Monthly Archives: October 2012

ಗಾಂಧೀಜಿಯ ಪ್ರತಿಬಿಂಬಗಳು : ಜಾರ್ಜ್ ಆರ್ವೆಲ್

ಮೂಲ : ಜಾರ್ಜ್ ಆರ್ವೆಲ್
ಅನುವಾದ : ಬಿ.ಶ್ರೀಪಾದ ಭಟ್

(1949ರಲ್ಲಿ, ಗಾಂಧಿ ತೀರಿಕೊಂಡ ನಂತರದ ದಿನಗಳಲ್ಲಿ ಬರೆದ ಲೇಖನ.)

ದೋಷಿಯೆಂದು ತೀರ್ಮಾನವಾಗುವವರೆಗೂ ಪ್ರವಾದಿಗಳನ್ನು ಮುಗ್ಧರೆಂದೇ ಪರಿಗಣಿಸಲಾಗುತ್ತದೆ. ಆದರೆ ಇದಕ್ಕಾಗಿ ಸಾಮಾನ್ಯ ಜನರು ಒಳಪಡುವ ಅಗ್ನಿಪರೀಕ್ಷೆ ಈ ಪ್ರವಾದಿಗಳಿಗೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಾಂಧಿಯ ವಿಷಯದಲ್ಲಿ ನನ್ನ ಕೆಲವು ಪ್ರಶ್ನೆಗಳು:

ಆಧ್ಯಾತ್ಮದ ಚಿಂತನೆಗಳನ್ನು ಮೈಗೂಡಿಸಿಕೊಂಡು ತನ್ನನ್ನು ತಾನು ಬೆತ್ತಲೆ ಫಕೀರ ಹಾಗೂ ವಿನಯಶೀಲನೆಂದು ಅತ್ಯಂತ ಎಚ್ಚರಿಕೆಯ ಸ್ಥಿತಿಯಲ್ಲಿ ಕರೆದುಕೊಳ್ಳುತ್ತಲೇ ಒಂದು ದೊಡ್ಡ ಸಾಮ್ರಾಜ್ಯವನ್ನು ಅಲ್ಲಾಡಿಸಿದ ಗಾಂಧಿಯ ಈ ಕ್ರಾಂತಿಯಲ್ಲಿ ಒಣಹೆಮ್ಮೆಯ ಬಂಡಾಯದ ಪಾಲೆಷ್ಟು? ಅಥವಾ ಇದೆಲ್ಲ ಮಾಯೆಯೇ?

ಈ ಸ್ವಾತಂತ್ರ್ಯ ಹೋರಾಟವನ್ನು ತೀವ್ರವಾಗಿ ಹುಟ್ಟುಹಾಕುವ ಕಾಲಘಟ್ಟದಲ್ಲಿನ ಈ ಸಂದರ್ಭದಲ್ಲಿ ರಾಜಕೀಯವನ್ನು ನೇರವಾಗಿ ಪ್ರವೇಶಿಸುವ ಭರದಲ್ಲಿ ಗಾಂಧಿಯು ತನ್ನ ಸಿದ್ಧಾಂತಗಳೊಂದಿಗೆ ಎಷ್ಟರಮಟ್ಟಿಗೆ ರಾಜಿ ಮಾಡಿಕೊಂಡರು? ಇದರಲ್ಲಿ ಬಲಪ್ರಯೋಗದ ಮನಸ್ಸು ಮತ್ತು ಕುಟಿಲತಂತ್ರದ ಯೋಜನೆಗಳು ಎಷ್ಟರಮಟ್ಟಿಗೆ ಒಂದಕ್ಕೊಂದು ಬೆಸೆದುಕೊಂಡಿವೆ?

ಇದಕ್ಕೆಲ್ಲ ಉತ್ತರಕ್ಕಾಗಿ ನಾವು ಗಾಂಧಿಯ ವ್ಯಕ್ತಿತ್ವ ಹಾಗೂ ಈ ವ್ಯಕ್ತಿತ್ವವನ್ನು ಆಧರಿಸಿದ ಅವರ ಸಾರ್ವಜನಿಕ ನಡವಳಿಕೆಗಳು ಮತ್ತು ಇವೆರಡನ್ನು ಬೆಸೆದಂತಹ ಅವರ ಬರವಣಿಗೆಗಳನ್ನು ಅತ್ಯಂತ ಆಳವಾಗಿ ಅಭ್ಯಾಸ ಮಾಡಲೇಬೇಕಾಗುತ್ತದೆ. ಬಹುಶ ಇದಕ್ಕೆ ಉತ್ತರ 20ರ ದಶಕದಲ್ಲಿ ಬರೆದ ಗಾಂಧಿಯ ಅಪೂರ್ಣ ಆತ್ಮಚರಿತ್ರೆಯಲ್ಲಿ ದೊರಕಬಹುದೇನೊ. ಏಕೆಂದರೆ ತನ್ನ ಸ್ವಭಾವದಿಂದ ಹಾಗೂ ಪ್ರತಿಭೆಯಿಂದ  ಬಲು ದೊಡ್ಡ ಉದ್ಯಮಿಯಾಗಿಯೋ, ವಕೀಲರಾಗಿಯೋ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗುವ ಅವಕಾಶಗಳಿದ್ದ ಗಾಂಧಿಯು ಅದು ಹೇಗೆ ಈ ಪ್ರವಾದಿತನಕ್ಕೆ ಸಿಲುಕಿಕೊಂಡರು, ಯಾವ ಘಟ್ಟದಲ್ಲಿ ತನ್ನ ಜೀವನವನ್ನು ಹೆಚ್ಚು ಕಡಿಮೆ ಒಂದು ತೀರ್ಥಯಾತ್ರೆಯ ಮಾದರಿಗೆ ರೂಪಿಸಿಕೊಂಡರು ಎನ್ನುವುದನ್ನು ಸಹ ಅಭ್ಯಸಿಸಬೇಕಾಗುತ್ತದೆ.

20ರ ದಶಕದಲ್ಲಿ ಗಾಂಧಿಯವರಿಗಿದ್ದ ಚರಕದಿಂದ ನೇಯ್ದ ಬಟ್ಟೆಗಳ ಕುರಿತಾದ ಕುರುಡು ವ್ಯಾಮೋಹ, ಪವಿತ್ರ ಶಕ್ತಿಗಳ ಕುರಿತು ಅಪಾರವಾಗಿ ನಂಬಿಕೆ, ಸಸ್ಯಹಾರಿ ಆಹಾರ ಪದ್ಧತಿಯ ಕುರಿತಾಗಿ ಅತಿಯಾದ ಪ್ರಚಾರ ಅಷ್ಟಾಗಿ ನನ್ನನ್ನು ಸೆಳೆದಿರಲಿಲ್ಲ. ಹಸಿವಿನಿಂದ ಬಳಲುತ್ತಿದ್ದ, ದಿನೇ ದಿನೇ ಜನಸಂಖ್ಯೆಯ ಹೆಚ್ಚಳದಿಂದ ನಲಗುತ್ತಿದ್ದ ಇಂಡಿಯಾದ ಜನತೆಗೆ ಗಾಂಧಿ ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೂ ಪ್ರತಿಪಾದಿಸುವ ಮಧ್ಯಕಾಲೀನ ಘಟ್ಟದ ಆಹಾರ ಪದ್ಧತಿಗಳು ಎಂದಿಗೂ ಉತ್ತರವಾಗಿರಲಿಲ್ಲ. ಈ ಮೇಲ್ವರ್ಗದ ಶ್ರೀಮಂತರಿಗೆ ತಮ್ಮ ಅಪಾರ ಸಂಪತ್ತನ್ನು ಅವಕಾಶ ಸಿಕ್ಕರೆ ದೇಶದ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಹಂಚಿಬಿಡುತ್ತೇವೆ ಎನ್ನುವ ಸಿದ್ಧಾಂತದ ಸಮಾಜವಾದಿಗಳು ಮತ್ತು ಕಮ್ಯುನಿಷ್ಟರಿಗಿಂತ ಪ್ರತಿಯೊಂದು ಅಪರಾಧಕ್ಕೂ ಮತ್ತು ಅನೈತಿಕತೆಗೆ ಶಿಕ್ಷೆಯ ರೂಪವಾಗಿ ಕ್ಷಮೆಯನ್ನು ಮತ್ತು ಪ್ರಾಯಶ್ಚಿತ್ತವನ್ನು ಮಾತ್ರ  ಪ್ರತಿಪಾದಿಸುತ್ತಿದ್ದ ಗಾಂಧಿಯನ್ನು ಇಂಡಿಯಾದ ಶ್ರೀಮಂತರು ಓಲೈಸುತ್ತಿದ್ದರು.

ಗಾಂಧಿಯವರ ‘ಮೋಸಗಾರರು ಕಡೆಗೆ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ’ ಎನ್ನುವ ಸರಳೀಕೃತ ಗ್ರಹಿಕೆ ಯಾವುದೇ ದೂರಗಾಮಿ ಪರಿಣಾಮಗಳನ್ನು, ಸಂಚಲನಗಳನ್ನು ಉಂಟುಮಾಡದಿರುವುದಕ್ಕಾಗಿ ಗಾಂಧೀಯ ಈ ತತ್ವಗಳು ಈ ಮೇಲ್ವರ್ಗಕ್ಕೆ ಅಪ್ಯಾಯಮಾನವಾಗಿದ್ದು. ಆದರೆ ಬ್ರಿಟಿಷರು ಸಹ ಗಾಂಧಿಯವರ ಸಮ್ಮೋಹನಕ್ಕೆ ಒಳಗಾಗಿದ್ದುದನ್ನು ನಾವು  ಅಲ್ಲಗೆಳೆಯುವಂತಿಲ್ಲ. ಇದಕ್ಕೆ ಗಾಂಧೀಯವರು ತಮ್ಮ ಇಡೀ ಜೀವನದಲ್ಲಿ ಯಾವ ಸಂದರ್ಭದಲ್ಲಿಯೂ ಭ್ರಷ್ಟರಾಗಿರಲಿಲ್ಲ ಎನ್ನುವ ಮುಖ್ಯವಾದ ವ್ಯಕ್ತಿತ್ವ ಹಾಗೂ ಸರಳೀಕೃತಗೊಂಡರೂ ವಿಕೃತಗೊಳ್ಳದ ಅವರ ಚಿಂತನೆಗಳು ಬ್ರಿಟಿಷರಿಗೆ ಅವರ ಕುರಿತಾಗಿ ಮೆಚ್ಚುಗೆಯ ಭಾವನೆಯನ್ನು ಹುಟ್ಟಿಹಾಕಿದ್ದವು. ವೈಯಕ್ತಿಕ ಜೀವನದಲ್ಲಿ ಪ್ರತಿಯೊಂದು ನಡೆಗೂ, ಪ್ರತಿಯೊಂದು ನಿರ್ಧಾರಗಳಿಗೂ ಮೇಲ್ಮಟ್ಟದ, ನೈತಿಕತೆಯ ಗೆರೆಯನ್ನು ಎಳೆದುಕೊಳ್ಳುತ್ತಿದ್ದ ಗಾಂಧಿಯ ವ್ಯಕ್ತಿತ್ವ ಹಾಗೂ ಅವರ ಈ ಶ್ರೇಷ್ಠವೆನ್ನಬಹುದಾದ ಆದರ್ಶ ಅವರ ಶತ್ರುಗಳನ್ನು ಸಹ ಮೀರಿ ದೇಶಾದ್ಯಾಂತ ವ್ಯಾಪಿಸಿಕೊಳ್ಳುತ್ತಿತ್ತು.

ಇದು ಗಾಂಧಿಯ ಸಾವಿನಲ್ಲಿ ನಿಚ್ಛಳವಾಗಿ ಗೋಚರಿಸುತ್ತದೆ. ಬ್ರಿಟಿಷರಿಗೆ ತಮ್ಮ ಹಿಪೋಕ್ರಸಿ ಹೇಗೆ ಅವರ ಸಾಧನವಾಗಿತ್ತೋ ಗಾಂಧಿಯವರಿಗೆ ಮೇಲೆ ಉದಾಹರಿಸಿದ ಆದರ್ಶವೇ ಬಲು ದೊಡ್ಡ ಸಾಧನವಾಗಿತ್ತು. ತನ್ನ ಹರೆಯದಲ್ಲಿ ದಕ್ಷಿಣ ಅಫ್ರಿಕಾದಲ್ಲಿ ತನ್ನ ಕಪ್ಪು ವರ್ಣದ ಕಾರಣಕ್ಕಾಗಿ ಜನಾಂಗೀಯ ತಿರಸ್ಕಾರಕ್ಕೆ ಗುರಿಯಾಗಬೇಕಾಗಿ ಬಂದದ್ದು ಗಾಂಧಿಯಲ್ಲಿ ಕೀಳರಿಮೆಯನ್ನು ಮೂಡಿಸುವುದರ ಬದಲಾಗಿ ವಿಸ್ಮಯಗೊಳಿಸಿತ್ತು. ಪ್ರತಿಯೊಂದು ಅವಹೇಳನಗಳಿಗೆ, ಹಲ್ಲೆಗಳಿಗೆ ವಿಸ್ಮಯಗೊಳ್ಳುವ ತಮ್ಮೊಳಗಿನ ಈ ವಿಶಿಷ್ಟ ಗುಣದಿಂದಾಗಿ ಗಾಂಧಿಯು ತನ್ನ ಪೀಚಲು ದೇಹವನ್ನೇ ಬಂಡವಾಳ ಮಾಡಿಕೊಂಡು ದಕ್ಷಿಣ ಆಫ್ರಿಕಾದಲ್ಲಿ ಈ ಜನಾಂಗ ನಿಂದನೆ ಮತ್ತು ವರ್ಣದ್ವೇಷದ ವಿರುದ್ಧ ಯಶಸ್ವೀ ಹೋರಾಟವನ್ನು ಹುಟ್ಟು ಹಾಕಿದರು. ಅಲ್ಲಿ ಇವರು ತಮ್ಮ ಹೋರಾಟಕ್ಕೆ ಯುರೋಪಿಯನ್ ಸ್ನೇಹಿತರ ಬೆಂಬಲವನ್ನು ಸಹ ಗಳಿಸಿದ್ದರೆ ಇದಕ್ಕೆ ಮೂಲಭೂತ ಕಾರಣ ಗಾಂಧಿಯವರ ಸಮಾಜದ ಎಲ್ಲ ಸ್ತರದ ಜನರನ್ನು ಒಳಗೊಳ್ಳುವ ಪ್ರಕ್ರಿಯೆ.

ಪತ್ರಿಕೆಯೊಂದರ ಧಾರವಾಹಿಯಾಗಿ ಬರೆಯಲ್ಪಟ್ಟ ಅವರ ಆತ್ಮಕಥೆಯು ಸಾಹಿತ್ಯಕವಾಗಿ ಯಾವುದೇ ವಿಶಿಷ್ಟತೆಯನ್ನು, ಶ್ರೇಷ್ಠತೆಯನ್ನು, ಅದ್ಭುತವೆನ್ನಬಹುದಾದ ನುಡಿಕಟ್ಟುಗಳನ್ನು ಒಳಗೊಳದಿದ್ದರೂ ಅದರ ಸರಳತೆಯೇ ಬಲು ದೊಡ್ಡ ಯಶಸ್ಸನ್ನು ತಂದು ಕೊಟ್ಟಿತು. ಅವರ ಬಾಲ್ಯವು ಎಲ್ಲರಂತೆ ಸಹಜವಾಗಿತ್ತು, ಯೌವನದಲ್ಲಿ ಸಾಮಾನ್ಯ ಜನರಂತೆಯೇ ಅವರ ಆಸೆಗಳಿದ್ದವು. ತಮ್ಮ ಬಾಲ್ಯಕಾಲ ಹಾಗೂ ಯೌವನದ ದಿನಗಳಲ್ಲಿ ಕೆಲವು ಪಾಪಗಳನ್ನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಘಟನೆಗಳಾದ ಸಿಗರೇಟು ಸೇದಿದ್ದು, ಮಾಂಸ ಸೇವಿಸಿದ್ದು, ಕೆಲವು ನಾಣ್ಯವನ್ನು ಕಳ್ಳತನ ಮಾಡಿದ್ದು, ವೇಶ್ಯಾವಾಟಿಕೆಗೆ ಹೋಗಿ ಏನನ್ನು ಮಾಡದೇ ಹಿಂತಿರುಗಿದ್ದು, ಇತ್ಯಾದಿ ಘಟನೆಗಳು ಅಂತಹ ಬಲು ದೊಡ್ಡ ತಪ್ಪುಗಳೇನಲ್ಲ. ಆದರೆ ಮುಂದೆ ತನ್ನ ಪಾಪನಿವೇದನೆಯ ಸಂದರ್ಭದಲ್ಲಿ ಈ ಸಣ್ಣ ಘಟನೆಗಳನ್ನೇ ದೊಡ್ಡ ದೋಷಗಳನ್ನಾಗಿ ಪರಿವರ್ತಿಸಿ ಆ ಪಾಪನಿವೇದನೆಯ ಸಂದರ್ಭವನ್ನು ಔನ್ಯತೀಕರಿಸಿದ್ದು ಗಾಂಧಿಯ ಚಾಣಾಕ್ಷತೆಯನ್ನು ತೋರುತ್ತದೆ. ಅವರು ತಮ್ಮನ್ನು ನಾನೂ ನಿಮ್ಮಂತೆ ಸಣ್ಣವನೇ ಎನ್ನುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಿವುದರ ಹಿಂದೆ ಮಧ್ಯಮ ವರ್ಗದ ವ್ಯಾಪಾರ ಮನೋಭಾವದ ನಡಾವಳಿಯಿದೆ. ತಮ್ಮ ಈ ಚಕಿತಗೊಳಿಸುವ, ಪ್ರಾಮಾಣಿಕವಾದ ವ್ಯಕ್ತಿತ್ವದ ಮೂಲಕ ಗಾಂಧಿಯು ಪ್ರತಿಪಾದಿಸಿದ ಸರಳತೆ ಎಲ್ಲಿಯೂ ಕಳಂಕಿತಗೊಂಡಿರಲಿಲ್ಲ. ಇದರ ಪಾವಿತ್ರ್ಯತೆಯ ಪ್ರಭಾವ ಎಷ್ಟಿತ್ತೆಂದರೆ ಇದು ಅವರ ಶತೃಗಳನ್ನು ಸಹ ತಲೆದೂಗಿಸುವಷ್ಟು.

ಗಾಂಧಿಯನ್ನು ಪಶ್ಚಿಮದ ಎಡಪಂಥೀಯ ಚಳವಳಿಯ ಬೆಂಬಲಗಾರನನ್ನಾಗಿ ಬಳಸಿಕೊಳ್ಳುತ್ತಿರುವುದು ಇವರ ನಿಧನದ ನಂತರದ ವರ್ಷಗಳಲ್ಲಿ ಒಂದು ಫ್ಯಾಷನ್ ಆಗಿ ಬೆಳೆದಿದೆ. ಅರಾಜಕತಾವಾದಿಗಳೂ ಮತ್ತು ಶಾಂತಿವಾದಿಗಳು ಗಾಂಧಿಯನ್ನು ತಮ್ಮ ಚಿಂತನೆಯ ಆಸ್ತಿ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಗಾಂಧಿಯ ಸತ್ಯಾಗ್ರಹ ನೀತಿಯ ಪಾಲೆಷ್ಟು, ಪ್ರಭುತ್ವದ ಹಿಂಸೆಯನ್ನು ಕಟುವಾಗಿ ವಿರೋಧಿಸಿದ್ದರ ಪಾಲೆಷ್ಟು ಎಂದು ಹೇಳುವುದು ಕಷ್ಟ. ಏಕೆಂದರೆ ದೇವರ ಆಸ್ತಿತ್ವವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಈ ಜಗತ್ತಿನ ಕೊಳ್ಳುಬಾಕುತನದ ಆಕರ್ಷಣೆಯನ್ನು ಮೀರುವುದಕ್ಕಿಂತಲೂ ಅದಕ್ಕೆ ಹೊಂದಿಕೊಂಡು ಬದುಕಬೇಕು ಎಂದು ಆಧ್ಯಾತ್ಮದ ಹಿನ್ನೆಲೆಯಲ್ಲಿ ಗಾಂಧಿ ಪ್ರತಿಪಾದಿಸಿದ್ದು ನಿಜಕ್ಕೂ ಕುತೂಹಲಕರ. ಈ ಜೀವನ ಶೈಲಿಯಲ್ಲಿ ಬದುಕುವ ವ್ಯಕ್ತಿಯ ಪ್ರತಿಯೊಂದು ನಡುವಳಿಕೆಯೂ, ವ್ಯವಹಾರವೂ ಪರೀಕ್ಷೆಗೆ, ನಿದರ್ಶನಕ್ಕೆ ಒಳಪಡುತ್ತದೆ ಎನ್ನುವಂತಹ ಚೌಕಟ್ಟನ್ನು ಹಾಕಿರುವುದರಿಂದಲೇ ಗಾಂಧಿ ತತ್ವ ಯಶಸ್ಸನ್ನು ಸಾಧಿಸಿತೆನ್ನಬಹುದೇನೋ. ಹತ್ತಿರದ ಬಾಂಧವ್ಯಗಳನ್ನು, ಸಂಬಂಧಗಳನ್ನು ಇಟ್ಟುಕೊಳ್ಳುವುದನ್ನು ಗಾಂಧಿ ತೀವ್ರವಾಗಿ ವಿರೋಧಿಸುತ್ತಿದ್ದರು. ಏಕೆಂದರೆ ಈ ಖಾಸಗೀ ಗೆಳೆತನವು ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಮೌಲ್ಯಗಳನ್ನು ನಿರ್ಧರಿಸುವುದಕ್ಕೆ ತೊಡರುಗಾಲಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದರು. ಗಾಂಧಿಯವರ ಈ ಮಾದರಿ ಚಿಂತನೆಗಳ ಮಹತ್ವ ಬಹು ಬೆಲೆಯುಳ್ಳದ್ದು ಎಂದು ನನ್ನ ಅನಿಸಿಕೆ. ಏಕೆಂದರೆ ಮೇಲಿನ ಸಂದರ್ಭಗಳು ಮನುಷ್ಯನನ್ನು ಅಸಹಾಯಕತೆಗೆ ದೂಡುತ್ತದೆ, ತದನಂತರ ಈ ಅಸಹಾಯಕತೆಯೇ ಸಮಾಜದಲ್ಲಿ ಅಶಾಂತತೆಯನ್ನು ಹುಟ್ಟುಹಾಕುತ್ತದೆ ಎನ್ನುವುದು ಸರ್ವಕಾಲಿಕ ಸತ್ಯ. ಪರಿಪೂರ್ಣತೆಯನ್ನು ಬಯಸದಿರುವುದೇ ಮನುಷ್ಯತ್ವದ ಘನತೆ. ಏಕೆಂದರೆ ಈ ಪರಿಪೂರ್ಣತೆಯ ನಿಷ್ಠೆಗಾಗಿ ಮನುಷ್ಯ ತಪ್ಪುಗಳನ್ನು ಮಾಡಲೂ ಹಿಂದುಮುಂದು ನೋಡಲಾರ. ಈ ವೈರಾಗ್ಯದ ಅಂತಿಮ ಘಟ್ಟಕ್ಕೆ ತಲಪುವ ಹುಚ್ಚಿನಲ್ಲಿ ಮಾನವ ಸಂಬಂಧಗಳಿಗೇ ಕುತ್ತು ಉಂಟಾಗುತ್ತದೆ. ನಿಜ, ಹೆಂಡ, ತಂಬಾಕು ಮುಂತಾದವುಗಳು ಪ್ರವಾದಿಯೊಬ್ಬನು ದೂರವಿಡಬೇಕಾದಂತಹ ವಸ್ತುಗಳೇ, ಆದರೆ ಮನುಷ್ಯನು ಸಂತತನವನ್ನು ಸಹ ದೂರವಿಡಲೇಬೇಕಾಗುತ್ತದೆ. ಅಂದರೆ ಸಾಮಾನ್ಯ ಮನುಷ್ಯನ ಬದುಕು ಸೋತ ಸಂತನ ಜೀವನವೇ. ಮತ್ತೊಂದು ಅರ್ಥದಲ್ಲಿ ಹೇಳಬೇಕೆಂದರೆ ಯಾರಾದರೂ ಸಂತನ ಶ್ರೇಷ್ಠತೆಯನ್ನು ತಲುಪಿದರೆ ಆ ವ್ಯಕ್ತಿ ಮನುಷ್ಯತ್ವದ ತುಡಿತವನ್ನು ಕಡೆದುಕೊಳ್ಳುತ್ತಾನೆ. ಅಥವಾ ಇದು ಸಹ ಪೂರ್ಣ ಸತ್ಯವಿರಲಾರದು. ಅಥವಾ ಪ್ರತಿಯೊಬ್ಬನೂ ದೇವರು ಮತ್ತು ಮನುಷ್ಯನ ನಡುವೆ ಆಯ್ಕೆ ಮಾಡಿಕೊಳ್ಳಬೇಕು, ಪ್ರಗತಿಪರ ಲಿಬರಲ್ ಮತ್ತು ಅರಾಜಕತಾವಾದಿಯ ನಡುವಿನ ಆಯ್ಕೆ ಮಾಡಿಕೊಳ್ಳಬೇಕು.

