೇರೆಗೆ ತಮ್ಮ ಸಂಘಟನೆಯನ್ನು ಸಿ.ಪಿ.ಎಂ. (ಎಮ್.ಎಲ್) ಸಂಘಟನೆಯೊಂದಿಗೆ ವಿಲೀನಗೊಳಿಸಿದರು. ಅಲ್ಲದೆ ಒರಿಸ್ಸಾದ ಜಿಲ್ಲೆಗಳ ಹೋರಾಟದ ನಿರ್ವಹಣೆಯನ್ನು ಕ್ರಮವಾಗಿ, ಪಶ್ಚಿಮ ಬಂಗಾಳ ಮತ್ತು ಆಂಧ್ರದ ನುರಿತ ತಂಡಗಳಿಗೆ ವಹಿಸಲಾಗಿತ್ತು. ಒರಿಸ್ಸಾದಲ್ಲಿ ಪ್ರಥಮ ಹಿಂಸಾಚಾರದ ಘಟನೆ 1971ರ ಪೆಬ್ರವರಿ 21 ರಂದು, ಸರ್ಕಾರದ ಮಾಹಿತಿದಾರರು ಎಂಬ ಆರೋಪದಡಿ ಶಾಲಾಶಿಕ್ಷಕ ಹಾಗೂ ಗ್ರಾಮಸಹಾಯಕ ಇವರನ್ನು ಹತ್ಯೆ ಮಾಡುವುದರೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಜುಲೈ 5ರಂದು ಬೊಲ್ಲ ಎಂಬ ಹಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಪೇದೆಯನ್ನು ಇರಿದು ಗಾಯಗೊಳಿಸಿ, ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಈ ಎರಡು ಘಟನೆಗಳು ಸಂಭವಿಸಿದ ಕೆಲ ದಿನಗಳಲ್ಲೇ ಒರಿಸ್ಸಾದ ಹೋರಾಟದ ನಾಯಕತ್ವ ವಹಿಸಿದ್ದ, ಪಶ್ಚಿಮ ಬಂಗಾಳದ ಅಸೀಮ್‌ಚಟರ್ಜಿ ಮತ್ತು ಸಂತೋಷ್ ರಾಣ ಇವರ ಬಂಧನದೊಂದಿಗೆ ಮೊದಲ ಹಂತದ ಹೋರಾಟ ತಣ್ಣಗಾಯಿತು. ಇದರ ಪರಿಣಾಮವಾಗಿ ಎರಡನೇ ವರ್ಗದ ನಾಯಕರು ನೆರೆಯ ಆಂಧ್ರ ಮತ್ತು ಪಶ್ಚಿಮ ಬಂಗಾಳಕ್ಕೆ ಪಲಾಯನಗೈದು ನೆಲೆಕಂಡುಕೊಂಡರು.

ಮಧ್ಯಪ್ರದೇಶದ ಈಗಿನ ಛತ್ತೀಸ್‌ಗಡ್ ರಾಜ್ಯಕ್ಕೆ ಸೇರಿರುವ ರಾಯ್‌ಪುರ, ದರ್ಗ್, ಬಿಲಾಸ್ಪುರ, ಬಸ್ತರ್, ರಾಯ್‌ಗರ್ ಜಿಲ್ಲೆಗಳಲ್ಲಿ 70ರ ದಶಕದಲ್ಲಿ ನಕ್ಸಲ್ ಹೋರಾಟ ಕಾಲಿಟ್ಟಿತು. (2000ನೇ ಇಸವಿಯಲ್ಲಿ ಛತ್ತೀಸ್‌ಗಡ್ ಮಧ್ಯಪ್ರದೇಶದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯಿಸಿತು.)  ಇಲ್ಲಿನ ಜೊಗುರಾಯ್ ಎಂಬ ಮಾವೋವಾದಿ ಕಮ್ಯೂನಿಷ್ಟ್ ಪಕ್ಷದ ನಾಯಕ ಬುಡಕಟ್ಟು ಜನಾಂಗವನ್ನು “ಕ್ರಾಂತಿಕಾರಿ ಕಿಸಾನ್ ಮಜ್ದೂರ್” ಎಂಬ ಸಂಘಟನೆಯ ಹೆಸರಿನಲ್ಲಿ ಒಂದುಗೂಡಿಸಿ ಸರ್ಕಾರದ ವಿರುದ್ಧ ಯುದ್ಧ ಸಾರಿದನು. ಕ್ರಮೇಣ ಚಳವಳಿ, ಭೂಪಾಲ್, ಜಬಲ್ ಪುರ, ಉಜ್ಜಯನಿ ಜಿಲ್ಲೆಗಳಿಗೂ ಹರಡಿತು. ಪಂಜಾಬ್ ಹರಿಯಾಣ ರಾಜ್ಯಗಳಿಗೆ ದೆಹಲಿ ಮೂಲಕ ನಕ್ಸಲ್ ಚಳವಳಿಯನ್ನು ವಿಸ್ತರಿಸುವ ಪ್ರಯತ್ನ ನಡೆಯಿತಾದರೂ ಅದು ಯಶಸ್ವಿಯಾಗಲಿಲ್ಲ. 1971 ರಲ್ಲಿ ಸಂಗ್ರೂರ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಡೆಪ್ಯೂಟಿ ಪೊಲೀಸ್ ಸೂಪರಿಡೆಂಟೆಂಟ್ ಒಬ್ಬನನ್ನು ಹತ್ಯೆ ಮಾಡಲಾಯಿತು. ಯುವ ವಿದ್ಯಾರ್ಥಿಗಳು, ಮತ್ತು ಕೆಳವರ್ಗದ ಜನರನ್ನು ಸಂಘಟಿಸುವ ಯತ್ನ ಯಶಸ್ವಿಯಾಗಲಿಲ್ಲ. ಇದಕ್ಕಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಲೋಕ್ ಯುಧ್ಧ್, ಪೀಪಲ್ಸ್ ಪಾಥ್, ಎಂಬ ಎರಡು ಪತ್ರಿಕೆಗಳನ್ನು ಸಹ ಹೊರ ತರಲಾಗಿತ್ತು.

1970 ರ ದಶಕದ ಪ್ರಾರಂಭದ ದಿನಗಳಲ್ಲಿ ಚಾರುಮುಜಂದಾರ್ ಕನಸಿನಂತೆ ದೇಶಾದ್ಯಂತ ನಕ್ಸಲ್ ಹೋರಾಟ ವಿಸ್ತರಿಸಲು ಎಲ್ಲಾ ಬಗೆಯ ಪ್ರಯತ್ನ ನಡೆಯಿತು. ಮಹಾರಾಷ್ಟ್ರ, ರಾಜಸ್ಥಾನ, ಜಮ್ಮು, ಕಾಶ್ಮೀರ, ಕೇರಳ ತಮಿಳುನಾಡು. ಈಶಾನ್ಯ ಭಾಗದ ಅಸ್ಸಾಮ್ ಮುಂತಾದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೆಲೆಯೂರಿ, ಒಂದು ಅಥವಾ ಎರಡು ಹಿಂಸಾತ್ಮಕ ಘಟನೆಗಳಿಗೆ ಚಳವಳಿ ಸೀಮಿತಗೊಂಡಿತು. ಪ್ರಾಯೋಗಿಕವಾಗಿ ಮಾವೋವಾದಿ ನಕ್ಸಲಿಯರ ಪ್ರಥಮ ಹಂತದ ಹೋರಾಟ ದೇಶಾದ್ಯಂತ ಯಶಸ್ವಿಯಾಗದಿದ್ದರೂ, ಸೈದ್ಧಾಂತಿಕವಾಗಿ ಹಲವಾರು ಯುವ ಮನಸ್ಸುಗಳನ್ನ ಚಳವಳಿಗೆ ಸೆಳೆದುಕೊಳ್ಳುವಲ್ಲಿ ಸಫಲವಾಯಿತು. ದೇಶದ ಅಧಿಕಾರದ ಕೇಂದ್ರ ಬಿಂದುವಾಗಿರುವ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ಸೇರ್ಪಡೆಗೊಂಡರು. ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್, ಸೆಂಟ್ ಸ್ಟೀಪನ್ ಕಾಲೇಜು, ದೆಹಲಿ ವಿ.ವಿ. ಇವುಗಳಿಂದ ಸಾವಿರಾರು ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ದುಮುಕಿದರು, ಇವರುಗಳಲ್ಲಿ, ವೈದ್ಯಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳು, ಮತ್ತು ಸರ್ಕಾರದ ಹಿರಿಯ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿದ್ದು ವಿಶೇಷ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ತಮ್ಮ ಗೆಳೆಯರಿಂದ ಆಕರ್ಷಿತರಾದ ಹಲವು ವಿದ್ಯಾಥಿನೀಯರು, ವಿಶೇಷವಾಗಿ, ಲೇಡಿ ಶ್ರಿರಾಮ್ ಕಾಲೇಜಿನಿಂದ ಬಂದವರು ಹೋರಾಟದ ನದಿಗೆ ಧುಮುಕಿದರು.

