Monthly Archives: October 2012

ದೇಶದ ಉನ್ನತ ಶಿಕ್ಷಣವೂ.. ರಾಷ್ಟ್ರಪತಿಗಳ ಕಳವಳವೂ..


-ಡಾ.ಎಸ್.ಬಿ. ಜೋಗುರ


ಉನ್ನತ ಶಿಕ್ಷಣದಲ್ಲಿ ಅನೇಕ ಬಗೆಯ ತೊಡಕುಗಳಿವೆ. ಅವುಗಳಲ್ಲಿ ಅತಿ ಹೆಚ್ಚು ವ್ಯಾಪಕವಾಗಿ ಚರ್ಚೆಯಾಗುವ ಸಂಗತಿ ಗುಣಮಟ್ಟಕ್ಕೆ ಸಂಬಂಧಿಸಿದ್ದಾಗಿದೆ. ಕಲಿಯುವ ಮತ್ತು ಕಲಿಸುವವರ ಆಕಾಂಕ್ಷೆ ಮತ್ತು ನಿರೀಕ್ಷೆಗಳನ್ನು ಕೈಗೂಡಿಸುವ ಸಮರ್ಥತೆಯನ್ನೇ ಉನ್ನತ ಶಿಕ್ಷಣದ ವಲಯದಲ್ಲಿ ಗುಣಮಟ್ಟ ಎಂದು ಕರೆಯಲಾಗುವುದು. ಇಂಥಾ ಗುಣಮಟ್ಟದ ಕೊರತೆಯ ಬಗ್ಗೆ ಆಗಾಗ ಶೈಕ್ಷಣಿಕ ಪರಿಸರದಲ್ಲಿಯ ತಜ್ಞರು, ಯೋಜಕರು ಧ್ವನಿ ಎತ್ತುವುದಿದೆ. ವಿಶ್ವದ ನಂ 1 ವಿಶ್ವವಿದ್ಯಾಲಯ ಎಂದು ಗುರುತಿಸಿಕೊಂಡಿರುವ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರತಿಯೊಬ್ಬ ಅಧ್ಯಾಪಕ ಜಾಗತಿಕ ವಲಯದಲ್ಲಿ ಚರ್ಚೆಯಾಗಬಹುದಾದ ಸಂಶೋಧನೆ, ಗ್ರಂಥ ರಚನೆಯಲ್ಲಿ ತೊಡಗುವುದಿದೆ. ದೈಹಿಕವಾಗಿ ತೀರಾ ದುರ್ಬಲರಾಗಿದ್ದು, ಮಾಯೋ ಲ್ಯಾಟರಲ್ ಕ್ಲಿರೋಸಿಸ್ ಎನ್ನುವ ರೋಗದಿಂದ ಬಳಲುತ್ತಿದ್ದರೂ ಐನಸ್ಟೀನ್ ನಂತರದ ಸ್ಥಾನವನ್ನು ಗಿಟ್ಟಿಸಿಕೊಂಡ ಸ್ಟೆಫೆನ್ ಹಾಕಿಂಗ್ ರಂಥಾ ಪ್ರಾಧ್ಯಾಪಕರಿದ್ದದ್ದು ಈ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿಯೆ. ಹಾಗೆಯೆ ‘ಸಿವಿಲೈಜೇಶನ್’ ಎನ್ನುವ ಅದ್ಭುತ ಕೃತಿಯನ್ನು ರಚಿಸಿದ ನೀಲ್ ಪರ್ಗ್ಯುಸನ್‌ರಂಥಾ ಅಧ್ಯಾಪಕರಿದ್ದದ್ದು ಈ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿಯೆ.

ಭಾರತದ ವಿಶ್ವವಿದ್ಯಾಲಯಗಳಿಗೆ ಬಂದರೆ ಹಾಗೆ ಇಂಥಾ ಧೀಮಂತರು ಇದ್ದದ್ದು ಇದೇ ವಿಶ್ವವಿದ್ಯಾಲಯದಲ್ಲಿ ಎಂದು ಹೊರಗಿನ ರಾಷ್ಟ್ರಗಳು ಗುರುತಿಸಬಹುದಾದ ಪ್ರತಿಭೆಗಳ ಕೊರತೆ ಈಗ ಎದ್ದು ಕಾಣುತ್ತದೆ. ಹಾಗಾಗಿಯೆ ಇಡೀ ವಿಶ್ವದ 150 ವಿಶ್ವವಿದ್ಯಾನಿಲಯಗಳ ಸಾಲಲ್ಲಿ ನಮ್ಮ ದೇಶದ ಒಂದೇ ಒಂದು ವಿಶ್ವವಿದ್ಯಾನಿಲಯ ಇಲ್ಲದಿರುವುದು ಒಂದು ವಿಷಾದ. ತೀರಾ ಇತ್ತೀಚಿಗೆ ನಮ್ಮ ರಾಷ್ಟ್ರಪತಿಗಳಾದ ಪ್ರಣವ್ ಮುಖರ್ಜಿ ಅವರು ಪಶ್ಚಿಮಬಂಗಾಲದ  ಐ.ಐ.ಟಿ. ಘಟಿಕೋತ್ಸವದಲ್ಲಿ ಮಾತನಾಡುವಾಗ ನಮ್ಮ ದೇಶದ ಉನ್ನತ ಶಿಕ್ಷಣವನ್ನು ನೆನೆದು ಕಳವಳವನ್ನು ವ್ಯಕ್ತಪಡಿಸಿರುವುದಿದೆ. ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳಲ್ಲಿ ಸಾಧ್ಯವಿಲ್ಲದಿದ್ದರೆ ಹೋಗಲಿ, ಕಡೆಯ ಪಕ್ಷ 50 ಇಲ್ಲವೇ 100 ರಲ್ಲಿ ಒಂದಾದರೂ ಸ್ಥಾನ ಬೇಡವೇ? ಎಂದು ಖೇದವನ್ನು ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಎನ್ನುವುದು ನಮ್ಮಲ್ಲಿ ಕೇವಲ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನ ಹೊರಗಣ ಅನುಕರಣೆಯಾಗುತ್ತಿದೆಯೆ ಹೊರತು ಒಳಗಣ ಅನುಕರಣೆಯಾಗುತ್ತಿಲ್ಲ. ಹಾಗಾಗಿಯೆ ನಾವು ಕೇವಲ ನ್ಯಾಕ್ ಭೇಟಿಯ ಸಂದರ್ಭದಲ್ಲಿ ಸಜ್ಜಾಗುವ ಪಡೆಯಾಗುತ್ತಿದ್ದೇವೆ ಹೊರತು ಜಾಗತಿಕ ಮಟ್ಟದಲ್ಲಿ ಸಲ್ಲುವಂಥಾ ವಿದ್ಯಾರ್ಥಿ ಸಮೂಹವನ್ನು, ಅಧ್ಯಾಪಕರನ್ನು ರೂಪಿಸುವಲ್ಲಿ ವಿಫಲರಾಗುತ್ತಿದ್ದೇವೆ. ಅಧ್ಯಾಪಕರಿಗೆ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ ಸಾಕಷ್ಟು ಸಂಬಳವನ್ನು ನೀಡಿದೆಯಾದರೂ ಉನ್ನತ ಶಿಕ್ಷಣದ ಆಂತರಿಕ ಬೆಳವಣಿಗೆಗೆ ಪೂರಕವಾದ ಪರಿಸರವನ್ನು ರೂಪಿಸುವಲ್ಲಿ ಮಾತ್ರ ಅದು ಹಿಂದೆ ಬಿದ್ದಿದೆ. ಪರಿಣಾಮವಾಗಿ ಅತ್ಯಂತ ಸಮರ್ಥ ಅದ್ಯಾಪಕರನ್ನು ಹಾಗೂ ವಿದ್ಯಾರ್ಥಿ ಸಮುದಾಯವನ್ನು ರೂಪಿಸುವ ಶಕ್ತಿಯಾಗಿ ಉನ್ನತ ಶಿಕ್ಷಣ ಹೊರಹೊಮ್ಮುತ್ತಿಲ್ಲ. ಇನ್ನು ಇರುವ ಧೋರಣೆಗಳಲ್ಲಿಯ ತಾರ್ಕಿಕತೆಯನ್ನು ಕುರಿತು ಯೋಚಿಸಿದರೆ ಹಂಡಬಂಡ ಹಳವಂಡಗಳ ಬಗ್ಗೆ ತಿಳಿಯುತ್ತದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಹಂತದಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಅಧ್ಯಾಪಕರು, ಸಹ ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ಎನ್ನುವ ಹುದ್ದೆಗಳನ್ನೇ ನೋಡಿ. ಅವರ ಕಾರ್ಯತತ್ಪರತೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಯು.ಜಿ.ಸಿ. ಅತಿ ಮುಖ್ಯವಾಗಿ ಪ್ರತಿಯೊಬ್ಬ ಅಧ್ಯಾಪಕ ಬೋಧನೆಯ ಜೊತೆಗೆ ತಾನು ತನ್ನ ವಿಷಯದಲ್ಲಿ ಪ್ರತಿ ತಿಂಗಳು ಓದಿದ ಗ್ರಂಥಗಳ ಪಟ್ಟಿ ಮತ್ತು ಸಾರಾಂಶವನ್ನು ಬರೆದು ನೇರವಾಗಿ ಯು.ಜಿ.ಸಿ.ಗೆ ಕಳುಹಿಸುವ ಪ್ರಕ್ರಿಯೆಯನ್ನು ನಿಗದಿಪಡಿಸಬೇಕಿತ್ತು.

ಹಾಗೆಯೆ ತನ್ನ ವಿಷಯದಲ್ಲಾದ ಹೊಸ ಸಂಶೋಧನೆ, ಬರವಣಿಗೆಯ ಬಗ್ಗೆಯೂ ನಿಯಮಿತವಾಗಿ ಯು.ಜಿ.ಸಿ.ಗೆ ಮಾಹಿತಿ ಸಲ್ಲಿಸುವಂತಿರಬೇಕು. ಒಬ್ಬ ಅಧ್ಯಾಪಕನ ಅಕಾಡೆಮಿಕ್ ಸಾಧನೆಗಳನ್ನು ಪರಿಗಣಿಸಿ ಬಡ್ತಿ ನೀಡಬೇಕೇ ಹೊರತು ಹೋಲ್‌ಸೇಲ್ ವ್ಯಾಪಾರದ ಹಾಗೆ ಆ ಕ್ರಿಯೆ ನಡೆಯಬಾರದು. ಅಧ್ಯಾಪಕನೊಬ್ಬ ನಮ್ಮಂಥಾ ರಾಷ್ಟ್ರಗಳಲ್ಲಿ ಕ್ಲರ್ಕ್ ಕಂ ಟೈಪಿಸ್ಟ್ ಕಂ ಅಟೆಂಡರ್ ಆಗಿಯೂ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿಯ ನಡುವೆ ಅವನಲ್ಲಿಯ ಅಕಾಡೆಮಿಕ್ ಸತ್ವ ಮತ್ತು ಶಕ್ತಿಯ ಸದ್ವಿನಿಯೋಗ ಆಗುವದಾದರೂ ಹೇಗೆ? ಓದು-ಬರಹಗಳೇ ಅಪರೂಪವಾದಂತಿರುವ ಪರಿಸರದ ನಡುವೆ ಅದು ಹೇಗೆ ಜಾಗತಿಕ ಮಟ್ಟದಲ್ಲಿ ನಾವು ಸ್ಥಾನ ಗಿಟ್ಟಿಸಲು ಸಾಧ್ಯ? ಅಧ್ಯಾಪಕನೊಬ್ಬ ಶಿಸ್ತಿನ ವಿದ್ಯಾರ್ಥಿಯಾಗದ ಹೊರತು ಒಳ್ಳೆಯ ಅಧ್ಯಾಪಕನಾಗಲಾರ. ಆಳವಾದ ಅಧ್ಯಯನವಿಲ್ಲದಿದ್ದರೆ ಸರಿಯಾದ ಸಂಶೋಧನೆಯೂ ಸಾಧ್ಯವಿಲ್ಲ. ಸಮರ್ಪಕವಾದ ಬೋಧನೆಯೂ ಇಲ್ಲ. ಸೆಮೆಸ್ಟರ್ ಸಂದರ್ಭದಲ್ಲಂತೂ ಪ್ರತಿ ದಿನವೂ ಮೌಲಿಕ ಎನ್ನುವಂತಿರುವಾಗ ಕಾಲೇಜುಗಳು ಬರೀ ಕ್ಲೆರಿಕಲ್ ದರ್ಜೆ ಚಟುವಟಿಕೆಗಳ ಆಗರಗಳಾಗುತ್ತಿವೆ. ಸತತ ಅಧ್ಯಯನ, ಸಂಶೋಧನೆ, ಚರ್ಚೆಗಳಲ್ಲಿ ತೊಡಗುವ ವಿದೇಶಿ ಶಿಕ್ಷಣ ಸಂಸ್ಥೆಗಳ ಪರಿಸರವೆಲ್ಲಿ? ಅಧ್ಯಾಪಕನೊಬ್ಬ ವಾರಗಟ್ಟಲೆ ಪರೀಕ್ಷೆಯ ಓ.ಎಮ್.ಆರ್. ತುಂಬಿಸುವ, ಹಾಳು ಹರಟೆ, ನಿಷ್ಪ್ರಯೋಜಕ ಮಾತುಗಳು, ಉಳಿಕೆ ಗಳಿಕೆಯ ಚರ್ಚೆಗಳೇ ತುಂಬಿರುವ ನಮ್ಮ ಪರಿಸರವೆಲ್ಲಿ? ವಿಶ್ವ ವಿದ್ಯಾನಿಲಯದ ಧನಸಹಾಯ ಆಯೋಗ ಜಾಗತಿಕ ಮಾರುಕಟ್ಟೆಯಲ್ಲಿ ನಾವೂ ಸಲ್ಲಬೇಕು ಎನ್ನುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಹಣವನ್ನು ಈ ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಅಧ್ಯಾಪಕನ ಮೇಲೆ ತೊಡಗಿಸುತ್ತಿದೆ. ಆದರೆ ಯು.ಜಿ.ಸಿ.ಯ ನಿರೀಕ್ಷೆಯಂತೆ ಶಿಕ್ಷಣ ಸಾಕಾರಗೊಳ್ಳುತ್ತಿಲ್ಲ.