ಗಾಂಧಿಯ ಆಧ್ಯಾತ್ಮವೂ ಸಹ ಒಣ ಬೌದ್ಧಿಕ ಕಸರತ್ತಾಗಿರದೆ ಅದು ರಾಜಕೀಯ ಫಲಿತಾಂಶಗಳನ್ನು ಪಡೆಯಲು ಒಂದು ತಂತ್ರ ಮತ್ತು ಪದ್ಧತಿ ಕೂಡ ಆಗಿತ್ತು. ದ್ವೇಷವನ್ನು, ತಿರಸ್ಕಾರವನ್ನು ಹುಟ್ಟಿಹಾಕದೆ ನಿಶ್ಚಿತ ಫಲಿತಾಂಶಗಳನ್ನು ಪಡೆಯಲು ಗಾಂಧಿ ಬಳಸಿದ ಸತ್ಯಾಗ್ರಹವೆನ್ನುವ ಆಯುಧ ಸತ್ಯದಲ್ಲಿ ಅಪಾರ ನಂಬುಗೆ ಎನ್ನುವ ತತ್ವದ ಅಡಿಯಲ್ಲಿ ರೂಪಿತಗೊಂಡಿತ್ತು. ಇದಕ್ಕಾಗಿ ಹರತಾಳಗಳನ್ನು, ರಸ್ತೆ ತಡೆ, ರೈಲು ರೋಖೋ ಚಳವಳಿಗಳನ್ನು ಹಮ್ಮಿಕೊಳ್ಳುವುದು, ಉಪವಾಸ ಮುಷ್ಕರಗಳನ್ನು ನಡೆಸುವುದು ಎಲ್ಲವೂ ಸತ್ಯದ ಪ್ರತಿಪಾದನೆಗಳು ಮತ್ತು ನ್ಯಾಯಗಳಿಸುವ ಹಂಬಲದ ಮಾರ್ಗಗಳು ಎಂದು ಗಾಂಧಿ ನಂಬಿದ್ದರು ಅಥವಾ ಭಾರತವನ್ನು ಹಾಗೆ ನಂಬಿಸಿದ್ದರು. ಏಕೆಂದರೆ ಗಾಂಧಿಗೆ ನಿಷ್ಕ್ರಿಯ ಪ್ರತಿಭಟನೆಯಲ್ಲಿ ಕಿಂಚಿತ್ತೂ ವಿಶ್ವಾಸವಿರಲಿಲ್ಲ. ಅದರೆ ವಿಪರ್ಯಾಸವೆಂದರೆ 1869ರಲ್ಲಿ ಜನಿಸಿದ ಗಾಂಧಿಯು ಏಕಚಕ್ರಾಧಿಪತ್ಯದ ಸ್ವರೂಪವನ್ನು ಅದರ ಸಮಗ್ರ ಪ್ರಭಾವ ವಲಯವನ್ನು ಅರ್ಥ ಮಾಡಿಕೊಂಡಿರಲಿಲ್ಲ. ಗಾಂಧಿಗೆ ತನ್ನ ಸತ್ಯಾಗ್ರಹವನ್ನು ಬಳಸಿಕೊಂಡು ಜಗತ್ತನ್ನು ಎಚ್ಚರಗೊಳಿಸಲು ಹೋರಾಡುತ್ತಿದ್ದೇನೆ ಎಂಬ ಮುಗ್ಧ ನಂಬುಗೆಯಿತ್ತು. ಆದರೆ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿಯ ಯಶಸ್ಸು ಅನುಮಾನಾಸ್ಪದವೇ. ಏಕೆಂದರೆ ಆಕ್ರಮಿತ ದೇಶದ ವಿರುದ್ಧದ ಹೋರಾಟಕ್ಕೂ ತಮ್ಮದೇ ಸರ್ಕಾರದ ಸರ್ವಾಧಿಕಾರಿ ಆಡಳಿತದ ವಿರುದ್ಧದ ಹೋರಾಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಉದಾಹರಣೆಗೆ ರಷ್ಯಾದಲ್ಲಿ ಗಾಂಧಿಯ ಸತ್ಯಾಗ್ರಹ ಮಾದರಿ ಯಶಸ್ಸನ್ನುಗಳಿಸುವುದು ಬಲು ಕಷ್ಟ. ಏಕೆಂದರೆ ಕೃತಜ್ಞತೆ ಎನ್ನುವುದು ಸಹ ಅಂತರಾಷ್ಟ್ರೀಯ ರಾಜಕೀಯದ ಲಕ್ಷಣಗಳಲ್ಲೊಂದು.

ಮೇಲಿನ ಪ್ರಶ್ನೆಗಳು ನಿರಂತರ ಚರ್ಚೆಗೊಳಬೇಕಾಗಿದೆ. ಏಕೆಂದರೆ ನಾಗರಿಕ ಸಮಾಜವು ಮತ್ತೊಂದು ಯುದ್ಧವನ್ನು, ಹಿಂಸೆಯನ್ನು ತಾಳಿಕೊಳ್ಳಲಾರದು. ಹಾಗೆಯೇ ಇದಕ್ಕೆ ಅಹಿಂಸೆಯೊಂದೇ ಪರಿಹಾರಮಾರ್ಗವೆನ್ನುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಗಾಂಧಿಯವರು ಆಧುನಿಕತೆಯ ಅನೇಕ ಪ್ರಶ್ನೆಗಳನ್ನು, ಸಂಧಿಗ್ಧತೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಟೀಕಿಸುವುದಕ್ಕಿಂಲೂ ತನಗೆ ಹೊಳೆದ, ತಾನು ನಂಬಿದ ಸತ್ಯವನ್ನು ಪ್ರಾಮಾಣಿಕವಾಗಿ ಬಹಿರಂಗವಾಗಿ ಬರೆಯಲು, ಸಾರ್ವಜನಿಕವಾಗಿ ಚರ್ಚಿಸಲು ಗಾಂಧಿ ಎಂದೂ ಹಿಂಜರಿಯುತ್ತಿರಲಿಲ್ಲ ಎನ್ನುವುದೇ ಹೆಚ್ಚು ಸಮಂಜಸ. ನಾನು ವೈಯುಕ್ತಿಕವಾಗಿ ಗಾಂಧಿಯವರ ಚಿಂತನೆಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡದಿದ್ದರೂ ಒಬ್ಬ ರಾಜಕೀಯ ಚಿಂತಕನಾಗಿ ಗಾಂಧಿಯು ಯಶಸ್ವಿಯಾಗಿದ್ದಾರೆ ಎಂದೇ ನನ್ನ ಅನಿಸಿಕೆ. ಗಾಂಧಿಯವರು ಹತ್ಯೆಗೀಡಾದಾಗ ಅವರ ಅಪಾರ ಅಭಿಮಾನಿಗಳು ಶೋಕತಪ್ತರಾಗಿ ತಮ್ಮ ಪ್ರೀತಿಯ ನಾಯಕನು ತಾನೇ ನಾಯಕತ್ವ ವಹಿಸಿಕೊಂಡು ಹೋರಾಟ ನಡೆಸಿ ಪಡೆದ ಸ್ವಾತಂತ್ರ್ಯವು ಜನಾಂಗೀಯ ಘರ್ಷಣೆಗೆ ಬಲಿಯಾಗಿದ್ದಕ್ಕೆ ದುಂಖಿಸುತ್ತಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವ ಉದ್ದೇಶದ ಜೊತೆಜೊತೆಗೆ ಹಿಂದೂಮುಸ್ಲಿಂರ ನಡುವಿನ ಸೌಹಾರ್ದವೂ ಗಾಂಧಿಯವರಿಗೆ ಪ್ರಮುಖ ಆದ್ಯತೆಯಾಗಿತ್ತು. ತಮ್ಮ ಅಹಿಂಸಾತ್ಮಕ ಹೋರಾಟವನ್ನು ದ್ವೇಷಕ್ಕೆ ಹೊರಳಲು ಗಾಂಧಿಯವರು ಎಲ್ಲಿಯೂ ಅವಕಾಶ ನೀಡಲಿಲ್ಲ. ಆದರೆ ಅವರ ಜೀವಿತ ಕಾಲದಲ್ಲೇ ಭಾರತವು ಎಂದೂ ಕಂಡರಿಯದ ಕೋಮುಗಲಭೆಗಳಿಗೆ ತುತ್ತಾಗಿದ್ದಕ್ಕೆ ಅದು ಯಾರ ಸೋಲು ಎನ್ನುವ ಪ್ರಶ್ನೆಗೆ ಮುಂದಿನ ವರ್ಷಗಳಲ್ಲಿ ಉತ್ತರ ದೊರೆಯಬಹುದು. ಆದರೆ ಅವರ ರಾಜಕೀಯ ಹೋರಾಟವು ಎಂದಿಗೂ ನಂಜನ್ನು ಹೊಂದಿರಲಿಲ್ಲ. ಇಂಡಿಯಾ ದೇಶವು ಗಾಂಧಿಗೆ ಸಂತನ ಪಟ್ಟವನ್ನು ಕೊಟ್ಟರೂ ಸ್ವತಃ ಗಾಂಧಿ ಎಂದೂ ಸಂತನ ಗುಣಗಳನ್ನು ತಮಗೆ ಅರೋಪಿಸಿಕೊಂಡಿರಲಿಲ್ಲ. ನಮ್ಮ ಕಾಲಘಟ್ಟದ ಇತರ ಸಮಾಕಾಲೀನ ರಾಜಕೀಯ ನಾಯಕರುಗಳ ಜೀವನ ವೃತ್ತಾಂತವನ್ನು ಅಧ್ಯಯನ ಮಾಡಿದಾಗ ಗಾಂಧಿ ನಮ್ಮ ನಡುವೆ ಬಿಟ್ಟು ಹೋದ ಮಧುರ, ಸ್ವಚ್ಛ ಸುವಾಸನೆಯನ್ನು ಎಂದಿಗೂ ಮರೆಯಲಾಗದು.

ಕಾವೇರಿ-ಕರ್ನಾಟಕ : ಮುತ್ಸದ್ಧಿಗಳ ಕೊರತೆ…


– ರವಿ ಕೃಷ್ಣಾರೆಡ್ಡಿ


ಕರ್ನಾಟಕದ ರಾಜಕಾರಣಿಗಳ ಪೈಕಿ ಕಾವೇರಿ ವಿಚಾರಕ್ಕೆ ಅಂಕಿಅಂಶಗಳ ಸಮೇತ ಅದರ ಇಡೀ ಇತಿಹಾಸ ಮತ್ತು ವರ್ತಮಾನವನ್ನು ತಿಳಿದುಕೊಂಡಿರುವವರು ಎಚ್.ಡಿ.ದೇವೇಗೌಡರು. ಅವರಿಗೆ ಬಹುಶಃ ಕೃಷ್ಣಾ ನದಿ ಮತ್ತು ಅದಕ್ಕೆ ಸಂಬಂಧಿಸಿದ ಕರ್ನಾಟಕದ ವಿವರಗಳೂ ಅಷ್ಟೇ ಚೆನ್ನಾಗಿ ಗೊತ್ತಿರಬಹುದು. ಕೃಷ್ಣಾ ನದಿಯ ವಿಚಾರಕ್ಕೆ ಎಚ್.ಕೆ.ಪಾಟೀಲರೂ ಸಹ ದೇವೇಗೌಡರಷ್ಟೇ ತಿಳಿದುಕೊಂಡಿರಬಹುದು. ಇನ್ನು ಕನ್ನಡ ಪತ್ರಕರ್ತರ ವಿಷಯಕ್ಕೆ ಬಂದರೆ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರೂ ಸಹ ಅದರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲಷ್ಟು ವಿಷಯದ ಪೂರ್ವೇತಿಹಾಸ ಅರಿತವರು. ಈ ಹಿನ್ನೆಲೆಯಲ್ಲಿ ನಾವು ದಿನೇಶ್ ಅಮಿನ್ ಮಟ್ಟುರವರ ಇಂದಿನ ಅಂಕಣ ಲೇಖನ “ಬೇಕಾಗಿರುವುದು ಸುಡುವ ಬೆಂಕಿ ಅಲ್ಲ; ಅರಿವಿನ ಬೆಳಕು“ವನ್ನು ಗಮನಿಸಬೇಕು.

ದಿನೇಶ್‌ರವರು ಹೇಳಿದ ಹಾಗೆ ಕಾವೇರಿ ವಿವಾದ ಕಳೆದ 21 ವರ್ಷಗಳಿಂದ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ರೈತರನ್ನು ಕಾಡುತ್ತಿದೆ. 21 ವರ್ಷಗಳ ಹಿಂದೆ ಇದ್ದದ್ದು ಬಂಗಾರಪ್ಪರ ಸರ್ಕಾರ. ಬಹುಶಃ ಅವರ ಅವಧಿಯಲ್ಲಿ ಆದಷ್ಟು ದೊಡ್ಡ ಗಲಾಟೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಮತ್ತೆ ಆಗಿಲ್ಲ. ನನ್ನೂರು (ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ) ತಮಿಳುನಾಡಿನ ಗಡಿಯಿಂದ ಕೇವಲ ಹತ್ತು-ಹನ್ನೆರಡು ಕಿ.ಮೀ. ದೂರದಲ್ಲಿದೆ. ಆಗ ನಡೆದ ಗಲಭೆಗಳಿಗೆ ಹೆದರಿ ಆಗ ನನ್ನೂರಿನ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ತಮಿಳರು ಗಂಟುಮೂಟೆ ಕಟ್ಟಿಕೊಂಡು ರಾತ್ರೋರಾತ್ರಿ ಗಡಿ ದಾಟಿದ್ದರು. ಒಂದಷ್ಟು ಪುಡಿರೌಡಿಗಳು ಮತ್ತು ದರೋಡೆಕೋರರು ಆ ಸಂದರ್ಭವನ್ನು ತಮ್ಮ ಅಪರಾಧಿ ಕೆಲಸಗಳಿಗೂ ಬಳಸಿಕೊಂಡಿದ್ದರು.

ಬಂಗಾರಪ್ಪ ಸರ್ಕಾರದ ನಂತರ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ಕಾವೇರಿ ಗಲಾಟೆ ಜೋರಾಗಿ ಆಗಿತ್ತು. ತಮಿಳುನಾಡಿನ ಒತ್ತಡವನ್ನು ನಿವಾರಿಸಿಕೊಳ್ಳಲು ಮತ್ತು ತಮಿಳುನಾಡಿಗೆ ಆಗ ನೀರಿನ ಅವಶ್ಯಕತೆ ಖಂಡಿತ ಇಲ್ಲ ಎಂದು ವಾದಿಸಲು ದೇವೇಗೌಡರು ಕರ್ನಾಟಕದ ಕೆಲವು ಸರ್ಕಾರಿ ನೌಕರರನ್ನು ಗುಟ್ಟಾಗಿ ತಮಿಳುನಾಡಿಗೆ ಕಳುಹಿಸಿ ಅಲ್ಲಿಂದ ಫೋಟೋಸಹಿತ ಸಾಕ್ಷ್ಯಾಧಾರಗಳನ್ನು ತರಿಸಿಕೊಂಡು ವಾದ ಮಂಡಿಸಿದ್ದರು ಎಂದು ಕೆಲವು ಪತ್ರಿಕೆಗಳಲ್ಲಿ ಓದಿದ ನೆನಪು. ಅದಾದ ಮೇಲೆ ಎಸ್.ಎಮ್.ಕೃಷ್ಣರ ಸರ್ಕಾರ ಕಾವೇರಿ ವಿಚಾರಕ್ಕೆ ಯಾವ ರೀತಿ ನ್ಯಾಯಾಂಗನಿಂದನೆ ಆರೋಪಕ್ಕೆ ಗುರಿಯಾಗಿ ಸ್ವತಃ ಎಸ್.ಎಮ್.ಕೃಷ್ಣರೇ ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ತಪ್ಪೊಪ್ಪಿಗೆ ಪ್ರಮಾಣ ಪತ್ರ ಸಲ್ಲಿಸಿ ಬಂದರು ಎಂದು ಎಲ್ಲರಿಗೂ ಗೊತ್ತಿರುವುದೇ.

ಈ ವರ್ಷ ರಾಜ್ಯದಲ್ಲಿ ಖಂಡಿತವಾಗಲೂ ಬರಗಾಲವಿದೆ. ಕಳೆದ ವರ್ಷವೂ ಅರೆ ಬರಗಾಲವಿತ್ತು. ರಾಜ್ಯದ ಪ್ರತಿಯೊಂದು ಜಲಾಶಯದಲ್ಲೂ ಕಳೆದ ವರ್ಷ ಇದೇ ಸಮಯದಲ್ಲಿ ಇರುವುದಕ್ಕಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಇಂದು ನೀರು ಇದೆ ಎಂದರೆ ಅದು ಈ ವರ್ಷದ ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಶೆಟ್ಟರ್ ನೇತೃತ್ವದ ಸರ್ಕಾರ ಅತಿ ಅವಜ್ಞೆಯಿಂದ ಮತ್ತು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಅದೇ ಬಹುಶಃ ಇಂದು ತಲೆದೋರಿರುವ ಇಕ್ಕಟ್ಟಿಗೆ ಪ್ರಮುಖ ಕಾರಣ. ಕುಡಿಯಲು ನೀರು ಮತ್ತು ರಟ್ಟೆಯಲ್ಲಿ ಬಲ ಇಲ್ಲದಾಗ ಆಳದ ಬಾವಿ ತೋಡುವ ಸಾಹಸ ಈ ಸರ್ಕಾರದ್ದು.

ಈಗ ದಿನೇಶ್ ಅಮಿನ್ ಮಟ್ಟುರವರ ಲೇಖನಕ್ಕೆ ಮತ್ತೆ ಬರುತ್ತೇನೆ. ಅವರ ಲೇಖನವನ್ನು ಓದುತ್ತಿದ್ದರೆ ನಮಗೆ ಒಂದು ಸಂಶಯ ಬರುತ್ತದೆ . ಕಾವೇರಿ ತೀರ್ಪಿನಲ್ಲಿ ಬಹುಶಃ ನ್ಯಾಯಾಧೀಶರ ವೈಯಕ್ತಿಕ ಅನುಭವಗಳು ಮತ್ತು ಅಭಿಪ್ರಾಯಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರಿವೆಯೇನೋ ಎಂದು. 1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯ ನ್ಯಾಯಮೂರ್ತಿಗಳಿಗೆ ರಾಜ್ಯ ಸರ್ಕಾರ ಮತ್ತು ಕಾವೇರಿ ಕೊಳ್ಳದ ಜನತೆ, ಆ ನ್ಯಾಯಮಂಡಳಿಯ ಏರ್ಪಾಟಿನ ಬಗ್ಗೆಯೇ ತಮ್ಮ ಭಿನ್ನಾಭಿಪ್ರಾಯ, ಅಸಹನೆ, ಮತ್ತು ಅಸಹಕಾರವನ್ನು ತೋರಿಸಿದ್ದು ನ್ಯಾಯಮಂಡಳಿಯ ಅಂತಿಮ ತೀರ್ಪಿನಲ್ಲಿಯೂ ಪ್ರತಿಫಲಿಸಿತು ಎಂದಾದರೆ ಅದು ನಿಜಕ್ಕೂ ಪ್ರಶ್ನೆಗೆ ಅರ್ಹ. ನಾನು ಜನರ ಅಸಹಕಾರದ ಬಗ್ಗೆ ಮಾತನಾಡುವುದಿಲ್ಲ. ಕರ್ನಾಟಕದ ಹೊರಗೆ ನಮ್ಮ ರಾಜ್ಯದ ಜನರ ಬಗ್ಗೆ ಏನೇ ಅಭಿಪ್ರಾಯವಿರಲಿ, ಆದರೆ ರಾಜ್ಯದ ಜನತೆಗಂತೂ ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯವಾಗಿದೆ ಮತ್ತು ಅನ್ಯಾಯವಾಗುತ್ತಲೇ ಇದೆ ಎನ್ನುವ ಅಭಿಪ್ರಾಯವಂತೂ ಗಟ್ಟಿಯಾಗಿದೆ. ಹೀಗಿರುವಾಗ, ನಮಗೆ ಅನ್ಯಾಯವಾಗಿದೆ ಮತ್ತು ನಾವು ನ್ಯಾಯದ ಪರ ಇದ್ದೇವೆ ಎಂಬ ಭಾವನೆ ಯಾವ ಸಮುದಾಯಗಳಲ್ಲಿ ಇರುತ್ತದೋ ಅವರು ಅಗತ್ಯಕ್ಕಿಂತ ಹೆಚ್ಚು ಒರಟುತನದಲ್ಲಿ ಮತ್ತು ಕೋಪದಲ್ಲಿಯೇ ವರ್ತಿಸಿರುತ್ತಾರೆ. ಹಾಗಾಗಿ ಜನ ಮತ್ತು ರೈತರು ನ್ಯಾಯಮಂಡಳಿಗೆ  ಕಪ್ಪುಬಾವುಟ ತೋರಿಸಿ `ಗೊ ಬ್ಯಾಕ್` ಎಂದರೆ ಅದು ಅಂತಹ ಸಮಯದಲ್ಲಿ ಬಹುಶಃ ನಿರೀಕ್ಷಿಸಬಹುದಾದದ್ದು.

ಆದರೆ, ಒಟ್ಟಾರೆಯಾಗಿ ನಮ್ಮ ಸರ್ಕಾರಗಳು ಮತ್ತು ರಾಜಕಾರಣಿಗಳು ಏನು ಮಾಡಿದರು ಮತ್ತು ಏನು ಮಾಡಬೇಕಿತ್ತು ಎನ್ನುವುದು ಹೆಚ್ಚಿಗೆ ಚರ್ಚೆಯಾಗಬೇಕು ಮತ್ತು ಮುಖ್ಯವಾಗಬೇಕು. ಕಳೆದ 21 ವರ್ಷಗಳಿಂದಲೂ ನಮ್ಮ ರಾಜ್ಯದ ಆಡಳಿತ ನಡೆಸಿದ ಯಾರೊಬ್ಬರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತು ಕರ್ನಾಟಕಕ್ಕೆ ಆಗಿರಬಹುದಾದ ಅನ್ಯಾಯದ ವಿರುದ್ಧ ನ್ಯಾಯ ದೊರಕಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅದಕ್ಕೆ ಹೊಣೆ ರಾಜ್ಯದ ಜನತೆಯೇ ಹೊರಬೇಕು. ಏಕೆಂದರೆ ಈ ಮುಖಂಡರೆಲ್ಲ ಜನರೇ ಆರಿಸಿಕೊಂಡ ಪ್ರತಿನಿಧಿಗಳು. ಯೋಗ್ಯರನ್ನು ಆರಿಸಿ ಕಳುಹಿಸದಿದ್ದದ್ದು ಮತ್ತ್ತುಕಾಲಕಾಲಕ್ಕೆ ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸಿ ಶಿಕ್ಷಿಸದೇ ಹೋದದ್ದೇ ನಮ್ಮ ಸಮಸ್ಯೆಗಳು ಮುಂದುವರೆಯಲು ಕಾರಣ.

ಬೆಂಗಳೂರಿನ ಬಹುಪಾಲು ನೀರಿನ ಅವಶ್ಯಕತೆಯನ್ನು ಕಾವೇರಿ ನದಿ ಪೂರೈಸುತ್ತಿದೆ. ಕನ್ನಂಬಾಡಿಗಿಂತ ಎತ್ತರದ ಭೂಮಟ್ಟದಲ್ಲಿರುವ ನಗರಕ್ಕೆ ನೀರನ್ನು ಪಂಪ್ ಮಾಡಿ ತರಲಾಗುತ್ತದೆ. ಹೀಗೆ ತರಲಾದ ಬೆಂಗಳೂರಿನ ಬಹುಶಃ ಅರ್ಧಕ್ಕಿಂತ ಹೆಚ್ಚು ನೀರು ಮತ್ತೆ ತಮಿಳುನಾಡಿಗೇ ಹರಿಯುತ್ತದೆ. ಒಂದು ಭಾಗ ನೀರು ಮೈಸೂರು ರಸ್ತೆಯಲ್ಲಿರುವ ವೃಷಭಾವತಿ ನದಿಯ ಮೂಲಕ ಬಹುಶಃ ಮತ್ತೆ ಕಾವೇರಿಯ ಕಡೆಗೇ ಹರಿಯುತ್ತದೆ. ಆದರೆ ಬಹುಭಾಗದ ನೀರು ಪೂರ್ವಾಭಿಮುಖವಾಗಿ ಹರಿದು ದಕ್ಷಿಣ ಪಿನಾಕಿನಿ ನದಿಯನ್ನು ಸೇರುತ್ತದೆ.ಇದು ನಂದಿ ಬೆಟ್ಟದಲ್ಲಿ ಹುಟ್ಟುವ ನದಿ. ಹೆಚ್ಚಾಗಿ ಮಳೆಗಾಲದಲ್ಲಿ ಜೀವಂತವಾಗುತ್ತಿದ್ದ ನದಿ, ಹೊಳೆ. ಈಗ ಈ ನದಿ ದಿನವೂ ಹರಿಯುತ್ತದೆ. ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿರುವ ಮಡಿವಾಳ ಕೆರೆ, ಅಗರ ಕೆರೆ, ಬೆಳ್ಳಂದೂರು ಕೆರೆ, ನಂತರ ವರ್ತೂರು ಕೆರೆಗಳಿಗೆ ಹರಿಯುವ ನಗರದ ಕೊಳಚೆ ನೀರೆಲ್ಲ ವರ್ತೂರು ಕೆರೆಯಿಂದ ಸುಮಾರು ಮೂರ್ನಾಲ್ಕು ಕಿ.ಮೀ.ಗಳ ದೂರದಲ್ಲಿ ದಕ್ಷಿಣ ಪಿನಾಕಿನಿಯನ್ನು ಸೇರುತ್ತದೆ. ಅಲ್ಲಿಂದ ಸುಮಾರು ಹತ್ತು ಕಿ.ಮೀ.ಗಳು ಹರಿದ ನಂತರ ಈ ನದಿ ತಮಿಳುನಾಡನ್ನು ಪ್ರವೇಶಿಸುತ್ತದೆ. ಇಂತಹ ನಿತ್ಯವೂ ಹರಿಯುವ ಈ ಹೊಳೆಗೆ ತಮಿಳುನಾಡು ಸರ್ಕಾರ ಗಡಿಭಾಗದ ಹೊಸೂರು ಪಟ್ಟಣಕ್ಕೆ ಐದಾರು ಕಿ.ಮೀ. ದೂರದ ಆವಲಹಳ್ಳಿ ಅಥವ ಆವಲಪಲ್ಲಿ ಎಂಬಲ್ಲಿ ಚಿಕ್ಕ ಅಣೆಕಟ್ಟು ನಿರ್ಮಿಸಿದೆ. ಅಲ್ಲಿ ನೀರಿನ ಶುದ್ಧೀಕರಣ ಘಟಕ ಇದ್ದು, ಶುದ್ಧೀಕರಿಸಿದ ನೀರನ್ನು ಹೊಸೂರು ನಗರಕ್ಕೆ ಪೂರೈಸುತ್ತದೆ.

