Monthly Archives: June 2012

ಬಡ ಕೂಲಿ ಕಾರ್ಮಿಕ ರೈತ ಮಕ್ಕಳಿಗೆ ಇಂಗ್ಲಿಷ್

 – ಮಹದೇವ ಹಡಪದ

ಜಗತ್ತಿನ ಎಲ್ಲ ಭಾಷೆಯ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವೋ, ಛಾಯಾನುವಾದವೋ, ರೂಪಾಂತರವೋ…. ಒಟ್ಟಿನಲ್ಲಿ ಯಾವುದೇ ರೂಪದಲ್ಲಿ ಬಂದರೂ ಅದರ ಸ್ವಾದ ಸ್ವಾರಸ್ಯವನ್ನು ಕನ್ನಡದವರೇ ಆಗಿ ಓದುವ ನಮಗೆ ಇಂಗ್ಲಿಷಿನ ಷೇಕ್ಸಪೀಯರ್ ಕನ್ನಡದಲ್ಲಿ ಶೇಷಣ್ಣನಾಗಿಬಿಡುತ್ತಾನೆ. ನಮ್ಮದೇ ಏಕಾಂತದ ಒಳಗಿನ ಮೊಳಕೆಯೊಡೆಯುವ ಹೊತ್ತು-ಅವನ ಸಾನೆಟ್, ನಾಟಕಗಳಲ್ಲಿ ಕೇಂದ್ರವಾಗಿರುತ್ತದೆ. ಆದರೆ ಕನ್ನಡದ ಅಭಿಮಾನವೆಂಬ ಸ್ವಹಿತಾಸಕ್ತಿಯ ದುರಹಂಕಾರ ಡಬ್ಬಿಂಗ್ ವಿಷಯದಲ್ಲಿ ಏಕಾಏಕಿ “ಡಬ್ಬಿಂಗ್ ಕನ್ನಡ ಭಾಷೆಗೆ ಮಾರಕ” ಎಂದು ಗುಡುಗುವ ಮಹಾಶಯರ ಘರ್ಜನೆಯು ಹೇಗೆ ಹಾಸ್ಯಾಸ್ಪದವಾಗಿ ಕಾಣುತ್ತದೆಯೋ ಹಾಗೇ ಈ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ (6ನೇ ತರಗತಿಯಿಂದ) ಅಳವಡಿಸುವುದರ ವಿರುದ್ಧ ಗುಡುಗಿದವರ ಬಗ್ಗೆಯೂ ಅನುಮಾನ ಮೂಡುತ್ತದೆ.

ನಾನು ವಾಸಿಸುವ ಹಳ್ಳಿಯಲ್ಲಿ ಇಂಗ್ಲಿಷ್ ಮಾಧ್ಯಮದ ಕಾನ್ವೆಂಟ್ ಶಾಲೆಯೊಂದಿದೆ. ಇಲ್ಲಿಗೆ ಸೇರಲು ಬರುವ ಮತ್ತು ಸೇರ್ಪಡೆ ಪಡೆದಿರುವ ವಿದ್ಯಾರ್ಥಿಗಳೆಲ್ಲ ರೈತಕುಟುಂಬದಿಂದ ಬಂದವರು. ಅವರ ಕೈಯೊಳಗಿನ ಟ್ರಂಕು-ಹಾಸಿಗೆ ಸುರುಳಿ ನೋಡುತ್ತಿದ್ದ ಹಾಗೆ ಊಹಿಸಬಹುದಾದದ್ದು ಅಂದರೆ ಅವರೆಲ್ಲ ಹಳ್ಳಿ ಮಕ್ಕಳೇ ಎಂದು. ಹಾಗೆ ಅವರನ್ನು ಕರೆದು ಮಾತಾಡಿಸಿದಾಗ ತಿಳಿದದ್ದು ಅವರು ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡ ಕಾರಣಕ್ಕಾಗಿಯೇ ಇಷ್ಟು ದೂರ ಬಂದವರು. ಒಂದೇ ಸಂಸ್ಥೆಯ ಕನ್ನಡ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಸೀಟುಗಳು ಇನ್ನೂ ಪೂರ್ಣ ಭರ್ತಿಯಾಗಿಲ್ಲವಾದರೂ ಇಂಗ್ಲಿಷ್ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಮಿತಿಮೀರಿ ಪ್ರವೇಶಗಳು ಆಗಿದ್ದವು. ದುರಂತವೆಂದರೆ ಕಳೆದ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದ ಕೆಲವು ವಿದ್ಯಾರ್ಥಿಗಳಿಗೆ ತಡವಾಗಿ ಸೇರಲು ಬಂದ ಕಾರಣಕ್ಕಾಗಿ ಪ್ರವೇಶ ಸಿಕ್ಕದಾಗಿದೆ. ಹಾಗೆ ತಡವಾಗಿ ಪ್ರವೇಶ ಬಯಸಿ ಬಂದ ಸಾಣೇಹಳ್ಳಿಯ ಪಕ್ಕದ ಊರಿನ ಪೂಜಾ ಎಂಬ ಹುಡುಗಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರವೇಶ ಸಿಗಲಿಲ್ಲವೆಂಬ ಕಾರಣಕ್ಕಾಗಿಯೇ ದಿನಾಂಕ 09/ಜೂನ್/2012 ರಂದು ವಿಷ ಕುಡಿದು ಆತ್ಮಹತ್ಯೆಮಾಡಿಕೊಂಡಿದ್ದಾಳೆ. ಆ ಮಗಳ ತಂದೆ, ಆ ರೈತ, ಯಾವ ಕೆಲಸದ ಅವಸರಕ್ಕಾಗಿ ತಾನು ತಡವಾಗಿ ಬಂದನೋ ಅದನ್ನು ಶಪಿಸುತ್ತಿದ್ದಾನೆ. ಈ ಹಳ್ಳಿಮಕ್ಕಳ ಇಂಗ್ಲಿಷ್ ವ್ಯಾಮೋಹ-ಕನ್ನಡ ಪ್ರೀತಿಯನ್ನ ಕಂಡಾಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅವಶ್ಯಕತೆಯನ್ನು ಕುರಿತಾಗಿ ಗಹನವಾಗಿಯೇ ಆಲೋಚಿಸಬೇಕಾಗಿದೆ.

ಹುಲಿ ಸಿಂಹ ಶಾರ್ದೂಲಗಳ ಜೊತೆಗೆ ಹುಲ್ಲೆ ಹಸು ಕುರಿಗಳು ಒಡನಾಡಿಕೊಂಡು ಬದುಕುವ ಮಾರ್ಗವೊಂದು ತೆರೆದುಕೊಂಡದ್ದು ಈ ಇಂಗ್ಲಿಷ್ ಎಂಬ ಮಾಯಾವಿ ಭಾಷೆಯಿಂದ ಎಂಬುದನ್ನು ಅರ್ಥಮಾಡಿಕೊಳ್ಳುವುದಾದರೆ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ. ಆದರೆ ಈ ಬುದ್ಧಿವಂತ ವರ್ಗ ಹೋರಾಟದ, ಕೆಚ್ಚೆದೆಯ, ಬೀಸು ದೊಣ್ಣೆಯ ತುಂಬು ಅಭಿಮಾನದ ಗುಟುರು ಹಾಕುತ್ತಲಿದೆ. ಅದು ಯಾರ ವಿರುದ್ಧ – ಶೂದ್ರಾತಿಶೂದ್ರ ಬಡವರ, ಹಳ್ಳಿಗರ, ರೈತರ ಮಕ್ಕಳ ವಿರುದ್ಧ. ಭಾಷೆಯೂ ಕೀಳರಿಮೆಯನ್ನು ಸೃಷ್ಟಿಸುತ್ತದೆ.

ಹೊಸ ಸಂವೇದನೆಯೊಂದು ಇಂಗ್ಲಿಷ್ ಎಂಬ ಭಾಷೆಯೊಂದಿಗೆ ನಮ್ಮ ನೆಲಕ್ಕೆ ಬಂದಿರುವುದನ್ನು ನಾವು ಮರೆಯಬಾರದು. ಇಂಗ್ಲಿಷ್ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಮೊದಲು ತನ್ನ ಅಸ್ತಿತ್ವದ ನೆಲೆಯನ್ನು (ಇಂಡಿಯಾದ ಕರಾವಳಿಯಲ್ಲೂ) ಕಂಡುಕೊಂಡಿತು. ಅದನ್ನು ಕಲಿತ ಕನ್ನಡದಲ್ಲಿ ಯೋಚಿಸುವವನು ಅಂಗ್ರೇಜಿಯಲ್ಲಿ ವಿವರಿಸಬಲ್ಲವನಾಗಿರುತ್ತಾನೆ. ಅಂಥವನು ಎಲ್ಲ ದೇಶಗಳ ಎಲ್ಲ ಕಂಪನಿಗಳಲ್ಲೂ ಕೆಲಸ ಮಾಡಬಲ್ಲವನಾಗಿರುತ್ತಾನೆ. ಅವನಿಗೆ ಸಿಗುವ ಪ್ರಾಧಾನ್ಯತೆಯನ್ನು ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲೇ ವ್ಯವಹರಿಸಬಲ್ಲಾತನು ಪಡೆಯಲಾರ, ಇದನ್ನು ಅರ್ಥವತ್ತಾಗಿ ವಿವರಿಸುವ ಅಗತ್ಯವಿಲ್ಲ. ಯಾಕೆಂದರೆ ಮಾಧ್ಯಮದ ಆಯ್ಕೆಯಲ್ಲಿ ಎರಡು ವರ್ಗಗಳು ಗೆರೆ ಕೊರೆದುಕೊಂಡೇ ಹುಟ್ಟಿಕೊಳ್ಳುತ್ತಿರುವ ಈ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸಿಗುವ ಮಾನ್ಯತೆ ಕನ್ನಡಕ್ಕೆ ಸಿಕ್ಕಿಲ್ಲ. ಆದರೆ…

ಓದು ಚಿಂತನೆ ಅನ್ನುವುದು ವಿಶ್ವವ್ಯಾಪಕವಾಗಿ ಆಯಾ ಭಾಷೆಗಳಿಂದ ತುರ್ಜುಮೆಯ ರೂಪದಲ್ಲಿ ಸಿಕ್ಕುವುದು ಇಂಗ್ಲಿಷ್ ಎಂಬ ಕೊಂಡಿಯೊಂದರ ಮುಖೇನವೆಂಬುದು ಎಲ್ಲರಿಗೂ ತಿಳಿದ ಸತ್ಯ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್ ದೇವಭಾಷೆ ಏನೂ ಅಲ್ಲ. ಸಂಪರ್ಕ ಸಹಜವಾದ, ಇಂದಿನ ಜಗತ್ತಿನಲ್ಲಿ ಬಹುಸಂಖ್ಯಾತರಿಗೆ ತಿಳಿದ ಏಕೈಕ ಭಾಷೆ ಇಂಗ್ಲಿಷ್. ಆದ್ದರಿಂದ ಇಂಗ್ಲಿಷ್ ಮಾಧ್ಯಮವನ್ನು ಖುದ್ದಾಗಿ ಸರಕಾರವೇ ಅಳವಡಿಸುತ್ತಿರುವಾಗ ಅದನ್ನು ವಿರೋಧಿಸುವುದು ಯಾವ ನ್ಯಾಯ? ಕನ್ನಡದ ಆಸೆ-ಭಾಷೆಗಳೆರಡೂ ಆಳವಾಗಿ ಬೇರೂರಿರುವುದು ಬರೀ ಮೌಖಿಕವಾಗಿಯೇ ಏನೂ ಇಲ್ಲ. ಭಾಷೆಯ ಅಧ್ಯಯನ ಮತ್ತು ಸಂಶೋಧನೆಗಳೊಂದಿಗೆ ಕನ್ನಡದ ನೆಲೆ ದೂರದೃಷ್ಟಿವುಳ್ಳದ್ದಾಗಿದೆ. ಈಗ ನಿಜಕ್ಕೂ ಈ ಭಾಷೆಯ ವಿಷಯದಲ್ಲಿ ಮುಜುಗರ ಅನುಭವಿಸುತ್ತಿರುವವರು ನನ್ನಂತೆ ಹಿಂದುಳಿದ ವರ್ಗದಿಂದ ಬಂದವರು, ತೀರ ಬಡಕುಟುಂಬದಿಂದ ಬಂದವರು, ಹಳ್ಳಿಯಿಂದಲೇ ಓದು ಆರಂಭಿಸಿದವರು. ಕನ್ನಡದ ಪರವಾಗಿ ಮಾತಾಡುತ್ತಿರುವವರು ಕೆಲವರು ಸರಕಾರಿ ಶಾಲೆಯಲ್ಲಿ ಓದಿ ಬಂದದ್ದನ್ನ ಮತ್ತು ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವುದನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಸಮರ್ಥನೆ ಕೊಟ್ಟ ಕಾರಣಕ್ಕೆ ಇವರು ಭಾಷೆಯನ್ನು ಕಟ್ಟಲು, ಉಳಿಸಲು ಹೊರಾಟಕ್ಕೆ ಯೋಗ್ಯರು ಎಂಬ ಯಾವ ಗ್ರೇಡು ಸಿಗುತ್ತದೋ ಗೊತ್ತಿಲ್ಲ. ಆದರೆ ಇವರ ಅಭಿಮಾನ ಒಂದು ವರ್ಗದ ಜನರ ಕನ್ನಡದ ಪ್ರೀತಿಯನ್ನು, ಇಂಗ್ಲಿಷ್ ಕುರಿತಾದ ವ್ಯಾಮೋಹವನ್ನು ಹೊಸಕಿ ಹಾಕುತ್ತಿದೆ.