ಅನೇಕ ಬಗೆಯ ಕೊರತೆಗಳ ನಡುವೆಯು ಅಚ್ಚರಿ ಎನಿಸಬಹುದಾದ ರೀತಿಯ ಫಲಿತಾಂಶವನ್ನು ನೀಡಿದ ಶಿಕ್ಷಣ ಸಂಸ್ಥೆಗಳೂ ನಮ್ಮಲ್ಲಿವೆ. ಅದಷ್ಟೇ ಸಾಲದು. ನಮ್ಮ ಪಠ್ಯಕ್ರಮದಲ್ಲಿ ಅಮೂಲಾಗ್ರವಾದ ಬದಲಾವಣೆಗಳಾಗಬೇಕು. ನಮ್ಮ ಅಧ್ಯಾಪಕರಾದವರು ತಮ್ಮ ತಮ್ಮ ವಿಷಯಗಳಲ್ಲಿ ಪ್ರಭುತ್ವವನ್ನು ಸಾಧಿಸಿದವರಾಗಿ ಒಂದು ನಡೆದಾಡುವ ವಿಶ್ವಕೋಶದಂತಾಗಬೇಕು. ಅಧ್ಯಾಪಕರ ಅಧ್ಯಯನ, ಸಂಶೋಧನೆ, ಬೋಧನೆಯಂಥಾ ಕಾರ್ಯಗಳ ನಡುವೆ ಆಡಳಿತದ ಕಿರಿಕಿರಿಗಳು ನುಸುಳಬಾರದು. ವಿಶ್ವದ ಯಾವುದೇ ವಿಶ್ವವಿದ್ಯಾಲಯಗಳ ಅಧ್ಯಾಪಕರಿಗೆ ತಾವು ಕಡಿಮೆಯಿಲ್ಲ ಎನ್ನುವ ಆತ್ಮವಿಶ್ವಾಸ ಮೂಡುವ ಹಾಗೆ ನಮ್ಮ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಅಧ್ಯಾಪಕರು ರೂಪಗೊಳ್ಳುವ ಅವಶ್ಯಕತೆಯಿದೆ. ಯು.ಜಿ.ಸಿ ತನ್ನ 11 ನೇ ಯೋಜನೆಯಲ್ಲಿ ಉನ್ನತಶಿಕ್ಷಣದಲ್ಲಿ ಅನೇಕ ಮಹತ್ತರವಾದ ಬದಲಾವಣೆಗಳನ್ನು ತರುವ ಗುರಿ ಹೊಂದಿದೆ. ಆ ಗುರಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣದಲ್ಲಿ ಹೆಚ್ಚಳವಾಗಿರುವದನ್ನು ಹೊರತುಪಡಿಸಿದರೆ ಬೇರಾವ ಮಹತ್ತರ ಬದಲಾವಣೆಗಳೂ ಅಲ್ಲಿ ಕಾಣುವುದಿಲ್ಲ.

ಅನೇಕರು ಯು.ಜಿ.ಸಿ.ಅಧ್ಯಾಪಕರಿಗೆ ಕೊಡುವ ಸಂಬಳವನ್ನು ನೆನೆದು ಸಿಡಿಮಿಡಿಗೊಳ್ಳುವುದಿದೆ. ಅದಕ್ಕೆ ಕಾರಣವೂ ಇದೆ. ಒಬ್ಬ ಅಧ್ಯಾಪಕನಿಗೆ ಅಷ್ಟು ಸಂಬಳ ನೀಡಿದ ಮೇಲೆ ಅವನ ಜ್ಞಾನ, ಸಾಮರ್ಥ್ಯ ಮತ್ತು ಪಾಠ ಮಾಡುವ ರೀತಿ ಆತ ಪಡೆಯುವ ಸಂಬಳಕ್ಕೆ ತಕ್ಕಂತಿರಬೇಕು ಎನ್ನುವ ಸಮಾಜದ ನಿರೀಕ್ಷೆ ಸಹಜವೇ. ಆ ನಿರೀಕ್ಷೆಗೆ ತಕ್ಕವರಾಗಿ ಅಧ್ಯಾಪಕರು ನಿಲ್ಲದಿದ್ದಾಗ ಸಹಜವಾಗಿ ಸಮಾಜ ಸಿಡಿಮಿಡಿಗೊಳ್ಳುತ್ತದೆ. ಅದೇ ವೇಳೆಗೆ ಅಧ್ಯಾಪಕನೊಬ್ಬನಿಗೆ ಆ ದಿಶೆಯಲ್ಲಿ ಪೂರಕವಾದ ಪರಿಸರವನ್ನು ರೂಪಿಸಿ ಕೊಡಬೇಕಾದುದು ಕೂಡಾ ಅಷ್ಟೇ ಮುಖ್ಯ. ಓದಲು, ಬರೆಯಲು, ಸಂಶೋಧನೆಯಲ್ಲಿ ತೊಡಗಲು ಅಲರ್ಜಿಯಾಗುವ ವಾತಾವರಣ ಇಲ್ಲವೇ ಕಿರಿಕಿರಿಗಳನ್ನು ತಂದಿಟ್ಟರೆ ಆತ ನೆಮ್ಮದಿಯಿಂದ ಪಾಠ ಮಾಡುವದಾದರೂ ಹೇಗೆ? ಉನ್ನತ ಶಿಕ್ಷಣದ ಮೂಲ ಆಶಯಕ್ಕೆ ಧಕ್ಕೆ ಬರಬಹುದಾದ ಎಲ್ಲ ಸಂಗತಿಗಳನ್ನು ಬದಿಗಿಟ್ಟು ಅತ್ಯಂತ ನಿಷ್ಠೆಯಿಂದ ಅಧ್ಯಯನ, ಬೋಧನೆ, ಸಂಶೋಧನೆ, ಬರವಣಿಗೆಗಳ ಮೂಲಕ ಒಂದು ಅತ್ಯಂತ ಜಾಗೃತವಾದ ಸಮಾಜವನ್ನು ಕಟ್ಟಿಕೊಡುವಲ್ಲಿ ಅಧ್ಯಾಪಕರು ಮುಂದಾಗಬೇಕು.

“ವರ್ತಮಾನ”ದ ಓದುಗರ ಮತ್ತು ಆತ್ಮೀಯರ ಅವಗಾಹನೆಗೆ…

ಆತ್ಮೀಯರೇ,

ನಾನು ಅಮೆರಿಕದಿಂದ ವಾಪಸಾಗಿ ಸುಮಾರು ಎರಡು ವರ್ಷ ಆಗುತ್ತ ಬಂತು. ಈ ಮಧ್ಯೆ ರಾಜ್ಯದ ಹಲವು ಭಾಗಗಳನ್ನು ಹಲವು ಬಾರಿ ಸುತ್ತಿದ್ದೇನೆ. ಅನೇಕ ಪ್ರಗತಿಪರ ಲೇಖಕರ ಜೊತೆ ಒಡನಾಡಿದ್ದೇನೆ. ಮತ್ತು ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸಿದ್ದೇನೆ.

ಇನ್ನೇನು ಆರೇಳು ತಿಂಗಳಿನಲ್ಲಿ ರಾಜ್ಯದ ವಿಧಾನಸಭೆಗೆ ಚುನಾವಣೆ ಬರಲಿದೆ. ಇದು ಈ ವರ್ಷದ ಕೊನೆಗೇ ಆಗಬಹುದು ಎಂದು ಈ ವರ್ಷದ ಆರಂಭದಲ್ಲಿ ಬರೆದ ಲೇಖನದಲ್ಲಿ ಊಹಿಸಿದ್ದೆ. ಆದರೆ, ಯಾವ ಪಕ್ಷದ ಶಾಸಕರೂ, ಅದರಲ್ಲೂ ಆಡಳಿತಾರೂಢ ಬಿಜೆಪಿಯ ಶಾಸಕರು, ಇರುವ ಅಧಿಕಾರಾವಧಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲ. ಚುನಾವಣೆ ಬಹುಶ: ಏಪ್ರಿಲ್-ಮೇನಲ್ಲಿ ನಡೆಯುವ ಸಾಧ್ಯತೆಯೇ ಹೆಚ್ಚಿದೆ ಈಗ. ಆದರೆ ಅಲ್ಲಿಯವರೆಗೂ ಈ ಸರ್ಕಾರವೇ ಇರುತ್ತದೆಯೇ, ಇಲ್ಲವೇ ರಾಷ್ಟ್ರಪತಿ ಆಡಳಿತ ಬರುತ್ತದೆಯೇ ಎನ್ನುವುದನ್ನು ಹೇಳಲಾಗುತ್ತಿಲ್ಲ.

ಕಳೆದ ವಿಧಾನಸಭಾ ಚುನಾವಣೆ ಘೋಷಣೆ ಆದಾಗ ನಡೆದ ಕೀಳು ರಾಜಕೀಯ ಪ್ರಸಂಗಗಳು, ರಾಜಕಾರಣಿಗಳು, ಮತ್ತು ಆ ಹಿಂದಿನ ಸರ್ಕಾರಗಳ ಭ್ರಷ್ಟಾಚಾರ ನನ್ನ ಮನಸ್ಸನ್ನು ತೀರಾ ಪ್ರಕ್ಷುಬ್ಧಗೊಳಿಸಿದ್ದವು. ಎಲ್ಲಾ ತರಹದ ಜನ ರಾಜಕೀಯಕ್ಕೆ ನುಗ್ಗುತ್ತಿದ್ದರು. ಗಣಿಯಲ್ಲಿ ಅಕ್ರಮವಾಗಿ ಸಂಪಾದಿಸಿದ ದುಡ್ಡು ರಾಜಕೀಯವನ್ನು ನಿಯಂತ್ರಿಸುತ್ತಿತ್ತು. ರಿಯಲ್ ಎಸ್ಟೇಟ್ ಮಾಫಿಯಾದ ದೊಡ್ಡ ಕುಳಗಳು ಅಭ್ಯರ್ಥಿಗಳಾಗುತ್ತಿದ್ದರು. ಆ ಹಣವೂ ಮಾತನಾಡುತ್ತಿತ್ತು. ಕುಮಾರಸ್ವಾಮಿ ಮತ್ತು ಯಡ್ಡಯೂರಪ್ಪನವರ ಜಾತಿಕಾರಣ ಸಮುದಾಯಗಳನ್ನು ಒಡೆಯುತ್ತಿತ್ತು. ಸಮಾಜ ಪ್ರತಿಗಾಮಿಯಾಗಿ ಯೋಚಿಸುತ್ತಿತ್ತು. ರಾಜಕೀಯದಲ್ಲಿ ಏನು ಮಾಡಿದರೂ ನಡೆಯುತ್ತದೆ ಮತ್ತು ಎಲ್ಲರಿಗೂ ತಾವು ಮಾಡುವ ಅಕ್ರಮಗಳಿಗೆ ಮತ್ತು ಭ್ರಷ್ಟತೆಗೆ ಶಿಕ್ಷೆಯಿಲ್ಲ ಎನ್ನುವ ಸ್ಥಿತಿ ಇತ್ತು. ಇವೆಲ್ಲವುಗಳಿಂದ ಪ್ರಕ್ಷುಬ್ಧಗೊಂಡಿದ್ದ ನಾನು ಒಂದು ತಿಂಗಳು ರಜೆಯ ಮೇಲೆ ಬಂದು, ರಾಜ್ಯದ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ, ನನಗಿದ್ದ ಸೀಮಿತ ಸಂಪರ್ಕ, ಪ್ರಚಾರ, ಮತ್ತು ಸಮಾನಮನಸ್ಕರ ಬೆಂಬಲದೊಂದಿಗೆ ಮೂರು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದೆ; “ಮೌಲ್ಯಾಗ್ರಹ”ದ ಹೆಸರಿನಲ್ಲಿ, ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ. ಅದಾದ ನಂತರ, ಜನರು ಯಾವುದೇ ಆಮಿಷಗಳಿಗೆ ಒಳಗಾಗದೆ ತಾವೆ ತಮ್ಮ ಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕು, ಮತ್ತು ಅಂತಹ ಚುನಾವಣೆಗೆ ಅವರೇ ಖರ್ಚುವೆಚ್ಚಗಳನ್ನು ಭರಿಸಬೇಕು, ಮತ್ತು ಅಭ್ಯರ್ಥಿಯೊಬ್ಬ ಚುನಾವಣಾ ಆಯೋಗ ವಿಧಿಸಿರುವ ಹಣದ ಮಿತಿಯೊಳಗೆ ಚುನಾವಣೆ ನಡೆಸಬೇಕು, ಅದಕ್ಕೊಂದು ಉದಾಹರಣೆ ಆಗಬೇಕು ಎಂದು ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ವತಃ ಸ್ಪರ್ಧಿಸಿದ್ದೆ. ಜನಸಾಮಾನ್ಯರಿಂದ, ಸ್ನೇಹಿತರಿಂದ, ಸಮಾನಮನಸ್ಕರಿಂದ ಸುಮಾರು ನಾಲ್ಕು+ ಲಕ್ಷ ದೇಣಿಗೆ ಬಂದಿತ್ತು. ಅದೆಲ್ಲವನ್ನೂ ಚುನಾವಣೆಯ ಪ್ರಚಾರಕ್ಕೆ ವೆಚ್ಚ ಮಾಡಿ ಹದಿನೈದು ದಿನ ನನಗಿದ್ದ ಸಂಪನ್ಮೂಲಗಳ ಮಿತಿಯಲ್ಲಿ ಪ್ರಚಾರ ಮಾಡಿದೆ. ಅಂದ ಹಾಗೆ, ನಾನು ಆ ಕ್ಷೇತ್ರದಲ್ಲಿ ಮತದಾರನೂ ಆಗಿರಲಿಲ್ಲ. ಪರಿಚಯದವರೂ ಬೆರಳೆಣಿಕೆ ಇದ್ದರು. ಕೊನೆಗೆ ಸುಮಾರು ಎರಡೂವರೆ ನೂರು ಮತಗಳು ಬಂದಿದ್ದವು. ಅಷ್ಟು ಜನ ನಾನು ಸೋಲುತ್ತೇನೆ ಎಂದು ಗೊತ್ತಿದ್ದರೂ, ನಾನು ನಿಂತಿದ್ದ ಆಶಯದ ಪರವಾಗಿ ಮತ ಹಾಕಿದರಲ್ಲ ಎನ್ನುವ ಖುಷಿ ಇತ್ತು. ಆ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡಿದ ಅಭ್ಯರ್ಥಿ ನಾನೇ ಆಗಿದ್ದೆ. ಗೆದ್ದ ಅಭ್ಯರ್ಥಿಯೂ ಸೇರಿ ಇತರೆ ಯಾವ ಅಭ್ಯರ್ಥಿಯೂ ಅವರು ಚುನಾವಣಾ ಆಯೋಗಕ್ಕೆ ಕೊಟ್ಟ ಲೆಕ್ಕದ ಪ್ರಕಾರ ಮೂರು ಲಕ್ಷ ದಾಟಿದ ಹಾಗೆ ಕಾಣಲಿಲ್ಲ. ಇದು ನಮ್ಮ ವ್ಯವಸ್ಥೆ.

ಈಗ ಕಳೆದ ನಾಲ್ಕೂವರೆ ವರ್ಷಗಳ ಬಿಜೆಪಿ ಆಡಳಿತವನ್ನು ನಾವು ನೋಡಿದ್ದೇವೆ. ಯಡ್ದಯೂರಪ್ಪ ಮಾಜಿ ಮುಖ್ಯಮಂತ್ರಿಯಾದ ಕೆಲವೇ ದಿನಗಳಿಗೆ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಾಣಾಧೀನ ಖೈದಿಯಾದರು. ಅದೇ ಸಮಯದಲ್ಲಿ ಜೈಲು ಕಂಡ ಜನಾರ್ಧನ ರೆಡ್ಡಿ ಇನ್ನೂ ಹೊರಗೆ ಬಂದಿಲ್ಲ. ಇತ್ತೀಚಿನ ಜಾಮೀನಿಗಾಗಿ ಲಂಚದಂತಹ ಅತಿಕೆಟ್ಟ ಅನೈತಿಕ ಪ್ರಕರಣಲ್ಲಿ ಅವರ ಸೋದರ ಮತ್ತು ಇನ್ನೊಬ್ಬ ಯುವ ಶಾಸಕನೂ ಜೈಲಿನಲ್ಲಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮತ್ತವರ ಮಗ ಜೈಲು ಕಂಡು ಬಂದಿದ್ದಾರೆ. ಶಾಸಕ ಕೃಷ್ಣಯ್ಯ ಶೆಟ್ಟಿ ತಮ್ಮ ನಾಯಕ ಯಡ್ಡಯೂರಪ್ಪನ ಜೊತೆಗೇ ಜೈಲಿಗೆ ಹೋಗಿ ಬಂದರು. ಶಾಸಕರ ಭವನದಲ್ಲಿ ಲಂಚ ತೆಗೆದುಕೊಳ್ಳುತ್ತಿರುವಾಗಲೇ ಸಿಕ್ಕಿಹಾಕಿಕೊಂಡ ಶಾಸಕ ಸಂಪಂಗಿ ಸಹ ಒಂದೆರಡು ಬಾರಿ ಜೈಲಿಗೆ ಹೋಗಿದ್ದರು. ಹಾಲಪ್ಪ ಎಂಬ ಮಾಜಿ ಮಂತ್ರಿ ಸಹ ಜೈಲು ಪಾಲಾಗಿದ್ದರು. ಇವರೆಲ್ಲರೂ ಬಿಜೆಪಿ ಪಕ್ಷದವರು.