ದೆಹಲಿಯ ಈ ವಿದ್ಯಾರ್ಥಿಗಳ ಸಂಘಟನೆ ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ವಿಚಾರ ಸಂಕಿರಣ, ನಾಟಕ ಪ್ರದರ್ಶನ ಮುಂತಾದವುಗಳನ್ನು ಏರ್ಪಡಿಸುವುದರ ಮೂಲಕ ಎಡಪಂಥೀಯ ಸಿದ್ಧಾಂತಗಳನ್ನು ಜೀವಂತವಾಗಿಟ್ಟಿತು. ಇದು ಮುಂದಿನ ದಿನಗಳಲ್ಲಿ ಅಂದರೆ, 1980 ದಶಕದಲ್ಲಿ ಪ್ರಾರಂಭವಾದ ಪೀಪಲ್ಸ್ ವಾರ್ ಹೆಸರಿನ ಎರಡನೇ ಹಂತದ  ನಕ್ಸಲ್ ಹೋರಾಟಕ್ಕೆ ಭದ್ರ ಬುನಾದಿ ಹಾಕಿತು.

(ಮುಂದುವರಿಯುವುದು)

ಪರ್ಯಾಯ ರಾಜಕೀಯ ರೂಪಿಸಲು ಇದು ಸಕಾಲ

– ಆನಂದ ಪ್ರಸಾದ್

ಕರ್ನಾಟಕದಲ್ಲಿರುವ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಭ್ರಷ್ಟವಾಗಿದ್ದು ಮತದಾರರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.  ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಭಿನ್ನಮತದಿಂದ ಬೇಸತ್ತ ಹಾಗೂ ರೋಸಿ ಹೋದ ಜನ ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುವ ಸಂಭವ ಮುಂದಿನ ಚುನಾವಣೆಯಲ್ಲಿ ಇದೆ ಎಂಬ ವಾತಾವರಣ ಇರುವಾಗಲೇ ರಾಜ್ಯ ಕಾಂಗ್ರೆಸ್ಸಿನಲ್ಲೂ ಹಲವು ಗುಂಪುಗಳು ಪರಸ್ಪರ ಕಾಲೆಳೆಯುವ ಹುಂಬತನದಲ್ಲಿ ತೊಡಗಿದ್ದು ಮತ್ತೆ ರಾಜ್ಯ ಅತಂತ್ರ ವಿಧಾನ ಸಭೆಗೆ ಹಾಗೂ ತನ್ಮೂಲಕ ರಾಜಕೀಯ ಅಸ್ಥಿರತೆ, ಕುದುರೆ ವ್ಯಾಪಾರದ ವಿಕಾರ ಸ್ಥಿತಿಗೆ ಹೋಗುವ ಸಂಭವ ಕಾಣಿಸುತ್ತಿದೆ.  ಜೆಡಿಎಸ್ ಪಕ್ಷವೂ ಚುನಾವಣೆಗಳಲ್ಲಿ ಬಹುಮತ ಪಡೆಯುವ ಸ್ಥಿತಿಯಲ್ಲಿ ಇಲ್ಲ, ಅದು ಹೆಚ್ಚೆಂದರೆ ಚೌಕಾಸಿ ರಾಜಕೀಯ ಮಾಡುವಷ್ಟು ಸ್ಥಾನ ಪಡೆಯಬಹುದು.  ಇಂಥ ಅತಂತ್ರ ಸನ್ನಿವೇಶದಲ್ಲಿ ರಾಜ್ಯದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಇದು ಹದಗೊಂಡ ಕಾಲವಾಗಿದೆ.  ಆದರೆ ಆ ನಿಟ್ಟಿನಲ್ಲಿ ಮಹತ್ತರ ಕಾರ್ಯಕ್ರಮಗಳು ನಡೆಯುವುದು ಕಂಡುಬರುತ್ತಿಲ್ಲ.