ಇಂಗ್ಲಿಷ್ ಮತ್ತು ಕನ್ನಡವೆಂಬ ಓದುವ ಮಾಧ್ಯಮದ ಒಳಾಂಗಣದ ಒಳಗೇ ರಚಿತಗೊಳ್ಳುವ ಈ ಎರಡು ವರ್ಗಗಳು ಬರೀ ಕನ್ನಡ-ಇಂಗ್ಲಿಷಿನದ್ದು ಎಂದು ವರ್ಗೀಕರಿಸಿದರೆ ತಪ್ಪಾದೀತು. ಇದರಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ(/ಹಿಂದುಳಿದ) ಎಂಬುದರ ನಡುವೆ ಮಧ್ಯಮ ವರ್ಗವೆಂಬ ಮತ್ತೊಂದು ಕವಲಿದೆ. ವಲಸಿಗರು ಮತ್ತು ಶ್ರಮಿಕ ನಗರವಾಸಿ ಮಕ್ಕಳು ಇಂಗ್ಲಿಷ್ ಮಾಧ್ಯಮವೆಂದು ಪ್ರವೇಶ ಪಡೆಯುವ ಎಷ್ಟೋ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅರೆಬರೆ ಶಿಕ್ಷಣ ಪಡೆಯುವ ಇವರು ಅಗಾಧವಾಗಿ ಕನ್ನಡವನ್ನು ಪ್ರೀತಿಸುತ್ತಾರೆ. ಅಂತೆಯೆ ಇಂಗ್ಲಿಷನ್ನು ಒಪ್ಪುತ್ತಾರೆ. ಇವರಲ್ಲಿ ಭಾಷೆಯ ಹಂಬಲದ ಕನಸುಗಳು ಭರವಸೆಯ ಬದುಕನ್ನು ಚಿಗುರಿಸುತ್ತಿರುತ್ತವೆ. ಕನ್ನಡದ ನವಮಾನವ ಕಲ್ಪನೆ ರೂಪುಗೊಳ್ಳುವುದಾದರೆ ಈ ಮಕ್ಕಳು ಹರಿದಾಡುವ ಅಂಗಳದಲ್ಲೆಲ್ಲ ಕನ್ನಡದ ಕಂಪು ಸೂಸೀತು, ಇವರ ಚೈತನ್ಯವೇ ಎರಡರ ಸೇತುವೆ ಆದೀತು ಎಂಬ ಭರವಸೆಯನ್ನು ನಾವು ಇಡಬಹುದಾಗಿದೆ. ಅವಸರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಿದರೆ ಸರಕಾರಿ ಶಾಲೆಗಳ ಬೋಧನಾ ಸೌಕರ್ಯ ಹೇಗಿದೆ? ಇಂಗ್ಲಿಷ್ ಕಲಿಕೆಯನ್ನು ಸಮರ್ಥವಾಗಿ ಮಾಡಬಲ್ಲ ಶಿಕ್ಷಕರು ಎಲ್ಲಿದ್ದಾರೆ ? ಇದು ದೂರದೃಷ್ಟಿಯುಳ್ಳ ಯೋಜನೆ ಅಲ್ಲ…  ಮುಂತಾಗಿ ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಳ್ಳುತ್ತವೆ, ಆದರೆ ಅಂತಹದ್ದೊಂದು ಅವಕಾಶ ಈ ಮಧ್ಯಮವರ್ಗೀಯ ಮಕ್ಕಳಿಗೆ ದಕ್ಕುತ್ತಿರುವಾಗ ಅಪ್ರಾಮಾಣಿಕ, ಹಣ ಮಾಡುವ ಅಡ್ಡೆಯಾದ, ಮ್ಯಾನೇಜ್‌ಮೆಂಟ್ ವರ್ಚಸ್ಸಿನ ಖಾಸಗಿ ಒಡೆತನದ ಶಾಲೆಗಳಿಗಿಂತ ಸರಕಾರೀ ಶಾಲೆಗಳೇ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಈ ವರ್ಷದ ಸರಕಾರಿ ಶಾಲೆಗಳ ಫಲಿತಾಂಶ ಗಮನಿಸಿದವರು ಅಲ್ಲಗಳೆಯಲಾರರು.

ದೂರದೃಷ್ಟಿ ಸರಕಾರಕ್ಕಿರಲಿಕ್ಕಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಳ್ಳುವ ಬಡಕೂಲಿ ಕಾರ್ಮಿಕರ ಮಕ್ಕಳಿಗೆ, ರೈತ ಕುಟುಂಬದ ಮಕ್ಕಳಿಗೆ ತಮ್ಮ ಬದುಕಿನ ದೂರದೃಷ್ಟಿ ಮತ್ತು ಅದಕ್ಕಾಗಿ ಇಂಗ್ಲಿಷ್ ವ್ಯಾಮೋಹ ಇರುವುದಂತೂ ಸತ್ಯ.

(ಚಿತ್ರಕೃಪೆ: ದ ಹಿಂದು, ವಿಕಿಪೀಡಿಯ, ಇತರೆ)

ಪ್ರೀತಿಯ ಜಾನ್, ನಿನಗೆ ಸಾಯಲಿಕ್ಕೆ ಯಾರು ಹೇಳಿದ್ದು?


-ಬಿ. ಶ್ರೀಪಾದ್ ಭಟ್ 


 

1986 ರಲ್ಲಿ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಮೊದಲ ಬಾರಿಗೆ ಜಾನ್ ಅಬ್ರಹಾಂ ನಿರ್ದೇಶನದ “ಅಗ್ರಹಾರತ್ತಿಲ್ ಕತ್ತೈ” ತಮಿಳು ಚಿತ್ರವನ್ನು ನೋಡಿದಾಗ ಆಗ ಮನಸ್ಸಿನಲ್ಲಿ ಉಂಟಾದ ಇನ್ನಿಲ್ಲದ ತುಮುಲಗಳು ಮತ್ತು ತಲ್ಲಣಗಳು ಮೊನ್ನೆ ಸ್ನೇಹಿತರೊಂದಿಗೆ 27 ವರ್ಷಗಳ ನಂತರ 5ನೇ ಬಾರಿ ಈ ಚಿತ್ರವನ್ನು ನೋಡಿದಾಗಲೂ ಸಹ ಅದೇ ತಲ್ಲಣ ಹಾಗೂ ಅನುಭವಗಳು ಈಗಲೂ ಉಂಟಾಯಿತು. ಹಳ್ಳಿಯೊಂದರಲ್ಲಿನ ಎಲ್ಲ ಅನಿಷ್ಟಗಳಿಗೆ ನಾಲ್ಕು ಕಾಲಿನ ಕತ್ತೆಯನ್ನು ಹೊಣೆಗಾರನನ್ನಾಗಿ ಮಾಡಿ ಅದನ್ನು ಬಾಡಿಗೆ ಹಂತಕರಿಂದ ಕೊಲ್ಲಿಸಲಾಗುತ್ತದೆ. ಆದರೆ ಕತ್ತೆ ಸತ್ತ ನಂತರ ಇದೇ ಹಳ್ಳಿಯಲ್ಲಿ ಪವಾಡ ಸದೃಶ್ಯ ಬದಲಾವಣೆಗಳಾಗುತ್ತವೆ. ಕಾಲಿಲ್ಲದವನಿಗೆ ಕಾಲು ಬರುತ್ತದೆ. ರೋಗಿಷ್ಟ ಗುಣಮುಖನಾಗುತ್ತಾನೆ. ಅಲ್ಲಿ ತಾವೇ ಸಾಯಿಸಿದ ಕತ್ತೆಯನ್ನು ದೇವರ ಮೂರ್ತಿಯಾಗಿ ಪ್ರತಿಷ್ಟಾಪಿಸುತ್ತಾರೆ. ನಂತರ ಸತ್ತ ಕತ್ತೆಯ ಕಳೇಬರವನ್ನು ಅತ್ಯಂತ ಗೌರವಪೂರ್ಣವಾಗಿ ದಹನ ಮಾಡಲು ನಿರ್ಧರಿಸುತ್ತಾರೆ. ಆದರೆ ದಹನದ ಸಂದರ್ಭದಲ್ಲಿ ಇಡೀ ಹಳ್ಳಿ ಸುಟ್ಟು ಹೋಗುತ್ತದೆ. ಕಡೆಗೆ ಉಳಿದುಕೊಳ್ಳುವುದು ಮೊದಲು ಆ ಕತ್ತೆಯನ್ನು ಸಾಕುತ್ತಿದ್ದ ಅಧ್ಯಾಪಕ ಮತ್ತು ಆತನ ಕೆಲಸದ ಹುಡುಗಿ ಮಾತ್ರ.

ಇಲ್ಲಿ ಜಾನ್ ತನ್ನ ಅದ್ಬುತ black humor ಮೂಲಕ ಇಡೀ ಚಿತ್ರವನ್ನು ಕಟ್ಟುವ ಶೈಲಿ ಮನಮುಟ್ಟುವಂತದ್ದು. ಆತ ಬಳಸುವ ಸಾಂಕೇತಿಕ ರೂಪಕಗಳು ಪ್ರತಿ ಫ್ರೇಮಿನಲ್ಲಿ ಕಲಾತ್ಮಕವಾಗಿ ಅತ್ಯಂತ ಒರಟಾಗಿ ಮೈದಾಳುತ್ತಾ ಹೋಗುತ್ತದೆ. ಈ ಚಿತ್ರವನ್ನು ಹೀಗೆಯೇ ಎಂದು ಹೇಳಲು ಈ ಕೆಲವು ವಾಕ್ಯಗಳಲ್ಲಿ ಸಾಧ್ಯವೇ ಇಲ್ಲ. ಈ ಜಾನ್‌ನನ್ನು ವಾಕ್ಯಗಳಲ್ಲಿ ವಿಮರ್ಶಿಸುವುದು ಬಲು ಕಷ್ಟ. ಅದು ಅಪೂರ್ಣ. ಆ ರೀತಿ ಮಾಡಲು ಹೊರಟರೆ ಅದು ವಿಮರ್ಶಕನ ಸೋಲು. ಆತನ ಚಿತ್ರವನ್ನು ನೋಡಿಯೇ ಅನುಭವಿಸಬೇಕು. ಅದೇ ರೀತಿ “ಅಮ್ಮ ಅರಿಯನ್” ಎನ್ನುವ ಸಂಕೀರ್ಣ ಸಿನಿಮಾದಲ್ಲಿ ಜಾನ್ ವ್ಯಕ್ತಿಯೊಬ್ಬನ ಐಡೆಂಟಿಟಿಯನ್ನು ಹುಡುಕುತ್ತಾ ಆ ಮೂಲಕ ವರ್ಗ ಸಂಘರ್ಷಗಳನ್ನು, ವಿದ್ಯಾರ್ಥಿ ಚಳವಳಿಗಳನ್ನು ಪರಾಮರ್ಶಿಸುತ್ತಾ, ಕೇರಳದ ಗ್ರಾಮಗಳ ಸಾಮಾಜಿಕ ಮತ್ತು ಫ್ಯೂಡಲ್ ಸಂರಚನೆಯನ್ನು ಅರ್ಥೈಸಿಕೊಳ್ಳಲು ಹುಡುಕಾಡುತ್ತಾನೆ. ಭೂಗತ ಚಳವಳಿಗಳ ಸೋಲನ್ನು ವಿಮರ್ಶಿಸುತ್ತಾನೆ. ಇಷ್ಟೊಂದು ಸಂಕೀರ್ಣ ವಿಷಯಗಳನ್ನು ಒಂದು ಬಂಧದಲ್ಲಿ ಪೋಣಿಸುತ್ತ ಸಿನಿಮಾವನ್ನು ನಾವಿಕನಂತೆ ಮುನ್ನಡೆಸುವಲ್ಲಿ ಜಾನ್ ಸಫಲನಾಗುತ್ತಾನೆ.

“ಅಮ್ಮ ಅರಿಯನ್” ಜಾನ್ ಅಬ್ರಹಾಂನ ಕುಶಲ ಹಾಗೂ ಪಳಗಿದ ಚಿತ್ರಕಥೆಯ ರಚನೆಗೆ ಅತ್ಯುತ್ತಮ ಉದಾಹರಣೆ. ತನ್ನ ಬದಲಾದ ಕಾಲಘಟ್ಟಗಳ ನಂತರವೂ, ಅನೇಕ ಸಾಮಾಜಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ, ಸಿದ್ಧಾಂಗಳ ಪಲ್ಲಟಗಳ ನಂತರವೂ ಒಂದು ಚಿತ್ರ ತನ್ನ ಮೊದಲಿನ ಕಾವನ್ನು ಉಳಿಸಿಕೊಂಡಿದ್ದರೆ ಅದು ಶ್ರೇಷ್ಟ ಚಿತ್ರವೇ ಸರಿ ಹಾಗೂ ಅದರ ನಿರ್ದೇಶಕನೂ ಸಹ. ಈತನ ಈ ಚಿತ್ರಗಳು ಕೇರಳದಲ್ಲಿ, ತಮಿಳುನಾಡಿನಲ್ಲಿ ಎಲ್ಲಾ ವರ್ಗಗಳಿಗೂ ತಲುಪಿದ್ದು ಇದರ ಬಲು ದೊಡ್ಡ ಗೆಲುವು. ಇದಲ್ಲದೆ ಈ ಪ್ರತಿಭಾವಂತ ಜಾನ್ ಅಬ್ರಹಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ “ವಿದ್ಯಾರ್ಥಿಗಳೆ ಇದಿಲೆ ಇದಿಲೆ”, ಮತ್ತೊಂದು ಮಲೆಯಾಳಿ ಸಿನಿಮಾ ಹೀಗೆ ನಾಲ್ಕು ಸಂವೇದನಶೀಲ, ಸೂಕ್ಷ್ಮ ಸಿನಿಮಾಗಳ ಮೂಲಕ ತನ್ನ ಜೀವನವನ್ನು ನಿಜಕ್ಕೂ ಸಾರ್ಥಕಗೊಳಿಸಿಕೊಂಡ.