ಇದೇ ಸಂದರ್ಭದಲ್ಲಿ ಕೇಂದ್ರದ ಕಾಂಗೆಸ್ ನೇತೃತ್ವದ ಆಡಳಿತವೂ ಅಪಾರ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ಕಲ್ಮಾಡಿ, ರಾಜಾ, ಕಣಿಮೊಳಿ ಇತ್ಯಾದಿಗಳು ಜೈಲಿಗೆ ಹೋಗಿ ಬಂದರು. ಒಂದಷ್ಟು ಜನ ಮಂತ್ರಿ ಸ್ಥಾನ ಕಳೆದುಕೊಂಡರು. ಇವರೇನು ಕಮ್ಮಿ ಎಂಬಂತೆ ಕರ್ನಾಟಕದ ಒಂದೆರಡು ಕಾಂಗ್ರೆಸ್ ಸಂಸದ ಮತ್ತು ಶಾಸಕರ ವಿರುದ್ಧ ನ್ಯಾಯಾಲಯಗಳಲ್ಲಿ ದೂರುಗಳಿವೆ.

ಇನ್ನು ಜಾತ್ಯತೀತ ಜನತಾ ದಳದ ಕುಮಾರಸ್ವಾಮಿಯವರ ವಿರುದ್ದವೂ ಲೋಕಾಯುಕ್ತ ವಿಚಾರಣೆಗಳು ನಡೆಯುತ್ತಿದ್ದು ಹಲವು ಮೊಕದ್ದಮೆಗಳಲ್ಲಿ ಅವರು ತಮ್ಮ 20/20 ಪಾಲುದಾರ ಯಡ್ಡಯೂರಪ್ಪನವರಂತೆ ಜಾಮೀನುಗಳನ್ನು ತೆಗೆದುಕೊಂಡಿದ್ದಾರೆ.

ಈಗಲೂ ರಾಜ್ಯದ ಹಲವಾರು ಬಿಜೆಪಿ ಸಚಿವರ ವಿರುದ್ದ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆಗಳಿವೆ. ನಾನು ದೂರುದಾರನಾಗಿ ದಾಖಲಿಸಿರುವ ಮೊಕದ್ದಮೆಯಲ್ಲಿ ಯಡ್ದಯೂರಪ್ಪ ಮತ್ತು ಸಚಿವ ಸೋಮಣ್ಣ ಜಾಮೀನು ಪಡೆದುಕೊಂಡಿದ್ದಾರೆ. ಧಾರವಾಡದ ಪರಿವರ್ತನಾ ಸಮಾಜದ ಹಿರೇಮಠರಂತೂ ರಾಜ್ಯದ ಹಲವು ಭ್ರಷ್ಟ ಮತ್ತು ಕ್ಷುದ್ರ ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದ್ದಾರೆ.

ಇದು ನಾಲ್ಕೂವರೆ ವರ್ಷಗಳ ಹಿಂದಿಗೂ ಮತ್ತು ಈಗಿಗೂ ಇರುವ ವ್ಯತ್ಯಾಸ. ಭ್ರಷ್ಟಾಚಾರ ಮಾಡಿದರೆ ಶಿಕ್ಷೆ ಆಗುತ್ತದೆಯೋ ಇಲ್ಲವೋ, ಆದರೆ ಯಾರಾದರೂ ಕೋರ್ಟ್‌ಗೆ ಎಳೆಯುವ ಸಾಧ್ಯತೆಯಂತೂ ಇದೆ. ಮತ್ತು ಕಳೆದ ಬಾರಿಗಿಂತ ಈ ಬಾರಿ ಭ್ರಷ್ಟಾಚಾರದ ವಿಷಯಕ್ಕೆ ಜನಸಾಮಾನ್ಯರಲ್ಲಿ ಒಂದು ಭಾಗ ರೋಸಿ ಹೋಗಿದ್ದಾರೆ.

ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ನಾನೊಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಹೇಗೆ ಈ ಸಮಾಜದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುವುದು? ಕೇವಲ ಬರೆದುಕೊಂಡು, ಅಲ್ಲಿ ಇಲ್ಲಿ ಮಾತನಾಡಿಕೊಂಡು ಇದ್ದುಬಿಡುವುದೇ, ಅಥವ ಈ ರಾಜಕಾರಣ ಮತ್ತು ಮೌಲ್ಯಗಳ ವಿಚಾರಕ್ಕೆ ಏನಾದರೂ ಮಾಡಲು ಸಾಧ್ಯವೇ? ಒಂದು ಸಮಯದಲ್ಲಿ ಯೋಚಿಸಿದ ಮತ್ತು ಮಾತನಾಡಿದ ಕಾರಣವಾಗಿ ಕೃತಿ ರೂಪದಲ್ಲಿ “ವರ್ತಮಾನ.ಕಾಮ್” ಆರಂಭವಾಯಿತು. ಆದರೆ ನಾನು ಎಲ್ಲಕಿಂತ ಮುಖ್ಯವಾಗಿ ಪ್ರತಿಪಾದಿಸುವ ಮೌಲ್ಯಾಧಾರಿತ, ಅರ್ಹ ಮತ್ತು ಸಂವೇದನಾಶೀಲರು ಪ್ರತಿನಿಧಿಸಲು ಸಾಧ್ಯವಾಗುವ ರಾಜಕೀಯ ಮತ್ತು ಸಾಮಾಜಿಕ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಯೋಚಿಸಿ, ಹಲವು ವಿಷಯಗಳ ಸಾಧಕಬಾಧಕಗಳನ್ನು ಚರ್ಚಿಸಿ, ಚಿಂತಿಸಿ, ಈಗೊಂದು ನಿರ್ಧಾರಕ್ಕೆ ಬಂದಿದ್ದೇನೆ. ಮತ್ತು ರಾಜಕೀಯ ಪಕ್ಷವೊಂದರ ಸದಸ್ಯನಾಗಿ ನೊಂದಾಯಿಸಿಕೊಂಡಿದ್ದೇನೆ. ಅದು ಲೋಕಸತ್ತಾ ಪಕ್ಷ. ಆಂಧ್ರದಲ್ಲಿ ಜಯಪ್ರಕಾಶ ನಾರಾಯಣ್ ಎನ್ನುವ ಮಾಜಿ ಐಎ‍ಎಸ್ ಅಧಿಕಾರಿಯಿಂದ (ಇವರು ಈಗ ಹೈದರಾಬಾದಿನ ಕ್ಷೇತ್ರವೊಂದರ ಶಾಸಕ) ಆರಂಭಿಸಲ್ಪಟ್ಟ ಈ ಪಕ್ಷ ಕರ್ನಾಟಕದಲ್ಲಿ ಸುಮಾರು ಮೂರು ವರ್ಷದಿಂದ ಅಸ್ತಿತ್ವದಲ್ಲಿದೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ನಾಲ್ಕೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು, ಮತ್ತು ನಾಲ್ಕು ತಿಂಗಳ ಹಿಂದೆ ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಈ ಪಕ್ಷದಿಂದ ಸ್ಪರ್ಧಿಸಿದ್ದ ಅಶ್ವಿನ್ ಮಹೇಶ್ ಒಳ್ಳೆಯ ಪೈಪೋಟಿ ನೀಡಿ ಶೇ.16 ರಷ್ಟು ಮತಗಳನ್ನು ಪಡೆದಿದ್ದರು.

ತೀರಾ ಇತ್ತೀಚೆಗಷ್ಟೇ ಆ ಪಕ್ಷಕ್ಕೆ ನೊಂದಾಯಿತನಾಗಿರುವ ನಾನು ಈಗ ಆ ಪಕ್ಷದ ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದೇನೆ. ಇಂದು ತಾನೆ ಲೋಕಸತ್ತಾ ಪಕ್ಷದ ಪತ್ರಿಕಾಗೋಷ್ಟಿ ಇತ್ತು. ಇದು ನಾನು ಬಹಿರಂಗವಾಗಿ ಆ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ಮೊದಲ ದಿನ. ಹಾಗಾಗಿ ಇದನ್ನು ನಮ್ಮ ಓದುಗರ ಮತ್ತು ಆತ್ಮೀಯರ ಗಮನಕ್ಕೆ ವಿಳಂಬ ಮಾಡದೆ ತರಬೇಕು ಎಂದು ಬರೆಯಲು ಕುಳಿತಿದ್ದೇನೆ.

ಮತ್ತು, ನನ್ನ ರಾಜಕೀಯ ಚಟುವಟಿಕೆಗಳಿಗೆ ಲೋಕಸತ್ತಾ ಪಕ್ಷವನ್ನೇ ಯಾಕೆ ಆಯ್ಕೆ ಮಾಡಿಕೊಂಡೆ? ಇದಕ್ಕೆ ಉತ್ತರವನ್ನು ಆದಷ್ಟು ಚಿಕ್ಕದಾಗಿ ಹೇಳಲು ಪ್ರಯತ್ನಿಸುತ್ತೇನೆ. ಸದ್ಯಕ್ಕೆ ಈ ಪಕ್ಷ ನಾನು ಪ್ರತಿಪಾದಿಸುವ ಆಂತರಿಕ ಪ್ರಜಾಪ್ರಭುತ್ವ, ಮೌಲ್ಯಾಧಾರಿತ ರಾಜಕಾರಣ, ಚುನಾವಣಾ ಸ್ಪರ್ಧೆಯಲ್ಲಿ ಕಾನೂನಿನ ಮಿತಿಯಲ್ಲಿಯೇ ನಡೆದುಕೊಳ್ಳುವುದು, ವಂಶಪಾರಂಪರ್ಯ-ಸ್ವಜನಪಕ್ಷಪಾತ-ಭ್ರಷ್ಟರಿಂದ ದೂರ ಇರುವುದು, ಇತ್ಯಾದಿಗಳನ್ನು ಹೇಳುತ್ತದೆ. ಮತ್ತು ಅದನ್ನು ನನಗೆ ತಿಳಿದ ಮಟ್ಟಿಗೆ ಪಾಲಿಸುತ್ತಿದೆ. ಸದ್ಯಕ್ಕೆ ನಮಗೆ ಈ ವಿಚಾರದಲ್ಲಿ ಆಯ್ಕೆಗಳಿಲ್ಲ. ಮತ್ತು ನಾನು ಪ್ರತಿಪಾದಿಸುವ ಮೌಲ್ಯಗಳನ್ನೇ ಇನ್ನೊಂದು ಗುಂಪು ಹೇಳುತ್ತಿರುವಾಗ ಹೊಸದಾಗಿ ನಾವೇ ಇನ್ನೊಂದು ತಂಡ ಕಟ್ಟುವುದಕ್ಕಿಂತ ಜೊತೆಯಾಗುವುದು ಉತ್ತಮ ಎಂದು ಭಾವಿಸಿ ಅದನ್ನು ಸೇರಿದ್ದೇನೆ.

ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ನ ವಿಚಾರಕ್ಕೆ ಬರುತ್ತೇನೆ. ನಾನು “ವರ್ತಮಾನ”ಕ್ಕಾಗಿ ಬಿಡುವಿನ ವೇಳೆಯಲ್ಲಿ ಮಾಡುತ್ತಿದ್ದ ಕೆಲಸ ಹಾಗೆಯೇ ಮುಂದುವರೆಯುತ್ತದೆ. ವಾರಕ್ಕೊ ಎರಡು ವಾರಕ್ಕೊ ಒಮ್ಮೆ ಇಲ್ಲಿ ಬರೆಯುತ್ತಿದ್ದ ನಾನು ಬಹುಶಃ ಅದನ್ನೇ ಮುಂದುವರೆಸುತ್ತೇನೆ. ಆದರೆ ಈಗ ರಾಜಕೀಯ ಪಕ್ಷವೊಂದರ ಸದಸ್ಯನಾಗಿರುವುದರಿಂದ ಸಾಧ್ಯವಾದಷ್ಟು ರಾಜಕೀಯೇತರ ವಿಷಯಗಳ ಬಗ್ಗೆ ಮಾತ್ರ ಬರೆಯಲು ಪ್ರಯತ್ನಿಸುತ್ತೇನೆ. ನಮ್ಮ ವೆಬ್‍‌ಸೈಟ್  ಹೀಗೆಯೇ ಸ್ವತಂತ್ರವಾಗಿ, ನನ್ನ ರಾಜಕೀಯ ಚಟುವಟಿಕೆಗಳ ನೆರಳಿಲ್ಲದೆ ಮುಂದುವರೆಯುತ್ತದೆ. ವರ್ತಮಾನ.ಕಾಮ್‌ಗಾಗಿ ನಮ್ಮ ಬಳಗ ಹಾಕಿಕೊಂಡಿರುವ ಯೋಜನೆಗಳು ಹಾಗೆಯೇ ಮುಂದುವರೆಯುತ್ತವೆ.

ಮತ್ತು, ನಾನು ನನ್ನ ರಾಜಕೀಯ ಚಟುವಟಿಕೆಗಳನ್ನು ಈಗಿರುವ ನನ್ನ ಬರಹಗಾರ ಮಿತ್ರರ ಸ್ನೇಹವಲಯದಿಂದ ಬೇರೆಯೇ ಇಡಬೇಕೆಂದು ಬಯಸಿದ್ದೇನೆ.

ಈ ಎಲ್ಲದರ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್ ತನ್ನ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಮುಂದುವರೆಯುತ್ತದೆ ಎನ್ನುವ ನಂಬಿಕೆ ನನಗಿದೆ. ಅದನ್ನು ಸಾಧ್ಯಮಾಡುವುದರಲ್ಲಿ ನನ್ನಷ್ಟೇ ಪಾಲು ನಮ್ಮ ಬಳಗದ ಲೇಖಕರದೂ ಇದೆ. ಅವರು ಈ ಮುಂಚೆ ತೋರುತ್ತಿದ್ದ ವಿಶ್ವಾಸದಿಂದಲೇ ಮುಂದುವರೆಯುತ್ತಾರೆ ಎಂದು ಭಾವಿಸುತ್ತೇನೆ ಮತ್ತು ವಿನಂತಿಸುತ್ತೇನೆ.