ನಾನು ಹಿಂದಿನ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದೆ: ಬೆಂಗಳೂರಿನ ಪೂರ್ವಕ್ಕಿರುವ ಅವಿಭಜಿತ ಬೆಂಗಳೂರು ಜಿಲ್ಲೆಯಲ್ಲಿ ಮತ್ತು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿಗಿಂತ ಕೆಳಗೆ ಜಾರುತ್ತಿದೆ. ಸಾವಿರ ಅಡಿ ಕೊರೆಯುವಾಗಲೂ ತೇವ ಕಾಣಿಸದೆ ಕೇವಲ ಕಲ್ಲಿನ ಪುಡಿ ಮೇಲೆ ಬರುವುದನ್ನು ಬೋರ್‌ವೆಲ್ ಕೊರೆಯುವವರು ಹೇಳುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿಯೂ ಪರಿಸ್ಥಿತಿ ಭೀಕರವಾಗಿದೆ. ಹೊಸಕೋಟೆ ಕೆರೆ ಸುತ್ತಮುತ್ತಲಿಗೆಲ್ಲ ದೊಡ್ಡ ಕೆರೆ. ಆದರೆ ಅದು ತುಂಬಿ ಎಷ್ಟು ವರ್ಷವಾಯಿತೊ. ಈ ಕೆರೆ ನಾನು ಮೇಲೆ ಹೇಳಿದ ಜಾಗದಲ್ಲಿ ವರ್ತೂರು ಕೆರೆಯ ನೀರಿನಿಂದ ದಿನವೂ ಮೈದುಂಬಿಕೊಳ್ಳುವ ದಕ್ಷಿಣ ಪಿನಾಕಿನಿ ನದಿಗೆ ಬಹಳ ದೂರದಲ್ಲಿಲ್ಲ. ಬಹುಶಃ ಹದಿನೈದು ಕಿ.ಮೀ. ಹಾಗಾಗಿ ಬೆಂಗಳೂರಿನ ಈ ಕೊಳಚೆ ನೀರನ್ನು ಹೊಸಕೋಟೆ ಕೆರೆಗೆ ಹರಿಸಿ ಅಲ್ಲಿಯ ಸುತ್ತಮುತ್ತಲಿನ ಅಂತರ್ಜಲವನ್ನು ಹೆಚ್ಚಿಸುವ ಮಾತುಗಳು ಇತ್ತೀಚೆಗೆ ಕೇಳಿಬಂದಿದ್ದವು. ಆದರೆ ಯಾವಾಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರು ತಕರಾರು ತೆಗೆದರೋ, ಅದು ಮತ್ತೆ ಸದ್ದು ಮಾಡಲಿಲ್ಲ.

ಇಲ್ಲಿ ಏನಾಯಿತು ಎಂದರೆ, ನಮ್ಮ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಈ ತಕರಾರನ್ನು ಹೇಗೆ ಎದುರಿಸುವುದು ಎಂಬ ವಿಷಯವೇ ಹೊಳೆಯಲಿಲ್ಲ. ಅಂದ ಹಾಗೆ, ಈ ಹೊಸಕೋಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಈ ಭಾಗದ ಯಶಸ್ವೀ ರಾಜಕಾರಣಿ ಬಿ.ಎನ್.ಬಚ್ಚೇಗೌಡ. ಅವರು ಈಗಿನ ಸರ್ಕಾರದಲ್ಲಿ ಸಚಿವರು. ಹಿಂದಿನ ಜನತಾ ಪಕ್ಷ/ದಳದ ಮಂತ್ರಿಮಂಡಲದಲ್ಲಿಯೂ ಸಚಿವರಾಗಿದ್ದವರು. ಬೆಂಗಳೂರಿನ ಪಾಲಿನ ಕಾವೇರಿ ನೀರನ್ನೇ (ಅಂದರೆ ಕರ್ನಾಟಕದ ಪಾಲಿನ ನೀರನ್ನು) ನಾವು ಈ ರೀತಿ ಮರುಬಳಕೆ ಮಾಡಲಿದ್ದೇವೆ ಎಂದು ವಾದ ಹೂಡಲಾಗದೇ ಹೋದವರು ಇವರು. ನಮ್ಮ ಜನನಾಯಕರು.

ಅಂದಹಾಗೆ, ಬೆಂಗಳೂರಿಗೆ ಸಾವಿರಾರು ಕೋಟಿ ವೆಚ್ಚದಲ್ಲಿ ಕಾವೇರಿ ನಾಲ್ಕನೇ ಹಂತದ ನೀರಿನ ಯೋಜನೆ ಯಾವುಯಾವುದೋ ಹಂತದಲ್ಲಿದೆ. ಬಹುಶಃ ಈಗಾಗಲೆ ಎಲೆಕ್ಟ್ರಾನಿಕ್ ಸಿಟಿಗೂ ಕಾವೇರಿ ನೀರು ಹರಿಯುತ್ತಿರಬಹುದು. ಇಲ್ಲಿಂದ ತಮಿಳುನಾಡಿನ ಹೊಸೂರು ನಗರ ಕೇವಲ 20 ಕಿ.ಮೀ. ದೂರದಲ್ಲಿದೆ. ಇದೇ ಹೊಸೂರು ನಗರ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಿಗೆ ಈಗಾಗಲೆ ಕಾವೇರಿ ನೀರು ಅಲ್ಲಲ್ಲಿ ಬರಲು ಆರಂಭವಾಗಿದೆ, ಇಲ್ಲವೇ ಇಷ್ಟರಲ್ಲೇ ಬರಲಿದೆ. ಅದು ಬರಲಿರುವುದು ಸುಮಾರು 100 ಕಿ.ಮೀ. ದೂರದಲ್ಲಿರುವ ಹೊಗೇನಕಲ್ ಜಲಪಾತದ ಬಳಿಯಿಂದ. ಈ ಜಲಪಾತದ ಪೂರ್ವ ಭಾಗ ತಮಿಳುನಾಡಿನದಾದರೆ ಪಶ್ಚಿಮದ್ದು ಕರ್ನಾಟಕಕ್ಕೆ ಸೇರಿದ್ದು. ಕನಕಪುರ ತಾಲ್ಲೂಕಿನ ಸಂಗಮದಿಂದ ಸುಮಾರು ಹತ್ತಿಪ್ಪತ್ತು ಕಿ.ಮೀ. ದೂರಕ್ಕೆ ಹರಿದ ನಂತರ ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಎಂದರೆ ಅದು ಕಾವೇರಿ ನದಿಯ ದಡಗಳೇ. ಅಲ್ಲಿಂದ ಬಹುಶಃ ಐವತ್ತು-ಅರವತ್ತು ಕಿ.ಮೀ. ಗಡಿಯನ್ನು ಕಾವೇರಿಯೇ ನಿರ್ಧರಿಸುತ್ತಾಳೆ. ಕಾವೇರಿ ಮೈದುಂಬಿಕೊಂಡಾಗ ಹೊಗೇನಕಲ್ ಜಲಪಾತ ರುದ್ರರಮಣೀಯ. ಇಲ್ಲಿಂದ ತಮಿಳುನಾಡು ಸರ್ಕಾರ ಹೊಸೂರಿಗೆ ನೀರು ತರುತ್ತಿದೆ. ಹೊಸೂರು ಮತು ಬೆಂಗಳೂರು ಸಮುದ್ರಮಟ್ಟದಿಂದ ಹೆಚ್ಚುಕಮ್ಮಿ ಒಂದೇ ಎತ್ತರದಲ್ಲಿವೆ. ಆದರೆ ಹೊಗೇನಕಲ್ ಜಲಪಾತ ಶ್ರೀರಂಗಪಟ್ಟಣದ ಬಳಿಯ ಕನ್ನಂಬಾಡಿಗಿಂತ ನೂರಾರು ಅಡಿ ಆಳದಲ್ಲಿದೆ. (ಬಹುಶಃ ಸಾವಿರವೂ ಇರಬಹುದೇನೊ, ಏಕೆಂದರೆ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳನ್ನು ನಿರ್ಮಿಸಿದ ನಂತರ ನೂರು ಕಿ.ಮೀ.ಗೂ ಹೆಚ್ಚು ದೂರ ಹರಿದು ಕಾವೇರಿ ಇಲ್ಲಿಗೆ ಬರುತ್ತಾಳೆ.) ಅಷ್ಟು ಕೆಳಮಟ್ಟದಿಂದ ನೀರನ್ನು ಪಂಪ್ ಮಾಡಿ ಹೊಸೂರು ಮತ್ತು ಕೃಷ್ಣಗಿರಿ ಜಿಲ್ಲೆಯ ಇತರ ಗ್ರಾಮ-ಪಟ್ಟಣಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಹೊಸೂರಿಗೆ ಬಂದ ನೀರು ನಮ್ಮ ರಾಜ್ಯದ ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ನಗರಕ್ಕೆ ಏಕೆ ಬರಬಾರದು? ಅಂತಹುದೊಂದು ಮಾತುಕತೆ ಯಾಕೆ ಆರಂಭಿಸಬಾರದು? ಕೊಟ್ಟುತೆಗೆದುಕೊಳ್ಳುವುದನ್ನು ಎರಡೂ ರಾಜ್ಯಸರ್ಕಾರಗಳು ಜನತೆಯ ಹಿತದೃಷ್ಟಿಯಿಂದ ಯಾಕೆ ಕೈಗೊಳ್ಳಬಾರದು? ಅಂತಹ ಒಂದು ದೂರದೃಷ್ಟಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಹಾಲಿ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿಗೂ ಇಲ್ಲ (ಇವರು ಸುಮಾರು ಇಪ್ಪತ್ತು ವರ್ಷಗಳಿಂದ ನಮ್ಮ ಕ್ಷೇತ್ರದ ಶಾಸಕ), ಇತರೆ ಯಾವ ರಾಜಕಾರಣಿಗಳಿಗೂ ಇಲ್ಲ. ಹೊಸಕೋಟೆ ಭಾಗದ ಪಾಳೇಗಾರರಾಗಿದ್ದವರ ಕುಟುಂಬಕ್ಕೆ ಸೇರಿರುವ ಬಚ್ಚೇಗೌಡರಿಗೇ ಬೆಂಗಳೂರಿನ ಕೊಳಚೆ ನೀರನ್ನು ತಮ್ಮ ಊರಿನ ಕೆರೆಗೆ ತುಂಬಿಸಿ ತಮ್ಮ ಭಾಗದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು ಎನ್ನುವ ಯೋಚನೆ ಹೊಳೆಯದಿರುವಾಗ ಇನ್ನು ನಾರಾಯಣಸ್ವಾಮಿಯವರಿಗೆ ಹೊಗೇನಕಲ್ ನೀರು ತಮ್ಮ ಕ್ಷೇತ್ರಕ್ಕೂ ತರಿಸಬಹುದು ಎಂದು ಹೊಳೆಯುತ್ತದೆಯೇ?

ಇಲ್ಲ, ಇವು ಯಾವುವೂ ಆಗುವುದಿಲ್ಲ. ಯಾಕೆಂದರೆ ನಮ್ಮ ರಾಜಕಾರಣಿಗಳಿಗೆ ಆ ರೀತಿಯ ಮುತ್ಸದ್ಧಿತನವಾಗಲಿ, ಕಾಳಜಿಯಾಗಲಿ ಇಲ್ಲ. ಅನ್ಯಾಯ ಆಗಿದೆ ಎಂದು ಕಾಣಿಸುವ ರಾಜ್ಯದ ಕಾವೇರಿ ಕೊಳ್ಳದ ಹಿತರಕ್ಷಣೆಯೇ ಇವರಿಂದ ಆಗುತ್ತಿಲ್ಲ, ಇಷ್ಟೆಲ್ಲಾ ಒತ್ತಾಯ ಮತ್ತು ಆಕ್ರೋಶಗಳು ಇದ್ದರೂ. ಇನ್ನು ಹೊಸತೊಂದು ರೀತಿಯ ಮಾತುಕತೆ ಮತ್ತು ಯೋಜನೆಗಳು ಇವರಿಂದ ಸಾಧ್ಯವೇ? ಬರಗಾಲದಲ್ಲಿ ನೀರು ಹಂಚಿಕೊಳ್ಳುವ ಇಂದಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಅದೇ ಶತಮಾನದ ಸಾಧನೆಯಾಗುತ್ತದೇನೋ. ಆದರೆ ಹಾಗೇ ಆಗುವ ಯಾವ ಲಕ್ಷಣಗಳೂ ಇಲ್ಲ. ಯಾಕೆಂದರೆ, ಆ ಪ್ರಶ್ನೆಗೆ ಉತ್ತರ ದಿನೇಶ ಅಮಿನ್ ಮಟ್ಟುರವರ ಲೇಖನದಲ್ಲಿದೆ:

ತಮಿಳುನಾಡಿನಲ್ಲಿ ಈಶಾನ್ಯ ಮಾರುತ ಸುರಿಯಲಾರಂಭಿಸುತ್ತಿದ್ದಂತೆ ಆ ಕಡೆಯ ಒತ್ತಡ ಕಡಿಮೆಯಾಗುತ್ತದೆ. ಅಷ್ಟರಲ್ಲಿ ದೇವೇಗೌಡರ ಕಣ್ಣೀರು ಆರಿಹೋಗುತ್ತದೆ, ನಟ ಅಂಬರೀಷ್ ಅವರ ಅಭಿನಯವೂ ಮುಗಿದಿರುತ್ತದೆ, ಮಾದೇಗೌಡರ ಸಿಟ್ಟು ತಣ್ಣಗಾಗುತ್ತದೆ, ಕನ್ನಡ ಹೋರಾಟಗಾರರು ಹಳೆಯ ಭಿತ್ತಿಪತ್ರಗಳನ್ನು ಕಿತ್ತುಹಾಕಿ ಹೊಸ ಹೋರಾಟದ ಭಿತ್ತಿಪತ್ರಗಳನ್ನು ಅಂಟಿಸಲು ಗೋಡೆಗಳನ್ನು ಹುಡುಕುತ್ತಿರುತ್ತಾರೆ. ಮಾಧ್ಯಮಗಳು ಮತ್ತೊಂದು ರೋಚಕ ಸುದ್ದಿಯ ಬೆನ್ನು ಹತ್ತಿರುತ್ತವೆ. ಕಾವೇರಿ ಕಣಿವೆಯ ರೈತರು ರಾಗಿಮುದ್ದೆ ತಿಂದು ಕಂಬಳಿ ಹೊದ್ದುಕೊಂಡು ಮಲಗಿಬಿಡುತ್ತಾರೆ.

ಪುಸ್ತಕ ಪರಿಚಯ : ದಿ ಗುಡ್ ಅರ್ಥ್

– ಸುಭಾಷ್ ರಾಜ್‌ಮಾನೆ

ನಿಸರ್ಗದ ಕೂಸಾದ ಮನುಷ್ಯ ಅನಾದಿಯಿಂದಲೂ ಅದರ ಮಡಿಲಲ್ಲಿಯೇ ತನ್ನ ಅಭ್ಯುದಯವನ್ನು ಕಂಡುಕೊಂಡವನು. ಅದರಲ್ಲೂ ಭೂಮಿ ಮತ್ತು ಮನುಷ್ಯ ಲೋಕದ ಒಡನಾಟ ಮಾನವನ ಚರಿತ್ರೆಯಷ್ಟೇ ಪ್ರಾಚೀನವಾದದ್ದು. ಹಾಗೆ ನೋಡಿದರೆ ಮನುಷ್ಯ ಜನಾಂಗದ ಅಸ್ತಿತ್ವ ಮುಖ್ಯವಾಗಿ ಭೂಮಿಯನ್ನೇ ಆಧರಿಸಿದೆ. ಮನುಷ್ಯ ತನಗೆ ಬೇಕಾದ ಆಹಾರ ಧಾನ್ಯಗಳನ್ನು ಮಣ್ಣಿನಿಂದ ಬೆಳೆಯಬಹುದೆಂದು ಅನ್ವೇಷಿಸಿದ ಕಾಲಘಟ್ಟವು ಕ್ರಾಂತಿಕಾರಕವಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆಯೇ ಸಂಪತ್ತು ಮತ್ತು ಶ್ರಮದ ಮಿಗುತಾಯಕ್ಕೂ ದಾರಿ ಮಾಡಿಕೊಟ್ಟವು. ಇವುಗಳೇ ಮುಂದೆ ಸಮಾಜ ಮತ್ತು ನಾಗರೀಕತೆಯ ಬೆಳವಣಿಗೆಗೆ ಮೂಲ ಶಕ್ತಿಗಳಾಗಿ ಪರಿಣಮಿಸಿದವು. ಅನೇಕ ಬಗೆಯ ಸಾಮಾಜಿಕ ಹಾಗೂ ಆರ್ಥಿಕ ಪಲ್ಲಟಗಳಿಗೂ ಇವು ಕಾರಣವಾದವು. ಈ ಹಿನ್ನೆಲೆಯಲ್ಲಿ ಅಮೇರಿಕದ ಪರ್ಲ್ ಎಸ್. ಬಕ್ ಅವರು ಬರೆದ ‘ದಿ ಗುಡ್ ಅರ್ತ್’ ಎಂಬ ಕಾದಂಬರಿಯು ಚೀನಾ ದೇಶದ ಒಂದು ನಿರ್ದಿಷ್ಟ ಪ್ರಾಂತದ ಬಡ ರೈತನಾದ ವಾಂಗ್‌ಲುಂಗ ಹಾಗೂ ಆತನ ಕುಟುಂಬವು ಭೂಮಿಯೊಂದಿಗೆ ಹೊಂದಿದ್ದ ಸಂಬಂಧವನ್ನು ಅದ್ಭುತವಾಗಿ ವರ್ಣಿಸುತ್ತದೆ. ಇಪ್ಪತ್ತನೆಯ ಶತಮಾನದ ಮೂವತ್ತರ ದಶಕದಲ್ಲಿ ರಚಿತವಾದ ಈ ಕೃತಿಯು ಪುಲಿಟ್ಜರ್ ಪ್ರಶಸ್ತಿ ಹಾಗೂ ನೊಬೆಲ್ ಪುರಸ್ಕಾರಕ್ಕೂ ಪಾತ್ರವಾಗಿ ಜಾಗತಿಕ ಸಾಹಿತ್ಯದಲ್ಲಿ ಶ್ರೇಷ್ಠ ಕಲಾಕೃತಿಯಾಗಿ ಜನಪ್ರಿಯವಾಯಿತು. ಅದು ಪ್ರಕಟವಾದ ಇಪ್ಪತ್ತು ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡಿತು. ಕಳೆದ ಎಂಟು ದಶಕಗಳಿಂದ ಜಗತ್ತಿನ ನಾನಾ ಭಾಷೆಗಳಿಗೆ ಅನುವಾದಗೊಳ್ಳುತ್ತಲೆ ಸಾಗಿದೆ. ಅಭಿಜಾತ ಕೃತಿಯೊಂದು ಓದುಗರ ಮೂಲಕವೇ ಅದು ಮರು ಸೃಷ್ಟಿಯಾಗುತ್ತ ಹೋಗುತ್ತದೆ. ಆದ್ಧರಿಂದಲೆ ಈ ಕೃತಿ ಓದುಗ ವಲಯದಲ್ಲಿ ಅಪಾರವಾದ ಮೆಚ್ಚುಗೆಯನ್ನು ಪಡೆಯಿತು.

ಪರ್ಲ್ ಬಕ್ ಅವರ ತಂದೆ ತಾಯಿಗಳು ಮೂಲತಃ ಕ್ರೈಸ್ತ ಮಿಶನರಿಗಳಾಗಿದ್ದರು. ಅವರು ಚೀನಾಕ್ಕೆ ಹೋಗಿ ನೆಲೆಸಿದರು. ಪರ್ಲ್ ಬಕ್ ಅವರು ಹುಟ್ಟಿದ್ದು ಅಮೆರಿಕದಲ್ಲಿಯಾದರೂ ತಮ್ಮ ಬಾಲ್ಯ ಮತ್ತು ತಾರುಣ್ಯದ ಹೆಚ್ಚಿನ ಕಾಲವನ್ನು ಚೀನಾದಲ್ಲಿಯೇ ಕಳೆದವರು. ಆದ್ದರಿಂದ ಪರ್ಲ್ ಬಕ್ ಅವರು ತಮ್ಮ ಆರಂಭದ ಶಿಕ್ಷಣವನ್ನು ಚೀನಾದ ಷಾಂಗೈನಲ್ಲಿ ಪಡೆದರು. ಆದರೆ ಉನ್ನತ ಪದವಿಗಾಗಿ ಮತ್ತೆ ಅವರು ಅಮೆರಿಕದಲ್ಲಿ ನೆಲೆಸಬೇಕಾಯಿತು. ಆಗಲೆ ಅಮೆರಿಕದ ಅರ್ಥಶಾಸ್ತ್ರಜ್ಞ ಜಾನ್ ಎಲ್.ಬಕ್ ಅವರೊಂದಿಗೆ ವಿವಾಹವಾಗಿ ಪರ್ಲ್ ಬಕ್ ಮತ್ತೆ ಚೀನಾಗೆ ಮರಳಿದರು. ಉತ್ತರ ಚೀನಾದ ರೈತರ ಬದುಕಿನ ಸಂಕಟದ ಅನೇಕ ಮಗ್ಗಲುಗಳನ್ನು ಖುದ್ದಾಗಿ ಕಂಡವರಾಗಿದ್ದರು. ಪರ್ಲ್ ಬಕ್ ಅವರು ಮಣ್ಣಿನೊಂದಿಗೆ ಜೀವಿಸುವ ರೈತ ಕುಟುಂಬಗಳ ಪ್ರದೇಶದಲ್ಲಿಯೇ ಕೆಲವು ವರ್ಷ ನೆಲೆಸಿದ್ದರಿಂದ ‘ದಿ ಗುಡ್ ಅರ್ತ್’ ಕಾದಂಬರಿ ರೂಪ ಪಡೆಯಲು ಪ್ರೇರಣೆಯಾಯಿತೆಂಬುದನ್ನು ಅವರು ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ. ಅವರು ಮೂವತ್ತಕ್ಕೂ ಹೆಚ್ಚಿನ ಕಾದಂಬರಿಗಳನ್ನು ಬರೆದಿದ್ದರೂ ‘ದಿ ಗುಡ್ ಅರ್ತ್’ ಅವರಿಗೆ ಬಹಳ ದೊಡ್ಡ ಹೆಸರನ್ನು ತಂದುಕೊಟ್ಟ ಕೃತಿ. ಇದು ನಾಟಕವಾಗಿ ಹಾಗೂ ಚಲನಚಿತ್ರವಾಗಿಯೂ ಲೇಖಕಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತು.

‘ದಿ ಗುಡ್ ಅರ್ತ್’ ಕಾದಂಬರಿಯು ಸಾಮಾನ್ಯ ಬಡ ರೈತನಾದ  ವಾಂಗ್‍ಲುಂಗ ಎಂಬವ ಓಲನ್‌ಳನ್ನು ಮದುವೆ ಆಗುವುದರೊಂದಿಗೆ ಆರಂಭವಾಗುತ್ತದೆ. ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ವಾಂಗ್‌ಲುಂಗ ಮತ್ತು ಓಲನ್ ದುಡಿಮೆ ಮಾಡಿ ಜೀವಿಸುತ್ತಾರೆ. ಇಬ್ಬರೂ ತಮ್ಮನ್ನು ಮಣ್ಣಿಗೆ ಅಂಟಿಸಿಕೊಂಡ ಕಾಯಕ ಜೀವಿಗಳು; ಮನುಷ್ಯ ಸಂಬಂಧಕ್ಕಿಂತಲೂ ಮಣ್ಣಿನೊಂದಿಗಿನ ಅವರ ಸಂಬಂಧ ಗಾಢವಾದದ್ದು. ಹಳ್ಳಿಯಲ್ಲಿರುವ ಅವರ ಮನೆಯನ್ನು ಕಟ್ಟಿದ್ದು ತಮಗೆ ಆಹಾರ ನೀಡುವ ಅದೇ ಮಣ್ಣಿನಿಂದ. ಮನೆಯಲ್ಲಿರುವ ಮಡಕೆ ಹಾಗೂ ಆ ಹೊಲದಲ್ಲಿರುವ ದೇವರ ಮೂರ್ತಿಗಳು ನಿರ್ಮಾಣಕ್ಕೂ ಬಳಕೆಯಾಗಿದ್ದು ಅದೇ ಕಪ್ಪು ಮಣ್ಣು. ವಾಂಗ್‌ಲುಂಗ ಮತ್ತು ಅವನ ಹೆಂಡತಿ ಸುರಿಸಿದ ಬೆವರಿನ ಹನಿಗಳಿಂದ ಬಂದ ಬೆಳ್ಳಿ ನಾಣ್ಯಗಳಿಂದ ಮತ್ತಷ್ಟು ಭೂಮಿಯನ್ನು ಹತ್ತಿರದಲ್ಲೆ ಇದ್ದ ಪಟ್ಟಣದ ಶ್ರೀಮಂತ ಜಮೀನ್ದಾರರಾದ ಹುವಾಂಗ ಮನೆತನದಿಂದ ಕೊಳ್ಳುತ್ತಾರೆ. ಈ ಜಮೀನ್ದಾರರ ದೊಡ್ಡ ಮನೆಯಲ್ಲಿಯೇ ಓಲನ್ ದಾಸಿಯಾಗಿದ್ದಳು. ಈಗ ಅವರ ಒಂದಿಷ್ಟು ಭೂಮಿಗೆ ವಾಂಗ್‌ಲುಂಗ ಯಜಮಾನನಾಗಿದ್ದು ಅವರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.

ಈ ಕಾದಂಬರಿ ಒಂದು ಕಡೆ ಬಡ ರೈತ ವಾಂಗ್‌ಲುಂಗ ತನ್ನ ಹಳ್ಳಿಯಲ್ಲಿದ್ದುಕೊಂಡು ಸತತ ಪ್ರಯತ್ನ ಮತ್ತು ಸ್ವ ಪರಿಶ್ರಮದಿಂದ ಶ್ರೀಮಂತನಾಗುವುದನ್ನು ವರ್ಣಿಸುತ್ತದೆ. ಮತ್ತೊಂದು ಕಡೆ ಪಟ್ಟಣದ ಹುವಾಂಗ ಮನೆತನವು ವಿಲಾಸಿ ಜೀವನಕ್ಕೆ ಬಲಿಬಿದ್ದು ಮತ್ತು ಅಫೀಮಗೆ ದಾಸರಾಗಿ ಭೂಮಿಯನ್ನು ಕಳೆದುಕೊಳ್ಳುತ್ತ ಹೋಗುವುದನ್ನು ಕಾದಂಬರಿ ಚಿತ್ರಿಸುತ್ತದೆ. ಹಳ್ಳಿಯಲ್ಲಿ ದಿನನಿತ್ಯ ಮಣ್ಣಿನಲ್ಲಿ ದುಡಿಯುವವರ ಬದುಕಿನ ಸರಳತೆ ಹಾಗೂ ಮಾನವೀಯತೆ ಗಮನ ಸೆಳೆಯುತ್ತವೆ. ಆದರೆ ಜನರು ಹಳ್ಳಿ ಹಾಗೂ ಭೂಮಿಯ ಸಂಪರ್ಕದಿಂದ ದೂರ ಸರಿದಂತೆ ಅವರು ಲೋಲುಪತೆಯ ದಾಸರಾಗುತ್ತಾರೆ; ಅಷ್ಟೆ ಅಲ್ಲ ಜನರು ಲಂಪಟರು ಸೋಮಾರಿಗಳು ಮತ್ತು ಭ್ರಷ್ಟರಾದಂತೆ ಅವರು ದುಡಿಯುವ ಮಣ್ಣಿನಿಂದ ದೂರವಾಗುತ್ತಾರೆ. ಈ ಕಾದಂಬರಿಯ ನಿರೂಪಣೆಯ ತಂತ್ರವು ಅನೇಕ ಬಗೆಗಳಿಂದ ವಿಶಿಷ್ಟವಾಗಿದೆ. ಕೃತಿಯಲ್ಲಿ ವಾಂಗ್‌ಲುಂಗ ಮತ್ತು ಆತನ ಹಳ್ಳಿಯ ಬದುಕಿನ ಚಿತ್ರಣವು ಪ್ರತ್ಯಕ್ಷ ಸಾಕ್ಷಿಯಾಗಿ ನಿರೂಪಿತವಾಗುತ್ತ ಹೋದರೆ ಅದೇ ಪಟ್ಟಣದ ಹುವಾಂಗ ಮನೆತನದ ಅವನತಿಯ ವರ್ಣನೆಯು ಕೇವಲ ಪರೋಕ್ಷವಾಗಿ ಅವರಿವರ ಬಾಯಿಂದ ನಿರೂಪಿತವಾಗುವ ತಂತ್ರವಿದೆ.