ಆದರೆ ಜಾನ್ ವಿಷಯದಲ್ಲಿ ಇದೂ ಕೂಡ ಬಲು ದೊಡ್ಡ ವ್ಯಂಗ್ಯವೇ ಸರಿ!! ಏಕೆಂದರೆ ತನ್ನ 49ನೇ ವಯಸ್ಸಿನಲ್ಲಿ ಮಹಡಿಯ ಮೇಲಿಂದ ಬಿದ್ದು ತೀರಿಕೊಂಡ ಈ ಜಾನ್ ಅಬ್ರಹಂನನ್ನು ಭಾರತೀಯ ಚಿತ್ರರಂಗ ವಿಕ್ಷಿಪ್ತ ವ್ಯಕ್ತಿಯನ್ನಾಗಿಯೂ, ಒಬ್ಬ ಪ್ರತಿನಾಯಕನನ್ನಾಗಿಯೇ ಮತ್ತು ತಂಟೆಕೋರನನ್ನಾಗಿಯೇ ನೋಡಿತು. ಅನೇಕ ವಿಮರ್ಶಕರು ಈತನನ್ನು ಹುಚ್ಚನೆಂದೇ, ಅರಾಜಕತೆವಾದಿಯೆಂದೇ ಕರೆದರು. ಜಾನ್‌ನ ಗುರುವಾಗಿದ್ದ ಮತ್ತೊಬ್ಬ ಶ್ರೇಷ್ಟ ನಿರ್ದೇಶಕ “ಖುತ್ವಿಕ್ ಘಟಕ್” ವಿಷಯವಾಗಿಯೂ ಇದೇ ರೀತಿ ವ್ಯತಿರಿಕ್ತವಾಗಿ ನಡೆದುಕೊಂಡಿತು ಇಂಡಿಯಾದ ಚಿತ್ರರಂಗ. ಇಂತಹ ಹಿನ್ನೆಯಲ್ಲಿ ಮತ್ತೆ ನಮ್ಮ ಅಭಿಮಾನಿ ನಿರ್ದೇಶಕನನ್ನು ನೆನೆಸಿಕೊಳ್ಳುವುದು ತುಂಬಾ ಕ್ಲೀಷೆಯಾಗುತ್ತದೆ. ಈ ಮಲೆಯಾಳಿ ಹಿನ್ನೆಲೆಯ ಜಾನ್ ಅಬ್ರಾಹಂ ಎನ್ನುವ ಶ್ರೇಷ್ಟ ಚಿತ್ರ ನಿರ್ದೇಶಕನನ್ನು ಯಾವ ರೀತಿ ನೆನೆಯುವುದು ಎನ್ನುವುದು ತುಂಬಾ ಕ್ಲಿಷ್ಟದ ಕೆಲಸ.

ಸ್ವತಹ ಅತ್ಯಂತ ಸಂಕೀರ್ಣತೆಯ ಗೂಡಾಗಿದ್ದ ಈ ಪ್ರತಿಭಾವಂತ ಜಾನ್ ಅಬ್ರಾಹಂ ಒಂದು ಕಾಲದಲ್ಲಿ ಅದರಲ್ಲೂ 80ರ ದಶಕದಲ್ಲಿ ಕಾಲೇಜು ವಿಧ್ಯಾರ್ಥಿಗಳಾಗಿದ್ದ ನಮಗೆಲ್ಲ ಬಲು ದೊಡ್ಡ ಆದರ್ಶ ನಿರ್ದೇಶಕನಾಗಿದ್ದ. ಸಂಪೂರ್ಣವಾಗಿ ಭಿನ್ನವಾಗಿ ಮಾರ್ಕ್ಸವಾದವನ್ನು ಈತ ಅರ್ಥೈಸಿಕೊಂಡಿದ್ದ. ಇಲ್ಲಿ ರೋಮಾಂಟಿಸಂ ಇತ್ತು. ಮಲೆಯಾಳಂ ಮತ್ತು ತಮಿಳು ಚಿತ್ರ ನಿರ್ದೇಶಕನಾಗಿದ್ದ ಜಾನ್ ಮೂಲಭೂತವಾಗಿ ಮಾನವತಾವಾದಿಯಾಗಿದ್ದ. ಈ ಮಾನವತಾವಾದದ ಮೂಲಕವೇ ಚಿತ್ರರಂಗವನ್ನು ಬಳಸಿಕೊಂಡು ಸಾಮಾಜಿಕ ಬದಲಾವಣೆಗಳನ್ನು ಮಾಡಬಹುದು ಎಂದು ಅತ್ಯಂತ ಮುಗ್ಧವಾಗಿ ನಂಬಿದ್ದ ಮಾರ್ಕ್ಸವಾದಿ ಜಾನ್ ಅಬ್ರಹಂ ಎನ್ನುವ ಮುಗ್ಧ ನಿರ್ದೇಶಕನ್ನು ನಾವೂ ಈ ಕಾರಣಕ್ಕಾಗಿಯೇ ಅತ್ಯಂತ ಮುಗ್ಧತೆಯಿಂದ ಆರಾಧಿಸಿದ್ದೆವು. ತನ್ನ ಜೀವವಿಮಾ ಉದ್ಯೋಗವನ್ನು ತೊರೆದು ಪುಣೆಯ ಫಿಲ್ಮ ಇನ್ಸ್‌ಸ್ಟಿಟ್ಯೂಟಗೆ ಬಂದಾಗ ಅಲ್ಲಿ ಜಾನ್‌ಗೆ ಸಹಪಾಠಿಯಾಗಿದ್ದು “ಅಡೂರು ಗೋಪಾಲಕೃಷ್ಣನ್” ಹಾಗೂ ಬಹಳ ಮುಖ್ಯವಾಗಿ ಈತನ ಗುರುವಾಗಿದ್ದು ಮಹಾನ್ ನಿರ್ದೇಶಕ “ಖುತ್ವಿಕ್ ಘಟಕ್”. ಆದಷ್ಟು ನಯನಾಜೂಕತೆಯನ್ನು ಪಕ್ಕಕ್ಕೆ ಇಟ್ಟು ತನ್ನೊಳಗಿನ ಪ್ರತಿಭೆಯನ್ನೆಲ್ಲ ಬಳಸಿ ಅತ್ಯಂತ RAW ಮಟ್ಟದಲ್ಲಿ, ಮನಮುಟ್ಟುವಂತೆ ಚಿತ್ರಕಥೆಯನ್ನು ರೂಪಿಸುವುದನ್ನು ಈ ಜಾನ್ ತನ್ನ ಗುರುಗಳಾದ ಹಾಗೂ ಈ ಮಾದರಿಯ ಪಿತಾಮಹರೆಂದೇ ಕರೆಬಹುದಾದ ಮಾಂತ್ರಿಕ “ಖುತ್ವಿಕ್ ಘಟಕ್” ರಿಂದ ಬಹಳ ಚೆನ್ನಾಗಿಯೇ ಕಲೆತ. (ಕನ್ನಡದಲ್ಲಿ ಇದಕ್ಕೆ ಅತ್ಯತ್ತಮ ಉದಾಹರಣೆ ಪಿ.ಲಂಕೇಶರ ಪಲ್ಲವಿಚಿತ್ರ) ನಿರ್ದೇಶಕ ಅಡೂರ ಗೋಪಾಲಕೃಷ್ಣ ಹೇಳುವಂತೆ “ಖುತ್ವಿಕ್ ಘಟಕ್” ಅವರು ಜಾನ್‌ನನ್ನು ತಮ್ಮ ವಿದ್ಯಾರ್ಥಿಗಳಲೆಲ್ಲ ಅತ್ಯಂತ ಪ್ರತಿಭಾವಂತನೆಂದೂ ಮುಂದೆ ಈತ ಬಲು ದೊಡ್ಡ ಬದಲಾವಣೆಯ ಹರಿಕಾರನಾಗುತ್ತಾನೆಂದು ಹೇಳುತ್ತಿದ್ದರು. ಇದು ಇಂದಿಗೆ ನಿಜವಾಗಿದೆ. ಜಾನ್ ಅಬ್ರಹಂನ ಆತ್ಮವಾಗಿದ್ದ, ಅತ್ಯಂತ ಕಲಾತ್ಮಕವಾದ, ಮಾನವೀಯತೆ ನೆಲೆಯ black humor ಇಂದು ಅನೇಕ ಪ್ರತಿಭಾವಂತ ನಿರ್ದೇಶಕರ ಟ್ರಂಪ್ ಕಾರ್ಡ ಆಗಿದೆ. ಇಂದಿನ ಬ್ರಿಡ್ಜ ಅಥವಾ ಪರ್ಯಾಯ ಚಿತ್ರಗಳ ಜೀವಾಳವೇ ಒಂದು ಕಾಲದಲ್ಲಿ ಜಾನ್ ರೂಪಿಸಿದ black humor. ನಿರ್ದೇಶಕನಾದವನು ಅದರಲ್ಲೂ ಸೂಕ್ಷ್ಮ ಮನಸ್ಸಿನ ನಿರ್ದೇಶಕನಾದವನು ತನ್ನೆಲ್ಲ ಸಾತ್ವಿಕತೆಯನ್ನು ಬಿಟ್ಟುಕೊಡದೆ ತನ್ನೊಳಗಿನ angst ಅನ್ನು ತೆರೆಯ ಮೇಲೆ ಸಾಕಾರಗೊಳಿಸಿ ಕಡೆಗೆ ತಮ್ಮ ಮೂಲ ಉದ್ದೇಶವನ್ನು, ಚಿಂತನೆಗಳನ್ನು validate ಆಗುವಂತೆ ಸಫಲತೆಯನ್ನು ಸಾಧಿಸುವುದನ್ನು “ಖುತ್ವಿಕ್ ಘಟಕ್” ತಮ್ಮ ಶಿಷ್ಯ ಜಾನ್‌ಗೆ ಸಮರ್ಥವಾಗಿಯೇ ಹೇಳಿಕೊಟ್ಟರು. ಒಂದು ವೇಳೆ ಜಾನ್ ಅಬ್ರಾಹಂ “ಖುತ್ವಿಕ್ ಘಟಕ್” ಅವರ ಸಂಪರ್ಕಕ್ಕೆ ಬರದಿದ್ದರೆ ಈಗಿನಂತೆ ತನ್ನ ಚಿತ್ರಗಳನ್ನು ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಜಾನ್ ನಿರ್ದೇಶನದ ಕಡೆಯ ಸಿನಿಮಾ “ಅಮ್ಮ ಅರಿಯನ್” ಒಂದು ರೀತಿಯಲ್ಲಿ ತಾಯಿ ಮತ್ತು ಗುರುವಿಗೆ ಸಲ್ಲಿಸಿದ ಗ್ರೇಟ್ Tribute. ಇದರ ಮಾಂತ್ರಿಕತೆಯನ್ನು ನಾವು ಈ ಚಿತ್ರ ನೋಡಿಯೇ ಅನುಭವಿಸಬೇಕು.

ಸಮುದಾಯದತ್ತ ಸಿನಿಮಾ ಮಾಧ್ಯಮವನ್ನು ಕೊಂಡೊಯ್ಯುವ ತನ್ನ ಕನಸಿನ ಭಾಗವಾಗಿಯೇ 1986 ರಲ್ಲಿ “ಒಡೆಸ್ಸ ಮೂವೀಸ್” ಅನ್ನು ಸ್ಥಾಪಿಸಿದ. ಇದನ್ನು ಜನಪರ ಸಿನಿಮಾ ಚಳವಳಿ ಎಂದು ಕರೆದ. ತನ್ನ ಸಮಾನಮನಸ್ಕ ಗೆಳೆಯರೊಂದಿಗೆ ಸೇರಿಕೊಂಡು ಸಿನಿಮಾದಲ್ಲಿ ವ್ಯಾಪಾರೀಕರಣವನ್ನು ಕುಂಠಿತಗೊಳಿಸಿ ಬದಲಾಗಿ ಸಿನಿಮಾದ ಮೂಲಕ ಸಾಮಾಜಿಕ ಕಳಕಳಿಗಳನ್ನು ವ್ಯಕ್ತಪಡಿಸುತ್ತ, ಸಾಮಾಜಿಕ ಬದಲಾವಣೆಗಳನ್ನು ಸಿನಿಮಾದ ಮೂಲಕ ತರಬೇಕು (ಎಂತಹ ಆಸೆಗಳು!!) ಈ ಮೂಲಕ ಚಿತ್ರರಂಗದ ಪಟ್ಟಭದ್ರ ಹುಸಿಯನ್ನು ಒಡೆಯುವುದು ಜಾನ್‌ನ ಉದ್ಧೇಶವಾಗಿತ್ತು. ಆದರೆ ದುರಂತವೆಂದರೆ ಇದನ್ನು ಸ್ಥಾಪಿಸಿ ಒಂದು ವರ್ಷದ ನಂತರ 1987 ರಲ್ಲಿ ಜಾನ್ ತೀರಿಕೊಂಡ. 80ರ ದಶಕದ ಆರಂಭದ ವರ್ಷಗಳಲ್ಲಿ ಕಥೆಗಳನ್ನು ಬರೆದು ಪ್ರಕಟಿಸಿದ. ನಾಟಕಗಳನ್ನು ರಚಿಸಿ ನಿರ್ದೇಶಿಸಿದ. ಹಲವಾರು ಚಿತ್ರಕಥೆಗಳನ್ನು ಬರೆದು ಕೇರಳದಾದ್ಯಂತ ಅಲೆದ. ಒಂದು ಡಾಕ್ಯುಮೆಂಟರಿ ಸಿನಿಮಾ ಸಹ ಮಾಡಿದ. ಆದರೆ ಈ ಕಾಲಘಟ್ಟದಲ್ಲಿ ತೀರಾ ವಿಕ್ಷಿಪ್ತನಾಗಿದ್ದ ಜಾನ್ ಕುಡಿತವನ್ನು ತೀವ್ರವಾಗಿ ಬೆಳಸಿಕೊಂಡ. ತನ್ನ ಜೀವಮಾನ ಪೂರ್ತಿ ಜಂಗಮನಾಗಿಯೇ ಕಳೆದ ಜಾನ್ ಅಬ್ರಹಂ ಅನೇಕ ವೇಳೆ ಕುಡಿತದ ಅಮಲಿನಲ್ಲಿ ಸಾರ್ವಜನಿಕವಾಗಿ ವಿಕ್ಷಿಪ್ತನಾಗಿ. ನಿರ್ಗತಿಕನಾಗಿ ತಿರುಗುತ್ತಿದ್ದ.