ಸಮಸ್ಕಾರ,
ರವಿ ಕೃಷ್ಣಾರೆಡ್ಡಿ

ಪ್ರಜಾ ಸಮರ-4 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಇಪ್ಪತ್ತೊಂದನೇ ಶತಮಾನದ ಆಧುನಿಕ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಭಾರತದಲ್ಲಿ ಇರಬಹುದಾದ ಗಿರಿಜನ ಅಥವಾ ಬುಡಕಟ್ಟು ಜನಾಂಗದ ಸಂಖ್ಯೆ ಬಗ್ಗೆ ಇವತ್ತಿಗೂ ನಿಖರವಾದ ಮಾಹಿತಿ ಇಲ್ಲ. ದುರ್ಗಮ ಅರಣ್ಯದ ಒಳಗೆ ವಾಸಿಸುತ್ತಿರುವ ಕೆಲವು ಆದಿವಾಸಿಗಳನ್ನೂ ಸಮೀಕ್ಷೆಯಿಂದ ಗುರುತಿಸಲು ಸಾಧ್ಯವಾಗಿಲ್ಲ. ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹುಟ್ಟು ಹಾಕಿರುವ ಅನೇಕ ನಿಗಮ  ಮತ್ತು ಮಂಡಳಿಗಳು ಕೂಡ ಅಂದಾಜಿನ ಮೇಲೆ ಆದಿವಾಸಿಗಳ ಸಂಖ್ಯೆಯನ್ನು ಆಯಾ ರಾಜ್ಯದ ಜನಸಂಖ್ಯೆಯ ಶೇಕಡವಾರು ಇಷ್ಟಿದೆ ಎಂದು ತಿಳಿಸಿ ಕೈ ತೊಳೆದುಕೊಂಡಿವೆ. ಉದಾಹರಣೆಗೆ ನಾವು ಕರ್ನಾಟಕದಲ್ಲಿ ಇರುವ ಬುಡಕಟ್ಟು ಜನಾಂಗದ ಜನಸಂಖ್ಯೆ ಒಟ್ಟು ರಾಜ್ಯದ ಜನಸಂಖ್ಯೆಯಾದ 6 ಕೋಟಿ 11 ಲಕ್ಷ ಜನರಲ್ಲಿ ಶೇ 6.5 ಎಂದು ಹೇಳಲಾಗಿದೆ. ಇದನ್ನು ನಾವು ಅಂದಾಜು 39 ಲಕ್ಷ ಎಂದು ಭಾವಿಸಿಕೊಳ್ಳಬೇಕು. ಇದೇ ಆಧಾರದಲ್ಲಿ ಭಾರತದ ಬುಡಕಟ್ಟು ಅಥವಾ ಅರಣ್ಯವಾಸಿಗಳ ಜನಸಂಖ್ಯೆ ಸುಮಾರು ಹತ್ತರಿಂದ ಹನ್ನೊಂದು ಕೋಟಿ ಜನ ಎಂದು ಅಂದಾಜಿಸಬಹುದು. (ಭಾರತದ ಒಟ್ಟು ಜನಸಂಖ್ಯೆ 118 ಕೋಟಿ) ಇವರಲ್ಲಿ ಸುಮಾರು ಒಂದೂವರೆ ಕೋಟಿ ಅಲೆಮಾರಿ ಬುಡಕಟ್ಟು ಜನಾಂಗಳಿವೆ. ಈ ಅಲೆಮಾರಿ ಜನಾಂಗಗಳಲ್ಲಿ ಹಾವು, ಮಂಗ, ಮತ್ತು ಕರಡಿ ಆಟ ಆಡಿಸುವ, ದೊಂಬರಾಟದ ವೃತ್ತಿಯಲ್ಲಿರುವ, ಇಲ್ಲವೇ ರಸ್ತೆ ಬದಿಯಲ್ಲಿ ಗಿಡಮೂಲಿಕೆ ಮಾರುವ, ಅಥವಾ ಜಾನುವಾರು, ಅಥವಾ ಕುರಿಗಳನ್ನು ಮೇಯಿಸುತ್ತಾ ಊರಿಂದ ಊರಿಗೆ ಅಲೆಯುವ ಹೀಗೆ ಅನೇಕ ತರಾವರಿ ವೃತ್ತಿಯಲ್ಲಿ ತೊಡಗಿಕೊಂಡು ಯಾವುದೇ ಸಮೀಕ್ಷೆಗೆ ನಿಲುಕದವರಾಗಿದ್ದಾರೆ. ಇವರಲ್ಲಿ ಹಲವು ಜನಾಂಗಗಳಿಗೆ ಬ್ರಿಟಿಷರು ಕಳ್ಳರು, ದರೋಡೆಕೋರರು ಎಂದು ನಾಮಕರಣ ಮಾಡಿದ್ದಾರೆ. ಉದಾಹರಣೆಗೆ ಕೊರಚ, ಕೊರ್ಮ, ಇತ್ಯಾದಿ. ಇಂತಹ ಅಯೋಮಯ ಸ್ಥಿತಿಯಲ್ಲಿ ಅರಣ್ಯದ ನಡುವಿನ ಬುಡಕಟ್ಟು ಜನಾಂಗದ ಅಭಿವೃದ್ಧಿಯ ಯೋಜನೆಗಳು ಸರ್ಕಾರದ ಹಾಳೆಗಳ ಮೇಲೆ ಸೃಷ್ಟಿಯಾಗುವ ಯೋಜನೆಗಳಾಗಿವೆ ಹೊರತು, ಅಭಿವೃದ್ಧಿಯ ಫಲ ಅಮಾಯಕರಿಗೆ ತಲುಪಿಲ್ಲ.

ಈ ದೇಶದ ನಿಜವಾದ ಮೂಲನಿವಾಸಿಗಳು ಎಂದು ಗುರುತಿಸಲಾದ, ಸುಮಾರು ಆರು ಸಾವಿರ ವರ್ಷಗಳ ಇತಿಹಾಸವಿರುವ ಭಾರತದ ಆದಿವಾಸಿಗಳ ಬದುಕು ಚಲನಶೀಲ ಗುಣವನ್ನು ಕಳೆದುಕೊಂಡು ನಿಂತ ನೀರಾಗಿದೆ. ಕೆಲವು ಇತಿಹಾಸಕಾರರು ಇವರನ್ನು ಆರ್ಯ ಮತ್ತು ದ್ರಾವಿಡ ಜನಾಂಗಗಳಿಗಿಂತ ಮೊದಲು ಭಾರತದಲ್ಲಿದ್ದ ಪೂರ್ವಿಕರು ಎಂದು ಗುರುತಿಸಿದ್ದಾರೆ. ಜೊತೆಗೆ ಪೂರ್ವದ ಏಷ್ಯಾಖಂಡವನ್ನು ಗೊಂಡಾಲ್ಯಾಂಡ್ ಎಂದು ಕರೆಯಲಾಗುತ್ತಿತ್ತು ಎಂದು ವಾದಿಸಿದ್ದಾರೆ. ಇವರುಗಳು ಇಪ್ಪತ್ತು ಮತ್ತು ಇಪ್ಪತ್ತೊಂದನೇ ಶತಮಾನದಲ್ಲೂ ಶಿಕ್ಷಣ ಮತ್ತು ಆರೋಗ್ಯದಿಂದ ವಂಚಿತರಾಗಲು ಬುಡಕಟ್ಟು ಜನಾಂಗದ ನೆಲದ ಸಂಸ್ಕೃತಿ ಕೂಡ ಪರೋಕ್ಷವಾಗಿ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಇವರಿಗೆ 18 ನೇ ಶತಮಾನದಿಂದ ಬ್ರಿಟಿಷರು, ಮರಾಠರು, ಸ್ಥಳೀಯ ಸಾಮಂತರು ಮತ್ತು ರಾಜರುಗಳ ವಿರುದ್ದ ತಮ್ಮ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡಿದ ಸುಧೀರ್ಘ ಇತಿಹಾಸವಿದೆ.

ಈಶಾನ್ಯ ಭಾರತದ ರಾಜ್ಯಗಳ ಬುಡಕಟ್ಟು ಜನರಲ್ಲಿ ಹಲವು ಜನಾಂಗಗಳು ಕ್ರೈಸ್ತ ಮಿಷನರಿಗಳಿಂದ ಪ್ರೇರಿತರಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ. ಮತ್ತೇ ಕೆಲವು ಬುಡಕಟ್ಟು ಜನಾಂಗ ತಮ್ಮ ಸಂಸ್ಕೃತಿಯನ್ನು ತೊರೆಯದೇ ಹಾಗೇಯೇ ಉಳಿಸಿಕೊಂಡು ಮಿಷನರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ಪಡೆದು ಎಲ್ಲಾ ಸವಲತ್ತುಗಳನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಕಾರಣಕ್ಕಾಗಿ ಆಧುನಿಕ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಮೀಸಲಾದ ಆರ್ಥಿಕ ಸೌಲಭ್ಯದಿಂದ ಹಿಡಿದು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಮೀಸಲಾದ ಸೀಟುಗಳು ಈಶಾನ್ಯ ಭಾರತದ ರಾಜ್ಯಗಳ ಬುಡಕಟ್ಟು ಜನಾಂಗದ ಪಾಲಾಗುತ್ತಿವೆ. ಆದರೆ, ತಮ್ಮ ಮೂಲ ಸಂಸ್ಕೃತಿಯನ್ನು ಬಿಡಲಾಗದ, ಮಧ್ಯ ಭಾರತದ ಮತ್ತು ಪೂರ್ವ ಭಾರತದ ರಾಜ್ಯಗಳ ಆದಿವಾಸಿಗಳಲ್ಲಿ ಪ್ರತಿ ಸಾವಿರಕ್ಕೆ ಒಬ್ಬ ಪದವೀಧರನನ್ನು ಹುಡುಕುವುದು ಕಷ್ಟವಾಗಿದೆ. ಇವರ ಸ್ಥಿತಿ ಗತಿ ಈ ದೇಶದ ದಲಿತರ ಬದುಕಿಗಿಂತ ಶೋಚನೀಯವಾಗಿದೆ.  ಉನ್ನತ ಶಿಕ್ಷಣದಿಂದ ವಂಚಿತರಾದವರ ಪೈಕಿ ದಲಿತರು ಶೇ.23.8 ರಷ್ಟು ಇದ್ದರೆ, ಆದಿವಾಸಿಗಳದು ಶೇ.30.1ರಷ್ಟು ಇದೆ. ಶಾಲೆ ಬಿಟ್ಟವರಲ್ಲಿ ದಲಿತರದು ಶೇ 15ರಷ್ಟು ಇದ್ದರೆ, ಆದಿವಾಸಿಗಳ ಪಾಲು ಶೇಕಡಾ 62.5ರಷ್ಟಿದೆ. ಬಡತನದ ರೇಖೆಯ ಕೆಳಗೆ ಶೇ. 41.5ರಷ್ಟು ದಲಿತರಿದ್ದರೆ, ಶೇ.49.5ರಷ್ಟು ಆದಿವಾಸಿಗಳಿದ್ದಾರೆ.

1894 ರಲ್ಲಿ ಭಾರತದ ಆದಿವಾಸಿಗಳ ಕುರಿತಂತೆ ಬ್ರಿಟಿಷರು ರೂಪಿಸಿದ ಕಾನೂನುಗಳು ಅಲ್ಪ ಸ್ವಲ್ಪ ಬದಲಾವಣೆಗಳ ಜೊತೆ ಇಂದಿಗೂ ಅಸ್ತಿತ್ವದಲ್ಲಿವೆ. 1950ರಲ್ಲಿ ಸಂಸತ್ತು ಅಂಗೀಕರಿಸಿದ ಶಾಸನದ ಪ್ರಕಾರ ಆರಣ್ಯದಲ್ಲಿ ಆದಿವಾಸಿಗಳು ವಾಸಿಸಬಹುದು, ಆದರೆ ಭೂಮಿ ಮತ್ತು ಅರಣ್ಯ ಸಂಪತ್ತಿನ ಒಡೆತನ ಮಾತ್ರ ಸರ್ಕಾರಕ್ಕೆ ಒಳಪಟ್ಟಿರುತ್ತದೆ. (ಇತ್ತೀಚೆಗೆ ಅರಣ್ಯದ ಕಿರು ಉತ್ಪನ್ನಗಳ ಪಾಲನ್ನು ಆದಿವಾಸಿಗಳಿಗೆ ಕೇಂದ್ರ ಸರ್ಕಾರ ದಯಪಾಲಿಸಿದೆ.) ಭಾರತದಲ್ಲಿ ರೈಲು ಮಾರ್ಗ ವಿಸ್ತರಿಸುವ ಸಂದರ್ಭದಲ್ಲಿ ರೈಲ್ವೆ ಹಳಿಯ ಕೆಳಗೆ ಹಾಸುವ ಮರದ ದಿಮ್ಮಿಗಳಿಗಾಗಿ ಅಪಾರ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಯಿತು. ಇದರ ಸಲುವಾಗಿಯೇ ಬ್ರಿಟಿಷರು ಇಂತಹ ಕಾನೂನು ಜಾರಿಗೆ ತಂದಿದ್ದರು. ಆಧುನಿಕ ಭಾರತದ ಬ್ರಿಟಿಷರ ವಂಶಪರಂಪರೆಯ ಕುಡಿಗಳಂತಿರುವ ನಮ್ಮ ಜನಪ್ರತಿನಿಧಿಗಳು, ಬುಡಕಟ್ಟು ಜನಾಂಗ ವಾಸಿಸುತ್ತಿರುವ ಅರಣ್ಯ ಭೂಮಿಯಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತನ್ನು ಲೂಟಿ ಮಾಡಲು ಇದೇ ಕಾನೂನನ್ನು ಅಸ್ತ್ರವಾಗಿ ಬಳಸಿಕೊಂಡು ಅರಣ್ಯ ನಾಶದಲ್ಲಿ ತೊಡಗಿದ್ದಾರೆ.

ಒರಿಸ್ಸಾ, ಛತ್ತೀಸ್‌ಘಡ, ಮಧ್ಯಪ್ರದೇಶ, ಜಾರ್ಖಂಡ್. ಪಶ್ಚಿಮ ಬಂಗಾಳ ಮತ್ತು ಆಂಧ್ರ ರಾಜ್ಯಗಳು ಕಳೆದ ಒಂದು ದಶಕದಲ್ಲಿ ಕಲ್ಲಿದ್ದಲು, ಬಾಕ್ಸೈಟ್, ತಾಮ್ರ, ಕಬ್ಬಿಣದ ಅದಿರು ಮತ್ತು ಪಿಂಗಾಣಿ ವಸ್ತುಗಳ ತಯಾರಿಕೆಗೆ ಬಳಸಲಾಗುವ ಮಣ್ಣು ಇವುಗಳ ಗಣಿಗಾರಿಕೆಗಾಗಿ ಅಂತರಾಷ್ಟ್ರೀಯ ಮತ್ತು ಭಾರತದ ಖಾಸಗಿ ಕಂಪನಿಗಳ ಜೊತೆ ಒಟ್ಟು 389 ಪರಸ್ಪರ ಒಪ್ಪಂದಗಳಿಗೆ ಸಹಿ ಹಾಕಿವೆ. ಇವುಗಳಲ್ಲಿ ಒರಿಸ್ಸಾ ಸರ್ಕಾರವೊಂದೇ 104 ಒಪ್ಪಂದಗಳಿಗೆ ಸಹಿ ಹಾಕಿದೆ. ಅಲ್ಲಿನ ಅರಣ್ಯ ಪ್ರದೇಶದಲ್ಲಿ ಅಲ್ಯೂಮಿನಿಯಂ ತಯಾರಿಕೆ ಸಿಗುವ ಬಾಕ್ಷೈಟ್ ಅದಿರಿಗೆ ವೇದಾಂತ ಕಂಪನಿ ತಳ ಊರಿದ್ದರೆ, ಮಧ್ಯಪ್ರದೇಶ, ಛತ್ತೀಸ್‌ಘಡ ಮತ್ತು ಪ.ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ಟಾಟಾ, ಪೋಸ್ಕೋ, ಮತ್ತು ಎಸ್ಸಾರ್ ಸ್ಟೀಲ್ ಕಂಪನಿಗಳು ತಳ ಊರಿವೆ. ಕಲ್ಲಿದ್ದಲು ಗಣಿಕಾರಿಕೆ ಮಹಾರಾಷ್ಟ್ರದ ನಾಗಪುರ ಮೂಲದ 24 ಬೇನಾಮಿ ಕಂಪನಿಗಳ ಪಾಲಾಗಿದ್ದರೆ, (ಈ ಕಂಪನಿಗಳು ಬಹುತೇಕ ನಮ್ಮ ಸಂಸದರು ಮತ್ತು ಸಚಿವರಿಗೆ ಸೇರಿದವು) ಆಂಧ್ರದ ವಿಶಾಖಪಟ್ಟಣದ ಅರಕು ಕಣಿವೆ ಎಂಬ ಗಿರಿಧಾಮದ ಬಳಿ 14 ಬುಡಕಟ್ಟು ಜನಾಂಗ ವಾಸಿಸುವ ಅರಣ್ಯ ಪ್ರದೇಶ ಪಿಂಗಾಣಿ ವಸ್ತುಗಳ ಉತ್ಪಾದನೆಗಾಗಿ ವಿದೇಶಿ ಕಂಪನಿಯ ಪಾಲಾಗಿದೆ.