ವಾಂಗ್‌ಲುಂಗನಿಗೆ ತನ್ನ ಭೂಮಿಯ ಬಗೆಗಿನ ಅದಮ್ಯವಾದ ಪ್ರೀತಿ ಹಾಗೂ ಸೆಳೆತ ಎಷ್ಟೊಂದು ಗಾಢವಾದದ್ದೆಂಬುದು ಅನಾವೃಷ್ಟಿಯಿಂದ ಉಂಟಾದ ತೀವ್ರ ಬರಗಾಲದ ಸಂದರ್ಭದಲ್ಲಿ ವ್ಯಕ್ತಗೊಳ್ಳುತ್ತದೆ. ತಿನ್ನಲು ಏನೂ ಇಲ್ಲದಿರುವ ಸ್ಥಿತಿಯುಂಟಾಗಿ ಪಟ್ಟಣದಿಂದ ಬಂದ ಯಾರೊ ಒಬ್ಬ ಭೂಮಿಯನ್ನು ಬೆಳ್ಳಿ ನಾಣ್ಯ ಕೊಟ್ಟು ಕೊಳ್ಳುತ್ತೇನೆಂದಾಗಲೂ ವಾಂಗ್‌ಲುಂಗ ತನ್ನ ದೇಹದ ಚರ್ಮವನ್ನಾದರೂ ಕತ್ತರಿಸಿಕೊಟ್ಟಾನು; ಆದರೆ ಭೂಮಿಯನ್ನು ಮಾತ್ರ ಮಾರಲಾರ. ಮನೆಯವರೆಲ್ಲ ಹೊಟ್ಟೆಗಿಲ್ಲದೇ ಸಾಯುವಂತಾದಾಗ ತನ್ನ ಭೂಮಿಯಲ್ಲಿ ದುಡಿದ ಎತ್ತನ್ನೆ ಕಡಿದು ತಿನ್ನುವ ಸಂದರ್ಭದಲ್ಲಿ ವಾಂಗ್‌ಲುಂಗ ಮುಮ್ಮಲ ಮರಗುತ್ತಾನೆ. ಆತನ ಹೆಂಡತಿ ಮಕ್ಕಳೆಲ್ಲ ಎತ್ತಿನ ಮಾಂಸವನ್ನು ತಿಂದು ಹಸಿವನ್ನು ಇಂಗಿಸಿಕೊಂಡರೂ ವಾಂಗ್‌ಲುಂಗ ಮಾತ್ರ ಅದನ್ನು ಮುಟ್ಟುವುದಿಲ್ಲ.

ಹಸಿವಿನಿಂದ ತತ್ತರಿಸಿಹೋಗುವ ವಾಂಗ್‌ಲುಂಗ ಮತ್ತು ಆತನ ಮಕ್ಕಳು ಭೂತಾಯಿಯ ಮಣ್ಣನ್ನು ತಿನ್ನುವ ನಿರೂಪಣೆಯು ಹೀಗಿದೆ: ಈಗ ತನ್ನ ಹೊಲದ ಮಣ್ಣನ್ನು ಸ್ವಲ್ಪ ಅಗೆದು ತೆಗೆದು ಅದಕ್ಕಾಗಿ ಸ್ವತಃ ತಾನು ಆಸೆ ಪಡದೆಯೇ ತನ್ನ ಮಕ್ಕಳಿಗೆ ಕೊಡುವುದು ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಕೆಲವು ದಿನಗಳಿಂದೀಚೆಗೆ ಹಾಗೆ ಮಣ್ಣನ್ನು ತೆಗೆದು ನೀರಿನಲ್ಲಿ ಕಲೆಸಿ ಭೂಮಿ ತಾಯಿಯ ಪ್ರಸಾದವೆನ್ನುತ್ತ ಅವರು ತಿನ್ನುತ್ತಿದ್ದರು. ಯಾಕೆಂದರೆ ಜೀವವನ್ನು ಉಳಿಸಿಕೊಳ್ಳಲು ಅದರಿಂದ ಸಾಧ್ಯವಾಗದೆ ಹೋದರೂ ಅದರಲ್ಲಿ ಸ್ವಲ್ಪವಾದರೂ ಪೋಷಕಾಂಶಗಳಿದ್ದವು. ನಯವಾಗಿ ಹಿಟ್ಟಿನಂತೆ ಅರೆದು ಕೊಟ್ಟರೆ ಮಕ್ಕಳ ಹಸಿವನ್ನು ಅದು ತಾತ್ಕಾಲಿಕವಾಗಿ ಶಮನ ಮಾಡುತ್ತಿತ್ತು. ಅವರ ಜೋತುಬಿದ್ದ ಹೊಟ್ಟೆಯೊಳಗೆ ಒಂದಷ್ಟು ಏನನ್ನೋ ಹಾಕಿದಂತಾಗುತ್ತಿತ್ತು. (ಪುಟ-81) ಇದು ದೇವನೂರು ಮಹಾದೇವರ ‘ಒಡಲಾಳ’ ಕೃತಿಯಲ್ಲಿ ಕದ್ದು ತರಲಾಗಿದ್ದ ಮೂಟೆ ಕಡಲೇಕಾಯಿಯನ್ನು ಸಾಕವ್ವನ ಮನೆಯವರೆಲ್ಲ ರಾತ್ರಿಯೆಲ್ಲ ಒಲೆಯ ಮುಂದೆ ಕುಳಿತು ತಿನ್ನುತ್ತಿದ್ದ ಸನ್ನಿವೇಶಕ್ಕಿಂತಲೂ ಭೀಕರವಾಗಿದೆ. ಈ ಪ್ರಸಂಗಗಳ ಚಿತ್ರಣಗಳಲ್ಲಿ ಭಿನ್ನತೆಯಿದೆ ನಿಜ. ಆದರೆ ಹಸಿವಿನ ಅಗಾಧತೆ ಮತ್ತು ತಡೆಯಲಾಗದ ಒಡಲಾಳದ ಸಂಕಟದಲ್ಲಿ ಯಾವ ವ್ಯತ್ಯಾಸವಿದೆ?

ಬರಗಾಲದ ಅನಿವಾರ್ಯತೆಯಿಂದಾಗಿ ವಾಂಗ್‌ಲುಂಗ ತನ್ನ ವಯಸ್ಸಾದ ತಂದೆ ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ದಕ್ಷಿಣದ ಕಿಯಾಂಗ್ಸ್ ನಗರಕ್ಕೆ ಹೋಗುತ್ತಾನೆ. ಅಲ್ಲಿ ಹೆಂಡತಿ ಮಕ್ಕಳು ಭಿಕ್ಷೆ ಬೇಡಿಕೊಂಡು ಬದುಕುತ್ತಾರೆ. ಆದರೆ ವಾಂಗ್‌ಲುಂಗನಿಗೆ ದುಡಿಯದೆ ಬೇಡಿ ತಿನ್ನುವುದು ಅಪರಾಧವೆನ್ನಿಸುತ್ತದೆ. ತಾನು ಮಾತ್ರ ಸೈಕಲ್ ರಿಕ್ಷಾವನ್ನು ತಳ್ಳಿ ಬದುಕಲು ನಿರ್ಧರಿಸುತ್ತಾನೆ. ಆಗ ಮತ್ತೆ ಮತ್ತೆ ಆತನಿಗೆ ತನ್ನ ಭೂಮಿಯ ನೆನಪು ಕಾಡುತ್ತದೆ. ಅವನಿಗೆ ನಗರ ಜೀವನ ಹಿಂಸೆಯಾಗಿ ಮತ್ತು ಬಹಳ ದೊಡ್ಡ ಭ್ರಷ್ಟತೆಯ ಕೂಪವಾಗಿ ಗೋಚರಿಸುತ್ತದೆ. ನಗರದ ಜನರು ಬದುಕುವ ಸಲುವಾಗಿ ಮತ್ತು ವ್ಯವಹಾರಕ್ಕಾಗಿ ಎಂತಹ ಕೃತ್ಯವನ್ನಾದರೂ ಮಾಡಲು ಹೇಸುವುದಿಲ್ಲ ಎಂಬುದನ್ನು ವಾಂಗ್‌ಲುಂಗ ಕಂಡುಕೊಳ್ಳುತ್ತಾನೆ. ಆತನ ಪ್ರಾಮಾಣಿಕತೆಯನ್ನು ಅಲ್ಲಿಯ ಜನರು ಆತನನ್ನು ಹಳ್ಳಿಯ ಗಮಾರನೆಂದು ಗೇಲಿ ಮಾಡುತ್ತಾರೆ. ಆತನ ಮಗನೊಬ್ಬ ಹಂದಿಯ ಮಾಂಸವನ್ನು ಕದ್ದು ತಂದಾಗ ಅವನಿಗೆ ಹೊಡೆಯುತ್ತಾನೆ; ತನ್ನ ಮಕ್ಕಳು ದಾರಿ ತಪ್ಪುವುದನ್ನು ಸಹಿಸಿಕೊಳ್ಳುವುದಿಲ್ಲ. ಅಷ್ಟೆ ಅಲ್ಲ ಆ ರಾತ್ರಿ ಕದ್ದು ತಂದಿದ್ದ ಹಂದಿ ಮಾಂಸವನ್ನು ಹೆಂಡತಿ ಮಕ್ಕಳೆಲ್ಲ ತಿನ್ನುತಾರೆ. ಆದರೆ ವಾಂಗ್‌ಲುಂಗ ತಾನು ಉಪವಾಸ ಮಲಗುತ್ತಾನೆ ಹೊರತು ಅದನ್ನು ಮುಟ್ಟಲಾರ. ಆದ್ದರಿಂದ ಇಡೀ ಕಾದಂಬರಿಯಲ್ಲಿ ವಾಂಗ್‌ಲುಂಗ ಎಂತಹ ವಿಷಮ ಸ್ಥಿತಿಯಲ್ಲೂ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳದ ವ್ಯಕ್ತಿಯಾಗಿ ಕಾಣುತ್ತಾನೆ.

ಇಡೀ ಕಾದಂಬರಿಯಲ್ಲಿ ಓದುಗರ ಹೃದಯಕ್ಕೆ ತಟ್ಟುವ ಪಾತ್ರವೆಂದರೆ ಓಲನ್‌ಳದ್ದು. ಆಕೆಯ ಅವಿಶ್ರಾಂತವಾದ ಮನೆ ಹಾಗೂ ಭೂಮಿಯಲ್ಲಿನ ದುಡಿಮೆ ವಾಂಗ್‌ಲುಂಗನ ಏಳ್ಗೆಗೆ ಕಾರಣವಾದರೂ ಓಲನ್‌ಗೆ ಮಾತ್ರ ಯಾವುದೆ ಬಗೆಯ ಸಮಾನತೆ ಇಲ್ಲದಿರುವುದನ್ನು ಕಾಣಬಹುದು. ಅವಳು ಬದುಕಿದ್ದೆ ತನ್ನ ಗಂಡ ಮಕ್ಕಳು ಮತ್ತು ಮಾವ ಇವರ ಸೇವೆಗಾಗಿ. ತನ್ನ ಗಂಡ ವಾಂಗ್‌ಲುಂಗ ಮಧ್ಯೆ ವಯಸ್ಕನಾಗಿದ್ದಾಗ ಮತ್ತು ಊರಿನಲ್ಲೆ ಶ್ರೀಮಂತನಾಗಿದ್ದರಿಂದ ಪಟ್ಟಣದ ಸುಂದರ ಮೋಹಕ ಹೆಣ್ಣಿನ ಪ್ರೇಮಪಾಶದಲ್ಲಿ ಬಿದ್ದು ಆಕೆಯನ್ನು ತನ್ನ ಮನೆಯಲ್ಲೆ ತಂದು ಇಟ್ಟುಕೊಳ್ಳುತ್ತಾನೆ. ಆಗಲೂ ಓಲನ್‌ಗೆ ಧ್ವನಿ ಎತ್ತರಿಸಿ ಮಾತನಾಡುವ ಯಾವ ಹಕ್ಕು ಕೂಡ ಅವಳಿಗಿಲ್ಲ. ಅದು ಪುರುಷ ಪ್ರಧಾನ ಸಮಾಜವು ಹೆಣ್ಣಿನ ಧ್ವನಿಯನ್ನು ಕಿತ್ತುಕೊಂಡ ಕಾಲವಾಗಿತ್ತು. ಇಲ್ಲಿ ಓಲನ್ ಮಾತನಾಡಿದ್ದು ತೀರ ಕಡಿಮೆ; ಆಕೆಯ ಮೌನವು ಕಾದಂಬರಿಯೆಲ್ಲ ಆವರಿಸಿದಂತೆ ಭಾಸವಾಗುತ್ತದೆ. ಇದು ಹೆಣ್ಣಿಗೆ ಯಾವ ಸ್ಥಾನ ಮಾನಗಳಿಲ್ಲದಿರುವುದರ ಸಾಂಕೇತಿಕತೆಯೂ ಆಗಿದೆ.

ಕಳೆದ ಶತಮಾನದ ಆರಂಭದ ದಶಕದ ಚೀನಾ ಸಮಾಜದಲ್ಲಿ ಹೆಣ್ಣಿಗೆ ಯಾವುದೇ ಬಗೆಯ ಸ್ವಾತಂತ್ರ್ಯ ಇಲ್ಲದಿರುವುದನ್ನು ಈ ಕಾದಂಬರಿಯು ತೆರೆದಿಡುತ್ತದೆ. ಹೆಣ್ಣು ಮಕ್ಕಳಾಗುವುದು ಅಪಶಕುನವೆಂದು ತಿಳಿಯಲಾಗಿದ್ದ ಮೌಢ್ಯತೆಯ ಕಾಲವಾಗಿತ್ತು. ತಿನ್ನಲು ಏನೂ ಸಿಗದಿದ್ದ ತೀವ್ರ ಬರಗಾಲದ ಸಂದರ್ಭದಲ್ಲಿ ಬಡವರು ತಮ್ಮ ಹೆಣ್ಣು ಮಕ್ಕಳನ್ನು ಮಾರುವ ಅನಾಗರಿಕ ಪದ್ಧತಿಯೂ ಆಗ ರೂಢಿಯಲ್ಲಿತ್ತು. ಬಾಲ್ಯದಲ್ಲಿ ಹೆಣ್ಣು ಮಕ್ಕಳ ಕಾಲುಗಳನ್ನು ಬಟ್ಟೆಯಿಂದ ಕಟ್ಟುವ ಮತ್ತೊಂದು ಬಗೆಯ ರೂಢಿಯು ಇತ್ತು. ಯಾಕೆಂದರೆ ಹುಡುಗಿಯ ಪಾದಗಳು ದುಂಡಾಗಿ ಸುಂದರವಾಗಿ ಕೋಮಲವಾಗಿದ್ದರೆ ಮದುವೆಯಾಗುವ ಹೀನ ಪದ್ಧತಿ ಜಾರಿಯಲ್ಲಿತ್ತು. ಬರಗಾಲದ ಸಂದರ್ಭದಲ್ಲಿ ನಗರದಲ್ಲಿದ್ದುಕೊಂಡು ಹೊಟ್ಟೆ ತುಂಬಿಸಿಕೊಳ್ಳುಲು ತೊಳಲಾಡುವಾಗ ಓಲನ್ ತನ್ನ ಚಿಕ್ಕ ಹೆಣ್ಣುಮಗುವನ್ನು ಜಮೀನ್ದಾರಿ ವರ್ಗಕ್ಕೆ ಮಾರುವ ಸೂಚನೆಯನ್ನು ನೀಡಿದಾದ ವಾಂಗ್‌ಲುಂಗ ಅದನ್ನು ವಿರೋಧಿಸುತ್ತಾನೆ. ತಮ್ಮ ಹಳ್ಳಿಯನ್ನು ತೊರೆದು ದೇಶಾಂತರ ಹೊರಡುವ ಸಂದರ್ಭದಲ್ಲಿ ಓಲನ್ ಹೆಣ್ಣು ಮಗುವಿಗೆ ಜನ್ಮ ನೀಡಿ ತನ್ನ ಕೈಯಾರೆ ತನ್ನ ಅಮಾಯಕ ಶಿಶುವನ್ನು ಸಾಯಿಸುವುದು ಕ್ರೌರ್ಯವಲ್ಲವೇ? ರಕ್ಷಣೆ ಮಾಡಬೇಕಿದ್ದ ತಾಯಿಯೇ ತನ್ನ ಮಗುವನ್ನು ಹತ್ಯೆ ಮಾಡುವುದು ಅಮಾನುಷವಲ್ಲವೆ?

ಇವರಂತೆಯೆ ದೇಶಾಂತರ ಹೋಗಿದ್ದ ಓಲನ್‌ಳ ತಂದೆ ತಾಯಿಗಳು ತಮ್ಮ ಬಡತನ ಮತ್ತು ಹಸಿವನ್ನು ನೀಗಿಸಿಕೊಳ್ಳಲು ಓಲನ್ ಶ್ರೀಮಂತ ಜಮೀನ್ದಾರಿ ಹುವಾಂಗ ಮನೆತನಕ್ಕೆ ಮಾರಲ್ಪಟ್ಟ ಹೆಣ್ಣು ಮಾತ್ರವಲ್ಲ; ಆಕೆ ದಾಸಿಯಾಗಿ ಮತ್ತು ಗುಲಾಮಳಾಗಿ ಅತಿ ಹೆಚ್ಚು ದಮನಿತಳೂ ಹಾಗೂ ಶೋಷಿತಳೂ ಆಗಿದ್ದವಳು. ಆಕೆ ವಾಂಗ್‌ಲುಂಗನ ಹೆಂಡತಿಯಾಗಿ ಬಂದಾಗಲೂ ಒಂದು ರೀತಿಯಲ್ಲಿ ಗುಲಾಮಳಂತೆಯೇ ದುಡಿಯುತ್ತಾಳೆ. ಅವಳ ಬದುಕಿನಲ್ಲಿ ಯಾವ ವಿಶೇಷ ಬದಲಾವಣೆಗಳು ಘಟಿಸುವುದಿಲ್ಲ. ಓಲನ್ ಗುಲಾಮಗಿರಿಯಿಂದ ಬಿಡುಗಡೆಯಾಗಿ ವೈವಾಹಿಕ ಸಂಸ್ಥೆಗೆ ಅಡಿಯಿಟ್ಟರೂ ಕೂಡ ಆಕೆಯ ಶೋಷಣೆ ಮಾತ್ರ ಅಹ್ಯಾಹತವಾಗಿ ಮುಂದುವರೆಯುತ್ತದೆ. ಓಲನ್ ತುಂಬು ಗರ್ಭಿಣಿಯಾಗಿದ್ದಾಗಲೂ ದಿನವೆಲ್ಲ ಮಣ್ಣಿನಲ್ಲಿ ದುಡಿದು ಸಂಜೆ ಮನೆಗೆ ಹೋಗಿ ಯಾರ ಸಹಾಯವೂ ಇಲ್ಲದೆ ಮಗುವಿಗೆ ಜನ್ಮ ನೀಡಿ ಅಡಿಗೆಯನ್ನು ಮಾಡಿ ಗಂಡನಿಗೆ ಬಡಿಸುತ್ತಾಳೆ. ಮತ್ತೆ ಬೆಳಿಗ್ಗೆ ಎದ್ದು ಮೂಕ ಪ್ರಾಣಿಯಂತೆ ಹೊಲದಲ್ಲಿ ತನ್ನ ಪಾಡಿಗೆ ತಾನು ಕಾರ್ಯನಿರತಳಾಗುತ್ತಾಳೆ. ಆಕೆಯಲ್ಲಿರುವ ತಾಯ್ತನದ ನೈಜ ಅಕ್ಕರೆ ಹಾಗೂ ಪಾಲನೆಯ ಸಾಮರ್ಥ್ಯವನ್ನು ಕಾಣಲಾಗದ ವಾಂಗ್‌ಲುಂಗ ಕೂಡ ಕುರುಡನಾಗುತ್ತಾನೆ.

ವಾಂಗ್‌ಲುಂಗ ಶ್ರೀಮಂತನಾದ ಹಾಗೆ ಆತನ ಮಾನವೀಯತೆ ವೃದ್ದಿಸುತ್ತ ಹೋದರೂ ಓಲನ್‌ಳ ಹೊಟ್ಟೆಯಲ್ಲಿ ಬೆಳೆದ ಗೆಡ್ಡೆಗೆ ಚಿಕಿತ್ಸೆ ಮಾಡಿಸದ ಕಲ್ಲು ಹೃದಯದವನೇಕೆ ಆಗುತ್ತಾನೆ? ತನ್ನ ಮೋಜಿಗಾಗಿ ಇಟ್ಟುಕೊಂಡ ಹೆಣ್ಣಿಗಾಗಿ ಸಾವಿರಾರು ಬೆಳ್ಳಿ ನಾಣ್ಯಗಳನ್ನು ದುಂದು ಮಾಡುವ ವಾಂಗ್‌ಲುಂಗ ತನ್ನ ಹೆಂಡತಿಯ ಜೀವವನ್ನು ಉಳಿಸಿಕೊಳ್ಳುವ ಯಾವ ಪ್ರಯತ್ನವನ್ನು ಮಾಡದ ಹೃದಯಹೀನ ಮನಸ್ಸಿನವನಾದದ್ದೇಕೆ? ಪ್ರೆಂಚ್ ಚಿಂತಕಿ ಸಿಮೋನ್‌ದ ಬೊವಾ ತನ್ನ ಪ್ರಸಿದ್ಧ ಕೃತಿಯಾದ ‘ದಿ ಸೆಕೆಂಡ್ ಸೆಕ್ಸ್’ದಲ್ಲಿ ಯಾರೂ ಹೆಣ್ಣಾಗಿ ಹುಟ್ಟುವುದಿಲ್ಲ; ನಂತರ ರೂಪಿತವಾಗುತ್ತಾಳಷ್ಟೆ ಎಂದು ಹೇಳುವ ಮಾತು ಜಗತ್ತಿನ ಎಲ್ಲ ಸಮಾಜಗಳ ಹೆಣ್ಣಿಗೂ ಅನ್ವಯವಾಗುತ್ತದೆ.

ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯ ಕಥಾ ಚೌಕಟ್ಟು ಹೆಚ್ಚಾಗಿ ‘ದಿ ಗುಡ್ ಅರ್ತ್’ ಕೃತಿಯ ಚೌಕಟ್ಟನ್ನೆ ಅನೇಕ ಬಗೆಗಳಲ್ಲಿ ಹೋಲುತ್ತದೆ. ಕಾರಂತರೆ ಒಂದು ಕಡೆ ಹೇಳಿಕೊಂಡಿರುವಂತೆ ಈ ಕೃತಿಯ ಮೊದಲ ಭಾಗವನ್ನು ಓದಿ ಅದನ್ನು ತುಂಬ ಮೆಚ್ಚಿಕೊಂಡು  ಕನ್ನಡದಲ್ಲೂ ಅಂತಹ ಕಾದಂಬರಿಯನ್ನು ಬರೆಯಲು ನಿರ್ಧರಿಸಿದೆ ಎಂದಿದ್ದಾರೆ. ಆದ್ದರಿಂದ ನಲವತ್ತರ ದಶಕದಲ್ಲಿ ಬಂದ ‘ಮರಳಿ ಮಣ್ಣಿಗೆ’ ಕೃತಿಯು  ‘ದಿ ಗುಡ್ ಅರ್ತ್’ ದಂತೆಯೇ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೇರಿದ ವೈದಿಕ ರಾಮೈತಾಳರ ಮೂರು ತಲೆಮಾರಿನ ಕೌಟುಂಬಿಕ ಬದುಕಿನ ವಿನ್ಯಾಸಗಳನ್ನು ದಾಖಲಿಸುತ್ತದೆ. ‘ದಿ ಗುಡ್ ಅರ್ತ್’ ಕೃತಿಯ ಕೊನೆಯಲ್ಲಿ ನಗರದಲ್ಲಿ ವಾಸವಾಗಿರುವ ವಾಂಗ್‌ಲುಂಗನ ಹಿರಿಯ ಮಗ ತನ್ನ ತಂದೆಯ ಭೂಮಿಯನ್ನು ಮಾರುವುದರ ಆಲೋಚನೆಯಲ್ಲಿರುದು ಹಾಗೂ ವೃದ್ದನಾದ ವಾಂಗ್‌ಲುಂಗ ಅದನ್ನು ಪ್ರತಿಭಟಿಸುವುದರೊಂದಿಗೆ ಮುಗಿಯುತ್ತದೆ. ಅದೇ ‘ಮರಳಿ ಮಣ್ಣಿಗೆ’ ಕೃತಿಯಲ್ಲಿ ರಾಮೈತಾಳರ ಮೊಮ್ಮಗ ರಾಮ ನಗರದಿಂದ ತನ್ನ ಊರಿಗೆ ಮರಳುವುದರೊಂದಿಗೆ ಕೊನೆಯಾಗುತ್ತದೆ. ಈ ಎರಡೂ ಕೃತಿಗಳಲ್ಲಿ ಎಷ್ಷೇ ಸಾಮ್ಯತೆಗಳಿದ್ದರೂ ಬರಹಗಾರರ ಧೋರಣೆ ನಿರೂಪಣೆಯ ಶೈಲಿ ಪಾತ್ರ ಚಿತ್ರಣ ಹಾಗೂ ಭಾಷೆಯ ಬಳಕೆಗಳಿಂದ ಸಾಹಿತ್ಯ ಕೃತಿಗಳು ಭಿನ್ನವಾಗಿಯೇ ನಿಲ್ಲುತ್ತವೆ.