ಆದರೆ ತನ್ನ ವೈಯುಕ್ತಿಕ ಬದುಕನ್ನು ವ್ಯವಸ್ಥೆಯ ಅಗತ್ಯಕ್ಕೆ ತಕ್ಕಂತೆ ಆದಷ್ಟು ಚೊಕ್ಕವಾಗಿ, ನೇರವಾಗಿ ಹೊಂದಿಸಿಕೊಳ್ಳುತ್ತ ಒಬ್ಬ ಮಧ್ಯಮವರ್ಗದ Gentleman ಆಗಿ ಪ್ರಸಿದ್ಧಿ ಹೊಂದುವುದನ್ನು ಜಾನ್ ವಿಷಯದಲ್ಲಿ ಸಾಧ್ಯವೇ ಇರಲಿಲ್ಲ. ತನ್ನ ಇಷ್ಟದಂತೆ ಬದುಕಿದ ಜಾನ್ ಅಬ್ರಾಹಂನನ್ನು ಸಹಜವಾಗಿಯೇ ಈ ವ್ಯವಸ್ಥೆ ಎಂದೂ ಒಳಗೊಳ್ಳಲೇ ಇಲ್ಲ. ಆಗ ಅವನ ಮನಸ್ಸಿನಲ್ಲಿ ಏನಿತ್ತೋ? ತಮ್ಮ “ಸಿನೆಮಾ, ಸಾಹಿತ್ಯ ಮತ್ತು ಜೀವನ” ಎನ್ನುವ ಪುಸ್ತಕದಲ್ಲಿ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರು ಜಾನ್ ಅಬ್ರಹಂನೊಂದಿಗಿನ ತಮ್ಮ ಒಡನಾಟವನ್ನು ಈ ರೀತಿಯಾಗಿ ವಿವರಿಸಿದ್ದಾರೆ.

“ನಾನು ಮತ್ತು ಜಾನ್ ಅಬ್ರಹಂ ಒಟ್ಟಿಗೆ ಪೆಸ್ಸಾರೋ ಫಿಲ್ಮ ಫೆಸ್ಟಿವಲ್‌ಗೆ ಇಟಲಿಗೆ ಹೊರಟಿದ್ದೆವು. ಆ ಸಂದರ್ಭದಲ್ಲಿ ಜಾನ್ ಖರೀದಿಸಿದ್ದ ಹೊಸ ಜೊತೆಯ ಶೂಗಳು ಅವನ ಕಾಲಿಗೆ ಹೊಂದುತ್ತಿರಲಿಲ್ಲ. ಇನ್ನೇನು ವಿಮಾನ ಹೊರಡುವ ಕೆಲವೇ ನಿಮಿಷಗಳಲ್ಲಿ ಜಾನ್ ಇಮ್ಮಿಗ್ರೇಷನ್ ಪರವಾನಗಿಯನ್ನು ಹೊಂದಿರಲಿಲ್ಲ ಎನ್ನುವುದು ನಮಗೆ ಗೊತ್ತಾಯಿತು. ಆದರೆ ಕೆಲವು ಉನ್ನತ ಅಧಿಕಾರಿಗಳ ಸಹಾಯದಿಂದ ಇದನ್ನು ಬಗೆಹರಿಸಲಾಯಿತು. ಇಟಲಿಯಲ್ಲಿ ನಾವೆಲ್ಲರೂ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಉಣ್ಣೆಯ ಸ್ವೆಟರ್‌ ಅನ್ನು ಧರಿಸಿದ್ದರೆ ಈ ನಮ್ಮ ಜಾನ್ ಕೇವಲ ಹತ್ತಿಯ ಬಟ್ಟೆಗಳನ್ನು ಧರಿಸಿದ್ದ. ರಾತ್ರಿಯ ವೇಳೆ ನಾವೆಲ್ಲ ಬೆಚ್ಚಗಿನ ರೂಮಿನಲ್ಲಿ ಗಾಢವಾಗಿ ನಿದ್ರಿಸುತ್ತಿದ್ದರೆ ಈ ಜಾನ್ ಆ ಕತ್ತಲ ರಾತ್ರಿಗಳಲ್ಲಿ ಇಟಲಿಯ ಬೀದಿಗಳನ್ನು ಸುತ್ತುತ್ತಿದ್ದ. ಇಟಲಿಯಲ್ಲಿ ಕೇವಲ ತನ್ನ ಮುಗ್ಧತೆ, ನಡತೆ ಮತ್ತು ಪ್ರತಿಭೆಯ ಮೂಲಕ ಅಲ್ಲಿನ ಜನರ ನಡುವೆ ಬಹಳ ಜನಪ್ರಿಯನಾಗಿದ್ದ. ಚಿತ್ರೋತ್ಸವದಲ್ಲಿ “ಆಗ್ರಹಾರದಲ್ಲಿ ಕತ್ತೆ” ಚಿತ್ರ ಪ್ರದರ್ಶನದ ನಂತರ ವೇದಿಕೆಯ ಮೇಲೆ ಚಿತ್ರಕ್ಕೆ ಸಂಬಂಧ ಪಟ್ಟಂತೆ ಸಂವಾದಕ್ಕಾಗಿ ಜಾನ್ ವೇದಿಕೆಯೆನ್ನು ಏರುವ ದೃಶ್ಯ ಮತ್ತು ಅದಕ್ಕಾಗಿ ಪ್ರಶಂಸೆಯಿಂದ ಮತ್ತು ಕಾತರದಿಂದ ಕಾಯುತ್ತಿದ್ದ ಅಲ್ಲಿನ ಪ್ರೇಕ್ಷಕರು ಈ ದೃಶ್ಯಗಳನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ವ್ಯಾಟಿಕನ್‌ನಲ್ಲಿನ ಸುಪ್ರಸಿದ್ದ ಸೇಂಟ್ ಪೀಟರ್ ಬಾಸಿಲಿಕ ಚರ್ಚ್‌ನ ಒಳಗೆ ನಿಂತು ತುಂಟತನದಿಂದ ಮತ್ತು ಹೆಮ್ಮೆಯಿಂದ ಜಾನ್ ಹೇಳಿದ್ದು “ಇಲ್ಲಿ ಒಬ್ಬ ಕ್ರಿಶ್ಚಿಯನ್ ನಿಂತುಕೊಂಡು ಚಣಮಟ್ಟಕ್ಕೆ ದುರಹಂಕಾರಿಯಾದರೆ ಅದು ಅವನ ತಪ್ಪಲ್ಲ”. ಅನೇಕ ವರ್ಷಗಳ ನಂತರ ನನ್ನ ಮನೆಗೆ ಬಂದ ಜಾನ್ ಅಬ್ರಹಂ ನನ್ನ ಮಗಳನ್ನು ತಮಾಷೆಯಾಗಿ ಕೇಳಿದ “ನಿನಗೆ ಬೆಳೆಯಲಿಕ್ಕೆ ಯಾರು ಹೇಳಿದ್ದು?”. ಈಗ ನಾನು ಜಾನ್‌ನನ್ನು ಕೇಳಬೇಕೆಂದುಕೊಂಡಿದ್ದು “ಪ್ರೀತಿಯ ಜಾನ್, ನಿನಗೆ ಸಾಯಲಿಕ್ಕೆ ಯಾರು ಹೇಳಿದ್ದು?””

 ಹೌದು, ನಮ್ಮ ಪ್ರೀತಿಯ ಜಾನ್, ನಿನಗೆ ಸಾಯಲಿಕ್ಕೆ ಯಾರು ಹೇಳಿದ್ದು?

ಇದೆಲ್ಲ ಮತ್ತೆ ನೆನಪಾಗಿದ್ದು ಕನ್ನಡದ ಅದ್ಭುತ ರಂಗ ನಟ ಏಣಗಿ ನಟರಾಜ ತೀರಿಕೊಂಡಾಗ. ಏಣಗಿ ನಟರಾಜ ಸಹ ಅಷ್ಟೇ ವ್ಯವಸ್ಥೆಯ ಅನಾದರಕ್ಕೆ ಬಲಿಯಾದ ನಿಜದ ನಟರಾಗಿದ್ದರು. ತನ್ನ ಸಹಜ ಶೈಲಿಯ ನಟನೆಯ ಮೂಲಕ ಅದ್ಭುತವೆನ್ನಿಸುವಷ್ಟರ ಮಟ್ಟಿಗಿನ Body language ಅನ್ನು ಬಳಸುತ್ತಿದ್ದ ಏಣಗಿ ನಟರಾಜ ಹುಟ್ಟು ನಟರಾಗಿದ್ದರು. ಇವರ ನಟನೆಯ ಪರಿಪೂರ್ಣತೆಯನ್ನು ನೋಡಬೇಕೆಂದರೆ ಟಿವಿ ದಾರವಾಹಿ ಸಂಕ್ರಾತಿಯಲ್ಲಿ ಅವರ ಶೇಷಪ್ಪನ ಪಾತ್ರದ ಅಭಿನಯವನ್ನು ನೋಡಬೇಕು. ಕೆ.ರಾಮಯ್ಯನವರ ದೇಸಿ ಸೊಗಡಿನ ಅದ್ಭುತ ಕಥೆ ಮತ್ತು ಚಿತ್ರಕಥೆಗೆ ಈ ನಟ ಸ್ಪಂದಿಸಿದ ರೀತಿ ಸಹ ಅಷ್ಟೇ ಮನನೀಯವಾಗಿತ್ತು. ಇದು ನೆಲದ ಒರಿಜಿನಲ್ ನಟನೆಯ ಭಾಷೆ. ಸಂಪೂರ್ಣ ಜೀವಪರ ಭಾಷೆ. ಈ ಭಾಷೆಯನ್ನು ಏಣಗಿ ನಟರಾಜರು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ ಈ ಸಮರ್ಥ ಭಾಷೆಯನ್ನು ಒಳಗೊಳ್ಳುವ ಮನೋಭಾವ, ಸೂಕ್ಷ್ಮ ಮಟ್ಟದ ಗ್ರಹಿಕೆ ನಮ್ಮ ಕನ್ನಡ ಚಿತ್ರರಂಗಕ್ಕಾಗಲಿ, ಕನ್ನಡದ ಪ್ರೇಕ್ಷಕರಿಗಾಗಲಿ ಕಡೆವರೆಗೂ ಬರಲಿಲ್ಲ. ಪರಿಣಾಮ ಏಣಗಿ ನಟರಾಜರು ಎಲ್ಲಿಯೂ ಸಲ್ಲದೇ ಗುರುತಿಲ್ಲದೆಯೇ ಬದುಕಿದರು. ಹಾಗೆಯೇ ತೀರಿಕೊಂಡರು ಸಹ.

ನಮ್ಮೆಲ್ಲರ ಅಮಾನವೀಯತೆಯ ನಡೆಗಳಿಗೆ ಕೊನೆಯೇ ಇಲ್ಲವೇ?