ರೈತ ಸಂಘ, ದಲಿತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಕೂಡಿಕೊಂಡು ಪರ್ಯಾಯ ರಾಜಕೀಯ ಶಕ್ತಿ ರೂಪಿಸುವ ಕ್ರಿಯೆಗೆ ಚಾಲನೆ ನೀಡಿವೆಯಾದರೂ ಅವು ಮಾತ್ರವೇ ಪರ್ಯಾಯ ರಾಜಕೀಯ ಶಕ್ತಿಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ.  ಒಬ್ಬ ಜನಪ್ರಿಯ ಹಾಗೂ ಅನುಭವೀ ರಾಜಕೀಯ ಮುಖದ ಅವಶ್ಯಕತೆ ಈ ಒಕ್ಕೂಟಕ್ಕೆ ಇದೆ.  ಎಲ್ಲರೂ ಒಪ್ಪಬಲ್ಲ, ಸಮೃದ್ಧ ಕರ್ನಾಟಕವನ್ನು ಕಟ್ಟಬಲ್ಲ ಅಂಶಗಳನ್ನು ಉಳ್ಳ ಒಂದು ಪ್ರಣಾಳಿಕೆ ರೂಪಿಸಬೇಕಾದ ಅಗತ್ಯವಿದೆ.  ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಇರುವಂತೆ ಕಾಣುವುದಿಲ್ಲ.  ಅವರ ಗುರಿ ಮುಖ್ಯಮಂತ್ರಿ ಆಗುವುದು.  ಕರ್ನಾಟಕದ ಕಾಂಗ್ರೆಸ್ಸಿನ ಗುಂಪುಗಾರಿಕೆ, ಆ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿರುವ ನಾಯಕರ ಸಂಖ್ಯೆ ನೋಡಿದರೆ ಸಿದ್ಧರಾಮಯ್ಯನವರ ಕನಸು ನನಸಾಗುವ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.  ಹೆಚ್ಚೆಂದರೆ ಒಬ್ಬ ಪ್ರಭಾವಿ ಮಂತ್ರಿ ಸ್ಥಾನವಷ್ಟೇ ಅಲ್ಲಿ ಸಿದ್ಧರಾಮಯ್ಯನವರಿಗೆ ಸಿಗಬಹುದು.  ಈ ಭಾಗ್ಯಕ್ಕೆ ಸಿದ್ಧರಾಮಯ್ಯನವರು ಕಾಂಗ್ರೆಸ್ ಸೇರಬೇಕಾದ ಅಗತ್ಯ ಇರಲಿಲ್ಲ. ಶಾಮನೂರು ಶಿವಶಂಕರಪ್ಪನವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ ನೀಡಬೇಕು ಮತ್ತು ತಾನೇ ಅದಕ್ಕೆ ಸೂಕ್ತ ವ್ಯಕ್ತಿ ಎಂದು ಗರ್ಜಿಸುವುದನ್ನು ನೋಡಿದರೆ ಅವರೂ ಮುಖ್ಯಮಂತ್ರಿ ಸ್ಥಾನದ ಪ್ರಧಾನ ಆಕಾಂಕ್ಷಿ ಎಂದು ತಿಳಿಯಬಹುದು. ಏಕೆಂದರೆ ಚುನಾವಣಾಪೂರ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದವರೇ ಚುನಾವಣೆಗಳಲ್ಲಿ ಗೆದ್ದರೆ ಮುಖ್ಯಮಂತ್ರಿಯಾಗುವ ಸಂಭಾವ್ಯತೆ ಕಾಂಗ್ರೆಸ್ ಪಕ್ಷದಲ್ಲಿದೆ.  ಹೀಗಾದರೆ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕೇಳುವವರೂ ಇರುವುದಿಲ್ಲ.  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆದ ಸಿದ್ಧರಾಮಯ್ಯನವರು ಸಾಮಾನ್ಯ ಮಂತ್ರಿ ಸ್ಥಾನ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ.  