‘ದಿ ಗುಡ್ ಅರ್ತ್’ ಕೃತಿಯು ಆಕರ್ಷಕವಾದ ನಿರೂಪಣೆಯ ಶೈಲಿ ಹಾಗೂ ಕೆಲವೇ ಮಾತುಗಳ ಮೂಲಕ ಅಸಾಧರಣವಾದ ಅನೇಕ ಧ್ವನಿ ಸಾಧ್ಯತೆಗಳನ್ನು ಹೊಮ್ಮಿಸುವುದರಿಂದ ತುಂಬ ಮುಖ್ಯವಾಗುತ್ತದೆ. ಈ ಕೃತಿ ಅದರಲ್ಲೂ ಹೆಣ್ಣನ್ನು ದಮನಿಸಿದ ಪುರುಷ ಪ್ರಾಧಾನ್ಯವನ್ನು ಪ್ರತಿರೋಧಿಸುವ ಅನೇಕ ಸೂಕ್ಷ್ಮ ಎಳೆಗಳನ್ನು ಹೊಂದಿರುವುದರಿಂದ ಸ್ತ್ರೀವಾದಿ ಚಿಂತನೆಯ ನೆಲೆಯಿಂದ ಅಧ್ಯಯನ ಮಾಡುವವರಿಗೆ ತುಂಬ ಮಹತ್ವದ ಕೃತಿಯಾಗಿದೆ. ಆದರೆ ಕಾರಂತರು ‘ಮರಳಿ ಮಣ್ಣಿಗೆ’ಯ ನಿರೂಪಣೆಯ ಶೈಲಿ ಹಾಗೂ ತಂತ್ರಗಳನ್ನು ಕುರಿತು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದ ಎರಡೂ ಕೃತಿಗಳು ತುಂಬ ಮಹತ್ವದವುಗಳಾದರೂ ‘ದಿ ಗುಡ್ ಅರ್ತ್’ ಕೃತಿಯು ಕಲಾತ್ಮಕತೆಯ ದೃಷ್ಟಿಯಿಂದ ಹೆಚ್ಚು ಯಶಸ್ವಿಯಾದ ಕೃತಿಯಾಗಿದೆ.

ಕನ್ನಡಕ್ಕೆ ಸಂಬಂಧಿಸಿದಂತೆ ಇದು ಅನುವಾದಗಳ ಸಮೃದ್ದ ಕಾಲವೂ ಆಗಿದೆ. ಕಳೆದ ಹಲವು ವರ್ಷಗಳಿಂದ ಭಾರತದ ವಿವಿಧ ಭಾಷೆಗಳ ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳ ಸಾಹಿತ್ಯ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ‘ಅನುವಾದ’ವನ್ನು ಕುರಿತು ಎಷ್ಟೇ ತಕರಾರುಗಳಿದ್ದರೂ ಜಗತ್ತಿನ ಅತ್ಯುತ್ತಮ ಸಾಹಿತ್ಯ ಕಲಾಕೃತಿಗಳು ಕನ್ನಡ ಭಾಷೆಯಲ್ಲಿ ಒಡಮೂಡಿದಾಗ ಕನ್ನಡದ ಕಸುವು ವಿಸ್ತರಿಸಿದಂತೆಯೇ ಆಗುತ್ತದೆ. ‘ದಿ ಗುಡ್ ಅರ್ತ್’ ಕಾದಂಬರಿ ಮಲೆಯಾಳಿಯಲ್ಲಿ ಅರ್ಧ ಶತಮಾನದ ಹಿಂದೆಯೆ ಬಂದಿದೆ. ಈ ಕಾದಂಬರಿ ಈಗ ಪಾರ್ವತಿ ಜಿ. ಐತಾಳ್ ಅವರಿಂದ ಕನ್ನಡದಲ್ಲಿ ಓದಲು ಸಿಗುವಂತಾಗಿದೆ. ಕುಂದಾಪುರದ ಭಂಡಾರ್ಕರ್‍ಸ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕಿಯಾಗಿರುವ ಅವರು ಮಲೆಯಾಳಿ, ಹಿಂದಿ, ಇಂಗ್ಲಿಷ್‌ಗಳಲ್ಲಿನ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ದಿ ಗುಡ್ ಅರ್ತ್’ ಕಾದಂಬರಿ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಅನುವಾದ ಮಾಡಿರುವುದರಿಂದ ಇದರ ಓದು ಅತ್ಯಂತ ಸರಾಗ ಮತ್ತು ಆಪ್ತವಾಗುವಂತೆ ಮಾಡಿದೆ. ಆದ್ದರಿಂದ ಇದು ಕನ್ನಡದ್ದೆ ಒಂದು ಮುಖ್ಯ ಕೃತಿ ಅನ್ನಿಸುವಂತಿದೆ.


ಕೃತಿ: ದಿ ಗುಡ್ ಅರ್ತ್
ಮೂಲ: ಪರ್ಲ್ ಎಸ್. ಬಕ್
ಅನುವಾದ: ಪಾರ್ವತಿ ಜಿ. ಐತಾಳ್
ಪ್ರಕಾಶನ: ಅಂಕಿತ ಪ್ರಕಾಶನ, ಬೆಂಗಳೂರು
ಪುಟ: 310 ಬೆಲೆ: ರೂ.195

ಇಂಧನ ಸ್ವಾವಲಂಬನೆಗೆ ಹೊಂಗೆ ಮರ

– ಆನಂದ ಪ್ರಸಾದ್

ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ. ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ ಇಳುವರಿಯನ್ನು ಕೊಡಲು ಆರಂಭಿಸುತ್ತದೆ.  ಹತ್ತು ವರ್ಷಗಳ ನಂತರ ಒಂದು ಮರವು 10ರಿಂದ 100 ಕೆಜಿ ಬೀಜವನ್ನು ಕೊಡಬಲ್ಲದು. ಈ ಮರದ ಬೇರುಗಳು 10 ಮೀಟರ್ ಅಳಕ್ಕೂ ಇಳಿದು ನೀರನ್ನು ಪಡೆಯಬಲ್ಲುದಾದುದರಿಂದ ಒಣಪ್ರದೇಶಗಳಲ್ಲೂ ಬೆಳೆಯಬಲ್ಲದು. ಉತ್ತಮವಾಗಿ ಬೆಳವಣಿಗೆಯಾದ  ಹತ್ತು ಹೊಂಗೆ ಮರಗಳಿಂದ ನೆಟ್ಟ ಹತ್ತು ವರ್ಷದ ನಂತರ ವಾರ್ಷಿಕ 400 ಲೀಟರ್ ಎಣ್ಣೆ, 1200 ಕೆಜಿ ಹಿಂಡಿ, 2500 ಕೆಜಿ ಸಾವಯವ ಬಯೋಮಾಸ್ ಗೊಬ್ಬರ ದೊರಕಬಲ್ಲದು. ಒಂದು ಗ್ರಾಮದಲ್ಲಿ ಕೃಷಿಗೆ ಬಳಸದ ಒಣ ಪ್ರದೇಶ/ಬೀಳು ಭೂಮಿಯಲ್ಲಿ ಹೊಂಗೆ ಮರಗಳನ್ನು ಬೆಳೆಸಿ ಅದರಿಂದ ಲಭ್ಯವಾಗುವ ಬೀಜಗಳಿಂದ ಎಣ್ಣೆಯನ್ನು ಸ್ಥಳೀಯವಾಗಿಯೇ ತೆಗೆದು ಡೀಸೆಲ್ ಜನರೇಟರ್ ಬಳಸಿ ವಿದ್ಯುತ್ ತಯಾರಿಸಿ ಗ್ರಾಮೀಣ ನೀರಾವರಿ, ಮನೆ ಉಪಯೋಗಕ್ಕೆ ವಿದ್ಯುತ್ ಪಡೆಯಲು ಸಾಧ್ಯವಿದೆ ಅಥವಾ ಗ್ರಾಮೀಣರು ಹೊಂದಿರುವ ಡೀಸೆಲ್ ವಾಹನಗಳಿಗೆ ಇಂಧನವಾಗಿ ಬಳಸಬಹುದು, ಟ್ರಾಕ್ಟರ್ ಇತ್ಯಾದಿಗಳಲ್ಲೂ ಇಂಧನವಾಗಿ ಬಳಸಿ ಸ್ವಾವಲಂಬನೆಯನ್ನು ಸಾಧಿಸಬಹುದು.

ಹೊಂಗೆ ಮರವು ಬರನಿರೋಧಕವಾಗಿದ್ದು ವ್ಯವಸಾಯಕ್ಕೆ ಬಳಸದ ಒಣ ಬೀಳು ಭೂಮಿಯಲ್ಲೂ ಬೆಳೆಯಬಲ್ಲುದಾದುದರಿಂದ ಇದನ್ನು ಅಂಥ ಪ್ರದೇಶಗಳಲ್ಲಿ ಬೆಳೆಸಿ ರೈತರು ತಮ್ಮ ಇಂಧನ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಇದು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿ ಬೆಳೆಯುವುದರಿಂದ ಇಂಗಾಲದ ಡೈ ಆಕ್ಸೈಡ್ ಹೆಚ್ಚಳದಿಂದ ಉಂಟಾಗುವ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಸಹಾಯಕ. ಹೊಂಗೆಯ ಎಣ್ಣೆಯನ್ನೇ ಡೀಸೆಲ್ ವಾಹನಗಳಲ್ಲಿ, ಪಂಪುಗಳಲ್ಲಿ, ವಿದ್ಯುಜ್ಜನಕ, ಟ್ರ್ಯಾಕ್ಟರ್‌ಗಳಲ್ಲಿ ಬಳಸುವುದರಿಂದ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಅನ್ನು ಪಳೆಯುಳಿಕೆ ಇಂಧನ ಉಪಯೋಗಿಸಿದಾಗ ಆಗುವಂತೆ ಹೆಚ್ಚುವರಿಯಾಗಿ ಸೇರಿಸುವುದನ್ನು ನಿವಾರಿಸಿದಂತೆ ಆಗುತ್ತದೆ. ಕರ್ನಾಟಕದಲ್ಲಿ ವ್ಯವಸಾಯಕ್ಕೆ ಬಳಸದ ಲಕ್ಷಾಂತರ ಎಕರೆಗಳ ಪಾಳು ಭೂಮಿ ಇದೆ. ಇಲ್ಲೆಲ್ಲಾ ಹೊಂಗೆಯನ್ನು ಬೆಳೆಸಿ ಕೃಷಿಕರ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ. ಹೊಂಗೆ ಮರವು ಲೆಗ್ಯೂಮ್ ಜಾತಿಗೆ ಸೇರಿದ ಮರವಾದುದರಿಂದ ಇದರ ಬೇರುಗಳಲ್ಲಿ ಸಾರಜನಕ ಸ್ಥಿರೀಕರಿಸುವ ಗಂಟುಗಳು ಇರುವ ಕಾರಣ ನೆಲದ ಫಲವತ್ತತೆಯನ್ನು ಹೆಚ್ಚಿಸಲು ಸಹಾಯಕ. ಇದರ ಬೇರುಗಳು ಇತರ ಬೆಳೆಗಳೊಂದಿಗೆ ಸ್ಪರ್ಧಿಸುವುದಿಲ್ಲವಾದ ಕಾರಣ ಇದನ್ನು ಹೊಲಗಳ ಬದಿಯಲ್ಲಿಯೂ ಬೆಳೆಸಬಹುದು. ಈ ಮರವು 100 ವರ್ಷಗಳವರೆಗೆ ಬದುಕುವುದರಿಂದ ದೀರ್ಘ ಕಾಲ ಫಸಲನ್ನು ಪಡೆಯಬಹುದು.  ಕೃಷಿಕರಿಗೆ ಇಂಧನ ಸ್ವಾವಲಂಬನೆಗೆ ಸಹಾಯಕವಾಗಬಲ್ಲ ಹೊಂಗೆ ಮರವನ್ನು ರಾಜ್ಯದ ಎಲ್ಲೆಡೆ ಬೆಳೆಸುವ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಹೊಂಗೆ ಮರದ ಹೆಚ್ಚು ಇಳುವರಿ ಕೊಡುವ ಬೀಜ ಹಾಗೂ ಸಸಿಗಳನ್ನು ಒದಗಿಸಲು ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ವಿಶ್ವ ವಿದ್ಯಾನಿಲಯಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಮುಖ್ಯ ಪಾತ್ರ ವಹಿಸಬಹುದಾಗಿದೆ.

ದಾಂಡೇಲಿಯ ಫೆರ್ರೋಅಲ್ಲೋಯ್ ಕಾರ್ಖಾನೆಯ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಐದು ಡೀಸೆಲ್ ವಿದ್ದ್ಯುಜ್ಜನಕಗಳನ್ನು ಹೊಂಗೆ ಎಣ್ಣೆಯಿಂದಲೇ ನಡೆಯುವಂತೆ ಬದಲಾಯಿಸಿ 2001ರಲ್ಲಿ 7,60,000 ಕಿಲೋವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದೆ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಅವರ ಹೊಂಗೆ ಎಣ್ಣೆಯನ್ನು ಇಂಧನವಾಗಿ ಬಳಸುವ ಕುರಿತಾದ ಪ್ರಯೋಗಗಳಿಂದ ಪ್ರೇರಿತವಾಗಿತ್ತು. ಇವರೇ ಕಗ್ಗನಹಳ್ಳಿಯಲ್ಲಿ 63 ಕೆ.ವಿ.ಎ. ಸಾಮರ್ಥ್ಯದ ಎರಡು ವಿದ್ದ್ಯುಜ್ಜನಕಗಳನ್ನು ಸ್ಥಳೀಯವಾಗಿ ಬೆಳೆದ ಹೊಂಗೆ ಬೀಜದ ಎಣ್ಣೆಯಿಂದಲೇ ನಡೆಸಿ 440 ವೋಲ್ಟಿನ ಪ್ರತ್ಯೇಕ ಗ್ರಿಡ್ದನ್ನು ಸ್ಥಾಪಿಸಿ 40 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಬೋರುವೆಲ್ಲುಗಳನ್ನು ಕೊರೆಯಿಸಿ ಇದೇ ವಿದ್ಯುತ್ತಿನಿಂದ ನೀರಾವರಿ ವ್ಯವಸ್ಥೆಯನ್ನು ಮಾಡಿ ತೋರಿಸಿದ್ದಾರೆ. ಇಂಥ ಪ್ರಯೋಗಗಳನ್ನು ರಾಜ್ಯದ ಎಲ್ಲೆಡೆ ಮಾಡಬೇಕಾದ ಅಗತ್ಯ ಇದೆ. ಇದರಿಂದ ವಿದ್ಯುತ್ತಿಗೆ ಕೃಷಿ ವಲಯದಿಂದ ಇರುವ ಬೇಡಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯ.

“ಹಸಿವೆಯೆ ನಿಲ್ಲು ನಿಲ್ಲು” : ಪ್ರಥಮ ಬಹುಮಾನ ಪಡೆದ ಕತೆ

[ಗಾಂಧಿ ಜಯಂತಿ  ಕಥಾ ಸ್ಪರ್ಧೆ – 2012, ರಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.]

– ಡಾ.ಬಸು ಬೇವಿನಗಿಡದ

ಧಾರವಾಡ ವಿಶ್ವವಿದ್ಯಾಲಯದ ರಸ್ತೆಗೆ ಹೊಂದಿಕೊಂಡಿದ್ದ ಬಯಲಿನಲ್ಲಿ ಮಳೆ-ಬಿಸಿಲು-ಗಾಳಿಗೆ ಬಣ್ಣ ಕಳೆದುಕೊಂಡು, ಬ್ರಿಟಿಷರ ಕಾಲದಲ್ಲಿ ಜೈಲಾಗಿತ್ತೇನೊ ಎನ್ನುವ ರಾವು ಭಾವನೆ ಹುಟ್ಟಿಸುತ್ತಿದ್ದ ಅಕರಾಳ ವಿಕರಾಳ ಕಟ್ಟಡವೊಂದು ಕಲ್ಲು-ಕಸ-ಮುಳ್ಳುಕಂಟಿಗಳ ನಡುವೆ ನಿಂತಿತ್ತು. ಧಾರವಾಡದ ಬಿಡಾಡಿ ದನಗಳಿಗೆ ಊರ ಹೊರಗೆ ದೊಡ್ಡ ಕೊಂಡವಾಡವೊಂದನ್ನು ನಿರ್ಮಿಸಿರಬಹುದೆಂದು ಬಸ್ಸಿನಲ್ಲಿ ಮತ್ತು ರೈಲಿನಲ್ಲಿ ಹೋಗಿ ಬರುವ ಜನ ಅಂದುಕೊಳ್ಳುತ್ತಿದ್ದರು. ಆ ಕಟ್ಟಡದ ಸಮೀಪ ಯುನಿವರ್ಸಿಟಿ ಮತ್ತು ಹಳಿಯಾಳಕ್ಕೆ ಹೋಗುವ ರಸ್ತೆಗಳು ಕ್ರಾಸ್ ಆಗಿ ದೊಡ್ಡ ಜಂಕ್ಷನ್ ಬೇರೆ ನಿರ್ಮಾಣವಾಗಿತ್ತು. ಹಳಿಯಾಳ ಕ್ರಾಸಿನಲ್ಲಿದ್ದ ಹತ್ತಾರು ಚಹಾ-ದುಕಾನುಗಳಿಗೆ, ಆಮ್ಲೇಟ್-ಎಗ್ಗ್ ರೈಸ್ ಸೆಂಟರ್‌ಗಳಿಗೆ, ಪಾನಿಪುರಿ-ಗೋಬಿ ಮಂಚೂರಿ ಅಂಗಡಿಗಳಿಗೆ ಈ ಸರಕಾರಿ ಬಯಲು ಕಸ ಚೆಲ್ಲುವ ಕೇಂದ್ರವಾಗಿತ್ತು. ಗಿರಾಕಿಗಳು ತಿಂದು ಬಿಟ್ಟ ಮುಸುರೆ, ಕಾಯಿಪಲ್ಲೆ ಹೆಚ್ಚಿದ ಉಳಕಲು, ಸಾವಿರಾರು ಕೈ, ನೂರಾರು ಮುಸುಡಿ, ಸಾವಿರ ಸಾವಿರ ಪ್ಲೇಟಗಳನ್ನು ತೊಳೆದ ನೀರು, ಎಳನೀರು ಕುಡಿದು ಚೆಲ್ಲಿದ ಕಾಯಿ, ಚಿಕನ್ ತಿಂದು ಉಗುಳಿದ ಎಲುಬಿನ ಚೂರು, ಬೇಲಿಯ ಮರೆಗೆ ಕುಳಿತು ಕುಡಿದದ್ದರ ಪುರಾವೆ ಹೇಳುವ ಖಾಲಿ ಬಾಟಲ್‌ಗಳು, ಕಾಮದ ಹಸಿವನ್ನು ಉದ್ರೇಕಕಾರಿಯಾಗಿ ಬಣ್ಣಿಸುತ್ತಿರುವ ಕಾಂಡೋಮ್‌ಗಳ ರ್‍ಯಾಪರ್‌ಗಳು, ಗುಟಕಾ ಮತ್ತು ಪಾನ್ ತಿಂದು ಉಗುಳಿದ ರಸ, ಸಿಂಬಳದ ಗೊಣ್ಣೆ, ಕಾಣದೆದೆಯಲ್ಲಿ ಕಟ್ಟಿಕೊಂಡ ಕಫದ ತುಣುಕು ಮುಂತಾಗಿ ಮನುಷ್ಯರು ತೆರಪಿಲ್ಲದೆ ಸೃಷ್ಟಿಸುತ್ತಿದ್ದ ಮಲಿನತೆ ವಿರಳ ನೀಲಗಿರಿ ಗಿಡಗಳ ಬಯಲಿನಲ್ಲಿ ಹೋಗಿ ಬೀಳುತ್ತಿತ್ತು. ಬಸ್ಸಿಗೆಂದು ನಿಂತವರು, ಟ್ರಕ್ಕಿನಿಂದ ಇಳಿದವರು, ಮೋಟಾರು ಸೈಕಲ್ ಮೇಲೆ ಹೋಗುವವರು, ಕಾರುಗಳನ್ನು ನಿಲ್ಲಿಸಿದವರು ಎಲ್ಲರು ಅಲ್ಲಿಗೆ ಕಚಕ್ ಪಚಕ್ ಎಂದು ಉಗುಳುತ್ತ, ಹರದಾರಿ ದೂರದಿಂದಲೆ ಪ್ಯಾಂಟಿನ ಜಿಪ್ ಉಚ್ಚುತ್ತ, ಆಹಾ-ಓಹ್-ಉಹುಂ ಎಂಬಿತ್ಯಾದಿ ಶಬ್ದಗಳಲ್ಲಿ ಜಲಬಾಧೆಯನ್ನು ನೀಗಿಸಿಕೊಂಡ ತೃಪ್ತಿಯನ್ನು ಹೊರಗೆಡವುತ್ತ ಕಸದ ತಿಪ್ಪೆಯ ವ್ಯಾಸವನ್ನು ದಿನೇ ದಿನೇ ಹೆಚ್ಚಿಸುತ್ತಿದ್ದರು. ಹೊಲಸು ವಾಸನೆಯ ವರ್ತುಲ ಕ್ಷಣ ಕ್ಷಣಕ್ಕೂ ವಿಸ್ತಾರವಾಗುತ್ತ ಇಂದೊ ನಾಳೆಯೊ ಇದೀಗೊ ಬೀಳುವಂತಿದ್ದ ಆ ಕಟ್ಟಡವನ್ನು ಸಮೀಪಿಸುತ್ತಿತ್ತು. ಕಸದಷ್ಟು ಬೇಗ ಬೇರೆ ಯಾವುದೂ ಬೆಳೆಯಲಾರದೆನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಂತಿತ್ತು. ಇನ್ನಷ್ಟು ದಿನ ಬಿಟ್ಟರೆ ಕಸದ ತಿಪ್ಪೆಯಲ್ಲಿ ತಾವಿರುವ ಈ ಕಟ್ಟಡವೂ ಮುಚ್ಚಿಹೋಗಬಹುದೆನ್ನುವ ಭೀತಿಯಲ್ಲಿ ಅಲ್ಲಿರುವ ಮನುಷ್ಯ ರೂಪಿ ಜೀವಿಗಳು ಬಾಯಿ ತೆರೆಯಲು ಆಹಾಹಾ… ಓ ಹೋ, ಇದೇನು ವಿಚಿತ್ರವಿದು, ಈ ನರಕ ಸದೃಶ ವಾತಾವರಣದಲ್ಲಿ ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರಲ್ಲ, ಈ ಹೊಲಸು ಗಾಳಿಯು ಅವರ ಕಿಡಕಿ ಬಾಗಿಲುಗಳಿಗೆ ಹೋಗಿ ಬಡಿಯುತ್ತಿದೆಯಲ್ಲಾ, ಅಯ್ಯೋ ಮಾನವೀಯತೆಯೆಂಬುದು ಲವಲೇಶವೂ ಕಾಣಸಿಗದೆ ಮರೆಯಾಗಿ ಹೋಯಿತಲ್ಲ ಎಂದು ಜನ ಟಿ.ವಿ.ಪರದೆಗಳಲ್ಲಿ ಮತ್ತು ಪತ್ರಿಕೆಗಳ ಪುಟಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸತೊಡಗಿದರು.

ತಮ್ಮದೆ ಬಗೆಹರಿಯದ ನೂರೆಂಟು ತರಲೆ-ತಾಪತ್ರಯಗಳ ಮಧ್ಯೆ ಬದುಕಿಕೊಂಡಿದ್ದ ಆ ಕಟ್ಟಡದ ಅಕ್ಕ -ಪಕ್ಕದ ಕಾಲನಿಗಳ ಮಂದಿ ಅದ್ಯಾವ ಬಿಲ್ಡಿಂಗ್‌ವಿದ್ದೀತು ಎಂದು ಇದುವರೆಗೂ ನೋಡಲು ಹೋಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಜನ ಹಿತ್ತಲು ಮತ್ತು ಕಾಂಪೌಂಡುಗಳನ್ನು ದಾಟಿ ಹೊರಬರುವುದು ಕಡಿಮೆಯಾಗಿತ್ತು. ಏನೇ ಇದ್ದರೂ ಅದು ಟಿ.ವಿ.ಪರದೆಯಲ್ಲಿ ಬಂದ ಮೇಲೆ ಅದನ್ನು ನೋಡುವಂತಹ, ನಂಬುವಂತಹ ಸ್ಥಿತಿ ನಿರ್ಮಾಣವಾಗಿತ್ತು. ‘ಆರಾಮ ಇದ್ದೀರೇನು?, ಶಾಲೆಗೆ ರಜೆ ಇದೆಯಾ?’ ಮುಂತಾದ ಸಾಮಾನ್ಯ ಪ್ರಶ್ನೆಗಳಿಗೂ ಅವರು ಟಿ.ವಿ.ಹಾಗೂ ಪತ್ರಿಕೆಯ ಮುಖ ನೋಡುತ್ತಿದ್ದುದು ಸಾಮಾನ್ಯವಾಗಿತ್ತು. ಹೀಗಾಗಿ ‘ಮನೆ ಒಳಗೆ ಬರಬಹುದೆ? ನಿಮ್ಮ ಹೆಸರೇನು?’ ಎಂದು ಜನರನ್ನು ಕೇಳಬೇಕಾದರೆ ಯಾವುದಾದರೂ ಟಿ.ವಿ.ಚಾನೆಲ್‌ನ ರಿಪೋರ್ಟರ್ ಮತ್ತು ಕ್ಯಾಮರಾಮನ್‌ನನ್ನು ಪರಿಚಯ ಮಾಡಿಕೊಂಡು ಅವರ ಕಡೆಯಿಂದ ನಮ್ಮ ಪ್ರಶ್ನೆಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡಿದಾಗಲೆ ಅವು ಮಂದಿಗೆ ಮುಟ್ಟುತ್ತಿದ್ದವು. ಮಂದಿ ಕೂಡ ತಮ್ಮ ಪ್ರತಿಕ್ರಿಯೆಗಳನ್ನು ಮರಳಿ ಅದೆ ರೂಪದಲ್ಲಿ ಅದು ಇಲೆಕ್ಟ್ರಾನಿಕ್ ಅಥವಾ ಮುದ್ರಣ ಅಥವಾ ಮೊಬೈಲ್ ಮೆಸೇಜ್‌ಗಳ ಮೂಲಕ ಕಳಿಸುತ್ತಿದ್ದರು.