ಸಾಹಿತಿಗಳ ಮಕ್ಕಳಿಗೆ ಇಂಗ್ಲಿಷ್ : ಪರರ ಮಕ್ಕಳಿಗೆ ಕನ್ನಡ


-ಸೂರ್ಯ ಮುಕುಂದರಾಜ್


 

ಸರ್ಕಾರ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಆದೇಶವನ್ನು ಕನ್ನಡದ ಖ್ಯಾತ ಸಾಹಿತಿಗಳೆಲ್ಲ ವಿರೋಧಿಸಿ, ಆದೇಶವನ್ನು ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಒಬ್ಬರು, ಸಾಹಿತ್ಯ ಪರಿಷತ್ತಿನ ಮುಂದೆ ಆಮರಣಾಂತ ಉಪವಾಸ ಕೂಡುವುದಾಗಿ ಪರಿಷತ್ತಿನ ಅಧ್ಯಕ್ಷರು ಹೀಗೆ ತಮಗೆ ತೋಚಿದ ಹೋರಾಟದ ಮಾದರಿಗಳನ್ನೆಲ್ಲಾ ಪ್ರಯೋಗ ಮಾಡುವುದಾಗಿ ಗುಡುಗಿದ್ದಾರೆ. ಇವರೆಲ್ಲರಿಗೂ ಸಾಮಾನ್ಯವಾಗಿ ಎದುರಾಗುವ ಒಂದು ಪ್ರಶ್ನೆಯೆಂದರೆ ನಿಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳುಹಿಸಿದ್ದೀರಾ? ಈ ಪ್ರಶ್ನೆಗೆ ಅವರ ಉತ್ತರ ಯಾವ ಸರ್ಕಾರಿ ಶಾಲೆ ಚೆನ್ನಾಗಿದೆ ರೀ ಸೇರಿಸೋದಕ್ಕೆ? ಅಂತ ಪ್ರತಿ ಪ್ರಶ್ನೆ ಎದುರಾಗುತ್ತದೆ. ಅಂದರೆ ಇವರ ಮಕ್ಕಳು ಮೊಮ್ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಬೇಕು, ಬಡ ಕನ್ನಡಿಗನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಬೇಕು. ಸರ್ಕಾರದ ಮೇಲೆ ಇಷ್ಟೆಲ್ಲಾ ಭೀಕರ ಯುದ್ಧ ಸಾರುವ ಈ ವೀರ ಕನ್ನಡಗರು ಯಾವ ನೈತಿಕತೆಯಿಟ್ಟುಕೊಂಡು ಹೋರಾಟ ಮಾಡುತ್ತಾರೋ ತಿಳಿಯದು.

ಇದಕ್ಕೆ ಸಂಬಂಧಪಟ್ಟಂತೆ ಒಂದು ಘಟನೆಯನ್ನು ಇಲ್ಲಿ ಪ್ರಾಸ್ತಾಪ ಮಾಡುತ್ತೇನೆ. ಕೆಲವು ತಿಂಗಳ ಹಿಂದೆ 5 ಕ್ಕಿಂತ ಕಡಿಮ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಒಂದು ವಿದ್ಯಾರ್ಥಿ ಸಂಘಟನೆ ಶಾಸಕರ ಭವನದಲ್ಲಿ ಸಭೆ ಕರೆದಿತ್ತು. ಆ ಸಭೆಗೆ ಭಾಗವಹಿಸಿದ್ದ ಬಹುಪಾಲು ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದು ನಗರದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ರೈತ ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು. ಇವರನ್ನು ಎದುರಿಗೆ ಕೂರಿಸಿಕೊಂಡು ನಟ ಕಂ ಚಿಂತಕರೊಬ್ಬರು ನನಗೆ ಈ ವಯಸ್ಸಿನಲ್ಲಿ ರಕ್ತ ಕುದಿತಾ ಇದೆ, ನಿಮಗೆಲ್ಲಾ ಏನೂ ಅನ್ನಿಸ್ತಲ್ಲವಾ? ಅಂತ ಪಾಪದ ಹುಡುಗರ ಮುಂದೆ ತಮ್ಮ ಭಾಷಾ ಪ್ರೇಮವನ್ನು ಪ್ರದರ್ಶಿಸಿ ಒಂದೆರೆಡು ನಿಮಿಷ ವೇದಿಕೆಯಲ್ಲಿದ್ದು ನಿರ್ಗಮಿಸಿದರು.

ಬೆಳಿಗ್ಗೆ 10ಕ್ಕೆ ಆರಂಭವಾದ ಈ ಸಭೆ ಮಧ್ಯಾಹ್ನ 2.30 ರವರೆಗೂ ಧೀರ್ಘವಾಗಿ ನಡೆಯಿತು. ಅಲ್ಲಿಯವರೆಗೂ ಈ ಬಡ ಹಾಸ್ಟೆಲ್ ವಾಸಿಗಳು ಹಸಿದ ಹೊಟ್ಟೆಯಲ್ಲಿ ಸರ್ಕಾರದ ಆದೇಶದ ಬಗ್ಗೆ ಕಣ್ಣುಗಳಲ್ಲಿ ಕೆಂಡಕಾರುವಂತಹ ಭಾಷಣಗಳನ್ನು ಕೇಳಿ ಹೋರಾಟಕ್ಕೆ ಸಜ್ಜಾಗಿದ್ದರು. ನಂತರ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯಕ್ಕೆ ವೇದಿಕೆ ಕರೆದರು. ಅಷ್ಟರೊಳಗೆ ಹಿರಿಯ ಭಾಷಣಕಾರರೆಲ್ಲಾ ವೇದಿಕೆ ತ್ಯಜಸಿದ್ದರು. ನನ್ನ ಸರಣಿ ಬಂದಾಗ ನೇರವಾಗಿ ಆ ವಿದ್ಯಾರ್ಥಿಗಳಿಗೆ ಕೇಳಿದೆ, “ಬೆಳಿಗ್ಗೆ ಮಾತನಾಡಿದ ಚಿಂತಕರು ನಿಮಗೆ ರಕ್ತ ಕುದಿತಾ ಇಲ್ಲವಾ ಅಂತ ರೋಷ ಇಲ್ಲವಾ ಅಂತ ನಿಮ್ಮಗಳನ್ನ ತಿವಿದು ಹೋದರು. ಅಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ನಿಮಗ್ಯಾಕಿರಬೇಕು ರೋಷ? ನೀವೆಲ್ಲಾ ನೇರವಾಗಿ ಕೇಳಬೇಕು, ಸಾರ್ ನಿಮ್ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಾ? ಬಡ ರೈತ ಕೂಲಿಕಾರ್ಮಿಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಹೋಗಬೇಕು ಸಮಾನತೆ ಸಮಾಜವಾದ ಮಾತಾಡೋ ನಿಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗ್ಬೇಕು. ನೀವು ನಮಗಲ್ಲ ಹೇಳಬೇಕಾಗಿರೋದು ಈ ಮಾತನ್ನ,” ಅಂತ ಅವರಿಗೆ ಹೇಳಿ ಅಂತಂದು ವೇದಿಕೆಯಿಂದಿಳಿದೆ.

ಇಷ್ಟೆಲ್ಲಾ ಹೋರಾಟ ಮಾಡುವ ಬದಲು ಶಿಕ್ಷಣ ಸಚಿವರಿಗೆ ಗಡುವು ನೀಡುವುದನ್ನ ಬಿಟ್ಟು ಮೊದಲು ಇವರೆಲ್ಲಾ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಕಲಿಸಲಿ. ಇತ್ತೀಚೆಗೆ ಸಾಹಿತ್ಯ ವಲಯದೊಬ್ಬರ ಶಾಲೆಗೆ ಭೇಟಿನೀಡಿದ್ದಾಗ ಅವರ ಶಾಲೆಯಿರುವ ಹಳ್ಳಿಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಬಗ್ಗೆ ಹೇಳುತ್ತಾ ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗೆ ಒಬ್ಬನೇ ಶಿಕ್ಷಕನಿದ್ದರೆ ಎಲ್ಲಿಂದ ಮಕ್ಕಳು ವಿದ್ಯಾವಂತರಾಗುತ್ತಾರೆ. ಒಂದು ತರಗತಿಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿದ್ದರೆ ಅವರಿಗೆ ಶಾಲೆಯ ವಾತಾವರಣ ಇಷ್ಟವಾಗಲು ಸಾಧ್ಯಾನಾ. ಇಂತಹ ಶಾಲೆಗಳಿಗೆ ಸೇರಿಸೋದು ಅಂದರೆ ಸುಸೈಡ್ ಮಾಡಿಕೊಂಡಂತೆ ಅಂತ ಹೇಳಿ, ಇಷ್ಟೆಲ್ಲಾ ಮಾತನಾಡುವ ಸಾಹಿತಿಗಳು ಒಂದೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ರೆ ಸಾಕೆಂದು ಅಭಿಪ್ರಾಯಪಟ್ಟರು.

ನನ್ನ ತಂದೆ ಸಾಹಿತಿಯಾಗಿ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕನಾಗಿ ನನ್ನನ್ನು ನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದಾಗ ಇದೇ ಸಾಹಿತಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಯಾಕೆ ಸೇರಿಸಿದ್ದೀರಾ ಯಾವುದಾದ್ರು ಖಾಸಗಿ ಶಾಲೆಗೆ ಸೇರ್ಸಿ ನಾವು ಸೀಟ್ ಕೊಡಿಸ್ತೀವಿ ಅಂದವರ ಸಂಖ್ಯೆಯೇ ಹೆಚ್ಚು. 5ನೇ ತರಗತಿ ಎಲ್.ಕೆ.ಜಿ. ಮಕ್ಕಳು ಕಲಿಯುವ ‘ಎ’ ಫಾರ್ ಆಪಲ್ ಕಲಿಯೋಕೆ ನನ್ನ ಸಹಪಾಠಿಗಳು ತಿಣುಕಾಡುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ದುಃಖವಾಗುತ್ತೆ. ನಗರದಲ್ಲೇ ಇದ್ದು ಇಲ್ಲಿನ ಇಂಗ್ಲಿಷ್ ಕಾಂಪ್ಲೆಕ್ಸ್‌ಗಳ ಮಧ್ಯೆ ಸಿಲುಕಿ ತಮ್ಮ ವಿದ್ಯಾಭ್ಯಾಸವನ್ನೇ ನಿಲ್ಲಿಸಿದವರ ಸಂಖ್ಯೆ ಹೆಚ್ಚು. ಬೆಳಿಗ್ಗೆಯೆದ್ದು ಪೇಪರ್ ಹಾಕಿ, ತಂದೆಯೊಂದಿಗೆ ಇಡ್ಲಿ ಮಾರಿ, ಮನೆ ಮನೆಗೆ ಹೂ ಮಾರಿ 10 ಗಂಟೆಗೆ ಶಾಲೆಗೆ ಬರುತ್ತಿದ್ದ ಈ ಪ್ರತಿಭಾವಂತರು 5ನೇ ಕ್ಲಾಸಿನ ಇಂಗ್ಲಿಷ್ ಗುಮ್ಮಕ್ಕೆದಿರಿ ಓದಿಗೆ ವಿದಾಯ ಹೇಳಿದರು. ಈ ಮಕ್ಕಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೆ ತಮ್ಮ ಮಕ್ಕಳ ಸುಖದ ಬಗ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ, ಇವರ ಮಕ್ಕಳು ಬರೆದ ಇಂಗ್ಲಿಷ್ ಕವನಕ್ಕೆ ಚಪ್ಪಾಳೆ ತಟ್ಟಿ ಆನಂದಿಸುವವರು ಬಡವರ ಮಕ್ಕಳು ಇಂಗ್ಲಿಷ್ ಕಲಿತರೆ ಸಹಿಸದಿರೋದು ಎಷ್ಟು ಸರಿ.

ಸುಶಿಕ್ಷಿತ ತಂದೆತಾಯಿಗಳ ಮಕ್ಕಳಲ್ಲದ, ಸ್ಲಂಗಳಿಂದ ಬಂದು ವಿದ್ಯೆ ಕಲಿಯುವ ಈ ಮಕ್ಕಳು ಯಾಕೆ ಕೀಳರಿಮೆಯಿಂದ ನರಳಬೇಕು? ಭ್ರಷ್ಟಾಚಾರದ ಬಗ್ಗೆ ಕವಿತೆ ಬರೆಯುವ ಕವಿ ಉಪನ್ಯಾಸಕರೊಬ್ಬರು ತಮ್ಮ ಮಗನನ್ನು ಒಂದನೇ ಕ್ಲಾಸಿಗೆ ಇಂಗ್ಲಿಷ್ ಕಲಿಯಲಿ, ನನ್ನಂತ ಕನ್ನಡ ಎಂ.ಎ. ಮಾಡಿ ಕಷ್ಟ ಪಡಬಾರದು ಅಂತ ಸೇರಿಸಿದ್ದು ಯಾವ ಶಾಲೆಗೆ ಗೊತ್ತಾ? ರಿಂಗ್ ರಸ್ತೆ ಪಕ್ಕದ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿಸಿ ಕೇಸು ಹಾಕಿಸಿಕೊಂಡ ಹಾಲಿ ಸಚಿವರೊಬ್ಬರು ನಡೆಸುತ್ತಿರುವ ಶಾಲೆಗೆ. ಸಾಹಿತಿಗಳಲ್ಲೇ ದ್ವಂದ್ವವಿರುವಾಗ ಹೇಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುವುದನ್ನು ವಿರೋಧಿಸುತ್ತಿರುವುದು ಮಾತ್ರ ಅಸಹನೀಯ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲಿ. ನಗರದ ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು. ಹಾಗಾದರೆ ಮಾತ್ರ ಸಾಹಿತಿಗಳು ಹೇಳುವ ಸಮಾನ ನ್ಯಾಯ ಪಾಲನೆಯಾಗುತ್ತದೆ. ಪರರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸುವ ಮೂಲಕ ಹೊಸ ಮಾದರಿಯ ಹೋರಾಟ ಮಾಡಲಿ.