ಭಾರತದಲ್ಲಿ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಅರಣ್ಯದಲ್ಲಿ ವಾಸಿಸುತ್ತಿದ್ದ ಸುಮಾರು 90 ಲಕ್ಷ ಆದಿವಾಸಿಗಳು ನೆಲೆ ಕಳೆದುಕೊಂಡಿದ್ದರೆ, ಸಧ್ಯದ ಗಣಿಗಾರಿಕೆಯಿಂದ 40 ಲಕ್ಷ ಆದಿವಾಸಿಗಳು ಅತಂತ್ರರಾಗಿದ್ದಾರೆ, ಕಾನೂನಿನ ತಿಳುವಳಿಕೆ ಅಥವಾ ಅಕ್ಷರಜ್ಞಾನವಾಗಲಿ, ಇಲ್ಲವೇ ಹೋರಾಟದ ಗಂಧವಾಗಲಿ ಏನೂ ಅರಿಯದ ಈ ಮುಗ್ಧ ಜನರನ್ನು ಒಕ್ಕಲೆಬ್ಬಿಸುವುದು ಸರ್ಕಾರಗಳಿಗೆ ಮತ್ತು ಕಂಪನಿಗಳಿಗೆ ತ್ರಾಸದಾಯಕವಲ್ಲ. ಜೊತೆಗೆ ಈ ಮುಗ್ಧ ಜನರ ಬೆಂಬಲಕ್ಕೆ ನಿಲ್ಲುವ ಸ್ವಯಂ ಸೇವಾ ಸಂಘಟನೆಯ ಕಾರ್ಯಕರ್ತರಿಗೆ ಸರ್ಕಾರಗಳಿಂದ ನಕ್ಸಲರು ಅಥವಾ ನಕ್ಸಲಿಯರ ಬೆಂಬಲಿಗರು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ.

ಈ ಅರಣ್ಯಪ್ರದೇಶಗಳಿಗೆ ಲಗ್ಗೆ ಇಟ್ಟಿರುವ ಭಾರತದ ಕಂಪನಿಗಳು ಸೇರಿದಂತೆ, ಬಹುರಾಷ್ಟ್ರೀಯ ಕಂಪನಿಗಳ ಬಣ್ಣದ ಜಾಹಿರಾತು ಈ ಮೇಲಿನ ಎಲ್ಲಾ ರಾಜ್ಯಗಳ ಪ್ರಮುಖ ನಗರದ ರಸ್ತೆಗಳಲ್ಲಿ ರಾರಾಜಿಸುತ್ತಿವೆ. ಆದಿವಾಸಿಗಳ, ಶಿಕ್ಷಣ ಮತ್ತು ಆರೋಗ್ಯಕ್ಕೆ ಮತ್ತು ಅವರ ಮೂಲಭೂತ ಸೌಕರ್ಯಗಳಿಗೆ ಮತ್ತು ಪರಿಸರ ರಕ್ಷಣೆಗೆ ಹಮ್ಮಿಕೊಂಡಿರುವ ಯೋಜನೆಗಳನ್ನು ಜಾಹಿರಾತು ಮೂಲಕ ಪ್ರಚುರಪಡಿಸುತ್ತಿವೆ. ಈ ಕಂಪನಿಗಳ ಕಾರ್ಯತಂತ್ರವನ್ನು ಲೇಖಕಿ ಅರುಂಧತಿರಾಯ್ ತಮ್ಮ ಪೀಪಲ್ಸ್ ಮಾರ್ಚ್ ಪ್ರಬಂಧದಲ್ಲಿ ಅರ್ಥಪೂರ್ಣವಾಗಿ ಬಣ್ಣಿಸಿದ್ದಾರೆ. ನಮ್ಮ ಚಲನ ಚಿತ್ರಗಳಲ್ಲಿ ಪ್ರಖ್ಯಾತ ನಟನೊಬ್ಬ ಏಕಕಾಲಕ್ಕೆ ನಾಯಕ ಮತ್ತು ಖಳನಾಯಕನ ದ್ವಿಪಾತ್ರ ಅಭಿನಯಿಸಿದಂತಿದೆ ಎಂದಿದ್ದಾರೆ. ಒಂದೆಡೆ ನೆಲದ ಅಮೂಲ್ಯ ಸಂಪತ್ತನ್ನೂ ಲೂಟಿ ಹೊಡೆಯುತ್ತಾ, ಇನ್ನೊಂದೆಡೆ ಭ್ರಷ್ಟ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳನ್ನು ಲಂಚದ ಮೂಲಕ ಪೋಷಣೆ ಮಾಡುತ್ತಾ, ಜನಸಾಮಾನ್ಯರು ಸೇರಿದಂತೆ ಮುಗ್ಧ ಬುಡಕಟ್ಟು ಜನಾಂಗವನ್ನು ಕತ್ತಲೆಯ ಕೂಪಕ್ಕೆ ತಳ್ಳುವ ವ್ಯವಸ್ಥೆಯ ಈ ಅಮಾನುಷ ಕ್ರಿಯೆಗೆ ನಮ್ಮ ಮಾಧ್ಯಮಗಳು ಕೂಡ ಪರೋಕ್ಷವಾಗಿ ಕೈಜೋಡಿಸಿವೆ. ಈ ಅನೈತಿಕ ಒಪ್ಪಂದದಲ್ಲಿ ಕಂಪನಿಗಳು ನೀಡುವ ಕೋಟ್ಯಾಂತರ ರೂಪಾಯಿಯ ಜಾಹಿರಾತಿಗೆ ವಾಸ್ತವವನ್ನು ಮರೆ ಮಾಚುವ ಕ್ರಿಯೆ ಸದ್ದಿಲ್ಲದೆ ಜರುಗುತ್ತಿದೆ.

ಇಂತಹ ಅನ್ಯಾಯಗಳ ವಿರುದ್ಧ ಸಿಡಿದೆದ್ದ ಆದಿವಾಸಿಗಳನ್ನು ನಮ್ಮ ಸರ್ಕಾರಗಳು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಹೊಸಕಿ ಹಾಕುವ ಕಲೆಯನ್ನು ಸಹ ಕರಗತ ಮಾಡಿಕೊಂಡಿವೆ. ಇದಕ್ಕೆ ಆಂಧ್ರದಲ್ಲಿ ನಡೆದ ಘಟನೆ ನಮ್ಮೆದೆರು ಸಾಕ್ಷಿಯಾಗಿದೆ.

1981 ರ ಏಪ್ರಿಲ್ ತಿಂಗಳ 20 ರಂದು ಆಂಧ್ರ ಪ್ರದೇಶದ ಅದಿಲಾಬಾದ್ ಜಿಲ್ಲೆಯ ಇಂದ್ರಾವಳಿ ಎಂಬ ಪಟ್ಟಣದಲ್ಲಿ ಜರುಗಿದ ಗೊಂಡ ಜನಾಂಗದ ನರಮೇಧ ಆದಿವಾಸಿಗಳ ಇತಿಹಾಸದಲ್ಲಿ ಒಂದು ನೋವಿನ ಅಧ್ಯಾಯ. ಆದಿವಾಸಿಗಳ ಭೂಮಿಯನ್ನು ಅತಿಕ್ರಮಿಸುತ್ತಿದ್ದ ಭೂಮಾಲಿಕರ ವಿರುದ್ಧ ಅಲ್ಲಿನ ಗಿರಿಜನ ರೈತ ಮತ್ತು ಕೂಲಿ ಸಂಘಟನೆ ಆದಿನ ಬೃಹತ್ ರ್‍ಯಾಲಿಯನ್ನು ಏರ್ಪಡಿಸಿತ್ತು. ವಿಷಯ ತಿಳಿದ ಅದಿಲಾಬಾದ್‌ನ ಪೊಲೀಸ್ ವರಿಷ್ಟಾಧಿಕಾರಿ ಹಿಂದಿನ ದಿನ ಅಂದರೆ, ಏಪ್ರಿಲ್ 19 ರಂದು ಇಂದ್ರಾವಳಿ ಪಟ್ಟನದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ. ಈ ಕುರಿತು ಪರಿವಿಲ್ಲದೆ. ಮಾರನೇ ದಿನ ಅರಣ್ಯದಿಂದ ಚಕ್ಕಡಿಯಲ್ಲಿ, ಕಾಲ್‌ನಡಿಗೆಯಲ್ಲಿ  ಪ್ರವಾಹೊಪಾದಿಯಲ್ಲಿ ಗಿರಿಜನರು ಇಂದ್ರಾವಳಿ ಪಟ್ಟಣಕ್ಕೆ ಬಂದರು. ಪ್ರತಿಭಟನೆಗೆ ಇಳಿದವರ ಮೇಲೆ ಗುಂಡು ಹಾರಿಸಿದ ಪರಿಣಾಮ 60 ಗೊಂಡ ಜನಾಂಗದ ಆದಿವಾಸಿಗಳು ಸ್ಥಳದಲ್ಲಿ ಮೃತ ಪಟ್ಟರು.

ಘಟನೆ ಕುರಿತು ಸೃಷ್ಟೀಕರಣ ನೀಡಿದ ಆಂಧ್ರ ಸರ್ಕಾರ ಕೇವಲ 13 ಆದಿವಾಸಿಗಳು ಮತ್ತು ಓರ್ವ ಪೊಲೀಸ್ ಪೇದೆ ಘಟನೆಯಲ್ಲಿ ಮೃತಪಟ್ಟಿದ್ದಾರೆಂದು ಹೇಳಿಕೆ ನೀಡಿತು. ಗೋಲಿಬಾರ್ ನಡೆದ ದಿನ ರಾತ್ರಿಯೇ ಪೊಲೀಸರು ಮೃತಪಟ್ಟ ಆದಿವಾಸಿಗಳ ಶವಗಳನ್ನು ಅದಿಲಾಬಾದ್ ನಗರದ ಗುಪ್ತ ಸ್ಥಳಕ್ಕೆ ಕೊಂಡೊಯ್ದು ಸುಟ್ಟು ಹಾಕಿದ್ದರು. ಈ ಕುರಿತು ಸ್ವತಂತ್ರ ತನಿಖೆ ನಡೆಸಿದ ನಾಗರಿಕ ಹಕ್ಕುಗಳ ಸಮಿತಿ ಪೊಲೀಸರ ಪೈಶಾಚಿಕ ಕೃತ್ಯವನ್ನು ಹೊರೆಗೆಳೆಯಿತು. ಭಾರತದ ಪ್ರತಿಷ್ಠಿತ ಪತ್ರಿಕೆಯಾದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ತನ್ನ ಜೂನ್ 13ರ ಸಂಚಿಕೆಯಲ್ಲಿ ಗೊಂಡ ಜನಾಂಗದ ನರಮೇಧ ಕುರಿತು ಕಾರ್ನಜ್ ಅಟ್ ಇಂದ್ರಾವಳಿ ಎಂಬ ಹೆಸರಿನಲ್ಲಿ ವಿಸ್ತ್ರುತ ವರದಿ ಪ್ರಕಟಿಸಿತು. ನಮ್ಮನ್ನಾಳುವ ಸರ್ಕಾರಗಳ ಇಂತಹ ಕ್ರೌರ್ಯ ಇವತ್ತಿಗೂ ಕೂಡ ಮುಂದುವರಿದಿದೆ. ಬಸ್ತಾರ್ ಮತ್ತು ಮಧ್ಯ ಭಾರತದ ಅರಣ್ಯ ವಲಯದಲ್ಲಿ ಗಣಿಕಾರಿಕೆಯನ್ನು ವಿರೋಧಿಸುತ್ತಿರುವ ಆದಿವಾಸಿಗಳನ್ನು ಬಗ್ಗು ಬಡಿಯುವ ಉದ್ದೇಶದಿಂದ ಅವರುಗಳು ವಾಸಿಸುವ ಹಳ್ಳಿಗಳ ಸುತ್ತ ಅರಣ್ಯದಲ್ಲಿ ಮುಳ್ಳು ತಂತಿಯ ಬೇಲಿಯ ನಿರ್ಮಾಣ ಮಾಡಿ ಪರೋಕ್ಷವಾಗಿ ಅವರ ಮೇಲೆ ನಿರ್ಬಂಧ ಹೇರಲಾಗಿದೆ.

ಇಂತಹ ಅನಾಥ ಪ್ರಜ್ಞೆಯ ಸ್ಥಿತಿಯಲ್ಲಿ ಆದಿವಾಸಿಗಳಿಗೆ ಆಸರೆಯಾದವರು ಮಾವೋವಾದಿ ನಕ್ಸಲರು. ಇಲ್ಲಿನ ಆದಿವಾಸಿಗಳು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ನಂಬುವ ಬದಲು ನಕ್ಸಲರನ್ನು ನಂಬುತ್ತಾರೆ. ಅವರನ್ನು ಅಣ್ಣ ಮತ್ತು ಅಕ್ಕಾ ಎಂದು ಸಂಭೋದಿಸುತ್ತಾರೆ. ಈ ಕಾರಣಕ್ಕಾಗಿ ಈ ನತದೃಷ್ಟರು ಸರ್ಕಾರದ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವರ ಪಾಲಿಗೆ ಅರಣ್ಯ ಪ್ರದೇಶದಲ್ಲಿ ವಸತಿ ಶಾಲೆ ಮೂಲಕ ಶಿಕ್ಷಣವನ್ನು ನೀಡುತ್ತಿರುವ ರಾಮಕೃಷ್ಣ ಮಿಷನ್ ಹಾಗೂ ಕೆಲವು ಸ್ವಯಂ ಸೇವಾ ಸಂಘಟನೆಯ ಶಿಕ್ಷಕರು, ಆರೋಗ್ಯ ಸೇವೆ ನೀಡುತ್ತಿರುವ ಡಾ, ಬಿಯಾಂಕ ಸೇನ್ ಮತ್ತು ಅವರ ಪತ್ನಿ ಇಳಾಸೇನ್ ಮತ್ತು ಆದಿವಾಸಿಗಳ ಹಕ್ಕಿಗಾಗಿ ಪ್ರತಿಪಾದಿಸುತ್ತಿರುವ ಮಾಜಿ ಐ.ಎ.ಎಸ್. ಅಧಿಕಾರಿ ಬಿ.ಡಿ. ಶರ್ಮ (ಅಪಹರಣಕ್ಕೊಳಾಗಾಗಿದ್ದ ಸುಕ್ಮ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಷ್ ಮೆನನ್ನನ್ನು ನಕ್ಸಲರಿಂದ ಬಿಡುಗಡೆ ಮಾಡಿಸಿದವರು) ಇವರೆಲ್ಲಾ ಅದಿವಾಸಿಗಳು ಮತ್ತು ನಕ್ಸಲರ ಪಾಲಿಗೆ ನಡೆದಾಡುವ ದೇವರಾಗಿದ್ದರೆ, ಮಧ್ಯಪ್ರದೇಶ, ಛತ್ತೀಸ್‍ಘಡ, ಮಹಾರಾಷ್ಟ್ರದ ಗಡಿಭಾಗದ ಚಂದ್ರಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗಾಂಧಿವಾದಿ ಬಾಬಾ ಅಮ್ಟೆ ಸ್ಥಾಪಿಸಿದ ಆನಂದವನ ಎಂಬ ಆಸ್ಪತ್ರೆ ಮತ್ತು ಆಶ್ರಮಗಳು ದೇಗುಲಗಳಾಗಿವೆ. ಬಾಬಾ ಅಮ್ಟೆ ನಿಧನಾನಂತರ ಅವರ ಮಕ್ಕಳಾದ ಡಾ. ಪ್ರಕಾಶ್ ಮತ್ತು ಡಾ. ವಿಕಾಶ್ ಹಾಗೂ ಅವರ ಪತ್ನಿಯರಾದ ಡಾ.ಮಂದಾಕಿನಿ ಮತ್ತು ಡಾ.ಭಾರತಿ ಇವರುಗಳು ಸೇವೆಯನ್ನು ಮುಂದುವರಿಸಿದ್ದಾರೆ. ಈ ಆಸ್ಪತ್ರೆ ಮಧ್ಯಭಾರತದ 92 ಲಕ್ಷ ಆದಿವಾಸಿಗಳ ಪಾಲಿಗೆ ಸಂಜೀವಿನಿಯಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಪೀಪಲ್ಸ್ ವಾರ್ ಗ್ರೂಪ್ ಎಂಬ ಹೆಸರನ್ನು ಸಿ.ಪಿ.ಐ (ಎಮ್.ಎಲ್) ಮಾವೋವಾದಿ ಕಮ್ಯುನಿಸ್ಟ್ಸ್ ಎಂದು ಬದಲಿಸಿಕೊಂಡು, ಪಿ.ಜಿ.ಎ. (ಪೀಪಲ್ಸ್ ಗ್ರೂಪ್ ಆರ್ಮಿ) ಎಂಬ ನಕ್ಸಲ್ ಸೇನೆಯನ್ನು ಹುಟ್ಟಿ ಹಾಕಿರುವ ನಕ್ಸಲರು ತಮ್ಮ ಮೂಲ ನೆಲೆಯಾದ ಆಂಧ್ರದಿಂದ ಮಧ್ಯ ಭಾರತದ ಅರಣ್ಯ ಪ್ರದೇಶಕ್ಕೆ ತಮ್ಮ ಹೋರಾಟವನ್ನು ವಿಸ್ತರಿಸುವಲ್ಲಿ ಆಕಸ್ಮಿಕವಾಗಿ ಜರುಗಿದ ಒಂದು ಘಟನೆ ಕಾರಣವಾಯಿತು.