ಮನುಷ್ಯ ಆಧುನಿಕನಾಗಿರುವುದರಿಂದ ಹಾಗೂ ಹೊಸ ಹೊಸ ಆವಿಷ್ಕಾರಗಳು ಬದುಕನ್ನು ಸರಳ ಮತ್ತು ಸುಲಭಗೊಳಿಸಿರುವುದರಿಂದ ನಾಗರಿಕ ಸಮಾಜದ ಈ ವರ್ತನೆ ತುಂಬ ಸಹಜವೆಂದು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಬೋಧಿಸುವ ಡಾ.ಆಲೂರ ಅವರು ಅಭಿಪ್ರಾಯ ಪಡುತ್ತಿದ್ದರು. ಲಕ್ಷಗಟ್ಟಲೆ ಪಗಾರ ತಗೊಂಡು ಸರಿಯಾಗಿ ಕ್ಲಾಸ್ ಎಂಗೇಜ್ ಮಾಡುವುದಿಲ್ಲ, ಮೊದಲಿನ ಟೀಚರ್‌ಗಳಂತೆ ಹುಡುಗರನ್ನು ತಿದ್ದಿ ತೀಡುವುದಿಲ್ಲ, ಪುಸ್ತಕ ಓದುವುದಿಲ್ಲ, ಜನಸಮುದಾಯದಿಂದ ದೂರ ಇರುತ್ತಾರೆ ಮುಂತಾದ ಕೆಲವು ಆಪಾದನೆಗಳು ಡಾ.ಆಲೂರರನ್ನು ಕುರಿತಂತೆ ಕಾಣಿಸಿಕೊಂಡ ಮೇಲೆ ದಿನದಿಂದ ದಿನಕ್ಕೆ ಅವರು ಮತ್ತಷ್ಟು ವ್ಯಗ್ರವಾಗಿ ಮನೆಯಲ್ಲಿ ಕುಳಿತೇ ಟೆಲೆ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಶಿಕ್ಷಕರು-ವಿದ್ಯಾರ್ಥಿಗಳು ಮುಖಾ ಮುಖಿಯಾಗಬೇಕೆಂದೇನಿಲ್ಲ, ಒಟ್ಟಿನಲ್ಲಿ ಸಂವಹನವಾದರೆ ಸಾಕು ಎಂದು ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ದೀರ್ಘ ಲೇಖನ ಬರೆದು, ಮನುಷ್ಯ ದ್ವೀಪದಂತೆ ಬದುಕುವುದೇ ಈಗಿನ ವಾತಾವರಣದಲ್ಲಿ ಉತ್ತಮ ಎಂಬ ಪ್ರತಿಪಾದನೆ ಮಾಡಿದ್ದರು. ಅವರ ಮನೆಗೆಲಸಕ್ಕೆ ಬರುತ್ತಿದ್ದ ಆಳುಗಳಿಗೆ ದೂರದಿಂದಲೆ ಅವರು ದುಡ್ಡು ಎಸೆಯುತ್ತಿದ್ದರು. ಹೊರಗೆ ಹೊರಟರೆಂದರೆ ಕಾರಿನ ಗ್ಲಾಸುಗಳನ್ನು ಇಳಿಸುತ್ತಿರಲಿಲ್ಲ. ಇದರಿಂದ ಹೊರಗಿನ ಗದ್ದಲ, ಕಿರುಚಾಟ, ಅಪಘಾತ, ಚಳವಳಿ, ಸಾವು, ನೋವು, ಕೇಕೆ, ಮೆರವಣಿಗೆ ಅವರಿಗೆ ತಾಕುತ್ತಿರಲಿಲ್ಲ. ಡಾ. ಆಲೂರರು ಹಳಿಯಾಳ ಸರ್ಕಲ್‌ನಲ್ಲಿ ಎರಡು ಅಂತಸ್ತಿನ ವಿಶಾಲವಾದ ಮನೆಯನ್ನು ಕಟ್ಟಿಸಿಕೊಂಡು ವಾಸವಾಗಿದ್ದರು. ಯಾರಾದರೂ ಅವರನ್ನು ಭೆಟ್ಟಿಯಾಗಿ ಮಾತನಾಡಿಸಿದರೆ ಅವರು ತನ್ನನ್ನು ಯಾಕೆ ಮಾತನಾಡಿಸಿದರು, ಏನು ಉದ್ದೇಶವಿತ್ತು, ತನ್ನ ಬಗ್ಗೆ ಅವರಿಗೆ ಯಾವಾಗಿನಿಂದ ತಿಳಿದಿದೆ ಎಂದೆಲ್ಲ ಪ್ರಶ್ನೆ ಕೇಳಿಕೊಂಡು ವಾರಗಟ್ಟಲೆ ಅದೆ ಚಿಂತೆಯಲ್ಲಿ ಕುಳಿತಿರುತ್ತಿದ್ದರು. ಹೀಗಿರುತ್ತಿರಲಾಗಿ ಡಾ. ಆಲೂರರ ಮನೆಗೆ ಅಣತಿ ದೂರದಲ್ಲಿಯೆ ಇರುವ ಆ ದುರಾದೃಷ್ಟದ ಕಟ್ಟಡವನ್ನು ಅವರು ಹೇಗೆ ನೋಡಿರಲು ಸಾಧ್ಯ? ಅವರಿಗೆ ಅದರ ಪರಿಚಯವಿರುವುದಾದರೂ ಹೇಗೆ? ಅವರು ಕೂಡ ಎಲ್ಲರಂತೆ ದಿಗ್ಭ್ರಮೆಗೊಳಗಾಗಿ ತನ್ನ ಮನೆಯ ಹತ್ತಿರ ಈ ಕಟ್ಟಡ ಎಲ್ಲಿತ್ತು? ತನಗೆ ಕೇಡು ಬಯಸುವ ಯಾರೋ ಪ್ರಾಧ್ಯಾಪಕರು ಅಥವಾ ತಾನು ವಿಶ್ವವಿದ್ಯಾಲಯದ ಕುಲಪತಿಯಾಗಲು ಅಡ್ಡಗಾಲು ಹಾಕುತ್ತಿರುವ ಯಾವುದೊ ಖದೀಮನು ಈ ಬಿಲ್ಡಿಂಗ್‌ನ್ನು ಅನಾಮತ್ತಾಗಿ ಇಲ್ಲಿ ತಂದು ಇಟ್ಟಿರಬಹುದೆಂದು ಆಲೂರರು ಲೆಕ್ಕಹಾಕಿ ಆ ಬಿಲ್ಡಿಂಗ್‌ನಲ್ಲಿ ವಾಸಿಸುತ್ತಿದ್ದ ಮಕ್ಕಳ ಬಗ್ಗೆ ಪೇಪರ್ ಓದುವುದನ್ನು ಬಿಟ್ಟು, ಟಿ.ವಿ.ಯಲ್ಲಿ ಹರಿದುಬರುತ್ತಿದ್ದ ಚಿತ್ರಗಳ ಮೇಲೆ ಕಣ್ಣಾಡಿಸುವುದನ್ನು ಬಿಟ್ಟು ತನ್ನ ಏಳ್ಗೆಗೆ ಇದೊಂದು ಅಪಶಕುನವೆಂದೆ ಭಾವಿಸಿ ಇಂಟರ್ನೆಟ್ ತೆಗೆದು ಬೆಂಗಳೂರಿನ ಪ್ರಖ್ಯಾತ ಗುರೂಜಿಯೊಬ್ಬರ ಜೊತೆ ಚಾಟ್ ಮಾಡತೊಡಗಿದರು.

ಗುರೂಜಿ ಬಣ್ಣ ಹಚ್ಚಿದ ತಮ್ಮ ಗಡ್ಡವನ್ನು ನೀವಿಕೊಳ್ಳುತ್ತ ತಮ್ಮ ಆಕರ್ಷಕ ನಗುವನ್ನು ಸ್ವಲ್ಪವೂ ಮಾಸಗೊಡದೆ ಮನುಷ್ಯ ಜೀವನ ಮಾಡಬೇಕಾದರೆ ಬದುಕಿನ ಕಲೆ ಗೊತ್ತಿರಬೇಕೆಂದು, ಇದಕ್ಕೆ ಧರ್ಮದ ನೆರವು ಬೇಕೇ ಬೇಕೆಂದು ಅತೀವ ಆತ್ಮವಿಶ್ವಾಸದಿಂದ ಹೇಳಿದರು. ಅಷ್ಟೇ ಅಲ್ಲ ಹುಬ್ಬಳ್ಳಿಯಲ್ಲಿರುವ ತಮ್ಮ ವಲಯ ಕಚೇರಿಯಿಂದ ಡಾ.ಆಲೂರರ ಮನೆಗೆ ಒದಗಿಬಂದಿರುವ ಸಕಲ ದುಷ್ಟಗ್ರಹಗಳನ್ನು ನಿವಾರಣೆ ಮಾಡಲು ಇನ್ನು ಹದಿನೈದು ದಿನದಲ್ಲಿ ಅವರ ಮನೆಯ ಗ್ರಾನೈಟ್ ಕಲ್ಲಿನ ವಿಶಾಲವಾದ ಹಾಲ್‌ನಲ್ಲಿ ದೊಡ್ಡ ಯಜ್ಞವೊಂದನ್ನು ಮಾಡುವುದಾಗಿ ಅಭಯವಿತ್ತರು. ಅದೂ ಅಲ್ಲದೆ ವಿಶ್ವವಿದ್ಯಾಲಯದ ಎಲ್ಲ ಪ್ರಾಧ್ಯಾಪಕರಿಗಾಗಿ ಹದಿನೈದು ದಿನದ ಒಂದು ಸತ್ಸಂಗ ಯೋಗ ಅಭಿಯಾನವನ್ನು ಏರ್ಪಡಿಸುವಂತೆ ಆಲೂರರಲ್ಲಿ ವಿನಂತಿಸಿದಾಗ ಅವರು ‘ಅಯ್ಯೋ, ಗುರೂಜಿ! ಧರ್ಮ ಪ್ರಸಾರಕರೆಂದು, ಶಾಂತಿಯೋಗದ ಮಹತ್ವವನ್ನು ಸಾರಿದ ಆಚಾರ್ಯರೆಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ತಾವು ಈ ಬಡ ಮಾಸ್ತರನನ್ನು ಕೇಳಿಕೊಳ್ಳುವುದೆ? ಖಂಡಿತಾ ನಡೆಸಿಕೊಡುತ್ತೇನೆ. ನಮ್ಮ ವೈಸ್ ಛಾನ್ಸೆಲರ್ ಆಜ್ಞೆ ಮಾಡಿದರೂ ಕೇಳದ ನಾನು ನಿಮ್ಮ ಮಾತನ್ನು ಮಾತ್ರ ಶಿರಸಾವಹಿಸಿ ಪಾಲಿಸುತ್ತೇನೆ,’ ಎಂದು ವಿನಮ್ರವಾಗಿ ನುಡಿಯಲು ಗುರೂಜಿ ‘ಆಯ್ತು, ಹೀಗೆ ಮಾಡಿದಾಗ ಮಾತ್ರ ನೀವು ಹುಟ್ಟಿಬಂದ ಶ್ರೇಷ್ಠ ಜಾತಿ-ಮತದ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳಿ,’ ಎಂದರು. ಅತಿ ವಿನಯದಿಂದ ಪ್ರಾಧ್ಯಾಪಕರು, ಸ್ವಾಮೀಜಿ ಎದುರಿಗಿದ್ದಾರೆನ್ನುವಂತೆ ಅವರಿಗೆ ಸಾಷ್ಟಾಂಗ ನಮಸ್ಕರಿಸಿದರು. ಇದರಿಂದ ಸಂತುಷ್ಟರಾದ ಮೇಲಷ್ಟೆ ಡಾ. ಆಲೂರರು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಮತ್ತು ಎಲ್ಲ ಟಿ.ವಿ. ಚಾನೆಲ್ ಪರದೆಗಳ ಮೇಲೆ ತೇಲಿ ಬರುತ್ತಿದ್ದ ದೃಶ್ಯಗಳ ಮೇಲೆ ಕಣ್ಣು ಹಾಸಿದರು.

ಹಳೆ ಶಿಲಾಯುಗದ ಕಟ್ಟಡದಲ್ಲಿ ವಾಸವಾಗಿದ್ದುದು ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಎಂದು ತಿಳಿಯಲು ಈಗ ತಡವಾಗಲಿಲ್ಲ. ಈ ಹಾಸ್ಟೇಲ್ಲಿನ ಸ್ಥಿತಿಗತಿಯ ವಿವರಗಳು ಕಲರ್ ಫೋಟೊಗಳೊಂದಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದೆ ತಡ ರವಿವಾರವೆಂದು ರಜೆಯ ನಿಶೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಮತ್ತು ಅವರ ಕೈ ಕೆಳಗಿನ ಎಲ್ಲ ನೌಕರರಿಗೆ ತಲೆಯ ಮೇಲೆ ಮುಗಿಲು ಹರಿದು ಬಿದ್ದಂತಾಗಿತ್ತು. ಯಾವ ಟಿ.ವಿ. ಆನ್ ಮಾಡಿದರೂ ದನಗಳಿಗಿಂತಲೂ ಕೀಳು ಮಟ್ಟದಲ್ಲಿ ಹಳ್ಳಿಗಳ ವಿದ್ಯಾರ್ಥಿಗಳನ್ನು ನೋಡಿಕೊಂಡಿದ್ದರ ಚಿತ್ರಗಳು ನೋಡುವವರ ಮನಸ್ಸನ್ನು ಕರಗಿಸುತ್ತಿದ್ದವು.

ನುಸಿಯಲ್ಲಿ ಜೋಳವೊ ಜೋಳದಲ್ಲಿ ನುಸಿಯೊ ಎಂಬಂತೆ ಮೈಗೆಲ್ಲ ಹಿಟ್ಟು ಮೆತ್ತಿಕೊಂಡು ಹರಿದಾಡುತ್ತಿದ್ದ ನುಸಿ ತುಂಬಿದ ಜೋಳದ ಚೀಲ, ಗಂಟುಗಂಟಾದ ಹಿಟ್ಟೇ ಹರಿದಾಡುತ್ತಿದೆ ಎನ್ನುವ ಹುಳಗಳಿದ್ದ ಮೈದಾಹಿಟ್ಟು. ಎಷ್ಟು ಕುದಿಸಿದರೂ ಕುದಿಯದ ಕಲ್ಲಿನ ಚೂರುಗಳಂತಿರುವ ತೊಗರಿ ಬೇಳೆ, ಅರ್ಧ ಮಾತ್ರ ಬೇಯುವ ವಿಚಿತ್ರ ಅಕ್ಕಿ, ಪೇಟೆಯಲ್ಲಿ ರಾತ್ರಿ ಕಸವೆಂದು ಚೆಲ್ಲಿಹೋದ ಕಾಯಿಪಲ್ಲೆ, ಬೆಳಗಲಾರದೆ ಕಿಲುಬುಗಟ್ಟಿ ತಮ್ಮ ನಿಜ ಬಣ್ಣ ಕಳೆದುಕೊಂಡಿರುವ ಅಡಿಗೆಯ ಪಾತ್ರೆಗಳು, ನೆಗ್ಗಿದ ತಾಟುಗಳು, ಮುರಿದ ಸೌಟುಗಳು, ಭರಪೂರ ಭತ್ತ ಬೆಳೆದಂತೆ ಕಸ ಬೆಳೆದಿರುವ ನೀರಿನ ತೊಟ್ಟಿ, ಕಾಲಿಟ್ಟರೆ ಜಾರುವ ಪರ್ಸಿ ಕಲ್ಲು, ಕಿಡಕಿ-ಬಾಗಿಲು ಮುರಿದುಹೋಗಿ ರೇಲ್ವೆ ಕಂಪಾರ್ಟಮೆಂಟಿನಂತೆ ಸೀದಾ ಒಂದೇ ಕಾಣುವ ಕೊಂಡವಾಡದಂತಹ ಬಿಲ್ಟಿಂಗ್, ಕಿತ್ತಾಡುವ ಹಾಗೂ ಆರಾಮ ಇಲ್ಲವೆಂದು ಎಂಟು ದಿನದಿಂದ ಹೊಟ್ಟೆ ಕೆಳಗೆ ಮಾಡಿಕೊಂಡು ಮಲಗಿರುವ ಹುಡುಗರು, ಅವರ ಹರಿದ ಅಂಗಿ-ಚೊಣ್ಣ ಇಂತಹ ಹಲವಾರು ಬೇರೆ ಬೇರೆ ಚಿತ್ರಣ ಕೊಡುವ, ಬೇರೆ ಬೇರೆ ಆಯಾಮಿನ ದೃಶ್ಯಗಳು ಕಂಡೊಡನೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಜಂಘಾಬಲ ಉಡುಗಿ ಹೋದಂತಾಗಿ ಅವರು ನಿತ್ರಾಣಗೊಂಡರು. ಇನ್ನು ಕೇವಲ ಆರು ತಿಂಗಳಲ್ಲಿ ರಿಟೈರ್ ಆಗಲಿದ್ದ ವಿ.ಬಿ. ಕಲಕೇರಿ ಅರ್ಥಾತ್ ವೀರಭದ್ರಪ್ಪ ಬಸಪ್ಪ ಕಲಕೇರಿ ಎನ್ನುವ ಆಜಾನುಬಾಹು ದೇಹದ ಅವರು ‘ಸರ್ವಿಸ್ ಪೂರಾ ದಾಟಿಸಿದ್ದೆ. ಕೊನೆಯ ಚುಂಗು ಸಿಕ್ಕಿ ಹಾಕಿಕೊಂಡು ಉರಳಾಗ್ತದ ಏನೊ?’ ಎಂದು ಚಿಂತೆಗೀಡಾದರು. ಮೊನ್ನೆಯಷ್ಟೆ ಹಾಸ್ಟೇಲ್‌ಗೆ ಭೆಟ್ಟಿಕೊಟ್ಟು ಬಂದಿದ್ದವರಂತೆ ಅಲ್ಲಿಯ ಅಟೆಂಡರ್ ಸಹಿ ಮಾಡಿಸಿ ಕೊಂಡು ಹೋಗಿದ್ದ. ಅವರು ಕೂಡ ಎಂಟು ದಿನದ ಹಿಂದೆ ಧಾರವಾಡದಲ್ಲಿಯ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳನ್ನೆಲ್ಲ ರೌಂಡ್ ಹಾಕಿಕೊಂಡು ಬಂದಿದ್ದರು. ಈಗ ಸುದ್ದಿಯಲ್ಲಿರುವ ಹಾಸ್ಟೆಲ್ಲಿಗೂ ಹೋಗಿದ್ದ ಅವರು ಪ್ರತಿಸಲದಂತೆ ಮೊನ್ನಿನ ಸಲವೂ ಒಳಗಡೆ ಹೆಜ್ಜೆಯಿಡದೆ ಅಟೆಂಡರ್ ಪಿ.ಎಲ್. ಉಳ್ಳಾಗಡ್ಡಿ ಎನ್ನುವವನು ಅಂಗಳದಲ್ಲಿ ತಂದು ಹಾಕಿದ್ದ ಪ್ಲಾಸ್ಟಿಕ್ ಚೇರ್ ಮೇಲೆ ಕುಳಿತು ‘ಎಲ್ಲಾ ಸರಿ ಐತೇನೋ?’ ಎಂದು ಕೇಳಿದ್ದರು. ಆಗಷ್ಟೆ ನಂದಿನಿ ಹಾಲಿನ ಪಾಕೀಟ್ ತಂದು ಅದರಲ್ಲಿ ನಾಲ್ಕು ರೂಪಾಯಿ ಉಳಿಸಿಕೊಂಡು ಮೂರು ರೂಪಾಯಿಯಲ್ಲಿ ಮಸ್ತಿ ಗುಟಖಾವನ್ನು ಬಾಯಿಗೆ ಇಳಿಸಿ ಇನ್ನೊಂದು ರೂಪಾಯಿ ಎಮರ್ಜೆನ್ಸಿಗೆ ಇರಲಿ ಎಂದು ಪ್ಯಾಂಟಿಗೆ ಇಳಿಸಿದ್ದ ಉಳ್ಳಾಗಡ್ಡಿ ಕರ್ರಗಾಗಿದ್ದ ಹಲ್ಲು ಗಿಂಜಿ ‘ಸರ್, ನೀವು ಕಾಳಜಿ ಬಿಡ್ರಿ’ ಎಂದು ಹಾಸ್ಟೆಲ್ ಹುಡುಗರಿಗೆಲ್ಲ ಕೇಳುವಂತೆ ನಕ್ಕಿದ್ದ. ‘ಇಪ್ಪತ್ತ ವರ್ಷ ಆತು ಸರ್, ನಾ ಇಲ್ಲಿ ಕೆಲಸ ಮಾಡ್ಲಿಕ್ಕೆ ಹತ್ತಿ. ಈ ಹುಡುಗರು ಅದಾರಲ್ಲ, ಅಷ್ಟ ಸಣ್ಣವನಿರ್‍ತಾಗಿಂದ ಇಲ್ಲಿ ದುಡ್ಯಾಕ ಹತ್ತೇನಿ. ಒಂದsರ ದಿನ ಏನರ ಕಡಿಮೆ ಆಗೇತಿ ಅಂತ ಕಂಪ್ಲೇಂಟ್ ಬಂದತೇನ್ರಿ?’ ಎಂದು ಕಲಕೇರಿ ಸಾಹೇಬರಿಗೆ ತಿರುಗಿ ಕೇಳಲು ಕತ್ತಲಿನಲ್ಲಿ ಅವನ ಮುಖ ಕಾಣದಂತಾಗಿ ಸಾಹೇಬರು, ‘ಆತ ಬಿಡ ಹಂಗಾರ. ಹುಷಾರ ಇರು. ಹುಡುಗರು ಉಂಡು ಅಭ್ಯಾಸ ಮಾಡ್ಲಿಕ್ಕೆ ಹತ್ಯಾರೇನು ನೋಡು,’ ಎಂದು ಅಡಿಗೆಯವನು ಸ್ಪೆಷಲ್ಲಾಗಿ ಮಾಡಿ, ,ಹಿಡೀರಿ ಸಾಹೇಬ್ರ, ಎಂದು ತಂದು ಕೊಟ್ಟ ಚಹಾವನ್ನು ಗುಟುಕರಿಸಿದ್ದರು. ಈ ಅಟೆಂಡರ್ ಮತ್ತು ಅಡಿಗೆಯವನು ಹಾಸ್ಟೆಲಿನಿಂದ ಹತ್ತು ಕಿ.ಮೀ. ದೂರವಿರುವ ಕಲಕೇರಿ ಎನ್ನುವ ಊರವರಾಗಿದ್ದುದರಿಂದ ಅವರ ಬಗ್ಗೆ ವಿಶೇಷ ನಂಬಿಕೆ ಮತ್ತು ಪ್ರೀತಿ ಸಾಹೇಬರಿಗಿತ್ತು. ಸಾಹೇಬರ ಅಡ್ಡೆಸರು ಕಲಕೇರಿ ಇದ್ದುದು ಅದಕ್ಕೆ ಕಾರಣವಾಗಿತ್ತು.

ಹಾಗೆ ನೋಡಿದರೆ ಸಾಹೇಬರು ಈ ಊರವರಾಗಿರಲಿಲ್ಲ. ಬಿಜಾಪೂರ ಜಿಲ್ಲೆ ಇಂಡಿ ತಾಲೂಕಿನ ಕಲಕೇರಿ ಎನ್ನುವ ಕುಗ್ರಾಮದಲ್ಲಿ ಬಾಲ್ಯದ ದಿನಗಳನ್ನು ಕಳೆದ ನೆನಪು ಸಾಹೇಬರನ್ನು ಆಗಿಂದಾಗ ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡುತ್ತಿತ್ತು. ಕಲಕೇರಿಯ ಹೆಸರನ್ನು ಮುಂದು ಮಾಡಿ ತನ್ನ ಬಡತನದ ನೆನಪುಗಳನ್ನು ಕಲಕುವ ಈ ಇಬ್ಬರನ್ನೂ ತಬ್ಬಿಕೊಳ್ಳಬೇಕೆನಿಸುತ್ತಿತ್ತು. ಇದಕ್ಕಿಂತಲೂ ಹತ್ತು ಪಾಲು ಕೆಟ್ಟಿದ್ದ ಹಾಸ್ಟೆಲ್ಲಿನಲ್ಲಿ ಬೆಳದು, ವಿಜಾಪೂರದ ಗೋಳಗುಮ್ಮಟದ ಹಿಂದೆ ಹೋಗಿ ಕಾಯಿಪಲ್ಲೆ ಮಾರುವವರ ಉಳಕಲು ಗಜ್ಜರಿ ತಿಂದು ಹೊಟ್ಟೆ ತುಂಬಿಸಿಕೊಂಡು, ಯಾವುದೇ ಪರಿಸ್ಥಿತಿಯಲ್ಲಿ ತಾನು ಬೆಳೆದು ಮುಂದೆ ಬಂದೇ ಬರುವೆನೆಂದು ಗೆಳೆಯರೊಟ್ಟಿಗೆ ಪ್ರತಿಜ್ಞೆ ಮಾಡಿದ್ದು, ಆ ಪ್ರತಿಜ್ಞೆ ದಿನವೂ ಏಳೇಳು ಸಲ ಕೇಳಿಸಿದಂತಾಗಿ, ಯಾರ ಸಹಾಯವಿಲ್ಲದೆ ನೌಕರಿ ಹಿಡಿದು, ಈಗ ಹಸಿರು ಇಂಕಿನಲ್ಲಿ ಸಹಿ ಮಾಡುವ ಗೆಜೆಟೆಡ್ ಆಫೀಸರ್ ಆಗಿರುವುದು ಕಣ್ಮುಂದೆ ಬರುತ್ತಿತ್ತು. ನೂರೆಂಟು ಕೆಲಸಗಳ ಮಧ್ಯೆ ತಮ್ಮ ಹುಟ್ಟಿದೂರಿಗೆ ಹೋಗಲು ಅವರಿಗೆ ಸವಡು ಸಿಗುತ್ತಿರಲಿಲ್ಲ. ಧಾರವಾಡದಂತಹ ಮಲೆನಾಡ ಸೆರಗಿನ ಊರನ್ನು ಬಿಟ್ಟು ಆ ಕೆಟ್ಟ ಬಿಸಿಲಿನ ಹಳ್ಳಿಗೆ ಹೋಗುವದೆಂದರೆ ಅವರಿಗೆ ಜೀವ ವಕ್ ಎನ್ನುತ್ತಿತ್ತು. ಕಾರು ಮಾಡಿಕೊಂಡು ಹೋದರೂ ಈ ಕಡು ಬಿಸಿಲಿಗೆ ಅವರ ತಲೆ ತಿರುಗಿದಂತಾಗಿ ಒಂದೆರಡು ಸಲ ವಾಂತಿ ಆಗುತ್ತಿತ್ತು. ತಲೆ ಹಿಡಿದುಕೊಂಡೆ ತಾವು ಹುಟ್ಟಿದ್ದ ಮನೆಯಲ್ಲಿ ಒಂದೆರಡು ತಾಸು ಕುಳಿತು ಅಣ್ಣ-ತಮ್ಮರ ಜೊತೆ ಅದು-ಇದು ಮಾತನಾಡಿ ಹೊತ್ತು ಮುಳುಗುವ ಮುನ್ನ ಊರು ಬಿಟ್ಟು ವಾಪಸ್ ಧಾರವಾಡದ ಹಾದಿ ಹಿಡಿಯುತ್ತಿದ್ದರು. ಅಲ್ಲಿ ಮಲಗಿದರೆ ಅವರಿಗೆ ನಿದ್ದೆಯೆ ಬರುತ್ತಿರಲಿಲ್ಲ. ಹೀಗಾಗಿ ಎಷ್ಟೇ ರಾತ್ರಿಯಾದರೂ ಧಾರವಾಡಕ್ಕೆ ಬಂದು ಮಲಗಬೇಕು. “ಯಾವಾಗಿದ್ರೂ ನಿಂದು ಇದೆ ಹಣೆ ಬರಹ ಆತು ಹೋಗು. ಅಣ್ಣ-ತಮ್ಮರನ್ನ ನೋಡ್ಲಿಲ್ಲ. ಹಡದ ತಂದಿ-ತಾಯಿ ನೋಡ್ಲಿಲ್ಲ. ಈ ನೆಲದಾಂವ ಅಲ್ಲ ಅನ್ನುವಂಗ ಆಗೀದಿ,” ಎಂದು ಮುದುಕನಾಗಿದ್ದ ಹಿರಿಯಣ್ಣ ಸಾಹೇಬರಿಗೆ ಬೈದು ಕಳಿಸುತ್ತಿದ್ದ. ತಾವು ಎಷ್ಟು ಸಹಾಯ ಮಾಡಿದರೂ ತಮಗೆ ಹೊಲ-ಮನೆ ಬೇಡವೆಂದು ಅಣ್ಣ-ತಮ್ಮ, ಅಕ್ಕ-ತಂಗಿಯರಿಗೆ ತಮ್ಮ ಪಾಲಿನ ಆಸ್ತಿಯನ್ನು ಬಿಟ್ಟು ಕೊಟ್ಟಿದ್ದರೂ ಇವರು ಅನ್ನುವುದು ಬಿಡಲಿಲ್ಲ ಎಂದು ಕಲಕೇರಿ ಸಾಹೇಬರಿಗೆ ಊರಿಗೆ ಹೋಗಿ ಬಂದ ಎರಡು ಮೂರು ದಿನ ನಿದ್ದೆಯೆ ಬರುತ್ತಿರಲಿಲ್ಲ. ಅಣ್ಣ-ತಮ್ಮರಿಗೆ ಯಾವ ಸಹಾಯವನ್ನೂ ಮಾಡಬಾರದು ಎಂದು ತಮ್ಮ ಸಹೋದ್ಯೋಗಿಗಳಿಗೆ ನೊಂದುಕೊಂಡು ಬುದ್ಧಿ ಹೇಳುತ್ತಿದ್ದರು. ಅವ್ವ-ಅಪ್ಪ ಸತ್ತ ಮೇಲೆ ಊರಲ್ಲಿ ಏನಿದೆ ಎಂದು ಇತ್ತೀಚೆಗೆ ಆ ಕಡೆ ಕಾಲು ಹಾಕಿ ಸೈತ ಮಲಗುವುದಿಲ್ಲ. ಅಷ್ಟಾದರೂ ಹೆಂಡತಿಯೊಡನೆ ಯಾವ ವಿಷಯಕ್ಕಾದರೂ ಮನಸ್ತಾಪ ಬಂತೆಂದರೆ ಮೊನ್ನೆ ಮೊನ್ನ ಬಂದ ಇವಳಿಗೆ ಇಷ್ಟೊಂದು ಮಾಡಿದೆ ಆದರೆ ಒಡ ಹುಟ್ಟಿದವರಿಗೆ ಏನೂ ಮಾಡಲಿಲ್ಲ ಎಂಬ ಪಾಪಪ್ರಜ್ಞೆ ಕಾಡಿ ಉದ್ವಿಗ್ನತೆಯಿಂದ ಹಾಸ್ಟೆಲ್ಲಿನ ರಸ್ತೆಯಲ್ಲಿರುವ ವಿನಾಯಕ ಬಾರ್ ಆಂಡ್ ರೆಸ್ಟೊರೆಂಟ್‌ಗೆ ಹೋಗಿ ಒಂದು ಪೆಗ್ ಜಾಸ್ತಿ ಹಾಕುವರು.