ಒಂದು ವೇಳೆ ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಸಿನಲ್ಲಿ ಲಭಿಸಿದರೂ ಅದರ ಜೊತೆಗೆ ಭೀಕರ ಭಿನ್ನಮತವೂ ಭುಗಿಲೇಳುವ ಸಂಭವ ಹೆಚ್ಚಾಗಿರುವುದರಿಂದ ಸಮರ್ಪಕ ಆಡಳಿತ ನಡೆಸಲು ಸಾಧ್ಯವಾಗಲಿಕ್ಕಿಲ್ಲ.   ಹೀಗಾಗಿ ಸಿದ್ಧರಾಮಯ್ಯನವರ ರಾಜಕೀಯ ಜೀವನ ಅಲ್ಲಿಗೆ ಕೊನೆಗೊಳ್ಳುವ ಸಂಭವ ಇದೆ.  ಇಂಥ ಅತಂತ್ರ ಸನ್ನಿವೇಶದಲ್ಲಿ ಸಿದ್ಧರಾಮಯ್ಯನವರು ಪರ್ಯಾಯ ರಾಜಕೀಯ ರೂಪಿಸುವ ಒಂದು ಪ್ರಯೋಗ ಮಾಡಿ ನೋಡಲು ಸಾಧ್ಯವಿದೆ.  ಇಂದಿನ ರಾಜ್ಯದ ಅತಂತ್ರ ಸ್ಥಿತಿಯಲ್ಲಿ ಇದು ಒಂದೇ ಚುನಾವಣೆ ಎದುರಿಸಿ ಸಾಧ್ಯವಾಗಲೂಬಹುದು ಅಥವಾ ವಿಫಲವಾಗಲೂಬಹುದು.  ಹೇಗಿದ್ದರೂ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಕಾಣಿಸುತ್ತಿಲ್ಲ.  ಜೆಡಿಎಸ್ ಪಕ್ಷಕ್ಕೆ ಅವರು ಮರಳಿ ಹೋಗುವ ಸಾಧ್ಯತೆ ಇಲ್ಲ, ಹೋದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಂಭವ ಇಲ್ಲ.   ಆ ಸ್ಥಾನ ಹೇಗಿದ್ದರೂ ದೇವೇಗೌಡರ ಕುಟುಂಬದ ಸದಸ್ಯರಿಗೆ ಮೀಸಲಾಗಿದೆ.   ಹೀಗಾಗಿ ಪರ್ಯಾಯ ರಾಜಕೀಯದ ನಾಯಕತ್ವವನ್ನು ಸಿದ್ಧರಾಮಯ್ಯ ವಹಿಸಿಕೊಳ್ಳುವುದರಿಂದ ನಷ್ಟವೇನೂ ಇಲ್ಲ ಎನಿಸುತ್ತದೆ.

ಪ್ರಸಕ್ತ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಇರುವ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ, ವಂಶವಾಹಿ ರಾಜಕೀಯವನ್ನು ವಿರೋಧಿಸುವ, ಪ್ರಗತಿಶೀಲ ನಿಲುವಿನ ಚಿಂತನಶೀಲ ರಾಜಕಾರಣಿಗಳು ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಪರ್ಯಾಯ ರಾಜಕೀಯ ರೂಪಿಸುವ ಕಾರ್ಯದಲ್ಲಿ ತೊಡಗಬೇಕಾದ ಅಗತ್ಯ ಇದೆ.  ಉದಾಹರಣೆಗೆ ಉಗ್ರಪ್ಪ, ಬಿ.ಎಲ್. ಶಂಕರ್, ಕೃಷ್ಣ ಭೈರೇಗೌಡ, ವಿ.ಆರ್. ಸುದರ್ಶನ್, ಪಿ.ಜಿ. ಆರ್. ಸಿಂಧ್ಯಾ ಇತ್ಯಾದಿ ತಮ್ಮ ಪಕ್ಷವನ್ನು ಬಿಟ್ಟು ಹೊರಬಂದು ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಬೇಕಾದ ಅಗತ್ಯ ಇದೆ.  ಎಲ್ಲರೂ ಒಗ್ಗೂಡಿ ಪರ್ಯಾಯ ರಾಜಕೀಯ ಶಕ್ತಿಗೆ ಬಲ ತುಂಬಬೇಕಾದ ಅಗತ್ಯ ಇದೆ.  ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟತೆಯ ವಿರುದ್ಧ ದಿಟ್ಟ ನಿಲುವಾಗಲಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವವಾಗಲಿ ಕಂಡುಬರುತ್ತಿಲ್ಲ.  