ಪೀಪಲ್ಸ್ ವಾರ್‌ಗ್ರೂಪ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಕೊಂಡಪಲ್ಲಿ ಸೀತಾರಾಮಯ್ಯನವರ ಪುತ್ರಿ ಇದಕ್ಕೆ ಪರೋಕ್ಷ ಕಾರಣ ಎಂಬುದುರ ಬಗ್ಗೆ ಹೊರ ಜಗತ್ತಿಗೆ ಮಾಹಿತಿ ಇಲ್ಲ. ತನ್ನ ಹೆಸರನ್ನಾಗಲಿ ಅಥವಾ ತಾನು ಇಂತಹ ವ್ಯಕ್ತಿಯ ಪುತ್ರಿಯೆಂದು ಹೇಳಿಕೊಳ್ಳದ, ಸೀತಾರಾಮಯ್ಯನವರ ಪುತ್ರಿ ವೈದ್ಯೆಯಾಗಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿದರು. ಈಕೆ ಪ್ರೀತಿಸಿ ಮದುವೆಯಾದ ವೈದ್ಯನೊಬ್ಬನ ಜೊತೆ ಸದ್ದಿಲ್ಲದೆ, ಸುದ್ಧಿಯಾಗದೆ, ಕಳೆದ ಮುವತ್ತೈದು ವರ್ಷಗಳ ಕಾಲ ಅರಣ್ಯವಾಸಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದರು. ಆಂಧ್ರದ ಉತ್ತರ ತೆಲಂಗಾಣ ಪ್ರಾಂತ್ಯದಲ್ಲಿ ತನ್ನ ತಂದೆ ಗಿರಿಜನರ ನೆಮ್ಮದಿಯ ಬದುಕಿಗೆ ಹೋರಾಟ ಮಾಡುತ್ತಿದ್ದಾಗ, ಇತ್ತ ಮಧ್ಯಭಾರತದ ಅರಣ್ಯ ಪ್ರದೇಶದಲ್ಲಿ ಅಪ್ಪನಿಂದ ಪ್ರೇರಿತಳಾಗಿದ್ದ ಮಗಳು, ತನ್ನ ಪತಿಯ ಜೊತೆಗೂಡಿ ಅರಣ್ಯವಾಸಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಿದಳು. ಈ ವೈದ್ಯ ದಂಪತಿಗಳು 30 ವರ್ಷದ ಹಿಂದೆ ಪ್ರತಿ ವರ್ಷ ತಮ್ಮ ರಜಾ ದಿನಗಳಲ್ಲಿ ದಂಡಕಾರಣ್ಯ ಅರಣ್ಯ ಪ್ರದೇಶಕ್ಕೆ ಬಂದು ಅಲ್ಲಿನ ಆದಿವಾಸಿಗಳಿಗೆ ವೈದ್ಯಕೀಯ ಶಿಬಿರ ಏರ್ಪಡಿಸಿ ಸೇವೆ ಸಲ್ಲಿಸಿ ಹೋಗುತ್ತಿದ್ದರು. ಆಗಿನ್ನು ನಕ್ಸಲರು ಈ ಪ್ರದೇಶಕ್ಕೆ ಕಾಲಿಟ್ಟಿರಲಿಲ್ಲ.

ಒಮ್ಮೆ ಈ ವೈದ್ಯ ದಂಪತಿಗಳು ವಾಪಸ್ ದೆಹಲಿಗೆ ತೆರಳುವ ಮುನ್ನ ವಾರಂಗಲ್ ಜಿಲ್ಲೆಯ ಅರಣ್ಯ ಪ್ರದೇಶದ ಅಂಚಿನಲ್ಲಿ ದಲಿತರ ಗುಡಿಸಲಿನಲ್ಲಿ ತಲೆ ಮರೆಸಿಕೊಂಡಿದ್ದ ಕೊಂಡಪಲ್ಲಿ ಸೀತಾರಾಮಯ್ಯನನ್ನು ಭೇಟಿ ಮಾಡುವ ಕಾರ್ಯಕ್ರಮ ಏರ್ಪಾಡಾಗಿತ್ತು. ಆದಿನ ಬೆಳದಿಂಗಳ ರಾತ್ರಿಯಲ್ಲಿ ಗುಡಿಸಲುಗಳ ಮುಂದಿನ ಆವರಣದಲ್ಲಿ ಮೊಸರನ್ನ ತಿನ್ನುತ್ತಾ ಕುಳಿತ ಸಂದರ್ಭದಲ್ಲಿ ತನ್ನ ತಂದೆ ಜೊತೆ ಮಾತನಾಡುತ್ತಾ ಭಾವುಕಳಾದ ಸೀತಾರಾಮಯ್ಯನವರ ಪುತ್ರಿ, ಮಧ್ಯಭಾರತದ ಅರಣ್ಯವಾಸಿಗಳ ಧಾರುಣ ಬದುಕನ್ನು ಅಪ್ಪನೆದುರು ಸವಿವರವಾಗಿ ತೆರದಿಟ್ಟಳು.

ಆ ರಾತ್ರಿಯೇ ಮಗಳು ಮತ್ತು ಅಳಿಯನನ್ನು ದೆಹಲಿಗೆ ಬೀಳ್ಕೊಟ್ಟ ಸೀತಾರಾಮಯ್ಯ ಆವರಣದಲ್ಲಿ ಛಾಪೆ ಹಾಸಿಕೊಂಡು ಮಲಗಿದಾಗ ಅವರ ತಲೆಯೊಳಗೆ ಮಗಳು ಹೇಳಿದ ಆದಿವಾಸಿಗಳ ನೋವಿನ ಕಥನ ಕಾಡತೊಡಗಿತು. ಆ ಕ್ಷಣಕ್ಕೆ ಕೊಂಡಪಲ್ಲಿಯವರ ಎದೆಯೊಳಗೆ ಆಂಧ್ರಕ್ಕೆ ಮೀಸಲಾಗಿದ್ದ ತಮ್ಮ ಯುದ್ಧವನ್ನು ನೆರೆಯ ಮಧ್ಯಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಬಿಹಾರಕ್ಕೆ ವಿಸ್ತರಿಸಬೇಕೆಂಬ ಯೋಚನೆ ಗಟ್ಟಿಯಾಗಿ ತಳವೂರಿತು. ಅದರ ಪರಿಣಾಮವಾಗಿ ಇಂದು ಮೂರು ಲಕ್ಷ ಮಾವೋವಾದಿ ನಕ್ಸಲರು ದೇಶದ 11 ರಾಜ್ಯಗಳ  109 ಜಿಲ್ಲೆಗಳನ್ನು ಆವರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2003 ರಲ್ಲಿ ಅಧಿಕೃತವಾಗಿ ಹತ್ತು ಸಾವಿರ ಕೋಟಿ ಹಣ ತಮ್ಮ ಬಳಿ ಇದೆ ಎಂದು ಘೋಷಿಸಿಕೊಂಡಿದ್ದ ಪ್ರಜಾಸಮರಂ ಗ್ರೂಪ್ ಸಂಘಟನೆಯಲ್ಲಿ  ಈಗ  ಸುಮಾರು 18ರಿಂದ 20 ಸಾವಿರ ಕೋಟಿ ಹಣವಿರಬಹುದೆಂದು ಅಂದಾಜಿಸಲಾಗಿದೆ. ಮಾವೋವಾದಿ ನಕ್ಸಲರ ಬಳಿ ಇರುವ ಈ ಆರ್ಥಿಕ ಸಂಪತ್ತು, ನಕ್ಸಲ್ ಪೀಡಿತ ಪ್ರದೇಶಗಳ ಗುತ್ತಿಗೆದಾರರು, ಗಣಿಗಾರಿಕೆ ನಡೆಸುವ ಕಂಪನಿಗಳು, ಅರಣ್ಯಾಧಿಕಾರಿಗಳು, ಸರ್ಕಾರಿ ನೌಕರರು, ವೈದ್ಯರು, ಇಂಜಿನಿಯರ್‌ಗಳು ನಿಯಮಿತವಾಗಿ ಸಲ್ಲಿಸುವ ವಂತಿಕೆ ರೂಪದ ಹಣ ಎಂದು ನಕ್ಸಲ್ ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿಕೊಂಡಿದೆ.

( ಮುಂದುವರಿಯುವುದು)

ಕಾವೇರಿ ಸಮಸ್ಯೆ : ಮಿಡಿಯಾ ಡಾರ್ಲಿಂಗ್ ಸುರೇಶ್ ಕುಮಾರ್ ಎಲ್ಲಿದ್ದಾರೆ?

 – ರಮೇಶ್ ಕುಣಿಗಲ್

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಾರ್ವಜನಿಕವಾಗಿ ಗೊತ್ತಿರುವ ಅಂಕಿ ಅಂಶಗಳು ಹೇಳುತ್ತವೆ. ಇಲ್ಲದಿರುವ ನೀರನ್ನು ಬಿಡುವುದು ಹೇಗೆ? ಅಥವಾ ನಮ್ಮ ಅಗತ್ಯಗಳನ್ನು ಬಲಿಕೊಟ್ಟು ನೀರು ಬಿಡುವುದು ಹೇಗೆ? ಎಂದು ಚರ್ಚೆ, ಹೋರಾಟಗಳು ನಡೆಯುತ್ತಿವೆ. ರಾಜ್ಯದ ಅಂಕಿ ಅಂಶಗಳನ್ನು ನ್ಯಾಯಾಲಯದಲ್ಲಿ ಸೂಕ್ತವಾಗಿ ಮಂಡಿಸಿ, ರಾಜ್ಯದ ಹಿತ ಕಾಪಾಡಬೇಕಾದ್ದು ರಾಜ್ಯ ಸರಕಾರದ ಕರ್ತವ್ಯ.

ಇಂತಹ ಸಂದರ್ಭಗಳಲ್ಲಿ ಈ ನೆಲದ ಕಾನೂನು ಮಂತ್ರಿಯ ಹೊಣೆ ದೊಡ್ಡದು. ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿದ್ದಾಗ ಉಂಟಾಗಿದ್ದ ಪರಿಸ್ಥಿತಿಯಲ್ಲಿ ಕಾನೂನು ಮಂತ್ರಿಯಾಗಿ ಹೈರಾಣಾದವರು ಡಿ.ಬಿ ಚಂದ್ರೇಗೌಡರು. ಅವರು ಇಂದು ಬಿಜೆಪಿಯಲ್ಲಿದ್ದಾರೆ. ಆದರೆ ಇದೇ ಬಿಜೆಪಿಯ ಸದ್ಯದ ಕಾನೂನು ಮಂತ್ರಿ ಸುರೇಶ್ ಕುಮಾರ್‌ಗೆ ಏನಾಗಿದೆ?

ಅಸ್ಸಾಂ ಯುವಕರು ಬೆಂಗಳೂರು ಬಿಟ್ಟು ರೈಲು ಹತ್ತಿ ತಾಯ್ನಾಡಿಗೆ ಹೊರಟು ನಿಂತಿದ್ದಾಗ, ರೈಲ್ವೇ ನಿಲ್ದಾಣಕ್ಕೆ ಹೋಗಿ ಆರು ಗಂಟೆಗಳ ಕಾಲ ಅವರಿಗೆ ಸಂತೈಸುವ ‘ನಾಟಕ’ ಆಡಿ ಫೇಸ್‌ಬುಕ್ ಸ್ಟೇಟಸ್ ಹಾಕಿಕೊಳ್ಳುವ ಮಂತ್ರಿಗೆ ಕಾವೇರಿ ವಿಚಾರದಲ್ಲಿ ಏಕೆ ಮೌನ? ಈ ಹಿಂದಿನ ಕಾವೇರಿ ಪ್ರಾಧಿಕಾರದ ಸಭೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದವರು ಮುಖ್ಯಮಂತ್ರಿ, ನೀರಾವರಿ ಮಂತ್ರಿ ಮತ್ತು ಕಾನೂನು ಮಂತ್ರಿ. ಆದರೆ ಮೊನ್ನೆ ನಡೆದ ಸಭೆಯಲ್ಲಿ ಸುರೇಶ್ ಕುಮಾರ್ ಹಾಜರಿರಲಿಲ್ಲ. ಅಷ್ಟೇ ಅಲ್ಲ ಮುಖ್ಯಮಂತ್ರಿಯವರು ದೆಹಲಿಯಲ್ಲಿ ನಡೆಸಿದ ಕಾನೂನು ತಜ್ಞರ ಸಭೆಗಳಲ್ಲೂ ಇವರು ಹಾಜರಾದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿಲ್ಲ. ಆದರೆ ಇವರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾದರು. ಕಾವೇರಿಗಿಂತ ಪಕ್ಷದ ಸಭೆ ಮುಖ್ಯವಾಯಿತು.