ಬಿ.ಜೆ.ಪಿ. ಮತ್ತು ಭಂಡತನ


– ಡಾ.ಎನ್.ಜಗದೀಶ್ ಕೊಪ್ಪ


ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಒಂದು ಸರ್ಕಾರದ ಯಶಸ್ವಿಗೆ ಪ್ರಜ್ಞಾವಂತ ಮತದಾರರು ಎಷ್ಟು ಮುಖ್ಯವೊ, ಜವಾಬ್ದಾರಿಯುತ ರಾಜಕೀಯ ಪಕ್ಷಗಳ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಅಲಿಖಿತ ಸಂವಿಧಾನವಿರುವ ಬ್ರಿಟನ್‌ನಲ್ಲಿ ಲೇಬರ್ ಮತ್ತು ಕನ್ಸರ್‍ವೇಟೀವ್ ರಾಜಕೀಯ ಪಕ್ಷಗಳು, ಲಿಖಿತ ಸಂವಿಧಾನ ಇರುವ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ರಿಪಬ್ಲಿಕನ್ ಮತ್ತು ಡೆಮಕ್ರಟಿಕ್ ಪಕ್ಷಗಳು, ಸರ್ಕಾರದ ರಚನೆ ಮತ್ತು ಆಡಳಿತ ನಿರ್ವಹಣೆ, ಹಾಗೂ ವಿರೋಧ ಪಕ್ಷವಾಗಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದನ್ನು ನಾವು ಬಲ್ಲೆವು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲೂ ಕೂಡ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ, ಜಗತ್ತಿನ ಶ್ರೇಷ್ಟ ಲಿಖಿತ ಸಂವಿಧಾನ ಅಸ್ತಿತ್ವದಲ್ಲಿದೆ. ಜೊತೆಗೆ ಎರಡು ಪ್ರಬಲ ರಾಷ್ಟ್ರೀಯ ರಾಜಕೀಯ ಪಕ್ಷಗಳು ಕ್ರಿಯಾಶೀಲವಾಗಿವೆ. ಇವುಗಳಲ್ಲಿ ಶತಮಾನದ ಇತಿಹಾಸವಿರುವ ಕಾಂಗ್ರೇಸ್‌ ಪಕ್ಷ ಒಂದಾದರೆ, ಇನ್ನೊಂದು ಅರ್ಧ ಶತಮಾನದಷ್ಟು ಇತಿಹಾಸವಿರುವ ಭಾರತೀಯ ಜನತಾ ಪಕ್ಷ. ಕಳೆದವಾರ ಕಾಂಗ್ರೇಸ್ ಪಕ್ಷದ ಬಗ್ಗೆ, ಹಾಗೂ ಅದರ ಇತಿಮಿತಿಗಳನ್ನು ಚರ್ಚಿಸಿದ ರೀತಿಯಲ್ಲಿ ಭಾರತೀಯ ಜನತಾಪಕ್ಷವನ್ನು, ಅದರ ಸಿದ್ಧಾಂತ ಮತ್ತು ಇತ್ತೀಚೆಗಿನ ಪಕ್ಷದೊಳಗಿನ ಬೆಳವಣಿಗೆಯನ್ನು ಚರ್ಚೆಗೆ ಒಳಪಡಿಸಿ ಪರಾಮರ್ಶಿದರೇ, ತೀವ್ರ ನಿರಾಶೆಯಾಗುತ್ತದೆ.

1925 ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡಲ ಕುಡಿಯಾಗಿ ಹೊರಹೊಮ್ಮಿದ ಜನಸಂಘ ಎಂಬ ರಾಜಕೀಯ ಪಕ್ಷ, ಈಗ ನಮ್ಮೆದುರು ಭಾರತೀಯ ಜನತಾ ಪಕ್ಷದ ರೂಪದಲ್ಲಿದೆ. 1978 ರಲ್ಲಿ ಇಂದಿರಾ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು, ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕಾಗಿ, ಭಾರತದ ಜನತೆ ಅಧಿಕಾರದಿಂದ ಕಿತ್ತೊಗೆಯಿತು. ಈ ವೇಳೆ ಮುರಾರ್ಜಿ ದೇಸಾಯಿ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಜೊತೆ ಜನಸಂಘ ಕೂಡ ಕೈ ಜೋಡಿಸಿತು. ಮುರಾರ್ಜಿ ಪ್ರಧಾನಿಯಾಗಿದ್ದಾಗ, ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ ಅಟಲ್ ಬಿಹಾರಿ ವಾಜಪೇಯಿ, ತಮ್ಮ ಮುಕ್ತ ಮನಸ್ಸಿನ ನಡುವಳಿಕೆಯಿಂದ, ಯಾವುದೇ ಕಲ್ಮಶವಿಲ್ಲದ ಭಾವನೆಗಳಿಂದ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಮನೆಮಾತಾದರು. ವಾಜಪೇಯಿಯವರ ಈ ಜನಪ್ರಿಯತೆ, ಕೇವಲ ಪ್ರಾದೇಶಿಕ ಪಕ್ಷದಂತೆ, ಒಂದು ಕೋಮಿನ ಸಮುದಾಯವನ್ನು ಮಾತ್ರ ಪ್ರತಿನಿಧಿಸುತ್ತಿದ್ದ ಜನಸಂಘಕ್ಕೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸನ್ನು ತಂದುಕೊಟ್ಟಿತು.

ಕೇಂದ್ರದಲ್ಲಿ 1978 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸೇತರ ಸರ್ಕಾರದಲ್ಲಿ ವ್ಯಕ್ತಿಗತ ಅಧಿಕಾರದ ಲಾಲಸೆ ಮತ್ತು ಆಂತರೀಕ ಕಚ್ಚಾಟದಿಂದ ಕೇವಲ ಎರಡು ವರ್ಷದಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಜನತಾ ಪಕ್ಷ, ನಂತರದ ದಿನಗಳಲ್ಲಿ ಅಣು ವಿಭಜನೆಯಂತೆ, ಒಂದು ಎರಡಾಗಿ, ಎರಡು ನಾಲ್ಕಾಗಿ ಸಿಡಿದು ತನ್ನ ಮೂಲ ಛಹರೆ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿತು. ಇದರ ಜೊತೆಗೆ ಜಯಪ್ರಕಾಶ್ ನಾರಾಯಣರ ಕಂಡಿದ್ದ ಕನಸುಗಳನ್ನು ನುಚ್ಚುನೂರು ಮಾಡಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಇಡೀ ದೇಶಾದ್ಯಂತ, 80ರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಎಂಬ ಹೊಸ ರೂಪದಲ್ಲಿ ಜನಸಂಘ. ತನ್ನ ಛಾಪನ್ನು ಮೂಡಿಸತೊಡಗಿತು. ಆ ದಿನಗಳಲ್ಲಿ ಬಿ.ಜೆ.ಪಿ. ಪಕ್ಷದ ಆಧಾರ ಸ್ಥಂಭಗಳೆಂದರೆ, ಒಬ್ಬರು, ವಾಜಪೇಯಿ, ಮತ್ತೊಬ್ಬರು, ರಾಮನಿಗೆ ಲಕ್ಷ್ಮಣನಿದ್ದಂತೆ, ವಾಜಪೇಯಿಗೆ ನೆರಳಿನಂತೆ ಹಿಂಬಾಲಿಸಿದ ಎಲ್.ಕೆ. ಅಧ್ವಾನಿ. ಇವರಿಬ್ಬರಿಗೂ ಬೆನ್ನೆಲುಬಾಗಿ ನಿಂತವರು, ಬೈರೂನ್ ಸಿಂಗ್ ಶೇಖಾವತ್. ಇವತ್ತಿಗೂ ಆ ಪಕ್ಷಕ್ಕೆ ಇವರೆಲ್ಲಾ ಶಿಖರಪ್ರಾಯದ ವ್ಯಕ್ತಿತ್ವಗಳು.

ಬಿ.ಜೆ.ಪಿ. ಪಕ್ಷದ ಬಗೆಗಿನ ನಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ಅಸಹನೆಗಳು ಏನೇ ಇರಲಿ, ಸಾರ್ವಜನಿಕ ಬದುಕಿನಲ್ಲಿ, ವಿಶೇಷವಾಗಿ ರಾಜಕೀಯ ಬದುಕಿನಲ್ಲಿ ಒಬ್ಬ ವ್ಯಕ್ತಿಗೆ ಇರಬೇಕಾದ ಸನ್ನಡತೆ, ಸಚ್ಛಾರಿತ್ರ್ಯ, ನೈತಿಕತೆ, ಶುದ್ಧ ಹಸ್ತ ಇವುಗಳಿಗೆ ಇವರು ಮಾದರಿಯಾದವರು. ಜೊತೆಗೆ ಕಾಂಗ್ರೇಸ್‌ನ ಗುಲಾಮಗಿರಿ ಸಂಸ್ಕೃತಿಗೆ ಭಿನ್ನವಾಗಿ, ತಮ್ಮ ಜೊತೆಜೊತೆಯಲ್ಲಿ ಎರಡನೇ ವರ್ಗದ ನಾಯಕರನ್ನು ಬೆಳಸಿದರು. ಇದರ ಫಲವಾಗಿ ವಾಜಪೇಯಿ ಮೂರು ಬಾರಿ ಪ್ರಧಾನಿಯಾಗಲು ಸಾಧ್ಯವಾಯಿತು.

1984ರ ಅಕ್ಟೋಬರ್ ತಿಂಗಳಿನಲ್ಲಿ ಇಂದಿರಾ ಗಾಂಧಿಯ ಹತ್ಯೆ ಹಿನ್ನಲೆಯಲ್ಲಿ ಇಂದಿರಾ ಯುಗ ಅಂತ್ಯಗೊಂಡರೂ, ವಾಜಪೇಯಿ ಬಿ.ಜೆ.ಪಿ. ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ತರಲು 12 ವರ್ಷಗಳ ಕಾಲ ಹೆಣಗಬೇಕಾಯಿತು. ಇದಕ್ಕಾಗಿ, ಅಧ್ವಾನಿಯವರ ರಥಯಾತ್ರೆ, 1991 ರಲ್ಲಿ ಅಯೋಧೈಯಲ್ಲಿ ಮಸೀದಿಯನ್ನು ಉರುಳಿಸಿದ ನಾಟಕಿಯ ಬೆಳವಣಿಗೆಗಳು ಸಹ ಸಹಕಾರಿಯಾದವು. ಒಟ್ಟಾರೆ, ಧರ್ಮ ಮತ್ತು ಜಾತಿಯನ್ನು ನೇರವಾಗಿ ರಾಜಕೀಯವಾಗಿ ಬಳಸಿಕೊಂಡು, ಭಾರತದ ಬಹುಮುಖಿ ಸಂಸ್ಕೃತಿಯ ಸಮಾಜಕ್ಕೆ ಧಕ್ಕೆಯಾಗುವ ರೀತಿಯಲ್ಲಿ, ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದದ್ದನ್ನು ಯಾರೂ ಅಲ್ಲಗೆಳೆಯಲಾರರು. ಅಜಾತ ಶತ್ರು ಎನಿಸಿಕೊಂಡಿದ್ದ ವಾಜಪೇಯಿ, ತಮ್ಮ ಅಂತರಾಳದಲ್ಲಿ ಏನನ್ನೂ ಮುಚ್ಚಿಡಲಾರದ ವ್ಯಕ್ತಿಯಾಗಿದ್ದರು. ಬಾಬರಿ ಮಸೀದಿಯನ್ನು ಕರಸೇವಕರು ಉರುಳಿಸಿದಾಗ, ಅಥವಾ ಗುಜರಾತ್‌ನ ಗೋದ್ರಾ ಹತ್ಯಾಕಾಂಡ ಮುಂತಾದ ಘಟನೆಗಳಲ್ಲಿ ತಮ್ಮ ನೋವನ್ನು ನೇರವಾಗಿ ತೋಡಿಕೊಂಡವರು. ಈ ಕಾರಣಕ್ಕಾಗಿ ಸಂಘ ಪರಿವಾರಕ್ಕೆ ವಾಜಪೇಯಿ ಎಂದರೆ ಒಂದು ರೀತಿ ಅಲರ್ಜಿ. ಅಧ್ವಾನಿ ಎಂದರೆ, ಮುದ್ದಿನ ಕೂಸು ಎಂಬಂತಾಗಿತ್ತು.

ಬಿ.ಜೆ.ಪಿ. ಪಕ್ಷದಲ್ಲಿನ ಮರೆಮಾಚಿದ ಯೋಜನೆಗಳು. ಅಮಾನವೀಯ ನಡುವಳಿಕೆಗಳು, ಕೋಮುಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು, ಅಮಾಯಕ ಜೀವಗಳ ಬದುಕಿನ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಯಾವೊಬ್ಬ ಪ್ರಜ್ಞಾವಂತ ನಾಗರೀಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಪ್ಪಲಾರ. ಆದರೆ, ಆ ಪಕ್ಷದಲ್ಲಿ ಅವರದೇ ನೀತಿ, ತತ್ವ, ಸಿದ್ಧಾಂತಗಳು, ನಡುವಳಿಕೆಗಳು, ಶಿಸ್ತು, ಇವುಗಳೆಲ್ಲಾ ಒಂದು ಕಾಲಘಟ್ಟದಲ್ಲಿ ಇತರೆ ಪಕ್ಷಗಳಿಗೆ ಮಾದರಿಯಾಗಿದ್ದವು. ಆದರೆ, ಈಗ ಇವೆಲ್ಲಾ ಕಾಣೆಯಾಗಿ ಕೇವಲ ಭಂಡತನವೊಂದೇ ಪಕ್ಷದ ಬಂಡವಾಳವಾಗಿದೆ. ಭಾರತೀಯ ಜನತಾ ಪಕ್ಷದ ಅಂತರಂಗವನ್ನು ಬಯಲು ಮಾಡಿ, ಅದರ ಹುಳುಕನ್ನು ಅನಾವರಣಗೊಳಿಸಿ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟವರು, ನಮ್ಮ ಕರ್ನಾಟಕದ ಲಿಂಗಾಯುತರ ಬಸವಣ್ಣ, ದ ಗ್ರೇಟ್ ಯಡಿಯೂರಪ್ಪ. ಇವರಿಗೆ ಭಾರತದ ಪ್ರಜ್ಙಾವಂತ ನಾಗರೀಕರು ಋಣಿಯಾಗಿರಬೇಕು. ಏಕೆಂದರೆ, ಈ ದೇಶದಲ್ಲಿ ರಾಜಕೀಯ ಮಾಡಲು ಅಥವಾ ಸಾರ್ವಜನಿಕ ಬದುಕಿನಲ್ಲಿ ಇರಲು ಸನ್ನಡತೆ, ಸಚ್ಛಾರಿತ್ರ್ಯ ಅಗತ್ಯವಿಲ್ಲ. ಅವುಗಳ ಬದಲು ಭಂಡತನ ಮತ್ತು ಜಾತಿಯ ಬೆಂಬಲವಿದ್ದರೆ ಸಾಕು ಎಂಬುದನ್ನು ತೋರಿಸಿಕೊಟ್ಟಿದ್ದು, ಸಹ ಇದೇ ಯಡಿಯೂರಪ್ಪ.

ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಪ್ರಪಥಮ ಬಾರಿಗೆ ಬಿ.ಜೆ.ಪಿ. ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು ಎನ್ನುವ ಸಂತೋಷ ಅಥವಾ ಹೆಮ್ಮೆ ರಾಷ್ಟ್ರ ಮಟ್ಟದ ಬಿ.ಜೆ.ಪಿ. ನಾಯಕರಿಗೆ ಬಹಳ ದಿನ ಉಳಿಯಲಿಲ್ಲ. ಏಕೆಂದರೆ, ಭಾರತದ ರಾಜಕೀಯ ಇತಿಹಾಸದಲ್ಲಿ ಯಾವ ರಾಜ್ಯದಲ್ಲೂ ಒಂದು ಸರ್ಕಾರದ ಅಷ್ಟೊಂದು ಸಂಪುಟದ ಸಚಿವರು, ಅಕ್ರಮ ವ್ಯವಹಾರಗಳ ಮೂಲಕ (ಮುಖ್ಯಮಂತ್ರಿಯೂ ಸೇರಿದಂತೆ) ಜೈಲು ಪಾಲಾಗಿರಲಿಲ್ಲ. ಹಗರಣಗಳ ಸರಮಾಲೆಯೇ ಕರ್ನಾಟಕದ ಬಿ.ಜೆ.ಪಿ. ಸರ್ಕಾರದಲ್ಲಿ ಸೃಷ್ಟಿಯಾಯಿತು. ಭೂ ಹಗರಣ, ಭ್ರಷ್ಟಾಚಾರ, ಲಂಚಪ್ರಕರಣ, ಅತ್ಯಾಚಾರ ಪ್ರಕರಣ, ಅಶ್ಲೀಲ ಚಿತ್ರ ವೀಕ್ಷಣೆ ಹಗರಣ, ಒಂದೇ ಎರಡೇ? ಇವೆಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶವೇ ಬೆಚ್ಚಿ ಬೀಳುವಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ, ಇದೀಗ, ನ್ಯಾಯಾಂಗ ವ್ಯವಸ್ಥೆಯ ಬುಡಕ್ಕೆ ಲಂಚದ ಮೂಲಕ ಬಾಂಬ್ ಇಟ್ಟಿರುವ ಗಾಲಿ ಜನಾರ್ಧನ ರೆಡ್ಡಿ ಕೂಡ ಈ ಸರ್ಕಾರದ ಒಬ್ಬ ಸಚಿವನಾಗಿದ್ದ ಎನ್ನುವುದು ಸಹ ನಾಚಿಕೆಗೇಡಿನ ಸಂಗತಿ, ಅಧ್ವಾನಿ ಒಬ್ಬರನ್ನು ಹೊರತು ಪಡಿಸಿದರೆ, ಉಳಿದ ನಾಯಕರಿಗೆ ಕರ್ನಾಟಕದ ಬಿ.ಜೆ.ಪಿ. ಸರ್ಕಾರದ ಹಗರಣಗಳು ಮುಜಗರದ ಸಂಗತಿಗಳು ಎಂದು ಎನಿಸಿಲ್ಲ.

ಅನೈತಿಕ ರಾಜಕಾರಣದ ಪರಾಕಾಷ್ಟೆ ಎನ್ನಬಹುದಾದ ಶಾಸಕರ ಪಕ್ಷಾಂತರದ ವಿಷಯ, ಬಿ.ಜೆ.ಪಿ. ಪಕ್ಷದ ಭಂಡರ ಪಾಲಿಗೆ ಹೆಮ್ಮೆಯ ಸಂಗತಿ. ಆಪರೇಷನ್ ಕಮಲ ಎಂದು ಎದೆಯುಬ್ಬಿಸಿ ಕರೆದುಕೊಳ್ಳುವ ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರವೆಂಬುದು ಮತದಾರರಿಗೆ ಮಾಡಬಹುದಾದ ಅತಿ ದೊಡ್ಡ ಅವಮಾನ ಎಂಬ ಕನಿಷ್ಟ ವಿವೇಚನೆ ಕೂಡ ಇಲ್ಲ. ಇದಕ್ಕೆ ವಿ.ಸೋಮಣ್ಣನ ಪಕ್ಷಾಂತರ ಘಟನೆಯೊಂದು ಸಾಕು. ಕಾಂಗ್ರೇಸ್‌ಗೆ ರಾಜಿನಾಮೆ ನೀಡಿ ಅದೇ ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ ಈತನ ವಿರುದ್ಧ ಅಲ್ಲಿ ಮತದಾರರು ನಿನ್ನ ನಡುವಳಿಕೆ ತಪ್ಪು ಎನ್ನುವ ರೀತಿಯಲ್ಲಿ ತೀರ್ಪು ನೀಡಿ ಸೋಲಿಸಿ, ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸಿದರು. ಆದರೆ, ಯಡಿಯೂರಪ್ಪ ಮಾಡಿದ್ದೇನು? ಜಾತಿಯ ಕಾರಣಕ್ಕಾಗಿ ಹಿಂಬಾಗಿಲಿನ ಮೂಲಕ ಅಂದರೆ, ವಿಧಾನಪರಿಷತ್‌ಗೆ ಸೋಮಣ್ಣನನ್ನು ಆಯ್ಕೆ ಮಾಡಿಕೊಂಡು ಸಚಿವರನ್ನಾಗಿ ಮಾಡಿಕೊಂಡರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳ ಸ್ಥಾನದಲ್ಲಿರುವ  ಮತದಾರರಿಗೆ ಮಾಡಿದ ಅವಮಾನ ಎಂದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಅನಿಸಲೇ ಇಲ್ಲ. ಏಕೆಂದರೆ, ಇಂದಿನ ಭಾರತೀಯ ಜನತಾ ಪಕ್ಷದಲ್ಲಿ ಎಲ್.ಕೆ.ಅಧ್ವಾನಿ ಹಾಗೂ ಒಂದಿಬ್ಬರನ್ನು ಹೊರತು ಪಡಿಸಿದರೆ, ಉಳಿದ ಬಹುತೇಕ ಮಂದಿ ರೆಡ್ಡಿ ಮತ್ತು ಯಡಿಯೂರಪ್ಪನ ಲೂಟಿಯ ಹಣಕ್ಕೆ ಪಾಲುದಾರರು ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಎಲ್ಲರೂ  ಅಮೇದ್ಯವನ್ನು ತಿಂದು ಬಾಯಿ ಒರೆಸಿಕೊಂಡವರೇ ಆಗಿದ್ದಾರೆ.

ಮಾತೆತ್ತಿದರೆ, ಹಿಂದೂ ಧರ್ಮದ ಬಗ್ಗೆ ಅದರ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುವ ಆರ.ಎಸ್.ಎಸ್. ನಾಯಕರೂ ಇದಕ್ಕೆ ಹೊರತಾಗಿಲ್ಲ. ಬೆಂಗಳೂರು ನಗರ, ಆನೇಕಲ್, ಮಾಗಡಿ ರಸ್ತೆಯಲ್ಲಿರುವ ಚನ್ನಸಂದ್ರ, ಧಾರವಾಡ, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ 300 ಕೋಟಿ ಮೌಲ್ಯದ ಆಸ್ತಿ ಆರ್.ಎಸ್.ಎಸ್. ಸಂಸ್ಥೆಯ ಪಾಲಾಗಿದೆ. ಹಾಗಾಗಿ ಗರ್ಭಗುಡಿ ನಾಯಕರ ನಾಲಿಗೆಗಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲಾರದೆ ವಿಲವಿಲನೆ ಮಿಸುಕಾಡುತ್ತಿವೆ. ಅಧಿಕಾರ ಒಂದನ್ನೇ ಕೇಂದ್ರ ಮತ್ತು ಗುರಿಯಾಗಿಟ್ಟು ಇವರುಗಳು ಆಡುತ್ತಿರುವ ನಾಟಕ, ಕಟ್ಟುತ್ತಿರುವ ವೇಷ, ಜನಸಾಮಾನ್ಯರಲ್ಲಿ ಜಿಗುಪ್ಸೆ ಮತ್ತು ಅಸಹನೆ ಮೂಡಿಸಿವೆ. ಈವರೆಗೆ ಜೈಲಿಗೆ ಹೋಗಿ ಬಂದ ಶಾಸಕರು ಮತ್ತು ಸಚಿವರನ್ನು ಪಕ್ಷದಿಂದ ಅಮಾನತ್ತು ಮಾಡುವ ನೈತಿಕತೆ ಕೂಡ ಪಕ್ಷದಲ್ಲಿ ಉಳಿದಿಲ್ಲ. ಕಳೆದ ಆರು ತಿಂಗಳಿಂದ ಪಕ್ಷದ ವಿರುದ್ದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಳ್ಳಾರಿಯ ಸಂಸದೆ ಜೆ.ಶಾಂತ, ರಾಯಚೂರಿನ ಸಂಸದ ಪಕೀರಪ್ಪ, ಬಳ್ಳಾರಿ ಜಿಲ್ಲೆಯ ಶಾಸಕರಾದ ಸೋಮಶೇಖರರೆಡ್ಡಿ, ಕಂಪ್ಲಿಯ ಶಾಸಕ ಸುರೇಶ್ ಬಾಬು ಇವರನ್ನು ಪ್ರಾಥಮಿಕ ಸದಸ್ಯ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಇವರೆಲ್ಲಾ ಬಳ್ಳಾರಿಯ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸಮಾಡಿದವರು, ಈಗಲೂ ಪಕ್ಷವನ್ನು ನೇರವಾಗಿ ತೆಗಳುತ್ತಿರುವುದಲ್ಲಿ ವಿರೋಧ ಪಕ್ಷವನ್ನು ಮೀರಿಸಿದವರಾಗಿದ್ದಾರೆ. ಒಂದು ರಾಷ್ಟ್ರೀಯ ಪಕ್ಷವೊಂದರ ರಾಜ್ಯದ ಅಧ್ಯಕ್ಷನಾಗಿದ್ದುಕೊಂಡು,  ಹಾದಿ ಬೀದಿಯಲ್ಲಿ ಹೋಗುತ್ತಿದ್ದವರನ್ನು ಹಣ ಕೊಟ್ಟು ಕರೆತಂದು ಜಾತಿಯ ಕಾರಣಕ್ಕೆ ಅಧಿಕಾರ ಕೊಟ್ಟಿದ್ದೇವೆ ಎಂಬ ಬೇಜಾವಬ್ದಾರಿ ಹಾಗೂ ಸತ್ಯವಾದ ಹೇಳಿಕೆಯನ್ನ ಈಶ್ವರಪ್ಪ ಕೊಡುತ್ತಾನೆ ಎಂದರೆ, ಈತ ಎಂತಹ ಯಡವಟ್ಟು ಗಿರಾಕಿ ಎಂಬುದರ ಬಗ್ಗೆ ನೀವೆ ಯೋಚಿಸಿ? ಇಂತಹ ಅಯೋಗ್ಯರಿಂದ ಆಳಿಸಿಕೊಳ್ಳವ ದೌರ್ಭಾಗ್ಯ ನಮ್ಮ ಶತ್ರುಗಳಿಗೂ ಬರಬಾರದು ಎಂದು ನಾವೆಲ್ಲಾ ಆಶಿಸೋಣ.