ಅಂತಹ ಮನಸ್ತಾಪದ ಒಂದು ದಿನ ಅಟೆಂಡರ್ ಉಳ್ಳಾಗಡ್ಡಿಯನ್ನು, ಅಡುಗೆಭಟ್ಟ ಗುರುಬಸಯ್ಯನನ್ನು ಕರೆದುಕೊಂಡು ತಮ್ಮ ಗೆಜೆಟೆಡ್ ಸ್ಥಾನವನ್ನು ಮರೆತು ಅವರನ್ನು ಕುಡಿಯಲು ಕರೆದುಕೊಂಡು ಹೋಗಿದ್ದರು. ‘ಹಾಸ್ಟೆಲಿನಲ್ಲಿ ಹೋಗಿ ಉಣ್ಣೋಣ ಸಾರ್, ಫಸ್ಟ್‌ಕ್ಲಾಸ್ ಅಡಿಗೆ ಮಾಡಿದೀನಿ’ ಎಂದು ಗುರುಬಸಯ್ಯ ನಿಶೆಯಲ್ಲಿ ಅಂದ. ‘ಇಂವನ್ನ ಊಟ ನಾ ಕಂಡಿಲ್ವಾ ಸರ್, ನೀವು ಅಕಸ್ಮಾತ್ ಉಂಡ್ರೆ, ಕುಡಿದಿದ್ದು ಕೂಡ ಉಲ್ಟಾ ಆಗ್ತದ,’ ಎಂದು ಉಳ್ಳಾಗಡ್ಡಿಯು ಸಾಹೇಬರಿಗೆ ಹೊಟೇಲಿನಲ್ಲಿಯೆ ಉಣ್ಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದನು. ಸಾಹೇಬರು ತಮ್ಮ ಅಣ್ಣ-ತಮ್ಮರ ವಿಷಯವನ್ನು ಅವರ ಮುಂದೆ ಕಣ್ಣೀರು ತಂದು ಅರುಹಲು ಅವರಿಬ್ಬರೂ ಕೂಡ ಜೋರಾಗಿ ಅಳುತ್ತ ತಾವು ಕೂಡ ಅಣ್ಣ-ತಮ್ಮರ ಕಾಟದಿಂದಾಗಿಯೆ ಇಂತಹ ಬಿಕನಾಶಿ ನೌಕರಿಗೆ ಬಂದಿರುವುದಾಗಿ, ಬೇರೆ ಯಾವುದೂ ಸಿಗುವುದಿಲ್ಲವಾದ್ದರಿಂದ ಇದಕ್ಕೆ ಅಂಟಿಕೊಂಡಿರುವುದಾಗಿ, ಸಾಹೇಬರು ಹೊಡೆಯುವ ಪರ್ಸೆಂಟೇಜ್‌ನಲ್ಲಿ ತಮಗೂ ಸ್ವಲ್ಪ ಸಿಂಪಡಿಸಬೇಕೆಂದೂ ಎಲ್ಲರೆದುರು ಕಾಲು ಮುಗಿದು ಕೇಳಿಕೊಳ್ಳಲು ತುಂಬಿದ ಹೃದಯ ಹಗುರಾದ ಖುಶಿಯಲ್ಲಿದ್ದ ಸಾಹೇಬರು ’ಏ, ಉಳ್ಳಾಗಡ್ಡಿ ಆತೊ ಮಾರಾಯ, ನೀನು ನನ್ನ ತಮ್ಮ ಇದ್ದಂಗ,’ ಎಂದು ರೊಟ್ಟಿ ಮುರಿದು ಬಾಯಿಗಿಟ್ಟುಕೊಂಡರು. ಉಳ್ಳಾಗಡ್ಡಿಗೂ ಒಂದು ತುತ್ತು ತಿನ್ನಿಸಿದರು. ಸಾಹೇಬರ ಜೊತೆ ಇಷ್ಟೊಂದು ಸಲುಗೆ ಬೆಳೆಸಿದ ಉಳ್ಳಾಗಡ್ಡಿ ಆಗಿಂದಾಗ ಅವನಿಗೆ ಹೊಳೆದ ವಿಚಾರವೊಂದನ್ನು ಸಲಹಾ ರೂಪದಲ್ಲಿ ಅವರ ಮುಂದೆ ಇಟ್ಟನು. “ಸಾಹೇಬ್ರ, ನಾ ಹೀಂಗ ಹೇಳಲಿಕ್ಕೆ ಹತ್ತೀನಿ ಅಂತ ತಪ್ಪ ತಿಳೀಬ್ಯಾಡ್ರಿ. ಹುಟ್ಟಿದೂರು ಯಾವಾಗ್ಲೂ ಮರೀಬಾರ್‍ದು. ನಿಮ್ಮ ಅಣ್ಣ-ತಮ್ಮರು ಹೆಂಗರ ಇರವೊಲ್ರು. ಆದರ ತಂದಿ-ತಾಯಿ ನೆನಪ ಕಡೀತನಕ ಇರಬೇಕು. ಅದಕ್ಕ ಒಂದ ಕೆಲಸ ಮಾಡ್ರಿ. ನಿಮ್ಮ ಊರ ಸಾಲಿಯೊಳಗ ಮ್ಯಾಟ್ರಿಕ್‌ಗೆ ಯಾರು ಫಸ್ಟ್, ಸೆಕೆಂಡ್ ಬರ್‍ತಾರೊ ಅವರಿಗೆ ಇಂತಿಷ್ಟು ರೊಕ್ಕ ಅಂತ ನಿಮ್ಮ ಅಪ್ಪ, ಅವ್ವನ ಹೆಸರಲೆ ಬಹುಮಾನ ಇಡ್ರಿ. ನೀವೂ ವರ್ಷಕ್ಕೊಮ್ಮೆ ಊರಿಗೆ ಹೋದಾಂಗ ಆಗ್ತದ. ಮಂದಿನೂ ನಿಮ್ಮನ್ನ ಹೊಗಳ್ತಾರ. ನೀವು ಕಲಿತ ಹಾಸ್ಟೆಲ್‌ನ್ಯಾಗೂ ಹಂಗ ಮಾಡಬಹುದು.”

“ಅಲೆಲೆಲೆ ಉಳ್ಳಾಗಡ್ಡಿ, ಹೌದಲ್ಲೊ, ಇಷ್ಟ ದಿನಾ ನನಗ ಈ ವಿಚಾರ ಹೊಳಿಲಿಲ್ಲಲ್ಲೊ. ನಿಂದೂ ಭಾರಿ ತಲಿ ಬಿಡಪಾ. ನಮ್ಮ ಹಾಸ್ಟೇಲ್‌ದಾಗ, ಅದರಾಗೂ ನನ್ನ ಕೈ ಕೆಳಗ ಕೆಲಸ ಮಾಡಿದ್ದು ಸಾರ್ಥಕ ಆತು ನೋಡು. ಹೀಂಗs ಮಾಡೋಣು. ನೀ ಹೇಳಿದಂತ ಹುಡುಗರಿಗೆ ನಮ್ಮ ಅಪ್ಪ-ಅವ್ವನ ಹೆಸರಿಲೆ ಬಹುಮಾನ ಕೊಡೋಣು. ಒಂದು ದೊಡ್ಡ ಫಂಕ್ಸ್‌ನ್ ಮಾಡಿ ಸುರು ಮಾಡೋಣಂತ. ಆ ಕಾರ್ಯಕ್ರಮಕ್ಕ ನೀನs ಮುಖ್ಯ ಅತಿಥಿ. ಇಲ್ಲಿಂದ ಎಲ್ಲ್ಯಾರೂ ಕೂಡೇ ಹೋಗೋಣು. ಏನಂತಿ? ಏನಂತೀರಿ ಮುಖ್ಯ ಅತಿಥಿಗಳೆ?” ಎಂದು ದೊಡ್ಡ ದನಿಯಲ್ಲಿ ಕಲಕೇರಿ ಸಾಹೇಬರು ಉಳ್ಳಾಗಡ್ಡಿಗೆ ಕೈ ಮುಗಿಯಲು ಸುತ್ತಲೂ ಕುಳಿತು ಕುಡಿಯುತ್ತಿದ್ದ ಮಂದಿ ಇವರನ್ನೆ ಕ್ಷಣ ಹೊತ್ತು ನೋಡಿದರು. ಸಾಹೇಬರ ಎದುರು ಕುಳಿತು ಕುಡಿದಿದ್ದೆ ತನ್ನ ಜೀವಮಾನದ ಸಾಧನೆ ಎಂದು ಇದುವರೆಗೆ ನಂಬಿಕೊಂಡಿದ್ದ ಉಳ್ಳಾಗಡ್ಡಿಯು ಈಗ ಏಕಾಏಕಿ ಒದಗಿಬಂದ ಮತ್ತೊಂದು ಗೌರವಕ್ಕೆ ಸಂಪೂರ್ಣ ನಾಚಿ ನೀರಾದನು. ಲಜ್ಜೆ, ಹೆಮ್ಮೆ ಅವನ ಮೈಯ ಕಣ ಕಣದಲ್ಲಿಯೂ ಕುಣಿದು ’ಸಾಹೇಬ್ರ, ನಾನ್ಯಾಕ್ರಿ, ಬ್ಯಾರೆ ಯಾರಾದ್ರೂ ದೊಡ್ಡವರನ್ನ ನೋಡ್ರಿ,’ ಎಂದು ಅಧ ಅನುಮಾನ, ಅರ್ಧ ಖುಶಿಯಿಂದ ಹೇಳಲು ಸಾಹೇಬರು ’ನೀನೂ ದೊಡ್ಡಾಂವs. ಸಣ್ಣಾಂವ ಅಂತ ತಿಳ್ಕೊಂಡಿಯೇನು? ಗ್ವಾಡಿ ಕಟ್ಟಬೇಕಾದ್ರ ದೊಡ್ಡ ಕಲ್ಲು ಬೇಕಾಗ್ತಾವ, ಸಣ್ಣ ಕಲ್ಲೂ ಬೇಕಾಗ್ತವ. ನೀನು ಸುಮ್ನಿರು. ಈಗ ಊಟ ಮಾಡು,’ ಎಂದು ಊಟದತ್ತ ಗಮನಹರಿಸಿದ್ದರು.

* * *

ಸ್ವತಃ ದೇವರೆ ಇಂಥ ಸಾಹೇಬರ ರೂಪದಲ್ಲಿ ಬಂದಿರಬಹುದೆಂದು ಅಟೆಂಡರ್ ಉಳ್ಳಾಗಡ್ಡಿಯು ಅಂದಿನಿಂದ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡತೊಡಗಿದನು. ಹಾಸ್ಟೇಲ್‌ದಲ್ಲಿ ಮಾಡುವ ದುಪ್ಪಟ್ಟು ಕೆಲಸವನ್ನು ಅವರ ಮನೆಯಲ್ಲಿ ಮಾಡತೊಡಗಿದನು. ಕಲಕೇರಿಯವರ ಕಂಪೌಂಡ್ ಈಗ ಕಂಗೊಳಿಸತೊಡಗಿತು. ಉಳ್ಳಾಗಡ್ಡಿ ಹೊಸ ಹೊಸ ಶೋ ಗಿಡ ಹಚ್ಚುವನು. ಕುಂಡಗಳಿಗೆ ನೀರು ಹಣಿಸುವನು. ಗಿರಣಿಗೆ ಹೋಗಿ ಹಿಟ್ಟು ಬೀಸಿಕೊಂಡು ಬರುವನು. ಸಾಹೇಬರು ಮತ್ತು ಹೆಂಡತಿ ಹೊರಗೆ ಹೋದರೆ ಅವರ ಮನೆ ಕಾಯುವನು. ಒಮ್ಮೊಮ್ಮೆ ಬೇಸರವಾದಾಗ ಅಮೇರಿಕೆಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಸಾಹೇಬರ ಮಗ ನಿಜಲಿಂಗಪ್ಪ ಅಲ್ಲಿಂದ ಕೊಟ್ಟು ಕಳಿಸಿದ ಫೋಟೊ ಅಲ್ಬಮ್ ನೋಡುತ್ತ ಕೂಡ್ರುವನು. ಹಾಳೆಯಂತಿರುವ ಇಲೆಕ್ಟ್ರಾನಿಕ್ ಕಾರ್ಡ್ ಮೇಲೆ ಫೋಟೊಗಳು ಒಂದಾದ ಮೇಲೊಂದರಂತೆ ಮೂಡಿ ಮಾಯವಾಗುತ್ತವೆ. ಸಾಹೇಬರು ಸಣ್ಣವರಾಗಿದ್ದಾಗಿನಿಂದ ಹಿಡಿದು ಇಲ್ಲಿಯವರೆಗಿನ, ಒಂದಕ್ಕಿಂತ ಒಂದು ಚೆಂದ ಇರುವ ಅವರ, ಮನೆಯವರ, ಮಕ್ಕಳ, ಅಪ್ಪ-ಅವ್ವನ, ಹಳ್ಳಿಯ ಮನೆಯ, ಆ ರಸ್ತೆಯ, ಆ ಊರ ಪಂಚಾಯತಿಯ ಫೋಟೊಗಳು ಬಂದು ಹೋಗುತ್ತಿದ್ದವು. ಒಂದು ಫೋಟೊದಲ್ಲಿ ಸಾಹೇಬರು ಉಳ್ಳಾಗಡ್ಡಿಯ ಹೆಗಲ ಮೇಲೆ ಕೈ ಹಾಕಿ ತೆಗಿಸಿಕೊಂಡ ಚಿತ್ರವಿತ್ತು. ಅದರ ಪ್ರತಿಯನ್ನು ಮಾಡಿಸಿಕೊಂಡು ತನ್ನ ಮನೆಯಲ್ಲಿ ತೂಗು ಹಾಕಬೇಕೆಂದು ಉಳ್ಳಾಗಡ್ಡಿ ಯೋಚಿಸುವನು. ಹೇಗಿದ್ದರೂ ಹಳ್ಳಿಗೆ ಗೆಸ್ಟ್ ಆಗಿ ಹೋಗುವದಿದೆಯಲ್ಲ, ಆ ಫೋಟೊವನ್ನೂ ಸೇರಿಸಿ ಕೇಳಿದರಾಯಿತು ಎಂದು ತನ್ನ ಮುಂದೆ ತೇಲಿಬಂದ ಅಮೇರಿಕೆಯ ನಯಾಗಾರ ಜಲಪಾತದ ಸದ್ದಿನಲ್ಲಿ ಸುಮ್ಮನಾದನು. ಹಾಸ್ಟೆಲಿಗೆಂದು ತಂದಿದ್ದ ಅಕ್ಕಿ, ಹಿಟ್ಟುಗಳಲ್ಲಿ ಸ್ವಲ್ಪ ಕದ್ದುಕೊಂಡು ಹೋದರೂ ಕಲಕೇರಿ ಸಾಹೇಬರು ಸುಮ್ಮನಿರುವುದನ್ನು ಕಂಡು ಉಳ್ಳಾಗಡ್ಡಿ ’ದೇವರೆ, ಇಂತಹ ಟೈಮು ಕಡೇತನಕ ಇರಲಿ,’ ಎಂದು ಅವರ ಹೃದಯವಂತಿಕೆಯನ್ನು ತನ್ನ ಹೆಂಡತಿ-ಮಕ್ಕಳ ಎದುರು ಕೊಂಡಾಡುವನು. ಅವರನ್ನೂ ಒಂದು ಸಲ ಸಾಹೇಬರ ಮನೆಗೆ ಕರೆದುಕೊಂಡು ಬಂದು ಮೂಡಿ ಮರೆಯಾಗುವ ಅಮೇರಿಕಾದ ಫೋಟೊಗಳನ್ನು ತೋರಿಸಬೇಕೆಂದು ಮನಸ್ಸು ಮಾಡುವನು. ಹಾಸ್ಟೇಲ್ ಹುಡುಗರನ್ನು ಒಂದು ಸಂಜೆ ಸಾಹೇಬರ ಮನೆಗೆ ಕರೆದುಕೊಂಡು ಬಂದು ಅವರ ಕಣ್ಣುಗಳಲ್ಲಿ ಧನ್ಯತೆಯ ಭಾವ ಮೂಡಿಸಿದ್ದ. ತಮಗೆ ಊಟ ಸಿಕ್ಕರೆ ಸಿಗಲಿ, ಇಲ್ಲದಿದ್ದರೆ ಬಿಡಲಿ ತಾವು ಇಂತಹ ಮನೆ, ಮಾಳಿಗೆ, ಹಿತ್ತಿಲು, ಹೂದೋಟ, ರಂಗೋಲಿ, ಫೋಟೋ ಅಲ್ಬಮ್ ನೋಡಿದ್ದೆ ದೊಡ್ಡ ಪುಣ್ಯವೆಂದು ಆ ಮಕ್ಕಳು ತಮ್ಮ ತಮ್ಮ ಮನೆಗಳಿಗೆ ’ನನ್ನ ಊಟ-ವಸತಿಯ ಬಗ್ಗೆ ಏನು ಕಾಳಜಿ ಮಾಡಬಾರದು. ನಾನಿಲ್ಲಿ ಆರಾಮದಿಂದ ಇದ್ದೇನೆ,’ ಎಂದು ಪತ್ರ ಬರೆದು ಹಾಕಿದ್ದಲ್ಲದೆ ಫೋನು ಮಾಡಿ ಹೇಳಿದ್ದರು. ಇನಸ್ಪೆಕ್ಷನ್‌ಗೆ ದೊಡ್ಡ ಸಾಹೇಬರು ಬಂದಾಗ ಅದನ್ನೆ ಮುತ್ತಿನಂತೆ ಮತ್ತು ಮಾಣಿಕ್ಯದ ದೀಪ್ತಿಯಂತೆ ನುಡಿದು ಶಹಭಾಸ್‌ಗಿರಿ ಪಡೆದಿದ್ದರು.

ಹೀಗೆಯೆ ದಿನಗಳು ಸಾಗಿರುತ್ತಿರಲಾಗಿ ಒಂದು ಮುಂಜಾನೆ ಅಟೆಂಡರ್ ಉಳ್ಳಾಗಡ್ಡಿಯು ದೊಡ್ಡ ಲೋಟದಲ್ಲಿ ಚಹಾ ಕುಡಿಯುತ್ತ ಪೇಪರ್ ಓದುತ್ತಿದ್ದನು. ಯಾರೊ ತನ್ನ ಮುಂದೆ ಬಂದಂತಾಗಿ ತಲೆ ಎತ್ತಿ ನೋಡಲು ಕಲಕೇರಿ ಸಾಹೇಬರ ಆರಡಿ ಎತ್ತರದ ಭವ್ಯ ದಿವ್ಯ ವ್ಯಕ್ತಿತ್ವದ ಪ್ರತಿಮೆ ಕಂಡಂತಾಗಿ, ಗಡಬಡಿಸಿ ಎದ್ದು ’ಬರ್ರಿ ಸಾಯೇಬ್ರ’ ಎಂದು ತೊದಲಿದನು. ಅವರು ಬಂದವರೆ ಅವನ ಕೈಗೆ ಒಂದಷ್ಟು ಕಾರ್ಡುಗಳನ್ನು ಕೊಟ್ಟು ’ಶುಕ್ರವಾರ ದಿನ ನಮ್ಮೂರಿಗೆ ಹೋಗೋಣು. ಎಲ್ಲಾ ತಯಾರಿ ಮಾಡು. ಇವಷ್ಟ ಕಾರ್ಡ್ ಪೋಸ್ಟ್ ಮಾಡು,’ ಎಂದರು. ಹಿಗ್ಗಿ ಹಿರೇಕಾಯಿಯಾದ ಅವನು ಕಾರ್ಡು ತೆರೆದು ನೋಡಿದ. ಸಾಹೇಬರ ಊರಿನಲ್ಲಿ ಸ್ಕಾಲರ್‌ಶಿಪ್ ಹಾಗೂ ಬಹುಮಾನ ವಿತರಣಾ ಸಮಾರಂಭದ ಆಮಂತ್ರಣ ಅದಾಗಿತ್ತು. ಧಾರವಾಡ ವಿಶ್ವವಿದ್ಯಾಲಯದ ಕುಲಪತಿಗಳು ಬಿಜಾಪುರದವರಾಗಿದ್ದರಿಂದ ಅವರನ್ನು ಒತ್ತಾಯ ಮಾಡಿ ಸಾಹೇಬರು ಉದ್ಘಾಟನೆಗೆ ಕರೆದಿದ್ದರು. ಅವರೆ ಸೂಚಿಸಿದ ಇನ್ನೊಂದು ಹೆಸರು ಡಾ.ಆಲೂರು ಅವರದಾಗಿತ್ತು. ಹೀಗಾಗಿ ಉಳ್ಳಾಗಡ್ಡಿಯನ್ನು ಅನಿವಾರ್ಯವಾಗಿ ಕೈ ಬಿಡಬೇಕಾಯಿತು ಎಂದು ಅತ್ಯಂತ ನೋವಿನಲ್ಲಿ ಸಾಹೇಬರು ಹೇಳಿದಾಗ ಉಳ್ಳಾಗಡ್ಡಿಗೂ ಅವರ ಮಾತು ಖರೆ ಇರಬೇಕು ಅನಿಸಿತು. ’ನೀನೂ ಆವತ್ತು ನಾ ಒಲ್ಲೆ ಅಂದೆದ್ದಲ್ಲೊ. ಅದಕ್ಕ ಬ್ಯಾಡ ಬಿಡು ಅನಿಸ್ತು. ಬೇಕಾದ್ರ ಮುಂದ ಯಾವಾಗಾದ್ರೂ ಈ ಹಾಸ್ಟೇಲದಾಗ ಒಂದು ಸಣ್ಣ ಫಂಕ್ಸ್‌ನ್ ಇಟ್ಟುಕೊಂಡರಾಯ್ತು. ನೀ ಏನ ಬ್ಯಾಸರ ಮಾಡ್ಕೋಬ್ಯಾಡ,’ ಎಂದು ಸಾಹೇಬರು ಮುಂದಿನ ಕೆಲಸ ಕಾರ್ಯಗಳಿಗೆ ಅನುವಾದರು. ಉಳ್ಳಾಗಡ್ಡಿ ಕುಡಿಯುತ್ತಿದ್ದ ಚಹಾದಲ್ಲಿ ಅವನಿಗರಿವಿಲ್ಲದಂತೆ ಬಿದ್ದ ಕಣ್ಣೀರಿನ ಹನಿ ಚಹಾವನ್ನು ಮತ್ತಷ್ಟು ಆರಿಸಿತು.