ಮಾಧ್ಯಮದ ಹಿರಿ ತಲೆಗಳ ಪೈಕಿ ಹಲವರಿಗೆ ಸುರೇಶ್ ಕುಮಾರ್ – ಸಜ್ಜನ, ಪ್ರಾಮಾಣಿಕ, ನಿಷ್ಠ. ಹಾಗಾದರೆ ಇವರು ದಕ್ಷರಾಗುವುದು ಯಾವಾಗ? ಸಜ್ಜನಿಕೆ ಅಥವಾ ಪ್ರಾಮಾಣಿಕತೆ ಎಲ್ಲಾ ವ್ಯಕ್ತಿಗಳಲ್ಲೂ ನಿರೀಕ್ಷಿಸಬಹುದಾದ ಸಾಮಾನ್ಯ ಗುಣಗಳು. ಆದರೆ ಒಬ್ಬ ಮಂತ್ರಿ ಪ್ರಾಮಾಣಿಕನಾಗಿದ್ದರಷ್ಟೇ ಸಾಲದು. ತನ್ನ ಕರ್ತವ್ಯ ಅರಿತುಕೊಂಡು ದಕ್ಷತೆಯಿಂದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. (ಅವರು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಅನ್ನುವುದು ಈಗ ಸಂಶಯ ಬಿಡಿ. ಸುಳ್ಳು ಮಾಹಿತಿ ಕೊಟ್ಟು ಎರಡೆರಡು ನಿವೇಶನ ಪಡೆದ ಆರೋಪ ಇಲ್ಲವೆ? ಆ ಸಂದರ್ಭದಲ್ಲಂತೂ ಕೆಲ ಮಾಧ್ಯಮ ಸಂಸ್ಥೆಗಳು ‘ಅತ್ಯಂತ ಪ್ರಾಮಾಣಿಕ ವ್ಯಕ್ತಿಗೆ ಅಂಟಿದ ಕಳಂಕ’ ಎಂದೆಲ್ಲಾ ಕಣ್ಣೀರು ಹಾಕಿದರು.)

“ಕಾವೇರಿ ಸಮಸ್ಯೆ ಬಗೆಹರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ..” ಎಂಬರ್ಥದ ಸವಕಲು ಹೇಳಿಕೆಗಳನ್ನು ಹೊರತುಪಡಿಸಿದರೆ ಸುರೇಶ್ ಕುಮಾರ್ ಇದುವರೆಗೆ ಕಾವೇರಿ ವಿಚಾರದಲ್ಲಿ ಒಂದೇ ಒಂದು ಗಂಭೀರ ಹೇಳಿಕೆ ನೀಡಲಿಲ್ಲ. ವಿಚಿತ್ರವೆಂದರೆ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸುವ ವಿರೋಧ ಪಕ್ಷಗಳು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿಯನ್ನಷ್ಟೆ ಟೀಕಿಸುತ್ತವೆಯೇ ಹೊರತು, ಕಾನೂನು ಮಂತ್ರಿಯ ವೈಫಲ್ಯದ ಬಗ್ಗೆ ಮಾತನಾಡುವುದಿಲ್ಲ.

ಸುರೇಶ್ ಕುಮಾರ್ ಅವರ ನಡವಳಿಕೆಯನ್ನು ಕೆಲಕಾಲ ಗಮನಿಸಿದ ಯಾರಿಗೇ ಆದರೂ ಅರ್ಥವಾಗುವ ಸಂಗತಿ ಎಂದರೆ, ಅವರು ವಿವಾದಾತ್ಮಕ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ. ನಿಮ್ಮ ಮಂತ್ರಿಗಳು ವಿಧಾನ ಸಭೆಯಲ್ಲಿ ಬ್ಲೂ ಫಿಲಂ ನೋಡ್ತಾ ಇದ್ದರಲ್ಲ ಅಂತ ಕೇಳಿದಾಕ್ಷಣ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯನ್ನು ಈಗಷ್ಟೇ ಮುಗಿಸಿ ಬಂದವರಂತೆ ಅವರು ಗಂಭೀರವದನರಾಗಿ – ‘ಅಂತಹದೊಂದು ಪ್ರಕರಣ ನಡೆದದ್ದೇ ಆಗಿದ್ದರೆ..ಅದು ಖಂಡನೀಯ’ ಎನ್ನುತ್ತಾರೆ. ಬಿಜೆಪಿಯ ಆಂತರಿಕ ಕಲಹ ಮುಗಿಲು ಮುಟ್ಟಿದ್ದರೂ ಊಹ್ಞುಂ ಒಂದೇ ಒಂದು ಮಾತೂ ಇಲ್ಲ. ಸುಮ್ಮನೆ ಮಾತನಾಡಿ ಯಾರಾದಾದರೂ ವಿರೋಧ ಕಟ್ಟಿಕೊಳ್ಳುವುದೇಕೆ ಎನ್ನುವ ಮನೋಭಾವ.

ಬೆಂಗಳೂರಿನ ನೀರು ಸರಬರಾಜು ಕೂಡಾ ಅವರದೇ ಖಾತೆ. ನಗರಕ್ಕೆ ನಾಲ್ಕನೇ ಹಂತದ ಕುಡಿವ ನೀರಿನ ಯೋಜನೆಗಾಗಿ ಜನರಿಂದ ಹಣ ಪಡೆದುಕೊಂಡು ವರ್ಷಗಳೇ ಉರುಳಿವೆ. ಅವರಿಗಿನ್ನೂ ನೀರು ಕೊಟ್ಟಿಲ್ಲ. ಬೆಂಗಳೂರಿಗೆ ನೀರು ಬೇಕಿದ್ದರೆ ಕಾವೇರಿಯಲ್ಲಿ ನೀರು ಇರಬೇಕು. ಆದರೂ ಅವರು ಕಾವೇರಿ ಬಗ್ಗೆ ಮಾತನಾಡುವುದಿಲ್ಲ.

ಹಾಗಾದರೆ ಇವರಿಗೆ ಜವಾಬ್ದಾರಿ ಇಲ್ಲವೆ ಅಥವಾ ಜವಾಬ್ದಾರಿಯನ್ನು ಕಸಿಯಲಾಗಿದೆಯೆ? ಅವರೇ ಸ್ಪಷ್ಟಪಡಿಸಬೇಕು.

ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?


-ನವೀನ್ ಸೂರಿಂಜೆ


 

ಮತ್ತೆ ಮೋಹನ ಆಳ್ವರ “ಆಳ್ವಾಸ್ ನುಡಿಸಿರಿ” ಬಂದಿದೆ. ಈ ಬಾರಿ ನುಡಿಸಿರಿಯ ಘೋಷಣೆ “ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು”. ಉದ್ಘಾಟಕರು ಕನ್ನಡದ ಪ್ರಗತಿಪರ ಮನಸ್ಸುಗಳ ನೆಚ್ಚಿನ ಮೇಷ್ಟ್ರು ಡಾ.ಯು.ಆರ್.‌ಅನಂತಮೂರ್ತಿ. ಕಳೆದ ಎಂಟು ವರ್ಷಗಳಿಂದ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಆಳ್ವಾಸ್ ನುಡಿಸಿರಿಯಲ್ಲಿ ರಾಜ್ಯದ ಹಲವಾರು ಬಂಡಾಯ ಸಾಹಿತಿಗಳು ಭಾಗವಹಿಸಿದ್ದಾರೆ. ಸಂಘಪರಿವಾರದ ವಿರಾಟ್ ಹಿಂದೂ ಸಮಾಜೋತ್ಸವಗಳ ಸಂಘಟಕನಾಗಿದ್ದ ವ್ಯಕ್ತಿಯೊಬ್ಬ ತನ್ನ ವ್ಯಾಪಾರಿ ಉದ್ದೇಶಕ್ಕೆ ತನ್ನ ಸಂಸ್ಥೆಯ ಹೆಸರನ್ನೇ ಇಟ್ಟುಕೊಂಡು ಸ್ವಯಂ ವೈಭವೀಕರಣಕ್ಕಾಗಿ ನಡೆಸುವ “ಆಳ್ವಾಸ್” ನುಡಿಸಿರಿಯಲ್ಲಿ ಬಂಡಾಯ ಸಾಹಿತ್ಯದ ರೂವಾರಿ ಬರಗೂರು ರಾಮಚಂದ್ರಪ್ಪರಿಂದ ಹಿಡಿದು ವೈದೇಹಿಯವರೆಗೆ ಖ್ಯಾತನಾಮರು “ಆಳ್ವರು ವ್ಯಕ್ತಿಯಲ್ಲ, ಕನ್ನಡ ಶಕ್ತಿ” ಎಂದು ಸುಳ್ಳು ಸುಳ್ಳೇ ಹಾಡಿ ಹೊಗಳಿದ್ದಾರೆ. ಈ ಬಾರಿ ಅನಂತಮೂರ್ತಿ ಸರದಿ.

ಆಳ್ವಾಸ್ ಪ್ಯಾಕೇಜ್

ಈ ಬಾರಿ ತನ್ನ ಘೋಷಣೆ ಮತ್ತು ಉದ್ಘಾಟಕರ ಹೆಸರಿನಿಂದಾಗಿ “ಆಳ್ವಾಸ್ ನುಡಿಸಿರಿ” ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ನಾಡಿನ ಎಲ್ಲೆಡೆ ಕನ್ನಡ ಅಭಿಮಾನಿಗಳಿಗೆ, ಕನ್ನಡ ಸಾಹಿತಿ ಬಳಗಕ್ಕೆ ಪ್ರತಿವರ್ಷ ಮೋಹನ ಆಳ್ವರ ನುಡಿಸಿರಿ ಸಾಹಿತ್ಯ ಜಾತ್ರೆ ಎಂದರೆ ಏನೋ ಆಕರ್ಷಣೆ. ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮೂಡಬಿದ್ರೆಗೆ ಧಾವಿಸಿ ಬಂದು ಕನ್ನಡ ಮನಸ್ಸುಗಳು, ಕನ್ನಡ ಸಾಹಿತ್ಯ, ಚಳವಳಿ, ನಾಡು ನುಡಿ ಎಂದು ಗಂಭೀರವಾಗಿ ಚರ್ಚಿಸುತ್ತವೆ. ಒಟ್ಟಾರೆ ಕಳೆದ ಎಂಟು ವರ್ಷಗಳ ನುಡಿಸಿರಿ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಬೆಳೆದಿದೆ. ಮತ್ತು ಇಡೀ ಜಗತ್ತಿನ ಕನ್ನಡಿಗರ ಗಮನ ಸೆಳೆದಿದೆ. ಆಳ್ವರ ಸಾಹಿತ್ಯ ಪ್ರೀತಿ, ಕನ್ನಡ ಪ್ರೇಮ, ಆತಿಥ್ಯ ಎಲ್ಲರ ಮನಸ್ಸನ್ನೂ ಸೂರೆಗೊಂಡಿದೆ. ಮೋಹನ ಆಳ್ವರು ಕನ್ನಡ ಸಾಹಿತ್ಯದ ಐಕಾನ್ ಆಗಿ ಬಿಂಬಿತವಾಗಿದ್ದಾರೆ. ಪತ್ರಿಕೆಗಳಂತೂ ಆಳ್ವಾಸ್ ನುಡಿಸಿರಿಯ ಬಗ್ಗೆ ಪುಟಗಟ್ಟಲೆ ಬರೆಯುತ್ತವೆ. ಇಲ್ಲಿಗೆ ಬರೋ ಪ್ರತೀ ಅತಿಥಿ ಸಾಹಿತಿಗಳ ಪ್ರತ್ಯೇಕ ಸಂದರ್ಶನವನ್ನು ಮಾಡುತ್ತದೆ. ಮೂರು ದಿನವೂ ಮುಖ ಪುಟದಲ್ಲಿ ಒಂದು ಸುದ್ದಿಯಾದರೂ ಆಳ್ವಾಸ್ ನುಡಿಸಿರಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಹಿನ್ನಲೆಯಲ್ಲೇ ಕೆಲವೊಂದು ಸಾಹಿತಿಗಳು ಕೂಡಾ ಇಲ್ಲಿಗೆ ಬರಲು ತುದಿಗಾಲಲ್ಲಿ ನಿಂತಿರುತ್ತಾರೆ.

ಇಷ್ಟಕ್ಕೂ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಕ್ಕಿಂತಲೂ ಆಳ್ವಾಸ್ ನುಡಿಸಿರಿಗೆ ಪತ್ರಿಕೆಗಳು ಹೆಚ್ಚಿನ ಪ್ರಾಮುಖ್ಯತೆ ನೀಡಲು ಆಳ್ವಾಸ್ ನುಡಿಸಿರಿಗಿರುವ ನಿಜವಾದ ಬದ್ಧತೆ ಕಾರಣವಲ್ಲ. ಸುದ್ದಿಗಾಗಿಯೇ ಪ್ರಮುಖ ದಿನ ಪತ್ರಿಕೆಗಳಿಗೆ ಐದರಿಂದ ಏಳು ಲಕ್ಷದವರೆಗೆ ನ್ಯೂಸ್ ಪ್ಯಾಕೇಜ್ ನೀಡಲಾಗುತ್ತದೆ. ಈ ನ್ಯೂಸ್ ಪ್ಯಾಕೇಜ್ ಅಂದರೆ ಪೇಯ್ಡ್ ನ್ಯೂಸ್ ಅಲ್ಲದೆ ಇನ್ನೇನು?

ಮೋಹನ ಆಳ್ವರು ತನ್ನ ಸ್ವಂತ ಖರ್ಚಿನಲ್ಲಿ ತನ್ನದೇ ಆಳ್ವಾಸ್ ಕ್ಯಾಂಪಸ್ಸಿನಲ್ಲಿ ಇಷ್ಟೊಂದು ಅಕ್ಕರೆಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಉದ್ದೇಶ ಏನು ಮತ್ತು ಮೋಹನ ಆಳ್ವರ ನಿಜ ವ್ಯಕ್ತಿತ್ವ ಎಂತಹದ್ದು ಎಂದು ಸ್ವಲ್ಪ ವಿಮರ್ಶೆಗೆ ಒಳಪಡಿಸಿದರೆ ಹೊರಬರುವ ಸಂಗತಿಗಳೇ ಬೇರೆ. ತನ್ನ ಶಿಕ್ಷಣ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಿಸಲು ಅವರು ಈ ರೀತಿಯ ಸಮ್ಮೇಳನಗಳನ್ನು ವ್ಯವಸ್ಥಿತವಾಗಿ ಬಳಸುತ್ತಿದ್ದಾರೆ. ಒಬ್ಬ ಸಾಮಾನ್ಯ ಭೂಮಾಲೀಕನ ಮಗನಾಗಿ, ಒಬ್ಬ ಸಾಮಾನ್ಯ ವೈದ್ಯನಾಗಿ, ಒಂದಿಷ್ಟು ಕಲೆಯ ಬಗ್ಗೆ ಅಭಿರುಚಿ ಹೊಂದಿದ್ದ ವ್ಯಕ್ತಿಯಾಗಿದ್ದ ಮೋಹನ ಆಳ್ವರು ಈಗ ಶಿಕ್ಷಣ ತಜ್ಞರಾಗಿ, ಸಾಹಿತ್ಯದ ರಾಯಭಾರಿಯಾಗಿ, ಬಹಳ ದೊಡ್ಡ ವ್ಯಕ್ತಿತ್ವವಾಗಿ, ಬೆಳೆದಿದ್ದಾರೆ. ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ನಾಡಿನ ಎಲ್ಲೆಡೆಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಲು ಸಾಲುಗಟ್ಟಿ ನಿಲ್ಲುತ್ತಾರೆ. ಈ ಮಟ್ಟಿಗೆ ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಪ್ರಖ್ಯಾತಿಯನ್ನು ಗಳಿಸಿದೆ. ಈ ರೀತಿಯ ಪ್ರಖ್ಯಾತಿಗೆ, ಇಲ್ಲಿ ಸೀಟು ಗಿಟ್ಟಿಸಲು ನಡೆಯುವ ನೂಕುನುಗ್ಗಲಿಗೆ ಆಳ್ವಾಸ್ ನುಡಿಸಿರಿ ಸಾಹಿತ್ಯ ಜಾತ್ರೆಯೇ ಕಾರಣ. ಕಾಲೇಜಿನ ಬಗ್ಗೆ ಯಾವುದೇ ಜಾಹೀರಾತಿಲ್ಲದೆ ಈ ಮಟ್ಟಿಗೆ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಮತ್ತು ತನ್ನ ಕಾಲೇಜಿನ ಸೀಟುಗಳನ್ನು ಮಾರಾಟ ಮಾಡಲು ಆಳ್ವರು ನುಡಿಸಿರಿಯನ್ನು ಬಹಳ ವ್ಯವಸ್ಥಿತವಾಗಿ ಬಳಕೆ ಮಾಡಿದ್ದಾರೆ. ಆಳ್ವರದೇನೂ  ಬೀದಿಯಲ್ಲಿ ಕಿತ್ತಳೆ ವ್ಯಾಪಾರ ಮಾಡಿ ಸರ್ಕಾರಿ ಶಾಲೆಯೊಂದನ್ನು ಕಟ್ಟಿದ ಮಂಗಳೂರಿನ ಹರೆಕಳ ಹಾಜಬ್ಬನ ರೀತಿಯ ನಿಸ್ವಾರ್ಥ ಸೇವೆಯಲ್ಲ.