ಕಾಂಗ್ರೆಸ್ಸಿನ ಯಾವ ನಾಯಕರೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇಚ್ಛಾಶಕ್ತಿಯನ್ನು ತೋರಿಸುವ ಸಂಭವ ಕಾಣಿಸುತ್ತಿಲ್ಲ.  ಹೀಗಿರುವಾಗ ಆ ಪಕ್ಷದಲ್ಲಿ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವ ಇರುವ ರಾಜಕಾರಣಿಗಳು ಇದ್ದು ಮಾಡುವುದೇನೂ ಉಳಿದಿಲ್ಲ.  ಅಲ್ಲಿ ಜೀ ಹುಜೂರ್ ಎಂದು ಬೆನ್ನು ಬಗ್ಗಿಸಿ ಗುಲಾಮಗಿರಿ ಮಾಡುವ ಬದಲು ಆತ್ಮಾಭಿಮಾನ ಇರುವ ರಾಜಕಾರಣಿಗಳು ಆ ಪಕ್ಷವನ್ನು ಧಿಕ್ಕರಿಸಿ ಹೊರಬರಬೇಕು.  ಎಡ ಪಕ್ಷಗಳು, ಪ್ರಗತಿಶೀಲ ಸಂಘಟನೆಗಳು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳು ಪ್ರಣಾಳಿಕೆಯೊಂದನ್ನು ರೂಪಿಸಿ ಒಗ್ಗೂಡಿ ಪರ್ಯಾಯ ಚುನಾವಣಾಪೂರ್ವ ಮೈತ್ರಿಕೂಟವೊಂದನ್ನು ಸ್ಥಾಪಿಸಿ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಚುನಾವಣೆಗೆ ಹೋದರೆ ಅನುಕೂಲ ಆಗಬಹುದು.  ಇಂದಿನ ಕರ್ನಾಟಕದ ಅತಂತ್ರ ಸ್ಥಿತಿಯನ್ನು ನೋಡಿದರೆ ಯಾವುದೇ ರಾಜಕೀಯ ಪಕ್ಷ ಬಹುಮತ ಪಡೆಯುವ ಸಂಭವ ಕಾಣಿಸುತ್ತಿಲ್ಲ.  ಹೀಗಾಗಿ ಕೇರಳದಲ್ಲಿ ಇರುವಂತೆ ಹಲವು ರಾಜಕೀಯ ಪಕ್ಷಗಳ  ಮೈತ್ರಿಕೂಟವೊಂದನ್ನು ಸ್ಥಾಪಿಸಿ ದೃಢವಾದ ಪ್ರಗತಿಶೀಲ ಸರಕಾರವೊಂದನ್ನು ನೀಡಲು ಸಾಧ್ಯವಿದೆ.

ಸಿದ್ಧರಾಮಯ್ಯನವರಂಥ ರಾಜಕಾರಣಿಗಳು ಕಾಂಗ್ರೆಸ್ಸಿನಂಥ ಯಜಮಾನ ಸಂಸ್ಕೃತಿಯ ಪಕ್ಷವನ್ನು ಸೇರಿದ್ದೇ ದೊಡ್ಡ ತಪ್ಪು.  ಆ ಪಕ್ಷದಲ್ಲಿ ಪ್ರಾಮಾಣಿಕ ಹಾಗೂ ಶಕ್ತ ನಾಯಕತ್ವ ಗುಣ ಉಳ್ಳ ರಾಜಕಾರಣಿಗಳಿಗೆ ಬೆಲೆ ಇಲ್ಲ.  ನಾಯಕತ್ವ ಗುಣ ಉಳ್ಳ ರಾಜಕಾರಣಿಗಳನ್ನು ಗುರುತಿಸುವ ವ್ಯವಸ್ಥೆಯೂ ಆ ಪಕ್ಷದಲ್ಲಿ ಇಲ್ಲ.  ಅಲ್ಲಿ ಏನಿದ್ದರೂ ಪಕ್ಷದ ಅಧ್ಯಕ್ಷರಿಗೆ, ಒಂದು ಕುಟುಂಬಕ್ಕೆ ನಿಷ್ಠೆ ತೋರುವವರಿಗೆ ಮಾತ್ರ ಬೆಲೆ.  ಆ ಕುಟುಂಬಕ್ಕೆ ರಾಜಕೀಯದ ಸಮರ್ಪಕ ಜ್ಞಾನವಾಗಲೀ, ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳೂ ತಿಳಿದಿರುವಂತೆ ಕಾಣುವುದಿಲ್ಲ.  ಭ್ರಷ್ಟಾಚಾರದ ವಿರುದ್ಧ ಹೋರಾಡುವ, ದೇಶದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವ ಎಲ್ಲ ಅಧಿಕಾರವಿದ್ದರೂ ಇಚ್ಚಾಶಕ್ತಿಯನ್ನು ಪ್ರದರ್ಶಿಸದ, ಅದನ್ನು ಬಳಸದ ನಿಷ್ಕ್ರಿಯ ನಾಯಕತ್ವ ದೇಶಕ್ಕೆ ಶಾಪವಾಗಿದೆ.  ಇದರಿಂದ ಹೊರಬರುವ, ಪರ್ಯಾಯವನ್ನು ರೂಪಿಸುವ ಅಗತ್ಯ ಇಂದು ಇದೆ.