* * *

ಎಂದಾದರೊಂದು ದಿನ ತಾನು ಗೆಸ್ಟ್ ಆಗೇ ಆಗುತ್ತೇನೆಂದು ಇನ್ನೂ ಆಸೆ ಇಟ್ಟುಕೊಂಡಿದ್ದ ಉಳ್ಳಾಗಡ್ಡಿಯು ಯಾವಾಗ ಹಾಸ್ಟೇಲಿನ ಭೀಕರ ಚಿತ್ರಣ ಬಯಲಿಗೆ ಬಂದಿತೊ ಆಗ ಅವನ ಅದಮ್ಯ ಆಸೆ ಕಮರಿ ಹೋಯಿತು. ಕಲಕೇರಿ ಸಾಹೇಬರಿಗೆ ಉಗಿದು ಬರೆದಿದ್ದ ಪತ್ರಿಕೆಗಳ ವಿಷಯದ ಕಡೆಗೆ ಅವನ ಗಮನವಿರಲಿಲ್ಲ. ಈ ಕೇಸಿನಲ್ಲಿ ಸಾಹೇಬರಿಗಾಗಲಿ, ತನಗಾಗಲಿ, ಅಡುಗೆಭಟ್ಟನಿಗಾಗಲಿ ಅಥವಾ ಇನ್ನಿತರ ಸಂಬಂಧಪಟ್ಟ ಮಂದಿಗಾಗಲಿ ಶಿಕ್ಷೆ ಆಗುವ ಬಗ್ಗೆ ತಲೆ ಕೆಡಿಸಿಕೊಳ್ಳದ ಅವನು ತನ್ನ ಕತೆ ಇನ್ನು ಮುಗಿದಂತೆಯೆ, ಗೆಸ್ಟ್ ಆಗುವುದು ಅಸಾಧ್ಯ ಎಂದು ಕುಗ್ಗಿ ಹೋದನು. ಇತ್ತ ಪತ್ರಿಕೆ-ಟಿ.ವಿ.ಗಳಲ್ಲಿ ಇದು ವರದಿಯಾಗಬೇಕಾದರೆ, ಉಳ್ಳಾಗಡ್ಡಿಯ ಕೈವಾಡ ಇರಬೇಕೇನೊ ಆಲೂರನು ಸೇಡು ತೀರಿಸಿಕೊಂಡನೇನೋ ಎಂದು ಕಲಕೇರಿ ಸಾಹೇಬರು ಚಿಂತಿತರಾದರೂ ಮರುಕ್ಷಣ ದೇವರಿದ್ದಾನೆಂದು ದೇವರ ಖೋಲಿಗೆ ಹೋಗಿ ಕೈ ಮುಗಿದರು. ಮರುದಿನ ಮತ್ತೆ ಪೇಪರನಲ್ಲಿ ಮತ್ತಷ್ಟು ಸುದ್ದಿಯೊಂದಿಗೆ ’ಕಲಕೇರಿ ಅಮಾನತ” ಎಂಬ ಸುದ್ದಿಯ ತುಣುಕನ್ನು ಹೆಂಡತಿ ನೋಡಿಯಾಳೆಂದು ಕತ್ತರಿಸುತ್ತಿದ್ದರು. ’ಅದನ್ನ್ಯಾಕ ಕಟ್ ಮಾಡ್ತೀರಿ ಬಿಡ್ರಿ. ಟಿ.ವಿ.ಯೊಳಗೆ ನಿಮ್ಮ ಕ್ಲೋಸ್ ಆಪ್ ಫೋಟೋ ತೋರಿಸ್ಲಿಕ್ಕೆ ಹತ್ತ್ಯಾರ, ನಾವು ಮಕ ಎತ್ಕೊಂಡು ಅಡ್ಡಾಡಲಾರದಂಗ ಮಾಡ್ತೀರಿ,’ ಎಂದು ಹೆಂಡತಿ ಟಿ.ವಿ.ಯನ್ನ ಆಫ್ ಮಾಡಿ ಅಲ್ಲಿಯೆ ಸೋಫಾ ಮೇಲೆ ಚಾದರ ಹೊದ್ದುಕೊಂಡು ಮಲಗಿದರು.

* * *

ಕಲಕೇರಿಯವರ ಮಗ ಸಾಫ್ಟವೇರ್ ಇಂಜಿನಿಯರ್ ಎಂದು ಅಮೇರಿಕಾಕ್ಕೆ ವಿಮಾನ ಹತ್ತಿದ ದಿನ ಡಾ. ಆಲೂರರ ಮಗ ನಿಖಿಲ್ ಅಮೇರಿಕಾದ ಸಾಫ್ಟ್‌ವೇರ್ ನೌಕರಿಯಿಂದ ಬೇಸತ್ತು ಬೆಂಗಳೂರಿಗೆ ಬಂದಿಳಿದಿದ್ದ. ಇಂಡಿಯಾ ಟ್ರಾನ್ಸಫಾರ್ಮೇಶನ್ ಗ್ರೂಪ್ ಎಂಬ ಸಂಸ್ಥೆಯನ್ನು ತನ್ನ ಸ್ನೇಹಿತರೊಂದಿಗೆ ಹುಟ್ಟು ಹಾಕಿ ಸರಕಾರಿ ಕೆಲಸಗಳನ್ನು ಔಟ್ ಸೋರ್ಸೀಂಗ್ ಮಾಡಿ ಕೊಡುವಲ್ಲಿ ಆಗಲೆ ಹೆಸರು ಗಳಿಸಿದ್ದ. ಸರಕಾರದ ಕೈಯಿಂದ ಆಗದ ಕೆಲಸವನ್ನು ಕೇವಲ ನಾಲ್ಕೈದು ಮಂದಿ ತಂತ್ರಜ್ಞರ ಗುಂಪು ಮಾಡಿ ತೋರಿಸುತ್ತಿತ್ತು. ಪಾವರ್ ಪಾಯಿಂಟ್ ಪ್ರಸೆಂಟೇಶನ್ ಮಾಡಿ ತಮ್ಮ ಸಂಸ್ಥೆ ಹೇಗೆ ಕೆಲಸ ಮಾಡುತ್ತಿದೆ, ಹೇಗೆ ಸರಕಾರದಲ್ಲಿ ಎಷ್ಟೊಂದು ಮಂದಿ ಅನವಶ್ಯಕವಾಗಿ ತುಂಬಿಕೊಂಡಿದ್ದಾರೆಂದು ಬಿಡಿಸಿ ಹೇಳಿದಾಗ ನೌಕರರಿಗೆಂದು ದುಡ್ಡು ಎಷ್ಟೊಂದು ಅನವಶ್ಯಕವಾಗಿ ಪೋಲಾಗುತ್ತಿದೆ ಎಂದು ಸರಕಾರ ಚಿಂತಿಸುತ್ತಿತ್ತು. ದಿನದ ಇಪ್ಪತ್ನಾಲ್ಕು ಗಂಟೆ ಎಚ್ಚರಿರುವ ನಿಖಿಲ್ ಮತ್ತು ಅವರ ಗೆಳೆಯರು ಇಂತಹ ಅವ್ಯವಸ್ಥೆ ಕಂಡ ಕೂಡಲೆ ಅದಕ್ಕೆ ಸೂಕ್ತ ಪರಿಹಾರದ ಯೋಜನೆಯನ್ನು ಸರ್ಕಾರಕ್ಕೆ ಇಮೇಲ್ ಮೂಲಕ ರವಾನಿಸುತ್ತಿದ್ದರು. ಅವರ ಯೋಜನೆಯನ್ನು ಮೆಚ್ಚಿಕೊಂಡು ದೇಶ ವಿದೇಶದ ಮಂದಿ ಫೇಸ್‌ಬುಕ್, ಯುಟ್ಯೂಬ್, ಟ್ವೀಟ್‌ಗಳಲ್ಲಿ ಸಂದೇಶ ರವಾನಿಸುತ್ತಿದ್ದರು.

ಧಾರವಾಡ ಹಳಿಯಾಳ ರಸ್ತೆಯ ಹಾಸ್ಟೆಲಿನ ವಿವರಗಳು ಸರ್ಕಾರದ ಮಾನವನ್ನು ಹರಾಜು ಹಾಕಿದ್ದರಿಂದ ಮತ್ತು ವಿಧಾನಸಭೆಯಲ್ಲಿ ಈ ಕುರಿತು ಗದ್ದಲ ಆಗಿದ್ದರಿಂದ ಸರ್ಕಾರ ತಾಬಡ ತೋಬಡ ನಾಲ್ಕು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿತ್ತು. ಅಲ್ಲಿದ್ದ ಹುಡುಗರನ್ನು ಸದ್ಯದ ಮಟ್ಟಿಗೆ ಸ್ಥಳೀಯ ಹಾಸ್ಟೆಲ್‌ಗಳಲ್ಲಿ ಹರಿದು ಹಂಚಿ ಊಟ-ವಸತಿಗೆ ಏರ್ಪಾಡು ಮಾಡಿತು. ರಾಜ್ಯದ ಎಲ್ಲ ಹಾಸ್ಟೆಲ್‌ಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಒಂದು ಸಮಿತಿ ರಚನೆ ಮಾಡಿ ಅದಕ್ಕೆ ತತ್ವಶಾಸ್ತ್ರದ ಶ್ರೇಷ್ಠ ಉಪನ್ಯಾಸಕರಾಗಿದ್ದ ಡಾ. ಆಲೂರರನ್ನು ಅಧ್ಯಕ್ಷರನ್ನಾಗಿ ಮಾಡಿತು. ದೆವ್ವಿನಂತಹ ಮನೆಯಲ್ಲಿ ಒಬ್ಬನೆ ವಾಸಿಸುತ್ತಿರುವ ಆಲೂರ ಸಹಬಾಳ್ವೆಯ ಪ್ರತೀಕವಾಗಿರುವ ಹಾಸ್ಟೆಲಿನ ಬಗ್ಗೆ ಇನ್ನಾವ ರೀತಿಯ ವರದಿ ಕೊಟ್ಟಾನು ಎಂದು ಕಲಕೇರಿ ಕಿಡಿಕಿಡಿಯಾದ. ಆಲೂರ ಕೊಡುವ ವರದಿಯ ಮೇಲೆ ಕಲಕೇರಿ ಮತ್ತಿತರರ ಭವಿಷ್ಯ ನಿರ್ಧಾರ ಆಗಬೇಕಿತ್ತು. ಹಿಂದೆ ಆಲೂರರನ್ನು ಗೆಸ್ಟ್ ಆಗಿ ಕರೆದುಕೊಂಡ ಹೋದ ಪರಿಚಯದಿಂದಾಗಿ ಅವರು ತನ್ನ ವಿರುದ್ಧ ಏನೂ ಬರೆಯಲಿಕ್ಕಿಲ್ಲವೆಂದು ಕಲಕೇರಿ ಸಾಹೇಬರು ಭಾವಿಸಿದ್ದರಾದರೂ ಹಿಂದಿನ ಘಟನೆಯನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ವೈಸ್ ಛಾನ್ಸೆಲರರ ಒತ್ತಾಯದ ಮೇರೆಗೆ ಅವರನ್ನು ಕರೆಯಲು ಹೋಗಿದ್ದ ಕಲಕೇರಿಯನ್ನು ಆಲೂರರು ಮನೆಯ ಒಳಗೆ ಕರೆಯದೆ ಗೇಟಿನಲ್ಲಿ ಮಾತನಾಡಿಸಿ ಸಾಗ ಹಾಕಿದ್ದ ಅಮಾನವೀಯ ಹಾಗೂ ಅವಮಾನದ ಪ್ರಸಂಗವನ್ನು ಕಲಕೇರಿಯವರು ಮರೆತಿರಲಿಲ್ಲ. ಅದಕ್ಕೆ ಪ್ರತೀಕಾರವೆಂಬಂತೆ ಆಲೂರರ ಮನೆಯ ಕಾಂಪೌಂಡಿನ ಹತ್ತಿರ ಒಂದು ಡಬ್ಬಿ ಕಾಂಡೋಮ್‌ಗಳನ್ನು ಉಳ್ಳಾಗಡ್ಡಿಯಿಂದ ರಾತ್ರಿ ಒಗೆಸಿದ್ದರು. ಮಂದಿ ತಮ್ಮನ್ನು ಬಹಳ ಹೊತ್ತಿನ ತನಕ ನೋಡುವುದು, ಮುಸಿಮುಸಿ ನಗುವುದು ಮಾಡುತ್ತಿದ್ದಾರೆಂದರೆ ಈ ಕಂಡೋಮ್‌ಗಳನ್ನು ಅವರು ನೋಡಿರಲೆಬೇಕು ಎಂದು ಆಲೂರರು ವ್ಯಗ್ರರಾಗಿ ಹಗಲು ರಾತ್ರಿ ಹೊರಗೆ ಬಂದು ಮನೆ ಮತ್ತು ಕಂಪೌಂಡ್ ಕಾಯತೊಡಗಿದರು. ಹೆಂಡತಿ ಸತ್ತಿರುವ ಅವರ ಮನೆಯಲ್ಲಿ ಯಾವುದೋ ಹೆಂಗಸೊಂದು ಬಹಳ ದಿನಗಳಿಂದ ಇದ್ದಾಳೆಂದೂ ಅದಕ್ಕಾಗಿಯೆ ಅವರು ಮನೆಯೊಳಗೆ ಯಾರನ್ನೂ ಬಿಟ್ಟುಕೊಡುವದಿಲ್ಲವೆಂದೂ ರಾತ್ರಿ ಮುಲುಕಾಟದ ಶಬ್ದ ಕೇಳುತ್ತಿರತ್ತಿತ್ತೆಂದೂ ಗಾಳಿಸುದ್ದಿಗಳು ಆ ಸರ್ಕಲ್ಲಿನಲ್ಲಿ ಮತ್ತು ವಿನಾಯಕ ಬಾರ್‌ನಲ್ಲಿ ಹರಿದಾಡುತ್ತಿದ್ದವು. ಪಾತ್ರೆ ತಿಕ್ಕುವ ಹೆಂಗಸಿಗೂ ಒಳಗಿರುವ ಹೆಂಗಸಿಗೂ ಒಮ್ಮೆ ದೊಡ್ಡ ಜಗಳವಾಗಿ ಕಂಪೌಂಡ್ ಹೊರಗೆ ಬಂದಿದ್ದರಂತೆ. ಆಲೂರರೆ ಸಮಾಧಾನ ಮಾಡಿ ಒಳಗೆ ಕರೆದೊಯ್ದರಂತೆ. ಇವರಿಗೆ ಪಾಠ ಕಲಿಸಲೆಂದು ಮನೆಗೆಲಸದವಳು ಕೆಲಸಕ್ಕೆ ಚಕ್ಕರ್ ಹೊಡೆದಾಗ ಡಾ.ಆಲೂರರು ಪಾತ್ರೆ ತೊಳೆಯಲು ಹಿಂದೆ ಮುಂದೆ ನೋಡುವುದಿಲ್ಲವಂತೆ ಎನ್ನುವ ಮಾತು ಸುತ್ತಲೂ ಸುಳಿಯುತ್ತಿದ್ದವು.

ಹಾಸ್ಟೆಲ್ ಪ್ರಕರಣ ಇಟ್ಟಕೊಂಡು ಏನೂ ಸಂಬಂಧವಿಲ್ಲದ ತನ್ನ ಜೀವನವನ್ನು ಆಲೂರರು ಹಾಳು ಮಾಡುತ್ತಿದ್ದಾರೆಂದು ಕಲಕೇರಿಯವರು ಹಲ್ಲು ಮಸೆದರೆ, ತನ್ನ ಬಗ್ಗೆ ಗುಪ್ತ ಸುದ್ದಿಗಳು ಹರಡಲು- ರಾಜ್ಯಪಾಲರಿಗೆ ಅನಾಮಧೇಯ ಪತ್ರ ಬರೆದು ಕುಲಪತಿ ಹುದ್ದೆ ತಪ್ಪುವಂತಾಗಲು ಕಲಕೇರಿ ಮತ್ತು ಕಾಣದ ಕೈಗಳೆ ಕಾರಣರಾಗಿದ್ದಾರೆಂದು ಆಲೂರರು ಕಿಡಿ ಕಾರುತ್ತಿದ್ದರು.

* * *

ಸಮಿತಿ ರಚನೆ ಮಾಡಿ ಆರು ತಿಂಗಳು ಕಳೆದರೂ ವರದಿ ತಯಾರಾಗಲಿಲ್ಲ. ಜನ ಶ್ರೀನಗರ ಸರ್ಕಲ್‌ನಲ್ಲಿಯ ಈ ಹಾಸ್ಟೆಲ್‌ನ್ನು ಮರೆತುಬಿಟ್ಟಂತಾಗಿತ್ತು. ಕಲಕೇರಿಯವರು ಧಾರವಾಡ ಸಮೀಪ ಕೊಂಡುಕೊಂಡಿದ್ದ ಹೊಲವನ್ನು ತೋಟ ಮಾಡುವುದರಲ್ಲಿ ನಿರತರಾಗಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಒಂದು ಮಾತು ಅವರು ಹೇಳಿ ಇಟ್ಟಿದ್ದರಿಂದ ನಿರಾಳವಾಗಿದ್ದರು. ಉಳ್ಳಾಗಡ್ಡಿಯು ಆಗಾಗ ಸಾಹೇಬರ ಮನೆಗೆ ಬಂದು ’ಸಾಹೇಬ್ರ, ನಿಮ್ಮನ್ನ ನಂಬೇನ್ರಿ. ನನ್ನ ನೌಕರಿ ಕಳೀಬ್ಯಾಡ್ರಿ, ಉಳಸ್ರಿ,’ ಎಂದು ಹೇಳಿ ಹೋಗುತ್ತಿದ್ದ. ಆಲೂರರು ವರದಿ ಸಿದ್ಧಪಡಿಸುವ ನೆಪದಲ್ಲಿ ನಾಲ್ಕೈದು ಸಲ ಬೆಂಗಳೂರಿಗೆ ಹೋಗಿ ಬಂದರು. ತಮ್ಮ ಆಪ್ತ ಸ್ವಾಮೀಜಿಯನ್ನು ಭೆಟ್ಟಿಯಾದಾಗ ’ನಾವು ಹೇಳಿದ್ದು ಏನು ಮಾಡಿದಿರಿ” ಎಂದು ಕೇಳಿದರು. ’ತಡೀರಿ ಪೂಜ್ಯರೆ, ನಿಮಗ ಅಗದಿ ಖುಶಿ ಆಗುವಂತ ಸುದ್ದಿ ಹೇಳತೇನಿ,’ ಎಂದು ಮಗನಿಗೆ ಫೋನ್ ಹಚ್ಚಲು ಅವನು ಬಂದು ತಮ್ಮ ಸಂಸ್ಥೆ ಧಾರವಾಡದ ಹಾಸ್ಟೆಲ್ ಇದ್ದ ಜಾಗದಲ್ಲಿ ಮಾಡಲು ಉದ್ದೇಶಿಸಿರುವ ಯೋಜನೆಯನ್ನು ವಿವರಿಸಿದನು. ಇದರಿಂದ ತುಂಬ ಸಂತೃಪ್ತರಾದ ಗುರೂಜಿ ’ಭಗವಂತ, ನಿಮಗೆ ಕಲ್ಯಾಣ ಮಾಡಲ” ಎಂದರು. ’

* * *

ಒಂದು ದಿನ ಇದ್ದಕ್ಕಿದ್ದಂತೆ ಶ್ರೀನಗರ ಸರ್ಕಲ್ಲಿನ ಹಾಳು ಬಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಾಸ್ಟೆಲ್‌ನ್ನು ಕೆಡವಿ ಅದರ ಜಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಆಧ್ಯಾತ್ಮ ಕೇಂದ್ರವನ್ನು ಸ್ಥಾಪಿಸುವುದು, ಆಧ್ಯಾತ್ಮ ಕೇಂದ್ರದ ವತಿಯಿಂದ ನೂರು ಉತ್ಕೃಷ್ಟ ಮಟ್ಟದ ರೂಮುಗಳನ್ನು ನಿರ್ಮಾಣ ಮಾಡಿ ಅವುಗಳಲ್ಲಿ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಯ ಅವಕಾಶ ಮಾಡಿಕೊಡುವುದು, ವಿದ್ಯಾರ್ಥಿಗಳು ಯಾವುದೆ ಫೀ ಕೊಡಬೇಕಾಗಿಲ್ಲ, ಬದಲಾಗಿ ಮುಂಜಾನೆ ಹಾಗೂ ಸಂಜೆ ಎರಡು ಹೊತ್ತು ಭಗವಂತನ ಸ್ಮರಣೆಯಲ್ಲಿ ಪಾಲ್ಗೊಂಡು ಭಜನೆ ಹೇಳುವುದು, ದೇವರ ನಾಮವನ್ನು ಕಂಠಪಾಠ ಮಾಡಿ ತಮ್ಮ ಕೆಳಗಿನ ವಿದ್ಯಾರ್ಥಿಗಳಿಗೆ ಹೇಳುತ್ತ ಹೋಗುವುದು, ಆಧ್ಯಾತ್ಮ ಕೇಂದ್ರದ ಸುತ್ತಮುತ್ತಲಿನ ಡಬ್ಬಿ ಅಂಗಡಿಗಳನ್ನು ಕಿತ್ತು ಹಾಕಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡುವುದು. ಐದು ಕಿ.ಮಿ. ನಷ್ಟು ವ್ಯಾಪ್ತಿಯಲ್ಲಿ ಯಾವುದೇ ಮಾಂಸಾಹಾರ ಅಂಗಡಿ ಇಲ್ಲದಂತೆ ನೋಡಿಕೊಳ್ಳುವುದು, ಶುದ್ಧ ಶಾಖಾಹಾರಿ ಉಪಹಾರ ಮಂದಿರವನ್ನು ಆಧ್ಯಾತ್ಮ ಕೇಂದ್ರವೆ ಸ್ಥಾಪಿಸುವುದು, ವಿಶ್ವವಿದ್ಯಾಲಯ, ಶಾಲೆ-ಕಾಲೇಜುಗಳ ಪ್ರಾಧ್ಯಾಪಕರು-ವಿದ್ಯಾರ್ಥಿಗಳು ರಜೆಯ ದಿನಗಳಲ್ಲಿ ಕೇಂದ್ರಕ್ಕೆ ಬಂದು ಸತ್ಸಂಗದಲ್ಲಿ ಪಾಲ್ಗೊಳ್ಳುವುದು-ಇವೇ ಮುಂತಾದ ಶಿಫಾರಸುಗಳನ್ನು ಡಾ.ಆಲೂರ ಅವರ ನೇತೃತ್ವದ ಸಮಿತಿ ಮಾಡಿದ್ದು ದೊಡ್ಡ ಸುದ್ದಿಯಾಯಿತು.

ನಿಖಿಲ್ ನೇತೃತ್ವದ ಇಂಡಿಯಾ ಟ್ರಾನ್ಸ್‌ಫಾರ್ಮೇಶನ್ ಗ್ರೂಪ್ ಬೆಂಗಳೂರಿನ ಗುರೂಜಿಯವರ ಸಹಯೋಗದಲ್ಲಿ ಆಧ್ಯಾತ್ಮ ಕೇಂದ್ರವನ್ನು ಸ್ಥಾಪಿಸಲು ಮುಂದೆ ಬಂದಿತು. ಇದರಲ್ಲಿ ಲಾಭ-ಹಾನಿಯ ಪ್ರಶ್ನೆಯಿರದೆ ಭಾರತವನ್ನು ಮತ್ತೆ ಮೊದಲಿನಂತೆ ಗುರು-ಶಿಷ್ಯ ಪರಂಪರೆಯಲ್ಲಿ ಹಾಗೂ ಆಧ್ಯಾತ್ಮಿಕ ಹಾದಿಯಲ್ಲಿ ಕೊಂಡೊಯ್ಯಬೇಕೆಂಬ ಕಳಕಳಿ ಮಾತ್ರ ಇರುವುದಾಗಿ ವಿಶೇಷ ಸೂಚನೆಯಲ್ಲಿ ಅದು ಹೇಳಿತು. ಕೆಲವು ಹಿತಾಸಕ್ತಿಗಳು ಡಾ.ಆಲೂರರ ನೇತೃತ್ವದಲ್ಲಿ ದೇಶವನ್ನು ಮತ್ತೆ ಹಿಂದಕ್ಕೆ ಒಯ್ಯುತ್ತಿದ್ದಾರೆಂದು, ಬಡವರ ಅನ್ನವನ್ನು ಕಸಿಯುತ್ತಿದ್ದಾರೆಂದು, ಆಹಾರದ ಹಕ್ಕನ್ನು ನುಂಗುತ್ತಿದ್ದಾರೆಂದು, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಮಠದ ಹೆಸರಲ್ಲಿ ನುಂಗಿ ಹಾಕುತ್ತಿದ್ದಾರೆಂದು ಆರೋಪಿಸಿ ಧಾರವಾಡದ ನಾಲ್ಕೈದು ಮಂದಿ ಸ್ಟುಡೆಂಟ್ ಯೂನಿಯನ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಮಠ, ಭಜನೆ, ಆಧ್ಯಾತ್ಮ ಕೇಂದ್ರ ತಪ್ಪಲ್ಲವೆಂದೂ ಗಾಂಧೀಜಿಯಂತಹ ಮಹಾನ ವ್ಯಕ್ತಿಗಳು ಭಜನೆಗಳಿಂದ ಪ್ರೇರಿತರಾಗಿದ್ದರೆಂದೂ ಮತ್ತೊಂದು ವಿದ್ಯಾರ್ಥಿ ಗುಂಪು ಬೀದಿಗಿಳಿಯಿತು. ಮೊದಲಿದ್ದ ಹಾಸ್ಟೆಲ್‌ನ್ನೆ ಮುಂದುವರೆಸಬೇಕೆಂದು ಆಗ್ರಹಿಸುತ್ತಿದ್ದ ಗುಂಪಿನಲ್ಲಿ ಕಾಣಿಸಿಕೊಂಡ ಉಳ್ಳಾಗಡ್ಡಿ ಮೊದಲಿನ ಹುಡುಗರನ್ನು ಹುಡುಕಿಕೊಂಡು ಬಂದು ಚಳವಳಿಗೆ ಬಲ ತುಂಬಿದನು. ’ಆಲೂರನಿಗೆ ಧಿಕ್ಕಾರ’, ’ಹಸಿದವರ ಅನ್ನ ಕಸಿಯುವ ಆಲೂರನಿಗೆ ಧಿಕ್ಕಾ” ಎಂದು ಕೂಗುತ್ತಿದ್ದ ಗುಂಪು ಅವರ ಮನೆಯ ಮುಂದೆ ಬಂದು ದೊಡ್ಡದಾಗಿ ಕೂಗಲು ಡಾ. ಆಲೂರ ದಢಾರನೆ ಬಾಗಿಲು ಮುಚ್ಚಿಕೊಂಡರು.