ಒಂದು ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಕ್ಕೆ ಯೋಗ್ಯರಲ್ಲದ ಅನೇಕ ಮಂದಿ ಇಂದು ಕರ್ನಾಟಕ ಬಿ.ಜೆ.ಪಿ. ಸರ್ಕಾರದ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಬೆಳಿಗ್ಗೆ ಎದ್ದು ಕೂಡಲೇ ಅಧಿಕಾರ ದಕ್ಕಿಸಿಕೊಟ್ಟರು ಎಂಬ ಏಕೈಕ ಕಾರಣಕ್ಕೆ ಯಡಿಯೂರಪ್ಪನ ಕಾಲು ನೆಕ್ಕುವುದೇ ದಿನ ನಿತ್ಯದ ವೃತ್ತಿಯಾಗಿದೆ. ಈ ಮಹಾಶಯರ ಓಡಾಟಕ್ಕೆ, ಬಂಗಲೆಗೆ, ವಿಮಾನ ಪ್ರಾಯಾಣಕ್ಕೆ, ಯಡಿಯೂರಪ್ಪನ ಜೊತೆ ಮಠ ಮಂದಿರಗಳ ಸುತ್ತಾಟಕ್ಕೆ ನಮ್ಮ ತೆರಿಗೆ ಹಣ ವೆಚ್ಚವಾಗುತ್ತಿದೆ. ಕರ್ನಾಟಕದ ಬಿ.ಜೆ.ಪಿ. ಸರ್ಕಾರದಲ್ಲಿ ಕೆ. ಸುರೇಶ್ ಕುಮಾರ್ ಎಂಬ ಸಜ್ಜನ ಹಾಗೂ ಸರಳ ವ್ಯಕ್ತಿಯನ್ನು ಹೊರತು ಪಡಿಸಿದರೆ, ಉಳಿದವರಲ್ಲಿ ಇನ್ನೊಬ್ಬ ಸಜ್ಜನನ್ನು ಹುಡುಕುವುದು ನಿಜಕ್ಕೂ ಕಷ್ಟವಾಗಿದೆ. ರಾಜ್ಯದಲ್ಲಿ ಒಂದು ರಾಷ್ಟ್ರೀಯ ಪಕ್ಷ ಸರ್ಕಾರ ಇಂತಹ ದಯನೀಯ ಮತ್ತು ಅಸಹನೀಯ ಸ್ಥಿತಿಯಲ್ಲಿ ಆಡಳಿತ ನಡೆಸುತ್ತಿದ್ದರೂ ರಾಷ್ಟ್ರೀಯ ನಾಯಕರು ಕಣ್ಮುಚ್ಚಿ ಕುಳಿತಿರುವುದನ್ನ ಗಮನಿಸಿದರೆ, ಇದನ್ನು ರಾಜಕೀಯ ತಂತ್ರ ಎಂದು ಎನ್ನಲಾಗದು. ಬದಲಿಗೆ ಬಿ.ಜೆ.ಪಿ. ಪಕ್ಷದ ಭಂಡತನವೆಂದು ಕರೆಯಬೇಕಾಗುತ್ತದೆ.

ಮಹಾಂತೇಶ್ ಕೊಲೆ ತನಿಖೆ: ಮೊದಲು ಮಾನ ಹತ್ಯೆ, ಈಗ ಸತ್ಯದ ಮೇಲೆ ಹಲ್ಲೆ!

– ಶಿವರಾಂ ಕೆಳಗೋಟೆ

ದಿವಂಗತ ಕೆ.ಎ.ಎಸ್ ಅಧಿಕಾರಿ ಎಸ್. ಪಿ. ಮಹಾಂತೇಶ್‌ರ ತಾಯಿ ಪಬ್ಲಿಕ್ ಟಿವಿ ಸಂದರ್ಶನವೊಂದರಲ್ಲಿ ನಿನ್ನೆ ಮಾತನಾಡುತ್ತಾ ‘ನನ್ನ ಮೊಮ್ಮಗಳು ನನ್ಹತ್ರ ಬಂದು ‘ನಿಮ್ಮಪ್ಪನ ಬಗ್ಗೆ ನಂಗೆಲ್ಲಾ ಗೊತ್ತು’ ಅಂತ ಕೊಂಕು ಮಾತಿನಲ್ಲಿ ನನ್ನ ಫ್ರೆಂಡ್ ಒಬ್ಬಳು ಹೇಳಿದ್ಲು ಅಂತ ಬೇಸರ ಮಾಡಿಕೊಂಡ್ಲು. ನಾನು ಅವಳಿಗೆ ಸಮಾಧಾನ ಮಾಡಬೇಕಾಯ್ತು’ ಅಂದ್ರು. ಮಹಾಂತೇಶ್‌ರ ಚಿಕ್ಕ ವಯಸ್ಸಿನ ಮಗಳಿಗೆ ಶಾಲೆಯಲ್ಲಿ ಗೆಳತಿಯರು ಮಾತನಾಡುತ್ತಿದ್ದ ರೀತಿ ಕೇಳಿ ಎಂಥ ಬೇಸರ ಆಗಿರಬಹುದು ಎನ್ನುವುದನ್ನು ಯಾರೇ ಆಗಲಿ ಊಹಿಸಬಹುದು.

ಆದರೆ ಅದರ ತೀವ್ರತೆ ಅರ್ಥ ಆಗಬೇಕಿರುವುದು, ಹೀಗೆ ಅವರಿಗೆ ಹೆಣ್ಣಿನೊಂದಿಗೆ ಸಂಬಂಧ ಇತ್ತು ಎಂದು ಮಾಧ್ಯಮದ ಪ್ರತಿನಿಧಿಗಳಿಗೆ ಹೇಳಿದ ಪೊಲೀಸ್ ಮಹಾಶಯರಿಗೆ ಮತ್ತು ‘ಇದು ಸಕ್ಕತ್ ಟಿಅರ್‌ಪಿ ಐಟಮ್’ ಅಂತ ಪದೇ ಪದೇ ಪ್ಯಾಕೇಜ್‌ಗಳನ್ನು ಮಾಡಿ ಪ್ರಸಾರ ಮಾಡಿದೆ ಪತ್ರಕರ್ತರಿಗೆ!

ಬೆಂಗಳೂರಿನ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ನಿನ್ನೆ (ಜೂ 7, 2012) ಪತ್ರಿಕಾ-ಗೋಷ್ಟಿಯಲ್ಲಿ ಆ ತರಹದ ಯಾವುದೇ ವರದಿಗಳು ನಮ್ಮಿಂದ ಬಂದಿಲ್ಲ ಎಂದರು. ಆದರೆ ಇದೇ ಅಧಿಕಾರಿ ಮತ್ತು ಗೃಹ ಮಂತ್ರಿ ಪದೇ ಪದೇ ಹೇಳಿದ್ದ ಒಂದು ಮಾತು ‘ನಾವು ಎಲ್ಲಾ ಆಂಗಲ್‌ಗಳಿಂದ ತನಿಖೆ ನಡೆಸುತ್ತಿದ್ದೇವೆ. ವೈಯಕ್ತಿಯ ಕಾರಣ, ವೃತ್ತಿ ಕಾರಣ.. ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ’. ಹೀಗೆ ಪದೇ ಪದೇ ಈ ಮಾತನ್ನು ಹೇಳಿ ಮಾಧ್ಯಮ ಹರಿ ಬಿಡುತ್ತಿದ್ದ ಗಾಳಿಮಾತಿಗೆ ಬೆಲೆ ಕಟ್ಟಿದವರು ಇವರೇ ಅಲ್ಲವೆ?

ಯಾವುದೇ ತನಿಖಾಧಿಕಾರಿ ಅಥವಾ ತನಿಖಾ ತಂಡದ ಸದಸ್ಯ ನೇರವಾಗಿ ಮಾಧ್ಯಮದ ಎದುರು ತನಿಖೆಯ ಪ್ರಗತಿಯನ್ನು ಹಂಚಿಕೊಳ್ಳುವುದಿಲ್ಲ. ಹಾಗೆ ಹಂಚಿಕೊಂಡಾಗ ಅದನ್ನು ‘ಆಫ್ ದಿ ರೆಕಾರ್ಡ್’ ಎಂದು ಸ್ಪಷ್ಟಪಡಿಸಿರುತ್ತಾರೆ. ಅಥವಾ ಮಾಧ್ಯಮ ವರದಿಗಾರರೇ ‘ಸರ್, ಇದು ಆಫ್ ದಿ ರೆಕಾರ್ಡ್, ನಿಮ್ಮ ಹೆಸರು ಎಲ್ಲಿಯೂ ಬರೋಲ್ಲ’ ಎಂದು ಪುಸಲಾಯಿಸುತ್ತಾರೆ. ಪತ್ರಿಕೋದ್ಯಮಕ್ಕೆ ಮಣ್ಣು, ಕಬ್ಬಿಣದ ಅದಿರು, ಹೊನ್ನು, ಹೊತ್ತ ಎಲ್ಲರಿಗೂ ಈ ಸತ್ಯ ಗೊತ್ತಿದೆ.

ಆದರೆ ಮಿರ್ಜಿಯವರು ಮಾತ್ರ ’ಆ ಅಧಿಕಾರಿಯ ಹೆಸರು ಹೇಳಿ, ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಪತ್ರಕರ್ತರೆದುರು ಹೂಂಕರಿಸುತ್ತಾರೆ. ಆ ಅಧಿಕಾರಿ ಯಾರು ಎಂದು ಅವರಿಗೆ ಗೊತ್ತಿಲ್ಲವೆ? ಯಾವುದೋ ಒಂದು ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದ್ದರೆ ಹೋಗಲಿ ಎನ್ನಬಹುದಿತ್ತು. ಎಲ್ಲದರಲ್ಲೂ ಅದೇ ಸುದ್ದಿ. ಹಾಗಾದರೆ, ಎಲ್ಲಾ ವರದಿಗಾರರು ಒಬ್ಬ ಅಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದರು, ಅವರಿಂದಲೇ ಇಂತಹ ಮಾಹಿತಿ ಹೋಗಿದೆ ಎನ್ನುವುದು ಗೊತ್ತಾಗದಷ್ಟು ದಡ್ಡರೇ ಈ ಕಮಿಷನರ್. ಅಲ್ಲ, ಅದು ಜಾಣ ದಡ್ಡತನ, ಜಾಣ ಕಿವುಡುತನದ ಹಾಗೆ!

ಇನ್ನು ತನಿಖೆ:

ಮಿರ್ಜಿ ಸಾಹೇಬರು ತಮ್ಮ ಪತ್ರಿಕಾ-ಗೋಷ್ಟಿಯಲ್ಲಿ ಕೊಲೆ ಆರೋಪಿಗಳನ್ನು ಹೆಸರಿಸಿದರು. ಕೊಲೆಗೆ ಮೂಲ ವ್ಯಕ್ತಿ ಕಿರಣ್ ಕುಮಾರ್ ಎಂಬ 23 ವರ್ಷದ ಯುವಕ. ಅವನು ಸಹಕಾರನಗರ ಪತ್ತಿನ ಸಹಕಾರ ಸಂಘದಲ್ಲಿ ಕ್ಯಾಷಿಯರ್  ಆಗಿದ್ದು ಒಂದಿಷ್ಟು ದುಡ್ಡನ್ನು ಮೋಜಿಗೆ ಖರ್ಚು ಮಾಡಿದ್ದನಂತೆ. ಆಗಲೇ ಮಹಾಂತೇಶ್ ತನಿಖೆಗೆ ಬರುತ್ತೇನೆ ಎಂದು ನೋಟಿಸ್ ನೀಡಿದರಂತೆ. ನೋಟಿಸ್ ಬಂದ ತಕ್ಷಣ ಅವರನ್ನು ಹತ್ಯೆ ಮಾಡಲು ಸಂಚು ಹೂಡಿದನಂತೆ. ಅವರು ಕಚೇರಿಗೆ ಬಂದಾಗ, ತನ್ನ ಸ್ನೇಹಿತರನ್ನು ಕರೆಸಿ ಅವರ ವಾಹನ ತೋರಿಸಿದನಂತೆ. ಆತನ ಸ್ನೇಹಿತರು ಮಹಾಂತೇಶರು ಮನೆಗೆ ಹಿಂತಿರುಗುವಾಗ ದಾಳಿ ಮಾಡಿದರಂತೆ.

ಸಹಕಾರ ಸಂಘದ ಕ್ಯಾಷಿಯರ್ ಒಬ್ಬ ಅಧಿಕಾರಿ ನೋಟಿಸ್ ಕೊಟ್ಟ ತಕ್ಷಣ ಕೊಲೆ ಮಾಡಬೇಕು ಅಂತ ನಿರ್ಧಾರ ಮಾಡ್ತಾನೆ ಅಂದ್ರೆ ಅವನು ನೊಟೋರಿಯಸ್ ಇರಬೇಕು, ಇಲ್ಲಾ ವೃತ್ತಿಪರ ಕೊಲೆಗಡುಕನಿರಬೇಕು. ಈ ಹತ್ಯೆಯ ಮೊದಲು ಮತ್ತು ತದನಂತರದ ವಿದ್ಯಮಾನಗಳನ್ನು ಗಮನಿಸಿದವರಿಗೆ ಪೊಲೀಸರು ಬಂಧಿತರ ಬಗ್ಗೆ ಹೇಳುತ್ತಿರುವ ವಿಚಾರ ಕೇವಲ ಕತೆ ಎಂದು ಅನುಮಾನ ಬರುತ್ತೆ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಮೊದಲ ಬಾರಿಗೆ ನಾಲ್ವರ ಬಂಧನದ ಸುದ್ದಿ ಮಾಧ್ಯಮಗಳಿಗೆ ಬಂದಾಗ ಹಿರಿಯ ಅಧಿಕಾರಿಯೊಬ್ಬರು ಇವರ ಹಿಂದೆ ಇದ್ದಾರೆ ಎಂಬ ಸುದ್ದಿ ಇತ್ತು. ಆದರೆ ಆ ಅಧಿಕಾರಿ ಯಾರು? ಸುದ್ದಿಗೋಷ್ಟಿಯಲ್ಲಿ ಮಿರ್ಜಿ ಅವರ ಬಗ್ಗೆ ಹೇಳಲಿಲ್ಲ, ಆ ಮೂಲಕ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದರು.

ತನಿಖೆ ಪೂರ್ಣಗೊಂಡಿಲ್ಲ ಎನ್ನುವುದು ಮಾತ್ರ ಸತ್ಯ. ಅಂತೆಯೇ ನಿಜ ಆರೋಪಿಗಳು ಬಯಲಿಗೆ ಬಂದಿದ್ಡಾರೆಯೆ ಎನ್ನುವ ಸಂಶಯ ಇನ್ನೂ ಇದೆ.