ಮೂಲತಹ ಫ್ಯೂಡಲ್ ಭೂ ಮಾಲೀಕ  ವರ್ಗದಿಂದ ಬಂದಿರುವ ಮೋಹನ ಆಳ್ವರು ಆಳದಲ್ಲಿ ಫ್ಯೂಡಲ್ ಮನೋಭಾವವನ್ನೇ ಹಾಸು ಹೊದ್ದು ಬೆಳೆದವರು. ಮೂಡಬಿದ್ರೆ ಪ್ರಾಂತ್ಯದ ಬಹುದೊಡ್ಡ ಭೂ ಮಾಲೀಕ ಕುಟುಂಬ ಮೋಹನ ಆಳ್ವರದ್ದು. ತನ್ನ ವರ್ಗ ಗುಣಕ್ಕೆ ಸಹಜವಾದಂತೆ ವರ್ತಿಸುವ ಆಳ್ವರು ಕಳೆದ ಎರಡು ವರ್ಷಗಳ ಹಿಂದೆ ನುಡಿಸಿರಿ ಕಾರ್ಯಕ್ರಮದಲ್ಲಿ ದಲಿತ ನಿಂದನೆಯನ್ನು ಮಾಡಿದ್ದರು. ಕರಾವಳಿಯ ಅತೀ ಶೋಷಿತ ಜನಾಂಗವಾಗಿರುವ ಕೊರಗರನ್ನು ತನ್ನ ನುಡಿಸಿರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಸಿ ವೇದಿಕೆ ಹತ್ತಲು ಬಿಡದೆ ಪೆಂಡಾಲ್‌ನ ಹೊರಗಡೆ ನಿಲ್ಲಿಸಿ ಡೋಲು ಬಾರಿಸಿದ್ದರು. ಇದಂತೂ ನಿಷೇದಿತ ಅಜಲು ಪದ್ದತಿಯ ಪ್ರತಿರೂಪದಂತಿತ್ತು. ಇದರ ಬಗ್ಗೆ ಮಾಧ್ಯಮಗಳು, ದಲಿತ ಸಂಘಟನೆಗಳು ಧ್ವನಿ ಎತ್ತಿದ್ದರೂ ಯಾವುದೇ ಮುಲಾಜಿಲ್ಲದೆ ತನ್ನ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೂಡಬಿದ್ರೆ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು.

ಇದಾದ ನಂತರ ಇನ್ನೊಂದು ಬಾರಿಯೂ ಮೋಹನ ಆಳ್ವರೂ ಇದೇ ರೀತಿ ದಲಿತ ನಿಂದನೆ ಮಾಡಿದ್ದರು. ದಲಿತರ ಆರಾಧ್ಯ ದೈವಗಳನ್ನು ಮೆರವಣಿಗೆಯಲ್ಲಿ ಮತ್ತು ಮನರಂಜನಾ ವೇದಿಕೆಯಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ ನುಡಿಸಿರಿಯ ಮನರಂಜನಾ ವೇದಿಕೆಯಲ್ಲಿ ದೈವದ ಪಾತ್ರಗಳನ್ನು ಪ್ರದರ್ಶಿಸಿ ಬಹಿರಂಗವಾಗಿ ದಲಿತರನ್ನು ಅವಮಾನಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೋಹನ ಆಳ್ವ ಮತ್ತು ಜಿಲ್ಲಾಡಳಿತದ ಗಮನ ಸೆಳೆದರೂ ಮೋಹನ ಆಳ್ವರು ಕ್ಯಾರೇ ಅನ್ನಲಿಲ್ಲ.

ಕನ್ನಡ ಮನಸ್ಸು ಮತ್ತು ಜನಪರ ಚಳವಳಿ

ನವೆಂಬರ್ 16 ರಿಂದ 18 ರವರೆಗೆ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು ಎಂಬ ಪರಿಕಲ್ಪನೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಒಂಬತ್ತನೇ ವರ್ಷ ನಡೆಸುತ್ತಿದೆ. ಮೋಹನ ಆಳ್ವರು ಮತ್ತು ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೂ ಜನಪರ ಚಳವಳಿಗಳಿಗೂ ಇರುವ ಸಂಬಂಧವಾದರೂ ಏನು? ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರ್‌.ಎಸ್.ಎಸ್ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಇದೇ ಮೋಹನ ಆಳ್ವರು ಗೌರವಧ್ಯಕ್ಷರಾಗಿದ್ದರು. ಕರಾವಳಿ ಜಿಲ್ಲೆಗಳ ಜನಪರ ಚಳವಳಿಗಳನ್ನು ಸಂಪೂರ್ಣವಾಗಿ ನಾಶಪಡಿಸಿದ, ನಿರ್ವೀರ್‍ಯಗೊಳಿಸಿದ ಪ್ರತಿಗಾಮಿ ಹಿಂದುತ್ವದ ಚಳವಳಿಯ ಶಕ್ತಿ ಪ್ರದರ್ಶನದ ಸಮಾಜೋತ್ಸವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಐದು ವರ್ಷಗಳ ಹಿಂದಿನ ಹಿಂದುತ್ವದ ಯಶಸ್ವಿ ಸಮಾವೇಶದ ಫಲವೇ ಇಂದಿನ ಬಿಜೆಪಿ ಸರ್ಕಾರ ಮತ್ತು ಕೋಮುವಾದಿ ಮನಸ್ಸುಗಳು. ಈ ಹಿಂದೂ ಸಮಾಜೋತ್ಸವದ ಯಶಸ್ಸಿನ ನಂತರ ಮಂಗಳೂರಿನ ಬೀದಿಗಳಲ್ಲಿ ಹಿಂದುತ್ವದ ನೈತಿಕ ಪೊಲೀಸರದ್ದೇ ಕಾರುಬಾರು.

ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಗೌರವ ಸಲಹೆಗಾರರಾಗಿದ್ದರು. ಮೊದಲೇ ತನ್ನ ಕಾಲೇಜಿನ ವಿದ್ಯಾರ್ಥಿಗಳನ್ನು ಕ್ರೀಡಾಕೂಟದಲ್ಲಿ ಹಿಂದಿಕ್ಕಿ ಪ್ರಶಸ್ತಿ ಪಡೆಯುತ್ತಿದ್ದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಅಸಹನೆ ಹೊಂದಿದ್ದ ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು.

ಈಗಲಾದರೂ ಮೋಹನ ಆಳ್ವ ಮನಷ್ಯ ಪರ ನಿಲುವುಗಳನ್ನು ಹೊಂದಿದ್ದಾರೆಯೇ ಎಂದರೆ ಅದೂ ಇಲ್ಲ. ಮೊನ್ನೆ ಮೊನ್ನೆ ನಡೆದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆ ದಾಳಿಯ ಪ್ರಕರಣದಲ್ಲೂ ಹುಡುಗಿಯರ ಮೇಲೆ ಹಲ್ಲೆ ನಡೆಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನೇ ಸಮರ್ಥಿಸಿಕೊಂಡಿದ್ದರು. “ಹುಡುಗಿಯರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಆದರೆ ಹುಡುಗಿಯರು ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಅಶ್ಲೀಲ ಬಟ್ಟೆ ತೊಟ್ಟುಕೊಂಡು ಹೋಂ ಸ್ಟೆಗಳಲ್ಲಿ ಹುಟ್ಟು ಹಬ್ಬ ಆಚರಿಸಿದ್ದೂ ತಪ್ಪು” ಎಂದಿದ್ದರು. ಇದು ಮೋಹನ ಆಳ್ವರ ದೊಡ್ಡ, ವಿಶಾಲಹೃದಯದ  ಮನಸ್ಸು.

ಆಳ್ವರ ಜನಪರ ಚಳವಳಿ ಮನಸ್ಸು

ವಿದ್ಯಾರ್ಥಿಗಳು ತಮ್ಮ ಇಷ್ಟ ಬಂದ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬೇಡಿಕೆಗಳ ಪೂರೈಕೆಗಾಗಿ ಹೋರಾಟ, ಪ್ರತಿಭಟನೆಗಳನ್ನು ನಡೆಸಬಹುದು ಮತ್ತು ತಮ್ಮ ಸುತ್ತಮುತ್ತ ನಡೆಯುವ ಬೆಳವಣಿಗೆಗಳಿಗೆ ಸ್ಪಂದಿಸಿ ಚಳವಳಿಗಳನ್ನು ಸಂಘಟಿಸಬಹುದು ಎಂದು ಸಂವಿಧಾನ ವಿದ್ಯಾರ್ಥಿಗಳಿಗೆ ಹಕ್ಕು ನೀಡಿದೆ. ಕಾಲೇಜು ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ಸಂಘಗಳನ್ನು ರಚಿಸುವುದು ಮತ್ತು ವಿದ್ಯಾರ್ಥಿ ಸಂಘಕ್ಕೆ ಮುಕ್ತ ಚುನಾವಣೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೆಳೆಸಬೇಕು ಎಂಬ ನಿಯಮವೇ ಇದೆ. ಆದರೆ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣೆ ಬಿಡಿ, ವಿದ್ಯಾರ್ಥಿ ಸಂಘಗಳಿಗೇ ಅವಕಾಶವಿಲ್ಲ. ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ಸಂಘಟನೆಗಳ ಸದಸ್ಯರಾಗುವಂತಿಲ್ಲ. ವಿದ್ಯಾರ್ಥಿ ಸಂಘಟನೆಗಳಿಗಂತೂ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣ ನಿಷೇದ. ಇನ್ನು ಹೋರಾಟಗಳಂತೂ ಆಳ್ವರ ವಿದ್ಯಾರ್ಥಿಗಳಿಗೆ ಕನಸ್ಸಿನ ಮಾತು. ವಿದ್ಯಾರ್ಥಿಗಳು, ಯುವ ಜನಾಂಗ ಇಲ್ಲದ ಯಾವ ಜನಪರ ಚಳವಳಿಯ ಬಗ್ಗೆ ಮೋಹನ ಆಳ್ವ ಮಾತನಾಡುತ್ತಿದ್ದಾರೆ? ಈ ದೇಶದ ಸ್ವಾತಂತ್ರ್ಯ ಚಳವಳಿ, ಜೇಪಿ ಆಂದೋಲನ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ, ನಾಡು ನುಡಿಗಾಗಿ ನಡೆದ ಎಲ್ಲಾ ಹೋರಾಟಗಳಿಂದ ಹಿಡಿದು ಮೊನ್ನೆ ಮೊನ್ನೆ ದಕ್ಷಿಣ ಕನ್ನಡದಲ್ಲಿ ನಡೆದ ನೈತಿಕ ಪೊಲೀಸರ ವಿರುದ್ಧ ಹೋರಾಟದವರೆಗೆ ನಡೆದ ಜನಪರ ಚಳವಳಿಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳನ್ನು ಹೊರಗಿಟ್ಟು ಯಾವುದೇ ಚಳವಳಿಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಮೋಹನ ಆಳ್ವರ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಯ ಪರಿಕಲ್ಪನೆ.

ಮೋಹನ ಆಳ್ವರಂತಹ ಒಬ್ಬ ಯಶಸ್ವಿ ಶಿಕ್ಷಣದ ವ್ಯಾಪಾರಿ ತನ್ನ ವ್ಯಾಪಾರಿ ಉದ್ದೇಶಕ್ಕಾಗಿ “ಆಳ್ವಾಸ್ ನುಡಿಸಿರಿ”ಯನ್ನು ಬಳಸಿಕೊಳ್ಳುವುದು ಸಹಜ. ಆದರೆ ಇಲ್ಲಿನ ಶೋಷಿತ ವರ್ಗಗಳಿಗಾಗಿ ಬಂಡಾಯ ಸಾಹಿತ್ಯವನ್ನೇ ಸೃಷ್ಠಿ ಮಾಡಿದ, ಕೋಮುವಾದದ ವಿರುದ್ಧ ಸಾಹಿತ್ಯದ ಮೂಲಕ ಮಾತ್ರವಲ್ಲದೆ ಬೀದಿಗಿಳಿದು ಹೋರಾಟಕ್ಕಿಳಿದ ನಾಡಿನ ಖ್ಯಾತ ಸಾಹಿತಿಗಳು ಹಿಂದೂ ಸಮಾಜೋತ್ಸವದ ಸಂಘಟಕ ನಡೆಸುವ ಸಾಹಿತ್ಯ ಜಾತ್ರೆಗೆ ಧಾವಿಸಿ ಬರುವುದು ಅರ್ಥವಾಗದ ವಿಚಾರ. ಮಂಗಳೂರನ್ನು ಕೋಮುವಾದದ ಅಗ್ನಿಕುಂಡವನ್ನಾಗಿಸಿ, ಶಿಕ್ಷಣವನ್ನು ಶ್ರೀಮಂತರ ಮಕ್ಕಳಿಗೆ ಮಾರಾಟಕ್ಕಿಟ್ಟ ವ್ಯಕ್ತಿಯ ಬಗ್ಗೆ ಕೋಮುವಾದವನ್ನು ವಿರೋಧಿಸುವ, ಉಚಿತ ಮತ್ತು ಸಮಾನ ಶಿಕ್ಷಣದ ಅನುಷ್ಠಾನಕ್ಕಾಗಿ ಆಗ್ರಹಿಸುವ, ಜನಪರ ಚಳವಳಿಗಳನ್ನು ಕಟ್ಟುವ ಸಾಹಿತ್ಯದ ಮನಸ್ಸುಗಳಿಗೆ ಅರ್ಥವಾಗದಿರುವುದು ವರ್ತಮಾನದ ದುರಂತ. ಈ ಬಾರಿ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟಿಸಲು ಬರುವ ಮುನ್ನ ಕನ್ನಡ ಮನಸ್ಸುಗಳ ಪ್ರೀತಿಯ ಮೇಷ್ಟ್ರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಮೇಷ್ಟ್ರು ಆಳ್ವರ ಬಗ್ಗೆ, ಅವರ ನುಡಿಸಿರಿಯ ನೈಜ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಿ. ಇಲ್ಲದಿದ್ದಲ್ಲಿ ಆಳ್ವರ ನುಡಿಸಿರಿಯ ವೇದಿಕೆಯಲ್ಲಿ ಆಳ್ವರೇ ನಾಚಿಕೊಳ್ಳುವಂತೆ ಕನ್ನಡದ ಜನಪರ ಸಾಹಿತಿಗಳು ಹೊಗಳುವುದನ್ನು ಕಂಡು ಜಿಲ್ಲೆಯ ವಿಚಾರವಾದಿಯೊಬ್ಬರು ಹೇಳಿದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ” ಎಂಬ ಮಾತು ಅನಂತಮೂರ್ತಿಯವರಿಗೂ ಅನ್ವಯಿಸುತ್ತದೆ.